ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Sunday, January 9, 2011

ವೇದ ದೀವಿಗೆ


ವೇದ ದೀವಿಗೆ

ಸೇರು ಸಜ್ಜನರನ್ನು ದೂರಗಳ ಮಿತಿಯಿರದೇ
ಸಾರು ಅವರಿರುವೆಡೆಗೆ ದಾರಿ ಹುಡುಕುತಲಿ
ನಾರು ಹೂವಿನ ಜೊತೆಗೆ ದೇವಮುಡಿಗೈದಂತೆ
ಏರು ಆ ಎತ್ತರಕೆ | ಜಗದಮಿತ್ರ

ಯಾರಿಗೂ ಕಮ್ಮಿಯೇಂ ಎಂಬ ಭಾವವು ಬೇಡ
ದಾರಿಹೋಕರು ನಾವು ತಿಳಿಮೊದಲು ಅದನು
ಹೀರುತ್ತ ಈ ಜಗದ ಅಪವಿತ್ರ ಬಳುವಳಿಯ
ಜಾರುವುದು ತರವಲ್ಲ | ಜಗದಮಿತ್ರ

ಹೇರಿ ನಡೆವುದು ಕತ್ತೆ ಭಾರವನು ದೂರದೆಡೆ
ಯಾರದೋ ವಸ್ತುಗಳು ಅದಕೆ ಅರಿವಿರದೇ
ಊರೂರು ಸುತ್ತುವುದು ಭಾರೀ ಪೆಟ್ಟಿಗೆ ಹೆದರಿ
ಕೇರಿ ಬೇಕಾದ್ದು ಪಡೆ | ಜಗದಮಿತ್ರ

ಸೂರು ಸಂತತಿ ಸಂಪದಭಿವೃದ್ಧಿಯಲಿ ತೊಡಗಿ
ತೇರೆತ್ತರದ ಬಯಕೆ ರಾಶಿಗಳ ನಡುವೆ
ಮೀರುತ್ತ ಕರ್ತವ್ಯ ಮಿತಿಯ ಸ್ವಾರ್ಥಕ್ಕಾಗಿ
ತೂರಿ ಪುನರಪಿ ಬರುವೆ | ಜಗದಮಿತ್ರ

ಯಾರೂ ಹೇಳುವುದಿಲ್ಲ ಬೇರೇ ಮಾರ್ಗವದಿಲ್ಲ
ಪಾರಾಗಲದುವೊಂದೇ ಜ್ಞಾನದ್ಹಾಯ್ದೋಣಿ
ಬೇರು ಎಲ್ಲಿಹುದೆಂದು ಹುಡುಕುತ್ತ ಮುನ್ನಡೆದು
ಭೂರಿ ಆನಂದ ಪಡೆ | ಜಗದಮಿತ್ರ

ಹಾರಿಹೋಗುವ ಮೊದಲು ಅರಿಯುತ್ತ ವೇದಗಳ
ದಾರಿದೀವಿಗೆಯಾಗಿ ಬಳಸು ತತ್ವಗಳ
ಖಾರ-ಉಪ್ಪುಗಳತಿಯ ಹಿಂಸೆಯಿರುವಶನಗಳ
ದೂರವಿಡು ತಿನ್ನದಲೇ | ಜಗದಮಿತ್ರ

ವಾರವಾರಕು ನವ್ಯ ವರುಷವರುಷಕು ದಿವ್ಯ
ಯಾರೋ ಕವಿ-ಸಾಹಿತಿಯ ಸೃಷ್ಟಿಯಂತಲ್ಲ
ನೂರಾರು ಯುಗಗಳನು ದಾಟುತ್ತ ನಡೆತಂದು
ಸೋರಿಕರಗದು ವೇದ |
ಜಗದಮಿತ್ರ


- ನಿಮ್ಮೊಡನೆ ವಿ.ಆರ್.ಭಟ್ ವಿಭಾಗದ ’ಜಗದಮಿತ್ರನ ಕಗ್ಗ ’ ಸಂಕಲನದಿಂದ3 comments:

  1. ಅದ್ಭುತವಾಗಿದೆ ಭಟ್ ರವರೇ ...ಮೊದಲಬಾರಿಗೆ ಓದುತ್ತಿರುವೆ , ಮಂಕುತಿಮ್ಮನ ಛಾಯೆ ಇದೆ ....ಓದಲು ಸುಲಲಿತವಾಗಿಯೂ , ಅರ್ಥಗರ್ಭಿತವಾಗಿಯೂ ಇದೆ...ನಿಮ್ಮ ಖುಷಿಯನ್ನು ಹಂಚಿಕೊಂಡದ್ದಕ್ಕೆ ವಂದನೆಗಳು ......ಪುಸ್ತಕ ರೂಪದಲ್ಲಿದ್ದರೆ ಕೊಳ್ಳುತ್ತೇನೆ , ಎಲ್ಲಿ ಸಿಗುತ್ತದೆ ಹೇಳುವಿರಾ ? .....

    ReplyDelete
  2. ಧನ್ಯವಾದಗಳು ಜಗದೀಶ್ ಸಾಹೇಬರೇ, ’ಜಗದಮಿತ್ರನ ಕಗ್ಗ’ ಇನ್ನೂ ಲೋಕಾರ್ಪಣೆಗೊಂಡಿಲ್ಲ, ಅದು ಬಿಡುಗಡೆಯಾಗುವಾಗ ತಮ್ಮನ್ನು ನೆನಪಿಟ್ಟು ಆಹ್ವಾನಿಸುತ್ತೇನೆ.

    ReplyDelete