ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Sunday, January 16, 2011

ಹಸಿವು

ಹಸಿದವಗೆ ಹುಸಿ ವೇದಾಂತ ಬೇಡ|
ಕಥೆ ಕವನ ಸಾಹಿತ್ಯ ಬೇಡವೇ  ಬೇಡ||
ಬಳಲಿದ ಉದರವನು ಕಾಡಬೇಡ|
ಮುದದಿ ಆದರಿಸಿ ಮೋದಪಡು ಮೂಢ||

ಹೊಟ್ಟೆಯ ತೊಟ್ಟಿಯದು ತುಂಬುವುದು ಎಂದು?
ಹಸಿವು ಮಾಡಿಸುವ ಕುಕರ್ಮಗಳೆನಿತೊಂದು||
ಬಂಧಗಳ ಹೆಣೆಯುವುದು ಪಾಶಗಳ ಬೀಸುವುದು|
ಆತ್ಮಾಭಿಮಾನ ಮರೆಸುವುದೊ ಮೂಢ||

ಹಸಿವಿನಿಂ ಬಳಲುತಿರೆ ಹೊನ್ನು ಬೇಕೇನು?
ಹಸಿವಿನಿಂ ನರಳುತಿರೆ ಹೆಣ್ಣು ಬೇಕೇನು?
ಹಸಿವು ಹಿಂಗಿಸಲು ಅನ್ನವೇ ಬೇಕು|
ಹೊಟ್ಟೆ ತುಂಬಿರಲೆಲ್ಲವೂ ಬೇಕು ಮೂಢ||

ಪರಮಾತ್ಮನೆಂಬುವನು ಎಲ್ಲಿಹನು ಕೇಳಿ|
ದೇವಭಕ್ತರೆ ಹೇಳಿ ಅರಿತವರೆ ತಿಳಿ ಹೇಳಿ||
ದೇವನಿರದಿಹನೆ ಜೀವಿಗಳ ಉದರದಲಿ|
ಹಸಿವಿರದಿರೆ ಪರಮಾತ್ಮನೆಲ್ಲಿ ಮೂಢ||


 ರಾಗ ಸಂಯೋಜಿಸಿ ಹಾಡಿದ್ದಾರೆ ಶ್ರೀಮತಿ ಲಲಿತಾ ರಮೇಶ್,ಹಾಸನ

2 comments:

  1. ಹಸಿವು ತುಂಬಿದಮೇಲೆ ನೆನೆಯುತಿರು ಪರಮಾತ್ಮನನು ಮೂಢ
    ಹಸಿವು ಹಿಂಗಿದಮೇಲೆ ತೆಗಳದಿರು ಇತರರನು ಮೂಢ

    ReplyDelete