ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Monday, January 17, 2011

ಸತ್ಯಪಥವ ಹುಡುಕಬೇಕಲ್ಲಾ!

ನಮ್ಮ ಸಮಾಜ ಬಲು ವಿಚಿತ್ರ. ಬೆಳಗಿನಿಂದ ರಾತ್ರಿಯವರೆಗೂ ದುಡಿದು ಸೋತು ಸೊಪ್ಪಾಗಿ ರಾತ್ರಿ ಮನೆಗೆಬಂದು ಹಾಸಿಗೆಯಲ್ಲಿ ಕಾಲು ಚಾಚುವವರು ಕೆಲವರು. ಅವರಿಗೆ ದುಡಿಮೆಯೇ ಜೀವನ.ಇಂತವರು ಯಾವಾಗಲಾದರೊಮ್ಮೆ ಸಾವಿರಾರು ರೂಪಾಯಿಗಳನ್ನು ಖರ್ಚುಮಾಡಿ ಯಾವುದಾದರೂ ದೇವಾಲಯಗಳಲ್ಲಿ ಸೇವೆ ಮಾಡಿಸಿ ಸಮಾಧಾನ ಪಡುವುದುಂಟು. ಇನ್ನೊಂದು ವರ್ಗವಿದೆ.ಜೀವನದಲ್ಲಿ ನೈತಿಕ ಮೌಲ್ಯಗಳನ್ನುಳನ್ನು ಬಿಟ್ಟು ವಾಮಮಾರ್ಗಗಳಲ್ಲಿ ಹಣ ಸಂಪಾದಿಸುವುದು, ಆದರೆ ಧಾರ್ಮಿಕ ಕೆಲಸಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡುವುದು. ಮತ್ತೊಂದು ವರ್ಗವಿದೆ. ಪ್ರಾಮಾಣಿಕವಾಗಿ ದುಡಿದು ನಮ್ಮ ಪರಂಪರೆಯಲ್ಲಿ ಬಂದಿರುವ ಎಲ್ಲಾ ವ್ರತಾಚರಣೆಗಳು, ಹಬ್ಬ ಹರಿದಿನಗಳನ್ನು ಆಚರಿಸುತ್ತಾ ತಾವು ಆಚರಿಸುತ್ತಿರುವ ಯಾವ ಆಚರಣೆಯನ್ನೂ ವೈಜ್ಞಾನಿಕವಾಗಿ ವಿಶ್ಲೇಷಿಸದೆ ಸುಮ್ಮನೆ ಅನುಸರಿಸುವುದು. ಇದು ದೊಡ್ಡ ಸಮೂಹ. ನಮ್ಮ ಹಿಂದಿನವರು ಹೀಗೆ ಮಾಡುತ್ತಿದ್ದರು. ನಾವೂ ಮಾಡುತ್ತೇವೆ. ನಮ್ಮ ಮಕ್ಕಳಿಗೂ ಮಾಡಲು ಕಲಿಸುತ್ತೇವೆ, ಎನ್ನುವ ಈ ವರ್ಗ ಯಾವುದಕ್ಕೂ ತಲೆ ಕೆಡಸಿಕೊಳ್ಳುವುದಿಲ್ಲ. ಭಯದಿಂದ ಧರ್ಮಾಚರಣೆ ಮಾಡುವ ಕೆಲವರು. ಪ್ರತೀ ವರ್ಷವೂ ತಮ್ಮ ಮನೆದೇವರಿಗೆ ಯಾತ್ರೆ ಮಾಡುವ ಕೆಲವರು ಕಾರಣಾಂತರದಿಂದ ಒಂದು ವರ್ಷ ಯಾತ್ರೆ ಮಾಡದಿದ್ದಾಗ ಅವರ ಮನೆಯಲ್ಲಿ ಯಾವುದಾದರೂ ಅಪತ್ತು ಎದುರಾದರೆ ಅದಕ್ಕೆ ಅವರು ಮನೆ ದೇವರ ದರ್ಶನವನ್ನು ಮಾಡದಿದ್ದುದೇ ಕಾರಣವೆಂದು ತಿಳಿದು ತಪ್ಪು ಕಾಣಿಕೆಯನ್ನು ತಮ್ಮ ಮನೆಯೆ ಪೂಜಾಗೃಹದಲ್ಲಿ ದೇವರ ಮುಂದಿಟ್ಟು " ಭಗವಂತಾ, ನನ್ನ ತಪ್ಪು ಕ್ಷಮಿಸಿ ನಮ್ಮ ಮನೆಯನ್ನು ಕಾಪಾಡು, ಮುಂದಿನ ವರ್ಷ ಮನೆಮಂದಿಯೆಲ್ಲಾ ಬಂದು ನಿನ್ನ ಸೇವೆ ಮಾಡಿಸಿ ಕೊಂಡು ಬರುತ್ತೇವೆಂದು" ಮನ: ಪೂರ್ವಕ ದೇವರಲ್ಲಿ ಬೇಡುವ ಒಂದು ಮುಗ್ಧ ವರ್ಗ.
ಭಗವಂತನ ಪೂಜೆಯನ್ನು ನೂರಾರು ರೀತಿಯಲ್ಲಿ ತಮ್ಮದೇ ಸರಿ ಎನ್ನುತ್ತಾ ನಿತ್ಯವೂ ತಮ್ಮದೇ ರೀತಿಯಲ್ಲಿ ಪೂಜೆಮಾಡುವ ಹಲವಾರು ಸಮೂಹ. ಅಷ್ಟೇ ಅಲ್ಲ, ಧರ್ಮದ, ದೇವರ, ಮತದ, ಮಠದ ಹೆಸರಲ್ಲಿ ಬಡಿದಾಡುವ ಗುಂಪುಗಳು.
ನಿತ್ಯವೂ ಪುರಾಣ ಪಠಣ-ಶ್ರವಣ ಮಾಡುತ್ತಾ,ಇದೇ ಸರಿಯಾದ ಮಾರ್ಗವೆಂದು ಭಾವಿಸಿರುವ ಒಂದು ಸಮೂಹ. ಪುರಾಣವೇ ಸುಳ್ಳು, ಅದು ಬರೀ ಕಟ್ಟುಕಥೆ ಎನ್ನುವ ಒಂದು ಗುಂಪು.ಇಷ್ಟೇ ಅಲ್ಲ, ಇನ್ನೂ ಸಾಕಷ್ಟು ಗೊಂದಲಗಳು.ಇವುಗಳ ಮಧ್ಯೆದಲ್ಲೇ ಇದ್ದು ಸತ್ಯಪಥವ ಹುಡುಕಬೇಕಲ್ಲಾ! ಹಿಂದಿನಿಂದ ನಡೆದು ಬಂದಿರುವ ಎಲ್ಲವನ್ನೂ ಸಾರಾಸಗಟಾಗಿ ತಿರಸ್ಕರಿಸದೆ, ಕುರುಡು ಆಚರಣೆ ಎಂದು ಮನವರಿಕೆ ಆದದ್ದನ್ನು ಬಿಡುತ್ತಾ, ಯಾವುದು ಅನೈತಿಕವೆಂದು ನಮ್ಮ ಅಂತರಾತ್ಮ ತಿಳಿಯುತ್ತದೋ ಅದರಿಂದ ದೂರವಿರುತ್ತಾ, ಒಂದು ಸತ್ಯದ ಹಾದಿಯಲ್ಲಿ ಸಾಗುವುದೇ ಒಂದು ಮಹಾನ್ ಯಜ್ಞ. ಅಂತಾ ಒಂದು ಯಾತ್ರೆಯಲ್ಲಿ ಸಾಗುವುದೇ ವೇದಸುಧೆಯ ಉದ್ಧೇಶ. ಹಲವು ಗೊಂದಲಗಳು ಎದುರಾದರೂ ಸತ್ಯದ ಶೋಧನೆಯಲ್ಲಿ ಮುಂದುವರೆಯೋಣ ಬನ್ನಿ.ಇದೊಂದು ಸತ್ಯದ ಹಾದಿಯನ್ನು ಹುಡುಕುವ ವೇದಿಕೆಯಾದ್ದರಿಂದ ಯಾರು ಏನೇ ಅಭಿಪ್ರಾಯ ಹೊರಹಾಕಿದರೂ ಅದರ ಬಗ್ಗೆ ವಿಮರ್ಷೆ ಮಾಡೋಣ. ಯಾವುದನ್ನೂ ವೈಯಕ್ತಿಕನೆಲೆಯಲ್ಲಿ ನೋಡದೆ ವೈಚಾರಿಕ ಹಿನ್ನೆಲೆಯಲ್ಲಿ ಚರ್ಚಿಸಿದಾಗ ಒಂದಲ್ಲಾ ಒಂದು ದಿನ ಋಜುಮಾರ್ಗದಲ್ಲಿ ಸಾಗುವುದು ಯಾರಿಗೂ ಕಷ್ಟವಾಗಲಾರದು.

3 comments:

 1. ಶ್ರೀಧರ್ ಸರ್,

  ನನಗೂ ಸಾಕಷ್ಟು ಗೊಂದಲಗಳಿವೆ. ಹಾಗಂತ ಆಚರಣೆಯನ್ನು ಬಿಡಲು ಖಂಡಿತ ಮನಸಿಲ್ಲ. ಆದರೆ ಆಚರಣೆಯ ಹಿಂದಿನ ಉದ್ದೇಶಗಳೂ, ಕಾರಣಗಳನ್ನು ತಿಳಿಯುವ ಮನಸ್ಸಿದೆ.
  ಉದಾ: ದಾನಗಳಲ್ಲಿ ಶ್ರೇಷ್ಠದಾನ "ಗೋವು" ಎನ್ನುತ್ತಾರೆ. ನಾವು ಸಹ ಗೋಮಾತೆಯನ್ನು ಪೂಜಿಸುತ್ತೇವೆ. ಶ್ರೇಷ್ಠದಾನ ಎಂದು ಕರೆಯಲು ಕಾರಣ??

  ಮುಕ್ತ ಮನಸ್ಸಿನಿಂದ ತಿಳಿದುಕೊಳ್ಳಬೇಕಷ್ಟೆ.

  ReplyDelete
 2. [ಶ್ರೇಷ್ಠದಾನ "ಗೋವು" ಎನ್ನುತ್ತಾರೆ]
  ಇರಬಹುದು.ಜನ್ಮನೀಡಿದ ತಾಯಿ ತನ್ನ ಮಗುವಿಗೆ ಒಂದೆರಡು ವರ್ಷಗಳು ಹಾಲುಣಿಸಿಯಾಳು.ಆದರೆ ಜೀವನ ಪರ್ಯಂತ ಹಾಲುಣಿಸುವ ಗೋವಿಗೆ ಎಂತಹ ಶ್ರೇಷ್ಠ ಸ್ಥಾನ ನೀಡಿದರೂ ಕಡಿಮೆಯೇ ಅಲ್ಲವೇ? ಈಗ ನಾವು ಬಹುಪಾಲು ಜನ ಗೋವಿನ ಹಾಲು ಕುಡಿಯುತ್ತಿಲ್ಲ ವೆಂಬ ಸತ್ಯ ನಮಗೆ ಗೊತ್ತಿದೆಯೇ? ಈಗ ೧೦-೨೦ ಲೀಟರ್ ಕೆಯುತ್ತಿರುವ ಪ್ರಾಣಿಗಳನ್ನು ಹಸು ಎನ್ನುತ್ತೇವೆ, ಅಷ್ಟೆ. ಅವು ಹಸುಗಳೇ ಅಲ್ಲ. ಗೋವಿನ ಯಾವ ಗುಣ ಲಕ್ಷಣಗಳೂ ಅವಕ್ಕಿಲ್ಲ. ಅದೊಂದು ಫ್ಯಾಕ್ಟರಿ. ೧೦-೨೦ ಕೆ.ಜಿ ಆಹಾರವನ್ನು ತಿನ್ನಿಸಿ [ಕಾರ್ಖಾನೆಯ ರಾ ಮೆಟೀರಿಯಲ್ ಇದ್ದಂತೆ] ೧೦-೨೦ ಲೀಟರ್ ಬಿಳಿಯ ಬಣ್ಣದ ದ್ರವವನ್ನು [ಪ್ರಾಡಕ್ಟ್] ಪಡೆಯುತ್ತೇವೆ. ಅದಕ್ಕೆ ಹಾಲು ಎಂದು ಹೆಸರಿಸಲಾಗಿದೆ ಯಾದರೂ ಹಾಲಿನ[ಅಮೃತ]ಯಾವ ಗುಣವೂ ಅದಕ್ಕಿಲ್ಲ. ಇಂತಹ ಹಾಲನ್ನು ಕುಡಿಯದಿರುವುದೇ ಲೇಸು.ಇದೆಲ್ಲಾ ವಿಚಾರಗಳೂ ವೇದಸುಧೆಯಲ್ಲಿ ಮುಂದೆ ಚರ್ಚೆಯಾಗುವ ವಿಷಯಗಳೇ ಆಗಿವೆ. ಅಂತೂ ಯಾವುದರ ಪೂರ್ವಾಗ್ರಹವೂ ಇಲ್ಲದೆ ಒಂದು ಉತ್ತಮ ಆರೋಗ್ಯಕರ ಬದುಕಿಗೆ ಅನುಕೂಲವಾಗುವ ವಿಷಯಗಳ ಜಾಗೃತಿಯು ವೇದಸುಧೆಯ ಉದ್ಧೇಶ. ಈ ನೆಲೆಯಲ್ಲಿ ಚರ್ಚಿಸೋಣ. ಅಂದಹಾಗೆ ನಾನಿಲ್ಲಿ ಒಬ್ಬ ಪೋಸ್ಟ್ ಮನ್. ಮೇಧಾವಿಗಳಿಂದ ವಿಷಯ ಸಂಗ್ರಹಿಸಿ ಹಂಚುವುದಷ್ಟೇ ನನ್ನ ಕೆಲಸ.

  ReplyDelete
 3. Urgent ಪ್ರತಿಕ್ರಿಯೆ!
  ಹಸು ಸಾಕುವುದು ಹಾಲಿಗಲ್ಲ!!
  ಹಾಲಿಗೋಸ್ಕರ ಎಂಬ ತಪ್ಪು ಕಲ್ಪನೆಯಿಂದಲೇ ಗೋವಿನ ವಧೆ ಅತಿಯಾಗಿದೆ.
  ಮುದಿ ಗೋವು ಹಾಒನ್ನು ಕೊಡುವುದಿಲ್ಲ, ಕಸಾಯಿಖಾನೆಗೆ ತಳ್ಳು!
  ಗಂಡು ಕರು ಹಾಲು ಕೊಡುವುದಿಲ್ಲ, ಕಸಾಯಿಖಾನೆಗೆ ತಳ್ಳು! (ಕೆಲವೇ ದಿನಗಳ ಗಂಡು ಕರುವನ್ನು ಕಟುಕರಿಗೆ ಮಾರುತ್ತಿದ್ದುದನ್ನು ಕಣ್ಣಾರೆ ಕಂಡು ಸಂಕಟಪಟ್ಟಿದ್ದೇನೆ)
  ರೋಗಿಷ್ಠ ಹಸು ಹಾಲು ಕೊಡುವುದಿಲ್ಲ, ಕಸಾಯಿಖಾನೆಗೆ ತಳ್ಳು!
  ಅದು ಕೊಡುವ ಹಾಲಿಗಿಂತ ಅದರ ಹುಲ್ಲಿನ ಖರ್ಚೇ ಜಾಸ್ತಿ. ಕಸಾಯಿಖಾನೆಗೆ ತಳ್ಳು!
  ಹಾಗಾದರೆ ಹಸುವನ್ನು ಸಾಕುವ ಉದ್ದೇಶವೇನು?
  ಸಗಣಿ, ಗಂಜಲ Repeat ಸಗಣಿ, ಗಂಜಲ.
  ಕೃಷಿಗೆ ಅತ್ಯಮೂಲ್ಯವಾದ ವಿಷರಹಿತ ಗೊಬ್ಬರ.
  ಮೇಲೆ ಹೇಳಿದ ಎಲ್ಲ ರೀತಿಯ ಹಸುಗಳೂ, ಗಂಡು ಕರುಗಳೂ ಸಗಣಿ, ಗಂಜಲವನ್ನಂತೂ ಕೊಟ್ಟೇ ಕೊಡುತ್ತವೆ!
  ಜಗತ್ತಿನಲ್ಲಿ VEGANS ಹೆಚ್ಚುತ್ತಿದ್ದಾರೆ. ಇವರು ಹಾಲಷ್ಟೇ ಅಲ್ಲ, ಯಾವುದೇ ಪ್ರಾಣಿಗಳ ಉತ್ಪನ್ನವನ್ನೂ ಬಳಸುವುದಿಲ್ಲ!
  ಈ ಬಗ್ಗೆ ಇನ್ನೂ ಹೆಚ್ಚು ಬರೆಯುವುದಿದೆ. ಅಲ್ಲಿಯವರೆಗೆ `ಗೋ ಕರುಣಾನಿಧಿಃ' ಎಂಬ ಪುಸ್ತಕದ ಅಧ್ಯಯನವನ್ನು ಮಾಡುತ್ತಿರಿ.

  ReplyDelete