ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Tuesday, February 22, 2011

ಎರಡು ಚಿಕ್ಕ ಕಥೆಗಳು

ತಸಿ ಕೆಟ್ಟ!

ಇಬ್ಬರು ಯುವ ಸನ್ಯಾಸಿಗಳು ನದಿಯೊಂದನ್ನು ದಾಟಿ ಆಶ್ರಮ ತಲುಪಬೇಕಿತ್ತು. ನದಿದಡವನ್ನು ತಲುಪಿದಾಗ ಒಬ್ಬ ತರುಣಿ ನದಿಯಲ್ಲಿ ಮುಳುಗುತ್ತಿರುವ ದೃಶ್ಯವು ಕಣ್ಣಿಗೆ ಬೀಳುತ್ತದೆ. ಒಬ್ಬ ಯುವ ಸನ್ಯಾಸಿ ಹೇಳಿದ " ಅಯ್ಯೋ ಹುಡುಗಿ ನೀರಲ್ಲಿ ಮುಳುಗಿಹೋಗುತ್ತಿದ್ದಾಳಲ್ಲಾ! ನಾವಾದರೋ ಸನ್ಯಾಸಿಗಳು , ಮಾಡುವುದಾದರೂ ಏನು?"
ಮತ್ತೊಬ್ಬ ಮಾತನಾಡದೆ ಈಜುಹೊಡೆದುಕೊಂಡು ಮುಳುಗುತ್ತಿರುವ ತರುಣಿಯತ್ತ ಧಾವಿಸಿದ,ಎತ್ತಿಕೊಂಡುಬಂದು ದಡ ಸೇರಿದ. ಪ್ರಾಥಮಿಕ ಆರೈಕೆ ಮಾಡಿದ, ತರುಣಿಯನ್ನು ಸಾವಿನ ದವಡೆಯಿಂದ ಪಾರುಮಾಡಿದ ಸಮಾಧಾನದಿಂದ ಆಶ್ರಮ ಸೇರಿದ. ಅದಾಗಲೇ ಅತ್ತೊಬ್ಬ ಸನ್ಯಾಸಿ ಆಶ್ರಮ ದೌಡಾಯಿಸಿದ್ದ. ಹಿರಿಯ ಸನ್ಯಾಸಿಗೆ ನದಿಯಯಲ್ಲಿ ನಡೆದ ವೃತ್ತಾಂತವನ್ನೆಲ್ಲಾ ರೆಕ್ಕೆಪುಕ್ಕ ಕಟ್ಟಿ ಕಥೆ ಹೇಳಿದ್ದ. ತರುಣಿಯನ್ನು ಸಾವಿನಿಂದ ಪಾರುಮಾಡಿದ್ದ ಸನ್ಯಾಸಿಯೂ ಪ್ರಸನ್ನ ಚಿತ್ತದಿಂದ ಆಶ್ರಮಕ್ಕೆ ಬಂದ. ಹಿರಿಯ ಸನ್ಯಾಸಿಗಳನ್ನು ಹೊರತುಪಡಿಸಿ ಎಲ್ಲರೂ ಇವನನ್ನು ಅಪರಾಧಿಯನ್ನು ನೋಡುವಂತೆ ನೋಡುತ್ತಿದ್ದಾರೆ. ಇವನಿಗೆ ಎಲ್ಲವೂ ಅರ್ಥವಾಯ್ತು. ಹಿರಿಯ ಸನ್ಯಾಸಿ ಇವನನ್ನು ಕೇಳಿದ-
" ಯುವತಿಯೊಬ್ಬಳನ್ನು ಮುಟ್ಟಿ ಬಿಟ್ಟೆಯಂತಲ್ಲಾ?"
- ಹೌದು ಸ್ವಾಮೀಜಿ, ನಾನು ಮುಟ್ಟಿದ್ದೂ ನಿಜ. ಅಲ್ಲೇ ಬಿಟ್ಟಿದ್ದೂ ನಿಜ. ಆದರೆ ನನ್ನ ಮಿತ್ರ ಸನ್ಯಾಸಿ ಆಯುವತಿಯನ್ನು ಈ ಆಶ್ರಮಕ್ಕೂ ಕರೆತಂದು ಬಿಟ್ಟನಲ್ಲಾ?!
---------------------------------------------------------------
ಮೂರು ಕಾಗೆ ವಾಂತಿ ಮಾಡಿದ್ದು:

ಸೋಮು ಓಡೋಡಿ ಬಂದ. ಅಲ್ಲಿದ್ದವರಿಗೆಲ್ಲಾ ಹೇಳಿದ." ಮೈಸೂರು ಅರಮನೆಯಲ್ಲಿ ರಾಜ ಕುಮಾರ ಮೂರು ಕಾಗೆಯನ್ನು ವಾಂತಿ ಮಾಡಿಕೊಂಡನಂತೆ"
- ಸೋಮು, ನಿನಗೆ ಹೇಳಿದವರಾರು?
- ನನಗೆ ನನ್ನ ಸ್ನೇಹಿತ ಕುಲಕರ್ಣಿ ಹೇಳಿದ.
ಕುಲಕರ್ಣಿಯನ್ನು ಅರಸುತ್ತಾ ಎಲ್ಲರೂ ಸಾಗಿದರು ಅಂತೂ ಇಂತೂ ಕುಲಕರ್ಣಿಯ ಭೇಟಿಯಾಯ್ತು.             
-" ಕುಲಕರ್ಣಿಯವರೇ, ರಾಜಕುಮಾರ ಮೂರು ಕಾಗೆಯನ್ನು ವಾಂತಿ ಮಾಡಿಕೊಂಡಿದ್ದಾದರೂ ಹೇಗೆ?"
ಕುಲಕರ್ಣಿ ಹೇಳಿದರು-" ಅದು ಮೂರು ಕಾಗೆಯಲ್ಲ, ಎರಡು"

_ " ನೀವು ನೋಡಿದಿರಾ?"
-ಇಲ್ಲ, ಅದು ನಿಜ , ನನಗೆ ಅರಮನೆಯ ಪುರೋಹಿತರ ಮಗ ಶರ್ಮ ಹೇಳಿದ್ದು."
ಶರ್ಮನನ್ನೂ ಹುಡುಕಿದ್ದಾಯ್ತು, ಶರ್ಮ ಹೇಳಿದರು" ಯಾರು ಹೇಳಿದ್ದು, ಅದು ಎರಡಲ್ಲ ಒಂದು ಕಾಗೆ".

-ನಿಮಗೆ ಯಾರು ಹೇಳಿದ್ದು?

- ನಮ್ಮಪ್ಪನಿಗೆ ಯಾರೋ ಅರಮನೆಗೆ ತುಂಬ ನಂಬಿಕೆಪಾತ್ರರಾದವರು ಹೇಳಿದರಂತೆ.
ಕೊನೆಗೆ ರಾಜ ಪುರೋಹಿತರನ್ನು ಕಂಡು ವಿಚಾರಿಸಿದರೆ ಅವರು ಹೇಳಿದ್ದೇನು ಗೊತ್ತೆ?
ಯಾರ್ರೀ ಹೇಳಿದ್ದು? ರಾಜ ಕುಮಾರ ಕಾಗೆಯಂತೆ ಕಪ್ಪಗೆ ವಾಂತಿ ಮಾಡಿಕೊಂಡನೆಂದು ನಾನು ನನ್ನ ಪತ್ನಿಗೆ ಹೇಳಿದ್ದೆ, ಅಷ್ಟೆ.
---------------------------------------------------------------
ಎರಡೂ ಕಥೆಗೆ ವಿವರಣೆ ಯೆಲ್ಲಾ ಯಾಕೆ ಬೇಕು? ಅಲ್ಲವೇ?

No comments:

Post a Comment