Pages

Monday, March 14, 2011

ನಾ ನಿನ್ನ ಧ್ಯಾನದೊಳಿರಲು.

ಇದು ನನ್ನ ಬದುಕು. ನನ್ನ ಆತ್ಮ ನಿರ್ದೇಶಿಸಿದಂತೆ ನಿಸ್ಸಂಕೋಚದಿಂದ, ನಿರ್ಭಯದಿಂದ ಮತ್ತು ದ್ವಂದ್ವ ರಹಿತನಾಗಿ ಮುನ್ನಡೆಯುತ್ತೇನೆ. ನನ್ನ ಆಚರಣೆಗಳು, ನಂಬಿಕೆಗಳು ಮತ್ತು ನಡವಳಿಕೆಗಳು ನನ್ನಾತ್ಮಕ್ಕೆ ಮೆಚ್ಚುಗೆಯಾದರಷ್ಟೇ ಸಾಕು. ಪರರ ಮೆಚ್ಚುಗೆ, ಹೊಗಳ್ನುಡಿಗಳು ನನಗೆ ಬೇಡ, ಪರ-ನಿಂದೆ, ಪರಪೀಡನೆ ನನಗೆ ಬೇಡ,   ನಿನ್ನ ಕರುಣೆ ಸದಾ ಎಲ್ಲರ ಮೇಲಿರಲಿ ಎಂಬುದು ನಮ್ಮ ನಿತ್ಯ ಪ್ರಾರ್ಥನೆಯಾಗಬೇಕು. ಅದುವೇ ಭಕ್ತ-ಭಗವಂತನ ನಿಜವಾದ ನಿರ್ಮಲ ಉಭಯ ಕುಶಲೋಪರಿ! 

             ಲೌಕಿಕ ಜಗತ್ತಿನಲ್ಲಿ ತಾನು ಮಾಡಿದ್ದೆಲ್ಲವನ್ನೂ ಇತರರು ಗಮನಿಸಬೇಕು, ಮೆಚ್ಚಬೇಕು ಮತ್ತು ಬೆನ್ನು ತಟ್ಟಬೇಕೆಂಬ ಬಯಕೆ ಮಾನವ ಸಹಜವಾದದ್ದು. ಪುಟ್ಟ ಮಗುವಿನಿಂದ ಹಿಡಿದು ಎಲ್ಲಾ ವಯಸ್ಸಿನವರಲ್ಲಿಯೂ ನಾವು ಈ ಪ್ರವೃತ್ತಿಯನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಎಲ್ಲರೂ ಎಲ್ಲರ ಗಮನ ತಮ್ಮತ್ತ ಸೆಳೆಯಲು ಅನವರತ ಪ್ರಯತ್ನ ನಡೆಸಿಯೇ ಇರುತ್ತಾರೆ. ಆದರೆ ಕೇವಲ ಕೆಲವರತ್ತ ಮಾತ್ರಾ ಎಲ್ಲರ ಗಮನ ಅವರು ಸೆಳೆಯದೆಯೇ ಹೋಗುತ್ತದೆಯೆಂಬುದೂ ಸತ್ಯವೇ! ಅನೇಕ ಸಂದರ್ಭಗಳಲ್ಲಿ ನಮ್ಮ ಚಟುವಟಿಕೆಗಳ ಬಗ್ಗೆ ಇತರರ ಕಾಳಜಿ, ಮಾರ್ಗದರ್ಶನ ಮತ್ತು ಪ್ರೋತ್ಸಾಹದಾಯಕ ನಡೆಗಳು ನಾವು ಅನೇಕ ಕಾರ್ಯಕ್ಷೇತ್ರಗಳಲ್ಲಿ ಪ್ರಗತಿ ಹೊಂದಲು, ಇನ್ನೂ ಹೆಚ್ಚಿನ ಸಾಧನೆ ಮಾಡಲು ಅತ್ಯಂತ ಪೂರಕವೂ ಆಗಿರುತ್ತದೆ ಎಂಬ ಬಗ್ಗೆ ಎರಡು ಮಾತಿಲ್ಲ. ಮನುಷ್ಯನ ಇಂತಹ ಸಾಧನೆಗಳ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆಗಳು ಒಂದು ಆರೋಗ್ಯಕರ ಸಮಾಜದ ಲಕ್ಷಣವೂ ಹೌದು.  ಹಾಗಾಗಿ ನಮ್ಮ ನಮ್ಮ ಚಟುವಟಿಕೆಗಳು ನಮಗೂ ಮತ್ತು ಇತರರಿಗೂ ಚೇತೋಹಾರಿಯಾಗಿರಬೇಕು; ಪರಸ್ಪರ ಪೂರಕವಾಗಿರಬೇಕು. ಆಗಲೇ ಸಾಧನೆ ಮತ್ತು ಆ ಸಾಧನೆಗೆ ಸಿಕ್ಕ ಪ್ರತಿಫಲಕ್ಕೆ ನಿಜವಾದ ಅರ್ಥ ಬಂದೀತು.
ಪ್ರಾಯಶ: ಇಂತಹ ಪ್ರವೃತ್ತಿಯನ್ನು ಮಾನವನಲ್ಲಿ ಒಂದು ಹಂತದಲ್ಲಿಯಾದರೂ ಪ್ರಬುದ್ಧತೆ ಮೂಡುವವರೆಗಾದರೂ ನಾವು ಗಮನಿಸಬಹುದು. ಪ್ರಸ್ತುತದಲ್ಲಿ ಪ್ರಬುದ್ಧತೆ ಎಂದರೆ ಇತರರನ್ನು ಮೆಚ್ಚಿಸುವ ಕಾಯಕಗಳು ನಿರರ್ಥಕ, ಅರ್ಥಹೀನ ಮತ್ತು ಅನವಶ್ಯ ಎಂಬ ಪ್ರಜ್ಞೆ ಎಂದು ಅರ್ಥೈಸಬಹುದು. ಆದರೆ ಅಂತಹ ಪ್ರಬುದ್ಧತೆ ಯಾವಾಗ ಮತ್ತು ಎಷ್ಟು ಜನರಲ್ಲಿ ಪ್ರಕಟವಾದೀತೆಂಬುದು ಮಾತ್ರಾ ತಿಳಿಯದ ವಿಷಯ. ಅದು ಅವರವರ ಸಂಸ್ಕಾರ, ಜೀವನಶೈಲಿ, ಜೀವನಾರ್ಥವನ್ನು ಅರಿಯುವ ನಿಜವಾದ ಹಸಿವು, ಪ್ರದರ್ಶನ ಜೀವನದ ಟೊಳ್ಳುತನದ ಅರಿವು ಮುಂತಾದ ಅನೇಕ ವಿಷಯಗಳನ್ನು ಅವಲಂಬಿಸಿರುತ್ತದೆ. ಭಗವದ್ಗೀತೆಯಲ್ಲಿನ ಕರ್ಮ ಸಿದ್ಧಾಂತವನ್ನು ಒಮ್ಮೆಗೇ ಎಲ್ಲರೂ ತಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಷ್ಟು ಸುಲಭ ಸಾಧ್ಯವಲ್ಲ. ಅದು ಸ್ವ-ಬುದ್ಧಿಯಿಂದ, ಜೀವನದ ಅನೇಕ ಅನುಭವಗಳಿಂದ ಕಲಿತ ಪಾಠಗಳಿಂದ ಮತ್ತು ಗುರು-ಹಿರಿಯರ ಮಾರ್ಗದರ್ಶನದಿಂದ ಕಾಲಾನುಕ್ರಮದಲ್ಲಿ ಅಳವಡಿಸಿಕೊಳ್ಳಬಹುದಾದ ಒಂದು ಸನ್ನಡತೆ.  ಹಾಗಾಗಿಯೇ ನಾವು ಗುಡ್ಡದಷ್ಟು ಮಾಡಿದ್ದನ್ನು ಬೆಟ್ಟದಷ್ಟು ಮಾಡಿದ್ದೇವೆಂದು ತೋರಿಸಿಕೊಂಡು ಒಣ ಜಂಭ ಪಡುವುದು ಸಾಮಾನ್ಯವಾಗಿದೆ.  ಸಾಧನೆಗಳೆಂದು ಕೊಂಡು ನಾವು ಹೆಮ್ಮೆಯಿಂದ ಬಡಾಯಿ ಕೊಚ್ಚಿಕೊಂಡದ್ದೆಲ್ಲವನ್ನೂ ಸಮಾಜ ಹಾಗೆಯೇ ಸ್ವೀಕರಿಸುತ್ತದೆಂಬುದು ಕೇವಲ ನಮ್ಮ ಭ್ರಮೆ ಅಥವಾ ಮೂಢತನವಷ್ಟೇ ಅದೀತು. ಮುಖಸ್ತುತಿಗಾದರೂ ನಮ್ಮ ಕಾರ್ಯಗಳನ್ನು ಮೆಚ್ಚಿಕೊಂಡಂತೆ ಕೆಲವರು ಪ್ರತಿಕ್ರಿಯಿಸಿದರೆ, ಮತ್ತೆ ಕೆಲವರು ನಮ್ಮಿಂದ ಬೇರೇನಾದರೂ ಸಹಾಯ ಪಡೆಯಬಹುದೆಂಬ ದೂ(ದು)ರಾಲೋಚನೆಯಿಂದ ನಮ್ಮನ್ನು ಹೊಗಳಿ ಹೊಗಳಿ ಹೊನ್ನ ಶೂಲಕ್ಕೇರಿಸಿಬಿಡುವರು. ಇಂತಹ ಒಂದು ಭ್ರಮಾಲೋಕದಲ್ಲಿ ನಾವು ಸಿಲುಕಿದಾಗ ನಮ್ಮ ವಿವೇಕ ಮಂಕಾಗುತ್ತದೆ; ನಾನೇನೋ ಅಸಾಧ್ಯವಾದುದನ್ನು/ಅಸಾಧಾರಣವಾದುದನ್ನು ಸಾಧಿಸಿ ಬಿಟ್ಟೆ ಎಂಬ ನೀರ‍್ಗುಳ್ಳೆಯಲ್ಲಿ ತೇಲಾಡುತ್ತೇವೆ. ಆದರೆ ಸತ್ಯಾಂಶವೆಂದರೆ ಇಂದು ನಾವು ದೇವರನ್ನಾದರೂ ಮೆಚ್ಚಿಸಬಹುದು; ಮನುಷ್ಯರನ್ನು ಮೆಚ್ಚಿಸಲು ಸಾಧ್ಯವೇ ಇಲ್ಲ. ಏಕೆಂದರೆ ಸ್ವಾರ್ಥಪರರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಇಂದಿನ ಸನ್ನಿವೇಶದಲ್ಲಿ, ತನ್ನನ್ನು ತಾನು ಇನ್ನಷ್ಟು ಬಣ್ಣಕಟ್ಟಿ ಪ್ರದರ್ಶಿಸುವ ಹುಚ್ಚು ಓಟದಲ್ಲಿ, ಇತರರ ಸಾಧನೆಗಳನ್ನು ಗುರುತಿಸಲು ಮತ್ತು ಪ್ರೋತ್ಸಾಹಿಸಲು ಯಾರಿಗೂ ಸಮಯವೂ ಇಲ್ಲ, ವ್ಯವಧಾನವೂ ಇಲ್ಲ ಮತ್ತು ಮಿಗಿಲಾಗಿ ನಿರ್ಮಲವಾದ ಮನಸ್ಸೂ ಇಲ್ಲ! ಹಾಗಾಗಿ ಇತರರನ್ನು ಮೆಚ್ಚಿಸುವ ಕಾಯಕಗಳು ಅರ್ಥಹೀನವೇ ಸರಿ.  ಇಂತಹ ಸನ್ನಿವೇಶದಲ್ಲಿ ನಮ್ಮ ಕಾರ್ಯ ಚಟುವಟಿಕೆಗಳನ್ನು ಇತರರನ್ನು ಮೆಚ್ಚಿಸಲಿಕ್ಕಾಗಿ ರೂಪಿಸಿಕೊಂಡು ಮುನ್ನಡೆಯುವುದು ಮತ್ತು ಅದಕ್ಕಾಗಿ ಇನ್ನಿಲ್ಲದ ಕಸರತ್ತುಗಳನ್ನು ಮಾಡುವುದು ಎಷ್ಟರಮಟ್ಟಿಗೆ ಸೂಕ್ತ, ಪ್ರಸ್ತುತ ಮತ್ತು ಫಲಕಾರಿ ಎಂಬುದನ್ನು ಪ್ರತಿಯೊಬ್ಬರೂ ಚಿಂತಿಸಬೇಕಾಗಿದೆ. ಇಂತಹ ಒಂದು ಜೀವನಶೈಲಿ ತಾತ್ಕಾಲಿಕವಾಗಷ್ಟೇ ಸಮಾಜದ ಮತ್ತಿತರರ ಗಮನವನ್ನು ಸೆಳೆದೀತು. ಜನರ ಮೆಚ್ಚುಗೆ ಮತ್ತು ಮನ್ನಣೆ ಕೇವಲ ನಮ್ಮ ಪ್ರಚಾರದ ಅಬ್ಬರವಿರುವ ತನಕ ಮಾತ್ರಾ. ಅದರಿಂದಲೇ ಅಂತಹ ಗಮನವನ್ನು ಸದಾ ಕಾಲ ಹಿಡಿದಿಟ್ಟಿರಲು ಇನ್ನಿಲ್ಲದ ಕಾರ್ಯತಂತ್ರಗಳನ್ನು ಬಳಸುವಲ್ಲೇ ಅನೇಕರು ತಮ್ಮ ಜೀವನದ ಅತ್ಯಧಿಕ ಕಾಲವನ್ನೇ ವ್ಯಯಿಸಿ ಬಿಟ್ಟಿರುತ್ತಾರೆ.  ಸ್ವಲ್ಪವಾದರೂ ಆತ್ಮ ಚಿಂತನೆಯ ಕಾಲ ಮತ್ತು ಪರಿಜ್ಞಾನ ಬಂದಾಗ, ತಾನೆಲ್ಲಾ ಈವರೆಗೆ ಬರೀ ತೋರಿಕೆಯ ಜೀವನವನ್ನೇ ನಡೆಸಿದೆನಲ್ಲ, ಏನೂ ಶಾಶ್ವತವಾದುದನ್ನು ಸಾಧಿಸಲಾಗಲಿಲ್ಲವಲ್ಲ ಎಂಬ ಕೊರಗು ಮೂಡುತ್ತದೆ. ಪಾಪಪ್ರಜ್ಞೆ ನಿರಂತರ ಕಾಡುತ್ತದೆ. ಕೆಟ್ಟ ಮೇಲೆ ಬುದ್ಧಿ ಬಂದಂತೆ!
               ಜೀವನದಲ್ಲಿ ಏನನ್ನು ಸಾಧಿಸಬೇಕೆಂದರೂ ದೈವಕೃಪೆ ಮತ್ತು ಗುರುಕೃಪೆ ಇರಬೇಕೆಂಬುದು ಆಸ್ತಿಕರ ದೃಢವಾದ ನಂಬಿಕೆ. ಪ್ರಪಂಚದ ಅನೇಕ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು, ಅನುಭವಗಳನ್ನು ಮತ್ತು ಅವರ ಜೀವನಶೈಲಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಇಂತಹ ಒಂದು ನಂಬಿಕೆ ಸರಿಯೆನಿಸದೇ ಇರಲಾರದು. ಅಂತೆಯೇ ಈ ದೈವಕೃಪೆಗಾಗಿ ನಾವು ಅನೇಕ ಮಾರ್ಗಗಳನ್ನು ಅನುಸರಿಸುತ್ತೇವೆ - ನಿತ್ಯಾನುಷ್ಠಾನ, ಪೂಜೆ, ಜಪ-ತಪ, ಹೋಮ, ಹವನ, ಧ್ಯಾನ ಇತ್ಯಾದಿ. ಕಲಿಯುಗದ ಮಹಿಮೆಯೋ ಏನೋ ದುರದೃಷ್ಟವಶಾತ್ ಇಂದು ಇಂತಹ ಆಚರಣೆಗಳು ಕೂಡಾ ಡಾಂಭಿಕತನದ, ಹಣದ ಮತ್ತು ವೈಯುಕ್ತಿಕ ಹಿತಸಾಧನೆಗಾಗಿ ಮಾಡುವ ಪ್ರದರ್ಶನ ವಸ್ತುವಾಗಿ ಬಿಟ್ಟಿದೆ. ನಾನು ಇಂತಹ ಧರ್ಮಕಾರ್ಯಕ್ಕಾಗಿ ಇಷ್ಟು ಹಣ ಕೊಟ್ಟೆ (ಫೋಟೋದೊಂದಿಗೆ ಪತ್ರಿಕೆಗಳಲ್ಲಿ ಪ್ರಚಾರದಿಂದ ಹಿಡಿದು ದೊಡ್ಡ ದೊಡ್ಡ ಫ್ಲೆಕ್ಸ್ ಪಟಗಳಲ್ಲೂ ರಾರಾಜಿಸುವವರೆಗೆ!), ನಾನು ಪ್ರತಿ ದಿವಸ ಇಷ್ಟು ಗಂಟೆ ಪೂಜೆ ಮಾಡುತ್ತೇನೆ, ಇಷ್ಟು ಜಪ ಮಾಡುತ್ತೇನೆ, ಇಷ್ಟು ದೇವಸ್ಥಾನಗಳಿಗೆ ಹೋಗುತ್ತೇನೆ, ಇಷ್ಟು ಇತರರಿಗೆ ಸಹಾಯ ಮಾಡಿದ್ದೇನೆ ಇತ್ಯಾದಿ ಇತ್ಯಾದಿ ಹೇಳಿಕೊಂಡು ತಿರುಗುವವರೇ ಇಂದು ಬಹು ಮಂದಿ. ಇಂತಹ ವಿಷಯಗಳಿಂದ ಇತರರಿಗೆ ಆಗಬೇಕಾದ್ದೇನೂ ಇಲ್ಲ ಮತ್ತು ಬಹುಮಂದಿಗೆ ಈ ವಿಚಾರಗಳಲ್ಲಿ ಆಸಕ್ತಿಯೂ ಇರುವುದಿಲ್ಲ. ಇದರಿಂದ ದೈವ ಕೃಪೆಗಿಂತ ದೇವರ ಅವಕೃಪೆಯೇ ಹೆಚ್ಚಾದೀತೆಂಬುದನ್ನೂ ಇವರು ಅರಿಯರು. ಎಂತಲೇ ಅಷ್ಟವಿಧದರ್ಚನೆಯನೆಷ್ಟು ಮಾಡಿದಡೇನು ನಿಷ್ಠೆ ನೆಲೆಗೊಳದೆ ಭಜಿಸುವ ಪೂಜೆಯದು ನಷ್ಟ ಕಾಣಯ್ಯ ಎಂದು ಸರ್ವಜ್ಞ ಹೇಳಿರುವುದು. ಹೊರಗಿನ ದೇವರೇಕೆ? ಒಳದೈವಕೆ ಕಿವಿಗೊಡು ಎಂಬ ದ.ರಾ.ಬೇಂದ್ರೆಯವರ ಮಾತು ಕೂಡ ಪ್ರಸ್ತುತವೇ.
ನೇರವಾಗಿ ಹೇಳಬೇಕೆಂದರೆ, ಭಗವಂತನ ಆರಾಧನೆ  ಅದು ಯಾವ ರೂಪದಲ್ಲಿ ಬೇಕಾದರೂ ಇರಲಿ - ಅದು ಭಕ್ತ ಮತ್ತು ಭಗವಂತನ ಮಧ್ಯೆ ಮಾತ್ರಾ ನಡೆಯುವ ಒಂದು ಆಪ್ತ ಪ್ರಕ್ರಿಯೆ; ಸಂವಾದ ಮತ್ತು ವಿನಿಮಯ. ನಿಜವಾದ ಭಕ್ತ ತನ್ನ ಅಳಲು ಆ ಭಗವಂತನಿಗೆ ತಲುಪಿದರಷ್ಟೇ ಸಾಕೆಂಬ ಅರಿವನ್ನು ಹೊಂದಿರುತ್ತಾನೆ. ಅಂತಹ ಅರಿವೇ ಆತನಿಗೆ ಅಂತಿಮವಾಗಿ ಜಯವನ್ನೂ ತಂದೇ ಕೊಡುತ್ತದೆ. ಬದಲಾಗಿ ತನ್ನ ಆಚರಣೆಗಳಿಗೆ ಬಣ್ಣ ಕಟ್ಟಿ, ನಾಲ್ಕು ಜನರನ್ನು ಮೆಚ್ಚಿಸಲಿಕ್ಕಾಗಿ ಎಂದು ಆತ ಮುಂದಾಗುತ್ತಾನೋ, ಎಂದು ಧಾರ್ಮಿಕ ಆಚರಣೆಗಳು ಪ್ರದರ್ಶನದ ಸಲಕರಣೆಗಳಾಗುತ್ತವೆಯೋ ಅಂದಿನಿಂದಲೇ ಆತನ ಅವನತಿ ಕೂಡಾ ಪ್ರಾರಂಭವಾಗುವುದಲ್ಲಿ ಸಂಶಯವಿಲ್ಲ. ತೋರಿಕೆಯ ಆಚರಣೆಗಳು ನಾಲ್ಕು ಜನರ ಮೆಚ್ಚುಗೆಯ ಮಾತುಗಳಿಂದ ತೃಪ್ತಿ (ಅಲ್ಪ ಕಾಲಿಕ) ತರಬಹುದು. ನಾನೂ ಭಗವಂತನ ಸೇವೆ ಮಾಡಿದೆನೆಂಬ ಸಮಾಧಾನವನ್ನೂ ತರಬಹುದು. ಆದರೆ ನಿಜಾರ್ಥದಲ್ಲಿ ಆ ಆಚರಣೆಗಳು ಭಗವಂತನ ಸಮೀಪವೂ ಸುಳಿದಿರವು. ಇಂದು ಧಾರ್ಮಿಕ ಕಾರ್ಯಗಳಿಗೆ ಸಾಕಷ್ಟು ದೊಡ್ಡ ಮೊತ್ತವನ್ನು ತಮ್ಮ ಹೆಸರನ್ನು ಎಲ್ಲಿಯೂ ತರಬಾರದೆಂಬ ಷರತ್ತಿಗೊಳಪಟ್ಟು ದಾನ ಮಾಡುವ ಅನೇಕ ಮಹನೀಯರನ್ನೂ ನೋಡಬಹುದು; ಅಂತೆಯೇ ಒಂದು ಟ್ಯೂಬ್ ಲೈಟ್ ಮೇಲೆ ದಾನಿಗಳು ಇಂತಹವರು ಎಂದು ದೊಡ್ಡದಾಗಿ ಹೆಸರು ಬರೆಸಿಕೊಳ್ಳುವ ಮಹಾನುಭಾವರನ್ನೂ ನೋಡಬಹುದು!  ಟ್ಯೂಬ್ ಲೈಟ್ ಮೇಲೆ ದಾನಿಗಳ ಹೆಸರನ್ನು ನೋಡಿ ಯಾರೂ ಪ್ರಶಂಸೆ ಮಾಡಲಾರರು; ಬದಲಾಗಿ ಅದೊಂದು ನಗೆಪಾಟಲಿನ ವಿಷಯವಷ್ಟೇ ಅದೀತು.
ಹಾಗಾಗಿ ಈ ಮೇಲೆ ಹೇಳಿದಂತೆ ವೈಯುಕ್ತಿಕ ಧಾರ್ಮಿಕ ಆಚರಣೆಗಳು ನಮ್ಮ ನಮ್ಮ ದೇವರ ಖಾಸಗೀ ಕೋಣೆಗಷ್ಟೇ ಮತ್ತು ನಮ್ಮ ಮತ್ತು ನಮ್ಮ ಆರಾಧ್ಯ ದೇವರ ನಡುವೆಯಷ್ಟೇ ಸೀಮಿತವಾಗಿದ್ದರೆ ಚೆನ್ನ. ಭಕ್ತ ಮತ್ತು ಭಗವಂತನ ಸಂಭಾಷಣೆ ಪ್ರಿಯಕರ ಮತ್ತು ಪ್ರೇಯಸಿಯ ನಡುವೆ ನಡೆಯುವ ಸಂಭಾಷಣೆಯಂತೆಯೇ. ಅದು ಅವರವರಿಗೆ ಅರ್ಥವಾದರಷ್ಟೇ, ಅನುಭವವಾದರಷ್ಟೇ ಸಾಕು. ಪ್ರಿಯಕರ ಮತ್ತು ಪ್ರೇಯಸಿಯ ನಡುವೆ ನಡೆಯುವ ಎಲ್ಲವನ್ನೂ ಅವರು ಎಲ್ಲರೊಂದಿಗೂ ವೈಭವೀಕರಿಸಿ ಹೇಳಿಕೊಳ್ಳುವುದಿಲ್ಲ; ಹಾಗೆ ಮಾಡಿದರೆ ಅದು ಹಾಸ್ಯಾಸ್ಪದವಾದೀತು. ಅಂತೆಯೇ ಭಕ್ತ ಮತ್ತು ಭಗವಂತನ ಸಂಬಂಧ ಕೂಡ ಬಲು ಸೂಕ್ಷ್ಮವಾದುದು; ವೈಯುಕ್ತಿಕವಾದುದು. ಆದು ಬೇರೆಯವರಿಗೆ ತಿಳಿಯುವ, ತಿಳಿಸುವ ಮತ್ತು ವೈಭವೀಕರಿಸುವ ಅಗತ್ಯವಿಲ್ಲ.  ನಾ ನಿನ್ನ ಧ್ಯಾನದೊಳಿರಲು ಮಿಕ್ಕ ಹೀನ ಮಾನವರೇನ ಮಾಡಬಲ್ಲರೋ ರಂಗ ಎಂದು ಪುರಂದರದಾಸರು ನುಡಿದಂತೆ ಆ ಭಗವಂತನ  ನಿರಂತರ ಏಕಾಂತ ನಾಮಸ್ಮರಣೆಯೇ ಸಾಕು. ಭಗವಂತನ ನಿತ್ಯಾರಾಧನೆ ಆತನ ಕೃಪೆಯೊಂದಿಗೆ ದಿನನಿತ್ಯದ ಸಂಕಷ್ಟಗಳನ್ನು ಧೈರ್ಯದಿಂದ ಮತ್ತು ಸಮಾಧಾನ ಚಿತ್ತದಿಂದ ಎದುರಿಸುವಲ್ಲಿ ಖಂಡಿತಾ ನಮ್ಮ ಸಹಾಯಕ್ಕೆ ಬಂದೇ ಬರುತ್ತದೆ. ನನ್ನ ನೆರವಿಗೆ ಭಗವಂತನಿದ್ದಾನೆ, ಎಂದಿಗೂ ಆತ ನನ್ನ ಕೈ ಬಿಡನು ಎಂಬ ದೃಢವಾದ ನಂಬಿಕೆಯೇ ನಮ್ಮ ಸುಗಮ ಜೀವನಕ್ಕೆ ಮತ್ತು ಸಂತೋಷಕ್ಕೆ ಮೂಲವಾಗುತ್ತದೆ. ಇದು ಅನೇಕರ ಅನುಭವವೇದ್ಯವಾದ ಮಾತು. ಎಲ್ಲಾ ಸದ್ಗುರುಗಳ ಮೂಲಮಂತ್ರ. ಸತ್ಯವಾದ ಮಾತೆಂದರೆ ಭಗವಂತನಿಗೆ ನಾವು ಅರ್ಪಿಸುವ ಯಾವುದೇ ಲೌಕಿಕ ವಸ್ತುಗಳೂ ಆತನಿಗೆ ಬೇಕಾಗಿಲ್ಲ. ಅದು ಕೇವಲ ನಮ್ಮ ಮಾನಸಿಕ ತೃಪ್ತಿಗಷ್ಟೇ. ಅಗತ್ಯಕ್ಕಿಂತ ಮಿಗಿಲಾದ ಅಲಂಕಾರವೂ ಆತನಿಗೆ ಬೇಡ. ಅಚಂಚಲ ಭಕ್ತಿ, ಶರಣಾಗತಿಯ ಮತ್ತು ಅರ್ಪಣಾ ಮನೋಭಾವವಷ್ಟಿದ್ದರೆ ಸಾಕು ಆತನ ಒಲುಮೆ ಸಂಪಾದಿಸಲು. ಇವುಗಳನ್ನು ಬಿಟ್ಟು ಉಳಿದೆಲ್ಲ ಪ್ರದರ್ಶನದ ಆಚರಣೆಗಳು ಅರ್ಥಹೀನವಷ್ಟೇ ಅಲ್ಲ ಬರೀ ವ್ಯರ್ಥ ಶ್ರಮವೂ ಹೌದು.

|| ²æà gÁªÀÄ dAiÀÄ gÁªÀÄ dAiÀÄ dAiÀÄ gÁªÀÄ ||

PÀ« ªÉA. ¸ÀÄgÉñï
20.03.10- 94489-32866 - Email: bsr_kavisuresh@yahoo.co.in

3 comments:

  1. ಆತ್ಮೀಯರಾದ ಸುರೇಶ್,
    ನಿಮ್ಮ ಮನದಾಳದ ಚಿಂತನೆ ನನಗೆ ಇಷ್ಟವಾಯ್ತು. ನಾವೆಲ್ಲಾ ಒಂದೇ ದೋಣಿಯಲ್ಲಿ ಸಾಗುತ್ತಿದ್ದೇವಲ್ಲಾ! ಅದಕ್ಕಾಗಿ ಇರಬಹುದು. ಪ್ರಾಮಾಣಿಕವಾಗಿ ಹೇಳಬೇಕಾದರೆ ನಮ್ಮನ್ನು ಬೇರೆಯವರು ಹೊಗಳ ಬೇಕೆಂಬುದು ನಮ್ಮಂತಹ ಸಾಮಾನ್ಯ ಜನರ ಇಚ್ಛೆ. ಯಾರಾದರೂ ತೆಗಳಿದಾಗ ಮನಸ್ಸಿಗೆ ಅಹಿತ ಮತ್ತು ಹೊಗಳಿದಾಗ ಹಿತವೆನಿಸುವುದು ಸಹಜ. ನಾವೇನೂ ಸ್ಥಿತ ಪ್ರಜ್ಞರಲ್ಲ! ಅಲ್ಲವೇ? ಅಷ್ಟೇಕೆ ನಾವಾದರೂ ಲೌಕಿಕರು ಆದರೆ ಸನ್ಯಾಸಿಗಳಿಗೂ ಹೊಗಳಿಕೆ ಬೇಕಾಗಿದೆಯಲ್ಲಾ! ಜನರ ಪ್ರೀತಿ ವಿಶ್ವಾಸ ಬಿಟ್ಟು ಸನ್ಯಾಸಿಗಳೂ ಇರಲಾರರು. ಒಬ್ಬ ಸನ್ಯಾಸಿಯ ವಿಚಾರವನ್ನು ಒಪ್ಪದ ವ್ಯಕ್ತಿಯೊಬ್ಬ ಆ ಸನ್ಯಾಸಿಯನ್ನು ನಿಂದಿಸಿದರೆ ಆ ಸನ್ಯಾಸಿ ಕೂಡ ತೆಪ್ಪಗಿರಲಾರ. ಇದು ಸಾಮಾನ್ಯ ಅಭಿಪ್ರಾಯ. ಆದರೆ ಇದನ್ನು ಮೀರಿದವರು ಇಲ್ಲ ವೆಂದಲ್ಲ. ಅಂತಹ ಸಂಖ್ಯೆ ಗೌಣ.ನಾವಾದರೋ ನಿತ್ಯವೂ ನೆಮ್ಮದಿಗಾಗಿ ದಾರಿ ಹುಡುಕುತ್ತಿರುವವರು,ಹೀಗೆ ಹುಡುಕುವಾಗ ಕೆಲವರ ವಿಚಾರಗಳು ನಮಗೆ ಆಪ್ಯಾಯಮಾನವಾಗಿ ಕಾಣುತ್ತದೆ.ಅದನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ ಕ್ರಮೇಣ ಅದೂ ಸಪ್ಪೆ ಎನಿಸಬಹುದು. ಆಗ ಮತ್ತೆ ಹುಡುಕಾಟ. ಹೀಗೆಯೇ ಹುಡುಕಾಟದಲ್ಲಿ ನಮಗರಿವಿಲ್ಲದೆ ನಮ್ಮ ಆಯಸ್ಸು ಮುಗಿಯುತ್ತಾ ಬಂದಿರುತ್ತದೆ.
    ಆದರೆ ಒಂದು ವಿಚಾರದಲ್ಲಿ ನನಗೆ ಸಮಾಧಾನವಿದೆ. ಇಂದಿನ ವೈಜ್ಞಾನಿಕ ಯುಗದಲ್ಲಿ ಮನುಷ್ಯನಿಗೆ ತಾತ್ಕಾಲಿಕವಾಗಿ ಸುಖ ಕೊಡುವ ಹತ್ತು ಹಲವು ಕಾರ್ಯಕ್ರಮಗಳಿವೆ. ನೀವು ಹೀಗೆಯೇ ಒಂದು ಸರ್ವೆ ಮಾಡಿ ನೋಡಿ. ನೀವು ಯಾವುದೇ ಮನೆಗಳಿಗೆ ಹೋಗಿ ನೋಡಿ, ಪ್ರತಿಶತ ೯೦ ಜನರು ಟಿವಿಗಳಲ್ಲಿ ನೋಡುವ ದೃಶ್ಯಗಳ ಗುಣಮಟ್ಟ ಹೇಗಿರುತ್ತದೆ? ರಕ್ತದ ಚೆಲ್ಲಾಟ, ಅಶ್ಲೀಲ ದೃಶ್ಯಗಳು, ಅಥವಾ ಕ್ರಿಕೆಟ್ ಆಟ. ಅಥವಾ ಜನರನ್ನು ಭೀತರಾಗಿಸುವ ಜ್ಯೋತಿಶ್ಯ !
    ಮೇಲೆ ತಿಳಿಸಿದ ಟಿ.ವಿ ಕಾರ್ಯಕ್ರಮಗಳು ಕಣ್ಮುಂದೆ ಸುಳಿದರೆ ನನ್ನ ತಲೆ ಸಿಡಿದು ಹೋಗುತ್ತದೆ! ಆದರೆ ಅದೇ ಸಮಯದಲ್ಲಿ ಬಹುಪಾಲು ಜನರು ಅದೇ ದೃಶ್ಯಗಳನ್ನು ಸಂತೋಷದಿಂದಲೇ ನೋಡುತ್ತಿರುತ್ತಾರೆ. ಇದಕ್ಕೇನು ಹೇಳೋಣ!
    ಅಂದರೆ ಕನಿಷ್ಟಪಕ್ಷ ನಾವು ಯಾವುದೋ ಒಂದು ಸದ್ವಿಚಾರ ಹುಡುಕುವ ಪ್ರಯತ್ನದಲ್ಲಿದ್ದೇವಲ್ಲಾ! ಸಾಕು ಬಿಡಿ!ಕ್ರಮೇಣ ಅಂತರ್ಜಾಲವನ್ನು ಬಿಟ್ಟು ಏಕಾಂತದಲ್ಲಿರುವ ಕಾಲ ಬಾರದೆನ್ನುವಂತಿಲ್ಲ.

    ReplyDelete
  2. ಪ್ರಿಯ ಸುರೇಶರೇ, ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ ಎಂದರಲ್ಲಾ ನಮ್ಮ ಶಿವಶರಣರು ಅದೂ ಇದ್ದೇ ಉದ್ದೇಶಕ್ಕೆ. ಇದೇ ತಲೆಬರಹವನ್ನು ಬಳಸಿ ಧ್ಯಾನದ ಹರಹನ್ನು ಮೆಲುಕಿದ್ದೇನೆ ನನ್ನ ಲೇಖನವೊಂದರಲ್ಲಿ. ದೇವಸ್ಥಾನಗಳಲ್ಲಿ ಹಾಕಿರುವ ಟ್ಯೂಬ್‍ಲೈಟ್ ಗಡಿಯಾರ ಮೊದಲಾದ ಚಿಕ್ಕ ಚಿಕ್ಕ ವಸ್ತುಗಳಿಗಿಂತಾ ಅವುಗಳನ್ನು ಕೊಟ್ಟವರ ಬೋರ್ಡೇ ಬಹಳ ವಿರಾಜಿಸುತ್ತದೆ. ನಿಜವಾದ ದಾನಿಗಳು ಬಲಗೈಯ್ಯಲ್ಲಿ ನೀಡಿದ್ದು ಎಡಗೈಗೂ ತಿಳಿಯದಂತೆ! ಅಂತಹ ಜನ ಸಿಗುವುದು ಇವತ್ತಿನ ದಿನಮಾನದಲ್ಲಿ ಅತಿ ವಿರಳ. ನಮ್ಮೂರಲ್ಲಿ ಒಂದು ಗಾದೆ -ಗುಡ್ಡದ ಮೆಲಿನ ದನವನ್ನು ಗೋದಾನಮಾಡುವುದು ಎಂದು--ಇದರರ್ಥ ಯಾರದೋ ವಸ್ತುವನ್ನು ಯಾರಿಗೋ ದಾನಮಾಡಿ ತಮ್ಮ ಹೆಸರನ್ನು ಹಾಕಿಕೊಳ್ಳುವವರೂ ಇದ್ದಾರೆ. ಲೇಖನ ಹೃದ್ಯವಾಗಿದೆ, ವಸಂತಾಗಮನದ ಈ ಸುಸಂದರ್ಭದಲ್ಲಿ ನಿಮಗೂ ಹಾಗೂ ವೇದಸುಧೆಯ ಬಳಗಕ್ಕೂ ಓದುಗರಿಗೂ ಹಾರ್ದಿಕ ಶುಭಕಾಮನೆಗಳನ್ನು ಕೋರುತ್ತಿದ್ದೇನೆ, ನಮಸ್ಕಾರ

    ReplyDelete