ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Thursday, April 21, 2011

ವೈದಿಕವೆಂದು ಮಾಡುವ ಅಷ್ಟೂ 100% ಅವೈದಿಕ!!


ವೇದಗಳಲ್ಲಿ ಈಗ ಬ್ರಾಹ್ಮಣರು ನಡೆಸುವ ಮರಣೋತ್ತರ ಕರ್ಮಾಂಗಗಳ ವಿವರಣೆ ಇದೆಯೇ??? ಇರಲಿಕ್ಕಿಲ್ಲ.          -ಸುಬ್ರಮಣ್ಯ ಮಾಚಿಕೊಪ್ಪ                                                                                  ಇರಲಿಕ್ಕಿಲ್ಲ ಎಂಬ ನಿಮ್ಮ ನಿರೀಕ್ಷೆ ಸರಿ! ಮರಣವಾಗಿದೆ. ಇತ್ತ ಮೃತ ಶರೀರ. ಅದನ್ನು ವಾಯುಮಾಲಿನ್ಯವಾಗದಂತೆ ಸುಟ್ಟು ಬೂದಿ ಮಾಡಿದರೆ ಅದರ ವಿಚಾರದಲ್ಲಿ ನಮ್ಮ ಕರ್ತವ್ಯ ಮುಗಿದಂತೆ. "ಭಸ್ಮಾಂತಂ ಶರೀರಮ್" (ವೇದ) ಅತ್ತ ಶರೀರವನ್ನು ತೊರೆದ ಜೀವಾತ್ಮ. ಅದು ಶರೀರದಲ್ಲಿದ್ದಾಗ, ಶರೀರದಲ್ಲಿದ್ದಾಗ ಮಾಡಿದ ಕರ್ಮಗಳನುಸಾರ ಪುನರ್ಜನ್ಮವನ್ನೋ, ಮೋಕ್ಷವನ್ನೋ ಪಡೆಯುತ್ತದೆ. ಅದರ ಕರ್ಮಗಳಿಗೆ ಅದೇ Responsible. ಈ ವಿಚಾರದಲ್ಲಿ ಯಾರೂ ಮೂಗು ಹಾಯಿಸಲು ಅವಕಾಶವೇ ಇಲ್ಲ. ಪಕ್ತಾರಂ ಪಕ್ವಃ ಪುನರಾವಿಶಾತಿ (ವೇದ) - ನಾವು ಮಾಡಿದ ಕರ್ಮಗಳ ಅಡುಗೆಯು ನಮ್ಮನ್ನು ಹುಡುಕಿಕೊಂಡು ಬರುತ್ತದೆ. ತಿನ್ನುವವರೆಗೂ ಬಿಡುವುದಿಲ್ಲ. ನಮ್ಮ ಪುಣ್ಯವನ್ನು ಬೇರೊಬ್ಬರ Accountಗೆ ಬದಲಾಯಿಸುವುದಾಗಲಿ, ಇಲ್ಲಿ ಚಪ್ಪಲಿ ದಾನ ಮಾಡಿದರೆ ಅವರಿಗೆ ಅಲ್ಲಿ (ಎಲ್ಲೋ ಕಂಡವರಿಲ್ಲ, ಕೇಳಿದವರಿಲ್ಲ, ಹೋದವರು ಒಂದು SMS ಕಳಿಸಿಲ್ಲ!!!) ಚಪ್ಪಲಿ ಸಿಗುತ್ತದೆ ಎಂಬುದೆಲ್ಲಾ ಪುರಾಣಗಳಲ್ಲಿ ಬಂದಿರುವ ಕಾಗಕ್ಕ ಗುಬ್ಬಕ್ಕನ ಕಥೆಗಳು. ಇಂತಹ ಪಿಂಡಪ್ರದಾನಗಳಾಗಲೀ, ತಿಥಿ-ಮತಿಗಳಾಗಲಿ ವೇದಗಳಲ್ಲಿ ಎಲ್ಲಿಯೂ ಹೇಳಲ್ಪಟ್ಟಿಲ್ಲ. ಇಂದು ಇವರು ವೈದಿಕವೆಂದು ಮಾಡುವ ಅಷ್ಟೂ 100% ಅವೈದಿಕ!! ಶ್ರಾದ್ಧ, ತರ್ಪಣ, ಪಿತೃಯಜ್ಞ ಎಂದೆಲ್ಲಾ ವೇದಗಳು ಹೇಳಿರುವುದು ಬದುಕಿರುವ ತಂದೆ-ತಾಯಿಗಳು, ಹಿರಿಯರ ವಿಚಾರದಲ್ಲಿ. ಶ್ರದ್ಧೆಯಿಂದ ಮಾಡಿದ ಸೇವೆಯೇ ಶ್ರಾದ್ಧ, ಬದುಕಿರುವವರಿಗೆ. ತೃಪ್ತಿಯಾಗುವಂತೆ ಮಾಡಿದ್ದೇ ತರ್ಪಣ, ಬದುಕಿರುವವರಿಗೆ. ಪಿತೃಗಳ ಸೇವೆಯನ್ನು ಅತ್ಯುತ್ತಮವಾಗಿ ಮಾಡುವುದೇ ಪಿತೃಯಜ್ಞ, ಬದುಕಿರುವವರಿಗೆ!!
  -ಸುಧಾಕರಶರ್ಮಾ  
  ನನ್ನ ಮಾತು:   ಶ್ರಾದ್ಧವನ್ನು ಆಡುಭಾಷೆಯಲ್ಲಿ ತಿಥಿ/ವೈದಿಕ...ಹೀಗೆಲ್ಲಾ ಕರೆಯುತ್ತಾರೆ. ನನ್ನ ಈ ವಯಸ್ಸಿಗೆ ಶ್ರಾದ್ಧದ ವಿಚಾರದಲ್ಲಿ ಆಗಿರುವ ಅನುಭವದ ಆಧಾರದಲ್ಲಿ ಎರಡುಮಾತು ಬರೆಯ ಬೇಕೆನಿಸಿದೆ. ಒಂದು ಘಟನೆಯಂತೂ ನಮ್ಮ ಸೋದರತ್ತೆಯವರು ಮೃತರಾದಾಗ ನಾನು ಪಟ್ಟಪಾಡು.ನಮ್ಮ ಗೌರತ್ತೆ ಅವರ ಹತ್ತನೆಯ ವಯಸ್ಸಿನಲ್ಲಿ ಮದುವೆಯಾಗಿ ಹನ್ನೊಂದನೆಯ ವಯಸ್ಸಿನಲ್ಲಿ ವಿಧವೆಯಾಗಿ!! ನಂತರ ನಮ್ಮ ಮನೆಯಲ್ಲಿಯೇ ಉಳಿದು ತಾಯಿಗಿಂತ ಹೆಚ್ಚಾಗಿ ಪ್ರೀತಿಸಿ  ನಮ್ಮನ್ನೆಲ್ಲಾ ಸಾಕಿ ಬೆಳೆಸಿದ ಮಹಾತಾಯಿ. ಅವರು ನಮ್ಮ ಮನೆಯಲ್ಲಿ ಕೊನೆಯುಸಿರೆಳೆದಾಗ ಅವರ ಅಂತ್ಯಕಾರ್ಯ ಯಾರು ಮಾಡಬೇಕೆಂಬ ಜಿಜ್ಞಾಸೆ. ಹಣ ಖರ್ಚುಮಾಡಲು ನಾನು ಸಿದ್ಧನಿದ್ದರೂ ತಂದೆ ತಾಯಿಯುಳ್ಳ ನಾನು ಮಾಡಬಾರದೆಂಬ ಸಲಹೆ ಎಲ್ಲರಿಂದ .ನಮ್ಮತಂದೆಗಾದರೋ ಶ್ರಾದ್ಧಕರ್ಮಗಳನ್ನು ಮಾಡುವಷ್ಟು ಶಾರೀರಿಕ ತ್ರಾಣವಿರಲಿಲ್ಲ. ಆಗ ಕಂಡುಕೊಂದ ದಾರಿ....ಬಾಡಿಗೆ  ಕರ್ತೃ ತರುವುದು.!! ಹೇಗೋ ಅದೂ ಆಯ್ತು. ಸತ್ತ ಐದನೆಯ ದಿನಕ್ಕೆ ಕರ್ಮಗಳು ಆರಂಭವಾದರೆ ಎಂಟನೆಯ ದಿನಕ್ಕೆ ಕರ್ತೃ ನಾಪತ್ತೆ!! ನಮ್ಮದು ಹಳ್ಳಿ ಬೇರೆ. ನಮ್ಮ ಹಳ್ಳಿ ಹರಿಹರಪುರದಿಂದ ಹೊಳೇನರಸೀಪುರಕ್ಕೆ ಆ ಬಾಡಿಗೆ ಕರ್ತೃವನ್ನು ಹುಡುಕಿಕೊಂಡು ಹೋದರೆ ಅವನನ್ನು ಮತ್ತೊಬ್ಬ ಪುರೋಹಿತರು ಸೆರೆ ಮಾಡಿಕೊಂಡಿದ್ದರು. ಆ ಪುರೋಹಿತರನ್ನು ವಿಚಾರಿಸದರೆ  ಅವರಿಂದ ಬಂದ ಉತ್ತರ " ನೀನು ಯಾರೋ ಪುರೋಹಿತನ್ನು ಗೊತ್ತು ಮಾಡಿಕೊಂಡಿದ್ದೀಯಲ್ಲಾ! ಅವನನ್ನೇ ಕೇಳು, ಅವನೇ ಯಾರನ್ನಾದರೂ ಹುಡುಕಲಿ!" ಅಂದಿನ ನನ್ನ ಮನ:ಸ್ಥಿತಿ ಹೇಗಿತ್ತೆಂದರೆ " ಇವತ್ತು ಈ ಕರ್ತೃ ಬಾರದಿದ್ದರೆ ಏನೋ ವಿಪತ್ತು ಸಂಭವಿಸಿ ಬಿಬಹುದು! ದೊಡ್ದ ಅನಾಹುತವಾಗಿಬಿಡಬಹುದು!" ಎಂದೆಲ್ಲಾ ಅಜ್ಞಾನದಿಂದ ಕೂಡಿದ ಭೀತಿ!! ನಾನು ಆಪುರೋಹಿತರನ್ನು ರಸ್ತೆಯಲ್ಲಿ ಭೇಟಿಯಾಗಿದ್ದೆ.ಭಯದಿಂದ ಅಲ್ಲೇ ಅವರ ಕಾಲಿಗೆ ಬಿದ್ದೆ. ಉಹೂಂ, ಅವರ ಹೃದಯ ಕರಗಲೇ ಇಲ್ಲ.[ಹೃದಯ ಇದ್ದರೆ ತಾನೇ?!] ಕೊನೆಗೆ ನಮ್ಮ ಬಂಧುವೂ ಅಧ್ಯಾತ್ಮ ಪ್ರಕಾಶ ಕಾರ್ಯಾಲಯದ ವೇದಪಂಡಿತರಾದ ಶ್ರೀ ಲಕ್ಷ್ಮೀನರಸಿಂಹ ಮೂರ್ತಿಗಳ ಹತ್ತಿರ ಹೋದೆ. ಅವರು ಏನೋ ಏರ್ಪಾಡು ಮಾಡಿದರು. ಮುಂದೆ ಎಲ್ಲಾ ಕಾರ್ಯಕ್ರಮ ನಡೆಯಿತು ಎನ್ನಿ.  ಅಂದು ನನ್ನ ವಯಸ್ಸು 26-27 ಇದ್ದಿರಬಹುದು. ಅಮ್ಮನ ಧಾರ್ಮಿಕ ಆಚರಣೆಗಳಿಂದ ಪ್ರಭಾವಿತನಾಗಿದ್ದವನು. ಅಂದಿನ ನನ್ನ ಮನ:ಸ್ಥಿತಿ! ಪರಿಸ್ಥಿತಿ! ಹೇಗಿತ್ತೆಂಬುದನ್ನು ಈಗ ಊಹಿಸಿಕೊಂಡರೂ ಆ ಹೃದಯಹೀನ,ನಿರ್ದಯೀ ಪುರೋಹಿತನ ಮುಖ ನನ್ನ ಕಣ್ಮುಂದೆ ಕಟ್ಟಿದಂತಾಗುತ್ತದೆ. ಈಗಲೂ ಹೊಳೇನರಸೀಪುರದ ರಾಜಬೀದಿಯಲ್ಲಿ ಆ ವ್ಯಕ್ತಿಯ ಕಾಲು ಹಿಡಿದುಕೊಂಡು ಬಿದ್ದಿದ್ದೀನೇನೋ ಎಂದು ನನ್ನ ಕಣ್ಣಾಲಿ ನೀರು ತುಂಬಿಕೊಳ್ಳುತ್ತವೆ. ಇಂತಹ ಕೆಟ್ಟ ಅನುಭವ ಆದಮೇಲೂ ಸುಮಾರು ಮೂವತ್ತು ವರ್ಷ ಇಂತಹಾ ಕೆಟ್ಟ ವ್ಯವಸ್ಥೆಯನ್ನು ಸಹಿಸಿಕೊಂಡುಬಿಟ್ಟೆನಲ್ಲಾ!ಎಂದು ದು:ಖಿತನಾಗುತ್ತೇನೆ. ಆದರೆ ಶ್ರಾದ್ಧಕರ್ಮಗಳನ್ನು ಮಾಡಬೇಡವೇ? ಎಂದರೆ  ಬದುಕಿರುವಾಗ ಅಪ್ಪ-ಅಮ್ಮನನ್ನು ದೇವರಂತೆ ನೋಡಿಕೊಂಡಿರುವ ನನಗೆ ವರ್ಷಕ್ಕೊಮ್ಮೆ ನನ್ನ ಬಂಧುಬಳಗದೊಡನೆ ಅವರ ಸ್ಮರಣೆ ಮಾಡುವಾಸೆ. ಈಗ ಯಾವ ಪದ್ದತಿ ನಡೆದುಬಂದಿದೆಯೋ ಅದೇ ಪದ್ದತಿಯಲ್ಲಿ ಇದುವರೆವಿಗೂ ಶ್ರಾದ್ಧವನ್ನು  ಮಾಡುತ್ತಿದ್ದೇವೆ.ಆದರೆ ಕಳೆದ ವರ್ಷದಿಂದ ನನ್ನ ಮನದಲ್ಲಿ ಚಿಂತನೆಯೊಂದು ಮೂಡಿದೆ.ನಮ್ಮ ಅಪ್ಪ-ಅಮ್ಮನು ಸತ್ತದಿನ ನಮ್ಮ ಅಣ್ಣತಮ್ಮ -ಅಕ್ಕ-ತಂಗಿ ಎಲ್ಲರೂ ನಮ್ಮ ಮನೆಗೆ ಬರುತ್ತಾರೆ. ಹೇಗೂ ಇಬ್ಬರು ಬ್ರಾಹ್ಮಣಾರ್ಥಕ್ಕೆಂದು ಕರೆಯುವ ಸಂಪ್ರದಾಯ ನಡೆದು ಬಂದಿದೆ. ಇರಲಿ. ಆದರೆ ಯಾವ ವಿಧಿಗಳಿಲ್ಲದೆ ಅಪ್ಪ-ಅಮ್ಮನ ಸ್ಮರಣೆಯಲ್ಲಿ ಒಟ್ಟಿಗೆ ಊಟಮಾಡಿ ಅಂದು ಕೈಲಾದ ಒಂದು ಸತ್ಕಾರ್ಯವನ್ನು ಮಾಬೇಕೆಂಬುದು ನನ್ನ ಚಿಂತನೆ. ಅದು ಪೂರ್ಣವಾಗಿ ಸಫಲವಾಗಬೇಕೆಂದರೆ ನನ್ನ ಚಿಂತನೆ ನನ್ನ ಅಣ್ಣತಮ್ಮ ,ಅಕ್ಕ-ತಂಗಿಯರಿಗೆ ಅರ್ಥವಾಗಬೇಕು. ಅವರುಗಳಿಗೆ ಮನಸ್ಸಿಗೆ ಕಿರಿಕಿರಿ ಮಾಡಿ ಯಾವ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಆದರೆ ಮುಂದೊಂದು ದಿನ ನನ್ನ ಚಿಂತನೆ ಕಾರ್ಯಗತಗೊಳ್ಳುವುದರಲ್ಲಿ ನನಗಂತೂ ವಿಶ್ವಾಸವಿದೆ. ನನ್ನ ವಿಶ್ವಾಸಕ್ಕೆ ಕಾರಣ ಇಷ್ಟೆ." ಕಳೆದ ಯುಗಾದಿ ಹಬ್ಬದ ದಿನದಿಂದ ನಿತ್ಯವೂ ತಪ್ಪದೆ ಅಗ್ನಿಕಾರ್ಯ ನಡೆಯುತ್ತಿದೆ. ಅದೇ ನನ್ನ ಸರ್ವತ್ರ. ಯಾರಿಂದಲೂ ಅಡ್ದಿಯಿಲ್ಲ. ಎಲ್ಲರೂ ಸಂತೋಷವಾಗಿಯೇ ಇದ್ದಾರೆ. ಅದಕ್ಕೆ ಕಾರಣ ನನ್ನ ಆರೋಗ್ಯದಲ್ಲಿ ಆಗುತ್ತಿರುವ ಸುಧಾರಣೆ.                                                       -ಹರಿಹರಪುರ ಶ್ರೀಧರ್

5 comments:

 1. ಸುಬ್ರಹ್ಮಣ್ಯರ ಪ್ರಶ್ನೆಗೆ ಶರ್ಮಾಜಿಯವರ ಉತ್ತರ ಮನಸ್ಸಿಗೆ ಹಿತ ತಂದಿದೆ; ಶ್ರೀಧರರ ಅನುಭವ ಮನಮಿಡಿದಿದೆ. ಬದಲಾವಣೆ ನಾವಂದುಕೊಂಡಷ್ಟು ಸುಲಭವಲ್ಲ, ಆದರೂ ವೈಯಕ್ತಿಕವಾಗಿ ನಾವಾದರೂ ಬದಲಾವಣೆ ಮಾಡಿಕೊಳ್ಳಲು ನಿರಂತರ ಪ್ರಯತ್ನ ನಡೆಸುತ್ತಿರಬೇಕು!

  ReplyDelete
 2. ೨೨ ದಿನಗಳ ಹಿಂದೆ ೯೨ ವರ್ಷದ ನನ್ನಜ್ಜಿ (ಹಾಸನದ ಕಾಲೆಜೊಂದರಲ್ಲಿ ಪ್ರಿನ್ಸಿಪಾಲ್ ಆಗಿ ಈಗ ನಿವೃತ್ತರಾಗಿರುವ ವಿ.ನರಹರಿಯವರ ಸ್ವಂತ ಹಿರಿಯಕ್ಕ) ವಯೋಸಹಜ ಸಾವಿನ ನಂತರದ ಕರ್ಮಾಂಗ ಕಣ್ಣಾರೆ ನೋಡಿ 'ವೇದಗಳಲ್ಲಿ ಇರಲಿಕ್ಕಿಲ್ಲ' ಎಂಬ ಅಭಿಪ್ರಾಯದಿಂದ ಕೂಡಿದ ಆ ಪ್ರಶ್ನೆ ಕೇಳಿದೆ. ಅದಕ್ಕೆ ಸುದಾಕರ ಶರ್ಮರ ಉತ್ತರ ನೋಡಿಯೇ ನನಗೆ ರೋಮಾಂಚನ'ಸಂತೋಷ ಹಾಗೂ ಆಶ್ಚರ್ಯವಾಯಿತು.
  ಮೊನ್ನೆ ನಮ್ಮಜ್ಜಿ ರಾತ್ರಿ ೧೦.೧೫ಕ್ಕೆ ತೀರಿಕೊಂಡಾಗಲೂ ಮಾರನೆದಿನ ಸಂಜೆ ೩.೩೦ ರ ವರೆಗೆ ಸುಡಲಿಕ್ಕೆ ಆಗಲಿಲ್ಲ. ಶೃಂಗೇರಿಯಲ್ಲಿ ನಡೆಯುವ ಯಾವುದೋ ಹೋಮಕ್ಕೆ ಎಲ್ಲಾ ಬುಕ್ಕಾಗಿದ್ದರು!!!ಕೊನೆಯಲ್ಲಿ ಯಾರೋ ಒಬ್ಬರು ಸ್ವಲ್ಪ ವಯಸ್ಸಾದವರು ಬಂದು ದಹನ ಮಾಡಿಸಿದರು.

  ReplyDelete
 3. ಸಾಮಾನ್ಯವಾಗಿ ಶ್ರಾದ್ಧಕರ್ಮಗಳನ್ನು ಮಾಡದಿದ್ದರೆ ಏನೋ ಆಪತ್ತು ಸಂಭವಿಸಿಬಿಡುತ್ತದೆಂಬ ಭಯ ಸೃಷ್ಟಿಯಾಗಿದೆಯಲ್ಲಾ ಅದನ್ನು ದೂರಮಾಡುವ ಕೆಲಸವಾಗಲೇ ಬೇಕು. ಬದುಕಿದ್ದಾಗ ಬವಣೆ ಪಡುವುದಕ್ಕಿಂತ ಸತ್ತಾಗ ಪಡುವ ಬವಣೆ ಇದೆಯಲ್ಲಾ ಅದರ ಬಗ್ಗೆ ಕಾದಂಬರಿಯನ್ನು ಬರೆಯಬಹುದು. ಒಬ್ಬೂಬ್ಬರದ್ದು ಒಂದೊಂದುರೀತಿಯ ಕಹಿ ಅನುಭವ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಸತ್ತಾಗ ಹತ್ತಿರದಲ್ಲಿರುವ ಬಂಧುಗಳಲ್ಲದ ನೆರೆಹೊರೆಯ ಆಪ್ತರು ಮೊದಲು ಸಾವು ಸಂಭವಿಸಿದ ಮನೆಗೆ ಧಾವಿಸುತ್ತಾರೆ. ಸತ್ತವ್ಯಕ್ತಿಯ ಮಕ್ಕಳು ಎಲ್ಲೋ ದೂರದ ಊರಲ್ಲಿರುತ್ತಾರೆ. ಸತ್ತ ಅವರ ಅಪ್ಪನನ್ನೋ ಅಮ್ಮನನ್ನೋ ನೋಡಿಯೇ ವರ್ಷಗಳು ಸಂಭವಿಸಿರುತ್ತದೆ. ಅಷ್ಟರ ಮಟ್ಟಿಗೆ ಮಾತೃ/ಪಿತೃ ವಾತ್ಸಲ್ಯವಿರುತ್ತದೆ!! ಆದರೆ ಆ ಮಕ್ಕಳು ಬರುವ ವರೆಗೂ ಹೆಣ ಎತ್ತುವಂತಿಲ್ಲ. ಪಾಪ! ಸಂಬಂಧಪಡದ ಹತ್ತಿರದ ಆಪ್ತರು ಹೊಟ್ಟೆಗೆ ಹಿಟ್ಟಿಲ್ಲದೆ ಕಾದಿದ್ದೇ ಕಾದಿದ್ದು! ಈಗ ಹೊರಟರಂತೆ ಇನ್ನೇನು ಅರ್ಧಗಂಟೆಯಲ್ಲಿ ಬಂದುಬಿಡ್ತಾರಂತೆ! ಹೀಗೆ ಹೇಳುತ್ತಾ ಸೂರ್ಯಾಸ್ತ ವಾಗುವ ಸಮಯ ಬಂದರೂ ಹೆಣ ಎತ್ತಲು ಆಗಿರುವುದಿಲ್ಲ.ಆ ವೇಳೆಗೆ ನೆರೆಹೊರೆಯ ಜನರು ಹಸಿವಿನಿಂದ ಕಂಗಾಲಾಗಿರುತ್ತಾರೆ. ನಂತರ ಮೃತ ದೇಹವನ್ನು ಎತ್ತಿ ಅಂತ್ಯ ಸಂಸ್ಕಾರ ಮಾಡುವಾಗ ಯಾರಿಗೂ ತಾಳ್ಮೆ ಇರುವುದಿಲ್ಲ. ಮೃತ ದೇಹಕ್ಕೆ ಬೆಂಕಿತಗಲಿಸಿ ಸ್ಮಶಾನದಿಂದ ಹೊರಟು ಬಿಡುತ್ತಾರೆ! ಇವೆಲ್ಲಾ ನಾವು ನಮ್ಮ ಸುತ್ತಮುತ್ತಲೂ ಸಮಾನ್ಯವಾಗಿ ಬ್ರಾಹ್ಮಣ ಸಂಪ್ರದಾಯದಲ್ಲಿ ಕಾಣುವ ಹಲವು ಉಧಾಹರಣೆಗಳು. ಈ ಬಗ್ಗೆ ಕೂಡ ಚಿಂತನ-ಮಂಥನ ನಡೆಸಬೇಕಾದ ಕಾಲ ಬಂದಿದೆ. ಅಪ್ಪ-ಅಮ್ಮನನ್ನು ಬದುಕಿದ್ದಾಗ ನೋಡದ ಮಕ್ಕಳಿಗಾಗಿ ಅಪ್ಪ/ಅಮ್ಮ ಸತ್ತಾಗ ಮಹತ್ವಕೊಟ್ಟು ಅವರ ಬರುವಿಕೆಗಾಗಿ ನೆರೆಹೊರೆಯ ಜನರು ಕಾಯುವ ಈ ಪದ್ದತಿ ತಪ್ಪಬೇಡವೇ? ಸತ್ತಮೇಲೆ ಪಂಚಭೂತಗಳಲ್ಲಿ ಮೃತದೇಹದ ವಿಸರ್ಜನೆಯಾಗಬೇಕು. ಅಷ್ಟೆ. ಅದಕ್ಕಾಗಿ ಕರ್ತೃಗಳಿಗಾಗಿ/ ಪುರೋಹಿತರಿಗಾಗಿ ಕಾಯುವುದರಲ್ಲಿ ಯಾವ ಪುರುಷಾರ್ಥವಿದೆ? ಮೃತದೇಹವು ಸುಟ್ಟು ಭಸ್ಮವಾಗಬೇಕಷ್ಟೆ. ಅಲ್ಲಿಗೆ ಎಲ್ಲಾ ಮುಗಿಯಿತು. ಈ ಬಗ್ಗೆ ಜಾಗೃತಿ ಮೂಡಬೇಕು.

  ReplyDelete
 4. ಸರ್, ನಿಮ್ಮ ಅಭಿಪ್ರಾಯಗಳಿಗೆ ನನ್ನ ಸಹಮತವಿದೆ. ನನ್ನದೊಂದು ಇತ್ತೀಚಿನ ಅನುಭವ ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. ನಾನು ಬೆಂಗಳೂರಿನಲ್ಲಿ ಗಮನಿಸಿದಂತೆ (ಕ್ಷಮಿಸಿ ಇದು ನನ್ನ ಚಾಳಿ!!!) ಕಾರ್ಯಕ್ರಮ ಯಾವುದೇ ಇರಲಿ (ಶುಭ / ದುಃಖ), ಅಲ್ಲಿ ಭಾಗವಹಿಸುವವರ ಅಸ್ಥೆ ಮುಖ್ಯವಾಗಿ ಅವರ ಆಭರಣ / ದುಬಾರಿ ಬಟ್ಟೆಗಳ ಪ್ರದರ್ಶನಕ್ಕೆ ಮೊದಲ ಆದ್ಯತೆ!!! ನಂತರದ ಆದ್ಯತೆ ಸಾಕಷ್ಟು ಹೆಚ್ಚು ಜನರನ್ನು ಜಮಾಯಿಸಿ ಭರ್ಜರಿ ಊಟ ಹಾಕಿಸಿ ಎಲ್ಲರಿಂದ ಭೇಷ್ ಎನಿಸಿಕೊಳ್ಳಲು ಶತಪ್ರಯತ್ನ ಮಾಡುತ್ತಾರೆ!!! ಈಗಂತೂ ಒಂದು ಊಟಕ್ಕೆ ಕನಿಷ್ಟ 25 ಐಟಂಗಳಿರುತ್ತವೆ!!! ಅರ್ಧದಷ್ಟು ವ್ಯರ್ಥವಾದರೂ ಯಾರಿಗೂ ಬೇಸರವಾಗಿದ್ದು ಕಾಣೆ!!! ಹಸಿವಿನಿಂದ ಸಾಯುವವರ ಸಂಖ್ಯೆ ನಮ್ಮ ದೇಶದಲ್ಲೇ ಸಾಕಷ್ಟಿದೆಯಲ್ಲವೆ??? ಇನ್ನು ಶಾಸ್ತ್ರ ಸಂಪ್ರದಾಯಗಳ ಉಸಾಬರಿ ಏನಿದ್ದರೂ ನಿಯಮಿತರಾದ ಪುರೋಹಿತರ ಜವಾಬ್ದಾರಿಯಷ್ಟೇ!!! ಒಂದು ತಮಾಷೆಯ ಸಂಗತಿ ಹೇಳುತ್ತೇನೆ, ಕಳೆದ ತಿಂಗಳು ನನ್ನ ಸಂಬಂದಿಯೊಬ್ಬರ ಮದುವೆಯಲ್ಲಿ ಕಾಶೀಯಾತ್ರೆಯಿಂದ ಹುಡುಗನನ್ನು ಕರೆತರಲು ಹುಡುಗಿಯ ಕಡೆಯ ಮುತ್ತೈದೆಯರೇ ಬರುತ್ತಿಲ್ಲ!!! ಆಶ್ಚರ್ಯದಿಂದ ನೋಡಲು ಹೋದಾಗ ಎಲ್ಲ ಮಹಿಳಾಮಣಿಗಳು ಮೇಕಪ್ನಲ್ಲಿ ಬ್ಯುಸಿ!!! ತಕ್ಷಣ ಹೊರಡಲು ಯಾರು ಇನ್ನೂ ರೆಡಿಯಿಲ್ಲ!!!
  ಬಿ.ವಿ.ಸತ್ಯಪ್ರಸಾದ್

  ReplyDelete