ವೇದಸುಧೆಗೆ ನಿಮಗೆ ಸ್ವಾಗತ.ವೇದಭಾರತಿಯ ಮತ್ತು ಪತಂಜಲಿ ಪರಿವಾರದ ಕಾರ್ಯಕ್ರಮಗಳ ಚಿತ್ರಗಳನ್ನು ಇಲ್ಲಿ ವೀಕ್ಷಿಸಿ.ಯೋಗಮಾಡಿ,ನಿರೋಗಿಯಾಗಿ. ವೇದದ ಅರಿವು ಪಡೆಯಿರಿ. ನಿರ್ಭೀತರಾಗಿ.

Tuesday, May 17, 2011

ವೇದೋಕ್ತ ಜೀವನ ಪಥ: ಮಾನವ ಧರ್ಮ -3

ಅದೇ ಅಥರ್ವವೇದ ಮತ್ತೆ ಹೇಳುತ್ತಲಿದೆ:


ಉದ್ಯಾನಂ ತೇ ಪುರುಷ ನಾವಯಾನಂ ಜೀವಾತುಂ ತೇ ದಕ್ಷತಾತಿಂ ಕೃಣೋಮಿ |
ಆ ಹಿ ರೋಹೇಮಮಮೃತಂ ಸುಖಂ ರಥಮಥ ಜಿರ್ವಿರ್ವಿದಥಮಾ ವದಾಸಿ ||
(ಅಥರ್ವ. ೮.೧.೬.)


     [ಪುರುಷ] ಓ ದೇಹಧಾರಿ ಜೀವ! [ತೇ ಯಾನಂ ಉತ್] ನಿನ್ನ ಮಾರ್ಗ ಮೇಲಕ್ಕಿದೆ. [ನ ಆವಯಾನಮ್] ಕೆಳಕ್ಕೆ ಹೋಗುವುದಲ್ಲ. [ತೇ] ನಿನಗಾಗಿ, [ಜೀವಾತುಮ್] ಜೀವನಕಲೆಯನ್ನೂ, [ದಕ್ಷತಾತಿಮ್] ಜೀವನಸಾಮರ್ಥ್ಯವನ್ನೂ, [ಕೃಣೋಮಿ] ಉಂಟುಮಾಡುತ್ತೇನೆ. [ಇಮಮ್ ಅಮೃತಂ ಸುಖಂ ರಥಮ್] ಈ ಜೀವಂತವಾದ ಸುಖಕರವಾದ ಜೀವನರಥವನ್ನು, [ಹಿ ಆರೋಹ] ನಿಜವಾಗಿ ಏರು. [ಅಥ] ಆಮೇಲೆ [ಜಿರ್ವಿ] ವಾರ್ಧ್ಯಕ್ಯ ಪಡೆದು [ವಿದಥಮ್] ಜ್ಞೇಯವಾದ ಸತ್ಯಜ್ಞಾನವನ್ನು, [ಆ ವದಾಸಿ] ಪ್ರಸರಿಸುತ್ತಾ ಓಡಾಡುವೆ.

     ಹೌದು, ಧರ್ಮದ ಮಾರ್ಗ ಧಾರಕಮಾರ್ಗ, ಎತ್ತಿ ಹಿಡಿಯುವ ಮಾರ್ಗ. ಪತನಕ್ಕಿಲ್ಲಿ ಅವಕಾಶವೇ ಇಲ್ಲ. ಇಹದಲ್ಲಿ ಸೊಗಸಾಗಿ ಬಾಳಿ, ಇತರರನ್ನೂ ಸೊಗಸಾಗಿ ಬಾಳಿಸಿ, ಪರದಲ್ಲಿ ಅವಿಚ್ಛಿನ್ನ ಆನಂದವನ್ನು ಪಡೆದುಕೊಳ್ಳುವ ಜೀವನಕಲೆಯ ಮತ್ತು ಜೀವನಸಾಮರ್ಥ್ಯದ ದಿವ್ಯಮಾರ್ಗ. ನಾವು ಹಿಂದೆ ಹೇಳಿರುವಂತೆ, ಧರ್ಮವಿರುವುದು ಮಾನವ ಮಾತ್ರರಿಗೆಲ್ಲಾ ಒಂದೇ. ಅದು ಮತಗಳಂತೆ ಸಾವಿರಾರು ಇಲ್ಲ. ಆದರೂ ವೇದಗಳಲ್ಲಿ ಧರ್ಮ ಎಂಬ ಶಬ್ದವನ್ನು ಏಕವಚನ, ಬಹುವಚನ ಎರಡರಲ್ಲಿಯೂ ಬಳಸಲಾಗಿದೆ. ಉದಾಹರಣೆಗೆ, 'ತಾನಿ ಧರ್ಮಾಣಿ ಪ್ರಥಮಾನ್ಯಾಸನ್' (ಯಜು.೩೧.೧೬.) - ಅವು ಪ್ರಥಮ ಧರ್ಮಗಳಾದವು, ಎಂಬಲ್ಲಿ ಬಹುವಚನಪ್ರಯೋಗವಿದೆ. 'ಧರ್ಮಣಾ ಮಿತ್ರಾವರುಣಾ ವಿಪಶ್ಚಿತಾ'(ಋಕ್. ೫.೬೩.೭.) - ಧರ್ಮದಿಂದ ಸ್ನೇಹಪರ ಹಾಗೂ ವರಣೀಯ ನರ-ನಾರಿಯರು ಜ್ಞಾನಿಗಳಾಗುತ್ತರೆ, ಎಂಬಲ್ಲಿ ಏಕವಚನ ಪ್ರಯೋಗವಿದೆ. ಬಹುವಚನ ಪ್ರಯೋಗ ಕಂಡು ಪಾಠಕರು ವೇದಗಳು ಅನೇಕ ಧರ್ಮಗಳನ್ನು ಉಪದೇಶಿಸುತ್ತವೆ ಎಂದು ಭ್ರಾಂತರಾಗುವ ಸಂಭವವಿದೆ. ಆದರೆ, ಅಂತಹ ಭ್ರಾಂತಿಗೆ ಅವಕಾಶವಿಲ್ಲ. ಏಕೆಂದರೆ, ನಾವು ಈಗ ಯಾವ ಭಾವನೆಯನ್ನು ಧರ್ಮ ಎಂಬ ಶಬ್ದವನ್ನು ಗ್ರಹಿಸುತ್ತೇವೋ, ಅದನ್ನು ಸೂಚಿಸಲು ವೇದಗಳು ಋತ ಎಂಬ ಶಬ್ದವನ್ನು ಬಳಸುತ್ತವೆ. ಧರ್ಮ ಎಂಬ ಶಬ್ದದ ಅರ್ಥ ಧಾರಕ ಎಂದು. ವಸ್ತುತಃ ಸದ್ಗುಣವೇ ಧಾರಕತತ್ವ. ಅಂತಹ ಸದ್ಗುಣ ಒಂದೇ ಅಲ್ಲ ಇರುವುದು. ಅನೆಕ ಸದ್ಗುಣಗಳಿವೆ. ಯಾವುದಾದರೂ ಸದ್ಗುಣವನ್ನು ಸೂಚಿಸುವಾಗ ವೇದ ಧರ್ಮ ಎಂಬ ಶಬ್ದವನ್ನೂ, ಅನೇಕ ಧರ್ಮಗಳನ್ನು ಸೂಚಿಸಬೇಕಾದಾಗ ಧರ್ಮಗಳು ಎಂಬ ಶಬ್ದವನ್ನೂ ಉಪಯೋಗಿಸುತ್ತವೆ. ಎಲ್ಲ ಧರ್ಮಗಳು ಎಂದರೆ ಆತ್ಮೋದ್ಧಾರಕವಾದ ಸದ್ಗುಣಗಳ ಮೊತ್ತವನ್ನು, ಒಟ್ಟನ್ನು ಸೂಚಿಸುವಾಗ, ವೇದ ಋತ ಎಂಬ ವ್ಯಾಪಕ ಶಬ್ದವನ್ನು ಬಳಸುತ್ತದೆ. ವೇದಗಳ ಶೈಲಿಯಲ್ಲಿ ಧರ್ಮ ಒಂದು ಸದ್ಗುಣವಾದರೆ, ಋತ ಸಮಸ್ತ ಸದ್ಗುಣಗಳ ರಾಶಿ. ಸಾರ್ವಭೌಮ ಈಶ್ವರೀಯ ವಿಧಾನವೇ, ಆತ್ಮನ ಉನ್ನಾಯಕವಾದ ಜೀವನಕ್ರಮವೇ ಋತ. ಆ ಈಶ್ವರೀಯ ವಿಧಾನ ವೇದಗಳಲ್ಲಿ ಪ್ರಕಟವಾಗಿರುವುದರಿಂದ, ವೇದಗಳನ್ನೂ ಕೂಡ ಋತ ಎಂದು ನಿರ್ದೇಶಿಸುವುದುಂಟು. ಸುಲಭವಾದ ಮಾತುಗಳಲ್ಲಿ ಹೇಳಬೇಕಾದರೆ, ಆತ್ಮೋದ್ಧಾರದ ಸಮಸ್ತ ಸದ್ಗುಣಗಳ ಸಂಘಾತವೇ ಋತ, ಈಗಿನ ಬಳಕೆಯ ಮಾತಿನಲ್ಲಿ ಅದೇ ಧರ್ಮ. ಆ ಸದ್ಗುಣಗಳು ಜೀವನಕ್ಕಿಳಿದು ಬಂದಾಗ, ಅವೆಲ್ಲಾ ಸೇರಿ ಒಂದು ಜೀವನಮಾರ್ಗಕ್ಕೆ ರೂಪ ಕೊಡುತ್ತವೆ.
******************************

2 comments:

  1. [ ನಿನ್ನ ಮಾರ್ಗ ಮೇಲಕ್ಕಿದೆ. ಕೆಳಕ್ಕೆ ಹೋಗುವುದಲ್ಲ. ನಿನಗಾಗಿ,ಜೀವನಕಲೆಯನ್ನೂ, ಜೀವನಸಾಮರ್ಥ್ಯವನ್ನೂ, ಉಂಟುಮಾಡುತ್ತೇನೆ]
    ವೇದದ ಈ ಮಾತುಗಳನ್ನು ಓದುವಾಗ ಒಂದು ಉತ್ತಮ ಬದುಕಿಗೆ ಬೇಕಾದ ಜೀವನ ಕಲೆಯನ್ನು ಅದು ಕಲಿಸುತ್ತದೆಂದು ಭಾವಿಸಬಹುದು. ಆದರೆ ಈ ವೇದ ರಾಶಿಯಲ್ಲಿ ಅವುಗಳನ್ನು ಹುಡುಕಿ ಹೆಕ್ಕಿ ತೆಗೆದು ನಮಗೆ ಸರಳರೂಪದಲ್ಲಿ ಉಣಿಸುವ ಕೆಲಸವಾಗಬೇಕು.ನಿಜವಾಗಿ ಒಂದೊಂದು ಮಂತ್ರಾರ್ಥವೂ ಅದ್ಭುತವಾಗಿದೆ ಎನಿಸುತ್ತೆ.ಶ್ರೀ ಶರ್ಮರಂತವರು[ಶರ್ಮರೇ ಆಗಬೇಕೆಂದಿಲ್ಲ] ಜನರಿಗೆ ಸರಳವಾಗಿ ವ್ಯಾಖ್ಯಾನಿಸುವ ಕೆಲಸವನ್ನು ಮಾಡಬೇಕು.ವೇದಸುಧೆ ಅದಕ್ಕೆ ವೇದಿಕೆಯಾದರೆ ಸಾರ್ಥಕ.

    ReplyDelete