Pages

Tuesday, August 9, 2011

ವಿವೇಕ ಚೂಡಾಮಣಿ -ಭಾಗ ೭


ಗ್ರಂಥದ ಮುಂದುವರಿದ ಭಾಗ

चित्तस्य शुद्धये कर्म न तु वस्तूपलब्धये ।
वस्तुसिद्धिर्विचरेण न किज्ञ्चित् कर्मकोटिभिः ॥११॥

ಚಿತ್ತಸ್ಯ ಶುದ್ಧಯೇ ಕರ್ಮ ನ ತು ವಸ್ತೂಪಲಬ್ಧಯೇ |
(=ಚಿತ್ತಶುದ್ಧಿಗಾಗಿ ಕರ್ಮ; ಆತ್ಮವಸ್ತು(ಜ್ಞಾನ)ವನ್ನು ಪಡೆಯಲು ಅಲ್ಲ)


ವಸ್ತುಸಿದ್ಧಿರ್ವಿಚಾರೇಣ ನ ಕಿಂಚಿತ್ ಕರ್ಮಕೋಟಿಭಿಃ ||೧೧||
(=ವೈಚಾರಿಕತೆಯಿಂದ ಜ್ಞಾನ; ಕೋಟಿ ಕರ್ಮಾಚರಣೆಯಿಂದಲ್ಲ)

ಕರ್ಮಗಳನ್ನು ಆಚರಿಸುವುದರಿಂದ ಮುಕ್ತಿಯಂತೂ ದೊರೆಯುವುದಿಲ್ಲ ಎಂದಾದಲ್ಲಿ ಅವುಗಳನ್ನು ಆಚರಿಸುವುದಾದರೂ ಏಕೆ ? ಎಂಬ ಪ್ರಶ್ನೆಗೆ ಮೇಲಿನ ಶ್ಲೋಕದ ಮೂಲಕ ಶಂಕರರು ಉತ್ತರವನ್ನು ತಿಳಿಸುತ್ತಾರೆ.
’ಚಿತ್ತಶುದ್ಧಿಗಾಗಿ ಕರ್ಮ’ ಎಂದು ಹೇಳುತ್ತಾರೆ. ಬುದ್ಧಿಗೆ ಆವರಿಸುವ ಭ್ರಮೆ ಅಥವಾ ಅಜ್ಞಾನವನ್ನು ತೊಡೆದುಹಾಕಲು ಕರ್ಮಗಳನ್ನು ಆಚರಿಸಬೇಕು ಎನ್ನುತ್ತಾರೆ. ಮೊದಲು ಅಜ್ಞಾನವನ್ನು ಕಳೆದುಕೊಂಡರೆ ಜ್ಞಾನದ ಮಾರ್ಗ ಯಾವುದು ಎಂದು ತಂತಾನೇ ಕಾಣಿಸುತ್ತದೆ. ಜ್ಞಾನಸಿದ್ಧಿಗೆ ಬೇಕಾಗುವ ಧೃಡತೆ, ಏಕಾಗ್ರತೆ, ಸಹಿಷ್ಣುತೆ ಇತ್ಯಾದಿಗಳು ಮಾಡುವ ಕರ್ಮದಿಂದ ನೆಲೆಗೊಳ್ಳುತ್ತವೆ ಮತ್ತು ಸಾಧನೆಯ ಹಾದಿಗೆ ದಾರಿದೀಪವಾಗುತ್ತದೆ. ಸಮಚಿತ್ತಕ್ಕಾಗಿ ಕರ್ಮವೇ ಹೊರತು ಆತ್ಮವಸ್ತುವನ್ನು ಅಥವಾ ಆತ್ಮಜ್ಞಾನವನ್ನು ಪಡೆಯಲು ಅಲ್ಲ ಎಂದು ಹೇಳುತ್ತಾರೆ.
ಮೇರುಪರ್ವತವನ್ನು ಅಥವಾ ಎವರೆಸ್ಟ್ ಅನ್ನು ಏರಬೇಕೆನ್ನುವವರು ಅದಕ್ಕೆ ಬೇಕಾಗುವ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಳ್ಳಬೇಕಾಗುತ್ತದೆ. ಕೆಲವು ಏರುವುದಕ್ಕೆ ಮುಂಚೆ ಬೇಕಾದ ತಯಾರಿಗಳು ಮತ್ತು ಕೆಲವು ಏರುವಾಗ ಬೇಕಾಗುವ ತಯಾರಿಗಳು ಇರುತ್ತವೆ. ಶಿಖರವನ್ನು ಏರಬೇಕೆಂದು ಮನಸು ಮಾಡಿದವನು ಮೊದಲು ಧೃಡಾಕಾಯನಾಗಿರಬೇಕಾಗುತ್ತದೆ. ಗರಡಿಮನೆಯ ವ್ಯಾಯಾಮಗಳನ್ನು ಮಾಡಿಕೊಂಡು ಗಟ್ಟಿಮುಟ್ಟಾಗಿರಬೇಕಾಗುತ್ತದೆ. ಇದಕ್ಕೆ ಕೆಲವು ತಿಂಗಳುಗಳು ಬೇಕಾಗುತ್ತದೆ. ಉಸಿರನ್ನು ನಿಯಂತ್ರಿಸಿಕೊಳ್ಳುವ ಸಾಮರ್ಥ್ಯವನ್ನು ಕೆಲವು ವಾರಗಳ ಅಭ್ಯಾಸದಿಂದ ಪಡೆದುಕೊಳ್ಳಬೇಕಾಗುತ್ತದೆ. ಆರೋಗ್ಯದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಇಷ್ಟೆಲ್ಲಾ ಕರ್ಮಗಳನ್ನು ಏರುವವನು ಮುಂಚೆಯೇ ಮುಗಿಸಿ ಸಿದ್ಧನಾಗಿರಬೇಕಾಗುತ್ತದೆ. ನಂತರ ಪರ್ವತವನ್ನು ಏರುವಾಗ ಈ ಹಿಂದಿನ ಯಾವ ಸಾಧನಗಳು ಬೇಕಾಗುವುದಿಲ್ಲ, ಇಲ್ಲಿ ಬೇರೆಯದೇ ಸಾಧನಗಳು ಬೇಕಾಗುತ್ತವೆ. ಬೆಚ್ಚಗಿನ ಉಣ್ಣೆಯ ಬಟ್ಟೆ, ಆಮ್ಲಜನಕದ ಸಿಲಿಂಡರ್, ಹಿಮನಿರೋಧಕ ಬೂಟುಗಳು, ಕೈ ಗವಸುಗಳು ಇತ್ಯಾದಿ. ಇವೆಲ್ಲಾ ಗರಡಿಮನೆಯ ತಯಾರಿಯಲ್ಲಿ ಬೇಕಾಗುವುದಿಲ್ಲ. ಹೇಗೂ ಹಿಮಾಲಯ ಏರಲೇಬೇಕು ಅದಕ್ಕಾಗಿ ಬೂಟು, ಗವಸು, ಉಣ್ಣೆಯ ಬಟ್ಟೆ ಇವುಗಳನ್ನೆಲ್ಲಾ ಹಾಕಿಕೊಂಡೇ ವ್ಯಾಯಾಮ ಮಾಡುತ್ತೇನೆಂದು ಹೇಳುವವನನ್ನು ಮೂಳನೆನ್ನಬೇಕಾಗುತ್ತದೆ. ಗರಡಿಮನೆಯ ವ್ಯಾಯಾಮವು ಕರ್ಮಕ್ಕೆ ಸಾಧನವಾದರೆ ಏರುವಾಗ ಬೇಕಾಗುವ ವಸ್ತುಗಳು ಜ್ಞಾನಕ್ಕೆ ಸಾಧನಗಳು. ಇವು ಒಂದನ್ನೊಂದು ಸಂಪರ್ಕಿಸುವುದಿಲ್ಲ. ಕೇವಲ ಗಟ್ಟಿಮುಟ್ಟಾದ ದೇಹವನ್ನು ಹೊಂದಿದ ಮಾತ್ರಕ್ಕೆ ಹಿಮಾಲಯವನ್ನು ಏರಿದಂತಾಗುತ್ತದೆಯೇ? ಇಲ್ಲ ; ಅದು ಪರೋಕ್ಷವಾಗಿ ಸಹಾಯ ಮಾಡುತ್ತದೆ ಆದರೆ ಜ್ಞಾನಪ್ರಾಪ್ತಿಯ ಸಾಧನಗಳ ಮುಂದೆ ಅದು ಗೌಣವಾಗುತ್ತದೆ. ಆಮ್ಲಜನಕದ ಸಿಲಿಂಡರ್ ಇಲ್ಲದೆ ಯಾರೂ ಎವರೆಸ್ಟನ್ನು ಏರಲಾರರು !. ಕೆಲವರು ಗರಡಿಮನೆಯಲ್ಲಿ ಪಳಗದೆಯೂ ಸಹ ಆಮ್ಲಜನಕದ ಸಿಲಿಂಡರ್, ಉಣ್ಣೆಯ ಬಟ್ಟೆ, ಇತ್ಯಾದಿ ಸಾಧನಗಳನ್ನಿಟ್ಟುಕೊಂಡು ಮನೋಬಲದಿಂದ (ಮನಸಿನಂತೆ ಮಹಾದೇವ !) ಎವರೆಸ್ಟ್ ಏರಿದರೂ ಏರಬಹುದು !. ಅಂತಹವರು ತುಂಬಾ ವಿರಳ ಎನ್ನಬೇಕಾಗುತ್ತದೆ. ಅಂತಹ ಮನೋಬಲವುಳ್ಳವರು ಆತ್ಮಜ್ಞಾನಕ್ಕೆ ನೇರವಾಗಿ ಅರ್ಹರಾಗುತ್ತಾರೆ.

ವಿಚಾರಮಂಥನದಿಂದ ಮಾತ್ರ ಜ್ಞಾನಪ್ರಾಪ್ತಿಯೇ ಹೊರತು ಹಲವು ಕೋಟಿ ಕರ್ಮಗಳನ್ನು ಆಚರಿಸುವುದರಿಂದಲ್ಲ ಎಂದು ಎರಡನಯೆ ಸಾಲಿನಲ್ಲಿ ಹೇಳುತ್ತಾರೆ. ವಿವೇಕ ಚೂಡಾಮಣಿಯನ್ನು ಓದಿ ಪಡೆಯುವ ಜ್ಞಾನಕ್ಕಿಂತಲೂ ಅಲ್ಲಿರುವ ವಿಚಾರವನ್ನು ಚರ್ಚಿಸಿ, ವಿವೇಚಿಸಿ ಪಡೆಯುವ ಜ್ಞಾನವು ಉನ್ನತಮಟ್ಟದ್ದಾಗಿರುತ್ತದೆ. ತತ್ತ್ವವಿಚಾರದ ಚರ್ಚೆಗಳು ನಡೆದಂತೆಲ್ಲಾ ಆತ್ಮಜ್ಞಾನದ ಒಲವು ಹೆಚ್ಚುತ್ತಾ ಹೋಗುತ್ತದೆ. ವಿವೇಚಿಸದೆ , ವಿಚಾರವಿಲ್ಲದೇ ಮಾಡುವ ಕೋಟಿ ಕರ್ಮಗಳಿಗಿಂತಲೂ ವೈಚಾರಿಕತೆಯಿಂದ ಬರುವ ತಿಳುವಳಿಕೆ ಅಥವಾ ಆತ್ಮಜ್ಞಾನವೇ ಉನ್ನತವಾದುದು ಎಂದು ಶಂಕರರು ತಿಳಿಸುತ್ತಾರೆ.
ಹೀಗೆ ಕರ್ಮ-ಜ್ಞಾನಗಳು ಒಂದನ್ನು ಬಿಟ್ಟು ಮತ್ತೊಂದಿಲ್ಲ. ಚಿತ್ತ ಶುದ್ಧಿಯಾಗದ ಹೊರತು ಜ್ಞಾನಪ್ರಾಪ್ತಿಗೆ ಅವಕಾಶವಿಲ್ಲ. ಅಜ್ಞಾನವನ್ನು ತೊರೆಯಲು ಕರ್ಮಗಳು ಸಹಾಯಕವಾಗುತ್ತವೆ ಆದರೆ ಆತ್ಮಜ್ಞಾನಕ್ಕೆ ಬೇರೆಯದೇ ಆದ ದಾರಿಯನ್ನು ಹುಡುಕಬೇಕಾಗುತ್ತದೆ.
ಅಜ್ಞಾನ ಅಥವಾ ಭ್ರಮೆಯು ಹೇಗೆ ತೋರುತ್ತದೆ ಎನ್ನುವುದನ್ನು ಮುಂದಿನ ಶ್ಲೋಕದಲ್ಲಿ ನಿರೂಪಿಸುತ್ತಾರೆ.

सम्यग् विचारतः सिद्धा रज्जुतत्वावधारणा ।
भ्रान्त्योदितमहासर्पभवदुःखविनाशिनी ॥१२॥

ಸಮ್ಯಗ್ವಿಚಾರತಃ ಸಿದ್ಧಾ ರಜ್ಜುತತ್ವಾವಧಾರಣಾ |
(= ವಿಚಾರದಿಂದ ಜ್ಞಾನ ಎನ್ನುವುದು ಹಾವು-ಹಗ್ಗದ ತತ್ತ್ವದಿಂದ ತಿಳಿಯುತ್ತದೆ)


ಭ್ರಾಂತ್ಯೋದಿತ ಮಹಾಸರ್ಪ ಭವದುಃಖವಿನಾಶಿನೀ ||೧೨||
(= ಮಹಾಸರ್ಪವೆಂಬ ಭ್ರಮೆಯು ನೀಗುತ್ತದೆ)

ಕರ್ಮದಿಂದಲೇ ಮುಕ್ತಿ ಎಂದು ತಿಳಿದು ಆತ್ಮತತ್ತ್ವಾನ್ವೇಷಣೆಯನ್ನೇ ನೆಡೆಸದಿರುವುದು ಹಗ್ಗವನ್ನೇ ಹಾವೆಂದು ಭ್ರಮಿಸಿದಂತೆ ಮತ್ತು ಆತ್ಮಜ್ಞಾನವು ಬಂದೊಡನೆಯೆ ಅಂತಹ ಭ್ರಮೆಯು ತಾನಗೇ ತೊಲಗುವುದು ಎಂದು ಮೇಲಿನ ಶ್ಲೋಕದ ಮೂಲಕ ಹೇಳುತ್ತಾರೆ. ಸರ್ಪ-ರಜ್ಜು (=ಹಗ್ಗ) ತತ್ತ್ವವು ವೇದಾಂತದರ್ಶನದ ಮಹತ್ವದ ಪ್ರಕ್ರಿಯೆಯಾಗಿದೆ. ಭ್ರಮೆಯಲ್ಲಿದ್ದಾಗ ಹಗ್ಗವು ಹಾವಿನ ರೂಪದಲ್ಲಿ ತೋರಬಹುದು. ಕತ್ತಲಲ್ಲಿ ಪಂಜನ್ನು ಹಿಡಿದು ನೆಡೆದು ಹೋದವರನ್ನು ಕೊಳ್ಳಿದೆವ್ವವೆಂದು ಭ್ರಮಿಸಿ ವಾರಗಳ ಕಾಲ ಭಯದಿಂದ ತತ್ತರಿಸುವ ಪ್ರಮೇಯವೂ ಇರುತ್ತದೆ. ಹರೆಯದ ಮಾಯೆಯಲ್ಲಿ ಕತ್ತೆಯೂ (ಕತ್ತೆಗಳಲ್ಲಿ ಕ್ಷಮೆಯಾಚಿಸುತ್ತೇನೆ, ಅದು ನನ್ನ ಇಷ್ಟದ ಪ್ರಾಣಿ) ಸುಂದರವಾಗಿ ಕಾಣುತ್ತದೆ ಎಂಬ ಮಾತಿದೆ. ಕತ್ತಲಿನಲ್ಲಿ ’ಸರ-ಸರ’ ಎಂದು ಸದ್ದಾದಾಗ ಅಲ್ಲಿ ಹಾವಿರುವುದೆಂಬ ಭ್ರಮೆಯಿಂದ ಭಯಗೊಂಡವರು ದೀಪದ ಬೆಳಕಿನಲ್ಲಿ ನೋಡಿದಾಗ ಅದು ಹೆಗ್ಗಣವೋ ಮತ್ತೊಂದೋ ಆಗಿರುವುದು ತಿಳಿದಾಗ ಅವರ ಬುದ್ಧಿಗೆ ಬಡಿದಿದ್ದ ಮಂಕು ತೆರೆಯುತ್ತದೆ. ಆ ಕ್ಷಣಕ್ಕೆ ಹಗ್ಗವೇ ಹಾವಿನಂತೆ ಕಂಡರೂ ವಿಚಾರಿಸಿ, ವಿವೇಚಿಸಿ ನೋಡಿದಾಗ ವ್ಯತ್ಯಾಸವು ತಿಳಿದು ಭ್ರಮೆಯು ಅಳಿಯುತ್ತದೆ. ಚಿತ್ತಶುದ್ಧಿಗಾಗಿ ಕರ್ಮ. ಕರ್ಮದಲ್ಲಿ ಪರಿಪಾಕಗೊಂಡ ನಂತರ ಆತ್ಮತತ್ತ್ವಾನ್ವೇಷಣೆಯ ದಾರಿ. ಈ ದಾರಿಯಲ್ಲಿ ಸಾಗುತ್ತಿದ್ದಂತೆಯೆ ಹಗ್ಗವೇ ಮಾಹಸರ್ಪ ಎಂದು ತಿಳಿದ ಭ್ರಾಂತಿಯು ನೀಗಿ ವಿಚಾರದಿಂದಲೇ ಜ್ಞಾನ ಎಂಬುದು ನಿಕ್ಕಿಯಾಗುತ್ತದೆ.
ಒಂದು ಲೌಕಿಕದ ಉದಾಹರಣೆಯನ್ನು ಇಲ್ಲಿ ನೋಡೋಣ; ಬೊಂಬಾಯಿ ಬೋಂಡವನ್ನು ಮಾಡಲು ಹಿಟ್ಟನ್ನು ಕಲೆಸಿ ಅದನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಟ್ಟುರುತ್ತೇವೆ. ಕಾದಿರುವ ಎಣ್ಣೆಗೆ ಆ ಉಂಡೆಗಳನ್ನು ಹಾಕಿದಾಗ ಅದು ಸದ್ದುಮಾಡಿಕೊಂಡು ಬೇಯುತ್ತದೆ, ಬೆಂದ ನಂತರ ಸುಮ್ಮನಾಗುತ್ತದೆ. ಬೋಂಡದ ಉಂಡೆಯು ಬೇಯುವುದಕ್ಕೆ ಮುಂಚೆಯೂ ಸುಮ್ಮನಿತ್ತು. ಈಗ ಎರಡರ ಗುಣವನ್ನೂ ಒಂದೇ ಎನ್ನಲು ಸಾಧ್ಯವೆ ?!. ಬೇಯದ ಬೋಂಡವು ಕರ್ಮವನ್ನು ಮಾಡಿಲ್ಲದ ಜೀವವಾದರೆ ಬೆಂದಿರುವ ಬೋಂಡವು ಕರ್ಮವನ್ನು ಮೀರಿರುತ್ತದೆ !. ಎಣ್ಣೆಯಲ್ಲಿ ಚೆನ್ನಾಗಿ ಬೆಂದು ( ಕರ್ಮದಲ್ಲಿ ಪರಿಪಾಕಗೊಂಡು) ತೆಪ್ಪಗಾಗಿರುತ್ತದೆ. ಮುಂದೆ ಅದು ಒಬ್ಬರ ಹೊಟ್ಟೆಯನ್ನು ಸೇರಲು ಅರ್ಹತೆಯನ್ನು ಪಡೆದುಕೊಂಡಿರುತ್ತದೆ. (ಕನ್ನಡದ "ಭಕ್ತ ಕುಂಬಾರ" ಚಲನಚಿತ್ರ ನೋಡಿುವವರು , ಚಿತ್ರದಲ್ಲಿ ಕುಂಬಾರನ ಪಾತ್ರ ವಹಿಸಿರುವ ರಾಜಕುಮಾರರು ತಮ್ಮ ಮನೆಯಲ್ಲಿ ಸೇರಿದ್ದ ಸಂತರುಗಳ ತಲೆಯನ್ನು ಕುಟ್ಟಿ ’ಇದು ಬೆಂದಿಲ್ಲ, ಇದು ಅರ್ಧ ಬೆಂದಿದೆ, ಇದು ಮುಕ್ಕಾಲು’ ಎಂದು ಹೇಳುವ ಸನ್ನಿವೇಶವನ್ನು ನೆನೆಪಿಸಿಕೊಳ್ಳಬಹುದು !). ಬೇಸಾಯ ಮಾಡಲು ಕುದುರೆಯು ಬೇಡವಾದರೆ ಏನಂತೆ ? ಟಾಂಗಾ ಗಾಡಿಗಾದರೂ ಬೇಕಲ್ಲವೆ !. ಹೀಗೆ ಮುಕ್ತಿಗೆ ಕರ್ಮವಲ್ಲದಿದ್ದರೂ , ಭ್ರಮೆಯಿಂದ ಹೊರಬರಲು ಮತ್ತು ಚಿತ್ತಶುದ್ಧಿಗಾಗಿ ಕರ್ಮವು ಬೇಕಾಗುತ್ತದೆ ಮತ್ತು ವಿಚಾರದಿಂದಲೇ ಆತ್ಮಜ್ಞಾನ ಎನ್ನುವುದನ್ನು ಶಂಕರರು ತಿಳಿಸುತ್ತಾರೆ.

ಮುಂದಿನ ಕಂತಿನಲ್ಲಿ ಇನ್ನಷ್ಟು ತಿಳಿಯೋಣ.

1 comment:

  1. [ಸಮಚಿತ್ತಕ್ಕಾಗಿ ಕರ್ಮವೇ ಹೊರತು ಆತ್ಮವಸ್ತುವನ್ನು ಅಥವಾ ಆತ್ಮಜ್ಞಾನವನ್ನು ಪಡೆಯಲು ಅಲ್ಲ]
    ಇದನ್ನು ನಿರೂಪಿಸಲು ಸಾಕಷ್ಟು ಸರಳ ಉಧಾಹರಣೆಗಳನ್ನು ಕೊಟ್ಟಿದ್ದೀರಿ. ಆತ್ಮಜ್ಞಾನವನ್ನು ಪಡೆಯಲು ಪೂರ್ವಭಾವಿಯಾಗಿ ಕರ್ಮಗಳನ್ನು ಆಚರಿಸಿ ನಮ್ಮನ್ನು ನಾವು ಸಿದ್ಧಗೊಳಿಸಿ ಕೊಳ್ಳಬೇಕಲ್ಲವೇ? ಸಾಮಾನ್ಯವಾಗಿ ಏನಾಗಿದೆಯೆಂದರೆ ಜನರು ಕರ್ಮದಲ್ಲೇ ಜೀವನ ಪೂರ್ತ ಕಳೆದುಬಿಡುತ್ತಾರಲ್ಲವೇ? ನಿಜವಾಗಿ ಈ ಜ್ಞಾನದ ಸರಿಯಾದ ಪರಿಚಯವಾಗಬೇಕು. ಕರ್ಮ ಮತ್ತು ಆತ್ಮಜ್ಞಾನದ ಸರಿಯಾದ ತಿಳುವಳಿಕೆ ಇದ್ದು ಬ್ಯಾಲೆನ್ಸ್ ಮಾಡಿಕೊಂಡು ಹೋದಾಗ ನಮ್ಮ ದಾರಿ ಉತ್ತಮವಾಗಿರುತ್ತದೆನ್ನುವುದು ನನ್ನ ಅನಿಸಿಕೆ. ಈ ವಿಚಾರದ ಜಿಜ್ಞಾಸೆ ನಡೆಯಬೇಕು.

    ReplyDelete