Pages

Tuesday, August 30, 2011

ವೇದೋಕ್ತ ಜೀವನ ಪಥ: ಮಾನವಧರ್ಮದ ಮೂರು ಅಭಿನ್ನ ಅಂಗಗಳು - ೭:


   ಇನ್ನು ಧರ್ಮದ ಮೂರನೆಯ ಅವಿಚ್ಛಿನ್ನ ಅಂಗ, ವೈದಿಕ ಭಾಷೆಯಲ್ಲಿ ಇದನ್ನು ಉಪಾಸನಾ ಎನ್ನುತ್ತಾರೆ. ಭಕ್ತಿ, ಪೂಜೆ ಇದೆಲ್ಲಾ ಈಚೀಚೆಗೆ ಉದ್ಭವಿಸಿದ ಶಬ್ದಗಳು. ಜೀವಾತ್ಮನು ತನ್ನ ಚಿತ್ತವನ್ನು ಬಾಹ್ಯ ವಿಷಯಗಳಿಂದ ಸರ್ವಥಾ ಬೇರ್ಪಡಿಸಿ, ರೂಪ, ರಸ, ಗಂಧ, ಶಬ್ದ, ಸ್ಪರ್ಷ - ಈ ಐದು ಇಂದ್ರಿಯ ವಿಷಯಗಳಿಂದಲೂ ಅದನ್ನು ಒಳಕ್ಕೆಳೆದುಕೊಂಡು, ಏಕಾತ್ರಗೊಳಿಸಿ ಅದನ್ನು ಪರಮಾತ್ಮನಲ್ಲಿ ನಿಲ್ಲಿಸಿ, ಪ್ರಭುಸಾಮೀಪ್ಯವನ್ನು ಅನುಭವಿಸುವ ಕ್ರಿಯೆಯನ್ನೇ ಉಪಾಸನೆ ಎನ್ನುತ್ತಾರೆ. ವೈದಿಕ ಧರ್ಮದಲ್ಲಿ ಜೀವಂತ ಮೂರ್ತಿಗಳಾದ ತಾಯಿ-ತಂದೆ-ಆಚಾರ್ಯ-ಗುರು-ಹಿರಿಯರು ಇವರ ಪೂಜೆಗೆ, ಅಂದರೆ ಅವರ ಸತ್ಕಾರಕ್ಕೆ ಅವಕಾಶವಿದೆಯೇ ಹೊರತು, ಜಡಧಾತುಗಳ, ಕಲ್ಲು-ಮರಗಳ ವಿಗ್ರಹಗಳನ್ನು ದೇವರೆಂದು ತಿಳಿದು, ಧೂಪ-ದೀಪ-ನೈವೇದ್ಯಾದಿಗಳಿಂದ ಅರ್ಚಿಸುವ ಪದ್ಧತಿಗೆ ಅವಕಾಶವೇ ಇಲ್ಲ. ಪರಮಾತ್ಮನು ಸರ್ವವ್ಯಾಪಕ. ಅದೇ ಕಾರಣದಿಂದ ಸರ್ವಥಾ ನಿರಾಕಾರ. ಅವನು ಅವತಾರವನ್ನು ಎತ್ತುವ ಸಂಭವವಿಲ್ಲ ಎಂದು ಪಾಠಕರು ಮೊದಲೇ ಅರಿತಿದ್ದಾರೆ. ನಿರಾಕಾರನ ಮೂರ್ತಿ ರಚನೆ ಸರ್ವಥಾ ಅಸಂಭವ. ಚಿತ್ತದ ಏಕಾಗ್ರತೆಯ ಸಾಧನೆಗಾಗಿ ಮೂರ್ತಿಪೂಜೆ ಎಂದರೆ, ವ್ಯಾಪ್ಯದಲ್ಲಿ ಮನಸ್ಸನ್ನು ನಿಲ್ಲಿಸಲು ಕಲಿತರೂ, ವ್ಯಾಪಕನ ಧ್ಯಾನಕ್ಕೆ ಅದು ನೆರವಾಗಲಾರದು. ಅಲ್ಲದೆ ಉಪಾಸನೆ ಮಾಡುವುದು ಬೇರೆ ಎಲ್ಲಿಯೂ ಸಿಗದ ಆನಂದವನ್ನು ತುಂಬಿಕೊಳ್ಳುವುದಕ್ಕಾಗಿ. ಹೀಗಿರುವಾಗ, ಸಚ್ಚಿದಾನಂದ ಸ್ವರೂಪನಾದ ಪ್ರಭುವಿಗೆ ಬದಲು ನಿರಾನಂದನಾದ ಪ್ರಕೃತಿಯಲ್ಲಿ, ಪ್ರಾಕೃತ ವಿಗ್ರಹಗಳಲ್ಲಿ ಚಿತ್ತ ನಿಲ್ಲಿಸಲು ಕಲಿತು ಸಾಧಿಸುವುದಾದರೂ ಏನಿದೆ? ಸಚ್ಚಿತ್ಸ್ವರೂಪನಾದ ಜೀವ, ಸತ್ವರೂಪಿಣಿಯಾದ ಪ್ರಕೃತಿಗಿಂತ ಶ್ರೇಷ್ಠನಾಗಿರುವುದರಿಂದ, ವಿಗ್ರಹಗಳ ಮುಂದೆ ತಲೆ ಬಾಗುವುದರಲ್ಲಿ ಆತ್ಮಾಪಮಾನ ಒಂದನ್ನು ಬಿಟ್ಟು ಬೇರಾವ ಮಹತ್ವವಿದೆ?
     ವೇದಗಳಲ್ಲಿ ಮೂರ್ತಿಪೂಜಾ ವಿಧಾನವಿಲ್ಲ. ಅದಕ್ಕೆ ವಿರುದ್ಧವಾಗಿ, ಈ ಕೆಳಗಿನ ಮಂತ್ರದಂತಹ ವಿಚಾರ ಪ್ರಚೋದಕವಾದ ಮಂತ್ರಗಳು ಸಿಕ್ಕುತ್ತವೆ.


ಪ್ರ ತುವಿದ್ಯುಮ್ನಸ್ಯ ಸ್ಥವಿರಸ್ಯ ಘೃಷ್ವೇರ್ದಿವೋ ರರಪ್ಶೇ ಮಹಿಮಾ ಪೃಥಿವ್ಯಾಃ |
ನಾಸ್ಯ ಶತ್ರುರ್ನ ಪ್ರತಿಮಾನಮಸ್ತಿ ನ ಪ್ತತಿಷ್ಠಿಃ ಪುರುಮಾಯಸ್ಯ ಸಹ್ಯೋಃ ||
(ಋಕ್. ೬.೧೮.೧೨.)


     [ಪ್ರ ತುವಿದ್ಯುಮ್ನಸ್ಯ] ಮಹಾವೇಗಯುಕ್ತ ಶಕ್ತಿಸಂಪನ್ನನೂ [ಸ್ಥವಿರಸ್ಯ] ಅನಾದಿಯೂ, {ಘೃಷ್ವೇಃ] ಪರಮಾಣುಗಳಲ್ಲಿ ಚಲನೆ ನೀಡುವವನೂ ಆದ ಪರಮಾತ್ಮನ, [ಮಹಿಮಾ] ಮಹಿಮೆಯು, [ದಿವಃ ಪೃಥಿವ್ಯಾಃ ರರಪ್ಯೇ] ದ್ಯುಲೋಕ, ಪೃಥಿವೀ ಲೋಕಗಳನ್ನು ಮೀರಿಸಿದೆ. [ಅಸ್ಯ ಪುರುಮಾಯ ಸಹ್ಯೋಃ] ಈ ಮಹಾಪ್ರಜ್ಞನೂ, ಸಹನಶೀಲನೂ ಆದ ಪ್ರಭುವಿನ, [ಶತ್ರುಃ] ಶತ್ರುವು, [ನ] ಯಾವನೂ ಇಲ್ಲ. [ಪ್ರತಿಮಾನಂ ನ ಅಸ್ತಿ] ಪ್ರತಿಮಾನವೂ ಇಲ್ಲ. [ಪ್ರತಿಷ್ಠಿಃ ನ] ಆಧಾರವೂ ಇಲ್ಲ.
     ಇಷ್ಟು ಸ್ಪಷ್ಟವಾಗಿ ಪ್ರತಿಮಾರ್ಚನದ ನಿರಾಕರಣ ವೇದಗಳಲ್ಲಿ ಕಂಡುಬರುತ್ತದೆ. ಅಲ್ಲದೆ, ಯ ಏಕ ಇತ್ ತಮುಷ್ನುಹಿ (ಋಕ್.೬.೪೫.೧೬.) - ಯಾವನು ಕೇವಲ ಒಬ್ಬನೇ ಒಬ್ಬನಿದ್ದಾನೋ, ಅವನನ್ನು ಮಾತ್ರ ಸ್ತುತಿಸು.


ಮಾ ಚಿದನ್ಯದ್ ವಿ ಶಂಸತ ಸಖಾಯೋ ಮಾ ರಿಷಣ್ಯತ |
ಇಂದ್ರಮಿತ್ ಸ್ರೋತಾ ವೃಷಣಂ ಸಚಾ ಸುತೇ ಮುಹುರುಕ್ಥಾ ಚ ಶಂಸತ ||
(ಋಕ್. ೮.೧.೧.)


     [ಅನ್ಯತ್ ಚಿತ್] ಬೇರಾವುದನ್ನೂ [ಮಾ ವಿಶಂಸತಾ] ಪ್ರಶಂಸಿಸಬೇಡಿ. [ಸಖಾಯಃ] ಮಿತ್ರರೇ, [ಮಾ ರಿಷಣ್ಯತಾ] ನಾಶ ಹೊಂದಬೇಡಿ. [ಸುತೇ ಸಜಾ] ಈ ಸೃಷ್ಟಿಯಲ್ಲಿ ಒಟ್ಟಾಗಿ [ವೃಷಣಂ ಇಂದ್ರಂ ಇತ್] ಸುಖವರ್ಷಕನಾದ ಇಂದ್ರನನ್ನು, ಸರ್ವಶಕ್ತಿಮಾನ್ ಪ್ರಭುವನ್ನು ಮಾತ್ರ [ಶಂಸತ] ಸ್ತುತಿಸಿರಿ. [ಮುಹುರುಕ್ಥಾ ಚ] ಮತ್ತು ಬಾರಿ ಬಾರಿ ಸ್ತುತಿಪರರಾಗಿ [ಶಂಸತ] ಸ್ತುತಿಸಿರಿ.
    ಈ ರೀತಿ ಕೇವಲ ಒಬ್ಬನೇ ಪ್ರಭುವನ್ನು ಮಾತ್ರ ಸ್ತುತಿಸಿರಿ ಎಂದು ವೇದಗಳು ಸ್ಪಷ್ಟ ಆದೇಶ ನೀಡುತ್ತವೆ.
    ಹೀಗೆ ಜಡಾರ್ಚನೆ ಪರಿತ್ಯಾಜ್ಯ. ಚೇತನೋಪಾಸನೆಯೇ ವೇದೋಕ್ತ ಕ್ರಿಯೆ. ಉಪಾಸನಾ - ಎಂದರೆ ಉಪ+ಆಸನಾ, ಹತ್ತಿರ ಕುಳಿತುಕೊಳ್ಳುವುದು. ಭಗವಂತನ ಸಮೀಪದಲ್ಲಿ ಕುಳಿತುಕೊಳ್ಳುವುದೇ ಭಗವದುಪಾಸನೆ. ಭಗವಂತನೂ ಅನಾದಿ, ಜೀವರಾದ ನಾವೂ ಅನಾದಿ. ಹೀಗಾಗಿ ಅವನೂ, ನಾವೂ ಸಮಕಾಲೀನರು. ಕಾಲದ ದೃಷ್ಟಿಯಿಂದ ನಾವು ಅವನಿಂದ ದೂರವಿಲ್ಲ. ಅವನು ಸರ್ವವ್ಯಾಪಕನಾದ ಕಾರಣ, ನಮ್ಮೊಳಗೂ, ಹೊರಗೂ ಏಕಪ್ರಕಾರವಾಗಿ ವ್ಯಾಪಕನಾಗಿದ್ದೇನೆ. ಆದುದರಿಂದ ದೇಶದ ದೃಷ್ಟಿಯಿಂದಲೂ ಅವನು ನಮ್ಮಿಂದ ದೂರವಿಲ್ಲ. ಹೀಗೆ ಕಾಲ-ದೇಶಗಳ ದೃಷ್ಟಿಯಿಂದ ಉಪಾಸನೆ ನಮಗೆ ಸಹಜವಾಗಿಯೇ ಸಿದ್ಧಿಸಿದೆ. ಆದರೆ. ಸಂಪರ್ಕ ಸಾಧನವಾದ ಮನಸ್ಸು ಸಾಂಸಾರಿಕ ವ್ಯಾಪಾರಗಳಲ್ಲಿ ವ್ಯಾಪ್ರವಾಗಿರುವುದರಿಂದ, ಜ್ಞಾನದ ದೃಷ್ಟಿಯಿಂದ ನಾವು ಪರಮಾತ್ಮನಿಂದ ದೂರವೇ ಇದ್ದೇವೆ. ಈ ಜ್ಞಾನಸಂಬಂಧೀ ದೂರವನ್ನು ದೂರೀಕರಿಸಿ, ಮನಸ್ಸನ್ನು ಅವನಲ್ಲಿ ನಿಲ್ಲಿಸಿ, ಅವನ ಸಾಮೀಪ್ಯವನ್ನನುಭವಿಸುವುದೇ ಉಪಾಸನೆ.
*****************

No comments:

Post a Comment