Pages

Monday, June 25, 2012

ಸಂಧ್ಯಾಕಾಲದಲ್ಲಿರುವವರೊಂದಿಗೆ ಸ್ವಲ್ಪ ಸಮಯ





     ನನ್ನ ಮೊಮ್ಮಗಳು ಚಿ. ಅಕ್ಷಯಳ 6ನೆಯ ವರ್ಷದ ಹುಟ್ಟುಹಬ್ಬವನ್ನು ಕಳೆದ ವಾರ ಬೆಂಗಳೂರಿನ ಮನೆಯಲ್ಲಿ ಸರಳವಾಗಿ ಆಚರಿಸಿದರು. ಆ ಸಂದರ್ಭದಲ್ಲಿ ಯಾವುದಾದರೂ ಸಾಮಾಜಿಕ ಚಟುವಟಿಕೆಗೆ ಧನಸಹಾಯ ಮಾಡಲು ಅಪೇಕ್ಷಿಸಿದ್ದ ಅಳಿಯ ರಾಘವೇಂದ್ರ ಮತ್ತು ಮಗಳು ಬಿಂದು ಮನೆಯ ಸಮೀಪದಲ್ಲಿ ವಿಸ್ತರಣೆಯಾಗುತ್ತಿದ್ದ ದೇವಸ್ಥಾನದ ಕಟ್ಟಡಕ್ಕೆ ಹಣ ನೀಡುವ ಬಗ್ಗೆ ಮಾತನಾಡುತ್ತಿದ್ದರು. ಅದರ ಬದಲು ಯಾವುದಾದರೂ ವೃದ್ಧಾಶ್ರಮದ ನಿವಾಸಿಗಳಿಗೆ ಅವರ ಅಗತ್ಯ ನೋಡಿ ಏನಾದರೂ ಸಹಾಯ ಮಾಡಬಹುದೆಂದು ಕೊಟ್ಟ ಸಲಹೆಯನ್ನು ತಕ್ಷಣ ಒಪ್ಪಿದ ಅವರು ಹಾಸನದಲ್ಲೇ ಇರುವ ವೃದ್ಧಾಶ್ರಮಕ್ಕೆ ಭೇಟಿ ನೀಡಿ ವಿಚಾರಿಸಿ ತಿಳಿಸುವ ಹೊಣೆಯನ್ನು ನನಗೇ ವಹಿಸಿದರು. ಆ ಕಾರಣದಿಂದ ನಾನು ಮಿತ್ರ ಹರಿಹರಪುರ ಶ್ರೀಧರರನ್ನೂ ಕರೆದುಕೊಂಡು ಹಾಸನ ನಗರದ ಜೊರವಲಯದಲ್ಲಿರುವ ಗವೇನಹಳ್ಳಿಯಲ್ಲಿರುವ ವೃದ್ಧಾಶ್ರಮ ಚೈತನ್ಯ ಮಂದಿರಕ್ಕೆ ಭೇಟಿ ನೀಡಿ ಕೆಲವು ಗಂಟೆಗಳ ಕಾಲ ಅಲ್ಲಿದ್ದ ಹಿರಿಯರೊಡನೆ ಕಳೆದೆವು.   
     ಕಾಮಧೇನು ಸಹಕಾರಿ ವಿದ್ಯಾಶ್ರಮದ ಅಂಗ ಸಂಸ್ಥೆ ಚೈತನ್ಯ ಮಂದಿರದಲ್ಲಿ ಈಗ 32 ವೃದ್ಧೆಯರು ಮತ್ತು 10 ವೃದ್ಧರು ಆಶ್ರಯ ಪಡೆದಿದ್ದಾರೆ. ಮೊದಲು 13 ವೃದ್ಧರಿದ್ದು ಅವರ ಪೈಕಿ ಮೂವರು ಕಳೆದ 15 ದಿನಗಳ ಅವಧಿಯಲ್ಲಿ ಇಹಲೋಕ ತ್ಯಜಿಸಿದ ವಿಷಯ ತಿಳಿದು ಮನಸ್ಸು ಭಾರವಾಯಿತು. ವೃದ್ಧಾಶ್ರಮದಲ್ಲಿ ಬಡವರಿಗೆ ಉಚಿತವಾಗಿ ಊಟ, ವಸತಿ, ವೈದ್ಯಕೀಯ ಚಿಕಿತ್ಸೆ, ಇತ್ಯಾದಿ ಅಗತ್ಯದ ಅವಶ್ಯಕತೆಗಳನ್ನು ಪೂರೈಸುತ್ತಿದ್ದಾರೆ. ಆರ್ಥಿಕವಾಗಿ ಅನುಕೂಲವಾಗಿದ್ದು, ಅಸಹಾಯಕತೆ ಹಾಗೂ ಅನಿವಾರ್ಯತೆಯ ಕಾರಣ ಇರಬಯಸುವ ವೃದ್ಧ, ವೃದ್ಧೆಯರಿಗೂ ಇಲ್ಲಿ ಸ್ವಲ್ಪ ಹಣವನ್ನು ಮುಂಗಡವಾಗಿ ಕಟ್ಟಿಸಿಕೊಂಡು ಮಾಸಿಕ ರೂ. 1500/- ಅನ್ನು ಊಟೋಪಚಾರದ ವೆಚ್ಚವಾಗಿ ಪಡೆದು ಇರಲು ಅನುಕೂಲ ಕಲ್ಪಿಸಿದ್ದಾರೆ. ಅಂತಹ 4-5 ವೃದ್ಧರೂ ಇಲ್ಲಿದ್ದಾರೆ. ಆರು ಶಿಶುಗಳನ್ನೂ ಅಲ್ಲಿ ಪಾಲಿಸಲಾಗುತ್ತಿದೆ. ಮೂರು ಮಕ್ಕಳು 2-3 ವರ್ಷದವರಾಗಿದ್ದರೆ ಮೂರು ಶಿಶುಗಳು ಇನ್ನೂ ಹಾಲು ಕುಡಿಯುವ ಕೆಲವೇ ತಿಂಗಳುಗಳ ಎಳೆ ಕಂದಮ್ಮಗಳು. ಒಂದು ಶಿಶುವಂತೂ ಜನಿಸಿ ಕೇವಲ 2-3 ದಿನಗಳಾಗಿದ್ದು ಸಕಲೇಶಪುರ ತಾಲ್ಲೂಕು ಹುರುಡಿ ಗ್ರಾಮದ ಬಸ್ ನಿಲ್ದಾಣದ ಬಳಿ ಬಿಟ್ಟು ಹೋಗಿದ್ದಾಗಿದ್ದು ಇಲ್ಲಿ ಆಶ್ರಯ ಪಡೆದಿದೆ. ಬೆಳಿಗ್ಗೆ ಮತ್ತು ಸಾಯಂಕಾಲ ಕಾಫಿ, ಟೀ, ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ. ಡಾ. ಗುರುರಾಜ ಹೆಬ್ಬಾರರು ಸಂಸ್ಥೆಯ ಅಧ್ಯಕ್ಷರು ಹಾಗೂ ಬೆನ್ನೆಲುಬಾಗಿದ್ದಾರೆ. ಉತ್ತಮ ಸಹಕಾರಿಗಳು ಅವರೊಡನಿದ್ದಾರೆ. 
     ಗಂಡ ಮತ್ತು ಮಕ್ಕಳು ಇಲ್ಲದ ಕಾರಣ ಅನಿವಾರ್ಯವಾಗಿ ಅಲ್ಲಿರಬೇಕಾಗಿ ಬಂದವರು ಕೆಲವರಾದರೆ, ಕೆಲವರು ಪರಸ್ಪರರಲ್ಲಿನ ಹೊಂದಾಣಿಕೆಯ ಕೊರತೆ, ಅಸಹನಾ ಮನೋಭಾವ, ವೈಯಕ್ತಿಕ ಸ್ವಪ್ರತಿಷ್ಠೆ, ಸ್ವಾಭಿಮಾನ, ಬಡತನ, ಇತ್ಯಾದಿಗಳ ಕಾರಣದಿಂದ ಅಲ್ಲಿರುವುದು ಕೆಲವರನ್ನು ಮಾತನಾಡಿಸಿದಾಗ ತಿಳಿದು ಬಂದ ಸಂಗತಿ. ಹೊಂದಿಕೊಂಡು ಹೋಗದ ಅವರುಗಳ ಸ್ವಭಾವದಿಂದ ವೃದ್ಧಾಶ್ರಮದಲ್ಲೂ ಕಿರಿಕಿರಿಯಾಗುವ ಬಗ್ಗೆ ಸಹ ಗೊತ್ತಾಯಿತು. ಒಬ್ಬ ವೃದ್ಧೆಯನ್ನು ಮಕ್ಕಳ ಬಗ್ಗೆ ಕೇಳಿದಾಗ, "ಮಕ್ಕಳು ಅವ್ರೆ, ಸತ್ತಿಲ್ಲ, ಬದುಕವ್ರೆ" ಎಂದು ಸಿಡಿಮಿಡಿಗೊಂಡಿದ್ದಳು. ಆರು ವರ್ಷಗಳಿಂದ ಇಲ್ಲಿರುವ ಇನ್ನೊಬ್ಬ ವೃದ್ಧೆ ಹಿಂದೆ ಅಂಗಡಿ ನಡೆಸುತ್ತಿದ್ದು, ಆಕೆ ಕಷ್ಟಪಟ್ಟು ಉಳಿಸಿದ್ದ  1ಲಕ್ಷ ರೂಪಾಯಿ ಇತರರ ಪಾಲಾಯಿತೆಂದು ಹಲುಬಿದ್ದಳು. ಹಾಸನ ನಗರದ ಒಬ್ಬ ಪ್ರತಿಷ್ಠಿತ ವ್ಯಕ್ತಿಯ (ಈಗ ದಿವಂಗತ) ಪತ್ನಿ ಸಹ ಪಾವತಿ ಆಧಾರದ ಮೇಲೆ ಇಲ್ಲಿನ ನಿವಾಸಿಯಾಗಿದ್ದಾರೆ. ಅವರ ಮಕ್ಕಳು ಅಮೆರಿಕಾದಲ್ಲಿದ್ದಾರೆ. ವಿಶೇಷವೆಂದರೆ ವೃದ್ಧಾಶ್ರಮದ ಒಂದು ಕೊಠಡಿಯನ್ನು (ಸುಮಾರು 2.00ಲಕ್ಷ ಇರಬಹುದು) ಅವರೇ ಕಟ್ಟಿಸಿಕೊಟ್ಟಿದ್ದಾರೆ. ಸಿರಸಿ, ತಿಪಟೂರು, ಬೆಂಗಳೂರು, ಇತ್ಯಾದಿ ಹಲವಾರು ಊರುಗಳಿಂದ ಬಂದವರೂ ಇಲ್ಲಿದ್ದಾರೆ, ಇಲ್ಲಿನವರೂ ಇದ್ದಾರೆ. ಹೆಚ್ಚಿನವರಿಗೆ ವಿಧವಾ ವೇತನ, ವೃದ್ಧಾಪ್ಯ ವೇತನಗಳು ಬರುತ್ತಿವೆ. ವಿಳಾಸ ಬದಲಾವಣೆ, ಊರಿನಲ್ಲಿಲ್ಲ, ಇತ್ಯಾದಿ ಕಾರಣಗಳಿಂದ ಬರುತ್ತಿದ್ದ ವೇತನ ನಿಂತು ಹೋಗಿದ್ದನ್ನು ಮತ್ತೆ ಬರುವಂತೆ ಮಾಡಲು ಕೆಲವರು ನಮ್ಮನ್ನು ಕೋರಿದರು. ಮತ್ತೊಮ್ಮೆ ಬರುವುದಾಗಿಯೂ, ವಿವರಗಳನ್ನು ಪಡೆದು ಸಂಬಂಧಿಸಿದವರೊಡನೆ ವ್ಯವಹರಿಸುವುದಾಗಿ ತಿಳಿಸಿದೆವು. ಎಲ್ಲರನ್ನೂ ಪ್ರಾರ್ಥನಾ ಮಂದಿರಕ್ಕೆ ಬರುವಂತೆ ಕೋರಿ ಅಲ್ಲಿ ಒಟ್ಟಿಗೆ ಕೆಲವು ಭಜನೆಗಳನ್ನು ಹಾಡಿದೆವು. ಶ್ರೀಧರ್ ಸಹ ಎರಡು ಭಜನೆಗಳನ್ನು ಹೇಳಿಕೊಟ್ಟು ಹೇಳಿಸಿದರು. ವೃದ್ಧಾಶ್ರಮಗಳ ಅಗತ್ಯ ಬಾರದಂತೆ ಹೊಂದಿಕೊಂಡು ಹೋಗುವ ಮನೋಭಾವವನ್ನು ಎಲ್ಲರಿಗೂ ಕರುಣಿಸುವಂತೆ 'ಸನ್ಮತಿ ದೇ, ಹೇ ಭಗವಾನ್' ಎಂದು ಮನಸ್ಸಿನಲ್ಲೇ ಪ್ರಾರ್ಥಿಸಿದೆವು. ಸ್ವಾರ್ಥ ಇಲ್ಲೂ ಬಿಡಲಿಲ್ಲ, 'ನನಗೆ ದೈನ್ಯತೆಯಿಲ್ಲದೆ ಬಾಳುವ ಅವಕಾಶ, ಅನಾಯಾಸದ ಮರಣ ಬರಲಿ' ಎಂದೂ ಕೇಳಿಕೊಂಡೆ.
     ಸ್ನಾನ ಆದ ನಂತರ ತಮ್ಮ ತಮ್ಮ ಇಷ್ಟದ ದೇವರ ಫೋಟೋಗೆ (ತಮ್ಮ ಮಂಚದ ಬಳಿ ಹಾಕಿಕೊಂಡಿರುವುದು) ಮತ್ತು ಪ್ರಾರ್ಥನಾ ಮಂದಿರದಲ್ಲಿರುವ ದೇವರ ಫೋಟೋಗಳಿಗೆ ಪೂಜೆ ಸಲ್ಲಿಸುವವರು ಸಲ್ಲಿಸುತ್ತಾರೆ. ಸಾಯಂಕಾಲ ಎಲ್ಲರೂ ಒಟ್ಟಿಗೆ ಭಜನೆ ಮಾಡುತ್ತಾರೆ. ಬೆಂಗಳೂರಿನ ರುದ್ರಮ್ಮ ಭಜನೆ ಹೇಳಿಕೊಡುತ್ತಾರೆ. ಟಿ.ವಿ. ಇದೆ. ಕೆಲವು ಧಾರಾವಾಹಿಗಳನ್ನು ನೋಡುತ್ತಾರೆ. ಸಮಾನ ಮನಸ್ಕರು ಗುಂಪು ಕಟ್ಟಿಕೊಂಡು ಮಾತನಾಡುತ್ತಾರೆ. ರಾತ್ರಿ ಊಟ ಆದ ನಂತರ ಮಲಗುತ್ತಾರೆ. ಮಕ್ಕಳ ಹುಟ್ಟು ಹಬ್ಬ, ಮದುವೆ, ಇತ್ಯಾದಿ ಶುಭ ಸಂದರ್ಭಗಳಲ್ಲಿ ಇಲ್ಲಿನ ನಿವಾಸಿಗಳಿಗೆ ಊಟ, ತಿಂಡಿಗಾಗಿ ದಾನ ಕೊಡುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಇಚ್ಛುಕರು ರೂ. 5000/- ದಾನ ನೀಡಿದರೆ ಆ ದಿನದ ತಿಂಡಿ ಮತ್ತು ಎರಡು ಊಟಗಳ ವ್ಯವಸ್ಥೆಯಾಗುತ್ತದೆ. ಕೇವಲ ಒಂದು ಹೊತ್ತಿನ ತಿಂಡಿಗಾದರೆ ರೂ.1000/-, ಒಂದು ಹೊತ್ತಿನ ಊಟಕ್ಕಾದರೆ ರೂ. 2000/- ದಾನ ಕೊಡಬಹುದಾಗಿರುತ್ತದೆ.  ಕೆಲವು ಹಸುಗಳನ್ನೂ ಇಲ್ಲಿ ಸಾಕಿದ್ದು ನೋಡಿಕೊಳ್ಳಲು ಒಬ್ಬ ಗೋಪಾಲಕ ಇದ್ದಾರೆ. ಇಳಿ ವಯಸ್ಸಿನಲ್ಲಿ ಜೀವನದ ಸಿಹಿಕಹಿಗಳನ್ನು ಉಂಡು ಸೋತಿರುವ ಇಲ್ಲಿನ ಜೀವಗಳಿಗೆ ಅಗತ್ಯವಾಗಿರುವುದು ಆಧ್ಯಾತ್ಮಿಕ ಚಿಂತನೆ ಮತ್ತು ಪ್ರೀತಿಯ ಮಾತುಗಳು. ಆಗಾಗ್ಗೆ ಇಲ್ಲಿ ಸತ್ಸಂಗಗಳನ್ನು ಏರ್ಪಡಿಸುವ ಬಗ್ಗೆ ಶ್ರೀಧರ್ ಮತ್ತು ನಾನು ಮಾತನಾಡಿಕೊಂಡೆವು. ಮಳೆಗಾಲವಾದ್ದರಿಂದ ಮತ್ತು ಮುಂಬರುವ ಚಳಿಗಾಲದ ಕಾರಣದಿಂದ ಅವರುಗಳಿಗೆ ಸ್ವೆಟರ್‌ಗಳನ್ನು ಒದಗಿಸುವುದು ಸೂಕ್ತವೆಂದು ಅನ್ನಿಸಿ ವ್ಯವಸ್ಥೆ ಮಾಡಲು ಮಗಳಿಗೆ ದೂರವಾಣಿ ಕರೆ ಮಾಡಿದೆ. 
-ಕ.ವೆಂ.ನಾಗರಾಜ್.
- - - - - - - - - - - - - - - - - - - - - - - - - -
ವೃದ್ಧಾಶ್ರಮದ ಕೆಲವು ಫೋಟೋಗಳು:










     . 
        

5 comments:

  1. ಸರ್, ಈ ಕೆಲಸ ಮತ್ತು ಬರಹಕ್ಕಾಗಿ ವಂದನೆಗಳು.
    ಆ ಆಶ್ರಮದ ವಿಳಾಸ ಮತ್ತು ಫೋನ್ ನಂಬರ್ ಕೊಡುವಿರಾ?
    ಅಲ್ಲಿಗೆ ಹಣ ಕಳಿಸುವುದಾದರೆ ಯಾರ ಹೆಸರಿಗೆ ಚೆಕ್ ಇರಬೇಕು ಎಂಬ
    ಮಾಹಿತಿ ಕೊಡುವಿರಾ?
    ಸ್ವರ್ಣಾ

    ReplyDelete
  2. ಆತ್ಮೀಯ ನಾಗರಾಜ್,
    ಜೀವನದ ಮುಸ್ಸಂಜೆಯ ಕಾಲದಲ್ಲಿ ವೃದ್ಧಾಶ್ರಮದ ಜೀವನ ಕಲ್ಪನೆ ಮಾಡಿಕೊಳ್ಳುವುದೇ ಕಷ್ಟದ ಕೆಲಸ. ನಾನೂ ಕೂಡಾ ಐದಾರು ಬಾರಿ ಹೋಗಿ ಬಂದಿದ್ದೇನೆ. ನೀವು ಬಯಸಿದಾಗ, ಏನಾದರು ಸಹಾಯ ಮಾಡಲು ನೀವು ಮುಂದಾದಾಗ ಖಂಡಿತ ನನ್ನನ್ನು ಸೇರಿಸಿಕೊಳ್ಳಿ. ನಿಮ್ಮ ಜೊತೆಯಲ್ಲಿ ನಾನು ಕೈಜೋಡಿಸುತ್ತೇನೆ. ನಿಮ್ಮ ಕರೆಗೆ ಸದಾ ಕಾಯುವೆ.
    ಪ್ರಕಾಶ್

    ReplyDelete
    Replies
    1. ಆತ್ಮೀಯ ಪ್ರಕಾಶರೇ, ನೀವು ನಮ್ಮ ಜೊತೆಗೆ ಇರದಿದ್ದರೆ ಇನ್ಯಾರು ಇರುತ್ತಾರೆ? ಒಟ್ಟಿಗೆ ಇರೋಣ!
      -ನಾಗರಾಜ್.

      Delete
  3. ಸೋದರಿ ಸ್ವರ್ಣಾರವರೇ, ನಿಮ್ಮ ಕಳಕಳಿಗೆ ಮನ ತುಂಬಿದೆ. ಡಾ. ಗುರುರಾಜ ಹೆಬ್ಬಾರ್ ರವರು ಈ ಸಂಸ್ಥೆಯ ಅದ್ಯಕ್ಷರಾಗಿದ್ದು, ಅವರ ವಿಳಾಸ ಹೀಗಿದೆ: ಡಾ. ಗುರುರಾಜ ಹೆಬ್ಬಾರ್, ಶ್ರೀ ರಾಮಕೃಷ್ಣ ನರ್ಸಿಂಗ್ ಹೋಮ್, ಮಹಾತ್ಮ ಗಾಂಧಿ ರಸ್ತೆ, ಹಾಸನ.
    [ವೃದ್ಧಾಶ್ರಮ ಬೈಪಾಸ್ ರಸ್ತೆ, ಗವೇನಹಳ್ಳಿ, ಹಾಸನ ತಾಲ್ಲೂಕು ಇಲ್ಲಿದೆ.]
    ನರ್ಸಿಂಗ್ ಹೋಮ್ ನ ದೂರವಾಣಿ ಸಂಖ್ಯೆ 08172 263446 ಆಗಿದ್ದು, ಅಲ್ಲಿಗೆ ದೂರವಾಣಿ ಕರೆ ಮಾಡಿ ಡಾಕ್ಟರರು ಇದ್ದರೆ ವಿಚಾರಿಸ ಮಾತನಾಡಬಹುದು. ಅವರು ಇಲ್ಲದಿದ್ದರೆ ಅಲ್ಲಿ ಶ್ರೀ ವೆಂಕಟರಾಮು ಅನ್ನುವವರು (ವೃದ್ಧಾಶ್ರಮದ ಆಡಳಿತಾಧಿಕಾರಿ) ಇದ್ದರೆ ಅವರ ಹತ್ತಿರವೂ ಮಾತನಾಡಬಹುದು. ಚೆಕ್ ಕಳಿಸುವುದಾದರೆ ಡಾಕ್ಟರರ ವಿಳಾಸಕ್ಕೇ ಕಳಿಸಬಹುದು.
    -ನಾಗರಾಜ್.

    ReplyDelete
  4. Thank you sir. Noted down the address.
    Swarna

    ReplyDelete