Pages

Thursday, February 7, 2013

“ಹಿಂದು” ಈ ದೇಶದ ಹೆಸರು


    ಮತ ಎಂದರೇನು? ಚುನಾವಣೆ ಬಂದಾಗ ಸಹಜವಾಗಿ ಕೇಳುವ ಮಾತು " ನಿಮ್ಮ ಮತ ಯಾರಿಗೆ? " ಅಂದರೆ ನೀವು ಯಾರನ್ನು ಒಪ್ಪುತ್ತೀರಿ? ನಿಮ್ಮ ಅಭಿಪ್ರಾಯವೇನು? ಮತ-ಧರ್ಮದ ಹೆಸರು ಬಂದಾಗಲೂ ಇದೇ ಆಧಾರದಲ್ಲಿ ಅರ್ಥಮಾಡಿಕೊಳ್ಳಬೇಕು. ಮತ ಎಂದೊಡನೆ ಅದಕ್ಕೊಬ್ಬ ಸ್ಥಾಪಕ/ಪ್ರವಾದಿ.          [ ಪ್ರವಾದಿ ಎಂದರೆ   ವಿಶೇಷ ವಾಗಿ ವಿಚಾರ ಮಂಡಿಸುವವನು] ಅದಕ್ಕೊಂದು ಆಧಾರ ಗ್ರಂಥ.
ಹೀಗೆ  ವಿಚಾರ ಮಾಡುವಾಗ ನಮ್ಮ ಮುಂದೆ ಕ್ರೈಸ್ತ, ಇಸ್ಲಾಮ್, ಜೈನ, ಬೌದ್ಧ.......ಹೀಗೆ ಹಲವು ಮತಗಳು ಕಣ್ಣೆದುರು ಬರುತ್ತ್ತವೆ. ಕ್ರೈಸ್ತ ಮತದ ಪ್ರವಾದಿ ಏಸೂಕ್ರಿಸ್ತ, ಆಧಾರ ಗ್ರಂಥ ಬೈಬಲ್,ಅನುಯಾಯಿಗಳು ಕ್ರೈಸ್ತರು,  ಇಸ್ಲಾಮ್ ಸ್ಥಾಪಕ/ಪ್ರವಾದಿ ಮೊಹಮದ್ ಪೈಗಂಬರ್.ಆಧಾರಗ್ರಂಥ ಖುರಾನ್. ಅನುಯಾಯಿಗಳು ಮುಸಲ್ಮಾನರು. ಹೀಗೆಯೇ ಜೈನರು, ಬೌದ್ಧರು, ಸಿಕ್ಖರು.....ಮುಂತಾದ ಉಧಾಹರಣೆಗಳು ಬರುತ್ತವೆ. 
 ಆದರೆ ಹಿಂದು ಹೆಸರು ಬಂದಾಗ ಇದು ಮತವೇ? ಇದರ ಸ್ಥಾಪಕರಾರು? ಇದರ ಧರ್ಮಗ್ರಂಥ ಯಾವುದು? ಎಂದು ವಿಚಾರ ಮಾಡಿದಾಗ  ಒಬ್ಬ ಪ್ರವಾದಿಗೆ ,ಒಂದು  ಮತಗ್ರಂಥಕ್ಕೆ ಇದು ಸೀಮಿತವಾಗುವುದಿಲ್ಲ. ಹಾಗಾಗಿ ಇದು ಒಂದು ಮತವೇ ಅಲ್ಲ   , ನಿಜವಾದ ಮತವೆಂದರೆ ಕ್ರೈಸ್ತ, ಇಸ್ಲಾಮ್ ಉಳಿದವರೇನಿದ್ದರೂ ನೂರಾರು ಜಾತಿಗಳಲ್ಲಿ ಹಂಚಿಹೋಗಿರುವವರು ಎಂದು ವಾದ ಮಾಡುವ ಜನರಿದ್ದಾರೆ. 
ಹಾಗಾದರೆ   " ಹಿಂದು "  ಎಂದರೇನು? 
ಹಿಂದು ಎಂಬುದು ಈ ದೇಶದ ಹೆಸರು, ಇಲ್ಲಿನ ಸಂಸ್ಕೃತಿಯ ಹೆಸರು, ಇಲ್ಲಿನ ಪರಂಪರೆಯ ಹೆಸರು. ಇಲ್ಲಿನ ಧರ್ಮದ ಹೆಸರು. ಧರ್ಮ ಎಂದೊಡನೆ ವಿಚಲಿತರಾಗುವ ಅಗತ್ಯವಿಲ್ಲ. ಧರ್ಮ ಎಂದರೆ ಜೀವನ ಪದ್ದತಿ. ಮಾನವೀಯ ಮೌಲ್ಯಗಳನ್ನು ಧರಿಸಿಕೊಂಡು ನಡೆಸುವ ಜೀವನ ಪದ್ದತಿ ಯೇ ಧರ್ಮ. ಆದರೆ ದುರ್ದೈವ ವೆಂದರೆ ಧರ್ಮದ ಹೆಸರಲ್ಲಿ ಈ ದೇಶದಲ್ಲಿ ಸಂಘರ್ಷ ನಡೆಯುತ್ತದೆ. 
ಸಾವಿರಾರು ಋಷಿಮುನಿಗಳು ತಪಸ್ಸನ್ನು ಮಾಡಿ ಕಂಡುಕೊಂಡ ಜೀವನ ಮಾರ್ಗವೇ ಧರ್ಮ. ಯಾಕೆ ಇದನ್ನು ಹಿಂದು ಧರ್ಮವೆಂದು ಕರೆದರು? ಯಾಕಾಗಿ ಇದನ್ನು ಹಿಂದು ದೇಶವೆಂದು ಕರೆದರು?
ಆಧಾರ ವಿದೆ.......
ಬೃಹಸ್ಪತಿ ಆಗಮದಂತೆ  ಹಿಮಾಲಯ ಪದದ “ಹಿ” ಮತ್ತು ಇಂದು ಸರೋವರದ  “ಇಂದು” ಪದಗಳೆ ಸೇರಿ “ಹಿಂದು” ಆಗಿದೆ. ಇವೆರಡೂ ಕೂಡಿ ನಮ್ಮ ಮಾತೃಭೂಮಿಯ ವಿಸ್ತಾರವನ್ನು ಹೇಳುತ್ತದೆ.
ಹಿಮಾಲಯಮ್ ಸಮಾರ್ಭ್ಯ ಯಾವದಿಂ ದು   ಸರೋವರಮ್
ತಮ್ ದೇವ ನಿರ್ಮಿತಮ್ ದೇಶಂ ಹಿಂದುಸ್ಥಾನಮ್ ಪ್ರಚಕ್ಷತೇ||

ಅಂದರೆ ದೇವತೆಗಳಿಂದ ನಿರ್ಮಿತಿಗೊಂಡು ಉತ್ತರದ ಹಿಮಾಲಯದಿಂದ ದಕ್ಷಿಣದ  ಹಿಂದು ಮಹಾಸಾಗರದ ವರಗೆ ಪಸರಿಸಿರುವ ಈ ನಾಡನ್ನು ಹಿಂದುಸ್ಥಾನ ಎಂದು ಕರೆಯುತ್ತಾರೆ.
ಅಂದರೆ ಈ ದೇಶದ ಹೆಸರು “ಹಿಂದುಸ್ಥಾನ”. ಇಲ್ಲಿರುವವರು “ಹಿಂದುಗಳು” .ಅಷ್ಟೆ. very simple. ಆದರೆ  “ಹಿಂದು” ಎಂಬ ಶಬ್ಧಕ್ಕೆ  ಯಾಕೆ ಇಷ್ಟು ಸಂಘರ್ಷ? ನಮ್ಮ ಒಬ್ಬ ನಾಯಕರಂತೂ ಹೇಳಿಯೇ ಬಿಟ್ಟರು “ ನನ್ನನ್ನು    ಕತ್ತೆ ಎಂದು ಬೇಕಾದರೂ ಕರೆಯಿರಿ, ನನ್ನನ್ನು “ಹಿಂದು” ಎಂದು ಮಾತ್ರ ಕರೆಯಬೇಡಿ. ಅವರನ್ನು ಕತ್ತೆ ಎಂದೇ ಜನರುಬೇಕಾದರೆ ಕರೆದುಕೊಳ್ಳಲಿ. ನಮ್ಮ ಮತ್ತೊಬ್ಬ ನಾಯಕರು ಹೇಳಿದ್ದರು “ Un fortunately I took birt as Hindu” ನಮ್ಮ ಧರ್ಮ ಶಾಸ್ತ್ರಗಳು ಹೇಳುತ್ತವೆ “ “ಇದು ದೇವ ನಿರ್ಮಿತ ದೇಶ-ಹಿಂದುಸ್ಥಾನ”  ಆದರೆ ನಮ್ಮ ನಾಯಕ ಶಿರೋಮಣಿ ಇಲ್ಲಿ ದುರ್ದೈವದಿಂದ ಹುಟ್ಟಿದರಂತೆ.
ಅಂದರೆ ರಾಜಕಾರಣಿಗಳು “ಎಲ್ಲಿ ಮುಸ್ಲಿಮ್ ಮತಗಳು ತಮಗೆ ಬರುವುದಿಲ್ಲವೋ ಎಂದು ಹೆದರಿ ಮುಸಲ್ಮಾನರನ್ನು ಓಲೈಸಲು “ ನಾನು ಹಿಂದುವೇ ಅಲ್ಲ, ನಾನು ಹಿಂದುವಾಗಿರುವುದು ನನ್ನ ದುರ್ದೈವ” ಎನ್ನುವ  ಇವರನ್ನು  ಮುಸಲ್ಮಾನರೂ ನಂಬುವುದಿಲ್ಲವೆಂಬ ಸತ್ಯ ಇವರಿಗೆ ಗೊತ್ತಿಲ್ಲ. “ ನಮ್ಮ ಓಟಿಗಾಗಿ ತಮ್ಮವರನ್ನೇ ಹೀಯಾಳಿಸುವ ಇವನನ್ನು ಗೆಲ್ಲಿಸಿದರೆ  ನಮಗೆ ಒಳ್ಳೆಯದು ಮಾಡುತ್ತಾನೆಂಬ ನಂಬಿಕೆ ಏನು? ಎಂದು ಮುಸಲ್ಮಾನರೂ ಇವನನ್ನು ದೂರವಿಡುವ ಕಾಲ ದೂರವಿಲ್ಲ.
ಓಟಿನ ರಾಜಕಾರಣ ಬದಿಗಿರಲಿ. ಆದರೆ “ನಾನು ಹಿಂದು” ಎನ್ನಲು ನಾಚಿಕೆ ಪಡಬೇಕೇ?
ಈ ವಿಷಯವನ್ನು  ಭಾರತೀಯರೆಲ್ಲರೂ ಗಟ್ಟಿಮಾಡಿಕೊಳ್ಳ  ಬೇಕು.  ಈ ದೇಶದಲ್ಲಿ ಹುಟ್ಟಿರುವ ನಾನು ಮೊದಲು “ಹಿಂದು” ಅಂದರೆ ಹಿಂದುಸ್ಥಾನದ ಪ್ರಜೆ. ಭಾರತೀಯನೆಂದರೂ ತಪ್ಪಿಲ್ಲ. ನಾವೇಕೆ ಭಾರತೀಯರೆಂದು ಕರೆಯಲ್ಪಡುತ್ತೇವೆಂಬುದಕ್ಕೆ  ಇಲ್ಲಿ ನೋಡಿ

ಉತ್ತರಮ್ ಯತ್ಸಮುದ್ರಸ್ಯ  ಹಿಮಾದ್ರೇಶ್ಚೈವ ದಕ್ಷಿಣಮ್
ವರ್ಷಮ್ ತದ್ ಭಾರತಮ್ ನಾಮ ಭಾರತೀ ಯತ್ರ ಸಂತತಿ:

ಸಾಗರದಿಂದ ಉತ್ತರಕ್ಕೆ ಹಿಮಾಲಯದಿಂದ ದಕ್ಷಿಣಕ್ಕೆ ಇರುವ ಭೂಮಿಗೆ ಭಾರತ ಎಂದು ಕರೆಯುತ್ತೇವೆ. ಭಾರತದಲ್ಲಿ ವಾಸಿಸುವವರು ಭಾರತೀಯರು. ಅಷ್ಟೆ.  ಹಿಂದುಸ್ಥಾನವೆಂದರೆ ಭಾರತ ,ಹಿಂದು ಎಂದರೆ ಭಾರತೀಯ. ಅಷ್ಟೆ. very simple.

ಹೀಗೆ ಋಷಿ ಮುನಿಗಳ   ತಪಸ್ಸಿನಿಂದ ದತ್ತವಾದ ಹಿಂದು ಧರ್ಮ ಏನು ಹೇಳುತ್ತದೆ....

"ಏಕಂ ಸತ್ ವಿಪ್ರಾ: ಬಹುದಾ ವದಂತಿ"

ಸತ್ಯ ಎಂಬುದು ಒಂದೇ, ಅದನ್ನು ಪಂಡಿತರು ಬೇರೆ ಬೇರೆ ರೀತಿಯಲ್ಲಿ ಹೇಳುತ್ತಾರೆ. ಬಹಳ ಸರಳವಾದ ಮಾತಿದು. ಅದರರ್ಥ ಭಗವಂತನೆಂಬುವನು ಒಬ್ಬನೇ. ಅವನನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುವರು."ದೇವನೊಬ್ಬ ನಾಮ ಹಲವು" ಎಂದರೂ ಇದೇ ಅರ್ಥ ತಾನೇ.
 ನಮ್ಮ ಋಷಿ ಮುನಿಗಳು ಕಂಡುಕೊಂಡ   ಸತ್ಯವಿದು.  ದೇವರನ್ನು ಯಾವ ಹೆಸರಿಂದಲಾದರೂ ಕರೆಯಿರಿ. ಅವನನ್ನು ಬ್ರಹ್ಮ, ವಿಷ್ಣು, ಮಹೇಶ್ವರ ನೆನ್ನಿ. ಕ್ರಿಸ್ತನೆನ್ನಿ. ಕೃಷ್ಣನೆನ್ನಿ. ಅಲ್ಲಾ ಎನ್ನಿ,...ಮಾರಮ್ಮನೆನ್ನಿ ಯಾವ ಹೆಸರಿನಲ್ಲಾದರೂ ಕರೆಯಿರಿ  "ಏಕಂ ಸತ್" .ಸತ್ಯ ಮಾತ್ರ ಒಂದೇ. ಆ ಭಗವಂತ ಮಾತ್ರ ಒಬ್ಬನೇ. ಇದು ಹಿಂದುಧರ್ಮದ  ವೈಶಿಷ್ಠ್ಯ. 
ನನ್ನನ್ನು ನಂಬು, ನನ್ನಿಂದ ಮಾತ್ರವೇ ಮೋಕ್ಷ, ಎಂಬ ವಿಚಾರಕ್ಕೆ ಹಿಂದು ಧರ್ಮದಲ್ಲಿ ಆಸ್ಪದವೇ ಇಲ್ಲ.  ವೇದವು ಕರೆ ಕೊಡುತ್ತದೆ......

ಯತ್ ಪೂರ್ವ್ಯಂ  ಮರುತೋ ಯಚ್ಚ ನೂತನಂ ಯದುದ್ಯತೇ  ವಸವೋ ಯಚ್ಚ ಶಸ್ಯತೇ|
ವಿಶ್ವಸ್ಯ ತಸ್ಯ ಭವಥಾ ನವೇದಸ: ಶುಭಂ ಯಾತಾಮನು ರಥಾ ಅವೃತ್ಸತಾ|| 
ಮನುಷ್ಯನು ಸುಖವಾಗಿ ನೆಮ್ಮದಿಯಿಂದ ಸುಂದರ ಬದುಕನ್ನು ಹೊಂದಬೇಕಾದರೆ ಯಾವ ಮಾರ್ಗದಲ್ಲಿ ಹೋಗಬೇಕೆಂಬುದನ್ನು ಈ ವೇದಮಂತ್ರವು ಅತ್ಯಂತ ಮನೋಜ್ಞವಾಗಿ ತಿಳಿಸಿಕೊಡುತ್ತದೆ. ಮಂತ್ರದ ಭಾವಾರ್ಥ ನೋಡಿ… 
ಹೇ ಮನುಜರೇ, ನಿಮ್ಮ ಬದುಕು ಹೇಗೆ ಸಾಗಿದರೆ ಸುಂದರವಾಗಬಲ್ಲದೆಂಬುದಕ್ಕೆ ಈ ಕೆಲವು ವಿಚಾರಗಳನ್ನು ಗಮನವಿಟ್ಟು ಕೇಳಿ….
ಯಾವುದು ಪ್ರಾಚೀನವೋ ಮತ್ತು ಯಾವುದು ನೂತನವೋ?, ಯಾವುದು  ನಿಮ್ಮ ಅಂತ:ಕರಣದಿಂದ ಉದ್ಭವಿಸುವುದೋ, ಹಾಗೂ   ಯಾವುದು ಶಾಸ್ತ್ರರೂಪದಲ್ಲಿ ಉಪದೇಶಿಸಲ್ಪಡುತ್ತದೋ ಎಲ್ಲಕ್ಕೂ ಕಿವಿಗೊಡು….ಆದರೆ ಯಾವುದು ನಿಮ್ಮನ್ನು ಕಲ್ಯಾಣಮಾರ್ಗದಲ್ಲಿ ನಡೆಸುತ್ತದೋ ಅದರ ಹಿಂದೆ ನಿಮ್ಮ ಜೀವನ ರಥಗಳು ಸಾಗಲಿ…..
ವೇದದ ಈ ಕರೆ ಯಾರಿಗೆ ಬೇಡ ?  ಯಾವ ಕಾಲಕ್ಕೆ ಬೇಡ ?  ಯಾವ ದೇಶಕ್ಕೆ ಬೇಡ? .. ಯಾವುದೇ ಮತ ಗ್ರಂಥಗಳು ಕೊಡುವ ಕರೆಗೂ ವೇದದ ಕರೆಗೂ ತುಲನೆ ಮಾಡುವುದು ಕಷ್ಟವೇನಲ್ಲಾ! ಅಲ್ಲವೇ?  ಈ ಮಾರ್ಗದಲ್ಲಿ ಹೋದರೆ ಮಾತ್ರ ನಿನಗೆ ಮುಕ್ತಿ!! ಎಂದು ವೇದವು ಕರೆ ಕೊಡಲಿಲ್ಲವೆಂಬುದನ್ನು ವಿಚಾರವಂತರು ಗಮನಿಸಬೇಕು. ಅಲ್ಲವೇ?
 ವೇದವನ್ನಾಗಲೀ ಇತರ ಯಾವುದೇ ಪ್ರಾಚೀನ ಗ್ರಂಥವನ್ನಾಗಲೀ ನೋಡಿದಾಗ  ಇಡೀ ವಿಶ್ವದ ಜನರು ಒಂದೇ ಕುಟುಂಬದವರು ಎಂದು ಸಾರುತ್ತದೆ. " ಸರ್ವೇ ಭದ್ರಾಣಿ ಪಶ್ಯಂತು ,ಮಾ ಕಷ್ಚಿತ್ ದು:ಖ ಭಾಗ್ಭವೇತ್" ಎಂದು ಕರೆಕೊಡುವ ಮಂತ್ರಗಳಲ್ಲಿನ ಅರ್ಥ ಬಲು ವಿಶಾಲ ಮನೋಭಾವನೆ ಹೊಂದಿದೆ.

“ಹಿಂದು” ಮತವಾಗಿದ್ದು ಯಾವಾಗ?

ನಾನು ಮುಂಚೆಯೇ ತಿಳಿಸಿದಂತೆ  ಹಿಂದು ಎನ್ನುವುದು  ನಮ್ಮ ರಾಷ್ಟ್ರೀಯತೆಯ ಹೆಸರು. ಈ ರಾಷ್ಟ್ರದ ಹೆಸರು. ಹಿಂದುಸ್ಥಾನದಲ್ಲಿ ಹುಟ್ಟಿದವ ಹಿಂದು ಅಷ್ಟೆ.  ಹಾಗಾದರೆ ಇಲ್ಲಿ ಮುಸಲ್ಮಾನರು, ಕ್ರೈಸ್ತರು, ಸಿಕ್ಖರು, ಭೌದ್ಧರು ಮುಂತಾದವರು ಈ ದೇಶದಲ್ಲಿ ಹುಟ್ಟಿಲ್ಲವೇ? ಅವರೆಲ್ಲಾ ಹಿಂದುಗಳೇ?
ಹೌದು , ಮೊದಲು ಎಲ್ಲರೂ ಹಿಂದುವೇ, ಆನಂತರ  ಅವರವರ ಮತವನ್ನು ಹೇಳಿಕೊಳ್ಳುವುದರಲ್ಲಿ ತಪ್ಪಿಲ್ಲ. “ನಾನು ಹಿಂದು” ನನ್ನ ಪೂಜಾಪದ್ದತಿಯಂತೆ ನಾನು ಕ್ರೈಸ್ತ, ನಾನು ಮುಸ್ಲಿಮ್……ಯಾರು ಬೇಡವೆಂದವರು. “ಏಕಂ ಸತ್, ವಿಪ್ರಾ ಬಹುದಾ ವದಂತಿ” ಎಂದು ತಾನೇ ನಮ್ಮ ಋಷಿಮುನಿಗಳು ಹೇಳಿರುವುದು. ಯಾರೇ ಆಗಲೀ ನಾನು  ಕ್ರೈಸ್ತ ಮತೀಯ, ನಾನು ಮುಸ್ಲಿಮ್ ,ಎಂದು ಹೇಳಿಕೊಳ್ಳುವುದರಲ್ಲಿ ತಪ್ಪಿಲ್ಲ. ಅದು ಅವರ ಪೂಜಾ ಪದ್ದತಿ. “ದೇವನೊಬ್ಬ ನಾಮ ಹಲವು, ಅಷ್ಟೆ. ಕೃಷ್ಣನೆನ್ನುವರು ಕೃಷ್ಣ ನೆನ್ನಲಿ, ಕ್ರಿಸ್ತ ನೆನ್ನುವರು ಕ್ರಿಸ್ತ ಎನ್ನಲಿ. ಆದರೆ ಎಲ್ಲರೂ ಭಾರತೀಯ ಎನ್ನಬಹುದು ಅಥವಾ ಹಿಂದು ಎನ್ನಬಹುದು. ಎರಡೂ ಅಷ್ಟೇ ಸಮಾನ ಪದಗಳು.
ಸಾಮಾನ್ಯವಾಗಿ  ಪೂರ್ವದಿಂದಲೂ ನಮ್ಮನ್ನು ಆರ್ಯರು, ಸನಾತನಿಗಳು, ವೈದಿಕರು ಎನ್ನುವ ರೂಢಿ   ಯಿತ್ತು. ಆರ್ಯ ಎಂದರೆ ಶ್ರೇಷ್ಠ ಎಂದು ಅರ್ಥ ಅಷ್ಟೆ. ದೇವನಿರ್ಮಿತ ದೇಶದಲ್ಲಿರುವವರೆಲ್ಲರೂ ಆರ್ಯರೇ ಹೌದು. ನಮ್ಮದು ಅತ್ಯಂತ ಪುರಾತನವಾದ  ಸಂಸ್ಕತಿಯಾದ್ದರಿಂದ “ಸನಾತನಿ” ಎನ್ನುವ ಹೆಸರು ಬಂತು.ವೇದವನ್ನು ನಂಬುವವರಾದ್ದರಿಂದ ವೈದಿಕರೆಂದೂ ಕರೆಯುತ್ತಾರೆ.
ಸರಿ, ಹಾಗಾದರೆ ಹಿಂದು ಮತವಾಗಿದ್ದು, ಯಾವಾಗ?
ಯಾವಾಗ  ಕ್ರೈಸ್ತರು,  ಮುಸ್ಲ್ಮಾನರು, ತಮ್ಮ ತಮ್ಮ ಮತಗಳಿಗೆ ಇಲ್ಲಿನ ಸನಾತನಿಗಳನ್ನು ಮತಾಂತರ ಮಾಡುತ್ತಾ ಹೋದರು, ಆಗ ಅನಿವಾರ್ಯವಾಗಿ ತಮ್ಮನ್ನು ತಾವು “ಹಿಂದು ಮತೀಯ ” ಎಂಬ ಮತದ ಹೆಸರಲ್ಲಿ ಸಂಘಟಿತರಾಗುತ್ತಾ ಹೋದರು. ಆದರೆ ಇಂದು “ಹಿಂದು” ಎಂಬುದು ರಾಷ್ಟ್ರವಾಚಕವಾಗುವುದರ ಬದಲು  ಮತದ ಹೆಸರಲ್ಲಿ ಹೆಚ್ಚು ಉಪಯೋಗವಾಗುತ್ತಿದೆ.
ಆದರೆ ಈ ದೇಶದಲ್ಲಿಹುಟ್ಟಿರುವ ಎಲ್ಲರೂ ಕೂಡ ಅವರ ಪೂಜಾ ಪದ್ದತಿ ಯಾವುದೇ ಇರಲಿ, ತಮ್ಮನ್ನು ತಾವು  ರಾಷ್ಟ್ರವಾಚಕವಾದ “ಹಿಂದು” ಎಂದು ಕರೆದುಕೊಳ್ಳುವುದರಲ್ಲಿ ಹೆಮ್ಮೆ ಪಡಬೇಕು. ಕಾರಣ ಅಂಥಹ ದೇವನಿರ್ಮಿತ ದೇಶದಲ್ಲಿ ನಮ್ಮ ಜನ್ಮ ವಾಗಿದೆ.  ಇಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. 

10 comments:

  1. ಹಿಂದೂ ಶಬ್ಧವು ವೇದ, ಉಪನಿಷತ್, ಮಹಾಭಾರತ, ರಾಮಾಯಣ, ಪುರಾಣಗಳಲಿಲ್ಲ. ವೇದಗಳನಂತರ ಬಂದದ್ದು ಮನುಸ್ಮ್ರತಿ. ಇದರಲ್ಲೂ ಸಹ ಹಿಂದೂ ಶಬ್ಧವಿಲ್ಲ. ಮನುಸ್ಮೃತಿಯಲ್ಲಿ ಇರುವಂತೆ ಕಂಡು ಬರುವ ಶ್ಲೋಕ ಪೂರ್ಣ ಪ್ರಕ್ಷಿಪ್ತ, ಸ್ವಾಮಿ ಕಾಳಿದಾಸದ ನಾಟಕಗಳಲ್ಲೂ ಇಂತಹ ಪದವಿಲ್ಲ. ನಮ್ಮ ಶಂಕರಾಚಾರ್ಯರು ತಾವು ಹಿಂದುಗಳು ಎಂದು ತಿಳಿಯುವುದಿಲ್ಲ. ನಾವು ಸನಾತನಿಗಳೆಂದೇ ಹೇಳುತ್ತಾರೆ. ಸ್ವರ್ಗೀಯ ಸುದರ್ಶನರವರು ವೇದಗಳಲ್ಲಿ ಈ ಪದ ಕಂಡು ಬರುವುದಿಲ್ಲವೆಂದು ಒಪ್ಪಿಕೊಂಡಿದ್ದಾರೆ. ಸ್ವಾಮಿ ದಯಾನಂದರು ಹಿಂದೂ ಪದ ಪ್ರಯೋಗಕ್ಕೆ ವಿರೋಧವಿತ್ತೆಂಬ ಅಂಶವನ್ನು ನಿಮ್ಮ ಗಮನಕ್ಕೆ ತರಲು ಬಯುಸುತ್ತೇನೆ.

    ReplyDelete
  2. ಹಿಂದೂ ಶಬ್ಧವು ವೇದ, ಉಪನಿಷತ್, ಮಹಾಭಾರತ, ರಾಮಾಯಣ, ಪುರಾಣಗಳಲಿಲ್ಲ. ವೇದಗಳನಂತರ ಬಂದದ್ದು ಮನುಸ್ಮ್ರತಿ. ಇದರಲ್ಲೂ ಸಹ ಹಿಂದೂ ಶಬ್ಧವಿಲ್ಲ. ಮನುಸ್ಮೃತಿಯಲ್ಲಿ ಇರುವಂತೆ ಕಂಡು ಬರುವ ಶ್ಲೋಕ ಪೂರ್ಣ ಪ್ರಕ್ಷಿಪ್ತ, ಸ್ವಾಮಿ ಕಾಳಿದಾಸದ ನಾಟಕಗಳಲ್ಲೂ ಇಂತಹ ಪದವಿಲ್ಲ. ನಮ್ಮ ಶಂಕರಾಚಾರ್ಯರು ತಾವು ಹಿಂದುಗಳು ಎಂದು ತಿಳಿಯುವುದಿಲ್ಲ. ನಾವು ಸನಾತನಿಗಳೆಂದೇ ಹೇಳುತ್ತಾರೆ. ಸ್ವರ್ಗೀಯ ಸುದರ್ಶನರವರು ವೇದಗಳಲ್ಲಿ ಈ ಪದ ಕಂಡು ಬರುವುದಿಲ್ಲವೆಂದು ಒಪ್ಪಿಕೊಂಡಿದ್ದಾರೆ. ಸ್ವಾಮಿ ದಯಾನಂದರು ಹಿಂದೂ ಪದ ಪ್ರಯೋಗಕ್ಕೆ ವಿರೋಧವಿತ್ತೆಂಬ ಅಂಶವನ್ನು ನಿಮ್ಮ ಗಮನಕ್ಕೆ ತರಲು ಬಯುಸುತ್ತೇನೆ.

    ReplyDelete
  3. ಇದರ ಅರಿವಿದ್ದೇ ಬರೆದಿರುವೆ. "ಹಿಂದು" ಹೆಸರಿನ ಬಗ್ಗೆ ಪೂರ್ವಾಗ್ರಹ ಬಿಡುವುದು ಇಂದಿನ ಅವಶ್ಯಕತೆಯಾಗಿದೆ.ಹಿಂದು ಪದವನ್ನು ಕೇವಲ ಮತೀಯವಾಗಿ ಉಪಯೋಗಿಸದೆ ನಮ್ಮ ರಾಷ್ಟ್ರವಾಚಕವಾಗಿ ಉಪಯೋಗವಾದರೆ ಮುಂದೆ ವೇದದ ಆಶಯ ಈಡೇರುವುದರಲ್ಲಿ ಸಂದೇಹ ವಿಲ್ಲ.ಇಂಡಿಯ ಎಂದು ನಮ್ಮ ದೇಶಕ್ಕೆ ಕರೆಯುವುದು, ಹಿಂದು ಪದವನ್ನು ಕೇವಲ ಮತವೆಂದು ಭ್ರಮಿಸುವುದು, ಈ ದೇಶದಲ್ಲಿದ್ದು ನಾವು ಭಾರತೀಯರು ಅಥವಾ ಹಿಂದು ಎಂದು ಕರೆಯಲು ನಾಚುವುದು, ಇವೆಲ್ಲಕ್ಕಿಂತ ಈ ದೇಶದಲ್ಲಿರುವವರೆಲ್ಲಾ ಗಟ್ಟಿಯಾಗಿ ನಾವು " ಹಿಂದು" ಎಂದರೂ ಸರಿಯೆ ಅಥವಾ ನಾವು ಭಾರತೀಯರು ಎಂದರೂ ಸರಿಯೇ, ಆಗ ಒಂದು ರಾಷ್ಟ್ರಭಕ್ತಿ ಜಾಗೃತವಾಗುವುದಿಲ್ಲವೇ? ಸನಾತನೀ, ಎಂದೋ, ಆರ್ಯ ಎಂದೋ ಕರೆಯುವ ಸ್ಥಿತಿಯಲ್ಲಿ ಈಗ ನಮ್ಮ ದೇಶವಿದೆ ಎನ್ನುವಿರಾ?

    ReplyDelete
  4. "ನಾವು ಗುಣ ಭ್ರಷ್ಟರಾಗಿರಬಹುದು. ಆದರೆ ನಾಮ ಭ್ರಷ್ಟರಾಗುವುದಾದರೂ ಏತಕ್ಕೆ"? ಇದು ಹಿಂದೆ ನಿಮ್ಮ ತರಹೆ ನೀಡಿದ ವಾದಕ್ಕೆ ಸ್ವಾಮೀ ದಯಾನಂದರು ನೀಡಿದ್ದ ಉತ್ತರ. ನಿಜ ನಾವು ಕೇವಲ ರಾಷ್ಟ್ರಭಕ್ತರಾದರೆ ಸಾಲದು. ನೀತಿವಂತರೂ, ಚಾರಿತ್ರ್ಯವಂತರೂ ಆಗಿರುವುದು ಅಗತ್ಯ. ಈ ಹಿನ್ನೆಲೆಯಲ್ಲಿ ಹಿಂದೂ ಪದಕ್ಕೆ ಯಾವುದೇ ಅರ್ಥವಿಲ್ಲ. ಅದು ಸಂಸ್ಕೃತ ಪದವೂ ಅಲ್ಲ. ಈ ಬಗ್ಗೆ ಸಂದೇಹವಿದ್ದಲ್ಲಿ ಮಾನ್ಯ ಶರ್ಮರವರನ್ನು ಕೇಳಿ, "ಋ ಗತೌ " ಎಂಬ ಮೂಲ ಧಾತುವಿನಿಂದ ಆರ್ಯ ಪದ ಹೊರಟಿದೆ. ಇದರ ಅರ್ಥ ಪ್ರಗತಿಶೀಲ ಎಂದರ್ಥ. ನನಗೆ ಗೊತ್ತಿರುವಂತೆ ವೇದಗಳಲ್ಲಿ 60 ಕ್ಕೂ ಹೆಚ್ಚಿನ ಕಡೆ ಆರ್ಯ ಶಬ್ಧದ ಪ್ರಸ್ತಾವವಾಗಿದೆ. ಎಲ್ಲ ಕಡೆಯೂ ಇದರ ಅರ್ಥ ಶ್ರೇಷ್ಠತೆಯ ಕಡೆ ಸಂಕೇತ ಮಾಡುತ್ತದೆ. ಹಿಂದೂಪದಕ್ಕೆ ಈ ಸಾಮರ್ಥ್ಯವಿಲ್ಲ. ಬರುವುದೂ ಸಾಧ್ಯವಿಲ್ಲ.'ಕೇವಲ ಮುಸ್ಲಿಂ ರಾಜ್ಯಬಾರ ಬಂದಮೇಲೆ ಹಿಂದೂ ಪದ ಜಾಲ್ತಿಯಲ್ಲಿದೆಯಷ್ಟೆ. ನಮ್ಮ ಪಕ್ಕದ ದೇಶವಾದ ಶ್ರೀಲಂಕಾ ಇತ್ತೀಚಿನವರೆಗೆ ಸಿಲೋನ್ ಎಂದು ಕರೆಯಲ್ಪಡುತ್ತಿತ್ತು. ಆದರೆ ಜಯವರ್ದನೆ ಬಂದಮೇಲೆ ಅದರ ಹೆಸರನ್ನು ಶ್ರೀಲಂಕಾ ಎಂದು ಬದಲಿಸಲಾಯಿತು. ಬ್ರಹ್ಮದೇಶ ಮೈನ್ಮಾರ್ ಆಗಿ ಪರಿವರ್ತನೆ ಗೊಂಡಿದೆ. ನಮ್ಮ ರಾಜ್ಯಾಂಗದಲ್ಲಿ ಸಂಸ್ಕೃತ ನಿಷ್ಠ ಪದಗಳನ್ನೆ ಉಪಯೋಗಿಸಬೇಕೆಂಬ ಆಜ್ಷೆಯಿದೆ, ಹೀಗಿರುವಾಗ ನಮಗೆ ಸಂಸ್ಕೃತವಲ್ಲದ ಪದದ ಉಪಯೋಗ ಹೇಗೆ ಸಮರ್ಥನೀಯ? ಮತ್ತೊಂದು ವಿಷಯ. ಭಾರತಕ್ಕೆ ಹಿಂದೂಸ್ಥಾನ ಎಂದು ನಮ್ಮ ರಾಜ್ಯಾಂಗ ಕರೆದಿಲ್ಲ. ಕಾರಣ ನಮ್ಮ ದೇಶದ ಹೆಸರು ಹಿಂದೂಸ್ಥಾನವಲ್ಲ. ಹಾಗಾಗಿ ನಮ್ಮ ಹೆಸರು ಹಿಂದೂ ಆಗುವುದು ಸಾಧ್ಯವಿಲ್ಲ.
    ಸಾವಿರಾರು ವರ್ಷಗಳಿಂದ ನಿರಾಶ್ರಿತರಾಗಿ ತಮ್ಮ ಅಸ್ತಿತ್ವವನ್ನೇ ಮರೆತಿದ್ದ ಯೆಹೂದಿಗಳು ತಮಗೆ ಇಸ್ರೆಲ್ ದೊರತ ಕೂಡಲೆ, ತಮ್ಮ ಭಾಷೆಯನ್ನು ಪುನರಜ್ಜೀವನ ಗೊಳಿಸಿದರು. ಇದು ಹೇಗೆ ಸಾಧ್ಯವಾಯಿತು?
    ಹಿಂದೂ ಪದಕ್ಕೆ ನಮ್ಮ ದೇಶದವರೆ ಆದ, ಭೌದ್ದರು, ಸಿಕ್ಕರು, ಜೈನರು ಮುಂತಾದವರ ವಿರೋಧವಿದೆ. ಇದಕ್ಕೆ ಕಾರಣವೇನು? ಸ್ವಲ್ಪ ಆಲೋಚಿಸಿ. ಆದರೆ ಆರ್ಯ ಶಬ್ಧಕ್ಕೆ ಅವರ ವಿರೋಧವಿಲ್ಲ.
    ಇಷ್ಟೆಲ್ಲಾ ಆದರೂ ಹಿಂದೂ ಪದವನ್ನು ಬಿಡಲು ಸಂಘ ಪರಿವಾರ ತಯಾರಿಲ್ಲ ಎನ್ನುವುದು ನನ್ನ ತಿಳುವಳಿಕೆ. ಸ್ವಾಮಿ ದಯಾನಂದರನ್ನು ರಾಷ್ಟ್ರ-ನಿರ್ದೇಶಕ ಮತ್ತು ಅವರು ಪ್ರತಿಪಾದಿಸಿದ ಶುದ್ಧಿ ಮತ್ತು ಸಂಗಠನೆಯನ್ನೂ ಪೂರ್ಣತಃ ಒಪ್ಪಿಯೂ ವೀರ ಸಾವರ್ಕರ್ ಹಿಂದೂ ಪದಕ್ಕೆ ಅಂಟಿಕೊಂಡಿದ್ದರು. ಇದು ಶಿವಾಜಿಯ ಹಿಂದವೀ ಸ್ವರಾಜ್ ದ ಪ್ರಭಾವ.

    ReplyDelete
  5. ವಾಸುದೇವ ರಾಯರೇ,
    ನಾನು ವಾಸ್ತವ ವಾದಿ. ಆರ್.ಎಸ್.ಎಸ್. 1925 ರಲ್ಲಿ ಹುಟ್ಟಿದ್ದು ಎಂಬ ಅರುವು ನಿಮಗಿದೆ. ಅಲ್ಲಿಂದ ಇಲ್ಲಿಯವರಗೆ ಅದರ ಸಾಧನೆ ಗಮನಿಸಿ.ಆರ್ಯ ಸಮಾಜ ಯಾವಾಗ ಹುಟ್ಟಿದ್ದು ಎಂಬ ಅರಿವೂ ಕೂಡ ನಿಮಗಿದೆ. ಅದು ಯಾಕೆ ಸಾಮಾನ್ಯ ಜನರನ್ನು ಮುಟ್ಟಲಿಲ್ಲ? ವೇದದ ಬಗ್ಗೆ ನನ್ನದು ಎರಡುಮಾತಿಲ್ಲ. ಆದರೆ ವಾಸ್ತವ ಅಂಶಗಳನ್ನೂ ಗಮನಿಸಿ ಜನ ಜಾಗೃತಿಯಾಗಬೇಕು.ಈ ಬಗ್ಗೆ ಸುಧಾಕರಶರ್ಮರೊಡನೆ ನಾಲ್ಕಾರು ವರ್ಷಗಳಿಂದ ವಾದ ಮಾಡುತ್ತಲೇ ಬಂದವನು ನಾನು.ಯಾವುದಕ್ಕೂ ಇನ್ನೂ ಕಾಲಾವಕಾಶ ಬೇಕು. ಕಳೆದ ಮೂರ್ನಾಲ್ಕು ಶತಕಗಳಿಂದ ಬೆಳೆದು ಬಂದಿರುವ ಕೆಲವು ಸಂಗತಿಗಳನ್ನು ದೂರಮಾಡಲು ಇನ್ನು ಒಂದು ಶತಮಾನವಾದರೂ ಬೇಕು.ನಾವು ಈಗಿಂದೀಗಲೇ ಬದಲಾವಣೆ ತಂದು ವೈದಿಕ ಸಾಮ್ರಾಜ್ಯ ಕಟ್ಟುತ್ತೀವೆಂದರೆ ಅದು ಗಗನಕುಸುಮವಾದೀತು. ಇಂಡಿಯನ್ ಅನ್ನೋದಕ್ಕಿಂತ "ಹಿಂದು" ವಾಸಿಯಲ್ಲವೇ? ಅಲ್ಲದೆ ನಿಜವಾಗಿ ಈಗ ಆಗಬೇಕಾದ್ದು "ಹಿಂದು" ಎಂಬ ಪದವನ್ನು ಮತೀಯಗಂಟಿನಿಂದ ಬಿಚ್ಚಿ ಅದನ್ನು ವಿಶಾಲಾರ್ಥದಲ್ಲಿ ಬಳಸುವಂತೆ ಮಾಡಬೇಕು. ಅದು ಸಾಧ್ಯ. ಆದರೆ ಹಿಂದು ಬದಲು "ಆರ್ಯಾವರ್ತ" ಎಂದು ಬದಲಾಗುವ ಸಮಯಕ್ಕೆ ನಮ್ಮ ದೇಶದ ವಿಸ್ತಾರ ಹಿಮಾಲಯ ಮತ್ತು ಹಿಂದು ಸಾಗರವನ್ನು ದಾಟಿ ವೇದವನ್ನು ಒಪ್ಪುವರೆಲ್ಲರ "ರಾಷ್ಟ್ರ"ವಾಗಿರುತ್ತೆ.ಅದು ಬೇಡವೆಂದಲ್ಲ. ಆದರೆ ಸಧ್ಯಕ್ಕೆ ಅದು ಅಸಾಧ್ಯವಾದ ಮಾತು.
    ಅಷ್ಟೇ ಅಲ್ಲ. ವೇದವು ವಿಗ್ರಹಾರಾಧನೆಯನ್ನ್ಯು ಒಪ್ಪುವುದಿಲ್ಲ. ಆದರೆ ವಿಹ್ರಹಾರಾಧನೆ ಮಾಡುವ ಭಾರತದ 95% ಜನರಿಂದ ಈಗಿಂದೀಗಲೇ ವಿಗ್ರಹಾರಾಧನೆಯನ್ನು ಬಿಡಿಸಲು ಸಾಧ್ಯವೇ? ಅದರ ಪಾಡಿಗೆ ಅದಿರಲಿ. ವೇದದ ಸತ್ಯ ಅರ್ಥವಾಗುತ್ತಾ ಆಗುತ್ತಾ ತನ್ನಿಂದ ತಾನೇ ಅದು ಮಾಯವಾಗುತ್ತೆ.ನಿಜ ಆರಾಧನೆ ಆರಂಭವಾಗುತ್ತೆ. ನಿಜವಾಗಿ ಅಗ್ನಿಹೋತ್ರದಲ್ಲಿ ಸಿಗುವ ಫಲ ಮತ್ತು ಸಮಾಧಾನ ವಿಗ್ರಹಕ್ಕೆ ಮಾಡುವ ಅಭಿಶೇಕ ಇತ್ಯಾದಿಗಳಿಂದ ಸಿಗುವುದಿಲ್ಲ. ಅದೆಲ್ಲಾ ಅವರವರಿಗೆ ಮನವರಿಕೆಯಾಗಬೇಕು. ಯಾವಾಗ ಸತ್ಯದ ಅರಿವಾಗುತ್ತದೆ, ಆಗ ಕಂದಾಚಾರಗಳೆಲ್ಲಾ ತಾನೇ ತಾನಾಗಿ ನಿಂತು ಹೋಗುತ್ತೆ. ಹೀಗೆ ಧನಾತ್ಮಕವಾಗಿಯೇ ಜಾಗರಣೆ ಕೆಲಸ ನಡೆಯಬೆಕು. ಅದರಿಂದ ಸ್ವಲ್ಪ ನಿಧಾನವಾಗಿಯಾದರೂ ವೇದದ ಪುನರುತ್ಥಾನವಾಗುತ್ತೆ. ಇಲ್ಲದಿದ್ದರೆ "ಇವನೊಬ್ಬ ಹುಚ್ಚ" ಎಂಬ ಮಾತನ್ನು ಕಟು ವಾದಿಗಳು ಕೇಳಬೇಕಾಗುತ್ತದೆ. ಅಂತೂ ಇದೊಂದು ಚರ್ಚಾರ್ಹ ವಿಷಯ. ಶರ್ಮರು ಹೇಳುತ್ತಿರುತ್ತಾರೆ " RSS body with vedik brain" ಅದಾಗಬೇಕು, ಅಲ್ಲವೇ?

    ReplyDelete
  6. ವಾಸುದೇವರಾಯರೇ,
    ಈಗೊಂದು ಕುಂಭಮೇಳದ ಚಿತ್ರ ಹಾಕಿದ್ದೀನಿ ,ನೋಡಿ. ಅಲ್ಲಿ ಅದೆಷ್ಟು ಲಕ್ಷ ಜನ ಭಕ್ತರು ಸೇರಿದ್ದರೋ!! ಜಗನ್ನಾಥ ರಥಯಾತ್ರೆಯಲ್ಲೂ ಅಷ್ಟೆ.ನಮ್ಮ ದೇಶದ ಜನಕ್ಕೆ ಒಂದು ಸಿಂಟಿಮೆಂಟ್ ಇದೆ.ಕೆಲವು ವಿಚಾರದಲ್ಲಿ ಶ್ರದ್ಧಾಭಾವನೆ! ಗಂಗಾ ಮಾತೆ, ಗೋಮಾತೆ,ದುರ್ಗಾ ಮಾತೆ, ಶ್ರೀ ರಾಮ ಶ್ರೀಕೃಷ್ಣ, ಹೆಸರಿನಲ್ಲಿ ಅದೆಂತದೋ ಭಕ್ತಿ ಇದೆ. ಪ್ರಾಣ ಹೋದರೂ ಚಿಂತೆಯಿಲ್ಲ ಇಂತಹ ಸಂದರ್ಭದಲ್ಲಿ ಪಾಲ್ದೊಂಡು ಧನ್ಯತೆಯ ಭಾವ ತಾಳುತ್ತಾರೆ.ಇದೆಲ್ಲಾ ಚರ್ಚೆಗೆ ನಿಲುಕದ ಸಂಗತಿಗಳು.ಅದೆಷ್ಟು ಪುಣ್ಯ ಕ್ಷೇತ್ರಗಳಿಗೆ ನಿತ್ಯವೂ ಲಕ್ಷ ಲಕ್ಷ ಜನರು ಹೋಗುತ್ತಾರಲ್ಲವೇ? ಇದೆಲ್ಲಾ ಏನು ತೋರಿಸುತ್ತೆ? ಭಾರತೀಯನ ಹೃದಯದೊಳಗೆ ಕೆಲವು ಭಾವನೆಗಳು ಅಂತರ್ಗತವಾಗಿವೆ. ಅವುಗಳನ್ನು ಹೊಡಿದೋಡಿಸುವುದಕ್ಕಾಗುವುದಿಲ್ಲ, ಆದರೆ ಬಡಿದೆಬ್ಬಿಸಬಹುದು. ಇವೆಲ್ಲಾ ವಾಸ್ತವ ಸಂಗತಿಗಳು. ವೇದವಾಣಿ ಸತ್ಯ. ಆದರೆ ಇಂದಿನ ಕಾಲಕ್ಕೆ ಎಷ್ಟು ಬೇಕೋ, ಹೇಗೆ ಬೇಕೋ ಹಾಗೆ ವೇದವನ್ನು ಅಪ್ಲೆ ಮಾದಬೇಕು. ಜನ ಸೇರುವ ಸಂದರ್ಭದಲ್ಲೆಲ್ಲಾ ವೇದದ ಪ್ರಚಾರ ಮಾಡಬೇಕೇ ಹೊರತೂ ಹಿಂದು ಭಾವನೆಗಳನ್ನು ಕೆದಕಬಾರದು.ಇನ್ನು ಎರಡು ಮೂರು ತಿಂಗಳು ಎಲ್ಲಾ ಊರುಗಳಲ್ಲೂ ಜಾತ್ರಾ ಮಹೋತ್ಸವಗಳು, ರಥೋತ್ಸವಗಳು!! ಅದನ್ನು ತಡೆಯಲಾದೀತೇ? ಹಾಗೊಂದು ವೇಳೆ ಅದರ ವಿರುದ್ಧ ಮಾತನಾಡಿದರೆ ಪರಿಸ್ಥಿತಿ ಕೆಡುವುದಂತೂ ಸತ್ಯ. ಇಂತಹ ಸಂದರ್ಭದಲ್ಲಿ ನಾವು ಮಾಡಬಹುದಾದ ಕೆಲಸವೆಂದರೆ ದೇವರು-ಜಾತ್ರೆ ಯನ್ನು ಖಂಡಿಸದೆ ನಡೆಯಬೇಕು ವೇದ ಪ್ರಚಾರ. ಅಷ್ಟೆ.

    ReplyDelete
  7. ಮನುಜ ಮತ ಹಿಂದು ಮತ. ಅದೇ ನಿಜ ಪಥ. ಈ ಲೇಖನ ನಿಜವಾಗಲೂ ಕಣ್ ತೆರೆಸುವಂತಿದೆ.

    ReplyDelete
  8. ಧನ್ಯವಾದಗಳು ಬದರೀನಾಥ್, ನಿಮ್ಮ ಕವನಗಳ ಮೇಲೆ ಕಣ್ಣಾಡಿಸಲು ಆಗ್ತಾ ಇಲ್ಲ. ದಯಮಾಡಿ ಇತ್ತೀಚಿನ ಕವನಗಳ ಕೊಂಡಿ ಕಳಿಸಿ.
    vedasudhe@gmail.com ಗೆ

    ReplyDelete
  9. ಆರ್ಯ ಎಂಬುದು ಯಾವುದೇ ಜನಾಂಗದ ಹೆಸರಲ್ಲ. ಅದೊಬ್ಬ ಶ್ರೇಷ್ಠಮಾನವನನ್ನು ಗುರುತಿಸುವ ಪದ. ಆ ವ್ಯಕ್ತಿ ಯಾರೇ ಆಗಿರಬಹುದು, ಎಲ್ಲಿ ಬೇಕಾದರೂ ಇರಬಹುದು. 'ಹಿಂದೂ' ಅಥವಾ 'ಭಾರತೀಯ' ಎಂಬ ಪದವನ್ನು ಒಂದು ಪ್ರಾಂತ್ಯವನ್ನು ಜನ್ಮಸ್ಥಳವಾಗಿ ಉಳ್ಳವನು ಎಂಬರ್ಥದಲ್ಲಿ ಬಳಸಿದರೆ ವಿರೋಧವೇನೂ ಕಾಣುವುದಿಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಜನ್ಮಭೂಮಿಯನ್ನು ಅರ್ಥಾತ್ ಅಲ್ಲಿಯ ಪ್ರಕೃತಿಸಂಪತ್ತನ್ನು ರಕ್ಷಿಸಿ, ಅಭಿವೃದ್ಧಿ ಪಡಿಸುವುದು ಯೋಗ್ಯವೇ ಸರಿ. ಎಲ್ಲರ ಹಿತ ಅದರಲ್ಲಿ ಅಡಗಿದೆ. ಎಲ್ಲರ ಹಿತಸಾಧನೆಗೆ ಒಗ್ಗಟ್ಟಾಗಿ ದುಡಿಯುವುದು ಅನಿವಾರ್ಯ.
    ಇಂತಹ ಸರ್ವರ ಹಿತದೃಷ್ಟಿಯಿಂದ ಕೆಲಸವನ್ನು ಒಂದುಗೂಡಿ ಮಾಡುವುದು ಮುಖ್ಯವೇ ಹೊರತು, ಹೆಸರಿನ ಬಗ್ಗೆ ಚರ್ಚಿಸುತ್ತಾ ಕಾರ್ಯವಿಮುಖರಾಗುವುದು ಸರಿಯೇ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳೋಣ. ಏನಂತೀರಿ?
    -Sudhakarasharma

    ReplyDelete
  10. ಶರ್ಮಾಜಿ,
    ನಿಮ್ಮ ಮಾತಿನಿಂದ ಬಲು ಸಂತೋಷವಾಗಿದೆ.ಈ ದೇಶದ ಜನರು ತಮ್ಮನ್ನು ಹಿಂದು[ಹಿಂದುಸ್ಥಾನದವ]ಅಥವಾ ಭಾರತೀಯ [ಭಾರತದ ಪ್ರಜೆ] ಎಂದು ಈ ಎರಡರಲ್ಲಿ ಯಾವ ಪದವನ್ನು ಬಳಸಿಕೊಂಡರೂ ಪರವಾಗಿಲ್ಲ. ಆದರೆ ಹಿಂದು ಎಂಬ ಪದವನ್ನು ಮತಕ್ಕೆ ಮಿತಗೊಳಿಸಬಾರದು, ಎಂಬುದು ನನ್ನ ಅಭಿಮತ.

    ReplyDelete