ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Thursday, May 23, 2013

ಕುಸುಮ: 29

“ಎಲ್ಲರಿಗಾಗಿ ವೇದ” - ಚತುರ್ವರ್ಣಗಳು
                    
ಹಿಂದಿನ ಸಂಚಿಕೆಯಲ್ಲಿ ಮನುಷ್ಯರೆಲ್ಲರೂ ಸಮಾನರೆಂಬುದನ್ನು ವೇದ ಮಂತ್ರದ ಆಧಾರದಿಂದ ವಿಚಾರಮಾಡಿದ್ದೇವೆ. ಆದರೂ ವೇದದಲ್ಲಿ  ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ  ನಾಲ್ಕು ವರ್ಣಗಳಿವೆಯಲ್ಲಾ! ಇದು ತಾರತಮ್ಯವಲ್ಲವೇ? ಎಂಬ ಸಂದೇಹವು ಬರಬಹುದು.ಈ ಬಗ್ಗೆ ವಿಚಾರಮಾಡುವಾಗ ಪೂರ್ವಾಗ್ರಹವಿಲ್ಲದೆ ವಿಚಾರಮಾಡಿದರೆ ನಮಗೆ ಉತ್ತರ ಸಿಕ್ಕೀತು. ಭಗವದ್ ಗೀತೆಯಲ್ಲಿ ಶ್ರೀ ಕೃಷ್ಣ ಹೇಳುವ ಮಾತಿನಿಂದಲೇ ಆರಂಭ ಮಾಡೋಣ.
ಚಾತುರ್ವರ್ಣ್ಯಂ  ಮಯಾ ಸೃಷ್ಟಂ ಗುಣಕರ್ಮ ವಿಭಾಗಶ: |
“ಗುಣ ಮತ್ತು ಕರ್ಮಗಳನುಸಾರವಾಗಿ  ಬ್ರಾಹ್ಮಣ , ಕ್ಷತ್ರಿಯ, ವೈಶ್ಯ ಮತ್ತು ಶೂದ್ರ” ಎಂಬ ನಾಲ್ಕು ವರ್ಣಗಳು ನನ್ನಿಂದ ರಚಿಸಲ್ಪಟ್ಟಿವೆ- ಎಂಬುದು ಶ್ರೀ ಕೃಷ್ಣನ ಮಾತು.  ಹಾಗಾದರೆ ವರ್ಣ ಎಂದರೇನು?  ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಈ ವರ್ಣಗಳ ಕರ್ತವ್ಯಗಳೇನು? ಎಂಬ ಬಗ್ಗೆ ವಿಚಾರ ಮಾಡೋಣ.
ವರ್ಣ ಎಂದರೇನು?   
ವರ್ಣ ಮತ್ತು ಈಗ ರೂಢಿಯಲ್ಲಿರುವ ಜಾತಿ ಈ ಎರಡೂ ಪದಗಳು ಒಂದೇ ಎಂಬ ಭಾವನೆ ಜನ ಮಾನಸದಲ್ಲಿ ಉಳಿದು ಬಿಟ್ಟಿದೆ. ಇದಕ್ಕೆ ಪುಷ್ಟಿ ಕೊಡುವಂತೆ ರೂಢಿಯಲ್ಲಿರುವ ಬ್ರಾಹ್ಮಣ ಇತ್ಯಾದಿ ಜನರನ್ನು ಸವರ್ಣೀಯರು ಎಂದು ಕರೆಯುವುದೂ ರೂಢಿಯಲ್ಲಿದೆ. ವೇದದ ಅನುಸಾರ ವರ್ಣ ಪದ ಪ್ರಯೋಗಕ್ಕೂ ಜಾತಿ ಎಂಬ ಪದಕ್ಕೂ ಅರ್ಥ ಅಜಗಜಾಂತರ. ನಿಜವಾಗಿ ಜಾತಿ ಎಂದರೇನು? ಹುಟ್ಟಿನಿಂದ ಬರುವುದು ಜಾತಿ. ನಾವೆಲ್ಲಾ ಮನುಶ್ಯಜಾತಿ ಎಂಬುದಷ್ಟೇ ಸತ್ಯ. ಕಾರಣ ಜಾತಿ ಎಂದರೆ ಹುಟ್ಟಿನಿಂದ ಸಾಯುವವರೆಗೂ ಇರುವಂತಹದ್ದು. ಮನುಶ್ಯನಾಗಿ ಹುಟ್ಟಿದ್ದೇವೆ ಮನುಶ್ಯನಾಗಿ ಸಾಯುತ್ತೇವೆ. ಅಂತೆಯೇ ಆನೆ, ನಾಯಿ ಇತ್ಯಾದಿ ಪ್ರಾಣಿಗಳೂ ಕೂಡ. ಆದರೆ ವರ್ಣ ಎಂದರೆ ನಾವು ಆರಿಸಿಕೊಳ್ಳುವಂತಹದ್ದು. ಉಧಾಹರಣೆಗೆ ಒಬ್ಬ ವಿದ್ಯಾರ್ಥಿ ಓದಿ ವಕೀಲನಾಗುತ್ತಾನೆ, ಗುಮಾಸ್ತನಾಗುತ್ತಾನೆ, ವೈದ್ಯನಾಗುತ್ತಾನೆ. ಇವೆಲ್ಲಾ ಹುಟ್ಟಿನಿಂದ ಬಂದ ಪದವಿಗಳಲ್ಲ. ತಾನು ಆರಿಸಿಕೊಂಡಿದ್ದು.  ಹೀಗೆಯೇ ಒಂದು ಸಾಮಾಜಿಕ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಡೆಸಲು ಮನುಷ್ಯನ ಕರ್ತವ್ಯವನ್ನು  ನಾಲ್ಕು ಭಾಗಗಳಾಗಿ ವಿಂಗಡಿಸಿದರು. ಅದರಲ್ಲಿ ಮೊದಲನೆಯದು  ಜ್ಞಾನಪ್ರಸಾರ, ಎರಡನೆಯ ವಿಭಾಗ ದೇಶದ ರಕ್ಷಣೆ ಮತ್ತು ರಾಜ್ಯಭಾರ, ಮೂರನೆಯದು ಸಂಪನ್ಮೂಲ ಸಂಗ್ರಹ-ವಿತರಣೆ, ನಾಲ್ಕನೆಯದು ಶ್ರಮದ ಕೆಲಸ. ಈ ನಾಲ್ಕೂ ವರ್ಣಗಳೂ ಸಾಮರಸ್ಯದಿಂದ ಕರ್ತವ್ಯನಿರ್ವಹಿಸಿದಾಗ ಮಾತ್ರ ಒಂದು ಸುಂದರ ಸಮಾಜವನ್ನು                    ಕಾಣ  ಬಹುದಾಗಿತ್ತು. ಅಲ್ಲದೆ ಒಂದೇ ಕುಟುಂಬದಲ್ಲಿ ಈ ನಾಲ್ಕೂ ವರ್ಣೀಯರೂ ಇರಬಹುದಾಗಿತ್ತು. ಒಂದು ಕುಟುಂಬದ ಎಲ್ಲಾ ಸದಸ್ಯರೂ ಒಂದೇ ವರ್ಣವನ್ನು ಆರಿಸಿಕೊಳ್ಳಬೇಕೆಂಬ ನಿಯಮವೇನಿರಲಿಲ್ಲ. ಅವರವರ ಗುಣ-ಸ್ವಭಾವಗಳಿಗೆ ತಕ್ಕಂತೆ ಆಯಾ ವರ್ಣವನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವು ಪ್ರತಿಯೊಬ್ಬ ಮನುಶ್ಯನಿಗೂ ಇತ್ತು. ಅಪ್ಪ ಬ್ರಾಹ್ಮಣ ವರ್ಣವನ್ನು ಆರಿಸಿಕೊಂಡಿದ್ದರೆ ಮಕ್ಕಳೆಲ್ಲರೂ ಬ್ರಾಹ್ಮಣ ವರ್ಣವನ್ನೇ ಆರಿಸಿಕೊಳ್ಳಬೇಕೆಂಬ ನಿಯಮವೇನಿರಲಿಲ್ಲ. ಅದು ಅವನ ಇಚ್ಚೆ. ಮಗನಿಗೆ ವ್ಯಾಪಾರ ಮಾಡುವ ಬಗ್ಗೆ ಆಸಕ್ತಿ ಇದ್ದರೆ ಅವನು ವೈಶ್ಯ ವರ್ಣವನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು, ಮತ್ತೊಬ್ಬ ಮಗನಿಗೆ ಶ್ರಮದ ಕೆಲಸ ಮಾಡಲು ಇಚ್ಛೆ ಮತ್ತು ಸ್ವಭಾವವಿದ್ದರೆ ಅವನು ಶೂದ್ರ ವರ್ಣವನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು. ಒಂದು ಅಂಶವನ್ನು ಸರಿಯಾಗಿ ಗಮನಿಸಬೇಕು. ಶೂದ್ರ ತಂದೆಯ ಮಗ ಶೂದ್ರವರ್ಣವನ್ನೇ ಅಥವಾ ಬ್ರಾಹ್ಮಣ ತಂದೆಯ ಮಗ ಬ್ರಾಹ್ಮಣ ವರ್ಣವನ್ನೇ ಆಯ್ಕೆ ಮಾಡಿಕೊಳ್ಳಬೇಕಾಗಿರಲಿಲ್ಲ. ಅಷ್ಟೇ ಅಲ್ಲ ವೈದ್ಯನ ಮಗನಾಗಿ ಹುಟ್ಟಿದ ಮಾತ್ರಕ್ಕೆ ವೈದ್ಯನಾಗಲು ಸಾಧ್ಯವೇ? ಅವನು MBBS ಓದಿ ನಂತರವಷ್ಟೇ ವೈದ್ಯನಾಗಬೇಕಲ್ಲವೇ? ಅಥವಾ ಅವನು ಓದಿ ಪೋಲೀಸ್ ಅಧಿಕಾರಿಯೂ ಆಗಬಹುದು ಇಲ್ಲವೇ ಕೃಷಿಕನೂ ಆಗಬಹುದಲ್ಲವೇ? ಹಾಗೆಯೇ  ಬ್ರಾಹಣನ ಮನೆಯಲ್ಲಿ ಹುಟ್ಟಿದ ಮಾತ್ರಕ್ಕೆ ಅವನು ಬ್ರಾಹ್ಮಣನಾಗುತ್ತಿರಲಿಲ್ಲ. ಅವನ ಗುಣ ಸ್ವಭಾವಗಳಿಗನುಗುಣವಾಗಿ ಅವನು ಯಾವ ವರ್ಣವನ್ನು  ಆಯ್ಕೆ ಮಾಡಿಕೊಳ್ಳುತ್ತಿದ್ದನೋ ಆ ವರ್ಣ ಅವನದಾಗುತ್ತಿತ್ತು. ಹೀಗೆ ನಾಲ್ಕೂ ವರ್ಣಗಳನ್ನೂ ಅವರವರ ಸ್ವಭಾವಗಳಿಗೆ ತಕ್ಕಂತೆ ಆಯ್ಕೆಮಾಡಿಕೊಳ್ಳುತ್ತಿದ್ದರು. ಈ ನಾಲ್ಕೂ ವರ್ಣಗಳೂ ಒಂದು ಸಮಾಜದ ವ್ಯವಸ್ಥೆಗೆ ಪೂರಕವಾಗಿ ಸಾಮರಸ್ಯದಿಂದ ಕಾರ್ಯನಿರ್ವಹಿಸುತ್ತಿದ್ದವು. ಇನ್ನು ಮುಂದೆ ನಾಲ್ಕೂ ವರ್ಣದ ಕರ್ತವ್ಯಗಳೇನೆಂದು ವಿಚಾರ ಮಾಡೋಣ.
ಬ್ರಾಹ್ಮಣ ವರ್ಣ:-
ಬ್ರಾಹ್ಮಣಾಸ: ಸೋಮಿನೋ ವಾಚಮಕ್ರತ ಬ್ರಹ್ಮ ಕೃಣ್ವಂತ: ಪರಿವತ್ಸರೀಣಮ್ |
ಅಧ್ವರ್ಯವೋ ಘರ್ಮಿಣ: ಸಿಷ್ವಿದಾನಾ ಆವಿರ್ಭವಂತಿ ಗುಹ್ಯಾ ನ ಕೇ ಚಿತ್ ||
[ಋಕ್ 7.103.8]
ಸೋಮಿನ: = ಬ್ರಹ್ಮಾನಂದದ ಸವಿಯನ್ನು ಕಾಣುವವರು[ಪಂ.ಸುಧಾಕರ ಚತುರ್ವೇದಿಗಳ ವ್ಯಾಖ್ಯೆ]
ಬ್ರಾಹ್ಮಣಾಸ: = ಬ್ರಹ್ಮಜ್ಞಾನಿಗಳು
ಪರಿವತ್ಸರೀಣಮ್ = ವರ್ಷ ಪೂರ್ಣ
ಬ್ರಹ್ಮ ಕೃಣ್ವಂತ: = ಜ್ಞಾನವನ್ನು ಪ್ರಸರಿಸಿಸುತ್ತಾ
ವಾಚಂ ಅಕ್ರತ = ಉಪದೇಶಿಸುತ್ತಾರೆ
ಅಧ್ವರ್ಯ: = ಅಹಿಂಸಕರಾದ
ಘರ್ಮಿಣ: = ತಪಸ್ವಿಗಳು
ಸಿಷ್ಟಿದಾನಾ: = ಶ್ರಮಿಸುತ್ತಾ
ಕೇ  ಚಿತ್ = ಕೆಲವರು
ಗುಹ್ಯಾ: ನ = ಗೂಢವಾಗಿದ್ದವರಂತೆ
ಆವಿರ್ಭವಂತಿ = ಆವಿರ್ಭವಿಸುತ್ತಾರೆ
 ಭಾವಾರ್ಥ:-
ಬ್ರಹ್ಮಾನಂದದ ಸವಿಯನ್ನು ಕಾಣುವ ಬ್ರಹ್ಮಜ್ಞಾನಿಗಳಾದ ಬ್ರಾಹ್ಮಣರು  ನಿರಂತರವಾಗಿ  ಈಶ್ವರೀಯ ಜ್ಞಾನವನ್ನು ಪ್ರಸರಿಸಿಸುತ್ತಾ, ಅಹಿಂಸಕರಾಗಿದ್ದು, ತಪಸ್ವಿಗಳೂ ಆದ ಇವರು ಅವಿರತ ದುಡಿಮೆಯಲ್ಲಿ ವಿಶ್ವಾಸವಿಟ್ಟವರು, ಇಂತಹವರು ಬಯಸದೆಯೂ ಪ್ರಕಟಗೊಳ್ಳುತ್ತಾರೆ. ನಾಲ್ಕು ಶಬ್ಧಗಳಲ್ಲಿ ಬ್ರಾಹ್ಮಣನ ಕರ್ತವ್ಯವನ್ನು ಇಲ್ಲಿ ಹೇಳಿದ್ದರೂ  ಒಂದೊಂದು ಶಬ್ಧವೂ ಅದೆಷ್ಟು ಮಹತ್ವ ಉಳ್ಳದ್ದು ಎಂಬುದನ್ನು ಸ್ವಲ್ಪ ವಿಚಾರಮಾಡೋಣ.ಮೊದಲನೆಯದು….
ನಿರಂತರವಾಗಿ  ಈಶ್ವರೀಯ ಜ್ಞಾನದ ಪ್ರಸಾರ: ಒಬ್ಬ ವ್ಯಕ್ತಿ ನಿಜವಾದ ಬ್ರಾಹ್ಮಣನೆನಿಸಿಕೊಳ್ಳಬೇಕಾದರೆ ಅವನು ನಿರಂತರವಾಗಿ ವೇದ ಜ್ಞಾನದ  ಪ್ರಸಾರಮಾಡಬೇಕು. ಎರಡನೆಯದು…..
ಅಹಿಂಸಕ: ಅವನು ಅಹಿಂಸಕನಾಗಿರಬೇಕು. ಅಹಿಂಸೆ ಎಂಬ ಪದಕ್ಕೆ ಅದೆಷ್ಟು ವಿಶಾಲಾರ್ಥವಿದೆಯೋ! ಕೇವಲ   ಪ್ರಾಣಿ ಹಿಂಸೆ ಮಾಡದವನಿಗೆ ಅಹಿಂಸಕನೆಂದು ಹೇಳಲಾಗದು. ಅವನ ಮಾತಿನಿಂದ, ನಡತೆಯಿಂದ,ಅವನ ವ್ಯವಹಾರದಿಂದ ಯಾರಿಗೂ ನೋವಾಗದಂತೆ ನಡೆಯುವವನನ್ನು ಅಹಿಂಸಕನೆಂದು ಚಿಕ್ಕದಾದ ವಿವರಣೆಯಲ್ಲಿ ಸಧ್ಯಕ್ಕೆ ಅರ್ಥ ಮಾಡಿಕೊಳ್ಳೋಣ. ಅದರ ವ್ಯಾಪ್ತಿ ಇಷ್ಟಕ್ಕೇ ಮುಗಿಯುವುದಿಲ್ಲವಾದರೂ ಇಷ್ಟಾದರೂ ಗುಣಗಳಿದ್ದರೆ ಅವನನ್ನು ಅಹಿಂಸಕನೆಂದು ತಿಳಿಯಬಹುದು.
ತಪಸ್ವಿ: ಅವನು ತಪಸ್ವಿಯಾಗಿರಬೇಕು. ಇಲ್ಲೂ ಈ ಪದದ ವ್ಯಾಪ್ತಿ ಬಲು ದೊಡ್ದದು. ಸಧ್ಯಕ್ಕೆ ಅದರ ಅರ್ಥಗಳಲ್ಲಿ ಒಂದಾದ “ ವ್ರತ ನಿಯಮಾದಿಗಳಿಂದ ದೇಹವನ್ನು ದಂಡಿಸುತ್ತಾ ಧ್ಯಾನ ಮಾಡುವವನು” ಎಂಬ ಅರ್ಥವನ್ನಷ್ಟೇ ತೆಗೆದುಕೊಳ್ಳೋಣ. ಮುಂದಿನದು…..
ದುಡಿಮೆಯಲ್ಲಿ ವಿಶ್ವಾಸವಿಟ್ಟವರು: ಅವನು ಸುಮ್ಮನೆ ಸೋಮಾರಿಯಾಗಿ ಕುಳಿತು ತಿನ್ನುವಂತಿಲ್ಲ. ದುಡಿಮೆಯಲ್ಲಿ ವಿಶ್ವಾಸ ಇಟ್ಟಿರಬೇಕು.
ಮೇಲಿನ ಅಂಶಗಳನ್ನು ಗಣನೆಗೆ ತೆಗೆದುಕೊಂಡಮೇಲೆ, ಇಷ್ಟೂ ಅರ್ಹತೆಗಳಿದ್ದರೆ ಅವನನ್ನು “ಬ್ರಾಹ್ಮಣ” ಎನ್ನಬಹುದು. ಬ್ರಾಹ್ಮಣನ ಕರ್ತವ್ಯಗಳ ಬಗ್ಗೆ ವೇದವು ಇನ್ನೂ ಬಹಳ ವಿಚಾರಗಳನ್ನು ತಿಳಿಸುತ್ತದೆ. ಮುಂದಿನ ಲೇಖನಗಳಲ್ಲಿ ಆ ಬಗ್ಗೆ ವಿಚಾರ ಮಾಡೋಣ.

1 comment:

 1. ಹರಿಹರಪುರ ಶ್ರೀಧರರೆ, ನಿಮ್ಮ ಲೇಖನ ಓದಿ ನಾನು ವರ್ಣವನ್ನ ಅರ್ಥ ಮಾಡಿಕೊಂಡಿದ್ದು ಹೀಗೆ :-)
  ಜಾತಿ ವರ್ಣ ಏಕಗಣ, ಇಡದ ಅಜಗಜಾಂತರ ಜನಮಾನಸ
  ನಿಜದಿ ಹುಟ್ಟಿನಿಂದ ಬಂದ ಜಾತಿ ಸಾಯೋತನಕದ ದಿರುಸ
  ಮನುಜ ಪ್ರಾಣಿ ಪಶು ಪಕ್ಷಿ ಸಂಕುಲವೆ ಜಾತಿ, ಆಯ್ಕೆಗೆ ವರ್ಣ
  ವ್ಯಕ್ತಿ ತಾನಾಯಬಯಸುವ ವೃತ್ತಿ, ಕಟ್ಟಿದ ಪದವಿ ಜೀವಋಣ!

  ನಿಜ ಬ್ರಾಹ್ಮಣ ಬ್ರಹ್ಮಜ್ಞಾನಿ ನಿರಂತರ ಪ್ರಸಾರ ವೇದಜ್ಞಾನ
  ಅಹಿಂಸಕ ಕಾಯಾ ವಾಚಾ ಮನಸಾ ನಡೆನುಡಿ ಅವಧಾನ
  ಧ್ಯಾನ ವ್ರತ ನಿಯಮಾದಿ ನಿರತ ತಪೋಬದ್ದ ತಪಸ್ವಿ ಭಾವ
  ಶ್ರಮಿಕನೆ ದುಡಿದುಣ್ಣುತ ಸೋಮಾರಿಯಲ್ಲದ ಮನೋಭಾವ!

  - ನಾಗೇಶ ಮೈಸೂರು, ಸಿಂಗಪುರ

  ReplyDelete