ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Saturday, July 20, 2013

ಹೆಸರೊಂದಿಟ್ಟರೆನಗೆ

ಹೆಸರೊಂದಿಟ್ಟರೆನಗೆ ಹೆಸರಿರದ ನನಗೆ
ಹೆಸರೊಂದಿಟ್ಟರೆನಗೆ || ಪ ||

ಎನಿತು ಜನನವೋ ಎನಿತು ಮರಣವೋ
ಯಾವ ಜೀವವೋ ಎಂಥ ಮಾಯೆಯೋ
ಆದಿ ಅಂತ್ಯವನರಿಯದವಗೆ ಹೆಸರೊಂದಿಟ್ಟರೆನಗೆ ||

ಹಿಂದೆ ಇರದ ಮುಂದೆ ಇರದಿಹ
ತನುವ ಕಣಕಣ ಚಣಚಣಕೆ ಬದಲು
ಇಂತಪ್ಪ ತನುವೆ ತಾನು ಎಂದವಗೆ ಹೆಸರೊಂದಿಟ್ಟರೆನಗೆ ||

ಪಂಚತತ್ವದ ದೇಹ ಬಣ್ಣ ಬಣ್ಣದ ಬಟ್ಟೆ
ಚೈತನ್ಯವಿಲ್ಲದಿರೆ ಬರಿಯ ಲೊಳಲೊಟ್ಟೆ
ಚೇತನದ ಚೆಲುವ ಕಂಡರಿಯದವಗೆ ಹೆಸರೊಂದಿಟ್ಟರೆನಗೆ ||

ಅವನ ಕರುಣೆ ನವರಸದ ಅರಮನೆ
ಚಲಿಪ ಅರಮನೆಗೊಡೆಯನೆಂದು
ಬೀಗಿ ರಾಗದಿ ನಿಜವ ಮರೆತವಗೆ ಹೆಸರೊಂದಿಟ್ಟರೆನಗೆ ||

ಎನಿತು ಪುಣ್ಯವೋ ಮನುಜನಾಗಿಹೆ
ಮತಿಯ ಬಿಟ್ಟರೆ ಜಾರಿಹೋಗುವೆ
ಅರಿಗೆ ಗುರಿಯಾಗಿರುವ ನರಗೆ ಹೆಸರೊಂದಿಟ್ಟರೆನಗೆ ||

ಹೆಸರು ಹೆಸರೆಂದು ಕೊಸರುತಿಹರು
ಅರಿತವರೆ ಬಿಡರು ಹೆಸರ ಹಂಬಲ
ಹೆಸರು ಹಸಿರೆಂದುಸಿರುವವಗೆ ಹೆಸರೊಂದಿಟ್ಟರೆನಗೆ ||

-ಕ.ವೆಂ.ನಾಗರಾಜ್.

2 comments:

  1. [ಚೇತನದ ಚೆಲುವ ಕಂಡರಿಯದವಗೆ ]

    ಸತ್ಯವಾದ ಮಾತು. ನನ್ನೊಳಗಿನ ಚೈತನ್ಯದ ಅರಿವು ನನಗಿದ್ದರೆ ತಲೆ ತಗ್ಗಿಸಿ ನಡೆಯಬೇಕಾಗಿರಲಿಲ್ಲ! ದೇಹೀ ಎನ್ನಬೇಕಾಗಿರಲಿಲ್ಲ!!ಒಳಗಿನ ಚೈತನ್ಯಕ್ಕೆ ಅವಮಾನಮಾಡುತ್ತಾ ಕಳಪೆ ಬದುಕ ಸವೆಸುವ ಮನುಜಗೆ "ಮನುಜ" ಎಂದರೂ ಆ ಪದಕ್ಕೆ ಅವಮಾನವೇ!! ನಮ್ಮ ಬದುಕು ಹೀಗೆ ನಡೆದಿದೆ. ನಿಮ್ಮ ಕವನ ಓದಿದ ಒಬ್ಬಿಬ್ಬರಮೇಲಾದರೂ ಪರಿಣಾಮವಾದರೆ ನಿಮ್ಮ ಪ್ರಯತ್ನ ಸಾರ್ಥಕ.

    ReplyDelete
  2. ಮುಂದಿನ ತಿಂಗಳು ನನ್ನ ಮೊಮ್ಮಗನಿಗೆ ನಾಮಕರಣವಿದೆ. ನನ್ನ ಮನಸ್ಸು ಎತ್ತೆತ್ತಲೋ ಓಡಿ ಈ ಸಾಲುಗಳನ್ನು ರಚಿಸಿದೆ. ಮೈಸೂರು ನಾಗೇಶರು 'ಹೆಸರಿಟ್ಟರೆ ನಗೆ' ಎಂದು ವಿಂಗಡಿಸಿ ಮೊಮ್ಮಗನ ನಾಮಕರಣಕ್ಕೆ ಶುಭ ಕೋರಿದ್ದಾರೆ. ಪ್ರತಿಕ್ರಿಯೆಗೆ ವಂದನೆ, ಶ್ರೀಧರ್.

    ReplyDelete