ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Thursday, October 23, 2014

ಸಾಮೂಹಿಕ ಅಗ್ನಿಹೋತ್ರ


ಮೇಲಿನ ಚಿತ್ರದಲ್ಲಿ ಸಾಮೂಹಿಕವಾಗಿ ನಡೆಯುತ್ತಿರುವ ಅಗ್ನಿಹೋತ್ರವನ್ನು ಗಮನಿಸಬಹುದು. ಭಾರತೀಯ ಋಷಿಪರಂಪರೆಯಿಂದ ಮೂಡಿಬಂದ "ಅಗ್ನಿಹೋತ್ರ"ವು ಪಾಶ್ಚಿಮಾತ್ಯ ಜನರನ್ನು ಆಕರ್ಷಿಸಿದೆ. ಭಾರತೀಯರಾದ ನಮಗೆ  ನಮ್ಮ ಋಷಿಪರಂಪರೆಯ ಬೆಗ್ಗೆ ಅಸಡ್ದೆ ಸರಿಯೇ?

      ಹಾಸನದ ವೇದಭಾರತಿಯು ಕಳೆದ ಎರಡು ವರ್ಷದಿಂದ ನಮ್ಮ ಋಷಿ ಪರಂಪರೆಯಲ್ಲಿ ಕಾರ್ಯ ಚಟುವಟಿಕೆ ಆರಂಭಿಸಿ ನಿತ್ಯವೂ  ಸಂಜೆ 6.00 ರಿಂದ 7.00 ರ ವರಗೆ ಅಗ್ನಿಹೋತ್ರ ಮತ್ತು ವೇದಾಭ್ಯಾಸವನ್ನು  ನಿರಂತರವಾಗಿ ನಡೆಸಿಕೊಂಡು ಬಂದಿದೆ.
       ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಪ್ರೇರಣೆಯಿಂದ ಆರಂಭವಾಗಿರುವ ವೇದಭಾರತಿಯ ಕಾರ್ಯಚಟುವಟಿಕೆಗಳನ್ನು
ಹಲವಾರು ಸಾದು ಸಂತರು  ನೋಡಿ ಮೆಚ್ಚಿದ್ದಾರೆ. ಅವರಲ್ಲಿ ಹುಬ್ಬಳ್ಳಿಯ ಆರ್ಶ ವಿದ್ಯಾಲಯದ ಪೂಜ್ಯ ಚಿದ್ರೂಪಾನಂದ ಸರಸ್ವತೀ ಸ್ವಾಮೀಜಿಯವರು ವೇದಭಾರತಿಯ ಕಾರ್ಯಚಟುವಟಿಕೆಯನ್ನು     ತಮ್ಮದೇ ಕಾರ್ಯವೆಂಬಂತೆ ಗಮನಿಸಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ.
         ಶ್ರೀ ರಾಮಕೃಷ್ಣಾಶ್ರಮದ ಯತಿಗಳಾದ ಪೂಜ್ಯ ಬೋಧಸ್ವರೂಪಾನಂದರು, ಪೂಜ್ಯಯುಕ್ತೇಶ್ವರಾನಂದರು,  ಬರಮಸಾಗರದ ಪೂಜ್ಯ ಬ್ರಹ್ಮಾನಂದ ಭಿಕ್ಷು, ಬೆಂಗಳೂರಿನ ಮಾತಾಜಿ ವಿವೇಕಮಯೀ, ಚಿನ್ಮಯ ಮಿಷನ್ನಿನ ಆಚಾರ್ಯ ಸುಧರ್ಮಚೈತನ್ಯರು. . . .ಹೀಗೆ ಹತ್ತು ಹಲವು ಸ್ವಾಮೀಜಿಯವರು ವೇದಭಾರತಿಯ ಸತ್ಸಂಗಕ್ಕೆ ಬಂದು ಆಶೀರ್ವದಿಸಿದ್ದಾರೆ.
ಅಂತೆಯೇ ವೇದಭಾರತಿಯ ಸದಸ್ಯರೂ ಕೂಡ ಬೆಂಗಳೂರು, ಮೈಸೂರು, ಅರಸೀಕೆರೆ, ಹಂಪಾಪುರ, ಕೆರಳಾಪುರ ಮುಂತಾದ ಊರುಗಳಲ್ಲಿ ಅಗ್ನಿಹೋತ್ರವನ್ನು ನಡೆಸಿ  ವೇದದ ಅರಿವು ಮೂಡಿಸುವಲ್ಲಿ ತಮ್ಮ ಪ್ರಯತ್ನವನ್ನು ಮಾಡುತ್ತಿದ್ದಾರೆ.

       ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರ ಮೇಲ್ವಿಚಾರಣೆಯಲ್ಲಿ ವೇದಪಾಠವು  ನಡೆಯುತ್ತಿದೆ. ನಿತ್ಯವೂ ಸತ್ಸಂಗದಲ್ಲಿ   ಶ್ರೀಸುಧಾಕರಶರ್ಮ ಮುಂತಾದವರ ಹತ್ತಿಪ್ಪತ್ತು ನಿಮಿಷಗಳ ಉಪನ್ಯಾಸದ ಆಡಿಯೋ ಕೇಳಿಸಲಾಗುತ್ತಿದೆ. ಹಾಸನದ ದಿನಪತ್ರಿಕೆಗಳಲ್ಲಿ     ಮತ್ತು ವಿಕ್ರಮ ವಾರ ಪತ್ರಿಕೆಯಲ್ಲಿ  ವೇದ ಕುರಿತಾದ ಲೇಖನಗಳನ್ನು ಸರಳ ಶೈಲಿಯಲ್ಲಿ ಪ್ರತೀ ವಾರವೂ   ಪ್ರಕಟಿಸಲಾಗುತ್ತಿದೆ.
       ವೇದಶಿಬಿರ, ಬಾಲಶಿಬಿರ, ವಾರ್ಷಿಕೋತ್ಸವ, ಶ್ರೀ ಶರ್ಮರೊಡನೆ ಮುಕ್ತ ಸಂವಾದ ಮುಂತಾದ ಸಾರ್ವಜನಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದ್ದು ಅವುಗಳಲ್ಲಿ ವೇದವಿದ್ವಾಂಸರ ಜೊತೆಗೆ RSS ನ ಪ್ರಮುಖರಾದ ಶ್ರೀ ಸು.ರಾಮಣ್ಣ, ಶ್ರೀ ಕಜಂಪಾಡಿಸುಬ್ರಮ್ಹಣ್ಯಭಟ್, ಶ್ರೀ ಪ್ರಭಾಕರಭಟ್ , ವೇದತರಂಗ ಮಾಸಿಕ ಪತ್ರಿಕೆಯ ಶ್ರೀ ಶ್ರುತಿಪ್ರಿಯ ಮೊದಲಾದವರು   ಪಾಲ್ಗೊಂಡು ಮಾರ್ಗದರ್ಶನ ಮಾಡಿದ್ದಾರೆ. ಪೂಜ್ಯ ಚಿದ್ರೂಪಾನಂದರ "ಗೀತಾಜ್ಞಾನಯಜ್ಞ:ವನ್ನೂ ಸಹ  ವೇದಭಾರತಿಯ ವತಿಯಿಂದ ನಡೆಸಲಾಗಿದೆ.

ಮುಂದಿನ ಕಾರ್ಯಕ್ರಮಗಳು:

1. ಇದೇ  ನವಂಬರ್ 10ರಂದು  ನೂರು ದಂಪತಿಗಳಿಂದ ಸಾಮೂಹಿಕ ಅಗ್ನಿಹೋತ್ರವು ಹಾಸನದಲ್ಲಿ  ನಡೆಯುತ್ತದೆ.

2. ಮುಂದಿನ ವರ್ಷ ಫೆಬ್ರವರಿ 10 ರಂದು ಹಾವೇರಿ ಸಮೀಪ ಮಗುಂದ ಆಶ್ರಮದಲ್ಲಿ ಸಾವಿರ ದಂಪತಿಗಳಿಂದ ಸಾಮೂಹಿಕ ಅಗ್ನಿಹೋತ್ರ ಕಾರ್ಯಕ್ರಮವು ವೇದಭಾರತಿಯ ಸಹಕಾರದೊಂದಿಗೆ ನಡೆಯಲಿದೆ. ಅದಕ್ಕಾಗಿ ಪೂಜ್ಯ ಚಿದ್ರೂಪಾನಂದರು ರಾಜ್ಯವ್ಯಾಪಿ ಪ್ರಚಾರವನ್ನು ಈಗಾಗಲೇ ಆರಂಭಿಸಿರುತ್ತಾರೆ. ನಮ್ಮೊಡನೆ  ವೇದಸುಧೆಯ ಅಭಿಮಾನಿಗಳೆಲ್ಲರೂ ಮಲಗಂದದ ಬೃಹತ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂಬುದು ವೇದಭಾರತಿಯ ಅಪೇಕ್ಷೆ. ವಿವರವನ್ನು ಪ್ರಕಟಿಸಲಾಗುವುದು.ಈಗಿನಿಂದಲೇ ಸಿದ್ಧತೆ ನಡೆಸಿಕೊಳ್ಳುವಿರಾ?
 ಶ್ರೀಸುಧಾಕರಶರ್ಮರ ಆರೋಗ್ಯವು ಸುಧಾರಿಸಲು ವೇದಭಾರತಿಯ ಮನವಿಗೆ ಹಲವರು ನೆರವು ನೀಡಿದ್ದಾರೆ.ಎಲ್ಲರಿಗೂ ಧನ್ಯವಾದಗಳು. ವೇದಜ್ಞಾನಪ್ರಸಾರದಲ್ಲಿ ಜೊತೆಜೊತೆಯಲ್ಲಿ ಸಾಗೋಣ  ಬನ್ನಿ.
ನಮಸ್ಕಾರಗಳು.
ಹರಿಹರಪುರಶ್ರೀಧರ್
ಸಂಪಾದಕ
ವೇದಸುಧೆ

No comments:

Post a Comment