ಇವತ್ತು ನನ್ನ ಹುಟ್ಟೂರು ನೆನಪಾಯ್ತು. ಹೌದು ತೇಟ್ ಹಾಗೆಯೇ! ಬೀದಿ ತುಂಬಾ ರಂಗೋಲಿ! ರಾಮಮಂದಿರದ ಬಾಗಿಲಲ್ಲಿ ಹಸಿರು ಚಪ್ಪರ!!
ಇದೆಲ್ಲಾ ಚನ್ನರಾಯಪಟ್ಟಣದ ದಲಿತ ಕಾಲೊನಿ ಎಂದು ಹೇಳುವ ಶ್ರೀದೇವೀ ನಗರದಲ್ಲಿ ಇಂದು ಕಂಡಿದ್ದು!! ಹುಣ್ಣಿಮೆ ಪ್ರಯುಕ್ತ ಅಲ್ಲಿನ ಜನರಿಗಾಗಿ ಸತ್ಯನಾರಾಯಣ ಪೂಜೆ ಏರ್ಪಡಿಸಿರುವುದಾಗಿಯೂ ನಾನು ಅಲ್ಲಿ ಬಂದು ಭಾಷಣ ಮಾಡಬೇಕೆಂದು ಆಹ್ವಾನ ಕೊಟ್ಟವರು ಸಂಸ್ಕೃತಭಾರತಿಯ ಶ್ರೀ ವಿಶ್ವನಾಥ ದೀಕ್ಷಿತ್. ಅಲ್ಲಿನ ಜನರಿಂದ ಅಗ್ನಿಹೋತ್ರ ಮಾಡಿಸಲು ಅವಕಾಶ ವಿದ್ದರೆ ವೇದಭಾರತಿಯ ಸದಸ್ಯರೊಡನೆ ನಾನು ಬರುವುದಾಗಿ ತಿಳಿಸಿದ್ದೆ. ಅದರಂತೆ ಇಂದು ನಾವು ಹನ್ನೊಂದು ಜನ ವೇದಭಾರತಿಯ ಸದಸ್ಯರು ಬೆಳಿಗ್ಗೆ 8.30 ಕ್ಕೆ ಚನ್ನರಾಯಪಟ್ಟಣದಲ್ಲಿದ್ದೆವು.
ಶ್ರೀದೇವಿನಗರಕ್ಕೆ ಪ್ರವೇಶಿಸಿದಾಗ ಅಲ್ಲಿನ ಹಬ್ಬದ ವಾತಾವರಣ ಕಂಡು ಚಕಿತಗೊಂಡೆವು. ಮೊದಲು ಅಗ್ನಿಹೋತ್ರ ಮಾಡಲು ನಿರ್ಧರಿಸಿ ಅಲ್ಲಿನ ಇಬ್ಬರು ದಂಪತಿಗಳನ್ನು ಕೂರಿಸಿದೆವು. ಪ್ರೇಮಾ ಭಗಿನಿ ಕೂಡ ಅಗ್ನಿಹೋತ್ರ ಮಾಡಲು ಕುಳಿತರು.
ಆರಂಭದಲ್ಲಿ "ಎಲ್ಲರಿಗಾಗಿ ವೇದ" ಉದ್ದೇಶವನ್ನು ತಿಳಿಸಿದ್ದಾಯ್ತು. ಅಗ್ನಿಹೋತ್ರ ಹೇಗೆ ಮಾಡಬೇಕೆಂಬ ಸೂಚನೆ ಕೊಟ್ಟೆ. ಬಹಳ ಶ್ರದ್ಧಾ ಭಕ್ತಿಯಿಂದ ಅಗ್ನಿಹೋತ್ರ ನಡೆಯಿತು. ಮಧ್ಯೆ ವಿವರಣೆ ನೀಡಿದ್ದಾಯ್ತು. ಕೊನೆಯಲ್ಲಿ ಹಲವರ ಕೈಲಿ ದ್ರಾಕ್ಷಿ ಗೋಡಂಬಿ ಕೊಟ್ಟು ಪೂರ್ಣಹುತಿ ನೀಡಲಾಯ್ತು. ನಂತರ ಅಲ್ಲಿನ ಯೋಜನೆಯಂತೆ ಸತ್ಯನಾರಾಯಣ ಪೂಜೆ ನಡೆಯಿತು. ನಂತರ ಪೂಜೆ-ವ್ರತದ ವೈದಿಕ ಕಲ್ಪನೆಯನ್ನು ನಾನು ಕೊಟ್ಟಾಗ ಜನರು ಆಲಿಸುತ್ತಿದ್ದ ಪರಿ ಕಣ್ತುಂಬಿ ಬಂದಿತ್ತು. ಹೌದು ಸರಿಯಾದ ವೈದಿಕ ಕಲ್ಪನೆ ಕೊಟ್ಟರೆ ಜನ ಸ್ವೀಕರಿಸಲು ಸಿದ್ಧ. ಕೊಡುವವರು ಬೇಕು ಅಷ್ಟೆ. ಪ್ರಸಾದ ಸ್ವೀಕರಿಸಿ ಹೊರಡುವಾಗ ಕಾಲಿಗೆ ನಮಸ್ಕರಿಸಿದ ಮುಗ್ಧ ಜನರ ಪ್ರೀತಿಯಿಂದ ನನ್ನ ಕಣ್ ತುಂಬಿ ಬಂದಿತ್ತು.











No comments:
Post a Comment