Pages

Saturday, July 24, 2010

ಭಾವಸಂಗಮ

ವೇದಸುಧೆಯ ಮಿತ್ರರೇ,
ಮಿತ್ರರಾದ ಸರ್ವಶ್ರೀ ನಾಗರಾಜ್, ವಿ.ಆರ್.ಭಟ್, ರಾಘವೇಂದ್ರನಾವಡ, ಹಂಸಾನಂದಿ, ಡಾ||ಜ್ಞಾನದೇವ್, ಸುಧಾಕರಶರ್ಮರು......ಹೀಗೆ ಹಲವರು ಉತ್ತಮವಾದ ಕವನಗಳನ್ನು ಬರೆಯುತ್ತಾರೆ. ಇಂದಿನ ದಿನಗಳಲ್ಲಿ ಬಹುಪಾಲು ಕವಿಗಳ ಕವನದ ವಸ್ತು ಯುವಕ-ಯುವತಿಯರ ನಡುವಿನ ಪ್ರೀತಿ-ಪ್ರೇಮ ,ಇದು ಸರ್ವೇ ಸಾಮಾನ್ಯ. ಆದರೆ ಅದಕ್ಕೂ ಮೀರಿ ನಮ್ಮ ಚಿಂತನೆ ಸಾಗಬಹುದೆಂಬುದಕ್ಕೆ ವೇದಸುಧೆಯಲ್ಲಿ ಈಗಾಗಲೇ ಪ್ರಕಟವಾಗಿರುವ ಕೆಲವು ಉತ್ತಮ ಕವನಗಳು ನಿದರ್ಶನಗಳಾಗಿವೆ. ಅವುಗಳನ್ನು ಭಾವಗೀತೆ ಎನ್ನಬಹುದು, ಅಧ್ಯಾತ್ಮ ಚಿಂತನೆಯೆ ನುಡಿಮುತ್ತುಗಳೆನ್ನಬಹುದು. ಈಗಾಗಲೇ ಭಟ್ಟರ "ಜಗದಮಿತ್ರ" ಕವಿನಾಗರಾಜರ "ಮೂಢ ಉವಾಚ" ಸಾಕಷ್ಟು ಜನರ ಮೆಚ್ಚುಗೆ ಪಡೆದಿವೆ. ಹೀಗೆ ಬರೆಯುವ ಎಲ್ಲಾ ಕವನಗಳನ್ನು ಇನ್ನು ಮುಂದೆ ಒಂದು ಲೇಬಲ್ ಅಡಿಯಲ್ಲಿ ಅವರವರ ಹೆಸರಲ್ಲಿ ಬರೆಯೋಣ. ಮುಂದೆ ಭಗವಂತನ ಕೃಪೆ ಇದ್ದರೆ ಒಂದು ಪುಸ್ತಕ ಹೊರತರಬಹುದಲ್ಲವೇ? ಅಂತೂ ಕವನಗಳೆಲ್ಲಾ ಒಂದೆಡೆ :"ಭಾವಸಂಗಮ" ಲೇಬಲ್ ಅಡಿಯಲ್ಲಿ ಇರಲಿ, ಅಲ್ಲವೇ?

ಅಮೃತಾತ್ಮನು ನೀನು

ಈ ದೇಹ ನೀನೆಂದು ತಿಳಿದಿರುವೆ ನೀನು|
ನಿಜತಿಳಿಯಬೇಕೇನು? ದೇಹವಲ್ಲವು ನೀನು||

ಶಿಶುವಾಗಿ
ಜನಿಸಿ, ಬೆಳೆದು ಯೌವ್ವನ ಪಡೆದು|
ವೃದ್ಧಾಪ್ಯದೆಡೆಗೆ, ದಿನದಿನವು ಸಾಗಿ
ಮುಪ್ಪು, ಮರಣವು ಬರಲು ನಿನಗೇಕೆ ಚಿಂತೆ?
ಹುಟ್ಟಿದಾ ದೇಹಕೆ ಅಂತ್ಯವಿದೆಯಂತೆ||

ಮೊದಲು
ಬಾಲ್ಯದ ಆಟ, ನಡುನಡುವೆ ಹುಡುಗಾಟ
ಯೌವ್ವನವು ಕಾಲಿಡಲು, ಸಂಸಾರದಾಟ|
ಆಡಿದವನಾರು? ಆಡಿಸಿದವನಾರು?
ಆಡುವಾ ದೇಹದೊಳು ಇರುವ ನೀನಾರು?||

ನೀ ಹುಟ್ಟಲಿಲ್ಲ,ತಾರುಣ್ಯ ನಿನದಲ್ಲ
ವೃದ್ಧಾಪ್ಯ ಬರಲಿಲ್ಲ
, ಸಾವೆಂಬ ಸುಳಿವಿಲ್ಲ|
ಅಂಗಿ ಬದಲಿಸಿದಂತೆ ದೇಹ ಬದಲಿಸಿದೆ ನೀನು
ಚೈತನ್ಯವೇ ನೀನು, ಅಮೃತಾತ್ಮನು ನೀನು||

Friday, July 23, 2010

ವೇದೋಕ್ತ ಜೀವನ ಪಥ

ಜೀವನ ಬುನಾದಿ -8
ವೇದ ಮತ್ತೆ ಮತ್ತೆ ಸಾರುತ್ತಲಿದೆ:
ಗೂಹತಾ ಗುಹ್ಯಂ ತಮೋ ವಿ ಯಾತ ವಿಶ್ವಮತ್ರಿಣಮ್ ಜ್ಯೋತಿಷ್ಕರ್ತಾ ಯದುಶ್ಮಸಿ (ಋಕ್.1.86.10)"ಮಾ ನೋ ದೀರ್ಘಾ ಅಭ ಸಹಸ್ತಮಿಸ್ರಾಃ" (ಋಕ್.2.27.14) -ಪ್ರಭೋ, ದೀರ್ಘವಾದ ಅಂಧಕಾರಗಳು ನಮ್ಮನ್ನು ಆವರಿಸದಿರಲಿ- ಎಂದೇ. ಭಕ್ತನ ಭಾವನಾಭರಿತ ಹೃದಯದ ಮೇಲೆ ಅಂಕಿತಗೊಳಿಸುವುದಾದರೂ - "ಜ್ಯೋತಿರ್ವೃಣೀತ ತಮಸೋ ವಿಜಾಸನ್""ಆರ್ಯಾ ಜ್ಯೋತಿಷಗ್ರಾಃ" (ಋಕ್.7.33.7)- ಜ್ಯೋತಿಯನ್ನು ಮುಂದಿಟ್ಟುಕೊಂಡು ಮುನ್ನಡೆಯುವವರೇ ಆರ್ಯರು- ಎಂಬ ಶಬ್ದಗಳಿಂದಲೇ. ವೇದಗಳ ಈ ಜ್ಯೋತಿ ಬೆಂಕಿಯಲ್ಲ, ಸೂರ್ಯನೂ ಅಲ್ಲ, ನಿಷ್ಕಲ್ಮಶವಾದ,ಪರಮ ಪರಿಷ್ಕೃತವಾದ ದಿವ್ಯಜ್ಞಾನ. (ಋಕ್.3.39.7) - ಅಂಧಕಾರದಿಂದ ದೂರಸರಿದು ಜ್ಯೋತಿಯನ್ನು ತುಂಬಿಕೊಳ್ಳಬೇಕು- ಎಂಬ ಪುನೀತ ಭಾವನೆಯನ್ನೇ. ಹೆಚ್ಚೇನು? ಆರ್ಯರ - ಶ್ರೇಷ್ಠರ ಸ್ಫುಟ ಚಿತ್ರವನ್ನು ಚಿತ್ರಿಸುವುದಾದರೂ

ಎಂತು ಅರ್ಚಿಸಲಿ?

ಎಂತು ಅರ್ಚಿಸಲಿ?

ನಿನ್ನನೆಂತು ಅರ್ಚಿಸಲಿ, ಹೇ ದೇವಾ|
ಸತ್ಪಥವ ತೋರಿ ತಣಿಸೆನ್ನ ಮನವಾ||

ಸರ್ವವ್ಯಾಪಕ ಸರ್ವಾಂತರ್ಯಾಮಿ ನೀನು|
ಘಂಟಾನಾದವ ಮಾಡಿ ಬಾ ಎನ್ನಲೇನು?||

ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ನೀನು|
ಕಿರುಪೀಠವ ತೋರಿ ಕುಳ್ಳಿರಿಸಲೇನು?||

ದಿವ್ಯ ಚೇತನ ಪರಿಶುದ್ಧ ಪರಮಾತ್ಮ ನೀನು|
ಅಭಿಷೇಕವ ಮಾಡಿ ಕೊಳೆ ತೊಳೆಯಲೇನು?||

ಸಕಲ ಚರಾಚರ ಸೃಷ್ಟಿಕರ್ತ ನೀನಲ್ಲವೇನು?|
ನಿನ್ನ ಸೃಷ್ಟಿಯ ಹೂವ ನಿನಗೆಂತು ಕೊಟ್ಟೇನು?||

ಅನೂಹ್ಯ ಅನಂತ ಅಭೋಕ್ತ ಅಚ್ಯುತನು ನೀನು|
ನಿನಗೆ ನೈವೇದ್ಯವೆನೆ ಕೊಡಬಹುದು ನಾನೇನು?||

ಸಕಲ ಜೀವರಿಗೆ ನೆಲೆ ಕೊಟ್ಟ ಧೀಮಂತ ನೀನು|
ನಿನಗೊಂದು ಗುಡಿ ಕಟ್ಟಿ ನೆಲೆಗೊಳಿಸಲೇನು?||

ರೂಢಿರಾಡಿಯಲಿ ಮುಳುಗಿ ಇರಲಾರೆ ನಾನು|
ಹೊರಬರುವ ದಾರಿಯನು ತೋರುವೆಯ ನೀನು?||

ನಿನ್ನನೆಂತು ಅರ್ಚಿಸಲಿ, ಹೇ ದೇವಾ|
ಸತ್ಪಥವ ತೋರಿ ತಣಿಸೆನ್ನ ಮನವಾ||

-ಕವಿ ನಾಗರಾಜ್
-

ನಮ್ಮ ಆಚರಣೆಗಳು-೧

ಬನ್ನಂಜೆ ಗೋವಿಂದಾಚಾರ್ಯರ ಪ್ರವಚನಗಳನ್ನು ಇಂದಿನಿಂದ ವೇದಸುಧೆಯು ಪ್ರಕಟಿಸುತ್ತದೆ. ನಮ್ಮ ಆಚರಣೆಗಳು ಎಷ್ಟು ವೈಜ್ಞಾನಿಕ! ಎಂದುದನ್ನು ಆಚಾರ್ಯರ ಸರಳ ಸ್ಪಷ್ಟ ಮಾತುಗಳಲ್ಲಿ ಕೇಳಿ. ಪ್ರತಿಕ್ರಿಯಿಸಲು ಮರೆಯದಿರಿ



ಕೃಪೆ: ಕನ್ನಡ ಆಡಿಯೋ ಡಾಟ್ಕಾಮ್

Thursday, July 22, 2010

ದೇವರು ಹೇಳಿದ ಸುಪ್ರಭಾತ

ಮುಂಜಾನೆ ನೀನೆದ್ದೆ - ನಾನು ಕಾದಿದ್ದೆ
ನಿನ್ನೆರಡು ಮಾತಿಗೆ, ಮುಗುಳ್ನಗೆಗೆ;
ನಿನಗೆ ಪುರುಸೊತ್ತಿಲ್ಲ !

ಗಡಿಬಿಡಿಯಲಿ ನೀ ನಿತ್ಯಕರ್ಮ ಮುಗಿಸಿದೆ
ನಿನ್ನ ನಿರೀಕ್ಷಣೆಯಲ್ಲೇ ನಾನಿದ್ದೆ;
ಯಾವ ಬಟ್ಟೆ ಧರಿಸಲಿ
ಎಂಬ ಗುಂಗಿನಲ್ಲಿ ನೀನಿದ್ದೆ;
ನಿನಗೆ ಸಮಯವಿಲ್ಲ !

ತಿಂಡಿ ತಿನ್ನುವಾಗೊಮ್ಮೆಯಾದರೂ
ನೀ ನೋಡುವಿಯೆಂದುಕೊಂಡಿದ್ದೆ;
ಇಂದೇನು ಮಾಡಬೇಕೆಂಬ
ಚಿಂತೆಯಲಿ ನೀನಿದ್ದೆ;
ನಿನಗೆ ಸಮಯವಿಲ್ಲ !

ಮನೆಯಿಂದ ಹೊರಟಾಗಲೊಮ್ಮೆ
ಕೈಬೀಸಿ ವಿದಾಯ ನುಡಿಯಲೂ
ನಿನಗಾಗಲಿಲ್ಲ ! ಅಷ್ಟು ಆತುರ ನಿನಗೆ;
ನಿನಗೆ ಸಮಯವಿಲ್ಲ !

ದಿನವಿಡೀ ನಾಕಾದೆ - ನಿನ್ನ ಗಮನಿಸಿದೆ
ನಿನ್ನ ಕೆಲಸದ ಒತ್ತಡದಿ
ನನ್ನ ನೆನಪು ನಿನಗಾಗದಿರಬಹುದು;
ನಿನಗೆ ಸಮಯವಿಲ್ಲ !

ಮಧ್ಯಾಹ್ನದೂಟ ಮಾಡುವ ಮುನ್ನ
ಅರೆಘಳಿಗೆ ನೀ ಸುಮ್ಮನೆ ಇದ್ದಾಗ
ಮಾತಾಡಬಹುದೇನೋ ಅನ್ನಿಸಿತು;
ನಾನು ಕಾದಿದ್ದೇ ಬಂತು;
ನಿನಗೆ ಗೊತ್ತೇ ಆಗಲಿಲ್ಲ;
ನಿನಗೆ ಸಮಯವಿಲ್ಲ !

ಯಾಂತ್ರಿಕವಾಗಿ ಟಿವಿ ನೋಡಿ
ಮಡದಿ ಮಕ್ಕಳೊಂದಿಗೆ ಊಟ ಮಾಡಿ
ಸುಸ್ತಾಗಿ ಮಲಗುವ ಮುನ್ನ
ನನ್ನೊಡನೆ ದಿನದ ಕಷ್ಟ ಸುಖ
ಹಂಚಿಕೊಳ್ಳಬಹುದೆಂದು ನಾನು ಕಾದಿದ್ದೆ;
ನಿದ್ರೆಗೆ ನೀನು ಜಾರಿದೆ;
ನಿನಗೆ ಸಮಯವಿಲ್ಲ !

ದಿನಚರಿ ಹೀಗೇ ಸಾಗುವುದು
ಬೆಳಗಾಗುವುದು, ರಾತ್ರಿಯಾಗುವುದು;
ನಾನು ಕಾಯುತ್ತಿರುವೆ, ಪ್ರೀತಿಯಿಂದ
ನಿನಗೆ ಸಮಯ ಸಿಗಬಹುದೆಂದು;
ನಿನಗೆ ಶುಭವಾಗಲಿ !

-ಕವಿ ನಾಗರಾಜ್
-