Pages

Friday, January 14, 2011

ಸತ್ತ ಕೈ ಮತ್ತೆ ಬಂದಾಗ, ಭಾಗ-೨

ನನ್ನ ಕೈಗೆ ಪುನರ್ಜೀವ ಬಂದ ಪವಾಡದ ಬಗ್ಗೆ ಇಂದು ಬರೆಯುತ್ತೇನೆಂದು  ನಿನ್ನೆ ತಿಳಿಸಿದ್ದೆ. ಏನ್ ಸಾರ್ ಅದು ಪವಾಡ? ಯಾವ ಸ್ವಾಮೀಜಿ ಹತ್ತಿರ ಹೋಗಿದ್ರಿ? ಅಂತಾ ನನ್ನ ಪರಿಚಯದವರು ಆಗಲೇ ನನಗೆ ಫೋನಿನಲ್ಲಿ ಕೇಳಿದ್ದಾಯ್ತು. ಪವಾಡ! ಆಬಗ್ಗೆ  ನಾನು ಏನೂ ಬರೆಯುವುದಿಲ್ಲ. ಆದರೆ ನನಗೆ ಪವಾಡವಾಗಿ ಗುಣಪಡಿಸಿದ್ದು ಪ್ರಾಣಾಯಾಮ!!    ಡಾ|| ಅರುಣಾಚಲಯ್ಯ  ಎಂಬ ವೈದ್ಯರೊಬ್ಬರು ಹಾಸನದಲ್ಲಿದ್ದರು. ಈಗ ಬೆಂಗಳೂರಿನಲ್ಲಿದ್ದಾರೆಂದು ಕಾಣುತ್ತೆ. ಒಂದು ಪ್ರಾಣಾಯಾಮ ತರಗತಿಯಲ್ಲಿ  ನನ್ನ ಅನುಭವವನ್ನು ಹೇಳಿದಾಗ, ಅವರು ಗೇಲಿ ಮಾಡಿ ಬಿಟ್ಟರು. ನಾನೇನೂ ಸುಮ್ಮನಾಗಲಿಲ್ಲ. "ಅಲ್ಲಾ ಡಾಕ್ಟ್ರೇ, ಪ್ರಾಣಾಯಾಮ ಅಭ್ಯಾಸ ಮಾಡುತ್ತಲೇ ನನ್ನ  ಕೈಗೆ ಪುನರ್ಜೀವ ಬಂದು ಈಗ ನಾನೂ ಎಲ್ಲರಂತೆ  ಸಾಕ್ಷಿಯಾಗಿ ಎದುರಿಗೇ ನಿಂತಿರುವಾಗ ,ನೀವು ತಮಾಶೆ ಮಾಡ್ತೀರಲ್ಲಾ! ಹಾಗಾದರೆ ನನ್ನ ಅನುಭವವೇ ಸುಳ್ಳೇ?"-ಎಂದು ಗಟ್ಟಿಯಾಗೇ ಹೇಳಿದಾಗ ಅವರು ಸುಮ್ಮನಾಗಬೇಕಾಯ್ತು. ಅಷ್ಟೇ ಅಲ್ಲ, ಅವರೂ ಪ್ರಾಣಾಯಾಮ ತರಗತಿಗಳಿಗೆ ಬರಲು ಆರಂಭಿಸಿ ಈಗ ಅವರು ಆರ್ಟ್ ಆಫ್ ಲಿವಿಂಗ್ ನಲ್ಲಿ ಟೀಚರ್  ಆಗಿರಬಹುದು.
ಈಗ ನನ್ನ ಕಥೆ ಮತ್ತೆ ಶುರು ಮಾಡುವೆ. ನನ್ನ ಎಡಗೈ ನಿತ್ರಾಣದಿಂದ  ನಾನು ಮಾನಸಿಕವಾಗಿ ಕುಸಿದುಹೋಗಿದ್ದೆ. ಒಂದು ದಿನ ಬೆಳಿಗ್ಗೆ ನ್ಯೂಸ್ ಪೇಪರ್ ಜೊತೆಯಲ್ಲಿ ಒಂದು ಕರಪತ್ರವು  ನನ್ನ ಮನೆ ಬಾಗಿಲಲ್ಲಿ ಬಿದ್ದಿತ್ತು.  ಎಸ್.ಎಸ್.ವೈ [ಸಿದ್ಧ ಸಮಾಧಿ ಯೋಗ] ತರಗತಿಯು ಆರಂಭವಾಗುವ ಬಗ್ಗೆ ಪ್ರಕಟಣೆ ಅದರಲ್ಲಿತ್ತು. ನೋಡಿದೆ"ಬಿ.ಪಿ. ಶುಗರ್, ಹೃದ್ರೋಗ, ಇತ್ಯಾದಿ ಯಾವುದೇ ಹಳೆಯ ರೋಗಗಳಿಗೆ ಯಾವ ಔಷಧ ವಿಲ್ಲದೆ ಚಿಕಿತ್ಸೆ"
ಕರಪತ್ರ ನೋಡಿದೊಡನೆ  ಧ್ಯಾನ-ಪ್ರಾಣಾಯಾಮ ತರಗತಿಯನ್ನು ಸೇರಲು ನಿರ್ಧರಿಸಿದೆ. ಹಾಸನದ ಜವೇನಹಳ್ಳಿ ಮಠದಲ್ಲಿ ಆರಂಭವಾದ ಆ ಶಿಭಿರವನ್ನು ನಡೆಸಿಕೊಟ್ಟವರು ಶ್ರೀ ಸುರೇಶ್ ಗುರೂಜಿ. ತರಗತಿ ಪ್ರಾರಂಭವಾಯ್ತು. ವಜ್ರಾಸನದಲ್ಲಿ ಕುಳಿತು ಪ್ರಾಣಾಯಾಮ ಅಭ್ಯಾಸ ಶುರುಮಾಡಬೇಕು. ಎರಡೂ ಹಸ್ತಗಳನ್ನು ಸೊಂಟದ ಮೇಲಿಡಬೇಕು. ಬಲಗೈ ಇಡಲು ಸಾಧ್ಯ, ಎಡಗೈ?    ಎಡ ಹಸ್ತವನ್ನು ಬಲಹಸ್ತದ ಸಹಾಯದಿಂದ ಸೊಂಟದ ಮೇಲಿಟ್ಟೆ. ವಿಭಾಗಶ: ಪ್ರಾಣಾಯಾಮ ಶುರುವಾಯ್ತು. ಅಂದು ಕಳೆಯಿತು. ಎರಡನೆಯ ದಿನವೂ ಆರಂಭದಲ್ಲಿ ಸೊಂಟದ ಮೇಲೆ ಎಡಹಸ್ತವನ್ನು ಬಲಹಸ್ತದ ಸಹಾಯದಿಂದಲೇ ಇಟ್ಟು  ಪ್ರಾಣಾಯಾಮ ಶುರು ಮಾಡಿದೆ. ಆನಂತರ ಹಸ್ತಗಳನ್ನು ಕೊಂಕಳಲ್ಲಿ ಇಡಬೇಕು. ಮತ್ತೆ ಅದೇ ರೀತಿ  ಎಡಗೈಯ್ಯನ್ನು  ಬಲಗೈ ಸಹಾಯದಿಂದ ಇಟ್ಟೆ. ಹೀಗೆ ಎರಡೂ ಸ್ಥಿತಿಯ ಪ್ರಾಣಾಯಾಮಗಳನ್ನು ಎರಡೂ ದಿನ ನಾಲ್ಕಾರು ಭಾರಿ ಪ್ರಯತ್ನ ಪೂರ್ವಕವಾಗಿ ಮಾಡಿದೆ. ಮೂರನೆಯ ದಿನ ಪ್ರಾಣಾಯಾಮ ತರಗತಿಯ ಆರಂಭದಲ್ಲಿ ಸ್ವಲ್ಪ ಎಡಗೈಯ್ಯನ್ನು  ಬಲಗೈ ಸಹಾಯದಿಂದಲೇ ಸ್ವಲ್ಪ ಸುಲಭವಾಗಿ ಸೊಂಟದಮೇಲಿಡಲು ಸಾಧ್ಯವಾಯ್ತು. ಆದಿನ ನನ್ನ ಜೀವನದಲ್ಲಿ ಮರೆಯಲಾಗದ ದಿನ.ಆಶ್ಚರ್ಯ! ಪ್ರಾಣಾಯಾಮ ಅಭ್ಯಾಸ ಮಾಡುತ್ತಾ ಮಾಡುತ್ತಾ ಕೈಯಲ್ಲಿ ಶಕ್ತಿಯ ಸಂಚಾರ ಆರಂಭ!! ಚಕಿತನಾದೆ. ಎನೋ ಒಂದು ಶಕ್ತಿಯು ಪ್ರವಹಿಸುವಂತೆ ಭಾಸವಾಯ್ತು. ಅಬ್ಭಾ! ಅದೆಷ್ಟು ದಿಗಳಿಂದ ಕಳೆದುಕೊಂಡಿದ್ದ ಕೈಯ್ಯನ್ನು ನಿಧಾನವಾಗಿ ಆಡಿಸುವಂತಾಯ್ತು. ಅಂದು ನನಗೆ ಹಬ್ಬ!!
ನೋಡಿ, ಮನುಷ್ಯನಿಗೆ ಎಲ್ಲಾ ಚೆನ್ನಾಗಿದ್ದಾಗ ಜೀವನ ಸಪ್ಪೆ ಎನಿಸುತ್ತೆ. ಕೊಟ್ಟಿದ್ದನ್ನು ಭಗವಂತ ಕಿತ್ತುಕೊಂಡು ಮತ್ತೆ ಕೊಟ್ಟಾಗ ನಮಗೆ ಅದರ ಮಹತ್ವ ಅರ್ಥವಾಗುತ್ತೆ. ಕ್ರಮೇಣ ದಿನಕಳೆದಂತೆ ಅದರ ಮಹತ್ವ ಮರೆಯಾಗುತ್ತಾ ಬರುತ್ತೆ. ನಾನು ಈ ವಿಚಾರದಲ್ಲಿ ಒಬ್ಬ ಪಕ್ಕಾ  ಉಧಾಹರಣೆಗೆ ಯೋಗ್ಯ. ಕಾರಣವೇನೆಂದರೆ ಧ್ಯಾನ-ಪ್ರಾಣಾಯಾಮವನ್ನು ಸತತವಾಗಿ ಎರಡು-ಮೂರು ವರ್ಷಗಳು ಮಾಡಿಕೊಂಡು ನೆಮ್ಮದಿಯ ಜೀವನ ಮಾಡುತ್ತಿದ್ದ ನಾನು ಕ್ರಮೇಣ ಅನ್ಯಾನ್ಯ ಸಾಮಾಜಿಕ ಕಾರ್ಯಕ್ರಮದಲ್ಲಿ ನನ್ನನ್ನು ತೊಡಗಿಸಿಕೊಂಡವನು ನನ್ನ ಜೀವನ ಕ್ರಮವನ್ನು ವೆತ್ಯಾಸ ಮಾಡಿಕೊಂಡೆ. ಈಗ ಸಣ್ಣಪುಟ್ಟ  ರೋಗಗಳು ನನ್ನನ್ನು ಭಾಧಿಸುತ್ತವೆ. ಎಲ್ಲಕ್ಕೂ ನನ್ನಲ್ಲೇ ಪರಿಹಾರವಿದೆ, ಆದರೆ ನಾನೊಬ್ಬ ಭಾವುಕ. ಯವುದೋ ವಿಚಾರಕ್ಕೆ ಅಂಟಿಕೊಂಡರೆ  ನನ್ನ ಎಲ್ಲಾ ಸಮಯವನ್ನೂ ಅದಕ್ಕೆ ಮೀಸಲು ಮಾಡಿ ನನ್ನನ್ನು ನಾನು ಮರೆಯುತ್ತೇನೆ. ನೀವು ಹೀಗಾಗಬೇಡಿ ಎಂದು ವಿನಂತಿಸಲೇ ನಾನು ಈ ಪುಟ್ಟ  ಬರಹವನ್ನು  ಮುಕ್ತಾಯ ಮಾಡುವೆ.
--------------------------------------
 ಪ್ರಾಣಾಯಾಮದಿಂದ ನನಗೆ ಗುಣವಾಯ್ತೆಂದರೆ  ಸೋದರಿ ಚಿತ್ರನಂಬಲಾಗುತ್ತಿಲ್ಲವೆಂದು ತಿಳಿಸಿದ್ದಾರೆ. ಯಾವ ಪ್ರಾಣಾಯಾಮ? ಎಂದಿದ್ದಾರೆ. ಎಸ್.ಎಸ್.ವೈ ನಲ್ಲಿ ಹೇಳಿಕೊಡಲಾಗುವ ಈ ಪ್ರಾಣಾಯಾಮವನ್ನು "ವಿಭಾಗೀಯ ಪ್ರಾಣಾಯಾಮಗಳು" ಎನ್ನುತ್ತಾರೆ. ಯೋಗಶಾಸ್ತ್ರದಲ್ಲಿ ಏನಿದೆಯೋ ನನಗೆ ತಿಳಿಯದು. ಆದರೆ ನನಗೆ ವರವಾದ ವಿಭಾಗೀಯ ಪ್ರಾಣಾಯಾಮದ ಒಂದು ಚಿಕ್ಕ ಕ್ಲಿಪ್ ಇಲ್ಲಿ ಹಾಕಿರುವೆ ಸೋದರಿ ಚಿತ್ರ ಇವರಿಗಾಗಿ. ಎಸ್.ಎಸ್.ವೈ ನಲ್ಲಿ ಹೇಳಿಕೊಡಲಾಗುವ ಪ್ರಾಣಾಯಾಮಗಳಲ್ಲಿ  ಇದು ಒಂದು. ಇಲ್ಲಿ ನನಗೆ ಯಾರ ಬಗ್ಗೆಯೂ  ಪ್ರಚಾರಕೊಡಬೇಕೆಂಬ ಆಸೆ ಇಲ್ಲ. ಆದರೆ ನನ್ನ ಅನುಭವವನ್ನು ಮುಕ್ತವಾಗಿ ಹಂಚಿಕೊಂಡಿರುವೆ ಅಷ್ಟೆ.


Thursday, January 13, 2011

ಸತ್ತ ಕೈ ಮತ್ತೆ ಬಂದಾಗ

ಸಾಮಾನ್ಯವಾಗಿ ಭಾವಜೀವಿಗಳಲ್ಲಿ ಒಂದು ಕೊರತೆ ಕಾಣುತ್ತೆ. ಯಾವುದೋ ಒಂದು ಭಾವಕ್ಕೆ ಬಂಧಿಯಾಗಿದ್ದರೆ ಉಳಿದದ್ದೆಲ್ಲವನ್ನೂ ಕಡೆಗಣಿಸುವ ಪ್ರವೃತ್ತಿ.ಉಧಾಹರಣೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಅನೇಕರನ್ನು ನೋಡಿದ್ದೇನೆ. ಸರಿಯಾದ ಸಮಯಕ್ಕೆ  ಸ್ನಾನವಿಲ್ಲ, ಸರಿಯಾದ ಸಮಯಕ್ಕೆ ಆಹಾರವಿಲ್ಲ, ಸರಿಯಾದ ನಿದ್ರೆ ಇಲ್ಲ.ಶರೀರ ಮನಸ್ಸುಗಳಿಗೆ ಅಗತ್ಯವಾದ ವ್ಯಾಯಾಮವಿಲ್ಲ. ಆದರೆ ಎಲ್ಲದರಬಗ್ಗೆ ಬರೆಯುವುದಂತೂ ನಿಜ. ಮನುಷ್ಯನಿಗೆ ತನ್ನ ದೈಹಿಕ-ಮಾನಸಿಕ ಆರೋಗ್ಯವು ತನ್ನ ನಿಯಂತ್ರಣದಲ್ಲಿಲ್ಲದಿದ್ದರೆ ಏನು ಮಾಡಿ ಏನು ಪ್ರಯೋಜನ? [ ಮದ್ಯಸೇವನೆಮಾಡಿ,ಧೂಮಪಾನಮಾಡುತ್ತಾ ಬರೆಯುವವರೂ ಇದ್ದಾರೆ. ಇವರ ಬಗ್ಗೆ ಚರ್ಚಿಸುವುದಿಲ್ಲ]
ಸುಧಾಕರಶರ್ಮರಂತವರು ಅಪರೂಪ. ತಾವು ಯೋಗಿಯಂತೆ ಬದುಕುತ್ತಾ , ಆಹಾರವಿಹಾರಗಳಿಗೆ ಒಂದು ಪಥ್ಯವನ್ನು ಹಾಕಿಕೊಂಡು, ಪ್ರಾಣಾಯಾಮ-ಯೋಗವನ್ನು ಕಡೆಗಣಿಸದೆ, ಸಾಹಿತ್ಯಕೃಷಿ, ಅಧ್ಯಯನ ಮಾಡುತ್ತಾ, ಸಾಮಾಜಿಕ ಜಾಗೃತಿಗಾಗಿ ಚಟುವಟಿಕೆಗಳನ್ನು ನಡೆಸುತ್ತಾ ಮಾದರಿಯಾಗಿ ಬಾಳುವ ಕ್ರಮ.

           ನನಗಿರುವ ಕೊರತೆಗಳಿಗೆ ಪರಿಹಾರ ಹುಡುಕಲೆಂದೇ ಈ ಮಾತುಗಳು. 
ಒಂದು ಘಟನೆಯನ್ನು ವೇದಸುಧೆಯ ಎಲ್ಲಾ ಅಭಿಮಾನಿಗಳ ಗಮನಕ್ಕೆ ತಂದುಬಿಡುತ್ತೇನೆ. ಸುಮಾರು ೧೫ ವರ್ಷಗಳ ಹಿಂದೆ ಸರ್ವೈಕಲ್ ಸ್ಪಾಂಡಲೈಟಿಸ್ ಸಮಸ್ಯೆಯಿಂದಾಗಿ ಒಂದು ರಾತ್ರಿ ಇದ್ದಕ್ಕಿದ್ದಂತೆ ನನ್ನ ಎಡಗೈ  ಶಕ್ತಿಯನ್ನು ಕಳೆದುಕೊಂಡಿತು. ಅಂದರೆ ನನ್ನ ಪಾಲಿಗೆ ಅದು ಸತ್ತಂತಾಯ್ತು. ಕೈ ಒಂದಿಂಚೂ ಮೇಲೆತ್ತಲಾಗುತ್ತಿಲ್ಲ. ಗಾಭರಿಯಾಯ್ತು. ಬೆಳಿಗ್ಗೆ ಎದ್ದವನೇ ಆತಂಕದಿಂದ  ನನ್ನ ಮಿತ್ರರಾದ  ಹಾಸನದ " ಧರ್ಮಸ್ಥಳ ಆಯುರ್ವೇದಿಕ್ ಕಾಲೇಜಿನ " ಪ್ರಾಂಶುಪಾಲರಾದ ಡಾ|| ಪ್ರಸನ್ನರಾವ್ ಅವರಿಗೆ ಫೋನ್ ಮಾಡಿದೆ. ಗಾಭರಿ ಬೇಡ. ಬನ್ನಿ ಸರಿಮಾಡುತ್ತೇನೆಂದು ಭರವಸೆ ನೀಡಿದರು. ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಎಂಟು ದಿನಗಳು ಸತತವಾಗಿ ಆಯಿಲ್ ಮಸ್ಸೇಜ್, ಸ್ಟೀಮ್  ಬಾತ್ ಎಲ್ಲಾ ಮಾಡಿದ್ದಾಯ್ತು. ಏನೂ ಪರಿಣಾಮ ಬೀರಲಿಲ್ಲ. ನನಗೆ ಆತಂಕ ಹೆಚ್ಚಾಯ್ತು. ನಾನೆಂದೆ "ಡಾಕ್ಟ್ರೇ, ಏನೂ ಸುಧಾರಿಸಲಿಲ್ಲವಲ್ಲಾ! ನನ್ನನ್ನು ನಿಮ್ಹ್ಯಾನ್ಸ್ ಗೆ [ಹೀಗೆಂದಾಗ ಹುಚ್ಚಾಸ್ಪತ್ರೆಗೆ ಎಂದು ಗೇಲಿ ಮಾಡಿದವರಿದ್ದಾರೆ] ಕಳಿಸಿ ಬಿಡಿ. ಅಲ್ಲಾದರೂ ತೋರಿಸುತ್ತೇನೆ" 
ಆಗ ಪ್ರಸನ್ನರಾಯರು ಹೇಳಿದರು" ನೋಡಿ ಶ್ರೀಧರ್ ನೀವು ಅಲ್ಲಿ ತೋರಿಸಿದೊಡನೆ ಕುತ್ತಿಗೆ ಭಾಗದಲ್ಲಿ ಆಪರೇಶನ್ ಮಾಡಬೇಕೆಂದು ಹೇಳುತ್ತಾರೆ. ಆದರೆ ನೀವು ಆಪರೇಶನ್ ಮಾಡಿಸಿಕೊಳ್ಳಬೇಡಿ. ನನಗೆ ಫೋನ್ ಮಾಡಿ ಬೇರೆ ದಾರಿ ಹುಡುಕೋಣ ವೆಂದರು.ನಿಮ್ಹ್ಯಾನ್ಸ್ ನಲ್ಲಿ ಮೊದಲು ಪರೀಕ್ಷಿಸಿದ ವೈದ್ಯರು ಸುಮಾರು ಐನೂರು ರೂಪಾಯಿಗಳ ಮಾತ್ರೆ ಬರೆದುಕೊಟ್ಟರು. ಮೂರು ದಿನಗಳ ನಂತರ  ನನ್ನನ್ನು ಪರೀಕ್ಷಿಸಿದ ಹಿರಿಯ ವೈದ್ಯರು ಈ ಮಾತ್ರೆ ಬೇಡ " ಒಂದು ಆಪರೇಶನ್ ಆಗಬೇಕು, ಅದೂ ನೂರಕ್ಕೆ ನೂರು ಭರವಸೆ ಇಲ್ಲ. ಪ್ರಯತ್ನ ಮಾಡಬೇಕಷ್ಟೆ." ಎಂದರು . ಆಗ ಬೇರೆ ದಾರಿ  ಇಲ್ವಾ ಡಾಕ್ಟ್ರೇ ಎಂದಾಗ ಫಿಸಿಯೋ ತೆರೆಫಿ ಪ್ರಯತ್ನಿಸಬಹುದು ಅದು ತುಂಬಾ ನಿಧಾನ. ಸುಧಾರಣೆ ಕಷ್ಟ. ಎಂದರು.ಆದರೂ ಫಿಸಿಯೋ ತೆರೆಫಿ ಚಿಕಿತ್ಸೆ ಆರಂಭಿಸಲಾಯ್ತು. ಅಲ್ಲೂ ಸುಧಾರಿಸಲೇ ಇಲ್ಲ. ಆಗ ಸುಮಾರು ಆರು ತಿಂಗಳು ನನ್ನ ಸ್ಥಿತಿ ದೇವರೇ ಬಲ್ಲ. ಒಂದು ಕೈಯಲ್ಲಿ ಎಲ್ಲಾ ಕೆಲಸ ಮಾಡಬೇಕು. ಹೆಚ್ಚು ದಿನ ರಜೆ ಹಾಕುವಂತಿಲ್ಲ.
ಈ ಮಧ್ಯೆ ನನ್ನ ಮಿತ್ರರೊಬ್ಬರು ಒಂದು ಸಲಹೆ ನೀಡಿದರು. ಮುಂಬಯಿಯಲ್ಲಿ ಒಬ್ಬ ಸ್ಪಿರಿಚುಯಲ್ ಹೀಲರ್ ಇದ್ದಾರೆ. ಅವರಹತ್ತಿರ ಹೋದರೆ ಕೇವಲ ಸ್ಪರ್ಷಮಾತ್ರದಿಂದ ಗುಣಪಡಿಸುತ್ತಾರಂತೆ. ಫೋನ್ ನಂಬರ್ ಪಡೆದು ಅವರನ್ನು ಹುಡುಕಿದೆ. ಅವರು ಧಾರವಾಡದಲ್ಲಿ ಕ್ಯಾಂಪ್ ಮಾಡಿದ್ದರು. ಮುಳುಗುವವನಿಗೆ ಕಡ್ಡಿ ಕಂಡರೂ ಹಿಡಿದುಕೊಳ್ಳುವಂತೆ  ಅವರ ಬಳಿ ಹೋದೆ. ರಾತ್ರಿ ಟ್ರೈನ್ ನಲ್ಲಿ ಪ್ರಯಾಣಮಾಡುವಾಗ ಅನುಭವಿಸಿದ ನೋವು ಅವರ ಸ್ಪರ್ಷದ ನಂತರ ಸ್ವಲ್ಪ ಕಾಲ ಇರಲಿಲ್ಲ. "ನಾಲ್ಕೈದು ಭಾರಿ ಬಂದರೆ ಗುಣಪಡಿಸುವೆ" ಎಂದರು..... ಮತ್ತೆ ಅವರ ಬಳಿ ಹೋಗಲಾಗಲಿಲ್ಲ. ಆದರೂ ಔಷಧಿ-ಮಾತ್ರೆ ಇಲ್ಲದೆ, ಆಪರೇಶನ್ ಇಲ್ಲದೆ ನಾನು ಸಂಪೂರ್ಣ ಗುಣಮುಖನಾದೆ. ಅದು ಹೇಗೆ? ಆ ಪವಾಡವನ್ನು ನಾಳೆ ಬರೆಯುವೆ.

ಶ್ರೀ ಶೃತಿಪ್ರಿಯರೊಂದಿಗೆ ಕೇವಲ ನಾಲ್ಕು ನಿಮಿಷಗಳ ಮಾತುಕತೆ

ವೇದತರಂಗ ಪತ್ರಿಕೆಯ ಸಂಪಾದಕರಾದ ಶ್ರೀ ಶೃತಿಪ್ರಿಯರೊಂದಿಗೆ ವೇದಾಧ್ಯಾಯೀ ಸುಧಾಕರ ಶರ್ಮರ ಕೇವಲ ನಾಲ್ಕು ನಿಮಿಷಗಳ ಮಾತುಕತೆ ವೇದಸುಧೆಗಾಗಿ...

ಆಹಾರವನ್ನು ಹೇಗೆ ಸೇವಿಸಬೇಕು? Part-3

ಮೊದಲನೆಯ ಸುವರ್ಣ ಸೂತ್ರ - ಚೆನ್ನಾಗಿ ಅಗಿದು ಸೇವಿಸಬೇಕು.
ತಿನ್ನುವ ಪದಾರ್ಥ ಮೆತ್ತಗಿದ್ದರೂ ಅಗಿಯಲೇಬೇಕು. ಮೆತ್ತಗೆ/ನುಣ್ಣಗೆ ಮಾಡುವುದು ಅಷ್ಟು ಮುಖ್ಯವಾದ ಉದ್ದೇಶವಲ್ಲ! ತಿನ್ನುವ ಆಹಾರದೊಂದಿಗೆ ಸಾಕಷ್ಟು ಜೊಲ್ಲು ಸೇರಿಸಬೇಕೆಂಬುದು ಮುಖ್ಯ ಉದ್ದೇಶ. ಸಸ್ಯಾಹಾರಿಗಳಲ್ಲಿ, ಮಾನವನೂ ಶಾರೀರಿಕವಾಗಿ ಸಸ್ಯಾಹಾರಿಯೇ ಆದ್ದರಿಂದ, ಜೀರ್ಣಕ್ರಿಯೆ ಪ್ರಾರಂಭವಾಗುವುದು ಬಾಯಿಯಲ್ಲಿ! ಸರಿಸುಮಾರು 30ರಿಂದ 40-50 ಸಲ ಜಗಿಯಬೇಕು. Eat the Liquids and Drink the Solids ಎಂಬುದು ಒಂದು ವಿಚಿತ್ರವಾದ ಸೂತ್ರ! ದ್ರವಗಳನ್ನು ಗಟ್ಟಿಪದಾರ್ಥವೆಂಬಂತೆ ಬಾಯಲ್ಲಿ ಆಡಿಸಬೇಕು. ಗಟ್ಟಿ ಪದಾರ್ಥಗಳನ್ನು ನೀರಾಗುವವರೆಗೂ ಬಾಯಲ್ಲಿಯೇ ಆಡಿಸಿ ಕುಡಿಯಬೇಕು!
ಜೊಲ್ಲು ಒಂದು ಅದ್ಭುತ ರಚನೆ. ಬಾಯಿಯಿಂದ ಹಿಡಿದು ಗುದದ್ವಾರದವರೆಗೆ Gastro intestinal trackನಲ್ಲಿ ಯಾವುದೇ ತೊಂದರೆ, ಹುಣ್ಣುಗಳಿದ್ದರೆ ಅದಕ್ಕೆ ಪ್ರಕೃತಿ ನೀಡಿರುವ ಪರಿಣಾಮಕಾರಿಯಾದ ಹಾಗೂ ಉಚಿತವಾದ ಔಷಧಿಯೇ ಈ ಜೊಲ್ಲು!
ಇನ್ನು ಆಹಾರಗಳ ಮಿಶ್ರಣ. ನಾಮಾನ್ಯವಾಗಿ ಹಣ್ಣು - ತರಕಾರಿಗಳನ್ನು ಮಿಶ್ರ ಮಾಡುವುದಿಲ್ಲ. ತಿಂದರೆ ಬರೀ ಹಸಿ ತರಕಾರಿ, ಅಥವಾ ಬರೀ ಹಣ್ಣು. ಅದರಲ್ಲೂ Melon alone ಎಂದೂ ಹೇಳುತ್ತಾರೆ. ಒಣಹಣ್ಣುಗಳನ್ನು ಪ್ರತ್ಯೇಕವಾಗಿ ತಿನ್ನುವುದೇ ಸರಿಯೆನಿಸುತ್ತದೆ.
ಇದರ ಹಿಂದಿನ ವಿಜ್ಞಾನ ಅರಿಯಲು ಕಷ್ಟವೇನಿಲ್ಲ. ಒಂದೊಂದು ಆಹಾರಪದಾರ್ಥವೂ ಜೀರ್ಣವಾಗಲು ತನ್ನದೇ ಆದ ಸಮಯವನ್ನು ತೆಗೆದುಕೊಳ್ಳುತ್ತದೆ. ಸುಮಾರು ಒಂದೇ ಸಮಯವನ್ನು ತೆಗೆದುಕೊಳ್ಳುವ ಆಹಾರಗಳನ್ನು ಮಿಶ್ರ ಮಾಡಿದರೆ ಸಮಸ್ಯೆಯಿಲ್ಲ. ವಿಭಿನ್ನ ಸಮಯ ತೆಗೆದುಕೊಳ್ಳುವ ಆಹಾರಗಳನ್ನು ಬೆರೆಸಿದರೆ ಭಾಗಶಃ ಅರಗುತ್ತದೆ, ಭಾಗಶಃ ಅರಗಿರುವುದಿಲ್ಲ. ಎಲ್ಲಿ ತಿನ್ನಬೇಕು?
(ಮುಂದುವರೆಯುತ್ತದೆ)
-ಸುಧಾಕರಶರ್ಮ

ವಿ.ಸೂ. ಆಹಾರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಓದಿರಿ "ಮನುಜ! ಏನು ನಿನ್ನ ಆಹಾರ?" - ಲೇಖಕರು: ಶ್ರೀ ಜಿ.ವಿ.ವಿ.ಶಾಸ್ತ್ರಿ, ನಿಸರ್ಗ ಯೋಗ ಧಾಮ, 11ನೇ ಕ್ರಾಸ್, ಎಸ್.ಎಸ್.ಪುರಂ, ತುಮಕೂರು - 572102. ಫೋನ್: 0816-2278499. 

Wednesday, January 12, 2011

" ಅದಕ್ಕಿನ್ನೂ ಕಾಲವಿದೆ" :

"ವೇದಸುಧೆ" ಎಂಬ ನನ್ನ ಬ್ಲಾಗ್ ಹೆಸರು  ಕೇಳಿದಾಗ [ಕ್ಷಮೆ ಇರಲಿ, ಇದು ವೇದಸುಧೆಬಳಗದ ಬ್ಲಾಗ್] ಹಲವರು ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ನಾನು ಕೇಳಿದ್ದೇನೆ.
* ಈಗತಾನೇ ಬಿ.ಇ.ಮುಗಿಸಿ ಒಂದು ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಿರುವ ನನ್ನ ಮಗನಿಗೆ ಹೇಳಿದೆ" ನನ್ನ ಬ್ಲಾಗ್ "ವೇದಸುಧೆ ಯನ್ನು ನೋಡು." ಅದರ ಬಗೆಗೆ ಪೂರ್ಣ ವಿಚಾರ ತಿಳಿಯಲು ವ್ಯವಧಾನವಿಲ್ಲದ ಅವನು ಹೇಳಿದ " ಅದಕ್ಕಿನ್ನೂ ಕಾಲವಿದೆ" " ನಾನೂ ನಿನ್ನ ವಯಸ್ಸಿಗೆ ಬಂದಾಗ ಅದೆಲ್ಲಾ  ಶುರುಮಾಡುವೆ
* ವೇದಸುಧೆ ಹೆಸರು ಕೇಳಿದೊಡನೆ ಪುರೋಹಿತರೊಬ್ಬರು " ಎಲ್ಲಾ ವ್ರಥಕಥೆಗಳ ಬಗ್ಗೆಯೂ ಹಾಕಿದ್ದೀರಾ?
* ಸಾಮಾನ್ಯ ಗೃಹಸ್ತರೊಬ್ಬರು ಯಾವುದೋ ಪೂಜಾ ವಿಧಾನದ ಬಗ್ಗೆ ತಮ್ಮ ಸಂಶಯ ಕೇಳಿದರು
* ಆಸ್ತಿಕರೊಬ್ಬರು ಯಜ್ಞ ಯಾಗಾದಿಗಳ ಫೋಟೋಗಳನ್ನು ಕಳುಹಿಸಿಕೊಟ್ಟರು
* ನಮ್ಮ ಮಕ್ಕಳಿಗೆ ಪುರಾಣಪುಣ್ಯಕಥೆಗಳ ಬಗ್ಗೆ ತಿಳಿಸಬೇಕೆಂದವರು ಕೆಲವರು
* ನಮ್ಮ ಯುವ ಪೀಳಿಗೆಗೆ ಹಬ್ಬ ಹರಿದಿನಗಳ ಬಗೆಗೆ  ವೇದಸುಧೆಯಲ್ಲಿ ಪರಿಚಯ ಮಾಡಿಸಬೇಕೆಂದವರು ಕೆಲವರು
* ನೋಡಿ ಬ್ರಾಹ್ಮಣಿಕೆ ಹಾಳಾಗಿ ಹೋಗುತ್ತಿದೆ- ಅದನ್ನು ಉಳಿಸುವ ಕೆಲಸವಾಗಬೇಕೆಂದವರು ಒಬ್ಬ ಹಿರಿಯರು
         ವೇದವೆಂಬ ಎರಡಕ್ಷರವನ್ನು ಕೇಳಿದಾಗ ಹಲವರಿಂದ ಬಂದ ಹಲವು ಅಭಿಪ್ರಾಯಗಳಿವು. ಇವು ಅನೇಕರ ಅಭಿಪ್ರಾಯಗಳಿರಬಹುದು.ಒಂದೊಂದನ್ನೇ ವಿಮರ್ಶಿಸುತ್ತಾ ವಿಚಾರ ಮಾಡೋಣ.
" ಅದಕ್ಕಿನ್ನೂ ಕಾಲವಿದೆ" :
    ಒಂದು ಅತ್ಯಂತ ಬಡತನದ ಮನೆಯಲ್ಲಿ ಹುಟ್ಟಿದ್ದರಿಂದ ನನಗೆ  ಜೀವನಾನುಭವ ಸಾಕಷ್ಟು ಆಗಿದೆಯಾದ್ದರಿಂದ "   ನಿಜ ಮನುಷ್ಯನನ್ನು ಮಾಡುವ ನಿಜವಾದ ವೇದಾಧ್ಯಯನವು  ನನ್ನ ಬಾಲ್ಯದಿಂದಲೇ ಆಗಿದೆ ಎಂಬ ಸಮಾಧಾನ ನನಗಿದೆ" ನನ್ನ ಜೀವನದ ಪಾಠವು  ವೇದದಲ್ಲಿದೆ ಎಂಬುದು ಈಗೀಗ ಅರ್ಥವಾಗುತ್ತಿದೆ.ಆದ್ದರಿಂದ  ತುತ್ತು ಅನ್ನಕ್ಕೆ ಪರಿತಪಿಸುವ ಮನೆಯಲ್ಲಿ ನನ್ನ ಜನ್ಮಕ್ಕೆ ಕಾರಣನಾದ ಆ ಭಗವಂತ ಮತ್ತು ನನಗೆ ಬಡತನದ ಬದುಕು ಹೇಗಿರುತ್ತದೆಂದು ಅನುಭವ ನೀಡಿದ ನನ್ನ ಮಾತಪಿತೃಗಳೇ ನನಗೆ ನಿಜವಾದ ವೇದಾಧ್ಯಯನ ಮಾಡಿಸಿದ ಆಚಾರ್ಯರೆಂದು ತಿಳಿದು ಅವರನ್ನು ಸದಾಸ್ಮರಿಸುತ್ತೇನೆ.ಆದರೆ ನನ್ನ ಮಗ ಒಬ್ಬ ಸ್ಥಿತಿವಂತನ ಮನೆಯಲ್ಲಿ ಹುಟ್ಟಿದ[ಆಹೊತ್ತಿಗೆ ನನ್ನ ಬಡತನದ ಬೇಗೆ ಮಾಯವಾಗಿತ್ತು] ಅವನಿಗೆ ನನ್ನಂತೆ ಜೀವನಾನುಭವವೂ ಆಗಲಿಲ್ಲ. ವೇದಾಧ್ಯಯನವೂ ಆಗಲಿಲ್ಲ. ಅವನಿಗೆ ನಿಜವಾಗಿ ಸಮಯ ಜಾರುತ್ತಿದೆ. "ವೇದಸುಧೆಯಲ್ಲಿ ನೆಮ್ಮದಿಯ ಬದುಕಿಗಾಗಿ ವೇದ ಜ್ಞಾನದ ಬಗೆಗೆ ಸುಧಾಕರಶರ್ಮರು ಸಾಕಷ್ಟು ತಿಳುವಳಿಕೆ ನೀಡುತ್ತಿದ್ದಾರೆ. ಅವನಂತ ಯುವಕರಿಗೆ ಖಂಡಿತವಾಗಿಯೂ "ವೇದಸುಧೆಯು" ದಾರಿ ದೀಪವಾಗಬಲ್ಲದು. ಆದರೆ ಶರ್ಮರ ಉಪನ್ಯಾಸಗಳನ್ನಾದರೂ ನಿತ್ಯವೂ ಅರ್ಧಗಂಟೆಯಾದರೂ ಕೇಳಬೇಕು.
" ಎಲ್ಲಾ ವ್ರಥಕಥೆಗಳ ಬಗ್ಗೆಯೂ ಹಾಕಿದ್ದೀರಾ?
ವೇದದ ನಿಜವಾದ ಅರ್ಥವನ್ನು ತಿಳಿದಾಗ ವ್ರಥಕಥೆಗಳ ಮಾತೇ ಬರುವುದಿಲ್ಲ.
ಪೂಜಾ ವಿಧಾನ:
ನಿತ್ಯಬದುಕೇ ಒಂದು ಆರಾಧನೆ, ಒಂದು ಯಜ್ಞ.ಸಮಾಜಮುಖಿಯಾಗಿ ಬಾಳುವುದನ್ನು ವೇದವು ನಮಗೆ ಕಲಿಸಿಕೊಡುತ್ತದೆ, ನಾವೀಗ ಮಾಡುತ್ತಿರುವ ಪೂಜಾವಿಧಾನವೇ ಬದಲಾಗುತ್ತದೆ.
ಪುರಾಣಪುಣ್ಯಕಥೆಗಳ ಬಗ್ಗೆ :
ನನಗನಿಸುವಂತೆ  ಪೂರ್ವದಲ್ಲಿ ರಾಮಾಯಣ ಮಹಾಭಾರತದ ಯುದ್ಧ ಕಾಲದಲ್ಲಿ ವೇದ ಪ್ರಸಾರಕ್ಕೆ ಧಕ್ಕೆ ಬಂದಿದೆ[ ಇದನ್ನು ಬಲ್ಲವರು ಸರಿಯಾಗಿ ವಿವರಿಸ ಬೇಕು] ಆನಂತರ ಜನರು ಧರ್ಮಬ್ರಷ್ಠರಾಗುತ್ತಾರೆಂದು ಅರಿತ ಕೆಲವು ಋಷಿಗಳು[ಋಷಿ ಎಂಬ ಪದ ಉಚಿತವೋ ಅಲ್ಲವೋ ತಿಳಿಯದು] ಭೀತಿಯಿಂದ ಭಗವಂತನಲ್ಲಿ ನಂಬಿಕೆಬರುವಂತೆ ಸರಳವಾಗಿ ರಚಿಸಿರುವ ಕಥೆಗಳಿರಬಹುದು.ಯಾವುದೋ ಆಪತ್ಕಾಲಕ್ಕೆ ಮಾಡಿರುವ ಆ ಪ್ರಯತ್ನವು ತಲೆತಲಾಂತರಗಳಲ್ಲೂ ಮುಂದುವರೆದು ವೇದ-ಪುರಾಣಗಳೆಂಬ ಮಟ್ಟಿಗೆ ಬೆಳೆದದ್ದು ಸುಳ್ಳಲ್ಲ.  ವೇದವು ಆ ಸಂದರ್ಭದಲ್ಲಿ ನಾಶವಾಗಿಲ್ಲ. ಬದಲಿಗೆ ಯಾವುದೋ ಒಂದು ವರ್ಗಕ್ಕೆ ಸೀಮಿತವಾಗಿ ಅದರ ಪರಿಣಾಮವಾಗಿ  ವೇದವನ್ನು ಬ್ರಾಹ್ಮಣರ ಹೊರತಾಗಿ ಅನ್ಯ ವರ್ಗದ ಜನರ ಕಿವಿಯ ಮೇಲೂ ಬೀಳಬಾರದೆಂಬ ಮಟ್ಟಿಗೆ ನಡೆದುಕೊಂಡದ್ದು ಕಥೆಯಲ್ಲ-ವಾಸ್ತವ.ಆದರೆ ಬ್ರಾಹ್ಮಣ ಪದದ ಅರ್ಥವೇ ಬೇರೆ. ಅದು ಒಂದು ಜಾತಿಯ ಹೆಸರಲ್ಲ. ಅದನ್ನು ವೇದಸುಧೆಯ ಶರ್ಮರ ಪುಟದಲ್ಲಿ ಆಡಿಯೋ ಕೇಳಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಪುರಾಣಪುಣ್ಯಕಥೆಗಳೆಂಬ ಕಟ್ಟು ಕಥೆಗಳ ಹಿಂದೆ ಬಿದ್ದು ನಿಜವಾದ ವೇದವನ್ನು ಮರೆತಿರುವುದು ಸರಿಯೇ? ಚಿಂತನೆ ಮಾಡಬೇಕು.
ಹಬ್ಬ ಹರಿದಿನಗಳ ಬಗೆಗೆ
 ಎಷ್ಟು ಓದಿದರೇನು? ನಾವಿನ್ನೂ ಕಂದಾಚಾರಗಳಿಗೇ ಕಟ್ಟು ಬಿದ್ದಿದ್ದೇವೆ.ಮೊನ್ನೆ ನನ್ನ ತಂಗಿಯ  ಮನೆಯಲ್ಲಿ "ಸುಬ್ರಹ್ಮಣ್ಯ ಷಷ್ಠಿ" ಯ ಆಚರಣೆ. .ಊಟದಲ್ಲಿ ಅಡಿಗೆಗೆ ಖಾರವನ್ನೇ ಹಾಕಿಲ್ಲ. ಬರಿ ಸಪ್ಪೆ. ಮಾಡಿದ್ದು ಹಲವು ಬಗೆ ಅಡಿಗೆ. ಅದರಲ್ಲಿ ಒಂದು  ಅವರೆ ಕಾಳಿನ ಸಾಂಬಾರ್ ಇರಬಹುದು.ಬರಿ ಸಪ್ಪೆ. ನಾನು ಉಪ್ಪಿನ ಕಾಯಿ ಹಾಕ್ತೀರಾ? ಎಂದೆ " ಇವತ್ತು ಹಾಕುವಂತಿಲ್ಲ" ಎಂದರು.
ನೋಡಿ ನಮ್ಮ ಆಚರಣೆಗಳ ಫಲ! ಬಹುಷ: ಆರೋಗ್ಯದ ಕಾರಣಕ್ಕೆ ಯಾವ ಕಾಲದಲ್ಲೋ ಯಾರೋ ಒಬ್ಬರು "ಸುಬ್ರಹ್ಮಣ್ಯ ಷಷ್ಠಿ"ಯ ಹೆಸರಲ್ಲಿ ಆರೋಗ್ಯಕರವಾದ ಅಡಿಗೆ ಹೇಳಿರಬಹುದು. ಆದರೆ ಕಡೆಯಲ್ಲಿ ಉಳಿದಿದ್ದೇನು? ಅಂದು ಅಡಿಗೆಗೆ  ಖಾರವನ್ನೇ ಹಾಕಬಾರದು. ಆದರೆ ಅವರೇ ಕಾಳಿನ ಸಾಂಬಾರ್ ಮಾಡಬಹುದೇ? ಚಿಂತಿಸಲೇ ಇಲ್ಲ.ನಮ್ಮ ಹಬ್ಬಗಳ ಆಚರಣೆ ಹೀಗಿದೆ. ಅರ್ಥ ಕಳೆದುಕೊಂಡಿದೆ ಎನಿಸುತ್ತಿಲ್ಲವೇ?
ಬ್ರಾಹ್ಮಣಿಕೆ ಹಾಳಾಗಿ ಹೋಗುತ್ತಿದೆ
ಪ್ರಶ್ನೆ ಕೇಳಿದವರು ಬ್ರಾಹ್ಮಣ ಎಂದರೆ ಒಂದು ಜಾತಿಯನ್ನು ಉದ್ಧೇಶಿಸಿ ಕೇಳಿದ್ದರು. ಅದರೆ ಬ್ರಾಹ್ಮಣ ಪದಕ್ಕೆ ಅರ್ಥವೇ ಬೇರೆ. ಬ್ರಹ್ಮಜ್ಞಾನವನ್ನು ಪಡೆಯುವವ ಬ್ರಾಹ್ಮಣ.ಹೌದು ಬ್ರಹ್ಮಜ್ಞಾನದ ಪ್ರಸಾರವಾಗಬೇಕು.

ವೇದಸುಧೆಯಲ್ಲಿ ನಿಜವಾದ ವೇದಾರ್ಥಪ್ರಸಾರವಾಗಬೇಕು, ಬದುಕಿಗೆ ನಿಜವಾದ ಮಾರ್ಗದರ್ಶನ ವೇದಗಳಿಂದ ಸಿಗಬೇಕೆಂಬ ಮಹತ್ವಾಕಾಂಕ್ಷೆಯಿಂದ ವೇದಸುಧೆ ಆರಂಭವಾಗಿದೆ. ಆಪ್ರಯತ್ನದಲ್ಲಿ ಅವಿರತ ಶ್ರಮಿಸುತ್ತಿದೆ. ಇಂತಹ ವೇದಸುಧೆಯನ್ನು ಯಾವ ವಯಸ್ಸಿನಿಂದ  ಓದಬೇಕು? ಬಹಳ ಪ್ರೀತಿಂದ ಒಂದು ಮಾತು ಹೇಳಿ ಈ ಬರಹ ಮುಗಿಸುವೆ" ವೇದಸುಧೆಗೆ ತಾಂತ್ರಿಕ ಸಲಹೆ ನೀಡುತ್ತಿರುವ ನಮ್ಮ ಮಿತ್ರ ಪ್ರಸನ್ನ  ಪಿ.ಯು.ಸಿ ವಿದ್ಯಾರ್ಥಿ.
ಒಂದು ಮಾತು: ವೇದಸುಧೆಯಲ್ಲಿ ನಾನೊಬ್ಬ ಅಂಚೆ ಪೇದೆ. ನಿಮಗೆ ಏನೇ ಸಂಶಯವಿರಲಿ. ಕೇಳಿ ವೇದಾಧ್ಯಾಯೀ ಸುಧಾಕರಶರ್ಮರು ಉತ್ತರ ನೀಡುವರು. ಕಾರಣ ಅವರು ಮೂರು ದಶಕಗಳಿಂದ ವೇದಾಧ್ಯಯನ ಮಾಡುತ್ತಿದ್ದಾರೆ. ಅವರೇ ಸಮರ್ಥರು.

Tuesday, January 11, 2011

ನನ್ನ೦ತೆ ನನ್ನ ಜಗತ್ತು....

ನಾನು ಕದ ತಟ್ಟಿದಲ್ಲೆಲ್ಲಾ ಬಾಗಿಲು ತೆರೆಯಲಾಗಿದೆ
ನಾನು ಅಲೆದಾಡಿದಲ್ಲೆಲ್ಲಾ ಒ೦ದು ದಾರಿ ಸೃಷ್ಟಿಯಾಗಿದೆ
ನಾನು ಪ್ರೀತಿಸಿದಲ್ಲೆಲ್ಲಾ ಜಗತ್ತು ಮಧುರವಾಗಿ ಕ೦ಡಿದೆ
ನಾನು ದ್ವೇಷಿಸಿದಾಗಲೆಲ್ಲಾ ಪ್ರಪ೦ಚ ಕುರೂಪಿಯಾಗಿ ಕ೦ಡಿದೆ
ನಾನು ನಕ್ಕಾಗಲೆಲ್ಲಾ ಸ್ವರ್ಗ ನನ್ನ ಬಳಿ ಬ೦ದಿದೆ
ನಾನು ಕಣ್ಣೀರಿಟ್ಟಾಗಲೆಲ್ಲ ಒ೦ದು ಸಾ೦ತ್ವನದ ಸ್ಪರ್ಶ ನನ್ನನ್ನು ಹಗುರಾಗಿಸಿದೆ
ನಾನು ಗೊಣಗಿದಾಗ ಈ ಜಗತ್ತು ಕರ್ಕಶವಾಗಿ ಕ೦ಡಿದೆ
ನಾನು ಪೂಜಿಸಿದಾಗ ದೇವರು ನನ್ನೊಳಗೇ ನುಸುಳಿದ್ದಾನೆ..
ನಾನು ಮೌನಕ್ಕೆ ಮೊರೆಹೋದಾಗಲೆಲ್ಲ ಪ್ರಕೃತಿಯ ನಾದ ಕೇಳಿದ್ದೇನೆ..

ನನ್ನ೦ತೆ ನನ್ನ ಜಗತ್ತು....
ಇದೇ ನನ್ನ ಜೀವನ ದರ್ಶನ..

ಡಾ||ಜ್ಞಾನದೇವ್