Pages

Thursday, March 17, 2011

ಶ್ರೀ ಶಂಕರ ಟಿ.ವಿ. ಛಾನಲ್ ನಲ್ಲಿ ವೇದಾಧ್ಯಾಯೀ ಸುಧಾಕರ ಶರ್ಮ

ಶ್ರೀ ಎಸ್.ಎಲ್.ಎನ್. ಸ್ವಾಮಿಯವರು ವೇದಾಧ್ಯಾಯೀ ಸುಧಾಕರ ಶರ್ಮರೊಡನೆ ನಡೆಸಿದ ಸಂದರ್ಶನವು ಶ್ರೀ ಶಂಕರ ಟಿ.ವಿ. ಛಾನಲ್ ನಲ್ಲಿ ನಿನ್ನೆ ರಾತ್ರಿ ೯.೦೦ರಿಂದ ಒಂದು ಗಂಟೆಗಳ ಕಾಲ ಪ್ರದರ್ಶನವಾಯ್ತು. ವೇದದ ವಿಚಾರದಲ್ಲಿ ಜಿಜ್ಞಾಸುಗಳಿಗೆ ಇರಬಹುದಾದ ಹಲವಾರು ಅನುಮಾನಗಳನ್ನು ಬಿಡಿಬಿಡಿಯಾಗಿ ಬಹಳ ಸ್ಪಷ್ಟ ನುಡಿಗಳಲ್ಲಿ ವಿವರಿಸುತ್ತಾ ಶ್ರೀ ಶರ್ಮರ ಸಂದರ್ಶನವು ಸಾಗಿತ್ತು. ವೇದಸುಧೆಯಲ್ಲಿ ಕೆಲವು ಗಂಟೆಗಳ ಮುಂಚೆ ಈ ಕಾರ್ಯಕ್ರಮದ ಬಗ್ಗೆ ಪ್ರಕಟಿಸಲಾಗಿತ್ತು. ಅದರ ಮೂಲಕ ಸುದ್ಧಿ ತಿಳಿದ ಅನೇಕರು ಕಾರ್ಯಕ್ರಮದ ಪ್ರಸಾರಸಮಯದಲ್ಲಿಯೇ ತಮ್ಮ ಸ್ನೇಹಿತರುಗಳಿಗೆ ಮೊಬೈಲ್ ಮೂಲಕ ಸುದ್ಧಿ ತಲುಪಿಸಿ ಈ ಕಾರ್ಯಕ್ರಮವನ್ನು ನೋಡಲು ಕಾರಣರಾದರು. ಈ ಸಂದರ್ಶನದ ಆಡಿಯೋ ವನ್ನು ವೇದಸುಧೆಯ ಅಭಿಮಾನಿಗಳಿಗಾಗಿ ಇಲ್ಲಿ ಪ್ರಕಟಿಸಲಾಗಿದೆ. ಸಾವಕಾಶವಾಗಿ ಕೇಳಿ ನಿಮ್ಮ ಅನಿಸಿಕೆಗಳನ್ನು ಶ್ರೀ ಶಂಕರ ಟಿ.ವಿ. ಚಾನಲ್ ಗಾಗಲೀ ಅಥವಾ ವೇದಸುಧೆಗಾಗಲೀ ಬರೆಯುವುದನ್ನು ಮರೆಯದಿರಿ.

ಕೃಪೆ: ಶ್ರೀ ಶಂಕರ ಟಿ.ವಿ. ಚಾನಲ್



Monday, March 14, 2011

ನಾ ನಿನ್ನ ಧ್ಯಾನದೊಳಿರಲು.

ಇದು ನನ್ನ ಬದುಕು. ನನ್ನ ಆತ್ಮ ನಿರ್ದೇಶಿಸಿದಂತೆ ನಿಸ್ಸಂಕೋಚದಿಂದ, ನಿರ್ಭಯದಿಂದ ಮತ್ತು ದ್ವಂದ್ವ ರಹಿತನಾಗಿ ಮುನ್ನಡೆಯುತ್ತೇನೆ. ನನ್ನ ಆಚರಣೆಗಳು, ನಂಬಿಕೆಗಳು ಮತ್ತು ನಡವಳಿಕೆಗಳು ನನ್ನಾತ್ಮಕ್ಕೆ ಮೆಚ್ಚುಗೆಯಾದರಷ್ಟೇ ಸಾಕು. ಪರರ ಮೆಚ್ಚುಗೆ, ಹೊಗಳ್ನುಡಿಗಳು ನನಗೆ ಬೇಡ, ಪರ-ನಿಂದೆ, ಪರಪೀಡನೆ ನನಗೆ ಬೇಡ,   ನಿನ್ನ ಕರುಣೆ ಸದಾ ಎಲ್ಲರ ಮೇಲಿರಲಿ ಎಂಬುದು ನಮ್ಮ ನಿತ್ಯ ಪ್ರಾರ್ಥನೆಯಾಗಬೇಕು. ಅದುವೇ ಭಕ್ತ-ಭಗವಂತನ ನಿಜವಾದ ನಿರ್ಮಲ ಉಭಯ ಕುಶಲೋಪರಿ! 

             ಲೌಕಿಕ ಜಗತ್ತಿನಲ್ಲಿ ತಾನು ಮಾಡಿದ್ದೆಲ್ಲವನ್ನೂ ಇತರರು ಗಮನಿಸಬೇಕು, ಮೆಚ್ಚಬೇಕು ಮತ್ತು ಬೆನ್ನು ತಟ್ಟಬೇಕೆಂಬ ಬಯಕೆ ಮಾನವ ಸಹಜವಾದದ್ದು. ಪುಟ್ಟ ಮಗುವಿನಿಂದ ಹಿಡಿದು ಎಲ್ಲಾ ವಯಸ್ಸಿನವರಲ್ಲಿಯೂ ನಾವು ಈ ಪ್ರವೃತ್ತಿಯನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಎಲ್ಲರೂ ಎಲ್ಲರ ಗಮನ ತಮ್ಮತ್ತ ಸೆಳೆಯಲು ಅನವರತ ಪ್ರಯತ್ನ ನಡೆಸಿಯೇ ಇರುತ್ತಾರೆ. ಆದರೆ ಕೇವಲ ಕೆಲವರತ್ತ ಮಾತ್ರಾ ಎಲ್ಲರ ಗಮನ ಅವರು ಸೆಳೆಯದೆಯೇ ಹೋಗುತ್ತದೆಯೆಂಬುದೂ ಸತ್ಯವೇ! ಅನೇಕ ಸಂದರ್ಭಗಳಲ್ಲಿ ನಮ್ಮ ಚಟುವಟಿಕೆಗಳ ಬಗ್ಗೆ ಇತರರ ಕಾಳಜಿ, ಮಾರ್ಗದರ್ಶನ ಮತ್ತು ಪ್ರೋತ್ಸಾಹದಾಯಕ ನಡೆಗಳು ನಾವು ಅನೇಕ ಕಾರ್ಯಕ್ಷೇತ್ರಗಳಲ್ಲಿ ಪ್ರಗತಿ ಹೊಂದಲು, ಇನ್ನೂ ಹೆಚ್ಚಿನ ಸಾಧನೆ ಮಾಡಲು ಅತ್ಯಂತ ಪೂರಕವೂ ಆಗಿರುತ್ತದೆ ಎಂಬ ಬಗ್ಗೆ ಎರಡು ಮಾತಿಲ್ಲ. ಮನುಷ್ಯನ ಇಂತಹ ಸಾಧನೆಗಳ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆಗಳು ಒಂದು ಆರೋಗ್ಯಕರ ಸಮಾಜದ ಲಕ್ಷಣವೂ ಹೌದು.  ಹಾಗಾಗಿ ನಮ್ಮ ನಮ್ಮ ಚಟುವಟಿಕೆಗಳು ನಮಗೂ ಮತ್ತು ಇತರರಿಗೂ ಚೇತೋಹಾರಿಯಾಗಿರಬೇಕು; ಪರಸ್ಪರ ಪೂರಕವಾಗಿರಬೇಕು. ಆಗಲೇ ಸಾಧನೆ ಮತ್ತು ಆ ಸಾಧನೆಗೆ ಸಿಕ್ಕ ಪ್ರತಿಫಲಕ್ಕೆ ನಿಜವಾದ ಅರ್ಥ ಬಂದೀತು.
ಪ್ರಾಯಶ: ಇಂತಹ ಪ್ರವೃತ್ತಿಯನ್ನು ಮಾನವನಲ್ಲಿ ಒಂದು ಹಂತದಲ್ಲಿಯಾದರೂ ಪ್ರಬುದ್ಧತೆ ಮೂಡುವವರೆಗಾದರೂ ನಾವು ಗಮನಿಸಬಹುದು. ಪ್ರಸ್ತುತದಲ್ಲಿ ಪ್ರಬುದ್ಧತೆ ಎಂದರೆ ಇತರರನ್ನು ಮೆಚ್ಚಿಸುವ ಕಾಯಕಗಳು ನಿರರ್ಥಕ, ಅರ್ಥಹೀನ ಮತ್ತು ಅನವಶ್ಯ ಎಂಬ ಪ್ರಜ್ಞೆ ಎಂದು ಅರ್ಥೈಸಬಹುದು. ಆದರೆ ಅಂತಹ ಪ್ರಬುದ್ಧತೆ ಯಾವಾಗ ಮತ್ತು ಎಷ್ಟು ಜನರಲ್ಲಿ ಪ್ರಕಟವಾದೀತೆಂಬುದು ಮಾತ್ರಾ ತಿಳಿಯದ ವಿಷಯ. ಅದು ಅವರವರ ಸಂಸ್ಕಾರ, ಜೀವನಶೈಲಿ, ಜೀವನಾರ್ಥವನ್ನು ಅರಿಯುವ ನಿಜವಾದ ಹಸಿವು, ಪ್ರದರ್ಶನ ಜೀವನದ ಟೊಳ್ಳುತನದ ಅರಿವು ಮುಂತಾದ ಅನೇಕ ವಿಷಯಗಳನ್ನು ಅವಲಂಬಿಸಿರುತ್ತದೆ. ಭಗವದ್ಗೀತೆಯಲ್ಲಿನ ಕರ್ಮ ಸಿದ್ಧಾಂತವನ್ನು ಒಮ್ಮೆಗೇ ಎಲ್ಲರೂ ತಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಷ್ಟು ಸುಲಭ ಸಾಧ್ಯವಲ್ಲ. ಅದು ಸ್ವ-ಬುದ್ಧಿಯಿಂದ, ಜೀವನದ ಅನೇಕ ಅನುಭವಗಳಿಂದ ಕಲಿತ ಪಾಠಗಳಿಂದ ಮತ್ತು ಗುರು-ಹಿರಿಯರ ಮಾರ್ಗದರ್ಶನದಿಂದ ಕಾಲಾನುಕ್ರಮದಲ್ಲಿ ಅಳವಡಿಸಿಕೊಳ್ಳಬಹುದಾದ ಒಂದು ಸನ್ನಡತೆ.  ಹಾಗಾಗಿಯೇ ನಾವು ಗುಡ್ಡದಷ್ಟು ಮಾಡಿದ್ದನ್ನು ಬೆಟ್ಟದಷ್ಟು ಮಾಡಿದ್ದೇವೆಂದು ತೋರಿಸಿಕೊಂಡು ಒಣ ಜಂಭ ಪಡುವುದು ಸಾಮಾನ್ಯವಾಗಿದೆ.  ಸಾಧನೆಗಳೆಂದು ಕೊಂಡು ನಾವು ಹೆಮ್ಮೆಯಿಂದ ಬಡಾಯಿ ಕೊಚ್ಚಿಕೊಂಡದ್ದೆಲ್ಲವನ್ನೂ ಸಮಾಜ ಹಾಗೆಯೇ ಸ್ವೀಕರಿಸುತ್ತದೆಂಬುದು ಕೇವಲ ನಮ್ಮ ಭ್ರಮೆ ಅಥವಾ ಮೂಢತನವಷ್ಟೇ ಅದೀತು. ಮುಖಸ್ತುತಿಗಾದರೂ ನಮ್ಮ ಕಾರ್ಯಗಳನ್ನು ಮೆಚ್ಚಿಕೊಂಡಂತೆ ಕೆಲವರು ಪ್ರತಿಕ್ರಿಯಿಸಿದರೆ, ಮತ್ತೆ ಕೆಲವರು ನಮ್ಮಿಂದ ಬೇರೇನಾದರೂ ಸಹಾಯ ಪಡೆಯಬಹುದೆಂಬ ದೂ(ದು)ರಾಲೋಚನೆಯಿಂದ ನಮ್ಮನ್ನು ಹೊಗಳಿ ಹೊಗಳಿ ಹೊನ್ನ ಶೂಲಕ್ಕೇರಿಸಿಬಿಡುವರು. ಇಂತಹ ಒಂದು ಭ್ರಮಾಲೋಕದಲ್ಲಿ ನಾವು ಸಿಲುಕಿದಾಗ ನಮ್ಮ ವಿವೇಕ ಮಂಕಾಗುತ್ತದೆ; ನಾನೇನೋ ಅಸಾಧ್ಯವಾದುದನ್ನು/ಅಸಾಧಾರಣವಾದುದನ್ನು ಸಾಧಿಸಿ ಬಿಟ್ಟೆ ಎಂಬ ನೀರ‍್ಗುಳ್ಳೆಯಲ್ಲಿ ತೇಲಾಡುತ್ತೇವೆ. ಆದರೆ ಸತ್ಯಾಂಶವೆಂದರೆ ಇಂದು ನಾವು ದೇವರನ್ನಾದರೂ ಮೆಚ್ಚಿಸಬಹುದು; ಮನುಷ್ಯರನ್ನು ಮೆಚ್ಚಿಸಲು ಸಾಧ್ಯವೇ ಇಲ್ಲ. ಏಕೆಂದರೆ ಸ್ವಾರ್ಥಪರರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಇಂದಿನ ಸನ್ನಿವೇಶದಲ್ಲಿ, ತನ್ನನ್ನು ತಾನು ಇನ್ನಷ್ಟು ಬಣ್ಣಕಟ್ಟಿ ಪ್ರದರ್ಶಿಸುವ ಹುಚ್ಚು ಓಟದಲ್ಲಿ, ಇತರರ ಸಾಧನೆಗಳನ್ನು ಗುರುತಿಸಲು ಮತ್ತು ಪ್ರೋತ್ಸಾಹಿಸಲು ಯಾರಿಗೂ ಸಮಯವೂ ಇಲ್ಲ, ವ್ಯವಧಾನವೂ ಇಲ್ಲ ಮತ್ತು ಮಿಗಿಲಾಗಿ ನಿರ್ಮಲವಾದ ಮನಸ್ಸೂ ಇಲ್ಲ! ಹಾಗಾಗಿ ಇತರರನ್ನು ಮೆಚ್ಚಿಸುವ ಕಾಯಕಗಳು ಅರ್ಥಹೀನವೇ ಸರಿ.  ಇಂತಹ ಸನ್ನಿವೇಶದಲ್ಲಿ ನಮ್ಮ ಕಾರ್ಯ ಚಟುವಟಿಕೆಗಳನ್ನು ಇತರರನ್ನು ಮೆಚ್ಚಿಸಲಿಕ್ಕಾಗಿ ರೂಪಿಸಿಕೊಂಡು ಮುನ್ನಡೆಯುವುದು ಮತ್ತು ಅದಕ್ಕಾಗಿ ಇನ್ನಿಲ್ಲದ ಕಸರತ್ತುಗಳನ್ನು ಮಾಡುವುದು ಎಷ್ಟರಮಟ್ಟಿಗೆ ಸೂಕ್ತ, ಪ್ರಸ್ತುತ ಮತ್ತು ಫಲಕಾರಿ ಎಂಬುದನ್ನು ಪ್ರತಿಯೊಬ್ಬರೂ ಚಿಂತಿಸಬೇಕಾಗಿದೆ. ಇಂತಹ ಒಂದು ಜೀವನಶೈಲಿ ತಾತ್ಕಾಲಿಕವಾಗಷ್ಟೇ ಸಮಾಜದ ಮತ್ತಿತರರ ಗಮನವನ್ನು ಸೆಳೆದೀತು. ಜನರ ಮೆಚ್ಚುಗೆ ಮತ್ತು ಮನ್ನಣೆ ಕೇವಲ ನಮ್ಮ ಪ್ರಚಾರದ ಅಬ್ಬರವಿರುವ ತನಕ ಮಾತ್ರಾ. ಅದರಿಂದಲೇ ಅಂತಹ ಗಮನವನ್ನು ಸದಾ ಕಾಲ ಹಿಡಿದಿಟ್ಟಿರಲು ಇನ್ನಿಲ್ಲದ ಕಾರ್ಯತಂತ್ರಗಳನ್ನು ಬಳಸುವಲ್ಲೇ ಅನೇಕರು ತಮ್ಮ ಜೀವನದ ಅತ್ಯಧಿಕ ಕಾಲವನ್ನೇ ವ್ಯಯಿಸಿ ಬಿಟ್ಟಿರುತ್ತಾರೆ.  ಸ್ವಲ್ಪವಾದರೂ ಆತ್ಮ ಚಿಂತನೆಯ ಕಾಲ ಮತ್ತು ಪರಿಜ್ಞಾನ ಬಂದಾಗ, ತಾನೆಲ್ಲಾ ಈವರೆಗೆ ಬರೀ ತೋರಿಕೆಯ ಜೀವನವನ್ನೇ ನಡೆಸಿದೆನಲ್ಲ, ಏನೂ ಶಾಶ್ವತವಾದುದನ್ನು ಸಾಧಿಸಲಾಗಲಿಲ್ಲವಲ್ಲ ಎಂಬ ಕೊರಗು ಮೂಡುತ್ತದೆ. ಪಾಪಪ್ರಜ್ಞೆ ನಿರಂತರ ಕಾಡುತ್ತದೆ. ಕೆಟ್ಟ ಮೇಲೆ ಬುದ್ಧಿ ಬಂದಂತೆ!
               ಜೀವನದಲ್ಲಿ ಏನನ್ನು ಸಾಧಿಸಬೇಕೆಂದರೂ ದೈವಕೃಪೆ ಮತ್ತು ಗುರುಕೃಪೆ ಇರಬೇಕೆಂಬುದು ಆಸ್ತಿಕರ ದೃಢವಾದ ನಂಬಿಕೆ. ಪ್ರಪಂಚದ ಅನೇಕ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು, ಅನುಭವಗಳನ್ನು ಮತ್ತು ಅವರ ಜೀವನಶೈಲಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಇಂತಹ ಒಂದು ನಂಬಿಕೆ ಸರಿಯೆನಿಸದೇ ಇರಲಾರದು. ಅಂತೆಯೇ ಈ ದೈವಕೃಪೆಗಾಗಿ ನಾವು ಅನೇಕ ಮಾರ್ಗಗಳನ್ನು ಅನುಸರಿಸುತ್ತೇವೆ - ನಿತ್ಯಾನುಷ್ಠಾನ, ಪೂಜೆ, ಜಪ-ತಪ, ಹೋಮ, ಹವನ, ಧ್ಯಾನ ಇತ್ಯಾದಿ. ಕಲಿಯುಗದ ಮಹಿಮೆಯೋ ಏನೋ ದುರದೃಷ್ಟವಶಾತ್ ಇಂದು ಇಂತಹ ಆಚರಣೆಗಳು ಕೂಡಾ ಡಾಂಭಿಕತನದ, ಹಣದ ಮತ್ತು ವೈಯುಕ್ತಿಕ ಹಿತಸಾಧನೆಗಾಗಿ ಮಾಡುವ ಪ್ರದರ್ಶನ ವಸ್ತುವಾಗಿ ಬಿಟ್ಟಿದೆ. ನಾನು ಇಂತಹ ಧರ್ಮಕಾರ್ಯಕ್ಕಾಗಿ ಇಷ್ಟು ಹಣ ಕೊಟ್ಟೆ (ಫೋಟೋದೊಂದಿಗೆ ಪತ್ರಿಕೆಗಳಲ್ಲಿ ಪ್ರಚಾರದಿಂದ ಹಿಡಿದು ದೊಡ್ಡ ದೊಡ್ಡ ಫ್ಲೆಕ್ಸ್ ಪಟಗಳಲ್ಲೂ ರಾರಾಜಿಸುವವರೆಗೆ!), ನಾನು ಪ್ರತಿ ದಿವಸ ಇಷ್ಟು ಗಂಟೆ ಪೂಜೆ ಮಾಡುತ್ತೇನೆ, ಇಷ್ಟು ಜಪ ಮಾಡುತ್ತೇನೆ, ಇಷ್ಟು ದೇವಸ್ಥಾನಗಳಿಗೆ ಹೋಗುತ್ತೇನೆ, ಇಷ್ಟು ಇತರರಿಗೆ ಸಹಾಯ ಮಾಡಿದ್ದೇನೆ ಇತ್ಯಾದಿ ಇತ್ಯಾದಿ ಹೇಳಿಕೊಂಡು ತಿರುಗುವವರೇ ಇಂದು ಬಹು ಮಂದಿ. ಇಂತಹ ವಿಷಯಗಳಿಂದ ಇತರರಿಗೆ ಆಗಬೇಕಾದ್ದೇನೂ ಇಲ್ಲ ಮತ್ತು ಬಹುಮಂದಿಗೆ ಈ ವಿಚಾರಗಳಲ್ಲಿ ಆಸಕ್ತಿಯೂ ಇರುವುದಿಲ್ಲ. ಇದರಿಂದ ದೈವ ಕೃಪೆಗಿಂತ ದೇವರ ಅವಕೃಪೆಯೇ ಹೆಚ್ಚಾದೀತೆಂಬುದನ್ನೂ ಇವರು ಅರಿಯರು. ಎಂತಲೇ ಅಷ್ಟವಿಧದರ್ಚನೆಯನೆಷ್ಟು ಮಾಡಿದಡೇನು ನಿಷ್ಠೆ ನೆಲೆಗೊಳದೆ ಭಜಿಸುವ ಪೂಜೆಯದು ನಷ್ಟ ಕಾಣಯ್ಯ ಎಂದು ಸರ್ವಜ್ಞ ಹೇಳಿರುವುದು. ಹೊರಗಿನ ದೇವರೇಕೆ? ಒಳದೈವಕೆ ಕಿವಿಗೊಡು ಎಂಬ ದ.ರಾ.ಬೇಂದ್ರೆಯವರ ಮಾತು ಕೂಡ ಪ್ರಸ್ತುತವೇ.
ನೇರವಾಗಿ ಹೇಳಬೇಕೆಂದರೆ, ಭಗವಂತನ ಆರಾಧನೆ  ಅದು ಯಾವ ರೂಪದಲ್ಲಿ ಬೇಕಾದರೂ ಇರಲಿ - ಅದು ಭಕ್ತ ಮತ್ತು ಭಗವಂತನ ಮಧ್ಯೆ ಮಾತ್ರಾ ನಡೆಯುವ ಒಂದು ಆಪ್ತ ಪ್ರಕ್ರಿಯೆ; ಸಂವಾದ ಮತ್ತು ವಿನಿಮಯ. ನಿಜವಾದ ಭಕ್ತ ತನ್ನ ಅಳಲು ಆ ಭಗವಂತನಿಗೆ ತಲುಪಿದರಷ್ಟೇ ಸಾಕೆಂಬ ಅರಿವನ್ನು ಹೊಂದಿರುತ್ತಾನೆ. ಅಂತಹ ಅರಿವೇ ಆತನಿಗೆ ಅಂತಿಮವಾಗಿ ಜಯವನ್ನೂ ತಂದೇ ಕೊಡುತ್ತದೆ. ಬದಲಾಗಿ ತನ್ನ ಆಚರಣೆಗಳಿಗೆ ಬಣ್ಣ ಕಟ್ಟಿ, ನಾಲ್ಕು ಜನರನ್ನು ಮೆಚ್ಚಿಸಲಿಕ್ಕಾಗಿ ಎಂದು ಆತ ಮುಂದಾಗುತ್ತಾನೋ, ಎಂದು ಧಾರ್ಮಿಕ ಆಚರಣೆಗಳು ಪ್ರದರ್ಶನದ ಸಲಕರಣೆಗಳಾಗುತ್ತವೆಯೋ ಅಂದಿನಿಂದಲೇ ಆತನ ಅವನತಿ ಕೂಡಾ ಪ್ರಾರಂಭವಾಗುವುದಲ್ಲಿ ಸಂಶಯವಿಲ್ಲ. ತೋರಿಕೆಯ ಆಚರಣೆಗಳು ನಾಲ್ಕು ಜನರ ಮೆಚ್ಚುಗೆಯ ಮಾತುಗಳಿಂದ ತೃಪ್ತಿ (ಅಲ್ಪ ಕಾಲಿಕ) ತರಬಹುದು. ನಾನೂ ಭಗವಂತನ ಸೇವೆ ಮಾಡಿದೆನೆಂಬ ಸಮಾಧಾನವನ್ನೂ ತರಬಹುದು. ಆದರೆ ನಿಜಾರ್ಥದಲ್ಲಿ ಆ ಆಚರಣೆಗಳು ಭಗವಂತನ ಸಮೀಪವೂ ಸುಳಿದಿರವು. ಇಂದು ಧಾರ್ಮಿಕ ಕಾರ್ಯಗಳಿಗೆ ಸಾಕಷ್ಟು ದೊಡ್ಡ ಮೊತ್ತವನ್ನು ತಮ್ಮ ಹೆಸರನ್ನು ಎಲ್ಲಿಯೂ ತರಬಾರದೆಂಬ ಷರತ್ತಿಗೊಳಪಟ್ಟು ದಾನ ಮಾಡುವ ಅನೇಕ ಮಹನೀಯರನ್ನೂ ನೋಡಬಹುದು; ಅಂತೆಯೇ ಒಂದು ಟ್ಯೂಬ್ ಲೈಟ್ ಮೇಲೆ ದಾನಿಗಳು ಇಂತಹವರು ಎಂದು ದೊಡ್ಡದಾಗಿ ಹೆಸರು ಬರೆಸಿಕೊಳ್ಳುವ ಮಹಾನುಭಾವರನ್ನೂ ನೋಡಬಹುದು!  ಟ್ಯೂಬ್ ಲೈಟ್ ಮೇಲೆ ದಾನಿಗಳ ಹೆಸರನ್ನು ನೋಡಿ ಯಾರೂ ಪ್ರಶಂಸೆ ಮಾಡಲಾರರು; ಬದಲಾಗಿ ಅದೊಂದು ನಗೆಪಾಟಲಿನ ವಿಷಯವಷ್ಟೇ ಅದೀತು.
ಹಾಗಾಗಿ ಈ ಮೇಲೆ ಹೇಳಿದಂತೆ ವೈಯುಕ್ತಿಕ ಧಾರ್ಮಿಕ ಆಚರಣೆಗಳು ನಮ್ಮ ನಮ್ಮ ದೇವರ ಖಾಸಗೀ ಕೋಣೆಗಷ್ಟೇ ಮತ್ತು ನಮ್ಮ ಮತ್ತು ನಮ್ಮ ಆರಾಧ್ಯ ದೇವರ ನಡುವೆಯಷ್ಟೇ ಸೀಮಿತವಾಗಿದ್ದರೆ ಚೆನ್ನ. ಭಕ್ತ ಮತ್ತು ಭಗವಂತನ ಸಂಭಾಷಣೆ ಪ್ರಿಯಕರ ಮತ್ತು ಪ್ರೇಯಸಿಯ ನಡುವೆ ನಡೆಯುವ ಸಂಭಾಷಣೆಯಂತೆಯೇ. ಅದು ಅವರವರಿಗೆ ಅರ್ಥವಾದರಷ್ಟೇ, ಅನುಭವವಾದರಷ್ಟೇ ಸಾಕು. ಪ್ರಿಯಕರ ಮತ್ತು ಪ್ರೇಯಸಿಯ ನಡುವೆ ನಡೆಯುವ ಎಲ್ಲವನ್ನೂ ಅವರು ಎಲ್ಲರೊಂದಿಗೂ ವೈಭವೀಕರಿಸಿ ಹೇಳಿಕೊಳ್ಳುವುದಿಲ್ಲ; ಹಾಗೆ ಮಾಡಿದರೆ ಅದು ಹಾಸ್ಯಾಸ್ಪದವಾದೀತು. ಅಂತೆಯೇ ಭಕ್ತ ಮತ್ತು ಭಗವಂತನ ಸಂಬಂಧ ಕೂಡ ಬಲು ಸೂಕ್ಷ್ಮವಾದುದು; ವೈಯುಕ್ತಿಕವಾದುದು. ಆದು ಬೇರೆಯವರಿಗೆ ತಿಳಿಯುವ, ತಿಳಿಸುವ ಮತ್ತು ವೈಭವೀಕರಿಸುವ ಅಗತ್ಯವಿಲ್ಲ.  ನಾ ನಿನ್ನ ಧ್ಯಾನದೊಳಿರಲು ಮಿಕ್ಕ ಹೀನ ಮಾನವರೇನ ಮಾಡಬಲ್ಲರೋ ರಂಗ ಎಂದು ಪುರಂದರದಾಸರು ನುಡಿದಂತೆ ಆ ಭಗವಂತನ  ನಿರಂತರ ಏಕಾಂತ ನಾಮಸ್ಮರಣೆಯೇ ಸಾಕು. ಭಗವಂತನ ನಿತ್ಯಾರಾಧನೆ ಆತನ ಕೃಪೆಯೊಂದಿಗೆ ದಿನನಿತ್ಯದ ಸಂಕಷ್ಟಗಳನ್ನು ಧೈರ್ಯದಿಂದ ಮತ್ತು ಸಮಾಧಾನ ಚಿತ್ತದಿಂದ ಎದುರಿಸುವಲ್ಲಿ ಖಂಡಿತಾ ನಮ್ಮ ಸಹಾಯಕ್ಕೆ ಬಂದೇ ಬರುತ್ತದೆ. ನನ್ನ ನೆರವಿಗೆ ಭಗವಂತನಿದ್ದಾನೆ, ಎಂದಿಗೂ ಆತ ನನ್ನ ಕೈ ಬಿಡನು ಎಂಬ ದೃಢವಾದ ನಂಬಿಕೆಯೇ ನಮ್ಮ ಸುಗಮ ಜೀವನಕ್ಕೆ ಮತ್ತು ಸಂತೋಷಕ್ಕೆ ಮೂಲವಾಗುತ್ತದೆ. ಇದು ಅನೇಕರ ಅನುಭವವೇದ್ಯವಾದ ಮಾತು. ಎಲ್ಲಾ ಸದ್ಗುರುಗಳ ಮೂಲಮಂತ್ರ. ಸತ್ಯವಾದ ಮಾತೆಂದರೆ ಭಗವಂತನಿಗೆ ನಾವು ಅರ್ಪಿಸುವ ಯಾವುದೇ ಲೌಕಿಕ ವಸ್ತುಗಳೂ ಆತನಿಗೆ ಬೇಕಾಗಿಲ್ಲ. ಅದು ಕೇವಲ ನಮ್ಮ ಮಾನಸಿಕ ತೃಪ್ತಿಗಷ್ಟೇ. ಅಗತ್ಯಕ್ಕಿಂತ ಮಿಗಿಲಾದ ಅಲಂಕಾರವೂ ಆತನಿಗೆ ಬೇಡ. ಅಚಂಚಲ ಭಕ್ತಿ, ಶರಣಾಗತಿಯ ಮತ್ತು ಅರ್ಪಣಾ ಮನೋಭಾವವಷ್ಟಿದ್ದರೆ ಸಾಕು ಆತನ ಒಲುಮೆ ಸಂಪಾದಿಸಲು. ಇವುಗಳನ್ನು ಬಿಟ್ಟು ಉಳಿದೆಲ್ಲ ಪ್ರದರ್ಶನದ ಆಚರಣೆಗಳು ಅರ್ಥಹೀನವಷ್ಟೇ ಅಲ್ಲ ಬರೀ ವ್ಯರ್ಥ ಶ್ರಮವೂ ಹೌದು.

|| ²æÃ gÁªÀÄ dAiÀÄ gÁªÀÄ dAiÀÄ dAiÀÄ gÁªÀÄ ||

PÀ« ªÉA. ¸ÀÄgÉñï
20.03.10- 94489-32866 - Email: bsr_kavisuresh@yahoo.co.in

Saturday, March 12, 2011

ಕಾಲಾಧೀನಂ ಜಗತ್ ಸರ್ವಂ- 2

ಕಾಲಾಧೀನಂ ಜಗತ್ ಸರ್ವಂ- 1


ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರ ಶ್ರೀಮಠದ ಯತಿಗಳಾದ ಪೂಜ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದಸರಸ್ವತೀ ಸ್ವಾಮೀಜಿಯವರು ಒಂದು ದೇವಾಲಯದ ಕುಂಭಾಭಿಷೇಕವನ್ನು ನೆರವೇರಿಸಲು ಇಂದು ಹಾಸನಕ್ಕೆ ಆಗಮಿಸಿದ್ದರು.ಸರಳ ಸ್ವಭಾವದ ಸ್ವಾಮೀಜಿಯವರ ಮಾತುಗಳು ಭಕ್ತರನ್ನು ಆಕರ್ಷಿಸುತ್ತವೆ. ಅವರ ಪ್ರವಚನದ ಭಾಗಗಳನ್ನು ವೇದಸುಧೆಯ ಅಭಿಮಾನಿಗಳಿಗಾಗಿ ಎರಡು ಮೂರು ಕಂತುಗಳಲ್ಲಿ ಇಂದಿನಿಂದ ಪ್ರಕಟಿಸಲಾಗುತ್ತಿದೆ.


Thursday, March 10, 2011

ಯೋಚಿಸಲೊ೦ದಿಷ್ಟು..೨೫

ಓದುಗರಲ್ಲಿ ವಿನ೦ತಿ:


ಫೆಬ್ರವರಿ ಕೊನೆಯ ವಾರಕ್ಕೇ ನನ್ನ ಈ ಸರಣಿಯ ೨೫ ನೇ ಕ೦ತು ಪ್ರಕಟಗೊಳ್ಳಬೇಕಿತ್ತು. ಆದರೆ ಕಾರಣಾ೦ತರಗಳಿ೦ದ ಶ್ರೀಕ್ಷೇತ್ರದ ರಥೋತ್ಸವ ಕಾರ್ಯಕ್ರಮಗಳಾದಿಗಳೆಡೆಯಲ್ಲಿ ಸಾಧ್ಯವಾಗಲಿಲ್ಲ. ಕ್ಷಮಿಸುವಿರೆ೦ದು ನ೦ಬಿದ್ದೇನೆ.

ಬರಹಗಾರನೊಬ್ಬನಿಗೆ ಇದಕ್ಕಿ೦ತಾ ಸ೦ತಸ ತರುವ ವಿಚಾರವಿರಲು ಸಾಧ್ಯವಿಲ್ಲ. ಎಲ್ಲಾ ಓದುಗರ ಸಹಾಯದಿ೦ದ ನನ್ನ ಈ ಚಿ೦ತನಾ ಸರಣಿ ಈ ವಾರ ತನ್ನ ೨೫ ನೇ ಕ೦ತನ್ನು ಕಾಣುತ್ತಿರುವುದು ನಿಜವಾಗಿಯೂ ಸ೦ತಸದ ಸ೦ಗತಿ! ಈ ಸರಣಿಯ ಆರ೦ಭದಲ್ಲಿ ಇದನ್ನೆಲ್ಲಾ ಊಹಿಸಿರಲೇ ಇಲ್ಲ! ಇಷ್ಟು ಕ೦ತುಗಳವರೆಗೂ ಮು೦ದುವರೆಯುತ್ತದೆ೦ಬ ನಿರೀಕ್ಷೆ ಸ್ವತ: ನನಗೇ ಇರಲಿಲ್ಲ! ಆದರೆ ಅದು ಸಾಧ್ಯವಾಗಿದೆ ಎ೦ದರೆ ನನ್ನ ಈ ಪ್ರಯತ್ನಕ್ಕೆ ಸದಾ ಅಧ್ಬುತವಾಗಿ ಪ್ರೋತ್ಸಾಹಿಸಿ, ವಿಮರ್ಶಿಸಿ, ಪ್ರತಿಕ್ರಿಯಿಸಿದ ನೀವೇ ಕಾರಣಕರ್ತರು!ನಿಮ್ಮನ್ನು ಮರೆಯಲಾದೀತೆ?

ನನಗೆ ಮು೦ಜಾನೆಯ ಶುಭಾಷಿತ ಹಾಗೂ ರಾತ್ರೆಯ ಶಯನಾಷಿತಗಳೆ೦ದು ದಿನಕ್ಕೆರಡು ಬಾರಿ ಉತ್ತಮ ಆ೦ಗ್ಲ ನುಡಿಮುತ್ತುಗಳನ್ನು ನನ್ನ ಚರವಾಣಿಗೆ ರವಾನಿಸುತ್ತಿದ್ದ ಅತ್ರಾಡಿ ಸುರೇಶ್ ಹೆಗಡೆಯವರು (ಆಸುಮನ) ನನ್ನಲ್ಲಿ ಈ ಸರಣಿ ಯನ್ನು ಆರ೦ಭಿಸುವ ಬಗ್ಗೆ ಉದಯಿಸಿದ ಪ್ರೇರಣೆಗೆ ನಿಜವಾದ ಕಾರಣಕರ್ತರು.ನನ್ನ ಭಾಷಾನುವಾದದ ತಪ್ಪುಗಳನ್ನು ತಿಳಿಸಿ, ನುಡಿಮುತ್ತುಗಳ ಮೌಲ್ಯ ವರ್ಧಿತಗೊಳ್ಳಲೂ ಕಾರಣರು ಅವರೇ!  ಸುರೇಶ್ ಹೆಗಡೆಯವರಲ್ಲದೆ, ತಮ್ಮ ಬಿಡುವಿರದ ಕಾರ್ಯ ಗಳ ನಡುವೆಯೂ ಆಗಾಗ ತಮ್ಮ ಆ೦ಗ್ಲ ನುಡಿಮುತ್ತುಗಳನ್ನು ಈ ಮೇಲ್ ಹಾಗೂ ಚರವಾಣಿಗೆ ರವಾನಿಸುತ್ತಿದ್ದುದ್ದಲ್ಲದೆ, ಪ್ರತಿ ಕ೦ತನ್ನೂ ಅತೀವ ಆಸ್ಥೆಯಿ೦ದ ಓದಿ, ತಮ್ಮದೇ ಅಭಿಪ್ರಾಯಗಳನ್ನು ಪ್ರತಿಕ್ರಿಯೆಗಳ ಮೂಲಕ ನೀಡುತ್ತಿದ್ದ ಸ೦ತೋಷ ಆಚಾರ್ಯರೂ( ಅ೦ತರ್ನಾದ) ಸಹ ನನ್ನ ಆದರಣೀಯರು. ಈ ಸರಣಿಗೆ ಅದರದ್ದೇ ಆದ ಓದುಗ ಬಳಗ ದೊರೆತಿದೆ. ಮಾನ್ಯ ಓದುಗ ಮಹಾಶಯರಾದ ನೀವುಗಳು ಈ ಸರಣಿಯ ಈ ತರಹದ ಯಶಸ್ಸಿಗೆ ಕಾರಣರಾಗಿದ್ದೀರಿ. ನಿಮಗೆ ನನ್ನ ಕೃತಜ್ಞತೆಗಳು. ಸ೦ತಸ ತರುವ ವಿಚಾರವೆ೦ದರೆ ಈ ಸರಣಿಯ ಹೆಚ್ಚಿನ ಎಲ್ಲಾ ಕ೦ತುಗಳು ನಿಮ್ಮ ಪ್ರತಿಕ್ರಿಯೆಗಳಿಗೆ ಒಳಗಾಗಿವೆ... ಅ೦ದರೆ ಈ ಸರಣಿಯು ಗುರುತಿಸಲ್ಪಟ್ಟಿದೆ ಎ೦ದೇ ಅರ್ಥವಲ್ಲವೇ? ಎಲ್ಲರೂ ನನ್ನನ್ನು ಬೆಳೆಸುತ್ತಿದ್ದೀರಿ... ಲಾಲಿಸುತ್ತಿದ್ದೀರಿ... ನನ್ನಲ್ಲಿನ ಬರಹಗಾರನನ್ನು ಪ್ರೋತ್ಸಾಹಿಸುತ್ತಿದ್ದೀರಿ... ಸಾಕು ನನಗೆ! ವಿಶೇಷವಾಗಿ ವೇದಸುಧೆಯಲ್ಲಿ ಈ ಸರಣಿಯನ್ನು ಹಾಗೂ ನನ್ನಿತರ ಬರಹಗಳನ್ನು ನೇರವಾಗಿ ಪ್ರಕಟಿಸಲು ಅವಕಾಶ ಕಲ್ಪಿಸಿಕೊಟ್ಟ ಸರಣಿಯ ನಿರ್ವಾಹಕರಾದ ಹರಿಹರಪುರ ಶ್ರೀಧರ್, ಲೇಖಕವ೦ದ್ಯರಾದ ಶ್ರೀಯುತ ವಿ.ಎಸ್.ಭಟ್ಟರು, ಕವಿಮನೆತನದ ಕವಿ ನಾಗರಾಜರು, ಕವಿ ಸುರೇಶರು, ಸೀತಾರಾಮರು ಎಲ್ಲರೂ ನನ್ನ ಮಾನ್ಯರೇ.. ಅಲ್ಲದೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಈ ಸರಣಿಯ ಯಶಸ್ಸಿಗೆ ಪ್ರೋತ್ಸಾಹಿಸಿದ ನನ್ನ ಮಿತ್ರರು ಹಾಗೂ ಸಮಸ್ತ ಓದುಗ ಬಳಗಕ್ಕೆ ನನ್ನ ನಮಸ್ಕಾರಗಳು. ನಿಮ್ಮ ಪ್ರೋತ್ಸಾಹ ಹೀಗೇ ಇರಲೆ೦ದು ಆಶಿಸುವ...

ನಿಮ್ಮವ ನಾವಡ.



ಯೋಚಿಸಲೊ೦ದಿಷ್ಟು..೨೫



೧. ಜೀವನವನ್ನು ನಾವು ಯಾವ ರೀತಿಯ ಕ್ರಿಯಾಶೀಲತೆ ಇ೦ದ ಎದುರುಗೊಳ್ಳಬೇಕೆ೦ಬುದನ್ನು ಈ ಸಾಲುಗಳು ಚೆನ್ನಾಗಿ ವಿವರಿಸುತ್ತವೆ!

ಸೈನಿಕ: ಸರ್, ನಾವು ಎಲ್ಲಾ ಕಡೆಯಿ೦ದಲೂ ಶತ್ರುಗಳ ಮುತ್ತಿಗೆಗೆಒ ಳಗಾಗಿದ್ದೇವೆ.
ಮೇಜರ್: ಹಾಗಾದರೆ ನಾವು ಎಲ್ಲಾ ಕಡೆಯಿ೦ದಲೂ ಅವರ ಮೇಲೆ ಧಾಳಿ ಮಾಡಬಹುದು!

೨. ಗ್ರಹಾಮ್ ಬೆಲ್ ದೂರವಾಣಿ ಯನ್ನು ಕ೦ಡು ಹಿಡಿದರೂ, ತನ್ನ ಮನೆಗೆ೦ದೂ ಆತ ಒ೦ದೇ ಒ೦ದು ಕರೆಯನ್ನು ಮಾಡಲಿಲ್ಲ, ಏಕೆ೦ದರೆ ಅವನ ಹೆ೦ಡತಿ ಮತ್ತು ಮಗಳು ಕಿವುಡರಾಗಿದ್ದರು! ಆತನ ವ್ಯಕ್ತಿತ್ವದ ಈ ಅ೦ಶವೇ “ಪರರಿಗಾಗಿ ಜೀವನವನ್ನು ಮುಡುಪಾಗಿಡುವುದು“ ಎ೦ಬುದರ ಸಾರ್ಥಕಾರ್ಥವಲ್ಲವೇ?

೩. ಜೀವನದಲ್ಲಿ ನಮ್ಮನ್ನು ಮಾನಸಿಕ ಕೊಲ್ಲುವುದೆ೦ದರೆ “ಸ೦ಬ೦ಧಗಳು“. ನಾವು ಅದರಿ೦ದ ಕಳಚಿಕೊ೦ಡರೆ ನಮಗೆ ನೋವಾಗುತ್ತದೆ. ಆದರೆ “ಏಕಾ೦ತ“ ಎನ್ನುವುದೊ೦ದು ಅಧ್ಬುತ! ಇದು ನಮಗೆಲ್ಲವನ್ನೂ ಕಲಿಸುತ್ತದೆ ಹಾಗೂ ನಾವು ಅದರಿ೦ದ ಕಳಚಿಕೊ೦ಡಲ್ಲಿ ಎಲ್ಲವನ್ನೂ ಗಳಿಸುತ್ತೇವೆ!

೪. ನಮ್ಮ ಜೀವನವೆನ್ನುವುದು ನಮ್ಮ ಎದುರಿಗೆ ನಟಿಸುವವರ ಜನರೊ೦ದಿಗಿನ ಗು೦ಪಲ್ಲ! ಅದು ನಮ್ಮ ಬೆನ್ನ ಹಿ೦ದಿನ ಪ್ರಾಮಾಣಿಕ ಜನರ ಗು೦ಪು!

೫.ಒ೦ದು ಕೋಳಿಯ ಮೊಟ್ಟೆಯು ಬಾಹ್ಯಶಕ್ತಿಗಳಿ೦ದ ಒಡೆಯಲ್ಪಟ್ಟರೆ ಒ೦ದು ಹತ್ಯೆ!ಆದರೆ ಆ೦ತರಿಕವಾಗಿ ಮೊಟ್ಟೆಯೊ೦ದು ತಾನೇ ಒಡೆದರೆ ಒ೦ದು ಜನನ! ಮಹಾನ್ ಕಾರ್ಯಗಳು ಆರ೦ಭಗೊಳ್ಳುವುದೇ ಆ೦ತರ್ಯದಿ೦ದ!

೬. ನಮ್ಮನ್ನು ಪ್ರೀತಿಸುವವರಿಗಾಗಿ, ಅವರನ್ನೇ ಕಳೆದುಕೊಳ್ಳುವುದಕ್ಕಿ೦ತ ನಮ್ಮ ಸ್ವಾಭಿಮಾನ (ಅಹ೦ಕಾರ)ವನ್ನು ಕಳೆದು ಕೊಳ್ಳುವುದೇ ಉತ್ತಮ!

೭. ಚೆನ್ನಾಗಿ ಕಾಯಿಸಿದ ಚಿನ್ನದಿ೦ದ ಆಭರಣವನ್ನು ಮಾಡಬಹುದು! ಹಾಗೆಯೇ ತಾಮ್ರದಿ೦ದ ತ೦ತಿಗಳನ್ನೂ, ಸತತ ಉಳಿಪೆಟ್ಟುಗಳ ಹೊಡೆತದಿ೦ದ ಒ೦ದು ಸು೦ದರ ಮೂರ್ತಿಯನ್ನೂ ಕೆತ್ತಬಹುದು. ಹಾಗೆಯೇ ಹೆಚ್ಚೆಚ್ಚು ನೋವು೦ಡಷ್ಟೂ ನಮ್ಮ ಜೀವನದಲ್ಲಿನ ಮೌಲ್ಯ ಉನ್ನತಿಗೇರುತ್ತಾ ಹೋಗುತ್ತದೆ!

೮.ನ೦ಬುವುದಾದರೆ ಒಬ್ಬ ವ್ಯಕ್ತಿಯನ್ನು ಸ೦ಶಯಕ್ಕೆಡೆಯಿಲ್ಲದ೦ತೆ ನ೦ಬೋಣ.ಅದರಿ೦ದ ನಾವು ಕಳೆದುಕೊಳ್ಳು ವುದೇನಿಲ್ಲ !ಬದಲಾಗಿ ನಮ್ಮ ಜೀವನದ ಹಾದಿಗೊ೦ದು ಪಾಠವನ್ನೋ ಅಥವಾ ಒಬ್ಬ ಉತ್ತಮ ಆತ್ಮೀಯನನ್ನೋ ಪಡೆಯಬಹುದು!

೯. ದೇವರು ಎಲ್ಲಾ ಕಡೆಯೂ ಇದ್ದಾನೆ೦ದ ಮೇಲೆ ನಮ್ಮಲ್ಲೇಕೆ ಇಷ್ಟೊ೦ದು ದೇವಸ್ಥಾನಗಳು ಎ೦ಬ ಪ್ರಶ್ನೆ ಬುಧ್ಧಿವ೦ತನೊಬ್ಬ ಉತ್ತರಿಸಿದ ರೀತಿ ಹೀಗಿದೆ: ಗಾಳಿಯು ಎಲ್ಲಾ ಕಡೆಯೂ ಇದ್ದರೂ ನಾವು ಅದರ ತೀವ್ರತೆಯನ್ನು ಅನುಭವಿಸಲು “ಫ್ಯಾನ್“ ಉಪಯೋಗಿಸುವುದಿಲ್ಲವೇ? ಹಾಗೆಯೇ “ದೇವರೆ೦ಬುದೂ“ ಕೂಡಾ!

೧೦. ನಾವೇ “ಎಲ್ಲವೂ“ ಅಲ್ಲ, ಅ೦ತೆಯೇ ನಾವು “ ಏನೂ ಅಲ್ಲ“ ಎ೦ಬುದೂ ಅಲ್ಲ! ಆದರೆ ನಾವು “ಏನನ್ನಾದರೂ “ ಸಾಧಿಸಲೆ೦ದೇ ಜನ್ಮ ತಳೆದಿದ್ದೇವೆ ಎ೦ಬುದು ಮಾತ್ರ ಹೌದು!

೧೧. ಈದಿನ ನಮ್ಮ “ಎಣಿಕೆ“ಯ೦ತೆ ಏನನ್ನೂ ಸಾಧಿಸಲಾಗಲಿಲ್ಲವೆ೦ದರೆ ಬೇಸರ ಬೇಡ. ನಾಳೆ ನಮಗಾಗಿ ಪುನ: “ನವ ಆರ೦ಭ“ಕ್ಕಾಗಿ ಕಾಯುತ್ತಿದೆ!

೧೨. ಪರಸ್ಪರ ಉತ್ತಮ “ನಡತೆ“ ಹಾಗೂ ಉತ್ತಮ “ಹೃದಯ“ ವಿರದಿದ್ದಲ್ಲಿ ಯಾವುದೇ ಸ೦ಬ೦ಧಗಳೂ ದೀರ್ಘ ಕಾಲ ಬಾಳಲಾರವು!

೧೩. “ಸಾಧನೆ“ ಸತತ ಕ್ರಿಯಾಶೀಲತೆಯನ್ನು ಬಯಸುತ್ತದೆ! ಸಾಧಕರು ತಪ್ಪುಗಳನ್ನು ಮಾಡಿದರೂ, ಕೂಡಲೇ ತಿದ್ದಿಕೊ೦ಡು “ಸಾಧನೆ“ ಸರಿ ಹಾದಿಗೆ ಮರಳುವರೇ ವಿನ: “ಕ್ರಿಯಾಶೀಲತೆ“ಯನ್ನೇ ಸಮಾಪ್ತಿಗೊಳಿಸುವುದಿಲ್ಲ!

೧೪.ದ್ವೇಷವು ತಪ್ಪುಗಳನ್ನು ಹಿಗ್ಗಿಸಿ ತೋರಿಸಿದರೆ, ಪ್ರೇಮವು ಅವನ್ನು ಮರೆಮಾಡುತ್ತದೆ!

೧೫.ದೊಡ್ಡವರ ಕೆಲಸಗಳಲ್ಲಿ ಭಾಗಿಯಾಗಬಹುದು.ಆದರೆ ಆ ಕೆಲಸಗಳ ಫಲದಲ್ಲಿ ಭಾಗಿಯಾಗಲಾಗದು!

೧೬.ಧನವನ್ನು ಸ೦ಪಾದಿಸುವುದು ಕಷ್ಟ! ಸ೦ಪಾದಿಸಿದ ಮೇಲೆ ಅದನ್ನು ಕಾಪಿಟ್ಟುಕೊಳ್ಳುವುದೂ ಕಷ್ಟ! ಕಳೆದುಕೊಳ್ಳುವುದು ಸಾವಿಗಿ೦ತಲೂ ಭೀಕರ!

೧೭.ದೊಡ್ಡವರಿಗೆ ದೃಢ ಮನಸ್ಸಿದ್ದರೆ, ಅಲ್ಪರಿಗೆ ಅನೇಕ ಅಪೇಕ್ಷೆಗಳಿರುತ್ತವೆ!

೧೮.ನಮ್ಮಲ್ಲಿನ “ಹೃದಯ ಶ್ರೀಮ೦ತಿಕೆ“ಯು ನಮ್ಮಲ್ಲಿನ ಸ೦ಪತ್ತನ್ನು ಅಳೆಯಲು ಬ೦ದವರಿ೦ದ ಅಳೆಯಲಾಗದು. ಬದಲಾಗಿ ನಮ್ಮಭಾವನೆಗಳನ್ನು ಅರ್ಥೈಸಿಕೊಳ್ಳುವವರಿ೦ದ ನಮ್ಮ ಶ್ರೀಮ೦ತಿಕೆಯು ಅಳೆಯಲ್ಪಡುತ್ತದೆ!

೧೯.ಸ೦ಪತ್ತಿನ ಜೊತೆಗೇ “ಹೃದಯ ಶ್ರೀಮ೦ತಿಕೆ“ಯೂ ಬೆರೆತಿದ್ದರೆ,ನಾವು ಸಕಲ ಅರ್ಥದಲ್ಲಿಯೂ ನಿಜವಾದ “ಶ್ರೀಮ೦ತ“ರೇ!

೨೦. ನಾವು ದು:ಖದಲ್ಲಿರುವ ಸಮಯವೇ ನಮ್ಮ ನಿರಾಶೆಯ ಉತ್ತು೦ಗವಲ್ಲ! ಬದಲಾಗಿ ನಮ್ಮ ದು:ಖದ ಸಮಯದಲ್ಲಿ ನಮ್ಮ “ಅಳಲನ್ನು‘‘ ಕೇಳುವವರು ಯಾರೂ ಇಲ್ಲದಿರುವ ಸಮಯವು ನಮ್ಮ ನಿರಾಶೆಯು ಅದರ ಉತ್ತು೦ಗವನ್ನು ತಲುಪಿರುತ್ತದೆ!!

೨೧.ಕಳೆದು ಹೋದ “ನಿನ್ನೆ“ಯಿ೦ದ ಕಲಿತು ವರ್ತಮಾನದ “ಈದಿನ“ವನ್ನು ಅನುಭವಿಸುತ್ತಾ, ಭವಿಷ್ಯತ್ತಿನ “ನಾಳೆ“ ಯ ಬಗ್ಗೆ ನ೦ಬಿಕೆ ಇಟ್ಟುಕೊಳ್ಳೋಣ!

೨೨.ನಿಜವಾದ “ಬ೦ಧ“ವನ್ನು ಕಾಪಿಟ್ಟುಕೊಳ್ಳುವುದು ಕಷ್ಟ! ಬ೦ಧುತ್ದದ ನಡುವೆ “ಅಸಹನೀಯತೆ“ ಯು ನೆಲಸಿದಾಗ ಅದನ್ನು ಕೈಬಿಡದೆ, ಪರಿಹರಿಸಿಕೊಳ್ಳುವ ಬಗ್ಗೆ ಆಲೋಚಿಸೋಣ. ಏಕೆ೦ದರೆ ನಾವು ನಿಜವಾದ “ಮಿತ್ರ“ ರನ್ನು ಯಾ ಬ೦ಧುಗಳನ್ನು ಗಳಿಸುವುದೇ ಅಪರೂಪ!!

೨೩. ಯಾರಾದರೂ “ಆದರ್ಶ“ ವನ್ನು ಅನುಕರಿಸುವವರೆಗೂ ಪ್ರತಿಯೊ೦ದೂ ಹೊಸ “ಆದರ್ಶ“ವು ದೊಡ್ಡ “ಹಾಸ್ಯ“ವೆ೦ದೇ ಪರಿಗಣಿಸಲಾಗುತ್ತದೆ ಹಾಗೆಯೇ ನಾವು ನ೦ಬಿಕೊ೦ಡು ಪ್ರಯತ್ನಿಸುವವರೆಗೂ,ಪ್ರತಿಯೊ೦ದೂ ಹೊಸ “ಚಿ೦ತನೆ“ಯನ್ನೂ ನಾವು “ಸರಳ“ವೆ೦ದೇ ಅ೦ಗೀಕರಿಸಿರುತ್ತೇವೆ!

೨೪. ನಮ್ಮ ಬದುಕಿನ “ಅರ್ಥ“ಬದಲಾಯಿಸಿದವರನ್ನು ಮರೆಯುವುದು ಹೇಗೆ ಕಷ್ಟವೋ ಹಾಗೆಯೇ, ನಮ್ಮ ಬದುಕಿನಲ್ಲಿ “ಏನೂ ಅಲ್ಲ“ದವರನ್ನೂ ಮರೆಯುವುದು ತುಸು ಕಷ್ಟವೇ!!

೨೫. ಎಲ್ಲವನ್ನೂ ಅರ್ಥೈಸಿಕೊ೦ಡು, ಸರಿದೂಗಿಸಿಕೊ೦ಡು ಹೋಗುವ ಸಾಮರ್ಥ್ಯವಿದ್ದಲ್ಲಿ, ಜೀವನದ ಪ್ರತಿಕ್ಷಣವನ್ನೂ ಅಧ್ಬುತವಾಗಿ ಆನ೦ದಿಸಬಹುದು!



Tuesday, March 8, 2011

ವೇದೋಕ್ತ ಜೀವನ ಪಥ - ಜೀವಾತ್ಮ ಸ್ವರೂಪ -6

     ವೇದೋಕ್ತ ಕರ್ಮಫಲಸಿದ್ಧಾಂತ ಸರ್ವತಂತ್ರ, ಸಾರ್ವಭೌಮ, ಸಾರ್ವಕಾಲಿಕ ಸತ್ಯ. ಇಲ್ಲಿ ನೋಡಿರಿ:-


ಸ ಕಿಲ್ಬಿಷಮತ್ರ ಸಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |

ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ || (ಅಥರ್ವ.೧೨.೩.೪೮)

     [ಅತ್ರ] ಈ ಈಶ್ವರೀಯ ನ್ಯಾಯವಿಧಾನದಲ್ಲಿ [ಕಿಲ್ಬಿಷಂ] ಯಾವ ಒಡಕೂ, ದೋಷವೂ ಇಲ್ಲ. [ಆಧಾರಃ ನ ಅಸ್ತಿ] ಬೇರೆ ಯಾವ ಆಧಾರವೂ ಇಲ್ಲ. [ಯತ್ ಮಿತ್ರೈಃ ಸಮ್] ಸ್ನೇಹಿತರ ಮಧ್ಯೆ ಸೇರಿಕೊಂಡು [ಅಮಮಾನ ಏತಿ] ನಾನು ಕ್ಷೇಮವಾಗಿದ್ದೇನೆಂದುಕೊಂಡು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ [ನ] ಇಲ್ಲ. [ನ ಏತತ್ ಅನೂನಂ ಪಾತ್ರಮ್] ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ [ನಿಹಿತಮ್] ಗೂಢವಾಗಿ ಇಡಲ್ಪಟ್ಟಿದೆ. [ಪಕ್ವಃ] ಬೇಯಿಸಿದ ಅನ್ನ, ಕರ್ಮಫಲವಿಪಾಕ [ಪಕ್ತಾರಮ್] ಅದನ್ನು ಪಾಕ ಮಾಡಿದವನನ್ನು ಪುನಃ [ಆ ವಿಶಾತಿ] ಮರಳಿ ಪ್ರವೇಶಿಸಿಯೇ ತೀರುತ್ತದೆ.

     ಅರ್ಥ ಸ್ಪಷ್ಟವಾಗಿದೆ. ಕರ್ಮಫಲಭೋಗ ಎಲ್ಲರಿಗೂ ಅನಿವಾರ್ಯ. ಆದ ಕಾರಣ ಅನ್ಯ ವ್ಯಕ್ತಿಯ ಹೆಗಲ ಮೇಲೆ ತನ್ನ ಪಾಪದ ಹೊರೆ ಹೊರಿಸಿ, ತಾನು ಮುಕ್ತನಾಗುತ್ತೇನೆಂದು ಭಾವಿಸುವುದು ಆತ್ಮಘಾತಕವಾದ ಘೋರ ಅಜ್ಞಾನ. ಈ ಬಗ್ಗೆ ಅಜ್ಞಾನದಿಂದ ದೂರ ಸರಿಯಬೇಕು. ಮಾನವನು ಹುಟ್ಟಿನಿಂದಲೇ ಪಾಪಿ, ಆದುದರಿಂದ ಅವನು ಯಾವನೋ ದೇವಪುತ್ರನ ನೆರವಿಲ್ಲದೆ ಭಗವ0ತನ ರಾಜ್ಯದಲ್ಲಿ ಪ್ರವೇಶಿಸಲಾರ - ಎನ್ನುವುದಕ್ಕಿಂತ ಘೋರ ಪಾತಕವಿಲ್ಲ. ಭಗವಂತನ ರಾಜ್ಯ ಬೇರೆಲ್ಲೋ ತೇಲಾಡುತ್ತಿಲ್ಲ. ಸರ್ವವ್ಯಾಪಕನಾದ ಪ್ರಭುವಿನ ರಾಜ್ಯ ಇಲ್ಲಿಯೇ ಇದೆ. ವೇದಗಳು ಮೋಕ್ಷದ ಮಾರ್ಗವನ್ನು ಹೀಗೆ ವರ್ಣಿಸುತ್ತವೆ:


ಶುನಃಶೇಪೋ ಹ್ಯಹ್ವದ್ ಗೃಭೀತಸ್ ತ್ರ್ರಿಷ್ವಾದಿತ್ಯಂ ದ್ರುಪದೇಷು ಬದ್ಧಃ |
ಅವೈನಂ ರಾಜಾ ವರುಣಃ ಸಸೃಜ್ಯಾದ್ ವಿದ್ವಾನ್ ಅದಬ್ಧೋ ವಿ ಮುಮೋಕ್ತು ಪಾಶಾನ್ || (ಋಕ್.೧.೨೪.೧೩)


     [ತ್ರಿಷು ದ್ರುಪದೇಷು ಗೃಭೀತಸ್ ಬದ್ಧಃ] ಸತ್ವ, ರಜಸ್ಸು, ತಮಸ್ಸು ಎಂಬ ಮೂರು ಗುಣಗಳ ಅಥವಾ ತನು-ಮನ-ವಚನ ಎಂಬ ಮೂರು ಗೂಟಗಳಿಗೆ ಕಟ್ಟುಬಿದ್ದ, [ಶುನಃಶೇಪಃ] ಸುಖಾಭಿಲಾಷಿಯಾದ ಜೀವನು [ಆದಿತ್ಯಂ ಹಿ ಅಹ್ವತ್] ಅಖಂಡನಾದ ಪ್ರಭುವಿಗೆ ಮೊರೆಯಿಡುತ್ತಾನೆ. [ರಾಜಾ ವರುಣಃ] ವಿಶ್ವಸಾಮ್ರಾಟ್ ವರಣೀಯ ಪ್ರಭುವು [ಏನಂ ಅವ ಸಸೃಜಾತ್] ಇವನನ್ನು ಸಡಿಲಗೊಳಿಸುತ್ತಾನೆ. [ಅದಬ್ಧಃ ವಿದ್ವಾನ್] ಪ್ರಾಕೃತ ಮೋಹಕ್ಕೆ ಅಡಿಯಾಳಾಗದ ವಿದ್ವಾನ್ ಜೀವನು [ಪಾಶಾನ್ ವಿ ಮುಮೋಕ್ತು] ತನ್ನ ಬಂಧನಗಳನ್ನು ತಾನೇ ಕಡಿದುಹಾಕಬೇಕು.

     ಹೌದು, ಮಧ್ಯಸ್ಥನಿಗೆ ಇಲ್ಲಿ ಎಡೆಯೇ ಇಲ್ಲ. ಪ್ರಭೂಪಾಸನೆ ಮಾಡಬೇಕು. ಆಗ ಪ್ರಭು ಭೋಗವಿಲಾಸದ ಕಟ್ಟನ್ನು ಸಡಿಲಿಸುತ್ತಾನೆ. ಜ್ಞಾನಿಯಾದ ಜೀವನು ತನ್ನ ಪಾಶಗಳನ್ನು ತಾನೇ ಕಡಿಯಬೇಕು. ಒಬ್ಬನೇ ಏನು ದೇವಪುತ್ರ? ದೇವಪುತ್ರಾ ಋಷಯಃ (ಋಕ್. ೧೦.೬೨.೪) - ದೇವಪುತ್ರರೇ! ತತ್ವದರ್ಶಿಗಳೇ - ಎಂದು ಎಲ್ಲರನ್ನೂ ವೇದ ಸಂಬೋಧಿಸಿರುವುದನ್ನು ಪಾಠಕರಾಗಲೇ ಓದಿದ್ದಾರೆ. ಮಾನವ, ಜನ್ಮದಿಂದಲೇ ಪಾಪಿ ಎನ್ನುವುದು ಅಜ್ಞಾನದ ಪರಮಾವಧಿ. ವೇದದ ಈ ಉದ್ಭೋದನವನ್ನು ಆಲಿಸಿ, ಮುಂದಿನ ಅಧ್ಯಾಯ ಪ್ರಾರಂಭಿಸೋಣ.

ಶುಕ್ರೋಸಿ ಭ್ರಾಜೋಸಿ ಸ್ವಶಸಿ ಜ್ಯೋತಿರಸಿ  |
ಆಪ್ನುಹಿ ಶ್ರೇಯಾಂಸಮತಿ ಸಮಂ ಕ್ರಾಮ  || (ಅಥರ್ವ. ೨.೧೧.೫)


     ಓ ಮಾನವ! [ಶುಕ್ರಃ ಅಸಿ] ನೀನು ನಿರ್ಮಲನಾಗಿದ್ದೀಯೆ. [ಭ್ರಾಜಃ ಅಸಿ] ಪಾಪದಾಹಕ ಪ್ರಕಾಶವಾಗಿದ್ದೀಯೆ. [ಸ್ವಃ ಅಸಿ] ಸುಖಸ್ವರೂಪನಾಗಿದ್ದೀಯೆ. [ಜ್ಯೋತಿಃ ಅಸಿ] ಜ್ಞಾನದ ಜ್ಯೋತಿಯಾಗಿದ್ದೀಯೆ. [ಶ್ರೇಯಾಂಸಂ ಆಪ್ನುಹಿ] ಶ್ರೇಯಸ್ಸನ್ನು ಸಾಧಿಸಿಕೋ. [ಸಮಂ ಅತಿಕ್ರಾಮ] ಆಧ್ಯಾತ್ಮ ಪಥದಲ್ಲಿ ಸಮನಾದವನನ್ನು ಮೀರಿಸಿ ಮುಂದೆ ನಡೆ.
-೦-೦-೦-೦-