Pages

Tuesday, August 2, 2011

ವೇದ ವಿಚಾರ ಚಿಂತನ - ಒಂದು ಸಾರ್ಥಕ ಕಾರ್ಯಕ್ರಮ

ಬೇಲೂರಿನ ಶ್ರೀ ವಿಶ್ವನಾಥ ಶರ್ಮರು ಕಳೆದ ವಾರ ದೂರವಾಣಿ ಮೂಲಕ ೩೧-೦೭-೨೦೧೧ ರ ಭಾನುವಾರದಂದು ಚನ್ನರಾಯಪಟ್ಟಣದಲ್ಲಿ ಹಲವಾರು ಆಸಕ್ತರು ವೇದಾಭ್ಯಾಸ ಮಾಡುತ್ತಿದ್ದು, ಕಲಿಯಲು ಪ್ರಾರಂಭಿಸಿ ಒಂದು ವರ್ಷ ಪೂರ್ಣಗೊಂಡ ನಿಮಿತ್ತ ಒಂದು ಕಾರ್ಯಕ್ರಮ ಇಟ್ಟುಕೊಂಡಿದ್ದು ಆ ಕಾರ್ಯಕ್ರಮಕ್ಕೆ ಬರುವಂತೆ ಕೋರಿದ್ದರು. ಚನ್ನರಾಯಪಟ್ಟಣದ ಚೈತನ್ಯ ವಿದ್ಯಾಸಂಸ್ಥೆಯ ಮುಖ್ಯಸ್ಥರು ಶ್ರೀ ರಮೇಶ್‌ರವರೂ ಸಹ ದೂರವಾಣಿ ಮುಖೇನ ಆಹ್ವಾನಿಸಿದ್ದಲ್ಲದೆ ಆಹ್ವಾನ ಪತ್ರಿಕೆ ಸಹ ಕಳಿಸಿದ್ದರು. ನನಗೂ ಸಹ ವಿಷಯ ಆಸಕ್ತಿದಾಯಕವಾದುದಾದ್ದರಿಂದ ಅಂದು ಬೆಳಿಗ್ಗೆ ೭-೧೫ರ ಬಸ್ಸಿಗೆ ಹೊರಟು ೮-೧೫ಕ್ಕೆ ಸ್ಥಳದಲ್ಲಿದ್ದೆ. ಕಾರ್ಯಕ್ರಮ ಬೆ. ೮-೩೦ಕ್ಕೆ ಆರಂಭವಾಗುತ್ತಿದ್ದರಿಂದ ಪೂರ್ಣ ಕಾರ್ಯಕ್ರಮ ವೀಕ್ಷಿಸುವ ಉದ್ದೇಶ ನನಗಿದ್ದರಿಂದ ಸಕಾಲದಲ್ಲಿ ಅಲ್ಲಿದ್ದೆ. ಯಶಸ್ವಿಯಾಗಿ ನಡೆದ ಕಾರ್ಯಕ್ರಮ ಅಲ್ಲಿ ಬಂದಿದ್ದ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಆ ಕಾರ್ಯಕ್ರಮದ ಸಂಕ್ಷಿಪ್ತ ಮಾಹಿತಿಯನ್ನು ತಮ್ಮೊಂದಿಗೆ ಹಂಚಿಕೊಳ್ಳುವೆ.

ವೈದಿಕ ಅಗ್ನಿಹೋತ್ರದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ನಾಲ್ಕು ದಂಪತಿಗಳು ಭಾಗವಹಿಸಿದ್ದ ಅಗ್ನಿಹೋತ್ರದ ಮಹತ್ವವನ್ನು ವೇದತರಂಗ ಮಾಸಪತ್ರಿಕೆಯ ಸಂಪಾದಕರಾದ ಬೆಂಗಳೂರಿನ ಶ್ರೀ ಶ್ರುತಿಪ್ರಿಯರವರು ವಿವರಿಸಿದ್ದಲ್ಲದೆ ಪ್ರತಿಮಂತ್ರದ ಅರ್ಥವನ್ನು ಮನಮುಟ್ಟುವಂತೆ ತಿಳಿಹೇಳಿದರು. ಸಮರ್ಪಣಾ ಮನೋಭಾವದಿಂದ ಮಾಡುವ ಅಗ್ನಿಹೋತ್ರದಿಂದ ಆಂತರಿಕ ಹಾಗೂ ಬಾಹ್ಯ ಶುದ್ಧಿಗೆ, ಪರಿಸರ ಶುದ್ಧಿಗೆ ಹೇಗೆ ಸಹಕಾರಿಯಾಗುವುದೆಂದು ವಿವರಿಸಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಶ್ರೀ ರಮೇಶ್ ರವರು ವೇದಾಭ್ಯಾಸದ ಕಲಿಕೆ ಕಳೆದ ಒಂದು ವರ್ಷದಿಂದ ನಡೆದ ರೀತಿಯ ಬಗ್ಗೆ, ಅದು ಯಶಸ್ವಿಗೊಳ್ಳಲು ಕಾರಣರಾದವರ ಬಗ್ಗೆ ವಿಸ್ತೃತವಾಗಿ ತಿಳಿಸಿ ಸಂಬಂಧಿಸಿದವರಿಗೆ ಕೃತಜ್ಞತೆ ವ್ಯಕ್ತಪಡಿಸಿದರು. ಸುಮಾರು ೪೦ ವೇದಾಭ್ಯಾಸಿಗಳು ಕಳೆದ ಒಂದು ವರ್ಷದಿಂದ ಅಭ್ಯಾಸ ಮಾಡುತ್ತಿದ್ದು, ತಾವು ಕಲಿತ ಕೆಲವು ವೇದಮಂತ್ರಗಳನ್ನು ಸುಸ್ವರವಾಗಿ ಸಾಮೂಹಿಕವಾಗಿ ಹೇಳಿದ್ದು ಕಲಿಕೆಯ ಸಾರ್ಥಕತೆಯನ್ನು ತೋರಿಸಿತು.



ಮುಖ್ಯಭಾಷಣ ಮಾಡಿದ ಶ್ರೀ ಶ್ರುತಿಪ್ರಿಯರವರು ಚಿಕ್ಕ ವಯಸ್ಸಿನ ಬಾಲಕರೂ ಸೇರಿದಂತೆ ಎಲ್ಲಾ ವಯೋಮಾನದವರೂ ಕಲಿಕೆಯಲ್ಲಿ ತೊಡಗಿದ ಬಗ್ಗೆ ಪ್ರಶಂಸೆಯ ನುಡಿಗಳನ್ನಾಡಿ ಇದು ಇತರರಿಗೆ ಪ್ರೇರಣೆ ನೀಡುವ ಸಂಗತಿಯೆಂದರು. ವೇದ ಯಾವುದೇ ಒಂದು ನಿರ್ದಿಷ್ಟ ಜಾತಿಗೆ ಸೇರಿದ್ದಾಗಿರದೆ ಇಡಿಯ ಮನುಕುಲಕ್ಕೆ ಸೇರಿದ್ದಾಗಿದ್ದು, ಎಲ್ಲಾ ಜಾತಿಯವರೂ, ಮಹಿಳೆಯರೂ ವೇದಾಭ್ಯಾಸಕ್ಕೆ ತೊಡಗಬೇಕೆಂದು ಆಶಿಸಿದರು. ಜಾತಿ ವ್ಯವಸ್ಥೆಯ ವಿಷಯವನ್ನು ಭಾಷಣದ ಪ್ರಮುಖ ವಿಷಯವಾಗಿ ಆರಿಸಿಕೊಂಡ ಅವರು ಪ್ರಾಚೀನ ಕಾಲದ ವರ್ಣವ್ಯವಸ್ಥೆಯನ್ನು ಜಾತಿಗಳಾಗಿಸಿ, ಜಾತಿಭೇದ ಹುಟ್ಟುಹಾಕಿ, ಮೇಲು-ಕೀಳು, ಸ್ಪೃಷ್ಯ-ಅಸ್ಪೃಷ್ಯ ಇತ್ಯಾದಿಗಳಿಗೆ ಸಿಲುಕಿಸಲು ಅಜ್ಞಾನ ಮತ್ತು ಸಂಕುಚಿತ ಮನೋಭಾವವೇ ಕಾರಣವೆಂದು ವಿಶ್ಲೇಷಿಸಿದರು. ಜಾತಿ ಹುಟ್ಟಿನಿಂದಲ್ಲ, ಆಚರಣೆಯಿಂದ ಬರುತ್ತದೆ. ತಾವು ಮಾಡುವ ಕರ್ಮಕ್ಕನುಸಾರವಾಗಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬುದಾಗಿ ಪರಿಗಣಿಸಲಾಗುತ್ತಿದ್ದು, ನಂತರದಲ್ಲಿ ಹುಟ್ಟಿನಿಂದ ಜಾತಿ ಎಂಬುದು ರೂಢಿಗತವಾಗಿ ಬಳಸಲ್ಪಟ್ಟು ವೇದವನ್ನು ತಿಳಿಯದವರು ದೂಷಿಸುವಂತೆ ಆದ ಪರಿಸ್ಥಿತಿಯನ್ನು ಬಿಚ್ಚಿಟ್ಟರು. ವೇದದಲ್ಲಿ ಎಲ್ಲೂ ಅಸಮಾನತೆಯ ಸೊಲ್ಲಿಲ್ಲ, ಮೇಲು-ಕೀಳುಗಳ ತಾರತಮ್ಯವಿಲ್ಲ, ನಿಜವಾಗಿ ವೇದೋಕ್ತ ರೀತಿಯಲ್ಲಿ ಜೀವನ ನಡೆಸಿದರೆ ಇಂತಹ ಕೀಳು ಆಚರಣೆಗಳು ನಶಿಸುವುದಾಗಿ ಅಭಿಪ್ರಾಯಪಟ್ಟರು. ಸ್ವತಃ ವೇದವ್ಯಾಸರು ಒಬ್ಬ ಬೆಸ್ತನ ಮಗ, ಕೌಂಡಿನ್ಯ ಋಷಿ ಮೂಲತಃ ಕ್ಷೌರಿಕ, ಮಹಾಪತಿವ್ರತೆಯಾಗಿದ್ದ ಅರುಂಧತಿ ಒಬ್ಬ ಅಂತ್ಯಜೆ, ಮರ್ಯಾದಾ ಪುರುಷೋತ್ತಮ ಶ್ರೀರಾಮ ಕ್ಷತ್ರಿಯ, ಹೀಗೆ ಹಲವಾರು ವಾಸ್ತವ ವಿಚಾರಗಳನ್ನು ಮುಂದಿಟ್ಟ ಅವರು ಮಾನವ ಕುಲದ ಏಕತೆಗೆ ವೇದ ಇದೆಯೇ ಹೊರತು ಮತ್ತೇನಲ್ಲವೆಂದರು. ಪರಮಾತ್ಮ ಎಲ್ಲವನ್ನೂ ಕೊಟ್ಟಿದ್ದಾನೆ, ಅದನ್ನು ಪಡೆಯುವ ಬಳಸುವ ರೀತಿಯನ್ನು ನಾವು ಕಲಿತುಕೊಳ್ಳಬೇಕಷ್ಟೆ ಎಂದ ಅವರು ನಮ್ಮ ಸ್ಥಿತಿ ಇಂದು ಬಂಗಾರದ ಬೆಟ್ಟದ ಮೇಲೆ ಕುಳಿತ ಭಿಕ್ಷುಕನಂತಿದೆಯೆಂದು ವಿಷಾದಿಸಿದರು. ಸತ್ಯವನ್ನು ಅರಿಯುವಲ್ಲಿ ಶ್ರದ್ಧೆ, ಬುದ್ಧಿ ಮತ್ತು ತರ್ಕದ ಸಮನ್ವಯವಾದರೆ ಸಾಧ್ಯವೆಂದರು.
ಶ್ರೀ ವಿಶ್ವನಾಥ ಶರ್ಮರವರು ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರ ಆದೇಶದಂತೆ ತಾವು ಪ್ರತಿವಾರ ಚನ್ನರಾಯಪಟ್ಟಣಕ್ಕೆ ಬಂದು ವೇದಪಾಠ ಮಾಡುತ್ತಿದ್ದು, ಅನಿವಾರ್ಯವಾಗಿ ಬರಲಾಗದಿದ್ದ ಸಂದರ್ಭಗಳಲ್ಲಿ ಶ್ರೀ ನಾಗರಾಜಮೂರ್ತಿ, ಗೋಪಿನಾಥ ಶಾಸ್ತ್ರಿ, ವಿಶ್ವನಾಥ, ಮುಂತಾದವರು ಪಾಠ ಮತ್ತು ಅಭ್ಯಾಸ ನಿಲ್ಲದಂತೆ ನೋಡಿಕೊಂಡುದಕ್ಕೆ ಕೃತಜ್ಞತೆ ಹೇಳಿದರು. ತಾವು ಈ ಸ್ಥಿತಿಗೆ ಬರಲು ಕಾರಣೀಭೂತರಾದ ತಮ್ಮ ತಂದೆ-ತಾಯಿ ಮತ್ತು ಗುರುಗಳನ್ನು ಸ್ಮರಿಸಿಕೊಂಡರು. 'ಮನುರ್ಭವ' - ಮಾನವನಾಗು ಎಂದು ವೇದ ಹೇಳುತ್ತದೆ. ತಾನು ಕಲಿತಿದ್ದನ್ನು ಇತರರಿಗೆ ತಿಳಿಸಿ ಜ್ಞಾನ ಪ್ರಸರಣ ಮಾಡುವುದು ಕರ್ತವ್ಯವಾಗಿದೆ, ಈ ಕರ್ತವ್ಯವನ್ನು ತಾನು ಮಾಡುತ್ತಿದ್ದೇನೆ ಎಂದ ಅವರು ಪಿತೃ ಋಣ, ಮಾತೃ ಋಣ, ಗುರು ಋಣದಂತೆ ಸಮಾಜ ಋಣ ಸಹ ಇದ್ದು ಜ್ಞಾನ ಪ್ರಸರಣ ಕಾರ್ಯ ಸಮಾಜದ ಋಣ ತೀರಿಸುವ ಕೆಲಸವೆಂದು ವಿನಮ್ರರಾಗಿ ಹೇಳಿದರು.

ಗೀತಗಾಯನ, ಧನ್ಯವಾದ ಸಮರ್ಪಣೆ, ಸಾಯಂಕಾಲದ ಅಗ್ನಿಹೋತ್ರ, ವೈದಿಕ ರಾಷ್ಟ್ರಗೀತೆ ಮತ್ತು ಶಾಂತಿ ಮಂತ್ರದೊಂದಿಗೆ ಹೀಗೊಂದು ಸಾರ್ಥಕ ಕಾರ್ಯಕ್ರಮ ಸಂಪನ್ನಗೊಂಡಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆಲ್ಲಾ ಒಳ್ಳೆಯ ಭೋಜನದ ವ್ಯವಸ್ಥೆಯಾಗಿತ್ತು. ಈ ಕಾರ್ಯಕ್ರಮ ಆಯೋಜಿಸಿದ್ದ ಚೈತನ್ಯ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಶ್ರೀ ರಮೇಶ್ ಮತ್ತು ಸತ್ಸಂಗದ ಎಲ್ಲಾ ಸಹಕಾರಿಗಳು, ವೇದಾಭ್ಯಾಸಿಗಳು, ಗುರುಗಳು ಅಭಿನಂದನಾರ್ಹರಾಗಿದ್ದಾರೆ.

******************

-ಕ.ವೆಂ.ನಾಗರಾಜ್.

Monday, August 1, 2011

ವಿವೇಕ ಚೂಡಾಮಣಿ ಭಾಗ -೫

ಗ್ರಂಥದ ಮುಂದುವರಿದ ಭಾಗ

पठंतु शास्त्राणि यजंतु देवान्
कुर्वंतु कर्माणि भजंतु देवताः ।
आत्मैक्य बोधेन विना विमुक्ति-
र्न सिध्यति ब्रह्मशतांतरेपि ॥६॥


ಪಠಂತು ಶಾಸ್ತ್ರಾಣಿ ಯಜಂತು
ದೇವಾನ್
ಕುರ್ವಂತು ಕರ್ಮಾಣಿ ಭಜಂತು ದೇವತಾಃ|
ಆತ್ಮೈಕ್ಯ ಬೋಧೇನ ವಿನಾ ವಿಮುಕ್ತಿ-
-ರ್ನ ಸಿಧ್ಯತಿ ಬ್ರಹ್ಮ ಶತಾಂತರೇಪಿ ||೬||

ಮುಕ್ತಿಯ ಮಹತ್ವವನ್ನು ತಿಳಿಸುತ್ತಾ ಶ್ರೀ ಶಂಕರರು ಮುಂದೆ ಬಹಳ ದಿಟ್ಟವಾದ ಧೀರವಾದ ಘೋಷಣೆಯನ್ನು ಮಾಡುತ್ತಾರೆ. ಮೇಲಿನ ಶ್ಲೋಕದ ವಿವರಣೆಯನ್ನು ತಿಳಿಯುವುದರ ಮೂಲಕ ಆ ಉದ್ಘೋಷವೇನು ಎಂಬುದನ್ನು ಅರಿಯೋಣ.

ಪಠಂತು ಶಾಸ್ತ್ರಾಣಿ (=ಶಾಸ್ತ್ರಗಳನ್ನು ಓದುವುದು), ಯಜಂತು ದೇವಾನ್ (=ದೇವತೆಗಳನ್ನು ಪೂಜಿಸುವುದು)
ಕುರ್ವಂತು ಕರ್ಮಾಣಿ (=ಕರ್ಮಗಳನ್ನು ಮಾಡುವುದು), ಭಜಂತು ದೇವತಾ: (=ದೇವತೆಗಳನ್ನು ಸ್ತುತಿಸುವುದು)
ಆತ್ಮ್ಯೆಕ್ಯ ಬೋಧೇನ ವಿನಾ ವಿಮುಕ್ತಿಃ (= ಆತ್ಮಜ್ಞಾನ(ಬ್ರಹ್ಮ ಸಾಕ್ಷಾತ್ಕಾರೆ) ವಿಲ್ಲದೆ ಮುಕ್ತಿಯಿಲ್ಲ)
ನ ಸಿಧ್ಯತಿ ಬ್ರಹ್ಮ ಶತಾಂತರೇಪಿ (= ನೂರು ಚತುರ್ಮುಖ ಬ್ರಹ್ಮರು ಆಗಿಹೋದರೂ ಸಿದ್ಧಿಸದು)

"ಆರು ಶಾಸ್ತ್ರವ ಓದಿದರಿಲ್ಲ ನೂರಾರು ಪುರಾಣವ ಪಠಿಸಿದರಿಲ್ಲ" ಎಂಬ ದಾಸವಾಣಿಯನ್ನು ಕೇಳಿರುತ್ತೇವೆ.ಶಾಸ್ತ್ರಗ್ರಂಥಗಳನ್ನು ಓದುವುದರಿಂದ, ದೇವತೆಗಳನ್ನು ಪೂಜಿಸುವುದರಿಂದ, ಕರ್ಮಾನುಷ್ಠಾನಗಳನ್ನು ಆಚರಿಸುವುದರಿಂದ, ದೇವತೆಗಳನ್ನು ಸ್ತುತಿಸುವುದರಿಂದ, ಇದ್ಯಾವುದರಿಂದಲೂ ಮುಕ್ತಿಯು ದೊರೆಯುವುದಿಲ್ಲ ಎಂದು ಶಂಕರರು ಹೇಳುತ್ತಾರೆ. ಹಾಗಾದರೆ ಮುಕ್ತಿಯ ದಾರಿ ಯಾವುದು ? ಈ ಚಿಂತೆ-ಕೋಟಲೆಗಳಿಂದ ಬಿಡುಗಡೆ ಎಂತು ?.
ತನ್ನೊಳಗಿನ ಸುಪ್ತ ಪ್ರಜ್ಞೆಯನ್ನು ಜಾಗೃತಗೊಳಿಸಿ ಪರಮಾರ್ಥ ಚಿಂತನೆಗೆ ಒಡ್ಡಿಕೊಳ್ಳದೆ ಇದ್ದಲ್ಲಿ ನೂರಾರು ಚತುರ್ಮುಖ ಬ್ರಹ್ಮರು ಬಂದು ಹೋದರೂ (ಅಷ್ಟು ಅವಧಿ ಕಳೆದರೂ) ಮೋಕ್ಷ ಅಥವಾ ಮುಮುಕ್ಷುತ್ವವು ದೊರಕಲಾರದು ಎಂದು ಹೇಳುತ್ತಾರೆ.
ಆತ್ಮ ಸಾಕ್ಷಾತ್ಕಾರದಿಂದ ಮಾತ್ರವೇ ನೆಮ್ಮದಿ, ಮುಕ್ತಿ ಎಂದಾದರೆ ನಾವು ದಿನವೂ ಮಾಡುವ ಪೂಜೆ, ಮಡಿ, ಸಾಂಪ್ರದಾಯಿಕ ಆಚರಣೆಗಳು, ಹವನಗಳು, ಪರೋಪಕಾರ, ದೇಶಸೇವೆ, ಪ್ರಾಮಾಣಿಕತೆ ಇದೆಲ್ಲಾ ಬಳಕೆಗೆ ಬಾರದ್ದೇ ? ವ್ಯರ್ಥವೇ ? ಇದನ್ನೆಲ್ಲಾ ಮಾಡುವುದಾದರೂ ಏಕೆ? ಎಂಬ ಪ್ರಶ್ನೆ ಏಳುವುದು ಸಹಜ.
ನಾವು ನಿತ್ಯವೂ ಆಚರಿಸುವ-ಅನುಸರಿಸುವ ಈ ಎಲ್ಲಾ ಕರ್ಮಗಳೂ ನಮ್ಮ ನಿರ್ಧಾರಗಳನ್ನು ಬಲಗೊಳಿಸುವಂತಹುದು. ನಮ್ಮಲ್ಲಿ ಸಾಮರ್ಥ್ಯವನ್ನು ತುಂಬುವಂತಹುದು. ನೆಮ್ಮದಿಯ ಅಕೌಂಟಿನಲ್ಲಿ ಜಮೆಯಾಗುವ ಡಿಪಾಸಿಟ್ಟುಗಳು !. ಹಾಗಾಗಿ ಕರ್ಮಗಳನ್ನು ಆಚರಿಸಲೇಬೇಕಾಗುತ್ತದೆ. ಕರ್ಮಗಳನ್ನು ಬಿಟ್ಟು ಬಿಡೋಣ ಎಂದರೆ, ಅವನ್ನು ಕಟ್ಟಿಕೊಂಡಿದ್ದೇವೆ ಎಂದೇ ಅರ್ಥ !. ಕರ್ಮಗಳಿಂದ ದೊರೆಯುವ ಫಲವು ಮಾತ್ರ ಗೌಣವಾದುದು. ’ಕರ್ಮವನ್ನು ಮಾಡು ಅದರ ಫಲಾಫಲಗಳನ್ನು ನನಗೆ ಬಿಡು’ ಎಂದು ಕೃಷ್ಣನು ಗೀತೆಯಲ್ಲಿ ಹೇಳಿದ್ದಾನೆ. ’ನನಗೆ ಬಿಡು’ ಎಂದರೆ ಫಲದ ಅಪೇಕ್ಷೆಯನ್ನು ಬಿಡು ಎಂದು ಅರ್ಥವೇ ಹೊರತು ಮಾಡಬಾರದ್ದನ್ನೆಲ್ಲಾ ಮಾಡಿ ಫಲಕ್ಕೆ ಮಾತ್ರ ಕೃಷ್ಣನನ್ನು ಹೊಣೆಯಾಗಿಸು ಎಂದಲ್ಲ. ಕೃಷ್ಣನು ಇಲ್ಲಿ ಜ್ಞಾನದ ಸಂಕೇತವೇ ಆಗಿದ್ದಾನೆ.
ಇಂದಿನ ನಿತ್ಯ ಜೀವನದ ಜಂಜಡದಲ್ಲಿ ಆತ್ಮಜ್ಞಾನ ಸಾಧನೆಗೆ ಸಮಯವಾದರೂ ಎಲ್ಲಿದೆ? ಕರ್ಮಗಳನ್ನಾದರೂ ಹೇಗೋ ಆಚರಿಸಬಹುದು, ಜ್ಞಾನಮಾರ್ಗಕ್ಕೆ ಅವಕಾಶವಾಗುವುದು ಕಷ್ಟವಲ್ಲವೆ ? ಕರ್ಮ-ಜ್ಞಾನಗಳ ಅ ಆ ಇ ಈ ಗಳೂ ಗೊತ್ತಿರದವರು ಆತ್ಮಜ್ಞಾನವನ್ನು ಸಾಧಿಸಲು ಸಾಧ್ಯವೆ ? ಎಂಬ ಪ್ರಶ್ನೆಗಳು ಏಳುತ್ತದೆ.
ಬಿ.ಎ. ಮುಗಿಸಿದ ನಂತರವಷ್ಟೇ ಎಂ.ಎ. ಗೆ ಹೋಗಬಹುದೇ ಹೊರತು ಒಂದನೇ ತರಗತಿಯಿಂದ ನೇರವಾಗಿ ಎಂ.ಎ. ಪಾಸು ಮಾಡಲು ಸಾಧ್ಯವಿಲ್ಲ. ಎಲ್ಲದಕ್ಕೂ ಸಾಧನೆ ಎನ್ನುವುದು ಬೇಕಾಗುತ್ತದೆ.
"ಜಟ್ಟಿ ಕಾಳಗದಿ ಸೋತೊಡೇನಾಯ್ತು
ಪಟ್ಟು ವರಸೆಗಳೆಲ್ಲಾ ವಿಫಲವೆನ್ನುವೆಯಾ?
ಮುಟ್ಟಿ ನೋಡವನ ಮೈ ಕಬ್ಬಿಣ ಗಟ್ಟಿ
ಗಟ್ಟಿತನ ಗರಡಿ ಫಲ " ಎನ್ನುವ ವಾಕ್ಯವನ್ನು ನಾವು ಬಹುವಾಗಿ ಗಮನಿಸಬೇಕಾಗುತ್ತದೆ.
ಕೆಲವೊಂದು ವಿಷಯಗಳನ್ನು ಹೀಗೇ ಹೇಳಬೇಕಾಗುತ್ತದೆ.
’ಕೊಳೆತ ಹಣ್ಣನ್ನು ತಿನ್ನಬಾರದು ಆರೋಗ್ಯಕ್ಕೆ ಒಳ್ಳೆಯದಲ್ಲಾ’ ಎಂದರೆ ಆಗೊಮ್ಮೆ ಈಗೊಮ್ಮೆ ರುಚಿ ನೋಡುವ ಮನಸಾಗುತ್ತದೆ. ’ತಿಂದರೆ ಸತ್ತೇ ಹೋಗುತ್ತಿಯಾ’ ಎಂದಾಗ ಕೊಂಚ ಗಂಭೀರತೆ ಬರುತ್ತದೆ. ಕರ್ಮ-ಜ್ಞಾನಗಳ ವಿಚಾರವೂ ಹಾಗೆಯೇ. ನಾವು ಆಚರಿಸುವ ಯಾವ ಕರ್ಮಗಳೂ ವ್ಯರ್ಥವಾಗುವುದಿಲ್ಲ, ಅವೆಲ್ಲವೂ ಜ್ಞಾನ ಮಾರ್ಗದ ಮೆಟ್ಟಿಲುಗಳು. ಸಂಸಾರಿಗಳಿಗೆ ಲೌಕಿಕರಿಗೆ {ಪ್ರವೃತ್ತಿ ಧರ್ಮ‍(೧)} ಕರ್ಮಕ್ಕೆ ಸದಾ ಅವಕಾಶವಿದೆ, ಆದರೆ ಸನ್ಯಾಸಿಗಳಿಗೆ, ವಿರಾಗಿಗಳಿಗೆ {ನಿವೃತ್ತಿ ಧರ್ಮ(೧)} ಕರ್ಮದ ಗೊಡವೆಯೇ ಇಲ್ಲದವರಿಗೆ ಬಿಡುಗಡೆ ಹೇಗೆ ? . ಪ್ರವೃತ್ತಿ-ನಿವೃತ್ತಿ ಧರ್ಮಗಳನ್ನು ಎಷ್ಟೇ ಆಚರಿಸಿದರೂ ’ಆತ್ಮೈಕ ಜ್ಞಾನ’ ಲಭ್ಯವಾಗದೆ ಮುಮುಕ್ಷುತ್ವವಿಲ್ಲ ಎಂಬ ಧೀರವಾದ ಮಾತನ್ನು ಶ್ರೀ ಶಂಕರರು ಹೇಳುತ್ತಾರೆ.
-------------------------------------------------------

ಗ್ರಂಥದ ಮುಂದಿನ ಸೂಕ್ತಿಯನ್ನು ಗಮನಿಸೋಣ

अम्रुतत्वस्य नाशास्ति वित्तेनेत्येव हि श्रुतिः ।
ब्रवीति कर्मणो मुक्तेः अहेतुत्वं स्पुटं यतः ॥७॥


ಅಮೃತತ್ವಸ್ವ ನಾಶಾಸ್ತಿ ವಿತ್ತೇನೇತ್ಯೇವ ಹಿ ಶ್ರುತಿಃ | (=ವಿತ್ತ ಅಥವಾ ಸಂಪತ್ತಿನಿಂದ ಅಮೃತತ್ವವು(ಮುಕ್ತಿಯು) ದೊರಕದು)
ಬ್ರವೀತಿ ಕರ್ಮಣೋ ಮುಕ್ತೇಃ ಅಹೇತುತ್ವಂ ಸ್ಪುಟಂ ಯತಃ||೭|| (= ಕರ್ಮದಿಂದ ಮುಕ್ತಿಯಿಲ್ಲ ಎಂಬುದು ಸ್ಪಷ್ಟವಾದುದು)

ನಾವು ಲೌಕಿಕ ಕರ್ಮಗಳನ್ನು ಅನುಸರಿಸಿದಾಗ ಅದರಿಂದ ಸಂಪತ್ತಿನ ಅಥವಾ ದ್ರವ್ಯದ ಲಾಭವು ನಮಗೆ ಬರುತ್ತದೆ. ಪರೋಪಕಾರವು ಒಳ್ಳೆಯ ಕಾರ್ಯವೇ ಆಗಿದ್ದರೂ ಅಂತಹ ಕಾರ್ಯಕ್ಕೆ ಪ್ರತಿಫಲವನ್ನು ಪಡೆದಾಗ ಆ ಕರ್ಮವು ನೆಮ್ಮದಿಯ ಮಾರ್ಗಕ್ಕೆ ಅಡಾಚಣೆಯಾಗುತ್ತದೆ. ’ಪುತ್ರ ಸಂತಾನವಿಲ್ಲದೆ ಮುಕ್ತಿಯಿಲ್ಲ’ ಎಂಬ ಮಾತೊಂದು ಅಲ್ಲಲ್ಲಿ ತೇಲಿ ಬರುತ್ತಿರುತ್ತದೆ. ಅಂತಹವರು ಶಂಕರರ ಈ ಮಾತನ್ನು ಗಮನಿಸಲೇ ಬೇಕು.
" ಶ್ರುತಿಗಳು (೨) ಹೇಳಿರುವಂತೆ ಪುತ್ರರು, ಧರ್ಮ-ಕರ್ಮಗಳು, ಉಪಾಸನೆ, ಸಂಪತ್ತು, ವಸ್ತು-ವಾಹನಗಳು, ಇವೆಲ್ಲವೂ ವಿತ್ತದ ಅಥವಾ ಧನದ ರೂಪವೇ ಆಗಿರುವುದರಿಂದ ಇವುಗಳಿಂದ ಮೋಕ್ಷದ ಆಸೆಯನ್ನು ಇಟ್ಟುಕೊಳ್ಳುವಂತಿಲ್ಲ"
ಎಂದು ಹೇಳುತ್ತಾರೆ. ’ನಕರ್ಮಣಾ ನಪ್ರಜಯಾ ಧನೇನ ತ್ಯಾಗೇನೈಕೇ ಅಮೃತತ್ವ ಮಾನಶುಃ’ ಎಂಬ ಉಪನಿಷತ್ತಿನ ಸಾಲುಗಳು ಬಹು ಪ್ರಖ್ಯಾತವಾದುದು. ತ್ಯಾಗದಿಂದಲೇ ಅಮೃತತ್ವವು ಎಂಬುದನ್ನು ಶ್ರುತಿಗಳು ಹೇಳುತ್ತವೆ.
ಎಲ್ಲರೂ ಬ್ರಹ್ಮಜ್ಞಾನಿಗಳಾಗಲು ಸಾಧ್ಯವೆ? ಆ ದಾರಿ ಅಷ್ಟೊಂದು ಸುಲಭವೇ ? ಎಂಬ ಪ್ರಶ್ನೆ ಬರುತ್ತದೆ.
ನನ್ನ ಮಿತ್ರರಾದ ಕೊಳ್ಳೇಗಾಲದ ಮಂಜುನಾಥರು ಒಮ್ಮೆ ನನಗೆ ಹೀಗೆ ಹೇಳಿದ್ದರು ( ಬಹುಷಃ ಅವರು ಹೇಳಿರುವುದು ಅವರಿಗೇ ಮರೆತು ಹೋಗಿರಬಹುದು !)
"ನೀವು ಒಂದು ಕೆಲಸ ಮಾಡಿಲ್ಲ ಅಂದ್ರೆ ಅದು ನಿಮ್ಮಿಂದ ಆಗೋದಿಲ್ಲ ಅಂತಾ ಅಲ್ಲ, ಅದು ನಿಮ್ಮ ಕೆಲಸದ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿಲ್ಲ, ಅಂದರೆ ನೀವು ಆ ಕೆಲಸಕ್ಕೆ ಪ್ರಾಶಸ್ತ್ಯ ಕೊಟ್ಟಿಲ್ಲ ಅಂತ ಅರ್ಥ ಅಷ್ಟೆ " .

ಯಾವುದೂ ಅಸಾಧ್ಯವಲ್ಲ, ಆದರೆ ಆ ಕೆಲಸ ನಮ್ಮ ಅಜೆಂಡಾದಲ್ಲಿ ಟಾಪ್ ಪ್ರಿಯಾರಿಟಿ ಪಡೆದುಕೊಳ್ಳದೆ ಗುರಿಯನ್ನು ತಲುಪುವುದು ಕಷ್ಟಸಾಧ್ಯ ಎಂದು ಹೇಳಬಹುದು.

ಜ್ಞಾನಪ್ರಾಪ್ತಿಯಿಂದಲೇ(ಬ್ರಹ್ಮಜ್ಞಾನ) ಮುಕ್ತಿ ಎನ್ನುವುದಾದರೆ ಅದನ್ನು ಪಡೆಯುವ ದಾರಿ ಯಾವುದು? ಸಾಧನಗಳೇನು ? ಮುಂದಿನ ಕಂತಿನಲ್ಲಿ ಈ ವಿಚಾರವನ್ನು ತಿಳಿಯೋಣ.

-----------------------------------------


ಟಿಪ್ಪಣಿ :

೧: ಪ್ರವೃತ್ತಿ ಧರ್ಮ : ನಮ್ಮ ನಿತ್ಯ -ನೈಮಿತ್ತಿಕ-ಕಾಮ್ಯ ಕರ್ಮಗಳು. ಉಪಾಸನೆ, ಸಾಂಪ್ರದಾಯಿಕ ಆಚರಣೆಗಳು, ಹೊಟ್ಟೆಪಾಡಿನ ಕೆಲಸಗಳು ಮುಂತಾದುವು.

ನಿವೃತ್ತಿ ಧರ್ಮ : ವೈರಾಗ್ಯ, ಸನ್ಯಾಸ, ಅಷ್ಟಾಂಗ ಯೋಗಗಳು [ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ.( ಇವುಗಳ ವಿವರಣೆಗಳು ಮುಂದೆ ಬರಲಿದೆ)] ಮುಂತಾದುವು

೨. ಶ್ರುತಿಗಳು ಹೇಳಿರುವಂತೆ : ಬೃಹದಾರಣ್ಯಕ ಉಪನಿಷತ್ತಿನ ಭಾಷ್ಯ. ಯಾಜ್ಞವಲ್ಕ್ಯ ಮಹರ್ಷಿಗಳು ಮೈತ್ರಾದೇವಿಗೆ ಹೇಳುತ್ತಾರೆ " ಕರ್ಮದಿಂದ ಫಲವು ಲಭಿಸುವುದು ಮತ್ತು ಆ ಫಲವು ಧನಕ್ಕೆ ಸಮಾನವಾದುದರಿಂದ ಕರ್ಮದಿಂದ ಮುಕ್ತಿ ಸಾಧ್ಯವಿಲ್ಲ" ಎಂದು.
-------------------------
ಹಿಂದಿನ ಕಂತುಗಳು:

ವಿವೇಕ ಚೂಡಾಮಣಿ -ಭಾಗ ೪

ವಿವೇಕ ಚೂಡಾಮಣಿ -ಭಾಗ ೩

ವಿವೇಕ ಚೂಡಾಮಣಿ -ಭಾಗ-೨

ವಿವೇಕ ಚೂಡಾಮಣಿ -ಭಾಗ-1

ವಿವೇಕ ಚೂಡಾಮಣಿ -ಭಾಗ ೪


ಗ್ರಂಥದ ಮುಂದುವರಿದ ಭಾಗ.

॥दुर्लभं त्रयमेवैतद् दैवानुग्रहहेतुकम्।
मनुष्यत्वं मुमुक्षुत्वम् महापुरुषसंश्र्यः ॥३||

||ದುರ್ಲಭಂ ತ್ರಯಮೇವೈತದ್ ದೈವಾನುಗ್ರಹ ಹೇತುಕಮ್ |
ಮನುಷ್ಯತ್ವಂ ಮುಮುಕ್ಷುತ್ವಂ ಮಹಾಪುರುಷಸಂಶ್ರಯಃ || ೩||


ಈ ಲೋಕದಲ್ಲಿ ಸುಲಭವಾಗಿ ದೊರಕದ (ದುರ್ಲಭವಾದ) ವಿಷಯಗಳನ್ನು ತಿಳಿಸುತ್ತಾ ಶ್ರೀ ಶಂಕರರು ಇನ್ನೂ ಮಹತ್ತರವಾದ ವಿಚಾರವನ್ನು ಪ್ರಸ್ತಾವಿಸುತ್ತಾರೆ.
ಮೇಲಿನ ಶ್ಲೋಕದ ಮೊದಲನೆಯ ಸಾಲನ್ನು ಗಮನಿಸೋಣ

ದುರ್ಲಭಂ ತ್ರಯಮೈವತದ್ ದೈವಾನುಗ್ರಹ ಹೇತುಕಮ್
(ದುರ್ಲಭಂ =ಸುಲಭವಾಗಿ ದೊರಕದ, ತ್ರಯಮ್ =ಮೂರು, ದೈವಾನುಗ್ರಹ ಹೇತುಕಮ್ = ದೈವಾನುಗ್ರಹವೇ ಕಾರಣವಾಗಿರುವ )

ದೈವಾನುಗ್ರಹವೇ ಕಾರಣವಾಗಿರುವ ಮೂರು ಮುಖ್ಯ ದುರ್ಲಭವಾದ ಸಂಗತಿಗಳಿವೆ . ಆ ಸಂಗತಿಗಳನ್ನು ಶ್ಲೋಕದ ಎರಡನೆಯ ಸಾಲಿನಲ್ಲಿ ಹೇಳಲಾಗಿದೆ. ಆ ಎರಡನೆಯ ಸಾಲಿನ ಮೊದಲನೆಯ ಸಂಗತಿಯನ್ನು ಗಮನಿಸೋಣ.

೧) ಮನುಷ್ಯತ್ವಮ್ (= ಮನುಜನಾಗಿರುವುದು)

ಮಾನವ ಜೀವಿಯು 'ಮನುಷ್ಯ' ಎನಿಸಿಕೊಳ್ಳಲು ಆತನಿಗಿರಬೇಕಾದ ಕನಿಷ್ಠ ಅರ್ಹತೆಯೆಂದರೆ ಅದು ಮನುಷ್ಯತ್ವ !. ಕಾಡು ಪ್ರಾಣಿಗಳ ಗುಣವು ನಾಗರೀಕ ಮಾನವನ ಗುಣವಲ್ಲ. ಈ ಮೊದಲು ಹೇಳಿದಂತೆ ಮಾನವನಿಗೆ ಹೆಚ್ಚಿನ ಗುಣಗಳು ಸಂದಾಯವಾಗಿ ಬಂದಿದ್ದರೆ ಕೆಲವೊಂದನ್ನು ಸಂಪಾದಿಸಿಕೊಳ್ಳಬೇಕಾಗುತ್ತದೆ. ಗುಣ ಸಂಪಾದನೆಗೆ ಸ್ವಾನುಭವವೂ ದಾರಿಯಾಗಬಲ್ಲುದು ವೇದಾಂತಗಳ ಅರಿವೂ ಬೆಳಕಾಗಬಲ್ಲುದು. ಸಂವೇದನಾಶೀಲತೆಯೇ ಮನುಷ್ಯತ್ವದ ಮುಖ್ಯ ಲಕ್ಷಣ ಎನ್ನಬಹುದು. ಸಂವೇದನೆ (ನೋವು-ನಲಿವು ಮುಂತಾದವು )ಗಳಿಗೆ ಮನಸ್ಸು-ಬುದ್ಧಿಯನ್ನು ಬಲಿಗೊಡದೆ ಸ್ಥಿತಪ್ರಜ್ಞರಂತೆ ಇರಬೇಕೆಂದು ’ಗೀತೆ’ಯಲ್ಲಿ ಹೇಳಿದ್ದರೂ ಹಾಗೆ ಹೇಳಿರುವ ಸಂದರ್ಭ ಮತ್ತು ಉದ್ದೇಶವನ್ನು ನಾವು ಗಮನದಲ್ಲಿಡಬೇಕಾಗುತ್ತದೆ. ಸೂಕ್ಷ್ಮ ಸಂವೇದನೆಗಳಿಲ್ಲದ ಮಾನವನಲ್ಲಿ ಮನುಷ್ಯತ್ವವನ್ನು ಕಾಣಲು ಸಾಧ್ಯವೆ ?. ನಮ್ಮ ಸುತ್ತಲಿನ ಪರಿಸರದ ಮತ್ತು ನಮ್ಮೊಡನೆ ಜೀವಿಸುವ ಜೀವಿಗಳ ಆಗು-ಹೋಗುಗಳ ವಿಷಯದಲ್ಲಿ ಆಸಕ್ತರಾಗಿರುವುದು, ನೋವು-ನಲಿವುಗಳಲ್ಲಿ ಭಾಗಿಯಾಗುವುದು ಮನುಷ್ಯತ್ವದ ಪ್ರತೀಕ. ಮನುಷ್ಯರಾದ ನಾವು ಮನುಷ್ಯತ್ವವನ್ನು ಸ್ವಾನುಭವದಿಂದಲ್ಲದೆ ಕೇವಲ ಉಪದೇಶಗಳನ್ನು ಕೇಳುವುದರಿಂದಲೇ ಕಂಡುಕೊಳ್ಳಲೆತ್ನಿಸುವುದು ಕಡ್ಡತನವೇ ಸರಿ !. ಗ್ರಂಥದ ಆರಂಭದ ಶ್ಲೋಕದಲ್ಲೇ "ಸ್ವನುಭವೋ" ( ಸು = ಚೆನ್ನಾದ, ಒಳ್ಳೆಯ, ಅನುಭವಃ = ಸಾಕ್ಷಾತ್ಕಾರ, ತಿಳುವಳಿಕೆ) ಎಂದು ಹೇಳಿ ಅದಕ್ಕೆ ಮಹತ್ವವನ್ನು ನೀಡಲಾಗಿದೆ. ಧ್ಯಾನ (ವಿದ್ಯೆ) ಮತ್ತು ಯೋಗಗಳ ಸಹಾಯದಿಂದ (ಆಚರಣೆಯಿಂದ) ಮನುಷ್ಯತ್ವದ ತಿಳುವಳಿಕೆಯನ್ನು ಪಡೆಯುವ ಮಾರ್ಗವೇ ಉತ್ತಮವೆಂದು ಹೇಳಲಾಗಿದೆ.

೨) ಮುಮುಕ್ಷುತ್ವಮ್ ( = ಮೋಕ್ಷದ ಅಪೇಕ್ಷೆ, ಬಿಡುಗಡೆಯ ಬಯಕೆ )

ಪ್ರಾಪಂಚಿಕ ಸುಖಗಳನ್ನೆಲ್ಲಾ ತೊರೆದು ವೈರಾಗ್ಯವನ್ನು ತಾಳಿದರೆ ಮಾತ್ರ ಮೋಕ್ಷ ದೊರಕುವುದೆಂದಾದರೆ ವಿಶಿಷ್ಟತೆ-ವಿಚಿತ್ರಗಳಿಂದ ಕೂಡಿರುವ ಈ ಲೋಕದಲ್ಲಿ ಹುಟ್ಟುವುದಾದರೂ ಏಕೆ ?! . ಹುಟ್ಟು-ಸಾವುಗಳೆರಡೂ ಸಾಮಾನ್ಯ ಮನುಜನ ಅಂಕೆಯಲ್ಲಿ ಇಲ್ಲದಿರುವುದರಿಂದ ಮೇಲಿನ ಪ್ರಶ್ನೆಗೆ ಸಾಮಾನ್ಯ ಸ್ತರದಲ್ಲಿ ಉತ್ತರ ದೊರಕುವುದಿಲ್ಲ !.
ಈ ಲೋಕದ ವ್ಯವಹಾರಗಳಲ್ಲಿ ನಾವು ತೊಡಗಿಕೊಂಡಾಗ ಪರಸ್ಪರ ಸಹಕಾರ ಸಂವೇದನೆಗಳು ಏರ್ಪಡುವುದು ಸಹಜ. ಉದಾಹರಣೆಗೆ ;
ನಮ್ಮ ಮನೆಯ ಮುದ್ದಿನ ನಾಯಿಗೆ ಕಾಯಿಲೆಯಾದರೆ ಅದರ ಮೇಲಿನ ವಾತ್ಸಲ್ಯದಿಂದ ಔಷಧಿಗಳನ್ನು ಕೊಟ್ಟು ಉಪಚರಿಸಿ ಚೇತರಿಸಿಕೊಳ್ಳುವಂತೆ ಮಾಡುತ್ತೇವೆ ( ಇದು ಮನುಷ್ಯತ್ವ). ನಾಯಿಗೆ ಕಾಯಿಲೆ ಬಂದಾಗ ಬಾಡುವ ಮನಸ್ಸು, ನಾಯಿಯು ಚೇತರಿಸಿಕೊಂಡು ಪ್ರೀತಿಯಿಂದ ಬಾಲವನ್ನು ಆಡಿಸಿದಾಗ ಅರಳುತ್ತದೆ. ನಮ್ಮ ಔಷಧೋಪಚಾರಕ್ಕೆ ಬೆಲೆ ಬರುತ್ತದೆ. ಮನಸ್ಸಿಗೆ ನೆಮ್ಮದಿ ದೊರೆತು ಆತಂಕದಿಂದ ’ಮುಕ್ತಿ’ ಸಿಗುತ್ತದೆ. ಇಂತಹ ಸಣ್ಣ ಸಣ್ಣ ’ಮುಕ್ತಿ’ಗಳೇ ಸಮಷ್ಟಿಯಲ್ಲಿ (ಒಟ್ಟಾರೆ) ಮೋಕ್ಷದ ದಾರಿಯೆಡೆಗೆ ನಮ್ಮನ್ನು ಕೊಂಡೊಯ್ಯುತ್ತದೆ. ನಮ್ಮ ಕರ್ತವ್ಯ, ಕರ್ಮಗಳನ್ನು ಪ್ರಾಮಾಣಿಕವಾಗಿ ಮಾಡಿ ಮುಗಿಸಿದ ನಂತರ ದೊರೆಯುವ ನೆಮ್ಮದಿ ಮತ್ತು ಬಿಡುಗಡೆಯ ಆನಂದವನ್ನು ನಾವು ಅನುಭವಿಸಿಯೇ ಅರಿತಿರುತ್ತೇವೆ. ಕರ್ಮದ ದಾರಿಯಲ್ಲಿ ಇಂತಹ ಬಿಡುಗಡೆಯನ್ನು ಪಡೆಯುತ್ತಾ ಹೋದಂತೆ ಜ್ಞಾನವೂ ವರ್ಧಿಸುತ್ತಾ ಹೋಗುತ್ತದೆ. ಜ್ಞಾನ ಮಾರ್ಗದಿಂದ ಪಡೆಯುವ ನೆಮ್ಮದಿ ಅಥವಾ ಮೋಕ್ಷವು (ಬ್ರಹ್ಮ ಜ್ಞಾನವು) ಕರ್ಮಮಾರ್ಗದಿಂದ ಪಡೆದಿದುಕ್ಕಿಂತಲೂ ಮಿಗಿಲಾದುದಾಗಿರುತ್ತದೆ. ಪ್ರಾಪಂಚಿಕ ಸುಖಗಳಲ್ಲಿ ತೊಡಗಿಕೊಂಡ ನಂತರ ಆಯಾ ಕರ್ಮಗಳನ್ನು ಪ್ರಾಮಾಣಿಕವಾಗಿ ಮುಗಿಸಿ ನಿರಾಳತೆಯನ್ನು ಹೊಂದಿದರೆ ಕರ್ಮದಿಂದ ಮುಕ್ತರಾಗಬಹುದು ಆದರೆ ಕರ್ಮಮುಕ್ತಿಯು ಯೋಗ್ಯವಲ್ಲದ್ದು ( ಹಲವು ಬಾರಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕೊನೆಗೊಮ್ಮೆ ಪೂರಕ ಪರೀಕ್ಷೆಯಲ್ಲಿ ಸಾರಾ ಸಗಟು ೩೫ ಅಂಕಗಳನ್ನು ನೀಡಿ ಪಾಸು ಮಾಡಿದಂತೆ !) ಎನ್ನುವ ಅಭಿಪ್ರಾಯವಿರುವುದರಿಂದ ಜ್ಞಾನದಿಂದಲೇ ಮುಮುಕ್ಷುತ್ವವನ್ನು ಪಡೆಯುವುದು ಉತ್ತಮ ಎಂದು ಹೇಳಲಾಗಿದೆ. ಹಾಗಾದರೆ ಕರ್ಮ(ಕರ್ತವ್ಯ)ವನ್ನು ಮಾಡದೆ ನೇರವಾಗಿ ಜ್ಞಾನ ಸಂಪಾದನೆಯನ್ನೇ ಮಾಡಬಹುದಲ್ಲಾ ಎಂದುಕೊಂಡರೆ ಅದೂ ತಪ್ಪಾಗುತ್ತದೆ !. ಕರ್ಮವನ್ನು ಮಾಡುವುದರಿಂದ ಮಾತ್ರ ಅದರ ಬಂಧನದಿಂದ ಬಿಡುಗಡೆ ಹೊಂದಬಹುದೇ ಹೊರತು ಮಾಡದೇ ಇರುವುದರಿಂದಲ್ಲ ( ಬ್ಲಾಗ್ ಪೋಸ್ಟನ್ನು ಬರೆಯುವುದರಿಂದ ಮಾತ್ರವೇ ಆ ಚಟದಿಂದ ಮುಕ್ತರಾಗಬಹುದೇ ಹೊರತು ಬರೆಯದೆ ಸುಮ್ಮನಿರುವುದರಿಂದಲ್ಲ ! ). ಉಪದೇಶಗಳನ್ನು ಕೇಳುವುದರಿಂದ, ಕೇಳಿದ್ದನ್ನು ಮನನ ಮಾಡುವುದರಿಂದ ಬರುವ ಅನುಭವವು ಉನ್ನತ ಮಟ್ಟದ್ದಾಗಿರುವುದಿಲ್ಲ, *ಜ್ಞಾನಭೂಮಿಕೆ*ಗಳಿಂದ ಪಡೆಯುವ ಅನುಭವವು ಮುಮುಕ್ಷುತ್ವಕ್ಕೆ ದಾರಿ ಮಾಡಿಕೊಡುತ್ತದೆ.
ಒಬ್ಬಾತನು ರಾಮಕೃಷ್ಣ ಪರಮಹಂಸರ ಬಳಿಗೆ ತೆರಳಿ "ಮುಮುಕ್ಷುತ್ವ" ಎಂದರೇನು ಎಂದು ಕೇಳಿದನಂತೆ. ಅವರು ವಿವರಣೆ ಕೊಡುವ ಬದಲು ಆತನನ್ನು ಗಂಗಾನದಿಯ ಬಳಿಗೆ ಕರೆದೊಯ್ದು ನದಿಯೊಳಗೆ ನಿಲ್ಲಿಸಿ ಆತನ ಕತ್ತನ್ನು ನೀರಿನೊಳಗೆ ಅದುಮಿ ಹಿಡಿದರಂತೆ. ಆ ಮನುಷ್ಯನು ತನ್ನೆಲ್ಲಾ ಶಕ್ತಿಯನ್ನು ಬಳಸಿ ತಲೆಯನ್ನು ನೀರಿನಿಂದ ಮೇಲೆತ್ತಿದನಂತೆ. "ಯಾಕಯ್ಯ" ಎಂದು ಪರಮಹಂಸರು ಕೇಳಿದರೆ " ಉಸಿರೇ ನಿಂತು ಹೊಗುತ್ತಿತ್ತು" ಎಂದನಂತೆ ಆ ಮನುಷ್ಯ.
"ಇಂತಹ ತೀವ್ರತೆಯೇ ಮುಮುಕ್ಷುತ್ವಕ್ಕೆ ದಾರಿ" ಎಂದರಂತೆ ಪರಮಹಂಸರು !.

೩) ಮಹಾಪುರುಷ ಸಂಶ್ರಯಃ (= ಮಹಾಪುರುಷರ, ಸಜ್ಜನರ ಸಹವಾಸ ಪಡೆಯುವುದು)

’ಸಹವಾಸದಿಂದ ಸನ್ಯಾಸಿ ಕೆಟ್ಟ’ ಎಂಬ ಮಾತನ್ನು ಕೇಳಿರುತ್ತೇವೆ. ವೇದಾಂತಿಗಳಾದ ಮಂಡನಮಿಶ್ರರ ಮನೆಯಲ್ಲಿ ಗಿಳಿಗಳೂ ಸಹ ವೇದಾಂತಗಳ ಬಗ್ಗೆ ತರ್ಕವನ್ನು ಮಾಡುತ್ತಿದ್ದುವಂತೆ !. "ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ" ಎಂಬ ಸರ್ವಜ್ಞನ ವಚನವನ್ನು ಓದಿರುತ್ತೇವೆ. ವಿಚಾರಗಳ ತಿಳಿವು ಪಡೆಯಲು ಅರಿತವರೊಂದಿಗೆ, ಮಹಾಪುರುಷರೊಂದಿಗೆ ತರ್ಕಮಾಡಬೇಕೆಂದೇನೂ ಇಲ್ಲ, ಅಂತಹ ಮಹನೀಯರ ನಡುವಿನ ಸಂಭಾಷಣೆಯನ್ನು ಮೌನವಾಗಿ ಕೇಳಿಸಿಕೊಳ್ಳುವುದರಿಂದಲೇ ಹೆಚ್ಚಿನ ತಿಳಿವನ್ನು ಪಡೆಯಬಹುದು. ಜ್ಞಾನಿಗಳ ಹರಟೆಯ ವಿಷಯಗಳೇ ಆಸಕ್ತರಿಗೆ ಮಹತ್ವವಾಗಿ ಪರಿಣಮಿಸಬಲ್ಲುದು. ಚಾಣಕ್ಯನೆಂಬ ಮಹಾಪುರುಷನ ಸಹವಾಸಕ್ಕೆ ಸಿಲುಕಿದ ಚಂದ್ರಗುಪ್ತನೆಂಬ ಬಾಲಕ ಮುಂದೆ ಮೌರ್ಯ ವಂಶದ ದೊರೆಯಾದದ್ದು ಇತಿಹಾಸ. ಮಾನಸಿಕ ಒತ್ತಡಕ್ಕೆ ಸಿಲುಕಿದಾಗ ಮನೋವಿಜ್ಞಾನಿಗಳ ಬಳಿಗೆ ತೆರಳಿ ಸಲಹೆ ಪಡೆಯುವುದು ಇಂದಿನ ದಿನಗಳಲ್ಲಿ ವಾಡಿಕೆಯೇ ಆಗಿದೆ. ಅಲ್ಲಿ ಪಡೆಯಬಹುದಾದ ಸಲಹೆಯ ಬಹುಪಾಲು ಅಂಶಗಳು ನಮ್ಮ ಸಂಸ್ಕೃತಿಯ ವೇದೋಪನಿಷತ್ತುಗಳಲ್ಲಿಯೇ ಅಡಗಿದೆ ಎನ್ನುವುದನ್ನು ನಮ್ಮವರೇ (ಜಾಣ) ಮರೆತಿರುವುದು ವಿಪರ‍್ಯಾಸ !. ಇಂತಹ ಜ್ಞಾನ ದೀವಿಗೆಯನ್ನು ನಮಗಿತ್ತು ಆ ಬೆಳಕಿನಲ್ಲಿ ಅನವರತ ಸಾಗಿರಿ ಎಂದಂತಹ ಮಹಾಪುರುಷರ ಸಹವಾಸ ಇಂದು ಅಗತ್ಯವಾದುದಾಗಿದೆ. ಇಂತಹ ದುರ್ಲಭವಾದ ಸಹವಾಸವನ್ನು ಪಡೆಯುವುದು ಜ್ಞಾನ ಮಾರ್ಗದಲ್ಲಿ ಮಾತ್ರ ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.

|| ದೊರಕದು ಇವು ಮೂರು ದೇವನಂತಃಕರಣವಿಲ್ಲದೆ
ಮನುಜನಾಗಿರುವುದು, ಮುಕ್ತಿಯು, ಸಜ್ಜನರ ಸಂಗವು ||

***********************************************
ಗ್ರಂಥದ ಮುಂದಿನ ಶ್ಲೋಕವನ್ನು ಗಮನಿಸೋಣ

लब्ध्वा कथन्चित नरजन्म दुर्लभं
तत्रापि पुंस्त्वं श्रुतिपारदर्शनम् ।
यस्त्वात्ममुक्त्यै न यतेत मूढधीः
स आत्महा स्वं विनिहन्त्यसद्ग्रहात ॥४॥

ಲಬ್ಧ್ವಾ ಕಥಂಚಿತ್ ನರಜನ್ಮ ದುರ್ಲಭಂ ತತ್ರಾಪಿ ಪುಂಸ್ತ್ವಂ ಶ್ರುತಿಪಾರದರ್ಶನಮ್ |
ಯಸ್ತ್ವಾತ್ಮಮುಕ್ತ್ಯೈ ನ ಯತೇತ ಮೂಢಧೀಃ ಸ ಆತ್ಮಹಾ ಸ್ವಂ ವಿನಿಹಂತ್ಯಸದ್ಗ್ರಹಾತ್ ||೪||

ಈ ಸೂಕ್ತಿಯು ಮೇಲಿನ ಮೂರನೆಯ ಸೂಕ್ತಿಗೆ ಪೂರಕವಾದ ಶ್ಲೋಕವಾಗಿದೆ. ಇದರ ಅರ್ಥವನ್ನು ಗಮನಿಸೋಣ.

ಲಬ್ಧ್ವಾ ಕಥಂಚಿತ್ ನರಜನ್ಮ ದುರ್ಲಭಂ (= ಕದಾಚಿತ್ (ಆಕಸ್ಮಿಕವಾಗಿ) ದೊರಕಿರುವ ದುರ್ಲಭವಾದ ನರಜನ್ಮ)
ತತ್ರಾಪಿ ಪುಂಸ್ತ್ವಂ ಶ್ರುತಿಪಾರದರ್ಶನಮ್ (= ವೇದಾಂತದರಿವಿಗೆ ಬೇಕಾದ ಪುರುಷತ್ವ)
ಯಸ್ತ್ವಾತ್ಮಮುಕ್ತ್ಯೈ ನ ಯತೇತ ಮೂಡಧೀಃ (= ತನ್ನ ಮುಕ್ತಿಗಾಗಿ ಯತ್ನಿಸದ ಮೂಳ (ದಡ್ಡ))
ಸ ಆತ್ಮಹಾ ಸ್ವಂ ವಿನಿಹಂತ್ಯಸದ್ಗ್ರಹಾತ್ (= ಆತ್ಮಘಾತುಕತನ)

ಹೀಗೆ ಆಕಸ್ಮಿಕವಾಗಿ ದೊರೆತಿರುವ ದುರ್ಲಭವಾದ ಮಾನವ ಜನ್ಮವಿದ್ದು ವೇದಾಂತದ, ಆತ್ಮ ಜ್ಞಾನದ ಅರಿವಿಗೆ ಬೇಕಾದ ಪುರುಷತ್ವವೂ ಇದ್ದು ತನ್ನ ಮುಕ್ತಿಗಾಗಿ ಯತ್ನಿಸದವನು ಮೂರ್ಖನು ಮತ್ತು ಹಾಗೆ ಮಾಡುವುದು ತನ್ನನ್ನೇ ತಾನು ಹತ್ಯೆ ಮಾಡಿಕೊಂಡತಾಗುತ್ತದೆ , ಹೇಗೆಂದರೆ ಮಿಥ್ಯೆ ಎನ್ನುವ ಈ ಜಗತ್ತನ್ನೇ ನಂಬುವುದರ ಮೂಲಕ ಎಂದು ಹೇಳಲಾಗಿದೆ. (’ಜಗನ್ಮಿಥ್ಯಾ’ ಎನ್ನುವುದಕ್ಕೆ ಮುಂದಿನ ಸೂಕ್ತಿಗಳಲ್ಲಿ ಸಾಕಷ್ಟು ವಿವರಣೆಗಳು ಬರಲಿದೆ)

************************

ಗ್ರಂಥದ ಐದನೆಯ ಸೂಕ್ತಿಯನ್ನು ನೋಡೋಣ

इतः कोन्वस्ति मूढात्मा यस्तु स्वार्थे प्रमाद्यति ।
दुर्लभं मानुषं देहं प्राप्यतत्रापि पौरुषम् ॥५॥

ಇತಃ ಕೋನ್ವಸ್ತಿ ಮೂಢಾತ್ಮಾ ಯಸ್ತು ಸ್ವಾರ್ಥೇ ಪ್ರಮಾದ್ಯತಿ |
ದುರ್ಲಭಂ ಮಾನುಷಂ ದೇಹಂ ಪ್ರಾಪ್ಯತತ್ರಾಪಿ ಪೌರುಷಮ್ ||೫||

ಈ ಸೂಕ್ತಿಯೂ ಸಹ ಮೇಲಿನ ಎರಡು ಮತ್ತು ಮೂರನೆಯ ಶ್ಲೋಕಗಳಿಗೆ ಪೂರಕವಾಗಿ ಹೇಳಿದುದಾಗಿದೆ. ಇದರ ಅರ್ಥವನ್ನು ಗಮನಿಸೋಣ.

ಇತಃ ಕೋನ್ವಸ್ತಿ ಮೂಢಾತ್ಮಾ ಯಸ್ತು ಸ್ವಾರ್ಥೇ ಪ್ರಮಾದ್ಯತಿ (= ತನ್ನ ಹಿತವನ್ನೇ ಕಾಯ್ದುಕೊಳ್ಳದ ಮೂಢ )
ದುರ್ಲಭಂ ಮಾನುಷಂ ದೇಹಂ ಪ್ರಾಪ್ಯತತ್ರಾಪಿ ಪೌರುಷಮ್ (= ದುರ್ಲಭವಾದ ಮನುಷ್ಯಜನ್ಮ ಮತ್ತು ಪೌರುಷವನ್ನು ಪಡೆದು)

ಪ್ರಾಣಿಗಳಲ್ಲೇ ದುರ್ಲಭವಾದ ಮನುಷ್ಯಜನ್ಮವನ್ನು ಪಡೆದು, ಪುರುಷತ್ವವನ್ನೂ ಪಡೆದು ಧರ್ಮಮಾರ್ಗದಲ್ಲಿ ನಡೆಯುವ ಅಧಿಕಾರವನ್ನು ಪಡೆದು ಆತ್ಮಾನಾತ್ಮ ವಿವೇಚನೆಯನ್ನೂ ಪಡೆದು ಮನುಷ್ಯತ್ವ ಮುಮುಕ್ಷುತ್ವಗಳನ್ನೂ ತಿಳಿದು ಮಹಾಪುರುಷರ ಸಹವಾಸವನ್ನು ಹೊಂದಿದರೂ ಸಹ ತನ್ನ ಹಿತವನ್ನು ಕಾಪಾಡಿಕೊಳ್ಳಲಾಗದವನನ್ನು(ಕಾರ್ಯವನ್ನು ಜಯಿಸುವ ಸಾಮರ್ಥ್ಯವನ್ನು ತೋರದವನು) ಮೂಢನೆನ್ನದೆ ಏನನ್ನಬೇಕು?. ಅಂತಹವನು ಮಹಾ ಮೂರ್ಖನೇ ಸರಿ ಎಂದು ಹೇಳಲಾಗಿದೆ. ಹೀಗೆ ಐದು ಸೂಕ್ತಿಗಳಲ್ಲಿ ಮುಕ್ತಿಯ ಮಹತ್ವವನ್ನು ಶ್ರೀ ಶಂಕರರು ತಿಳಿಸಿದ್ದಾರೆ.

ಮುಂದಿನ ಕಂತಿನಲ್ಲಿ ಮತ್ತಷ್ಟು ತಿಳಿಯೋಣ.
----------------------------------------------------------------------------------------------------------

ಟಿಪ್ಪಣಿ :

*ಜ್ಞಾನ ಭೂಮಿಕೆಗಳು * (ಸ್ವಾನುಭವಕ್ಕೆ ಪೂರಕವಾದ ಸಂಗತಿಗಳು) ಒಟ್ಟು ಏಳು. ಅವು ಹೀಗಿವೆ.

೧) ಶುಭೇಚ್ಛೆ = ತಾನಿನ್ನೂ ಮೂಳನಾಗಿಯೇ ಇದ್ದೇನೆ, ಧರ್ಮಶಾಸ್ತ್ರಗಳಿಂದ ಮತ್ತು ಸಜ್ಜನರ ಸಹವಾಸದಿಂದ ಆತ್ಮಜ್ಞಾನವನ್ನು ಪಡೆಯಬೇಕು ಎಂಬ ಆಸಕ್ತಿ ಬರುವುದೇ ಶುಭೇಚ್ಛೆ.
೨) ವಿಚಾರಣಾ = ಶಾಸ್ತ್ರಗಳನ್ನು ತಿಳಿದು ಜ್ಞಾನಿಗಳ ಸಹವಾಸವನ್ನು ಪಡೆದು ಸನ್ಮಾರ್ಗದಲ್ಲಿ, ಸದಾಚಾರದಲ್ಲಿ ನಡೆಯುವುದು ವಿಚಾರಣಾ.
೩) ತನುಮಾನಸೀ = ಮೇಲಿನ ಎರಡು ಭೂಮಿಕೆಗಳ ಅಭ್ಯಾಸದಿಂದ ಇಂದ್ರಿಯ ವಿಷಯಗಳಲ್ಲಿ ಉಂಟಾಗುವ ಅತಿಯಾದ ದೌರ್ಬಲ್ಯವನ್ನು ಕಳೆದುಕೊಂಡು ಸಾಮರ್ಥ್ಯವನ್ನು ಪಡೆಯುವುದು ತನುಮಾನಸೀ.
೪) ಸತ್ವಾಪತ್ತಿ = ಮೇಲಿನ ಮೂರು ಅನುಭವ ಮೂಲವಾದ ವಿಷಯಗಳ ಅನುಸರಣೆಯಿಂದ ಹುಟ್ಟುವ ಸತ್ವಗುಣ ಅಥವಾ ನೆಮ್ಮದಿಯ, ಶಾಂತಿಯ ಭಾವವೇ ಸತ್ವಾಪತ್ತಿ.
೫) ಅಸಂಸಕ್ತಿ = ಮೇಲೆ ಹೇಳಿದ ನಾಲ್ಕು ಭೂಮಿಕೆಗಳ ಅಭ್ಯಾಸದಿಂದ ಹೊರಗಿನ ವಿಷಯಗಳಲ್ಲಿ ( ಪ್ರಾಪಂಪಚಿಕ ಸುಖಗಳು) ಅತಿಯಾದ ಆಸಕ್ತಿಯು ನಿವಾರಣೆಯಾಗಿ ನೆಮ್ಮದಿಯ ಭಾವವೇ ವಾಡಿಕೆಯಾಗುವ ಅವಸ್ಥೆಯೇ ಅಸಂಸಕ್ತಿ.
೬) ಪದಾರ್ಥಭಾವನೀ = ಮೇಲೆ ಹೇಳಿದ ಐದು ಭೂಮಿಕೆಗಳ ಅನುಸರಣೆಯಿಂದ ಅಂತರ್ಬಾಹ್ಯ ವಿಷಯಗಳ ಬಗ್ಗೆ ನಿರ್ಲಿಪ್ತತೆಯುಂಟಾಗಿ ಕೇವಲ ಜ್ಞಾನದಿಂದಲೇ ಅವೆಲ್ಲವನ್ನೂ ತಿಳಿಯುವುದು ಪದಾರ್ಥಭಾವನೀ .
೭) ತುರ್ಯಗಾ = ಮೇಲಿನ ಆರೂ ಭೂಮಿಕೆಗಳ ಸತತ ಅಭ್ಯಾಸ ಮತ್ತು ಅನುಸರಣೆಯಿಂದ ಮನಸ್ಸು ಮತ್ತು ಬುದ್ಧಿಯು ಚಂಚಲಗೊಳ್ಳದೆ ಒಂದೇ ಸ್ವಭಾವವು ಜೀವಿಯಲ್ಲಿ ನೆಲೆಗೊಳ್ಳುವುದು ತುರ್ಯಗಾ.

ವಿವೇಕ ಚೂಡಾಮಣಿ -ಭಾಗ ೩


ಪ್ರಕರಣ ಗ್ರಂಥದ ಆರಂಭ
---------------------

जंतूनां नरजन्म दुर्लभमतः पुंस्त्वं ततो विप्रता
तस्माद् वैदिकधर्ममार्गपरता विद्वत्वमस्मात् परम् ।
आत्मानात्मविवेचनं स्वनुभवो ब्रह्मात्मना संस्थितिः
मुक्तिर्नो शतकोटिजन्मसु कृतैः



ಜಂತೂನಾಂ ನರಜನ್ಮ ದುರ್ಲಭಮತಃ ಪುಂಸ್ತ್ವಂ ತತೋ ವಿಪ್ರತಾ
ತಸ್ಮಾದ್ವೈದಿಕ ಧರ್ಮಮಾರ್ಗಪರತಾ ವಿದ್ವತ್ವಮಸ್ಮಾತ್ ಪರಮ್ |
ಆತ್ಮಾನಾತ್ಮವಿವೇಚನಂ ಸ್ವನುಭವೋ ಬ್ರಹ್ಮಾತ್ಮನಾ ಸಂಸ್ಥಿತಿಃ
ಮುಕ್ತಿರ್ನೋ ಶತಕೋಟಿ ಜನ್ಮ ಸುಕೃತೈಃ ಪುಣ್ಯೈರ್ವಿನಾಲಭ್ಯತೇ ||೨||

ಗ್ರಂಥದ ಆರಂಭ ಶ್ಲೋಕವೇ ಚರ್ಚೆಗೀಡುಮಾಡುವಂತಹುದಾಗಿದೆ. ಸರಳವಾಗಿ ಈ ಸೂಕ್ತದ ಭಾವಾರ್ಥವನ್ನು ತಿಳಿಯುವುದಾದರೆ "ಪ್ರಾಣಿಗಳಿಗೆ ಮಾನವ ಜನ್ಮವು ದುರ್ಲಭ. ಅದರಲ್ಲಿ ಪುರುಷತ್ವ, ವಿಪ್ರತ್ವ, ಧರ್ಮಮಾರ್ಗ ಪರತ್ವ ಮತ್ತು ಶಾಸ್ತ್ರಾರ್ಥ ಜ್ಞಾನವು ಒಂದಕ್ಕಿಂತ ಒಂದು ಮಿಗಿಲಾದವುಗಳು ಮತ್ತು ಬೇಕೆಂದಾಗ ಸಿಗದಿರುವಂತಹವು. ಅದರಲ್ಲೂ ಅಳಿವು-ಉಳಿವುಗಳ ಅರಿವನ್ನು ತಿಳಿದು ಆತ್ಮಜ್ಞಾನವನ್ನು ಪಡೆಯುವುದು ಇನ್ನೂ ಮಿಗಿಲಾದುದು. ಇವೆಲ್ಲವೂ ನೂರುಕೋಟಿ ಜನ್ಮಗಳಲ್ಲಿ ಸಂಪಾದಿಸಿದ ಪುಣ್ಯಗಳಿಲ್ಲದೆ ದೊರೆಯಲಾರದು " .

ದೊರಕದು ಮಾನವಜನ್ಮವದರೊಳು ದೊರಕದು ಪುರುಷತ್ವವು
ಸಿಗದು ವಿಪ್ರತ್ವವದಕಿಂತ ಮಿಗಿಲು ಧರ್ಮದಾಯಿತ್ವವವು
ದೊರಕದು ದಿಟದ ಮೇಲರಿಮೆ ತನ್ನ ತಾನರಿಯದೆ
ಮುಕ್ತನಾಗನು ಕೋಟಿ ಜನುಮಗಳ ಪುಣ್ಯಾಂಶವಿರದೆ

ಹುಟ್ಟುವ ಗುಣವುಳ್ಳ ಪ್ರಾಣಿಗಳಲ್ಲೆಲ್ಲಾ ಮಾನವ ಜನ್ಮವು ದೊಡ್ಡದು ಮತ್ತು ಬೇಕೆಂದಾಗಲೆಲ್ಲಾ ಸಿಗುವಂತಹುದಲ್ಲ. ಮಾನವ ಪ್ರಾಣಿಗೆ ದೊರಕುವಷ್ಟು ಸೌಕರ್ಯಗಳು ಬೇರೆ ಯಾವ ಪ್ರಾಣಿಗೂ ಸಿಗುವುದಿಲ್ಲ. ’ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ " ಎಂದು ದಾಸರು ಹಾಡಿದ್ದಾರೆ, ಹಾಗಾಗಿ ಬೇರೆ ಜನ್ಮಗಳೂ ಇದೆಯೆಂದಾಗುತ್ತದೆ. ಒಬ್ಬನಿಗೇ ಬೇರೆ ಜನ್ಮಗಳು ಇದೆ ಎಂದಾದಲ್ಲಿ ಜೀವಸ್ವರೂಪನಾದ ಆತ್ಮನು ಶರೀರಕ್ಕಿಂತಲೂ ಬೇರೆ ಎಂದಾಗುತ್ತದೆ. ಹಳೆಯದಾದ ಬಟ್ಟೆಯನ್ನು ತಗೆದುಹಾಕಿ ಹೊಸತನ್ನು ಉಡುವಂತೆ ಆತ್ಮವು ಒಂದೇ ಆದರೂ ಶರೀರವು ಹಲವು ರೂಪಗಳನ್ನು ಪಡೆಯುತ್ತದೆ ಎಂದು ತಿಳಿಯಬೇಕಾಗುತ್ತದೆ. ’ಪಡೆದುಕೊಂಡು ಬಂದದ್ದು’ ಎಂದು
ಹೇಳುವಾಗ ಎಲ್ಲಿಂದ ಪಡೆದುಕೊಂಡು ಬಂದದ್ದು ಎಂಬದೂ ಮುಖ್ಯವಾಗುತ್ತದೆ. ಮಾನವನಿಗೆ ಸಂಪಾದನೆಯಿಂದ ಬರುವುದಕ್ಕಿಂತಲೂ ಸಂದಾಯವಾಗಿ ಬಂದಿರುವುದೇ ಹೆಚ್ಚು. ಆಡುವ ಮಾತು, ಆಹಾರ ಪದ್ಧತಿ, ಉಡುಗೆ-ತೊಡುಗೆ ಮತ್ತು ತನ್ನ ಸುತ್ತಲಿನ ಪರಿಸರದಿಂದ ತಾನು ಪಡೆದುಕೊಂಡು ಬೆಳೆದು ಬಂದದ್ದು , ಇವೆಲ್ಲವೂ ಸಂದಾಯವಾಗಿಯೇ ಬರುವಂತಹವು. "ಅಪ್ಪನಂತೆ ಮಗನಿಗೂ ಮುಂಗೋಪ" ಎಂದು ಹೇಳುವುದನ್ನು ಕೇಳಿರುತ್ತೇವೆ. ಮಗನಿಗೆ ಅಪ್ಪನಿಂದ ಅಂತಹ ವಂಶವಾಹಿನಿಗಳು (Genes) ಹರಿದುಬಂದಿರುತ್ತವೆ. ತಾಯಿಯಿಂದಲೂ, ತಾತನಿಂದಲೂ ಬರಬಹುದು. ’ನಾನು ನಾನೇ’ ಎಂದು ಎಷ್ಟು ಹೇಳಿಕೊಂಡರೂ ಹಿಂತಿರುಗಿ ನೋಡಿದಾಗ ಪಡೆದುಕೊಂಡು ಬಂದಿರುವುದೆಷ್ಟು ಎಂಬುದು ಅರಿವಾಗುತ್ತದೆ. ಶತಾವಧಾನಿ ಗಣೇಶರು ಹೇಳುವಂತೆ "ಜನ್ಮಾಂತರಗಳನ್ನು ನಂಬದವರು ವಂಶವಾಹಿನಿಗಳನ್ನಾದರೂ ನಂಬಲೇಬೆಕು !" . ಮಾನವ ಜನ್ಮದ ಉಪಯೋಗಗಳು ನಮಗೆಲ್ಲಾ ಅನುಭದಿಂದಲೇ ತಿಳಿಯುತ್ತಿರುವುದರಿಂದ
’ಜಂತೂನಾಂ ನರಜನ್ಮ ದುರ್ಲಭಂ" ಎನ್ನುವುದನ್ನು ಮಾನವ ಪ್ರಾಣಿಗಳೆಲ್ಲರೂ ಒಪ್ಪಲೇಬೇಕಾಗುತ್ತದೆ.

ಮನುಷ್ಯ ಜನ್ಮವೇನೋ ದೊಡ್ಡದು ಆದರೆ ಪುರುಷನಾಗಿ ಹುಟ್ಟುವುದು ಅದಕ್ಕಿಂತಲೂ ಮಿಗಿಲಾದುದೆ ? !. ಹಲವು ಋಷಿಕೆಯರಿಂದ ರಚಿಸಲ್ಪಟ್ಟಿರುವ ಸೂಕ್ತಗಳನ್ನು ನಾವು ಋಗ್ವೇದದಲ್ಲಿಯೇ ಕಾಣಬಹುದು. ಮಹಿಳೆಯರಿಗೆ ವೇದಾಧ್ಯಯನದ ಜೊತೆಗೆ ಸಂಸ್ಕಾರಗಳಲ್ಲೂ ಸ್ವಾತಂತ್ರ್ಯವಿತ್ತು ಎನ್ನುವುದನ್ನು ಋಗ್ವೇದದ ಅಧ್ಯಯನದಿಂದಲೇ ತಿಳಿಯಬಹುದು. ಮನಗೆ ಬಂದ ಸೊಸೆಯನ್ನು ಸಾಮ್ರಾಜ್ಞಿಯಂತೆ (ರಾಣಿ) ಕಾಣು ಎಂದು ಋಗ್ವೇದದಲ್ಲಿ ಹೇಳಲಾಗಿದೆ. ಹಾಗಾದರೆ ಪುರುಷನಾಗಿ ಹುಟ್ಟುವುದು ಮಿಗಿಲೇಕೆ ? . ಪುರುಷನಾಗಿ ಹುಟ್ಟಿದರೂ ಪುರುಷತ್ವವನ್ನು ಮೈಗೂಡಿಸಿಕೊಳ್ಳದಿದ್ದರೆ ಆತನನ್ನೂ ಸ್ತ್ರೀ ಸ್ವಭಾವದಿಂದಲೇ ಗುರುತಿಸಬೇಕಾಗುತ್ತದೆ. ’ಕಿರಣ್ ಬೇಡಿ’ ಹೆಣ್ಣಾದರೂ ಅವರಲ್ಲಿದ್ದ ಪುರುಷತ್ವದಿಂದ ಅವರೊಬ್ಬ ಧೈರ್ಯಶಾಲಿ ಆರಕ್ಷಕ ಅಧಿಕಾರಿಯಾದರು. ಪುರುಷತ್ವ ಎನ್ನುವುದು ಗಂಡಸುತನ ಎನ್ನುವುದಕ್ಕೆ ಸಮನಾರ್ಥಕವಾಗಿ ಕಂಡರೂ ಅದು ಗಂಡಸರನ್ನು ಮಾತ್ರ ಪ್ರತಿನಿಧಿಸುವುದಿಲ್ಲ, ಹೆಣ್ಣಿಗೂ ಅನ್ವಯಿಸುತ್ತದೆ.
ಹೆಣ್ಣಿನ ’ಹೈ ಪಿಚ್’ ಗಾಯನಕ್ಕೆ ಗಂಡು ಸರಿಸಾಟಿಯಾಗಲಾರ !. ಪುರುಷತ್ವ ಎಂದರೆ, ಧೈರ್ಯ, ಆತ್ಮಸ್ಥೈರ್ಯ, ಮನೋಬಲ ಮುಂತಾದ ಧನಾತ್ಮಕ ಅಂಶಗಳ ಸಂಕೇತ. ಇಂತಹ ಅಂಶಗಳನ್ನು ಮೈಗೂಡಿಸಿಕೊಂಡು ಬೆಳೆಯುವ ಮಾನವ ಜೀವಿಯು ಪುರುಷತ್ವ( masculine dimesion) ವನ್ನು ಪಡೆಯುತ್ತಾನೆ.

’ವಿಪ್ರ’ನಾಗಿರುವುದು ಇನ್ನೂ ಮಿಗಿಲಾದುದು ಎಂದು ಹೇಳಲಾಗಿದೆ. ವಿಪ್ರನೆಂದರೆ ಬ್ರಾಹ್ಮಣ ಎಂದು ಅರ್ಥವಿದೆ. ಹಾಗಾದರೆ ಜಾತೀಯ ಬ್ರಾಹ್ಮಣರು ಮಾತ್ರ ಶ್ರೇಷ್ಠರೆ ? ಉಳಿದವರು ಅಧಮರೆ ?. ಜಾತಿಯಿಂದ ಯಾರೂ ಬ್ರಾಹ್ಮಣ ರಾಗಲಾರರು ಎಂದು ವೇದಾಂತವೇ ಹೇಳುತ್ತದೆ. ಬ್ರಹ್ಮಜ್ಞಾನವನ್ನು ಅರಿತವನೇ ಬ್ರಾಹ್ಮಣ ಎಂದು ಶ್ರುತಿಗಳು ಸಾರಿವೆ. ವ್ಯಾಪಾರಿಗಳಿಗೆ, ರಾಜರುಗಳಿಗೆ ಬ್ರಹ್ಮಜ್ಞಾನದ ಜಿಜ್ಞಾಸೆಗೆ ಚಿಂತನೆಗೆ ಕಾಲಾವಕಾಶಗಳು ಕಡಿಮೆ ಇರುತ್ತಿದ್ದರಿಂದ ಮತ್ತು ಅವರ ಮನಸು ಹೊಯ್ದಾಟಗಳಿದ ಕೂಡಿರುವುದರಿಂದ ಅವರನ್ನು ವಿಪ್ರ ಅಥವಾ ಬ್ರಾಹ್ಮಣ ಎಂದು ಕರೆಯಲಾಗದು ಎಂಬ ಅಭಿಪ್ರಾಯವು ವ್ಯಕ್ತವಾಗುತ್ತದೆ. ಯಾರ್ಯಾರು ಬ್ರಹ್ಮನನ್ನು ಅರಿಯುವರೋ ಅವರೆಲ್ಲರೂ ವಿಪ್ರರೆ. ಜ್ಞಾನಮಾರ್ಗದಲ್ಲಿ ಎಲ್ಲರೂ ನಡೆಯಬಹುದು ಆದರೆ ಕರ್ಮಮಾರ್ಗದಲ್ಲಿ ನಡೆಯಲು ಕೆಲವರಿಗೆ ಮಾತ್ರ ಸಾಧ್ಯ. ವೈದ್ಯಶಾಸ್ತ್ರವನ್ನು ಎಲ್ಲರೂ ಓದಿ ತಿಳಿದುಕೊಳ್ಳಬಹುದು ಆದರೆ ಶಾಸ್ತ್ರದ ಪ್ರಯೋಗ ಮಾಡಲು ವೈದ್ಯಶಾಸ್ತ್ರದ ವಿದ್ಯಾರ್ಥಿಗಳು ಅಥವಾ ನುರಿತ ವೈದ್ಯರು ಮಾತ್ರ ಅರ್ಹರಾಗುತ್ತಾರೆ.

ಬ್ರಹ್ಮಜ್ಞಾನವನ್ನು ಪಡೆದವನು ಒಳ್ಳೆಯ ದಾರಿಯಲ್ಲಿ ನಡೆಯಬೇಕಾಗುತ್ತದೆ. ಒಳ್ಳೆಯ ಆಲೋಚನೆಗಳನ್ನು ಇಟ್ಟುಕೊಂಡು ಸಮಾಜಕ್ಕೆ ಧರ್ಮಾಧರ್ಮಗಳ ವಿಚಾರಗಳನ್ನು ವಿವರಿಸಬೇಕಾಗುತ್ತದೆ. ವೈದಿಕ ಧರ್ಮಮಾರ್ಗವೆಂದರೆ ಶಾಸ್ತ್ರಗಳನ್ನು ಗೌರವಿಸಿ ಅದರಂತೆ ನಡೆಯುವುದು ಎಂದು ಅರ್ಥ. ಧರ್ಮಶಾಸ್ತ್ರಗಳು ಸಾಮಾನ್ಯರಿಗೆ (ordinary ) ವಿಷಯಾಸಕ್ತರಿಗೆ ಇರುವಂತಹುದಾಗಿದ್ದು ಅಸಾಮಾನ್ಯರಿಗೆ(extrordinary) ,ಅಸಾಧಾರಣರಿಗೆ ಯಾವ ಶಾಸ್ತ್ರಗಳೂ ಇಲ್ಲ !.
ಸಮಾಜಕ್ಕೆ ಒಳಿತಾಗುವಂತಹ ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿಯಿಟ್ಟುಕೊಂಡು ಧರ್ಮಾಧರ್ಮಗಳ ವಿವೇಚನೆಯಿಟ್ಟುಕೊಂಡು ಜ್ಞಾನಮಾರ್ಗದಲ್ಲಿ ನಡೆಯುವುದು ಬ್ರಹ್ಮಜ್ಞಾನಿಯಾದವನ ಕರ್ತವ್ಯವಾಗಿರುತ್ತದೆ. ಕೇವಲ ಹುಟ್ಟಿನಿಂದ ಬ್ರಾಹ್ಮಣ, ಕ್ಷತ್ರಿಯ ಎಂದು ಮುಂತಾಗಿ ಕರೆಯಿಸಿಕೊಳ್ಳುವುದು ಶಾಸ್ತ್ರಸಮ್ಮತವಲ್ಲ, ಧರ್ಮಶಾಸ್ತ್ರಗಳ ಅನುಷ್ಠಾನದಿಂದ ಮಾತ್ರವೇ ವಿಪ್ರತ್ವವನ್ನು ಪಡೆಯಲು ಸಾಧ್ಯ ಎಂದು ಹೇಳಲಾಗಿದೆ. ಅಂತಹ ಜ್ಞಾನವನ್ನು ಪಡೆಯಲು ಮಾನವನು ವೈದಿಕ ಧರ್ಮಮಾರ್ಗದಲ್ಲಿ ನಡೆಯಬೇಕಾಗುತ್ತದೆ ಮತ್ತು ಅಂತಹ ಜ್ಞಾನಿಯು ಎಲ್ಲರಿಗೂ ಮಿಗಿಲಾದವನು ಎಂದು ಹೇಳಲಾಗಿದೆ. ಶಾಸ್ತ್ರಗಳನ್ನು ಯಾರೋ ಒಬ್ಬನನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿಲ್ಲ, ಎಲ್ಲರಿಗೂ ಅನ್ವಯವಾಗುವಂತೆ ಸಾಮಾನ್ಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೇಳಲಾಗಿದೆ. ಜ್ಞಾನಿಗಳು ಅದನ್ನು ತಮಗೆ ಬೇಕಾದಂತೆ ಸರಿಯಾಗಿ ಬಳಸಿಕೊಳ್ಳತ್ತಾರೆ. ಅನಾಸಕ್ತರಿಗೆ ಯಾವ ಶಾಸ್ತ್ರಗಳೂ ಇಲ್ಲ .

ಆತ್ಮ ಮತ್ತು ಅನಾತ್ಮಗಳ ವಿವೇಚನೆಯುಳ್ಳವನು ಇನ್ನೂ ದೊಡ್ದವನೆಂದು ಹೇಳಲಾಗಿದೆ. ಅಳಿವು ಮತ್ತು ಉಳಿವಿನ ಸೂಕ್ಷ್ಮ ಜ್ಞಾನವನ್ನಿಟ್ಟುಕೊಂಡು ಶಾಶ್ವತವಾದ ಆತ್ಮನನ್ನು ಯಾರು ಅರಿಯುತ್ತಾರೋ ಅವರು ಬ್ರಹ್ಮಜ್ಞಾನಿಗಳೆಂದು ತಿಳಿಯಲಾಗಿದೆ. ಅಳಿದುಹೋಗುವ ದೇಹದ ಚಿಂತೆಯನ್ನು ಬಿಟ್ಟು ಸದಾಕಾಲ ಉಳಿಯುವ ಆತ್ಮನನ್ನು ಯಾರು ತನ್ನ ಸ್ವಂತ ಅನುಭವದಿಂದ , ಧ್ಯಾನದಿಂದ ಯೋಗಗಳಿಂದ ತಿಳಿಯುವರೋ ಮತ್ತು ಅಂತಹ ಸ್ವಾನುಭೂತಿಯಿಂದ ಸೃಷ್ಟಿಯಲ್ಲಿ ತಮ್ಮನ್ನು ತಾವು ಸ್ಥಿರವಾಗಿ ನೆಲೆಗೊಳ್ಳುವಂತೆ ಮಾಡಿಕೊಳ್ಳವರೋ ಅವರು ಎಲ್ಲರಿಗಿಂತಲೂ, ಎಲ್ಲದಕ್ಕಿಂತಲೂ ಮಿಗಿಲಾದವರು ಎಂದು ಹೇಳಲಾಗಿದೆ. ಮಾನವನಿಗೆ ಒಳಿತು-ಕೆಡುಕುಗಳನ್ನು ವಿವೇಚಿಸುವ ವ್ಯವಧಾನವಿರಬೇಕು ಮತ್ತು ಸ್ವಂತ ಬುದ್ಧಿಯಿಂದ ಶಾಶ್ವತ-ಕ್ಷಣಿಕವಾದುವುಗಳ ಬಗ್ಗೆ ಅರಿಯುವ , ಅದರಂತೆ ಒಳ್ಳೆಯ ದಾರಿಯಲ್ಲಿ ನಡೆಯುವ ವಿವೇಕವಿರಬೇಕು.
ಇವೆಲ್ಲವೂ ಸುಮ್ಮನೆ ಸಿಗುವಂತಹುದಲ್ಲ ಮತ್ತು ಇವುಗಳೆಲ್ಲವೂ ದೊರಕಿ ಮುಕ್ತಿ ಪಡೆಯುವುದು ಅಷ್ಟು ಸುಲಭವಲ್ಲ. ಅದಕ್ಕೆ ನೂರು ಕೋಟಿ ಜನ್ಮಗಳ ಪುಣ್ಯಫಲವಿರಬೇಕು ಎನ್ನಲಾಗಿದೆ. ಅಂತಹ ಪುಣ್ಯಾಂಶವಿಲ್ಲದೆ ಮೇಲಿನ ಯಾವ ಜ್ಞಾನವೂ ದೊರಕುವಿದಿಲ್ಲ ಮತ್ತು ಮುಕ್ತನಾಗಲೂ ಸಾಧ್ಯವಿಲ್ಲ ಎಂದು ಹೇಳಲಾಗಿದೆ.

ಮುಂದಿನ ಕಂತಿನಲ್ಲಿ ಇನ್ನಷ್ಟು ತಿಳಿಯೋಣ.

Friday, July 29, 2011

ವಿವೇಕ ಚೂಡಾಮಣಿ -ಭಾಗ-2

ಶ್ರೀ ಶಂಕರಾಚಾರ್ಯರ ಹಲವು ಪ್ರಕರಣ ಗ್ರಂಥಗಳಲ್ಲಿ ವಿವೇಕ ಚೂಡಮಣಿಯು ಅತ್ಯಂತ ವಿಶಿಷ್ಟವಾದುದಾಗಿದೆ. ಆರಂಭದಿಂದ ಅಂತ್ಯದವರೆವಿಗೂ ಎಲ್ಲಿಯೂ ದಿಕ್ಕು ತಪ್ಪದೆ ವೇದೋಪನಿಷತ್ತುಗಳ ಸಾರವನ್ನು ತುಂಬಾ ಸರಳವಾದ ಭಾಷೆಯಲ್ಲಿ ತಿಳಿಸುತ್ತಾ ನಿರ್ದಿಷ್ಟವಾದ ಗುರಿಯನ್ನು ಮುಟ್ಟುತ್ತದೆ. ರಾಜಕಾರಣಿಗಳ ಭಾಷಣದಂತೆ ಎಲ್ಲೋ ಆರಂಭವಾಗಿ ಮತ್ತೆಲ್ಲೋ ಮುಗಿಯುವಂತಾಗದೆ, ಆತ್ಮ ಸಂಸ್ಕಾರದ ಅರಿವಿನಿಂದ ಆರಂಭವಾಗಿ ಮುಕ್ತಿಯೆಡೆಗೆ ಸಾಗುವ ದಾರಿಯ ವಿಚಾರಗಳು ಆಸಕ್ತರನ್ನು ಸಲೀಸಾಗಿ ಓದುವಂತೆ ಹಿಡಿದಿಡುತ್ತದೆ. ಇಂತಹ ಗ್ರಂಥಗಳ ವಿಚಾರಗಳನ್ನು ತಿಳಿಯುವುದು ಮತ್ತು ಅದನ್ನು ವರ್ತಮಾನಕ್ಕೆ ಅನ್ವಯವಾಗುವಂತೆ ವಿವರಿಸುವುದು ತುಸು ಕಷ್ಟವಾದರೂ, ವಿವೇಕ ಚೂಡಾಮಣಿಯಲ್ಲಿ ಬಳಸಿರುವ ಭಾಷೆಯ ಲಾಲಿತ್ಯ, ವಿಚಾರಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗುವಂತಯೇ ಇದೆ. ಈಗಾಗಲೇ ಚೂಡಾಮಣಿಯ ಕನ್ನಡದ ವಿವರಣೆಗಳಿರುವ ಹಲವು ಪುಸ್ತಕಗಳು ಹೊರಬಂದಿದ್ದು, ಅದರಲ್ಲಿ ಪ್ರಮುಖವಾಗಿ ಶ್ರೀ ಚಂದ್ರಶೇಖರ ಭಾರತಿಗಳ ವ್ಯಾಖ್ಯಾನವನ್ನು ನನ್ನ ಅಧ್ಯಯನಕ್ಕೆ ಇಟ್ಟುಕೊಂಡಿದ್ದೇನೆ. ಇಲ್ಲಿ ಬರುವ ವಿಚಾರಗಳು ಮತ್ತೆಲ್ಲೋ ಬಂದಿರಲೂ ಬಹುದು ಅಥವಾ ಬಂದಿಲ್ಲದೇ ಇರಬಹುದು, ಸಾಧ್ಯವಾದಷ್ಟು ಅಧ್ಯಯನಪರವಾದ ಹೊಸ ವಿಚಾರಗಳನ್ನು ಬರೆಯಲು ಯತ್ನಿಸುತ್ತೇನೆ. ಸರಳ ಸಂಸ್ಕೃತ ಭಾಷೆಯಲ್ಲಿ ಸುಮಾರು ೫೮೧ ಸೂಕ್ತಿಗಳೊಂದಿಗೆ ಹಲವು ಅಲಂಕಾರಗಳನ್ನು ಬಳಸಿ ರಚಿತವಾಗಿರುವ ಈ ಗ್ರಂಥವು ಕೇವಲ ಪಾವಿತ್ರ್ಯತೆಗಾಗಿಯಾಗಲೀ ಅಥವಾ ಜಗದ್ಗುರುಗಳಿಂದ ಹೇಳಲ್ಪಟ್ಟಿದೆ ಎಂದಾಗಲೀ ಮಹತ್ವವನ್ನು ಪಡೆಯದೆ , ಬದುಕಿನ ಅನೇಕ ಗೊಂದಲಗಳನ್ನು ನಿವಾರಿಸಿ ಮನಸಿಗೆ ನೆಮ್ಮದಿಯನ್ನೂ ವಿವೇಕವನ್ನೂ ತಂದುಕೊಡುವ ಗ್ರಂಥವಾಗಿದೆ. ಆಧುನಿಕ ಜಗತ್ತಿನ ವಿಜ್ಞಾನ-ತಂತ್ರಜ್ಞಾನ ಶಾಸ್ತ್ರಗಳಲ್ಲಿ ಹೇಳಲ್ಪಡುತ್ತಿರುವ ವಿಚಾರಗಳು ನಮ್ಮ ಭಾರತೀಯ ಬೇರಿನದೇ ಆದ ಉಪನಿಷತ್ಸಾರಗಳಲ್ಲಿ ಹೇಗೆ ಸೂಕ್ಷ್ಮವಾಗಿ ಅಡಕವಾಗಿದೆ ಎಂಬುದನ್ನು ಈ ಗ್ರಂಥದ ಅಧ್ಯಯನದ ಮೂಲಕ ತಿಳಿಯಬಹುದಾಗಿದೆ.

ಗ್ರಂಥದ ಆರಂಭದ ಶ್ಲೋಕವು ಹೀಗಿದೆ


सर्व वेदांतसिद्धांत गोचरमं तमगोचरम् ।
गोविन्दं परमानन्दं सद्गुरुं प्रणतोस्म्हम् ॥१॥



ಸರ್ವವೇದಾಂತ ಸಿದ್ಧಾಂತ ಗೋಚರಂ ತಂ ಅಗೋಚರಮ್ |
ಗೋವಿದಂ ಪರಮಾನಂದಂ ಸದ್ಗುರುಂ ಪ್ರಣತೋಸ್ಮ್ಯಹಮ್ ||೧||

ಗ್ರಂಥದ ಆರಂಭದಲ್ಲಿ ಶ್ರೀ ಶಂಕರರು ಗೋವಿಂದನಿಗೆ ತಮ್ಮ ನೆನೆಕೆಗಳನ್ನು ಸಲ್ಲಿಸಿದ್ದಾರೆ. ಶಂಕರಾಚಾರ್ಯರ ದೀಕ್ಷಾ ಗುರುಗಳ ಹೆಸರು ಗೋವಿಂದ ಭಗವಾತ್ಪಾದರೆಂದು ತಿಳಿಯಲಾಗಿದೆ. ಹಾಗೆಯೇ ಶ್ರೀ ಕೃಷ್ಣನು ಶಂಕರರ ಕುಲದೇವತೆಯೆಂದೂ ಗ್ರಂಥಾಂತರದಲ್ಲಿ ತಿಳಿದುಬರುತ್ತದೆ. ಅವರ ಹುಟ್ಟೂರಾದ ಕೇರಳ ರಾಜ್ಯದ ಕಾಲಟಿಯಲ್ಲಿ ಪೂರ್ಣಾ(ಪೆರಿಯಾರ್) ನದಿಯ ದಡದಲ್ಲಿ ಇರುವ ಶ್ರೀ ಕೃಷ್ಣನ ದೇವಾಲಯವನ್ನು ಇಂದಿಗೂ ಕಾಣಬಹುದು. ಗೋವಿಂದನೆಂದರೆ ಗೋಪಾಲನೂ ಆಗುವನು, ಬೆಟ್ಟಗಳ ಒಡೆಯನೂ ಆಗುವನು ಹಾಗೆಯೇ ಗುರು ಗೋವಿಂದ ಭಗವತ್ಪಾದರೂ ಆಗುವರು.
ಗುರುವಿನ ವಿಚಾರಕ್ಕೆ ಬಂದರೆ , ಶಂಕರರು ಸಹಜವಾಗಿ ಗ್ರಂಥದ ಮೊದಲಲ್ಲಿ ತಮ್ಮ ಗುರುಗಳನ್ನು ನೆನೆಪಿಸಿಕೊಂಡಿದ್ದಾರೆ.
ಆ ಗುರುಗಳಾದರೂ ಎಂತಹವರು ? ಅವರು ಕಣ್ಣಿಗೆ ಕಾಣುವವರಲ್ಲ, ಬುದ್ಧಿಗೆ ತಿಳಿಯುವವರಲ್ಲ, ಮಾತಿಗೆ ಸಿಲುಕುವವರಲ್ಲ, ಅವರ ದೇಹಕ್ಕೆ ಯಾವ ಆದರಣೆಯೂ ಇಲ್ಲ, ಅದು ಅಗೋಚರವಾದುದು ಮತ್ತು ಅಲೌಕಿಕವಾದು. ಹಾಗಾದರೆ ಶಂಕರರು ತಮ್ಮ ಗುರುಗಳನ್ನು ಕಂಡಿದ್ದಾದರೂ ಹೇಗೆ ? ಯಾವ ರೂಪದಲ್ಲಿ ಕಂಡುಕೊಂಡರು ?.
ಶಂಕರರಿಗೆ ತಮ್ಮ ಗುರುಗಳು ಕಾಣಿಸಿದ್ದು ಅರಿವಿನ ರೂಪದಲ್ಲಿ ಮತ್ತು ಜ್ಞಾನದ ಬೆಳಕಿನಲ್ಲಿ. ಜಗತ್ತಿನ ಎಲ್ಲಾ ಲೌಕಿಕ-ಪಾರಮಾರ್ಥಿಕ ಸಿದ್ಧಾಂತ-ವೇದಾಂತಗಳ ರೂಪದಲ್ಲಿ ಕಂಡರು .

ದೇಹಕೆ ಸಿಲುಕದ
ಮನಸಿಗೆ ನಿಲುಕದ
ಅರಿವಿಗೆ ತೋರುವ
ಗುರು ಗೋವಿಂದಗೆ
ತಲೆ ಬಾಗಿಸುವೆ

ಎಂದು ಹೇಳುತ್ತಾ ಗುರುವನ್ನು ಅರಿವಿನ ರೂಪದಲ್ಲಿ ಕಂಡೆ ಎಂದು ಸಾರುತ್ತಾರೆ. ಯಾವ ವೇದಾಂತ-ಸಿಧ್ಧಾಂತಗಳು ನನ್ನ ಅರಿವಿಗೆ ಕಾರಣವಾದವೋ ಅದೇ ನನ್ನ ಗುರುವು ಮತ್ತು ಆ ತತ್ತ್ವಜ್ಞಾನವೇ ಗೋವಿಂದ ಗುರುಗಳೆಂದು
ಸೂಚ್ಯವಾಗಿ ಹೇಳುತ್ತಾರೆ. ಮಾತು-ಮನಸಿಗೆ ನಿಲುಕದೆ ವೇದಾಂತ-ಸಿದ್ಧಾಂತದ ಮೂಲಕ ಎಲ್ಲರಿಗೆ ಕಾಣುವಂತಹ ಅರಿವಿನ ಗುರುವಾದ ಗೋವಿಂದರಿಗೆ ನಮಿಸುತ್ತೇನೆ ಎಂದು ಶಂಕರರು ಆರಂಭಿಸುತ್ತಾರೆ. ಗುರು ಅನ್ನುವ ಪದಕ್ಕಾಗಲೀ ಅಥವಾ ಗುರುವಿನ ಲೌಕಿಕ ದೇಹಕ್ಕಾಗಲೀ ಹೆಚ್ಚು ಮಹತ್ವವಿಲ್ಲವೆಂಬುದನ್ನು ಶಂಕರರು ಈ ಸೂಕ್ತದ ಮೂಲಕ ಸೂಕ್ಷ್ಮವಾಗಿ ಹೇಳುತ್ತಾರೆ. ’ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ’ ಎಂಬ ದಾಸರ ಪದವೊಂದಿದೆ. ಗುರುವಿನ ಗುಲಾಮನಾಗುವುದು ಎಂದರೆ ಗುರುವಿನಲ್ಲಿರುವ ಅರಿವಿನ ಗುಲಾಮನಾಗುವುದು ಎಂದೇ ಅರ್ಥ. ಕೇವಲ ಗುರುವಿನ ಬಾಹ್ಯ ದೇಹದ ಸೇವೆ ಮಾಡಿಕೊಂಡು ಸಮಯ ತಳ್ಳಿದರೆ ತಿಳಿವು ಮೂಡುವುದಿಲ್ಲ , ಅದರೊಟ್ಟಿಗೆ ಆ ಸದ್ಗುರುವಿನಲ್ಲಿ ಅಡಕವಾಗಿರುವ ವಿದ್ಯೆಯನ್ನೂ ಸಂಪಾದಿಸಬೇಕು ಅಂತಹ ವಿದ್ಯೆಯೇ ನಿಜವಾದ ಗುರುವಿನ ರೂಪ ಎಂದು ಶಂಕರರು ಹೇಳುತ್ತಾರೆ.

ಕನ್ನಡದ ಮೇರು ಕಲಾವಿದ ರಾಜಕುಮಾರರು ಇಂದು ನಮ್ಮೊಂದಿಗಿಲ್ಲದಿರಬಹುದು, ಆದರೆ ಅವರ ಚಿತ್ರಗಳು, ಅಭಿನಯ ಅವರ ಹಾಡುಗಾರಿಕೆಯಿಂದ ಎಲ್ಲಾ ಕಾಲದಲ್ಲೂ ಅವರು ಜೀವಂತವಾಗಿರುತ್ತಾರೆ ಅದರ ಮೂಲಕವೇ ಅವರು ಗೋಚರಿಸುತ್ತಾರೆ. ಹಾಗೆಯೇ ಸದ್ಗುರುವೂ ಸಹ, ಅರಿವಿನ ಬೆಳಕನ್ನು ಚೆಲ್ಲುವ ಮೂಲಕ ವಿಷಯಾಸಕ್ತರಿಗೆ ಯಾವಾಗಲೂ ಕಾಣಿಸುತ್ತಾರೆ. ಗುರುವು ಹೇಗಿರಬೇಕು ಎಂಬುದಕ್ಕೂ ಇದೇ ಸೂಕ್ತವು ಅನ್ವಯವಾಗಬಲ್ಲುದು. ಗುರುವೆನಿಸಿಕೊಂಡವನು ತನ್ನ ಹಾವ-ಭಾವಗಳಿಂದಾಗಲೀ, ಹಣದ ಪ್ರಭಾವದಿಂದಾಗಲೀ ಅಥವಾ ರಾಜಕೀಯ ವಿಷಯಗಳಿಂದಾಗಲೀ ಅನೇಕ ಶಿಷ್ಯರನ್ನು ಸಂಪಾದಿಸಿಕೊಂಡರೆ ಕೊನೆಗೆ ಅಂತಹ ಶಿಷ್ಯರಿಂದಲೇ ಗುರುವೆಂಬ ಘನತೆಯನ್ನೂ ಕಳೆದುಕೊಳ್ಳುತ್ತಾನೆ. ಇಂದು ಇಂತಹ ಅನೇಕ ಗುರುಗಳನ್ನು ಕಾಣಬಹುದಾಗಿದೆ !. ಇಲ್ಲಿ ಸದ್ಗುರು ಶ್ರೀಧರರು ಹೇಳಿದ ವಾಕ್ಯವೊಂದನ್ನು ನೆನಪಿಸಿಕೊಳ್ಳಬಹುದು,

ಶತ್ರೋರಪಿ ಗುಣಾವಾಚ್ಯಾ ದೋಷಾವಾಚ್ಯಾ ಗುರೋರಪಿ |
ಯುಕ್ತಿಯುಕ್ತಂ ವಚೋಗ್ರಾಹ್ಯಂ ಬಾಲಾದಪಿ ಶುಕಾದಪಿ ||
ಗುರೋರಪ್ಯವಲಿಪ್ತಸ್ಯ ಕಾರ್ಯಾಕಾರ್ಯಮಜಾನತಃ|
ಅಪಾರ್ಥಪ್ರತಿಪನ್ನಸ್ಯ ನ್ಯಾಯ್ಯಂ ಭವತಿ ಶಾಸನಮ್ ||

"ಗುರು ಎಂದಾಕ್ಷಣ ಅವರ ಅಯೋಗ್ಯ, ಕೀಳು ವಿಚಾರಗಳು ತಿಳಿದಿದ್ದರೂ ಸಹ ಅವರನ್ನು ಅನುಸರಿಸುವುದು ತಪ್ಪು. ತನ್ನ ನಡತೆ ಮತ್ತು ಒಳ್ಳೆಯ ಗುಣಗಳಿಂದ ಯಾರು ಉತ್ತಮರೆನಿಸಿಕೊಳ್ಳುತ್ತಾರೋ ಅವರೇ ನಿಜವಾದ ಸದ್ಗುರುಗಳು"
ಎಂದು ಹೇಳುತ್ತಾರೆ. ನಮ್ಮ ಜಾತಿಯವರೆಂದೋ, ಮತ-ಧರ್ಮದವರೆಂದೋ ಕುರುಡು ಬುದ್ದಿಯಿಂದ ಯಾರೋ ಒಬ್ಬರನ್ನು ಶ್ರೀ ಶ್ರೀ ಶ್ರೀ ಜಗದ್ಗುರುವೆಂದು ಒಪ್ಪುವ ಬದಲು ಅಂತಹ ಗುರುವಿನಲ್ಲಿರುವ ಅರಿವನ್ನು ಒರೆಗೆ ಹಚ್ಚಬೇಕು ಎಂಬುದು ಮೇಲಿನ ಸೂಕ್ತಗಳ ಸಾರವಾಗಿದೆ. ಶಿಷ್ಯನು ಹೇಗಿರಬೇಕು ಎಂಬುದಕ್ಕೂ ಮೇಲಿನ ಸೂಕ್ತಗಳೇ ಮಾದರಿಯಾಗಿವೆ.
ನಮಗೂ ಸಹ ವಿವೇಕ ಚೂಡಾಮಣಿಯನ್ನು ಶ್ರೀ ಶಂಕರರು ಬರೆದಿದ್ದಾರೆ ಹಾಗಾಗಿ ಅದೊಂದು ಪವಿತ್ರ ಗ್ರಂಥ ಎನ್ನುವ ಭಾವನೆಗಿಂತಲೂ , ಅದರೊಳಗಿನ ಸತ್ವವನ್ನು ತಿಳಿದು ಅದರಲ್ಲಿ ಶಂಕರರನ್ನು ಕಂಡರೆ ನಾವು ನಿಜವಾದ ಗುರುವನ್ನು ಪಡೆದುಕೊಂಡಂತಾಗುತ್ತದೆ ಎನ್ನಬಹುದು. ಇಂದು ಗೋವಿಂದರಂತಹ ಗುರುಗಳು ಮತ್ತು ಜ್ಞಾನದಲ್ಲೇ ಗುರುವನ್ನು ಕಂಡ ಶಂಕರರಂತಹ ಶಿಷ್ಯರು ಸಿಗುವುದು ಬಲು ಕಷ್ಟ. ಮುಕ್ತಿ ಮಾರ್ಗಕ್ಕೆ ಅಥವಾ ನೆಮ್ಮದಿಯ ಬದುಕಿಗೆ ಆಧ್ಯಾತ್ಮವೇ ಅಂತಿಮವೆಂದೇನೂ ಇಲ್ಲ, ಎಲ್ಲರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗೈಯಬಹುದಾಗಿದೆ ಅದರಿಂದಲೇ ನೆಮ್ಮದಿಯನ್ನೂ ಪಡೆಯಬಹುದಾಗಿದೆ. ಹಾಗೆ ಸಾಧಿಸಲು ಅನುಸರಿಸಬೇಕಾದ ಮಾರ್ಗಗಳು ನಮ್ಮ ವೇದೋಪನಿಷತ್ತುಗಳಲ್ಲಿದೆ. ಎಲ್ಲೆಲ್ಲೋ ತಡಕಾಡುವ ಬದಲು ನೇರವಾಗಿ ನಮ್ಮ ಸಂಸ್ಕೃತಿಯ ಬೇರನ್ನು ಅಪ್ಪಿಕೊಳ್ಳುವುದು ಉಚಿತವೇ ಆಗಿದೆ. ಅರಿವನ್ನು ಹಂಚುವ ಮತ್ತು ಪಡೆಯುವ ಕಾರ್ಯದಲ್ಲಿ ಗುರು-ಶಿಷ್ಯರಿಬ್ಬರಿಗೂ ಸ್ಥಿತಪ್ರಜ್ಞತೆಯ ಅಗತ್ಯವಂತೂ ಇದ್ದೇ ಇದೆ, ಅಲ್ಲಿ ಸ್ವಾರ್ಥಕ್ಕೆ ಅವಕಾಶವಿಲ್ಲ.
ಮುಂದಿನ ಬರಹದಲ್ಲಿ ವಿವೇಕ ಚೂಡಾಮಣಿಯ ಆರಂಭದ ಮೊದಲ ಸೂಕ್ತಿಯನ್ನು ತಿಳಿಯೋಣ.
-ಹೆಚ್.ಎಸ.ಸುಬ್ರಹ್ಮಣ್ಯ
---------------------------------------------------------------------
ಲೇಖನವನ್ನು ಓದುತ್ತಿದ್ದಂತೆ ವೇದಸುಧೆಯ ಬಳಗದ ಸದಸ್ಯರು ಇಲ್ಲಿ ಸ್ವಲ್ಪ ಜಿಜ್ಞಾಸೆ ಮಾಡಬಾರದೇಕೆ? ಎಂಬ ಆಲೋನೆಯಿಂದ ನನ್ನ ಮಾತು ಬರೆದಿರುವೆ. ಇನ್ನು ನಿಮ್ಮ ಸರದಿ.......
----------------------------------------------------------------------
ನನ್ನ ಮಾತು :
ನನ್ನನ್ನು ಬಲವಾಗಿ ಹಿಡಿದಿಟ್ಟ ಮೂರ್ನಾಲ್ಕು ವಾಕ್ಯಗಳನ್ನು ಇಲ್ಲಿ ಸ್ಮರಿಸಬೇಕೆನಿಸಿದೆ.
"ಗುರುವಿನ ಗುಲಾಮನಾಗುವುದು ಎಂದರೆ ಗುರುವಿನಲ್ಲಿರುವ ಅರಿವಿನ ಗುಲಾಮನಾಗುವುದು ಎಂದೇ ಅರ್ಥ. ಕೇವಲ ಗುರುವಿನ ಬಾಹ್ಯ ದೇಹದ ಸೇವೆ ಮಾಡಿಕೊಂಡು ಸಮಯ ತಳ್ಳಿದರೆ ತಿಳಿವು ಮೂಡುವುದಿಲ್ಲ , ಅದರೊಟ್ಟಿಗೆ ಆ ಸದ್ಗುರುವಿನಲ್ಲಿ ಅಡಕವಾಗಿರುವ ವಿದ್ಯೆಯನ್ನೂ ಸಂಪಾದಿಸಬೇಕು ಅಂತಹ ವಿದ್ಯೆಯೇ ನಿಜವಾದ ಗುರುವಿನ ರೂಪ"ಎಂತಹಾ ಜಾಗೃತಿ ಮೂಡಿಸುವಂತಹ ದಿಟ್ಟ ಮಾತು!ಅರಿವನ್ನು ಗುರುತಿಸದೆ ಕೇವಲ ಗುರುವಿನ ದೇಹಕ್ಕೆ ಸೇವೆ ಮಾಡಿಕೊಂಡು ಅನೇಕರು ಮುಗ್ಧವಾಗಿರುವ ಉಧಾಹರಣೆ ಕಂಡಿರುವೆ.ಅಂತವರು ಜಾಗೃತರಾಗಬೇಕಲ್ಲವೇ?

"ಗುರು ಎಂದಾಕ್ಷಣ ಅವರ ಅಯೋಗ್ಯ, ಕೀಳು ವಿಚಾರಗಳು ತಿಳಿದಿದ್ದರೂ ಸಹ ಅವರನ್ನು ಅನುಸರಿಸುವುದು ತಪ್ಪು. ತನ್ನ ನಡತೆ ಮತ್ತು ಒಳ್ಳೆಯ ಗುಣಗಳಿಂದ ಯಾರು ಉತ್ತಮರೆನಿಸಿಕೊಳ್ಳುತ್ತಾರೋ ಅವರೇ ನಿಜವಾದ ಸದ್ಗುರುಗಳು"ಇಲ್ಲೂ ಎಂತಹಾ ದಿಟ್ಟತನಬೇಕಲ್ಲವೇ!
"ಜ್ಞಾನದಲ್ಲೇ ಗುರುವನ್ನು ಕಂಡ ಶಂಕರರಂತಹ ಶಿಷ್ಯರು ಎಲ್ಲೆಲ್ಲೋ ತಡಕಾಡುವ ಬದಲು ನೇರವಾಗಿ ನಮ್ಮ ಸಂಸ್ಕೃತಿಯ ಬೇರನ್ನು ಅಪ್ಪಿಕೊಳ್ಳುವುದು ಉಚಿತವೇ ಆಗಿದೆ".
ಎಂತಹಾ ಗಟ್ಟಿ ಮಾತು!
ಇದು ಸಾಂದರ್ಭಿಕವೂ ಆಗಿದೆ. ವೇದಗಳುದಿಸಿದ ಈ ನೆಲದಲ್ಲಿ ವೇದದ ಸಾರವನ್ನು ತಿಳಿಸುವ "ಭಗವದ್ಗೀತಾ ಆಂದೋಲನದ" ಬಗ್ಗೆ ಬುದ್ಧಿಜೀವಿಗಳೆನಿಸಿಕೊಂಡವರು ವಿರೋಧಿಸಿ ಸುದ್ದಿ ಮಾಡುತ್ತಾರೆ. ಜಾತ್ಯಾತೀತ ಸರ್ಕಾರದಕಲ್ಲಿ ಮಕ್ಕಳಿಗೆ ಖುರಾನ್,ಬೈಬಲ್ ವಿಚಾರಗಳನ್ನೂ ತಿಳಿಸಿ ಎಂದು ಅರಚುತ್ತಾರೆ. ಅಂತವರಿಗೆ ಇದೊಂದು ಕಿವಿಮಾತಾಗಬೇಕು. ನಮ್ಮ ವೇದಉಪನಿಷತ್ತುಗಳನ್ನು ಅಲ್ಪಸ್ವಲ್ಪ ವಾದರೂ ಅಧ್ಯಯನ ಮಾಡಿದರೆ ಸಮಾಜದಲ್ಲಿ ತಾಂಡವಾಡುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರ ಸಿಕ್ಕೀತು. ಅದನ್ನು ಬದಿಗಿಟ್ಟು ನೀವು ತಿಳಿಸಿದಂತೆ ಎಲ್ಲೆಲ್ಲೋ ತಡಕಾಡಿದರೆ!
-ಹರಿಹರಪುರ ಶ್ರೀಧರ
ಸಂಪಾದಕ

Thursday, July 28, 2011

ವಿವೇಕ ಚೂಡಾಮಣಿ -ಭಾಗ-1

ಹಾಸನ ಜಿಲ್ಲೆಯವರಾದ ಶ್ರೀ ಸುಬ್ರಹ್ಮಣ್ಯ ಹೆಚ್.ಎಸ್. ಇವರು ಇನ್ನು ಮುಂದೆ ವೇದಸುಧೆಯಲ್ಲಿ ತಮ್ಮ ಲೇಖನಗಳನ್ನು ಪ್ರಕಟಿಸಲು ಒಪ್ಪಿ ವೇದಸುಧೆಯ ಲೇಖಕಬಳಗದ ಒಬ್ಬ ಸದಸ್ಯರಾಗಿ ಇಂದು ಸೇರ್ಪಡೆಯಾಗಿದ್ದಾರೆ. ಅವರ ಲೇಖನಗಳು ಇನ್ನುಮುಂದೆ ವೇದಸುಧೆಯಲ್ಲಿ ಪ್ರಕಟವಾಗಲಿವೆ.ಆರಂಭದಲ್ಲಿ ಅವರ ಲೇಖನಗಳನ್ನು ನಾನೇ ಅವರ ಹೆಸರಲ್ಲಿ ಪ್ರಕಟಿಸುವೆ. ಮುಂದೆ ಅವರೇ ಸ್ವತ: ವೇದಸುಧೆಯಲ್ಲಿ ಪ್ರಕಟಿಸುವರು.ಶ್ರೀಯುತರು ಹೆಚ್ಚು ಪ್ರಚಾರಪ್ರಿಯರಲ್ಲ.ವೇದಸುಧೆಯ ಅಭಿಮಾನಿಗಳಿಗೆ ಅವರ ಲೇಖನಗಳೇ ಅವರನ್ನು ಚೆನ್ನಾಗಿ ಪರಿಸಚಯಿಸುತ್ತವೆ. ಶ್ರೀಯುತರನ್ನು ವೇದಸುಧೆಗೆ ಆದರದಿಂದ ಬರಮಾಡಿಕೊಳ್ಳುತ್ತೇನೆ.
-ಹರಿಹರಪುರಶ್ರೀಧರ್
ಸಂಪಾದಕ





ಈ ಜಗತ್ತಿಗೆ ಯಾರು ಅತ್ಯುತ್ತಮವಾದವುಗಳನ್ನು ಕೊಟ್ಟಿರುವರೋ ಅವರು ಎಲೆ ಮರೆಯ ಕಾಯಿಯಂತೆಯೇ ಇದ್ದು ಹೆಸರಿನ ,ಕೀರ್ತಿಯ ಆಸೆಯಾಗನ್ನಾಗಲೀ ಇಟ್ಟುಕೊಳ್ಳದೆ ಮಾನವಕೋಟಿಗೆ ಉತ್ತಮವಾದುದು ಉಳಿದರೆ ಸಾಕೆಂದು ಆಕಾರವಿಲ್ಲದ ಗಾಳಿ, ಬೆಳಕಿನಂತೆ ಆಗಿ ಹೋಗಿದ್ದಾರೆ. ಭಾರತೀಯ ಪುರಾತನ ತತ್ತ್ವಶಾಸ್ತ್ರದ ರಚನಕಾರರು, ಪುರಾತನ ಗುಡಿ-ಕೋಟೆಗಳನ್ನು ಕಟ್ಟಿದವರು, ನಾಗರೀಕ ಜೀವನಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟ ಅನೇಕ ಮಹಾಮಹಿಮರುಗಳ ಹೆಸರುಗಳು ನಮಗೆ ನಿಶ್ಚಿತವಾಗಿ ದೊರಕುವುದಿಲ್ಲ. ಭಾರತೀಯ ತತ್ತ್ವಶಾಸ್ತ್ರದ ಆಧಾರಸ್ತಂಭಗಳಾದ ವೇದೋಪನಿಷತ್ತುಗಳೂ ಸಹ ಇಂತಹ ಅನೇಕ ಅನಾಮಧೇಯ ದೃಷ್ಟಾರರಿಂದಲೇ ಬೆಳಕಿಗೆ ತೆರೆದುಕೊಂಡಿವೆ. ವೇದ-ವೇದಾಂಗಗಳು ಮಾನವನಿಂದ ರಚಿತವಾದವುಗಳಲ್ಲ (ಅಪೌರುಷೇಯ) ಎಂಬ ವಿಚಾರವಿದ್ದರೂ ಮಾನವಕೋಟಿಗೆ ವೇದೋಪನಿಷತ್ತುಗಳ ಸಾರವನ್ನು ತಿಳಿಸಿಕೊಟ್ಟ ಅನೇಕ ಜ್ಞಾನಿಗಳ-ಗುರುಗಳ ವಿವರಗಳು ತಿಳಿದುಬಂದಿಲ್ಲ. ಸೃಷ್ಟಿಯ ಅನೇಕ ವಿಚಿತ್ರಗಳನ್ನು ವೈವಿಧ್ಯಗಳನ್ನು ಸಾವಿರಾರು ವರುಷಗಳಷ್ಟು ಹಿಂದೆಯೇ ಕಂಡುಕೊಂಡು ಆ ಸತ್ಯಗಳನ್ನು ಉಪನಿಷತ್ತುಗಳ ಮೂಲಕ ತೆರೆದಿಟ್ಟ ಋಷಿಗಳನ್ನು, ಯಂತ್ರಗಳ ಸಹಾಯದಿಂದಲೇ ಬದುಕನ್ನು ಕಟ್ಟಿಕೊಂಡು ಜೀವಿಸುತ್ತಿರುವ ಮಾನವನೊಂದಿಗೆ ಹೋಲಿಸಬಹುದೇ ? . ಜಗತ್ತಿನ ಅತ್ಯಂತ ಬುದ್ಧಿವಂತ ಪ್ರಾಣಿಯಾದ ಮಾನವನು ಅನೇಕ ತಾಂತ್ರಿಕ-ವೈಜ್ಞಾನಿಕ ವಸ್ತು-ವಿಧಾನಗಳನ್ನು ಅನ್ವೇಶಿಸಿಕೊಂಡು ತನ್ನ ಬದುಕನ್ನು ನಾಜೂಕಿನ ಗರಡಿಯೊಳಗೆ ದೂಡಿ ಪಳಗಿ ಹೊರಬಂದು ಸ್ವಾರ್ಥದ ಬದುಕನ್ನು ನೆಡೆಸುತ್ತಿರುವ ಇಂದಿನ ಕಾಲಮಾನದ ಜನಕ್ಕೆ ಉಪನಿಷತ್ತುಗಳ ಸಾರವಾಗಲೀ ಅದರ ಆವಶ್ಯಕತೆಯಾಗಲೀ ಪ್ರಸ್ತುತವಾಗಬಲ್ಲುದೆ ?. ಭಗವದ್ಗೀತೆಯು ಭಾರತೀಯ ತತ್ತ್ವಶಾಸ್ತ್ರದ ಪ್ರಮುಖವಾದ ಮತ್ತು ಪವಿತ್ರವಾದ ಗ್ರಂಥವೆಂದು ಗಣಿಸಲ್ಪಟ್ಟಿದೆ. ಅಲ್ಲಿ ಬರುವ ಧ್ಯಾನ ಶ್ಲೋಕದ ಅರಿತವೊಂದು ಹೀಗಿದೆ, " ಉಪನಿಷತ್ತುಗಳು ಹಸುಗಳು, ಗೋಪಾಲಕನು ಹಾಲನ್ನು ಕರೆಯುವವನು, ಅರ್ಜುನನು ಕರು, ಗೀತೆಯೇ ಅಮೃತಸಮಾನವಾದ ಹಾಲು, ಜ್ಞಾನಿಗಳು ಅದನ್ನು ಕುಡಿಯುವರು ". ಹೀಗಾಗಿ ಉಪನಿಷತ್ತೇ ಗೀತೆಗೂ ಆಶ್ರಯವಾದುದು ಎನ್ನಬೇಕಾಗುವುದು. ಇಂದಿನ ಕಾಲಮಾನಕ್ಕೆ ಬಹುತೇಕ ಯುವಜನಾಂಗಕ್ಕೆ ವೇದೋಪನಿಷತ್ತುಗಳ ಸಾರವು ಅಪ್ರಸ್ತುತವೆನಿಸಿದರೂ, ಮಾನವನ ಜೀವನದ ಹುಟ್ಟು-ಸಾವಿನ ಬಗೆಗೆ ವಿಚಾರ ಮಾಡುವ ಸಮಯ ಬಂದಾಗ , ಸೃಷ್ಟಿಯ ಮೂಲವನ್ನು ಹುಡುಕುವ ಆಸೆ ಹುಟ್ಟಿದಾಗ, ಜೀವವಿಕಾಸಕ್ಕೆ ಕಾರಣಗಳನ್ನು ತಿಳಿಯ ಬಯಸುವಾಗ , ವಿಜ್ಞಾನವು ಪ್ರಯೋಗಗಳಿಂದ ಸಿದ್ಧಿಸಿ ತೋರಿಸಲು ಸಾಧ್ಯವಾಗುವುದಿಲ್ಲ ಎಂದಾಗ ಮತ್ತು ರಕ್ತವು ತಣ್ಣಗಾಗಿ ಬಾಳಿನ ಮುಸ್ಸಂಜೆಯು ಅಪ್ಪಿಕೊಂಡು ಮುಂದೇನು? ಎಂಬ ಗೊಂದಲ ಹುಟ್ಟಿದಾಗ ನೆರವಿಗೆ ಬರುವುದೇ ಉಪನಿಷತ್ತುಗಳು !. ’ತನ್ನ ಅರಿವು ತನಗೆ ಗುರು’ ಎಂಬ ಮಾತು ಎಲ್ಲಾ ಕಾಲಕ್ಕೂ ಹೊಂದುವಂತೆಯೇ , " ಆತ್ಮವನ್ನರಿಯಲು ಆಧ್ಯಾತ್ಮಿಕ ಗ್ರಂಥವಾಗಲೀ, ಗುರುವಿನ ನುಡಿಗಳಾಗಲೀ ಸಹಾಯಕವಾಗುವುದಿಲ್ಲ. ಅದು ತನಗೆ ತಾನೇ ಒಬ್ಬನ ಅರಿವಿಗೆ ಅನುಗುಣವಾಗಿ ತಿಳಿದುಬರುವಂತಹುದು. ಆದರೂ ಇಂತಹ ಅರಿವನ್ನು ಪಡೆಯಲು ಗ್ರಂಥವೂ , ಗುರುವೂ ಅವಶ್ಯಕ " ಎಂದು ಯೋಗ ವಾಸಿಷ್ಠ ಸಂಗ್ರಹ ಎಂಬ ಗ್ರಂಥದಲ್ಲಿ ಹೇಳಿದೆ. ಅಂದರೆ, ಗ್ರಂಥಗಳು ಮತ್ತು ಗುರುಗಳು ಆತ್ಮಜ್ಞಾನಕ್ಕೆ ದಾರಿ ತೋರಬಲ್ಲರು ಆದರೆ ಒಬ್ಬನು ತನ್ನ ಅರಿವಿನಿಂದ ಮತ್ತು ಧ್ಯಾನಗಳಿಂದ ಆತ್ಮಜ್ಞಾನವನ್ನು ಹೊಂದಬಹುದು ಎಂಬುದು ಮೇಲಿನ ಸೂಕ್ತದ ಉದ್ದೇಶ. ಉಪನಿಷತ್ತುಗಳಿಂದ ತಿಳಿದುಬರುವ ಸಂಗತಿಗಳು ಎಣಿಕೆಗೆ ನಿಲುಕದ್ದು ಮತ್ತು ಒಂದೊಂದು ಸೂಕ್ತಿಗಳ ಮೇಲೂ ನೂರು ಪುಟಗಳ ಹೊತ್ತಗೆಯನ್ನೇ ಬರೆಯಬಹುದಾದಷ್ಟು ವಿಚಾರಗಳು. ಉಪನಿಷತ್ತುಗಳನ್ನೇ ಆಧಾರವಾಗಿರಿಸಿಕೊಂಡು ಅನೇಕ ಆಚಾರ್ಯರು ಹತ್ತು-ಹಲವು ಗ್ರಂಥಗಳನ್ನು ಮಾನವನ ಅರಿವಿಗಾಗಿ , ತಿಳಿವಿಗಾಗಿ ಬರೆದಿಟ್ಟಿದ್ದಾರೆ. ಅಂತಹ ಅತ್ಯುತ್ತಮ ಗ್ರಂಥಗಳಲ್ಲಿ "ವಿವೇಕ ಚೂಡಾಮಣಿ" ಎಂಬ ಗ್ರಂಥವೂ ಒಂದು. ವಿವೇಕ ಚೂಡಾಮಣಿ ಎಂಬ ಗ್ರಂಥವು ಹಿಂದೂ ಧರ್ಮದ ಪುನರುದ್ಧಾರಕ, ಭಾರತೀಯ ಸಂಸ್ಕೃತಿಗೆ ಮರುಜನ್ಮ ನೀಡಿದ ಮಹಾನ್ ಚೇತನವೆಂದೇ ತಿಳಿಯಲ್ಪಟ್ಟಿರುವ ಶ್ರೀ ಶಂಕರಾಚಾರ್ಯರಿಂದ ರಚನೆಯಾಗಿರುವುದಾಗಿದೆ. ಮಾನವನು ಹೇಗೆ ಹಾರೆ ಗುದ್ದಲಿಗಳಿಂದ (ಯಂತ್ರಗಳಿಂದ) ನೆಲವನ್ನು ಅಗೆದು ನೀರನ್ನು ಪಡೆಯುತ್ತಾನೋ ಹಾಗೆಯೇ ಗುರುಗಳು ಹೇಳಿರುವ ವಿಚಾರಗಳನ್ನು ಅಧ್ಯಯನ ಮಾಡುವುದರಿಂದ ಉತ್ತಮ ಜ್ಞಾನ-ವಿದ್ಯೆಯನ್ನು ಪಡೆಯಬಹುದು (ಪಡೆಯಬೇಕು).

ಯಥಾ ಖನನ್ ಖನಿತ್ರೇಣ ನರೋ ವಾರ್ಯಧಿಗಚ್ಛತಿ |
ತಥಾ ಗುರುಗತಾಂ ವಿದ್ಯಾಂ ಶುಶ್ರೂಷುರಧಿಗಚ್ಛತಿ ||

ಶಂಕರಾಚಾರ್ಯರಿಂದ ರಚಿತವಾಗಿರುವ ವಿವೇಕ ಚೂಡಾಮಣಿಯು ಆ ಹೆಸರಿಗೆ ಅನ್ವರ್ಥವಾಗಿಯೇ ಇದೆ ಎಂಬುದು ವಿದ್ವಾಸಂರ ಅಭಿಮತ. ಜ್ಞಾನ ಸಂಪಾದನೆಗೆ ಉತ್ತಮ ಮಾರ್ಗಗಳನ್ನು ಹುಡುಕುತ್ತಾ ಹೋಗುವುದು ವಿವೇಕಿಗಳ ಲಕ್ಷಣವೇ ಆಗಿದೆ. ಅವಿವೇಕತನದಿಂದ ಬೇಡದ ಕೆಲಸಗಳನ್ನು ಮಾಡಿ ನಂತರ ವ್ಯಥೆಪಡುವ ಬದಲು ಒಳ್ಳೆಯ ಅರಿವಿನ ದಾರಿಯಲ್ಲಿ ನೆಡೆಯಲು ಉತ್ತಮ ಜ್ಞಾನದ ಮಾರ್ಗವನ್ನು ಆರಿಸಿಕೊಳ್ಳುವುದು ಒಳಿತೇ ಆಗಿದೆ.
"ಪ್ರಕ್ಷಾಲನಾದ್ದಿ ಪಂಕಸ್ಯ ದೂರಾದಸ್ಪರ್ಶನಂ ವರಮ್ " ಅಂದರೆ, "ಕೆಸರನ್ನು ತುಳಿಯುವುದೇಕೆ ? ಆಮೇಲೆ ತೊಳೆಯುವುದೇಕೆ ? " . ತೊಳೆದರೆ ದೇಹಕ್ಕಂಟಿದ ಕೆಸರು ಹೋಗಬಹುದು ಮನಕ್ಕಂಟಿದ ಕೆಸರು ಹೋಗುವುದೇ ? .
ಇದನ್ನೇ "ದುಷ್ಟರನ್ನು ಕಂಡರೆ ದೂರವಿರು" ಎಂಬ ಮಾತಿನಲ್ಲೂ ಹೇಳಲಾಗಿದೆ.

ಆಚಾರ್ಯ ಶಂಕರರಿಂದ ರಚಿತವಾಗಿರುವ ವಿವೇಕ ಚೂಡಾಮಣಿಯ ಅಷ್ಟೂ ಸೂಕ್ತಿಗಳನ್ನೂ ಇದೇ ಬ್ಲಾಗಿನಲ್ಲಿ ಕನ್ನಡ ಭಾವಾರ್ಥದೊಂದಿಗೆ ಬರೆಯಬೇಕೆಂಬ ಅಭಿಲಾಷೆಯಿಂದ ಇಷ್ಟೆಲ್ಲಾ ಪೀಠಿಕೆ ಹಾಕಿದ್ದೇನೆ. ನಾನು ಹುಡುಕಿದಂತೆ ಅಂತರಜಾಲದಲ್ಲಿ ವಿವೇಕ ಚೂಡಾಮಣಿಯ ಸಂಪೂರ್ಣ ಭಾವಾರ್ಥವು ಲಭ್ಯವಿದ್ದಂತೆ ಕಂಡುಬರಲಿಲ್ಲ. ಲಭ್ಯವಿದ್ದರೂ ಸಹ ನನಗೆ ಅರಿವಿದ್ದಷ್ಟನ್ನೂ ಇಲ್ಲಿ ಬರೆಯಬೇಕೆಂದುಕೊಂಡಿದ್ದೇನೆ. ಓದಲು ಹೇಗೂ ನೀವೆಲ್ಲಾ ಇದ್ದೇ ಇದ್ದೀರಲ್ಲಾ :-).
ಮುಂದಿನ ಪೋಸ್ಟುಗಳಲ್ಲಿ ಒಂದು ಅಥವಾ ಎರಡು ಸೂಕ್ತಿಗಳನ್ನು ತೆಗೆದುಕೊಂಡು ಅರ್ಥದೊಂದಿಗೆ ಬರೆಯಲಿದ್ದೇನೆ. ಈಗಿನ ಕಾಲಮಾನಕ್ಕೆ ಇದು ಎಷ್ಟು ಪ್ರಸ್ತುತ-ಅಪ್ರಸ್ತುತ ಎಂಬ ವಿಚಾರಕ್ಕಿಂತಲೂ ಯವಾಗ ನಮ್ಮ ತತ್ತ್ವಶಾಸ್ತ್ರದ ಅಗತ್ಯ ಯಾರಿಗೆ ಬೇಕಾಗುತ್ತದೋ ಆಗ ಅಂತರಜಾಲದಲ್ಲಿ ಈ ವಿವೇಕ ಚೂಡಾಮಣಿಯ ಅರ್ಥವು ಸಿಕ್ಕುವಂತಾದರೆ ನನ್ನ ಪ್ರಯತ್ನ ಸಾರ್ಥಕ.

ಕನ್ನಡದಲ್ಲಿ ಭಾವಾರ್ಥವನ್ನು ಬರೆಯುವೆನೆಂದು ಹೇಳಿ ಬರವಣಿಗೆಯಲ್ಲಿ ಇಷ್ಟೊಂದು ಸಂಸ್ಕೃತವನ್ನು ಬಳಸುವುದು ತರವೇ ? ಎಂದು ಇಲ್ಲಿ ಯಾರಾದರೂ ದೊಡ್ಡೋರಿಗೆ ಅನಿಸಿದರೆ , ಅನಿಸಿದ್ದನ್ನು ಹೊಟ್ಟಗೆ ಹಾಕ್ಕೊಂಡು ಮುಂದಕ್ಕೆ ಓದಿ.
ಅರಿವಿಗೆ ನೂರೆಂಟು ದಾರಿಯಿದೆ , ನೂರಾರು ಕವಲುಗಳಿವೆ ಗುರಿ ಮಾತ್ರ ಒಂದೇ !.


ಆತ್ಮಾನಂ ರಥಿನಂ ವಿದ್ದಿ ಶರೀರಂ ರಥಮೇವ ತು |
ಬುದ್ಧಿಂ ತು ಸಾರಥಿಂ ವಿಧ್ಧಿ ಮನಃ ಪ್ರಗ್ರಹಮೇವ ಚ ||
(ಕಠೋಪನಿಷತ್ತು)

ಆತ್ಮನೇ ಬಿಲ್ಲಾಳು,
ದೇಹವೇ ತೇರು,
ಬುದ್ಧಿಯೇ ತೇರಾಳು,
ಮನಸೇ ಲಗಾಮು !