Pages

Monday, February 13, 2012

ಆಧ್ಯಾತ್ಮಿಕ ಪ್ರಯಾಣ - ಒಂದು ಚಿಂತನೆ.


            ಮಾನವನ ಅಧ್ಯಾತ್ಮಿಕ ಪ್ರಯಾಣ ನಿರಂತರವಾದದ್ದು. ಪ್ರತಿ ಜೀವಿಯೂ ಸತತವಾಗಿ ಆಧ್ಯಾತ್ಮಿಕ ಔನ್ನತ್ಯವನ್ನು ಪಡೆಯಲು ಪ್ರಯತ್ನಮಾಡುತ್ತಲೇ ಇರುತ್ತಾನೆ. ಈ ನಿರಂತರ ಪ್ರಯಾಣವನ್ನು ಅವನು ದೇಹವೆಂಬ ಬೇರೆ ಬೇರೆ ವಾಹನಗಳಲ್ಲಿ ಮಾಡುತ್ತಿರುತ್ತಾನೆ. 

                ಮಾನವರಲ್ಲಿ ಯೋಚನೆ ಮಾಡುವ ಪ್ರಕ್ರಿಯೆ ಶುರುವಾದಂದಿನಿಂದ ಈ ಸೃಷ್ಟಿಯ ಪರಮ ಸತ್ಯವನ್ನು ಕಂಡು ಕೊಳ್ಳಲು ಎಲ್ಲಾ  ಕಾಲಕ್ಕೂ ತುಡಿತ ಮತ್ತು ಅದಕ್ಕೆ ಆಯಾಯ ಜೀವಿಯ ಶಕ್ತಿಯ ಪರಿಮಿತಿಯೊಳಗೆ , ತಕ್ಕಂಥ ಪ್ರಯತ್ನ ನಡೆಯುತ್ತಲೇ ಇದೆ. ಆದರೆ ಆ ಪರಮ ಸತ್ಯವನ್ನು ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ರೀತಿಯಲ್ಲಿ ಉದಾಹರಿಸಲಾಗಿದೆ. ಸಹಸ್ರಾರು ವರ್ಷಗಳಿಂದ ಮಾನವ ಆ ದೇವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಪಡುತ್ತಲೇ ಇದ್ದಾನೆ. ಆದರೆ ಇಂದಿಗೂ ಯಾರಿಗೂ ಸಂಪೂರ್ಣವಾಗಿ ಆ ರಹಸ್ಯವನ್ನು ಛೇದಿಸಲು ಸಾಧ್ಯವಾಗಿಲ್ಲ. ಏಕೆಂದರೆ ಪರಮ ಸತ್ಯವನ್ನು ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ರೀತಿಯಲ್ಲಿ ಉದಾಹರಿಸಿರುವುದರಿಂದ ಕಾಲಕಾಲಕ್ಕೆ ದೇವರ ಕಲ್ಪನೆ ಬದಲಾಗುತ್ತಲೇ ಇರುತ್ತದೆ. ಹಾಗಾಗಿ ನಮ್ಮಲ್ಲಿ ಒಬ್ಬ ದೇವನ ಬದಲಿಗೆ ಸಹಸ್ರಾರು ದೇವತೆಗಳಿದ್ದಾರೆ. ಯಾವುದನ್ನು ನಂಬುವುದು ಯಾವುದನ್ನು ಬಿಡಿವುದು ಎಂಬುದೇ ಮಾನವರ ಪೀಕಲಾಟ. ಋಗ್ವೇದದಲ್ಲಿರುವ ಪುರುಷ ಸೂಕ್ತದಲ್ಲಿ ಆ ಪರಮಾತ್ಮನ  ಸರ್ವ ಸಾಮರ್ಥ್ಯ ಮತ್ತು ಸರ್ವ ವ್ಯಾಪಕತ್ವವನ್ನು ಹೇಳಲ್ಪಟ್ಟಿದೆ. ಈ ಸರ್ವ ಸಮರ್ಥಶಾಲಿ ಮತ್ತು ಸರ್ವವ್ಯಾಪಕನಾಗಿರುವ ಪರಮ ಪುರುಷನು ಈ ಭೂಮಿಯನ್ನೂ ಸೇರಿದಂತೆ ಇಡೀ ವಿಶ್ವವನ್ನೇ ವ್ಯಾಪಿಸಿಕೊಂಡು ಈ ಸೃಷ್ಟಿಯನ್ನು ಮೀರಿ ಹತ್ತು ಅಂಗುಲದಲ್ಲಿ ನಿಂತಿದ್ದಾನೆ ಎನ್ನುತ್ತದೆ "ಪುರುಷ ಸೂಕ್ತ ". ಈ ಇಡೀ ವಿಶ್ವದ ಸೂತ್ರದಾರನಾಗಿರುವ ಆ ಪರಮ ಪುರುಷನನ್ನು ತಿಳಿದುಕೊಳ್ಳುವುದೇ ಅಧ್ಯಾತ್ಮಿಕ ಪಯಣದ ಮತ್ತು ಔನ್ನತ್ಯವನ್ನು ಪಡೆಯುವ ಧ್ಯೇಯ ಮತ್ತು ಗುರಿ. ಈ ಪಯಣ ಆ ಪರಮ ಪುರುಷನನ್ನು ತಿಳಿದುಕೊಳ್ಳುವ ತನಕ ನಿರಂತರವಾದದ್ದು ಮತ್ತು ಪ್ರತಿ ಜೀವಿಯೂ ಈ ಪಯಣದ ಯಾವುದೋ ಒಂದು ಹಂತದಲ್ಲಿರುತ್ತಾನೆ. 


ಇದನ್ನು ನಾನು ಹೀಗೆ ಅರ್ಥ ಮಾಡಿಕೊಂಡಿದ್ದೇನೆ: 

              ಮಕ್ಕಳು ಶಾಲೆಗೆ ಹೋಗಲು ಶುರು ಮಾಡಿದಾಗ, ಅವರಿಗೆ ತಾವು ಏತಕ್ಕಾಗಿ ಶಾಲೆಗೆ ಹೋಗಬೇಕು ಎಂದು ಯೋಚನೆ ಮಾಡುವ ಕ್ಷಮತೆ ಇರುವುದಿಲ್ಲ. ಹೌದಲ್ಲವೇ? ಆದರೆ ಅವರು ಹಲವಾರು ಕಾರಣಗಳಿಗಾಗಿ ಶಾಲೆಗೆ ಹೋಗುತ್ತಾರೆ. ಅಪ್ಪ-ಅಮ್ಮ ಖಡ್ಡಾಯಪಡಿಸುತ್ತಾರೆ, ಪಕ್ಕದ ಮನೆಯ ಹುಡುಗರೂ ಹೋಗುತ್ತಾರೆ, ಒಳ್ಳೆಯ ಯೂನಿಫಾರ್ಮ್ ಹಾಕಿಕೊಳ್ಳಲು ಸಿಗುತ್ತದೆ, ಬಸ್ಸಿನಲ್ಲಿ ಹೋಗುತ್ತೇವೆ, ಆ ಬೀದಿಯ ಮಕ್ಕಳೆಲ್ಲ ಅಲ್ಲಿ  ಸಿಗುತ್ತಾರೆ, ಅಮ್ಮ ಡಬ್ಬಿಯಲ್ಲಿ ಒಳ್ಳೆಯ ತಿಂಡಿ- ತಿನಿಸುಗಳನ್ನು ಹಾಕಿ ಕೊಡುತ್ತಾಳೆ, ಅಪ್ಪ ಬೈತಾರೆ, ಶಾಲೆಯಲ್ಲಿ ಎಲ್ಲಾ ಮಕ್ಕಳ ಜೊತೆಯಲ್ಲಿ ಆಟವಾಡಲು ಸಿಗುತ್ತೆ,  ಹೀಗೆ ಹತ್ತು ಹಲವಾರು ಕಾರಣಗಳಿಗೆ ಮಕ್ಕಳು ಶಾಲೆಗೆ ಹೋಗುತ್ತಾರೆ. ಅವರಿಗೆ ಏನನ್ನು ಓದ ಬೇಕು, ಯಾಕೆ ಓದಬೇಕು, ಅಕ್ಷರವನ್ನು ಹೀಗೇ ಏಕೆ ಬರೆಯಬೇಕು ಎಂದೆಲ್ಲ ಯೋಚಿಸುವ ಬುಧ್ಧಿ ಇರುವುದಿಲ್ಲ. ಅವರಿಗೆ ಪ್ರತಿಯೊಂದನ್ನೂ ಹೇಳಿಕೊಡಬೇಕು, ಓದಲು, ಬೆರೆಯಲು ತಿದ್ದಬೇಕು. ಅವರ ಬಟ್ಟೆ ಬರೆ ಶೂ ಎಲ್ಲವನ್ನೂ ದೊಡ್ಡವರು ನೋಡಿಕೊಳ್ಳ ಬೇಕಾಗುತ್ತದೆ. 

ಸಾಮಾನ್ಯವಾಗಿ ಆಧ್ಯಾತ್ಮ ಪ್ರಯಾಣದಲ್ಲೂ ಬಹಳಷ್ಟುಜನ ಈ ಸ್ಥರದಲ್ಲಿರುತ್ತಾರೆ. ಇದು ಪ್ರಾಥಮಿಕ ಶಾಲೆಯ ಹಂತ. 

ಇಲ್ಲಿಂದ ಮಾಧ್ಯಮಿಕ ಶಾಲೆಯ ಹಂತಕ್ಕೆ ಹೋಗೋಣ. ಇಲ್ಲಿ ಮಕ್ಕಳಿಗೆ ಸ್ವಲ್ಪಮಟ್ಟಿಗೆ ಅರಿವು ಮೂಡಿ ತಮ್ಮ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವ ಸ್ಥಿತಿಯನ್ನು ಮುಟ್ಟಿರುತ್ತಾರೆ. ಇಲ್ಲಿ, ಅವ ಅಥವಾ ಅವಳು ಶಾಲೆಗೆ ಸರಿಯಾಗಿ ಹೋಗುತ್ತಿದ್ದಾರೆಯೇ, ಹೋಂ ವರ್ಕ್ ಸರಿಯಾಗಿ ಮಾಡುತ್ತಿದ್ದಾರೆಯೇ, ಅಕ್ಷರ ಸರಿಯಾಗಿದೆಯೇ ಎಂದು  ಅವರನ್ನು ನೋಡಿ ಸೂಕ್ಷ್ಮ ಮಾರ್ಗದರ್ಶನ ಮಾಡಿದರೆ ಸಾಕು. 

ಇಲ್ಲಿಂದ ಅವರು ಹೈಸ್ಕೂಲ್ ಹಂತಕ್ಕೆ ಬಂದಾಗ ಅವರಿಗೆ ಕಲಿಕೆಯ ವಿಷಯಗಳ ಸ್ವಾತಂತ್ರ್ಯ ಸಿಗುತ್ತೆ. ಆದರೂ ಅದನ್ನು ಆರಿಸಿಕೊಳ್ಳುವಾಗ ಅವರಿಗೆ ಬೇರೆ ಹಿರಿಯರ ಮಾರ್ಗದರ್ಶನ ಬೇಕಾಗುತ್ತದೆ.  ಅವರು ಸ್ವತಂತ್ರರಾಗಿ ಓದುವ ಬರೆಯುವ ಹಂತವನ್ನು ತಲುಪಿರುತ್ತಾರೆ. ಅವರನ್ನು ಗಮನಿಸಿ, ಸೂಕ್ತ ಸಮಯದಲ್ಲಿ ಸೂಕ್ತ ಮಾರ್ಗದರ್ಶನ ಮಾಡಿದರೆ ಸಾಕು.

ನಂತರ ಕಾಲೇಜಿಗೆ  ಸೇರುವಾಗ ಸಂಪೂರ್ಣವಾಗಿ ಅವನ ಇಚ್ಚಾಪ್ರಕಾರ ಓದುವ ವಿಷಯಗಳನ್ನು ಆರಿಸಿಕೊಳ್ಳುವ ಬಹುತೇಕ ಶಕ್ತಿಯನ್ನು ಪಡೆದು ಕೊಂಡಿರುತ್ತಾರೆ ವಿಶೇಷವೇನೆಂದರೆ, ಇಲ್ಲಿ ಅವನು ಓದಬೇಕಾದ ವಿಷಯಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತದೆ. ಮೊದಲ ವರ್ಷದಲ್ಲಿದ್ದಂತಹ ಕೆಲವು ವಿಷಯಗಳು ಎರಡನೇ ವರ್ಷಕ್ಕೆ ಇರುವುದಿಲ್ಲ. ಮೇಲೇರುತ್ತಾ ಅವನು ಅಥವಾ ಅವಳು ಕೇವಲ ಆ ವಿಷಯಗಳಲ್ಲಿ ಮಗ್ನರಾಗಿ ಅವುಗಳನ್ನೇ ಆಳವಾದ ಅಭ್ಯಾಸ ಮಾಡುತ್ತಾರೆ.ಮುಂದೆ ಸ್ನಾತಕೋತ್ತರ( Post graduation) ಪದವಿಗಾಗಿ   ಅಭ್ಯಾಸಮಾಡುವಾಗ,  ಎಲ್ಲಾ ಐಚ್ಚಿಕ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು ಅದರಲ್ಲೇ ಪರಿಣಿತಿ ಮತ್ತು ಪ್ರಾವೀಣ್ಯ ಪಡೆಯಲು ಪ್ರಯತ್ನಿಸುತ್ತಾರೆ. ಇನ್ನೂ ಮುಂದೆ ಹೋಗಿ ಸಂಶೋದನಾ ಪದವಿ( ಪಿ ಹೆಚ್ ಡಿ) ಮಾಡುವಾಗ ಆ ಒಂದು ವಿಷಯದ ಯಾವುದಾದರೂ ಒಂದು ಭಾಗವನ್ನು ಆಯ್ಕೆ ಮಾಡಿ ಮತ್ತಷ್ಟು ಆಳವಾಗಿ ಅದನ್ನೇ ಅಭ್ಯಾಸಮಾಡಿ ಆ ವಿಷಯದಲ್ಲೇ ಪರಿಣಿತಿಯನ್ನು ಪಡೆಯುತ್ತಾರೆ. 

ಆಧ್ಯಾತ್ಮ ಔನ್ನತ್ಯದ ಹಾದಿಯೂ ಹೆಚ್ಚೂ ಕಡಿಮೆ ಇದೇ ರೀತಿಯದು. 

 ತಮ್ಮನ್ನು ತಾವು ನಾಸ್ತಿಕರೆಂದು  ಕರೆದುಕೊಳ್ಳುವ ಬೆರಳೆಣಿಕೆಯಷ್ಟು ಜನರನ್ನು ಸೇರಿಸಿ ಎಲ್ಲರೂ ಆಧ್ಯಾತ್ಮಿಕ ಬೆಳವಣಿಗೆಯ ಯಾವುದೋ ಒಂದು ಹಂತದಲ್ಲಿ ಇರುತ್ತಾರೆ. ಪ್ರೈಮರಿ ಶಾಲೆಗೆ  ಹೋಗಿ ವಿಧ್ಯಾಭ್ಯಾಸದ ಉನ್ನತ ಹಂತಕ್ಕೆ ತಲುಪುವಂತೆಯೇ, ಅಧ್ಯಾತ್ಮಿಕ ಪ್ರಯಾಣವೂ ಸಹ.  ಆದರೆ ವಿಡಂಬನೆ ಏನೆಂದರೆ, ಪ್ರಾಥಮಿಕ ಶಾಲೆಗೆ ಸೇರಿದ 1000 ಜನರಲ್ಲಿ ಪ್ರತಿ ಹಂತದಲ್ಲೂ ಹಲವರು ಉದುರಿಹೊಗುತ್ತಾ, ಕಡೇಗೆ ಪಿ ಹೆಚ್ ಡಿ ಹಂತಕ್ಕೆ 4-5 ಜನ ಮುಟ್ಟಬಹುದು, ಆಧ್ಯಾತ್ಮಿಕ ಪ್ರಯಾಣದಲ್ಲೂ ಸಹ ಹೀಗೇ.  ಪರಮ ಸತ್ಯವನ್ನು ಅರಿಯಲು ಪ್ರಯತ್ನಪಡುವವರಲ್ಲಿ, ಲಕ್ಷಕ್ಕೊಬ್ಬರಿಗೆ ಸಾದನೆಮಾಡಿ ಒಂದು ಹಂತಕ್ಕೆ ತಲುಪುವ ಸಾಧ್ಯತೆ ಇರಬಹುದು. 

ಜಯದ  ಗುಟ್ಟೇನು ? 

ಬಸ್ಸು ಮತ್ತು ರೈಲು ಪ್ರಯಾಣ ಮಾಡುವಾಗ " ಕಡಿಮೆ ಲಗ್ಗೇಜು ಹೆಚ್ಚು ಸುಖ " ಎಂಬ ಬರಹವನ್ನು ಸರ್ವೇ ಸಾಮಾನ್ಯ ನೀವು ಕಂಡಿರಬಹುದು.ಆಧ್ಯಾತ್ಮಿಕ  ವಿಕಾಸ ಮತ್ತು ಆಧ್ಯಾತ್ಮಿಕ ಪ್ರಯಾಣದಲ್ಲೂ ಇದು ಹೆಚ್ಚು ಪ್ರಸ್ತುತ. ಹೆಚ್ಚು ಲಗ್ಗೇಜು ಪ್ರಯಾಣವನ್ನು ಹೆಚ್ಚು ಶ್ರಮಪೂರಿತವಾಗಿಸುತ್ತದೆ. ಬಸ್ಸು ಮತ್ತು ರೈಲು ಪ್ರಯಾಣದಲ್ಲಿ ಹೇಗೋ ಕಷ್ಟಪಟ್ಟಾದರೂ ಗಮ್ಯವನ್ನು ತಲುಪಬಹುದು. ಆದರೆ ಆದ್ಯಾತ್ಮಿಕ ಪ್ರಯಾಣದಲ್ಲಿ ಅದು ಸಾಧ್ಯವೇ ಇಲ್ಲ. ಅಧ್ಯಾತ್ಮಿಕ ಪ್ರಯಾಣದ ಲಗ್ಗೇಜುಗಳೆಂದರೆ "ಅರಿಷಡ್ವರ್ಗಗಳು"  "ಆರು ಮಂದಿ ವೈರಿಗಳನು ಸೇರಲೀಸದಂತೆ ನೂಕಿ, ಧೀರನಾದ ಹರಿಯ ಪಾದ ಸೇರಬೇಕೆನ್ನುವರಿಗೆ, ಒಂದು ಬಾರಿ ಸ್ಮರಣೆ ಸಾಲದೇ"  ಎಂದು ಹರಿದಾಸರು ಹಾಡಿದ್ದಾರೆ. ಈ ಆರು ವೈರಿಗಳೇ, ಕಾಮ, ಕ್ರೋಧ, ಲೋಭ, ಮೋಹ,  ಮದ, ಮತ್ತು ಮಾತ್ಸರ್ಯಗಳು. ನಿರಂತರ ಅಭ್ಯಾಸದಿಂದ, ಬಹಳ ಶ್ರಮದ ಪ್ರಯತ್ನದಿಂದ, ಗುರುವಿನ ಮಾರ್ಗದರ್ಶನ ಮತ್ತು ಕೃಪೆಯಿಂದ ಮಾತ್ರ ಇವುಗಳನ್ನು ಹೋಗಲಾಡಿಸಿಕೊಳ್ಳಲು ಸಾಧ್ಯ.

 " त्यागेनैके अमृतत्वमानाशु:" "ತ್ಯಾಗೇನೈಕೆ  ಅಮೃತತ್ವಮಾನಶು:"  ಎಂಬುದು ವೇದೋಕ್ತಿ. ತ್ಯಾಗದಿಂದ ಮಾತ್ರ ಅಮೃತತ್ವ ಅಥವಾ ಅಮರತ್ವ ದೊರಕುತ್ತದೆ ಎಂಬುದು ಇದರ ಅರ್ಥ. ಯಾವುದರ ತ್ಯಾಗ ಮಾಡಬೇಕೆಂದು ಕೇಳಿದರೆ, ಮೇಲೆ ಹೇಳಿದ ಆರು ಮಂದಿ ವೈರಿಗಳನ್ನು ತ್ಯಾಗ ಮಾಡಬೇಕು. ಮಾಡಿದರೆ ಮಾತ್ರ ಮುಕ್ತಿ. ನಾವು ಸೇರಬೇಕಾದ ಸ್ಥಳವನ್ನು ಸುಲಭವಾಗಿ ಸೇರಬಹುದು. ಇದಕ್ಕೆ ಶುಧ್ಧವಾದ ನಂಬಿಕೆ ಬೇಕು. ಆದರೆ ಈ ನಂಬಿಕೆ ಯಾವ ರೀತಿಯ ನಂಬಿಕೆ ಆಗಿರಬೇಕು ಎನ್ನುವುದನ್ನು ನೋಡೋಣ. 

ಅಂತರಿಕ್ಷಕ್ಕೆ  ಹಾರಿಬಿಡುವ ಉಪಗ್ರಹಗಳನ್ನು ಆಕಾಶಕ್ಕೆ ಕಳುಹಿಸಲು ಒಂದು" ರಾಕೆಟ್ ಲಾಂಚರ್ " ನ್ನು ಉಪಯೋಗಿಸುತ್ತಾರೆ. ಅದನ್ನು ಮುಂದಕ್ಕೆ ತಳ್ಳಲು ಒಂದು cryogenic engine ಅಥವಾ ಉಪಗ್ರಹ ಉಡಾವಣಾ ಯಂತ್ರವನ್ನು ಉಪಯೋಗಿಸಿ ರಾಕೆಟ್ಟು ಮತ್ತು ಅದರ ಮೇಲಿರುವ ಉಪಗ್ರಹ ಎಲ್ಲವನ್ನೂ ನಭೋಮಂಡಲಕ್ಕೆ ತಳ್ಳುತ್ತಾರೆ. ಹಾಗೆ ಭೂಮಿಯಿಂದ ಹೊರಟ ರಾಕೆಟ್ಟಿನ ತಲೆಯ ಮೇಲಿರುವ ಉಪಗ್ರಹ ತನ್ನ ಅಕ್ಷೆಯಲ್ಲಿ ಹೋಗಿ ಕೂಡ ಬೇಕಾದರೆ ಅದನ್ನು ಹೊತ್ತು ಹೋಗುವ ರಾಕೆಟ್ಟು ಹಿಂದಿನಿಂದ  ಸುಟ್ಟು ಕರಗಿ ಒಂದೊಂದೇ ಬಾಗವೂ ಬಿಡಿಬಿಡಿಯಾಗಿ ಬಿದ್ದುಹೋಗಿ,  ಮಾತ್ರ ಉಪಗ್ರಹವನ್ನು ಮೇಲೆ ಹೋಗಲು ಸಹಾಯ ಮಾಡುತ್ತದೆ. ಉಪಗ್ರಹವನ್ನು  ಹೊತ್ತು ಹೋಗುವ ರಾಕೆಟ್ಟು ತಾನು ಸುಟ್ಟು ಕರಕಾಗಿ ನೆಲಕ್ಕೆ ಬಿದ್ದು ಹೋದರೆ ಮಾತ್ರ ಉಪಗ್ರಹ ತನ್ನ ಗಮ್ಯವನ್ನು ಸೇರಲು ಸಾಧ್ಯ. ಆಧ್ಯಾತ್ಮ ಪ್ರಯಾಣವೂ ಸಂಪೂರ್ಣವಾಗಿ ಈ ಉಪಗ್ರಹದ ಪ್ರಯಾಣದಂತೆಯೇ ಅಲ್ಲವೇ? ಆತ್ಮವನ್ನು ಹಿಡಿದು ಹಿಂಡಿ ಹೀರಿಹಿಪ್ಪೆ ಮಾಡುವ ಅರಿಷಡ್ವರ್ಗಗಳೆಂಬ ಆರು ಮಂದಿ ವೈರಿಗಳನ್ನೂ ಸುಟ್ಟು ಹಿಂದಕ್ಕೆ ತಳ್ಳಿ ಕೆಳಕ್ಕೆ ಬೀಳಿಸಿದರೆ ಮಾತ್ರ ಆತ್ಮೋಧ್ಧಾರ  ಸಾಧ್ಯ. 

 ಈ ಅಧ್ಯಾತ್ಮಿಕ ಪ್ರಯಾಣದಲ್ಲಿ ಮಾನವ ಹಂತ ಮಂತವಾಗಿ ಬೆಳೆಯುತ್ತಾನೆ. ಒಂದು  ಜನ್ಮದಿಂದ ಇನ್ನೊಂದು ಜನ್ಮಕ್ಕೆ ಹೋಗುವಾಗ ತನ್ನ ಪೂರ್ವ ಜನ್ಮದ ಸಂಸ್ಕಾರಗಳನ್ನು ತೆಗೆದುಕೊಂಡೆ ಹೋಗುತ್ತಾನೆ ಎನ್ನುತ್ತದೆ, ಸನಾತನ ಧರ್ಮದ ಕೆಲವು ಅಂಗಗಳು. ಇದು ಹೇಗೆ ಎಂದು ನೋಡೋಣ. 
ನಾವು ಮನೆಗೆ ಅಂಗಡಿಯಿಂದ ಹುಣಸೆ ಹಣ್ಣನ್ನು ತರುತ್ತೇವೆ. ಸಾಮಾನ್ಯವಾಗಿ ಅದರೊಟ್ಟಿಗೆ ಕೆಲವು ಹುಣಸೆ ಬೀಜಗಳಿರಬಹುದು. ಅವುಗಳನ್ನು ಹೆಕ್ಕಿ ಹೊರಗೆ ಬಿಸಾಡುತ್ತೇವೆ. ಹಾಗೆ ಬಿಸಾಟ ಬೀಜದಲ್ಲಿ ಯಾವೊದೋ ಒಂದಕ್ಕೆ ನೆಲದ ಆಸರೆ ಸಿಕ್ಕು, ನೀರಿನ ಸಂಪರ್ಕವೂ ಸಿಕ್ಕಾಗ, ಅದು ಮೊಳೆಯುತ್ತದೆ. ಮೊಳೆಕೆ  ಸಸಿಯಾಗಿ, ಸಸಿ ಗಿಡವಾಗಿ, ಗಿಡ ಮರವಾಗಿ ಬೆಳೆಯುತ್ತದೆ. ಬೆಳೆದ ಮರದ ರೆಂಬೆ ಕೊಂಬೆಗಳ ವಿನ್ಯಾಸ, ಎಲೆಗಳ ಬಣ್ಣ, ಆಕಾರ, ವಾಸನೆ ಮತ್ತು ರುಚಿ, ಹೂಗಳ  ಬಣ್ಣ, ಆಕಾರ, ವಾಸನೆ ಮತ್ತು ರುಚಿ, ಕಾಯಿ ಮತ್ತು ಹಣ್ಣಿನ ಬಣ್ಣ, ಆಕಾರ, ವಾಸನೆ ಮತ್ತು ರುಚಿ ಹೀಗೆ ಎಲ್ಲಾ ಗುಣಗಳೂ ಆ ಬೀಜದಲ್ಲಿ ಅಡಕವಾಗಿತ್ತಲ್ಲವೇ? ಈ ಅಡಕವಾಗಿದ್ದ ಗುಣಗಳನ್ನೆಲ್ಲ ಆ ಬೀಜವು ತನ್ನ ತಾಯಿ ಮರದಿಂದ ಹೊತ್ತು ತಂದಿದ್ದಲ್ಲವೇ?  ಹೀಗೆ ಮನುಷ್ಯನೂ ಸಹ ತನ್ನ ಪೂರ್ವಜನ್ಮದಿಂದ ತನ್ನ ಎಲ್ಲ ಗುಣಗಳನ್ನೂ ಹೊತ್ತು ತರುತ್ತಾನೆ. ಆ ಗುಣಗಳನ್ನು ಪ್ರಸ್ತುತ ಜನ್ಮದಲ್ಲಿ ಅಭ್ಯಾಸದಿಂದ ಸಂಸ್ಕರಿಸಿಕೊಂಡು ಉತ್ತಮ ಹಂತಕ್ಕೆ ಹೋಗುವುದೇ ಅಧ್ಯಾತ್ಮಿಕ ಪ್ರಯಾಣದ ಮೂಲ ಉಧ್ಧ್ಯೇಶ. ಮೇಲೆ ಹೇಳಿದ ಬೀಜದ ದೃಷ್ಟಾಂತವನ್ನೇ ಮತ್ತೆ ನೋಡೋಣ. ಆ ಬೀಜವನ್ನು ಬಾಣಲಿಯಲ್ಲಿ ಹಾಕಿ ಹುರಿದು ಬಿಟ್ಟರೆ, ಅದರಲ್ಲಿ ಮತ್ತೆ ಚಿಗುರುವ ಗುಣಗಳು ನಶಿಸಿ ಹೋಗಿ ಮತ್ತೆ ಗಿಡವಾಗಿ ಮರವಾಗಿ ತನ್ನ ಗುಣಗಳನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಹಾಗೆಯೇ ಮನುಷ್ಯನೂ ಸಹ ತನ್ನನ್ನು ತಾನು ಸಂಸ್ಕರಿಸಿಕೊಂಡು ತನ್ನಲ್ಲಿರುವ ಅರಿಷಡ್ವರ್ಗಗಳಿಗೆ ಸಂಬಂಧಿಸಿದ ಗುಣಗಳನ್ನೆಲ್ಲ ಸುಟ್ಟರೆ, ಅಧ್ಯಾತ್ಮಿಕ ಔನ್ನತ್ಯವನ್ನು ಪಡೆಯ ಬಹುದು.  

ಭಯ ಮತ್ತು ಭಕ್ತಿ 

ಸಾದಾರಣವಾಗಿ ದೇವರನ್ನು ನಂಬುವ ಮತ್ತು ಆತ್ಮೋಧ್ಧಾರದ  ಹಾದಿಯಲ್ಲಿ ಪಯಣಿಸುವವರಲ್ಲಿ ಮೂಲಭೂತವಾದ ವ್ಯತ್ಯಾಸವಿದೆ.  ಸಾಮಾನ್ಯವಾಗಿ " ದೇವರನ್ನು ಭಯ ಭಕ್ತಿಯಿಂದ ಸೇವಿಸು" ಎಂದು  ಹೇಳುತ್ತಾರೆ. ಭಕ್ತಿಯೇನೋ ಸರಿ ಆದರೆ ಭಯವೇಕೆ? ಇದು ಒಂದು ವಿವಾದಾತ್ಮಕವಾದ ವಿಷಯ. ಇದರ ವಿವಾದಕ್ಕೆ ಇಳಿಯುವ ಮೊದಲು ಮಾನವರಿಗಿರುವ ಈ " ಭಯ "ವನ್ನು ಸ್ವಲ್ಪ ವಿಶ್ಲೇಷಣೆ ಮಾಡುವ.  ನಾವೆಲ್ಲರೂ ಈ ಜೀವನಕ್ಕೆ ಮತ್ತು ಜೀವನಕ್ಕೆ ಸಂಭಂಧಪಟ್ಟ ಎಲ್ಲಾ ವಿಷಯ ಮತ್ತು ವಸ್ತುಗಳಿಗೆ ಭಾವನಾತ್ಮಕವಾಗಿ ಅಂಟಿಕೊಂಡಿರುತ್ತೇವೆ.ಅಂದರೆ ನಮಗೇ ಸಂಭಂಧಪಟ್ಟ ಎಲ್ಲಾ ವಿಷಯ -ವಸ್ತುಗಳಿಗೂ ನಾವು ಅಂಟಿಕೊಂಡಿರುತ್ತೇವೆ.  ಈ ಅಂಟೆ ಎಲ್ಲಾ ಭಯಗಳಿಗೂ ಕಾರಣ.ನಮಗೆ ಎರಡು ರೀತಿಯ ಭಯವಿರುತ್ತದೆ. ಒಂದು, ನಮ್ಮಲ್ಲಿರುವ ವಸ್ತು-ವಿಷಯಗಳನ್ನು ನಾವು ಕಳೆದುಕೊಳ್ಳುವ ಭಯ ಅಥವಾ ನಾವು ಆಸೆಪಡುವ ವಸ್ತು-ವಿಷಯಗಳು ನಮಗೆ ಸಿಗುವುದಿಲ್ಲವೇನೋ ಎಂಬ ಭಯ. ನಾವು ಸೂಕ್ಷ್ಮವಾಗಿ ಪರಿಶೀಲಿಸಿದರೆ ಮಾನವನ ಭಯ ಈ ಎರಡರಲ್ಲಿ ಯಾವುದಾದರೂ ಒಂದು ಭಾಗಕ್ಕೆ ಸೇರಲೇಬೇಕು. ಸಾಮಾನ್ಯವಾಗಿ ಎಲ್ಲಾ ಮಾನವರೂ ಮೇಲೆ ಹೇಳಿದ ಭಯದ ಕಾರಣದಿಂದಾಗಿ " ದೇವರನ್ನು" ಮೊರೆ ಹೋಗುತ್ತಾರೆ. ತಾವು ಅಪೇಕ್ಷೆಪಟ್ಟ ಆಸೆಗಳು ಈಡೇರಲೆಂದು ಆ ಭಗವಂತನನ್ನು ಬೇಡುತ್ತಾರೆ, ಹಲುಬುತ್ತಾರೆ, ಗೋಳುತ್ತಾರೆ. 

ಮಹಾಭಾರತದಲ್ಲಿ ಅರ್ಜುನನೂ ಸಹ, ಸಾಕ್ಷಾತ್ ಭಗವಂತನೆಂದೆ ಪರಿಗಣಿಸಲ್ಪಟ್ಟ, ಈ ಪ್ರಪಂಚಕ್ಕೆ ಭಗವದ್ಗೀತೆಯೆಂಥಹ ಅದ್ಭುತ ಕಾವ್ಯವನ್ನು ಕೊಟ್ಟಂತಹ ಶ್ರೀ ಕೃಷ್ಣನೇ ಜೊತೆಯಲ್ಲಿದ್ದರೂ, ಕುರುಕ್ಷೇತ್ರದ ಯುಧ್ಧರಂಗದಲ್ಲಿ ಹೋರಾಡಲು ಸನ್ನಧ್ಧರಾಗಿ ಎಲ್ಲರೂ ನಿಂತಿರುವಾಗ  ಶೋಕಾವಿಷ್ಟನಾಗಿ  " ಅಯ್ಯೋ ಈ ಯುಧ್ಧ ಏಕೆ ಬೇಕು, ಇಷ್ಟು ಜನರ ಹತ್ಯೆಯಿಂದ ಸಿಗುವ ರಾಜ್ಯ ಭೋಗಗಳೇಕೆ" ಎಂದು ಹಲುಬಲಿಲ್ಲವೇ. ಆ ದೈವದ ಸಹವಾಸದಲ್ಲಿದ್ದರೂ ಏನನ್ನೋ ಕಳೆದುಕೊಳ್ಳುವ ಭಯದಿಂದ ಅರ್ಜುನ ಗೋಳಾಡಲಿಲ್ಲವೇ? ಅವನ ಭಯವೂ ಸಹ ಜೀವನದ ವಿಷಯ -ವಸ್ತುಗಳಿಗೆ ಅವನು ಅಂಟಿಕೊಂಡಿದ್ದರ ಕಾರಣದಿಂದಲೇ ಉಧ್ಭವವಾಗಿದ್ದಲ್ಲವೇ?. 

ಆದರೆ ಈ ದೈವ ಭಯವೆಂಬುದು ಒಳ್ಳೆಯದೇ ಅಥವಾ ಕೆಟ್ಟದೇ?  

ಒಂದು ರೀತಿಯ ಸಾಮಾಜಿಕ ವ್ಯವಸ್ತೆ ಮತ್ತು ಸಂಸ್ಕೃತಿಯ ಬೆಳವಣಿಗೆ ಮತ್ತು ಬದಲಾಗುತ್ತಾ ಹೋಗುವ ಈ ಸಂಸ್ಕೃತಿಯ ಹತ್ತು ಹಲವಾರು ಆಯಾಮಗಳಿಗೆ ಈ ಭಯವೇ ಕಾರಣವೆಂದು ನಾವು ಅರಿತಾಗ ಮಾನವನ ಸಾಮಾಜಿಕ ಮತ್ತು ಪ್ರಾಪಂಚಿಕ ಜೀವನಕ್ಕೆ ಈ ಭಯವು ಪೂರಕವಾಗೆ ಇದೆ ಎಂದರೆ ತಪ್ಪಾಗಲಾರದು. "ಹೀಗೆ ಮಾಡಿದರೆ ತಪ್ಪು, ಇದನ್ನು ಮಾಡಿದರೆ ಕೆಟ್ಟ ಕರ್ಮ ಉಂಟಾಗುತ್ತದೆ, ಇದರಿಂದ ದೇವರ ಅವಕೃಪೆಗೆ ಪಾತ್ರನಾಗುತ್ತೀಯೇ ಮತ್ತು ದಂಡನೆಗೆ ಗುರಿಯಾಗುತ್ತೀಯೇ " ಎಂಬ ಭಯವನ್ನು ನಿಮ್ಮಲ್ಲಿ ಹುಟ್ಟಿಸಿದಾಗ, ನೀವು ಸಾಮಾಜಿಕ ಕಟ್ಟಲೆಗಳನ್ನು ಮೀರದೆ ಅವುಗಳ ಚೌಕಟ್ಟಿನಲ್ಲೇ ಇದ್ದಾಗ, ಒಂದು ಸುವ್ಯವಸ್ಥಿತ ಸಮಾಜ ನಿರ್ಮಾಣವಾದಾಗ, ಈ ಭಯವು ಒಳ್ಳೆಯದನ್ನೇ ಮಾಡುವುದಲ್ಲವೇ?  ನಮಗೇ ಅರ್ಥವಾಗದ ರೀತಿಯಲ್ಲಿ ನಮ್ಮ ಬದುಕು ನಡೆಯುತ್ತಿರುವಾಗ ಮತ್ತು ನಮ್ಮ ಜೀವನದಲ್ಲಿ ನಡೆದ ಅಥವಾ ನಡೆಯಬಹುದಾದ ಘಟನೆಗಳಿಗೆ ನಾವು ಸರಿಯಾದ ಕಾರಣಗಳನ್ನು ಕಂಡುಕೊಳ್ಳಲು ಅಸಮರ್ಥರಾದಾಗ, ಅದನ್ನೇ ಮನಸ್ಸಿಗೆ ಅಂಟಿಸಿಕೊಂಡು ಯೋಚನೆ ಮಾಡೀ ಮಾಡೀ ಹಣ್ಣಾಗಿ ಹುಚ್ಚಾಗುವುದರ ಬದಲು, ಅದಕ್ಕೆಲ್ಲ ಆ ದೈವವೇ ಕಾರಣವೆಂದುಕೊಂಡು ನಮ್ಮ ನಮ್ಮ ಮನಸ್ಸುಗಳನ್ನು ತಹಬಂದಿಗೆ ತಂದುಕೊಂಡು ಸಮಾದಾನ ಚಿತ್ತರಾಗುವುದಾದರೆ ತಪ್ಪೇನು? ಈ ರೀತಿಯಲ್ಲಿ ಈ " ದೈವ ಭಯವು"  ನಮಗೇ ಒಳ್ಳೆಯದನ್ನೇ ಮಾಡಿದೆ ಅಲ್ಲವೇ? ಈ ದೈವ ಭಯವು ಸಾಮಾಜಿಕ ವ್ಯವಸ್ತೆಯನ್ನು ಸುಸ್ಥಿತಿಯಲ್ಲಿಡಲು ಸಹಾಯ ಮಾಡಿದೆಯಂದರೆ ತಪ್ಪಾಗಲಾರದು. ಹೀಗೆ ನಮ್ಮ ಹತೋಟಿಯಲ್ಲಿರದ ನಮ್ಮ ಕೆಲಸ ಕಾರ್ಯಗಳು ಮತ್ತು ಅದರಿಂದ ಬರುವ ಫಲಾಫಲಗಳು ಏನಾಗುವುದೋ ಅಥವಾ ಹೇಗಾಗುವುದೋ ಎಂಬ ಭಯವಿರುವ ಎಲ್ಲರೂ "ಮಂಗನ ಮರಿ ಬೀಳುವ ಭಯದಿಂದ ತನ್ನ ತಾಯಿಗೆ ಹೇಗೆ ಅಂಟಿಕೊಳ್ಳುವುದೋ"  ಹಾಗೆ ಈ ದೈವದ ಮೊರೆ ಹೋಗುತ್ತಾರೆ. 

ಆದರೆ ಈ ಭಯವು ನಮ್ಮ ಆಧ್ಯಾತ್ಮಿಕ ಉನ್ನತಿಗೆ ಮಾರಕವಾಗಿರುತ್ತದೆ. ಈ ಭಯವು ಸುಖ-ದು:ಖಗಳನ್ನು ಸಮಭಾವದಿಂದ ತೆಗೆದುಕೊಳ್ಳಲು ಬಿಡುವುದಿಲ್ಲ. ಆಧ್ಯಾತ್ಮಿಕ ಉನ್ನತಿಗೆ ಭಯಕ್ಕಿಂತ ಭಕ್ತಿಯೇ ಮುಖ್ಯ. ಭಯವು ಭಕ್ತಿಯಾಗಿ ಮಾರ್ಪಾಡಾಗುವುದೇ ಆಧ್ಯಾತ್ಮಿಕ  ಪಯಣದ ಮೂಲ ಉಧ್ಧೇಶ. ಆದರೆ ಇದು ಒಂದು  ನಿಧಾನ ಪ್ರಕ್ರಿಯೆ. ಮುಕ್ತಿ ಸಿಗುವವರೆಗೆ ಜನ್ಮ ಜನ್ಮಾಂತರದಲ್ಲಿ ಸಂಸ್ಕಾರವಾಗಿ ಹಂತ ಹಂತವಾಗಿ ಮೇಲೇರುವುದೇ ಆಧ್ಯಾತ್ಮಿಕ ಪಯಣದ ರೀತಿ.   


ಇಲ್ಲಿ ಒಂದು ಉದಾಹರಣೆ ಅಗತ್ಯ. ದೇಹ ಸಂಬಂಧವನ್ನು ಹೊಂದಿದ ಎಲ್ಲಾ ಜೀವಾತ್ಮಗಳೂ ತನ್ನ ಮೂಲವಾದ ಪರಮಾತ್ಮನನ್ನು ಸೇರುವುದೇ ಆಧ್ಯಾತ್ಮಿಕ  ಪಯಣದ ಉಧ್ಧೇಶ . ಸೂರ್ಯನ ಶಾಖದಿಂದ ಕಡಲ ನೀರು ಆವಿಯಾಗಿ ಆಕಾಶ ಸೇರಿ ಮೋಡವಾಗಿ, ಸತ್ವದ( ಮೋಡದ ಸತ್ವವೆಂದರೆ ನೀರು ಎಂಬ ಅರ್ಥದಲ್ಲಿ) ಭಾರವನ್ನು ಹೆಚ್ಚಿಸಿಕೊಂಡು ಮಳೆಯಾಗಿ ಧರೆಗಿಳಿದು, ನದಿಯಾಗಿ ಹರಿದು ಮತ್ತೆ ಕಡಲನ್ನೇ ಸೇರುವ ಆಸೆಯಿಂದ  ಕಡಲ ಮುಖಮಾಡಿ ಹರಿದು ಕಡಲನ್ನೇ ಸೇರುವ ಆ ನೀರ ಹನಿಯಂತೆ, ಪ್ರತಿಯೊಂದು ಜೀವಾತ್ಮನೂ ತನ್ನ ಮೂಲವಾದ ಪರಮಾತ್ಮನನ್ನು ಸೇರಲು ಮಾಡುವ ಪ್ರಯತ್ನವೇ ಆಧ್ಯಾತ್ಮಿಕ  ಪ್ರಯಾಣದ ಗುರಿ. 

ಮೇಲೆ ಹೇಳಿದಂತೆ ಎಲ್ಲಾ ಜೀವಾತ್ಮನೂ ಪರಮಾತ್ಮವನ್ನು ಸೇರುವ ಪಯಣದ ಯಾವುದಾದರೂ ಒಂದು ಹಂತದಲ್ಲಿ  ಇದ್ದೇ ಇರುತ್ತಾನಾದುದರಿಂದ , ಯಾರನ್ನೂ ಹೀಗೆಳೆಯಲಾಗುವುದಿಲ್ಲ. ಸಾಧ್ಯವಾದರೆ ಮೇಲಿರುವವರು ಕೆಳಗಿರುವವರನ್ನು ಮೇಲೆತ್ತಲು ಪ್ರಯತ್ನ ಪಡಬೇಕು.(ಪೈಮರಿ ಶಾಲೆಯ ಹಂತ ದಿಂದಲೇ ಸ್ನಾತಕೋತ್ತರ ಪದವಿಯವರೆಗೆ ಬಂದವನು, ಪ್ರೈಮರಿ ಶಾಲೆಯ ಮಗುವನ್ನು ಕಂಡು ಹೀಗೆಳೆದರೆ ಅದು ಮೂರ್ಖತನವಲ್ಲದೆ ಮತ್ತೇನು ? ಆಧ್ಯಾತ್ಮಿಕವಾಗಿ ಎಲ್ಲರೂ ಬೆಳೆಯಬೇಕು ಎಂದು ಎಲ್ಲರೂ ಅದಕ್ಕೆ ಅವಶ್ಯವಾದ ಪ್ರಯತ್ನದ ಪ್ರಯಾಣವನ್ನು ಮಾಡಿ ಆದ್ಯಾತ್ಮಿಕ ಔನ್ನತ್ತ್ಯವನ್ನು ಪಡೆಯಬೇಕು. 

ಸರ್ವೇ  ಜನಾ: ಸುಜನಾ  ಭವಂತು 

ಸರ್ವೇ ಸುಜನಾಃ  ಸುಖಿನ: ಸಂತು 

ರವಿ ತಿರುಮಲೈ 
14 .5.2011
96322 46255

Sunday, February 12, 2012

ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು - ೪


     ಋಗ್ವೇದ ಹೇಳುತ್ತಲಿದೆ: 
ನಾನಾನಂ ವಾ ನೋ ಧಿಯೋ ವಿ ವ್ರತಾನಿ ಜನಾನಾಮ್| (ಋಕ್.೯.೧೧೨.೧)
     [ನಃ ಜನಾನಾಮ್] ಮಾನವರಾದ ನಮ್ಮ [ಧಿಯಃ] ಬುದ್ಧಿಗಳು [ನಾನಾನಮ್] ನಾನಾ ಬಗೆಯವು. [ವಾ ಉ] ಮತ್ತು ಅದೇ ರೀತಿ, [ವ್ರತಾನಿ] ಸಂಕಲ್ಪಗಳೂ ಕೂಡ, [ವಿ] ವಿವಿಧವಾದವು. ಈ ಮೌಲಿಕ ಸತ್ಯವನ್ನು ಗುರುತಿಸಿ, ಪ್ರತಿಯೊಬ್ಬನೂ ತನ್ನದೇ ಆದ ಮಾರ್ಗ ಹಿಡಿದು, ಮಾನವಸಮಾಜಕ್ಕೂ ಸೇವೆ ಸಲ್ಲಿಸುತ್ತಾ, ತನ್ನ ವೈಯಕ್ತಿಕ ಅಭಿವೃದ್ಧಿಯನ್ನೂ ಸಾಧಿಸಿಕೊಳ್ಳುವುದಕ್ಕಾಗಿ ಸೌಲಭ್ಯ ನೀಡುವ ಉದ್ದೇಶದಿಂದ, ವೇದಗಳು ಪರಮ ವೈಜ್ಞಾನಿಕವಾದ ವರ್ಣವ್ಯವಸ್ಥೆಯ ನಿರೂಪಣವನ್ನು ಮಾಡುತ್ತವೆ. ಪಾಠಕರು ಒಂದು ಅಂಶವನ್ನು ಸ್ಪಷ್ಟವಾಗಿ ಮನಸ್ಸಿನಲ್ಲಿ ಅಂಕಿತಗೊಳಿಸಿಕೊಳ್ಳಬೇಕು. ಹುಟ್ಟಿನಿಂದ ಬರುವುದೆಂದು ಭಾವಿಸಲ್ಪಡುವ, ಯಾವುದೋ ಸುದೂರ ಅತೀತದಲ್ಲಿ ವರ್ಣವ್ಯವಸ್ಥೆಗೆ ಕುರೂಪವನ್ನಿತ್ತು ಸ್ವಾರ್ಥವನ್ನೇ ಸರ್ವಸ್ವವೆಂದು ಭಾವಿಸಿ, ಪ್ರತಿಯೊಬ್ಬ ವ್ಯಕ್ತಿಯ ಘನತೆ ಗಾಂಭೀರ್ಯಗಳಿಗೆ ಗಮನ ನೀಡದೆ, ಮೇಲು-ಕೀಳೆಂಬ ಹೊಲಸು ಭಾವನೆಗೆ ಆಶ್ರಯವಿತ್ತು ಆಚರಿಸಲ್ಪಡುವ ಇಂದಿನ ಜಾತಿಪದ್ಧತಿಗೂ, ಪರಮ ವೈಜ್ಞಾನಿಕವೂ, ಸರ್ವಥಾ ಬುದ್ಧಿಸಂಗತವೂ, ಸರ್ವೋತ್ಕರ್ಷಸಾಧಕವೂ ಆದ ಪವಿತ್ರ ವರ್ಣವ್ಯವಸ್ಥೆಗೂ ಯಾವ ಸಂಬಂಧವೂ ಇಲ್ಲ. 
***********************

Saturday, February 11, 2012

ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು - ೩


     ಎಷ್ಟಾದರೂ ವೇದ ಭ್ರಾಂತಿಪೂರ್ಣವಾದ ಪೌರುಷೇಯ ಕೃತಿಯಲ್ಲ. ಅದು ಸರ್ವಜ್ಞ ಭಗವದುಕ್ತ. ಆದುದರಿಂದ, ಪರಮ ವೈಜ್ಞಾನಿಕ. ಮಾನವರೆಲ್ಲರನ್ನೂ ಸಮಾನ ದೃಷ್ಟಿಯಿಂದಲೇ ನೋಡಬೇಕೆಂಬುದು ಸತ್ಯ ಸಿದ್ಧಾಂತ. ಆದರೆ ಮಾನವರು ಯಾಂತ್ರೀಕೃತರಲ್ಲ, ಎಲ್ಲಾ ವಿಷಯಗಳಲ್ಲಿಯೂ ಸರ್ವಥಾ ಸಮಾನವಾಗಿರುವುದಕ್ಕೆ. ಒಂದು ಯಂತ್ರಾಗಾರದಿಂದ ಒಂದೇ ರೂಪದ, ಒಂದೇ ತೂಕದ, ಒಂದೇ ಬಣ್ಣದ, ಒಂದೇ ಶಕ್ತಿಯ ಸಹಸ್ರಾರು ಮೋಟಾರುಗಳನ್ನು ನಿರ್ಮಿಸಬಹುದು. ಆದರೆ ಅತ್ಯಂತ ಸಮರ್ಥನಾದ ಆಚಾರ್ಯನೂ ಕೂಡ ಒಂದೇ ಶಕ್ತಿಯ, ಒಂದೇ ಅಭಿರುಚಿಯ, ಒಂದೇ ಭಾವನೆಯ ಸಾವಿರ, ಏಕೆ, ನೂರು ಶಿಷ್ಯರನ್ನೂ ತಯಾರು ಮಾಡಲಾರನು. ಅದಕ್ಕೆ ಕಾರಣವೂ ಇದೆ. ಪ್ರತಿಯೊಬ್ಬ ಜೀವಾತ್ಮನೂ ತನ್ನದೇ ಆದ ಸಂಸ್ಕಾರಗಳನ್ನು ಹೊತ್ತು, ಒಂದು ಜನ್ಮದಿಂದ ಮತ್ತೊಂದು ಜನ್ಮಕ್ಕೆ ಬರುತ್ತಾನೆ. ಪರಿಚ್ಛಿನ್ನ ಚೇತನ ಎಂಬ ಅಧ್ಯಾಯದಲ್ಲಿ ಪಾಠಕರು ಈ ವಿಷಯವನ್ನು ಓದಿದ್ದಾರೆ. ಋಗ್ವೇದ ಹೇಳುತ್ತಲಿದೆ:-


ಆದಹ ಸ್ವಧಾಮನು ಪುನರ್ಗರ್ಭತ್ವಮೇರಿರೇ |
ದಧಾನಾ ನಾಮ ಯಜ್ಞಿಯಮ್ || (ಋಕ್. ೧.೬.೪.)


    ಈ ಜೀವಾತ್ಮನು [ಯಜ್ಞಿಯಮ್ ನಾಮ ದಧಾನಾಃ] ಆದರಯೋಗ್ಯ ಪದವನ್ನು ಪಡೆಯುತ್ತಾ [ಆತ್ ಅಹ] ನಿರಂತರ ಕ್ರಮದಲ್ಲಿ [ಸ್ವಧಾಂ ಅನು] ತಮ್ಮ ಧಾರಣಶಕ್ತಿಗಳಿಗೆ ಅಂದರೆ ಸಂಸ್ಕಾರಗಳ ದೃಷ್ಟಿಯಿಂದ ಯೋಗ್ಯತೆಗೆ ಅನುಸಾರವಾಗಿ [ಪುನಃ ಗರ್ಭತ್ವಂ ಏರಿರೇ] ಮರಳಿ ಗರ್ಭತ್ವವನ್ನು - ಮಾತೃಯೋನಿಯಲ್ಲಿನ ಇರುವಿಕೆಯನ್ನು ಪಡೆಯುತ್ತಾರೆ. ಮಾನವಯೋನಿ ಏನೋ ಒಂದೇ, ಮಾನವತ್ವ ಸಾಮಾನ್ಯ ಧರ್ಮವೂ ಅಹುದು. ಈ ದೃಷ್ಟಿಯಿಂದ ಮಾನವರೆಲ್ಲಾ ಸಮಾನರೇ ಸರಿ. ಆದರೆ ಸಂಸ್ಕಾರಜನಿತವಾದ ಸಾಮರ್ಥ್ಯಗಳಲ್ಲಿ ಮತ್ತು ಒಲವುಗಳಲ್ಲಿ ಸಹಜವಾದ ಭೇದವಿರುತ್ತದೆ. ಅದನ್ನು ಗಮನಿಸಿ, ಪ್ರತಿಯೊಬ್ಬನಿಗೂ ತನ್ನದೇ ಆದ ರೀತಿಯಲ್ಲಿ ಏಳಿಗೆ ಸಾಧಿಸುವ ಅನುಕೂಲವನ್ನು ಕಲ್ಪಿಸಿಕೊಡುವುದೇ ಮನೋವಿಜ್ಞಾನಕ್ಕನುಗುಣವಾದ ಕ್ರಮ.
*************************

Thursday, February 9, 2012

ಪರಮಾತ್ಮ ಸ್ವರೂಪ

     ಶ್ರೀ ರವಿ ತಿರುಮಲೈರವರು ದಿನಾಂಕ 05-02-2012ರಂದು ಬೆಂಗಳೂರಿನಲ್ಲಿ ನಡೆದ ಹರಿಹರಪುರ ಶ್ರೀಧರರ ಮಗನ ವಿವಾಹ ನಿಶ್ಚಿತಾರ್ಥದ ಸಂದರ್ಭದಲ್ಲಿ ಪರಿಚಯವಾದ ಸಹೃದಯಿ. 'ದಾಸಾನುದಾಸ' ಎಂಬ ಅವರ ತಾಣದಲ್ಲಿ ಅನೇಕ ಧಾರ್ಮಿಕ, ವೈಚಾರಿಕ ಬರಹಗಳನ್ನು ಓದಬಹುದು. ಪರಮಾತ್ಮನ ಕುರಿತು ಅವರ ಒಂದು ಲೇಖನವನ್ನು ಮಿಂಚಂಚೆ ಮೂಲಕ ಕಳಿಸಿರುವುದನ್ನು ಇಲ್ಲಿ ಪ್ರಕಟಿಸಿದೆ. ವಾಚಕರು ಈ ವಿಚಾರದಲ್ಲಿ ಜಿಜ್ಞಾಸೆ ನಡೆಸಬಹುದಾಗಿದೆ.
-ಕ.ವೆಂ.ನಾಗರಾಜ್.
..........................................................................................
ಆವರವರ ಭಾವಕ್ಕೆ ಅವರವರ ಭಕುತಿಗೆ 
ಅವರವರ ತೆರನಾಗಿ ಇರುತಿಹನು ಶಿವಯೋಗಿ
ಹರನ ಭಕ್ತರಿಗೆ ಹರ ಹರಿಯ ಭಕ್ತರಿಗೆ ಹರಿ
ನರರೇನು ಭಾವಿಸುವರದರಂತೆ ಕಾಣುವನು  

     ಎಂತಹ ಸುಂದರ ಕಲ್ಪನೆ.ವೀರಶೈವ ಪಂಥದ ಯಾರೋ ಶರಣರು ಬರೆದ ಪಂಕ್ತಿಗಳು.ಇದೇ ರೀತಿಯ ಕಲ್ಪನೆಯನ್ನು ಬಹಳ ಜನ ಸಂತರು ಬೇರೆ ಬೇರೆ ಸಮಯಗಳಲ್ಲಿ ಅನುಭವಿಸಿದ್ದಾರೆ. ಉದಾಹರಣೆಗೆ ತೆಲುಗಿನ  ಶ್ರೇಷ್ಠ ಕವಿ ಭಕ್ತ ವರೇಣ್ಯ ಶ್ರೀ ತಾಳ್ಳಪಾಕ ಅನ್ನಮಾಚಾರ್ಯರು  " ಎಂತ ಮಾತ್ರಮುನ ಎವ್ವರು ತಲಚಿನ ಅಂತಮಾತ್ರಮೆ ನೀವು. ಅಂತರಾಂತರಮು ವೆತಕಿ ಚೂಡ ಪಿಂಡಂತೆ ನಿಪ್ಪಟಿ ಅನ್ನಟ್ಟು "ಎಂದು ಹೇಳುತ್ತಾ ಭಗವಂತನನ್ನು,  "ಹಿಟ್ಟಿನ ಗಾತ್ರದ೦ತೆ ನಿಪ್ಪಟ್ಟು" ಇದ್ದಹಾಗೆ, ಮಾನವ ಮನಸ್ಸಿನ  ಕಲ್ಪನೆ ಹೇಗಿರುತ್ತದೋ ಅವರಿಗೆ ಹಾಗೆ ದೇವರು ಕಾಣುವನೆಂದು ಭಾವಿಸುತ್ತಾರೆ.ಹಾಗೆ ಆ ದೇವರು ಎಂಬ ವಸ್ತು  ಮಾನವರು ಏನೆಂದು ನೆನೆದರೆ ಅಷ್ಟು.
     ಮಾನವನ ಮಷ್ಟಿಷ್ಕದಲ್ಲಿ ಆಲೋಚನೆ ಮಾಡುವ ಪ್ರವೃತ್ತಿ ಬಂದಾಗಿನಿಂದ,ಈ ಪರಮಾತ್ಮ ನಾರು ?ಇವನ ಸ್ವರೂಪವೇನು ?ಎಂಬ ಕುತೂಹಲ ಕಾಡಿದೆ.ತಮಗೆ ಕಾಣದ ಆದರೂ ತಮ್ಮನ್ನು ರಕ್ಷಿಸುವ ಯಾವುದೋ ಒಂದು ಶಕ್ತಿಯೇ ಆ ದೇವರು ಎಂಬ ವಿಚಾರ ಮನುಷ್ಯನ ಮನಸ್ಸಿನಲ್ಲಿ ಮೂಡಿದುದು ಹೀಗಿರಬಹುದು.
ಬಹಳ ಬಹಳ ಹಿಂದೆ ಮನುಷ್ಯ ಇನ್ನೂ ಕಾಡಿನಲ್ಲಿ ಅಲೆಮಾರಿ ಜೀವನ ಮಾಡುತ್ತಿದ್ದಾಗ, ಏನೋ ಸಿಕ್ಕ ಆಹಾರವನ್ನು ತಿನ್ನುವುದು, ಕೈಗೆ ಸಿಕ್ಕ ಹಣ್ಣು, ಗೆಡ್ಡೆ, ಗೆಣಸು, ಪ್ರಾಣಿಗಳ ಮಾಂಸಗಳನ್ನು  ತಿಂದು ಸ್ಥಳದಿಂದ ಸ್ಥಳಕ್ಕೆ ಅಲೆಯುತ್ತಾ,ಬೇರೆ ದುಷ್ಟ ಪ್ರಾಣಿಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದ್ದ.ಆಗ ತಾನೇ ಅಲ್ಪ ಸ್ವಲ್ಪ ವಿಚಾರ ಅವನ ಮನಸ್ಸಿನಲ್ಲಿ ಮೂಡುತ್ತಿರುವಾಗ ಅವನಲ್ಲಿ ಬಂದ ಯೋಚನೆ ಹೀಗಿದ್ದಿರಬಹುದು.ದಿನದ ಯಾವೊದೋ ಸಮಯದಲ್ಲಿ ಆಕಾಶದಲ್ಲಿ ಯಾವುದೋ ಒಂದು ವಸ್ತು ಬರುತ್ತದೆ.ಅದು ಬಂದಾಗ ತನಗೆ ಎಲ್ಲ ವಸ್ತುಗಳೂ ನಿಚ್ಚಳವಾಗಿ ಕಾಣುತ್ತದೆ.ಆಗ ತನ್ನ ಮತ್ತು ತನ್ನ ಸಂಗಡಿಗರ ರಕ್ಷಣೆಯನ್ನು ಸಮರ್ಪಕವಾಗಿ ಮಾಡಿಕೊಳ್ಳಬಹುದು.ಆದರೆ ಯಾವುದೋ ಸಮಯಕ್ಕೆ,ಆ ವಸ್ತು ಕಾಣೆಯಾದಾಗ ಕಣ್ಣು ಕತ್ತಲಿಟ್ಟು, ಏನೂ ಕಾಣದಾದಾಗ,ದುಷ್ಟ ಕಾಡುಪ್ರಾಣಿಗಳಿಂದ ತನ್ನನ್ನು ತಾನು ರಕ್ಷಿಸಿ ಕೊಳ್ಳಲಾಗುತ್ತಿರಲ್ಲಿಲ್ಲ.ಅವನು ಹೆದರುತ್ತಾ ಹೆದರುತ್ತಾ ಬದುಕುತ್ತಿದ್ದ. ಹೆದರಿದಾಗ, ಸ್ವ ರಕ್ಷಣೆಗೆ ನಾವು ಯಾರನ್ನಾದರೂ ಅವಲಂಬಿಸುವಂತೆ, ತನ್ನ ರಕ್ಷಣೆಗೆ ಸಹಾಯಮಾಡುವ ಆ "ವಸ್ತು"ವನ್ನು ತನ್ನ ಆಪ್ತನೆಂದು,ರಕ್ಷಕನೆಂದು,ದೇವರೆಂದು ನಂಬಿ ಅವಲಂಬಿಸಿರಬಹುದು.ಅದೇ ರೀತಿ ಮೇಲಿಂದ ಬರುವ ಮಳೆ, ಮಳೆಯಿಂದಾಗುವ ಬೆಳೆ, ಬೆಳೆಯಿಂದ  ಸಿಗುವ ಆಹಾರ, ಹೀಗೆ ತನಗೆ ಉಪಯೋಗಕ್ಕೆ ಬರುವ ಎಲ್ಲಾ ವಸ್ತುಗಳನ್ನೂ ದೈವವೆಂದು ಭಾವಿಸುವ,ಆರಾದಿಸುವ, ಪೂಜಿಸುವ ಮತ್ತು ಅವಲಂಬಿಸುವ ಪ್ರವೃತ್ತಿ ಅವನಲ್ಲಿ ಬೆಳೆಯುತ್ತಾ ಹೋಗಿರಬಹುದು.
ಮಾನವನ ವಿಚಾರ ಶಕ್ತಿ ಬೆಳೆಯುತ್ತಾ ಹೋದಂತೆ ಅವನ ಕಲ್ಪನೆಯೂ ಬೆಳೆಯುತ್ತಾ ಹೋಯಿತು. ಯಾರ ಕಲ್ಪನೆ ಪ್ರಬಲವಾಗಿತ್ತೋ ಅವರ ಪ್ರಭಾವ ಸುತ್ತಲಿನ ಜನಸಮೂಹದಮೇಲೆ ಘಾಡವಾಗಿ ಆಯಿತು.ಅವರನ್ನು ಮತ್ತು ಅವರ ವಿಚಾರಧಾರೆಯನ್ನು ಮಿಕ್ಕೆಲ್ಲರೂ ನಂಬ ತೊಡಗಿದರು.ಅವರನ್ನೇ ಹಿಂಬಾಲಿಸುತ್ತಾ ಹೋದರು.ಹೀಗೆ ಬೆಳೆಯುತ್ತಾ ಹೋದ ಆ ದೇವರ ಕಲ್ಪನೆ ಹತ್ತು ಹಲವಾರು ಆಯಾಮಗಳನ್ನು ಸೃಷ್ಟಿಸಿಕೊಂಡು ಇಂದಿಗೂ ಬದಲಾಗುತ್ತಲೇ ಇದೆ. ಹೊಸ ಹೊಸ ಕಲ್ಪನೆಗಳು ಬೆಳೆಯುತ್ತಾ, ಹಳೆಯ ಮತ್ತು ಬಲಹೀನ ಕಲ್ಪನೆಗಳು ಮತ್ತು ಅವುಗಳ ಮೇಲಿನ ನಂಬಿಕೆ ಅಳಿಸಿಹೊಗುತ್ತಾ ಹೋದವು.ಸತ್ಯಕ್ಕೆ ಹತ್ತಿರವಾದ ವಿಶ್ಲೇಷಣೆಗಳು ಮತ್ತು ವ್ಯಾಖ್ಯಾನಗಳು ಸ್ಥಿರವಾಗಿ ನಿಂತು ಇಂದಿಗೂ ಪ್ರಚಾರದಲ್ಲಿವೆ. ಈ  ಗುಂಪಿಗೆ ಸೇರುವುದೇ ವೇದೋಪನಿಷತ್ತುಗಳು ಮತ್ತು ಅವುಗಳನ್ನುಅವಲಂಬಿಸಿದ ಕಾವ್ಯ ಪುರಾಣ ಗಳು.ಕಾಲಾನುಕಾಲಕ್ಕೆ ಈ ವೇದ ಉಪನಿಷತ್ತುಗಳನ್ನೂ ಮತ್ತು ಅದರ ಘಹನವಾದ ಅರ್ಥವನ್ನೂ ಬೇರೆ ಬೇರೆ ರೀತಿಯಲ್ಲಿ ವಿಶ್ಲೇಷಿಸುತ್ತಾ ಹೋದಂತೆ ಬೇರೆ ಬೇರೆ ಪಂಥಗಳೂ,ಮತಗಳು ಪಂಗಡಗಳೂ ಹುಟ್ಟಿಕೊಂಡವು.ತಮ್ಮ ಅಭಿಮತವೇ ಉತ್ಕೃಷ್ಟವೆನ್ನುವ ಅಭಿಪ್ರಾಯ ಪ್ರಾಯಶಃ ಎಲ್ಲಾ ಪಂಗಡದವರಿಗೂ ಇತ್ತು. 
ಆದರೆ ಬೇರೆ ಬೇರೆ ವಿಚಾರಧಾರೆಗಳು ಸೃಷ್ಟಿಯಾದಂತೆ ಬೇರೆ ಬೇರೆ ಧರ್ಮಗಳೂ ಮತ್ತು ಬೇರೆ ಬೇರೆ ಜಾತಿಗಳೂ ಹುಟ್ಟಿಕೊಳ್ಳತೊಡಗಿದವು.ಬೇರೆಬೇರೆ ಪಂಗಡಗಳು ತಮ್ಮ ಮತವನ್ನು ತೀವ್ರವಾಗಿ ಪ್ರಚಾರಮಾಡಲು ಮೊದಲಾದವು.ಪಂಗಡ ಪಂಗಡಗಳಲ್ಲೇ ಪರಮಾತ್ಮನ ವಿಚಾರವಾಗಿ ಪೈಪೋಟಿ, ವಾದ, ವಿವಾದ, ಜಗಳ ಯುಧ್ಧಗಳು ಮೊದಲಾದವು.
ಪಾಪ ದೇವರು ತನ್ನ ಸ್ವರೂಪವನ್ನು ಇಟ್ಟಕೊಂಡು ತನ್ನಷ್ಟಕ್ಕೆ ತಾನು ಹಾಯಾಗಿ ಇದ್ದರೂ ಅವನಲ್ಲಿ ಇಲ್ಲದ ಭೇಧವನ್ನು ಕುರುತು ತಮ್ಮ ಕಲ್ಪನೆಗನುಸಾರವಾಗಿ ಚರ್ಚೆ,ವಾದ ಮತ್ತು ವಿವಾದ ವಿಕೋಪಕ್ಕೆ ಹೋಗಿ, ಇನ್ನೂ ಹೆಚ್ಚು ಹೆಚ್ಚು ಮತಗಳು, ಆ ಮತಗಳನ್ನು ಅವಲಂಬಿಸುವ ಪಂಗಡಗಳು, ಆ ಪಂಗಡಗಳ ಮತ್ತು ಒಳ ಪಂಗಡಗಳ ಮಧ್ಯೆ ಛಲ ಮತ್ತು ಯುಧ್ಧ ನಡೆಯುತ್ತಲೇ ಬ೦ದಿದೆ.
ಆದರೆ ಕೋಟ್ಯಾಂತರ ಜನರ ನಂಬಿಕೆಗೆ ಪಾತ್ರನಾದ,ಈ ಪರಮಾತ್ಮನಾರು.ಈ ಪರಮಾತ್ಮನನ್ನು ನಂಬಬೇಕೆ ಅಥವಾ ಪೂಜಿಸಬೇಕೆ ಅಥವಾ ಬೇಡವೇ,ಎಂಬ ಪ್ರಶ್ನೆಗಳು ಪ್ರತಿಯೊಬ್ಬನ ಹೃದಯದಲ್ಲೂ ಪ್ರಮಾಣ ಭೇಧವಿದ್ದರೂ,ಬಂದೆ ಬಂದಿರುತ್ತದೆ.
ನಮ್ಮ ಜೀವನದಲ್ಲಿ ನಡೆದ,ನಡೆಯುತ್ತಿರುವ ಮತ್ತು ನಡೆಯಬಹುದಾದ ಘಟನೆಗಳಿಗೆ ನಾವು ಸರಿಯಾದ ಕಾರಣವನ್ನು ಕೊಡಲು ಅಸಾಧ್ಯ.ಏಕೆಂದರೆ ಈ ಸೃಷ್ಟಿಯ ಎಲ್ಲ ರಹಸ್ಯಗಳನ್ನೂ ಮಾನವ ಇನ್ನೂ ಭೇದಿಸಿಲ್ಲ.ವಿಜ್ಞಾನಿಗಳು ಅಲ್ಪ ಪ್ರಮಾಣದಲ್ಲಿ ಈ ಸೃಷ್ಟಿಯ ರಹಸ್ಯಗಳನ್ನು ಛೇದಿಸುವ ಪ್ರಯತ್ನವನ್ನು ಮಾಡಿದ್ದರೂ ಅಘಾದವಾದ ವಿಶ್ವದ ಮತ್ತು ಸೃಷ್ಟಿಯ ರಹಸ್ಯಗಳು ಇನ್ನೂ ನಿಘೂಡ ವಾಗಿಯೇ ಇವೆ.ನಿರಂತರ ಬದಲಾಗುವ ಈ ಪ್ರಪಂಚದಲ್ಲಿ ಹೊಸ ಹೊಸ ರಹಸ್ಯಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ.ಹಾಗಾಗಿ ಯಾವುದೇ ಕಾಲಕ್ಕೂ ಸೃಷ್ಟಿಯ ಎಲ್ಲಾ ರಹಸ್ಯಗಳನ್ನೂ ಮತ್ತು  ನಿಘೂಡತೆಗಳನ್ನೂ  ಛೇದಿಸಲು ಎಂದಿಗೂ ಸಾಧ್ಯವೇ ಇಲ್ಲ ಎಂದು ಹೇಳಬಹುದು.
     ಹಾಗಾಗಿ ನಮ್ಮ ತಿಳುವಳಿಕೆಗೆ ನಿಲುಕದ ಮತ್ತು ನಮ್ಮ ಜೀವನದಲ್ಲಿ ನಡೆದ ಮತ್ತು ನಡೆಯಬಹುದಾದ ಘಟನೆಗಳ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳದೆ,ಅವುಗಳನ್ನೆಲ್ಲ ಆ ಕಾಣದ ದೇವನಿಗೆ ಆರೋಪ ಮಾಡಿ ನಾವು ನೆಮ್ಮದಿಯಿಂದ ಇರಬೇಕಷ್ಟೇ.ನಂಬ ಬೇಕು ಮತ್ತು ನಂಬಲೇಬೇಕು. ಬೇರೆ ದಾರಿ ಇಲ್ಲ. ಆದರೆ ಏನನ್ನು ನಂಬುವುದು? ಹಾಗೆ ಮತ್ತೊಂದು ರೀತಿಯಲ್ಲಿ ಯೋಚಿಸಿ, ಈ ಸೃಷ್ಟಿಯಲ್ಲಿ ನಾನು ಒಂದಂಶ.ಎಲ್ಲ ಪ್ರಾಣಿಗಳಂತೆಯೇ ನಾನೂ ಇದ್ದೇನೆ. ಎಲ್ಲವೂ ವ್ಯವಸ್ತಿತ ರೀತಿಯಲ್ಲಿ ನಡೆಯುತ್ತಿದೆ. ಯಾವುದರಿಂದ ನಡೆಯುತ್ತದೆ, ಏಕೆ ನಡೆಯುತ್ತದೆ ಹೇಗೆ ನಡೆಯುತ್ತದೆ ಎಂದು ಯೋಚನೆ ಮಾಡದೆ,ನಾನು ಸುಮ್ಮನೆ ಜೀವನ ಮಾಡಿದರೆ ಸಾಲದೇ ಎಂದರೆ,ಹೌದು ಸಾಕು.ಆದರೆ ದೇವರಿದ್ದಾನೆ ಎಂದು ನಂಬುವುದರಿಂದ ಇಡೀ ಪ್ರಪಂಚದ ಸಾಮಾಜಿಕ ವ್ಯವಸ್ತೆಯೇ ಒಂದು ಸುವ್ಯವಸ್ತೆಗೆ ಬಂದಿದೆಯಂದರೆ,ಆ ದೇವರನ್ನು ನಂಬಿದರೆ ತಪ್ಪೇನು.ನಾನು ಎಂಬ ಅಹಂಕಾರ ಒಂದು ವ್ಯಕ್ತಿಯನ್ನು ಸತ್ಪ್ರಜೆಯಾಗಿ ರೂಪಿಸುವಲ್ಲಿ ಭಾದಕವಾಗಿರುತ್ತದೆ.ವ್ಯವಸ್ಥಿತರೀತಿಯಲ್ಲಿ ಒಂದು ಸಮಾಜದ ಬೆಳವಣಿಗೆಗೆ ಸಹಕಾರ ಮತ್ತು ಸಹಬಾಳ್ವೆ ಅಗತ್ಯ.ಹಾಗೆ ಹುಟ್ಟಿಕೊಂಡ ಈ ದೇವರ ನಂಬಿಕೆಯಿಂದ ಪ್ರಪಂಚದ ಎಲ್ಲ ಸಮಾಜಗಳೂ ವ್ಯವಸ್ಥಿತ ರೀತಿಯಲ್ಲಿ ರೂಪುಗೊಂಡಿದೆ ಎಂದಾಗ, ಆ ದೇವರನ್ನು  ನಂಬಿದರೆ ತಪ್ಪೇನು? 

     ವಿಚಾರವಂತನಾದವನು, ಜಿಜ್ಞಾಸೆಯಿಂದ ಈ ಪರಮಾತ್ಮ ಸ್ವರೂಪವನ್ನು ತನ್ನದೇ ರೀತಿಯಲ್ಲಿ  ತಿಳಿದುಕೊಳ್ಳಲು ಪ್ರಯತ್ನಿಸುತ್ತಾನೆ.ಏಕೆಂದರೆ ಸ್ವತಂತ್ರವಾಗಿ ಯೋಚಿಸುವ ಮತ್ತು ತಾನು ಕಂಡುಕೊಂಡಂತಹ ವಿಚಾರವನ್ನು ನಂಬಲು ಮತ್ತು ತನ್ನ ನಂಬಿಕೆಯಂತೆ ತನ್ನ ಜೀವನವನ್ನು ರೂಪಿಸಿಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ಮಾನವನಿಗೆ ಇದೆ. 
ಹಾಗೆ  ನನಗೆ ಉಂಟಾದ ಜಿಜ್ಞಾಸೆಯಿಂದ ಹುಟ್ಟಿದ ಅಭಿಪ್ರಾಯವು ಈ ರೀತಿ ಇದೆ. ಪುರುಷ ಸೂಕ್ತ ದಲ್ಲಿ ಪುರುಷನು (ಪುರೇ ಶಯತೀತಿ ಪುರುಷಃ-ನವರಂದ್ರಗಳಿಂದ ಕೂಡಿದ ಈ ದೇಹ (ಪುರ) ವನ್ನು ಧಾರಣೆಮಾಡಿರುವವನು)ಸಾವಿರಾರು ತಲೆ,ಕಣ್ಣು,ಕಾಲುಗಳು ಉಳ್ಳವನು ಎಂದೂ,( this is just a hyperbole) ಈ ಭೂಮಿಯನ್ನೂ ಸೇರಿದಂತೆ ಇಡೀ ವಿಶ್ವವನ್ನೇ ಆವರಿಸಿಕೊಂಡು ಅದರಮೇಲೆ ಹತ್ತಂಗುಲದಲ್ಲಿ ನಿಂತಿದ್ದಾನೆ,ಎಂಬ ವ್ಯಾಖ್ಯಾನವಿದೆ.ಈ ಜಗತ್ ಸೃಷ್ಟಿಗೆ ಕಾರ್ಯಕಾರಣ ಸ್ವರೂಪಿಯಾಗಿಯೂ ತಾನೇ ವಿವಿಧರೂಪದಲ್ಲಿ ಪ್ರಕಟಗೊಂಡು ಈ ಜಗತ್ತನ್ನು ಅನುಭವಿಸುತ್ತಿದ್ದಾನೆ ಎಂಬ ಅಭಿಮತವೂ ಉಂಟು."ಅಂದರಿಲೋ ಪುಟ್ಟಿ ಅಂದರಿಲೋ ಚೇರಿ ಅಂದರಿ ರೂಪಮುಲು ಅಟು ತಾನೈ,ಅನ್ದಮೈನ ಶ್ರೀ ವೆಂಕಟಾದ್ರಿನಿ ಸೇವಿಂಚಿ ಅಂದರಾನಿ ಪದಮುಲು ಅ೦ದನೆರಡುಜಾಲ"ಎಂಬುದು ಅನ್ನಮಾಚಾರ್ಯರ ಗೀತೆಯ ಉಕ್ತಿ.ಅಂದರೆ "ಎಲ್ಲರಲ್ಲೂ ಹುಟ್ಟಿ, ಎಲ್ಲರಲ್ಲೂ ಸೇರಿ ಎಲ್ಲರ ರೂಪವು ತಾನಾಗಿರುವ ಅಂದವಾದ ವೆಂಕಟಾದ್ರಿ" ಎಂದು ಅದರ ಅರ್ಥ.ಅದರ ಪ್ರಕಾರ ಎಲ್ಲವೂ ಪರಮಾತ್ಮನೇ ಅಲ್ಲವೇ?
ಆದರೆ ಇದು ನಂಬಿಕೆಗೆ ಸೇರಿದ್ದು.ಇದಕ್ಕೆ ಒಂದು ವೈಜ್ಞಾನಿಕ ಆಯಾಮವನ್ನು ಸೇರಿಸಿ ನೋಡಿದರೆ ನಮಗೆ ಗೊತ್ತಾಗುವುದು ಏನಂದರೆ,ನಮಗೆ ಕಾಣುವ ಮತ್ತು ನಮ್ಮ ಸೌರಮಂಡಲದಲ್ಲಿರುವ ಸೂರ್ಯನ ಸುತ್ತಳತೆ 13,92,000ಕಿಲೋ ಮೀಟರ್ ಮತ್ತು ನಾವಿರುವ ಭೂಮಿಯ ಸುತ್ತಳತೆ  12756ಕಿಲೋ ಮೀಟರುಗಳು. ಆ  ಲೆಖ್ಕದಲ್ಲಿ 13ಲಕ್ಷ ಭೂಮಿಗಳನ್ನು ನಮ್ಮ ಸೂರ್ಯನೊಳಕ್ಕೆ ಹಾಕಬಹುದು.ಆದರೆ ವಾಸ್ತವವಾಗಿ ಸೂರ್ಯನೂ ಭೂಮಿಯಂತೆ ಗುಂಡಾಗಿರುವುದರಿಂದ,ಕೇವಲ 980000ಭೂಮಿಗಳನ್ನು ನಮ್ಮ ಸೂರ್ಯನೊಳಕ್ಕೆ ಸೇರಿಸಿ ಬಿಡಬಹುದು.ಈ ಸೌರಮಂಡಲ,ಭೂಮಿ ಮತ್ತು ಇತರೆ ಗ್ರಹಗಳು ಎಲ್ಲವೂ ಒಂದು ಅದ್ಭುತ ಸೂತ್ರದಲ್ಲಿ ಹೆಣೆಯಲ್ಪಟ್ಟಿದೆ. ಇದು ನಿಶ್ಚಯ.      
ನಾವಿರುವ ಭೂಮಿಯ ಸೌರಮಂಡಲ,ಒಂದು ಕ್ಷೀರಪಥದಲ್ಲಿರುವ ಲಕ್ಷಾಂತರ ಸೌರ ಮಂಡಲಗಳಲ್ಲಿ ಒಂದು. ಇಂತಹ ಕ್ಷೀರಪಥಗಳು ಒಂದು ಆಕಾಶಗಂಗೆಯಲ್ಲಿ ಲಕ್ಷಾಂತರ.ಈ ಜಗತ್ತಿನ ಸೃಷ್ಟಿಯಲ್ಲಿ ಇಂಥ ಆಕಾಶಗಂಗೆಗಳು ಲಕ್ಷಾಂತರ.ಯಾವ ಶಕ್ತಿಯ ಸೂತ್ರದಲ್ಲಿ ನಮ್ಮ ಸೌರಮಂಡಲದ ಭೂಮಿ,ಅನ್ಯ ಗ್ರಹಗಳು ಮತ್ತು ಈ ಸೌರಮಂಡಲದ ಅಧಿಪತಿಯಾದ ಮತ್ತು ನಮಗೆ ಕಾಣುವ ಸೂರ್ಯ ಎಲ್ಲವೂ ಹೆಣೆದುಕೊಂಡಿವೆಯೋ ಅದೇ ಶಕ್ತಿಯು ತನ್ನ ವಿಸ್ತಾರ ರೂಪದಿಂದ ಎಲ್ಲ ಕ್ಷೀರಪಥಗಳನ್ನೂ,ಎಲ್ಲ ಅಕಾಶಗಂಗೆಗಳನ್ನೂ ಒಂದೇ ಸೂತ್ರದಲ್ಲಿ ಹಿಡಿದಿಟ್ಟಿದೆ.ಅಂದರೆ ಆ ಶಕ್ತಿಯು ಇವೆಲ್ಲವನ್ನೂ ತನ್ನ ಹಿಡಿತದಲ್ಲಿ ಒಂದು ಸೂತ್ರದಲ್ಲಿ ಹಿಡಿದಿಟ್ಟುಕೊಂಡಿದೆ ಎಂದರೆ,"ಆ ಶಕ್ತಿ ಇವೆಲ್ಲಕ್ಕಿಂತ ಉನ್ನತ ಸ್ಥಾನದಲ್ಲಿದೆ"ಯೆಂದು ಅರ್ಥವಲ್ಲವೇ. ಹಾಗೆ ಈ ಸೃಷ್ಟಿಯನ್ನೇ ತನ್ನ ಸೂತ್ರದ ಹಿಡಿತದಲ್ಲಿ ಇಟ್ಟಿಕೊಂಡಿರುವ ಆ ಶಕ್ತಿಯೇ ಪರಮಾತ್ಮ ಅಥವಾ ದೈವ ಎಂದರೆ ತಪ್ಪಗಲಾರದಲ್ಲವೇ? ಇದೇ ಶಕ್ತಿಯೇ ಈ ಜಗತ್ತಿನ ಎಲ್ಲಕ್ಕೂ ಕಾರಣವೆಂದು ಎಲ್ಲರ ಅಭಿಮತ ಮತ್ತು ಈ ವಿಷಯದಲ್ಲಿ ಮಾತ್ರ ಎಲ್ಲರ ಏಕೀಭಾವವಿದೆ.ಆದರೆ ಅದರ ಸ್ವರೂಪ ಮತ್ತು ಅದರ ಕಾರ್ಯ ವೈಖರಿಯ ಬಗ್ಗೆ ಸಾವಿರಾರು ಅಭಿಪ್ರಾಯಗಳು ಮತ್ತು ಭಿನ್ನಾಭಿಪ್ರಾಯಗಳು.
ಪ್ರಾಣವೆಂದರೆ ಚೇತನ.ಜಡವ ಕಾರ್ಯರೂಪಕ್ಕೆ ಪ್ರೇರೇಪಿಸುವುದೇ ಈ ಶಕ್ತಿ.  ಜಡ ಮತ್ತು ಶಕ್ತಿಯ ಸಮ್ಮಿಲನದಿಂದ ನಡೆಯುವ ಕೆಲಸ ಕಾರ್ಯಗಳೇ ಈ ಜಗದ್ವ್ಯಾಪಾರ.ಅಂದರೆ ಈ ಜಗತ್ತಿನ ಆಗು ಹೋಗುಗಳೆಲ್ಲಾ ಈ ಶಕ್ತಿಯ ಮೇಲೆ ಅವಲಂಬಿಸಿರುತ್ತದೆ.ಈ ಜಗತ್ತಿನ ಎಲ್ಲ ವಸ್ತುಗಳೂ ಅದೇ ಶಕ್ತಿಯ ಸಹಾಯದಿಂದ ಕಾರ್ಯೋನ್ಮುಖವಾದರೂ, ಆಯಾಯ ವಸ್ತುವಿನ ಕಾರ್ಯದ ಪ್ರಮಾಣ ಮತ್ತು ವ್ಯಾಪ್ತಿ,ಆ ವಸ್ತುವಿನ ಆಕಾರ ಮತ್ತು ಕ್ಷಮತೆಯ (capacity)ಮೇಲೆ ಆಧಾರವಾಗಿರುತ್ತದೆ.
ಇದಕ್ಕೊಂದು ಉದಾಹರಣೆಯನ್ನು ಕೊಡುವ.ನಮ್ಮ ಶಿವನಸಮುದ್ರದ ಅಥವ ಯಾವುದೇ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಉತ್ಪಾದನೆಯಾಗುವ ವಿದ್ಯುತ್ತಿನ ಪ್ರಮಾಣವನ್ನು Mega Watts ಎನ್ನುತ್ತಾರೆ. ಆ ವಿದ್ಯುತ್ತಿನ ಶಕ್ತಿಯ ತೀವ್ರತೆ ಎಷ್ಟಿರುತ್ತದೆ ಎಂದರೆ ಅದರ ಹತ್ತಿರ ಹೋಗಲು ಯೋಚನೆ ಮಾಡಿದರೆ ಸಾಕು ಸುಟ್ಟು ಬೂದಿಯೂ ಮಿಗದಂತಾಗುತ್ತದೆ.ಅಷ್ಟು ತೀವ್ರವಾಗಿರುತ್ತದೆ ಅದರ ಶಕ್ತಿ.ಅದನ್ನೇ ಪರಮಾತ್ಮ ಎಂದು ಇಟ್ಟುಕೊಳ್ಳೋಣ.ಅಲ್ಲಿ ಉತ್ಪಾದನೆಯಾದ ವಿದ್ಯುತ್ತೇ ನಿಮ್ಮ-ನಮ್ಮ ಮನೆಗಳಿಗೆ ಬರುವುದು.ಆದರೆ ಅದು ನೇರವಾಗಿ ಬರುವುದಿಲ್ಲ. ಹಂತ ಹಂತವಾಗಿ ಅದರ ತೀವ್ರತೆಯನ್ನು ಕಡಿಮೆಗೊಳಿಸುತ್ತ (step down) ಕಡೆಗೆ    ನಮ್ಮ-ನಿಮ್ಮ ಬೀದಿಯಲ್ಲಿರುವ ಒಂದು transformer ಗೆ ಕಳುಹಿಸಿ ಅದರಿಂದ ನಿಮ್ಮ ಬೀದಿಯಲ್ಲಿರುವ ಎಲ್ಲ ಮನೆಗಳಿಗೆ ತಂತಿಗಳ ಮೂಲಕ ಕಳುಹಿಸುತ್ತಾರೆ. ನಿಮ್ಮ ಮನೆಗೆ ಬರುವ ವಿದ್ಯುತ್ತಿನ ಪರಿಮಾಣ 220 volts ಆಗಿರುತ್ತೆ. ಹಾಗೆ ಎಲ್ಲೋ ಮೂಲವಿರುವ ಆ ವಿದ್ಯುತ್ತನ್ನು ನಿಮ್ಮ ಮನೆಗೆ ಕಳುಹಿಸಿದಾಗ ನೀವು ಅದನ್ನು ಬೇರೆ ಬೇರೆ ಉಪಕರಣಗಳನ್ನು ಉಪಯೋಗಿಸಲು ಬಳಸುತ್ತೀರಿ.ಆದರೆ ಪ್ರತಿಯೊಂದು ಉಪಕರಣವೂ ಅದೇ ವಿದ್ಯುತ್ತನ್ನು ಉಪಯೋಗಿಸಿದರೂ, ಅದರಿಂದ ಹೊರಬರುವ ಫಲ(output)ಮಾತ್ರ ಬೇರೆ ಬೇರೆಯಾಗಿರುತ್ತದೆ. geyser,Fridge,TV,Iron ಬಾಕ್ಸ್, ಫ್ಯಾನ್, ಹೀಗೆ ಎಲ್ಲವೂ ಅದೇ ವಿದ್ಯುತ್ತನ್ನು ಉಪಯೋಗಿಸಿಕೊಂಡರೂ ಅದರ ಉಪಯೋಗಗಳು ನಮಗೆ ಬೇರೆ ಬೇರೆ ರೀತಿಯಲ್ಲಿರುತ್ತದೆ.
ಹಾಗೆಯೇ ಈ ಜಗತ್ತನ್ನು ಸೃಜಿಸಿ, ನಿಯಂತ್ರಿಸಿ, ನಡೆಸಿಕೊಂಡು ಹೋಗುವ  ಆ ಅದ್ಭುತ ಶಕ್ತಿಯೇ ಬೇರೆ ಬೇರೆ ಪ್ರಾಣಿ ಪಕ್ಷಿ,ಕೀಟ, ಗಿಡ ಮರ ಹೀಗೆ ಈ ಸೃಷ್ಟಿಯಲ್ಲಿ ಏನೇನಿದೆಯೋ ಅದೆಲ್ಲದರಲ್ಲೂ ಸೇರಿ ಬೃಹತ್ ಚೇತನದ ಅಲ್ಪ ರೂಪದಲ್ಲಿ ಆಯಾಯಾ ದೇಹಗಳ ಶಕ್ತಿಯ ಮಿತಿಯಲ್ಲಿ ಕೆಲಸ ಮಾಡುತ್ತಾ ಇರುತ್ತದೆ. ಈ ಪ್ರಪಂಚದ ಎಲ್ಲಾ ಬೇರೆ ಬೇರೆ ಪ್ರಾಣಿ ಪಕ್ಷಿ,ಕೀಟ, ಗಿಡ,ಮರ ಎಲ್ಲದರ ದೇಹರಚನೆ ಮತ್ತು ಆಕಾರ ಭಿನ್ನ ಭಿನ್ನವಾಗಿರುವಾಗ,ಇವೆಲ್ಲವೂ ಜೀವಂತವಾಗಿರಲು ಒಂದೇ ಶಕ್ತಿಯನ್ನು ಉಪಯೋಗಿಸಿಕೊಂಡರೂ, ಮಾಡುವ ಕೆಲಸ, ಕೆಲಸ ಮಾಡುವ ರೀತಿ, ಆ ಕೆಲಸದ ಕಾರಣ ಮತ್ತು ಆ ಕೆಲಸದಿಂದ ಆಗುವ ಪ್ರಯೋಜನ ಎಲ್ಲವೂ ಭಿನ್ನ ಭಿನ್ನವಾಗಿರುತ್ತದೆ.
     ಈ ಜಗತ್ತನ್ನು ಒಂದು ಸೂತ್ರದಲ್ಲಿ ನಿಯಂತ್ರಿಸುತ್ತಿರುವ ಆ ಅದ್ಭುತ ಶಕ್ತಿಯನ್ನು ನಾವು ಪರಮಾತ್ಮ ಎಂದು ಪರಿಗಣಿಸಿದರೆ, ಸೃಷ್ಟಿಯಲ್ಲಿರುವ ಅಖಂಡ ಸಂಖ್ಯೆಯ ಜೀವರಾಶಿಗಳಲ್ಲಿರುವ ಚೇತನವೂ ಅದೇ ಪರಮಾತ್ಮನ ಸ್ವರೂಪವಾದದು ಎಂದರೆ ತಪ್ಪಾಗಲಾರದು. ಹಾಗಾಗಿ ಎಲ್ಲ ಜೀವಿಗಳನ್ನೂ ಚೈತನ್ಯದಿಂದಿಡುವ ಆ ಚೇತನ ಮತ್ತು ಈ ಜಗತ್ತನ್ನು ಒಂದು ಸೂತ್ರದಲ್ಲಿ ನಿಯಂತ್ರಿಸುವ ಆ ಬೃಹತ್ ಚೇತನವೂ ಒಂದೇ ಎಂದು ಒಪ್ಪಲೇಬೇಕು. ಪರ್ಯಾಯ ವಿಶ್ಲೇಷಣೆ ಇಲ್ಲ.
ಇದನ್ನೊಪ್ಪಿದರೆ,ಆ ಪರಮಾತ್ಮನನ್ನು ಎಲ್ಲ ಜೀವಿಗಳಲ್ಲೂ ಕಾಣುತ್ತಾ ಎಲ್ಲರನ್ನೂ ಪ್ರೀತಿಯಿಂದ ನೋಡುತ್ತಾ ಈ ಜೀವನವನ್ನು ಎಲ್ಲರೂ ಸುಂದರವನ್ನಾಗಿಸಿಕೊಳ್ಳಬಹುದಲ್ಲವೇ.
     ಜೀವಾತ್ಮ ಪರಮಾತ್ಮ ಸಂಬಂಧವನ್ನು ಹೀಗೆ ಅರ್ಥಮಾಡಿಕೊಂಡ ನನಗೆ ಎಲ್ಲ ಪ್ರಾಣಿಗಳಲ್ಲೂ ಆ ಬೃಹತ್ ಚೇತನದ ರೂಪವೇ ಕಾಣುವಾಗ ಆ ದೇವರನ್ನು ಬೇರೆಲ್ಲೋ ಹುಡುಕಬೇಕೆ ನೀವೇ ಹೇಳಿ?


ಸರ್ವೇ ಜನಾಃ ಸಜ್ಜನೋ ಭವಂತು
ಸರ್ವೇ ಸಜ್ಜನಾಃ ಸುಖಿನಃ ಸಂತು 
- ರವಿ ತಿರುಮಲೈ

Tuesday, February 7, 2012

ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು - ೨


       ಅಥರ್ವ ವೇದವಂತೂ ಉಚ್ಛ-ನೀಚಭಾವದ ಬುಡಕ್ಕೇ ಕೊಡಲಿ ಪೆಟ್ಟು ಹಾಕುತ್ತಾ ಹೇಳುತ್ತದೆ: 


 ಸಮಾನೋ ಮಂತ್ರಃ ಸಮಿತಿಃ ಸಮಾನೀ ಸಮಾನಂ ವ್ರತಂ ಸಹ ಚಿತ್ತಮೇಷಾಮ್ |
 ಸಮಾನೇನ ವೋ ಹವಿಷಾ ಜುಹೋಮಿ ಸಮಾನಂ ಚೇತೋ ಅಭಿಸಂವಿಶದ್ವಮ್ || (ಅಥರ್ವ.೬.೬೪.೨.)


      ಈ ಮಾನವರೆಲ್ಲರ [ಮಂತ್ರಃ ಸಮಾನಃ] ಮಂತ್ರ ಸಮಾನವಾಗಿರಲಿ. [ಸಮಿತಿಃ ಸಮಾನೀ] ಸಮಿತಿ ಸಮಾನವಾಗಿರಲಿ. [ವ್ರತಂ ಸಮಾನಮ್] ವ್ರತವೂ ಸಮಾನವಾಗಿರಲಿ. [ಏಷಾ ಚಿತ್ತಂ ಸಹ] ಇವರೆಲ್ಲರ ಚಿತ್ತವು ಒಂದೇ ದಿಕ್ಕಿನಲ್ಲಿ ಹರಿಯಲಿ. [ವಃ] ನಿಮ್ಮೆಲ್ಲರಿಗೂ, [ಸಮಾನೇನ ಹವಿಷಾ] ಸಮಾನವಾದ ಖಾದ್ಯ, ಪೇಯಗಳನ್ನೇ [ಜುಹೋಮಿ] ದಾನ ಮಾಡುತ್ತೇನೆ. [ಸಮಾನಂ ಚೇತಃ] ಸಮಾನವಾದ ಚೈತನ್ಯದಲ್ಲಿಯೇ [ಅಭಿ ಸಂ ವಿಶಧ್ವಮ್] ಎಲ್ಲೆಡೆಯಿಂದಲೂ ಪ್ರವೇಶಿಸಿರಿ.  
     ಭಗವಂತ ಇಷ್ಟು ಸ್ಪಷ್ಟವಾಗಿ ಸಮಾನತೆಯ ಸಂದೇಶವನ್ನು ಸಾರುತ್ತಿದ್ದಾನೆ. ಅಥರ್ವವೇದದಲ್ಲಿ ಇನ್ನೊಂದೆಡೆ ಸಮಾನೀ ಪ್ರಪಾ ವೋsನ್ನಭಾಗಃ|| (ಅಥರ್ವ.೩.೩೦.೬.) [ಪ್ರಪಾ ಸಮಾನೀ] ನಿಮ್ಮೆಲ್ಲರ ಜಲಾಶಯಗಳೂ ಒಂದಾಗಿರಲಿ. [ವ ಅನ್ನಭಾಗಃ] ನಿಮ್ಮ ಆಹಾರಭಾಗಗಳೂ ಒಂದಿಗೇ ಇರಲಿ ಎನ್ನುತ್ತಿದೆ. ಇಂತಹ ಅದೆಷ್ಟೋ ಮಂತ್ರಗಳನ್ನುದ್ಧರಿಸಬಹುದು. ಅದರೆ ಇಷ್ಟರಿಂದಲೇ ಪಾಠಕರು ವೇದಗಳ ಭಾವನೆಯನ್ನು ತಿಳಿದುಕೊಳ್ಳಬಲ್ಲರು.
 ************** 

Monday, February 6, 2012

ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು - ೧


     ಮಾನವಸಮತಾ ಭಾವನೆಯನ್ನು ವೇದಗಳಿಗಿಂತ ಚೆನ್ನಾಗಿ ಪ್ರತಿಪಾದಿಸುವ ಶಾಸ್ತ್ರ ಜಗತ್ತಿನಲ್ಲಿ ಬೇರಾವುದೂ ಇಲ್ಲ. ವಿಷಯ ಪ್ರವೇಶದಲ್ಲೇ ವೇದಗಳು ಮಾನವ ಮಾತ್ರರನ್ನು ದೇವಪುತ್ರರು, ಋಷಿಗಳು, ಅಮೃತನಾದ ಪ್ರಭುವಿನ ಮಕ್ಕಳು ಎಂದು ಕರೆದಿರುವುದನ್ನು ಪಾಠಕರು ನೋಡಿದ್ದಾರೆ. ಸಮಾನತೆ ವೇದೋಪದೇಶದ ಒಂದು ಆಧಾರ ಶಿಲೆ. ಈ ಕೆಳಗಿನ ಮಂತ್ರವನ್ನೇ ನೋಡಿರಿ:-


ಅಜ್ಯೇಷ್ಠಾಸೋ ಅಕನಿಷ್ಠಾಸ ಏತೇ ಸಂ ಭ್ರಾತರೋ ವಾವೃಧುಃ ಸೌಭಗಾಯ |
ಯುವಾ ವಿತಾ ಸ್ವಪಾ ರುದ್ರ ಏಷಾಂ ಸುದುಘಾ ಪೃಶ್ನಿಃ ಸುದಿನಾ ಮರುದ್ಭ್ಯಃ || (ಋಕ್.೫.೬೦.೫.)

     [ಏತೇ] ಈ ಮಾನವರು, [ಅಜ್ಯೇಷ್ಠಾಸಃ] ಯಾರೂ ದೊಡ್ಡವರಲ್ಲ. [ಅಕನಿಷ್ಠಾಃ] ಇವರು ಯಾರೂ ಚಿಕ್ಕವರೂ ಅಲ್ಲ. [ಸಂ ಭ್ರಾತರಃ] ಇವರು ಪರಸ್ಪರ ಸಹೋದರರು. [ಸೌಭಗಾಯ] ಸೌಭಾಗ್ಯಪ್ರಾಪ್ತಿಗಾಗಿ [ವಾವೃಧುಃ] ಮುಂದುವರೆಯುತ್ತಾರೆ. [ಯುವಾ ಸೃಪಾ ರುದ್ರಃ] ಅಜರನೂ, ಆತ್ಮರಕ್ಷಕನೂ, ದುಷ್ಟರಿಗೆ ದಂಡ ನೀಡುವವನೂ ಆದ ಪ್ರಭುವು, [ಏಷಾಂ ಪಿತಾ] ಇವರೆಲ್ಲರ ತಂದೆ. [ಪೃಶ್ನಿಃ] ಭೂಮಾತೆ, [ಮರುದ್ಭ್ಯಃ] ಈ ಮರ್ತ್ಯರಿಗೆಲ್ಲಾ [ಸುದುಘಾ] ಉತ್ತಮ ಶಕ್ತಿಯನ್ನೆರೆಯುವವಳೂ [ಸುದಿನಾ] ಉತ್ತಮ ದಿನಗಳನ್ನು ತೋರಿಸುವವಳೂ ಆಗಿದ್ದಾಳೆ.
     ಇನ್ನೊಂದೆಡೆ ಅದೇ ವೇದ, ಇದೇ ಸಮಾನತೆಯ ಮತ್ತು ಭ್ರಾತೃತ್ವದ ಸಂದೇಶವನ್ನು ಸಾರಿ, ಕೊನೆಗೆ - ಸುಜಾತಾಸೋ ಜನುಷಾ ಪೃಶ್ನಿಮಾತರೋ ದಿವೋ ಮರ್ಯಾಃ|| (ಋಕ್. ೫.೫೯.೬.) ಅಂದರೆ ಇವರೆಲ್ಲಾ [ಪೃಶ್ನಿಮಾತರಃ] ಭೂಮಿಯನ್ನೇ ತಾಯಿಯಾಗಿ ಹೊಂದಿರುವವರೂ, [ದಿವಃ ಮರ್ಯಾಃ] ಜ್ಯೋತಿರ್ಮಯ ಪ್ರಭುವಿನ ಮಕ್ಕಳಾದ ಮಾನವರೂ ಆದಕಾರಣ [ಜನುಷಾ ಸುಜಾತಾಸಃ] ಜನ್ಮದಿಂದ ಉತ್ತಮ ಕುಲೀನರೇ ಆಗಿದ್ದಾರೆ ಎನ್ನುತ್ತದೆ.
**************