Pages

Friday, February 24, 2012

ಮಂಕು ತಿಮ್ಮನ ಕಗ್ಗ - ರಸಧಾರೆ





   ಕಗ್ಗ-9


ಏನು ಭೈರವಲೀಲೆಯೀ ವಿಶ್ವಭ್ರಮಣೆ! 

ಏನು ಭೂತಗ್ರಾಮನರ್ತನೋನ್ಮಾದ ! I

ಏನಗ್ನಿ ಗೋಳಗಳು ! ಏನಂತರಾಳಗಳು !  

ಏನು ವಿಸ್ಮಯ ಸೃಷ್ಟಿ! - ಮಂಕುತಿಮ್ಮ II  


ಭೈರವಲೀಲೆಯೀ = ಭೈರವ+ ಲೀಲೆಯು+ಈ , ಭೂತಗ್ರಾಮನರ್ತನೋನ್ಮಾದ = ಭೂತ+ಗ್ರಾಮ+ನರ್ತನ+ಉನ್ಮಾದ, ಏನಗ್ನಿ= ಏನು+ ಅಗ್ನಿ

ಬೈರವ= ಪರಮ ಶಿವ, ರುದ್ರ, ಉನ್ಮಾದ = ಉದ್ವೇಗ, ಗೋಳ = ಉಂಡೆ, ವಿಸ್ಮಯ= ಆಶ್ಚರ್ಯ. 


ಏನಿದು ಭೈರವ ಲೀಲೆ. ಏನಿದು ಇಡೀ ವಿಶ್ವದ ಸುತ್ತಾಟ. ಏನಿದು ಪಂಚ ಮಹಾ ಭೂತಗಳ ಮತ್ತು ಆ ಭೂತಗಳ ವಾಸಸ್ಥಳವಾದ ಆ ಮಹಾ ಚೈತನ್ಯ ಮತ್ತು ಮತ್ತು ಆ ಚೈತನ್ಯದ ಉನ್ಮಾದಭರಿತ ನರ್ತನ.

ಏನಿದು ಅಗ್ನಿ ಗೋಳಗಳು ಈ ಸೃಷ್ಟಿಯ ಅಂತರಾಳ. ಆಹಾ ಎಂತಹ ಈ ವಿಸ್ಮಯ ಈ ಸೃಷ್ಟಿ. ಇದು ಈ ಕಗ್ಗದ ಅಂತರ್ಯದ ಭಾವ. 


ರುದ್ರ ತಾಂಡವ ಎನ್ನುವ ಅರ್ಥದಲ್ಲಿ ಈ ವಿಶ್ವದ ಸೃಷ್ಟಿಯನ್ನು ವಿಸ್ಮಯವೆಂದು ಕರೆಯುತ್ತಾರೆ ಶ್ರೀ ಗುಂಡಪ್ಪನವರು. ಹೌದು ಇದು ವಿಸ್ಮಯವೇ ಸರಿ. ಆ ಹಿಂದೆಯೇ ವಿವರಿಸಿದಂತೆ ಸೌರವ್ಯೂಹಗಳು, ಕ್ಷೀರಪಥಗಳು, ಆಕಾಶಗಂಗೆಗಳು ಮತ್ತು ಇಡೀ ವಿಶ್ವ. ಈ ವಿಶ್ವದ ಅಂತರ್ಯದಲ್ಲಿ ನಡೆಯುವ ಅಗ್ನಿಸ್ಪೋಟಗಳು, ಹೊಸ ಹೊಸ ನಕ್ಷತ್ರಗಳ,  ಗ್ರಹಗಳ ಹುಟ್ಟು, ಸಿಡಿತ, ಒಂದರೊಳಗೆ ಒಂದು ವಿಲೀನವಾಗುವ ಪ್ರಕ್ರಿಯೆ, ಇವೆಲ್ಲವನ್ನೂ  ನಾವು ಕಾಣುವುದಿರಲಿ, ಊಹಿಸಲೂ ಅಸಾಧ್ಯವಾದ ರೂಪ. ಅದನ್ನು ಪರಶಿವನ ಅಥವಾ ನಟರಾಜನ ರುದ್ರ ತಾಂಡವಕ್ಕೆ ಹೋಲಿಸುತ್ತಾರೆ. ಈ ಸೃಷ್ಟಿ, ಸೃಷ್ಟಿಯಲ್ಲಿನ ಪಂಚ ಮಹಾಭೂತಗಳು ಮತ್ತು ಅವುಗಳ ಕಾರ್ಯ ವೈಖರಿಯಾವುದೂ ಸಹ, ಊಹಾತೀತ. ಇದೊಂದು ಯಾರಿಗೂ ಅರ್ಥವಾಗದ ವಿಸ್ಮಯವೆನ್ನುತ್ತಾರೆ ಮಾನ್ಯ ಗುಂಡಪ್ಪನವರು. 


152 ದಶಲಕ್ಷ ಕಿಲೋ ಮೀಟರ್ ದೂರದಲ್ಲಿರುವ ನಮ್ಮ ಸೌರಮಂಡಲದ ಸೂರ್ಯನಿಂದ ಹೊರಟ ಬೆಳಕು ಭೂಮಿಯನ್ನು ತಲುಪಲು ಬೇಕಾಗುವ ಸಮಯ 8 .28 ನಿಮಿಷಗಳು. ಸೂರ್ಯ ಒಂದು ನಕ್ಷತ್ರ. ನಮಗೆ ಆಕಾಶದಲ್ಲಿ ಕಾಣುವ ಅನ್ಯ ಅನೇಕ ನಕ್ಷತ್ರಗಳಂತೆ. 152 ದಶಲಕ್ಷ ಕಿಲೋ ಮೀಟರ್ ದೂರದಲ್ಲಿದ್ದರೂ ಇಷ್ಟು ಹತ್ತಿರದಲ್ಲಿ ಕಂಡಂತೆ ಕಂಡು ಇಷ್ಟು ಬೆಳಕನ್ನು ಮತ್ತು ಶಾಖವನ್ನು ನೀಡುತ್ತಾನೆ ಈ ನಮ್ಮ ಸೂರ್ಯನೆಂಬ ನಕ್ಷತ್ರ. ಬೇಸಿಗೆ ಕಾಲದಲ್ಲಿ ಅವನ ಶಾಕವನ್ನು ತಡೆಯಲಾರದೆ ಸಾವನ್ನಪ್ಪುವ ಜನರೆಷ್ಟೋ.! ಇದನ್ನೇ ಅಗ್ನಿ ಗೋಳವೆಂದರು ಶ್ರೀ ಗುಂಡಪ್ಪನವರು. 


ವಾಚಕರೆ ಯೋಚಿಸಿ, ಇಷ್ಟು ಹತ್ತಿರ ಕಾಣುವ ನಮ್ಮ ಸೂರ್ಯನೇ 152 ದಶಲಕ್ಷ ಕಿಲೋ ಮೀಟರ್ ದೂರದಲ್ಲಿದ್ದಾನೆಂದರೆ, ಇನ್ನು ನಮ್ಮ ಕಣ್ಣಿಗೆ ಬೆಳ್ಳಿ ಚುಕ್ಕಿಯಂತೆ  ಕಾಣುವ ಎಷ್ಟೋ ನಕ್ಷತ್ರಗಳು ಎಷ್ಟು ದೂರದಲ್ಲಿರಬೇಕು? ನಮ್ಮ ಸೌರಮಂಡಲದ ಸೂರ್ಯನ ನಂತರ ನಮಗೆ ಹತ್ತಿರದಲ್ಲಿರುವ ನಕ್ಷತ್ರವೆಂದರೆ ಆಲ್ಫಾ ಸೆಂಚ್ಯುರಿ ಅಥವಾ ಮ್ಯಾಗ್ಜಿಮಾ ಸೆಂಚ್ಯುರಿ . ಇದು ನಮಗೆ ಎಷ್ಟು ದೂರದಲ್ಲಿದೆಯೆಂದರೆ, ಅಲ್ಲಿಂದ ಹೊರಟ ಬೆಳಕು ನಮ್ಮ ಭೂಮಿಯನ್ನು ತಲುಪಬೇಕಾದರೆ 4 .7  ವರ್ಷಗಳು ಬೇಕಾಗುತ್ತದೆ. ಇನ್ನೂ ದೂರದಲ್ಲಿರುವ ನಕ್ಷತ್ರಗಳ ದೂರವೆಷ್ಟೋ, ನಮಗೆ ಕಾಣದಿರುವ ನಕ್ಷತ್ರಪುಂಜಗಳೆಷ್ಟೋ!!  ಅಂದರೆ ಈಗ ನಾವು ಒಂದು ನಕ್ಷತ್ರವನ್ನು ನೋಡುತ್ತಿದ್ದೇವೆ ಎಂದರೆ ಅಲ್ಲಿಂದ ಎಂದೋ ಹೊರಟ ಬೆಳಕನ್ನು ನಾವು ಇಂದು ನೋಡುತ್ತಿದ್ದೇವೆ. ಹಾಗೆ ನಮಗೆ ಕಾಣುವ ಅತೀ ದೂರದ ನಕ್ಷತ್ರ  ನಮಗಿಂತ ಎಷ್ಟು ದೂರದಲ್ಲಿರಬಹುದು. ಕಾಣುವುದೇ ಎಷ್ಟೋ ದೂರದಲ್ಲಿದ್ದರೆ ಕಾಣದ್ದೆಷ್ಟೋ ಯಾರಿಗೆ ಗೊತ್ತು. ಇಂತಹ ವಿಶ್ವ, ನಮ್ಮ ಯೋಚನೆಗೂ ನಿಲುಕದ ಅದ್ಭುತ ಸೃಷ್ಟಿ. 


ಈ ಸೃಷ್ಟಿಯ ಗೂಢ ನಿಗೂಢ ವಿಸ್ಮಯಗಳು.ಅಬ್ಬ! ಎಂತಹ ವಿಚಿತ್ರ. ಇದನ್ನೇ ಗುಂಡಪ್ಪನವರು ವಿಸ್ಮಯ ಅಥವಾ ವಿಚಿತ್ರವೆನ್ನುತ್ತಾರೆ. ಈ ಸೃಷ್ಟಿಯನ್ನು ಒಂದು ಸೂತ್ರದಲ್ಲಿ ಹಿಡಿದಿಟ್ಟಿರುವ ಆ ಪರಮ ಶಕ್ತಿ. ಇವುಗಳ ಮುಂದೆ ನಾವೆಷ್ಟರವರು?  ನಮ್ಮ ಸಾಮರ್ಥ್ಯದ ಮಿತಿ  ಏನು?  ನಾವು ಅಹಂಕಾರಪಡಲು ಏನಾದರೂ ಕಾರಣವಿದೆಯೇ? ಯೋಚಿಸಿ ವಾಚಕರೆ. 


ಈ ವಿಸ್ಮಯಭರಿತ ಮತ್ತು ವಿಚಿತ್ರವಾದ ವಿಶ್ವ, ಅದರ ನಿಗೂಢತೆ ಮತ್ತು ಇದರ ಸೃಷ್ಟಿಕರ್ತನ ಸಾಮರ್ತ್ಯಗಳ ಬಗ್ಗೆ ಆಲೋಚಿಸುತ್ತಾ ನಾವೆಲ್ಲರೂ ಮುಂದಿನ ಕಗ್ಗಕ್ಕೆ ಹೋಗುವ. 


ಇಂದಿನ ದಿನ ಎಲ್ಲರಿಗೂ ಶುಭವಾಗಲಿ. 


ನಮಸ್ಕಾರ

ರವಿ ತಿರುಮಲೈ 

Thursday, February 23, 2012

ಮಂಕು ತಿಮ್ಮನ ಕಗ್ಗ - ರಸಧಾರೆ ಕಗ್ಗ-೮






ಏನು ಜೀವನದರ್ಥ? 



ಕ್ರಮವೊಂದು ಲಕ್ಷ್ಯವೊಂದುಂಟೇನು ಸೃಷ್ಟಿಯಲಿ?
ಭ್ರಮಿಪುದೇನಾಗಾಗ ಕರ್ತೃವಿನ ಮನಸು?
ಮಮತೆಯುಳ್ಳವನಾತನಾದೊಡೀ ಜೀವಗಳು
ಶ್ರಮಪಡುವುದೇಕಿಂತು  -ಮಂಕುತಿಮ್ಮ ?

ಕ್ರಮವು ಒಂದು ಲಕ್ಷ್ಯವು ಒಂದು ಉಂಟೇನು ಸೃಷ್ಟಿಯಲಿ ಭ್ರಮಿಪುದು ಅದೇನು ಆಗಾಗ ಕರ್ತೃವಿನ ಮನಸು ಮಮತೆಯುಳ್ಳವನು ಆತನು ಆದೊಡೆ ಜೀವಗಳು ಶ್ರಮಪದುವುದೇಕೆ ಇಂತು - ಮಂಕುತಿಮ್ಮ

ಕ್ರಮವು= ರೀತಿ, ಲಕ್ಷ್ಯವು = ಗುರಿ(purpose ), ಭ್ರಮಿಪುದು = ವಿಕಾರಗೊಳ್ಳುವುದು ಅಥವಾ ವಿಚಲಿತವಾಗುವುದು,

ಕರ್ತೃ= ಜಗತ್ತನ್ನು ಸೃಷ್ಟಿದವ , ಆದೊಡೆ= ಆದರೆ, ಶ್ರಮ = ಕಷ್ಟ

ಇಲ್ಲಿ ಗುಂಡಪ್ಪನವರು  ಕೇಳುವ ಪ್ರಶ್ನೆ ಹೀಗಿದೆ

" ಈ ಭಗವಂತನ ಸೃಷ್ಟಿಯಲ್ಲಿ ಒಂದು ಕ್ರಮ ಅಥವಾ ಗುರಿ ಏನಾದರೂ ಇದೆಯೇ? ಈ ಸೃಷ್ಟಿಕರ್ತನ ಮನಸ್ಸು ಏಕೆ ಆಗಾಗ ವಿಚಲಿತವಾಗಿ ಎಲ್ಲೆಲ್ಲೋ ಹರಿದಾಡುತ್ತದೆ. ? ತಾನು ಸೃಷ್ಟಿಸಿದ ಜೀವಿಗಳ ಮೇಲೆ ಅವನಿಗೆ ಪ್ರೀತಿ ವಾತ್ಸಲ್ಯಗಳು ಇರುವುದಾದರೆ ಈ ಜೀವಿಗಳು ಏತಕ್ಕಾಗಿ ಈ ರೀತಿಯ ಕಷ್ಟಗಳನ್ನು ಅನುಭವಿಸುತ್ತವೆ?

ಗುಂಡಪ್ಪನವರ ಮನಕರಗಿ ಇಂತಹ ಪ್ರಶ್ನೆಗಳನ್ನು ತಮ್ಮನ್ನು ತಾವೇ ಕೇಳಿಕೊಳ್ಳುತ್ತಾ, ಓದುಗರ ಮುಂದಿಡುತ್ತಾರೆ. ಇಡೀ ಜಗತ್ತಿನ  ಆಗು ಹೋಗುಗಳಿಗೆ ಏನಾದರೂ ಒಂದು ಕ್ರಮವಿದೆಯೇ ಎಂದು ಅವರ ಪ್ರಶ್ನೆ. ಇದೆ ಎಂದು ಹೇಳಬಹುದು. ಹಗಲು ರಾತ್ರಿಗಳು ಭೂಮಿಯ ಸುತ್ತುವಿಕೆಯಿಂದ ಆಗುತ್ತದೆ. ಭೂಮಿಯೂ ಒಂದು ಲೆಕ್ಕಾಚಾರದಲ್ಲೇ ಸುತ್ತುತ್ತದೆ. ಹಾಗೆ ಸುತ್ತುವುದರಿಂದ ಋತುಮಾನಗಳು. ಬಿಸಿಲು, ಮಳೆ, ಚಳಿ ಮತ್ತು ಗಾಳಿ ಕಾಲಗಳು. ಬೆಳೆಗಳು, ಹೂ,  ಹಣ್ಣುಗಳಿಗೂ  ಒಂದೊಂದು ಕಾಲ.

ಆದರೂ ಆಗಾಗ ನಮಗರಿಯದಂತ ವ್ಯತ್ಯಾಸಗಳು ಆಗುತ್ತವೆ. ಅತೀವೃಷ್ಟಿ- ಅನಾವೃಷ್ಟಿಗಳು, ಜ್ವಾಲಾಮುಖಿಗಳು, ಭೂಕಂಪಗಳು, ಯುದ್ಧಗಳು, ಹೀಗೆ ಮಾನವನಿಗೆ ಮತ್ತು ಜೀವಿಗಳಿಗೆ ಮಾರಕವಾದ ನೈಸರ್ಗಿಕ ವಿಧ್ಯಮಾನಗಳು ನಡೆಯುವಾಗ  , ಏಕೆ ಈ ಭಗವಂತನ ಸೃಷ್ಟಿಯಲಿ ಒಂದು ಕ್ರಮವೇ ಇಲ್ಲವೇ ಮತ್ತು ಇದನ್ನೆಲ್ಲಾ ಆಗಗೊಡುವ ಆ ಪರಮಾತ್ಮನ ಮನಸ್ಸು ಏಕೆ ವಿಚಲಿತಗೊಳ್ಳುತ್ತದೆ  ಎಂಬ ಪ್ರಶ್ನೆ ಸಹಜವಾಗೇ ಮೂಡುತ್ತದೆ. ಅಂತಹ ಪ್ರಶ್ನೆಯನ್ನೇ ಡಿ.ವಿ.ಜಿ. ಯವರು ಕೇಳುತ್ತಾರೆ.

ಆದರೆ ಈ ಜಗತ್ತಿನಲ್ಲಿ  ನಡೆಯುವ ಜೀವನದ ನಾಟಕದಲ್ಲಿ ಒಬ್ಬೊಬ್ಬರು ಒಂದು ರೀತಿ. ಒಬ್ಬರಂತೆ ಒಬ್ಬರಿಲ್ಲ, ಒಬ್ಬರ ಯೋಚನೆಯಂತೆ ಮತ್ತೊಬ್ಬರದಿಲ್ಲ, ಪ್ರತಿಯೊಬ್ಬರ ಆಸೆ ಆಕಾಂಕ್ಷೆಗಳೂ ಭಿನ್ನ ಭಿನ್ನ ಅಲ್ಲವೇ? ಅವನ ಬುದ್ಧಿ ಏಕೆ ಹಾಗೆ ಭಿನ್ನ ಭಿನ್ನ ಎನ್ನುವುದಕ್ಕೆ ವಿಜ್ಞಾನಿಗಳು, ಶಾಸ್ತ್ರಜ್ಞರೂ, ತತ್ವವೇತ್ತರೂ ಸಹ ಭಿನ್ನ ಭಿನ್ನವಾದ ವ್ಯಾಖ್ಯಾನಮಾಡುತ್ತಾರೆ. ಹಾಗಾಗಿ ಭಿನ್ನತೆಯೇ ಜೀವನದ ಲಕ್ಷಣ ಅಥವಾ ಗುಣ.

ಈ ಭಿನ್ನತೆಗೂ ಆ ಪರಮಾತ್ಮನೇ ಕಾರಣನೋ? ಎಂದರೆ. ಅಹುದು ಮತ್ತು ಅಲ್ಲ. ಇಲ್ಲಿ ಎರಡು ವಿಚಾರಗಳಿವೆ. ಒಂದು " ಎಲ್ಲವೂ ಪರಮಾತ್ಮನ ಇಚ್ಚೆಯಂತೆ ನಡೆಯುತ್ತದೆ"  ಎಂದರೆ ಈ ಭಿನ್ನತೆಯೂ ಅವನ ಇಚ್ಚೆಯಂತೆಯೆ ಎಂದು ಆಯಿತು. " ಪ್ರತಿ  ಜೀವಿಯೂ ಅವನವನ ಕರ್ಮಕ್ಕನುಗುಣವಾಗಿ ಫಲಾಫಲಗಳನ್ನು ಪಡೆದು ಜೀವಿಸುತ್ತಾನೆ " ಎಂದಾದರೆ ಇಲ್ಲಿ,  ಪರಮಾತ್ಮನ ಪ್ರಮೇಯ ಕಡಿಮೆ.  ಆದರೆ "ಇದೋ" ಅಥವಾ  "ಅದೋ" ಎನ್ನುವ ದ್ವಂದ್ವ ಸಹ ಸದಾ  ಮಹಾ ಮಹಾ ಪಂಡಿತರನ್ನೇ ಕಾಡಿದೆ, ಮತ್ತು ಇಂದಿಗೂ ಇತ್ಯರ್ಥವಾಗದೆ ಉಳಿದಿದೆ.

ಈ ಕಗ್ಗಕ್ಕೆ ಮತ್ತು ಈ ಕಗ್ಗದ ಹಿಂದಿನ ನಾಲ್ಕು ಕಗ್ಗಗಳಿಗೂ ಮತ್ತು ಮುಂದೆ ಬರುವ ಕಗ್ಗಗಳಿಗೂ ಒಂದು ಹಿನ್ನೆಲೆಯುಂಟು. ಗುಂಡಪ್ಪನವರು ಈ ಕಗ್ಗವನ್ನು ಮೊದಲು  ಪ್ರಕಟಿಸಿದ್ದು ೧೯೪೨ರಲ್ಲಿ. ಆಗ ಜಗತ್ತಿನೆಲ್ಲೆಲ್ಲೂ ಬರ, ಅನಾವೃಷ್ಟಿ ೨ನೆ ವಿಶ್ವ ಯುದ್ಧದ ಕಾಲ. ಎಲ್ಲೆಲ್ಲೂ  ಹಾಹಾಕಾರ, ಆಕ್ರಂದನ, ಬಡತನ ಆಹಾರದ ಕೊರತೆ, ರೋಗ ರುಜಿನಗಳ ಮಹಾಪೂರ ಹೀಗೆ ಹತ್ತು ಹಲವಾರು ಪ್ರಕೊಪಗಳಿಗೆ ಬಲಿಯಾಗಿ ಜನರು ತೊಳಲಾಡುತ್ತಿದ್ದರು. ಹಾಗಾಗಿ  ಡಿ.ವಿ.ಜಿ. ಯವರು ಅಂದಿನ ಪರಿಸ್ತಿತಿಗೆ ಪ್ರತಿಕ್ರಿಯೆಯ ರೂಪದಲ್ಲಿ, ಆ ಪರಮಾತ್ಮನು ಎಲ್ಲರನ್ನೂ ಸೃಷ್ಟಿಸಿ, ಎಲ್ಲರಲ್ಲೂ  ಸಮಾನವಾದ ಪ್ರೀತಿ ಇದ್ದರೆ ಈ ರೀತಿಯ ಸಂಕಷ್ಟಗಳು ಜನರಿಗೆ ಏಕೆ ಎಂಬಂತಹ ಕರುಣಾ ಪೂರಿತವಾದ ಪ್ರಶ್ನೆಗಳನ್ನು ತಮ್ಮನ್ನು ತಾವೇ ಕೇಳಿಕೊಳ್ಳುತ್ತಾರೆ.

ಆದರೆ ವಾಚಕ ಮಿತ್ರರೇ, ಅಂದಿನ ಸ್ಥಿತಿಗೂ  ಇಂದಿನ ಸ್ಥಿತಿಗೂ  ಏನೂ ವ್ಯತ್ಯಾಸವಿಲ್ಲ. ಪ್ರಪಂಚದಲ್ಲಿ ಮಾನವನ ಜೀವನ ಇನ್ನಷ್ಟು ಕ್ಲಿಷ್ಟವಾಗಿದೆ, ಇನ್ನಷ್ಟು ಹದಗೆಟ್ಟಿದೆ, ಸ್ವಾರ್ಥದ ಬುದ್ಧಿ ಇನ್ನಷ್ಟು ಬಲವಾಗಿದೆ, ದೇಶ ದೇಶಗಳನಡುವೆ ದ್ವೇಷದ ಭಾವ ಇನ್ನೂ ಹಾಗೆ ಇದೆ. ಹಳೆಯದನ್ನು ಮರೆತು, ಪ್ರೀತಿ ವಿಶ್ವಾಸದಲಿ, ತೃಪ್ತಿ ಸಂತೋಷದಲಿ  ಬದುಕಿ ಪ್ರಗತಿಯತ್ತ ಹೋಗಲು ಯಾರಿಗೂ ಇಷ್ಟವಿಲ್ಲ. ಹಾಗಾಗಿ ಮಾನ್ಯ ಗುಂಡಪ್ಪನವರು  ಅಂದು ಕೇಳಿದ ಪ್ರಶ್ನೆಗಳು ಇಂದಿಗೂ ಪ್ರಸ್ತುತ. ಹಾಗಾಗಿ ಅವರ ವಿಚಾರಗಳನ್ನು ನಮ್ಮ ಮನಸ್ಸುಗಳಲ್ಲೂ  ವಿಚಾರದ ಓರಗೆ ಹಚ್ಚಿ ನೋಡೋಣ ಬನ್ನಿ ಮಿತ್ರರೇ.

ಇಂದಿನ ದಿನ ನಿಮಗೆಲ್ಲರಿಗೂ ಶುಭವಾಗಲಿ

ನಮಸ್ಕಾರ

ರವಿ ತಿರುಮಲೈ

ಭಗವಂತನು ಬಳಿಯಲ್ಲೇ ಇದ್ದಾನೆ


ಕಾಂಡ:10 ಸೂಕ್ತ:8  ಮಂತ್ರ:32  :ಅಥರ್ವ ವೇದ :    


ಅಂತಿ ಸಂತಂ ನ ಜಹಾತ್ಯಂತಿ ಸಂತಂ ನ ಪಶ್ಯತಿ !
ದೇವಸ್ಯ ಪಶ್ಯ ಕಾವ್ಯಂ ನ ಮಮಾರ ನ ಜೀರ್ಯರ್ತಿ !!


ಭಗವಂತನು ಬಳಿಯಲ್ಲೇ ಇದ್ದಾನೆ ಅವನನ್ನು ಜೀವಾತ್ಮನು ತೊರೆದಿರಲಾರನು ;ಹಾಗೆಯೇ ಶರೀರಧಾರಿಯಾದ ಜೀವನು ಅವನನ್ನು ಚರ್ಮಚಕ್ಶುಗಳಿಂದ ಕಾಣಲಾರನು;ಈ ಪರಮಾತ್ಮನ ಸೃಷ್ಟಿಯು ಅಮರವೂ ಅಜರವೂ ಅವಿನಶ್ವರವೂ ಆದ ಲೀಲಾ ವಿಲಾಸವಾಗಿದೆ.



Naga Prasad

Wednesday, February 22, 2012

Body Remembers Everything



The physical ‘you’ could get confused with erratic eating habits and multiple partners, cautions Sadhguru


Today, it is not considered necessary for you to spend all your life with one partner; a partner could come with an expiry date. When you enter into a relationship, you might think it is forever, but within three months you might think, “Why am I with this person?” Your relationships may not last, but if you get into the habit of falling in and out of love too often; if you play around with too many people, after some time, you could become numb. You might find that you do not like anybody. This is because there is something called Runanabandha.


It Records Everything


Runanabandha is a certain structure of karmic substance; it is a kind of recording in the body. Wherever you mingle with people, some runanabandha is created. And when two people come together, the runanabandha is much deeper. The body keeps a record of everything that has happened. If intimacy happens with another body, your body keeps a record of that particular kind of energy.


Since your body remembers it all, if you have multiple partners, the body slowly gets confused over a period of time and this confusion will tell in your life in a myriad ways. Your mind is confused, but you live with that, somehow. But, if the body gets confused, then, you are in deep trouble.


One of the major reasons for the prevalent high level of anxiety, insecurity and depression is that bodies are confused. After some time, you do not need any reason to go nuts. People are just going nuts without any reason because the body itself is confused.


The body gets confused with multiple intimacies; that’s one thing. Another thing is the type of food you eat. In Indic tradition, orthodox people never ate more than two or three items in a meal, and those three items were always matched together. People understood the body so well that in our homes, when a particular vegetable was cooked, it was done in a certain kind of curry. They never cooked that vegetable in another kind of curry, because they understood that if they put two mismatched things together, the body would get confused.


As young boys, we were trained to pick vegetables when we went to the market. “If you buy this vegetable, you do not buy that vegetable because these two cannot be eaten within a span of two days. If you have eaten this, you should not eat that, because the body will get confused, and once your body gets confused, you will go haywire.” This understanding was always there.


But whenever people become a little affluent, they think they have to eat everything in a single meal. If you go to any upscale dinner, you will see that there is total madness. Recently, at one of the events, someone announced with great pride that they have 270 different varieties of food, and he invited guests to take a little of everything and eat. Imagine how confused your body could get with so many items of food!


So, the two major things which confuse the body are — improper eating habits and indiscriminate indulgence in physical intimacy. These will take a toll over a period of time. This has nothing to do with morals. It is a certain existential process. Every action has a consequence. If you do things with your body, certain consequences will follow. Earlier, these things were deeply understood, and life was structured around them. Now, in the name of freedom we want to demolish everything, hence we suffer. Maybe a time will come centuries later when we will realise that this is not the way to live.




courtesy: speaking tree 

ಮಂಕು ತಿಮ್ಮನ ಕಗ್ಗ - ರಸಧಾರೆ - ಕಗ್ಗ-೭

ಏನು ಜೀವನದರ್ಥ? 


ಬದುಕಿಗಾರ್ ನಾಯಕರು, ಏಕನೋ ಅನೇಕರೋ?
ವಿಧಿಯೋ ಪೌರುಷವೋ ಧರುಮವೋ ಅಂಧಬಲವೋ? 
ಕುದುರುವುದೆಂತು ಈಯವ್ಯವಸ್ಥೆಯ ಪಾಡು? 
ಅದಿಗುದಿಯೆ ಗತಿಯೇನೋ? - ಮಂಕುತಿಮ್ಮ 


ಬದುಕಿಗಾರ್= ಬದುಕಿಗೆ=ಯಾರ್,  ಧರುಮವೋ= ಧರ್ಮವೋ, ಅಂಧಬಲವೋ= ಅಂಧ ಶ್ರದ್ಧೆಯೋ,  ಈಯವ್ಯವಸ್ಥೆಯ = ಈ + ಅವ್ಯವಸ್ಥೆಯ, ಅದಿಗುದಿ = ಸಂದೇಹ ಅಥವಾ ತಳಮಳ. 


ಈ ಬದುಕಿಗೆ ಯಾರು ನಾಯಕರು? ಒಬ್ಬನೇ ಒಬ್ಬನೋ ಅಥವಾ ಅನೇಕರಿದ್ದಾರೆಯೋ? ಅಥವಾ ಈ ಬದುಕಿಗೆ ನಾಯಕ, ವಿಧಿಯೋ,ಧರ್ಮವೋ,ಅಥವಾ ಅಂಧ ಶ್ರದ್ಧೆಯೋ? ಹಿಂದಿನ ಕಗ್ಗದಲ್ಲಿ ಉಲ್ಲೇಖಿಸಿರುವ ಅವ್ಯವಸ್ಥೆ ಸರಿಯಾಗುವುದೋ ಇಲ್ಲವೋ? ಅಥವಾ ಇವೆಲ್ಲರದರ ವಿಚಾರದ ತಳಮಳದಲ್ಲಿಯೇ ನಾವು ಯಾವಾಗಲೂ ಇರಬೇಕೆ?  ಈ ರೀತಿಯ ಪ್ರಶ್ನೆಗಳನ್ನು ಸನ್ಮಾನ್ಯ ಡಿ ವಿ ಗುಂಡಪ್ಪನವರು ತಮ್ಮನ್ನೇ ತಾವು ಕೇಳಿಕೊಳ್ಳುತ್ತಾ, ಓದುಗರ ಮುಂದೆ ಪ್ರಸ್ತಾಪಿಸುತ್ತಾರೆ.  


ಈ ರೀತಿಯ ಸಂದೇಹಗಳು ಎಲ್ಲ ಕಾಲಕ್ಕೂ ಎಲ್ಲ ವಿಚಾರವಂತರಿಗೂ ಮನದಲ್ಲಿ ಉದ್ಭವವಾಗುತ್ತದೆ. " ಕಿಮೇಕಂ ದೈವತಂ ಲೋಕೆ?  ಕಿಂ ವಾಪ್ಯೇಕಂ ಪರಾಯಣಂ?  ಸ್ತುವನ್ತಃ ಕಂಕಮರ್ಚಂತಃ ಪ್ರಾಪ್ನುಯುರ್ಮಾನವಾಃ ಶುಭಂ? ಕೋ ಧರ್ಮಃ ಸರ್ವ ಧರ್ಮಾಣಾಂ ಭವತಃ ಪರಮೌ ಮತಃ ? ಕಿಂ ಜಪನ್ಮುಚ್ಯತೇರ್ಜ೦ತುರ್ ಜನ್ಮ ಸಂಸಾರ ಬಂಧನಾತ್ " ಇವು ಮಹಾಭಾರತದಲ್ಲಿ ಧರ್ಮರಾಯನು ಭೀಷ್ಮರು ಶರ  ಶಯ್ಯೆಯಲ್ಲಿರುವಾಗ, ಸಂಜೆ ನಡೆಯುವ ಸತ್ಸಂಗದಲ್ಲಿ ಕೇಳುವ ಪ್ರಶ್ನೆ. ಒಬ್ಬನೇ ದೇವನಾರು? ಎಲ್ಲಕ್ಕಿಂತ ಮಿಗಿಲಾದ ಧರ್ಮವಾವುದು? ಎಂಬ ಸಂದೇಹಗಳು ಧರ್ಮರಾಯನಿಗೇ ಬರುವುದಾದರೆ, ಇನ್ನು ನಮಗೆ  ಎಂತಹ ಸಂದೇಹಗಳು ಬರಬೇಕು ಹೇಳಿ?    ಇದು ಸಹಜ. ಈ ಸೃಷ್ಟಿಯ ರಹಸ್ಯವನ್ನು ಛೇಧಿಸಲು ಅಷ್ಟು  ಸುಲಭವೇ? 

ದೇವನೊಬ್ಬ ನಾಮ ಹಲವು ಎಂಬ ಮಾತು ಎಲ್ಲರಿಗೂ ಗೊತ್ತಿರುವುದೇ. ಆದರೆ ಆ ದೇವನಾರು? ಮೂರ್ತರೂಪದಲ್ಲಿಹನೆ ಅಥವಾ ಅಮೂರ್ಥನೆ.  ಅಂದರೆ ಆಕಾರ ಉಂಟೆ  ಇಲ್ಲವೇ? ಆ ಜಗತ್ತಿಗೆ ಮತ್ತು ಜಗತ್ತಿನ ಜೀವಿಗಳಿಗೆ ಅವನು ನಾಯಕನೇ? ಧರ್ಮಕ್ಕೆ ನಮ್ಮಲ್ಲಿ ಬಹಳ ಪ್ರಾಧಾನ್ಯವಿದೆ. ಧರ್ಮವೆಂದರೆ ಒಂದು ವಸ್ತುವಿನ ಸ್ವಭಾವ ಎನ್ನುವ ಅರ್ಥವೂ ಇದೆ. ಹಾಗೆಯೆ ಧರ್ಮಕ್ಕೆ ಬೇರೆ ಬೇರೆಯವರು ಬೇರೆ ಬೇರೆ ರೀತಿಯಲ್ಲಿ ವ್ಯಾಕ್ಯಾನ ಮಾಡಿದ್ದಾರೆ .ಹಾಗಾಗಿ ಜಗತ್ತಿನಲ್ಲಿ ಇಷ್ಟೊಂದು ಭಿನ್ನ ಭಿನ್ನ ಮತಗಳು.  ಅಂತ ಧರ್ಮವೇ ಈ ಜಗತ್ತಿನ ನಾಯಕನೇ ? ವಿಧಿ ಎಂದರೆ ಪೂರ್ವ ನಿಯಮಿತ ಕ್ರಮ ಎಂದು ಅರ್ಥ. ಮೊದಲೇ ವಿಧಿಸಿದ ಬಗೆ. ಹಣೆಯ ಬರಹವೆಂದೂ ಅನ್ನುತ್ತಾರೆ. ನಮ್ಮ ಬದುಕನ್ನು ನಡೆಸುವುದು ಈ ಹಣೆಯ ಬರಹವೇ ? ಯಾವುದಾದರೂ ಆಗಲಿ ಅಥವಾ ಇರಲಿ, ಈ  ಜಗತ್ತಿನ ಅಸಮತೆ, ಅಸಮಾನತೆ, ವೈಚಿತ್ರ್ಯ, ಅಥವಾ ಅವ್ಯವಸ್ಥೆಯು ಸರಿಯಾಗುವ ಬಗೆ ಇದೆಯೋ ಇಲ್ಲವೋ ? ಅಥವಾ ಇದನ್ನು ಅರಿಯುವ ಮತ್ತು ನಿರ್ಧರಿಸುವ ತಳಮಳದಲ್ಲಿಯೇ ನಾವು ಎಂದಿಗೂ ಇರಬೇಕೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ   


ದೇವರನ್ನೇ ನಂಬುವ, ದೇವರನ್ನು ಮತ್ತು ಧರ್ಮವನ್ನು ನಂಬುವ (ಇಲ್ಲಿ ಧರ್ಮ ಬೇರೆಯಲ್ಲ ದೇವರು ಬೇರೆಯಲ್ಲ ಎಂಬ ವಾದ ಮಾಡುವವರೂ ಉಂಟು) ದೇವರನ್ನು ಮತ್ತು ವಿಧಿಯನ್ನುಎಂದರೆ ಹಣೆಬರಹವನ್ನೇ ನಂಬುವ ಮತ್ತು ತಮ್ಮ ಸ್ವಶಕ್ತಿಯನ್ನೇ ನಂಬುವ ಎಲ್ಲ ರೀತಿಯ ಜನರು ಜಗತ್ತಿನ ಎಲ್ಲೆಡೆಯಲ್ಲೂ, ಎಲ್ಲ ಮತಗಳಲ್ಲೂ ಇದ್ದಾರೆ.  ಕಾರಣವೇ ತಿಳಿಯದ,  ಈಜಗತ್ತಿನ ಅಸಮಾನತೆ ಜಗತ್ತಿನಲ್ಲಿ ಎಲ್ಲೆಲ್ಲೂ ಇದೆ ಅಲ್ಲವೆ ಇದು ಏಕೆ ಹೀಗೆ,  ಇದು ಸರಿಯಾಗುವುದೋ ಇಲ್ಲವೋ ಎನ್ನುವ ನೆನೆಗುದಿಯಲ್ಲೇ ಮಾನವರು ಬದುಕು ದೂಡುತ್ತಿದ್ದಾರೆ. ಇಂತಹ ಭಾವಗಳನ್ನೇ ವ್ಯಕ್ತಪಡಿಸುತ್ತಾರೆ ಮಾನ್ಯ ಗುಂಡಪ್ಪನವರು. 


ಇಂತಹ    ಸಂದೇಹಗಳು ನಮ್ಮ ನಿಮ್ಮ ಮತ್ತು ಸಕಲರಲ್ಲೂ ಉಂಟಾಗುತ್ತದಲ್ಲವೇ?


ಮಿತ್ರರೇ  ಬನ್ನಿ ನಾವು ನೀವು ಎಲ್ಲರೂ ಇಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲು , ವಿಚಾರ ಮಾಡುವ, ವಿಚಾರ ಮಾಡುತ್ತಾ ಮಾಡುತ್ತಾ ಮುಂದಿನ ಕಗ್ಗಕ್ಕೆ ಹೋಗುವ. 


ಇಂದಿನ ದಿನ ನಿಮಗೆಲ್ಲರಿಗೂ ಶುಭವಾಗಲಿ.
ನಮಸ್ಕಾರ 
ರವಿ ತಿರುಮಲೈ 

Tuesday, February 21, 2012

ಮಂಕು ತಿಮ್ಮನ ಕಗ್ಗ - ರಸಧಾರೆ (೬)











ಏನು ಜೀವನದರ್ಥ?


   ಒಗಟೆಯೇನೀ ಸೃಷ್ಟಿ? ಬಾಳಿನರ್ಥವೇನು ?

   ಬಗೆದು ಬಿಡಿಸುವರಾರು ಸೋಜಿಗವನಿದನು ?
   ಜಗವ ನಿರವಿಸಿದ ಕೈಯೊಂದಾದೊಡೇಕಿಂತು
   ಬಗೆ ಬಗೆಯ ಜೀವಗತಿ ? - ಮಂಕುತಿಮ್ಮ



ಒಗಟೆಯೇನೀ (ಒಗಟೇ+ ಏನು+ ಈ) ಸೃಷ್ಟಿ? ಬಾಳಿನ ಅರ್ಥವೇನು. ಬಗೆ ಬಿಡಿಸುವವರು ಯಾರು ಸೋಜಿಗವ ಇದನು.

ಜಗವ ನಿರವಿಸಿದ ( ನಿರ್ಮಿಸಿದ) ಕೈ ಒಂದು ಆಡೋದೇ ( ಆದರೆ ) ಏಕೆ ಇಂತು( ಹೀಗೆ)  ಬಗೆ ಬಗೆಯ ಜೀವಗತಿ - ಮಂಕುತಿಮ್ಮ.



ಈ ಸೃಷ್ಟಿಯು ಒಗಟೇ? ಈ ಬಾಳಿಗೆ ಅರ್ಥವೇನು ?. ಆದರೆ ಈ ಒಗಟನ್ನು ಬಿಡಿಸುವವರು ಯಾರು. ಈ ಜಗತ್ತನ್ನು ಸೃಷ್ಟಿಮಾಡಿದ ಕೈ ಒಂದೇ ಆದರೆ , ಸೃಷ್ಟಿಯಲ್ಲಿ ಸಮಾನತೆಯೇಕಿಲ್ಲ  ?

ಬೇರೆ ಬೇರೆಯಾದ ಜೀವಗತಿ ಏಕೆ? ಎನ್ನುವ ಪ್ರಶ್ನೆಗಳನ್ನು ತಮಗೆ ತಾವೇ ಕೇಳಿಕೊಳ್ಳುವ ರೀತಿಯಲ್ಲಿ ಶ್ರೀ ಗುಂಡಪ್ಪನವರು, ನಮ್ಮೆಲ್ಲರ ಮುಂದೆ ಈ ಕಗ್ಗದ ರೂಪದಲ್ಲಿ ಇಟ್ಟಿದ್ದಾರೆ.



ಎಲ್ಲ ಜೀವಿಗಳಲ್ಲೂ  ಇರುವ ಆ ಚೇತನವು ಜ್ಞಾನ ಸ್ವರೂಪ. ಆದರೆ ಕೆಲವರು ಜ್ಞಾನಿಗಳು ಮತ್ತೆ ಕೆಲವರು ಏಕಿಲ್ಲ ಎಂದರೆ, ಕೆಲವರ ಕನ್ನಡಿ ಒರೆಸಿ ಶುದ್ಧವಾಗಿದೆ.

ಕೆಲವರ ಕನ್ನಡಿಯ ಮೇಲೆ ಧೂಳು ಕೂತಿದೆ. ದೂಳನ್ನು ಒರೆಸಿದರೆ ಅದೂ ಸಹ ಪ್ರಕಾಶಿಸುತ್ತಾ, ಶುದ್ಧ ಬಿಂಬವನ್ನು ಪ್ರತಿಫಲಿಸುತ್ತದೆ.



ಆದರೂ ಏನಿದು  ಪ್ರಪಂಚ ಎಂಬ ಪ್ರಶ್ನೆ  ಮತ್ತು ಅರ್ಥವೇ ಆಗುವುದಿಲ್ಲವಲ್ಲ ಅಥವಾ ನಮಗೆ ಅರ್ಥವಾಗಿರುವುದು ಪೂರ್ಣವಲ್ಲ ಎಂಬ ಭಾವ ಎಲ್ಲರಿಗೂ ಬರುತ್ತದೆ. ಇದು ಅರ್ಥವಾಗದ ಗಂಟಾದರೆ ಯಾರಾದರೂ  ಬಿಡಿಸಬಹುದಲ್ಲ ಎನ್ನುವ ಪ್ರಶ್ನೆಯೂ ಉದ್ಭವವಾಗುತ್ತದೆ.

ಈ ಜಗತ್ತನ್ನು ನಿರ್ಮಿಸದ ಅಥವಾ ಸೃಷ್ಟಿಸಿದ "ಕೈ"  ಒಂದೇ  ಎಂದಾದರೆ, ವಿಧವಿದವಾದ ಅಸಮತೆಯಿಂದ ಏಕೆ ಕೂಡಿದೆ ಎನ್ನುವ ಸಂದೇಹ, ಪ್ರಶ್ನೆ ವಿಚಾರವಂತರಾದ ಎಲ್ಲರ ಮನಸ್ಸಲ್ಲೂ ಉದ್ಭವವಾಗುತ್ತದೆ ಅಲ್ಲವೇ, ಹಾಗೆಯೆ ಇದೆ ಈ ಕಗ್ಗದ ಭಾವ.



ನಾ ಹಿಂದೆಯೇ ಹೇಳಿದಂತೆ, ಈ ಜಗತ್ತಿನ ಗುಟ್ಟನ್ನು ಚೇಧಿಸಲು ಈ ವರೆಗೆ ಯಾರಿಂದಲೂ ಸಾಧ್ಯವಾಗಿಲ್ಲ. ಪ್ರಯತ್ನಪಟ್ಟವರಿಗೆಲ್ಲ  ಒಂದೊಂದು  ರೂಪದಲ್ಲಿ ಕಾಣುವ ಈ ಜಗತ್ತಿನ ನಿಜ ರೂಪ ಕಂಡುಕೊಳ್ಳುವಲ್ಲಿ ಯಾರೂ ಪೂರ್ಣ ಸಫಲರಲ್ಲ. ಹಾಗೆಯೇ ಈ ಜಗತ್ತಿನ ಎಲ್ಲ ಜೀವರಾಶಿಗಳಲ್ಲೂ ಹೇರಳವಾದ ವೈವಿಧ್ಯತೆ. ಒಬ್ಬ ಮನುಷ್ಯನಿದ್ದಂತೆ ಇನ್ನೊಬ್ಬನಿಲ್ಲ. ಒಬ್ಬನ ಮನಸ್ಸು ಬುಧ್ಧಿಗಳಿದ್ದಂತೆ  ಮತ್ತೊಬ್ಬರದ್ದಿಲ್ಲ. ಅವರವರ  ಜೀವನ ಅವರವರದ್ದು. ಅವರವರ ಭಾಗ್ಯ ಅವರವರದ್ದು. ಒಬ್ಬರ ನೋವು ಮತ್ತು ಆ ನೋವಿಗೆ ಕಾರಣ ಮತ್ತೊಬ್ಬರ ನೋವು ಮತ್ತು ಅದರ ಕಾರಣದಂತಿಲ್ಲ.



ಒಬ್ಬರ ಸುಖ ಮತ್ತದರ ಕಾರಣ ಇನ್ನೊಬ್ಬರಿಗಿಲ್ಲ. ಒಬ್ಬನ ಸುಖದ ಕಾರಣವು ಮತ್ತೊಬ್ಬರ ದುಃಖಕ್ಕೆ ಕಾರಣವಾಗಬಹುದು.ಇದರ ಗುಟ್ಟನ್ನು ಬಿಡಿಸುವವರಾರು? ಈ ಎಲ್ಲವೂ ಮಾನವನಿಗಷ್ಟೆ ಅಲ್ಲ ಸಕಲ ಪ್ರಾಣಿಗಳಿಗೂ ಅನ್ವಯಿಸಿದ್ದತೆ. ನಮ್ಮ ಮನೆಯ ಬೀದಿಯಲ್ಲಿ ಒಂದು ಮುದಿ ನಾಯಿ ಹೊತ್ತು ಹೊತ್ತಿನ ಊಟಕ್ಕೆ ಹೋರಾಡುವಾಗ, ಹಾಕಿದ್ದ ಯಾವುದನ್ನೂ ತಿನ್ನಲಾಗದೆ ಮುದಿತನ, ಸಾವು, ಬದುಕಗಳ ಮಧ್ಯದಲ್ಲಿನರಳುವಾಗ ,  ಅಥವಾ ಬಹಳ ದಿನಗಳಿಂದ ಬೆಳೆದು ಹೆಮ್ಮರವಾಗಿ ಎಲ್ಲರಿಗೂ ನೆರಳನ್ನೂ ಪ್ರಾಣಿ  ಪಕ್ಷಿಗಳಿಗೆ ಆಹಾರವನ್ನೂ ಆಶ್ರಯವನ್ನೂ ನೀಡಿದ ಒಂದು ಮರವನ್ನು ಯಾವುದೋ ಕಾರಣಕ್ಕೆ ಕಡಿದಾಗಲೂ ಹೇ! ಪರಮಾತ್ಮ ಏನಿದು ಈ ಜೇವಿಯ ಅವಸ್ಥೆ ಎಂದು ನನ್ನ ಮನಸ್ಸು ಕರಗುತ್ತದೆ.ಆದರೆ ಅದರ ಅವಸ್ಥೆಗೆ ಉತ್ತರ ಖಂಡಿತ ನನಗೆ ಸಿಗುವುದಿಲ್ಲ. ಇದು ಎಲ್ಲ ಪ್ರಾಣಿಗಳ ಪರಿಸ್ತಿತಿ.



ಅಷ್ಟೇ ಅಲ್ಲ ಇಂದು ಸುಖ ನಾಳೆ ದುಖ, ಇಂದು ಆರೋಗ್ಯ ನಾಳೆ ಅನಾರೋಗ್ಯ, ಇಂದು ಮಿತ್ರ ನಾಳೆ ಶತ್ರು, ಇಂದು ಸಂತೋಷ ನಾಳೆ ಬೇಸರ ಹೀಗೆ ಇಂದು ನಾಳೆಗಳಲ್ಲಿ ಮತ್ತು ದಿನದಿನಕ್ಕೆ ಬೇರೆಬೇರೆಯೇ ಭಾವಗಳು ಈ ರೀತಿಯ ವೈವಿಧ್ಯಕ್ಕೆ ಕಾರಣರಾರು ಅಥವಾ ಕಾರಣವೇನು? ನಾವೆಷ್ಟು ಕಾರಣ?  ಪರರೆಷ್ಟು ಕಾರಣ? ವಿಧಿಯೆಷ್ಟು ಕಾರಣ?  ವಿಧಾತನೆಷ್ಟು ಕಾರಣ? ಹೇಗೆ ಹತ್ತು ಹಲವಾರು ಪ್ರಶ್ನೆಗಳ ಭಾವವೇ ಈ ಆರನೆಯ ಕಗ್ಗ. ಈ ಕಗ್ಗದಲ್ಲಿ ಬರುವ ಸೂಕ್ತ ಪ್ರಶ್ನೆಗಳು ನಮ್ಮ ನಿಮ್ಮಲ್ಲಿಯೂ ಸಹ ಎಂದಾದರೂ ಉದ್ಭವಿಸಿರಬಹುದು ಉತ್ತರ ಸಿಕ್ಕಿಲ್ಲ ದಿರಬಹುದು

ಮಿತ್ರರೇ  ಬನ್ನಿ ನಾವು ನೀವು ಎಲ್ಲರೂ ಇಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲು , ವಿಚಾರ ಮಾಡುವ, ವಿಚಾರ ಮಾಡುತ್ತಾ ಮಾಡುತ್ತಾ ಮುಂದಿನ ಕಗ್ಗಕ್ಕೆ ಹೋಗುವ.

ಇಂದಿನ ದಿನ ನಿಮಗೆಲ್ಲರಿಗೂ ಶುಭವಾಗಲಿ.