Pages

Wednesday, January 29, 2014

ಅರಸೀಕೆರೆಯಲ್ಲಿ ಹಾಸನದ ವೇದಭಾರತೀ ಸದಸ್ಯರಿಂದ ಅಗ್ನಿಹೋತ್ರ

Photo: ಅರಸೀಕೆರೆಯ ವಾಸವೀ ಯುವಜನಸಂಘವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಾಸನದ ವೇದಭಾರತೀ ಸದಸ್ಯರಿಂದ ಅಗ್ನಿಹೋತ್ರ ಮತ್ತು ವಿವರಣೆ.

ಅರಸೀಕೆರೆಯ ವಾಸವೀ ಯುವಜನಸಂಘವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಾಸನದ ವೇದಭಾರತೀ ಸದಸ್ಯರಿಂದ ಅಗ್ನಿಹೋತ್ರ ಮತ್ತು ವಿವರಣೆ.

ಸಾಧಕರಿಗೆ ಯೋಗ್ಯವಾದ ಸ್ಥಳ ಹಾರನಹಳ್ಳಿಯ ತಪಸ್ವೀ ಆಶ್ರಮ




















       ಅರಸೀಕೆರೆಯ ವಾಸವೀ ಯುವಜನ ಸಂಘದವರ ಆಹ್ವಾನದ ಮೇರೆಗೆ ಅರಸೀಕೆರೆಗೆ ಹೊರಟಿದ್ದೆವು. ಹಾಸನದಿಂದ ಅರಸೀಕೆರೆಗೆ ಹೋಗಬೇಕಾದರೆ ಹಾರನಹಳ್ಳಿಯ ಮಾರ್ಗವಾಗೇ ಹೋಗಬೇಕು. ಹಾಸನದಿಂದ ಹೋಗುವಾಗ  ಹಾರನಹಳ್ಳಿ      ಮುಂಚೆಯೇ  ರಸ್ತೆಯ ಬದಿಯಲ್ಲಿರುವ  "ತಪಸ್ವೀ ಆಶ್ರಮದ " ಫಲಕ ನಮ್ಮನ್ನು ಸೆಳೆಯದೆ ಬಿಡಲಿಲ್ಲ. ಟೆಂಪೋ ಟ್ರಾವೆಲ್ಲರ್ ನಿಂದ ಇಳಿದ ಕೂಡಲೇ ನಮ್ಮನ್ನು ವಿಚಾರಿಸಿದವರು ಶ್ರೀ ವೆಂಕಟಾಚಲ ಅವರು. ಕೈಕಾಲು ತೊಳೆದುಕೊಂಡು ಕಾಫಿ ತೆಗೆದುಕೊಂಡು  ದರ್ಶನ ಮಾಡಲು ತಿಳಿಸಿದರು.ಅರಸೀಕೆರೆಯ ಕಾರ್ಯಕ್ರಮಕ್ಕೆ  ಇನ್ನೂ ಒಂದು ಗಂಟೆ ಸಮಯವಿತ್ತು.  ಕೈಕಾಲು ತೊಳೆದ ನಾವು ಶಂಕರರ ಸನ್ನಿಧಿಯಲ್ಲಿ ಕುಳಿತು ಒಂದೆರಡು ವೇದ ಮಂತ್ರ ಹೇಳಿದೆವು. ನಂತರ ಕಾಫಿ ಹೀರಿ ಪಿರಮಿಡ್ ಧ್ಯಾನ ಮಂದಿರಕ್ಕೆ ತೆರಳಿದೆವು. ಅಲ್ಲಿ ಹದಿನೈದು ನಿಮಿಷ ಧ್ಯಾನ ಮಾಡಿ  ಯೋಗಿ ನರಸಾರ್ಯರ ವೇದಿಕೆಯೊಳಗೆ ಪ್ರವೇಶಿಸಿದೆವು. ಅಲ್ಲಿ ಪುನ: ಹತ್ತು ನಿಮಿಷ ಕುಳಿತೆವು. ಅಂತೂ ಒಂದು ಗಂಟೆ ಕಳೆದದ್ದು ಗೊತ್ತೇ ಆಗಲಿಲ್ಲ. ಪ್ರಶಾಂತ ವಾತಾವರಣದಲ್ಲಿರುವ ಈ ಆಶ್ರಮದಲ್ಲಿ ಬಂದವರಿಗೆ ಅನ ಪ್ರಸಾದದ ವ್ಯವಸ್ಥೆಯೂ ಇದೆ. ಎಲ್ಲ ವ್ಯವಸ್ಥೆಯನ್ನೂ ಮಾಡಿರುವವರು  ದಿ|| ಹಾರನಹಳ್ಳಿ ರಾಮಸ್ವಾಮಿಯವರ ಪುತ್ರರಾದ ಶ್ರೀ ಅಶೋಕ್ ಹಾರನಹಳ್ಳಿ ಯವರು.




Tuesday, January 21, 2014

ಸಹ ನಾವವತು

ಓಂ ಸಹ ನಾವವತು ಸಹ ನೌ ಭುನಕ್ತು
ಸಹ ವೀರ್ಯಂ ಕರವಾವಹೈ |
ತೇಜಸ್ವಿ ನಾವಧೀತಮಸ್ತು ಮಾ ವಿದ್ವಿಷಾವಹೈ||
ಓಂ ಶಾಂತಿ: ಶಾಂತಿ: ಶಾಂತಿ: ||

ಈ ಮಂತ್ರದ ಅರ್ಥ ತಿಳಿಯುವುದು ಸೂಕ್ತ.

ಸಹನಾ ವವತು = ಎಲ್ಲರೂ ಪರಸ್ಪರ ಒಬ್ಬರು ಇನ್ನೊಬ್ಬರ ರಕ್ಷ್ಯಣೆಯನ್ನು ಮಾಡೋಣ
ಸಹ ನೌ ಭುನಕ್ತು =  ಎಲ್ಲರೂ ಪರಮ ಪ್ರೀತಿಯಿಂದ ಆನಂದವನ್ನು ಅನುಭವಿಸೋಣ
ಸಹ ವೀರ್ಯಂ ಕರವಾವಹೈ = ನಾವೆಲ್ಲರೂ ಪುರುಷಾರ್ಥದಿಂದ ಎಲ್ಲರ ಸಾಮರ್ಥ್ಯವನ್ನು ವರ್ಧಿಸೋಣ
ತೇಜಸ್ವಿ ನೌ ಅಧೀತಮಸ್ತು = ನಮ್ಮೆಲ್ಲರ ತೇಜಸ್ಸು ವರ್ಧಿಸಲಿ
ಮಾ ವಿದ್ವಿಷಾವಹೈ = ನಾವೆಲ್ಲರೂ ಪರಸ್ಪರ ವಿರೋಧವನ್ನು ಎಂದಿಗೂ ಮಾಡದಂತೆ,
ಮಿತ್ರರಾಗಿ ಸದಾ ಇರುವಂತೆ ಮಾಡು
ಶಾಂತಿ: ಶಾಂತಿ: ಶಾಂತಿ:

ಮೂರು ಶಾಂತಿ ಏಕೇ?
೧.ಆಧ್ಯಾತ್ಮಿಕ [ಆತ್ಮಕ್ಕೆ ಸಂಬಂಧಿಸಿದ ದು:ಖ]
೨.ಆಧಿ ಭೌತಿಕ[ದುರ್ಬಲನಿಗೆ ಪ್ರಬಲನಿಂದ ಆಗುವ ದು:ಖ]
೩.ಆಧಿ ದೈವಿಕ = ಪ್ರಕೃತಿ ವಿಕೋಪದಿಂದುಂಟಾಗುವ ದು:ಖ
[ಆಧಿ = ದು:ಖ]

ಭಾವಾರ್ಥ:

       ಓ ಭಗವಂತಾ! ನಮ್ಮೆಲ್ಲರಿಗೂ ಪರಸ್ಪರ ರಕ್ಷಣೆ ಮಾಡಿಕೊಳ್ಳುವ ಸಾಮರ್ಥ್ಯ ಕೊಡು. ಎಲ್ಲರೂ ಪರಸ್ಪರ ಪ್ರೀತಿಯಿಂದ ಆನಂದವನ್ನು ಅನುಭವಿಸುವಂತಾಗಲಿ. ನಮ್ಮೆಲ್ಲರ ತೇಜಸ್ಸು ವರ್ಧಿಸಲಿ. ನಾವೆಲ್ಲರೂ ಪರಸ್ಪರ ವಿರೋಧವನ್ನು ಎಂದಿಗೂ ಮಾಡದಂತೆ, ಮಿತ್ರರಾಗಿ  ಸದಾ ಇರುವಂತೆ ಮಾಡು.

ಈ ಮಂತ್ರಕ್ಕೂ ಭೋಜನಕ್ಕೂ ಏನೂ ಸಂಬಂಧವಿಲ್ಲ. ಆದರೂ ಊಟಮಾಡುವಾಗ ಹೇಳುವ ಪದ್ದತಿ ಬೆಳೆದು ಬಂದಿದೆ. ತಪ್ಪೇನಿಲ್ಲ. ಆದರೆ ಮಂತ್ರದ ಅರ್ಥ ಗೊತ್ತಿರಬೇಕು.

Sunday, January 19, 2014

ಜೀವನ ವೇದ-2


                                       
ಒಂದು ಸಂಮೃದ್ಧವಾದ ಮನೆ ಅಂದರೆ ಹೇಗಿರಬೇಕು? ಮನೆಯ ಯಜಮಾನ ಹೇಗಿರಬೇಕು? ಎಂಬ ವಿಚಾರವನ್ನು  ಅಥರ್ವಣ ವೇದದಲ್ಲಿನ ಒಂದು ಮಂತ್ರದಲ್ಲಿ ಹೀಗೆ ಹೇಳಿದೆ.

ಇಮೇ ಗೃಹಾ ಮಯೋಭುವ ಊರ್ಜಸ್ವಂತ: ಪಯಸ್ವಂತ:|
ಪೂರ್ಣಾ ವಾಮೇನ ತಿಷ್ಠಂತಸ್ತೇ ನೋ ಜಾನಂತ್ವಾಯತ: ||

[ಅಥರ್ವಣದ ೭ನೇ ಕಾಂಡದ ೬೦ನೇ ಸೂಕ್ತದ ೨ನೇ ಮಂತ್ರ]

ಈ ಮಂತ್ರದ ಅರ್ಥವೇನೆಂದರೆ ನಮ್ಮ ಮನೆಗಳು ಆಹಾರಧಾನ್ಯಗಳಿಂದಲೂ ಹಾಲು ಮೊಸರಿನಿಂದಲೂ ತುಂಬಿದ್ದು,ಎಲ್ಲರಿಗೂ ಈ ಮನೆಯಲ್ಲಿ ಸುಖಶಾಂತಿ ನೆಮ್ಮದಿ ಸಿಗುವಂತಾಗಲೀ.
ಈ ಮಂತ್ರವನ್ನು ಹೇಗೆ ಅರ್ಥಮಾಡಿಕೊಳ್ಳ ಬೇಕು? ಒಂದು ಗೌರವಯುತ ಗೃಹವೆಂದರೆ ಆ ಮನೆಯಲ್ಲಿ ಆಹಾರಧಾನ್ಯದ ಸಂಗ್ರಹವಿರಬೇಕು.ಆಹಾರಧಾನ್ಯದ ಸಂಗ್ರಹವಿರಬೇಕೆಂದರೆ ಆ ಮನೆಯೊಡೆಯ ಆಹಾರಧಾನ್ಯವನ್ನು ಸಂಮೃದ್ಧವಾಗಿ ಬೆಳೆದಿರಬೇಕು.ಹಾಲು ಮೊಸರು ಸದಾಕಾಲವಿರುವಂತೆ ಹಸುಕರುಗಳನ್ನು ಸಾಕಿಕೊಂಡಿರಬೇಕು. ಮನೆಗೆ ಅತಿಥಿಗಳು ಸಂತೋಷದಿಂದ ಬಂದುಹೋಗುವಂತಿರಬೇಕು. ಮನೆಯಲ್ಲಿ ಸುಖಶಾಂತಿ ನೆಮ್ಮದಿ ನೆಲಸಿರಬೇಕು.

ಮನೆಯ ಯಜಮಾನ ಹೇಗಿರಬೇಕು?

ಊರ್ಜಂ ಬಿಭ್ರದ್ ವಸುವನೀ ಸುಮೇಧಾ
ಅಘೋರೇಣ ಚಕ್ಷುಷಾಮಿತ್ರಿಯೇಣ|
ಗೃಹಾನೈಮಿ ಸುಮನಾ ವಂದಮಾನೋ
ರಮಧ್ವಂ ಮಾ ಬಿಭೀತ ಮತ್||
[ಅಥರ್ವಣದ ೭ನೇ ಕಾಂಡದ ೬೦ನೇ ಸೂಕ್ತದ ೧ನೇ ಮಂತ್ರ]

 ಈ ಮಂತ್ರದ ಅರ್ಥ ಹೀಗಿದೆ. ಮನೆಯ ಯಜಮಾನನು ಶಕ್ತಿವಂತನಾಗಿರಬೇಕು, ಧನಾರ್ಜನೆ ಮಾಡುತ್ತಿರಬೇಕು,ಮೇಧಾವಂತನಾಗಿರಬೇಕು,ಮನೆಯ ಸದಸ್ಯರೊಡನೆ ಕ್ರೋಧರಹಿತನೂ,ಸ್ನೇಹಪೂರ್ಣ ಕಣ್ಣುಗಳಿಂದ ನೋಡುವವನೂ, ಸುಪ್ರಸನ್ನ ಮನಸ್ಸುಳ್ಳವನೂ,ಎಲ್ಲರಿಂದ ಪ್ರಶಂಸಿಸಲ್ಪಡುವವನೂ ಆಗಿದ್ದು ಮನೆಯ ಸದಸ್ಯರಿಗೆ  ನೀವು ನನಗೆ ಹೆದರಬೇಕಾಗಿಲ್ಲ, ಸಂತೋಷದಿಂದಿರಿ, ಎಂಬ ಸಂತೈಸುವ ಮಾತುಗಳನ್ನಾಡುತ್ತಾ ಎಲ್ಲರೊಡನೆ ಆನಂದದಿಂದ ಪ್ರಸನ್ನನಾಗಿರಬೇಕು.

ಈ ಮಂತ್ರದ ಒಂದೊಂದೂ ಶಬ್ಧಗಳೂ ಅತ್ಯಂತ ಮಹತ್ವ ಉಳ್ಳವುಗಳೇ ಆಗಿವೆ. ಈ ಮಂತ್ರದ ಒಂದೊಂದೇ ಶಬ್ಧದ ಬಗ್ಗೆ ವಿಚಾರ ಮಾಡೋಣ. ಮನೆಯ ಯಜಮಾನನಿಗಿರಬೇಕಾದ ಪ್ರಥಮ ಅರ್ಹತೆ ಎಂದರೆ.. . . . . .

ಊರ್ಜನ್ ಬಿಭ್ರತ್

ಊರ್ಜಮ್ ಎಂದರೆ ಪ್ರಾಣಬಲ ಅಥವಾ ಶಕ್ತಿ, ಬಿಭ್ರತ್ ಅಂದರೆ ಧಾರಣೆ ಮಾಡು, ಅಂದರೆ ಮನೆಯ ಯಜಮಾನನು ಶಕ್ತಿಯನ್ನು ಹೊಂದಿದವನಾಗಿರಬೇಕು. ಈ ಸಂಸಾರವೆಂಬುದು ಸಾಗರ. ಈ ಸಾಗರವನ್ನು ದಾಟಲು ಶಕ್ತಿ ಬೇಡವೇ? ವೈದಿಕ ಸಂಸ್ಕೃತಿಯಲ್ಲಿ ದುರ್ಬಲನಿಗೆ ಗೃಹಸ್ಥಾಶ್ರಮದಲ್ಲಿ ಪ್ರವೇಶವೇ ಇಲ್ಲ.
 ಮನು ಹೇಳುತ್ತಾನೆ ಯೋಧಾರ್ಯೋ ದುರ್ಬಲೇಂದ್ರಿಯೈ: ದುರ್ಬಲ ಇಂದ್ರಿಯ ಉಳ್ಳವರು ಮತ್ತು ಹೆದರುವವರು ಗೃಹಸ್ಥಾಶ್ರಮ ಸ್ವೀಕರಿಸಲು ಅರ್ಹರಲ್ಲ.ಅಂತವರು ಗೃಹಸ್ಥಾಶ್ರಮವನ್ನು ಪ್ರವೇಶಿಸಬಾರದು.
ಮನೆಯ ಯಜಮಾನನು ಶಕ್ತಿಶಾಲಿಯಾಗಿದ್ದರೆ ಅವನಲ್ಲಿ ಯಾರ ಬಗ್ಗೆಯೂ ದ್ವೇಷ,ಅಸೂಯೆ, ಮಾತ್ಸರ್ಯ ಭಾವನೆಗಳಿರದೆ ಎಲ್ಲರೊಡನೆ  ಪವಿತ್ರಪ್ರೇಮ ಭಾವ ಇದ್ದು ಕುಟುಂಬವು ಸಂತಸದಿಂದ ಇರುತ್ತದೆ. ಯಜಮಾನನೇನಾದರೂ ಶಕ್ತಿಹೀನನಾಗಿದ್ದರೆ ಸಣ್ಣ ಸಣ್ಣ ವಿಷಯಗಳಿಗೂ ಎಲ್ಲರ ಮೇಲೆ ಕೋಪ ಮಾಡಿಕೊಂಡು ರೇಗಾಡುತ್ತಾ  ಕುಟುಂಬದ ನೆಮ್ಮದಿಯು ಹಾಳಾಗುತ್ತದೆ. ಆದ್ದರಿಂದ ಗೃಹಸ್ಥನು ತನ್ನ ಶರೀರ ಮತ್ತು  ಇಂದ್ರಿಯಗಳನ್ನು ಶಕ್ತಿಯುತವಾಗಿ ಇಟ್ಟುಕೊಳ್ಳಬೇಕೆಂಬುದು ವೇದದ ಆಶಯ. ಯಜಮಾನನಿಗಿರಬೇಕಾದ ಎರಡನೆಯ ಅರ್ಹತೆ ಎಂದರೆ. . . . .  .

ವಸುವನಿ:
ವಸುವನೀ ಎಂದರೆ ಉತ್ತಮ ಮಾರ್ಗದಲ್ಲಿ ಧರ್ಮದಿಂದ ಧನವನ್ನು ಸಂಪಾದಿಸುವವರು ಎಂದು ಅರ್ಥ. ವಾಮ ಮಾರ್ಗದಲ್ಲಿ ಎಂದೂ ಹಣವನ್ನು  ಸಂಪಾದಿಸ ಕೂಡದು. ಇದು ವೇದದ ಆದೇಶ. ಅಗ್ನೇ ನಯ ಸುಪಥಾ ರಾಯೇ ಎಂದರೆ ಧನವನ್ನು ಸಂಪಾದಿಸಲು ನಮ್ಮನ್ನು ಉತ್ತಮ ಮಾರ್ಗದಲ್ಲಿ ಕರೆದುಕೊಂಡು ಹೋಗು, ಎಂದು  ಭಗವಂತನಲ್ಲಿ ಪ್ರಾರ್ಥಿಸುವ  ಒಂದು ವೇದಮಂತ್ರವಿದೆ. ನಮ್ಮ ಧರ್ಮಶಾಸ್ತ್ರಗಳು ಏನು ಹೇಳುತ್ತವೆ? ನೋಡೋಣ. . . .
ಅನ್ಯೇಯೇನಾಗತಾ ಲಕ್ಷ್ಮೀ: ಖದ್ಯೋತ ಇವ ದೀಪ್ಯತೇ|
ಕ್ಷಣಂ ಪ್ರಕಾಶ್ಯ ವಸ್ತೂನಿ ನಿರ್ವಾಣೇ ಕೇವಲಂ ತಮ: ||

ಅನ್ಯಾಯದಿಂದ ಸಂಪಾದಿಸಿದ ಹಣವು ಆಕ್ಷಣಕ್ಕೆ ಪ್ರಕಾಶಿಸುವಂತೆ ಭಾಸವಾಗುತ್ತದೆ. ಆದರೆ ಸ್ವಲ್ಪ ಸಮಯದ ನಂತರ ಬೆಳಕೆಲ್ಲಾ ಕರಗಿ ಅಂಧಕಾರವೇ ವ್ಯಾಪಿಸುತ್ತದೆ. ಈ ಅರಿವು ಅಧಿಕಾರಿಗಳಲ್ಲಿ,ರಾಜಕಾರಣಿಗಳಲ್ಲಿ, ವ್ಯಾಪಾರಿಗಳಲ್ಲಿ ಇದ್ದಿದ್ದರೆ ದುರ್ಮಾರ್ಗದಲ್ಲಿ ಹಣವನ್ನು ಸಂಪಾದಿಸಿ ನಂತರ ಜೈಲು ಸೇರುವ ಸಂದರ್ಭ ಬರುತ್ತಿರಲಿಲ್ಲ, ಅಲ್ಲವೇ?
ಹಾಗಾದರೆ ಹಣವನ್ನು ಹೇಗೆ ಸಂಪಾದಿಸಬೇಕು?

ಅಕೃತ್ವಾ ಪರಸಂತಾಪಮ್
ಅಗತ್ವಾ ಖಲ ನಮ್ರತಾಮ್|
ಅನುತ್ಸೃಜ್ಯ ಸತಾಂ ಮಾರ್ಗಮ್
ಯತ್ ಸ್ವಲ್ಪಮಪಿ ತದ್ ಬಹು||

ಯಾರಿಗೂ ಕಷ್ಟವನ್ನು ಕೊಡದೆ, ದುರ್ಜನರಿಗೆ ತಲೆಬಾಗದೆ, ಸನ್ಮಾರ್ಗವನ್ನು ಬಿಡದೆ, ಸ್ವಲ್ಪ ದುಡಿದರೂ ಅದೇ ಬಹಳವೆಂದು ದುಡಿದ ಸಂಪಾದನೆಯೇ ಶ್ರೇಷ್ಠ.
ವಸುವನೀ ಪದದ ಬಗ್ಗೆ ವಿಮರ್ಶೆ ಮಾಡುತ್ತಿದ್ದೆವಲ್ಲವೇ? ವಸು ಎಂಬ ಪದಕ್ಕೆ ವ್ಯವಸ್ಥಿತವಾದ ಯೋಗ್ಯ ಜೀವನವೆಂದೂ ಅರ್ಥವಿದೆ. ನಾವು ಎಷ್ಟು ಹಣ ಸಂಪಾದಿಸುತ್ತೇವೆಂಬುದಕ್ಕಿಂತ ಎಷ್ಟು ಸರಳವಾಗಿ ಕಡಿಮೆ ಖರ್ಚಿನಲ್ಲಿ ಜೀವನ ಮಾಡುತ್ತೇವೆಂಬುದೂ ಗಣನೆಗೆ ಬರುತ್ತದೆ. ಆದ್ದರಿಂದ ನೆಮ್ಮದಿಯ ಜೀವನಕ್ಕೆ ಹೆಚ್ಚು ಸಂಪಾದನೆ ಬೇಕೆಂದೇನೂ ಅಲ್ಲ, ಆದರೆ ದುಡಿಮೆಯನ್ನು ವ್ಯವಸ್ಥಿತವಾಗಿ ಖರ್ಚು ಮಾಡುತ್ತಾ ಸಂಸಾರ ಮಾಡುವವನನ್ನೂ ವಸುವನೀ ಎನ್ನಬಹುದು.
ಇನ್ನೊಂದು ಬಹಳ ಸತ್ಯವಾದ ವಿಚಾರವೆಂದರೆ ಮಿತವಾಗಿ ಹಣವನ್ನು ಬಳಸುವುದರಿಂದ ವಿಲಾಸೀ ಜೀವನಕ್ಕೆ ಅವಕಾಶವೇ ಇರುವುದಿಲ್ಲ. ಆಗ ಸಹಜವಾಗಿ ಯಾವ ರೋಗದ ಭಯ ಇರುವುದಿಲ್ಲ. ಭೋಗೇ ರೋಗಭಯಮ್ ಎಂಬ ಮಾತಿದೆ. ಭೋಗಿಸೋಣವೆಂದರೆ ರೋಗದ ಭಯ.ಇದು ಯಾರಿಗೆ? ಹೆಚ್ಚು ಹಣವಿದ್ದವರಿಗೆ ಅಲ್ಲವೇ? ನ್ಯಾಯಮಾರ್ಗದಲ್ಲಿ ದುಡಿಯುವವನಿಗೆ ಭೋಗದ ಪ್ರಶ್ನೆಯೇ ಇಲ್ಲ. ಆಗ ರೋಗದ ಭಯವೆಲ್ಲಿ? ಯಜಮಾನನಿಗಿರಬೇಕಾದ ಮೂರನೆಯ ಅರ್ಹತೆ ಎಂದರೆ. . . . .  .
ಸುಮೇಧಾ:
ಮೇಧಾವಂತನಾಗಿರಬೇಕು. ಎಲ್ಲಿ ಮೇಧಾ ಅಂದರೆ ಜ್ಞಾನವಿರುತ್ತದೆಯೋ ಅಲ್ಲಿ ಮೋಹ, ಮೂರ್ಖತೆ ಮತ್ತು ಅಂಧವಿಶ್ವಾಸಗಳಿರುವುದಿಲ್ಲ.   ಮಹಾಭಾರತದಲ್ಲಿ ಮೋಹಕ್ಕೆ ಸಿಲುಕಿದ್ದ  ದುರ್ಯೋಧನನ ಸ್ಥಿತಿ ಹೇಗಿತ್ತು ಎಂಬುದನ್ನು ಅವನ ಮಾತುಗಳಿಂದಲೇ ಕೇಳಿ. . .

ಜಾನಾಮಿ ಧರ್ಮಂ ನ ಚ ಮೇ ಪ್ರವೃತ್ತಿ:
ಜಾನಾಮ್ಯಧರ್ಮಂ ನ ಚ ಮೇ ನಿವೃತ್ತಿ:

ಧರ್ಮವೇನೆಂದು ನನಗೆ ಗೊತ್ತಿದೆ, ಆದರೆ ನನಗೆ ಪಾಲಿಸಲು ಸಾಧ್ಯವಾಗುತ್ತಿಲ್ಲ
ಅಧರ್ಮವೇನೆಂಬುದೂ ಗೊತ್ತಿದೆ, ಆದರೆ ಬಿಡಲು ಸಾಧ್ಯವಾಗುತ್ತಿಲ್ಲ.
ನಮ್ಮೆಲ್ಲರದೂ ಇದೇ ಸ್ಥಿತಿಯಲ್ಲವೇ? ಯಾವುದು ಧರ್ಮ ಯಾವುದು ಅಧರ್ಮ, ಎಂಬ ಅರಿವಿರುತ್ತದೆ ಆದರೆ ಧರ್ಮದ ದಾರಿಯಲ್ಲಿ ನಡೆಯಲು ಆಗುತ್ತಿಲ್ಲ, ಅಧರ್ಮದ ಹಾದಿಯನ್ನು ಬಿಡಲಾಗುತ್ತಿಲ್ಲ. ಇದಕ್ಕೆಲ್ಲಾ ಕಾರಣವೇನು? ವ್ಯಾಮೋಹ.
ಮನೆಯ ಯಜಮಾನನಿಗೆ ಮಕ್ಕಳಲ್ಲಿ ವ್ಯಾಮೋಹವಿದ್ದರೆ ಮಕ್ಕಳ ಅಧ: ಪತನಕ್ಕೆ ಕಾರಣನಾಗುತ್ತಾನೆ. ವ್ಯಾಮೋಹದ ಕಾರಣದಿಂದ ಮಕ್ಕಳ ತಪ್ಪು ತಂದೆಗೆ ತಪ್ಪಾಗಿ ಕಾಣುವುದೇ ಇಲ್ಲ. ಅಥವಾ ವ್ಯಾಮೋಹದ ಕಾರಣ ಮಕ್ಕಳು ತಪ್ಪು ಮಾಡಿದರೂ ನೋಡಿಕೊಂದು ಸುಮ್ಮನಿರುತ್ತಾನೆ. ವ್ಯಾಮೋಹದ ಕತ್ತಲು ಅವನಿಗೆ ಆವರಿಸಿರುತ್ತದೆ.
ಪ್ರೇಮವು ಉತ್ಥಾನಕ್ಕೆ ಕಾರಣವಾದರೆ ಮೋಹವು ಪಥನಕ್ಕೆ ಕಾರಣವಾಗುತ್ತದೆ. ಮನೆಯ ಯಜಮಾನನಿಗೆ ಮನೆಯ ಸದಸ್ಯರ ಮೇಲೆ ಪ್ರೇಮವು ಇರಬೇಕೇ ಹೊರತೂ ವ್ಯಾಮೋಹವಲ್ಲ.

ಗೃಹಸ್ಥನಿಗಿರಬೇಕಾದ ಇನ್ನೂ ಹಲವು ಗುಣಗಳ ಬಗ್ಗೆ ಮುಂದಿನ ವಾರ ನೋಡೋಣ.

Wednesday, January 15, 2014

ಸಂಪಾದಕೀಯ

 ಕಳೆದ ಕೆಲವಾರು ತಿಂಗಳುಗಳಿಂದ ಕೆಲಸಗಳ ಒತ್ತಡವೂ ಒಂದು ಕಾರಣವಿರಬಹುದು, ಅಂತೂ ಆರೋಗ್ಯ ಅಷ್ಟು ಚೆನ್ನಾಗಿಲ್ಲ. ಹಾಗಾಗಿ ನನ್ನ ವೇದಸುಧೆ ತಾಣವನ್ನು ಅಪ್ ಡೇಟ್ ಮಾಡಲು ಸಾಧ್ಯವಾಗಿಲ್ಲ . ಈಗ ತಾಣವನ್ನು ರಿನ್ಯೂ ಮಾಡುವ ಸಮಯ ಬಂದಿದೆ. ಒಮ್ಮೆ ಹೀಗೇ ಯೋಚಿಸಿದೆ " ಯಾಕಾಗಿ ಇಷ್ಟೆಲ್ಲಾ ಕಷ್ಟಪಡಬೇಕು?" ಜನರಿಗೆ ವೇದದಲ್ಲಿ ಆಸಕ್ತಿ ಕಡಿಮೆ. ನನ್ನ ಶ್ರಮಕ್ಕೆ ತಕ್ಕಂತೆ ಓದುಗರು ಇದ್ದರೆ, ಅದರ ಪ್ರಯೋಜನ ವಾದರೆ, ಪರವಾಗಿಲ್ಲ, ಇಲ್ಲವಾದರೆ! ವೇಸ್ಟ್ ಅಲ್ಲವೇ? ಎಂದು ಯೋಚಿಸುತ್ತಿರುವಾಗಲೇ ಉಡುಪಿಯ ಸಮೀಪದ ಹೊನ್ನಾಳದ ನವೀನ್ ಎಂಬ ಯುವಕನೊಬ್ಬ ಅದ್ಭುತವಾದ ಪತ್ರ ಒಂದನ್ನು ಬರೆದಿದ್ದಾನೆ. ಅದನ್ನು ನೋಡಿದ ಮೇಲೆ ಸಾವಿರ ಜನರು ಓದಿದರೆ ಆಗುವಷ್ಟು  ಸಮಾಧಾನವಾಯ್ತು. ಹಾಗಾಗಿ ಜವಾಬ್ಧಾರಿ ಇನ್ನೂ ಹೆಚ್ಚಾಯ್ತು,ಎನಿಸಿತು.ಇನ್ನು ಸುಮ್ಮನಿರಲು ಸಾಧ್ಯವೇ! ಆ ತರುಣನ ಪತ್ರವನ್ನು ನೀವೂ ಓದಿ.

Naveen Honnala
ಶ್ರೀ ಶ್ರೀಧರ್ ಜಿ,
ನಾನು ಹೆಚ್ಚು ಕಡಿಮೆ ಎಲ್ಲಾ ಆಡಿಯೋಗಳನ್ನು ಕೇಳಿ ಆಗಿದೆ. ಬ್ಲಾಗ್ ನಲ್ಲಿ ಡೌನ್ ಲೋಡ್ ಆಗಬಹುದಾದಂತ ಎಲ್ಲಾ ಆಡಿಯೋಗಳನ್ನು ನಾನು save ಮಾಡಿಕೊಂಡಿರುತ್ತೇನೆ ಮತ್ತು ನನಗೆ ಪ್ರಶ್ನೆಗಳು ಮೂಡಿದಾಗ ಅದನ್ನು ಪುನಹ ಕೇಳುತ್ತಿರುತ್ತೇನೆ. ನನ್ನ ಗೆಳೆಯರಿಗೂ vedasudhe blog ಬಗ್ಗೆ ತಿಳಿಸಿದ್ದೇನೆ ಮತ್ತು ನನ್ನಲ್ಲಿರುವ ಆಡಿಯೋಗಳನ್ನು ನೀಡಿರುತ್ತೇನೆ. ಸುಧಾಕರ ಶರ್ಮರ ಮಾತುಗಳಿಂದ ಅನೇಕ ಗೊಂದಲಗಳ ಪರಿಹಾರವಾಗಿವೆ.
ಸುಮಾರು ಒಂದು ವರ್ಷದ ಹಿಂದೆ ಕುಟುಂಬದಲ್ಲಿ ಸಮಸ್ಯೆಗಳ ಸರಮಾಲೆಯೇ ಎದುರುಗೊಂಡಿತ್ತು. ಭಗವದ್ಗೀತೆಯಿಂದಲೂ ಉತ್ತರ ಸಿಕ್ಕಿರಲಿಲ್ಲ. ಹೀಗೆ ತಡಕಾಡುತ್ತಿರುವಾಗ ನಿಮ್ಮ blog ನ್ನು ಪ್ರವೇಶಿಸಿದೆ. ಅಲ್ಲಿಂದ ನನ್ನ ಜೀವನದಲ್ಲೇ ಹೊಸ ಬದಲಾವಣೆ ಉಂಟಾಗಿದೆ. ಮನೆಯ ಎಲ್ಲಾ ಸಮಸ್ಯೆಗಳನ್ನು ಖುದ್ದು ನಾನೇ ನಿಂತು ಪರಿಹರಿಸಿದೆ, ವಯಸ್ಸಿನಲ್ಲಿ ಚಿಕ್ಕವನಾದರೂ ಎಲ್ಲರೂ ನನ್ನ ಮಾತು ಕೇಳುವಂತೆ ಮಾಡಲು, ವೇದಸುಧೆ ಮತ್ತು ಸುಧಾಕರ ಶರ್ಮರ ಕೃಪೆಯಿಂದ ಸಾಧ್ಯವಾಯಿತು. ತುಂಬಾ ದಿನಗಳಿಂದ ಶರ್ಮರವರ ಆಡಿಯೋ ಸಿಗುತ್ತಿಲ್ಲ. ಹಿಂದನ್ನದೆಲ್ಲವನ್ನು ಕೇಳಿರುತ್ತೇನೆ. ಅದಕ್ಕಾಗಿಯೇ ಪುಸ್ತಕವನ್ನು ಕೇಳಿದ್ದು. ಶರ್ಮರ ಪುಸ್ತಕ ಲಭ್ಯವಿಲ್ಲದ ಪಕ್ಷದಲ್ಲಿ ನಿಮ್ಮ ವೇದಸುಧೆಯ ವಾರಪತ್ರಿಕೆ, ಮಾಸಪತ್ರಿಕೆ ಅಥವಾ ಇನ್ನಿತರ ಯಾವುದೇ ಪುಸ್ತಕ ಕಳುಹಿಸಿ ಕೊಡಿ. ನಾನು ಚಂದಾಧಾರನಾಗ ಬಯಸುತ್ತೇನೆ. ಆರ್ಥಿಕವಾಗಿ ಮನೆಯವರು ಹೆಚ್ಚಾಗಿ ನನ್ನನ್ನು ಅವಲಂಬಿಸಿರುವುದರಿಂದ ಮತ್ತು ಕೆಲಸದಲ್ಲಿ ಹೆಚ್ಚಿನ ಒತ್ತಡ ಇರುವುದರಿಂದ ರಜೆ ಹಾಕಿ ಬರಲು ಸ್ವಲ್ಪ ಕಷ್ಟ ಸಾಧ್ಯ. ದಯವಿಟ್ಟು ಈ ಬಗ್ಗೆ ಸ್ವಲ್ಪ ವಿಶೆಷವಾಗಿ ಗಮನಹರಿಸಿ. ನನ್ನ ಸಮಸ್ಯೆಗಳ ಒತ್ತಡ ಸ್ವಲ್ಪ ಕಡಿಮಿಯಾದ ಕೂಡಲೇ ನಾನು ಹಾಸನಕ್ಕೆ ಬಂದು ಶಿಬಿರದಲ್ಲಿ ಪಾಲ್ಗೊಳ್ಳುವ ಬಯಕೆ ಹೊಂದಿರುತ್ತೇನೆ.  ಕುಳಿತ ಸ್ಥಳದಲ್ಲೇ ವೇದ ಜ್ಞಾನವನ್ನು ನೀಡಿ ಬದುಕಿನ ದಾರಿ ಕಂಡು ಕೊಳ್ಳುವಲ್ಲಿ ಸಹಾಯ ಮಾಡಿದ ವೇದಸುಧೆಗೆ  ನನ್ನ ನಮನ.

Thursday, January 9, 2014

ಸ್ವಾಮಿ ವಿವೇಕಾನಂದ ಜಯಂತಿ

ವೇದಭಾರತೀ, ಹಾಸನ
ಸ್ವಾಮಿ ವಿವೇಕಾನಂದ ಜಯಂತಿ

ಸ್ಥಳ:ಈಶಾವಾಸ್ಯಮ್, ಶಕ್ತಿಗಣಪತಿ ದೇವಾಲಯ ರಸ್ತೆ, ಹೊಯ್ಸಳನಗರ,ಹಾಸನ
ದಿನಾಂಕ: ೧೨.೧.೨೦೧೪ ಭಾನುವಾರ ಸಂಜೆ ೫.೩೦ ರಿಂದ
ಅಗ್ನಿಹೋತ್ರ 
ವಿವೇಕಾನಂದ ಚಿಂತನ ಗೋಷ್ಠಿ
ಮುಖ್ಯ ಉಪನ್ಯಾಸ

ಪೂಜ್ಯ ಶ್ರೀಯುಕ್ತೇಶಾನಂದಜಿ ಮಹಾರಾಜ್
ಶ್ರೀ ರಾಮಕೃಷ್ನ ಶಾರದಾಶ್ರಮ,ಪೊನ್ನಮ್ ಪೇಟೆ

ಅಧ್ಯಕ್ಷತೆ:
ಶ್ರೀ ಕವಿ ನಾಗರಾಜ್,
ಅಧ್ಯಕ್ಷರು, ವೇದಭಾರತೀ,ಹಾಸನ

ಮುಖ್ಯ ಅತಿಥಿಗಳು:
ಶ್ರೀ ಸಿ.ಎಸ್.ಕೃಷ್ಣಸ್ವಾಮಿ
ಪ್ರಾಂಶುಪಾಲರು, ಶ್ರೀರಾಮಕೃಷ್ಣವಿದ್ಯಾಲಯ,ಹಾಸನ
ಶ್ರೀ ಕೆ.ಪಿ.ಎಸ್.ಪ್ರಮೋದ್
ಪ್ರಧಾನ ಸಂಪಾದಕರು, ಅಮೋಘ್ ವಾಹಿನಿ, ಹಾಸನ, ಮತ್ತು
ಸದಸ್ಯರು, ವಿವೇಕಾನಂದ ೧೫೦ನೇ ಜನ್ಮವರ್ಷಾಚರಣಾ ಸಮಿತಿ, ಕರ್ನಾಟಕ
ಡಾ|| ಜನಾರ್ಧನ್
ಅಧ್ಯಕ್ಷರು,ಕನ್ನಡಸಾಹಿತ್ಯ ಪರಿಷತ್ತು,.ಹಾಸನ ಮತ್ತು
ಸದಸ್ಯರು, ವಿವೇಕಾನಂದ ೧೫೦ನೇ ಜನ್ಮವರ್ಷಾಚರಣಾ ಸಮಿತಿ, ಕರ್ನಾಟಕ
ಶ್ರೀ ಪಾರಸ್ ಮಲ್
ನಗರ ಸಂಘಚಾಲಕರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಹಾಸನ
ಡಾ|| ಗುರುರಾಜ ಹೆಬ್ಬಾರ್
ಸಮಾಜ ಸೇವಕರು, ಶ್ರೀರಾಮಕೃಷ್ಣ ನರ್ಸಿಂಗ್ ಹೋಮ್, ಹಾಸನ

ಸರ್ವರಿಗೂ ಆದರದ ಸ್ವಾಗತ
ಚಿನ್ನಪ್ಪ
ಕಾರ್ಯದರ್ಶಿ,ವೇದಭಾರತೀ, ಹಾಸನ
------------------------------------------------------------------------------------------------------------
ಪ್ರತಿದಿನ  ಸಂಜೆ ೬.೦೦ ರಿಂದ ೭.೦೦ ರ ವರಗೆ ಈಶಾವಾಸ್ಯಮ್ ನಲ್ಲಿ  ನಡೆಯುತ್ತಿರುವ ಎಲ್ಲರಿಗಾಗಿ ವೇದ  ಉಚಿತ ವೇದಪಾಠ, ಅಗ್ನಿಹೋತ್ರ ಮತ್ತು ಸಂಸ್ಕೃತ ಕಲಿಕಾ ತರಗತಿಗಳಿಗೆ ಸೇರಲು ಮುಕ್ತ ಅವಕಾಶವಿದೆ
Visit:  vedasudhe.com      Mail: vedasudhe@gmail.com
ಮಾಹಿತಿಗಾಗಿ  ಸಂಪರ್ಕಿಸಿ:    9663572406