Pages

Sunday, September 7, 2014

ಸಾವಿರಾರು ಜನರಿಂದ ಸಾಮಾಹಿಕ ಅಗ್ನಿಹೋತ್ರ

Photo: ಹಾಸನದ ವೇದಭಾರತಿಯು ನಡೆಸುವ ದೈನಂದಿನ  ಅಗ್ನಿಹೋತ್ರವನ್ನು ವೀಕ್ಷಿಸಿದ    ಹುಬ್ಬಳ್ಳಿಯ ಆರ್ಷವಿದ್ಯಾಲಯದ ಪೂಜ್ಯ ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತಿಯವರಿಗೆ  ಸಾವಿರಾರು ಜನರಿಂದ ಸಾಮಾಹಿಕ ಅಗ್ನಿಹೋತ್ರ ಮಾಡಿಸಬೇಕೆಂಬ   ಮಹಾನ್ ಇಚ್ಛೆ. ಬರುವ ಮಾರ್ಚ್ ನಲ್ಲಿ ಅಂತಾದ್ದೊಂದು ಬೃಹತ್ ಕಾರ್ಯಕ್ರಮವು  ವೇದಭಾರತಿಯ ಸಂಚಾಲಕತ್ವದಲ್ಲಿ  ಹುಬ್ಬಳ್ಳಿಯ ಸಮೀಪ ನಡೆಯಲಿದೆ. ಹಾಸನದ ವೇದ ಭಾರತಿಯು ಅನುಸರಿಸುತ್ತಿರುವ ಅಗ್ನಿಹೋತ್ರ ಮಂತ್ರವು  ಈಶ್ವರಸ್ತುತಿ ಮಂತ್ರ ಸಹಿತವಾಗಿ ಇಲ್ಲಿ ನೀಡಿರುವ  ಕೊಂಡಿಯಲ್ಲಿ ಲಭಿಸುವುದು. ಇಂತಾ ಒಂದು ಬೃಹತ್ ಅಪರೂಪದ ಕಾರ್ಯಕ್ರಮದಲ್ಲಿ  ಎಲ್ಲರಿಗೂ ಪಾಲ್ಗೊಳ್ಳುವ ಸದವಕಾಶವಿದೆ. ಈ ಮಂತ್ರವನ್ನು ಆಡಿಯೋ ಕೇಳಿ ಅಭ್ಯಾಸ ಮಾಡಲೂ ಬಹುದು. ಅಗ್ನಿಹೋತ್ರ ಮಾಡುವುದು ಬಲು ಸುಲಭ . ತನಗೆ ಅಗ್ನಿಹೋತ್ರ ದ ಪರಿಚಯವಿಲ್ಲವೆಂದು ಯಾರೂ ಸಂಕೋಚ ಪಡಬೇಕಾಗಿಲ್ಲ. ಸರಳವಾದ  ಈ ಕ್ರಿಯೆಯನ್ನು ಕಾರ್ಯಕ್ರಮದ ದಿನದಂದೇ ಕಲಿತುಕೊಳ್ಳಲು  ಸಾಧ್ಯ. ಈಗ ಇಲ್ಲಿರುವ ಕೊಂಡಿಯಿಂದ ಮಂತ್ರವನ್ನು ಅಭ್ಯಾಸ ಮಾಡಿದರೆ ಅಂದು ಎಲ್ಲರೂ ಸಾಮಾಹಿಕವಾಗಿ ಹೇಳಲು ಸಾಧ್ಯವಿದೆ. ಪ್ರಯತ್ನ ಪಡಬಹುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ವೇದಭಾರತಿಯ ಸಂಚಾಲಕರನ್ನು vedasudhe@gmali.com ಮೂಲಕ ಅಥವಾ ಮೊಬೈಲ್ ನಂಬರ್ 9663572406 ಮೂಲಕ  ಸಂಪರ್ಕಿಸಬಹುದು.

ಮಂತ್ರದ ಡೌನ್ ಲೋಡ್ ಗಾಗಿ ಕೊಂಡಿ

http://www.divshare.com/download/26086812-18b



ಹಾಸನದ ವೇದಭಾರತಿಯು ನಡೆಸುವ ದೈನಂದಿನ ಅಗ್ನಿಹೋತ್ರವನ್ನು ವೀಕ್ಷಿಸಿದ ಹುಬ್ಬಳ್ಳಿಯ ಆರ್ಷವಿದ್ಯಾಲಯದ ಪೂಜ್ಯ ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತಿಯವರಿಗೆ ಸಾವಿರಾರು ಜನರಿಂದ ಸಾಮಾಹಿಕ ಅಗ್ನಿಹೋತ್ರ ಮಾಡಿಸಬೇಕೆಂಬ ಮಹಾನ್ ಇಚ್ಛೆ. ಬರುವ ಮಾರ್ಚ್ ನಲ್ಲಿ ಅಂತಾದ್ದೊಂದು ಬೃಹತ್ ಕಾರ್ಯಕ್ರಮವು ವೇದಭಾರತಿಯ ಸಂಚಾಲಕತ್ವದಲ್ಲಿ ಹುಬ್ಬಳ್ಳಿಯ ಸಮೀಪ ನಡೆಯಲಿದೆ. ಹಾಸನದ ವೇದ ಭಾರತಿಯು ಅನುಸರಿಸುತ್ತಿರುವ ಅಗ್ನಿಹೋತ್ರ ಮಂತ್ರವು ಈಶ್ವರಸ್ತುತಿ ಮಂತ್ರ ಸಹಿತವಾಗಿ ಇಲ್ಲಿ ನೀಡಿರುವ ಕೊಂಡಿಯಲ್ಲಿ ಲಭಿಸುವುದು. ಇಂತಾ ಒಂದು ಬೃಹತ್ ಅಪರೂಪದ ಕಾರ್ಯಕ್ರಮದಲ್ಲಿ ಎಲ್ಲರಿಗೂ ಪಾಲ್ಗೊಳ್ಳುವ ಸದವಕಾಶವಿದೆ. ಈ ಮಂತ್ರವನ್ನು ಆಡಿಯೋ ಕೇಳಿ ಅಭ್ಯಾಸ ಮಾಡಲೂ ಬಹುದು. ಅಗ್ನಿಹೋತ್ರ ಮಾಡುವುದು ಬಲು ಸುಲಭ . ತನಗೆ ಅಗ್ನಿಹೋತ್ರ ದ ಪರಿಚಯವಿಲ್ಲವೆಂದು ಯಾರೂ ಸಂಕೋಚ ಪಡಬೇಕಾಗಿಲ್ಲ. ಸರಳವಾದ ಈ ಕ್ರಿಯೆಯನ್ನು ಕಾರ್ಯಕ್ರಮದ ದಿನದಂದೇ ಕಲಿತುಕೊಳ್ಳಲು ಸಾಧ್ಯ. ಈಗ ಇಲ್ಲಿರುವ ಕೊಂಡಿಯಿಂದ ಮಂತ್ರವನ್ನು ಅಭ್ಯಾಸ ಮಾಡಿದರೆ ಅಂದು ಎಲ್ಲರೂ ಸಾಮಾಹಿಕವಾಗಿ ಹೇಳಲು ಸಾಧ್ಯವಿದೆ. ಪ್ರಯತ್ನ ಪಡಬಹುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ವೇದಭಾರತಿಯ ಸಂಚಾಲಕರನ್ನು vedasudhe@gmali.com ಮೂಲಕ ಅಥವಾ ಮೊಬೈಲ್ ನಂಬರ್ 9663572406 ಮೂಲಕ ಸಂಪರ್ಕಿಸಬಹುದು.

Saturday, September 6, 2014

ಹಾಸನ ವೇದಭಾರತಿಯ ವಿಶೇಷ ಸತ್ಸಂಗ

ಎರಡು ವರ್ಷಗಳ ಹಿಂದೆ ಹಾಸನದಲ್ಲಿ ಆರಂಭವಾದ ವೇದಭಾರತಿಯು ಪ್ರತೀ ದಿನ ಸಂಜೆ 6.00 ರಿಂದ 7.00 ರವರಗೆ ಅಗ್ನಿಹೋತ್ರ ,ವೇದಮಂತ್ರಾಭ್ಯಾಸ ಸಹಿತ ಸತ್ಸಂಗವನ್ನು ನಡೆಸಿಕೊಂಡು ಬರುತ್ತಿದೆ. ಕಳೆದ ತಿಂಗಳು 16 ಮತ್ತು 17 ರಂದು ನಡೆದ ದ್ವಿತೀಯ ವಾರ್ಷಿಕೋತ್ಸವದಲ್ಲಿ ತೀರ್ಮಾನಿಸಿದಂತೆ ಪ್ರತೀ ಬುಧವಾರ ವಿಶೇಷ ಸತ್ಸಂಗವನ್ನು ನಡೆಸಲು ಆರಂಭಿಸಿದೆ. ವಿಶೇಷ ಸತ್ಸಂಗಕ್ಕೆ ವೇದಭಾರತಿಯ ಎಲ್ಲಾ ಸದಸ್ಯರ ಜೊತೆಗೆ ಹೊಸಬರನ್ನೂ ಆಹ್ವಾನಿಸಲಾಗುತ್ತಿದೆ.























ದುಡ್ಡು ನಿಮ್ಮದಿರಬಹುದು, ಆಹಾರ ಸಮಾಜದ್ದು!


     ನನ್ನ ತಮ್ಮ ತನಗೆ ಬರುವ ಉತ್ತಮ ಸಂದೇಶವಿರುವ ಮಿಂಚಂಚೆಗಳನ್ನು ಹಂಚಿಕೊಳ್ಳುತ್ತಿರುತ್ತಾನೆ. ಅಂತಹ ಒಂದು ಮಿಂಚಂಚೆಯ ವಿಷಯ ಈ ಲೇಖನಕ್ಕೆ ಪ್ರೇರಿಸಿದೆ. ಆ ಮಿಂಚಂಚೆಯಲ್ಲಿ ಅಧ್ಯಯನ ಪ್ರವಾಸಕ್ಕಾಗಿ ಜರ್ಮನಿಗೆ ಹೋಗಿದ್ದವರೊಬ್ಬರು ತಮ್ಮ ಅನಿಸಿಕೆಯನ್ನು ಹೀಗೆ ಹಂಚಿಕೊಂಡಿದ್ದರು: "ಜರ್ಮನಿ ಒಂದು ಅತ್ಯಂತ ಪ್ರತಿಷ್ಠಿತ ಕೈಗಾರಿಕಾ ದೇಶ. ಅಲ್ಲಿ ಪ್ರಪಂಚದ ಅತ್ಯುತ್ತಮ ವಾಹನಗಳೆನಿಸಿದ ಬೆಂಜ್, ಸೀಮನ್ಸ್, ಬಿಎಂಡಬ್ಲ್ಯು, ಇತ್ಯಾದಿ ತಯಾರಾಗುತ್ತವೆ. ಆ ದೇಶದ ಒಂದು ಸಣ್ಣ ಹಳ್ಳಿಯಲ್ಲಿ ಅಣು ರಿಯಾಕ್ಟರ್ ಪಂಪು ಸಿದ್ಧವಾಗುತ್ತದೆ. ಅಂತಹ ಒಂದು ದೇಶದ ಜನರು ವೈಭವೋಪೇತವಾಗಿ ಜೀವಿಸುತ್ತಾರೆಂದು ಹೆಚ್ಚಿನವರು ಭಾವಿಸುತ್ತಾರೆ. ಪ್ರವಾಸದ ಮುನ್ನ ನಾನೂ ಹಾಗೆಯೇ ಭಾವಿಸಿದ್ದೆ. ನಾನು ಹ್ಯಾಂಬರ್ಗಿಗೆ ಬಂದಿಳಿದಾಗ ನನ್ನ ಅಲ್ಲಿನ ಸಹೋದ್ಯೋಗಿಗಳು ಒಂದು ರೆಸ್ಟೋರೆಂಟಿನಲ್ಲಿ ನಮಗೆ ಸ್ವಾಗತಕ್ಕೆ ಏರ್ಪಡಿಸಿದ್ದರು. ಹೋಟೆಲ್ಲಿನ ಬಹಳಷ್ಟು ಟೇಬಲ್ಲುಗಳು ಖಾಲಿಯಿದ್ದವು. ಒಂದು ಟೇಬಲ್ಲಿನಲ್ಲಿ ಯುವಜೋಡಿ ಊಟ ಮಾಡುತ್ತಿದ್ದರು. ಆ ಟೇಬಲ್ಲಿನ ಮೇಲೆ ಕೇವಲ ಎರಡು ಆಹಾರ ಖಾದ್ಯಗಳು ಮತ್ತು ಎರಡು ಕ್ಯಾನುಗಳು ಬೀರು ಮಾತ್ರ ಇತ್ತು. ನನಗೆ ಆ ಸರಳ ಆಹಾರ ರೋಚಕವಾಗಿರುತ್ತದೆಯೇ ಮತ್ತು ಆ ಹುಡುಗಿ ಆ ಜಿಪುಣನನ್ನು ಬಿಟ್ಟು ಹೋಗದಿರುತ್ತಾಳೆಯೇ ಎಂಬ ಅನುಮಾನವಾಯಿತು. ಇನ್ನೊಂದು ಟೇಬಲ್ಲಿನಲ್ಲಿ ಕೆಲವು ಮುದುಕಿಯರು ಊಟ ಮಾಡುತ್ತಿದ್ದರು. ಮಾಣಿ ಆಹಾರ ಪದಾರ್ಥ ತಂದು ಅವರಿಗೆ ಹಂಚಿಹಾಕಿದರೆ ಅವರು ಅವರ ತಟ್ಟೆಗಳಲ್ಲಿನ ಒಂದು ಅಗುಳನ್ನೂ ಬಿಡದಂತೆ ಮುಗಿಸುತ್ತಿದ್ದರು. ನಮಗೆ ಹಸಿವಾಗಿದ್ದರಿಂದ ನಮಗಾಗಿ ಹೆಚ್ಚಿನ ಆಹಾರಕ್ಕೆ ಬೇಡಿಕೆ ಇಡಲಾಗಿತ್ತು. ಬಹುಬೇಗನೇ ನಮಗೆ ಊಟ ಸರಬರಾಜಾಯಿತು. ನಮಗೆ ಬೇರೆ ಚಟುವಟಿಕೆಗಳಿದ್ದುದರಿಂದ ಊಟದಲ್ಲಿ ಹೆಚ್ಚು ಸಮಯ ಕಳೆಯದೆ ಮುಗಿಸಿ ಎದ್ದಾಗ ನಮ್ಮ ಟೇಬಲ್ಲಿನಲ್ಲಿ ಸುಮಾರು ಮೂರನೆ ಒಂದು ಭಾಗದಷ್ಟು ಆಹಾರ ಉಳಿದಿತ್ತು. ನಾವು ಹೋಟೆಲಿನಿಂದ ಹೊರಡುತ್ತಿದ್ದಾಗ ಯಾರೋ ನಮ್ಮನ್ನು ಕರೆದಂತಾಯಿತು. ಮುದುಕಿಯರು ನಮ್ಮ ಬಗ್ಗೆ ರೆಸ್ಟೋರೆಂಟಿನ ಮಾಲಿಕನಿಗೆ ದೂರುತ್ತಿದ್ದರು. ಅವರಿಗೆ ನಾವು ಆಹಾರವನ್ನು ಪೋಲು ಮಾಡಿದ್ದಕ್ಕೆ ಅಸಮಾಧಾನವಿತ್ತು. 'ನಮ್ಮ ಊಟಕ್ಕೆ ನಾವು ದುಡ್ಡು ಕೊಟ್ಟಿದ್ದೇವೆ. ನಾವು ಎಷ್ಟು ಉಳಿಸಿದೆವು ಅನ್ನುವ ವಿಷಯ ನಿಮಗೆ ಸಂಬಂಧಿಸಿದ್ದಲ್ಲ' ಎಂಬ ನನ್ನ ಸಹೋದ್ಯೋಗಿಯ ಮಾತಿನಿಂದ ಅವರಿಗೆ ಬಹಳ ಸಿಟ್ಟು ಬಂತು. ಒಬ್ಬಾಕೆ ಕೂಡಲೇ ತನ್ನ ಫೋನಿನಿಂದ ಯಾರಿಗೋ ಕರೆ ಮಾಡಿದಳು. ಸ್ವಲ್ಪ ಹೊತ್ತಿನಲ್ಲೇ ಸಾಮಾಜಿಕ ಭದ್ರತಾ ಸಂಸ್ಥೆಯ ಯೂನಿಫಾರಂ ಧರಿಸಿದ್ದ ಒಬ್ಬ ಅಧಿಕಾರಿ ಹಾಜರಾಗಿ ವಿಷಯ ತಿಳಿದುಕೊಂಡು ನಮಗೆ ೫೦ ಮಾರ್ಕುಗಳ ದಂಡ ವಿಧಿಸಿದ. ನಾವು ಸುಮ್ಮನಿದ್ದೆವು. ಸ್ಥಳೀಯ ಸಹೋದ್ಯೋಗಿ ದಂಡ ಕಟ್ಟಿ, ಪದೇ ಪದೇ ಕ್ಷಮಾಪಣೆ ಕೋರಿದ. ಆ ಅಧಿಕಾರಿ ನಮಗೆ ಗಂಭೀರ ಧ್ವನಿಯಲ್ಲಿ ಹೇಳಿದ: 'ನೀವು ಎಷ್ಟು ತಿನ್ನುತ್ತೀರೋ ಅಷ್ಟು ಮಾತ್ರ ತರಿಸಿಕೊಳ್ಳಿ. ಹಣ ನಿಮ್ಮದು, ಆದರೆ ಸಂಪನ್ಮೂಲಗಳು ಸಮಾಜದ್ದು. ಪ್ರಪಂಚದಲ್ಲಿ ಆಹಾರ ಸಿಗದ ಎಷ್ಟೋ ಜನರಿದ್ದಾರೆ. ಅದನ್ನು ವ್ಯರ್ಥಗೊಳಿಸಲು ನಿಮಗೆ ಕಾರಣಗಳಿಲ್ಲ.'  ನಮ್ಮ ಮುಖಗಳು ಕೆಂಪಾದವು. ಈ ಶ್ರೀಮಂತ ದೇಶದ ಜನರ ಮನೋಭಾವ ನಮ್ಮನ್ನು ನಾಚಿಕೆಗೀಡುಮಾಡಿತು. ನಾವು ಅಷ್ಟೇನೂ ಶ್ರೀಮಂತವಲ್ಲದ ದೇಶದಿಂದ ಬಂದವರಾದರೂ ನಾವು ಇತರರನ್ನು ತೃಪ್ತಿಪಡಿಸಲು ಬಹಳಷ್ಟು ಆಹಾರವನ್ನು ಬಡಿಸಿ ವ್ಯರ್ಥ ಮಾಡುತ್ತಿದ್ದುದು ನೆನಪಾಯಿತು. ಈ ಘಟನೆ ನಮ್ಮ ಕೆಟ್ಟ ಅಭ್ಯಾಸಗಳನ್ನು ತಿದ್ದಿಕೊಳ್ಳಲು ಒಂದು ಪಾಠವಾಯಿತು."
     ಅಧ್ಯಯನ ಪ್ರವಾಸಕ್ಕೆ ಹೋಗಿದ್ದವರಿಗೆ ಮಾತ್ರವಲ್ಲ, ನಮ್ಮೆಲ್ಲರಿಗೂ ಇದು ಪಾಠವಾಗಬೇಕು. ಯಾವುದಾದರೂ ಮದುವೆಯೋ, ಸಮಾರಂಭವೋ ನಡೆದರೆ ಅಲ್ಲಿ ಊಟ ಮಾಡಿದ ನಂತರ ಉಂಡವರು ಎಲೆಯಲ್ಲಿ ಉಳಿಸಿಹೋದ ಆಹಾರದ ಪ್ರಮಾಣ ನೂರಾರು ಜನರ ಹಸಿವನ್ನು ಇಂಗಿಸುವಷ್ಟು ಇರುತ್ತದೆ. ಮೇಲ್ಪಂಕ್ತಿ ಹಾಕಬೇಕಾದ ಸರ್ಕಾರದ ವತಿಯಿಂದ ನಡೆಯುವ ಸಮಾರಂಭಗಳಲ್ಲೇ, ಗಣ್ಯಾತಿಗಣ್ಯರುಗಳು ಭಾಗವಹಿಸುವ ಮೇಜುವಾನಿಗಳಲ್ಲೂ ಸಹ ಈ ರೀತಿ ಆಹಾರವನ್ನು ವ್ಯರ್ಥ ಮಾಡಲಾಗುತ್ತದೆ. ಹಸಿವಿನಿಂದ ಸುಮಾರು ೫ ಮಿಲಿಯನ್ ಮಕ್ಕಳು ಪ್ರಪಂಚದಲ್ಲಿ ಪ್ರತಿವರ್ಷ ಹಸಿವಿನಿಂದ ಸಾಯುತ್ತಾರೆಂದು ಒಂದು ಅಂದಾಜಿದೆ. ಆಫ್ರಿಕಾ, ಭಾರತ, ಪಾಕಿಸ್ತಾನದಂತಹ ದೇಶಗಳ ಮಕ್ಕಳೂ ಇದರಲ್ಲಿ ಸೇರಿದ್ದಾರೆ. ಪೂರ್ಣ ತಿನ್ನದೆ ಎಂಜಲು ಮಾಡಿ ತಿಪ್ಪೆಗೆ ಚೆಲ್ಲುವ ಹೆಚ್ಚಿನ ಪದಾರ್ಥಗಳು ಉಪಯೋಗಿಸಲು ಯೋಗ್ಯವಾದ ಪದಾರ್ಥಗಳೇ ಆಗಿರುತ್ತದೆ ಎಂಬುದು ಕಠಿಣ ಸತ್ಯವಾಗಿದೆ. ಹೋಟೆಲ್ಲಿನಲ್ಲಿ ತರಿಸಿಕೊಳ್ಳುವ ತಿಂಡಿಯನ್ನು ಪೂರ್ಣ ತಿನ್ನುವವರನ್ನು ಜುಗ್ಗ, ಕಂಜೂಸ್ ಎಂಬಂತೆ ನೋಡುವುದಲ್ಲದೆ, ಶಾಸ್ತ್ರಕ್ಕೆ ತಿಂದಂತೆ ಮಾಡಿ ಉಳಿಸುವುದನ್ನೇ ದೊಡ್ಡಸ್ತಿಕೆ ಎಂದು ಭಾವಿಸುವವರ ಸಂಖ್ಯೆಗೆ ಕಡಿಮೆಯೇನಿಲ್ಲ. ಪ್ರಾಣಿಗಳು ಹಸಿವಾದಾಗ ಮಾತ್ರ ತಿನ್ನುತ್ತವೆ, ಎಷ್ಟು ಬೇಕೋ ಅಷ್ಟನ್ನು ಮಾತ್ರ ತಿನ್ನುತ್ತವೆ. ಮನುಷ್ಯರೆನಿಸಿಕೊಂಡವರು ಪ್ರಾಣಿಗಳಿಗಿಂತ ಕಡೆಯಾಗಬಾರದಲ್ಲವೇ? ಉಳಿಸಿ ಚೆಲ್ಲುವುದಕ್ಕಿಂತ ಎಷ್ಟು ಬೇಕೋ ಅಷ್ಟು ಪಡೆದು ತಿನ್ನುವುದು ಒಳ್ಳೆಯದು. ಹಣ ಗಳಿಸಬಹುದು, ಆದರೆ ಪೋಲಾದ ಆಹಾರವನ್ನು ಮತ್ತೆ ತಯಾರಿಸಲು ಸಾಧ್ಯವೇ? ಒಂದು ಅನ್ನದ ಅಗುಳಿನಲ್ಲಿ ಎಷ್ಟು ಜನರ ಶ್ರಮ ಇರುತ್ತದೆ, ಅದು ಅಕ್ಕಿಯಾಗಲು, ಅನ್ನವಾಗಲು ಎಷ್ಟು ಸಮಯ ಬೇಕು ಎಂಬುದನ್ನು ನಾವು ಯಾರಾದರೂ ಚಿಂತಿಸುತ್ತೇವೆಯೇ? ಆದರೆ ಅದನ್ನು ವ್ಯರ್ಥ ಮಾಡಲು ಸಮಯವೇ ಬೇಕಿಲ್ಲ. ಇದು ತುತ್ತು ಅನ್ನಕ್ಕೂ ಪರದಾಡುವ ಲಕ್ಷಾಂತರ ಜನರಿಗೆ ಬಗೆಯುವ ದ್ರೋಹವಲ್ಲದೆ ಮತ್ತೇನು? ಈ ರೀತಿ ವ್ಯರ್ಥವಾಗುವ ಆಹಾರದಿಂದ ಪ್ರತಿವರ್ಷ ಸುಮಾರು ೫೦೦ ಮಿಲಿಯನ್ ಜನರ ಹಸಿವನ್ನು ಇಂಗಿಸಲು ಶಕ್ಯವಿದೆ!
     ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ ಸುಮಾರು ೫೮೦೦೦ ಕೋಟಿ ರೂಗಳಷ್ಟು ಆಹಾರ ಪದಾರ್ಥಗಳು ಮತ್ತು ಸುಮಾರು ೪೪೦೦೦ ಕೋಟಿ ರೂ.ಗಳಷ್ಟು ತರಕಾರಿ ಮತ್ತು ಹಣ್ಣುಗಳು ಹಾಳಾಗುತ್ತಿವೆ. ಆಸ್ಟ್ರೇಲಿಯಾದಲ್ಲಿ ಬೆಳೆಯುವ ಪ್ರಮಾಣದಷ್ಟು ಗೋಧಿ ಭಾರತದಲ್ಲಿ ಹಾಳಾಗುತ್ತಿದೆಯಂತೆ! ಅವೈಜ್ಞಾನಿಕ ವ್ಯವಸಾಯ ಕ್ರಮ, ಹವಾಮಾನ ವೈಪರೀತ್ಯ, ಸಾಗಾಣಿಕೆ, ದಾಸ್ತಾನು ಮಾಡುವ ರೀತಿಗಳಿಂದ ದವಸಗಳು ಹಾಳಾಗುತ್ತಿವೆ. ಅದರ ಜೊತೆಗೆ ಮೇಲೆ ತಿಳಿಸಿದ ಅಪೂರ್ಣ ಬಳಕೆಯ ಕಾರಣದಿಂದಲೂ ಅಪಾರ ಹಾನಿಯಾಗುತ್ತಿದೆ. ಖಾಸಗಿ ಗೋಡೌನುಗಳಿರಲಿ, ಸರ್ಕಾರದ ಗೋಡೌನುಗಳಲ್ಲಿಯೇ ಲಕ್ಷಾಂತರ ಟನ್ನುಗಳಷ್ಟು ದವಸ ಧಾನ್ಯಗಳು ಕೊಳೆತುಹೋಗುತ್ತವೆ. ಲಾಭ ಪಡೆಯುವ ಸಲುವಾಗಿ ದವಸ ಧಾನ್ಯಗಳನ್ನು ಅಕ್ರಮವಾಗಿ ಕಳ್ಳ ದಾಸ್ತಾನು ಶೇಖರಿಸಿಡುವುದನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮ ಅನುಸರಿಸಬೇಕಿದೆ. ಇನ್ನೇನು ಹಾಳಾಗುತ್ತದೆ ಎಂಬ ಹಂತದಲ್ಲಿ ಮಾತ್ರ ಅವು ಹೊರಗೆ ಬರುತ್ತವೆ. ಆಹಾರ ಪದಾರ್ಥಗಳ ನಷ್ಟದ ಕಾರಣದಿಂದಲೇ ದೇಶ ಮತ್ತು ಸಮಾಜ ದೊಡ್ಡ ಆರ್ಥಿಕ ಹಿನ್ನಡೆ ಅನುಭವಿಸುತ್ತಿದೆ. ಆಹಾರ ಪದಾರ್ಥಗಳ ನಷ್ಟ ತಡೆಯುವಲ್ಲಿ ಜಪಾನ್ ಉತ್ತಮ ಆಡಳಿತಾತ್ಮಕ ಕ್ರಮ ಕೈಗೊಂಡಿದೆಯೆನ್ನಬಹುದು. ಕಂಟೈನರುಗಳು, ಪ್ಯಾಕೇಜುಗಳ ಬಗ್ಗೆ, ಆಹಾರದ ತ್ಯಾಜ್ಯದ ಮರುಬಳಕೆ ಬಗ್ಗೆ, ಆಹಾರದ ನಷ್ಟ ತಡೆಯವ ದಿಸೆಯಲ್ಲಿನ ಹಲವಾರು ಸಂಗತಿಗಳ ಬಗ್ಗೆ ಅಲ್ಲಿ ಕಾಯದೆ, ಕಾನೂನುಗಳು ಇವೆ. ಜೊತೆಗೆ ಅಲ್ಲಿನ ನಾಗರಿಕರೂ ತಮ್ಮ ನಾಗರಿಕ ಪ್ರಜ್ಞೆಯಿಂದ ಈ ದಿಸೆಯಲ್ಲಿ ನೆರವಾಗಿದ್ದಾರೆ. ನಮ್ಮಲ್ಲೂ ಈ ಬಗ್ಗೆ ಜನಜಾಗೃತಿ ಮೂಡಿಸಬೇಕು. ನಷ್ಟ ತಡೆಯುವುದರೊಂದಿಗೆ ಮರುಬಳಕೆಗೆ ಮತ್ತು ಪರಿಸರ ಸ್ನೇಹಿ ಬಳಕೆಗೆ ತ್ಯಾಜ್ಯಗಳನ್ನು ಬಳಸುವ ಬಗ್ಗೆ ಕಾನೂನು-ಕಟ್ಟಳೆಗಳನ್ನು ಮಾಡಿ ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ನೋಡಿಕೊಳ್ಳಬೇಕು. ಆಹಾರ ಪದಾರ್ಥಗಳು, ತರಕಾರಿಗಳು ಕೆಡದಂತೆ ದಾಸ್ತಾನು ಇಡಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಆಹಾರದ ಸದ್ಬಳಕೆ ಮತ್ತು ಪೋಲು ಮಾಡದಿರುವ ಕುರಿತು ಶಾಲಾ ಪಠ್ಯಪುಸ್ತಕಗಳಲ್ಲಿ ಮಕ್ಕಳಿಗೆ ತಿಳುವಳಿಕೆ ನೀಡುವ ವಿಷಯ ಅಳವಡಿಸಬೇಕು.
     ಆಹಾರವನ್ನು ವ್ಯರ್ಥ ಮಾಡುವುದು ತರವಲ್ಲ. ವ್ಯರ್ಥ ಮಾಡುವುದು ಒತ್ತಟ್ಟಿಗಿರಲಿ, ಆಹಾರವನ್ನು ಪಡೆಯಲೂ ಅರ್ಹತೆ ಇರಬೇಕು. ಈ ವೇದಮಂತ್ರ ಹೇಳುತ್ತದೆ:
ಮೋಘಮನ್ನಂ ವಿಂದತೇ ಅಪ್ರಚೇತಾಃ ಸತ್ಯಂ ಬ್ರವೀಮಿ ವಧ ಇತ್ ಸ ತಸ್ಯ |
ನಾರ್ಯಮಣಂ ಪುಷ್ಯತಿ ನೋ ಸಖಾಯಂ ಕೇವಲಾಘೋ ಭವತಿ ಕೇವಲಾದೀ || (ಋಕ್.೧೦.೧೧೭.೬.)
     'ಸೋಮಾರಿಯೂ, ಅಜ್ಞಾನಿಯೂ ಆದವನು ವ್ಯರ್ಥವಾಗಿ ಆಹಾರವನ್ನು ಪಡೆಯುತ್ತಾನೆ. ಸತ್ಯ ಹೇಳುತ್ತೇನೆ, ಅವನು ಆಹಾರದ ಕೊಲೆಗಾರನೇ ಸರಿ. ಅವನು ದೇವರ ಶಾಸನವನ್ನಾಗಲೀ, ತನ್ನ ಆಪ್ತೇಷ್ಟರನ್ನಾಗಲೀ ಬಲಗೊಳಿಸುವುದಿಲ್ಲ. ಕುಳಿತು ತಿನ್ನುವ ಸೋಮಾರಿಯೂ, ಅಜ್ಞಾನಿಯೂ ಆದ ಅವನು ಪಾಪದ ಪ್ರತೀಕ' ಎಂಬುದು ಈ ಮಂತ್ರ ಅರ್ಥ. ಅವಧೂತ ಮುಕುಂದೂರು ಸ್ವಾಮಿಗಳು ಊಟಕ್ಕೆ ಕುಳಿತಿದ್ದ ಭಕ್ತರನ್ನು ಉದ್ದೇಶಿಸಿ ಹೀಗೆ ಹೇಳುತ್ತಿದ್ದರು: "ಮುದ್ದೆ ಅಂತ ಊಟ ಇಲ್ಲ, ಸಿದ್ದಪ್ಪನಂತ ದೇವರಿಲ್ಲ ಅಂತಾರೆ. ಆದ್ರೆ ಒಂದ್ಮಾತು, ಈ ಮುದ್ದೆಗೆ ತಕ್ಕಷ್ಟು ಕಷ್ಟ ಮಾಡಿದ್ದೀನಿ ಅಂತ ನಿಮಗೆ ನೀವೇ ಕೇಳ್ಕಂಡು, ಹೇಳ್ಕಂಡು ಮುದ್ದೆ ಮುರೀರಪ್ಪಾ." ಎಂತಹ ದಿವ್ಯ ಸಂದೇಶ. ಊಟ ಮಾಡುವುದಕ್ಕೂ ಅರ್ಹತೆ ಇರಬೇಕು. ಅಂತಹುದರಲ್ಲಿ ತಿನ್ನುವ ಆಹಾರವನ್ನೇ ವ್ಯರ್ಥ ಮಾಡುವುದು ಮಹಾಪಾಪ ಎಂಬ ಅರಿವು ಎಲ್ಲರಲ್ಲೂ ಮೂಡಬೇಕು. ಇದೇ ಸಾಮಾಜಿಕ ಪ್ರಜ್ಞೆ.
      ಮದುವೆ ಮೊದಲಾದ ಸಂದರ್ಭಗಳಲ್ಲಿ ಆಹ್ವಾನಿಸಿದಷ್ಟು ಸಂಖ್ಯೆಯಲ್ಲಿ ಜನರು ಬರದಿದ್ದಾಗ ತಯಾರಾದ ಆಹಾರ ಪದಾರ್ಥಗಳು ಉಳಿದುಬಿಡುತ್ತವೆ. ಇಂತಹ ಸಂದರ್ಭಗಳಲ್ಲಿ ಅದು ವ್ಯರ್ಥವಾಗದಂತೆ ನೋಡಿಕೊಂಡಲ್ಲಿ ಅದು ಸಾಧನೆಯೇ ಸರಿ. ಅದನ್ನು ತ್ವರಿತವಾಗಿ ಅಂದೇ ವಿಲೇವಾರಿ ಮಾಡದಿದ್ದಲ್ಲಿ ತಿಪ್ಪೆಗೆ ಸೇರಿ ಸಾಮಾಜಿಕ ನಷ್ಟವಾಗುತ್ತದೆ. ನಗರಗಳಲ್ಲಿ ಸ್ವಯಂಸೇವಾಸಂಸ್ಥೆಗಳು ಕಲ್ಯಾಣ ಮಂಟಪಗಳು, ಪಾರ್ಟಿ ಹಾಲುಗಳಲ್ಲಿ ಉಳಿಯುವ ಇಂತಹ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಅವಶ್ಯಕತೆ ಇರುವವರಿಗೆ ತಲುಪಿಸುವ ಕೆಲಸ ಮಾಡಬಹುದು, ಅರ್ಥಾತ್ ಬಡವರು ಮತ್ತು ಅಗತ್ಯವಿರುವವರಿಗಾಗಿ ಒಂದು ಆಹಾರ ಬ್ಯಾಂಕ್ ಸ್ಥಾಪಿಸುವ ಯೋಜನೆ ಮಾಡಬಹುದು. ಕನಿಷ್ಠ ಪಕ್ಷ ಒಂದು ಸಂಚಾರಿ ಕ್ಯಾಂಟೀನ್ ಇಟ್ಟು ರಿಯಾಯಿತಿ ದರಗಳಲ್ಲಿ ಮಾರಿದರೂ ತಪ್ಪಾಗುವುದಿಲ್ಲ. ಸೌದಿಯಲ್ಲಿ ಒಬ್ಬ ಸಹೃದಯಿ ತನ್ನ ಮನೆ ಪಕ್ಕದಲ್ಲಿ ರಸ್ತೆಗೆ ಹೊಂದಿಕೊಂಡಂತೆ ಒಂದು ದೊಡ್ಡ ರೆಫ್ರಿಜರೇಟರ್ ಇಟ್ಟು ಅದರಲ್ಲಿ ಉಪಯೋಗಿಸಿ ಉಳಿದ ಆಹಾರ ಪದಾರ್ಥಗಳನ್ನು ಆತ ಮತ್ತು ಆತನ ಸ್ನೇಹಿತರು ಇಡುತ್ತಾರಂತೆ. ಅಗತ್ಯವಿರುವವರು ಯಾರು ಬೇಕಾದರೂ ನೇರವಾಗಿ ಇದನ್ನು ತೆಗೆದುಕೊಳ್ಳಬಹುದಂತೆ. ಭಿಕ್ಷೆ ಬೇಡುವ ಹೀನಾಯ ಸ್ಥಿತಿಯಿಂದ ತಪ್ಪಿಸುವ ಈ ಕೆಲಸ ಅಭಿನಂದನೀಯವಾಗಿದೆ ಮತ್ತು ಅನುಕರಣೀಯವಾಗಿದೆ. ಸಮಾರಂಭಗಳಲ್ಲಿ ಊಟಕ್ಕೆ ಹಾಕಿಸಿಕೊಂಡು ಉಳಿಸುವ ಆಹಾರ ಪದಾರ್ಥಗಳನ್ನು ತಿಪ್ಪೆಗೆ ಸುರಿದಾಗ ಭಿಕ್ಷುಕರು, ನಾಯಿಗಳು ಅದಕ್ಕಾಗಿ ಕಿತ್ತಾಡುವ ದೃಷ್ಯ ನೋಡಿಯಾದರೂ ನಾವು ಬದಲಾಗಬೇಕು. ತಿನ್ನೋಣ, ಎಷ್ಟು ಬೇಕೋ ಅಷ್ಟನ್ನು ಮಾತ್ರ ಹಾಕಿಸಿಕೊಂಡು ತಿನ್ನೋಣ. ಉಳಿದರೆ ಅದು ಇನ್ನೊಬ್ಬರ ಹಸಿವು ಹಿಂಗಿಸಲು ಸಹಕಾರಿ ಆಗುತ್ತದೆ ಎಂಬುದನ್ನು ಮರೆಯದಿರೋಣ. ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ ಎಂದು ಬೊಬ್ಬಿರಿಯುವ ನಾವು ಅದೇ ಆಹಾರ ಪದಾರ್ಥಗಳನ್ನು ಹೀಗೆ ಬೇಕಾಬಿಟ್ಟಿ ವ್ಯರ್ಥ ಮಾಡದಿದ್ದರೆ ಸಹಜವಾಗಿ ಅದು ಬೆಲೆ ನಿಯಂತ್ರಣಕ್ಕೂ ಸಹಕಾರಿಯಾಗುತ್ತದೆ. ಬೆಲೆ ಏರಿಕೆ ಮತ್ತಷ್ಟು ಜನರನ್ನು ಬಡತನಕ್ಕೆ ದೂಡುತ್ತದೆ ಎಂಬುದನ್ನು ಮರೆಯದಿರೋಣ. ನೆರೆಯ ಚೀನಾದಲ್ಲಿ ಅಂತರ್ಜಾಲಿಗರು ಒಂದು ಆಂದೋಳನ ಪ್ರಾರಂಭಿಸಿದ್ದಾರೆ, ಅದೆಂದರೆ ಸಮಾರಂಭಗಳಲ್ಲಿ, ಹೋಟೆಲುಗಳಲ್ಲಿ ತಿನ್ನದೆ ಉಳಿಸುವ ಆಹಾರವನ್ನು ಮನೆಗೆ ಕೊಂಡೊಯ್ದು ಉಪಯೋಗಿಸಲು ಪ್ರೇರಿಸುವುದು. ಇಲ್ಲೂ ಸಹ ಇಂತಹ ಆಂದೋಳನದ ಅಗತ್ಯವಿದೆ.
     ೧೯೭೩ರಲ್ಲಿ ಬರ ಪರಿಸ್ಥಿತಿ ಎದುರಾದಾಗ ಕರ್ನಾಟಕದ ಹಲವೆಡೆ ಜನರು ಆಹಾರಕ್ಕಾಗಿ ಹಪಹಪಿಸಿ ಅಂಗಡಿ, ಸೊಸೈಟಿಗಳನ್ನು ಲೂಟಿ ಮಾಡಿ ದವಸ ಧಾನ್ಯಗಳನ್ನು ಹೊತ್ತೊಯ್ದಿದ್ದರು. ದೇಶದ ಜನಸಂಖ್ಯೆ ಏರುತ್ತಲೇ ಇದೆ. ಆಹಾರದ ಅಗತ್ಯತೆ ಕೂಡಾ ಹೆಚ್ಚುತ್ತಿದೆ. ಆದರೆ ಆಹಾರ ಬೆಳೆಯುವ ಭೂಮಿ ಕಡಿಮೆಯಾಗುತ್ತಿದೆ. ಜಮೀನುಗಳಲ್ಲಿ ಕಟ್ಟಡಗಳು ತಲೆಯೆತ್ತುತ್ತಿವೆ. ಈ ಅಸಮತೋಲನದಿಂದ ಮುಂದೊಮ್ಮೆ ವಿಪ್ಲವ ಜರುಗಿದರೂ ಆಶ್ಚರ್ಯವಿಲ್ಲ. ಇದರ ಮುನ್ನರಿವಿನಿಂದ ಸರ್ಕಾರ ಮತ್ತು ಜನಗಳು ಎಚ್ಚೆತ್ತುಕೊಂಡು ಸಮತೋಲನ ಕಾಯ್ದುಕೊಳ್ಳಲಾದರೂ ಆಹಾರದ ದುರ್ಬಳಕೆ, ದುರ್ವಿನಿಯೋಗ ಮತ್ತು ಹಾಳಾಗುವುದನ್ನು ತಡೆಯಲು ಮನಸ್ಸು ಮಾಡಬೇಕಿದೆ. ಅದೃಷ್ಟವಶಾತ್ ಭಾರತದಲ್ಲಿ ಕೆಲವು ಯೂರೋಪಿಯನ್ ಮತ್ತು ಅಮೆರಿಕಾ ದೇಶಗಳಲ್ಲಿಯಷ್ಟು ಪ್ರಮಾಣದಲ್ಲಿ ಹಾಳು ಮಾಡುತ್ತಿಲ್ಲ. ಆ ದೇಶಗಳಲ್ಲಿ ತರಕಾರಿ ಅಥವ ಹಣ್ಣು ಸರಿಯಾದ ಆಕಾರ ಅಥವ ಬಣ್ಣ ಇಲ್ಲವೆಂದು ಕಂಡರೆ ಎಸೆದುಬಿಡುತ್ತಾರಂತೆ. ಅಲ್ಲಿ ಹಾಳಾದ ಆಹಾರಪದಾರ್ಥಗಳ ಬೆಟ್ಟವೇ ಕಾಣಸಿಗುತ್ತದೆ.
     ಭೂಮಿಯನ್ನು ಜೀವಿಸಲು ಉತ್ತಮ ಸ್ಥಳವೆಂದು ಅನ್ನಿಸಲು ಆಹಾರದ ಸದ್ಬಳಕೆ ಅನಿವಾರ್ಯವಾಗಿದೆ. ಹೆಚ್ಚು ವಿಸ್ತರಿಸದೆ ಮುಗಿಸಿಬಿಡೋಣ. ಏಕೆಂದರೆ ಅಹಾರ ವ್ಯರ್ಥ ಮಾಡುವುದರಿಂದ ಆಗುವ ಕೆಡುಕುಗಳ ಬಗ್ಗೆ ಹೇಳಿಯಾಗಿದೆ. ಬೇರೆಯವರು ಏನು ಮಾಡುತ್ತಾರೆ, ಏನು ಹೇಳುತ್ತಾರೆ ಎಂದು ತಲೆ ಕೆಡಿಸಿಕೊಳ್ಳದೆ ಉತ್ತಮ ನಾಗರಿಕರಾಗಿ ವೈಯುಕ್ತಿಕವಾಗಿ ನಾವು ಮೊದಲು ಈ ದಿಸೆಯಲ್ಲಿ ಮುಂದುವರೆಯಬೇಕಿದೆ. 'ಕೊಳ್ಳೋಣ, ತಿನ್ನೋಣ ಮತ್ತು ವ್ಯರ್ಥ ಮಾಡೋಣ' ಎಂಬ ನಮ್ಮ ರೂಢಿಗತ ಪ್ರವೃತ್ತಿಯನ್ನು  'ಅಗತ್ಯವಿರುವಷ್ಟು ಮಾತ್ರ ಕೊಳ್ಳೋಣ ಮತ್ತು ಅಗತ್ಯವಿರುವಷ್ಟೇ ತಿನ್ನೋಣ' ಎಂಬುದಕ್ಕೆ ಬದಲಾಯಿಸಿಕೊಳ್ಳಬೇಕಿದೆ.
-ಕ.ವೆಂ.ನಾಗರಾಜ್.
***************
ಪೂರಕ ವಿಶೇಷ ಮಾಹಿತಿ:
'ಅನ್ನಭಾಗ್ಯ' ಯೋಜನೆಗಾಗಿ ಕರ್ನಾಟಕ ಸರ್ಕಾರ ನವೆಂಬರ್, 2013ರಿಂದ ಫೆಬ್ರವರಿ, 2014ರವರೆಗಿನ 4 ತಿಂಗಳ ಅವಧಿಯಲ್ಲಿ ಮಿಲ್ಲುಗಳ ಮಾಲಿಕರಿಂದ ಒತ್ತಾಯವಾಗಿ 1.61 ಲಕ್ಷ ಟನ್ ಅಕ್ಕಿಯನ್ನು ಸಂಗ್ರಹಿಸಿತು. ಇದರಲ್ಲಿ ಬಹುತೇಕ ಅಕ್ಕಿ ಹಾಳಾದ ಸ್ಥಿತಿಯಲ್ಲಿತ್ತು. ಅದರಲ್ಲೇ 93000 ಟನ್ ಅಕ್ಕಿಯನ್ನು ಜನರಿಗೆ ವಿತರಣೆ ಮಾಡಲಾಯಿತು. ವಿತರಿಸಲು ಸಾಧ್ಯವೇ ಇಲ್ಲದಷ್ಟು ಹಾಳಾದ 63000 ಟನ್ ಅಕ್ಕಿಯನ್ನು ವಿತರಿಸಲಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೆ, ಅಂದರೆ ಸಾರ್ವಜನಿಕರಿಗೆ ಸೇರಿದ, ಸುಮಾರು 200 ಕೋಟಿ ರೂ. ಹಣ ನಷ್ಟವಾಯಿತು. ವಿಪರ್ಯಾಸವೆಂದರೆ ಸರ್ಕಾರ ಮಿಲ್ ಮಾಲಿಕರಿಗೆ ಪೂರ್ಣ ಹಣ ಪಾವತಿಸಿತು. ಈ ನಷ್ಟದ ವಿರುದ್ಧ ಸರ್ಕಾರವಾಗಲೀ, ವಿರೋಧ ಪಕ್ಷವಾಗಲೀ, ಮಾಧ್ಯಮಗಳಾಗಲೀ ತಲೆ ಕೆಡಿಸಿಕೊಳ್ಳಲಿಲ್ಲ.  ಮಾಧ್ಯಮಗಳಂತೂ ಮೈತ್ರೇಯಿಗೌಡ, ಕಾರ್ತಿಕ್ ಗೌಡ, ನಯನಕೃಷ್ಣ, ಬಿಗ್ ಬಾಸುಗಳ ವಿಷಯಗಳೇ ಮಹತ್ವದ ವಿಷಯಗಳೆಂಬಂತೆ ದಿನಗಟ್ಟಲೆ, ವಾರಗಟ್ಟಲೆ ಸುದ್ದಿ, ಚರ್ಚೆಗಳನ್ನು ಬಿತ್ತರಿಸುತ್ತಲೇ ಇವೆ. ಇದು ಅವುಗಳಿಗೆ ಮಹತ್ವದ ಸಂಗತಿಯೇ ಆಗಲಿಲ್ಲ.
-ಕ.ವೆಂ.ನಾ.
*********
ಚಿತ್ರಕೃಪೆ: http://www.eco-business.com/news/save-food-campaign-asia-pacific-kicked/

['ಸಂಪದ'ದಲ್ಲಿ ಸಹ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಲೇಖನ ಅಲ್ಲಿ ಪ್ರಕಟಿಸಿದ ನನ್ನ 500ನೆಯ ಲೇಖನವಾಗಿದೆ.]

ದಿ.18.8.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:



Tuesday, September 2, 2014

ಸಮಾಜದ ಸಾಮರಸ್ಯ - ವೇದಭಾರತಿಯ ಉದ್ದಿಶ್ಯ

ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋ | ಮಧ್ಯಮಾಸೋ ಮಹಸಾ ವಿವಾವೃಧುಃ || 
ಸುಜಾತಾಸೋ ಜನುಷಾ ಪೃಶ್ನಿಮಾತರೋ | ದಿವೋ ಮರ್ಯಾ ಆ ನೋ ಅಚ್ಛಾ ಜಿಗಾತನ || [ಋಗ್. ೫.೫೯.೬]
"ಮಾನವರಲ್ಲಿ ಯಾರೂ ಜನ್ಮತಃ ಜ್ಯೇಷ್ಠರೂ ಅಲ್ಲ, ಕನಿಷ್ಠರೂ ಅಲ್ಲ, ಮಧ್ಯಮರೂ ಅಲ್ಲ. ಎಲ್ಲರೂ ಉತ್ತಮರೇ. ತಮ್ಮ ತಮ್ಮ ಶಕ್ತಿಯಿಂದ ಮೇಲೇರಬಲ್ಲವರಾಗಿದ್ದಾರೆ."
     ಹಾಸನದ ವೇದಭಾರತಿ ತನ್ನದೇ ಆದ ರೀತಿಯಲ್ಲಿ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ವೇದ ಅರ್ಥಾತ್ ಜ್ಞಾನ ಸಮಾಜದ ಎಲ್ಲ ಆಸಕ್ತರಿಗೂ ತಲುಪಲಿ ಎಂಬ ಸದಾಶಯದಿಂದ 'ಎಲ್ಲರಿಗಾಗಿ ವೇದ' ಎಂಬ ಘೋಷ ವಾಕ್ಯದೊಂದಿಗೆ ಸುಮಾರು ಎರಡು ವರ್ಷಗಳ ಹಿಂದೆ ಪ್ರಾರಂಭವಾದ ಈ ಸಂಸ್ಥೆಯನ್ನು ಪ್ರಾರಂಭದಲ್ಲಿ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರ ಮಾರ್ಗದರ್ಶನದಲ್ಲಿ ಪೋಷಿಸಿ ಬೆಳೆಸಿದವರು ಹರಿಹರಪುರ ಶ್ರೀಧರ್ ಮತ್ತು ಕವಿನಾಗರಾಜರು. ನಂತರದಲ್ಲಿ ಹಲವಾರು ಸಮಾನಮನಸ್ಕರ ಬೆಂಬಲ, ಪ್ರೋತ್ಸಾಹಗಳೂ ಸಿಕ್ಕಿ ಇಂದು ಒಂದು ಗುರುತಿಸಲ್ಪಡುವ ಸಂಘಟನೆಯಾಗಿದೆ. ಶ್ರೀ ಸುಧಾಕರ ಶರ್ಮರವರು ವೇದದ ಬೆಳಕಿನಲ್ಲಿ ನೀಡಿದ ಹಲವು ಉಪನ್ಯಾಸಗಳಿಂದ ಪ್ರಭಾವಿತರಾಗಿ 'ವೇದಸುಧೆ' ಹೆಸರಿನಲ್ಲಿ ಒಂದು ಅಂತರ್ಜಾಲ ಬ್ಲಾಗ್ ಅನ್ನು ಅಕ್ಟೋಬರ್, ೨೦೧೦ರಲ್ಲಿ ಪ್ರಾರಂಭಿಸಲಾಯಿತು. ಈ ಬ್ಲಾಗ್ ಎಷ್ಟು ಜನಪ್ರಿಯವಾತೆಂದರೆ ಇದರಲ್ಲಿ ವೇದದ ಹಿನ್ನೆಲೆಯಲ್ಲಿನ ಹಲವಾರು ಬರಹಗಳಿಗೆ, ಚರ್ಚೆಗಳಿಗೆ ಸಿಕ್ಕ ಪ್ರತಿಕ್ರಿಯೆಗಳು ಪ್ರೋತ್ಸಾಹದಾಯಕವಾಗಿದ್ದವು. ಆರೋಗ್ಯಕರ ಚರ್ಚೆಗಳು ಜ್ಞಾನದ ಹರವನ್ನು ಹೆಚ್ಚಿಸಲು ಸಹಕಾರಿಯಾದವು. ಇದುವರೆಗೆ ೧೨೨೦ ಬರಹಗಳು ಈ ಬ್ಲಾಗಿನಲ್ಲಿ ಪ್ರಕಟವಾಗಿ ಇದುವರೆವಿಗೆ ಸುಮಾರು ೧,೨೫,೦೦೦ ಪುಟವೀಕ್ಷಣೆಗಳಾಗಿವೆ. ಬ್ಲಾಗ್ ಪ್ರಾರಂಭವಾದ ನಂತರದಲ್ಲಿ ಒಂದು ವರ್ಷ ಪೂರ್ಣವಾದ ಸಂದರ್ಭದಲ್ಲಿ ವಾರ್ಷಿಕೋತ್ಸವ ಮಾಡಿ ಆ ಸಂದರ್ಭದಲ್ಲಿ ವಿದ್ವಾಂಸರುಗಳಿಂದ ವಿಚಾರಗೋಷ್ಠಿ , ಅಗ್ನಿಹೋತ್ರದ ಪ್ರಾತ್ಯಕ್ಷಿಕೆ, ವೇದದ ವಿಚಾರಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಹೇಗೆ ಎಂಬ ಉಪನ್ಯಾಸ ಏರ್ಪಡಿಸಲಾಗಿತ್ತು. ೨೦೧೧ರಲ್ಲಿ ವೇದಸುಧೆ ಹೆಸರಿನಲ್ಲಿ ಒಂದು ವೆಬ್ ಸೈಟ್ ಅನ್ನು ಪ್ರಾರಂಭಿಸಲಾಯಿತು. ಈ ವೆಬ್ ಸೈಟಿನಲ್ಲಿ ಅನೇಕ ಪ್ರಬುದ್ಧ ವೈಚಾರಿಕ ಬರಹಗಳು, ಮಾಹಿತಿಗಳು, ವಿಡಿಯೋ, ಆಡಿಯೋಗಳು ಸಾರ್ವಜನಿಕರ ಅವಗಾಹನೆಗೆ ಲಭ್ಯವಿದೆ. ಬ್ಲಾಗ್ ಮತ್ತು ವೆಬ್ ಸೈಟಿನ ವಿಳಾಸ: 
     ನಂತರದ ದಿನಗಳಲ್ಲಿ ಏರ್ಪಡಿಸಿದ್ದ ಶ್ರೀ ಸುಧಾಕರ ಶರ್ಮರಿಂದ ಒಂದು ವಾರದ ಕಾಲ ಉಪನ್ಯಾಸ ಮಾಲೆ, ಸಾರ್ವಜನಿಕರೊಡನೆ ಮುಕ್ತ ಸಂವಾದ ಜನಮನವನ್ನು ಸೆಳೆಯುವಲ್ಲಿ, ವೈಚಾರಿಕ ಚಿಂತನೆ ಉದ್ದೀಪಿಸುವಲ್ಲಿ ಯಶಸ್ವಿಯಾದವು. ಕಳೆದ ವರ್ಷ ಮೂರು ದಿನಗಳ 'ವೇದೋಕ್ತ ಜೀವನ ಶಿಬಿರ' ನಡೆಸಿದ್ದು ಆ ಶಿಬಿರದಲ್ಲಿ ಹಾಸನ ಜಿಲ್ಲೆಯ ೩೦ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ೪೦ ಶಿಬಿರಾರ್ಥಿಗಳು ಭಾಗವಹಿಸಿದ್ದರು. ದೂರದ ಪೂನಾದಿಂದಲೂ ಒಬ್ಬರು ಭಾಗವಹಿಸಿದ್ದರು. ಪ್ರತಿದಿನ ಸಾಯಂಕಾಲ ಸಾರ್ವಜನಿಕರಿಗೆ ಉಪನ್ಯಾಸ ಏರ್ಪಡಿಸಿತ್ತು. ಕೊನೆಯ ದಿನದಂದು ನಾಲ್ವರು ಮಹಿಳೆಯರೂ ಸೇರಿದಂತೆ ಏಳು ಜನರು ಉಪನಯನ ಸಂಸ್ಕಾರ ಪಡೆದು ಯಜ್ಞೋಪವೀತ ಧಾರಣೆ ಮಾಡಿಸಿಕೊಂಡಿದ್ದು ಉಲ್ಲೇಖನೀಯ. ಇದು ಟಿವಿಯ ವಿವಿಧ ಚಾನೆಲ್ಲುಗಳ ಮೂಲಕ ಬಿತ್ತರವಾಗಿ ಗಮನ ಸೆಳೆದಿತ್ತು. ಸ್ವಾಮಿ ಚಿದ್ರೂಪಾನಂದಜಿಯವರಿಂದ ಒಂದು ವಾರದ ಕಾಲ 'ಗೀತಾಜ್ಞಾನಯಜ್ಞ' ನಡೆಸಲಾಯಿತು. ಕಳೆದ ವರ್ಷದಿಂದ ಮಕ್ಕಳಲ್ಲೂ ವೇದಾಭ್ಯಾಸದಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ಬಾಲಶಿಬಿರಗಳನ್ನು ನಡೆಸಲಾಗುತ್ತಿದೆ. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಈಗಲೂ ವೇದಮಂತ್ರಗಳನ್ನು ಹೇಳುತ್ತಿರುವುದು, ಕಲಿಕೆ ಮುಂದುವರೆಸುತ್ತಿರುವುದು ಮುದ ನೀಡುವ ಸಂಗತಿಯಾಗಿದೆ.
     ವೇದ ಎಂದರೆ ಕೇವಲ ಪೂಜಾ ಮಂತ್ರಪಾಠಗಳಲ್ಲ, ಒಂದು ವರ್ಗಕ್ಕೆ ಮೀಸಲಲ್ಲ. ಈ ಜ್ಞಾನ ಸಂಪತ್ತು ಸಮಸ್ತ ಮಾನವಕುಲದ ಆಸ್ತಿಯಾಗಿದ್ದು ಎಲ್ಲರೂ ಇದರ ಪ್ರಯೋಜನ ಪಡೆಯಲು ಅರ್ಹರು. ವೇದಗಳಲ್ಲಿ ಎಲ್ಲೂ ಅಸಮಾನತೆಯ ಸೋಂಕಿಲ್ಲ, ಬದಲಾಗಿ ಸಮಸ್ತ ಜೀವರಾಶಿಯ ಶ್ರೇಯೋಭಿವೃದ್ಧಿ ಬಯಸುವ ಸಂದೇಶಗಳಿವೆ. ವೇದಗಳನ್ನು ಪುರಾಣಗಳು ಮತ್ತು ಕಟ್ಟುಕಥೆಗಳೊಂದಿಗೆ ಸೇರಿಸಿ ಅಥವ ಸಮೀಕರಿಸಿ ವಿಶ್ಲೇಷಿಸುವುದು ವೇದಕ್ಕೆ ಬಗೆಯುವ ಅಪಚಾರವಾಗುತ್ತದೆ. ಕರುಣಾಮಯಿ ಪರಮಾತ್ಮ ಜೀವಜಗತ್ತಿನ ವಿಚಾರದಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ. ಇವನು ಆಸ್ತಿಕ, ನನ್ನನ್ನು ಹಾಡಿ ಹೊಗಳುತ್ತಾನೆ, ಪೂಜಿಸುತ್ತಾನೆ ಎಂದು ಅವನಿಗೆ ವಿಶೇಷ ಅನುಗ್ರಹ ಕೊಡುವುದಿಲ್ಲ. ಅವನು ನಾಸ್ತಿಕ, ನನ್ನನ್ನು ನಂಬುವುದಿಲ್ಲ, ಹೀಗಳೆಯುತ್ತಾನೆ ಎಂದುಕೊಂಡು ಅವನಿಗೆ ಅನ್ನ, ನೀರು ಸಿಗದಂತೆ ಮಾಡುವುದೂ ಇಲ್ಲ. ಬಿಸಿಲು, ಮಳೆ, ಗಾಳಿ, ಬೆಂಕಿ, ಆಕಾಶಗಳೂ ಸಹ ಅನುಸರಿಸುವುದು ಪರಮಾತ್ಮನ ತಾರತಮ್ಯವಿಲ್ಲದ ಭಾವಗಳನ್ನೇ ಅಲ್ಲವೇ? ಹೀಗಿರುವಾಗ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಸರಿ, ತಪ್ಪುಗಳ ವಿವೇಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ, ಪೂರ್ವಾಗ್ರಹಗಳನ್ನು ಬದಿಗಿಟ್ಟು ಚಿಂತನೆ ಮಾಡುವ ಮನೋಭಾವ ಮೂಡಿದರೆ ಅದು ನಿಜಕ್ಕೂ ಒಂದು ವೈಚಾರಿಕ ಕ್ರಾಂತಿಯೆನಿಸುತ್ತದೆ.  ಈ ನಿಟ್ಟಿನಲ್ಲಿ ಜನಜಾಗೃತಿ ಮಾಡಲು ವೇದಭಾರತಿ ಎರಡು ವರ್ಷಗಳ ಹಿಂದೆ ಯಾವುದೇ ಜಾತಿ, ಮತ, ಪಂಗಡ, ಲಿಂಗ, ವಯಸ್ಸಿನ ತಾರತಮ್ಯವಿಲ್ಲದೆ ಆಸಕ್ತ ಎಲ್ಲರಿಗೂ ವೇದಮಂತ್ರಗಳನ್ನು ಅಭ್ಯಸಿಸುವ ಅವಕಾಶ ಕಲ್ಪಿಸಿ ಸಾಪ್ತಾಹಿಕ ವೇದಾಭ್ಯಾಸ ತರಗತಿ ಪ್ರಾರಂಭಿಸಿತು. ಒಂದೆರಡು ತಿಂಗಳ ನಂತರ ಇದು ಪ್ರತಿನಿತ್ಯದ ತರಗತಿಯಾಗಿ ಮಾರ್ಪಟ್ಟಿದೆ.  ಕಳೆದ ಏಳೆಂಟು ತಿಂಗಳುಗಳಿಂದ ನಿತ್ಯ ಅಗ್ನಿಹೋತ್ರವನ್ನು ಸಾಮೂಹಿಕವಾಗಿ ಮಾಡಲಾಗುತ್ತಿದೆ. ಅಗ್ನಿಹೋತ್ರದ ಮಹತ್ವ, ಮಂತ್ರಗಳ ಅರ್ಥವನ್ನು ಜನರಿಗೆ ಪರಿಚಯಿಸುವ ಕೆಲಸವನ್ನೂ ಮಾಡಲಾಗುತ್ತಿದೆ. ಮೈಸೂರು, ಬೆಂಗಳೂರು, ಹಂಪಾಪುರ, ಅರಸಿಕೆರೆ ಮುಂತಾದೆಡೆಯಲ್ಲೂ ಈ ಪರಿಚಯ ಕಾರ್ಯ, ಜಾಗೃತಿ ಮೂಡಿಸುವ ಕೆಲಸಗಳಾಗಿವೆ. 
     ಪ್ರತಿನಿತ್ಯ ಹಾಸನದ ಹೊಯ್ಸಳನಗರದ 'ಈಶಾವಾಸ್ಯಮ್'ನಲ್ಲಿ ಸಾಯಂಕಾಲ ೬ರಿಂದ೭ರವರೆಗೆ ನಡೆಯುವ ವೇದಾಭ್ಯಾಸ ಸತ್ಸಂಗದ ಸ್ವರೂಪ ಪಡೆದುಕೊಂಡಿದೆ. ಪರಮಾತ್ಮಸ್ತುತಿ, ಅಗ್ನಿಹೋತ್ರ, ನಂತರ ವೇದಮಂತ್ರಗಳ ಸಾರವೆಂಬಂತಿರುವ ಎರಡು ಭಜನೆಗಳು, ವೇದಮಂತ್ರಗಳ ಅಭ್ಯಾಸ ನಡೆಯುತ್ತದೆ. ವೇದಮಂತ್ರಗಳ ಅರ್ಥ ತಿಳಿಸುವುದರೊಂದಿಗೆ ಆರೋಗ್ಯಕರ ಚರ್ಚೆಗೂ ಅವಕಾಶವಿರುತ್ತದೆ. ಆಗಾಗ್ಯೆ ಸಾಧು-ಸಂತರ, ಜ್ಞಾನವೃದ್ಧರ ಉಪನ್ಯಾಸಗಳನ್ನೂ ಏರ್ಪಡಿಸಲಾಗುತ್ತದೆ. ಪ್ರತಿನಿತ್ಯ ಸುಮಾರು ೨೦ರಿಂದ೩೦ ಆಸಕ್ತರು ಪಾಲುಗೊಳ್ಳುತ್ತಿದ್ದಾರೆ. ಆಸಕ್ತಿ ಇರುವ ಯಾರಿಗೇ ಆಗಲಿ, ಇಲ್ಲಿ ಮುಕ್ತ ಪ್ರವೇಶವಿದೆ. ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಕೇವಲ ಸ್ವಂತದ ಅಭಿವೃದ್ಧಿಗಾಗಿ ಬಯಸುವುದಲ್ಲ, ಸಮಾಜಮುಖಿಯಾಗಿ ನಮ್ಮ ನಡವಳಿಕೆಗಳು, ಮನೋಭಾವ ವೃದ್ಧಿಸಲಿ ಎಂಬ ಸದುದ್ದೇಶದ ಚಟುವಟಿಕೆಗಳನ್ನು ನಡೆಸುವುದು, ಸಜ್ಜನ ಶಕ್ತಿಯ ಜಾಗರಣೆಗೆ ತನ್ನದೇ ಆದ ರೀತಿಯಲ್ಲಿ ಮುಂದುವರೆಯುವುದು ವೇದಭಾರತಿಯ ಧ್ಯೇಯವಾಗಿದೆ. ವೇದದ ಈ ಕರೆಯನ್ನು ಸಾಕಾರಗೊಳಿಸುವತ್ತ ಸಜ್ಜನರು ಕೈಗೂಡಿಸಲಿ ಎಂದು ಆಶಿಸೋಣ.
ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ || [ಅಥರ್ವ.೬.೬೪.೩]
"ನಿಮ್ಮ ಹಿತವು ಒಂದಿಗೇ ಆಗುವಂತೆ, ನಿಮ್ಮ ಮನಃಕಾಮನೆ ಸಮಾನವಾಗಿರಲಿ. ನಿಮ್ಮ ಹೃದಯಗಳು ಸಮಾನವಾಗಿರಲಿ. ನಿಮ್ಮ ಮನಸ್ಸುಗಳು ಸಮಾನವಾಗಿರಲಿ."
-ಕ.ವೆಂ.ನಾಗರಾಜ್.
***************
     ದಿನಾಂಕ 16 ಮತ್ತು 17.8.2014ರಂದು ಹಾಸನದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ವೇದಭಾರತಿಯ ದ್ವಿತೀಯ ವಾರ್ಷಿಕೋತ್ಸವ ಸಂಭ್ರಮದಿಂದ ಜರುಗಿತು. ಈ ಸಂದರ್ಭದಲ್ಲಿ ಹೊಸದಿಗಂತ, ಜನಮಿತ್ರ ಮತ್ತು ಜನಹಿತ ಪತ್ರಿಕೆಗಳು ವಿಶೇಷ ಪುಟಗಳನ್ನು ಪ್ರಕಟಿಸಿ ವೇದಪ್ರಚಾರ ಕಾರ್ಯದಲ್ಲಿ ಕೈಜೋಡಿಸಿದ್ದು ವಿಶೇಷ. ಆ ವಿಶೇಷ ಪುಟಗಳಲ್ಲಿ ನನ್ನ ಮತ್ತು ಹರಿಹರಪುರ ಶ್ರೀಧರರ ಲೇಖನಗಳು ಪ್ರಕಟಗೊಂಡಿದ್ದವು.

ಹೊಸದಿಗಂತ:

ಜನಹಿತ:

ಜನಮಿತ್ರ
 



Monday, September 1, 2014

"ವೇದಜ್ಞಾನವೆಂದರೆ ಕೇವಲ ಮಂತ್ರಪಾಠವಷ್ಟೇ ಅಲ್ಲ"

             "ವೇದವೆಂದರೆ ಕಬ್ಬಿಣದ ಕಡಲೆ" ಎಂಬುದು ಹಲವರ ಅನಿಸಿಕೆ .ಅದಕ್ಕಾಗಿ ಅದರ ಸಹವಾಸ ನಮಗೆ ಬೇಡ,ಎಂದು ತೆಪ್ಪಗಿರುವವರು ಹಲವು ಮಂದಿ.  ವೇದದ ಅಧಿಕಾರ ಕೆಲವರಿಗೆ ಎನ್ನುವ ಮಾತೂ ಕೇಳಿದ್ದೇವೆ. ಅಂದರೆ ಯಾವುದಕ್ಕೂ ಒಂದು ಅರ್ಹತೆ ಬೇಕು. ನೇರವಾಗಿ MBBS ಬರೆಯಲು ಸಾಧ್ಯವೇ?  ಅದಕ್ಕೆ ಪೂರ್ವಭಾವಿಯಾಗಿ ಪ್ರಾಥಮಿಕ ಹಂತದ  ಶಾಲೆಗಳಲ್ಲಿ   ಓದಿ ನಂತರ CET ಬರೆದು ಅರ್ಹತೆ ಗಳಿಸಿದರೆ ಮಾತ್ರ MBBS ಓದಲು ಸಾಧ್ಯ.ಇದು ವಿವರಣೆ. ಹೌದು, ಇದನ್ನು ಒಪ್ಪ ಬೇಕು. ಆದರೆ ವೇದದ ವಿಚಾರ ಮಾಡುವಾಗ "ಅಧಿಕಾರ" ಪದದ ಹಿಡಿತದಿಂದ ಬಹುಪಾಲು ಜನರಿಗೆ ಯಾವ ಬದುಕಿನ ಜ್ಞಾನ ಸಿಗಬೇಕಾಗಿತ್ತೋ ಅದರಿಂದ  ವಂಚನೆಯಾಗಿರುವುದೂ ಸುಳ್ಳಲ್ಲ. 
                  ವೇದಜ್ಞಾನವೆಂದರೆ ಕೇವಲ "ಮಂತ್ರಪಾಠ" ಎಂದು ಕೊಂಡಾಗ ಹೌದು ಕಷ್ಠವಿದೆ.ಯಾವ ವಿದ್ಯೆಯೂ ಸುಲಭವಾಗಿ ದಕ್ಕುವುದಿಲ್ಲ.ಹಲವಾರು  ಶತಕಗಳಿಂದ ಗುರುಕುಲ ಪದ್ದತಿ ಹೋಗಿ ನಂತರದ ಕಾಲದಲ್ಲಿ  ಮೆಖಾಲೆ ಶಿಕ್ಷಣ ಪದ್ದತಿ ಬಂದಮೇಲೆ ನಾವೆಲ್ಲರೂ ವೇದಜ್ಞಾನದಿಂದ ವಂಚಿತರಾಗಿ ಈ ಸ್ಥಿತಿಯನ್ನು ತಲುಪಿಯಾಗಿದೆ. ಆದರೆ ಹಲವರ ಪ್ರಯತ್ನದಿಂದ ಇತ್ತೀಚಿನ ವರ್ಷಗಳಲ್ಲಿ ಆರಂಭವಾಗಿರುವ "ವೇದಗುರುಕುಲಗಳಲ್ಲಿ" ಕಲಿಯುತ್ತಿರುವ ಮಕ್ಕಳಿಗೆ ಸಂಪೂರ್ಣವಾಗಿ ಆರ್ಷಪದ್ದತಿಯಲ್ಲಿ  ವೇದಮಂತ್ರಪಾಠ ಕಲಿಯಲು ಈಗಲೂ ಅವಕಾಶ ಸಿಕ್ಕಿರುವುದು ನಮ್ಮ ಸುದೈವ. ಈ ಪದ್ದತಿ ಮತ್ತೆ ಬೆಳೆದು ವಿಸ್ತಾರವಾಗಲು ಇನ್ನೂ ಅನೇಕ ದಶಕಗಳೇ ಬೇಕು. ಆ ನಂಬಿಕೆ ನನಗಿದೆ. ಇಂದಲ್ಲಾ ನಾಳೆ  ವೇದಜ್ಞಾನವು ಎಲ್ಲರಿಗೂ ಆರ್ಷಪದ್ದತಿಯಲ್ಲಿಯೇ ಸಿಗಲು ಸಾಧ್ಯ. ಆದರೆ ಅಂತಹ ಉತ್ಕೃಷ್ಟ  ಜ್ಞಾನವು ಯಾವುದೋ ಕಾರಣದಿಂದ ಕೆಲವರಿಗೇ ಮಾತ್ರ ಸೀಮಿತವಾಗಿ ಪೂಜೆ ಪುನಸ್ಕಾರಗಳು, ಯಜ್ಞಯಾಗಾದಿಗಳಿಗೆ ಸೀಮಿತವಾಗಿದ್ದು ಸುಳ್ಳಲ್ಲ. ಅಲ್ಲವೇ?

          ಇಂತಹ ಸ್ಥಿತಿಯಲ್ಲಿ ಪಂಡಿತ್ ಶ್ರೀ ಸುಧಾಕರಚತುರ್ವೇದಿಯವರು ,ವೇದಾಧ್ಯಾಯೀ ಶ್ರೀಸುಧಾಕರಶರ್ಮ ಮುಂತಾದವರ ಅವಿರತ ಶ್ರಮದಿಂದಾಗಿ ವೇದಜ್ಞಾನವನ್ನು ಸರಳವಾಗಿ ಕನ್ನಡಿಗರಿಗೆ ತಲುಪಿಸುವ ಸಾಹಿತ್ಯವು ಇಂದು ಲಭ್ಯವಾಗಿದೆ. ಅಂತಹ ಸಾಹಿತ್ಯದಲ್ಲಿ ಪಂಡಿತ್ ಸುಧಾಕರ ಚತುರ್ವೇದಿಯವರ  "ವೇದೋಕ್ತ ಜೀವನ ಪಥ" ಕೂಡ ಒಂದು. "ವೇದತರಂಗ " ಮಾಸಪತ್ರಿಕೆಯಂತೂ  ವೇದದ ಅರಿವನ್ನು ಸಾಮಾನ್ಯರಲ್ಲಿ ಮೂಡಿಸಲು ತನ್ನೆಲ್ಲಾ ಪ್ರಯತ್ನವನ್ನೂ ಮಾಡುತ್ತಿದೆ. ವೇದಮಂತ್ರಪಾಠವನ್ನು ಕಲಿಯಲು  ನಮ್ಮಿಂದ ಸಾಧ್ಯವಿಲ್ಲ. ನಮಗೆ ಸ್ವರ ಹೊರಡುವುದೇ ಇಲ್ಲಾ    ಎಂದು ಭಾವಿಸುವವರೂ ಕೂಡ ವೇದಜ್ಞಾನದಿಂದ ವಂಚಿತರಾಗಬೇಕಿಲ್ಲ. "ವೇದಜ್ಞಾನವೆಂದರೆ  ಕೇವಲ    ಮಂತ್ರಪಾಠವಷ್ಟೇ ಅಲ್ಲ"  ಎಂಬುದನ್ನು ಅರಿತುಕೊಂಡರೆ ವೇದದ ಲಾಭ ಪಡೆಯಲು ಸುಲಭವಾಗುವುದು. ಶ್ರೀ ಸುಧಾಕರಶರ್ಮರು ಇನ್ನೂ ಮುಂದುವರೆದು ಒಂದು ಮಾತು ಹೇಳುತ್ತಾರೆ " ವೇದ ಎಂದರೆ ಅದು ಪುಸ್ತಕದಲ್ಲಿರುವ ಮಂತ್ರವಷ್ಟೇ ಎಂದು ಯಾಕೆ ಭಾವಿಸುತ್ತೀರಿ? "

         ಇಲ್ಲಿ ನಾನು ಒಂದು ಮಾತನ್ನು ಒತ್ತಿ ಹೇಳಲು ಇಚ್ಛಿಸುತ್ತೇನೆ.    ಹಾಸನದ " ವೇದಭಾರತಿಯು" ಈಗ್ಗೆ ಎರಡು ವರ್ಷದ ಮುಂಚೆ ಸಾಪ್ತಾಹಿಕ ವೇದಪಾಠವನ್ನು ಆರಂಭಿಸಿದಾಗ 80ಕ್ಕೂ ಹೆಚ್ಚು ಜನ ಆಸಕ್ತರು ಸಮಾಜದ ಎಲ್ಲಾ ವರ್ಗಗಳಿಂದಲೂ ಬರಲು ಆರಂಭಿಸಿದರು. ನಮ್ಮ ಗುರುಗಳು ಆರ್ಷಪದ್ದತಿಯಲ್ಲಿಯೇ ಪಾಠ ಆರಂಭಿಸಿದರು. ಓಂಕಾರದಿಂದ ಆರಂಭವಾಗಿ ಸ್ವರದ ಪರಿಚಯಿಸಲು ಒಂದೆರಡು ತಿಂಗಳಾದರೂ ಹಲವರಿಗೆ ಕಲಿಯುವುದು ಕಷ್ಟವಾಯ್ತು. ಸಂಖ್ಯೆ ಕಡಿಮೆಯಾಗುತ್ತಾ ಬಂತು. ಬದ್ಧತೆ ಇದ್ದವರು ಮಾತ್ರ ಸಹನೆ ಕಳೆದುಕೊಳ್ಳದೆ  ಉಳಿದರು. ದೂರದ   ಊರಿನಿಂದ ಬರಬೇಕಾಗಿದ್ದ ನಮ್ಮ ಗುರುಗಳು    ಆನಂತರದ ದಿನಗಳಲ್ಲಿ ಬರುವುದೂ ಸ್ವಲ್ಪ ಕಡಿಮೆಯಾಯ್ತು. ಈಗ ಎರಡು ವರ್ಷ ಕಳೆದಿದ್ದರೂ    ಮಂತ್ರಭಾಗ ಮುಂದುವರೆಸುವುದು ಕಷ್ಟವೆನಿಸಿದೆ. ಅಷ್ಟೇ ಅಲ್ಲ ಆರಂಭಿಕ ಮಂತ್ರಗಳ ಸ್ವರವನ್ನೇ ತಿದ್ದುವ ಕೆಲಸ ಮುಂದುವರೆದಿದೆ.  ಕಾರಣ ಪಾಠಕ್ಕೆ ಬರುವವರಲ್ಲಿ ಹಲವರು 50 ದಾಟಿದವರು. ಆದರೂ ಮಂತ್ರಪಾಠ ಮುಂದುವರೆದಿದೆ.

             ಆದರೆ  ಸಾಮಾನ್ಯರಿಗೆ ವೇದದ ಅರಿವು ಮೂಡಿಸುವ ನಿರಂತರ ಪ್ರಯತ್ನವನ್ನು ವೇದ ಭಾರತಿಯು ಮಾಡುತ್ತಲೇ ಇದೆ. ಹಾಸನದ ಎರಡು ಸ್ಥಳೀಯ ಪತ್ರಿಕೆಗಳಲ್ಲಿ ಮತ್ತು  ರಾಜ್ಯಮಟ್ಟದ   "ವಿಕ್ರಮ " ವಾರಪತ್ರಿಕೆಯಲ್ಲಿ ವೇದದ ಅಂಕಣವನ್ನು ಬರೆಯುವ ಮೂಲಕ ತನ್ನ ಶಕ್ತಿಮೀರಿ ವೇದಭಾರತಿಯು ಪ್ರಯತ್ನಿಸುತ್ತಿದೆ. ಅಲ್ಲದೆ ವೇದಸುಧೆ ಬ್ಲಾಗ್ ಮತ್ತು ವೆಬ್ ಸೈಟ್ ಮೂಲಕ ನಾಲ್ಕೈದು ವರ್ಷಗಳಿಂದ  ಪ್ರಮುಖವಾಗಿ ಶ್ರೀ ಸುಧಾಕರ ಶರ್ಮರ ಉಪನ್ಯಾಸದ ಆಡಿಯೋ ಕೇಳಿಸುವಲ್ಲಿ ಸಫಲವಾಗಿದೆ.

       ವೇದಭಾರತಿಯು ಹಲವಾರು ಉಪನ್ಯಾಸಗಳನ್ನು ಆಯೋಜಿಸುವುದರ ಮೂಲಕ ಸಾಮಾನ್ಯಜನರಿಗೂ ವೇದದ ಅರಿವು ಮೂಡಿಸುವ, ಸಮಾಜದಲ್ಲಿ ಸಾಮರಸ್ಯ ಉಳಿಸುವ  ಕೆಲಸವನ್ನು ನಿರಂತರ ವಾಗಿ ಮಾಡುತ್ತಾ ಬಂದಿದೆ. ಮುಂದೆಯೂ ಮಾಡುತ್ತದೆ. ನೆಮ್ಮದಿಯ  ಆರೋಗ್ಯಕರ ಬದುಕಿಗಾಗಿ ಅರಿವು ಮೂಡಿಸುವ ವೇದಮಂತ್ರಗಳ ಆಧಾರಿತ ಲೇಖನಗಳಿಗಾಗಿ  ವೇದತರಂಗದ ಜೊತೆಗೆ  ಈ ಕೆಲವು ಪತ್ರಿಕೆ ಹಾಗೂ ಬ್ಲಾಗ್ ಗಳನ್ನೂ ನೋಡಬಹುದು.

1. ವಿಕ್ರಮ -ವಾರಪತ್ರಿಕೆಯಲ್ಲಿ "ಜೀವನವೇದ" ಅಂಕಣ
2. ಹಾಸನ ಸ್ಥಳೀಯ ಪತ್ರಿಕೆ ಜನಮಿತ್ರದಲ್ಲಿ "ವೇದಪಥ"
3. ಹಾಸನ ಸ್ಥಳೀಯ ಪತ್ರಿಕೆ ಜನಹಿತದಲ್ಲಿ "ಸರ್ವಹಿತ ವೇದ"
4 Website:    http://www.vedasudhe.com/
5.Blog: http://blog.vedasudhe.com/
6.http://vedajeevana.blogspot.in/
7.http://vedabharatihassan.blogspot.in/