Pages

Saturday, April 30, 2011

ಆತ್ಮೀಯ ವೇದಸುಧೆಯ ಅಭಿಮಾನಿಗಳೇ,
ನಮಸ್ತೆ. ಇತ್ತೀಚೆಗೆ ಪುಟ್ಟಬರ್ತಿಸಾಯಿಬಾಬ ಅವರು ಇಹಲೋಕವನ್ನು ತ್ಯಜಿಸಿದ್ದಾರೆ. ಅವರ ಬಗ್ಗೆ ಲಕ್ಷಾಂತರ ಭಕ್ತರು ತಮ್ಮ ತೀವ್ರ ಶೋಕವನ್ನು ವ್ಯಕ್ತಪಡಿಸಿದ್ದಾರೆ.ಸಾಯಿಬಾಬಾ ಅವರು ಆಂದ್ರದಲ್ಲಿ ಒಂದು ಜಿಲ್ಲೆಗೆ ನೀರುಣಿಸುವ ಹಾಗೂ ಉತ್ತಮವಾದ ಆಸ್ಪತ್ರೆಯನ್ನು ತೆರೆದು ಜನರ ಸೇವೆ ಮಾಡಿದ್ದಾರೆಂಬ ಬಗ್ಗೆ ಅವರ ಬಗ್ಗೆ ಮೆಚ್ಚುಗೆ ಇದೆ. ವೇದಸುಧೆಯಲ್ಲಿ ಬಳಗದ ಹಿರಿಯ ಸದಸ್ಯರಾದ ಶ್ರೀ ವಿ.ಆರ್.ಭಟ್ಟರು ಒಂದು ಉತ್ತಮವಾದ ಲೇಖನವನ್ನು ಬರೆದು ಅದರಲ್ಲಿ ಆರೋಗ್ಯಕರ ಚರ್ಚೆ ನಡೆದು ಶ್ರೀ ಕವಿನಾಗರಾಜ್, ಶ್ರೀಸುಧಾಕರಶರ್ಮರು, ಕವಿ ಸುರೇಶ್ ಇವರುಗಳು ಪಾಲ್ಗೊಂಡು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುತ್ತಾರೆ.ಯಾವಾಗ ಒಂದು ಲೇಖನವು ಹಲವು ಜನರ ಚರ್ಚೆಗೆ ಕಾರಣವಾಗುತ್ತದೋ ಅದು ಸಾರ್ಥಕವಾಯಿತೆಂದೇ ಅದರ ಅರ್ಥ. ಸತ್ಯವೆಂಬುದು ಯಾರೂ ಬದಲಾವಣೆ ಮಾಡಲು ಸಾಧ್ಯವಾಗದಂತಹ ಒಂದು ವಿಷಯ. ಆದರೂ ಜನರು ಅವರರವರ ಮನಸ್ಸಿಗೆ ಹಿತವೆನಿಸಿದ್ದನ್ನು "ಇದು ಸತ್ಯ" ವೆಂದು ಭಾವಿಸುತ್ತಾರೆ. ಇದು ಸಹಜ. ನನ್ನ ಮನ ಒಪ್ಪುವುದು ನನಗೆ ಸತ್ಯವಾಗಿ ತೋರುತ್ತದೆ. ನಿಮ್ಮ ಮನ ಒಪ್ಪುವುದು ನಿಮಗೆ ಸತ್ಯವಾಗಿ ತೋರುತ್ತದೆ. ಆದರೆ ನಿಜವಾಗಿ ಸತ್ಯವು ಬೇರೆಲ್ಲೋ ಇರುತ್ತದೆ. ವೇದಸುಧೆಯ ಮುಖ್ಯವಾದ ಒಂದು ಉದ್ಧೇಶವೆಂದರೆ ಯಾವುದೇ ವಿಚಾರವನ್ನು ಕುರುಡಾಗಿ ಒಪ್ಪಬಾರದು, ಅಲ್ಲದೆ ದೇವರ ಬಗ್ಗೆಯೂ ಕೂಡ ಭಯ ದೂರವಾಗಬೇಕು.ಇಂತಹ ಒಂದು ಮಾನಸಿಕತೆಯ ಜಾಗೃತಿಯಾದರೆ ಸಮಾಜಕ್ಕೆ ಅದು ಒಳ್ಳೆಯದಲ್ಲವೇ? ಪ್ರಸ್ತುತ ಚರ್ಚೆಯಲ್ಲಿರುವ ಶ್ರೀ ವಿ.ಆರ್.ಭಟ್ಟರ ಲೇಖನದ ಕೊಂಡಿ ಇಲ್ಲಿದೆ.http://vedasudhe.blogspot.com/2011/04/blog-post_25.html ಎಲ್ಲರೂ ಓದಲೇ ಬೇಕಾದ ಲೇಖನವಿದು. ದಯಮಾಡಿ ಓದಿ. ನಿಮ್ಮ ನಿಮ್ಮ ಪ್ರತಿಕ್ರಿಯೆಯನ್ನು ಕೊಡಿ. ನಿಮ್ಮ ಪ್ರತಿಕ್ರಿಯೆ ಅದು ನಿಮ್ಮ ವಿಚಾರವೂ ಆಗಬಲ್ಲದು. ಯಾರೂ ಕೂಡ ವಿಚಾರ ಭೇದವನ್ನು ವೈಯಕ್ತಿವಾಗಿ ತೆಗೆದುಕೊಳ್ಳುವುದು ಬೇಡ. ಅಂತೂ ಸತ್ಯಪಥದತ್ತ ಯಾರೂ ಕೊಂಡೊಯ್ಯಬಹುದು. ಎಲ್ಲರಿಗೂ ಬೇಕಾಗಿರುವುದು ಸತ್ಯಪಥ.

Friday, April 29, 2011

ಸಂಪ್ರದಾಯಗಳು ಸಂಕೋಲೆಗಳಾಗದಿರಲಿ

     ಕೈ  ಹಿಡಿದ ಗಂಡ ಗತಿಸಿದರೆ ವಿಧವೆ ಪತ್ನಿ ಕೇಶ ಮುಂಡನ ಮಾಡಿಸಿಕೊಂಡು ಕೆಂಪು ಅಥವಾ ಬಿಳಿ ಸೀರೆ ಉಟ್ಟುಕೊಂಡು ಕೈಗೆ ಬಳೆ ಹಾಕಿಕೊಳ್ಳದೆ ಹಣೆಗೆ ಕುಂಕುಮ ಇಟ್ಟುಕೊಳ್ಳದೆ ಒಂದು ರೀತಿಯ ಒಂಟಿ ಹಾಗೂ ಬಲವಂತದ ವೈರಾಗ್ಯದ ಜೀವನ ನಡೆಸಬೇಕಾಗಿದ್ದ ಕಾಲವಿತ್ತು. ಚಿಕ್ಕ ವಯಸ್ಸಿನಲ್ಲೇ ವಿಧವೆಯಾದವರ ಪಾಡು ಅನುಭವಿಸಿದವರಿಗೇ ಗೊತ್ತು. ಆಕೆಗೆ ಶುಭ ಕಾರ್ಯಗಳಲ್ಲಿ ಆಹ್ವಾನವಿರುತ್ತಿರಲಿಲ್ಲ. ಆಕೆ ಎದುರಿಗೆ ಬಂದರೆ ಅಪಶಕುನವೆಂದು ಭಾವಿಸುವವರಿದ್ದರು. ಹೊಸ ಪೀಳಿಗೆಯವರಿಗೆ ಇಂತಹ ಅನಿಷ್ಟ ಸಂಪ್ರದಾಯದ ಪರಿಚಯ ಇರಲಾರದು. ಪ್ರಾರಂಭದಲ್ಲಿ ಕೇಶಮುಂಡನ ಮಾಡಿಸಿಕೊಳ್ಳುವುದು ನಿಂತರೂ ಕೈಗೆ ಬಳೆ ಹಾಕಿಕೊಳ್ಳಲು, ಹಣೆಗೆ ಕುಂಕುಮ ಇಟ್ಟುಕೊಳ್ಳಲು ಹಿಂಜರಿಯುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ, ಸುಧಾರಣೆಯಾಗಿದೆ. ಕಳೆದ ಎರಡು-ಮೂರು ದಶಕಗಳಿಂದೀಚೆಗೆ ಈ ಸಂಪ್ರದಾಯದ ಆಚರಣೆ ಕಂಡು ಬರುತ್ತಿಲ್ಲ. ಒಂದು ಅನಿಷ್ಟ ಸಂಪ್ರದಾಯದ ಅಂತ್ಯವಾಗಿರುವುದು ಸಮಾಧಾನದ ಸಂಗತಿ.
     ಸಂಪ್ರದಾಯವೆಂದರೆ ತಲೆ ತಲಾಂತರಗಳಿಂದ ಆಚರಿಸಿಕೊಂಡು ಬರಲಾಗುವ ಆಚರಣೆಗಳು, ನಡವಳಿಕೆಗಳು. ಸರಿಯೋ, ತಪ್ಪೋ ವಿಚಾರ ಮಾಡದೆ ಅದನ್ನು ಮುಂದುವರೆಸಿಕೊಂಡು ಬರುವವರನ್ನು ಸಂಪ್ರದಾಯವಾದಿಗಳು ಎನ್ನುತ್ತಾರೆ. ಕೆಲವನ್ನು ಆಚರಿಸಿ ಕೆಲವನ್ನು ಕೈಬಿಡುವ ಅನುಕೂಲ/ಅವಕಾಶವಾದಿಗಳೂ ಇದ್ದಾರೆ. ಅರ್ಥವಿಲ್ಲದ ಸಂಪ್ರದಾಯಗಳನ್ನು ಧಿಕ್ಕರಿಸಿ ನಡೆಯುವವರೂ ಇದ್ದಾರೆ. ಸ್ವತಃ ಸಂಪ್ರದಾಯಗಳನ್ನು ಆಚರಿಸದಿದ್ದರೂ, ಅರ್ಥವಿಲ್ಲವೆಂದು ತಿಳಿದಿದ್ದರೂ, ಇತರರ ಸಲುವಾಗಿ ಅವನ್ನು ಬೆಂಬಲಿಸುವವರ ಸಂಖ್ಯೆ ಸಹ ಗಣನೀಯವಾಗಿದೆ. ಪರಿಸ್ಥಿತಿಗೆ ಅನುಗುಣವಾಗಿ ಎಲ್ಲರನ್ನೂ ಹೊಂದಿಸಿಕೊಂಡು, ಹೊಂದಿಕೊಂಡು ಸಮನ್ವಯ ಮಾಡಿ ಸದ್ವಿಚಾರ ತಿಳಿಸಲು ಹೆಣಗುವವರೂ ಇದ್ದಾರೆ. ಎಲ್ಲಾ ಸಂಪ್ರದಾಯಗಳೂ ಕೆಟ್ಟವಲ್ಲ; ಹಾಗೆಯೇ ಎಲ್ಲವೂ ಒಳ್ಳೆಯವು ಎಂದು ಹೇಳಲಾಗುವುದಿಲ್ಲ. ಯಾವ ಆಚರಣೆಗಳಿಂದ ಯಾರಿಗೂ ತೊಂದರೆಯಿಲ್ಲವೋ, ಯಾವುದರಿಂದ ಮನುಷ್ಯನ ಬೌದ್ಧಿಕ ವಿಕಾಸ, ಅಭಿವೃದ್ಧಿಗೆ ಸಹಕಾರವಾಗುವುದೋ, ಸಂತಸ ಹರಡುವುದೋ, ತಾರತಮ್ಯ ಇಲ್ಲದಿರುವುದೋ ಅಂತಹವುಗಳನ್ನು ಒಳ್ಳೆಯ ಸಂಪ್ರದಾಯಗಳೆನ್ನಬಹುದು. ಇದಕ್ಕೆ ತದ್ವಿರುದ್ಧವಾದ ಸಂಪ್ರದಾಯಗಳನ್ನು ಕೆಟ್ಟವು ಎಂದುಕೊಳ್ಳಬಹುದು. ಒಳ್ಳೆಯದಕ್ಕೋ, ಕೆಟ್ಟದಕ್ಕೋ ಗೊತ್ತಿಲ್ಲ, ಈಗಂತೂ ಹೊಸ ಹೊಸ ಸಂಪ್ರದಾಯಗಳು, ಆಚರಣೆಗಳು ಚಾಲ್ತಿಗೆ ಬರುತ್ತಿವೆ, ಹಿಂದಿನ ಅನುಭವಗಳಿಂದ ಹೇಳುವುದಾದರೆ ಕ್ರಮೇಣ ಅವು ಗಟ್ಟಿಗೊಳ್ಳುತ್ತವೆ.

     ಬಾಲ ಗಂಗಾಧರನಾಥ ತಿಲಕರು ಬ್ರಿಟಿಷರ ವಿರುದ್ಧ ಜನರನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರೇಪಿಸುವ ಸಲುವಾಗಿ ಹುಟ್ಟುಹಾಕಿದ ಸಾರ್ವಜನಿಕ ಗಣೇಶ ಉತ್ಸವಗಳು ಇಂದು ಯಾವ ಮಟ್ಟಕ್ಕೆ ತಲುಪಿವೆ ಎಂಬುದು ವಿಚಾರ ಮಾಡಬೇಕಾದ ಸಂಗತಿಯಾಗಿದೆ. ಮೊದಲು ಊರಿಗೆ ಒಂದರಂತೆ ಇದ್ದುದು, ಈಗ ಗಲ್ಲಿ ಗಲ್ಲಿಗಳಲ್ಲಿ ಗಣೇಶನ ಮೂರ್ತಿಗಳನ್ನು ಇಟ್ಟು ಅಲ್ಲಿ ನಡೆಸುವ ಕಾರ್ಯಕ್ರಮಗಳು, ಪೈಪೋಟಿ, ವಂತಿಕೆ ವಸೂಲಿ, ವಿಸರ್ಜನೆ ಸಮಯದಲ್ಲಿ ಕುಡಿದು ಕುಣಿಯುವ ಯುವಕರು, ಮತೀಯ ಘರ್ಷಣೆಗಳು, ಇತ್ಯಾದಿಗಳನ್ನು ಗಮನಿಸಿದರೆ ಇವೆಲ್ಲಾ ಯಾವ ಪುರುಷಾರ್ಥಕ್ಕಾಗಿ ಎಂದು ಅನ್ನಿಸದೇ ಇರದು. ಒಳ್ಳೆಯ ರೀತಿಯಲ್ಲಿ ಆಚರಿಸುವವರು ಇದ್ದರೂ ಅಂತಹವರ ಸಂಖ್ಯೆ ಬೆರಳೆಣಿಕೆಯಷ್ಟು. ಗಣೇಶೋತ್ಸವಗಳು ಮುಗಿಯುವವರೆಗೂ ಶಾಂತಿ, ಸುವ್ಯವಸ್ಥೆಗಳಿಗಾಗಿ ಸಂಬಂಧಿಸಿದವರು ಹಗಲೂ ರಾತ್ರಿ ಹೆಣಗುವ, ಇಂತಹ ಉತ್ಸವಗಳು (ಗಣೇಶೋತ್ಸವ ಮಾತ್ರ ಅಲ್ಲ, ಎಲ್ಲಾ ಮತೀಯ/ಧಾರ್ಮಿಕ ಉತ್ಸವಗಳು ಸೇರಿ) ಏಕಾದರೂ ಬರುತ್ತವೋ ಎಂದು ಅಂದುಕೊಳ್ಳುವ ಪರಿಸ್ಥಿತಿ ಇಂದು ಇದೆ. ನಾನು ಗಣೇಶೋತ್ಸವವನ್ನಾಗಲೀ, ಇಂತಹ ಇತರ ಉತ್ಸವಗಳನ್ನಾಗಲೀ ವಿರೋಧಿಸುತ್ತಿಲ್ಲ, ಅದನ್ನು ಆಚರಿಸಲಾಗುತ್ತಿರುವ ರೀತಿಯ ಬಗ್ಗೆ ಮಾತ್ರ ಬೆರಳು ತೋರಿಸುತ್ತಿದ್ದೇನೆ.

     ಸಂಕಷ್ಟಹರ ಗಣಪತಿ ಪೂಜೆಯನ್ನು ಇಂದು ಸಾಮೂಹಿಕ ಸನ್ನಿಯಂತೆ ಆಚರಿಸಲಾಗುತ್ತಿದೆ. ಆದರೆ ಎಷ್ಟು ಜನರು ಇದನ್ನು ಶ್ರದ್ಧೆಯಿಂದ ಆಚರಿಸುತ್ತಿದ್ದಾರೆ? ಹೆಚ್ಚಿನವರು ಸ್ವಸಹಾಯ ಪದ್ಧತಿಯ ಹೋಟೆಲ್ಲಿನಲ್ಲಿ ಹಣ ಕೊಟ್ಟು ಕಾಫಿ ಕುಡಿದಂತೆ ದೇವಸ್ಥಾನಕ್ಕೆ ಹೋಗಿ ಹಣ ಕೊಟ್ಟು ಚೀಟಿ ಬರೆಸಿ ಹೋಗುತ್ತಾರೆ, ಪ್ರಸಾದ ಕೊಡುವ ಸಮಯಕ್ಕೆ ಬಂದು ಕೈಮುಗಿದು ಪ್ರಸಾದ ಪಡೆದು ಹೋಗುತ್ತಾರೆ. ಪೂಜೆಯ ಸಮಯದಲ್ಲಿ ದೇವಸ್ಥಾನದಲ್ಲಿದ್ದವರೂ ಪರಸ್ಪರ ಮಾತುಕತೆಗಳಲ್ಲಿ ತೊಡಗಿರುತ್ತಾರೆ. ಇಂತಹ ಆಚರಣೆಯಿಂದ ಯಾರಿಗೆ ಪ್ರಯೋಜನ? ಯಾರ ಕಷ್ಟಗಳು ಪರಿಹಾರವಾಗುತ್ತದೆ? ಶ್ರದ್ಧೆಯಿಂದ, ಅರ್ಥ ತಿಳಿದುಕೊಂಡು ಮಾಡುವ ಕ್ರಿಯೆಗಳಿಂದ ಮಾತ್ರ ಫಲ ಸಿಗಲು ಸಾಧ್ಯವಲ್ಲವೇ? ಇಲ್ಲದಿದ್ದರೆ ಅವು ತೋರಿಕೆಗೆ ಮಾಡುವ ಆಚರಣೆಗಳು ಅಷ್ಟೆ. ಇಸ್ಲಾಮ್ ಮತ ಪ್ರಾರಂಭವಾದ ಸಂದರ್ಭದಲ್ಲಿ ಧ್ವನಿವರ್ಧಕವಿರಲಿಲ್ಲ. ಆದರೆ ಇಂದು ಎಲ್ಲಾ ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಧ್ವನಿವರ್ಧಿಸಿ ನಮಾಜು, ಉಪದೇಶಗಳನ್ನು ಮಾಡುತ್ತಿರುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಅದನ್ನು ಕೇಳಲು ಇಚ್ಛಿಸದವರಿಗೂ ಬಲವಂತವಾಗಿ ಕೇಳುವಂತೆ ಮಾಡುತ್ತಿರುವುದು ಒಂದು ರೀತಿಯ ಶಬ್ದಮಾಲಿನ್ಯವಲ್ಲವೇ?


     ಜಾತ್ರೆ, ಪೂಜೆ, ಇತ್ಯಾದಿಗಳ ಹೆಸರಿನಲ್ಲಿ ದೇವರನ್ನು ಸಂತುಷ್ಟಗೊಳಿಸುವ(?) ಕಾರಣದಿಂದ ಪ್ರಾಣಿಬಲಿ ನೀಡುವ ಸಂಪ್ರದಾಯ ಒಳ್ಳೆಯದೆಂದು ಹೇಳಬಹುದೆ? ಇದನ್ನು ಸಮರ್ಥಿಸುವ ಜನರಿಗೆ ಕಡಿಮೆಯೇನಿಲ್ಲ. ಶಿಕಾರಿಪುರದಲ್ಲಿ ತಾಲ್ಲೂಕು ದಂಡಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಜಾತ್ರೆಯ ಸಮಯದಲ್ಲಿ ಕೋಣಬಲಿ ತಡೆಯಲು ಒಂದು ಗ್ರಾಮದಲ್ಲಿ ಪೋಲಿಸರ ನೆರವಿನೊಂದಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದರೂ, ಗ್ರಾಮಸರಿಗೆ ಕಾನೂನಿನಲ್ಲಿ ಇರುವ ನಿಷೇಧ, ಉಲ್ಲಂಘಿಸಿದರೆ ಆಗುವ ಪರಿಣಾಮಗಳು, ಇತ್ಯಾದಿ ತಿಳುವಳಿಕೆ ಹೇಳಲು ಮುಂಚಿತವಾಗಿ ನಡೆಸಿದ್ದ ಶಾಂತಿ ಸಮಿತಿ ಸಭೆಯಲ್ಲಿ ಪಶುವೈದ್ಯರ ಸಹಾಯದಿಂದ ಸಿರಿಂಜಿನಲ್ಲಿ ಕೋಣನ ರಕ್ತವನ್ನು ತೆಗೆದು ಸಾಂಕೇತಿಕವಾಗಿ ದೇವಿಗೆ ಅರ್ಪಿಸಲು ಗ್ರಾಮದ ಮುಖ್ಯಸರು ಒಪ್ಪಿ ಮುಚ್ಚಳಿಕೆ ಬರೆದುಕೊಟ್ಟಿದ್ದರೂ, ಪೋಲಿಸರ ಕಣ್ಗಾವಲು ಇದ್ದರೂ ಎಲ್ಲರ ಕಣ್ಣುತಪ್ಪಿಸಿ ಕೋಣಬಲಿ ನೀಡಿದ ಪ್ರಸಂಗ ಬೇಸರ, ಮುಜುಗರ ಉಂಟುಮಾಡಿತ್ತು. ಎಲ್ಲಾ ಮಾಧ್ಯಮಗಳಲ್ಲೂ ವಿಷಯ ಅತಿರಂಜಿತವಾಗಿ ಪ್ರಚಾರಗೊಂಡಿತು. ಕೆಲವರ ಮೇಲೆ ಪ್ರಕರಣ ದಾಖಲಿಸಿದರೂ ರಾಜಕೀಯ ನಾಯಕರ ಮಧ್ಯಪ್ರವೇಶ ಪ್ರಕರಣವನ್ನು ದುರ್ಬಲಗೊಳಿಸಿದ್ದು ಸುಳ್ಳಲ್ಲ. ಈ ಪ್ರಕರಣವನ್ನು ರಾಜಕೀಯ ಮಾಡುವ ಸಲುವಾಗಿ ಪರವಾಗಿ ಮತ್ತು ವಿರೋಧವಾಗಿ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಬಳಸಿಕೊಂಡವು. ಅನಿಷ್ಟ ಸಂಪ್ರದಾಯಕ್ಕೆ ವಿರೋಧ ವ್ಯಕ್ತಪಡಿಸಿದವರೂ ಸಾತ್ವಿಕ ಕಾರಣಕ್ಕೆ ವಿರೋಧಿಸದೆ ವಿರೋಧಿಗಳನ್ನು ವಿರೋಧಿಸಲು ಮಾತ್ರ ಬಳಸಿದ್ದು ನೋವಿನ ವಿಷಯ. ಮಾಧ್ಯಮಗಳೂ ಕೆಸರೆರಚಾಟಕ್ಕೆ ಸಾಥ್ ನೀಡಿದವೇ ಹೊರತು, ಅವುಗಳಿಗೆ ಜನರಲ್ಲಿ ತಿಳುವಳಿಕೆ ಹೆಚ್ಚಿಸುವ ಶಕ್ತಿಯಿದ್ದರೂ ಮಾಡಲಿಲ್ಲ. ಇಂತಹ ಉದಾಹರಣೆಗಳನ್ನು ಸಾಕಷ್ಟು ನೋಡಬಹುದು. ಅಂಧ ಸಂಪ್ರದಾಯಗಳ ಕುರಿತು ತಿಳಿಸುವ ಸಲುವಾಗಿ ಕೆಲವನ್ನು ಮಾತ್ರ ಸಾಂಕೇತಿಕವಾಗಿ ಉದಾಹರಿಸಿದ್ದೇನೆ.
     ಸಂಪ್ರದಾಯಗಳನ್ನು ಹೇಗೆ ಆಚರಿಸಬೇಕು ಅನ್ನುವುದಕ್ಕಿಂತ ಕೆಟ್ಟ ಸಂಪ್ರದಾಯಗಳನ್ನು ಗುರುತಿಸಿ ಅವುಗಳಿಂದ ದೂರ ಉಳಿಯಲು ಮತ್ತು ಸಾಧ್ಯವಾದರೆ ತಡೆಯಲು ಪ್ರಯತ್ನಿಸುವುದು ಇಂದಿನ ಅಗತ್ಯ. ಮಠ-ಮಂದಿರಗಳು, ಮಸೀದಿಗಳು, ಚರ್ಚುಗಳು, ಇತ್ಯಾದಿಗಳು ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಶ್ರದ್ಧಾ ಕೇಂದ್ರಗಳಾಗಿವೆ. ಈ ಕೇಂದ್ರಗಳು ವಾಸ್ತವವಾಗಿ ಸತ್ಕರ್ಮಗಳನ್ನು ಪೋಷಿಸುವ, ಜ್ಞಾನ ಪಸರಿಸುವ ಕೆಲಸ ಮಾಡಬೇಕು. ವಿಷಾದದ ಸಂಗತಿಯೆಂದರೆ ಹೆಚ್ಚಿನವು ಋಣಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಶೈಕ್ಷಣಿಕ, ವೈದ್ಯಕೀಯ ಸಂಸ್ಥೆಗಳನ್ನು, ಕಲ್ಯಾಣ ಮಂದಿರಗಳನ್ನು ಕಟ್ಟಿ ಹಣ ಮಾಡುವ ಕೇಂದ್ರಗಳಾಗಿವೆ. ತಿರಳಿಗಿಂತ ಸಿಪ್ಪೆಗೆ ಹೆಚ್ಚು ಮಾನ್ಯತೆ ಕೊಡಲಾಗುತ್ತಿದೆ. ನಿಜ, ತಿರುಳಿನ ರಕ್ಷಣೆಗೆ ಸಿಪ್ಪೆಯಿರಬೇಕು, ಆದರೆ ಸಿಪ್ಪೆಯೇ ತಿರುಳಾಗಬಾರದು. ಆ ಕಾರಣದಿಂದಾಗಿ ಉತ್ತರಾಧಿಕಾರಕ್ಕಾಗಿ ಕಚ್ಚಾಡುವ, ಒಡೆತನ ಸಾಧಿಸಬಯಸುವವರ ಕೂಟ ಅಲ್ಲಿ ಮನೆ ಮಾಡಿವೆ. ಮೂಲ ಉದ್ದೇಶ ಮರೆತು ಭೌತಿಕ ಆಸ್ತಿ, ಸಂಪತ್ತು ಕ್ರೋಢೀಕರಿಸಲು ನೀಡುವ ಮಹತ್ವವೇ ಇದಕ್ಕೆ ಕಾರಣವೆಂದರೆ ಅದರಲ್ಲಿ ಅತಿಶಯೋಕ್ತಿಯಿಲ್ಲ.

     ನನಗೆ ಬಂದಿದ್ದ ಇ-ಮೇಲ್ ಒಂದರಿಂದ ರೂಢಿಗತ ಸಂಪ್ರದಾಯಗಳಿಗೆ ಹೇಗೆ ಮನಸ್ಸು ಒಗ್ಗಿಕೊಳ್ಳುತ್ತದೆ ಎಂಬುದಕ್ಕೆ ಅತ್ಯತ್ತಮ ಉದಾಹರಣೆ ಸಿಕ್ಕಿತು. ಅದೆಂದರೆ ಬಲಶಾಲಿ ಆನೆಯ ಕಾಲಿಗೆ ಕಬ್ಬಿಣದ ಸರಪಳಿ ಹಾಕಿ ಮರವೊಂದಕ್ಕೆ ಕಟ್ಟಿ ಹಾಕಿದರೆ ಅದು ಬಿಡಿಸಿಕೊಳ್ಳಲು ಪ್ರಯತ್ನವೇ ಮಾಡುವುದಿಲ್ಲ. ಆನೆ ಎಷ್ಟು ಬಲಶಾಲಿಯೆಂದರೆ ಅದಕ್ಕೆ ಆ ಸರಪಳಿ ಮತ್ತು ಮರ ಲೆಕ್ಕವೇ ಅಲ್ಲ. ಅದು ಮನಸ್ಸು ಮಾಡಿದರೆ ಸರಪಳಿ ತುಂಡರಿಸಬಲ್ಲದು ಮತ್ತು ಮರವನ್ನು ಕಿತ್ತು ಬಿಸಾಡಬಲ್ಲದು. ಆದರೂ ಅದು ಮಾಡುವುದಿಲ್ಲ. ಏಕೆಂದರೆ ಆನೆ ಚಿಕ್ಕದಾಗಿದ್ದಾಗ ಅದನ್ನು ಅದೇ ರೀತಿ ಕಟ್ಟಿ ಹಾಕಲಾಗುತ್ತಿತ್ತು. ಚಿಕ್ಕದಾಗಿದ್ದರಿಂದ ಅದರಿಂದ ಬಿಡಿಸಿಕೊಳ್ಳಲು ಅದು ಎಷ್ಟೇ ಪ್ರಯತ್ನಿಸಿದರೂ ಆಗ ಆಗುತ್ತಿರಲಿಲ್ಲ. ಕ್ರಮೇಣ ಅದೇ ಅಭ್ಯಾಸವಾಗಿ ಮರಕ್ಕೆ ಕಟ್ಟಿ ಹಾಕಿದರೆ ಬಿಡಿಸಿಕೊಳ್ಳಲಾಗುವುದಿಲ್ಲವೆಂಬ ಭಾವ ಗಟ್ಟಿಗೊಂಡು ಅದು ದೊಡ್ಡದಾದ ಮೇಲೂ ಹಾಗೆ ಕಟ್ಟಿಹಾಕಿದರೆ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರಲೇ ಇರಲಿಲ್ಲ. ನಮ್ಮ ಸ್ಥಿತಿ ಸಹ ಅದೇ ರೀತಿ ಇದೆ. ನಮಗೆ ವಿಚಾರ ಮಾಡುವ ಶಕ್ತಿ ದೇವರು ಕೊಟ್ಟಿದ್ದಾನೆ. ಕೆಲವು ಸಂಪ್ರದಾಯಗಳು ಅರ್ಥಹೀನವೆಂದು ನಮಗೆ ತಿಳಿಯುತ್ತದೆ, ಮನಸ್ಸು ಮಾಡಿದರೆ ಅದನ್ನು ಧಿಕ್ಕರಿಸುವ, ಮುಂದುವರೆಸದಿರುವ ಶಕ್ತಿ ನಮಗಿದೆ, ಆದರೂ ನಾವು ಹಾಗೆ ಮಾಡುವುದಿಲ್ಲವೆಂಬುದು ವಿಷಾದದ ಸಂಗತಿ. 'ಅಪ್ಪ ಹಾಕಿದ ಆಲದಮರವೆಂದು ಅದಕ್ಕೆ ನೇಣು ಹಾಕಿಕೊಳ್ಳಲಾಗುವುದೇ' ಎಂಬ ಪ್ರಚಲಿತ ಗಾದೆ ಮಾತು ತಿಳಿಸುವುದೂ ವಿಚಾರ ಮಾಡಿ ಮುಂದುವರೆಯಿರಿ ಎಂದೇ. ಸಾರಾಸಗಟಾಗಿ ಎಲ್ಲವನ್ನೂ ತಳ್ಳಿಹಾಕಬೇಕಾಗಿಲ್ಲ. ಕುಟುಂಬಕ್ಕೆ, ಸುತ್ತಮುತ್ತಲಿನವರಿಗೆ ಹಿತವೆನಿಸುವ ಒಳ್ಳೆಯ ಸಂಪ್ರದಾಯಗಳನ್ನು ಉಳಿಸಿ ಬೆಳೆಸಬಹುದು, ಆದರೆ ಅನಿಷ್ಠ ಸಂಪ್ರದಾಯಗಳನ್ನು ನಿಲ್ಲಿಸುವ ಮತ್ತು ಸದ್ಯಕ್ಕೆ ಒಳ್ಳೆಯದೆನಿಸಿದರೂ ಕಾಲಾನುಕಾಲಕ್ಕೆ ಅದರ ಆಚರಣೆಯಿಂದ ಆಗುವ ಪರಿಣಾಮಗಳನ್ನೂ ಗಮನಿಸಿ ಯೋಗ್ಯತಾನುಸಾರ ನಿರ್ಣಯಿಸಿ ಅಂತಹವುಗಳನ್ನು ಕೈಬಿಡುವ ಬಗ್ಗೆ ನಿರ್ಧರಿಸುವುದು ಇಂದಿನ ಅಗತ್ಯವಾಗಿದೆ. ಸಂಪ್ರದಾಯಗಳು ನಮ್ಮನ್ನು ಕಟ್ಟಿಹಾಕುವ ಸರಪಳಿಗಳಾಗದಿರಲಿ; ನಮ್ಮನ್ನು ಒಳ್ಳೆಯ ದಾರಿಯಲ್ಲಿ ಮುನ್ನಡೆಸುವ ದಾರಿದೀಪಗಳಾಗಲಿ.
***************
-ಕ.ವೆಂ.ನಾಗರಾಜ್.

ಯೋಚಿಸಲೊ೦ದಿಷ್ಟು...೩೨

೧. ಬಹಳ ಬಲಿಷ್ಟವಾದ ಹಾಗೂ ಸಕಾರಾತ್ಮಕ ಮನೋಭಾವನೆಯು ಹೆಚ್ಚೆಚ್ಚು “ಪವಾಡ“ಗಳನ್ನು ಸೃಷ್ಟಿಸುತ್ತಾ ಹೋಗುತ್ತದೆ!
೨. ನಮ್ಮನ್ನು ಮೊದಲು ನಾವು ಪ್ರೀತಿಸಲು ಕಲಿಯಬೇಕು.. ಸ್ವ ಅಪನ೦ಬಿಕೆಗಿ೦ತಲೂ ನಾವು ನಡೆಯಬೇಕಾದ ಹಾದಿಯನ್ನು ಹಾಗೂ ನಮ್ಮ ಮಾನಸಿಕ ಭಾವನೆಗಳನ್ನು ಆಗಾಗ ವಿಮರ್ಶೆ ಮಾಡಿಕೊಳ್ಳುತ್ತಲೇ ಇರಬೇಕು.
೩.ದೇವರು ನಮ್ಮ ಹೃದಯ ಮತ್ತು ನಾಲಿಗೆಗಳು ಮೃದುವಾಗಿರಲೆ೦ದೇ ಅವುಗಳಿಗೆ ಎಲುಬನ್ನು ನೀಡಲಿಲ್ಲ!
೪. “ಬೇರೊಬ್ಬರ ಸಹಾಯ ಪಡೆಯದೇ.. ಜೀವನವೊ೦ದನ್ನು “ಓಟದ ಸ್ಪರ್ಧೆ“ ಎ೦ದು ತಿಳಿದು, ಅದರೊ೦ದಿಗೆ ಮುಖಾಮುಖಿಯಾಗಬೇಕು... ಎಲ್ಲರೂ ನಮ್ಮನ್ನು ಅನುಸರಿಸಲು ಆರ೦ಭಿಸುತ್ತಾರೆ“!- ಹಿಟ್ಲರ್
೫.ಒಮ್ಮೊಮ್ಮೆಏನು ಹೇಳಿದೆವೆನ್ನುವುದು ಮುಖ್ಯವಾಗಲಾರದು.. ಹೇಗೆ ಹೇಳಿದೆವೆನ್ನುವುದೇ ಮುಖ್ಯವಾಗುತ್ತದೆ!! ಸಮಸ್ಯೆಗಳು ಹುಟ್ಟಿಕೊಳ್ಳುವುದೂ ಹಾಗೆಯೇ..!!
೬. ನಾವು ಕಳೆದುಕೊಳ್ಳುತ್ತಿರುವುದನ್ನು “ಉಳಿಸಿಕೊಳ್ಳುವ“ ಹಾಗೂ ಇನ್ನೇನನ್ನೂ ಕಳೆದುಕೊಳ್ಳಲು “ಬಾಕಿ ಇಲ್ಲ“ ಎನ್ನುವ ಸ೦ಧರ್ಭಗಳಲ್ಲಿ ಸಾಮಾನ್ಯವಾಗಿ ನಿಜವನ್ನೇ ನುಡಿಯುತ್ತೇವೆ!
೭. ಸಾಮಾನ್ಯರು ದೇವರಲ್ಲಿ “ ತ೦ದೆ ಯಾವುದೇ ಸಮಸ್ಯೆಯೂ ನನ್ನನ್ನು ಕಾಡದಿದರಲಿ“ ಎ೦ದು ಬೇಡಿಕೊ೦ಡರೆ, ವಿಶೇಷ ವ್ಯಕ್ತಿಗಳೆನ್ನಿಸಿಕೊ೦ಡವರು “ ತ೦ದೆ ಸಮಸ್ಯೆಗಳನ್ನೆದುರಿಸುವ ಶಕ್ತಿಯನ್ನು ಸದಾ ನನಗೆ ನೀಡು“ ಎ೦ದು ಬೇಡಿಕೊಳ್ಳುತ್ತಾರೆ!
೮. ನಾವು ಆಡುವ ಮಾತುಗಳ ಕುರಿತು ಚಿ೦ತಿಸಬೇಕೇ ವಿನ: ನಾವು ಚಿ೦ತಿಸಿದ ಎಲ್ಲಾ ವಿಚಾರಗಳ ಬಗ್ಗೆ ಮಾತನಾಡಬಾರದು!
೯. ಜೀವನದಲ್ಲಿ ಏರಿಳಿತಗಳು ಸಾಮಾನ್ಯ. ಒಮ್ಮೆ ಸೂರ್ಯ ಹೊಳೆದರೆ, ಮತ್ತೊಮ್ಮೆ ಮಳೆ ಸುರಿಯುತ್ತದೆ ! ಆದರೆ ಅವರಿಬ್ಬರ ಉಪಸ್ಥಿತಿ ಹಾಗೂ ಸೇರುವಿಕೆಯಿ೦ದಲೇ ನಯನ ಮನೋಹರ ಕಾಮನಬಿಲ್ಲಿನ ಸೃಷ್ಟಿಯಾಗುವುದು!
೧೦. ಎಷ್ಟೇ ರಹಸ್ಯಗಳನ್ನು ಮುಚ್ಚಿಟ್ಟುಕೊ೦ಡರೂ ಆತ್ಮೀಯರು ಆ ರಹಸ್ಯಗಳನ್ನು ಹೊರಗೆಳೆಯುವಲ್ಲಿ ಸಫಲರಾಗುತ್ತಾರೆ!
೧೧. ನೈಜ ಪ್ರೀತಿಯಿದ್ದಲ್ಲಿ ಮಾತ್ರವೇ ಆತ್ಮೀಯರ ನಡುವೆ ಉಚ್ಛ ಮಟ್ಟದ ಸ೦ತಸ ಹಾಗೂ ದು:ಖಗಳೆ೦ಬ ಭಾವನೆಗಳು ಹರಿದಾಡಲು ಸಾಧ್ಯ!
೧೨. ಯಾವುದೇ ವ್ಯಕ್ತಿಯೂ ಸಮಯವನ್ನು ಪ್ರೀತಿಸಲಾರ. ತಾನು ಯಾರೊ೦ದಿಗೆ ಸಮಯವನ್ನು ಕಳೆಯಬೇಕೆ೦ದು ಇಚ್ಚಿಸುತ್ತಾನೋ ಅವರನ್ನು ಪ್ರೀತಿಸುತ್ತಾನೆ- ರೋಮಿಯೋ
೧೩. ನಮ್ಮ ಸ೦ಗಾತಿಯೊ೦ದಿಗಿನ ಎಲ್ಲಾ ಜೀವನ ಶರತ್ತುಗಳನ್ನೂ ಒಪ್ಪಿಕೊ೦ಡರೆ ಎಲ್ಲಾ ಸ೦ಸಾರಿಗಳ ಬದುಕೂ ಸು೦ದರವೇ!!!
೧೪. ನಮ್ಮ ಹಿ೦ದಿನ ದಿನಗಳನ್ನು ತೃಪ್ತಿಯಿ೦ದ ಕಳೆದು ಮು೦ದಿನ ದಿನಗಳನ್ನು ಭರವಸೆಯಿ೦ದ ಎದುರ್ಗೊಳ್ಳಬೇಕು.
೧೫. ಸಾಧನೆಯ ಹಾದಿಯಲ್ಲಿ ಒದಗಿಬರುವ ಯಾವುದೇ ಅವಕಾಶವನ್ನೂ ಕೈಬಿಡಬಾರದು! ಎದುರಾದ ಮೊದಲ ಅವಕಾಶವನ್ನು ಕೈಚೆಲ್ಲಿ ಎರಡನೆಯ ಅವಕಾಶಕ್ಕೆ ಕಾದು ಕುಳಿತರೆ, ಒಮ್ಮೊಮ್ಮೆ ಎರಡನೆಯ ಅವಕಾಶ ಒದಗುವುದೇ ಇಲ್ಲ.. ಅಕಸ್ಮಾತ್ ಒದಗಿದಲ್ಲಿ ಅದು ಮೊದಲನೆಯ ಅವಕಾಶಕ್ಕಿ೦ತಲೂ ಕಠಿಣ ಶ್ರಮವನ್ನು ಬೇಡುತ್ತದೆ!!

Wednesday, April 27, 2011

ವೇದೋಕ್ತ ಜೀವನ ಪಥ: ಮಾನವಧರ್ಮ - ೧


ಸಹೃದಯರೇ,
                   ಮೂರು ಶಾಶ್ವತ ಪದಾರ್ಥಗಳ, ಅನಾದಿ ತತ್ತ್ವಗಳ - ಅಂದರೆ, ಪರಮಾತ್ಮ, ಜೀವಾತ್ಮ ಮತ್ತು ಪ್ರಕೃತಿ - ಪರಿಚಯ ಈಗಾಗಲೇ ಮಾಡಿಕೊಡಲಾಗಿದೆ. ಇನ್ನುಮುಂದೆ ಮಾನವಧರ್ಮದ ಬಗ್ಗೆ ಪಂಡಿತ ಸುಧಾಕರ ಚತುರ್ವೇದಿಯವರು ಏನು ಹೇಳಿದ್ದಾರೆ ಎಂಬುದನ್ನು ನೋಡೋಣ, ಜಿಜ್ಞಾಸೆ ಮುಂದುವರೆಸೋಣ.

ವೇದೋಕ್ತ ಜೀವನ ಪಥ: ಮಾನವಧರ್ಮ - ೧

     ಪರಮಾತ್ಮ ಮತ್ತು ಪ್ರಕೃತಿಯ ನಡುವೆ, ಅಲ್ಪಜ್ಞನೂ, ಅಲ್ಪಶಕ್ತನೂ, ಪರಿಚ್ಛಿನ್ನನೂ ಆದ ಜೀವಾತ್ಮನಿದ್ದಾನೆ. ಪರಮಾತ್ಮ ಸರ್ವಥಾ ನಿರಾಕಾರ, ನಿರ್ವಿಕಾರ, ಅವನು ಪತನ ಹೊಂದುವ ಪರಿಸ್ಥಿತಿ ಮೂರು ಕಾಲಕ್ಕೂ ಇಲ್ಲ. ಪ್ರಕೃತಿ ಜಡವಾದ ಕಾರಣ, ಪೂರ್ಣತಃ ಅನುಭವರಹಿತ. ಅದರ ಉತ್ಥಾನ-ಪತನಗಳಿಗೆ ಏನೂ ಅರ್ಥವಿಲ್ಲ. ಉಳಿದವನು ಜೀವಾತ್ಮ. ಅವನು ಸ್ವರೂಪತಃ ಪರಿಚ್ಛಿನ್ನನಾಗಿರುವುದರಿಂದ ಅವನ ಶಕ್ತಿಗಳಿಗೂ, ಜ್ಞಾನಕ್ಕೂ ಸಹ ಒಂದು ಪರಿಮಿತಿಯಿದೆ. ಈ ಪರಿಮಿತಿಯ ಕಾರಣದಿಂದ ಜೀವಾತ್ಮನು ತನ್ನ ಉದ್ಧಾರಕ್ಕಾಗಿ ಭಗವಂತನಿಂದ ಕೊಡಲ್ಪಟ್ಟ ಮನಸ್ಸು, ಇಂದ್ರಿಯಗಳು, ದೇಹ ಇವುಗಳನ್ನು ತನ್ನ ವಶದಲ್ಲಿಟ್ಟುಕೊಳ್ಳುವುದನ್ನು ಬಿಟ್ಟು, ತಾನೇ ಅವುಗಳಿಗೆ ವಶೀಭೂತನಾಗಿ ಹೋಗುತ್ತಾನೆ. ಈ ದೌರ್ಬಲ್ಯದ ಪರಿಣಾಮವಾಗಿ ಅವನು ಭಗವಂತನ ಸೃಷ್ಟಿಯನ್ನು ಸುಖ-ಶಾಂತಿಗಳ ಬೀಡಾಗಿ ಮಾಡುವ ಬದಲು, ಅದನ್ನು ನಾರಕೀಯ ಸಂಕಟಗಳ ವೇದಿಕೆಯನ್ನಾಗಿ ಮಾಡುತ್ತಾನೆ. ಈ ರೀತಿ, ತನ್ನ ಇಹವನ್ನು ಕೆಡಿಸಿಕೊಳ್ಳುವುದಲ್ಲದೆ, ಇತರರ ಇಹವನ್ನೂ ಹಾಳುಮಾಡುತ್ತಾನೆ. ಇಹವನ್ನೇ ಸುಧಾರಿಸಿಕೊಳ್ಳಲಾರದವನ ಮುಂದೆ ಪರದ ಪ್ರಶ್ನೆ ನಿರರ್ಥಕ. ಏಕೆಂದರೆ, ಪರದ ಆಧಾರ ಇಹವೇ ಆಗಿರುತ್ತದೆ. ಪರವನ್ನು ಗುರಿಯಾಗಿಟ್ಟುಕೊಂಡು ಇಹವನ್ನು ಹದಗೊಳಿಸಿಕೊಳ್ಳುವುದು, ಸುಧಾರಿತವಾದ ಇಹದ ಆಧಾರದ ಮೇಲೆ ಪರವನ್ನು ಸಾಧಿಸುವುದು. ಬೇರೆಯ ರೀತಿಯಲ್ಲಿ ಹೇಳಬೇಕೆಂದರೆ, ಇಹ-ಪರಗಳೆರಡನ್ನೂ ಸಾಧಿಸಿಕೊಳ್ಳುವುದು. ಇದಕ್ಕೆ ಒಂದು ನಿರ್ದಿಷ್ಟ ಮಾರ್ಗವನ್ನು ಅವಲಂಬಿಸಬೇಕಾಗುತ್ತದೆ. ಆ ನಿರ್ದಿಷ್ಟ ಮಾರ್ಗವನ್ನು ಋಗ್ವೇದ ಈ ರೀತಿ ವರ್ಣಿಸುತ್ತದೆ:-

ತೇ ನಸ್ತ್ರಾಧ್ವಂ ತೇsವತ ತ ಉ ನೋ ಅಧಿ ವೋಚತ |
ಮಾ ನಃ ಪಥಃ ಪಿತ್ರ್ಯಾನ್ಮಾನವಾದಧಿ ದೂರಂ ನೈಷ್ಟ ಪರಾವತಃ ||
(ಋಕ್. ೮.೩೦.೩)

     ವಿದ್ವಜ್ಜನರೇ! [ತೇ ನಃ ತ್ರಾಧ್ವಮ್] ಆ ನೀವು ನಮಗೆ ಬಲ ಕೊಡಿರಿ. [ತೇ ಆವತ] ಆ ನೀವು ರಕ್ಷಿಸಿರಿ. [ತ ಉ ನೋ ಅಧಿ ವೋಚತ] ಆ ನೀವೇ ನಮಗೆ ಉಪದೇಶ ಕೊಡಿರಿ. [ನಃ ಪಿತ್ರ್ಯಾತ್ ಮಾನವಾತ್ ಪರಾವತಃ ಪಥಃ ಅಧಿ] ನಮ್ಮನ್ನು ಪಾಲಕನ ಶಕ್ತಿಸಂಪನ್ನವಾದ, ಮಾನವೀಯವಾದ, ಪರಪ್ರಾಪ್ತಿ ಸಾಧಕವಾದ ಮಾರ್ಗದಿಂದ, [ಮಾ ದೂರಂ ನೈಷ್ಟ] ದೂರಕ್ಕೆ ಕರೆದೊಯ್ಯಬೇಡಿ.

     ವೇದಗಳ ಶೈಲಿ ತನ್ನದೇ ಆದ ಅದ್ಭುತ ಶೈಲಿ. ಇಹ-ಪರಗಳೆರಡನ್ನೂ ಶಾಧಿಸುವ ನಿರ್ದಿಷ್ಟ ಮಾರ್ಗವನ್ನು ತಿಳಿಯಲಪೇಕ್ಷಿಸುವ ನಿಜವಾದ ಜಿಜ್ಞಾಸುಗಳು ಜ್ಞಾನಿಗಳಲ್ಲಿ ಬೇಡಿಕೊಳ್ಳುವ ರೀತಿಯದು. ಪ್ರತಿಯೊಬ್ಬ ಧರ್ಮಜಿಜ್ಞಾಸುವಿನ ಹೃದಯಾಂತರಾಳದಲ್ಲಿಯೂ ಅಡಗಿರಬೇಕಾದ ಮೂರು ಅಂಶಗಳು ಈ ಮಂತ್ರದಲ್ಲಿ ಸ್ಪಷ್ಟವಾಗಿ ವರ್ಣಿತವಾಗಿದೆ. ಧರ್ಮದ ಆ ನಿರ್ದಿಷ್ಟವಾದ ಮಾರ್ಗ, ಈ ಲೋಕದಲ್ಲಿ ಪಾಲನೆ-ಪೋಷಣೆ ನೀಡುವ ಶಕ್ತಿ ಹೊಂದಿರಬೇಕು. ಎರಡನೆಯದಾಗಿ, ಅದು ಯಾವುದಾದರೊಂದು ಸಂಪ್ರದಾಯಕ್ಕೆ ಅಥವಾ ಜನಾಂಗಕ್ಕೆ ಅನ್ವಯಿಸುವ ಮಾರ್ಗವಾಗಿರದೆ, ಸಂಪೂರ್ಣ ಮಾನವ ಜಾತಿಗೆ ಅನ್ವಯಿಸುವ ಮಾರ್ಗವಾಗಿರಬೇಕು. ಮೂರನೆಯದಾಗಿ, ಅದು ಆಧ್ಯಾತ್ಮಿಕ ವಿಕಾಸವನ್ನೂ ಸಾಧಿಸಿ, ಪರಲೋಕವನ್ನೂ ಕೂಡ ಗಳಿಸಿಕೊಡುವ ಮಾರ್ಗವಾಗಿರಬೇಕು. ಈ ಮೂರರಲ್ಲಿ ಯಾವುದೇ ಒಂದು ಅಂಶಕ್ಕೆ ಲೋಪ ಬಂದರೂ, ಅದು ಪೂರ್ಣವಾದ ಧರ್ಮಮಾರ್ಗವೆನ್ನಿಸಲಾರದು. ಇಂತಹ ಇಹ-ಪರ ಸಾಧಕವಾದ ಮಾನವ ಪಥವನ್ನೇ 'ಧರ್ಮ' ಎಂದು ಕರೆಯುತ್ತಾರೆ. ಯಾವುದೇ ಒಂದು ಮತ-ಸಂಪ್ರದಾಯದಲ್ಲಿಯೂ, ಧರ್ಮದ ಯಾವುದಾದರೊಂದು ಅಂಶ ಅಡಕವಾಗಿರಬಲ್ಲದೇ ಹೊರತು, ಅದರ ಸಂಕುಚಿತ ಪರಿಧಿಯಲ್ಲಿ ಸಂಪೂರ್ಣ ಧರ್ಮದ ವಿಶಾಲ ತತ್ತ್ವ ಹಿಡಿಸಲಾರದು. ಮತಗಳು ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ ಎಂದು ಹಲವಾರು ಇರಬಲ್ಲವು. ಅವುಗಳ ಹಿಂದೆ ವ್ಯವಚ್ಛೇದಕವಾದ ವಿಶೇಷಣಗಳನ್ನೂ ಉಪಯೋಗಿಸಬಹುದು. ಅದರೆ, ಧರ್ಮ ಸಾರ್ವಭೌಮ ಹಾಗೂ ಸಾರ್ವಕಾಲಿಕವಾದ ಏಕಮಾತ್ರ ತತ್ತ್ವವಾಗಿರುವುದರಿಂದ ಅದರ ಹಿಂದೆ ಇಂತಹ ಯಾವ ವಿಶೇಷಣಗಳನ್ನೂ ಉಪಯೋಗಿಸಲು ಸಾಧ್ಯವಿಲ್ಲ. ವಿಶೇಷಣವಿಡಲೇಬೇಕಾದರೆ ಅದು ಜ್ಞಾನಾಶ್ರಿತವಾದುದರಿಂದ 'ವೈದಿಕ ಧರ್ಮ' ಎನ್ನಬಹುದು. ಸಂಪೂರ್ಣ ಮಾನವ ಸಮಾಜಕ್ಕೆ ಅನ್ವಯಿಸಬಹುದಾದ ಕಾರಣ 'ಮಾನವ ಧರ್ಮ' ಎನ್ನಬಹುದು. ಈ ಧರ್ಮ, ಜೀವಾತ್ಮನು ಪತಿತನಾಗದಂತೆ ಅವನನ್ನು ಎತ್ತಿಹಿಡಿಯುವುದರಿಂದ ಅದನ್ನು ಧರುಣ ಎಂದರೆ ಧಾರಕತತ್ತ್ವ ಎಂದು ವೇದಗಳಲ್ಲಿ ಕರೆದಿದೆ. ಉದಾಹರಣೆಗೆ ಋಗ್ವೇದ - ದಿವೋ ಧರ್ಮನ್ ಧರುಣೀ
(ಋಕ್.೫.೧೫.೨.) - ಧರುಣ ಎಂದರೆ ಧಾರಕವಾದ ಜ್ಯೋತಿಯ ಧರ್ಮದಲ್ಲಿ ಎಂದು ಹೇಳಿರುವುದನ್ನು ನಾವು ನೋಡಬಹುದು. ಧರ್ಮದ ಉದ್ದೇಶ್ಯ, ಕರ್ಮ-ಭೋಗ-ಯೋನಿಯಲ್ಲಿರುವ ಮಾನವನ ಆತ್ಮವನ್ನು ಪತನ ಹೊಂದಲು ಅವಕಾಶ ಕೊಡದೆ, ಆಧ್ಯಾತ್ಮಿಕ ದೃಷ್ಟಿಯಿಂದ ಅವನನ್ನು ಎತ್ತಿ ಹಿಡಿದು, ಇಹ-ಪರಗಳೆರಡನ್ನೂ ಸಾಧಿಸುವ ಸಾಮರ್ಥ್ಯವನ್ನು ಅವನಲ್ಲಿ ತುಂಬಿಕೊಡುವುದೇ ಆಗಿದೆ.

Monday, April 25, 2011

ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ....


ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ....

ಯಾವುದನ್ನು ಇಷ್ಟಪಡುವುದಿಲ್ಲವೋ ಅದೇ ಬಂದು ನಮ್ಮನ್ನು ಅಪ್ಪಿಕೊಳ್ಳುವುದು ಪ್ರಕೃತಿಯ ವೈಚಿತ್ರ್ಯಗಳಲ್ಲೊಂದು. ಕಷ್ಟ ಬೇಡಾ ಎಂದು ಹಂಬಲಿಸಿದರೆ ಕಷ್ಟಗಳ ಜಡಿಮಳೆಯೇ ಸುರಿಯುವುದು, ಯಾವುದು ಉತ್ತೀರ್ಣವಾಗಲಿ ಎನ್ನುತ್ತೇವೋ ಅದು ಅನುತ್ತೀರ್ಣಗೊಳ್ಳುವುದು ಇದು ಅನೂಚಾನವಾಗಿ ಎಲ್ಲರೂ ಅನುಭವಿಸುವ ಸತ್ಯ. ಅಂತೆಯೇ ಇವತ್ತಿನ ಈ ಸಂಗತಿ ಸಂತೋಷದಿಂದ ಶ್ರುತಪಡಿಸುತ್ತಿರುವುದಲ್ಲ; ಬದಲಾಗಿ ಅನಿವಾರ್ಯವಾಗಿ ಬರೆಯಬೇಕಾಗಿ ಬಂದ ಪ್ರಸಂಗ. ಹಲವಾರು ದಿನಗಳಿಂದ ಯಾವುದನ್ನು ಬರೆಯುವ ಸಂಭವ ಸದ್ಯಕ್ಕೆ ಬಾರದೇ ಇರಲಿ ಎಂದು ಬಯಸುತ್ತಿದ್ದೆನೋ ಅದು ಬಂದುಬಿಟ್ಟಿದೆ-ಅದೆಂದರೆ ನಮ್ಮೆಲ್ಲರಿಗೆ ಚಿರಪರಿಚಿತರಾದ ಪುಟ್ಟಪರ್ತಿ ಸತ್ಯಸಾಯಿಬಾಬಾ ಅವರ ದೇಹಾಂತ್ಯ.

ಆಂಧ್ರ ಪ್ರದೇಶದ ಅತೀ ಉಷ್ಣ ತಾಪಮಾನವುಳ್ಳ ಜಾಗದಲ್ಲಿ ಬಡಕುಟುಂಬದಲ್ಲಿ ಜನಿಸಿದ ಒಬ್ಬ ಸಾಮಾನ್ಯ ಹುಡುಗ ಜಗತ್ತಿನಾದ್ಯಂತ ಕೋಟ್ಯಂತರ ಜನರ ಆಶಾಕಿರಣವಾಗಿ ಬೆಳಗುವುದು ಸಾಧ್ಯವೆಂದರೆ ಅದೊಂದು ಅತಿಮಾನುಷ ಶಕ್ತಿಯ ಆವಾಸ ಎನ್ನಲು ಅಡ್ಡಿಯಿಲ್ಲ. ಹಿಂದೆ ರಾಮ, ಕೃಷ್ಣ ಹೀಗೆಲ್ಲಾ ದೇವರು ಅವತಾರ ಎತ್ತಿ ಬಂದಂತೇ ಯಾವುದೋ ಋಷಿ ಅಥವಾ ಮುನಿ ತನ್ನ ತಪಸ್ಸನ್ನು ಭುವಿಯ ಜನರ ಸದುಪಯೋಗಕ್ಕೆ ಧಾರೆ ಎರೆಯುವ ಮನಸ್ಸಾಗಿ ಇಂತಹ ರೂಪದಲ್ಲಿ ಜನಿಸಿದ್ದು ನಿಜವೆನಿಸುತ್ತದೆ. ಮಾಧ್ಯಮಗಳವರು ಏನೇ ಹೇಳಿದರೂ ಕೋಟ್ಯಂತರ ಜನರು ಪ್ರತಿಯೊಬ್ಬರೂ "ನಮ್ಮ ಕಷ್ಟ ಕಳೆಯಿತು" " ನಮ್ಮ ಸಮಸ್ಯೆ ಬಗೆಹರಿಯಿತು " ಎಂದರೆ ಸುಮ್ಮನೇ ಹಾಗೆ ಹೇಳಲಿಕ್ಕೆ ಯಾರಿಗೂ ತಲೆಕೆಟ್ಟಿಲ್ಲ; ಅವರಲ್ಲಿ ಅನೇಕರು ಗಣ್ಯಾತಿಗಣ್ಯರೂ ಸಂಪದ್ಭರಿತರೂ ಆಗಿದ್ದವರಿದ್ದು ಘನವಿದ್ವಾಂಸರೂ ಬಹಳ ಜನರಿದ್ದರೆಂಬುದರಲ್ಲಿ ಅನುಮಾನವಿಲ್ಲ.

ಯಾವುದೇ ಶಾಲೆಗೆ ಹೋಗದೇ ಯಾವ ವ್ಯಾಸಂಗವನ್ನೂ ಮಾಡದೇ ಜಗತ್ತಿನ ಹಲವು ಭಾಷೆಗಳನ್ನು ಮಾತನಾಡುವುದು, ಸಾಗರಗರ್ಭದಂತಹ ವೇದಗಳನ್ನು ಓದದೇ ಪ್ರವಚನದಲ್ಲಿ ಅವುಗಳ ಸಾರವನ್ನು ಶ್ಲೋಕಸಹಿತ ಹೇಳುವುದು, ಯಾರಿಗೂ ನೋವಾಗದ ರೀತಿಯಲ್ಲಿ ಹೇಗೆ ಬದುಕಬೇಕೆಂಬುದಕ್ಕೆ ಸರಿಯಾದ ಸೂತ್ರಗಳನ್ನು ರೂಪಿಸುವುದು ಸಾಧ್ಯವಾಗುವುದು ಯಾವುದೋ ಜನಸಾಮಾನ್ಯನಿಗಲ್ಲ; ಅವರಲ್ಲಿರುವ ಆ ಅವ್ಯಕ್ತ ಶಕ್ತಿ ತನ್ನನ್ನು ತೋರ್ಪಡಿಸಿಕೊಂಡು ಜಗತ್ತಿನಲ್ಲಿ ಯಾರ್ಯಾರಿಗೆ ತೊಂದರೆ ಇದೆಯೋ ಅವರೆಲ್ಲಾ ಬಂದು ಬಗೆಹರಿಸಿಕೊಳ್ಳಲಿ ಎಂಬುದನ್ನು ಸೂಚಿಸಲಿಕ್ಕಾಗಿ ಬಾಬಾ ಪವಾಡ ಮಾಡಬೇಕಾಗಿ ಬಂತು. ಪವಾಡದ ಪ್ರತ್ಯಕ್ಷದರ್ಶಿಗಳು ಹಲವರು ಹೇಳುವಂತೇ ಎಲ್ಲಾ ಪವಾಡಗಳೂ ಅನಿರೀಕ್ಷಿತವಾಗಿ ಆ ಕ್ಷಣಕ್ಕೆ ಅಲ್ಲಲ್ಲೇ ಘಟಿಸುವಂಥವು ಮತ್ತು ಹೆಚ್ಚಾಗಿ ಬಾಬಾ ಕೈ ತಿರುವಿದಾಗ ನಡೆಯುತ್ತಿದ್ದ ಪವಾಡಗಳು.

ಹಿಂದೆ ನಾನು ಅನೇಕಾವರ್ತಿ ಹೇಳಿದಂತೇ ಈ ಲೋಕದಲ್ಲಿ ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದಮಯವೆಂಬ ೫ ಕೋಶಗಳಿವೆ, ಆದರೆ ಮಾನವನ ಜ್ಞಾನ ಪ್ರಯತ್ನದಿಂದ ವಿಜ್ಞಾನಮಯ ಕೋಶದವರೆಗೂ ಹೋಗುತ್ತದೆ. ಶ್ರೇಷ್ಠ ಆಧ್ಯಾತ್ಮಿಕ ಸಾಧಕರಿಗೆ ಮಾತ್ರ ಆನಂದಮಯ ಕೋಶದ ಅರಿವುಂಟಾಗುತ್ತದೆ. ಅದನ್ನರಿತ ನಿಜವಾದ ಜ್ಞಾನಿಗೆ ಪವಾಡನಡೆಸುವುದು ಬಹಳ ಸುಲಭ. ಅಂಥವರಿಗೆ ಸಂಕಲ್ಪಸಿದ್ಧಿ ಕೂಡ ಪ್ರಾಪ್ತವಾಗುತ್ತದೆ. [ಅಂದರೆ ಕೇವಲ ಅವರು ಸಂಕಲ್ಪಿಸಿದರೂ ಸಾಕು ಹೇಗೋ ಆ ಕೆಲಸ ಸಲೀಸಾಗಿ ನಡೆದುಹೋಗುತ್ತದೆ] ಆದರೆ ಈ ಪವಾಡಗಳು ವಿಜ್ಞಾನಕ್ಕೆ ಧಕ್ಕುವುದಿಲ್ಲ. ವಿಜ್ಞಾನ ಅವುಗಳಿಗೆ ಕಾರಣ ಹುಡುಕಿದರೂ ಸಿಗುವುದಿಲ್ಲ ಯಾಕೆಂದರೆ ಅವು ವಿಜ್ಞಾನಮಯಕೋಶದ ಪರಿಮಿತಿಯನ್ನೂ ಮೀರಿದ ಜಾಗದಲ್ಲಿ ಹುಟ್ಟಿದಂಥವು! ಇದನ್ನೇ ಸೂಕ್ಷ್ಮವಾಗಿ ಹೇಳುತ್ತಾ ಬಾಬಾ ಆಧ್ಯಾತ್ಮವನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಬೇಡಿ ಎಂದರು, ಹಾಗೊಮ್ಮೆ ಅದನ್ನು ನಡೆಸಿದರೂ ಯಾವುದೋ ಅವಘಡಗಳು ಸಂಭವಿಸಬಹುದಿತ್ತೇನೋ. ಈ ಜಗತ್ತಿನಲ್ಲಿ ಶೂನ್ಯ ಎಂಬುದೇ ಇಲ್ಲಾ ಎಂದು ಅವರು ಹೇಳಿದರು, ಅದರರ್ಥ ಬಾಬಾ ಕೈತಿರುವಿದಾಗ ಇನ್ನಾವುದೋ ಅಗೋಚರ ಅತಿಮಾನುಷ ಹಸ್ತ ಅವರು ಸಂಕಲ್ಪಿಸಿದ ವಸ್ತುವನ್ನು ಅವರ ಕೈಗೆ ನೀಡುತ್ತಿತ್ತು! ಲೌಕಿಕ ಬುದ್ಧಿವಂತಿಕೆ ಜಾಸ್ತಿಯಾದ ನಾವು ಎಲ್ಲವನ್ನೂ ಕೇವಲ ವೈಜ್ಞಾನಿಕ ಪರೀಕ್ಷೆಗೇ ಒಳಪಡಿಸಿದೆವು ಆದರೆ ಆತ್ಮ ಎಂದರೇನು? ಅದರ ಅಸ್ಥಿತ್ವ ಯಾವ ರೂಪದಲ್ಲಿರುತ್ತದೆ? ಅದು ಶರೀರದಲ್ಲಿ ಯಾವ ಜಾಗದಲ್ಲಿರುತ್ತದೆ? ಯಾವಾಗ ಎಲ್ಲಿಂದ ಹೇಗೆ ಬರುತ್ತದೆ ಮತ್ತು ಯಾವಾಗ ಎಲ್ಲಿಗೆ ಹೇಗೆ ತೆರಳುತ್ತದೆ ? -ಈ ಪ್ರಶ್ನೆಗಳಿಗೆ ನಮ್ಮ ಅತ್ಯಾಧುನಿಕ ವಿಜ್ಞಾನ ಇವತ್ತಿಗೂ ಗಪ್ ಚುಪ್ ! ಸೌರಮಂಡಲದ ಆಕಾಶಕಾಯಗಳನ್ನು ಗುರುತ್ವಾಕರ್ಷಣ ಶಕ್ತಿ ನಿರ್ಮಿಸಿ ಹಾಗೆ ನಿಯಮಿತಗೊಳಿಸಿದವರು ಯಾರು ? --ಈಗಲೂ ನಮ್ಮ ವಿಜ್ಞಾನ ಊಹೂಂ ! ಅಂದಮೇಲೆ ವಿಜ್ಞಾನವೇ ಎಲ್ಲವೂ ಅಲ್ಲ ಅದರ ಹೊರತಾಗಿ ಇನ್ನೇನೋ ಇದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕಾದ ನ್ಯಾಯ ಇದಾಗಿದೆ.

ಒಂದೆರಡು ಸಣ್ಣ ಪವಾಡಗಳ ಉದಾಹರಣೆಯನ್ನು ಬಳಸಿಕೊಳ್ಳುತ್ತೇನೆ:

೧. ಕರ್ನಾಟಕ ವಿಧಾನಸಭೆಯ ಮಾಜಿಸ್ಪೀಕರ್ ಆದಂತಹ ರಮೇಶ್‍ಕುಮಾರ್ ಅವರು ತಾನು ಸ್ವತಃ ನೋಡಿದ್ದನ್ನು ಹೇಳಿದ್ದಾರೆ: ಒಮ್ಮೆ ಪುಟ್ಟಪರ್ತಿಗೆ ಅವರು ಹೋಗಿದ್ದಾಗ ನಡೆದ ದರ್ಶನದ ಬಳಿಕ ಬಾಬಾ ಕೆಲವರನ್ನು ಆಪ್ತ ಸಂದರ್ಶನಕ್ಕೆ ಒಳಗೆ ಕರೆದರಂತೆ. ಅವರಲ್ಲಿ ರಮೇಶ್ ಕೂಡಾ ಒಬ್ಬರು. ಅವರ ಜೊತೆಗೆ ಸಾಲಿನಲ್ಲಿ ಅಮೇರಿಕದ ಪಾಮೋಲಿವ್ ಕಂಪನಿಯ ಯಜಮಾನರು ಮತ್ತವರ ಮಡದಿಕೂಡ ಇದ್ದರಂತೆ. ಆ ಹೆಂಗಸಿನ ಹತ್ತಿರ ನಿನಗೇನು ಬೇಕು ಎಂದು ಬಾಬಾ ಕೇಳಿದಾಗ " ಐ ವಾಂಟ್ ಪೀಸ್ " [ನನಗೆ ಶಾಂತಿ ಬೇಕು] ಎನ್ನುತ್ತಾ ಚೆಕ್‍ಬುಕ್ ತೆಗೆದು ೫೦೦ಕೋಟಿ ರೂಪಾಯಿಗಳ ಚೆಕ್ ಒಂದನ್ನು ಬಾಬಾಗೆ ಬರೆದುಕೊಟ್ಟಳಂತೆ! ಬಾಬಾ ಮೊದಲು "ಗುಡ್" ಎಂದರಂತೆ. ಆಮೇಲೆ ಆ ಚೆಕ್ಕನ್ನು ಹರಿದು ಚಿಕ್ಕ ಚಿಕ್ಕ ತುಂಡುಮಾಡಿ ಕೈಲಿ ಭಸ್ಮವಾಗಿ ಪರಿವರ್ತಿಸಿ ಅದನ್ನೇ ಅವಳಕೈಗೆ ಹಾಕಿ " ಟೇಕ್ ಪೀಸ್, ಡೋಂಟ್ ಎವರ್ ಡಿಸ್ಪ್ಯೂಟ್ ವಿತ್ ಯುವರ್ ಹಸ್ಬಂಡ್, ಲರ್ನ್ ಹೌ ಟು ಲಿವ್ ವಿದೌಟ್ ಹರ್ಟಿಂಗ್ ಎನಿಬಡಿ [ ಈ ಭಸ್ಮ ತಗೋ, ಗಂಡನ ಜೊತೆ ಜಗಳವಾಡುವುದನ್ನು ಬಿಟ್ಟುಬಿಡು ಯಾರಿಗೂ ನೋವುಂಟುಮಾಡದ ರೀತಿಯಲ್ಲಿ ಹೇಗೆ ಬದುಕಬೇಕು ಎಂಬುದನ್ನು ಕಲಿ ] " ಎಂದುಬಿಟ್ಟರಂತೆ! ಹಣದ ಆಸೆ ಇದ್ದರೆ ಯಾರಾದರೂ ತಮಗೆ ಕೊಟ್ಟ ೫೦೦ ಕೋಟಿ ರೂಪಾಯಿಗಳ ಚೆಕ್ಕನ್ನು ಭಸ್ಮಮಾಡುತ್ತಿದ್ದರೇ?

೨. ಬೆಂಗಳೂರಿನಲ್ಲಿ ಸಮಾರಂಭವೊಂದರಲ್ಲಿ ವೇದಿಕೆ ಹಂಚಿಕೊಂಡವರಲ್ಲಿ ಆದಿಚುಂಚನಗಿರಿ ಮಠಾಧೀಶರು, ದೇವೇಗೌಡರು ಮತ್ತು ಸಾಯಿಬಾಬಾ ಇದ್ದರಂತೆ. [ಇದು ಆದಿಚುಂಚನಗಿರಿ ಮಠಾಧೀಶರೇ ಸ್ವತಃ ಅನುಭವದಿಂದ ಹೇಳಿದ್ದು!] ಬಾಬಾರ ಕೈಲಿರುವ ಕರ್ಚೀಫ್ ಕೆಳಗೆಬಿತ್ತು. ಆಗ ಪಕ್ಕದಲ್ಲಿ ಕುಳಿತಿದ್ದ ದೇವೇಗೌಡರು ಅದನ್ನು ಎತ್ತುಕೊಡಲು ಮುಂದಾದಾಗ ಆಗಿನ್ನೂ ಕರ್ನಾಟಕದ ಸಿ.ಎಂ. ಆಗಿದ್ದ ಗೌಡರನ್ನು " ಇರ್ಲಿ ಬಿಡಿ ಪ್ರೈಮ್ ಮಿನಿಷ್ಟ್ರೇ , ಬಿಡಿ ಪ್ರೈಮ್ ಮಿನಿಷ್ಟ್ರೇ, ಬಿಡಿ ಪ್ರೈಮ್ ಮಿನಿಷ್ಟ್ರೇ " ಎಂದು ಬಾಬಾ ಹೇಳಿದರಂತೆ. ಎಲ್ಲರೂ ಅದೇನೋ ಬಾಬಾ ನೆನಪಿರದೇ ತಪ್ಪುಚ್ಚರಿಸುತ್ತಿದ್ದಾರೆ ಎಂದುಕೊಂಡರು. ಆದರೆ ಅದಾದ ೧೫ ದಿನಗಳಲ್ಲೇ ಹರದನ ಹಳ್ಳಿಯ ಹೈದ ಭಾರತದ ಪ್ರಧಾನಿಪಟ್ಟವನ್ನು ಅಲಂಕರಿಸಿದ್ದು ಈಗ ಇತಿಹಾಸ!

ಇಂತಹ ಪವಾಡಗಳಿಂದ ಬಾಬಾಗೆ ಯಾವ ಲಾಭವೂ ಇರಲಿಲ್ಲ. " ನೀವು ಯಾಕೆ ಉಂಗುರ, ನೆಕ್ಲೇಸ್ ಎಲ್ಲಾ ಸೃಷ್ಟಿಸಿಕೊಡುತ್ತೀರಿ ? " ಎಂದು ಯಾರೋ ಕೇಳಿದಾಗ ಬಾಬಾ ಹೇಳಿದ್ದು ಹೀಗೆ- " ನೀವು ಅತ್ಯಂತ ಪ್ರೀತಿಪಾತ್ರರಿಗೆ ಎಷ್ಟೋ ಸರ್ತಿ ಪ್ರೀತಿಯಿಂದ ಗಿಫ್ಟ್ ಕೊಡುವುದಿಲ್ಲವೇ ? ತಂದೆ ಮಕ್ಕಳಿಗೆ ಏನಾದರೂ ತಂದುಕೊಡುವುದಿಲ್ಲವೇ ? ಅದೇ ರೀತಿಯಲ್ಲಿ ಪ್ರೀತಿಯಿಂದ ಅವರ ಖುಷಿಗಾಗಿ ಹಾಗೆ ಕೊಡುತ್ತೇನೆ " ! ಇದನ್ನು ಪುಷ್ಟೀಕರಿಸಲು ನಾವು ಇತಿಹಾಸ ಕೆದಕಿದರೆ ಬಾಬಾ ಪ್ರಚಾರಪ್ರಿಯರೂ ಆಗಿರಲಿಲ್ಲ! ಅವರು ವಿದೇಶಕ್ಕೆ ಹೋಗಿದ್ದು ಒಮ್ಮೆಮಾತ್ರ-ಉಗಾಂಡಾಕ್ಕೆ. ಅಲ್ಲಿನ ಜನರಿಗೆ ಅಲ್ಲಿಗೆ ಹೋದಾಗ ಹೇಳಿದರಂತೆ " ನಾನು ನಿಮ್ಮನ್ನು ನನ್ನತ್ತ ಆಕರ್ಷಿಸಲು ಬಂದಿಲ್ಲ, ನಿಮ್ಮ ನಿರ್ವ್ಯಾಜ ಪ್ರೀತಿಕಂಡು ನಿಮ್ಮನ್ನೆಲ್ಲಾ ನೋಡಿ ಸಂತೋಷ ಹಂಚಿಕೊಳ್ಳುವ ಮನಸ್ಸಾಗಿ ಬಂದಿದ್ದೇನೆ. " ಅದೇ ಮೊದಲು ಮತ್ತು ಅದೇ ಕೊನೆ-ಮತ್ತೆ ಬಾಬಾ ವಿದೇಶಗಳಿಗೆ ಹೋಗಲೇ ಇಲ್ಲ. ಜಗತ್ತಿನ ಹಲವಾರು ದೇಶಗಳ ಜನರೇ ಅವರನ್ನು ಹುಡುಕುತ್ತಾ ಅವರಿದ್ದೆಡೆಗೇ ಬಂದರು; ಸಹಾಯ ಪಡೆದರು.

"ಲವ್ ಆಲ್ ಸರ್ವ್ ಆಲ್" ಇದು ಅವರ ಬೋಧನೆ. ಅದನ್ನು ಆಚರಿಸಿಯೂ ತೋರಿಸಿದರು. ಸರಕಾರಗಳು ಮಾಡಲಾಗದ ಕೆಲಸಗಳು ಅವರಿಂದ ನಡೆದವು. ಹಳ್ಳಿಗಳಲ್ಲಿ ಬಡಜನರಿಗೆ ಗ್ರಾಮಸೇವೆ ನಡೆಯಿತು: ಜೀವನಾವಶ್ಯಕ ವಸ್ತುಗಳು, ಬಟ್ಟೆಗಳು ಮುಂತಾದವು ನೀಡಲ್ಪಟ್ಟವು. ನೀರಿಲ್ಲದ ಜಿಲ್ಲೆಗಳ ಹಾಹಾಕಾರ ತಣಿಸಲು ನೀರು ಸರಬರಾಜು ಮಾಡುವ ಯೋಜನೆಗಳು ಶಾಶ್ವತವಾಗಿ ಕಾರ್ಯಗತವಾದವು. ದಿಕ್ಕಿಲ್ಲದ ಬಡಜನರಿಗೆ ಅವರ ದೈಹಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ನಿಶ್ಶುಲ್ಕ ಆಸ್ಪತ್ರೆಗಳು ಸ್ಥಾಪಿತವಾದವು. ಅನಕ್ಷರಸ್ಥರಿಗೆ ಶಾಲೆಗಳು-ಶಿಕ್ಷಣ ಸಂಸ್ಥೆಗಳು ರೂಪತಾಳಿದವು. ಇವೆಲ್ಲಾ ನಡೆಯುತ್ತಲೇ ಇವೆ. ಅವರು ಯಾವ ರಾಜಕೀಯ ಪಕ್ಷವನ್ನಾಗಲೀ ಯಾವುದೇ ಒಂದು ಮತವನ್ನಾಗಲೀ ಆತುಕೊಂಡವರಲ್ಲ. ಸರ್ವಧರ್ಮಗಳ ಸಕಲದೇಶಗಳ ಮಾನವರನ್ನು ಏಕರೂಪದಿಂದ ನೋಡಿದರು ಬಾಬಾ. ಹೆಣ್ಣುಮಕ್ಕಳಿಗೂ ವೇದ ಬೋಧಿಸಿ ಉಪನಯನ ಮಾಡಿಸಿದ ಔದಾರ್ಯ ಮತ್ತು ಪರಿಜ್ಞಾನ ಅವರದ್ದು. " ದೇಹಿ " ಎಂದು ಬಂದರೆ ಇಲ್ಲಾ ಎನ್ನಬಾರದು ಎಂಬ ಭಾರತೀಯ ಆರ್ಷೇಯ ಪದ್ಧತಿಯನ್ನು ಸತತವಾಗಿ ಅನುಷ್ಠಾನದಲ್ಲಿಟ್ಟ ಒಬ್ಬರೇ ಸಂತ ಬಾಬಾ ಎಂದರೆ ತಪ್ಪಾಗಲಿಕ್ಕಿಲ್ಲ.

ಮಾಧ್ಯಮಗಳು ಆಗಾಗ ಹಲವು ವಿಷಯಗಳನ್ನು ಮನಸೋ ಇಚ್ಛೆ ವಿಕೃತವಾಗಿ ಬರೆದವು. ಬಾಬಾ ಹಾಗೆ ಹೀಗೆ ಎಂದೆಲ್ಲಾ ನೂರೆಂಟು ಇಲ್ಲದ್ದನ್ನು ಹೇಳಿದವು. ಆದರೂ ನಿಜಕ್ಕೂ ಹೇಳುತ್ತೇನೆ ಕೇಳಿ ನನ್ನಂತರಂಗ ಅವುಗಳನ್ನು ಪ್ರಶ್ನಿಸುತ್ತಲೇ ಇತ್ತು. ’ಬಾಬಾ ದೈವಾಂಶ ಸಂಭೂತರು’ ಎನ್ನುವುದನ್ನು ಮತ್ತೆ ಮತ್ತೆ ಹೇಳುತ್ತಿತ್ತು. ಆದರೂ ಮರುಳು ಮನಸ್ಸು ಏನುಮಾಡಿತು ಬಲ್ಲಿರೋ ? ವ್ಯಾವಹಾರಿಕವಾಗಿ ಪುಟ್ಟಪರ್ತಿಯ ಯಾವುದೋ ವಸತಿ ನಿಲಯಕ್ಕೆ ನಾವೆಲ್ಲಾ ಕೆಲವರು ಹೋಗಿದ್ದರೂ ’ಪ್ರಶಾಂತಿ ನಿಲಯ’ದ ಗೇಟನ್ನು ನಾನು ಕಂಡಿದ್ದರೂ ಅದರೊಳಗೆ ಹೋಗಲು ನನ್ನ ಮರುಳು ಮನಸ್ಸು ಆಗ ಬಿಡಲೇ ಇಲ್ಲ. ಬಾಬಾ ಒಂದೊಮ್ಮೆ ಹೇಳಿದ್ದರಂತೆ " ನನ್ನನ್ನು ನೇರವಾಗಿ ದರ್ಶಿಸಲೂ ಪಡೆದುಬರಬೇಕು " ಎಂಬುದಾಗಿ. ಹೀಗಾಗಿ ನಾನು ಪಡೆದಿರದ ಆ ಭಾಗ್ಯ ನನಗೆ ಆ ಅವಕಾಶ ನೀಡಲಿಲ್ಲ-ಅದಕ್ಕಾಗಿ ಪಶ್ಚಾತ್ತಾಪವಾಗುತ್ತಿದೆ. ನೋಡಿ ಸಮಯವೇ ಹೀಗೆ: ಯಾರಿಗೂ ಕಾಯುವುದಿಲ್ಲ. ಬಾಬಾ ಜನಿಸಿದ್ದರು, ಅವರ ಕರ್ತವ್ಯ ಮುಗಿಯಿತು. ಈಗ ಮರಳಿಯೇ ಬಿಟ್ಟರು. ಮತ್ತೆ ಬಾಬಾ ಬೇರೇ ದೇಹದಲ್ಲಿ ಜನಿಸಬಹುದು; ಅದು ಬೇರೇ ಪ್ರಶ್ನೆ. ಆದರೆ ಇವತ್ತಿನವರೆಗೆ ಈ ದೇಹದಿಂದಿದ್ದ ಬಾಬಾ ಈಗ ಈ ಶರೀರವನ್ನು ತ್ಯಜಿಸಿಬಿಟ್ಟಿದ್ದಾರೆ. ಈಗ ಜೀವಂತ ಬಾಬಾ ಮತ್ತೆ ನೋಡಲು ಸಿಗುವರೇ ? ಸಮಯ ಮೀರಿಹೋಯಿತು. ಅದಕ್ಕೇ ಯಾವುದಕ್ಕೂ ವಿವೇಚಿಸಿ ನಡೆಯಬೇಕು ಎನ್ನುತ್ತಾರೆ.

ಇನ್ನು ಅಷ್ಟೆಲ್ಲಾ ಪವಾಡ ನಡೆಸುವ ಕೋಟ್ಯಂತರ ಭಕ್ತರ ಸಂಕಷ್ಟ ಪರಿಹರಿಸುವ ಬಾಬಾ ತಾನೇ ತಿಂಗಳಕಾಲ ಆಸ್ಪತ್ರೆಯಲ್ಲಿ ಸಾದಾ ಮನುಷ್ಯನೊಬ್ಬ ಮಲಗಿದಂತೇ ಆ ತೊಂದರೆ ಈ ತೊಂದರೆ ಎನ್ನುತ್ತಾ ಮಲಗಿದ್ದು ಯಾಕೆ-ಅವರಿಗೆ ಅವರೇ ಪರಿಹಾರ ಮಾಡಿಕೊಳ್ಳಲಾಗುತ್ತಿರಲಿಲ್ಲವೇ ? --ಇದು ಹಲವರ ಪ್ರಶ್ನೆ. ಮನುಷ್ಯರೂಪದಲ್ಲಿ ಜನಿಸಿದ ಯಾವುದೇ ಆತ್ಮಕ್ಕೆ ಐಹಿಕ ಬಾಧೆಗಳು ಸಹಜ. ಅನೇಕಾವರ್ತಿ ಇಂಥಾ ಪುಣ್ಯಾತ್ಮರು ತಮ್ಮ ಶಿಷ್ಯಗಣದ ನೋವನ್ನು ತಾವು ಪಡೆದು ಅನುಭವಿಸಿ ಅವರಿಗೆಲ್ಲಾ ನಲಿವನ್ನೂ ಸುಖವನ್ನೂ ನೀಡುತ್ತಾರೆ. ತೊಂದರೆಗಳು ರಾಮನನ್ನಾಗಲೀ ಕೃಷ್ಣನನ್ನಾಗಲೀ, ಏಸು-ಬುದ್ಧ-ಮಹಾವೀರ-ಪೈಗಂಬರ ಇಂತಹ ಯಾರನ್ನೇ ಆಗಲಿ ಬಿಡಲಿಲ್ಲ. ಹಲವು ಋಷಿಗಳೂ ಸನ್ಯಾಸಿಗಳೂ ಅನೇಕ ಸಂಕಟಗಳನ್ನು ಅನುಭವಿಸಿದ್ದಾರೆ. ಅದರಂತೇ ಬಾಬಾ ದೇಹ ವಿಸರ್ಜಿಸಲು ಕಾರಣಬೇಕಿತ್ತು. ಅವರು ಯಾವುದೋ ಒಂದು ತಿಥಿ-ಮಿತಿಗಾಗಿ ಕಾದಿದ್ದರು. ಇಂದು ಆ ಘಳಿಗೆ ಕೂಡಿಬಂತು; ಹೊರಟುಬಿಟ್ಟಿದ್ದಾರೆ. ಸಾಮಾನ್ಯವಾಗಿ ಮಹಾತ್ಮರು ದೇಹವನ್ನು ವಿಸರ್ಜಿಸುವಾಗ ಹೇಳುತ್ತಾ ಇರುವುದಿಲ್ಲ. ಹೇಳದೇ ಇದ್ದರೇ ಹಲವು ಭಕ್ತರು ನೋವನ್ನು ಅನುಭವಿಸುತ್ತಾರೆ-ಇನ್ನು ಹೇಳಿಬಿಟ್ಟರೆ ಎಷ್ಟೊಂದು ಜನ ಸುತ್ತ ನೆರೆದು ದೇಹವಿಸರ್ಜನೆಗೆ ತಡೆಯಾಗಬಹುದೆಂಬ ಕಾರಣದಿಂದ ಕರ್ತವ್ಯ ಮುಗಿದ ನಂತರ ಸುಮ್ಮನೆ ತೆರಳಿಬಿಡುತ್ತಾರೆ.

ಇವತ್ತಿನ ಜಗಕ್ಕೆ ಬೇಕಾದ ಮಿಕ್ಕಿದ್ದೆಲ್ಲವನ್ನೂ ನಾವು ಪಡೆದಿದ್ದೇವೆ; ಪಡೆಯುವವರಿದ್ದೇವೆ. ಆದರೆ ಎಲ್ಲರೂ ಒಂದೇ ಎಂಬ ಏಕೋಭಾವಮಾತ್ರ ಇಲ್ಲ. ಜಗತ್ತು ಸ್ಥಿರವಲ್ಲ, ನಾವು ಶಾಶ್ವತವಲ್ಲ, ಈ ಜಗತ್ತಿನಲ್ಲಿ ನಾವು ಯಾವಲೆಕ್ಕವೂ ಅಲ್ಲ, ಜಗತ್ತನ್ನಾಳುವ ಶಕ್ತಿಯನ್ನು ಆರಾಧಿಸುವ ಮೊದಲ ಹೆಜ್ಜೆಯಾಗಿ ಎಲ್ಲರನ್ನೂ ಪ್ರೀತಿಸಲು ಕಲಿಯಬೇಕು, ಎಲ್ಲರಿಗೂ ಹಂಚಿ ಬದುಕಲು ಕಲಿಯಬೇಕು-ಎಂಬ ಉದಾತ್ತ ತತ್ವಗಳನ್ನು ಸರಳ ರೀತಿಯಲ್ಲಿ ಅನುಸರಿಸಿ ಮಾನವ ಸೇವೆಯೇ ಮಾಧವ ಸೇವೆ ಎಂಬುದನ್ನು ಎತ್ತಿಹಿಡಿದ ಬಾಬಾ ತಾನೊಬ್ಬ ಶ್ರೇಷ್ಠಜೀವಿ ಎಂಬುದನ್ನು ತಮ್ಮ ಬದುಕಿನ ಆದರ್ಶದಿಂದ ತೋರಿಸಿದ್ದಾರೆ. ಪುಟ್ಟಪರ್ತಿಯಲ್ಲಿ ಇರುವ ಶಿಸ್ತು, ಸಂಯಮ, ನೀತಿ-ನಿಯಮಗಳನ್ನು ಅವಲೋಕಿಸಿದರೆ ಸರಕಾರ ನಡೆಸುವ ರಾಜಕಾರಣಿಗಳು ಕಲಿಯಬಹುದಾದ ಪಾಠಗಳು ಹಲವು.

ನಾನು ಬಾಬಾ ಭಕ್ತನಾಗಿರಲಿಲ್ಲ. ಆದರೆ ಅವರ ಚರ್ಯೆಗಳನ್ನು ಗಮನಿಸುತ್ತಾ ಬಂದ ನನ್ನಂತರಂಗ ಯಾಕೋ ಅವರನ್ನು ನೆನೆಯುವಂತೇ ಮಾಡುತ್ತಿತ್ತು. ಇನ್ನು ಪುಟ್ಟಪರ್ತಿಯಲ್ಲಿ ಅವರ ಸಮಾಧಿಯೇ ಹೊರತು ಜೀವಂತವಾಗಿ ಅವರನ್ನು ನೋಡುವುದು ಸಾಧ್ಯವಿಲ್ಲವಲ್ಲ. ಈ ಘಳಿಗೆಯಲ್ಲಾದರೂ ಮಲಿನವಾದ ಮನಸ್ಸಿನ ಕೊಳೆಯನ್ನು ನಾಶಮಾಡುವ ಸಲುವಾಗಿ ಹೊರಟುನಿಂತ ಬಾಬಾರವರಿಗೆ ಜಗದ ಎಲ್ಲರಪರವಾಗಿ ಈ ಕೆಳಗಿನ ಶ್ಲೋಕದೊಂದಿಗೆ ಸಾಷ್ಟಾಂಗ ವಂದನೆಗಳು,ಅಭಿನಂದನೆಗಳು-

ಶರೀರಂ ಸುರೂಪಂ ಯಥಾ ವಾ ಕಲತ್ರಂ
ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಮ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಂ ||

Saturday, April 23, 2011

ವೇದೋಕ್ತ ಜೀವನ ಪಥ - ಪರಮಾಣು ಸಂಘಾತವಾದ ಪ್ರಕೃತಿ ಸ್ವರೂಪ - ೩

ಪ್ರಕೃತಿಯ ವರ್ಣನೆಯನ್ನು ಅಥರ್ವವೇದ ಹೀಗೆ ಮಾಡುತ್ತದೆ:-


ಏಷಾ ಸನತ್ನೀ ಸನಮೇವ ಜಾತೈಷಾ ಪುರಾಣೀ ಪರಿ ಸರ್ವಂ ಬಭೂವ |
ಮಹೀ ದೇವ್ಯುಷಸೋ ವಿಭಾತೀ ಸೈಕೇನೈಕೇನ ಮಿಷತಾ ವಿ ಚಷ್ಟೇ ||
(ಅಥರ್ವ. ೧೦.೮.೩೦)


     [ಏಷಾ] ಈ ಪ್ರಕೃತಿಯು, [ಸನತ್ನೀ] ಸನಾತನವಾದುದು. [ಸನಮೇವ] ಅನಾದಿ ಕಲದಿಂದಲೇ, [ಜಾತಾ] ಪ್ರಸಿದ್ಧವಾದುದು. [ಏಷಾ ಪುರಾಣೀ] ಈ ಅನಾದಿ ಪ್ರಕೃತಿಯು, [ಸರ್ವಂ ಪರಿ ಬಭೂವ] ಎಲ್ಲ ಸ್ಪಷ್ಟ ಪದಾರ್ಥಗಳಿಗಿಂತ ಮೊದಲಿದ್ದಿತು. [ಉಷಸಃ] ಸಂಕಲ್ಪಮಯನಾದ ಪ್ರಭುವಿನ ಇಚ್ಛೆಯಂತೆ, [ವಿಭಾತೀ ಮಹೀ ದೇವೀ] ವಿವಿಧ ರೂಪದಲ್ಲಿ ಪ್ರಕಾಶಕ್ಕೆ ಬರುವ, ಮಹತ್ತತ್ವವಾದ ಈ ಸರ್ವದಾತ್ರೀ ಪ್ರಕೃತಿಯು, [ಸಾ] ತಾನಾಗಿ, [ಏಕೇನ ಏಕೇನ ಮಿಷತಾ] ಕಣ್ಣು ರೆಪ್ಪೆ ಹೊಡೆಯುವ ಪ್ರತಿಯೊಂದು ಪ್ರಾಣಿಯ ಮೂಲಕವೂ, [ವಿಚಷ್ಟೇ] ಕಂಡು ಬರುತ್ತದೆ, ಕೆಲಸ ಮಾಡುತ್ತಿದೆ, ಮಾತನಾಡುತ್ತಿದೆ.

     ಈ ಮಂತ್ರ ಪ್ರಕೃತಿಯ ಅನಾದಿತ್ವವನ್ನು ಎತ್ತಿ ಹಿಡಿಯುತ್ತಿದೆ. ಸ್ವತಃ ಜಡವಾದ ಕಾರಣ, ತಾನೇ ಏನನ್ನೂ ಮಾಡಲಾರದ, ಪ್ರಭುಸಂಕಲ್ಪದಿಮದ ಜಗದ್ರೂಪ ತಾಳಿ, ಬೆಳಕಿಗೆ ಬರುವಂತಹುದು. ಅದು ತತ್ತ್ವವನ್ನು ನೋಡಬಲ್ಲ ವೈಜ್ಞಾನಿಕರೊಂದಿಗೆ - ಮೂಕಭಾಷೆಯಲ್ಲೇ ಇರಲೊಲ್ಲದೇಕೆ - ಮಾತನಾಡುತ್ತದೆ, ಇಣಿಕಿ ನೋಡುತ್ತದೆ.


      ವೇದಗಳಲ್ಲಿ ವಾದಗಳನ್ನು - ಅದ್ವೈತ, ದ್ವೈತ, ವಿಶಿಷ್ಟಾದ್ವೈತ, ಶೂನ್ಯವಾದ, ಸಂದೇಹವಾದ, ಅಜ್ಞೇಯವಾದ ಮೊದಲಾದುವುಗಳನ್ನು - ಕಾಣಲು ಯತ್ನಿಸುವುದು ಕೇವಲ ಬೌದ್ಧಿಕ ವ್ಯಾಯಾಮ ಮಾತ್ರ. ವೇದಗಳಲ್ಲಿರುವುದು ಸತ್ಯದ ಪ್ರಕಾಶನ ಮಾತ್ರ. ಯಾವ ವಾದವೂ ಇಲ್ಲ. ಪರಮಾತ್ಮ, ಜೀವಾತ್ಮ, ಪ್ರಕೃತಿ - ಈ ಮೂರೂ ಅನಾದಿ, ಅನಂತ. ಅದೇ ಕಾರಣದಿಂದ ನಿತ್ಯ, ಶಾಶ್ವತ. ಪರಮಾತ್ಮ ಸದಾ ಏಕರೂಪ, ಜೀವಾತ್ಮ ಸದೇಹ-ವಿದೇಹ ಸ್ಥಿತಿಗಳನ್ನುಳ್ಳವನು. ಪ್ರಕೃತಿ, ಕಾರಣ-ಕಾರ್ಯರೂಪಗಳಲ್ಲಿ ಪರಿಣಾಮ ಹೊಂದುವ ಜಡತತ್ತ್ವ. ಪರಮಾತ್ಮ ಸಚ್ಚಿದಾನಂದಸ್ವರೂಪ, ಜೀವಾತ್ಮ ಸಚ್ಚಿತ್ಸ್ವರೂಪ, ಪ್ರಕೃತಿ ಸತ್ಸ್ವರೂಪಿಣಿ. ಇದೊಂದೇ ಸಾರಿಯಲ್ಲ ಸೃಷ್ಟಿಯಾಗಿರುವುದು. ಅನಾದಿ ಕಾಲದಿಂದಲೂ ಸೃಷ್ಟಿ-ಸ್ಥಿತಿ-ಪ್ರಳಯಗಳು ಆಗುತ್ತಾ ಬಂದಿವೆ.


ಸೂರ್ಯಾಚಂದ್ರಮಸೌ ಧಾತಾ ಯಥಾಪೂರ್ವಮಕಲ್ಪಯತ್ |
ದಿವಂ ಚ ಪೃಥಿವೀಂ ಚಾಂತರಿಕ್ಷಮಥೋ ಸ್ವಃ ||
(ಋಕ್. ೧೦.೧೯೦.೩)


     [ಅಸೌ ಧಾತಾ] ಈ ಸರ್ವಾಧಾರನಾದ ಪರಮಾತ್ಮನು, [ಯಥಾ ಪೂರ್ವಂ] ಮೊದಲಿನಂತೆಯೇ, [ಸೂರ್ಯಾ ಚಂದ್ರಮಸೌ] ಸೂರ್ಯ-ಚಂದ್ರರನ್ನೂ, [ದಿವಂ ಚ] ದ್ಯುಲೋಕವನ್ನೂ, [ಪೃಥಿವೀಂ] ಪೃಥಿವಿಯನ್ನೂ, [ಅಂತರಿಕ್ಷಂ] ಅಂತರಿಕ್ಷವನ್ನೂ, [ಅಥ ಉ] ಹಾಗೆಯೇ [ಸ್ವಃ] ಆನಂದಮಯ ಸ್ಥಿತಿಯನ್ನು, [ಅಕಲ್ಪಯತ್] ರಚಿಸಿದನು.

     ಹಿಂದೆ ಸೃಷ್ಟಿಗಳಾಗಿವೆ. ಮುಂದೆ ಆಗುತ್ತಾ ಹೋಗುತ್ತದೆ. ಸೃಷ್ಟಿಯೂ ಕೂಡ ಪ್ರವಾಹ ರೂಪದಿಂದ ಅನಾದಿ-ಅನಂತ.


     ಮೂರು ಶಾಶ್ವತ ಪದಾರ್ಥಗಳ, ಅನಾದಿ ತತ್ತ್ವಗಳ ಪರಿಚಯ ಪಡೆದುದಾಯಿತು. ಇನ್ನು ಮುಂದುವರೆಯೋಣ. ಧರ್ಮದ ಸ್ವರೂಪವನ್ನು ಅರ್ಥ ಮಾಡಿಕೊಳ್ಳೋಣ.
**************************