Pages

Friday, August 24, 2012


ವೇದಸುಧೆಯ ಅಭಿಮಾನಿಗಳೇ ,


ಕಳೆದ 19.8.2012 ಭಾನುವಾರ ಉದ್ಘಾಟನೆಗೊಂಡ "ಎಲ್ಲರಿಗಾಗಿ ವೇದ ಪಾಠ" ಸಾಪ್ತಾಹಿಕ ತರಗತಿಯಲ್ಲಿ ದಿನಾಂಕ 20.8.2012 ರಂದು ಪ್ರಥಮ ಪಾಠ ನಡೆದು ಅದರಲ್ಲಿ ಮೂವತ್ತು ಜನ ಆಸಕ್ತರು ಉತ್ಸಾಹದಿಂದ ಪಾಲ್ಗೊಂಡರು. ಮುಂದಿನ ತರಗತಿಯು ದಿನಾಂಕ 26.8.2012 ರಂದು ನಡೆಯಬೇಕಿದ್ದು ಅಂದು ವೇದಾಧ್ಯಾಯೀ  ಶ್ರೀ ವಿಶ್ವನಾಥ ಶರ್ಮರು ವೇದಕ್ಕೆ ಸಂಬಂಧಿಸಿದ ಒಂದು ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳಬೇಕಾದ್ದರಿಂದ  ಅಂದಿನ ಬದಲು ಮುಂಚಿತವಾಗಿಯೇ ದಿನಾಂಕ 23.8.2012 ರಂದು ಗುರುವಾರ ಎರಡನೇ ಪಾಠವು ನಡೆಯಿತು.  ನೇರವಾಗಿ ಪಾಲ್ಗೊಂಡವರ ಜೊತೆಗೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನರು ಅಂತರ್ ಜಾಲದಲ್ಲಿ ಪಾಠವನ್ನು ಅನುಸರಿಸುತ್ತಿರುವುದು ತಿಳಿದುಬಂದಿದೆ. ಅಲ್ಲದೆ ಹತ್ತು ಜನರು ಪಾಠವನ್ನು ಮೇಲ್ ಮೂಲಕ ಪಡೆದು ಅಭ್ಯಾಸವನ್ನು ಆರಂಭಿಸಿರುತ್ತಾರೆ. ಇನ್ನು ಮುಂದೆ    mail@vedasudhe.com  ಗೆ ಮೇಲ್ ಮಾಡಿ ತಮ್ಮ ಅಭಿಪ್ರಾಯ/ಸಲಹೆಯನ್ನು ನೀಡಲು ಕೋರುವೆ.

ಹರಿಹರಪುರ ಶ್ರೀಧರ್
-ಸಂಪಾದಕ

ನಟರಾಜ್ ಲೇಖನಿಯಿಂದ-1


ಬೆಂಗಳೂರಿನ   ಶ್ರೀ ನಟರಾಜ್ ಕಾನಗೋಡ್  ಪ್ರಸ್ತುತ ಆಫ್ಘಾನಿಸ್ಥಾನದ ಕಾಬೂಲ್ ನಲ್ಲಿ  ಆಫ್ಗನ್ ಟಿ.ವಿ.ಯಲ್ಲಿ ಚೀಫ್ ಆಪರೇಟಿಂಗ್ ಆಫೀಸರ್ ಹುದ್ಧೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಫೇಸ್ ಬುಕ್ ನಲ್ಲಿ  " ಸಿದ್ಹಾಂತ!!ವೇದಾಂತ!!ವಿಚಾರ ವೇದಿಕೆ !!!  " ಗುಂಪನ್ನು ಆರಂಭಿಸಿ ಸಾಕಷ್ಟು ಚಿಂತನ ಮಂಥನ ನಡೆಸುತ್ತಿರುವ ಶ್ರೀ ನಟರಾಜ್  ತಮ್ಮ ಲೇಖನಿಯಿಂದ ವೇದಸುಧೆಯಲ್ಲೂ ಬರೆಯಲಿದ್ದಾರೆ. ಅವರ ಅನುಮತಿಯೊಡನೆ ಅವರ ಕೆಲವು ಕಿರು ಬರಹಗಳನ್ನು ಇಲ್ಲಿ ಪ್ರಕಟಿಸಿರುವೆ.
-ಹರಿಹರಪುರಶ್ರೀಧರ್
------------------------------------------------------
ಸಾತ್ವಿಕ ವ್ಯಕ್ತಿಯ ಲಕ್ಷಣಗಳು: 


ಒಬ್ಬ ವ್ಯಕ್ತಿ ಅಥವಾ ಜೀವಿಯನ್ನು ಸಾತ್ವಿಕ ವೆಂದು ಕರೆಯಬೇಕಾದರೆ, ಅಂತಹವನು ಮುಖ್ಯವಾಗಿ ಸಾತ್ವಿಕ ಪ್ರವೃತ್ತಿಗಳನ್ನು ಹೊಂದಿರಬೇಕು. "ಸಾತ್ವಿಕ" ಎಂಬ ಪದವು ದೈವಿಕ, ಶುದ್ಧ, ಹಾಗು ಆಧ್ಯಾತ್ಮಕ್ಕೆ ಸೂಚಿತವಾಗುತ್ತದೆ.

ಒಬ್ಬ ಸಾತ್ವಿಕ ನಾದ ವ್ಯಕ್ತಿಯು ಯಾವಾಗಲೂ ಜಗತ್ತಿನ ಒಳಿತಿಗಾಗಿ ಕೆಲಸವನ್ನು ಮಾಡುತ್ತಾನೆ. ಇವರುಗಳು ಯಾವಾಗಲೂ ಶ್ರಮಜೀವಿಗಳಾಗಿದ್ದು, ಜಾಗರೂಕರಾಗಿ ಹಾಗು ಅತಿರೇಕವಿಲ್ಲದ ಜೀವನಶೈಲಿಯನ್ನು ಅನುಸರಿಸುತ್ತಾರೆ. ಸರಳವಾದ ಜೀವನವನ್ನು ಸಾಗಿಸುತ್ತಾರೆ. ಮಿತವಾಗಿ ಆಹಾರವನ್ನು ಸೇವಿಸುತ್ತಾರೆ. ಸತ್ಯವನ್ನು ನುಡಿಯುವುದರ ಜೊತೆಗೆ ದಿಟ್ಟವಾಗಿರುತ್ತಾರೆ. ಅಶ್ಲೀಲವಾದ ಅಥವಾ ಅವಮಾನ ಮಾಡುವ ರೀತಿಯಲ್ಲಿ ಎಂದಿಗೂ ಮಾತನಾಡುವುದಿಲ್ಲ. ಅಭಿನಂದನಾರ್ಹವಾಗಿ ಮಾತನಾಡುವುದರ ಜೊತೆಗೆ ನಿಖರವಾದ ಭಾಷೆಯನ್ನೂ ಬಳಸುತ್ತಾರೆ. ಇವರು ಹೊಟ್ಟೆಕಿಚ್ಚು ಪಡುವುದಿಲ್ಲ ಅಥವಾ ದುರಾಸೆ ಹಾಗು ಸ್ವಾರ್ಥ ಇವರ ಮೇಲೆ ಪರಿಣಾಮ ಬೀರುವುದಿಲ್ಲ. ಭರವಸೆ, ಸಮೃದ್ಧತೆ ಹಾಗು ಔದಾರ್ಯವನ್ನು ಮೆರೆಯುತ್ತಾರೆ. ಯಾವುದೇ ಕಾರಣಕ್ಕೂ ಒಬ್ಬರಿಗೆ ಮೋಸ ಮಾಡುವುದಾಗಲಿ ಅಥವಾ ತಪ್ಪುದಾರಿಗೆ ಎಳೆಯ

ವುದಾಗಲಿ ಮಾಡುವುದಿಲ್ಲ. ಇರುವುದನ್ನೇ ಹೇಳುವುದರ ಜೊತೆಗೆ ಗಮ್ಯವನ್ನು ವಿವರಿಸಿ, ಜನರು ತಮಗೆ ಬೇಕಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತಾರೆ. ತಮ್ಮ ಮನಸ್ಸಿನ ಮೇಲೆ ಯಾವುದೇ ಕೆಡುಕಿನ ಪ್ರವೃತ್ತಿಗಳು ಆಳಲು ಅವಕಾಶ ಮಾಡಿಕೊಡುವುದಿಲ್ಲ. ಆಂತರಿಕ ಪರಮಾನಂದದ ಸ್ಥಿತಿಗೆ ಬೆಂಬಲಿಸಿ, ಅದು ಜಗತ್ತಿಗೆ ಹರಡುವಂತೆ ಮಾಡುತ್ತಾರೆ. ಅವರು ಸ್ಮರಣಶಕ್ತಿ ಹಾಗು ಚಿತ್ತೈಕಾಗ್ರತೆಯು ಉತ್ತಮವಾಗಿರುತ್ತದೆ. ಆಧ್ಯಾತ್ಮಿಕ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಹೆಚ್ಚು ಆಸಕ್ತರಾಗಿರುವುದರ ಜೊತೆಗೆ ದೈವತ್ವವನ್ನು ಪೂಜಿಸುತ್ತಾ ಅಥವಾ ಧ್ಯಾನಿಸುತ್ತಾ ಕಾಲವನ್ನು ಕಳೆಯುತ್ತಾರೆ. ತೀವ್ರತರವಾದ ಪರಿಸ್ಥಿತಿಗಳಲ್ಲಿ ದೇಹವನ್ನು ದಂಡಿಸಬಹುದು ಅಥವಾ ಭಂಗ ಬರದಂತೆ ಧ್ಯಾನವನ್ನು ಮಾಡಬಹುದು. ಮನಸ್ಸು, ಮಾತು ಹಾಗು ಕೃತ್ಯಗಳು ಸಮನ್ವಯಗೊಂಡಿದ್ದಾಗ, ಅಂತಹ ವ್ಯಕ್ತಿಯನ್ನು ಒಬ್ಬ ಸಾತ್ವಿಕ ನೆಂದು ಗುರುತಿಸಬಹುದು. ಇಂತಹ ಸ್ಥಿತಿಯನ್ನು ಸಂಸ್ಕೃತ ಪದಗಳಲ್ಲಿ ಮನಸಾ, ವಾಚ, ಕರ್ಮಣ ಎಂದು ವಿವರಿಸಲಾಗುತ್ತದೆ.

ಸಾತ್ವಿಕ ಆಹಾರದ ಲಕ್ಷಣ: 


ಒಂದು ಪದಾರ್ಥ ಅಥವಾ ಆಹಾರವು ಸಾತ್ವಿಕ ವಾದದ್ದು ಎನಿಸಿಕೊಳ್ಳಬೇಕಾದರೆ, ಅದು ಶುದ್ಧವಾಗಿರುವುದರ ಜೊತೆಗೆ ಜಗತ್ತಿನಲ್ಲಿ ಯಾವುದೇ ರೀತಿಯಲ್ಲಿ ಕೆಡುಕನ್ನು ಅಥವಾ ಕಾಯಿಲೆಯನ್ನು ಅದು ಉಂಟುಮಾಡದಂತಿರಬೇಕು. ಇದಕ್ಕೆ ಪರಸ್ಪರ ವಿರುದ್ಧವಾಗಿ ಇದರ ಅಸ್ತಿತ್ವವು ಸುತ್ತಮುತ್ತಲಿನ ಪರಿಸರವನ್ನು ಶುದ್ಧಗೊಳಿಸುವಂತಿರಬೇಕು. ಈ ರೀತಿಯಾಗಿ, ಒಬ್ಬ ವ್ಯಕ್ತಿಯು ಇಂತಹ ಆಹಾರವನ್ನು ಸೇವಿಸಿದಾಗ, ಅವನಿಗೆ ತಾನು ಒಳ್ಳೆಯ ಆಹಾರವನ್ನು ಸೇವಿಸುತ್ತಿರುವುದಾಗಿ ಭಾಸವಾಗಬೇಕು. ಆಹಾರವು ಆರೋಗ್ಯಕರವಾಗಿ, ಪೌಷ್ಟಿಕರವಾಗಿ ಹಾಗು ಶುದ್ಧವಾಗಿರಬೇಕು. ಇದು ಶಕ್ತಿಯನ್ನು ಕುಂದಿಸುವ ರೀತಿಯಲ್ಲಾಗಲಿ ಅಥವಾ ಮಾನಸಿಕ ಸಮತೋಲನಕ್ಕೆ ಧಕ್ಕೆ ತರುವ ರೀತಿಯಲ್ಲಾಗಲಿ ಇರಬಾರದು. ಈ ಕಲ್ಪನೆಯು ಕಾಮೋತ್ತೆಜನಕ್ಕೆ ಅವಕಾಶ ಮಾಡಿಕೊಡದಂತೆಯೂ ಅಥವಾ ಈ ಮಾರ್ಗದಲ್ಲಿ ಮನಸ್ಸಿನ ಮೇಲೆ ಪರಿಣಾಮವನ್ನು ಉಂಟುಮಾಡುವ ಔಷಧಗಳು ಹಾಗು ಮಾದಕದ್ರವ್ಯವನ್ನು ನಿಷೇಧಿಸುವಂತಿರಬೇಕು. ಇದು, ಒಂದು ಜೀವಿಗೆ ನೋವನ್ನುಂಟುಮಾಡಿ, ಅದನ್ನು ಸಾಯಿಸಿದ ನಂತರ ಒದಗುವ ಆಹಾರ ಅಥವಾ ಪದಾರ್ಥಗಳನ್ನೂ ಸಹ ನಿಷೇಧಿಸುತ್ತದೆ. ಇದಕ್ಕೆ ಕಾರಣ, ಪದಾರ್ಥವು ನಂತರದಲ್ಲಿ ಒಂದು ಪಾಪ ಕೃತ್ಯಕ್ಕೆ ಮೂಲವಾಗುತ್ತದೆ. ಇದು ಹಳಸಿದ ಹಾಗು ಘಾಟಿನ ತೀಕ್ಷ್ಣತೆಯಿರುವ ಆಹಾರವನ್ನೂ ಸಹ ಬಹಿಷ್ಕರಿಸುತ್ತದೆ.

  "ವೇದದ ಬಗ್ಗೆಯ ತಪ್ಪು ಕಲ್ಪನೆ"

ವೇದಗಳ ಬಗ್ಗೆ ಬಹಳ ತಪ್ಪು ಕಲ್ಪನೆಗಳಿವೆ, ವೇದ ಮಂತ್ರಗಳಲ್ಲಿ ಎಲ್ಲೂ ದೇವರ ಪೂಜಾವಿಧಾನವನ್ನು ಹೇಳಿರುವುದಿಲ್ಲ. ಕೆಲವು ದೇವತೆಗಳ ಹೆಸರುಗಳನ್ನು ಋಷಿಮುನಿಗಳು ಸಂಕಲ್ಪಿಸಿಕೊಂಡು ಮಾಡಿದ ತಪಸ್ಸಿನಿಂದಾ ಈ ಮಂತ್ರವನ್ನು ಕಾಣಲಾಯಿತು ಎಂದು ನಮೂದಿಸಲ್ಪಟ್ಟಿದೆಯೇ ಹೊರೆತು, ವೇದ ಮಂತ್ರಗಳು ಪೂಜಾ ವಿಧಾನವನ್ನಾಗಲೀ, ಅಥವಾ ದೇವರ ಬಗ್ಗೆ ಯಾವುದೇ ರೂಪದ ಕಲ್ಪನೆಯನ್ನಾಗಲೀ ಕೊಟ್ಟಿಲ್ಲ. ಅಲ್ಲಿ ಕೇವಲ ಕೆಲವು ಮಂತ್ರಗಳು ಕಾಣಲ್ಪಟ್ಟಿವೆ(ಅವುಗಳು ಯಾರಿಂದಲೂ ಬರೆಯಲ್ಪಟ್ಟಿಲ್ಲ ಅಥವ ಅವರ ಬದ್ಧಿಯಿಂದಾ ರಚಿಸಲ್ಪಟ್ಟಿಲ್ಲ)ಹಾಗೂ ಆ ಮಂತ್ರಗಳನ್ನೂ ಕಂಡವರಿಗೂ(ಯಾರ ಬಾಯಿಂದ ಬಂದಿದೆಯೋ)ಕೂಡ ಅದರ ಅರಿವು ಇರುತ್ತಿರಲಿಲ್ಲ. ಅಂಥಹ ಸ್ಥಿತಿಗೆ ಅವರು ಹೋದಾಗಲೇ ಅವು ಅವರ ಬಾಯಿಂದಾ ಬರುತ್ತಿದ್ದವು(ಸಮಾಧಿ ಸ್ಥಿತಿ)ಅದನ್ನ ಮತ್ತೊಬ್ಬರು ತಿಳಿದು ಬರೆದುಕೊಳ್ಳಬೇಕಾಗಿತ್ತು.ಅಂತ ಒಂದು ಕಾಲವೇ ವೇದ ಕಾಲವಾಗಿತ್ತು.ಯಾರು,ಯಾವ ವಿಷಯದ ಬಗ್ಗೆ ತಿಳಿದುಕೊಳ್ಳಬೇಕಾಗಿತ್ತೋ,ಅದರ ಬಗ್ಗೆ ಸಂಕಲ್ಪ ಮಾಡಿ, ಧ್ಯಾನದ ಸ್ಥಿತಿಯಲ್ಲಿ ಕುಳಿತಾಗ, ಅವರು ಸಮಾಧಿ ಸ್ಥಿತಿಗೆ ಹೋದಾಗ, ಅವರ ಬಾಯಿಯಿಂದಾ ಬಂದಂತಹುದೇ ವೇದ ಮಂತ್ರಗಳು ಹಾಗೂ ಸೂಕ್ತಗಳು.ಅದು ಈಗ ನಮಗೆ ಪರಿಚಿತವಿರುವ ಸಂಸ್ಕೃತದ ಅರ್ಥಕ್ಕೆ ಕೂಡ ಪೂರ್ತಿಯಾಗಿ ಸಿಗುವುದಿಲ್ಲ. ಅದರ ವ್ಯಾಪ್ತಿಗೆ ಮೀರಿರುವುದು ಆಗಿರುತ್ತದೆ. ಅದನ್ನು ನಮಗೆ ಈಗ ಗೊತ್ತಿರುವ ಸಂಸ್ಕೃತದಿಂದ ವೇದ ಮಂತ್ರದ ಅರ್ಥ ಇಷ್ಟೇ, ಹೀಗೆ, ಎಂದು ಹೇಳಲು ಆಗುವುದಿಲ್ಲ.ಅದನ್ನು ಜಪಿಸಿಯೇ ಅದರ ಪರಿಣಾಮವನ್ನು ತಿಳಿದುಕೊಳ್ಳಬೇಕಾಗುತ್ತದೆ.ಹಾಗೆ ಅದನ್ನು ಜಪಿಸಿ ತಿಳಿದುಕೊಂಡವರು ಮಾತ್ರಾ ಈ ಮಂತ್ರ ಇದಕ್ಕಾಗಿ ಎಂದು ಹೇಳಲು ಸಾಧ್ಯ. ನಮ್ಮಲ್ಲಿಯ ಯಾವ ವಿಧ್ವಾಂಸರಿಗೂ ಅದನ್ನು ಪೂರ್ತಿಯಾಗಿ ಅರ್ಥೈಸಲು ಆಗುವುದಿಲ್ಲ. ಕೇವಲ ಸ್ಥೂಲವಾಗಿ ಅರ್ಥೈಸಬಹುದೇ ಹೊರೆತು, ಅದರ ಪರಿಣಾಮ, ಅದರ ತರಂಗಗಳು, ಇವನ್ನೆಲ್ಲ ಸ್ವತಹ ಜಪಿಸಿಯೇ, ಸಿದ್ಧಿಮಾಡಿಕೊಂಡೇ, ಕಂಡುಕೊಳ್ಳಬೇಕಾಗುತ್ತದೆ.ಅದನ್ನು ಬಾಯಿಪಾಠ ಮಾಡಿದ ಮಾತ್ರಕ್ಕೆ ಯಾರೂ ಬ್ರಹ್ಮ್ಮಜ್ನಾನಿ ಯಾಗುವುದಿಲ್ಲ.ಅದರ ಶುದ್ಧವಾದ ಹಾಗೂ ನಿರಂತರ ಪಠಣೆಯಿಂದಾ ಸಿದ್ಧಿಯನ್ನು ಹೊಂದಬಹುದಾಗಿದೆ ಅಷ್ಟೆ. ಎಲ್ಲವಕ್ಕೂ ವೇದದ ಹೆಸರನ್ನು ಹೇಳಿ ದಾರಿತಪ್ಪಿಸುತ್ತಿರುವುದೇ ಒಂದು ದೊಡ್ಡ ದುರಾದೃಷ್ಟ. 

ಬಡವನ ಸುಖವೇ ಅದೆಷ್ಟೋ ಮೇಲು

ಅರ್ಥಾನಾಮ್ ಅರ್ಜನೇ ದುಃಖಮ್ ಅರ್ಜಿತಾನಾಂಚ ರಕ್ಷಣೇ ।
ಆಯೇ ದುಃಖಂ ವ್ಯಯೇ ದುಃಖಂ ಧೀಗರ್ಥಾಃ ಕಷ್ಟ ಸಂಶ್ರಯಾಃ ॥


ಹಣಸಂಪಾದನೆಯಲ್ಲಿ ದುಃಖ; ಸಂಪಾದಿಸಿದ ಹಣದ ರಕ್ಷಣೆಯಲ್ಲಿ ದುಃಖ; ಆದಾಯದಲ್ಲಿ ಪುನಃ ದುಃಖ, ಅದನ್ನು ಖರ್ಚು ಮಾಡಬೇಕಾದಲ್ಲಿ ಮತ್ತೆ ದುಃಖ ಹೀಗೆ ಕಷಟಗಳಿಂದ ಕೂಡಿರುವ ಐಶ್ವರ್ಯಕ್ಕೆ ಧಿಕ್ಕಾರವಿರಲಿ. ಐಶ್ವರ್ಯವಂತನಿಗಿರುವ ಸುಖಕ್ಕಿಂತ ಬಡವನ ಸುಖವೇ ಅದೆಷ್ಟೋ ಮೇಲು.  ಬಡ ತನದಲ್ಲಿ ತೃಪ್ತಿ ಇರುತ್ತದೆ ಸಿರಿತನದಲ್ಲಿ ದುರಾಸೆಗಳಿರುತ್ತವೆ. 

ನನ್ನ ಮಾತು: 

ನಮ್ಮ ಪೂರ್ವಜರು ತಮ್ಮ ಅನುಭವದ ಮಾತನ್ನೇ ಹೇಳಿದ್ದಾರೆ. ಈ ಸೂಕ್ತಿಯಲ್ಲಿ ಅದೆಷ್ಟು ಸತ್ಯವಿದೆ! ಬಡ   ವನಿಗೆ ಆ ದಿನಕ್ಕೆ ಹೊಟ್ಟೆಗೆ ಅನ್ನ ಸಿಕ್ಕಿದರೆ ಸಾಕು, ಇಚ್ಚೆಯಿಂದ ಊಟಮಾಡಿ ಸುಖವಾಗಿ ನಿದ್ರಿಸುತ್ತಾನೆ. ಆದರೆ ಹಣ ಗಳಿಸುತ್ತಾ ಗಳಿಸುತ್ತಾ ಅದರ ಜೊತೆಗೇ ಭಯ ಕೂಡ ಮನೆಮಾಡುತ್ತದೆ. ಸಂಪಾದಿಸಿದ ಹಣವನ್ನು    ರಕ್ಷಣೆ ಮಾಡುವುದು ಬಲು ಕಷ್ಟದ ಮಾತು.ಆದರೆ  ಈ ಸಂಪಾದನೆ ಸಮಾಜದಿಂದ ನನಗೆ ಬಂದದ್ದು. ನಾನು ಇದರ ವಿಶ್ವಸ್ತನಷ್ಟೇ ಎಂದು ಯೋಚಿಸಿದಾಗ ಸಂಪತ್ತಿನ ಸದ್ವಿನಿಯೋಗದ ಮಾರ್ಗ ಗೊತ್ತಾಗುತ್ತದೆ. ಭಗವಂತನು  ಸಂಪತ್ತನ್ನು ಕೊಟ್ಟಾಗ ತನ್ನ ನಿತ್ಯದ ಬದುಕಿಗೆ ಅಗತ್ಯವಾದಷ್ಟನ್ನು ತಾನು ಇಟ್ಟುಕೊಂಡು ಉಳಿದದ್ದನ್ನು   ಸತ್ಕಾರ್ಯಗಳಿಗೆ ವಿನಿಯೋಗಿಸಿದಾಗ ಅದರಿಂದ ಅವನಿಗೆ ಸಂತೋಷ-ಸಮಾಧಾನಗಳೂ ಲಭ್ಯವಾಗುತ್ತದೆ. ಕಳ್ಳನಿಂದ ತನ್ನ ಸಂಪತ್ತನ್ನು ರಕ್ಷಿಸಬೇಕೆಂಬ ಕೊರಗೂ ತಪ್ಪುತ್ತದೆ.

ವಿತ್ತೇ ತ್ಯಾಗ: ಕ್ಷಮಾ ಶಕ್ತೌ,.............ಸ್ವಭಾವೋಯಮ್ ಮಹಾತ್ಮನಾಮ್||

 ಮಹಾತ್ಮರ ಸ್ವಭಾವದ ವರ್ಣನೆ ಮಾಡುತ್ತಾ.    ಹಣವಿದ್ದಾಗ ತ್ಯಾಗಮಾಡಬೇಕು, ಶಕ್ತಿ ಇದ್ದಾಗ ಅಶಕ್ತನನ್ನು ಕ್ಷಮಿಸಬೇಕು...........ಎಂದು ಹೇಳಿದೆ. ಭಗವಂತನು ಕೊಟ್ಟಿರುವ  ಬುದ್ಧಿ, ಹಣ ಮತ್ತು ದೇಹಬಲವನ್ನು ಸದ್ವಿಚಾರಗಳಿಗೆ ವಿನಿಯೋಗಿಸಿದಾಗ ಅವನು ನಿರಾತಂಕನಾಗಿ ನೆಮ್ಮದಿಯಿಂದ ಇರಬಹುದಲ್ಲವೇ?

Tuesday, August 21, 2012

ವೇದ ಪಾಠದಲ್ಲಿ ಕೇಳಿದ್ದು


ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ಹಾಸನದಲ್ಲಿ ದಿನಾಂಕ 19.8.2012 ಭಾನುವಾರ ಸಾಪ್ತಾಹಿಕ ವೇದಪಾಠವನ್ನು ಆರಂಭ ಮಾಡಿದ್ದಾರೆ. ಪತ್ರಿಕೆಗಳಲ್ಲಿ ಈ ಬಗ್ಗೆ ಸುದ್ಧಿಮಾಡಿದಾಗ ಹಲವರು ದೂರವಾಣಿ ಕರೆಮಾಡಿ ನಮಗೆ ಹಲವು ಪ್ರಶ್ನೆಗಳನ್ನು ಕೇಳಿದರು. ಅವುಗಳಲ್ಲಿ ಕೆಲವು ಇಲ್ಲಿವೆ

1.ಎಲ್ಲಾ ಜಾತಿಯವರೂ ಬರಬಹುದೇ?

2.ಹೆಂಗಸರೂ ಬರಬಹುದೇ?

3.ಯಾವ ಯಾವ ಮಂತ್ರಗಳನ್ನು ಹೇಳಿಕೊಡುತ್ತಾರೆ?

4.ಪೂಜಾ ಮಂತ್ರವನ್ನೂ ಹೇಳಿಕೊಡುತ್ತಾರಲ್ಲವೇ?

5.ಶುಲ್ಕ?

6.ಇನ್ನೂ ಹಲವು ಪ್ರಶ್ನೆಗಳು.ನನ್ನ ಮಗನಿಗೆ ಈ ವರ್ಷ ಮುಂಜಿ ಮಾಡಿದ್ದೇನೆ. ಅವನನ್ನು ಕಳಿಸುತ್ತೇನೆ...ಇತ್ಯಾದಿ...ಇತ್ಯಾದಿ....

ಎಲ್ಲಾ ಪ್ರಶ್ನೆಗಳಿಗೂ ಒಂದೇ ಉತ್ತರ." ಬನ್ನಿ ಎಲ್ಲಾ ತಿಳಿಯುತ್ತೆ"

ಹೌದು, ಆಸಕ್ತರು ಬಂದರು. ವೇದಾಧ್ಯಾಯೀ ಶ್ರೀ ವಿಶ್ವನಾಥ ಶರ್ಮರು ಅವರ ಉಪನ್ಯಾಸದಲ್ಲಿ ಎಲ್ಲರ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದರು. ಉಪನ್ಯಾಸ ಕೇಳಿದ ಮೇಲೆ ಹಲವರು ಹೇಳಿದ್ದು..

1.ಮಂತ್ರ ಕಲಿಯೋಣ ಅಂತಾ ಬಂದೆ, ಜೀವನದ ಪಾಠ ಆರಂಭಿಸಿದ್ದಾರೆ. ನನಗಂತೂ ಆಶ್ಚರ್ಯವಾಗಿದೆ.

2.ವೇದಾಧ್ಯಯನ ಮಾಡುವವರು ಸತ್ಯವನ್ನೇ ಹೇಳಬೇಕು, ಅಹಿಂಸಾವಾದಿಗಳಾಗಿರಬೇಕು,.......ಯಾರೂ ವೇದಪಾಠದಲ್ಲಿ ಹೀಗೆ ಹೇಳಿಯೇ ಇರಲಿಲ್ಲ.

3. ಮನುಷ್ಯರೆಲ್ಲಾ ಒಂದೇ ಜಾತಿ! ಊಹಿಸಲೂ ಸಾಧ್ಯವಿಲ್ಲವಲ್ಲಾ!

4.ದೇವರ ಕಲ್ಪನೆಯೇ ವಿಭಿನ್ನ! ಪೂಜೆಯ ಕಲ್ಪನೆಯೇ ವಿಭಿನ್ನ! 33 ಕೋಟಿ ದೇವರು?

ವಿಶ್ವನಾಥಶರ್ಮರ ಉಪನ್ಯಾಸದ 5-10 ನಿಮಿಷಗಳ 5 ತುಣುಕುಗಳನ್ನು ಇಲ್ಲಿ ಕೇಳಿ.

ವೇದ ಪಾಠದ ಆಡಿಯೋ ಇಲ್ಲಿ ಕೇಳಿ



ಎಲ್ಲ ಅನರ್ಥಗಳಿಗೂ ಹಣವು ಕಾರಣ


ಪೂಜ್ಯತೇ ಯದಪೂಜ್ಯೋಪಿ ಯದಗಮ್ಯೋಪಿ ಗಮ್ಯತೇ ।
ವಂದ್ಯತೇ ಯದವಂದ್ಯೋಪಿ ಸ ಪ್ರಭಾವೋ ಧನಸ್ಯ ಚ ॥

ಪೂಜೆಗೆ ಅನರ್ಹನಾದವನನ್ನು  ಪೂಜಿಸಿದರೆ,   ಯಾರಲ್ಲಿಗೆ ಹೊಗಬಾರದೋ ಅವನಲ್ಲಿಗೆ ಹೋದರೆ, ಯಾರಿಗೆ ನಮಿಸ ಬಾರದೋ ಅವನಿಗೆ ನಮಿಸಿದರೆ ಅದಕ್ಕೆ ಹಣದ ಪ್ರಭಾವವೇ ಕಾರಣ. ಎಲ್ಲ ಅನರ್ಥಗಳಿಗೂ ಹಣವು ಕಾರಣವಾಗಿದೆ.
--

ಸಂಪ್ರದಾಯಗಳು


ಹಿಂದೂ ಸಮಾಜದ ಪುನರುತ್ಥಾನಕ್ಕೆ ಆರ್ಯ ಸಮಾಜ ಕಟೀಬದ್ದವಾಗಿದೆ. ಸಾವಿರಾರು ವರುಷಗಳಿಂದ ಮೂಡನಂಬಿಕೆಗಳಿಂದ ಹಿಂದೂ ಸಮಾಜವು ನಲುಗಿದೆ.ಈ ಮೂಡನಂಬಿಕೆಗಳೇ ನಮ್ಮ ಗುಲಾಮಗಿರಿಗೂ ಕಾರಣವಾಯಿತು. ಭಾರತದ ಮೇಲೆ ಹೂಣರು, ಶಕರು ಮುಂತಾದವರು ಆಕ್ರಮಣ ಮಾಡಿದರು. ಇವರೆನ್ನಲಾ ಭಾರತ ಎದುರಿಸಿ ಭಾರತ ಗೆದ್ದಿತು. ಭಾರತಕ್ಕೆ ಬಂದ ಈ ಜನಾಂಗವು ಕಾಲಕ್ರಮೇಣ ಹಿಂದೂ ಸಮಾಜದಲ್ಲಿ ವಿಲೀನಗೊಂಡಿತು. ಇಂದು ನಮ್ಮ ಮದ್ಯೆ ಶಕರು, ಹೂಣರು, ಕುಶಾನರನ್ನು ಕಾಣೆವು. ಆದರೆ ಕಳೆದ ಕೆಲವು ನೂರು ವರ್ಷಗಳಿಂದ ಹಿಂದೂ ಸಮಾಜದಲ್ಲಿ ಎಲ್ಲರನ್ನೂ ಜೀರ್ಣಿಸಿಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿದೆ. ಪರಿಣಾಮವಾಗಿ ಅನ್ಯ ಸಮಾಜಗಳು ಹಿಂದೂ ಸಮಾಜದ ಮೇಲೆ ಸವಾರಿ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿವೆ. ಈ ನಿಟ್ಟಿನಲ್ಲಿ ನಮ್ಮ ಮದ್ಯೆ ಇರುವ ಅನೇಕ ಮೂಡ ನಂಬಿಕೆಗಳನ್ನು ದೂರವಿಟ್ಟು ಶುದ್ಧ ತಾರ್ಕಿಕ, ಮಾನವೀಯ ಮತ್ತು ವೇದಾಧಾರಿತ ಸಮಾಜವನ್ನು ಮಾಡಲೆಂದೇ ಅರ್ಯಸಮಾಜ ಪಣ ತೊಟ್ಟಿದೆ. ನಿಜ. ನಮ್ಮಲ್ಲಿ ಕೆಲವು ಉತ್ತಮ ಸಂಪ್ರದಾಯಗಳಿವೆ. ಆದರೆ ಅದಕ್ಕೂ ಮಿಗಿಲಾದದ್ದು ವೈದಿಕ ಸಂಪ್ರದಾಯ. ಒಬ್ಬ ರೈತ ಪೈರುಗಳ ನಡುವೆ ಇರುವ ಕಳೆಗಳನ್ನು ಕೀಳುವ ಸಂದರ್ಭದಲ್ಲಿ ಅನೇಕ ಉತ್ತಮ ಪೈರುಗಳು ಕೆಲವೊಮ್ಮೆ ನಾಶವಾಗುತ್ತವೆ. ಆದರೆ, ಇದಕ್ಕೆ ಭಯಬಿದ್ದು ಕಳೆಗಳನ್ನೇ ಕೀಳದಿದ್ದರೆ ಅವನು ಜಾಣ ರೈತನೇ?
ಈ ದಿಸೆಯಲ್ಲಿ ನಾವು ಯೋಚಿಸಬೇಕು ನಮ್ಮ ತಂದೆ ಕುರುಡರೆಂದು ನಾವು ಕುರುಡಾಗಬಾರದು. ಅದು ವಿವೇಕ ರಹಿತ ವರ್ತನೆಯಾಗುತ್ತದೆ. ನಮ್ಮಲ್ಲಿ ಇಂದು ಮನೆ ಮಾಡಿರುವ ವಿಗ್ರಹಾರಾದನೆ, ಶ್ರಾದ್ಧಕರ್ಮಗಳು, ಇತ್ಯಾದಿಗಳನ್ನು ಆರ್ಯಸಮಾಜ ವೇದಗಳ ಹಿನ್ನೆಲಯಲ್ಲೇ ವಿರೋಧಿಸುತ್ತದೆ. ಎಲ್ಲಕ್ಕೂ ವೇದ ಪ್ರಮಾಣ ಶ್ರೇಷ್ಟವೆನ್ನುವ ನಾವು ಈ ಸಂಪ್ರದಾಯಗಳನ್ನು ಯಾಕೆ ವಿವೇಕದ ಒರೆಗಲ್ಲಿಗೆ ಹಚ್ಚಬಾರದು? ಆಗ ಸತ್ಯ ತಾನೇ ತಾನಾಗಿ ಹೊರಹೊಮ್ಮುತ್ತದೆ.
ಆರ್ಯಸಮಾಜ ಹಿಂದೂ ಸಮಾಜದ ಒಂದು ಪ್ರಾಮಾಣಿಕ ಮಿತ್ರ. ವೀರ ಸಾವರ್ಕರ್ ಒಬ್ಬ ನಾಸ್ತಿಕರಾಗಿದ್ದರು. ಆದರೆ, ಅವರು ಆರ್ಯಸಮಾಜದ ವಿದಿ ವಿದಾನಗಳ ಕಟು ಬೆಂಬಲಿಗರಾಗಿದ್ದರು. ಅವರು ತಮ್ಮ ಜೀವನದುದ್ದಕ್ಕೂ ಸ್ವಾಮಿ ದಯಾನಂದರನ್ನು ನಮ್ಮ ದೇಶದ ಆದರ್ಶವೆಂದೇ ಪ್ರತಿಪಾದಿಸುತ್ತಿದ್ದರು. ಇನ್ನೊಬ್ಬ ಪ್ರಾತಃ ಸ್ಮರಣೀಯ ವೈಕ್ತಿಯೆಂದರೆ ಪಂ| ಮದನ್ ಮೋಹನ ಮಾಳವೀಯರು. ಅವರು ಪೌರಾಣಿಕರಾದರೂ ಹಿಂದು ಸಮಾಜಕ್ಕೆ ಆರ್ಯ ಸಮಾಜವೇ ತಾರಕ ಮಂತ್ರವೆಂದು ಭಾವಿಸಿದ್ದರು. ಇವರೆಲ್ಲಾ ಹಿಂದೂ ಸಮಾಜದ ಏಳಿಗೆಗೆ ತಮ್ಮ ಜೀವನವನ್ನೇ ಸವೆಸಿದವರು. ಮೇಲಾಗಿ ಆರ್ಯಸಮಾಜವು ಕೈಗೊಂಡಿರುವ [ಮತ್ತು ಇಂದು ದುರ್ಬಲವಾಗಿರುವ] ಶುದ್ಧಿ ಮತ್ತು ಸಂಗಠನೆ ಹಿಂದೂ ಸಮಾಜದ ಕಾಯಕಲ್ಪ ಮಾಡಿಸುವಂತಹ ಔಷಧವಾಗಿದೆ. ಇದನ್ನು ಪಾಲಿಸದ ಹಿಂದೂ ಸಮಾಜ ಇಂದು ಸಂಕಷ್ಟಕ್ಕೆ ಸಿಕ್ಕಿದೆ. ಇವೆಲ್ಲವನ್ನೂ ಹೇಳುವ ಉದ್ದೇಶ್ಯವೆಂದರೆ, ಮೂಡ ನಂಬಿಕೆಗಳು ಮೂಡನಂಬಿಕೆಗಳೇ. ಅವುಗಳು ಜನಪ್ಪಿಯವಾಗಿದೆಯೆಂದು ಒಪ್ಪುವ ಹಾಗಿಲ್ಲ. ವಿಗ್ರಹರಾದನೆಯನ್ನು ಆರ್ಯಸಮಾಜವು ಒಪ್ಪಿದ್ದಲ್ಲಿ ಅದೊಂದು ಅನ್ಯ ಸಂಘಟನೆಗಳಂತೆ ಇರುತ್ತಿತ್ತೇ ಹೊರತು ಒಂದು ಆಂದೋಳನದ ರೀತಿಯಲ್ಲಿಲ್ಲ. ಇನ್ನೊಂದು ವಿಷಯ. ಉತ್ತಮ ಸಂಪ್ರದಾಯಗಳು ವೇದಾನುಕೂಲವಾಗಿದ್ದಲ್ಲಿ ಅದನ್ನು ಆರ್ಯಸಮಾಜ ವಿರೋದಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.