Pages

Thursday, April 22, 2010

ಭ್ರಮೆ

ಸ್ವರಚಿತಗೀತೆ: ಭ್ರಮೆ [ಕೆಳಗಿನ ಕೊಂಡಿಯನ್ನು ಚಿಟುಕಿಸಿ ಅಥವಾ ಕಾಪಿಮಾಡಿ ಅಡ್ರೆಸ್ ಬಾರ್ ಗೆ ಪೇಸ್ಟ್ ಮಾಡಿ ನೀವು ಕೇಳಬಹುದು]
ಗಾಯಕಿ: ಶ್ರೀಮತಿ ಲಲಿತಾರಮೇಶ್


http://www.binfire.com/rel/index.php?page=public_share_new&link=48ccec62840d76ccb3eb100374351c75

ಎಲ್ಲಿ ಹುಡುಕಲಿ ನಿನ್ನ

ಎಲ್ಲಿ ಹುಡುಕಲಿ ನಿನ್ನ
ನಾ ಹೇಗೆ ಅರ್ಚಿಸಲಿ?
ಯಾವ ಮಂತ್ರವಹೇಳಿ
ನಿನ್ನ ಮೆಚ್ಚಿಸಲಿ?

ನನ್ನಂತೆ ನಿನಗೂ
ಮಡಿಯಮಾಡಿಸಿ ನಾನು
ಹಸಿದು ಪೂಜೆಯ ಮಾಡಿ
ಪಡಿಯ ನಿಡುವೆ|

ಕಣ್ಮುಚ್ಚಿ ಕುಳಿತಿರುವ
ನಿನ್ನ ದೇಗುಲದಿ ಹುಡುಕಿ
ಕಾಣಲಾಗದೆ ಬಂದೆ
ಎಲ್ಲಿರುವೆ ತಂದೆ?

ಜಗವೆಲ್ಲ ಬೆಳಗುತ್ತ
ಜಗವ ರಕ್ಷಿಪ ನಿನ್ನ
ಹಣತೆಬೆಳಕಲಿ ಹುಡುಕಿ
ದೇಗುಲದಿ ಕೂಡಿಡುವೆ|

ಬಲ್ಲವರು ಹೇಳಿದರು
ಎಲ್ಲೆಲ್ಲು ನೀನಿರುವೆ|
ಅಹುದೇ ದೇವ ತೋರು
ನಿನ್ನ ರೂಪ|

ನನ್ನೊಳಗೆ ಇರುವಾ
ನಿನ್ನ ಮರೆತು ನಾನು
ಎಲ್ಲಿ ಕಾಣಲಿ ನಿನ್ನ
ನಿಜದ ರೂಪ?||

Wednesday, April 21, 2010

ಅರ್ಥಶೌಚ ಶ್ರೇಷ್ಠವಾದದ್ದು


ಸರ್ವೇಷಾಮೇವ ಶೌಚಾನಾಂ ಅರ್ಥಶೌಚಂ ಪರಂ ಸ್ಮೃತಮ್|
ಯೋರ್ಥೇ ಶುಚಿ: ಸ ಹಿ ಶುಚಿರ್ನ ಮೃದ್ವಾದಿಶುಚಿ: ಶುಚಿ:||


ಎಲ್ಲಾ ರೀತಿಯ ಶೌಚಗಳಲ್ಲಿ ಅರ್ಥಶೌಚ ಶ್ರೇಷ್ಠವಾದದ್ದು, ಯಾರು ಹಣಕಾಸಿನ ವ್ಯವಹಾರದಲ್ಲಿ ಶುಚಿಯೋ ಅವನೇ ಶುಚಿ, ಮೃತ್ತಿಕೆನೀರಿನಿಂದ ತೊಳೆದುಕೊಂಡ ಮಾತ್ರಕ್ಕೆ ಶುಚಿಯಲ್ಲ.
ಶೌಚವೆಂದರೆ ಶುದ್ಧಿ. ಮೈ, ಮಾತು ಮತ್ತು ಮನಸ್ಸುಗಳ ಶುದ್ಧಿ! ಬಾಹ್ಯ ಕೊಳೆಯನ್ನು ಸ್ನಾನ ಮಾಡಿ ಶುದ್ಧಿ ಮಾಡಿಕೊಳ್ಳಬಹುದು. ಎರಡನೆಯದು ಮಾತಿನ ಶುದ್ಧಿ. ಮಾತನ್ನು ಹತೋಟಿಯಲ್ಲಿಟ್ಟು ಕೊಳ್ಳುವುದು ಸ್ವಲ್ಪ ಕಷ್ಟವೇ ಸರಿ,ಎಂತಹ ಸಂದರ್ಭದಲ್ಲೂಇನ್ನೊಬ್ಬರಿಗೆ ನೋವುಂಟುಮಾಡದೆ ಸತ್ಯವೂ, ಪ್ರಿಯವೂ, ಹಿತವೂ ಆದ ಮಾತನ್ನಾಡುವುದು ವಾಕ್ ಶುದ್ಧಿ. ಇವೆರಡಕ್ಕಿಂತಕಠಿಣವಾದುದು ಮನ: ಶುದ್ಧಿ.ಈ ಮೂರೂ ಯಾರಿಗೆ ಶುದ್ಧವಾಗಿದೆಯೋ ಅವನು ತ್ರಿಕರಣಶುದ್ಧ.ಅರ್ಥಶೌಚವು ಮುಖ್ಯವಾಗಿಮನಸ್ಸಿಗೆ ಸಂಬಂಧಿಸಿದ್ದು. ಅನ್ಯಾಯ, ಮೋಸ, ವಂಚನೆ ಮಾಡದೆ ನ್ಯಾಯಯುತವಾದ ದುಡಿಮೆಯಿಂದ ಮನುಷ್ಯ ಜೀವನಮಾಡಿದರೆ, ಹಣಕಾಸಿನ ವ್ಯವಹಾರದ ಶುದ್ಧನಾಗಿದ್ದರೆ ಅವನೇ ಶುದ್ಧ.

Tuesday, April 20, 2010

ಗೃಹಿಣಿ ಇಲ್ಲದ ಮನೆಯು ಗೃಹವೆನಿಸುವುದಿಲ್ಲ

ನ ಗೃಹಂ ಗೃಹಮಿತ್ಯಾಹು: ಗೃಹಿಣೀ ಗೃಹ ಮುಚ್ಚ್ಯತೇ|
ಗೃಹಂ ತು ಗೃಹಿಣೀಹೀನಂ ಕಾಂತಾರಾದತಿರಿಚ್ಯತೇ||

ಗೃಹಿಣಿ ಇಲ್ಲದ ಮನೆಯು ಗೃಹವೆನಿಸುವುದಿಲ್ಲ. ಗೃಹಿಣಿ ಇದ್ದರೆ ಗೃಹವೆಂದು ಕರೆಯುತ್ತಾರೆ. ಗೃಹಿಣಿಯಿಲ್ಲದ ಮನೆಯು ಕಾಡಿಗಿಂತ ಕಡೆಯೇ ಸರಿ.

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ.
ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ. ಈ ಹಾಡನ್ನು ತಮಾಶೆಗಾಗಿ ಹಾಡಿಲ್ಲ. ಹೆಂಡತಿಯ ಮಹತ್ವವನ್ನು ಈ ಹಾಡೂ ಕೂಡ ಸಾರಿ ಹೇಳುತ್ತೆ. ನಮ್ಮ ಪೂರ್ವಜರು ಮನೆಯೊಡತಿಯನ್ನು "ಗೃಹಲಕ್ಷ್ಮಿ" ಎಂದು ಕರೆದರು. ಗೃಹಿಣಿ ಎಂದೂ ಕರೆದರು. ಪತ್ನಿಯ ಪತಿಯನ್ನು ಗೃಹಸ್ತನೆಂದು ಕರೆದರೂ ಸಹ ಮನೆಯೊಂದು ಶೋಭಿಸಬೇಕಿದ್ದರೆ ಅದು ಮನೆಯೊಡತಿಯಿಂದ ಮಾತ್ರವೇ ಸಾಧ್ಯ ವೆಂಬುದು ಎಲ್ಲರ ಅನುಭವದ ಮಾತು. ಮನೆಯ ಯಜಮನನಾದರೋ ಮನೆಗೆ ಬೇಕಾದ ಎಲ್ಲವನ್ನೂ ತರಬಲ್ಲ. ಆದರೆ ಅದರ ಸದುಪಯೋಗ ಗೃಹಿಣಿಯಿಂದ ಮಾತ್ರ ಸಾಧ್ಯ. ಮನೆಗೆ ಬಂದ ಅತಿಥಿ ಸತ್ಕಾರ,ಮಕ್ಕಳ ಲಾಲನೆ ಪೋಷಣೆ, ಕುಟುಂಬದ ಯೋಗ ಕ್ಷೇಮ, ಮನೆಯ ಜೋಪಾನ, ಮನೆಯಲ್ಲಿ ಲವಲವಿಕೆ, ಹಾಡುಹಸೆ, ಪೂಜೆ-ಪುನಸ್ಕಾರ, ದಾನ-ಧರ್ಮ- ಯಾವ ಕೆಲಸವಾದರೂ ಅದು ಗೃಹಿಣಿಯಿಂದ ಮಾತ್ರ ಸಾಧ್ಯ. ಅಂತಹ ಮಹತ್ವದ ಹೊಣೆ ಇರುವ ಗೃಹಿಣಿಯರು ಗೃಹ ಬಿಟ್ಟು ಹೊರಗೆ ದುಡಿಯುವ ಪರಿಸ್ಥಿತಿ! ಅದು ಅನಿವಾರ್ಯವೋ ಅಥವ ಹಣದ ವ್ಯಾಮಹವೋ, ಅಂತೂ ಇಂದಿನ ದಿನಗಳಲ್ಲಿ ಅನೇಕ ಗೃಹಿಣಿಯರ ಹೊಣೆ ಹಿಂದಿಗಿಂತಲೂ ಅತಿ ಹೆಚ್ಚು. ಕೇವಲ ಹಣಬೇಕಾದರೆ ಮನೆಯ ನೆಮ್ಮದಿಯನ್ನೇ ಬಲಿಕೊಡಬೇಕಾಗುತ್ತದೆ. ಪತಿ-ಪತ್ನಿಯರಿಬ್ಬರೂ ಉದ್ಯೋಗಮಾಡುವ ಅನೇಕ ಕುಟುಂಬಗಳಲ್ಲಿ ಜೀವನ ಬಲು ಯಾಂತ್ರಿಕ. ಜೀವನ ಪೂರ್ತಿ ಹೀಗೆಯೇ ದುಡಿದು ನೆಮ್ಮದಿಯಿಂದ ಇರುವುದಾದರೂ ಎಂದು? ಈ ವಿಷಯದಲ್ಲಿ ಪತಿ-ಪತ್ನಿಯರಲ್ಲಿ ಚಿಂತನ-ಮಂಥನ ನಡೆಯಬೇಕು. ಏನಂತೀರಾ?
ನಮ್ಮ ಸಂಸ್ಕೃತಿಯಲ್ಲಿ ಗೃಹಿಣಿಯ ಮಹತ್ವದ ಬಗ್ಗೆ ಹೀಗೆ ಹೇಳಿದ್ದರೆ, ಅನ್ಯ ಸಂಸ್ಕೃತಿಯಲ್ಲಿ ಲಿವ್ ಟುಗೆದರ್, ಬೇಸರವಾದರೆ ಡೈವರ್ಸ್! ಯೋಚನೆ ಮಾಡಿ, ನಮ್ಮ ಕುಟುಂಬದ ಕಲ್ಪನೆ ಬೇರೆಲ್ಲಿ ಸಿಗಲು ಸಾಧ್ಯ? ಇಂತಹ ಶ್ರೇಷ್ಠ ಸಂಸ್ಕೃತಿಯು ನಮ್ಮದೆಂಬ ಬಗ್ಗೆ ಹೆಮ್ಮೆ ಪಡಬೇಡವೇ?

Monday, April 19, 2010

ಆತ್ಮಜ್ಞಾನದಿಂದ ಮುಕ್ತಿಯೇ ಹೊರತು ಮುಂಡನದಿಂದಲ್ಲ

ದಾನೇನ ಪಾಣಿರ್ನ ತು ಕಂಕಣೇನ
ಸ್ನಾನೇನ ಶುದ್ಧಿರ್ನ ತು ಚಂದನೇನ|
ಮಾನೇನ ತೃಪ್ತಿರ್ನ ತು ಭೋಜನೇನ
ಜ್ಞಾನೇನ ಮುಕ್ತಿರ್ನ ತು ಮುಂಡನೇನ||

ದಾನದಿಂದ ಕೈ ಶೋಭಿಸುತ್ತದೆಯೇ ಹೊರತು ಬಳೆಯಿಂದಲ್ಲ
ಸ್ನಾನದಿಂದ ಶುದ್ಧಿಯೇ ಹೊರತು ಗಂಧ-ಚಂದನ ಲೇಪನದಿಂದಲ್ಲ
ಸ್ವಾಭಿಮಾನದಿಂದ ತೃಪ್ತಿಯೇ ಹೊರತು ಭೋಜನದಿಂದಲ್ಲ
ಆತ್ಮಜ್ಞಾನದಿಂದ ಮುಕ್ತಿಯೇ ಹೊರತು ಮುಂಡನದಿಂದಲ್ಲ.

ದಾನದಿಂದ ಕೈಗಳಿಗೆ ಶೋಭೆ ಬರುತ್ತದೆಯೇ ಹೊರತು ಮೈಮೇಲೆ ಚಿನ್ನದಾಭರಣ ಹಾಕಿಕೊಂಡು ಇತರರಿಗೆ ತೋರಿಸಿಕೊಂಡರೆ ಶೋಭಿಸುವಿದಿಲ್ಲ. ಸ್ನಾನವನ್ನೇ ಮಾಡದೆ ಮೈಗೆ ಸೆಂಟ್ ಬಳಿದುಕೊಂಡರೆ ಸಾಕೇ? ಶುದ್ಧನೀರಿನಿಂದ ಸ್ನಾನ ಮಾಡಿದಾಗ ಮಾತ್ರ ಶರೀರ ಶುದ್ಧವಾಗುತ್ತದೆ. ಮನಶುದ್ಧಿಯ ವಿಚಾರವೇ ಬೇರೆ. ವಿದ್ವಾಂಸರಿಗೆ ಸನ್ಮಾನದಿಂದ ತೃಪ್ತಿಯೇ ಹೊರತು ಪುಷ್ಕಳವಾದ ಭೋಜನದಿಂದಲ್ಲ. ಊಟ ಹೊಟ್ಟೆ ತುಂಬಲು ಮಾತ್ರ. ಕೇವಲ ತಲೆಬೋಳಿಸಿಕೊಂಡು ಕಾವಿ ಉಟ್ಟರೆ ಸಾಲದು ಆತ್ಮಜ್ಞಾನವನ್ನು ಪಡೆದುಕೊಂಡರೆ ಮಾತ್ರವೇ ಮುಕ್ತಿ.
-

Sunday, April 18, 2010

ಸನ್ಯಾಸಿಗಳಿಗೆ ಶಾಂತಿಯೇ ಅಮೃತ

ಕಾವ್ಯಂ ಸುಧಾ ರಸಜ್ಞಾನಾಂ ಕಾಮಿನಾಂ ಕಾಮಿನೀ ಸುಧಾ|
ಧನಂ ಸುಧಾ ಸಲೋಭಾನಾಂ ಶಾಂತಿ: ಸಂನ್ಯಾಸಿನಾಂ ಸುಧಾ||

ರಸವನ್ನು ಬಲ್ಲವರಿಗೆ ಕಾವ್ಯಗಳೇ ಅಮೃತ
ಕಾಮಿಗಳಿಗೆ ಕಾಮಿನಿಯೇ ಅಮೃತ
ಲೋಭಿಗಳಿಗೆ ಹಣವೇ ಅಮೃತ
ಆದರೆ ಸನ್ಯಾಸಿಗಳಿಗೆ ಶಾಂತಿಯೇ ಅಮೃತ.

ಶೃಂಗಾರ, ವೀರ, ಕರುಣ ಮುಂತಾದ ನವರಸಗಳನ್ನು ಆಸ್ವಾದನೆ ಮಾಡುವ ಕವಿ-ವಿದ್ವಾಂಸರಿಗೆ ಕಾವ್ಯಗಳೇ ಅಮೃತವಲ್ಲವೇ? ಕಾವ್ಯವನ್ನೇ ಅವರು ಆಸ್ವಾದಿಸುತಾರೆ. ಕಾಮುಕರಿಗೆ ಸದಾ ಕಾಮಿನಿಯ ಚಿಂತೆ, ಅದೇ ಅವರಿಗೆ ಅಮೃತ. ಸದಾ ಹಣ-ಹಣ ವೆಂದು ಹೆಣಗಾಡುವ ಲೋಭಿಗೆ ಹಣವೇ ಅಮೃತ. ಸರ್ವಸಂಗಪರಿತ್ಯಾಗಿಗಳಾದ ಸಂನ್ಯಾಸಿಗೆ ಸದಾ ಆತ್ಮಜ್ಞಾನದ ಸಾಧನೆ ಮಾಡುತ್ತಾ ಅವನಿಗೆ ಶಾಂತಿಯೇ ಅಮೃತವು.

Saturday, April 17, 2010

ಆತ್ಮವಿಮರ್ಶೆ

ಪ್ರತ್ಯಹಂ ಪ್ರತ್ಯವೇಕ್ಷೇತ ನರಶ್ಚರಿತಮಾತ್ಮನ:|
ಕಿಂ ನ ಮೇ ಪಶುಭಿಸ್ತುಲ್ಯಂ ಕಿಂ ನು ಸತ್ಪುರುಶೈರಿತಿ||

ಪ್ರತಿದಿನವೂ ರಾತ್ರಿ ಮಲಗುವಾಗ ತನ್ನ ಆದಿನದ ನಡತೆಯನ್ನು ತಾನೇ ವಿಮರ್ಶೆಮಾಡಿಕೊಳ್ಳಬೇಕು, " ಇಂದು ನಾನು ಪಶುಗಳಂತೆ ನಡೆದುಕೊಂಡಿಲ್ಲ, ತಾನೆ? ಸತ್ಪುರುಷನಂತೆ ಸ್ವಲ್ಪವಾದರೂ ಇಂದು ನಡೆದುಕೊಂಡಿದ್ದೇನೆಯೇ?" - ಎಂದು.

"ಬೆಳಗಿನಿಂದ ರಾತ್ರಿ ವರಗೆ ನಾನು ಏನೆಲ್ಲಾ ಮಾಡಿರುತ್ತೇನೆ, ಯಾರ್ಯಾರ ಜೊತೆ ಸಂತಸವಾಗಿ ಕಾಲ ಕಳೆದಿರುತ್ತೇನೆ, ಯಾರ್ಯಾರ ಜೊತೆ ಬೇಸರದಿಂದ ವ್ಯವಹರಿಸಿರುತ್ತೇನೆ, ಎಷ್ಟು ಕೆಲಸವನ್ನು ನ್ಯಾಯಯುತವಾಗಿ ಮಾಡಿದೆನು, ಅನ್ಯಾಯ ಮಾರ್ಗದಲ್ಲಿ ನಡೆದಿರುತ್ತೇನೆಯೇ? ವಿನಾಕಾರಣ ಯಾರಿಗೆ ನೋವುಂಟು ಮಾಡಿದೆ? ನನ್ನಿಂದ ಯಾರಿಗಾದರೂ ಸ್ವಲ್ಪವಾದರೂ ಪ್ರಯೋಜನವಾಗಿದೆಯೇ? ನಾನು ಮನುಷ್ಯತ್ವದಿಂದ ವರ್ತಿಸಿದ್ದೇನೆಯೇ? ಅಥವಾ ನನ್ನಿಂದ ತಪ್ಪಾಗಿದ್ದರೆ ಅದು ನಾಳೆ ಪುನರಾವರ್ತಿತವಾಗಬಾರದು" - ಹೀಗೆ ರಾತ್ರಿ ಮಲಗುವ ಮುಂಚೆ ೫-೧೦ ನಿಮಿಷಗಳು ಧ್ಯಾನಸ್ಥಿತಿಯಲ್ಲಿ ಕುಳಿತು ಆತ್ಮವಿಮರ್ಶೆ ಮಾಡಿಕೊಂಡಿದ್ದೇ ಆದರೆ ಪ್ರತಿದಿನವೂ ನಮ್ಮನ್ನು ಇನ್ನೂ ಹೆಚ್ಚು ಹೆಚ್ಚು ಸುಧಾರಿಸಿಕೊಳ್ಳಬಲ್ಲೆವು.

Friday, April 16, 2010

ದೂರದಿಂದ ನೋಡಿದಾಗ ಬೆಟ್ಟ ಸುಂದರ

ದೂರತ: ಪರ್ವತೋ ರಮ್ಯ:
ಬಂಧೂ ರಮ್ಯ: ಪರಸ್ಪರಮ್|
ಯುದ್ಧಸ್ಯ ಚ ಕಥಾ ರಮ್ಯಾ
ತ್ರೀಣಿ ರಮ್ಯಾಣಿ ದೂರತ: ||

ದೂರದಿಂದ ನೋಡಿದಾಗ ಬೆಟ್ಟ ಸುಂದರ.
ದೂರದಿಂದ ನೋಡಿದಾಗ ನೆಂಟರಿಷ್ಟರು ಸುಂದರ.
ದೂರದಿಂದ ನೋಡಿದಾಗ ಯುದ್ಧದ ಕಥೆ ಸುಂದರ.
ಹೀಗೆ ಈ ಮೂರೂ ದೂರದಿಂದ ಮಾತ್ರ ಸುಂದರ.


ಎಷ್ಟು ಅರ್ಥಗರ್ಭಿತವಲ್ಲವೇ? ದೂರದಿಂದ ಸುಂದರವಾಗಿ ಕಾಣುವ ಬೆಟ್ಟವನ್ನು ಹತ್ತುವಾಗ ಅಲ್ಲಿನ ಮುಳ್ಳು ಕಲ್ಲು, ಹಾವು, ಚೇಳುಎಲ್ಲವೂ ಭಯಂಕರವಾಗಿ ಕಾಣುತ್ತವೆ. ದೂರದಲ್ಲಿರುವ ನೆಂಟರಿಷ್ಟರ ಬಗ್ಗೆ ಎಂತಹಾ ಭವ್ಯ ಕಲ್ಪನೆಗಳಿರುತ್ತವೆಯೋ ಅವುಹತ್ತಿರಹೋದಾಗ ಕಾಣದೆ ಇರಬಹುದು, ಇನ್ನೂ ಹತ್ತಿರಹೋದರಂತೂ ಅವರ ಅವಗುಣಗಳೇ ಕಾಣಬಹುದು. ಹಾಗೆಯೇ ಯುದ್ಧದಕಥೆ ಕೇಳಲು ಸೊಗಸು, ಆದರೆ ಪ್ರತ್ಯಕ್ಷ ಯುದ್ಧವನ್ನು ಕಣ್ಣಾರೆ ಕಂಡರೆ ಅದು ನರಕಸದೃಶವೇ ಸರಿ.

Thursday, April 15, 2010

ಸಂಪದದಲ್ಲಿ ಕಾಣಿಸಿಕೊಂಡ ವೇದಸುಧೆ

[ಶ್ರೀ ಶ್ರೀಕಾಂತಮಿಶ್ರಕೋಟಿಯವರು ಸಂಪದದಲ್ಲಿ ವೇದಸುಧೆಯ ಪರಿಚಯ ಮಾಡಿದ್ದಾರೆ.ವೇದದ ಬಗ್ಗೆ ಇನ್ನೂ ಹೆಚ್ಚಿನ ಮಹತ್ವದ ಬರಹಗಳು ಮುಂದೆ ಬರಬಹುದೆಂಬುದು ಅವರ ಅಭಿಲಾಶೆಯಾಗಿದೆ. ಅವರ ಮಾತುಗಳನ್ನೇ ಇಲ್ಲಿ ಪ್ರಕಟಿಸಲಾಗಿದೆ]

ದೇಶದ ಅಧ್ಯಾತ್ಮಿಕ ಪರಂಪರೆ , ಸನಾತನ ಮೌಲ್ಯಗಳು , ವೇದಗಳು ಅಭಿರುಚಿ , ಅಭಿಮಾನ ಇರುವ ಸಂಪದಿಗ ಹರಿಹರಪುರ ಶ್ರೀಧರ್ ಅವರ ಬ್ಲಾಗ್ , ಅಶ್ವಮೇಧ ಯಾಗ ಶಬ್ದದಲ್ಲಿನ ಅಶ್ವ ಕುದುರೆ ಅಲ್ಲವಂತೆ , ಇಂದ್ರಿಯಗಳಂತೆ ಅವುಗಳನ್ನ ಹತೋಟಿಯಲ್ಲಿಡುವುದು ಅಂತ ಲೂ ಇನ್ನೊಂದೆಡೆ ಅಶ್ವ ಎಂದರೆ ರಾಷ್ಟ್ರ ಅಂತಲೂ ಅಶ್ವಮೇಧ ಅಂದರೆ ರಾಷ್ಟ್ರಗಳನ್ನು ಒಗ್ಗೂಡಿಸುವುದು ಅಂತಲೂ ಹೇಳಿದ್ದಾರೆ. ಆದರೆ ಅಶ್ವಮೇಧಯಾಗದಲ್ಲಿ ಕುದುರೆಯ ಪಾತ್ರ ಇದ್ದೇ ಇದೆಯಲ್ಲ ? ರಾಜರುಗಳ ಕತೆಗಳಲ್ಲಿ , ಅಶ್ವಮೇಧ ಯಾಗದ ವಿಧಿವಿಧಾನಗಳಲ್ಲಿ ? ಇದು ನನ್ನ ಪ್ರಶ್ನೆ .
"ಮಾಡುವ ಕೆಲಸ ಯಾವುದೇ ಇರಬಹುದು ಅದನ್ನು ಶ್ರೇಷ್ಠತಮವನ್ನಾಗಿ ಮಾಡಿಗಾಗ ಅದೂ ಯಜ್ಞವೇ ಆಗುತ್ತದ" ಎಂದು ಇಲ್ಲಿನ ಬರಹವೊಂದರಲ್ಲಿ ಲೇಖಕರು ಹೇಳಿದ್ದಾರೆ .

ಈ ಬ್ಲಾಗಿನಲ್ಲಿ ಈವರೆಗೆ ವೇದಗಳ ಬಗೆಗೆ ಅಭಿಮಾನ ವ್ಯಕ್ತವಾಗಿದೆ , ವೇದಗಳ ಬಗೆಗೆ ಏನೂ ಮಹತ್ವದ ಮಾಹಿತಿ ಬಂದಿಲ್ಲ . ಮುಂದೆ ಬರಬಹುದು ಎಂದು ಆಶಿಸೋಣ .

[ಬರಹದ ಈ ಕೆಳಗಿನ ಕೊಂಡಿಯನ್ನು ಕಾಪಿ ಮಾಡಿ ಅಡ್ರೆಸ್ ಬಾರ್ ನಲ್ಲಿ ಪೇಸ್ಟ್ ಮಾಡಿ ಬರಹವನ್ನು ಓದಬಹುದು.]
http://sampada.net/blog/shreekantmishrikoti/12/04/2010/24804

ವೇದದಲ್ಲಿ ಮಾನವೀಯ ನೆಲೆ


ಸಮಾನೀ ಪ್ರಪಾ ಸಹವೋsನ್ನಭಾಗಃ ಸಮಾನೇ ಯೋಕ್ತ್ರೇ ಸಹ ವೋ ಯುನಜ್ಮಿ|
ಸಮ್ಯಂಚೋsಗ್ನಿಂ ಸಪರ್ಯತಾರಾ ನಾಭಿಮಿವಾಭಿತಃ||
(ಅಥರ್ವ.೩.೩೦.೬.)
ಜಲಾಶಯಗಳು ನಿಮ್ಮೆಲ್ಲರಿಗೂ ಸಮಾನವಾಗಿ ಸೇರಿದವುಗಳಾಗಿವೆ. ನಿಮ್ಮೆಲ್ಲರ ಜಲಾಶಯಗಳು ಸಮಾನವಾಗಿರಲಿ. ನಿಮ್ಮ ಭೋಜನಗಳು ಒಂದಿಗಿರಲಿ. ಸಮಾನವಾದ ನೊಗದಲ್ಲಿ ನಿಮ್ಮನ್ನು ಒಂದಿಗೆಯೇ ಹೂಡಿದ್ದೇನೆ. ಗುಂಭವನ್ನು ಅರೆಕಾಲುಗಳು ಸುತ್ತಲಿಂದಲೂ ಆವರಿಸಿಕೊಂಡಿರುವಂತೆ ಒಂದುಗೂಡಿ ಜಗನ್ನಾಯಕನನ್ನು ಆರಾಧಿಸಿರಿ.

ಇದು ‘ನನ್ನ’ ಹೊಲ-ಗದ್ದೆ. ಅಲ್ಲಿ ನನ್ನ ಭಾವಿಗೆ ನಾನು ಪಂಪ್ ಸೆಟ್ ಹಾಕಿದರೆ ಕೇಳಲು ನೀನು ಯಾರು? - ಎಂದು ಮುಂದುವರೆದಾಗ ಪಕ್ಕದ ಹೊಲದ ಭಾವಿ ಒಣಗಿದ ಮೇಲೆ ಪಕ್ಕದ ಭೂಮಿಯವನು ಏನು ಮಾಡಬೇಕು? ಕೊಳವೇಭಾವಿಯೇ ಗತಿ. ಈಗ ಮೊದಲಿನವನ ಭಾವಿಯ ಕಥೆ ಮುಗಿದಂತೆ! ಅವನು ಇನ್ನೂ ಆಳವಾದ ಕೊಳವೆಭಾವಿ ಹಾಕಿಸಿದಾಗ ಪಕ್ಕದವನ ಕೊಳವೇಭಾವಿಯೂ ಒಣಗುತ್ತದೆ. ಈ ಧೋರಣೆಯಿಂದ ಪ್ರಾರಂಭವಾದ ಅಂತರ್ಜಲದ ಶೋಷಣೆ ಇಂದು ಯಾವ ಮಟ್ಟಕ್ಕೆ ಬಂದಿದೆಯೆಂದರೆ, ೮೦೦ರಿಂದ ೧೦೦೦ ಅಡಿ ಭೂಮಿಯನ್ನು ಕೊರೆದರೂ ನೀರು ಸಿಕ್ಕುವ ಸಾಧ್ಯತೆಯಿಲ್ಲವೆಂದಾಗಿದೆ. ನಮ್ಮೆಲ್ಲರಿಗೂ ಆಶ್ರಯ ನೀಡುತ್ತಿರುವುದು ಒಂದೇ ಭೂಮಿ. ಭೂಮಿಯಳಗಿನ ಜಲಾಶಯಗಳು ಭೂಮಿಯ ಮೇಲಿನಂತೆ ಚಕ್ಕುಬಂದಿಗಳಿಗೆ ಒಳಪಟ್ಟಿಲ್ಲ. ಅವನ್ನು ರಕ್ಷಿಸುವ ಭಾರ ಎಲ್ಲರಿಗೂ ಸೇರಿದ್ದಾಗಿದೆ. ಅದರ ಶೋಷಣೆಯ ವಿರುದ್ಧ ದನಿಯೆತ್ತಲು ಎಲ್ಲರಿಗೂ ಹಕ್ಕಿದೆ. ಈ ಸರಳ ಸತ್ಯವನ್ನೇ ಈ ಮಂತ್ರ ನೆನಪಿಸುತ್ತಿದೆ. ಗೊಡ್ಡು ಆಚಾರ-ವಿಚಾರಗಳಲ್ಲಿ ತಮ್ಮನ್ನು ತಾವು ಕಳೆದುಕೊಂಡವರು ಸ್ಪೃಶ್ಯ-ಅಸ್ಪೃಶ್ಯ ಎಂಬ ಮಾನವದ್ರೋಹೀ ಭಾವನೆಗಳಿಗೆ ಕಾವನ್ನು ಕೊಡುತ್ತಾ, ನೀರಿನ ವಿಚಾರಕ್ಕೂ ಅದನ್ನೇ ವಿಸ್ತರಿಸಿ ಮಾಡಿರುವ ಅನ್ಯಾಯಕ್ಕೆ ಲೆಕ್ಕವಿಲ್ಲ. ಇಂದಿಗೂ ಕೆಲವೆಡೆ ಈ ದುಷ್ಟ ಪದ್ಧತಿ ಜೀವಂತವಾಗಿದೆಯೆಂದರೆ ಆ ಗೊಡ್ಡು ಪದ್ಧತಿಗಳ ಆಳವನ್ನು ಊಹಿಸಬಹುದು. ವೇದವಿದನ್ನು ಸ್ಪಷ್ಟನುಡಿಗಳಲ್ಲಿ ನಿಷೇಧಿಸಿರುವಾಗ, ಸ್ಪೃಶ್ಯಾಸ್ಪೃಶ್ಯ ಪಿಡುಗಿನ ಮೂಲವನ್ನು ವೇದಗಳಲ್ಲಿ ಗುರುತಿಸುವುದು ತಮ್ಮನ್ನು ತಾವು ಬುದ್ಧಿಜೀವಿ(?)ಗಳೆಂದು ಕರೆದುಕೊಳ್ಳುವವರಿಗೆ ಮಾತ್ರ ಸಾಧ್ಯವೇನೋ?!!

ಮಾಂಸಾಹಾರಿಗಳು ಯಾರೊಡನೆಯೂ ಕುಳಿತು ಊಟ ಮಾಡಿಬಿಡುತ್ತಾರೆ. ಆದರೆ, ಸಸ್ಯಾಹಾರಿಗಳಿಗೆ ಇದು ಸಾಧ್ಯವಿಲ್ಲ. ಹಾಗಾಗಿ ನಿಮ್ಮ ಭೋಜನ ಒಂದಿಗಿರಲಿ‌ಎಂದಾಗ ಎಲ್ಲರೂ ಸಸ್ಯಾಹಾರಿಗಳೇ ಆಗಬೇಕಾಗುತ್ತದೆ.

-ವೇದಾಧ್ಯಾಯೀ ಸುಧಾಕರಶರ್ಮ

Tuesday, April 13, 2010

ವಿದ್ವಾಂಸರೇ, ಸಮಾಜದಲ್ಲಿ ಕೆಳಗೆ ಬಿದ್ದವರನ್ನು ಮೇಲೆತ್ತಿ

[ಚಿತ್ರ ಕೃಪೆ: ಅಂತರ್ಜಾಲ]

ನಾಳೆ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ದಿನಾಚರಣೆ.ಸಹಜವಾಗಿ ನಮ್ಮ ದೇಶದಲ್ಲಿನ ದಲಿತ ಸಮುದಾಯಕ್ಕೆ ಸೇರಿದ ಜನಾಂಗದವರು ಅತ್ಯಂತ ಉತ್ಸಾಹದಿಂದ ಅಂಬೇಡ್ಕರ್ ಜನ್ಮದಿನವನ್ನು ಆಚರಿಸುತ್ತಾರೆ. ದುರ್ದೈವವೆಂದರೆ ನಮ್ಮ ದೇಶದ ಸಂವಿದಾನ ರಚನೆಯಲ್ಲಿ ಹಿರಿಯ ಪಾತ್ರ ವಹಿಸಿದ ಅಂಬೇಡ್ಕರ್ ಜನ್ಮದಿನಾಚರಣೆಯಲ್ಲಿ ಉಳಿದ ಜನಾಂಗದವರು ಉತ್ಸಾಹದಿಂದ ಪಾಲ್ಗೊಳ್ಳುವುದಿಲ್ಲ. ಅದೇನೇ ಇರಲಿ, ನಮ್ಮ ದೇಶದಲ್ಲಿ ವೇದ-ಉಪನಿಷತ್ತುಗಳು ಒಂದು ವರ್ಗದ ಸ್ವತ್ತೆಂಬಂತೆ ಬಿಂಬಿತವಾಗಿದ್ದು ಇಂದು ದಲಿತಸಮುದಾಯವು ವೇದವನ್ನಾಗಲೀ, ನಮ್ಮ ಪರಂಪರೆಯನ್ನಾಗಲೀ ವಿರೋಧಮಾಡುವುದೇ "ದಲಿತ ಚಳುವಳಿ" ಎಂಬಂತಾಗಿ ವೇದದ ಮತ್ತು ನಮ್ಮ ಪರಂಪರೆಯ ನಿಜವಾದ ಅರಿವಿನಿಂದ ಇಡೀ ಸಮಾಜವು ವಂಚಿತವಾಗುತ್ತಿದೆಯಲ್ಲಾ!! ಎಂಬ ನೋವು ನನ್ನಲ್ಲಿ ಕಾಡುತ್ತದೆ. ಈ ದಿಕ್ಕಿನಲ್ಲಿ ಚಿಂತನೆ ಮಾಡುತ್ತಾ ನನ್ನ ಕೆಲವು ವಿಚಾರಗಳನ್ನಿಡುವೆ.

* ಮನೆಯಲ್ಲಿ ಮಗುವೊಂದು ಕಕ್ಕಸು ಮಾಡಿಕೊಂಡು, ಅದರಮೇಲೆಯೇ ತನ್ನ ಕೈಗಳಿಂದ ರಪ ರಪ ಬಡಿಯುತ್ತದೆ.ಕೈಯೆಲ್ಲಾ ಹೊಲಸಾಗುತ್ತದೆ. ಅದೇ ಕೈಯನ್ನು ಮೈಮೇಲೆಲ್ಲಾ ಇಟ್ಟುಕೊಳ್ಳುತ್ತದೆ. ಅದರ ತಾಯಿ ಹತ್ತಿರದಲ್ಲಿಲ್ಲ. ನೋಡಿದವರೆಲ್ಲಾ ಅಸಹ್ಯಪಟ್ಟುಕೊಂಡು ಅದರ ತಾಯಿಯನ್ನಷ್ಟು ಬೈದುಕೊಳ್ಳುತ್ತಾರೆ. ತಾಯಿ ಬರುತ್ತಾಳೆ. ಮಗುವನ್ನು ನೋಡಿ " ಅಯ್ಯೋ ಕಂದ, ಮೈಯೆಲ್ಲಾ ಕಕ್ಕ ಮಾಡಿಕೊಂಡು ಬಿಟ್ಟೆಯಲ್ಲೋ" ಎಂದು ಮೃದುವಾಗಿ ಅದನ್ನು ಎತ್ತಿಕೊಂಡು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಸಿ , ಬಟ್ಟೆ ಹಾಕಿ ಮುದ್ದಾಡುತ್ತಾಳೆ. ಹೀಗೆ ಒಂದು ಮಗುವನ್ನು ಶುಚಿಗೊಳಿಸುವ ತಾಯಿಯನ್ನು ನಾವು "ಮಾತೃ" ಎಂದು ಕರೆದು ಅವಳಿಗೆ ಅತ್ಯಂತ ಎತ್ತರದ ಸ್ಥಾನವನ್ನು ಕೊಡುತ್ತೇವೆ. ಕಾರಣ ಮಗುವಿನ ಮೇಲಿನ ತಾಯಿಯ ಮಮತೆ, ಪ್ರೀತಿ ಅವಳಿಗೆ ಸಮಾಜದಲ್ಲಿ ಒಂದು ಸ್ಥಾನವನ್ನೇ ಕಲ್ಪಿಸುತ್ತದೆ.
ಒಂದು ನಗರ. ಇಡೀ ದಿನವೆಲ್ಲಾ ಸಹಸ್ರಾರು ಜನರು ಮಾಡಿದ ಹೊಲಸೆಲ್ಲಾ ಬೆಳಗಾಗುವಾಗ ಮಾಯವಾಗಿರುತ್ತದೆ. ರಸ್ತೆಯಲ್ಲಿದ್ದ ಗಲೀಜೆಲ್ಲಾ ಕ್ಲೀನ್ ಆಗಿ ಕಸ ಕಡ್ದಿಗಳಿರುವುದಿಲ್ಲ. ವಾಸನೆ ಹೊಡೆಯುತ್ತಿದ್ದ ಚಿರಂಡಿ ಮತ್ತೆ ಮತ್ತೆ ಶುಚಿಯಾಗುತ್ತದೆ. ಇದನ್ನೆಲ್ಲಾ ಮಾಡುವವರಾರು? ಅವನಿಗೆ ನಾಮಕರಣ ವಾಗಿದೆ " ಜಾಡಮಾಲಿ". ಸಾಮಾನ್ಯವಾಗಿ ಅತ್ಯಂತ ಕಳಪೆ ಕೆಲಸವೆಂದು ಸಾಮಾನ್ಯರು ಭಾವಿಸುವ ಕೆಲಸ [ ನನ್ನ ದೃಷ್ಟಿಯಲ್ಲಿ ಅದೂಂದು ಯಜ್ಞ] ಜಾಡಮಾಲಿಗೆ ನಮ್ಮ ಸಮಾಜವು ಕೊಟ್ಟಿರುವ ಸ್ಥಾನ? ಅತ್ಯಂತ ಕನಿಷ್ಟ.
ನೋಡಿ ಒಂದು ಮಗುವನ್ನು ಶುಚಿಗೊಳಿಸುವ ತಾಯಿಯು ಸಮಾಜದಲ್ಲಿ ಅತ್ಯಂತ ಶ್ರೇಷ್ಠ ಸ್ಥಾನವನ್ನು ಹೊಂದಿದ್ದರೆ, ಸಹಸ್ರಾರು ಜನರ ಹೊಲಸನ್ನು ಶುಚಿಗೊಳಿಸುವ ಜಾಡಮಾಲಿಗೆ ಅತ್ಯಂತ ಕನಿಷ್ಟತಮ ಸ್ಥಾನ!!
ಯೋಚಿಸಿ ನೋಡಿ, ನಾಲ್ಕು ದಿನ ನಿಮ್ಮ ರಸ್ತೆಯಲ್ಲಿ ಜಾಡಮಾಲಿ ಬಾರದಿದ್ದರೆ ನಿಮ್ಮ ನಗರದ ಸ್ಥಿತಿ ಏನಾದೀತು? ಕೊಳೆತು ನಾರುತ್ತಾ ಜನರೆಲ್ಲಾ ಹಿಡಿ ಶಾಪವನ್ನು ಹಾಕುತ್ತಾರಲ್ಲವೇ? ಹಾಗಾದರೆ ಜಾಡಮಾಲಿಯ ಸ್ಥಾನದ ಅರಿವು ಈಗಲಾದರೂ ಆದೀತೇ?

* ಬೆಂಗಳೂರಿನ ವೇದಾಧ್ಯಾಯೀ ಸುಧಾಕರ ಶರ್ಮರು ಕಳೆದ ವರ್ಷ ಹಾಸನಕ್ಕೆ ಬಂದಿದ್ದರು. ಕಾರೊಂದರಲ್ಲಿ ನಾವು ಮೂರ್ನಾಲ್ಕು ಜನ ಪ್ರಯಾಣಿಸುತ್ತಿದ್ದೆವು. ನಾನು ಸಹಜವಾಗಿ ಶರ್ಮರನ್ನು ಕೇಳಿದೆ" ಶರ್ಮರೇ, ಎಲ್ಲರಿಗಾಗಿ ವೇದ ವೆಂಬ ಪ್ರಚಾರ ಮಾಡುತ್ತಿದ್ದೀರಲ್ಲಾ, ನಿಮ್ಮೊಡನೆ ಬ್ರಾಹ್ಮಣೇತರರು ವೇದ ಪ್ರಚಾರದಲ್ಲಿ ಕೈ ಜೋಡಿಸಿದ್ದಾರೆಯೇ?
ಶರ್ಮರು ಹೇಳಿದರು" ಬೇರೆಲ್ಲೂ ಹೋಗಬೇಡಿ, ನಿಮ್ಮ ಪಕ್ಕದಲ್ಲೇ ಕುಳಿತಿರುವ ನನ್ನ ಮಿತ್ರರ ಬಾಯಿಂದ ವೇದಮಂತ್ರವನ್ನು ಕೇಳಿದಿರಲ್ಲವೇ? ನನಗಿಂತ ಹೆಚ್ಚಿನ ವಿದ್ವಾಂಸರಾದ ಇವರ ಜನ್ಮ ಯಾವ ಜಾತಿಯಲ್ಲಾಗಿದೆ ಗೊತ್ತಾ? ಈ ಸಮಾಜದಲ್ಲಿ ’ ಹೊಲೆಯರೆಂದು" ಯಾರನ್ನು ಕರೆಯುತ್ತಾರೆ, ಆ ಜಾತಿಯಲ್ಲಿ ಜನ್ಮ ತಾಳಿದ ಮಹಾನುಭಾವರಿವರು."
ಪ್ರಶ್ನೆ ಕೇಳಿ ತಪ್ಪು ಮಾಡಿದೆನೇ? ಎನಿಸಿತ್ತು

* ಇನ್ನು ವೇದದಲ್ಲಿ ನ ಎರಡು ಶ್ಲೋಕಗಳನ್ನು ನೋಡೋಣ...

ನಮೋ ಜ್ಯೇಷ್ಠಾಯ ಚ ಕನಿಷ್ಠಾಯ ಚ ನಮ: ಪೂರ್ವಜಾಯ
ಚಾಪರಜಾಯ ಚ ನಮೋ ಮಧ್ಯಮಾಯ ಚಾಪಗಲ್ಫಾಯ
ಚ ನಮೋ ಜಘನ್ಯಾಯ ಬುಧ್ನ್ಯಾಯ ಚ||
[ಯಜು: ೧೬-೩೨]
ಅರ್ಥ:
ಜ್ಯೇಷ್ಠಾಯ = ಗುಣಕರ್ಮ ಸ್ವಭಾವಗಳಿಂದ ದೊಡ್ಡವನಾದವನಿಗೆ
ನಮ: = ನಮಸ್ಕರಿಸುವೆ
ಚ = ಹಾಗೂ
ಕನಿಷ್ಠಾಯ= ಗುಣಕರ್ಮ ಸ್ವಭಾವಗಳಿಂದ ಸಣ್ಣವನಾದವನಿಗೆ
ನಮ: = ನಮಸ್ಕರಿಸುವೆ
ಚ = ಹಾಗೂ
ಪೂರ್ವಜಾಯ = ವಯಸ್ಸಿನಲ್ಲಿ ಹಿರಿಯನಿಗೆ

ನಮ: = ನಮಸ್ಕರಿಸುವೆ
ಚ = ಹಾಗೂ
ಅಪರಜಾಯ= ವಯಸ್ಸಿನಲ್ಲಿ ಕಿರಿಯನಿಗೆ
ನಮ: = ನಮಸ್ಕರಿಸುವೆ
ಚ = ಹಾಗೂ
ಮಧ್ಯಮಾಯ= ನಡು ವಯಸ್ಕನಿಗೆ
ನಮ: = ನಮಸ್ಕರಿಸುವೆ
ಚ = ಹಾಗೂ
ಅಪಗಲ್ಫಾಯ = ಅಶಕ್ತನಿಗೆ
ನಮ: = ನಮಸ್ಕರಿಸುವೆ
ಜಘನ್ಯಾಯ=ಹೀನಸ್ಥಿತಿಯಲ್ಲಿರುವವನಿಗೆ
ನಮ: = ನಮಸ್ಕರಿಸುವೆ
ಚ = ಹಾಗೂ
ಬುಧ್ನ್ಯಾಯ= ವಿಶಾಲ ಮನಸ್ಕನಿಗೂ

ನಮ: = ನಮಸ್ಕರಿಸುವೆ

ಅಂದರೆ ದೊಡ್ದವ, ಚಿಕ್ಕವ, ಹಿರಿಯ-ಕಿರಿಯ, ಅಶಕ್ತ, ಶಕ್ತ, ಅತ್ಯಂತ ಹೀನ ಸ್ಥಿತಿಯಲ್ಲಿರುವವ, ಅತ್ಯಂತ ವಿಶಾಲ ಮನೋಭಾವದ, ಎಲ್ಲರಿಗೂ ನಮಸ್ಕಾರ.ನಮಸ್ಕರಿಸಲು ಭೇಧವೆಲ್ಲಿಂದ ಬಂತು? ಎಲ್ಲರಿಗೂ ಸಮಾನವಾಗಿ ಕಾಣಿರೆಂಬುದೇ ವೇದದಕರೆ.

ಇನ್ನೊಂದು ವೇದ ಮಂತ್ರವನ್ನು ನೋಡೋಣ.....

* ಉತದೇವಾ ಅವಹಿತಂ ದೇವಾ ಉನ್ನಯಥಾ ಪುನ:| ಉತಾಗಶ್ಚಕ್ರುಷಂ ದೇವಾ ದೇವಾ ಜೀವಯಥಾ ಪುನ: ||
ಋಗ್ವೇದ ೧೦.೧೩೫.೧

ದೇವಾ: ದೇವಾ: = ಜ್ಞಾನಜ್ಯೋತಿಯಿಂದ ಬೆಳಗುವ ಉದಾರ ಹೃದಯರೇ!
ಅವಹಿತಂ= ಕೆಳಗೆ ಬಿದ್ದವನನ್ನು
ಉತ= ನಿಶ್ಚಯವಾಗಿ
ಪುನ: ಉನ್ನಯತಾ=ಮತ್ತೆ ಮೇಲಕ್ಕೆತ್ತಿರಿ


ದೇವಾ: ದೇವಾ: = ನಿತ್ಯ ಜಾಗರೂಕರಾದ ವಿದ್ವಾಂಸರೇ!
ಆಗ: ಚಕ್ರುಷಂ= ಪಾಪ ಕರ್ಮ ನಿರತನಲ್ಲಿ
ಪುನ:=ಮತ್ತೆ
ಜೀವಯಥಾ= ನವಜೀವನವನ್ನು ತುಂಬಿರಿ[ಪಾಪ ಮಾಡಿ ಸತ್ತಂತೆ ಇರುವವನಲ್ಲಿ ಹೊಸ ಚೈತನ್ಯವನ್ನು ತುಂಬಿ, ಅವನಿಗೆ ನವ ಜೀವನವನ್ನು ಕೊಡಿ].

ವೇದದ ಕರೆ ಹೇಗಿದೆ, ನೋಡಿ,
ಎಲೈ ವಿದ್ವಾಂಸರೇ, ಸಮಾಜದಲ್ಲಿ ಕೆಳಗೆ ಬಿದ್ದವರನ್ನು ಮೇಲೆತ್ತಿ, ಪಾಪಮಾಡಿ ಸತ್ತಂತೆ ಇರುವವನಲ್ಲಿ ನವ ಚೈತನ್ಯವನ್ನು ತುಂಬಿ ಹೊಸ ಜೀವನವನ್ನು ಕೊಡಿ.
ವೇದದ ಕರೆ ಸಮಾಜದಲ್ಲಿ ಎತ್ತರದಲ್ಲಿರುವವರ ಕಿವಿಗೆ ಮುಟ್ಟೀತೇ?

[ಕೃಪೆ: ವೇದ ಮಂತ್ರಗಳು: ಪಂ. ಸುಧಾಕರ ಚತುರ್ವೇದಿಯವರ " ಜನ್ಮಗತ ಜಾತಿ ಭೇದ ವೇದ ವಿರೋಧಿ" ಪುಸ್ತಕದಿಂದ ]

ಪಾತ್ರಾಪಾತ್ರವರಿತು ದಾನಮಾಡು

ಶಕ್ತ: ಪರಜನೇ ಜಾತಾ ಸ್ವಜನೇ ದು:ಖ ಜೀವಿನಿ|
ಮಧ್ವಾಪಾತೋ ವಿಷಾ ಸ್ವಾದ: ಸ ಧರ್ಮಪ್ರತಿರೂಪಕ:||
- ಮನು ಸ್ಮೃತಿ

ತನ್ನವರು ಕಷ್ಟದಿಂದ ಜೀವಿಸುತ್ತಿರುವಾಗ ,ಅವರನ್ನು ಉಪೇಕ್ಷಿಸಿ ಪರರಿಗೆ ಕೊಡುವುದು ಧರ್ಮವಲ್ಲ. ಅದು ಧರ್ಮದಂತೆ ಕಾಣುತ್ತದೆಯಷ್ಟೆ. ನೋಡಲು ಜೇನಿನಂತೆ ಕಂಡರೂ ಅದರ ರುಚಿ ಕಹಿಯೇ.
ದಾನಮಾಡಬೇಕು ನಿಜ. ಆದರೆ ಯಾರಿಗೆ ದಾನ ಮಾಡಬೇಕು? ಪಾತ್ರಾಪಾತ್ರವರಿತು ದಾನಮಾಡಬೇಕಲ್ಲವೇ? ಅಪಾತ್ರನಿಗೆ ದಾನಮಾಡುವುದು ಧರ್ಮವಲ್ಲ, ಬದಲಿಗೆ ಅದು ವ್ಯರ್ಥವೆನ್ನುತ್ತದೆ ವಿದುರ ನೀತಿ.
ದಾನವನ್ನು ಸ್ವೀಕರಿಸಲು ಹಲವಾರು ಪಾತ್ರಗಳಿದ್ದಾಗ ಸ್ವಜನರಿಗೆ ಪ್ರಥಮಾರ್ಹತೆ ಎನ್ನುತ್ತದೆ ಮನುಸ್ಮೃತಿ. ಸ್ವಜನರು ಯಾರು? ತನ್ನ ಹೆಂಡತಿ-ಮಕ್ಕಳು, ವೃದ್ಧರಾದ ತಂದೆತಾಯಿ,ತನ್ನನ್ನು ನಂಬಿಕೊಂಡಿರುವ ಅಶಕ್ತ ಬಂಧುವರ್ಗ.ಇವರನ್ನು ಉಪೇಕ್ಷಿಸಿ ಹೆಸರಿಗಾಗಿ,ಪ್ರಚಾರಕ್ಕಾಗಿ ಅನ್ಯರಿಗೆ ದಾನಮಾಡುವುದು ಅಧರ್ಮವೆನಿಸುತ್ತದೆ. ಈಬಗೆಯ ಹಲವು ನಿದರ್ಶನಗಳನ್ನು ನಾವು ಇಂದಿನ ಸಮಾಜದಲ್ಲಿ ಕಾಣಬಹುದಾಗಿದೆ. ಅಣ್ಣನಮನೆಯಲ್ಲೋ ,ತಮ್ಮನಮನೆಯಲ್ಲೋ ಬಡತನದಿಂದ ನರಳುತ್ತಿದ್ದು ಅವರ ದುರ್ದೈವಕ್ಕೆ ರೋಗ ಪೀಡಿತರೂ ಆಗಿ ಹಾಸಿಗೆ ಹಿಡಿದಿರುವ ಸಂದರ್ಭದಲ್ಲಿ ಅವರನ್ನು ಉಪೇಕ್ಷಿಸಿ ಈ ವ್ಯಕ್ತಿಯು ಯಾವುದೋ ಸಮಾರಂಭವನ್ನಾಚರಿಸುತ್ತಾ ಊರಿನವರನ್ನೆಲ್ಲಾ ಕರೆದು ಸತ್ಕರಿಸಿದರೆ ಯಾವ ದೇವರು ಮೆಚ್ಚುತ್ತಾನಲ್ಲವೇ?

Monday, April 12, 2010

ಬಡವನಾರ್?

ಬಡವನಾರ್?
ಮಡದಿಯೊಲವಿನ ಸವಿಯನರಿಯದವನು|
ಹುಡುಗರಾಟದಿ ಬೆರೆತು ನಗಲರಿಯದವನು|
ಉಡುರಾಜನೋಲಗದಿ ಕುಳಿತು ಮೈಮರೆಯದವನು|
ಬಡಮನಸೆ ಬಡತನವೊ ಮರುಳ ಮುನಿಯ||

ಡಿ ವಿ ಜಿ ಯವರ ಚಿಂತನೆ ಎಂದರೆ ಅದ್ಭುತ! ಸಿರಿವಂತನಾರು? ಎಂದರೆ ಡಿ ವಿ ಜಿ ಯವರು ಬರೆಯುತ್ತಾರೆ- ಮನಸ್ಸಿನ ದೊಡ್ದತನವೇ ಸಿರಿವಂತಿಕೆ.ಆ ದೊಡ್ದತನವಿದ್ದಾಗ ಅದು ಶಾಂತವಾಗಿದ್ದು ಸಂತೋಷದಿಂದ ತೃಪ್ತವಾಗಿರುತ್ತದೆ. ದೈವ ಸೃಷ್ಟಿಯ ಒಂದೊಂದು ಕಣದಲ್ಲಿಯೂ ಆನಂದದ ನೆಲೆಯನ್ನು ಗುರುತಿಸುತ್ತದೆ.
ಬಡವನಾರು? ಎಂದರೆ - "ಪತ್ನಿಯ ಪ್ರೀತಿಯ ಸವಿಯನ್ನು ತಿಳಿಯದವನು, ಮಕ್ಕಳಾಟವನ್ನು ನೋಡಿ ಸಂತೊಷದಿಂದ ನಗದಿರುವನು.ಮುಂದುವರೆದು ಹೇಳುತ್ತಾರೆ ಶ್ರೀಮಂತರ ಮನೆಯ ಸಮಾರಂಭ ಒಂದಕ್ಕೆ ಹೋದವನು ಅದರ ಭವ್ಯತೆಯನ್ನು ನೋಡಿ ಆನಂದಿಸುವ ಬದಲು, ನನಗೆ ಈ ಶ್ರೀಮಂತಿಕೆಯಿಲ್ಲವಲ್ಲಾ! ಎಂದು ಅಸೂಯೆ ಪಡುವವನು. ಯಾರಲ್ಲಿ ಮನಸ್ಸು ಬಡವಾಗಿದೆ ಅವನೇ ಬಡವ."

ಧನ-ದಾನ-ಧನ್ಯ

ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ|
ಯೋ ನ ದದಾತಿ ನ ಭುಂಕ್ತೇ ತಸ್ಯ ತೃತೀಯಾ ಗತಿರ್ಭವತಿ||
-ನೀತಿ ಶತಕ

ದಾನ, ಭೋಗ, ನಾಶ- ಎಂದು ಹಣಕ್ಕೆ ಮೂರು ಗತಿಗಳುಂಟು. ಯಾವನು ದಾನ ಮಾಡುವುದಿಲ್ಲವೋ, ತಾನೂ ಭೋಗಿಸುವುದಿಲ್ಲವೋ,ಅವನ ಹಣಕ್ಕೆ ಮೂರನೇ ಗತಿ ಎಂದರೆ ನಾಶ ಉಂಟಾಗುತ್ತದೆ.

ಧನ ಶಬ್ಧದಿಂದ ಧಾನ್ಯ ಶಬ್ಧ ಹುಟ್ಟಿದೆ. ಒಂದು ಕಾಲದಲ್ಲಿ ಧಾನ್ಯವೇ ಧನವೆನಿಸಿತ್ತು. ಧಾನ್ಯವನ್ನು ಬಹುಕಾಲ ಕೂಡಿಹಾಕಿದರೆ ನಾಶವಾಗುತ್ತದೆ.ಅದರ ವಿನಿಯೋಗ ಆಗುತ್ತಲೇ ಇರಬೇಕು. ತಿನ್ನಬೇಕು ಅಥವಾ ತಿನ್ನಲು ಇಲ್ಲದವರಿಗೆ ದಾನ ಕೊಡಬೇಕು.ಹೀಗೆ ಮಾಡುವವನೇ ಧನ್ಯ.
ದ್ರವ್ಯ ಯಜ್ಞವು ಹಲವು
ಯಜ್ಞಗಳಲ್ಲಿ ಒಂದು. " ಯಜ: ದೇವಪೂಜಾ ಸಂಗತಿಕರಣ ದಾನೇಷು" ಎಂಬುದು ಧಾತ್ವರ್ಥ. ದೇವತಾ ಪೂಜೆ, ಅಧಿಕ ಸಂಪತ್ತಿನ ಸಮನ್ವಿತ ವಿತರಣೆ, ಬಡಬಗ್ಗರಿಗೆ ದಾನ-ಇವಿಷ್ಟು ಯಜ್ಞ ಶಬ್ಧಾರ್ಥ. ಅಗತ್ಯವಿದ್ದವರಿಗೆ ದಾನಮಾಡುವುದೇ ದ್ರವ್ಯಯಜ್ಞವು. ಗಾಳಿ ಶುದ್ಧವಾಗಿರಬೇಕಾದರೆ ಬೀಸುತ್ತಿರಬೇಕು, ನೀರು ಶುದ್ಧವಾಗಿರಬೇಕಾದರೆ ಹರಿಯುತ್ತಿರಬೇಕು, ಹಣವು ಉಪಯೋಗವಾಗುತ್ತಿದ್ದರೆ ಮಾತ್ರ ಅದಕ್ಕೆ ಬೆಲೆ.
ಸರಿಯಾದ ಸಮಯಕ್ಕೆ ಉಪಯೋಗವಾಗದಿದ್ದರೆ ಹೂ ಬಾಡುತ್ತೆ, ಹಣ್ಣು ಕೊಳೆಯುತ್ತದೆ, ಹಣ ಕಂಡವರ ಪಾಲಾಗುತ್ತದೆ.



ಪ್ರಜ್ಞೆ--ವೇದದ ಸ೦ದೇಶ. (ಭಾಗ-೧)


[ಡಾ|| ಗೋಪಲಕೃಷ್ಣನ್ ರವರ ಉಪನ್ಯಾಸದ ಅನುವಾದ]

ನಾನು ನಿಮಗೆ ಕೆಲವು ವಿಷಯಗಳನ್ನು ಕ್ರಮಬದ್ಧವಾಗಿ ವಿವರಿಸಬೇಕಾಗಿದೆ. ಬಹುಶಃ ನಿಮ್ಮಲ್ಲಿ ಬಹುತೇಕರು ಭಾರತದ ಬಳುವಳಿಯನ್ನು ಅದರ ಆಧ್ಯಾತ್ಮಿಕ, ಸಾಮಾಜಿಕ, ಮಾನವೀಯ ಹಾಗೂ ಆರ್ಥಿಕ ಮಜಲುಗಳನ್ನು ಆಳವಾಗಿ, ವಸ್ತುನಿಷ್ಠವಾಗಿ ತಿಳಿದಿಲ್ಲ. ಭಾರತ ದೇಶ ಪ್ರಾಚ್ಯ ಸ೦ಶೋಧನೆಯ ಸಾಕ್ಷಿಯ ಪ್ರಕಾರ ಹತ್ತು ಸಾವಿರ ವರ್ಷಗಳಿ೦ದ ಬಾಳಿ ಬದುಕುತ್ತಿರುವ ನಾಡು. ಈ ದೇಶದ ಇತಿಹಾಸ ಹತ್ತು ಸಾವಿರದಷ್ಟು ಪುರಾತನವಾದುದು. ಈ ಪ್ರಪ೦ಚದಲ್ಲಿ ಒ೦ಭತ್ತು ಪ್ರಧಾನ ಮತಗಳಿವೆ. ಭಾರತದಲ್ಲಿ ಯಾವುದೇ ಒ೦ದು ಪ್ರಧಾನ ಮತವಿಲ್ಲ. ಆದರೆ ಇಲ್ಲಿ ಧರ್ಮವಿದೆ. ಆ ಧರ್ಮವೆ೦ದರೆ ಬದುಕುವ ಮಾರ್ಗ, ಜೀವನದ ಕ್ರಮ ಪದ್ಧತಿ. ಧರ್ಮವೆ೦ದರೆ ಯಾವುದು ನಿನ್ನನ್ನು ರಕ್ಷಿಸುತ್ತದೆಯೋ, ಯಾವುದು ನಿನ್ನನ್ನು ಮಾರ್ಗದರ್ಶನ ಮಾಡುತ್ತದೆಯೋ. ಯಾವುದು ನಿನಗೆ ಆಸರೆಯಾಗುವುದೋ ಅದು.
ಅದೇ ಹಿ೦ದೂ ಧರ್ಮ. ಸನಾತನ ಧರ್ಮ. ಸನಾತನವೆ೦ದರೆ ಎ೦ದಿಗೂ ನಾಶವಾಗಲಾರದ್ದು, ಎ೦ದಿಗೂ ಇರುವ೦ಥದ್ದು. ಆಯುರ್ವೇದವೂ ಒ೦ದು ಜೀವನ ಪದ್ಧತಿ. ಯೋಗವೂ ಒ೦ದು ಜೀವನ ಪದ್ಧತಿ. ಮ೦ತ್ರ ಪಠಣ, ಪೂಜೆ ಪುನಸ್ಕಾರ ಇವೆಲ್ಲ ಆ ಪದ್ಧತಿಯ ಕೆಲ ಭಾಗಗಳು ಮಾತ್ರ. ಅವು ಸರ್ವಸ್ವವಲ್ಲ.
1285 ಮೂಲಭೂತವಾದ ಸಾಹಿತ್ಯ, ಜಗತ್ತಿನಲ್ಲಿ ಲಭ್ಯವಾಗಿರುವ ಅತ್ಯ೦ತ ಪ್ರಾಚೀನ ಸಾಹಿತ್ಯ ಕೃತಿ ಋಗ್ವೇದವನ್ನು ಒಳಗೊ೦ಡ೦ತೆ, ಹತ್ತುಸಾವಿರದ ಸ೦ಸ್ಕೃತ ಭಾಷೆಯಲ್ಲಿನ ಭಾಷ್ಯಗಳು. ಒ೦ದು ಲಕ್ಷಕ್ಕೂ ಮೀರಿದ ಅನ್ಯ ಭಾಷೀಯ ಸಾಹಿತ್ಯವಿರುವ ಹೆಗ್ಗಳಿಕೆಯ ಧರ್ಮವಿರುವುದು ಇಡೀ ಭೂಮ೦ಡಲದಲ್ಲಿ ಭಾರತ ದೇಶವೊ೦ದೇ. ಇದು, ಇ೦ಥಾ ಅದ್ಭುತ ,ಅಗಾಧ ಸಾಹಿತ್ಯಿಕ ಸ೦ಪತ್ತುಳ್ಳ ಧರ್ಮ ಭಾರತದ್ದು. ಕಳೆದ ಹತ್ತು ಸಾವಿರ ವರ್ಷಗಳಿ೦ದ ನಿರ೦ತರವಾಗಿ ಅವ್ಯಾಹತವಾಗಿ ಈ ಸಮೃದ್ಧ ಶ್ರೀಮ೦ತ ಸಾಹಿತ್ಯವನ್ನು ಸುಧಾರಿಸಲಾಗಿದೆ, ಹಲವನ್ನು ನಿರ್ದಾಕ್ಷಿಣ್ಯವಾಗಿ ಕೈಬಿಡಲಾಗಿದೆ ಹಲವನ್ನು ಮಾರ್ಪಾಡು ಮಾಡಲಾಗಿದೆ. ಹಲವಾರು ವಿಷಯಗಳನ್ನು ಸರಿಪಡಿಸಲಾಗಿದೆ. ಈ ಸನಾತನ ಧರ್ಮ ತನ್ನನ್ನೇ ನಿರ೦ತರ ಪರೀಕ್ಷೆ, ಟೀಕೆ, ಸುಧಾರಣೆಗೆ ಮುಕ್ತವಾಗಿ ಮೈಒಡ್ಡಿದೆ. ಯಾವ ಚಿ೦ತನೆ ಅಸ೦ಬದ್ಧವೋ ಯಾವ ಚಿ೦ತನೆ ಪ್ರಸ್ತುತ ಸಮಾಜಕ್ಕೆ ಅಪ್ರಸ್ತುತವಾಗಿದೆಯೋ ಅವುಗಳನ್ನು ನಿರ್ಲಕ್ಷಿಸಲಾಗಿದೆ ಅಥವಾ ತಿರಸ್ಕರಿಸಲಾಗಿದೆ. ಈ ಸುಧಾರಣೆ, ತಿದ್ದುಪಡಿ ಮಾಡಲು, ಜಾರಿಗೆ ತರಲು ಇಲ್ಲಿ ಪ್ರತಿಯೊಬ್ಬರಿಗೂ ಸ್ವಾತ೦ತ್ರ್ಯವಿದೆ. ಇದು ಯಾವುದೋ ಸಾಧು ಸನ್ಯಾಸಿ ಸ೦ತರ ಹಕ್ಕು ಮಾತ್ರವಲ್ಲ. ಇ೦ಥಾ ಹಕ್ಕು ಯಾವುದೇ ಒಬ್ಬ ಮಠಾಧೀಶನ ಸ್ವತ್ತಾಗಿ ಉಳಿದಿಲ್ಲ ಈ ದೇಶದಲ್ಲಿ. ಇಲ್ಲಿ ಯಾರೊಬ್ಬನೇ ನನ್ನ ಮತವೇ ಶ್ರೇಷ್ಠ.. ನನ್ನ ಅಭಿಮತವೇ ಉಛ್ಚ, ನನ್ನ ಕ್ರಮವೇ ಅ೦ತಿಮ ಎ೦ದು ಸಾರಿರುವ ಇತಿಹಾಸವಿಲ್ಲ. ಈ ನೆಲದಲ್ಲಿ ಚಿ೦ತನೆಯ ಸ್ವಾತ೦ತ್ರ್ಯಕ್ಕೆ ಪರಮ ಆದರವನ್ನು ನೀಡಲಾಗಿದೆ. ಯಾವುದೇ ಸೈದ್ಧಾ೦ತಿಕ ಭಿನ್ನಾಭಿಪ್ರಾಯವನ್ನು ದಮನ ಮಾಡಿರುವ, ಹತ್ತಿಕ್ಕಿರುವ ಯಾವುದೇ ದೃಷ್ಟಾ೦ತವಿಲ್ಲ. ಈ ಸನಾತನ ಧರ್ಮದಡಿಯಲ್ಲೇ ಬೌದ್ಧಮತ ಜೈನಧರ್ಮ, ಸಿಖ್ ಮತ ಎಲ್ಲವೂ ಅರಳಿ ಬೆಳಗಿದ ದೇಶ ಇದು. ಅವರ್ಯಾರನ್ನೂ ಯಾರೂ ತಡೆದಿಲ್ಲ. ಯಾರೂ ಕ೦ಟಕಪ್ರಾಯರಾಗಿಲ್ಲ. ಬುದ್ಧ ಮಹಾವೀರನನ್ನು ಅವತಾರಪುರುಷರೆ೦ದೇ ಸ್ವೀಕರಿಸಿದ ಉದಾರ ನಾಡಿದು. ಈ ದೇಶ ಆ ಮತಗಳನ್ನೂ ಪೋಷಿಸಿ ಜಗತ್ತಿನಲ್ಲೇ ಪವಿತ್ರ ಸ್ಥಾನಗಳನ್ನು ಕಲ್ಪಿಸಿದೆ.
ಜ್ಞಾನ ಈ ನೆಲದಲ್ಲಿ ನಿರ೦ತರ ವಿಕಾಸವಾಗುತ್ತಲೇ ಇದೆ. ಆದರೆ ಇಲ್ಲಿ ಪ್ರಾಚೀನದೊ೦ದಿಗೆ ಆಧುನಿಕತೆ. ಹಳೆಯದರೊ೦ದಿಗೆ ಹೊಸದ,ರ ಭೌತಿಕದ ಜೊತೆ ಆಧ್ಯಾತ್ಮಿಕತೆಯ, ಅನುಭವದ ಜ್ಞಾನದೊ೦ದಿಗೆ ಪ್ರಯೋಗಾತ್ಮಕ ಜ್ಞಾನವು ಸ೦ಯೋಗವಾಗಬೇಕಾದ, ಸ೦ಮಿಲನವಾಗಬೇಕಾದ ಏಕೀಕರಣವಾಗಬೇಕಾದ ಅನಿವಾರ್ಯತೆಯಿದೆ. ಇಲ್ಲಿ ವಿವೇಕಾನ೦ದರ ನುಡಿಗಳನು ಉಲ್ಲೇಖಿಸಲೇಬೇಕು. ಪೌರ್ವಾತ್ಯ ಜ್ಞಾನದೊ೦ದಿಗೆ ಪಾಶ್ಚಾತ್ಯ ಜ್ಞಾನದ ಮಿಲನವಾಗಬೇಕು.
ನೀವು ಎಲ್ಲೇ ಹೋಗಿ, ಸಾಧ್ಯವಾದಷ್ಟು ವಿಷಯಗಳನ್ನು ಸ೦ಗ್ರಹಿಸಿ ಆ ಮಾಹಿತಿಯನ್ನು ಶುದ್ಧಿಗೊಳಿಸಿ ಅದನ್ನು ಜ್ಞಾನವಾಗಿ ಪರಿವರ್ತಿಸಿ. ಆ ಜ್ಞಾನವನ್ನು ಶುದ್ಧಿಗೊಳಿಸಿ ಅದನ್ನು ವಿವೇಕವನ್ನಾಗಿ ಪರಿವರ್ತಿಸಿ.ಹೀಗೆ ಪಡೆದ ವಿವೇಕವನ್ನು ಇನ್ನೂ ಪರಿಶುದ್ಧಗೊಳಿಸಿ ಅದನ್ನು ಅನುಭವವಾಗಿ ಪರಿವರ್ತಿಸಿ. ಈ ಎಲ್ಲ ಅನುಭವಗಳ ಸಮಗ್ರತೆಯೇ ನಿನ್ನ ಜೀವನ. ಅದೇ ನಿನ್ನ ಪರಿಪೂರ್ಣ ಬದುಕು. ಜೀವನಕ್ಕೆ ಅಣಿಯಾಗುವುದು ಜೀವನವಲ್ಲ. ಜೀವಿಸುವುದನ್ನು ಅನುಭವಿಸುವುದು ಜೀವನ. ಯೋಗ ಕಲಿಯುವುದು ಯೋಗವಲ್ಲ. ಯೋಗದ ಅನುಭವವನ್ನು ಅನುಭವಿಸುವುದು ಯೋಗ. ಆಯುರ್ವೇದವನ್ನು ಅನುಭವಿಸುವುದು ಆಯುರ್ವೇದ. ಕಲಿಯುವುದಲ್ಲ.

ಸರ್ ಐಸಾಕ್ ನ್ಯೂಟನ್ ಮರದ ಮೇಲಿ೦ದ ಸೇಬು ಕೆಳಕ್ಕೆ ಏತಕ್ಕೆ ಬಿತ್ತು ಎ೦ದು ತಲ್ಲೀನನಾಗಿ, ಯೋಚನಾಮಗ್ನನಾಗಿ ಗುರುತ್ವಾಕರ್ಷಣೆಯ ಸಿದ್ಧಾ೦ತವನ್ನು ಅವಿಷ್ಕಾರಗೊಳಿಸಿದ. ಇದನ್ನೇಕೆ ಭಾರತೀಯರು ಮಾಡಲಿಲ್ಲ ಎ೦ದೇ ಅನೇಕರು ಪ್ರಶ್ನಿಸಿದ್ದಾರೆ, ಪ್ರಶ್ನಿಸುತ್ತಲೇ ಇದ್ದಾರೆ. ಆದರೆ ಇಲ್ಲಿ ಒ೦ದು ವಿಷಯವನ್ನು ನಾವು ಮರೆಯುವ೦ತಿಲ್ಲ. ಪಾಶ್ಚಾತ್ಯ ಬಾಹ್ಯವನ್ನು ನೋಡುತ್ತದೆ, ಪೂರ್ವವು ಅ೦ತರ್, ಒಳಗೆ ನೋಡುತ್ತದೆ. ಪಾಶ್ಚಾತ್ಯದ ದೃಷ್ಟಿ ಬಾಹ್ಯದೃಷ್ಟಿ ಪೂರ್ವದ್ದು ಅ೦ತರ್ದೃಷ್ಟಿ
ನ್ಯೂಟನ್ ಸೇಬು ಕೆಳಕ್ಕೇಕೆ ಬಿತ್ತು ಎ೦ದು ಚಿ೦ತಿಸತೊಡಗಿದರೆ ಭಾರತೀಯ ಋಷಿಮುನಿಗಳು ಒ೦ದು ಸಣ್ಣ ಬೀಜರೂಪದಲ್ಲಿರುವ ವಸ್ತು ಕೊ೦ಚ ನೀರಿನ ಹನಿಗಳ ಸಹಾಯದಿ೦ದ ಹೆಮ್ಮರವಾಗಿ ಬೆಳೆದದ್ದು ಹೇಗೆ? ಬೆಳೆದು ಕೊ೦ಬೆ ರೆ೦ಬೆಗಳಾಗಿ ಟಿಸಿಲೊಡೆದದ್ದು ಹೇಗೆ? ಕೊಂಬೆ ರೆ೦ಬೆಗಳಲ್ಲಿ ಎಲೆ ಕಾಯಿ ಹಣ್ಣು ಹೂವು ಬ೦ದದ್ದಾದರೂ ಹೇಗೆ?. ಆ ಹಣ್ಣಿಗೆ ಸಿಹಿ ಬ೦ದದ್ದು ಹೇಗೆ? ಎ೦ಬುದರ ಅನ್ವೇಷಣೆಯ ಜಿಜ್ಞಾಸೆಯಲ್ಲಿ ತೊಡಗಿದ್ದರು. ಅವರ ಅನ್ವೇಷಣೆ ಅ೦ತರ್ಮುಖಿಯಾದದ್ದು. ನ್ಯೂಟನ್ ಬಹಿರ್ಮುಖಿಯಾದದ್ದು.

ನಿಮ್ಮ ಆತ್ಮೀಯ
ಜ್ಞಾನದೇವ್


--
Dr.B.G.Gnanadev
Molakalmuru-577535
Chitradurga Dist
Karnataka state
India

Sunday, April 11, 2010

ಅಮೃತರೂಪಿ ನೀರನ್ನು ಕಾಪಾಡಿ


ಅಪ್ಸ್ವ[ಅ]೦ ತರಮೃತಮಪ್ಸು ಭೇಷಜಮಪಾಮುತ
ಪ್ರಶಸ್ತಯೇ| ದೇವಾ ಭವತ ವಾಜಿನ: || ೧-೨೩-೧೯

ಅರ್ಥ:
ಮಾನವರೇ ನೀರಿನಲ್ಲಿ ಅಮೃತವಿದೆ.ನೀರಿನಲ್ಲಿ ಔಷಧಿಗಳಿವೆ. ನೀರು ಅತ್ಯಂತ ಪ್ರಶಸ್ತವಾದುದು. ಇದನ್ನು ಕಾಪಾಡಿ.ಈ ನೀರು ಮಾನವರನ್ನು ದೈವತ್ವದತ್ತ ಕೊಂಡೊಯ್ಯುತ್ತದೆ.ದೇವತೆಗಳ ಸುಖವನ್ನು ನೀರು ನೀಡುತ್ತದೆ.



ವೇದದ ಧ್ವನಿ ನಮಗೆ ಕೇಳೀತೆ?
ಅಭಿವೃದ್ಧಿಯ ಹೆಸರಿನಲ್ಲಿ ನದಿಗಳನ್ನು, ತೀರ್ಥಗಳನ್ನು, ಸರೋವರಗಳನ್ನು, ಜಲಪಾತಗಳನ್ನು,ಕೆರೆಗಳನ್ನು, ಕೊಳಗಳನ್ನು ನಮ್ಮ ಸ್ವಾರ್ಥಕ್ಕಾಗಿ ನಾಶಮಾಡುತ್ತಿರುವ ನಮ್ಮ ಕಣ್ತೆತೆರೆಯುವುದು ಯಾವಾಗ? ನೀರನ್ನು ಕಲ್ಮಷಗಳಿಂದ ಕಲುಷಿತ ಗೊಳಿಸುತ್ತಿರುವ ನಮಗೆ ವೇದದ ಧ್ವನಿ ಕಿವಿಗೆ ಬೀಳುವುದು ಯಾವಾಗ?

ಭೂಮಿಯನ್ನು ಕೊರೆದು ನೀರು ತೆಗೆದು ಪ್ರಕೃತಿಯ ಕೋಪಕ್ಕೆ ತುತ್ತಾಗಿರುವ ನಾವು ಇನ್ನೂ ಎಚ್ಛೆತ್ತುಗೊಳ್ಳದಿದ್ದರೆ ಯಾವ ದೇವರು ತಾನೇ ನಮ್ಮನ್ನು ಕಾಪಾಡಬಲ್ಲ?

ಕೃಪೆ: ಶ್ರೀ ತಿ.ನಾ.ರಾಘವೇಂದ್ರರ ಋಗ್ವೇದ ಸಾರ ಗ್ರಂಥ


ಋಗ್ವೇದ ಸಾರ ಗ್ರಂಥವನ್ನು ಓದುತ್ತಿದ್ದಾಗ ಮೇಲಿನ ವೇದಮಂತ್ರವು ನನ್ನನ್ನು ಅತಿಯಾಗಿ ಆಕರ್ಷಿಸಿತು. ಮಂತ್ರವನ್ನು ಬರೆಯುವಾಗ ಸ್ವರವನ್ನು ಬರೆಯುವ ತಂತ್ರ ನನಗೆ ತಿಳಿಯದಿದ್ದರಿಂದ ಸ್ವರವನ್ನು ಬರೆದಿಲ್ಲ. ವೇದ ವಿದ್ವಾಂಸರು ಮನ್ನಿಸಬೇಕೆಂದು ವಿನಂತಿಸುವೆ. ವೇದದ ಈ ಆದೇಶ ಎಲ್ಲರಿಗೂ ತಲುಪಬೇಕೆಂಬ ಏಕಮಾತ್ರ ಉದ್ಧೇಶದಿಂದ ಈ ಪುಟ್ಟ ಬರಹ ಪ್ರಕಟಿಸಿರುವೆ.
-ಹರಿಹರಪುರಶ್ರೀಧರ್

ಪೂರ್ಣಮದಃ ಪೂರ್ಣಮಿದಮ್

ಅದೊ೦ದು ಗುರುಕುಲ ಗುರು ಶಿಷ್ಯ ಸ೦ವಾದ ನಡೆಯುತ್ತಿದೆ.
ಗುರು ಹೇಳುತ್ತಾರೆ, 'ಇ೦ದ್ರಿಯಗಳ ಜಗತ್ತಿಗೆ ಸೇರಿದ ಸಕಲವೂ, ಆಲೋಚನೆಯನ್ನೂ ಒಳಗೊ೦ಡ೦ತೆ ಇರುವುದುಇದು"(ಇದಮ್) ಅನ್ನು ಪ್ರತಿನಿಧಿಸುತ್ತದೆ. ಇ೦ದ್ರಿಯ ಮನಸ್ಸಿನಾಚೆ ಇರುವದೆಲ್ಲವೂ ಅದು "ತತ್".

ನೇರ ಮನಸ್ಸಿನ ಯುವ ಶಿಷ್ಯ ಅಮೂರ್ತ ಸ೦ಗತಿಯನ್ನು ತನ್ನ ತಲೆಯನ್ನಾಡಿಸಿ ಸ್ವೀಕರಿಸಲು ಹಿ೦ಜರಿದ. ' ಆದರೆ ಗುರುಗಳೇ,' ಅವನು ಪ್ರಶ್ನಿಸಿದ. 'ಸತ್ಯವಲ್ಲದ್ದದ್ದೊ೦ದಿಗೆ ನಮ್ಮ ಮನಸ್ಸುಗಳನ್ನು ಏಕೆ ಗೊ೦ದಲಕ್ಕೆ ದೂಡಬೇಕು?"
ಗುರು ನಕ್ಕರು.
'ನಿನಗೆ ಕ೦ಡ ಯಾವುದಾದರೂ ಸತ್ಯ, ನಿಜವಾದದ್ದು ಎ೦ಬುದನ್ನು ಸ್ವಲ್ಪ ಇಲ್ಲಿ ನನಗೆ ತೋರಿಸುವೆಯಾ?'
"ಖ೦ಡಿತ" ಮಾಳಿಗೆಯಿ೦ದ ಇಳಿಬಿದ್ದಿದ್ದ ಘ೦ಟೆಯನ್ನು ತೋರಿಸುತ್ತಾ ವಿದ್ಯಾರ್ಥಿ ನುಡಿದ, ' ಘ೦ಟೆ ಉದಾಹರಣೆಗೆ. ಇದುನನ್ನ ಪ್ರಕಾರ ನಿಜವಾದದ್ದು. ಅದರೆ ನೀವು ಇಲ್ಲಿಲ್ಲದ ಎರಡನೆಯ ಘ೦ಟೆಯನ್ನು ನಾನು ನ೦ಬಬೇಕೆ೦ದು ಇಛ್ಚಿಸಿದರೆ ಅದನ್ನು ನಾನುಜೀರ್ಣಿಸಿಕೊಳ್ಳಲಾರೆ"

ಮತ್ತೆ ಗುರು ನಕ್ಕರು. ಕೇಳಿದರು, ' ಘ೦ಟೆ ನಿಜವಾದದ್ದು ಎ೦ದು ನೀನು ಹೇಗೆ ಕರೆಯುವೆ?'
ಶಿಷ್ಯ: ಏಕೆ! ಅದನ್ನು ನನ್ನ ಕಣ್ಣುಗಳಿ೦ದ ಸ್ಪಷ್ಟವಾಗಿ ನೋಡಬಲ್ಲೆ!'
ಗುರು: ಒ೦ದು ವೇಳೆ ನೀನು ಕುರುಡನಾಗಿದ್ದಲ್ಲಿ, ಘ೦ಟೆಯು ಸುಳ್ಳು ಎ೦ದಾಗುವುದಿಲ್ಲವೇ?'
ಶಿಷ್ಯ,' ಇಲ್ಲ, ಎ೦ದಿಗೂ ಇಲ್ಲ. ನಾನು ಕುರುಡನಾಗಿದ್ದರೂ ಅದರ ನಾದವನ್ನು ಕೇಳಬಲ್ಲೆ ಅದರ ಇರುವಿಕೆಗೆ ಅಷ್ಟು ಸಾಕ್ಷಿ ಸಾಕಲ್ಲವೇ.'
ಗುರು: ನೀನು ಒ೦ದು ವೇಳೆ ಕಿವುಡನಾಗಿದ್ದರೆ?'
ವಿದ್ಯಾರ್ಥಿ: ಸರಿ. ನನ್ನ ಕೈಗಳಿ೦ದ ಅದನ್ನು ಸ್ಪರ್ಶಿಸಬಲ್ಲೆ. ಘ೦ಟೆ ನಿಜವಾಗೇ ಇರುತ್ತದೆ.'
ಗುರು: ಒ೦ದು ವೇಳೆ ನಿನ್ನ ಸ್ಪರ್ಶ ಸ೦ವೇದನೆ ನಷ್ಟವಾಗಿದ್ದಲ್ಲಿ.. ನಿನಗೆ ಮುಟ್ಟಲು ಕೇಳಲು ಕಾಣಲು, ರುಚಿಯನ್ನು ಆಸ್ವಾದಿಸುವಎಲ್ಲವನ್ನೂ ಕಳೆದುಕೊ೦ಡರೆ.. ಘ೦ಟೆಯ ಕಥೆಯೇನಾಗುವುದು?'

ಶಿಷ್ಯ ಗೊ೦ದಲಕ್ಕೀಡಾದ. ಗುರುವಿನ ವಾದದಲ್ಲಿ ತಿರುಳಿರುವುದನ್ನು ಗ್ರಹಿಸಿದ.
'ಈಗ' ಗುರು ನುಡಿದರು,
'ನಾವು ಈಗ ಎಲ್ಲ ಸ೦ದರ್ಭವನ್ನು ತಿರುಗುಮುರುಗು ಮಾಡೋಣ. ನೀನು ಒ೦ದು ಹೆಣವಿದ್ದ೦ತೆ.. ಯಾವುದನ್ನೂ ಗ್ರಹಿಸುವಸಾಮರ್ಥ್ಯ ಕಳೆದುಕೊ೦ಡಿದ್ದೀಯೆ. ನಾನು ನಿನಗೆ ಒ೦ದೇ ಒ೦ದು ಇ೦ದ್ರಿಯವನ್ನು ಅನುಗ್ರಹಿಸುವೆ. ಸ್ಪರ್ಶ ಜ್ಞಾನ. ಘ೦ಟೆಯನ್ನುನೀನು ಮುಟ್ಟುವೆ. ಅದು ನಿನಗೆ ಸತ್ಯವಾಯಿತು. ನಾನು ನಿನಗೆ ಇನ್ನೊ೦ದು ಇ೦ದ್ರಿಯವನ್ನು ಅನುಗ್ರಹಿಸುವೆ. ನೀನೀಗ ಘ೦ಟೆಯನಾದ ಕೇಳಬಲ್ಲೆ. ಹೇಳು, ಆದ್ದರಿ೦ದ ಘ೦ಟೆ ಇನ್ನೂ 'ಹೆಚ್ಚಿನ' ಸತ್ಯವಾಯಿತೇ? ನಿನ್ನ ಕಣ್ಣುಗಳನ್ನೂ ನಿನಗೆ ಮರಳಿಸುವೆ. ಘ೦ಟೆ ಇನ್ನೂ ಹೆಚ್ಚಿನ ಸತ್ಯವಾಯಿತೇ? ನಾನು ನಿನಗೆ ಎಲ್ಲ ಐದು ಇ೦ದ್ರಿಯಗಳನ್ನೂ ಮರಳಿಸುವೆ. ಘ೦ಟೆ ನಿನ್ನ ಪ್ರಕಾರಪರಿಪೂರ್ಣ ಸತ್ಯವಾಯಿತು! ಒಪ್ಪುವೆಯಾ?'

ಶಿಷ್ಯ ತಡವರಿಸಿಕೊ೦ಡೇ ಹೌದೆ೦ದು ತಲೆಯಲ್ಲಾಡಿಸಿದ.

'ಎ೦ಥಾ ಅಸ೦ಭದ್ಧತೆ ಹಾಗೂ ವ್ಯರ್ಥ! ಗುರು ಆಶ್ಚರ್ಯಚಕಿತನಾಗಿ ನುಡಿದರು,
ಅಲ್ಲಿ ಕೇವಲ ಐದು ಇ೦ದ್ರಿಯಗಳು ಮಾತ್ರ ಇವೆ ಎ೦ದು ನೀನು ಹೇಗೆ ಭಾವಿಸುವೆ? ಒ೦ದು ವೇಳೆ ನಾನು ನಿನಗೆ ಆರನೆಯಇ೦ದ್ರಿಯವನ್ನು ನೀಡಿದಲ್ಲಿ ನಿನ್ನ ಘ೦ಟೆಯ ನಿಜತ್ವಕ್ಕೆ ಒ೦ದು ಹೊಚ್ಚ ಹೊಸ ಆಯಾಮ ಸ೦ದುತ್ತದೆಯೋ? ಒ೦ದು ವೇಳೆನಾನು ಏಳನೆಯ.. ಹತ್ತನೆಯ... ಸಾವಿರದ ಗ್ರಹಿಕೆಯ ಇ೦ದ್ರಿಯವನ್ನು ದಯಪಾಲಿಸಿದರೆ? ಘ೦ಟೆಯು ಯಾವ ರೂಪಾ೦ತರಹೊ೦ದಬಹುದು? ಸಾವಿರದ ವಿಧವಿಧದ ಇ೦ದ್ರಿಯಗಳನ್ನು ಹೊತ್ತು ಈಗಿನ ಘ೦ಟೆಯ ಸ್ವರೂಪವನ್ನು ಈಗಿನ ಹಾಗೆಯೇಸ್ವೀಕರಿಸಬಲ್ಲೆಯಾ? ಅಲ್ಲಿಗೂ, ಹಾಗಾದಾಗ್ಯೂ ನೀನು ಗ್ರಹಿಸಿರುವ ನಿನ್ನ ಘ೦ಟೆಯ ಸತ್ಯವನ್ನು ಪರಿಪೂರ್ಣತೆಯೆ೦ದುಹೇಳಲಾಗುವುದಿಲ್ಲ.
ಶಿಷ್ಯ ಮೌನದ ಅರ್ಥದಲ್ಲಿ ಶರಣಾಗತನಾದ.
'ನನ್ನ ಶಿಷ್ಯನೇ,' ಗುರು ನುಡಿದರು.

"ಯಾವುದು ಇ೦ದ್ರಿಯಗಳ ಸಾಮ್ರಾಜ್ಯಕ್ಕೆ ಸೇರಿದೆಯೋ ಆಲೋಚನೆಯನ್ನೂ ಒಳಗೊ೦ಡ೦ತೆ ಅದು "ಇದು (ಇದಮ್). ಯಾವುದು ಇ೦ದ್ರಿಯಾತೀತವೋ ಅದೇ "ಅದು " ವೇದಾ೦ತವೆಲ್ಲವೂ "ಇದು ಅದು" ಸ೦ಬ೦ಧಪಟ್ಟಿದ್ದೇ ಆಗಿದೆ. ಉಪನಿಷತ್ತಿನಲ್ಲಿ ಬರುವ ಪೀಠಿಕೆಯೂ ಇದೇ ಅಗಿದೆ
ಇದು ಪೂರ್ಣ. ಅದು ಪೂರ್ಣ. ಪೂರ್ಣ ಪೂರ್ಣದಿ೦ದಲೇ ಉದ್ಭವ. ಪೂರ್ಣವನ್ನು ಪೂರ್ಣದಿ೦ದ ಕಳೆದಾಗ ಅಲ್ಲಿ ಉಳಿಯುವುದೂಪೂರ್ಣವೇ."
ಗುರು ಮು೦ದುವರೆದು ಹೇಳಿದರು.

ನಿನ್ನ ಸೀಮಿತ ಇ೦ದ್ರಿಯಗಳಿ೦ದ ಗ್ರಹಿಸಲಾರನೆ೦ದು ದೇವರಿಲ್ಲವೆ೦ದು ತಿರಸ್ಕರಿಸಬೇಡ. ದೇವರು 'ಅದು ತತ್'. ಅವನು 'ಇದೂ' ಸಹ. ನಿನ್ನ ಅರಿವಿನ ಮಿತಿಗಳನ್ನು ಅರಿತುಕೊ೦ಡಾಗ ಬೌದ್ಧಿಕ ನಮ್ರತೆ ಹುಟ್ಟುವುದು. ವಿನಯದಿ೦ದ ಜನಿಸಿದ ವಿವೇಕದ ಅಡಿಗಲ್ಲಮೇಲೆ ನ೦ಬಿಕೆಯನ್ನು ಪ್ರತಿಷ್ಠಾಪಿಸಲಾಗುವುದು. ನಮ್ಮ ಸೀಮಿತ ಗ್ರಹಿಕೆಯ ಉಪಕರಣದಿ೦ದ ಗ್ರಹಿಸಿದ್ದು ಸತ್ಯದ ಒ೦ದುಅಣುವಿನಷ್ಟು. "ಅದು" ನಿನ್ನ ಕಲ್ಪನೆಗೂ ಅತೀತವಾದದ್ದು. ಏಕೆ೦ದರೆ ನಿನ್ನ ಕಲ್ಪನೆ ನೀನು ಗ್ರಹಿಸಿದ್ದರಲ್ಲೇ ಬೇರೂರಿರುವುದು.

ಅದಮ್ ತತ್ ಕ್ಷೇತ್ರದಲ್ಲಿ ಕಲ್ಪನೆ ಹೇಗೆ ವಿಫಲವಾಗುತ್ತದೆ ಎ೦ಬುದನ್ನು ಕಲ್ಪಿಸಿಕೊಳ್ಳಲು ದೇವರನ್ನು ವರ್ಣಿಸಲಾಗದು ಕಾರಣ ಎಲ್ಲವರ್ಣನೆಗಳೂ ಇದಮ್ ಇದು ಕ್ಷೇತ್ಯ್ರಕ್ಕೆ ಸ೦ಬ೦ಧಿಸಿದ್ದೇ ಆಗಿದೆ. ಅದಕ್ಕೇ ಅಲ್ಲಿ ಯಾವ ಅಚ್ಚರಿಯೂ ಇಲ್ಲ. ನಮ್ಮ ಋಷಿವರ್ಯರುದೇವರನ್ನು(ಬ್ರಹ್ಮನನ್ನು) ನಕಾರತ್ಮಕಾವಾಗಿ ನೇತಿ ನೇತಿ ಇದಲ್ಲ ಇದಲ್ಲ ಎ೦ದೇ ಹೇಳುತ್ತಾ ಹೋದರು. ಪ್ರತಿಯೊಬ್ಬ ಭಕ್ತನೂದೇವರನ್ನು ಅನುಭವಿಸಬಹುದು. ಆದರೆ ಅರ್ಹನಿಗೆ ಮಾತ್ರ ಭಗವ೦ತ ಸ೦ಪೂರ್ಣ ಸಾಕ್ಷಾತ್ಕಾರವಾಗುತ್ತಾನೆ.

ಮೂಲ: ಕೆ ಎಸ್ ರಾಮ್
ಅನುವಾದ: ಡಾ|| ಜ್ಞಾನದೇವ್ "

ಋಣಕರ್ತಾ ಪಿತಾ: ಶತ್ರು:

ಋಣಕರ್ತಾ ಪಿತಾ: ಶತ್ರು:|
ಮಾತಾ ಚ ವ್ಯಭಿಚಾರಿಣೀ|
ಭಾರ್ಯಾ ರೂಪವತೀ ಶತ್ರು:|
ಪುತ್ರ: ಶತ್ರುರಪಂಡಿತ:
||

ಸಾಲಗಾರನಾದ ತಂದೆ, ವ್ಯಭಿಚಾರಿಣಿಯಾದ ತಾಯಿ, ರೂಪವತಿಯಾದ ಪತ್ನಿ, ದಡ್ದ ಮಗ, ಈನಾಲ್ವರೂ ಶತ್ರುಗಳೇ.

ಸಂಪಾದನೆಗೆ ತಕ್ಕನಾದ ಜೀವನ ಮಾಡದೆ ಸಾಲಮಾಡಿ ಭೋಗಜೀವನ ನಡೆಸಿದ ತಂದೆ ಸಾಲ ತೀರಿಸದೆ ಸತ್ತರೆ ಆತ ಮಕ್ಕಳಿಗೆ ಶತ್ರುವಲ್ಲವೇ? ತಾಯಿಯ ಸ್ಥಾನ ಅತ್ಯಂತ ಹಿರಿದಾದುದು, ಆಕೆಯು ತನ್ನ ಮಕ್ಕಳೆದುರೇ ತಪ್ಪುದಾರಿ ಹಿಡಿದರೆ ಕೋಮಲ ಮನಸ್ಸಿನ ಮಕ್ಕಳ ಮನಸ್ಸಿನ ಮೇಲೆ ಎಂತಾ ಆಘಾತವಾಗುತ್ತದಲ್ಲವೇ? ಪತ್ನಿಗೆ ರೂಪ ಕೆಟ್ಟದಲ್ಲ, ಆದರೆ ರೂಪವತಿ ಹೆಣ್ಣಿನಮೇಲೆ ಪರಪುರುಷರ ಕಣ್ಣುಗಳು ಹೊಂಚುಹಾಕಿಯಾವು, ಅಂತಹ ಕಣ್ಣುಗಳಿಂದ ಹೆಣ್ಣಿನ ಮಾನ ಕಾಪಾಡುವುದು ಅತ್ಯಂತ ಜವಾಬ್ದಾರಿಯ ಕೆಲಸ. ಆದ್ದರಿಂದಲೇ ಪತಿ-ಪತ್ನಿಯರನ್ನು ಎಚ್ಛರಿಸಲು ಒಂದೇ ಮಾತಿನಲ್ಲಿ ಪೂರ್ವಜರು ಹೇಳಿದರು ಪತ್ನಿಗೆ ಅವಳ ರೂಪವೇ ಶತ್ರು. ಒಬ್ಬ ತಂದೆಗೆ ತನ್ನ ಮಗ ವಿದ್ಯಾವಂತನಾಗಿದ್ದರೆ ಅವನೇ ಆಸ್ತಿ, ಆದರೆ ದಡ್ದನಾದರೆ ಅವನೇ ಶತ್ರುವಲ್ಲವೇ?

Saturday, April 10, 2010

ಧರ್ಮ ಎಂದರೇನು?




ಧರ್ಮ ಎಂದರೇನು? ಸುಮಾರು ೧೦೦ ವರ್ಷಗಳಷ್ಟು ದೀರ್ಘಾವಧಿ ವೇದವನ್ನು ಅಧ್ಯಯನ ಮಾಡಿರುವ ೧೧೪ ವರ್ಷ ವಯಸ್ಸಿನಪಂಡಿತ ಸಧಾಕರ ಚತುರ್ವೇದಿಯವರು ಏನು ಹೇಳುತ್ತಾರೆ? ಕೇಳಿ.

ಶ್ರೀ ಸುಧಾಕರ ಚತುರ್ವೇದಿಯವರ ಸಂದರ್ಶನ

ಮೂರ್ಖ ಜನರು ನಾಶವಾದಾರೇ ಹೊರತು ಬಾಗುವುದಿಲ್ಲ

ನಮಂತಿ ಫಲಿತಾ ವೃಕ್ಷಾ:|

ನಮಂತಿ ಬುಧಾ ಜನಾ: |
ಶುಷ್ಕ ಕಾಷ್ಠಾನಿ ಮೂರ್ಖಾಶ್ಚ|

ಭಿದ್ಯಂತೇನ ನಮಂತಿಚ||
ಹಣ್ಣು ಬಿಟ್ಟ ಮರಗಳು ಬಾಗುತ್ತವೆ.ವಿದ್ವಾಂಸರಾದ ಜನರು ವಿನಯದಿಂದಬಾಗುತ್ತಾರೆ. ಒಣಕಡ್ಡಿಗಳು ಮುರಿದುಹೋಗುತ್ತವೆ. ಬಾಗುವುದಿಲ್ಲ. ಅಂತೆಯೇ ಮೂರ್ಖ ಜನರು ನಾಶವಾದಾರೇ ಹೊರತು ಬಾಗುವುದಿಲ್ಲ.

Friday, April 9, 2010

ಮಕ್ಕಳನ್ನು ಬೆಳೆಸುವುದು ಹೇಗೆ?

ಮಕ್ಕಳನ್ನು ಬೆಳೆಸುವುದು ಹೇಗೆ?
[
ಹಾಸನದಲ್ಲಿ ದಿನಾಂಕ ೩೦.೧೧.೨೦೦೮ ರಂದು ಬೆಂಗಳೂರಿನ ಭವತಾರಣಿ ಆಶ್ರಮದ ಮಾತಾಜಿ ವಿವೇಕಮಯೀ ಅವರು ಮಾಡಿದ ಉಪನ್ಯಾಸ]













[ಹಾಸನದ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾದ ಶ್ರೀಮತಿ ಉಶಾಲತ, ಮಾತಾಜಿ ವಿವೇಕಮಯೀ ಮತ್ತು ಮಾತಾಜಿ ತ್ಯಾಗಮಯೀ-ಉಭಯಕುಲೋಪರಿಯಲ್ಲಿ]

ಇಂದಿನ ಸಮಾಜದಲ್ಲಿ ನಾವು ಚಿಂತಿಸುವ ರೀತಿಯಾದರೂ ಹೇಗಿರುತ್ತೆ? ನಮ್ಮ ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸಬೇಕು, ಏಕೆಂದರೆ ಮುಂದೆ ಒಳ್ಳೆಯ ಕಾಲೇಜಿಗೆ ಸೇರಿಸ ಬೇಕು, ಒಳ್ಳೆಯ ಕಾಲೇಜಾದರೂ ಏಕೆಂದರೆ ನಮ್ಮ ಮಕ್ಕಳು ಒಳ್ಳೆಯ ಕೆಲಸಕ್ಕೆ ಸೇರಿ ತುಂಬಾ ಸಂಪಾದಿಸಬೇಕು, ಸುಖವಾದ ಜೀವನ ಮಾಡಬೇಕು, ಅಂತೂ ತುಂಬಾ ಹಣ ಸಂಪಾದಿಸಿದರೆ ನಮ್ಮ ಮಕ್ಕಳ ಜೀವನ ಸುಖವಾಗಿರುತ್ತದೆ, ಎಂಬ ಕಲ್ಪನೆ.
ಹಣಕ್ಕಿಂತಲೂ ಹೆಚ್ಚಿನದು ಬೇರೆ ಏನೋ ಇದೆ:
ಒಬ್ಬ ವಿದ್ಯಾರ್ಥಿಯು ತನ್ನ ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸುತ್ತಾನೆ. ಅವನ ತಾಯಿಗೆ ವಿಷಯ ತಿಳಿಸಲು ಹೋಗುತ್ತಾನೆ. ಅವರ ಅಮ್ಮನಿಗೆ ತುಂಬಾ ಆನಂದ ವಾಗುತ್ತೆ -ಎಂದು ಸಹಜವಾಗಿ ಬಯಸಿದ್ದ ವಿದ್ಯಾರ್ಥಿಗೆ ಅವನ ತಾಯಿ ಸಂತೋಷ ಎಂದಷ್ಟೇ ಹೇಳಿ ಮೌನವಾಗಿಬಿಡುತ್ತಾಳೆ. ವಿದ್ಯಾರ್ಥಿಗೆ ಸಹಜವಾಗಿ ಬೇಜಾರಾಗಿ ಬಿಡುತ್ತೆ. ಅವನು ಅಮ್ಮನನ್ನು ಕೇಳುತ್ತಾನೆ. ಅಮ್ಮ,ನಾನು ಅತ್ಯಂತ ಉನ್ನತ ಶ್ರೇಣಿಯಲ್ಲಿ ನಮ್ಮ ಯೂನಿವರ್ಸಿಟಿಗೆ ಪ್ರಥಮನಾಗಿ ತೇರ್ಗಡೆ ಹೊಂದಿರುವುದು ನಿನಗೆ ಸಂತೋಷದ ವಿಷಯ ವಲ್ಲವೇ? ಅದಕ್ಕೆ ಅವನ ತಾಯಿ ಹೇಳುತ್ತಾಳೆ ನೋಡು ನೀನು ಪದವಿಯಲ್ಲಿ ಚಿನ್ನದ ಪದಕ ಗಳಿಸಿದ್ದು, ಮುಂದೆ ಒಳ್ಳೆಯ ಕೆಲಸಕ್ಕೆ ಸೇರುವುದು, ಯಾವುದೂ ನನಗೆ ದೊಡ್ದ ವಿಷಯವಲ್ಲ, ನೀನು ಎಷ್ಟು ಸಂಪತ್ತು ಸಂಪಾದಿಸುತ್ತೀಯ ಎಂಬುದು ಮುಖ್ಯವಲ್ಲ,ಆದರೆ ನಿನ್ನ ಬದುಕನ್ನು ಹೇಗೆ ರೂಪಿಸುತ್ತೀಯ -ಎಂಬುದು ಮುಖ್ಯ. ಕೂಲಿ ಕೆಲಸ ಮಾಡಿದರೂ ಚಿಂತೆಯಿಲ್ಲ ನನ್ನ ಮಗ ಪ್ರಾಮಾಣಿಕನಾಗಿ ಜೀವನ ಮಾಡುತ್ತಾನಾ? ಜೀವನದಲ್ಲಿ ಆದರ್ಶವಾಗಿ ಬದುಕಿ ತೋರಿಸುತ್ತಾನಾ? ಅದು ಮುಖ್ಯ!
ವಿದ್ಯಾರ್ಥಿ ಜೀವನದಲ್ಲಿ ಅಂತಹ ಒಬ್ಬ ತಾಯಿಯ ಆದರ್ಶದಿಂದ ಇಂದು ಸಮಾಜದಲ್ಲಿ ಸುರೇಶ್ ಕುಲಕರ್ಣಿ ಯವರಂತಹ ಪ್ರಾಮಾಣಿಕ ಚಿಂತಕರನ್ನು ಕಾಣ ಬಹುದಾಗಿದೆ. ಅಂದು ಆರು- ಏಳು ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿಗೆ ಅವನ ತಾಯಿ ಒಂದು ಒಳ್ಳೆಯ ಕೆಲಸಕ್ಕೆ ಸೇರಿ ಚೆನ್ನಾಗಿ ಹಣ ಸಂಪಾದಿಸು -ಎಂದಷ್ಟೇ ಹೇಳಿದ್ದರೆ ಸಮಾಜಕ್ಕೆ ಇಂತಹ ಮಹನೀಯರು ಸಿಗುತ್ತಿರಲಿಲ್ಲ-ಅಲ್ಲವೇ ? ಅಂದು ಸುರೇಶ್ ಕುಲಕರ್ಣಿಯವರಿಗೆ ಗೋಚರವಾಯ್ತು ಪದವಿಯಲ್ಲಿ ಪಡೆದ ಚಿನ್ನದ ಪದಕಕ್ಕಿಂತಲೂ ಹೆಚ್ಚಿನದು , ಹಣ ಗಳಿಸುವುದಕ್ಕಿಂತ ಹೆಚ್ಚಿನದು ಜೀವನದಲ್ಲಿ ಬೇರೆ ಯೇನೋ ಇದೆ ಎಂದು.
ಹೌದು ಜೀವನದಲ್ಲಿ ನಾವು ಗಳಿಸುವ ಹಣಕ್ಕಿಂತಲೂ ಹೆಚ್ಚಿನದು ಬೇರೆ ಏನೋ ಇದೆ, ಆದರೆ ನಾವು ಅದಕ್ಕೆ ಅಂತಹ ಸ್ಥಾನವನ್ನು ಕೊಡಬೇಕಷ್ಟೆ.ನಾವು ಜೀವನದಲ್ಲಿ ಮೌಲ್ಯಗಳಿಗೆ ಸ್ಥಾನ ಕೊಡಬೇಕು. ನಿಧಾನವಾಗಿ ನಮ್ಮ ಸಹಜ ಜೀವನ ಹೇಗೆ ಬದಲಾಗುತ್ತಿದೆ ! ನಮ್ಮ ಪರಂಪರಾಗತ ಜೀವನದ ಆದರ್ಶಗಳು ಪಾಶ್ಚಿಮಾತ್ಯ ಪ್ರಭಾವಕ್ಕೊಳಗಾಗಿ ಜೀವನದ ಸುಖಭೋಗಗಳಿಗೆ ಹೆಚ್ಚು ಹೆಚ್ಚು ಪ್ರಾಶಸ್ತ್ಯ ಕೊಡುತ್ತಾ, ನಮ್ಮ ಆದರ್ಶಗಳು ಹೇಗೆ ಮರೆಯಾಗುತ್ತಿವೆ! ನಮ್ಮ ಜೀವನದ ಅಗತ್ಯಗಳು ಹೆಚ್ಚುತ್ತಾ ಹೆಚ್ಚುತ್ತಾ,ಸುಖಭೋಗಗಳು ಹೆಚ್ಚಿನ ಪ್ರಾಶಸ್ತ್ಯ ಗಳಿಸುತ್ತಾ ಮನುಷ್ಯಜೀವನದ ಎಲ್ಲಾ ಶಕ್ತಿ ಸಾಮರ್ಥ್ಯಗಳೂ ಒಂದೇ ನಿಟ್ಟಿನಲ್ಲಿ ಒಂದು ಚಿಕ್ಕ ಉದ್ದೇಶಕ್ಕಾಗಿ ವ್ಯಯವಾಗುತ್ತಿದೆಯಲ್ಲಾ! ವಿವೇಕಾನಂದರು ಹೇಳುತ್ತಾರೆ- ಸೃಷ್ಟಿಯಲ್ಲಿ ಅತ್ಯದ್ಭುತವಾದದ್ದೆಂದರೆ ಮನುಷ್ಯ ಜನ್ಮ. ಯಾಕೆಂದರೆ ಒಬ್ಬ ಮನುಷ್ಯನೇ ಬುದ್ಧನಾದದ್ದು, ರಾಮನಾದದ್ದು,ಕೃಷ್ಣನಾದದ್ದು. ಸಾವಿರಾರು ವರ್ಷಗಳು ಕಳೆದರೂ ಜನರು ಅವರನ್ನು ಸ್ಮರಿಸುತ್ತಾರೆಂದರೆ ಅವರು ಆರೀತಿ ಬದುಕಿ ತೋರಿಸಿದರು.ಅವರ ಫೋಟೊಗಳಿಗೆ ನಾವು ನಮಸ್ಕರಿಸುವುದಾದರೂ ಏಕೆ? ಅದಕ್ಕೆ ಉತ್ತರವನ್ನು ವಿವೇಕಾನಂದರು ಕೊಡುತ್ತಾರೆ- ಪ್ರತಿಯೊಬ್ಬ ಮನುಷ್ಯನೂ ಹುಟ್ಟುವಾಗ ಚೈತನ್ಯವನ್ನು ಇಟ್ಟುಕೊಂಡೇ ಹುಟ್ಟಿದ್ದಾನೆ. ಆದರೆ ಸಾಮಾನ್ಯ ಜನರು ಇದನ್ನು ತಿಳಿಯದೆ ಅತ್ಯಂತ ಸಣ್ಣ ಉದ್ದೇಶಕ್ಕಾಗಿ ಜೀವನವನ್ನು ಸೆವೆಸಿ ಬಿಡುತ್ತಾರೆ.ಅತ್ಯಂತ ನಿಕೃಷ್ಟ ಬದುಕು ಸವೆಸಿ ಬಿಡುತ್ತಾರೆ. ಬದುಕು ಸಾರ್ಥಕತೆ ಪಡೆಯುವುದಿಲ್ಲ.ಬದುಕಿಗೊಂದು ಉದಾತ್ತ ಧ್ಯೇಯ ವಿರಬೇಕು, ಮಕ್ಕಳ ಮುಂದೆ ಇಂತಹ ಉದಾತ್ತ ಗುರಿಗಳ ಬಗ್ಗೆ ಮಾತನಾಡಬೇಕು. ಓದಿನಲ್ಲಿ ಹೆಚ್ಚು ಅಂಕ ಗಳಿಸಬೇಕು ಎಂಬುದು ಮುಖ್ಯ ಹೌದು, ಆದರೆ ಅದಕ್ಕಿಂತಲೂ ಮುಖ್ಯ ಜೀವನದಲ್ಲಿ ಉದಾತ್ತವಾಗಿ ಬಾಳುವುದು. ಉನ್ನತ ಆದರ್ಶಗಳಿಗಾಗಿ ಬದುಕುವುದನ್ನು ಮಕ್ಕಳಿಗೆ ಕಲಿಸಬೇಕು.
ಚಿಕ್ಕಂದಿನಲ್ಲಿ ಮಕ್ಕಳಿಗೆ ನಾವು ಏನು ಕೊಡುತ್ತೇವೋ ಮಕ್ಕಳು ಅದೇ ಆಗುತ್ತಾರೆ:
ಪುರಾಣದಲ್ಲಿ ಒಂದು ಕಥೆ ಇದೆ. ಮದಾಲಸೆ ಎಂಬ ರಾಣಿ ಇದ್ದಳು. ಅವಳು ಎಂತಹಾ ಮಹಾನ್ ಜ್ಞಾನಿಯಾಗಿದ್ದಳೆಂದರೆ ಮಕ್ಕಳನ್ನು ತೊಟ್ಟಿಲಲ್ಲಿ ಮಲಗಿಸಿ ತೂಗುವಾಗ ಜೋಗುಳ ಹಾಡುತ್ತಿದುದಾದರೂ ಏನು- ಮಗು ನೀನು ಆತ್ಮ ಸ್ವರೂಪಿ, ಮಗೂ ನೀನು ದುರ್ಬಲನಲ್ಲ.ಮಗೂ ನಿನ್ನ ಜೀವನ ಸಾರ್ಥಕ ವಾಗಬೇಕು, ನೀನು ಏನಾದರೂ ಸಾಧಿಸಬೇಕು, ನೀನು ದುರ್ಬಲನಾಗಿ ಅಳುತ್ತಾ ಅಳುತ್ತಾ ಜೀವನ ಕಳೆಯಬೇಡ.ನೀನು ಧೈರ್ಯಶಾಲಿಯಾಗು,ನೀನು ಶಕ್ತಿಶಾಲಿಯಾಗು,ನಿನ್ನ ನಿಜ ಸ್ವರೂಪವನ್ನು ನೀನು ಕಂಡುಕೋ, ಹೀಗೆ ತೊಟ್ಟಿಲು ತೂಗುತ್ತಾ ತೂಗುತ್ತಾ ಬೆಳಸಿದ ನಾಲ್ಕು ಮಕ್ಕಳು ದೊಡ್ದವರಾದಾಗ ಯೋಗಿಗಳಾಗಿ ಬಿಡುತ್ತಾರೆ. ಇನ್ನು ಹೀಗೆಯೇ ಆಗಿ ಬಿಟ್ಟರೆ ರಾಜನ ವಂಶ ಬೆಳೆಯುವುದಾದರೂ ಹೇಗೆಂದು ಮತ್ತೊಬ್ಬ ಮಗನನ್ನು ರಾಜನು ಇವಳಿಂದ ಬೇರೆಯೇ ಬೆಳೆಸುತ್ತಾನೆ.ಈಕಥೆಯ ನೀತಿಯಾದರೂ ಏನು? ನಮ್ಮ ಮಕ್ಕಳೆಲ್ಲಾ ಯೋಗಿಳಾಗಬೇಕಿಲ್ಲ. ಆದರೆ ಮಹಾತಾಯಿ ಚಿಕ್ಕಂದಿನಲ್ಲಿ ಮಕ್ಕಳ ಕಿವಿಯಲ್ಲಿ ಶ್ರೇಷ್ಟ ವಿಚಾರಗಳನ್ನೇ ತಿಳಿಸಿದ್ದರಿಂದ ಮಕ್ಕಳು ಶ್ರೇಷ್ಟವಾದ ಆದರ್ಶವನ್ನು ಕಣ್ಮುಂದೆ ಇಟ್ಟುಕೊಂಡು ಬೆಳೆದರು. ಅಂದರೆ ಚಿಕ್ಕಂದಿನಲ್ಲಿ ಮಕ್ಕಳಿಗೆ ನಾವು ಏನು ಕೊಡುತ್ತೇವೋ ಮಕ್ಕಳು ಅದೇ ಆಗುತ್ತಾರೆ.ಆದ್ದರಿಂದ ನಾವು ಪ್ರತಿನಿತ್ಯ ನಮ್ಮ ಮಕ್ಕಳಿಗೆ ಯಾವ ವಿಚಾರವನ್ನು ಹೇಳುತ್ತೇವೆ, ನಮ್ಮ ದೇಶದಲ್ಲಿ ಆಗಿಹೋದ ಮಹಾಪುರುಷರ ಜೀವನದ ಸ್ಪೂರ್ತಿದಾಯಕ ಘಟನೆಗಳನ್ನು ತಿಳಿಸುತ್ತೀವಾ? ಮಕ್ಕಳು ಯಾರಂತೆ ಬೆಳೆಯಬೇಕೆಂದು ಅವರಿಗೆ ಮನಮುಟ್ಟುವಂತೆ ಹೇಳುತ್ತೇವಾ? ರಾಮಕೃಷ್ಣಪರಮಹಂಸರ ತಂದೆಯವರ ಒಂದು ಉದಾಹರಣೆ - ಕಲ್ಕತ್ತಾ ಸಮೀಪ ದೇರಾ ಎಂಬ ಎಂಬ ಒಂದು ಹಳ್ಳಿ . ಅಲ್ಲಿ ಕ್ಷುದೀರಾಮ ಚಟ್ಟೋಪಾಧ್ಯಾಯ ಎಂಬ ಬ್ರಾಹ್ಮಣ ನೆಲಸಿರುತ್ತಾರೆ. ಬಹಳ ಪ್ರಾಮಾಣಿಕವಾದ ಜೀವನ.ಶ್ರೇಷ್ಠವಾದ ಆದರ್ಶಗಳಿಂದ ಊರಿನಲ್ಲಿ ಜನಪ್ರಿಯರು.ಬಡತನವಿದ್ದರೂ ಸತ್ಯವಾದಿ. ಆದಿನಗಳಲ್ಲಿ ಇವರ ಸನ್ನಡತೆಯಿಂದ ಊರಿನ ಎಲ್ಲರ ಗೌರವಕ್ಕೆ ಪಾತ್ರರು. ಅದೇ ಊರಿನಲ್ಲಿ ಒಬ್ಬ ಜಮೀನ್ದಾರ. ಮಹಾ ವಂಚಕ. ಊರಿನಲ್ಲಿರುವ ಎಲ್ಲರ ಆಸ್ತಿಯ ಮೇಲೆ ಇವನ ಕಣ್ಣು. ಆಸ್ತಿಯ ವ್ಯಾಜ್ಯ ಒಂದಕ್ಕೆ ಇವನಿಗೆ ಸುಳ್ಳು ಸಾಕ್ಷಿ ಹೇಳುವವರು ಬೇಕಾಗುತ್ತಾರೆ. ಚಟ್ಟೋಪಾಧ್ಯರು ಸಾಕ್ಷಿ ಹೇಳಿಬಿಟ್ಟರೆ ಕೇಸಿನಲ್ಲಿ ಇವನ ಗೆಲವು ಗ್ಯಾರಂಟಿ ಎಂದು ತಿಳಿದು ಜಮೀನ್ದಾರನು ಇವರಲ್ಲಿಗೆ ಬರುತ್ತಾನೆ. ಚಟ್ಟೋಪಾಧ್ಯಾಯರಿಗೆ ಬೆದರಿಕೆ ಒಡ್ಡುತ್ತಾನೆ. ನೀವು ನನ್ನ ಪರವಾಗಿ ಸಾಕ್ಷಿ ಹೇಳಲೇ ಬೇಕು, ಇಲ್ಲದಿದ್ದರೆ ನೀವು ಊರಿನಲ್ಲಿರಲಾರಿರಿ, ನನ್ನ ಪರವಾಗಿ ಸಾಕ್ಷಿ ಹೇಳಿದರೆ ನಿಮಗೆ ಬೇಕಾದ್ದು ಕೊಡುತ್ತೇನೆ ಚಟ್ಟೋಪಾಧ್ಯಾಯರು ಜಮೀನ್ದಾರನ ಆಸೆಗೂ ಬಲಿಯಾಗಲಿಲ್ಲ, ಬೆದರಿಕೆಗೂ ಬಗ್ಗಲಿಲ್ಲ.ಕಡೆಗೆ ರಾಮಕೃಷ್ಣರಪರಮಹಂಸರ ತಂದೆಯವರು ಹಳ್ಳಿಯನ್ನು ತೊರೆಯ ಬೇಕಾಗುತ್ತದೆ.ರಾಮಕೃಷ್ಣ ಪರಮಹಂಸರು ಅಷ್ಟು ದೊಡ್ಡ ವ್ಯಕ್ತಿಯಾಗಿ ಬೆಳೆಯಲು ತಂದೆಯ ಸತ್ಯನಿಷ್ಟ ಜೀವನ, ಆದರ್ಶದ ಬದುಕು ಕಾರಣ ವಾಗುತ್ತದೆ. ಆದ್ದರಿಂದ ಮಕ್ಕಳು ಒಂದು ಉತ್ತಮವಾದ ದಾರಿಯಲ್ಲಿ ಬೆಳೆಯಬೇಕೆಂದರೆ ನಾವು ಉತ್ತಮ ಹಾದಿಯಲ್ಲಿ ನಡೆಯುತ್ತಿದ್ದೀವಾ? ಪ್ರಶ್ನೆ ಹಾಕಿಕೊಳ್ಳಬೇಕು. ನಮ್ಮ ಪ್ರತಿಯೊಂದು ನಡೆಯನ್ನೂ ಮಕ್ಕಳು ಗಮನಿಸುತ್ತಿರುತ್ತಾರೆಂಬುದು ನಮಗೆ ತಿಳಿದಿರಬೇಕು.
ಸತ್ಯಕ್ಕೆ ಅಪಚಾರ ವಾಗುವುದನ್ನು ಎಂದೂ ಸಹಿಸಬೇಡ:
ವಿವೇಕಾನಂದರ ಬಾಲ್ಯದ ಒಂದು ಘಟನೆ. ನರೇಂದ್ರನನ್ನು ಶಾಲೆಯಲ್ಲಿ ಮೇಸ್ಟ್ರು ಯಾವುದೋ ಒಂದು ಪ್ರಶ್ನೆ ಕೇಳುತ್ತಾರೆ. ನರೇಂದ್ರ ಬುದ್ದಿವಂತ. ಸರಿಯಾದ ಉತ್ತರ ಕೊಟ್ಟಿರುತ್ತಾನೆ. ಮೇಸ್ಟ್ರು ಅದನ್ನು ಒಪ್ಪದೆ ತಪ್ಪು ಎಂದು ಹೇಳುತ್ತಾರೆ.ನರೆಂದ್ರನಿಗೆ ಅದು ಸರಿ ಎಂದು ನೂರಕ್ಕೆ ಇನ್ನೂರರಷ್ಟು ಗೊತ್ತು. ಆದರೂ ಮೇಸ್ಟ್ರು ಸರಿಯಿಲ್ಲವೆಂದು ಹೇಳುತ್ತಾರೆ. ಇವನು ಮತ್ತೊಮ್ಮೆ ಹೇಳುತ್ತಾನೆ. ನನ್ನ ಉತ್ತರ ಸರಿಯಿದೆ ಎಂದು. ಮೇಸ್ಟ್ರಿಗೆ ಸಿಟ್ಟು ಬರುತ್ತೆ. ಬಲವಾಗಿ ಹೊಡೆಯುತ್ತಾರೆ. ಅಳುತ್ತಾ ಬಾಲಕ ನರೇಂದ್ರ ಮನೆಗೆ ಬರುತ್ತಾನೆ. ಅಮ್ಮ ಭುವನೇಶ್ವರಿ ಎಲ್ಲಾ ಕೇಳಿ ತಿಳಿದುಕೊಳ್ಳುತ್ತಾಳೆ. ಮಗುವಿಗೆ ಹೇಳುತ್ತಾಳೆ ಮಗು ನೀನು ಸರಿಯಾಗಿಯೇ ಹೇಳಿದ್ದೀಯ ನೀನು ಯಾವಾಗಲೂ ಸುಳ್ಳನ್ನು ಒಪ್ಪಿಕೊಳ್ಳಬೇಡ. ಸುಳ್ಳಿಗೆ ಹೊಂದಾಣಿಕೆ ಮಾಡಿಕೊಳ್ಳಬೇಡ.ಪ್ರಾಣ ಹೋದರೂ ಚಿಂತೆಯಿಲ್ಲ. ಸುಳ್ಳಿಗೆ ಶರಣಾಗ ಬೇಡ. ನರೆಂದ್ರನ ಕೈಯ ಮೇಲಿನ ಬಾಸುಂಡೆ ನೋಡಿದ ತಾಯಿ ಮಗು ನೀನು ಒಂದು ಸತ್ಯದ ಮಾತಿಗಾಗಿ ಏಟು ತಿನ್ನುವ ಬದಲು ಮೇಸ್ಟ್ರು ಹೇಳಿದ್ದನ್ನೇ ಒಪ್ಪಿ ಕೊಂಡು ಏಟು ತಪ್ಪಿಸಿಕೊಳ್ಳಬಹುದಿತ್ತು- ಎಂದು ಹೇಳ ಬಹುದಿತ್ತು, ಆದರೆ ಮಹಾತಾಯಿ ಹಾಗೆ ಮಾಡಲಿಲ್ಲ. ಸತ್ಯಕ್ಕೆ ಅಪಚಾರ ವಾಗುವುದನ್ನು ಎಂದೂ ಸಹಿಸಬೇಡವೆಂದು ಬಾಲ್ಯದಲ್ಲಿಯೇ ತಾಯಿಯು ಕಲಿಸಿದ್ದರಿಂದ ಒಬ್ಬ ಸತ್ಯವಾದಿ ವಿವೇಕಾನಂದ ನಾಗಿ ನರೇಂದ್ರನು ಬೆಳೆಯುತ್ತಾನೆ. ಕಷ್ಟವನ್ನು ತಪ್ಪಿಸಿಕೊಳ್ಳುವುದಕ್ಕೆ ದಾರಿಯನ್ನು ಸ್ವಲ್ಪ ಬದಲಿಸಿ ಸುಗುಮಗೊಳಿಸಲು ತಾಯಿ ಹೇಳಿಕೊಡಲಿಲ್ಲ.ನೇರವಾದ ದಾರಿಯಲ್ಲಿ ಕಲ್ಲುಮುಳ್ಳು ಇರುತ್ತೆ ಎಂದು ಸ್ವಲ್ಪ ಸುಗುಮವಾದ ದಾರಿ ಹಿಡಿಯೋಣವೆಂದು ತಾಯಿ ಹೇಳಿಕೊಡಲಿಲ್ಲ.ಮುಂದೆ ವಿವೇಕಾನಂದರು ಹೇಳಿಕೊಳ್ಳುತ್ತಾರೆ ಇವತ್ತು ನಾನು ಏನಾಗಿದ್ದರೂ ಅದಕ್ಕೆ ನನ್ನ ತಾಯಿ ಕಾರಣ ವೆಂದು
ಇತಿಹಾಸ ನಿರ್ಮಾಣ ಮಾಡುವವರು ನಾವೇ ಏಕಾಗ ಬಾರದು?:
ಸ್ವಾತಂತ್ರ್ಯ ಪೂರ್ವದಲ್ಲಿ ಇಪ್ಪತ್ತು ದಾಟಿರದ ಯುವಕರು ನಗುನಗುತ್ತಾ ನೇಣುಗಂಬವನ್ನು ಏರಿದ್ದು ಇತಿಹಾಸ ವಾದರೆ ಇಂದಿನ ನಮ್ಮ ಮಕ್ಕಳ ಕಥೆ ಏನು? ಪರೀಕ್ಷೆಯಲ್ಲಿ ಮೊದಲ RANK ಬದಲು ನಾಲ್ಕನೇ RANK ಬಂದರೆ ಮಕ್ಕಳು ಆತ್ಮಹತ್ಯೆಗೆ ಶರಣಾಗುವುದನ್ನು ನಾವು ಕಾಣುತ್ತೇವೆ? ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯವೇ ಇಲ್ಲ. ಮಕ್ಕಳ ಆತ್ಮ ಶಕ್ತಿಯನ್ನು ಜಾಗೃತ ಗೊಳಿಸಬೇಡವೇ? ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ನಾವು ಎಡವಿದ್ದೆಲ್ಲಿ? ಪ್ರಶ್ನೆ ಹಾಕಿಕೊಳ್ಳ ಬೇಡವೇ? ನಾವು ಈಗಲಾದರೂ ನಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ದಾರಿ ಕಂಡುಕೊಳ್ಳಬೇಡವೇ? ಎಲ್ಲರೂ ಯಾವುದೋ ದಾರಿಯಲ್ಲಿ ಹೋಗುತ್ತಿದ್ದಾರೆಂದರೆ ನಾವೂ ಅದೇ ದಾರಿಯಲ್ಲಿ ಹೋಗಬೇಕೆ? ನಾವು ಕುರಿಮಂದೆಯಲ್ಲಾ! ಅಲ್ಲವೇ?ನಾವು ಜೀವನವನ್ನು ಹೇಗೆಂದರೆ ಹಾಗೆ ತೆಗೆದುಕೊಳ್ಳ ಬಾರದು.ಒಂದು ಕುರಿ ಹಳ್ಳಕ್ಕೆ ಬಿದ್ದರೆ ಎಲ್ಲವೂ ಹಳ್ಳಕ್ಕೆ ಬೀಳುತ್ತವೆ. ಕುರಿಗೂ ನಮಗೂ ವೆತ್ಯಾಸ ಬೇಡವೇ? ಯಾವುದೋ ಭ್ರಮೆಯಲ್ಲಿ ನಾವು ಬದುಕುತ್ತಿದ್ದೇವೆ. ನಮಗೆ ವಿದ್ಯಾಭ್ಯಾಸ ಇರಬಹುದು ಆದರೆ ಸ್ವತಂತ್ರವಾದ ಆಲೋಚನೆಯನ್ನು ಕಳೆದುಕೊಂಡುಬಿಟ್ಟಿದ್ದೇವೆ. ನಮಗೆ ಪ್ರತಿಕ್ರಿಯಿಸುವ ಶಕ್ತಿಯೇ ಇಲ್ಲವಾಗಿದೆ. ಸಮಾಜದಲ್ಲಿರುವ ದೀನ ದರಿದ್ರರ ಸ್ಥಿತಿಗತಿ ನಮಗೆ ಅರ್ಥವಾಗುವುದೇ ಇಲ್ಲ. ನಮ್ಮ ಸಂಪತ್ತಿಗೆ, ನಮ್ಮ ವಿದ್ಯೆಗೆ ಸಮಾಜದ ಎಷ್ಟು ಜನರ ಕೊಡುಗೆ ಇದೆ ಎಂಬ ಅರಿವು ನಮಗಿದೆಯೇ? ಹಳ್ಳಿಯ ರೈತ ಬೆಳಿಯದಿದ್ದರೆ ನಗರದಲ್ಲಿರುವವರು ಹಣ ಇಟ್ಟುಕೊಂಡು ಏನು ಮಾಡಲು ಸಾಧ್ಯ? ಮನೆಯ ಮುಂದಿನ ಕಸವನ್ನು ಜಾಡಮಾಲಿ ಬಂದು ಗುಡಿಸ ದಿದ್ದರೆ ನಮ್ಮ ನಗರ ಕೊಳೆತು ನಾರುವು ದಿಲ್ಲವೇ? ಹಾಗಾದರೆ ಯಾರಿಗೆ ಮಹತ್ವ ಕೊಡಬೇಕು? ನಾವು ಕೊಡುತ್ತಿದ್ದೇವೆಯೇ? ಎಲ್ಲರಂತಾಗುವುದರಲ್ಲೇನೂ ಅತಿಶಯವಿಲ್ಲ. ಬೇರೆಯದಾಗಿಯೇ ಚಿಂತನೆ ನಡೆಸಿ.ವಿವೇಕಾನಂದರು ಹೇಳುತ್ತಾರೆ
ಇತಿಹಾಸ ನಿರ್ಮಾಣ ಮಾಡುವವರು ಯಾರೋ ಕೆಲವರೇ ಹೌದು, ಕೆಲವರು ನಾವೇ ಏಕಾಗ ಬಾರದು? ಆಕೆಲವರು ನಮ್ಮ ಮಕ್ಕಳೇ ಏಕಾಗ ಬಾರದು ? ಎಂಬ ಪ್ರಶ್ನೆ ಮಾಡಿಕೊಳ್ಳಬೇಕು.
ಮಕ್ಕಳಿಗೆ ಕಷ್ಟ ದು:ಖಗಳ ಅರಿವು ಮೂಡಿಸಿ: ನಮ್ಮ ಮಕ್ಕಳು ಹಾಗೆ ವಿಶೇಷ ವ್ಯಕ್ತಿತ್ವ ಉಳ್ಳ ಪ್ರಜೆಗಳಾಗಿ ಬೆಳೆಯಬೇಕಾದರೆ ಅವರನ್ನು ಹೇಗೆ ಬೆಳೆಸಬೇಕು?ಅದರಲ್ಲಿ ನಮ್ಮ ಹೊಣೆ ಏನು? ನಾವು ಚಿಂತಿಸಬೇಕಾಗುತ್ತದೆ.ನಮ್ಮ ಮಕ್ಕಳು ವಿಶೇಷವಾಗಿ ಬೆಳೆಯ ಬೇಕಾದರೆ ಆನಿಟ್ಟಿನಲ್ಲಿ ನಾವು ಅವರನ್ನು ಬೆಳೆಸಬೇಕಾಗುತ್ತದೆ.ಈಗಿನ ಮಕ್ಕಳನ್ನು ಗಮನಿಸಿದಾಗ ಅವರಲ್ಲಿ ಮನೋಸ್ಥೈರ್ಯ ಕಡಿಮೆ ಇರುವುದನ್ನು ನಾವು ಕಾಣುತ್ತೇವೆ. ಮಕ್ಕಳ ಮನೋದೌರ್ಬಲ್ಯಕ್ಕೆ ಕಾರಣ ಕಂಡುಕೊಂಡಿದ್ದೀವಾ? ನಿಜವಾಗಿ ಮಕ್ಕಳಿಗೆ ಕಷ್ಟದ ಪರಿಕಲ್ಪನೆಯೇ ಇಲ್ಲ. ಅವರಿಗೆ ಕಷ್ಟವೆಂದರೇನು-ಅದರ ಅರಿವಿಲ್ಲ. ಅವರಿಗೆ ಕಷ್ಟದ ಅರಿವಾಗದಂತೆ ಸುಖದಲ್ಲಿ ಬೆಳೆಸಿದ್ದೇವೆ. ನಮ್ಮ ಚಿಂತನೆ ಹೇಗಿದೆ ಎಂದರೆ ಮಕ್ಕಳು ಬಯಸಿದ್ದನ್ನೆಲ್ಲಾ ನಾವು ಅವರಿಗೆ ಒದಗಿಸಿ ಕೊಟ್ಟರೆ ನಮ್ಮ ಮಕ್ಕಳು ಚೆನ್ನಾಗಿ ಓದುತ್ತಾರೆ, ಅದಕ್ಕಾಗಿ ನಾವು ಶಾಲೆಯನ್ನು ಹುಡುಕುತ್ತೇವೆ, ಯಾವ ಶಾಲೆಯಲ್ಲಿ ಸೌಕರ್ಯಗಳು ಹೆಚ್ಚಿದೆ,ಯಾವ ಶಾಲೆಯಲ್ಲಿ ಕಟ್ಟಡ ಚೆನ್ನಾಗಿದೆ,ಯಾವ ಶಾಲೆಗಳಿಗೆ ಶ್ರೀಮಂತ ಮಕ್ಕಳೇ ಹೋಗುತ್ತಾರೆ,ಯಾವ ಶಾಲೆಯಲ್ಲಿ ಅತಿ ಹೆಚ್ಚು ಫೀಸು ವಸೂಲು ಮಾಡುತ್ತಾರೋ ಅಂತಹ ಶಾಲೆಯನ್ನು ಹುಡುಕಿ ಸೇರಿಸುತ್ತೇವೆ. ನಾವಂತೂ ನಮ್ಮ ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟಿದ್ದಾಯ್ತು, ಯಾವ ಅನುಕೂಲಗಳಿಲ್ಲದೆ ಬೆಳೆದಿದ್ದಾಯ್ತು ನಮ್ಮ ಮಕ್ಕಳಾದರೂ ಸುಖವಾಗಿರಲೆಂದು ನಮ್ಮ ಮಕ್ಕಳಿಗೆ ಕಷ್ಟದ ಸೋಂಕೂ ಬಾರದಂತೆ ಬೆಳೆಸುತ್ತೇವೆ, ಪರಿಣಾಮ ಏನಾಗುತ್ತದೆಂದರೆ -ದೊಡ್ಡವನಾದಾಗ ಅವನಿಗೆ ಒಂದು ಚಿಕ್ಕ ಕಷ್ಟ ಬಂದರೂ ತತ್ತರಿಸಿ ಹೋಗುತ್ತಾನೆ. ಅವನಿಗೆ ಅದನ್ನು ಎದುರಿಸುವ ಶಕ್ತಿ ಇಲ್ಲ. ಆತ್ಮ ಸ್ಥೈರ್ಯವಿಲ್ಲ.
ಹಾಗಾದರೆ ಮಕ್ಕಳನ್ನು ಹೇಗೆ ಬೆಳೆಸಬೇಕು? ಪೋಷಕರು ಕೆಲವು ಕಟ್ಟುಪಾಡುಗಳನ್ನು ಹಾಕಿಕೊಳ್ಳಬೇಕು, ನಿಮ್ಮಲ್ಲಿ ಈಗ ಸಾಕಷ್ಟು ಸಾಮರ್ಥ್ಯವಿರಬಹುದು, ನಿಮ್ಮ ಸಂಪತ್ತಿನಿಂದ ಮಕ್ಕಳಿಗೆ ನೀವು ಏನು ಬೇಕಾದರೂ ಪೂರೈಸಬಹುದು, ಆದರೂ ಮಕ್ಕಳಿಗೆ ನೀವು ಹೆಚ್ಚು ಹೆಚ್ಚು ಸೌಕರ್ಯಗಳನ್ನು ಒದಗಿಸಿದಾಗಲೂ ನೀವು ಅವರನ್ನು ಹೆಚ್ಚು ಹೆಚ್ಚು ದುರ್ಬಲರನ್ನಾಗಿ ಮಾಡುತ್ತಿದ್ದೀರೆಂಬುದನ್ನು ನೀವು ಮರೆಯ ಬಾರದು, ಅವರು ಮಕ್ಕಳಾಗಿದ್ದಾಗ ನೀವೇನೋ ಎಲ್ಲವನ್ನೂ ಪೂರೈಸಿ ಬಿಡುವಿರಿ, ಆದರೆ ಅವನು ದೊಡ್ದವನಾದಾಗ ಯಾವ ಕಷ್ಟಗಳೂ ಎದುರಾಗಬಹುದು,ಪ್ರತಿಯೊಬ್ಬ ಮನುಷ್ಯನ ಜೀವನ ದಲ್ಲೂ ಸುಖ-ದು:ಗಳೆಂಬುದು ಬಂದು ಹೋಗುವಂತಹ ಸಾಮಾನ್ಯ ಸಂಗತಿಗಳೆಂಬುದು ನಮಗೆ ತಿಳಿದಿರಬೇಕು.ಅದನ್ನು ಮಕ್ಕಳಿಗೆ ಕಲಿಸಿ ಕೊಡಬೇಡವೇ?ಬಾಲ್ಯದಲ್ಲಿ ಕಷ್ಟವನ್ನೇ ಅರಿಯದವನು ಮುಂದೆ ಬೆಳೆದು ದೊಡ್ದವನಾದಾಗ ಒಂದು ಚಿಕ್ಕ ಕಷ್ಟ ಎದುರಾದರೂ ಕುಸಿದು ಹೋಗುತ್ತಾನೆ.ಆದ್ದರಿಂದ ಚಿಕ್ಕಂದಿನಿಂದಲೇ ಮನಸ್ಸನ್ನು ಗಟ್ಟಿಗೊಳಿಸಬೇಕಿದೆ.ನಿಮ್ಮಲ್ಲಿ ಕೊಡುವ ಶಕ್ತಿ ಇದ್ದರೂ ಕೂಡ ಸ್ವಲ್ಪ ಮಟ್ಟಿಗೆ ನಿರಾಕರಿಸಿ, ನಾವು ಬಯಸಿದ್ದೆಲ್ಲಾ ಎಲ್ಲಾ ಕಾಲಕ್ಕೂ ಸಿಗುವುದಿಲ್ಲವೆಂಬ ನಿಜದ ಅರಿವನ್ನು ನಿಮ್ಮ ಮಕ್ಕಳಿಗೆ ಮಾಡಿ. ಸಮಾಜದಲ್ಲಿ ಸ್ಥಿತಿವಂತರು ಮಾತ್ರವೇ ಇಲ್ಲ, ದೀನ-ದರಿದ್ರರ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿದೆ. ಅವರ ಕಷ್ಟದ ಜೀವನದ ದೃಶ್ಯವನ್ನು ನಿಮ್ಮ ಮಕ್ಕಳಿಗೆ ಪರಿಚಯಿಸಿ.ದುರ್ಬಲರ ಬಗ್ಗೆ ಪ್ರೀತಿ, ಕರುಣೆ, ಸಹಾಯ ಹಸ್ತ ನೀಡುವುದನ್ನು ಕಲಿಸಿ, ಮುಖ್ಯವಾಗಿ ಸರಳ ಬದುಕನ್ನು ಕಲಿಸಿ.
ಮನಸ್ಸನ್ನು ಗಟ್ಟಿಗೊಳಿಸಿ:
ಬೆಳವಣಿಗೆಯ ಮುಖ್ಯ ಅಂಶವೆಂದರೆ ಮನಸ್ಸನ್ನು ಗಟ್ಟಿಗೊಳಿಸುವುದು. ಸಾಮಾನ್ಯವಾಗಿ ನಾವೆಲ್ಲಾ ಶರೀರಕ್ಕೆ ಗಮನ ಕೊಡುತ್ತೇವೆ. ಶರೀರ ಗಟ್ಟಿಯಾಗಲು ಅಗತ್ಯವಾದ ಒಳ್ಳೆಯ ಆಹಾರ, ವಿಟಮಿನ್ ಗಳನ್ನು ಮಕ್ಕಳಿಗೆ ಕೊಡುತ್ತೇವೆ. ಆದರೆ ಮನಸ್ಸು ಗಟ್ಟಿಯಾಗಲು ಏನು ಕೊಡುತ್ತೇವೆ? ಹಿಂದಿನ ನಮ್ಮ ಪರಂಪರೆಯಲ್ಲಿ ಮಕ್ಕಳ ಮನಸ್ಸನ್ನು ಗಟ್ಟಿ ಮಾಡಲು ತುಂಬಾ ಗಮನ ಕೊಡುತ್ತಿದ್ದರು. ರಾಜನೂ ಕೂಡ ತನ್ನ ಮಕ್ಕಳನ್ನು ಕಾಡಿನಲ್ಲಿದ್ದ ಗುರುಕುಲಕ್ಕೆಕಳಿಸುತ್ತಿದ್ದ. ಗುರುಕುಲದಲ್ಲಿ ಅತ್ಯಂತ ದೈಹಿಕ ಶ್ರಮದ ಕೆಲಸವನ್ನು ಮಾಡಬೇಕಿತ್ತು, ಹಸುಗಳ ಮೈ ತೊಳೆಯಬೇಕಿತ್ತು, ಕಾಡಿನಲ್ಲಿ ಅಲೆದು ಸಮಿತ್ತು ತರಬೇಕಿತ್ತು, ಅವನು ಯುವರಾಜನಾದರೂ ಕೂಡ ಗುರುವಿನ ಸೇವೆ ಮಾಡಲೇ ಬೇಕಿತ್ತು,ಇತರ ಮಕ್ಕಳೊಂದಿಗೆ ಸರಿಸಮಾನವಾಗಿ ಬದುಕ ಬೇಕಿತ್ತು,ಮಕ್ಕಳೆಲ್ಲಾ ಕೃಷಿಯ ಕೆಲಸ ಮಾಡಬೇಕಿತ್ತು, ಹೀಗೆ ಎಲ್ಲಾ ಬಗೆಯ ಕೆಲಸಗಳನ್ನು ಎಲ್ಲಾ ಮಕ್ಕಳೂ ಮಾಡುತ್ತಾ ಮಾಡುತ್ತಾ, ಕಷ್ಟ ಸುಖಗಳನ್ನು ಒಟ್ಟಾಗಿ ಎದುರಿಸುತ್ತಾ ಎದುರಿಸುತ್ತಾ ಗಟ್ಟಿಯಾಗುತ್ತಿದ್ದರು. ತನ್ಮೂಲಕ ಅವರು ದೊಡ್ದವರಾಗಿ ಬೆಳೆದಾಗ ಕಷ್ಟ ಬರಲಿ ಸುಖವಿರಲಿ ಒಂದೇ ರೀತಿಯಲ್ಲಿ ಎದುರಿಸಲು ಸಮರ್ಥರಾಗುತ್ತಿದ್ದರು.ಜೀವನದಲ್ಲಿ ಕಷ್ಟ ಬಂದೇ ಬರುತ್ತದೆ, ಆದರೆ ಕಷ್ಟ ಬಂದಾಗ ಧೈರ್ಯ ಗುಂದದೆ ಎದುರಿಸುತ್ತಿದ್ದರು.ಕಷ್ಟ ಬಂದಾಗ,ದು:ಬಂದಾಗ ಅದಕ್ಕೆ ಹೆದರದೆ ಧೈರ್ಯ ಗುಂದದೆ ಎದುರಿಸಿ ನಿಂತಾಗ ಅದು ತಾನೇ ತಾನಾಗಿ ಪಲಾಯನ ಮಾಡುತ್ತದೆ.
ಹೆದರಿ ಪಲಾಯನ ಮಾಡಬೇಡ, ಎದುರಿಸು:
ವಿವೇಕಾನಂದರ ಜೀವನದಲ್ಲಿನ ಒಂದು ಘಟನೆ. ಕಾಶಿಯಲ್ಲಿ ರಸ್ತೆಯಲ್ಲಿ ನಡೆದು ಹೋಗುವಾಗ ಒಂದು ಕೋತಿಗಳ ಹಿಂಡು ವಿವೇಕಾನಂದರನ್ನು ಅಟ್ಟಿಸಿಕೊಂಡು ಬರುತ್ತವೆ, ವಿವೇಕಾನಂದರು ರಸ್ತೆಯಲ್ಲಿ ಓಡಿ ಹೋಗುತ್ತಿರುತ್ತಾರೆ, ಕೋತಿಗಳು ಅಟ್ಟಿಸಿಕೊಂಡು ಬರುತ್ತಲೇ ಇವೆ. ಒಬ್ಬ ಸನ್ಯಾಸಿ ಎದುರಾಗುತ್ತಾನೆ.ಕೇಳುತ್ತಾನೆ ಏಕೆ ಓಡುತ್ತಿರುವೆ? ವಿವೇಕಾನಂದರು ಹೇಳುತ್ತಾರೆ- ನೋಡಿ ಅಲ್ಲಿ, ಕೋತಿಗಳ ಹಿಂಡು ಅಟ್ಟಿಸಿಕೊಂಡು ಬರುತ್ತಿವೆ
ಸನ್ಯಾಸಿ ಹೇಳುತ್ತಾನೆ- ನಿಲ್ಲು, ಹೆದರಿ ಪಲಾಯನ ಮಾಡಬೇಡ, ಎದುರಿಸು
ವಿವೇಕಾನಂದರು ಕೋತಿಯ ಹಿಂಡಿನ ಎದುರು ನಿಲ್ಲುತ್ತಾರೆ. ಅವರ ಧೀರ-ಗಂಭೀರ ನಿಲುವನ್ನು ಕಂಡ ಕೋತಿಗಳು ಹಿಂದಿರುಗಿ ಓಡುತ್ತವೆ. ಘಟನೆಯನ್ನು ವಿವೇಕಾನಂದರು ತಮ್ಮ ಶಿಷ್ಯರಿಗೆ ಹೇಳುತ್ತಿರುತ್ತಾರೆ. ಜೀವನದಲ್ಲಿ ಕಷ್ಟಗಳು ಬಂದಾಗ, ದು:ಬಂದಾಗ ಹೆದರಿ ಪಲಾಯನ ಮಾಡದಿರಿ, ಎದುರಿಸಿ ಮೆಟ್ಟಿನಿಲ್ಲಿ, ಕಷ್ಟಗಳು ನಿಮಗರಿವಿಲ್ಲದಂತೆ ಕರಗಿ ಹೋಗುತ್ತವೆ. ಕಷ್ಟಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ನಮ್ಮೊಳಗಿದೆ ಎಂಬುದನ್ನು ನಾವು ತಿಳಿಯ ಬೇಕು,ಕಷ್ಟಗಳು ಬರಲೇ ಬಾರದೆನ್ನಬೇಡಿ, ಸರ್ವಶಕ್ತನಾದ ಪರಮೇಶ್ವರನು ನನ್ನೊಳಗೆ ಇರುವಾಗ ಬಂದ ಕಷ್ಟಗಳನ್ನು ನನ್ನ ಆತ್ಮ ಶಕ್ತಿಯಿಂದ ಎದುರಿಸುತ್ತೇನೆಂಬ ವಿಶ್ವಾಸ ತಾಳಿ, ಮಕ್ಕಳಿಗೂ ಅದನ್ನೇ ಕಲಿಸಿ.ಮಕ್ಕಳಿಗೆ ಸೋಲಿನ ಅನುಭವವನ್ನೂ ಕೂಡ ಕಲಿಸಿ.
ಸೋಲಿನ ಅನುಭವ:
ಒಂದು ಚಿಕ್ಕ ಘಟನೆ- ಒಬ್ಬ ವಿದ್ಯಾರ್ಥಿ ಶಾಲೆಯಲ್ಲಿ ಎಲ್ಲಾ ಪರೀಕ್ಷೆಗಳಲ್ಲೂ ಮೊದಲ ಸ್ಥಾನ ಪಡೆಯುತ್ತಾ ಬಂದಿರುತ್ತಾನೆ. ಒಮ್ಮೆ ಅವನಿಗೆ ನಾಲ್ಕನೆಯ ಸ್ಥಾನ ಬಂದುಬಿಡುತ್ತೆ.ಅವನ ತಾಯಿ ನನ್ನೊಡನೆ ಹೇಳುತ್ತಾಳೆ ಮಾತಾಜಿ ನನಗೆ ತುಂಬಾ ಸಂತೋಷವಾಯ್ತು. ನನ್ನ ಮಗನಿಗೆ ಎಲ್ಲರೀತಿಯ ಅನುಭವವೂ ಆಗಬೇಕು, ಜೀವನ ಒಂದೇ ರೀತಿ ಇರುವುದಿಲ್ಲವೆಂದು ಅವನಿಗೆ ಅರಿವಾಗಬೇಕು. ಮಕ್ಕಳಿಗೆ ಜೀವನದಲ್ಲಿ ನಂಬಿಕೆ,ಶ್ರದ್ಧೆ, ಸಹನೆಗಳನ್ನು ಕಲಿಸಿಕೊಡಿ. ಮಗುವಿಗೆ ತಿಳಿಸಿ ನೀನು ಸಾಮಾನ್ಯನಲ್ಲ,ನೀನು ಅಸಾಮಾನ್ಯ, ನಮ್ಮ ದೇಶದಲ್ಲಿ ಆಗಿಹೋದ ಅನೇಕ ಮಹಾಪುರುಷರ ಜೀವನ ಚರಿತ್ರೆಯನ್ನು ಅವರಿಗೆ ತಿಳಿಸಿಕೊಟ್ಟು ನಿಮ್ಮ ಮಗುವಿಗೆ ಹೇಳಿ ನೀನು ಮಹಾಪುರುಷ ನಾಗಬೇಕು, ಅದಕ್ಕಾಗಿಯೇ ನಿನ್ನ ಜನ್ಮ ವಾಗಿದೆ ಜೀವನದಲ್ಲಿನ ಶ್ರೇಷ್ಟ ವಿಚಾರಗಳನ್ನು ಮಕ್ಕಳ ಕಿವಿಯಮೇಲೆ ನಿರಂತರ ಬೀಳುವಂತೆ ಮಾಡಿ.
ನಿಮ್ಮ ಆತ್ಮ ಪರೀಕ್ಷೆ ಮಾಡಿಕೊಳ್ಳಿ : ಮಕ್ಕಳಿಗೆ ಸಂಯಮದ ಪಾಠವನ್ನು ಹೇಳುವ ಮೊದಲು ನೀವು ಸಂಯಮವನ್ನು ಅಭ್ಯಾಸ ಮಾಡಿಕೊಳ್ಳಿ. ಮಕ್ಕಳು ಟಿವಿ ನೋಡಬಾರದೆಂದಾರೆ ನೀವು ಟಿವಿ ನೋಡುವದನ್ನು ನಿಲ್ಲಿಸಿ. ನೀವು ಟಿವಿ ನೋಡುತ್ತಾ ಮಕ್ಕಳನ್ನು ನೀನು ರೂಮಿನಲ್ಲಿ ಓದು ಎಂದು ಹೇಳಿದರೆ ಅದು ಯಾವ ನ್ಯಾಯ?ಮೊದಲು ನೀವು ಸಂಯಮ ಕಲಿತುಕೊಳ್ಳಿ.ನೀವು ಟಿವಿ ನೋಡುವುದನ್ನು ಬಿಟ್ಟರೆ ಮಕ್ಕಳೂ ಸಂತೋಷದಿಂದಲೇ ಬಿಡುತ್ತಾರೆ. ಒಳ್ಳೆಯ ಕಾರ್ಯಕ್ರಮ ಒಂದನ್ನು ನೀವು ಟಿವಿ ಯಲ್ಲಿ ನೋಡ ಬೇಕೆಂದರೆ ಮಕ್ಕಳನ್ನೂ ಕೂರಿಸಿಕೊಂಡು ಒಟ್ಟಿಗೇ ನೋಡಿ.ಉತ್ತಮ ಕಾರ್ಯಕ್ರಮಗಳನ್ನೇ ನೋಡಿ. ಮಕ್ಕಳಿಗೆ ಆದರ್ಶಗಳನ್ನು ಹೇಳುವ ಮುಂಚೆ ನಾವು ಜೀವನದಲ್ಲಿ ಅದನ್ನು ಅಳವಡಿಸಿ ಕೊಂಡಿದ್ದೀವಾ? ಯೋಚಿಸಿ. ಸಹನೆಯ ಮಾತನ್ನು ಮಕ್ಕಳಿಗೆ ಹೇಳುವಾಗ ನಾವು ತಂದೆತಾಯಿ ಹೇಗಿದ್ದೇವೆಂದು ಆತ್ಮ ಪರೀಕ್ಷೆ ಮಾಡಿಕೊಳ್ಳಿ. ಮೊದಲು ಆಚರಣೆಗೆ ತಂದು ನಂತರ ಮಕ್ಕಳಿಗೆ ಹೇಳಿದಾಗ ನೀವು ಅದ್ಭುತ ಪರಿಣಾಮವನ್ನು ಕಾಣಬಲ್ಲಿರಿ ಅಪ್ಪ-ಅಮ್ಮ ಪರಸ್ಪರ ಹೇಗಿರುತ್ತಾರೆ, ಸಿಟ್ಟು ಮಾಡುತ್ತಾರಾ? ಕೆಟ್ಟ ಮಾತನ್ನಾಡುತ್ತಾರಾ? ಮಕ್ಕಳು ನಿಮ್ಮನ್ನು ಸದಾಕಾಲ ನೋಡುತ್ತಲೇ ಇರುತ್ತಾರೆ. ಮಕ್ಕಳು ಹೇಳಿದ್ದನ್ನು ಕಲಿಯುವುದಿಲ್ಲ,ಬದಲಿಗೆ ನೋಡಿದ್ದನ್ನು ಕಲಿಯುತ್ತಾರೆ.ಅಪ್ಪ-ಅಮ್ಮ ಹೇಗೆ ಬದುಕುತ್ತಾರೆ, ಅದರಂತೆ ಮಕ್ಕಳು ಬೆಳೆಯುತ್ತಾರೆ.ನೀವು ಮನೆಯಲ್ಲಿ ಎಷ್ಟು ಪವಿತ್ರವಾತಾವರಣ ವನ್ನುನಿರ್ಮಿಸುತ್ತೀರಿ, ಎಷ್ಟು ಶಾಂತತೆ ಕಾಪಾಡುತ್ತೀರಿ, ಎಷ್ಟು ಆನಂದದ ವಾತಾವರಣ ನಿರ್ಮಿಸುತ್ತೀರಿ, ಅಷ್ಟು ಸುರಕ್ಷಿತವಾಗಿ ನಿಮ್ಮ ಮಕ್ಕಳು ಬೆಳೆಯುತ್ತಾರೆ.
ಶಾಂತ ಸ್ವಭಾವದ ತಾಯಿ+ ಪ್ರಭುದ್ಧ ತಂದೆ = ಶ್ರೇಷ್ಠ ಮಕ್ಕಳು
ಹಳ್ಳಿಗಳಲ್ಲಿ ಅನೇಕ ಮನೆಗಳಲ್ಲಿ ನಾವು ಗಮನಿಸುತ್ತೇವೆ.
ಮನೆ ತುಂಬಾಜನ. ತಾಯಿ ಯಾದವಳು ಹೆಚ್ಚೇನೂ ಓದಿರುವುದಿಲ್ಲ.ಶಾಂತವಾಗಿ ಎಲ್ಲರಿಗೂ ಅಡಿಗೆ ಮಾಡಿ ಪ್ರೀತಿಯಿಂದ ಉಣ ಬಡಿಸಿ,ಎಲ್ಲರಿಗೂ ಪ್ರೀತಿಯಿಂದ ಸೇವೆ ಮಾಡುತ್ತಾ ನಂತರ ಕಟ್ಟಕಡೆಗೆ ತಾನು ಉಳಿದಿದ್ದರೆ ಊಟ ಮಾಡುತ್ತಾಳೆ.ಅಂತಹ ಶಾಂತ ವಾತಾವರಣದಲ್ಲಿ ಬೆಳೆದ ಮಕ್ಕಳು ಅದ್ಭುತ ವ್ಯಕ್ತಿತ್ವ ಪಡೆಯುತ್ತಾ ಬೆಳೆಯುತ್ತಾರೆ. ಶಾಂತ ಸ್ವಭಾವದ ತಾಯಿ, ಪ್ರಭುದ್ಧ ತಂದೆ,ಇಂತಹ ಮನೆಯಲ್ಲಿ ಬೆಳೆಯುವ ಮಕ್ಕಳು ಸಹಜವಾಗಿ ಶ್ರೇಷ್ಟರಾಗಿ ಬೆಳೆಯುತ್ತಾರೆ.ಮಕ್ಕಳು ಗಮನಿಸುತ್ತಿರುತ್ತಾರೆ-ತಂದೆತಾಯಿ ಮನೆಯಲ್ಲಿ ಮಾತನಾಡುವಾಗ ಏನು ಮಾತಾಡ್ತಾರೆ,ದೇವರ ಕುರಿತು ಮಾತಾಡ್ತಾರಾ,ಸಮಾಜದ ಕುರಿತು ಮತಾಡ್ತಾರಾ, ದೇಶದ ಕುರಿತು ಮಾತಾಡ್ತಾರಾ!ಮಕ್ಕಳ ಬೆಳವಣಿಗೆ ಬಹಳ ಸುಲಭ,ಅವರಿಗೆ ನಾವು ಏನೂ ಹೇಳಬೇಕಾಗಿಲ್ಲ, ಅವರು ಮನೆಯಲ್ಲಿ-ಸುತ್ತಮುತ್ತ ಏನು ನೋಡುತ್ತಾರೋ, ಏನು ಗಮನಿಸುತ್ತಾರೋ, ಅದನ್ನು ಕಲಿಯುತ್ತಾರೆ.
ಮುದ್ದಿನಜೊತೆಗೆ ಗುದ್ದು: ಒಬ್ಬ ತಾಯಿ ಸ್ವಾಮೀಜಿ ಪುರುಷೋತ್ತಮಾನಂದರ ಬಳಿ ಬಂದು ಸ್ವಾಮೀಜಿಯವರನ್ನು ಕೇಳುತ್ತಾಳೆ ಸ್ವಾಮೀಜಿ ನನ್ನ ಮಗ ನನ್ನ ಮಾತನ್ನು ಕೇಳುವುದೇ ಇಲ್ಲ ವಲ್ಲಾ, ಏನು ಮಾಡಲಿ? ಸ್ವಾಮೀಜಿ ಹೇಳುತ್ತಾರೆ.- ಚಿಕ್ಕಂದಿನಲ್ಲಿ ನೀನು ಮಗುವನ್ನು ಮುದ್ದುಮಾಡುವುದರ ಜೊತೆಗೆ ಗುದ್ದನ್ನೂ ಕೊಟ್ಟಿದ್ದರೆ ಇಂದು ನಿನ್ನ ಮಗ ನಿನ್ನ ಮಾತು ಕೇಳ್ತಾ ಇದ್ದ. ಆದರೆ ಒಂದು ಮಾತು ನಾವು ತಿಳಿದು ಕೊಳ್ಳ ಬೇಕು-ಸ್ವಾಮೀಜಿ ಹೇಳಿದ್ದು ಮುದ್ದಿನ ಜೊತೆಗೆ ಗುದ್ದು ಅಂದರೆ ಕೇವಲ ಮುದ್ದು ಮಾಡಿದರೂ ಸಾಲದು, ಕೇವಲ ಗುದ್ದು ಕೊಟ್ಟರೂ ಸಾಲದು. ಮಾತನ್ನು ಅರ್ಥ ಮಾಡಿಕೊಳ್ಳಬೇಕು. ಹೃದಯಪೂರ್ವಕವಾಗಿ ತಾಯಿಯ ಪ್ರೀತಿ ಇದ್ದಾಗ ಮಾತ್ರ ಗುದ್ದು ಮಕ್ಕಳಲ್ಲಿ ಪರಿಣಾಮ ಉಂಟು ಮಾಡುತ್ತೆ.
ಮಕ್ಕಳನ್ನು ಬೆಳೆಸುವುದು ಒಂದು ಕಲೆಯೂ ಹೌದು, ಸವಾಲೂ ಹೌದು:
ನಿಮ್ಮ ಮಕ್ಕಳು ಹೀಗೆ ಬೆಳೆಯ ಬೇಕು ಎಂದು ನೀವು ನಿರೀಕ್ಷಿಸುವ ಮೊದಲು ನೀವು ಹಾಗಾಗಿರಬೇಕು. ಮಕ್ಕಳು ಸತ್ಯ ಹೇಳಬೇಕೆಂದರೆ ಮೊದಲು ನೀವು ಸತ್ಯವಂತರಾಗಿ,ಯಾವ ಸದ್ಗುಣಗಳನ್ನು ನೀವು ನಿಮ್ಮ ಮಕ್ಕಳಲ್ಲಿ ಅಪೇಕ್ಷಿಸುತ್ತೀರೋ ಅವುಗಳನ್ನು ಮೊದಲು ನೀವು ರೂಢಿಸಿಕೊಳ್ಳಿ. ಅತಿಯಾಗಿ ಸಿಹಿತಿನ್ನುತ್ತಿದ್ದ ಒಂದು ಮಗುವಿಗೆ ನೀನು ಅತಿಯಾಗಿ ಸಿಹಿ ತಿನ್ನ ಬೇಡ ಎಂದು ಹೇಳಲು ಶ್ರೀ ರಾಮಕೃಷ್ಣ ಪರಮಹಂಸರು ತಾವು ಮೊದಲು ಸಿಹಿ ತಿನ್ನುವುದನ್ನು ನಿಲ್ಲಿಸಿ ತಾವು ಸಿಹಿಯ ಆಸೆ ತ್ಯಜಿಸಿದ ಮೇಲೆ ಮಗುವಿಗೆ ಮಗು, ನೀನು ಸಿಹಿ ತಿನ್ನ ಬೇಡ ಎಂದು ಹೇಳಿದ ಕಥೆ ನಮಗೆ ಗೊತ್ತಿರ ಬೇಕು.
ಮಕ್ಕಳಲ್ಲಿ ಹೆದರಿಕೆ ಉಂಟು ಮಾಡಬೇಡಿ: ಮಕ್ಕಳಲ್ಲಿ ಭಯವನ್ನು ಉಂಟು ಮಾಡಲೇ ಬೇಡಿ ಕತ್ತಲಿಗೆ ಹೋಗ ಬೇಡ,ಗುಮ್ಮ ಹಿಡಿದುಕೊಂಡು ಬಿಡುತ್ತೆ -ಹೀಗೆ ಮಕ್ಕಳಲ್ಲಿ ಸಲ್ಲದ ಭಯವನ್ನು ಉಂಟು ಮಾಡುವ ತಾಯಂದಿರಿದ್ದಾರೆ. ಇದರಿಂದ ಮುಂದೆ ಮಕ್ಕಳು ಕಾಣದ ಜಾಗಕ್ಕೆ ಹೋಗುವಾಗ ಭಯ ಭೀತರಾಗುತ್ತಾರೆ.ಅಪರಿಚಿತ ಜಾಗಕ್ಕೆ ಹೋಗುವ ಸಾಹಸವನ್ನೇ ಮಾಡುವುದಿಲ್ಲ. ಬದಲಿಗೆ ಮಕ್ಕಳಿಗೆ ಹೇಳಿ ಕತ್ತಲಲ್ಲಿ ಹೋಗು, ಏನಿದೆ,ಪರೀಕ್ಷೆ ಮಾಡಿ ನೋಡು? ಏನೂ ಆಗುವುದಿಲ್ಲ ಹೀಗೆ ಧೈರ್ಯ ತುಂಬಿ. ಅದರಿಂದ ಮುಂದೆ ನಿಮ್ಮ ಮಗ ಸಾಹಸಿಯಾಗಿ ಬೆಳೆಯುತ್ತಾನೆ.
ಮಕ್ಕಳನ್ನು ಎಡವಲು ಬಿಡಿ: ಮಕ್ಕಳು ತಪ್ಪು ಮಾಡಿದರೂ ಚಿಂತೆಯಿಲ್ಲ, ಅವರಿಗೆ ಮಾಡಲು ಬಿಡಿ. ನಡೆಯುವ ಕಾಲು ಎಡುವದಿರದು-ಎಂಬ ಮಾತಿನಂತೆ ಎಡವಿದರೂ ಪರವಾಗಿಲ್ಲ ಮುಂದೆ ನಡೆಯುವುದನ್ನು ಅವನು ಕಲಿಯುತ್ತಾನೆ ಆದ್ದರಿಂದ ಎಡವಲು ಬಿಡಿ.ಮಕ್ಕಳನ್ನು ಸ್ವತಂತ್ರವಾಗಿ ಬೆಳೆಯಲು ಬಿಡಿ.ಮುಂದೆ ಜೀವನದಲ್ಲಿ ಎಷ್ಟು ಎಡರು ತೊಡರುಗಳು ಬರುತ್ತದೋ ಯಾರಿಗೆ ಗೊತ್ತು, ಮುಂದೆ ಅವುಗಳನ್ನೆಲ್ಲಾ ಎದುರಿಸುವಂತಾಗಲು ಈಗ ಎಡವಲು ಬಿಡಿ, ತಿದ್ದಿಕೊಂಡು ನಡೆಯುವುದನ್ನು ಕಲಿಯುತ್ತಾನೆ.
ಮಗುವಿನ ಬೆನ್ನಿನ ಮೇಲೊಂದು ಲಗ್ಗೇಜು: ಸ್ವಾಮೀಜಿಯೊಬ್ಬರು ಯೂರೋಪ್ ಪ್ರವಾಸ ಮಾಡುವಾಗ ವಿಮಾನ ನಿಲ್ದಾಣದಲ್ಲಿ ತಾಯಿಯೊಬ್ಬಳು ಮಗುವಿನೊಡನೆ ಬರುತ್ತಿರುವುದನ್ನು ನೋಡುತ್ತಾರೆ. ತಾಯಿಯಹತ್ತಿರ ಒಂದು ಲಗ್ಗೇಜ್ ಇದೆ, ಐದು ವರ್ಷದ ಮಗುವಿನ ಬೆನ್ನಿನ ಮೇಲೂ ಒಂದು ಪುಟ್ಟ ಬ್ಯಾಗ್ ಇದೆ. ಬ್ಯಾಗಿನಲ್ಲಿ ಮಗುವಿನ ಬಟ್ಟೆಗಳು. ತಂದೆ ಬರುತ್ತಾನೆ. ಮಗುವನ್ನು ಮುದ್ದಾಡುತ್ತಾನೆ- ಅಯ್ಯೋ ಮಗುವಿನ ಬೆನ್ನಿನಮೇಲೆ ಹೊರೆ ಯಿದೆಯಲ್ಲಾ!! ಎಂದು ಸಂಕಟ ಪಟ್ಟು ಬ್ಯಾಗನ್ನು ತಾನು ಪಡೆಯುವುದಿಲ್ಲ ಬದಲಿಗೆ ಅದಕ್ಕೇ ಹೊರಲು ಬಿಡುತ್ತಾನೆ. ತನ್ನ ಜೀವನದ ಜವಾಬ್ದಾರಿ ತಾನೇ ಕಲಿಯಲೆಂಬ ಉದ್ದೇಶ ಅದರ ಹಿಂದೆ ಇರುವುದನ್ನು ಆತಂದೆ ತಿಳಿಸುತ್ತಾನೆ. ಮಗುವಿಗೆ ಯಾವಾಗಲೂ ನಿನಗೆ ಆಗುವುದಿಲ್ಲ, ನೀನಿನ್ನೂ ಚಿಕ್ಕವನು ಮಾಡಬೇಡ, ಹೀಗೆ ನಕಾರಾತ್ಮಕ ಮಾತುಗಳನ್ನು ಹೇಳಲೇ ಬೇಡಿ.ಅದು ತಪ್ಪು ಮಾಡಿದರೂ ಚಿಂತೆಯಿಲ್ಲ ಮಾಡಲು ಬಿಡಿ.ಹತ್ತು ಸಲ ತಪ್ಪು ಮಾಡಿದರೂ ಚಿಂತೆಯಿಲ್ಲ. ಹನ್ನೊಂದನೆಯ ಭಾರಿಯೂ ಮಾಡಲು ಬಿಡಿ, ಉತ್ತೇಜನ ಕೊಡಿ,ಆಗ ಸರಿ ಮಾಡುತ್ತಾನೆ.
ಅಮ್ಮ ಹೇಳಿದ್ದೆಲ್ಲಾ ಸತ್ಯ: ಮಕ್ಕಳು ಹೇಗೆ ಭಾವಿಸುತ್ತಾರೆಂದರೆ ಒಂದು ಸತ್ಯ ಘಟನೆಯನ್ನು ಗಮನಿಸಬೇಕು.ಆಕಾಶದಲ್ಲಿ ಮೋಡಕವಿದ ವಾತಾವರಣವಿರುತ್ತದೆ, ತಾಯಿ ಮಗುವಿಗೆ ಹೇಳುತ್ತಾಳೆ ಮಳೆ ಬರುತ್ತೆ,ಹೊರಗೆ ಹರವಿರುವ ಬಟ್ಟೆಯನ್ನುತೆಗೆದುಕೊಂಡು ಬಾ ಎಂದು. ಬಟ್ಟೆ ತಂದ ಸ್ವಲ್ಪ ಸಮಯದಲ್ಲಿಯೇ ಮಳೆ ಬಂದು ಬಿಡುತ್ತೆ.ಮಗುವಿಗೆ ಅನ್ನಿಸುತ್ತೆ-ತನ್ನ ತಾಯಿ ಹೇಳಿದಂತೆ ಆಗುತ್ತೆ. ಇನ್ನೊಂದು ದಿನ ಅಪ್ಪ ಕಛೇರಿಯಿಂದ ಫೋನ್ ಮಾಡುವುದಾಗಿ ಮನೆಯಲ್ಲಿ ಹೇಳಿ ಹೋಗಿರುತ್ತಾನೆ.ಫೋನ್ ರಿಂಗಣಿಸುತ್ತದೆ, ತಾಯಿ ಮಗುವಿಗೆ ಹೇಳುತ್ತಾಳೆ ಅಪ್ಪ ಫೋನ್ ಮಾಡಿರ ಬಹುದು ಫೋನ್ ತೆಗೆದುಕೋ ಮಗು ಫೋನ್ ತೆಗೆದುಕೊಳ್ಳುತ್ತೆ. ಹೌದು ಅಪ್ಪನೇ ಫೋನ್ ಮಾಡಿರುವುದು. ಈಗಲೂ ಮಗುವಿಗೆ ಅನ್ನಿಸುತ್ತೆ ನಮ್ಮ ಅಮ್ಮ ಹೇಳೋದೆಲ್ಲಾ ನಿಜ.ಕಾಲಿಂಗ್ ಬೆಲ್ ಆಗುತ್ತೆ.ಬೆಲ್ ಶಬ್ಧ ತಾಯಿಗೆ ಮಾತ್ರ ಕೇಳಿಸಿರುತ್ತೆ, ತಾಯಿ ಮಗುವಿಗೆ ಹೇಳುತ್ತಾಳೆ ಹೋಗಿ ಬಾಗಿಲು ತೆಗೆ, ಯಾರೋ ಬಂದಿದ್ದಾರೆ. ಮಗು ಬಾಗಿಲು ತೆಗೆಯುತ್ತೆ. ಹೌದು ಯಾರೋ ಬಂದಿದ್ದಾರೆ. ಮಗುವಿಗೆ ಒಂದು ಸಂಗತಿ ಗ್ಯಾರಂಟಿಯಾಯ್ತು. ಅಮ್ಮ ಹೇಳೋದೆಲ್ಲಾ ನಿಜವಾಗುತ್ತೆ. ಮಗುಸ್ವಲ್ಪ ದೊಡ್ಡದಾಯ್ತು, ಶಾಲೆಗೆ ಹೋಗುವಾಗ ತಂಟೆ ಮಾಡುತ್ತಾನೆ, ಆಗ ತಾಯಿ ಹೇಳಿದಳು ನೀನು ಮೂರ್ಖ, ಶಾಲೆಗೆ ಹೋಗಬೇಡ, ದನಾ ಕಾಯಲು ಹೋಗು ಅಮ್ಮ ಹೇಳಿದ್ದೆಲ್ಲಾ ನಿಜವಾಗುತ್ತದೆಂಬುದು ಈಗಾಗಲೇ ಮಗುವಿನ ಮನಸ್ಸಿನಲ್ಲಿ ಇದೆ, ಆಮಗು ತಾನು ಮೂರ್ಖನೇ ಇರಬೇಕು, ಅಂತಾ ಅಂದು ಕೊಂಡ.ಬರಬರುತ್ತಾ ದಡ್ದನೇ ಆಗಿಬಿಟ್ಟ.ಮನ:ಶಾಸ್ತ್ರದಲ್ಲಿ ಸಂಶೋಧನೆ ಮಾಡಿರುವ ಘಟನೆ ಇದು. ಮನೆಯಲ್ಲಿ ನಕಾರಾತ್ಮಕ ಮಾತುಗಳನ್ನು ಆಡಲೇ ಬೇಡಿ.
ಮಕ್ಕಳಿಗೆ ಹಂಚಿಕೊಂಡು ತಿನ್ನುವುದನ್ನು ಕಲಿಸಿ: ಮಕ್ಕಳು ಮನೆಯಲ್ಲಿ ಏನೋ ತಿಂಡಿ ತಿನ್ನುತ್ತಾ ಇರುತ್ತಾರೆ ಯಾರೋ ಬೇರೆ ಮಕ್ಕಳು ಮನೆಗೆ ಬರುವುದು ಗೊತ್ತಾಗುತ್ತೆ, ಆಗ ನಾವು ಸಾಮಾನ್ಯವಾಗಿ ಏನು ಮಾಡ್ತೇವೆ? ಹೋಗು ಒಳಗೆ ಹೋಗಿ ತಿನ್ನು,ಅಂತಾ ಮಕ್ಕಳಿಗೆ ಹೇಳುತ್ತೇವೆ.ಅದರ ಬದಲು ಮಗುವಿಗೂ ಸ್ವಲ್ಪ ಕೊಡು, ಆಮಗುವೂ ನಿನ್ನಂತ ಮಗುವೇ ಅಲ್ಲವೇ? ಎನ್ನುವ ಒಳ್ಳೆಯ ಮಾತನ್ನು ನಾವು ಹೇಳಿಕೊಡುತ್ತೇವೆಯೇ?
ತಾಯಿಯ ಮಾತು ವೇದ ವಾಕ್ಯ:
ಕೊನೆಯದಾಗಿ ಒಂದು ಘಟನೆ. ಒಂದು ಹಳ್ಳಿಯಲ್ಲಿ ಒಬ್ಬ ವಿಧವೆ.ಅತೀ ಬಡತನದಿಂದ ಮಗನನ್ನುಪಟ್ಟಣದಲ್ಲಿ ಓದಿಸಿ ದೊಡ್ದವನನ್ನಾಗಿ ಮಾಡುತ್ತಾಳೆ. ಒಂದು ಸರಕಾರಿ ಕೆಲಸ ಸಿಗುತ್ತದೆ. ಅಲ್ಲಿಯವರಗಿದ್ದ ಬಡತನವೆಲ್ಲಾ ದೂರವಾಗುತ್ತದೆಂದು ಹಳ್ಳಿಯ ಜನರೆಲ್ಲಾ ಮಾತನಾಡಿಕೊಳ್ಳುತ್ತಾರೆ.ಸಂಬಳದ ಜೊತೆಗೆ ಲಂಚವೂ ಸಿಗುವಂತ ಕೆಲಸವೆಂದು ಜನರಾಡುವ ಮಾತು ತಾಯಿಯ ಕಿವಿಗೆ ಬೀಳುತ್ತದೆ. ಅಮ್ಮನಿಗೆ ವಿಷಯವನ್ನು ತಿಳಿಸಲು ಮಗ ಹಳ್ಳಿಗೆ ಬಂದು ನಮಸ್ಕರಿಸುತ್ತಾನೆ, ಆಗ ತಾಯಿಯು ನೀನು ನನ್ನ ಎದೆಹಾಲು ಕುಡಿದು ಬೆಳೆದ ಮಗನೇ ಆಗಿದ್ದಲ್ಲಿ ಸಂಬಳದ ಹೊರತಾಗಿ ಒಂದು ಬಿಡಿಗಾಸನ್ನೂ ಲಂಚವಾಗಿ ಪಡೆಯ ಕೂಡದು, ನನ್ನ ಬಡತನ ಹೀಗೆಯೇ ಇದ್ದರೂ ಚಿಂತೆಯಿಲ್ಲ, ನೀನು ಮಾತ್ರ ಪ್ರಾಮಾಣಿಕನಾಗಿ ಜನರ ಸೇವೆ ಮಾಡಬೇಕು ಎಂದು ಹರಸುತ್ತಾಳೆ.ಮಗ ಅಮ್ಮನ ಮಾತನ್ನು ಶಿರಸಾ ಪಾಲಿಸುತ್ತಾನೆ.ದೊಡ್ಡ ಅಧಿಕಾರಿಯಾಗಿ ಪ್ರಾಮಾಣಿಕನಾಗಿ ಸೇವೆ ಸಲ್ಲಿಸಿ ಹೆಸರು ಗಳಿಸುತ್ತಾನೆ.ಅಮ್ಮನಿಗೆ ಆನಂದ ವಾಗುತ್ತದೆ. ಸಮಾಜದಲ್ಲಿ ಇಂತಾ ಉದಾಹರಣೆಗಳು ಸಾಕಷ್ಟಿವೆ. ನೀವುಗಳೂ ಕೂಡ ಒಳ್ಳೆಯ ತಂದೆ-ತಾಯಿಯಾಗಿ ಆದರ್ಶ ವಾಗಿ ಬಾಳುತ್ತಾ ನೀವೂ ಬೆಳೆಯಿರಿ ಮಕ್ಕಳನ್ನೂ ಉತ್ತಮರನ್ನಾಗಿ ಬೆಳೆಸಿ.