ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Friday, August 27, 2010

ವೇದೋಕ್ತ ಜೀವನ ಪಥ - ಭಗವತ್ ಸ್ವರೂಪ -1

ಸನ್ಮಿತ್ರರೇ,
ಪಂಡಿತ ಸುಧಾಕರ ಚತುರ್ವೇದಿಯವರ ವಿಚಾರಗಳನ್ನು 'ವೇದೋಕ್ತ ಜೀವನ ಪಥ'ದಲ್ಲಿ ನಿಮ್ಮ ಮುಂದಿಡಲಾಗುತ್ತಿರುವುದು ನಿಮ್ಮ ಮೆಚ್ಚುಗೆ ಗಳಿಸಿದೆ.ಅವರು 1897ರ ರಾಮನವಮಿಯಂದು ಬೆಂಗಳೂರಿನ ಬಳೇಪೇಟೆಯಲ್ಲಿ ಜನಿಸಿ, 13ನೆಯ ವಯಸ್ಸಿನಲ್ಲಿ ಉತ್ತರ ಭಾರತದ ಪ್ರಸಿದ್ಧ ಕಾಂಗಡಿ ಗುರುಕುಲಕ್ಕೆ ಸೇರಿ ನಾಲ್ಕು ವೇದಗಳನ್ನು ಅಧ್ಯಯನ ಮಾಡಿ ನಿಜ ಅರ್ಥದಲ್ಲಿ 'ಚತುರ್ವೇದಿ'ಯಾದವರು. ಗಾಂಧೀಜಿಯವರ ಒಡನಾಡಿಯಾಗಿದ್ದವರು. ಸ್ವಾತಂತ್ರ್ಯಚಳುವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿ 13 ವರ್ಷಗಳಿಗೂ ಹೆಚ್ಚುಕಾಲ ಸೆರೆವಾಸ ಅನುಭವಿಸಿದವರು. ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಸಾಕ್ಷಿಯಾಗಿದ್ದವರು. ಅವರು 'ವಿಜಯ ಕರ್ನಾಟಕ' ಪತ್ರಿಕೆಗೆ ಸಂದರ್ಶನದಲ್ಲಿ ಹೇಳಿದ್ದು: "ನಾನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲು ಪ್ರೋತ್ಸಾಹ ಸ್ವಾಮಿ ಶ್ರದ್ಧಾನಂದರದಾದರೂ ಆಂತರಿಕವಾಗಿ ವೇದಗಳೇ ಪ್ರೇರಣೆ. 'ಅಧೀನಾಃ ಸ್ಯಾಮ ಶರದಃ ಶತಂ, ಭೂಯಶ್ಚ ಶರದಃ ಶತಾತ್' - ನೂರು ವರ್ಷಕ್ಕೂ ಹೆಚ್ಚುಕಾಲ ಸ್ವಾತಂತ್ರ್ಯದಿಂದ ಬಾಳೋಣ ಎಂಬ ಅರ್ಥದ ಸಾಲು ಸಂಗ್ರಾಮಕ್ಕೆ ಕರೆತಂದಿತು. ಭಾರತೀಯರಿಗೆ ಗೌರವ ಕೊಡದೆ ಅವರು ಕೀಳಾಗಿ ಕಾಣುತ್ತಿದ್ದುದು ನಾವೆಲ್ಲಾ ಚಳುವಳಿಗೆ ಧುಮುಕಲು ಪ್ರೇರಣೆಯಾಯಿತು". ಇನ್ನುಮುಂದೆ ಭಗವತ್ ಸ್ವರೂಪ ಕುರಿತು ಈಗ 114 ವರ್ಷಗಳ ಈ ಶತಾಯುಷಿ ಏನು ಹೇಳಿದ್ದಾರೆ ಎಂಬುದನ್ನು ನಿಮ್ಮ ಮುಂದಿಡಲಾಗುವುದು. ಎಂದಿನಂತೆ ನಿಮ್ಮ ಅನಿಸಿಕೆ, ಟೀಕೆ, ಟಿಪ್ಪಣಿಗಳನ್ನು ವ್ಯಕ್ತಪಡಿಸಲು ಕೋರುವೆ.


ಭಗವತ್ ಸ್ವರೂಪ -1
ನಾಸ್ತಿಕರಲ್ಲದ ಸರ್ವ ಮತೀಯರೂ ಒಂದಿಲ್ಲೊಂದು ರೂಪದಲ್ಲಿ ತಮಗಿಂತ ದೊಡ್ಡದಾದ ಯಾವುದೋ ಒಂದು ತತ್ವವಿದೆ, ಅದೇ ವಿಶ್ವದ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣವಾಗಿದೆ - ಎಂದು ಒಪ್ಪಿಕೊಳ್ಳುತ್ತಾರೆ. ಆದರೆ ಅಂತಹ ಸಾಂಪ್ರದಾಯಿಕರಲ್ಲಿ ಬಹುಮಂದಿ, ಆ ಶಕ್ತಿಯನ್ನು ವ್ಯಕ್ತಿಯ ರೂಪದಲ್ಲೇ ಭಾವಿಸಿ, ಅದಕ್ಕೆ ಯಾವುದೋ ಕಾಲ್ಪನಿಕ ರೂಪವಿತ್ತು, ಅದಾವುದೋ ಬೇರೆ ಲೋಕದಲ್ಲಿ ವಾಸ ಮಾಡಿಕೊಂಡಿದೆ ಎಂದು ನಂಬುತ್ತಾರೆ. ಒಂದು ಮತದವರು ಆರಾಧಿಸುವ ಆ ಶಕ್ತಿಯನ್ನು ಬೇರೆ ಮತದವರು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಎಷ್ಟು ಸಂಪ್ರದಾಯಗಳಿವೆಯೋ ಅಷ್ಟು ದೇವರುಗಳ ಸೃಷ್ಟಿಯಾಗಿ ಹೋಗಿದೆ. ಅದೇಕೆ, ಒಂದೊಂದು ಸಂಪ್ರದಾಯಕ್ಕೂ ಎಷ್ಟೋ ದೇವರುಗಳಿವೆ!

ಆದರೆ ಈ ದೇವರುಗಳೆಲ್ಲಾ ಕೇವಲ ಕಾಲ್ಪನಿಕ ವ್ಯಕ್ತಿಗಳೇ. ಇಂತಹ ದೇವರುಗಳು ಹಿಂದೆ ಎಂದೂ ಇರಲಿಲ್ಲ; ಈಗ ಇಲ್ಲ; ಮುಂದಕ್ಕೂ ಇರುವುದಿಲ್ಲ. ಒಂದು ವೇಳೆ ಇದ್ದರೆ, ಭೌತಿಕ ವಿಜ್ಞಾನ ಆ ದೇವರುಗಳನ್ನೆಲ್ಲಾ ಶೂನ್ಯ ವಿಲೀನವಾಗಿ ಮಾಡಿಬಿಟ್ಟಿದೆ. ಈ ವಿಷಯದಲ್ಲಿ ವೇದಗಳು ಏನೆನ್ನುತ್ತವೆ? ನಾವು ಹಿಂದೆ ಹೇಳಿರುವಂತೆ ವೇದಗಳು ಮಾನವ ಕಲ್ಪಿತ ಶಾಸ್ತ್ರಗಳಲ್ಲ; ಭಗವಂತನಿಂದಲೇ ಸೃಷ್ಟಿಯ ಆದಿಯಲ್ಲಿ ಸರ್ವರ ಕಲ್ಯಾಣಕ್ಕಾಗಿ ಉಪದೇಶಿಸಲ್ಪಟ್ಟ ಬುದ್ಧಿಸಂಗತವಾದ ಹಾಗೂ ವೈಜ್ಙಾನಿಕವಾದ ಸತ್ಯಶಾಸ್ತ್ರಗಳು. ಅವುಗಳ ಉಪದೇಶ ಪೂರ್ಣತಃ ನಿರ್ದೋಷ ಹಾಗೂ ಬುದ್ಧಿಯುಕ್ತ. ಮಾನವ, ಭಗವಂತನನ್ನು ತನ್ನ ರೂಪದಲ್ಲೇ, ಕೆಲವು ವೇಳೆ ತನಗಿಂತ ಶ್ರೇಷ್ಠ ಎಂದು ತೋರಿಸುವುದಕ್ಕಾಗಿ, ತನಗಿಂತ ಅದ್ಭುತ ರೂಪದಲ್ಲಿ ಊಹಿಸಿಕೊಳ್ಳುತ್ತಾನೆ. ಪ್ರಾಯಶಃ ಆಸ್ತಿಕರೆನ್ನಿಸಿಕೊಳ್ಳುವವರಲ್ಲಿ ಅಧಿಕಾಂಶ ಜನರು ಭಗವಂತನನ್ನು ಸಾಕಾರರೂಪದಲ್ಲಿಯೇ ಅಂಗೀಕರಿಸುತ್ತಾರೆ. ಆದರೆ, ಸರ್ವಪ್ರಥಮ ನೆನಪಿನಲ್ಲಿಡಬೇಕಾದ ಅಂಶವೆಂದರೆ, ಆಕಾರ, ಅದು ಯಾವುದೇ ಆಗಿರಲಿ, ಸಂಯೋಗಜನ್ಯವಾದ ಪ್ರಾಕೃತಿಕ ಅಥವಾ ಭೌತಿಕ ವಸ್ತುಗಳಿಗೆ ಅನ್ವಯಿಸುವುದೇ ಹೊರತು, ಆಧ್ಯಾತ್ಮಿಕ ತತ್ವಗಳಿಗಲ್ಲ ಮತ್ತು ಭೌತಿಕವಾದ ಆಕಾರವನ್ನು ತಾಳುವ ವಸ್ತು ಅದೆಷ್ಟೇ ದೊಡ್ಡದಾಗಿರಲಿ, ಸರ್ವವ್ಯಾಪಕವಾಗಿರದೇ ಪರಿಚ್ಛಿನ್ನವಾಗಿರಬೇಕು. ಭಗವಂತನನ್ನು ಪರಿಚ್ಛಿನ್ನ ಎಂದು ಭಾವಿಸುವುದಾದರೆ, ಅವನನ್ನು ಸರ್ವಜ್ಞ, ಸರ್ವವ್ಯಾಪಕ, ಹಾಗೂ ಸರ್ವಶಕ್ತ ಎಂದು ಭಾವಿಸಲು ಸಾಧ್ಯವಿಲ್ಲ. ಅಂತಹ ಅಲ್ಪಜ್ಞ, ಏಕದೇಶೀಯ ಹಾಗೂ ಹಾಗೂ ಅಲ್ಪಶಕ್ತನಾದವನನ್ನು ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣನಾದ ವಿಶ್ವಚೇತನ ಎಂದು ತಿಳಿಯುವುದೇ ತಪ್ಪಾದೀತು. ಎರಡನೆಯದಾಗಿ ಆಕಾರ, ರಿಕ್ತಪ್ರದೇಶದಲ್ಲಿ, ಪರಮಾಣುಗಳ ಸಂಯೋಗದಿಂದಲೇ ಸಂಭವ. ಇಂತಹ ಆಕಾರ ಸಾದಿ ಸಾಂತವಾಗಿರಬಲ್ಲುದೇ ಹೊರತು, ಅನಾದಿ ಅನಂತವಾಗಿರಲಾರದು. ಸಾಲದೆಂದು ಭಗವಂತನಿಗೆ ಆ ಆಕಾರವನ್ನು ರಚಿಸಿಕೊಟ್ಟವರಾರು ಎಂಬ ಬೃಹತ್ಪ್ರಶ್ನೆ ಬೇರೆ ತಲೆಯೆತ್ತುತ್ತದೆ. ಭಗವಂತನೇ ರಚಿಸಿಕೊಂಡನೇ ಎನ್ನುವುದಾದರೆ, ಅದನ್ನು ರಚಿಸಿಕೊಳ್ಳುವ ಮುನ್ನ ಅವನು ನಿರಾಕಾರನೇ ಆಗಿದ್ದನು, ಅದು ಕೆಟ್ಟುಹೋದ ಮೇಲೆ, ಮತ್ತೆ ನಿರಾಕಾರನೇ ಆಗುವನು ಎಂಬ ಪಕ್ಷವನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಈ ಆಗುವಿಕೆ-ಕೆಡುವಿಕೆ ಜನನ-ಮರಣಗಳನ್ನು ಸಂಕೇತಿಸುತ್ತದೆ. ಬೇರೆ ಯಾರಾದರೂ ರಚಿಸಿಕೊಟ್ಟರು ಎನ್ನುವುದಾದರೆ, ಭಗವಂತನಿಗೆ ಆಕಾರವಿತ್ತವರು, ಅವನಿಗಿಂತಲೂ ಶ್ರೇಷ್ಠರೇ ಆಗಿರಬೇಕು. ಇನ್ನು ಭಗವತ್ತತ್ವವೆಲ್ಲಿ ಉಳಿಯಿತು?

5 comments:

 1. ಶ್ರೀ ನಾಗರಾಜ್,
  ಸ್ವಾಮಿ ಶ್ರದ್ಧಾನಂದರ ವಿಚಾರವನ್ನು ಪಂಡಿತ್ ಸುಧಾಕರ ಚತುರ್ವೇದಿಗಳು ಅಧ್ಯಯನ ಮಾಡಿ ಒಪ್ಪಿ, ಜೀವನದಲ್ಲಿ ಸ್ವೀಕರಿಸಿದ್ದಾರೆ. ಅದರಲ್ಲಿ ಎರಡು ಮಾತಿಲ್ಲ.ಆದರೆ ಇಲ್ಲಿ ಒಂದು ಸಮಸ್ಯೆ ಕೂಡ ಎದಿರಾಗುತ್ತದೆ. ಭಗವಂತನಿಗೆ ಆಕಾರವಿಲ್ಲ ನಿಜ. ಆದರೆ ನೀವು ನಾಗರಾಜರೆಂದು ಗುರುತಿಸಬೇಕಾದರೆ ನಿಮ್ಮ ಚಿತ್ರ ಬೇಡವೇ? ಎಲ್ಲಿಯವರೆಗೆ ಬೇಕೆಂದರೆ ನೀವು ನಮ್ಮ ಮನದಲ್ಲಿ ಉಳಿಯುವವರಗೆ. ನಂತರ ಬೇಕಾಗಿಲ್ಲ. ಹಾಗೆಯೇ ಒಂದು ಹಂತ ತಲುಪುವವರಗೆ ದೇವರ ಆಕಾರ ಬೇಕು.ನಂತರ ಬಿಡಬಹುದು. ಆದರೆ ಏಣಿಯ ಮೊದಲ ಮೆಟ್ಟಿಲನ್ನೇ ಹತ್ತದೆ ಏಣಿ ಬೇಡವೆನ್ನಲು ಸಾಧ್ಯವಿಲ್ಲ.
  ಇಲ್ಲಿ ನಾವು ಚಿಂತನೆ ಮಾಡಬೇಕಾದುದು ನನಗನ್ನಿಸುವಂತೆ ಭಗವಂತನ ಹೆಸರಲ್ಲಿ ದರೋಡೆ ಮಾಡುವವರಿಗೆ ಪ್ರೋತ್ಸಾಹಕೊಡಬಾರದು.ಅಷ್ಟೆ. ಆದರೆ ನಮಗೆ ಹಿತವೆನಿಸುವ ಆಚಾರವಿಚಾರ ಬಿಡಬೇಕಿಲ್ಲ. ಅದರಿಂದ ಬೇರೆಯವರಿಗೆ ಅನ್ಯಾಯವಾಗಬಾರದಷ್ಟೆ.ಅಂತೂ ಇದು ಬಲು ಸೂಕ್ಷ್ಮ ವಿಚಾರ. ಸ್ವಲ್ಪ ಎಡವಟ್ಟಾದರೂ ವಿಚಾರ ವ್ಯಾಧಿಗಳಿಗೆ ಇಂಬುಕೊಟ್ಟಂತಾಗುತ್ತದೆ. ಇಲ್ಲಿ ಬಲು ಎಚ್ಛರಿಕೆಯಿಂದ ಹೆಜ್ಜೆ ಇಡಬೇಕು. ಏನಂತೀರಾ?

  ReplyDelete
 2. ಒಂದು ಹಂತದವರೆಗೆ ಮೂರ್ತಿ ಪೂಜೆ ಅಗತ್ಯವಿರಬಹುದು. ನಂತರ ಅದರ ಅಗತ್ಯ ಬಾರದೆ ಹೋಗಬಹುದು. ಚತುರ್ವೇದಿಗಳು ಹೇಳಿದಂತೆ ದೇವರು ನಿರಾಕಾರನಿರಬಹುದು. ಆದರೆ ಸಾಮಾನ್ಯರು ದೇವರನ್ನು ವಿಗ್ರಹದ ಮೂಲಕ ಕಾಣಬಯಸಿದರೆ, ಅದರಲ್ಲಿ ಸಾಂತ್ವನ ಪಡೆದರೆ ಪಡೆಯಲಿ. ಎಲ್ಲರೂ ಉನ್ನತ ಸ್ತರದ ಬುದ್ಧಿಮತ್ತೆ ಹೊಂದಿರಬೇಕೆಂದೇನೂ ಇಲ್ಲವಲ್ಲ! ಜ್ಞಾನ ಜಾಗೃತಿಕಾರ್ಯ ಸಾಗಬೇಕಷ್ಟೆ.

  ReplyDelete
 3. ಇದು ಹೇಗೆ ಅಂದ್ರೆ, ಬೆಂಗಳೂರಿನಿಂದ ಒಬ್ಬ ಬೆಳಗಾಂ ಗೆ ಹೋಗಬೇಕಿದ್ರೆ ಅವನಿಗೆ ತುಮುಕೂರಿನಲ್ಲೇ ಬಿಟ್ಟು ನಿನಗೆ
  ಇದೆ ಬೆಳಗಾಂ ಇಲ್ಲೇ ನಿಮ್ಮ ಮನೆ ಹುಡುಕು ಅಂದಹಾಗೆ.

  ವಿಶಾಲ್ ತಟ್ಟಿ

  ReplyDelete
 4. ಇದು ಬಹು ಸಂಕೀರ್ಣವಾದ ವಿಷಯ. ಒಂದು ರೀತಿಯಲ್ಲಿ ಹುಡುಕಾಟ. ಎಲ್ಲರ ವಿಚಾರಗಳು ಎಲ್ಲರಿಗೂ ಒಪ್ಪಿಗೆಯಾಗಲಾರದು. ಪೂರ್ಣ ಯೋಗಿಗಳು, ಜ್ಞಾನಿಗಳಿಗೆ ತಿಳಿಯಬಹುದಾದ ಸಂಗತಿ ನನ್ನಂತಹ ಅಲ್ಪಜ್ಞರಿಗೆ ಗೊತ್ತಾಗದಿರಬಹುದು. ತಿಳಿಯುವ ಪ್ರಯತ್ನ ಸಾಗಿದರೆ ತಪ್ಪಿಲ್ಲ. ಮೂರ್ತಿ ಪೂಜೆಗೂ ಸಮರ್ಥನೆ ಕೊಡುವ, ಪ್ರಬಲವಾಗಿ ಸಮರ್ಥಿಸುವ ವಿಚಾರಗಳೂ, ವಾದಗಳೂ ಇವೆ. ಎಲ್ಲವನ್ನೂ ಪರಾಮರ್ಶಿಸಿ ಸೂಕ್ತ ನಿರ್ಧಾರಕ್ಕೆ ಬರುವುದು ಅವರವರಿಗೆ ಸಂಬಂಧಿಸಿದ್ದು. ನಾನೂ ಸಹ ಚತುರ್ವೇದಿಯವರ ಎಲ್ಲಾ ವಿಚಾರಗಳನ್ನು ಒಪ್ಪುವ ಅಥವ ವಿರೋಧಿಸುವ ಯಾವುದೇ ಗುಂಪಿನಲ್ಲಿಲ್ಲ. ಸರಿಯೆಂದು ಕಾಣುವ ,ನನ್ನ ಮನಸ್ಸಿಗೆ ಹಿತವೆನಿಸುವ ವಿಷಯಗಳನ್ನು ಒಪ್ಪುವ ಮನೋಭಾವ ನನ್ನದು ಎಂದಷ್ಟೇ ತಿಳಿಸಬಯಸುವೆ.

  ReplyDelete
 5. With due respect to all elders.

  ೧. ಇಲ್ಲಿ ನನ್ನ ವಿಚಾರ ನಿಮ್ಮ ವಿಚಾರ ಅನ್ನವುದಕ್ಕಿಂತ ಸತ್ಯದ ವಿಚಾರವನ್ನು ತಿಳಿಯಲು ನಾವು ಇಷ್ಟೆಲ್ಲಾ ಚಿಂತನೆ ಮಾಡುತ್ತಿರುವುದು.
  ೨.ವೇದ ಹೇಳುವ ಪ್ರಕಾರ ಸತ್ಯವು ಎಲ್ಲರಿಗೂ ಎಲ್ಲ ಕಾಲಕ್ಕೂ ಅನ್ವಯ ಆಗುತ್ತೆ.ಅಲ್ಪಜ್ಞಾನಿಗೆ ಒಂದು ಸತ್ಯ ಜ್ಞ್ಯನಿಗೆ ಮತ್ತೊಂದು ಅಂತ ಇರುವುದಿಲ್ಲ.ಅಲ್ವೇ?
  ೩. ತಿಳಿಯುವ ಪ್ರಯತ್ನ ನದಿಯಬೇಕೆಂದರೆ ಅದರ ಪಥದಲ್ಲಿ ಸಾಗಬೇಕು.ಬೆಳಗಾಂ ಗೆ ಹೋಗೋಕೆ ಕಷ್ಟವೆಂದು ತುಮಕೂರಿನಲ್ಲೇ ಮನೆ ಹುಡುಕಿದರೆ ಜನ್ಮ ಪೂರ
  ಹುಡುಕಿದರೂ ಸಿಕ್ಕುವುದಿಲ್ಲ.
  ೪. ಇಲ್ಲಿ ವ್ಯಕ್ತಿ ಮುಖ್ಯವಲ್ಲವಾದುದರಿಂದ ನಾನು ಅವರ ವಿಷಯ ಒಪ್ಪುತ್ತೇನೆ ಇವರ ವಿಷಯ ಒಪ್ಪುವುದಿಲ್ಲವೆಂದು ಹೇಳುವುದಿಲ್ಲ.
  ೫.ಯಾವುದೇ ವಿಷಯವನ್ನು ಸಮರ್ಥನೆ ಮಾದುದಕ್ಕೆ ಅಥವಾ ತಿರಸ್ಕರಿಸುವುದಕ್ಕೆ ವಾದ ಇರುತ್ತದೆ. ಆದರೆ ವಾದದ result or outcome ಮುಖ್ಯವಾಗಲಿ ವಾದದ points ಅಲ್ಲ
  ೬.ಎಲ್ಲರೂ ತಮ್ಮ ತಮ್ಮ ಹಿತವನ್ನೇ ಬಯಸುವರು. ಆದರೆ ನಮಗೆ ಹಿತವೆನಿಸುವುದು ಸತ್ಯ, ಜ್ಞಾನ ಮತ್ತು ನಿರ್ಭಯದಿಂದ ಕೂಡಿದ್ದಲ್ಲಿ ಪ್ರಯೋಜನಕಾರಿ ಆಗುವುದು.ಇಲ್ಲದಿದ್ದರೆ
  ಅಹಿತವೆನಿಸಿದ ಸಂದರ್ಭದಲ್ಲಿ ಉತ್ತರ ಸಿಗುವುದು ಕಷ್ಟವಾಗುತ್ತದೆ ಎಂದು ನನ್ನ ವಿಚಾರ.

  ನನ್ನ ವಿಚಾರದಿಂದ ಯಾರಿಗಾದರು ಬೇಸರವಾದಲ್ಲಿ ಕ್ಷಮೆ ಇರಲಿ.

  ವಿಶಾಲ್

  ReplyDelete