Pages

Wednesday, November 24, 2010

ನಮ್ಮ ಚಟಕ್ಕೆ ಬರೆಯುತ್ತೇವೆಯೇ?

ಸಮ: ಶತ್ರೌ ಚ ಮಿತ್ರೇ ಚ  ತಥಾ ಮಾನಾಪಮಾನಯೋ:
ಶೀತೋಷ್ಣ ಸು:ಖ ದು:ಖೇಷು  ಸಮ: ಸಂಗ ವಿವರ್ಜಿತ:|

ಭಗವದ್ಗೀತೆಯಲ್ಲಿ ಕೃಷ್ಣನು   ಹೇಳಿದಂತೆ ಶತ್ರುಗಳನ್ನು-ಮಿತ್ರರನ್ನೂ ಸಮನಾಗಿ ಕಾಣುವ,   ಮಾನಾಪಮನಗಳನ್ನೂ ಸಮನಾಗಿ ಕಾಣುವ,  ಶೀತ-ಉಷ್ಣ, ಸು:ಖ-ದು:ಖ , ಎಲ್ಲವನ್ನೂ ಸಮನಾಗಿ ಕಾಣುವಂತಹ ಮಟ್ಟಕ್ಕೆ ನಾವೇರಬೇಕು.ಇದು ಆದರ್ಶ, ಸರಿ. ಆದರೆ ಆ ಮಟ್ಟವನ್ನು ನಾವು ತಲುಪಲು ಸಾಧ್ಯವೇ? ಹೊರಗಿನ ವಿಚಾರಗಳು ಒಂದೆಡೆ ಇರಲಿ,  ಬ್ಲಾಗ್ ನಲ್ಲಿ ಬರೆಯುವ ನಾವು ನಮ್ಮ  ಬರಹಗಳಿಗೆ    ಮೆಚ್ಚುಗೆ ವ್ಯಕ್ತ ಪಡಿಸಿದವರನ್ನೂ ,ಮತ್ತು  ಖಂಡಿಸಿದವರನ್ನೂ  ಸಮನಾಗಿ ಕಾಣುವ ಮನ: ಸ್ಥಿತಿಯನ್ನು ಹೊಂದಿದ್ದೇವೆಯೇ?  ಅಥವಾ ಯಾರೂ ಒಂದೂ ಪ್ರತಿಕ್ರಿಯೆಗಳನ್ನೂ ಹಾಕದಾಗ! ವೈರಾಗ್ಯದ ಮಾತನಾಡುವವರೂ ಕೂಡ ತಾವು ಬರೆದ ಬರಹವನ್ನು ಜನರು ನೋಡಿ, ಮೆಚ್ಚಿ ಪ್ರತಿಕ್ರಿಯಿಸಿದರೇ! ಎಂದು  ಬ್ಲಾಗ್ ನಲ್ಲಿ ಹುಡುಕುವುದು ಸರ್ವೇ ಸಾಮನ್ಯವಾದ ಸಂಗತಿ. ಯಾರ ಸಹವಾಸ ಬೇಡ ವೆಂದು ತನ್ನಷ್ಟಕ್ಕೆ ಬ್ಲಾಗ್ ನಲ್ಲಿ ಏನೋ ಬರೆದುಕೊಂಡು ಕಾಲ ಹಾಕೋಣವೆನ್ನುವವರೂ ಕೂಡ, ಅವರ ಲೇಖನವನ್ನು ಪೋಸ್ಟ್ ಮಾಡಿದ ನಂತರ ಹಲವಾರು ಭಾರಿ, ತಾನು ಬರೆದ ಲೇಖನವನ್ನೇ ನೋಡದೇ ಇರಲಾರರು. ಎಷ್ಟು ಜನರು ಓದಿದ್ದಾರೆ! ಎಷ್ಟು ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ! ಎಂದು ತಿಳಿದುಕೊಳ್ಳುವ ಕಾತುರ ಎಲ್ಲರಿಗೂ ಇದ್ದದ್ದೇ. ಎಲ್ಲೋ ಒಬ್ಬಿಬರು " ನಾನು ಪೋಸ್ಟ್ ಮಾಡಿದವನು ಮತ್ತೆ  ಬ್ಲಾಗ್ ನೋಡಿಯೇ ಇಲ್ಲ ಎನ್ನುವವರೂ ಇದ್ದಿರಬಹುದು.. ಆದರೆ ಇಂತಹವರು ಬೆರಳೆಣಿಕೆ ಜನರು.
ಅಂತೂ ಜನರು ನಮ್ಮನ್ನು ಹೊಗಳಿದಾಗ ಉಬ್ಬುವ, ತೆಗಳಿದಾಗ ಕುಗ್ಗಿ ಹೋಗುವ ಹುಲುಮಾನವರು ನಾವಲ್ಲವೇ? ಈ ಸ್ಥಿತಿಯಿಂದ ಹೊರಗೆ ಬರಲು ನಿತ್ಯ ಸತತ ಸಾಧನೆ  ಅನಿವಾರ್ಯ.ಆದರೆ  ಬ್ಲಾಗ್ ನಲ್ಲಿ ಬರೆಯುವ ಬಹುಪಾಲು ನಾವು ನಿತ್ಯ ಧ್ಯಾನ, ಪ್ರಾಣಾಯಾಮ, ಯೋಗ, ಅಥವಾ ಇನ್ಯಾವ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೇವೆಂದು  ಆತ್ಮಾವಲೋಕನವನ್ನು ಮಾಡಿಕೊಳ್ಳಬೇಕಲ್ಲವೇ? ಬ್ಲಾಗ್ ನಲ್ಲಿ ಬರಯುವುದೂ ಒಂದು ಚಟವೆನಿಸುವುದಿಲ್ಲವೇ?
ನನಗನಿಸಿದ್ದು ಜಗತ್ತಿಗೂ ಅನ್ವಯವೆಂದುಕೊಂಡು ಲೇಖನವನ್ನು ಮುಂದುವರೆಸುತ್ತೇನೆ. ನನ್ನ ಕತೆಯಂತೂ ಸನ್ಯಾಸಿಯೊಬ್ಬ ಬೆಕ್ಕು ಸಾಕಿದ ಕತೆಯಂತಯೇ ಆಗಿದೆ. ಬೆಕ್ಕಿಗೆ ಹಾಲು ಬೇಕಲ್ಲವೇ? ಅದಕ್ಕೊಂದು ಹಸು, ಹಸುವಿದ್ದಮೇಲೆ ಅದನ್ನು ಸನ್ಯಾಸಿ ನೋಡಿಕೊಳ್ಳಲು ಸಾಧ್ಯವೇ? ಅದಕ್ಕೊಬ್ಬಳು ಹೆಣ್ಣು, ಸನ್ಯಾಸಿಯ ಆಶ್ರಮಕ್ಕೆ ಹೆಣ್ಣಿನ ಪ್ರವೇಶವಾದಮೇಲೆ  ಇನ್ನು ಕೇಳಬೇಕೆ! ಸಂಪದದಲ್ಲಿ ಆಗೊಂದು ಈಗೊಂದು ಬರೆಯುತ್ತಿದ್ದ ನಾನು ಮೆಚ್ಚುಗೆಯ ಪ್ರತಿಕ್ರಿಯೆ ಬಂದಾಗ ಉಬ್ಬಿ, ತೆಗಳಿಕೆಯ ಮಾತುಗಳು ಬಂದಾಗ ಕುಗ್ಗಿ, ಕಡೆಗೆ ಇವೆಲ್ಲಾ ತಂಟೆ -ತಕರಾರು ಬೇಡವೆಂದು ನೆಮ್ಮದಿಯಾಗಿರಲು ನನ್ನ ಸ್ವಂತ ಬ್ಲಾಗ್ "ನೆಮ್ಮದಿಗಾಗಿ" ಆರಂಭಿಸಿದೆ. ಆನಂತರ ಮೂರುನಾಲ್ಕು ಬ್ಲಾಗ್ ಆರಂಭವಾಗಿ ಕಡೆಗೆ ಈಗ " ವೇದಸುಧೆ" ನನ್ನ ವ್ಯಾಪ್ತಿ ಮೀರಿ ಅದೊಂದು ಬಳಗದ ಬ್ಲಾಗ್ ಆಗಿ ನಡೆಯುತ್ತಿದೆ. ಕೇವಲ ಒಂಬತ್ತು ತಿಂಗಳಲ್ಲಿ ಹದಿನೆಂಟು ಸಾವಿರ ಇಣುಕುಗಳನ್ನು ಕಂಡಿರುವ ಬ್ಲಾಗಿನ ಗೌರವ ಕಾಪಾಡ ಬೇಕಲ್ಲಾ! ಅದಕ್ಕಾಗಿ ಬೇಡವೆಂದರೂ  ನಾಲ್ಕಾರು ಗಂಟೆ ಅಂತರ್ಜಾಲದಮುಂದೆ ಕೂರಲೇ ಬೇಕು! ಇವೆಲ್ಲಾ  ಏತಕ್ಕಾಗಿ? ಜನರ ಮೆಚ್ಚುಗೆಗಾಗಿ ತಾನೆ? ಒಂದು ಸದ್ವಿಚಾರವನ್ನು ಕೊಡುವುದು ನೆಪ! ಆದರೆ ಬ್ಲಾಗ್ ಮುಂದೆ ಕೂರುವುದೊಂದು ಚಟವಾಗಿ ಬಿಟ್ಟಿದೆಯೇ! ಎಂಬ ಅನುಮಾನ ಬಂದು ಬಿಟ್ಟಿದೆ. ಏನಾದರೂ ಮಾಡಿ ಒಂದು ನಿಯಮ ಹಾಕಿಕೊಳ್ಳದಿದ್ದರೆ  ಆರೋಗ್ಯ ಹದಗೆಟ್ಟು  ಅನಿವಾರ್ಯವಾದ " ವಿಶ್ರಾಂತಿ" ಗೆ ಬರಬೇಕಾಗಬಹುದು. ಇದು ನನ್ನ ಸ್ಥಿತಿ! ನಿಮ್ಮದು?ಸ್ವಲ್ಪ ಉತ್ತಮವಾಗಿರಬಹುದಲ್ಲವೇ? 
ಕೊಸರು: ನನ್ನ ಮಿತ್ರ  ಗ್ರಾ.ಬ.ಹರೀಶ್ ಹೇಳುತ್ತಿರುತ್ತಾರೆ-" ನಾವು ಯಾರ ಉದ್ಧಾರಕ್ಕೂ ಬರೆಯುವುದಿಲ್ಲ, ನಮ್ಮ ಚಟಕ್ಕೆ ಬರೆಯುತ್ತೇವೆ"



5 comments:

  1. ಸತ್ಯವಾದ ಮಾತುಗಳು. ಒಟ್ಟಿನಲ್ಲಿ ಅವರರವರ ಭಾವಕ್ಕೆ ಅವರವರ ಭಕುತಿಗೆ.

    http://ranganatha-ps.blogspot.com/

    ReplyDelete
  2. ಶ್ರೀಧರ್, ನೀವಂದಂತೆ ಚಟವೂ ಇರಬಹುದು. ಆದರೆ ಮನದಾಳದ ನೋವು-ನಲಿವುಗಳನ್ನು ಆತ್ಮೀಯರಲ್ಲಿ ಹಂಚಿಕೊಂಡಾಗ ಸಿಗುವ ಸಮಾಧಾನ, ತುಂಬಿದ ಭಾವನೆಗಳನ್ನು ಬರಹ ಮೂಲಕ ಹೊರಹಾಕಿದಾಗಲೂ ಸಿಗುವುದು ಎಂಬುದು ನನಗೆ ಅನಿಸುತ್ತದೆ.

    ReplyDelete
  3. ಭಾವನೆಗಳನ್ನು ಹಂಚುತ್ತಾ ಹಂಚುತ್ತಾ, ಆ ಭಾವನೆಗಳಿಗೆ ಬಂಧಿಯಾಗುವ ನಾವು ನಾಲ್ಕು ಪ್ರತಿಕ್ರಿಯೆಗಳನ್ನು ಕಾಣದಿದ್ದಾಗ ಚಡಪಡಿಸುತ್ತೇವೆಯೇ? ಎಂಬುದು ಯೋಚಿಸಬೇಕಾದ್ದು, ನಾಗರಾಜ್. ಯಾವುದೂ ಅಷ್ಟೆ. ದೇವರ ಪೂಜೆಯೂ ಅದಕ್ಕೆ ಹೊರತಾದದ್ದಲ್ಲ, ಎಂದು ಕೆಲವರು ಹೇಳಿದರೆ ನಮಗೆ ಮೈ ಪರಚಿಕೊಳ್ಳುವಂತಾಗುತ್ತದೆ ಅಲ್ವಾ?

    ReplyDelete
  4. ಸ್ವಾಮೀ ಶ್ರೀಧರರೇ, ಲೇಖಕನಿಗೂ ಅವನ ಕೃತಿಗಳಿಗೂ ತಾಯಿ-ಮಕ್ಕಳ ಭಾಂಧವ್ಯವಿರುತ್ತದೆ. ಬರೆದು ಬಹುಕಾಲ ಸಂಪದದಲ್ಲಿ ಪ್ರತಿಕ್ರಿಯೆ ಸಂಪಾದಿಸಿದ ನೀವು ಈಗ ಬರೆದು ಸುಮ್ಮನಾಗಿಬಿಡಿ-ತಲೆಕೆಡಿಸಿಕೊಳ್ಳಬೇಡಿ. ಆದರೆಪ್ರಕಟಿಸುವ ಮುಂಚೆ ಏನನ್ನು ಪ್ರಕಟಿಸುವೆನೆಂಬುದು ಲಕ್ಷ್ಯದಲ್ಲಿರಲಿ. ಯಾರೇ ಹೊಗಳಲಿ-ತೆಗಳಲಿ, ಪ್ರತಿಕ್ರಿಯೆ ಹಾಕದೇ ಹೋಗಲಿ ನಿರ್ಲಿಪ್ತ ಸ್ಥಿತಿಯಲ್ಲಿ ನೀವಿದ್ದುಬಿಡಿ, ಕೃತಿಗಳು ಹಿಡಿಸಿದಾಗ ಅಥವಾ ಹಿಡಿಸದೇ ಇದ್ದಾಗ ಪ್ರತಿಕ್ರಿಯೆಗಳು ಬರುತ್ತವೆ, ಕೃತಿಗಳು ಸರ್ವೇಸಾಮಾನ್ಯ ಅನ್ನಿಸಿದಾಗ ಅವಕ್ಕೆ ಪ್ರತಿಕ್ರಿಯೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ ! ಇದಲ್ಲದೇ ದೈನಂದಿನ ಕೆಲಸಗಳಲ್ಲಿ ಹಲವು ಓದುಗರು ನಿರತರಾಗಿರುವುದರಿಂದ ಎಲ್ಲರ ಪ್ರತಿಕ್ರಿಯೆಗಳನೂ ಒಂದೇ ದಿನದಲ್ಲಿ ಅಪೇಕ್ಷಿಸುವುದು, ನಿರೀಕ್ಷಿಸುವುದು ಆಗದ ಮಾತು. ತಾವೇನೋ ಸರಕಾರೀ ರಜೆ ಅನುಭವಿಸಿದಿರಿ-ಬೆಂಗಳೂರಿನಂತಹ ಪ್ರದೇಶಗಳಲ್ಲಿ ಖಾಸಗಿ ಕ್ಷೇತ್ರಗಳಲ್ಲಿ ದುಡಿಯುವವರಿಗೆ ಭಾನುವಾರವೂ ರಜಾಸಿಗುವುದು ಕಮ್ಮಿ! ಈ ನಿಟ್ಟಿನಲ್ಲಿ ಎಲ್ಲರ ಸ್ಥಾನದಲ್ಲಿ ನೀವು ನಿಂತು ಅವಲೋಕಿಸಿದಾಗ ಮಾತ್ರ ಕ್ರಿಯೆ-ಪ್ರತಿಕ್ರಿಯೆಗಳಬಗ್ಗೆ ಕಾರಣ ತಿಳಿಯುತ್ತದೆ. ಹಲವಾರು ಜನ ದಿನಪತ್ರಿಕೆಯನ್ನೇ ಓದಿರುವುದಿಲ್ಲ, ಅಂದಮೇಲೆ ಬ್ಲಾಗಿಗೆ ಬಂದು, ಹುಡುಕಿ ಓದುವ ತಾಳ್ಮೆ ಕೇವಲ ಬೆರಳೆಣಿಕೆಯ ಜನರಿಗೆ ಮಾತ್ರ. ಅದರಲ್ಲೂ ಸಿಗುವ ಅಲ್ಪಕಾಲವನ್ನು ಕೆಲವರು ಬರೇ ನಗೆಬರಹಗಳು ಸಿಕ್ಕರೆ ಓದಲು ಮೀಸಲಿಡುತ್ತಾರೆ, ಇನ್ನೂ ಕೆಲವರದು ಹುಡುಗಿಯರ ಲೋಕ ! ಹೀಗಾಗಿ ’ವೇದ’ ಎಂಬ ಹೆಸರು ಕಂಡ ತಕ್ಷಣ ತೆನ್ನಾಲಿ ರಾಮನ ಬೆಕ್ಕು ಹಾಲುನೋಡಿದಂತೇ ಭಾಸವಾಗಿ ಈ ಕಡೆ ತಿರುಗಿಯೂ ನೋಡದೇ ಓಡುತ್ತಾರೆ ! ಗಾಳಿಗೆ ಜೊಳ್ಳು ಬತ್ತಗಳೆಲ್ಲಾ ತೂರಿಹೋದಮೇಲೆ ಉಳಿದಿರುವ ಬತ್ತಗಳು ನಮಗೆ ಬೇಕಾದವು, ಅಂತಹ ಉತ್ತಮ ಓದುಗರನ್ನು ವೇದಸುಧೆಗೆ ಆಹ್ವಾನಿಸೋಣ, ಕಾಲಕ್ರಮದಲ್ಲಿ ಉತ್ತಮ,ಅತ್ಯುತ್ತಮ ಕೃತಿಗಳು ಹೊರಬರುತ್ತಿದ್ದರೆ ಮರಳುಗಾಡಿನಲ್ಲಿ ನೀರನ್ನರಸಿ ಬರುವ ಒಂಟೆಯಂತೇ ನಮಗೆ ಬೇಕಾದ ಸುಸಂಕೃತ ಓದುಗರು ಬರುತ್ತಾರೆ, ಹೀಗಾಗಿ ತಾವು ಬೇಸರಿಸಬೇಡಿ, ಶುಭಕೋರುತ್ತಿದ್ದೇನೆ, ಧನ್ಯವಾದಗಳು

    ReplyDelete
  5. ಇದೇನು ಭಟ್ಟರೇ, ನನ್ನ ಬರಹದಿಂದ ನನಗೆ ಬೇಸರವಾಗಿದೆ ಎಂದು ಭಾವಿಸಿದಿರೇಕೆ? ಕೇವಲ ಒಂಬತ್ತು ತಿಂಗಳ ವೇದಸುಧೆಯು ನಿಮ್ಮೆಲ್ಲರ ಸಹಕಾರದಿಂದ ನಿರೀಕ್ಷೆಗೂ ಮೀರಿ ಮುನ್ನುಗ್ಗುತ್ತಿದೆ.ಅದರಿಂದ ನನಗೆ ಸಂತಸ ಹೆಚ್ಚಿದೆ. ಇದೊಂದು ರೆಕಾರ್ಡ್ ಎಂದೇ ಭಾವಿಸಬೇಕಾಗಿದೆ. ಅಂತಹದರಲ್ಲಿ ನಾನೇಕೆ ಬೇಸರಿಸಲಿ?
    ನನ್ನ ಚಿಂತೆ ಏನೆಂದರೆ ಹತ್ತು ಹಲವರ ಸಂಬಂಧದಿಂದ ನಾಲ್ಕಾರು ಗಂಟೆಗಳ ಕಾಲ ನೆಟ್ ಮುಂದೆ ಕುಳಿತುಕೊಳ್ಳುವಂತಾಗಿದೆ.ಅದು ನನ್ನ ಆರೋಗ್ಯದ ಮೇಲೆ ಸಹಜವಾಗಿ ದುಷ್ಪರಿಣಾಮ ಬೀರುತ್ತಿದೆ. ಅಷ್ಟೆ.
    ಒಂದು ವಿಚಾರದಲ್ಲಿ ನಾನು ಲಕ್ಕಿ.ಕಾರಣ ಆಫೀಸಿನ ೭-೮ ಗಂಟೆ, ೫-೬ ಗಂಟೆ ನಿದ್ರೆ, ಒಂದೆರಡು ಗಂಟೆ ನಿತ್ಯದ ಅನುಷ್ಟಾನ. ಅದರ ಹೊರತಾಗಿ ಬೇರೆ ಯಾವ ಹವ್ಯಾಸವಿಲ್ಲ.ಇನ್ನೂ ಎಂಟು ಗಂಟೆಗಳು ನಾನು ಅಂತರ್ ಜಾಲದಲ್ಲಿ ತೇಲಾಡಬಹುದು. ಅಷ್ಟು ಸಮಯ ನನ್ನಲ್ಲಿದೆ. ಆದರೆ ಆರೋಗ್ಯ ಬಿಡಬೇಕಲ್ಲಾ!
    ಬೆಂಗಳೂರಿನ ರಸ್ತೆಯಲ್ಲಿ ನಾಲ್ಕೈದು ಗಂಟೆ ಕಳೆಯುವ ಜೀವನದ ಪರಿಚಯ ನನಗಿದೆ.ಇಂತಾ ಸನ್ನಿವೇಶದಲ್ಲೂ ವೇದಸುಧೆಯನ್ನು ನೋಡುವ ಜನರು ಬೆಂಗಳೂರಿಗರೇ ಹೆಚ್ಚು. ಅದಕ್ಕಾಗಿ ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ. ಖಂಡಿತವಾಗಿಯೂ ಒಂದೇ ಪ್ರತಿಕ್ರಿಯೆ ಬಾರದಿದ್ದರೂ ಬೇಸರಿಸುವುದಿಲ್ಲ. ನನಗೆ ಅಷ್ಟರ ಮಟ್ಟಿಗೆ ಅರಿವಿದೆ.ಇಷ್ಟಾದರೂ ಜನರು ವೇದಸಧೆಗೆ ಭೇಟಿ ನೀಡುತ್ತಿದ್ದಾರಲ್ಲಾ! ಅಷ್ಟು ಸಾಕು.

    ReplyDelete