ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Tuesday, November 23, 2010

ಗಂಡನ ಮನೆಯಲ್ಲಿ ವಿರಾಜಿಸು


ಬ್ರಹ್ಮಾಪರಂ ಯುಜ್ಯತಾಂ ಬ್ರಹ್ಮ ಪೂರ್ವಂ

ಬ್ರಹ್ಮಾಂತತೋ ಮಧ್ಯತೋ ಬ್ರಹ್ಮ ಸರ್ವತಃ ಅನಾವ್ಯಾಧಾಂ ದೇವಪುರಾಂ ಪ್ರಪದ್ಯ

ಶಿವಾ ಸ್ಯೋನಾ ಪತಿಲೋಕೇ ವಿ ರಾಜ

(ಅಥರ್ವ.೧೪.೧.೬೪)

(ಹೇ ನಾರಿ!) [ಅಪರಮ್] (ನಿನ್ನ) ಎದುರಿನಲ್ಲಿ, [ಬ್ರಹ್ಮ ಯುಜ್ಯತಾಮ್] ವೇದವು ಇರಲಿ. [ಪೂರ್ವಮ್] ಹಿಂದೆ (ವೇದವಿರಲಿ). [ಮಧ್ಯತಃ ಅಂತತಃ] ಮಧ್ಯದಲ್ಲಿ ಮತ್ತು ಕೊನೆಯಲ್ಲಿ, [ಬ್ರಹ್ಮ] ವೇದವು (ಇರಲಿ). [ಸರ್ವತಃ] ಎಲ್ಲೆಡೆಯಿಂದಲೂ, [ಬ್ರಹ್ಮ] ವೇದವು (ಸುತ್ತುವರೆದಿರಲಿ). [ಅನಾವ್ಯಾಧಾಮ್] ತೊಂದರೆಗಳಿಲ್ಲದ, [ದೇವಪುರಾಮ್] ಗೃಹಸ್ಥಾಶ್ರಮವನ್ನು, [ಪ್ರಪದ್ಯ] ಹೊಂದಿ, [ಶಿವಾ ಸ್ಯೋನಾ] ಮಂಗಳಕಾರಿಣಿಯೂ, ಸುಖಕಾರಿಣಿಯೂ (ಆಗಿ), [ಪತಿಲೋಕೇ ವಿ ರಾಜ] ಗಂಡನ ಮನೆಯಲ್ಲಿ ವಿರಾಜಿಸು.

ಜಗತ್ತಿನಲ್ಲಿ ಸರ್ವವ್ಯಾಪಕವಾದ, ನಿರಾಕಾರವಾದ ವಿಶ್ವಚೇತನಶಕ್ತಿಯನ್ನು ಬಿಟ್ಟರೆ, ಉಳಿದಂತೆ ಇರುವ ಅಲ್ಪಚೇತನಶಕ್ತಿಯೇ ಜೀವಾತ್ಮ. ಈ ಜೀವಾತ್ಮವು ಮುಕ್ತಿ, ಮೋಕ್ಷ, ಆನಂದದ ಕಡೆಗೆ ಹೋಗಲು ತೀವ್ರವಾದ ಪ್ರಯತ್ನ ಮಾಡಲಿರುವ ಅವಕಾಶವೇ ಕರ್ಮಯೋನಿ, ಮನುಷ್ಯ ಜನ್ಮ. ಸಾಧನವೇ ಮನುಷ್ಯ ಶರೀರ, ಹೆಣ್ಣಾಗಬಹುದು, ಗಂಡಾಗಬಹುದು. ಸಾಧಕ ಆತ್ಮ, ಗಂಡೂ ಅಲ್ಲ, ಹೆಣ್ಣೂ ಅಲ್ಲ. ವೇದಗಳು ಸಾಧಕ ಆತ್ಮಕ್ಕೆ ಮಾರ್ಗದರ್ಶನ ನೀಡಿದೆ ಎಂದ ಮೇಲೆ, ಶರೀರದ ಹಂತದ ಭೇದ - ಗಂಡು, ಹೆಣ್ಣು - ಮುಖ್ಯವಾಗುವುದೇ ಇಲ್ಲ! ಇಷ್ಟು ಸರಳವಾಗಿರುವುದನ್ನು ಅರ್ಥಮಾಡಿಕೊಳ್ಳಲು ತಿಣುಕುವವರಿದ್ದಾರೆ!!

ಹೆಣ್ಣು ಮದುವೆಯಾಗಿ ಗಂಡನ ಮನೆಗೆ ಹೊರಡುವ ಸನ್ನಿವೇಶದಲ್ಲಿ ಹೇಳಿದಂತಿದೆ ಮೇಲಿನ ಮಂತ್ರ. ‘ಬ್ರಹ್ಮ’ ಎಂದರೆ ಜ್ಞಾನ, ವೇದಜ್ಞಾನ, ಸತ್ಯಜ್ಞಾನ. ನಿನ್ನ ಹಿಂದೆ, ಮುಂದೆ ವೇದವಿರಲಿ. ಜೀವನದ ಪ್ರತಿಹೆಜ್ಜೆಯಲ್ಲೂ ಮಾರ್ಗದರ್ಶನಕ್ಕೆ ಅವುಗಳಿರಲಿ. ಅವುಗಳ ಮಾರ್ಗದರ್ಶನದಲ್ಲಿ ಜೀವನವನ್ನು ನಡೆಸಿದಾಗ ಅದು ನಿಜವಾದ ಮಾನವೀಯ ಜೀವನವಾಗುತ್ತದೆ. ಮಾನವರು ಮಾನವೀಯ ಜೀವನ ನಡೆಸಿದಾಗಲ್ಲವೇ ಸುಖ, ಶಾಂತಿ, ನೆಮ್ಮದಿ?! ಜೀವನದಲ್ಲಿ ಪ್ರತಿ ಹೆಜ್ಜೆಯಲ್ಲೂ ಅವಶ್ಯಕವಿರುವ ಜ್ಞಾನವನ್ನು ವೇದಗಳು ನೀಡುತ್ತವೆ. ಮಗಳ ಕರ್ತವ್ಯ, ಹೆಂಡತಿಯ ಕರ್ತವ್ಯ, ತಾಯಿಯ ಕರ್ತವ್ಯ, ಸೊಸೆಯ ಕರ್ತವ್ಯ, ಅತ್ತಿಗೆಯ ಕರ್ತವ್ಯ, ಒಟ್ಟಿನಲ್ಲಿ ಪ್ರತಿಯೊಂದು ಸಂಬಂಧದ ವಿಶೇಷತೆಯನ್ನು ಅರ್ಥಮಾಡಿಕೊಂಡು ಅದರಂತೆ ಮಾಡಬೇಕಾದ ಕರ್ತವ್ಯಗಳನ್ನು ವೇದಗಳಲ್ಲಿ ಕಾಣಬಹುದು, ಬೀಜರೂಪದಲ್ಲಿ! ಮೂಲವಿಚಾರ ದೊರೆತಮೇಲೆ ಅದನ್ನು ಮೂಲಕ್ಕೆ ಧಕ್ಕೆ ಬಾರದಂತೆ ವಿಸ್ತರಿಸಿಕೊಳ್ಳುವುದು ನಮ್ಮ ಶ್ರದ್ಧೆ ಮತ್ತು ಮೇಧಾಶಕ್ತಿಗಳಿಗೆ ಬಿಟ್ಟಿದ್ದು.

ಜೀವನದ ಮಧ್ಯಭಾಗದಲ್ಲಿ, ಕೊನೆಯಭಾಗದಲ್ಲಿಯೂ ವೇದಗಳು ನಮ್ಮೊಟ್ಟಿಗಿರಲಿ. ಬ್ರಹ್ಮಚರ್ಯಾಶ್ರಮದಲ್ಲಿ ಜೀವನಕ್ಕೆ ಇಳಿದುಬಂದ ವೇದಗಳು ಜೀವನವಿಡೀ ನಮ್ಮೊಡನೆ ಇರಲು ಯೋಗ್ಯವಾದವು. ಬಿಡಲು ಸಲ್ಲ. ಒಟ್ಟಿನಲ್ಲಿ ಎಲ್ಲೆಡೆಯೂ, ಎಲ್ಲ ಅವಸ್ಥೆಗಳಲ್ಲೂ, ಎಲ್ಲ ಕಾಲದಲ್ಲೂ ದಾರಿತೋರುವ ಬೆಳಕಿದು.

ಗೃಹಸ್ಥಾಶ್ರಮವೆಂದರೆ ವಿಶೇಷವಾದ ಹೊಣೆಗಾರಿಕೆಗಳು. ವಿ + ವಹನ, ಹೊಣೆಗಾರಿಕೆಗಳನ್ನು ವಹಿಸಿಕೊಳ್ಳುವುದು = ವಿವಾಹ. ವಿಶೇಷ ಸಂದರ್ಭಗಳಲ್ಲಂತೂ ವೇದಗಳ ಮಾರ್ಗದರ್ಶನದ ಅವಶ್ಯಕತೆ ಮತ್ತೂ ಹೆಚ್ಚೇ ಇರುತ್ತದೆ. ಕರ್ತವ್ಯ ನಿರ್ವಹಣೆಗೆ ಉತ್ಸಾಹ, ಆರೋಗ್ಯಗಳು ಮುಖ್ಯ. ಮುಂದಿನ ಜೀವನ ಗಂಡನ ಮನೆಯಲ್ಲಿ, ಅದೇ ಮುಂದಿನ ಕಾರ್ಯಕ್ಷೇತ್ರ = ದೇವಪುರ. ಆ ಕಾರ್ಯಕ್ಷೇತ್ರದಲ್ಲಿ ತನಗೂ, ಇತರರಿಗೂ ಮಂಗಳವನ್ನು ಉಂಟುಮಾಡುವುದು, ಸುಖ-ಸಂತೋಷಗಳನ್ನು ಉಂಟುಮಾಡುವುದು ಕರ್ತವ್ಯವೆನಿಸುತ್ತದೆ. ಇದರರ್ಥ ಅಲ್ಲಿರುವವರ ನಿರೀಕ್ಷೆಗಳನ್ನು ಪೂರೈಸುವುದು ಎಂದಷ್ಟೇ ಅಲ್ಲ. ಅಲ್ಲಿರುವವರ ಆರೋಗ್ಯಕರ ನಿರೀಕ್ಷೆಗಳನ್ನು ಪೂರೈಸುವುದಷ್ಟೇ ಅಲ್ಲದೆ, ಅವರ ಅನಾರೋಗ್ಯಕರ ನಿರೀಕ್ಷೆಗಳನ್ನು ಎದುರಿಸಿ, ತಿದ್ದಿ ಸನ್ಮಾರ್ಗಕ್ಕೆ ತರುವವರೆಗೂ ಹೊಣೆಯಿರುತ್ತದೆ. ಈ ಧೀಮಂತಿಕೆ ಹೆಣ್ಣಿಗೆ ಬೇಕು, ಬರಬೇಕಾದರೆ ಜೊತೆಯಲ್ಲಿ ವೇದವಿರಬೇಕು! ಇದೀಗ ವೇದದ ಆದೇಶ - ಗಂಡನ ಮನೆಯಲ್ಲಿ ವಿರಾಜಿಸು - ಎಂಬುದಕ್ಕೆ ಸ್ಪಷ್ಟ ಅರ್ಥ ದೊರೆತಂತಾಯಿತು.

ಪರೋಕ್ಷವಾಗಿ, ಈ ಕಾರ್ಯ ಮಾಡುವುದಕ್ಕೆ ಆ ಹೆಣ್ಣಿಗೆ ಗಂಡ, ಅತ್ತೆ, ಮಾವ, ಮೈದುನ, ನಾದಿನಿ ಮುಂತಾದವರು ಪ್ರೋತ್ಸಾಹ, ಸಹಕಾರಗಳನ್ನು ನೀಡಬೇಕು ಎಂಬ ಆದೇಶವೂ ಇದೆ. ಇಡೀ ಕುಟುಂಬದ ಕ್ಷೇಮ, ಅಭಿವೃದ್ಧಿಯ ಸಾಧನೆ ಈ ಮಾರ್ಗದಲ್ಲಿದೆ. ಇಂತಹ ವಾತಾವರಣದಲ್ಲಿ ಹುಟ್ಟಿ, ಬೆಳೆಯುವ ಸಂತಾನ ಸತ್ಸಂತಾನವಾಗಿರುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಜೀವನ ಸಂಗಾತಿಯನ್ನು ಆರಿಸಿಕೊಳ್ಳುವ ಸಂದರ್ಭಗಳಲ್ಲಿ, ವಿವಾಹ ಸಂದರ್ಭಗಳಲ್ಲಿ, ಹೆಣ್ಣನ್ನು ಮನೆ ತುಂಬಿಸಿಕೊಳ್ಳುವ ಸಂದರ್ಭಗಳಲ್ಲಿ ಈ ವೈದಿಕ ವಿಚಾರಗಳನ್ನು ಮೆಲಕು ಹಾಕಿದರೆ, ಅದರಂತೆ ನಡೆವ ಸಂಕಲ್ಪವನ್ನು ಮಾಡಿದರೆ, ವರದಕ್ಷಿಣೆಯ ಕಾಟ, ವಧೂದಹನ, ಗಂಡ-ಹೆಂಡತಿ ಪ್ರತ್ಯೇಕವಾಗಿ ಮನೆ ಮಾಡುವುದು, ಅತ್ತೆ-ಸೊಸೆ ಜಗಳ ಮೊದಲಾದ ಅನೇಕಾನೇಕ ಸಮಸ್ಯೆಗಳು ಮೂಲದಲ್ಲೇ ಚಿವುಟಿಹಾಕಲ್ಪಡುತ್ತವೆ. ಕುಟುಂಬಗಳು ಸೊಸೆಯನ್ನು ಆಹ್ವಾನಿಸುವುದರೊಂದಿಗೆ, ಕುಟುಂಬದ ಶಾಂತಿ, ಉನ್ನತಿಗಳನ್ನೂ ಆಹ್ವಾನಿಸಿದಂತಾಗುತ್ತದೆ.

4 comments:

 1. ಸುಂದರ ವಿಚಾರ ಮನನೀಯವಾಗಿದೆ.

  ReplyDelete
 2. ಮದುವೆ-ಮುಂಜಿ ಇತ್ಯಾದಿ ಸಂಸ್ಕಾರಗಳು ನಡೆಯುವಾಗ ಮಂತ್ರಗಳ ಅರ್ಥವನ್ನು ಹೇಳುವವರಿಲ್ಲ. ಈ ಕೆಲಸವನ್ನು ತಿಳಿದವರು ಮಾಡಬೇಕು.ದೈನಂದಿನ ಬದುಕನ್ನು ಹಸನುಗೊಳಿಸುವ ಮಂತ್ರಗಳ ಬಗ್ಗೆ ಹೆಚ್ಚು ನಿರೀಕ್ಷಿಸುತ್ತೇನೆ. ವೇದಸುಧೆಗಾಗಿ ತಮ್ಮ ಕೆಲಸಗಳ ಒತ್ತಡದಲ್ಲೂಬರೆದಿರುವಿರಿ. ಧನ್ಯವಾದಗಳು. ವೇದತರಂಗಕ್ಕೆ ಬರೆದದ್ದನ್ನು ವೇದಸುಧೆಯಲ್ಲೂ ಪೋಸ್ಟ್ ಮಾಡಿದರೆ ಹೆಚ್ಚು ಜನರಗೆ ವಿಷಯ ತಲುಪುವುದರಲ್ಲಿ ಅನುಮಾನವಿಲ್ಲ.

  ReplyDelete
 3. ಉದಾತ್ತ ವಿಚಾರ,ವೇದವೇ ಸದಾ ಸುರಿವ ಜೇನ ಹನಿಯಂತೇ, ವೇದಮಾತೆಗೆ ನಮನ,ತಮಗೂ ಧನ್ಯವಾದಗಳು

  ReplyDelete
 4. ಶ್ರೀ ಶರ್ಮರೇ,
  ನಮಸ್ತೆ,
  ಸದ್ವಿಚಾರಗಳನ್ನು ಕೊಡತ್ತಾ ಇರಿ

  ReplyDelete