Pages

Thursday, December 2, 2010

ವೇದವನ್ನು ಕಲಿಯೋಣ ಬನ್ನಿ

अथ ओ३म् श्रीः
ओं नमः सच्चिदानन्दवेदपुरुषपरम्ब्रह्मणे
धियो यो नः प्रचोदयात्


ಎಲ್ಲರೂ ವೇದಕ್ಕಾಗಿ :- ಜ್ಞಾನಾರ್ಥಿಗಳು ಜ್ಞಾನವನ್ನು ಅಧ್ಯಯನ, ಆರ್ಜನೆ ಮಾಡುವುದು ಎಲ್ಲಿಂದ? ಎಲ್ಲಿ ಯಥಾರ್ಥ ಜ್ಞಾನ ಲಭಿಸುವುದೋ ಅಲ್ಲಿಂದ. ಅಂತಹ ಜ್ಞಾನಭಂಡಾರವೇ ವೇದ. ಆದ್ದರಿಂದ ಎಲ್ಲರೂ ವೇದಕ್ಕಾಗಿ.


ಎಲ್ಲರೂ :-ಈ ಎಲ್ಲರೂ ಎಂದರೆ ಯಾರು? ಎಲ್ಲರೂ ಎಂದರೆ ಮಾನವರು ಎಂದೇ ಅರ್ಥ. ಮಾನವ ಎಂಬ ಪದದ ಅರ್ಥವೇ ಜ್ಞಾನಿ ಅಥವಾ ಜ್ಞಾನಾರ್ಥಿ ಎಂದು.

ಜ್ಞಾನ :- ಜ್ಞಾನವೆಂದರೆ ಯಥಾರ್ಥ ಅರಿವು, ತಿಳಿವಳಿಕೆ. ಇದರ ಆರ್ಜನೆಯಿಂದ ಆತ್ಮೋದ್ಧಾರ, ಅದರೊಂದಿಗೆ ಪರೋದ್ಧಾರ. ಅದರಿಂದ ಸಮಾಜೋದ್ಧಾರ.

ವೇದಾಧ್ಯಯನಕ್ಕೆ ಅರ್ಹತೆ :- ಸಸ್ಯಾಹಾರಿ ಮಾನವ ಸಮಾಜ, ಉಪನಯನ ಸಂಸ್ಕಾರ ಹೊಂದಿದವರು. ಆಸಕ್ತ ಶ್ರದ್ಧಾವಂತರು. ಈ ಅರ್ಹತೆಗಳುಳ್ಳವರು.
ಹಾಗಾದರೆ....., ಈಗಿನ ಮತ, ಪಂಥ-ಪಂಗಡಗಳ ಗೊಂದಲದಲ್ಲಿ ಈ ಅರ್ಹತೆ ಇಲ್ಲದಿರುವ,...... ಆದರೆ, ಆಸಕ್ತಿ ಮತ್ತು ಶ್ರದ್ಧೆಯುಳ್ಳವರಿಗೆ ವೇದಾಧ್ಯಯನ ಮಾಡಲು ಅವಕಾಶವಿಲ್ಲವೇ? ಖಂಡಿತ ಇದೆ. ಈ ವಿಚಾರ ನನ್ನದಲ್ಲ !
ಯಜುರ್ವೇದ ೨೬ ನೇ ಅಧ್ಯಾಯದ ೨ ನೇ ಮಂತ್ರವು ಓಂ ಯಥೇಮಾಂ ವಾಚ ಕಲ್ಯಾಣೀಮಾವದಾನಿ ಜನೇಭ್ಯಃ || ಅರ್ಥ:- ಪರಮಾತ್ಮನ ಮಾತು ಇಂತಿದೆ. ಈ ಮಂಗಲಕರವಾದ ವಾಣಿಯನ್ನು (ವೇದ ವಾಣಿಯನ್ನು) ಎಲ್ಲ ಜನರಿಗಾಗಿ ಉಪದೇಶಿಸುತ್ತಿದ್ದೇನೆ. ಎಂದು. ಹೀಗೆ ವೇದದ್ದೇ ಆದೇಶ. ಹೀಗಿರುವಾಗ ಗೊಂದಲಕ್ಕೆ ಅವಕಾಶವೆಲ್ಲಿ ? ಆದರೆ ವೇದಾಧ್ಯಯನಕ್ಕೆ ಅರ್ಹತೆ ಹೊಂದಲು ಅವರು ಸಸ್ಯಾಹಾರಿಗಳಾಗಬೇಕು, ಉಪನಯನ ಸಂಸ್ಕಾರ ಪಡೆಯಬೇಕು. ಮತ್ತು ಇದರಲ್ಲಿ ಗಂಡು-ಹೆಣ್ಣು ಎಂಬ ಭೇದವಿಲ್ಲ. ಸಮಾನವಾದ ಅವಕಾಶ, ಅರ್ಹತೆ ಇದೆ. ಈ ವಿಚಾರವೂ ನನ್ನದಲ್ಲ !! ಋಗ್ವೇದ ೮ ನೇ ಮಂಡಲ ೩೩ ನೇ ಸೂಕ್ತ ೧೯ ನೇ ಮಂತ್ರವು ಸ್ತ್ರೀ ಹಿ ಬ್ರಹ್ಮಾ ಭೂವಿ || ಅರ್ಥ:- "ವನಿತಾವರೇಣ್ಯಳು ಚತುರ್ವೇದಜ್ಞಳಾಗಿ ವಿರಾಜಿಸಬಲ್ಲಳು. ಎಂದು ತಿಳಿಸುತ್ತಿದೆ. ಇದೂ ವೇದ ವಿಷಯವೇ. ವಿಷಯಗಳು ನಿಮ್ಮ ಮನಮುಟ್ಟಿ, ಮನತಟ್ಟಿ, ನಿಮ್ಮ ವಿಮರ್ಶೆಯ ಮೂಸೆಯಲ್ಲಿ ಚಿಂತನ-ಮಂಥನ ಮಾಡಿ, ನಿಮ್ಮ ಆತ್ಮ-ಮನಸ್ಸಿಗೆ ಸರಿ ಎನಿಸಿದರೆ....., ಏಕೆಂದರೆ ಈ ಮಾತೂ ನನ್ನದಲ್ಲ !!! ಋಗ್ವೇದ ೧ ನೇ ಮಂಡಲ ೮೬ ನೇ ಸೂಕ್ತ ೯ ನೇ ಮಂತ್ರವು ಯೂಯಂ ತತ್ಸತ್ಯಶವಸ ವಿಷ್ಕರ್ತಾ ಮಹಿತ್ವನಾ || ಅರ್ಥ:- ಸತ್ಯವನ್ನೇ ಶಕ್ತಿಯಾಗಿ ಹೊಂದಿರುವ ಧೀರರೇ ! (ಸತ್ಯವಾದ ಶಕ್ತಿಯಿಂದಲೇ ವಿರಾಜಿಸುವ ಧೀರರೇ !) ನೀವು ನಿಮ್ಮ ಸ್ವಂತ ಮಹಿಮೆಯಿಂದಲೇ ಆ ಸತ್ಯವನ್ನು ಆವಿಷ್ಕರಿಸಿರಿ, ಬೆಳಕಿಗೆ ತನ್ನಿರಿ. ಎಂದು ಸ್ವತಃ ವೇದವೇ ತನ್ನನ್ನು ತಾನು ತೆರೆದುಕೊಳ್ಳುತ್ತಿದೆ.ಆದ್ದರಿಂದ, ಯಥಾರ್ಥ ಜ್ಞಾನ ಆರ್ಜನೆಗಾಗಿ ನಾನೂ ವೇದಾಧ್ಯಯನ ಮಾಡಲೇ ಬೇಕು ಎಂದು ಮುಕ್ತ ಮನಸ್ಸಿನಿಂದ ನಿಶ್ಚಯಿಸಿ, ಆತ್ಮಪೂರ್ವಕವಾಗಿ ನೀವೂ ದೃಢ ನಿರ್ಧಾರಕ್ಕೆ ಬಂದಿದ್ದರೆ, ತಪ್ಪದೆ ತಡಮಾಡದೆ ಬನ್ನಿ. ಈ ಕೂಡಲೇ ವೇದಾಧ್ಯಯನ ಪ್ರಾರಂಭಿಸಿ.

ವಿ.ಸೂ.:- ಈ ವಿಚಾರಗಳಿಂದ ಅಕಸ್ಮಾತ್ ಗೊಂದಲಗೊಂಡಿದ್ದರೂ..... ಬನ್ನಿ. ಮುಕ್ತ ಮನಸ್ಸಿನಿಂದ ಮುಖತಃ ಮಾತನಾಡೋಣ. ಸಮಸ್ಯಾ ಮುಕ್ತರಾಗೋಣ.
ಸಸ್ನೇಹ ನಮಸ್ತೇ,


- ಪುರೋಹಿತ ವೇಲಾಪುರಿ ವಿಶ್ವನಾಥ ಶರ್ಮಾ-ವೇದಾಧ್ಯಾಯೀ, ಬೇಲೂರು.

ವೇದವನ್ನು ಕಲಿಯೋಣವೆಂದು ಶ್ರೀ ವಿಶ್ವನಾಥ ಶರ್ಮರು ಕರೆ ಕೊಟ್ಟಿರುವುದರಿಂದ ಸಹಜವಾಗಿ ಯಾವಾಗ ಪಾಠಮಾಡುತ್ತೀರೆಂದು ಪ್ರಶ್ನೆ ಕೇಳಬಹುದಲ್ಲವೇ? ಈಗಾಗಲೇ ಪಾಠ ಆರಂಭವಾಗಿದೆ.ಇನ್ನು ಕೆಲವೇ ದಿನಗಳಲ್ಲಿ, ವೇದಸುಧೆಯಲ್ಲೂ ಆರಂಭ ಗೊಳ್ಳಲಿದೆ...ನಿರೀಕ್ಷಿಸಿ...
-ಶ್ರೀಧರ್

1 comment:

  1. ವೇದ ಎಲ್ಲರಿಗಾಗಿ ಎನ್ನಬಹುದು, ಎಲ್ಲರೂ ವೇದಕ್ಕಾಗಿ ಅನ್ನುವುದು ಕಷ್ಟ.

    ReplyDelete