ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Tuesday, March 27, 2012

ದೈವಾಂಶ ಸಂಭೂತರಿಗೆ ಮಾತ್ರ ಎಲ್ಲರಲ್ಲೂ ದೇವರು ಕಾಣುತ್ತಾನೆ

ಓದುವುದನ್ನು ಆರಂಭಿಸಿದಾಗಿನಿಂದ ಬ್ರಾಹ್ಮಣರ ಬಗ್ಗೆ ಒಂದು ವರ್ಗದ ಆಪಾದನೆಗಳನ್ನು ಕೇಳುತ್ತಲೇ ಬಂದಿದ್ದೇನೆ. ಅದೇನೋ ಎಲ್ಲರೂ 'ಪುರೋಹಿತ ಶಾಹಿ' ಅನ್ನೋ ಪದದ ಧಾರಾಳ ಬಳಕೆ ಮಾಡುತ್ತಾರೆ. ಹಾಗಂದರೇನು ಅಂಥ ನಂಗೆ ಗೊತ್ತಿಲ್ಲ ಶೋಷಿತವರ್ಗ ಶೋಷಣೆ ಗಳನ್ನ ಮರೆಯೋದು ಅಷ್ಟು ಸುಲಭವಲ್ಲವೇನೋ? ಆದರೆ ತೆಗಳಿಕೆ ಯಾರಿಗೆ ಇಷ್ಟವಾಗತ್ತೆ? ನಂಗೂ ಬೇಜಾರಾಗ್ತಿತ್ತು. ಈಗ ಅಷ್ಟಾಗಲ್ಲ. ಈ ಘಟನೆ ನಡೆದ ಮೇಲೆ ಬೇಸರದ ಭಾವ ಇನ್ನೂ ಕಡಿಮೆಯಾಗಿದೆ. ಗುಡಿಯ ಸಂಭ್ರಮ ಅಂಥ ಒಂದು ಕಾರ್ಯಕ್ರಮವನ್ನ, ಬೆಂಗಳೂರಿನ ಕೆಲವು ಗುಡಿಗಳಲ್ಲಿ ಆಯೋಜಿಸಿದ್ದರು. ಮಲ್ಲೇಶ್ವರದ ವೇಣುಗೋಪಾಲ ಸ್ವಾಮಿಯ ಗುಡಿ ನಾನು ಯಾವಾಗಲೂ ಹೋಗುವ ಗುಡಿಗಳಲ್ಲೊಂದು. ಅಲ್ಲೂ ಗುಡಿಯ ಸಂಭ್ರಮದ ಕಾರ್ಯಕ್ರಮವಿತ್ತು, ಪ್ರಕಾಶ್ ಬೆಳವಾಡಿಯವರ ಒಂದು ನಾಟಕ ಇತ್ತು. ನೋಡೋಕೆ ಹೋಗಿದ್ದೆವು. ಆವತ್ತು ಗುಡಿಯಲ್ಲಿ ಏನೋ ವಿಶೇಷ ಪೂಜೆ. ಸ್ವಾಮಿ ಗರುಡ ವಾಹನದ ಮೇಲೆ ಅಲಂಕೃತ ನಾಗಿ ಮೆರವಣಿಗೆಗೆ ಸಿಧ್ಧನಾಗಿ ಕುಳಿತಿದ್ದ. ಉತ್ಸವ ಮುಗಿದ ಮೇಲೆ, ಒಳಗೆ ಗರ್ಭಗುಡಿಯ ದೇವರ ನೋಡಲು ನಾನು ಮತ್ತು ನನ್ನ ಮಗ ಹೋದೆವು. ಅಲ್ಲೇ ಪ್ರಾಂಗಣದಲ್ಲಿ ಸಾಲಾಗಿ ಒಂದಷ್ಟು ಜನ ಕೂತಿದ್ದರು. ಅವರೆಲ್ಲರೂ ಶ್ರೀ ವೈಷ್ಣವರು . ಆ ಗುಡಿಗೆ ಶ್ರೀ ವೈಷ್ಣವ ಭಕ್ತರೇ ಪ್ರಮುಖರು . ಹಾಗೆ ಕೂತವರ ಮುಂದೆ ಎಲೆ ಇತ್ತು, ಪ್ರಸಾದ ಬಡಿಸುತ್ತಿದ್ದರು. ನಾವು ದೇವರ ನೋಡಿ ನಮಸ್ಕಾರ ಮಾಡಿ ಹೊರ ಬರುವಾಗ ಮಗನ ಕಣ್ಣು ಎಲೆಯ ಮೇಲೆ ಹೋಯಿತು. ಎಂದೂ ಬಾಯ್ತೆರೆದು ತಿನ್ನಲು ಕೇಳದ ಮಗ " ಅಮ್ಮ, ಓರು ಓಲಕ್ಕಿ ತಿಂತಿದಾರೆ, ನಂಗೂ ಬೇಕು" ಅಂದ. ಹೇಗೆ ಕೇಳೋದು?, ಅಲ್ಲಿ ಸಾರ್ವ ಜನಿಕರನ್ನ ಅವರು ಕರೆಯುತ್ತಿರಲಿಲ್ಲ. ಹಾಗೆ ಮರೆಸಿ ಹೊರಗೆ ಕರಕೊಂಡು ಬಂದೆ. ಅವ ಮರೆಯಲಿಲ್ಲ. ಸರಿ ಎಂದೂ ತಿನ್ನಲು ಕೇಳದ ಮಗ ಕೇಳುತ್ತಿದ್ದಾನೆ, ತಿಂತಾನೇನೋ ಅನ್ನೋ ಆಸೆ ಇಂದ, ನಾನು ನನ್ನ ಪತಿ ಮತ್ತೆ ದೇವಳದ ಒಳಗೆ ಹೋದೆವು. ಅಷ್ಟು ಹೊತ್ತಿಗೆ ಕಚ್ಚೆ ಉಟ್ಟ ಶ್ರೀ ವೈಷ್ಣವ ಹೆಂಗಸರು, ಗಂಡಸರು ತಿಂದ ಎಲೆ ಹಿಡಿದು ಕೊಂಡು ಕೈ ತೊಳೆಯಲು ಹೊರ ಬರುತ್ತಿದ್ದರು. ಆದರೂ ಬಡಿಸುತ್ತಿದ್ದವರನ್ನ "ಸ್ವಲ್ಪ ಪ್ರಸಾದ ಕೊಡ್ತಿರಾ" ಅಂದೆ. "ಖಾಲಿಯಾಯ್ತು" ಅನ್ನೋ ಉತ್ತರ ಬಂತು. ಮತ್ತೆ ಮಗ ಕೇಳಿದ. ಅಲ್ಲೇ ಇದ್ದ ಒಬ್ಬ ಹೆಂಗಸು ಅಲ್ಲಿ ಹಾಲ್ ನ ಒಳಗೆ ಕೊಡ್ತಾರೆ ಹೋಗಿ ಕೇಳಿ ಅಂದರು. ಸರಿ ಅಲ್ಲೂ ಹೋದೆವು. ಮತ್ತೆ ಕೇಳಿದೆವು. ನೋಡ್ತೀನಿ ಅಂದ ಒಬ್ಬ ಪುಣ್ಯಾತ್ಮ ಫೋನ್ ಬಂದು ಮಾಯವಾದರು . ಅಷ್ಟು ಹೊತ್ತಿಗೆ ಮೊದಲು ಕೇಳಿದ್ದ ವ್ಯಕ್ತಿ ಮತ್ತೆ ಬಂದರು. ಈ ಬಾರಿ ನೋಡ್ತೀನಿ ಅಂತ ಒಳ ಹೋದರು. ಹಾಲ್ ನಲ್ಲಿ ನಮ್ಮ ಮುಂದೆ ಸಾಲಾಗಿ ಎಲೆ ಇಟ್ಟು, ಪುಷ್ಕಳವಾಗಿ ಕದಂಬಂ, ಪೊಂಗಲ್ ಮತ್ತಿನ್ನಿನೇನೋ ಹೆಸರುಗಳ ಪ್ರಸಾದಗಳನ್ನ ಬಡಿಸುತ್ತಿದ್ದರು. ಬಕೆಟ್ ತುಂಬಾ ಇದ್ದ ಪ್ರಸಾದಗಳು ನಮ್ಮ ಕಣ್ಣು ಕುಕ್ಕುತ್ತಿದ್ದವು. ಮುಂದೆಯೇ ರಾಶಿ ಬಾಳೆಯೂ ಬಿದ್ದಿತ್ತು. ಸರಿ ಬಿಡು ಒಂದು ಎಲೆಯಲ್ಲಿ ಕೊಡ್ತಾರೆ ಅಂಥ ನಾವು ನಿಂತೆವು . ಒಳ ಹೋದಾತ ಬಂದರು "ತಗೋಳಮ್ಮ" ಅಂಥ ಒಂದು ಸೌಟಿನಲ್ಲಿ ಪೊಂಗಲ್ ತಂದಿದ್ದರು. ನಾನು ಒಂದು ಬಾಳೆ ಎಲೆ ಕೇಳೋಣ ಅನ್ನೋ ಅಷ್ಟರಲ್ಲಿ, ತುದಿ ಇಂದ ಒಂದು ತುತ್ತು ಪೊಂಗಲನ್ನು ನನ್ನ ಕೈಗೆ ಹಾಕಿ ಹೊರಟು ಹೋದರು . ಮಗ "ಇದು ಓಲಕ್ಕಿ ಅಲ್ಲ, ನಂಗೆ ಬೇಡ" ಅಂಥ ಮೂತಿ ತಿರುವಿದ. ಸರಿ ಹೊರ ಹೋಗಿ ಅವನಿಗೆ ಬೇರೇನೋ ಕೊಡಸಿ ಸಮಾಧಾನ ಮಾಡಿದೆವು. ಅವರು ಒಳಕರೆದು ಪ್ರಸಾದ ಕೊಡಲೆಂದು ನಾ ನೀರಿಕ್ಷಿಸಿರಲಿಲ್ಲ, ಕೇಳಿದ್ದು ನಾನೂ ಅಲ್ಲ. ಒಂದು ಮಗು ಅಷ್ಟು ಸ್ಪಷ್ಟವಾಗಿ ನನಗೆ ಪ್ರಸಾದ ಬೇಕು ಅಂದಾಗಲೂ ಕೊಡದೆ ಹೋದದ್ದು ಎಷ್ಟರ ಮಟ್ಟಿಗೆ ಸರಿ? ಇಂಥ ವರ್ತನೆಗಳು ಬ್ರಾಹ್ಮಣರ ವಿರುಧ್ಧದ ಆರೋಪಗಳಿಗೆ ತುಪ್ಪ ಸುರಿಯಲಾರವೇ? ಭಗವಂತನ ನಾಮವನ್ನ ಎಲ್ಲ ಸ್ತರದವರಿಗೆ ತಲುಪಿಸುವ ಸಲುವಾಗಿ ಗೋಪುರದ ಮೇಲಿಂದ ನಾಮವನ್ನ ಉಚ್ಚರಿಸಿದ ಭಗವದ್ ರಾಮಾನುಜರ ಶಿಷ್ಯ ಪರಂಪರೆ ಇಲ್ಲಿಗೆ ಬಂತೇ? ಕಲ್ಲು ಕೃಷ್ಣನ ಕೈಗೆ ಬೆಣ್ಣೆ ಮುದ್ದೆಯನಿಟ್ಟವರಿಗೆ ಒಂದು ಮಗುವಿನಲ್ಲಿ ಕೃಷ್ಣ ಕಾಣಲಿಲ್ಲವೇ? ಈ ಬರಹದ ಹಿಂದಿನ ಉದ್ದೇಶ ಯಾರನ್ನೂ ಹಳಿಯುವುದಲ್ಲ. ನನಗೆ ವೇಣುಗೋಪಾಲನ ಸನ್ನಿಧಿ ಇಂದಿಗೂ ಪ್ರಿಯವೇ. ಆದರೆ ಪುರದ ಹಿತವನ್ನ ಬಯಸಬೇಕಾದ ಪುರೋಹಿತ , ಒಳಿತನ್ನು ಆಚರಿಸಿ ತೋರಿಸಬೇಕಾದ ಜ್ಞಾನಿ ಆಚಾರ್ಯ ಎಲ್ಲಿ ಕಳೆದು ಹೋದ? ಎಂಬ ಪ್ರಶ್ನೆ ಕಾಡುತ್ತೆ. ಮಾರನೆ ದಿನ ನನ್ನ ಸಹೋದ್ಯೋಗಿಗಳೊಂದಿಗೆ ಈ ಪ್ರಸಂಗ ಹೇಳುತ್ತಿದ್ದೆ . ಒಬ್ಬರೆಂದರು, "ನಾನು ಗುರು ರಾಘವೇಂದ್ರ ವೈಭವ ನೋಡುತ್ತೇನೆ. ಅದರಲ್ಲಿ ಗುರುಗಳು ಎಲ್ಲರನ್ನೂ ಎಷ್ಟು ಪ್ರೀತಿ ಇಂದ ಕಾಣುತ್ತಾರೆ. ಆದರೆ ಇಂದಿನ ರಾಯರ ಮಠಗಳಿಂದ ಅದನ್ನ ನೀರಿಕ್ಷಿಸಬಹುದೇ? ಬಹುಶಃ ದೈವಾಂಶ ಸಂಭೂತರಿಗೆ ಮಾತ್ರ ಎಲ್ಲರಲ್ಲೂ ದೇವರು ಕಾಣುತ್ತಾನೆ". ಅವರ ಮಾತು ನನ್ನ ಮನಸನ್ನ ಇನ್ನೂ ತಿಳಿಯಾಗಿಸಿತು. ನನಗೆ ಅಲ್ಲಿದ್ದ ಯಾರೂ ವೈಯುಕ್ತಿವಾಗಿ ಪರಿಚಯದವರಲ್ಲಿ. ಯಾವ ವರ್ಗದ ಬಗ್ಗೆಯೂ ನನಗೆ ಸಿಟ್ಟಿಲ್ಲ. ಇದು, ಉಣ್ಣಲು ಕೇಳಿದ ಮಗುವಿಗೆ ಇಕ್ಕಲಾಗದೇ ಹೋದ ತಾಯ ಭಾವ ಮಾತ್ರ.
 -ಸ್ವರ್ಣ

 [ಸೋದರೀ ಸ್ವರ್ಣ ಅವರು ಮೇಲಿನ ತಮ್ಮ ಆ೦ತರಾಳದ ಮಾತನ್ನು ತಮ್ಮ ಬ್ಲಾಗ್ ನಲ್ಲಿ ಪ್ರಕಟಿಸಿ ನನಗೆ ನೋಡಲು ಮೇಲ್ ಮಾಡಿದ್ದರು. ಅದನ್ನಿಲ್ಲಿ ಪ್ರಕಟಿಸಲಾಗಿದೆ. ಹಲವು ದೇವಾಲಯಗಳಲ್ಲಿ ಇಂದಿಗೂ ನಡೆಯುತ್ತಿರುವ ಭೇಧಭಾವವನ್ನು ಗಮನಿಸಿದರೆ ಇನ್ನೂ ಯಾವ ಕಾಲಕ್ಕೆ ಈ ವ್ಯವಸ್ಥೆಗಳು ಮಾನವೀಯ ನೆಲೆಯಮೇಲೆ ಮಾರ್ಪಾಡಾಗುತ್ತದೆ! ಎಂಬ ಬೇಸರ ಕಾಡುತ್ತದೆ] -ಹರಿಹರಪುರ ಶ್ರೀಧರ್, ಸಂಪಾದಕ,ವೇದಸುಧೆ

8 comments:

 1. ಸೋದರಿ ಸ್ವರ್ಣಾರವರೇ, ನಿಮ್ಮ ಅಂತರಾಳದ ಮಾತು ನನಗಂತೂ ಬಹಳವಾಗಿ ತಟ್ಟಿದೆ. ಕೆಲವು ಮೌಢ್ಯದ ಜನ ಇಂತಹ ನಡತೆಯನ್ನು ಅಲ್ಲಲ್ಲಿ ನಡೆಸುತ್ತಾರೆ. ಇರಲಿ ಒಬ್ಬ ಬ್ರಾಹ್ಮಣನಾಗಿ ನಾನು ತಮಗೆ ಉತ್ತರಿಸುತ್ತಿದ್ದೇನೆ, ನಾನೂ ಸಹಿತ ಅದೇ ತರದ ಸನ್ನಿವೇಶವನ್ನು ಅನುಭವಿಸಿದ್ದೇನೆ. ನನ್ನ ಮಗ ಕೂಡಾ ಒಮ್ಮೆ ಹೀಗೇ ದೇವಸ್ಥಾನವೊಂದರಲ್ಲಿ ಏನೋ ಹಳದಿ ಬಣ್ಣದ ಸಿಹಿತಿನಿಸು ಕಂಡ. ದೊನ್ನೆಗಳಲ್ಲಿ ಕೆಲವರು ಪಡೆದುಕೊಂಡಿದ್ದರು, ಕೆಲವರು ಕೇಜಿಗಿಂತಲೂ [ದೊಡ್ಡ ಪಾತ್ರೆಗಳಲ್ಲಿ] ಹೊತ್ತೊಯ್ಯುತ್ತಿದ್ದರು. ನಾನು ಯಾವತ್ತೂ ದೇವಸ್ಥಾನಗಳ ತಿನ್ನುವ ಪ್ರಸಾದಕ್ಕೆ-ಪ್ರಸಾದ ಭೋಜನಕ್ಕೆ ನಿಲ್ಲುವ ಜನ ಅಲ್ಲ. ಪೂಜೆಮುಗಿಯಿತು ಅಂದರೆ ಸಾಮಾನ್ಯವಾಗೈ ಕೊಡುವ ಆರತಿ, ತೀರ್ಥ, ಹೂವಿನಪ್ರಸಾದ ಇತ್ಯಾದಿಗಳನ್ನು ಪಡೆದು ನಮ್ಮ ಗಾಡಿ ಮನೆಗೆ ಹೊರಟುಬಿಡುತ್ತದೆ! ಆದರೂ ಅವತ್ತಿನ ದಿನ ಮಾತ್ರ ಮಗ ಹಠಮಾಡುತ್ತಿದ್ದ. ಹೊರಗೆ ಕರೆದುಕೊಂಡು ಹೋದರೂ ಮತ್ತೆ ಒಳಗೇ ಕೈತೋರಿಸುತ್ತಿದ್ದ. ನಿರ್ವಾಹವಿಲ್ಲದೇ ಒಳಗೆ ಹೋದೆ; ನನ್ನ ಮುಖ ನಾಚಿಕೆಯಿಂದ ಮಾತನಾಡಲಾರೆ ಎನ್ನುತ್ತಿತ್ತು. ಹಸಿದೇ ಇರುತ್ತೇನೆಯೇ ವಿನಃ ಇನ್ನೊಬ್ಬರಲ್ಲಿ ಯಾಚಿಸುವ ಸ್ವಭಾವ ಕಮ್ಮಿ. ಅವರಾಗಿ ಒತ್ತಾಯ ಪೂರ್ವಕ ಕೊಟ್ಟರೇ ಸ್ವೀಕರಿಸದ ನನ್ನ ಅಹಂಕಾರವನ್ನು ಮರ್ದಿಸಲು ದೇವರೇ ಈ ಶಿಕ್ಷೆ ಕೊಟ್ಟನೇನೋ ಎಂದುಕೊಂಡು ಅಲ್ಲಿದ್ದ ಯಾರಲ್ಲೋ ಕೇಳಿದೆ. "ಸ್ವಾಮೀ ಆ ಹಳದಿ ಸ್ವೀಟ್ ಪ್ರಸಾದ ಸ್ವಲ್ಪ ಸಿಗುತ್ತಾ?" ಉತ್ತರ ಬಂತು"ಸ್ವೀಟು ಆಗ್ಹೋಗ್ಬುಟ್ಟಿದೆ" ಎಂದು ನಡುವೆಯೇ ಇನ್ನೇನೋ ಕೆಲಸಕ್ಕೆ ತೆರಳಿದರು. ನಮ್ಮ ನಂತರ ಮತ್ಯಾರೋ ಬಂದು ಕೇಳಿದಾಗ ಅವರಿಗೆ ಅದೆಲ್ಲಿಂದಲೋ ತಂದುಕೊಟ್ಟಿದ್ದನ್ನು ತುಸುದೂರದಿಂದ ಗಮನಿಸಿದೆ. ಬಹಳ ಪಿಚ್ಚೆನಿಸಿತು. ಚಿಕ್ಕವ- ಮಗ ಕೇಳಿದ್ದ ಎಂಬ ಕಾರಣಕ್ಕೆ ತಿನ್ನುವ ಪ್ರಸಾದ ಕೇಳಿದೆನಲ್ಲಾ ಹೇಗಾದರೂ ಮಾಡಿ ಮನೆಗೆ ತೆರಳಿ ಅಲ್ಲಿ ಹಳದಿ ಬಣ್ಣದ ಕೇಸರೀಬಾತು ಮಾಡಿ ಭಗವಂತನಿಗೆ ಮನದಲ್ಲೇ ಅರ್ಪಣೆಗೈದು ಮಗನಿಗೆ ಕೊಡಬಹುದಿತ್ತಲ್ಲಾ ಅಂದುಕೊಂಡೆ. ಆದರೆ ಮಗನಿಗೆ ಅದು ಅರ್ಥವಾಗಬೇಕಲ್ಲಾ ?

  ನನ್ನ ಈ ಅನುಭವದಿಂದ ನನಗೆ ಅರ್ಥವಾಗಿದ್ದು ಇಷ್ಟು: ದೇವಸ್ಥಾನಗಳಲ್ಲಿ ಒಂದು ವರ್ಗಕ್ಕಿಂತಾ ಒಂದು ಗುಂಪು ಇರುತ್ತದೆ. ಆ ಗುಂಪಿನ ಜನರಿಗೆಲ್ಲಾ ಅಂತಹ ಪ್ರಸಾದ ಲಭ್ಯ. ಏನೋ ಉದಾರ ಬುದ್ಧಿ ಇರುವ ಯಾರೋ ಸಿಕ್ಕರೆ, ಗುಂಪಿನ ಮಿಕ್ಕವರು ಅನುಮತಿಸಿದರೆ ಬೇರೇ ಯಾರಿಗಾದರೂ ಕೊಟ್ಟಾರು. ನಮ್ಮ ಊರಲ್ಲಿನ ದೇವಾಸ್ಥಾನಗಳಲ್ಲಿ ಎಲ್ಲರಿಗೂ ಏಕಕಾಲಕ್ಕೆ ತಿನ್ನುವ ಪ್ರಸಾದ ವಿತರಣೆಯಾಗುತ್ತದೆ. ಹೀಗಾಗಿ ಇದು ಜನಾಂಗದ ತಪ್ಪಲ್ಲ, ಸ್ಥಾನಿಕವಾದ ವ್ಯವಸ್ಥಾಪಕರ ವ್ಯವಸ್ಥೆಯ ತಪ್ಪು. ನೀವು ಶೃಂಗೇರಿಗೋ ಹೊರನಾಡಿಗೋ ಧರ್ಮಸ್ಥಳಕ್ಕೋ ಕೊಲ್ಲೂರಿಗೋ ಹೋದರೆ ಇಂತಹ ಮೌಢ್ಯ ಇರುವುದಿಲ್ಲ. ಇದು ತೀರಾ ಸಂಕುಚಿತ ಮನೋಭಾವ, ಇದಕ್ಕಾಗಿ ನಾನೂ ವಿಷಾದಿಸುತ್ತೇನೆ. ನಿಮ್ಮ ಅನುಭವ ನನಗೂ ಆಗಿರುವುದರಿಂದ ಮತ್ತು ನಾನದನ್ನು ಇಲ್ಲಿ ಹೇಳಿರುವುದರಿಂದ, ತಮಗೆ ಪರಿಸ್ಥಿತಿಯ ಅರಿವು ಆಗಿರಬಹುದು ಎಂದುಕೊಳ್ಳುತ್ತೇನೆ.

  ReplyDelete
 2. ಆತ್ಮೀಯರೇ,

  ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ
  ಇಲ್ಲೇ ಇರುವ ಪ್ರೀತಿ ಪ್ರೇಮಗಳ ಗುರುತಿಸದಾದೆ ನಮ್ಮೊಳಗೇ.

  ' ದೇವ ಹೊರಗೆ, ಭಕ್ತ ಒಳಗೆ ' ಎನ್ನುವ ಮಾತುಗಳೆಲ್ಲ, ಇಂತಹ ಪ್ರಸಂಗಗಳ ಅನುಭವಗಳಿಂದಲೇ ಹುಟ್ಟಿರಬಹುದು. ಇಂತಹ ಸನ್ನಿವೇಶಗಳು ನನ್ನ ಜೀವನದಲ್ಲೂ ಆದಾಗಿನಿಂದ ನನ್ನ ಭಗವಂತ ನನ್ನ ಮನೆ ಮತ್ತು ಮನದಲ್ಲಿ ವಿರಾಜಿಸಿದ್ದಾನೆ.
  ಉತ್ತಮ ವಿಚಾರ ಹಂಚಿಕೊಳ್ಳುವ ಸಂಧರ್ಭಕ್ಕಾಗಿ ಕೃತಜ್ಞ
  ಪ್ರಕಾಶ್

  ReplyDelete
 3. ಏನು ಹೇಳುವುದು? ಯಾರನ್ನು ಜರಿಯುವುದು? ಏನು ಮಾಡಿದರೆ ಈ ಪರಿ ತಪ್ಪೀತು? ಇಂತಹ ಪ್ರಸಂಗದಿಂದ ದೇವಾಲಯಗಳಿಗೆ ಹೋದವರನ್ನು ಹಂಗಿಸುವ ಜನರೂ ಇದ್ದಾರೆ. ದೇವಾಲಯಗಳಲ್ಲಿ ಪೂಜೆ ಸಲ್ಲಿಸುತ್ತಾ ಅದರಲ್ಲಿ ಸಮಾಧಾನ ಪಡುವ ಕೋಟ್ಯಾಂತರ ಜನರಿದ್ದಾರೆ.ಸಾವಿರಾರು ವರ್ಷಗಳಿಂದ ನಡೆದು ಬಂದಿರುವ ಈ ಆಚರಣೆಗಳಲ್ಲಿ ಕೆಲವು ಮೂರ್ಖರು ಸೇರಿಕೊಂಡು ಅವರದೇ ಒಂದು ವರ್ಗ ನಿರ್ಮಿಸಿಕೊಂಡು ಹಾಳುಮಾಡುತ್ತಿರುವುದು ಸುಳ್ಳಲ್ಲ. ಜನರು ಜಾಗೃತರಾಗುವುದೇ ಇದಕ್ಕೆ ಪರಿಹಾರ.ಸ್ಥಾನೀಯ ಪರಿಸ್ಥಿತಿಗನುಗುಣವಾಗಿ ಭಕ್ತರನ್ನು ಜಾಗೃತಿ ಮಾಡುವ ಕೆಲಸವೂ ಆಗಬೇಕಿದೆ. ಕೆಲವರೇ ಪ್ರಸಾದವನ್ನು ಭಕ್ಷಿಸಿದರಲ್ಲಾ! ಅವರು ಭಕ್ತರೇ? ಖಂಡಿತಾ ಅಲ್ಲ. ಪ್ರಕಾಶ್ ಹೇಳಿರುವಂತೆ ಭಕ್ತರು ದೇವಾಲಯದ ಹೊರಗೆ. ನಿಜ ದೈವದೊಡನೆ!! ಒಳಗಿದ್ದ ಕೂಟಕ್ಕೆ ನೀವು ಏನು ಬೇಕಾದರೂ ಹೆಸರಿಡಿ.

  ReplyDelete
 4. ವೇದಸುಧೆಯಲ್ಲಿ ಇದನ್ನ ಚರ್ಚಿಸಬಹುದೋ ಇಲ್ಲವೋ ಗೊಂದಲದಲ್ಲಿದ್ದೆ ಸರ್.
  ಆದರೆ ಹಿರಿಯರ ಪ್ರತಿಕ್ರಿಯೇನೋಡಿ ಸ್ವಲ್ಪ ತಿಳಿದಂತಾಯಿತು.
  ಅಲ್ಲಿ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ.
  ಅದಕ್ಕೆ ಕೆಳಗಿನ ಪ್ರತಿಕ್ರಿಯೆಯನ್ನ ಮೇಲ್ ಮಾಡಿದ್ದೇನೆ.

  ಭಟ್ ಸರ್, ಹುಟ್ಟಿನಿಂದ ನಾನೂ ಬ್ರಾಹ್ಮಣ ಳಾಗಿರುವುದರಿಂದ ಈ ಸಂಗತಿ
  ಇನ್ನು ಬೇಸರ ತರಿಸಿತು. ನನ್ನ ಪತಿಯೂ ನೀವು ಹೇಳಿದ ಹಾಗೆ ಹೇಳಿದರು, ಅದು
  ವಿಶೇಷ ಪ್ರಸಾದ, ಅವರ ಗುಂಪಿಗೆ ಮಾಡಿದ್ದು ಅಂತ. ಆದರೆ ದೇವಳದ ಪ್ರಾಂಗಣದಲ್ಲಿ
  ಪ್ರಸಾದ ಹಂಚುತ್ತಿರುವಾಗ ಎಲ್ಲರಿಗೂ ಹಂಚಬೇಕಲ್ಲವೇ? ಒಂದು ಮಗು ಕೇಳುತ್ತಿರುವಾಗ
  ಇಲ್ಲವೆನ್ನದೆ ಇಕ್ಕಬೇಕಲ್ಲವೇ?
  ನೀವು ಹೇಳಿದ ಕ್ಷೇತ್ರಗಳಲ್ಲಿ ಇಂಥ ಅನುಭವಗಳು ಕಡಿಮೆ ಎನ್ನುವುದು ನನ್ನ ಅನಿಸಿಕೆ ಕೂಡ
  ಮತ್ತು ಅವು ನನ್ನಿಷ್ಟದ ಕ್ಷೇತ್ರಗಳು ಕೂಡ.
  ಈ ನೋವು ಬಿಟ್ಟರೆ ಆ ಸ್ಥಾನದ ಬಗ್ಗೆ, ವರ್ಗದ ಬಗ್ಗೆ ನನಗಾವ ಬೇಸರವಿಲ್ಲ.
  ಗುರುವಿನ ಬಗ್ಗೆ ಮಾತಾಡಲು ನಾನೆಷ್ಟರವಳು?
  ಪ್ರತಿಕ್ರಿಯಿಸಿದ ಹಿರಿಯರಿಗೆ ವಂದನೆಗಳು
  ಸ್ವರ್ಣಾ

  ReplyDelete
  Replies
  1. ಸೋದರಿ ಸ್ವರ್ಣಾ,
   ನಿಮ್ಮ ಬಿಚ್ಚು ಮನಸ್ಸಿನ ಅನಿಸಿಕೆಗೆ ಅಭಿನಂದಿಸುವೆ. ದೇವರು/ದೇವಸ್ಥಾನ ಯಾವುದೇ ಒಂದು ಜಾತಿ/ಜನಾಂಗಕ್ಕೆ ಸೀಮಿತವಾಗಿರುವವರೆಗೆ ಇದು ನಡೆಯುತ್ತಿರುತ್ತದೆ. ಅಂತಹ 'ಮೀಸಲಾದ' ಸ್ಥಳಗಳಿಗೆ ಹೋಗದಿರುವುದೇ ಸದ್ಯದ ಪರಿಹಾರ!
   -ನಾಗರಾಜ್.

   Delete
 5. " Perhaps the easiest cop out in the world is to sit on the sidelines and just criticize everything that falls short of perfection. It allows one to feel superior to everyone else who is actually engaged in the struggle of trying to make a better world without ever having to take any risks." -Nick Lento
  btw I am a humbleಶ್ರೀ ವೈಷ್ಣವ ಬ್ರಾಹ್ಮಣ myself who regularly visit ವೇಣುಗೋಪಾಲನ ಸನ್ನಿಧಿ and still wish to say that Madam ಸ್ವರ್ಣಾ's point is " one-sided "and she and others prefer to conveniently overlook the good aspects of that particular community and try to pose as " Progressive & Sensitive souls "!!OK !!... so be it... and let me add that I'm also hurt both ways !!...Thank You ! btw I am also aware that mine is a ‘ lonely voice in the wilderness ‘ !!..

  ReplyDelete
 6. I am repeating the quote inserting commas which were missing in the original one to make it meaningful ! Sorry for the inconvenience!
  jagadish

  " Perhaps the easiest cop out in the world is to sit on the sidelines and just criticize everything that falls short of perfection. It allows one to feel superior to everyone else, who is actually engaged in the struggle of trying to make a better world, without ever having to take any risks." -Nick Lento

  ReplyDelete
  Replies
  1. bkjagadish, Sir, In fact before reacting to this I was suspicious about why because at Venugopala Swami Temple normally it won't happen as far as my knoweledge is concerned, but at some temples such situations may happen based on the arrangements there not based on any particular 'jananga' either. There are many incidents I came across: to my utter surprise, there are built stories! just to blame brahmins nothing else. I do agree that Brahmins may follow separate 'panktis' but they don't forgo to distribute edible prasadam to their maximum extent. Separate panktis are maintained to follow auspicious super cleanliness in temple vicinity. Those who criticise Brahmins for no reasons, may suffer in due course, hence I request one and all here with due respects, to remember the respectable position of purohits who live a simple life to perform vedic actions for the benefit of Society. I request you to excuse myself incase If you are hurt by my earlier voice.

   Readers, For more explanations on why Brahmins maintain separate panktis you can read my article in this link : http://nimmodanevrbhat.blogspot.in/2011/12/blog-post_18.html

   Delete