ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Wednesday, May 23, 2012

ಹಣ ...........................ಒಂದಷ್ಟು ಹರಟೆ

ಒಮ್ಮೆ  ನನಗೆ ನಾನೇ ಒಂದು ಪ್ರಶ್ನೆಯನ್ನು ಹಾಕಿಕೊಂಡೆ.  ನನಗೆ ಎಷ್ಟು ಹಣ ಸಿಕ್ಕರೆ ನಾನು ಸಂತೋಷವಾಗಿ ಸುಖವಾಗಿ ಇರಬಹುದು? ಒಂದು ಲಕ್ಷ, ಹತ್ತು ಲಕ್ಷ, ಒಂದು ಕೋಟಿ, ಹತ್ತು ಕೋಟಿ, ಹೀಗೆ ಲೆಕ್ಖಚಾರ ಮುಂದುವರೆಯಿತು. ಆಯಿತು, ಇಷ್ಟು ಹಣ ಸಿಕ್ಕರೆ ನಾನು ಏನೇನು ಮಾಡಬೇಕು? ಎಂದು ನನ್ನ ಯೋಚನಾ ಲಹರಿಯನ್ನು ಹರಿಯಲು ಬಿಟ್ಟೆ.   ನಾನು ಸುಮ್ಮನೆ ಏನೂ ಕೆಲಸ ಮಾಡದೆ ಕೂಡಬಹುದೇ?  ಈ ಹಣವನ್ನು ಬೇರೆಲ್ಲೋ ಹೂಡಿಕೆಮಾಡಿ ಹೆಚ್ಚು ಹಣ ದುಡಿಯಲು ಪ್ರಯತ್ನಿಸಬಹುದೇ? ಇರುವ ಹಣದಲ್ಲಿ ಆಸ್ತಿ ಮಾಡಿ ಅದನ್ನು ನೋಡಿ ಸುಖ ಪಡಬಹುದೇ?  ಬ್ಯಾಂಕಿನಲ್ಲಿ ತೊಡಗಿಸಿ ಬರುವ ಬಡ್ಡಿಯಲ್ಲಿ ಸಂತೋಷಿಸಬಹುದೇ? ವ್ಯಾಪಾರ ಮಾಡಿ ಸುಖ ಕಾಣಬಹುದೇ?  ದಾನ ಧರ್ಮ ಮಾಡಬಹುದೇ? ಹೀಗೆ ಎಲ್ಲ ಯೋಚನೆಗಳು ನನ್ನನ್ನು ಕಾಡಲು ಪ್ರಾರಂಭವಾದಾಗ, ನನ್ನ  ಸುಖದ ಕನಸಿಗಿಂತ ಗೊಂದಲಗಳೇ ಜಾಸ್ತಿಯಾಯಿತು. ಇದು ಕೇವಲ ಯೋಚನೆ ಅಷ್ಟೇ!  ಆಗಲೇ ನನ್ನ ಸುಖದ ಒಂದೆರಡು ಕ್ಷಣಗಳು ಹಾರಿಹೋದವು.  ಹಣ ಇನ್ನು ಬಂದಿಲ್ಲ, ಯೋಚನೆಯ ಹಂತದಲ್ಲಿದೆ, ಆಗಲೇ ಅದೆಷ್ಟು ಗೊಂದಲ?  ಇನ್ನು ನನ್ನ ಕೈಗೆ ನಾನು ಅಂದುಕೊಂದಷ್ಟು               ಹಣವೇನಾದರೂ ಬಂದುಬಿಟ್ಟರೆ ನನ್ನ ಕಥೆ ಮುಗಿಯಿತು.  ನಾನು ಬಯಸುವ ಸುಖಕ್ಕಿಂತ ಕಷ್ಟ,  ಗೊಂದಲಗಳೇ ಜಾಸ್ತಿ ಎನಿಸಲು ಪ್ರಾರಂಭವಾಯಿತು.


ನಾನು ಕೆಲಸಕ್ಕೆ ಸೇರಿ ಸಂಪಾದನೆ ಮಾಡಲು ಪ್ರಾರಂಭಿಸಿದ ನಂತರ ಇಲ್ಲಿಯತನಕ ಅದೆಷ್ಟೋ ಸುಖದ ಕನಸನ್ನು ಕಂಡಿದ್ದೇನೆ.  ಅದನ್ನು ಪಡೆಯಲು ಸಾಹಸ ಮಾಡಿ ಪದೆದ್ದಿದ್ದೇನೆ.  ಆ ಕನಸು ನನಸಾದಾಗ ಒಂದೆರಡು ದಿನಗಳಷ್ಟು  ಸಮಯ ಸುಖದ ಭ್ರಮೆಯಲ್ಲಿದ್ದು  ನಂತರ ಇನ್ನೊಂದು ಸುಖದ ಕಡೆ ಮನಸ್ಸು ವಾಲಿಕೊಂಡಾಗ ಆ ಸುಖದ ಬೆನ್ನೆರಲು  ಪ್ರಾರಂಭ. ಹೀಗೆ ಎಷ್ಟೋ ಸಲ ಮಾಡಿ ಸೋತಿದ್ದೇನೆ. ಪ್ರತಿ ಸಾರಿಯಲ್ಲೂ ಏನಾದರೊಂದು ಆಸೆಯ ಭ್ರಮೆ.   ಇದೇನು ಹುಚ್ಚು?   ಎಂದು ನಾನೇ ಕೂತು ಯೋಚಿಸುವಾಗ.......... ಈಗೇನು  ಕಡಿಮೆಯಾಗಿದೆ?  ಕೈ ತುಂಬಾ ಸಂಬಳ, ಇರಲು ಸ್ವಂತ ಮನೆ , ಓಡಾಡಲು ವಾಹನ, ಇನ್ನೇನು ಬೇಕು?  ನೆಚ್ಚಿನ ಮಡದಿಯ ಜೊತೆ ಸುಖವಾಗಿರುವುದ ಬಿಟ್ಟು ಬೇರೇನೋ ಆಸೆ ಏಕೆ? ಇರುವಷ್ಟರಲ್ಲಿ ತೃಪ್ತಿಯಿಂದ ಇರಬಹುದಲ್ಲವೇ? ಎಂದು ಒಂದೆರಡು ಕ್ಷಣ ಯೋಚಿಸುತ್ತ ಕೂತಾಗ ಅನಿಸುವುದು ಇಷ್ಟೇ.   ಸಾಕು, ಇನ್ನು ಸಾಕು.  ಭಗವಂತ ಏನು ಕೊಟ್ಟಿದ್ದಾನೋ ಅಷ್ಟು ಸಾಕು, ಇದ್ದುದರಲ್ಲೇ ನೆಮ್ಮದಿ ಕಾಣದಿದ್ದರೆ, ಸುಖ ಬೇರೆ  ಎಲ್ಲಿ ಸಿಗಬೇಕು?  ಎಂದು ಪ್ರಶ್ನಿಸಿಕೊಂಡಾಗ ಮನಸ್ಸು ಹಗುರವಾಗುತ್ತದೆ, ತೃಪ್ತಿಯ ಭಾವ ಹೊರಸೂಸುತ್ತದೆ.

ನಮ್ಮಲ್ಲಿ ಎಷ್ಟೇ ಹಣವಿದ್ದರು, ಆಸ್ತಿ ಅಂತಸ್ತು ಇದ್ದರೂ ಅದು ಅಂದಿನ ಅವಶ್ಯಕತೆ ಪೂರೈಸುವಷ್ಟಾದರೆ ಸಾಕು.  ನಮ್ಮ ನಿತ್ಯದ ಅವಶ್ಯಕತೆಗೆ  ಎಷ್ಟು ಬೇಕು?  ಮಿಕ್ಕಿದ್ದು ಎಷ್ಟೇ ಇದ್ದರೂ ಅದು ಕೇವಲ ನಗದು ರೂಪದಲ್ಲೋ ಅಥವಾ ವಸ್ತು ರೂಪದಲ್ಲೋ ಇರಬಹುದು ಅದರಿಂದ ನಮಗೆ ಅಂದಿಗೆ ಏನೂ ಉಪಯೋಗಕ್ಕೆ ಬಾರದು.  ಮುಂದೆ ಯಾವತ್ತೋ ಉಪಯೋಗಕ್ಕೆ ಬರುತ್ತದೆ. ಆದರೆ, ಇಂದಿಗೆ ಅದು ನಿಷ್ಪ್ರಯೋಜಕ.  ಸುಖವನ್ನು ಈ ಕ್ಷಣದಲ್ಲೇ ಪಡೆಯಬೇಕೆ ವಿನಃ ಮುಂದಿನ ಕ್ಷಣಕ್ಕೇ ಕಾಯುವುದಲ್ಲ. ಏಕೆಂದರೆ, ಮುಂದಿನ ಕ್ಷಣವು ಏನೆಂದು ಯಾರಿಗೂ ಗೊತ್ತಿಲ್ಲದ ಚಿದಂಬರ ರಹಸ್ಯ.

ಒಬ್ಬ ಚೀನೀ ಸಂತ ಹೇಳುತ್ತಾನೆ  " ಯಾವ ಮನುಷ್ಯನಿಗೆ ಇಷ್ಟು ಸಾಕು ಎಂದು ಅನಿಸುವುದಿಲ್ಲವೋ,  ಆತನಿಗೆ ಎಷ್ಟು ಇದ್ದರೂ ಸಾಕಾಗುವುದಿಲ್ಲ.  ಯಾವಾತನಿಗೆ ಇದು ಸಾಕು ಎನಿಸುವುದೋ,ಆತನಿಗೆ ಎಲ್ಲವು ಸಾಕಾಗುತ್ತದೆ." ಇದು ಸತ್ಯ.  ಸಾಕು ಎನ್ನುವುದು ತೃಪ್ತಿ.  ಯಾವಾತನಿಗೆ  ತೃಪ್ತಿಯಾಗುತ್ತದೋ, ಅದೇ ಅವನ ನಿಜವಾದ ಸುಖ. ಈ ತೃಪ್ತಿಯನ್ನು ನಾವೇ ಕಂಡುಕೊಳ್ಳಬೇಕು.  ಇದನ್ನು ಹಣದಿಂದಾಗಲಿ, ಐಶಾರಮಿ  ವಸ್ತುವಿನಿಂದಾಗಲಿ ಪಡೆಯಲು ಸಾಧ್ಯವಿಲ್ಲ.  ಈ ತೃಪ್ತಿ ಬಿಕಾರಿಗೆ ಎಷ್ಟು ಸಾಧ್ಯವೋ ಅಷ್ಟೇ ಒಬ್ಬ ಅಗರ್ಭ    ಶ್ರೀಮಂತನಿಗೂ ಸಾಧ್ಯ.  ಒಂದು ರುಪಾಯಿ ಜೇಬಿನಲ್ಲಿ ಇಟ್ಟುಕೊಂಡು , ನಾನೇ ಅತ್ಯಂತ ಸುಖಿ ಎಂದು ರಸ್ತೆ ಬದಿಯಲ್ಲಿ ಸುಖವಾಗಿ ಮಲಗಿ ನಿದ್ರಿಸುವ ಬಿಕಾರಿಗೂ ಸುಖ ಸಿಕ್ಕುವುದು ಸಾಧ್ಯ. ಹತ್ತಾರು ಕೋಟಿ ಆಸ್ತಿ ಇರುವ ಶ್ರೀಮಂತ ನೂರಾರು ಕೋಟಿ ಇರುವ ಶ್ರೀಮಂತನ ನೆನೆ ನೆನೆದು ತನಗಿಲ್ಲವಲ್ಲ ಎಂದು ನಿದ್ದೆ ಹಾಳು ಮಾಡಿಕೊಂಡರೆ ಅದು ಶ್ರೀಮಂತನ ಅಸುಖ.   ಇಲ್ಲಿ ಹಣವಾಗಲಿ, ಆಸ್ತಿಯಾಗಲಿ ನಮ್ಮ ಸುಖಕ್ಕೆ ಕಾರಣವಲ್ಲ ಎಂದಾಯಿತು .  ಇದು ಕೇವಲ ನಮ್ಮ ನಮ್ಮ ಮಾನಸಿಕ ಸ್ತಿತಿ. ಈಗ ಹೇಳಿ ಯಾರು ಸುಖಿ? ಯಾವುದರಿಂದ ಸುಖ ?

ರಜನೀಷರು ಹೇಳುತ್ತಾರೆ........"ನಿನ್ನಲ್ಲಿ ಒಂದು ಕಾರು ಇದೆ. ಕಾರಿನಲ್ಲಿ ಪೆಟ್ರೋಲು ಇದೆ. ಪೆಟ್ರೋಲು ಮುಗಿಯುವ ತನಕ ನಿನ್ನ ಕಾರು ಓಡುತ್ತದೆ, ನಂತರ ನಿಲ್ಲುತ್ತದೆ.  ಇಂಧನ ಶಕ್ತಿ ಇರುವ ತನಕ ಕಾರಿಗೆ ಓಡಲು ತಾಕತ್ತು ಇದೆ. ನಂತರ....?  ಈ ಇಂಧನ ಶಕ್ತಿಯೇ ನಿನ್ನ ಹಣಬಲ.  ಈ ಕಾರೆ ನಿನ್ನ ಮನಸ್ಸು.   ಎಲ್ಲಿಯತನಕ ನಿನಗೆ ಕಾರಿನ ಓಟ ಸಾಕು ಎನಿಸುವುದಿಲ್ಲವೋ ಅಲ್ಲಿಯತನಕ ನಿನ್ನ ಕಾರನ್ನು ಓದಿಸುತ್ತಲೆ ಇರುವೆ.  ಇನ್ನು ಸಾಕು ಎನ್ನಿಸುವಾಗ ಕಾರು ನಿಲ್ಲುತ್ತದೆ.  ಇಲ್ಲಿ ಕಾರು ನಿಂತದ್ದು ಇಂದನ ಖಾಲಿಯಾಗಿದ್ದರಿಂದಲ್ಲ.  ನಿನ್ನ ಮನಸ್ಸಿಗೆ ಸಾಕು ಎನಿಸಿದ್ದರಿಂದ."
ಹೀಗೆ,  ನಮ್ಮ ಮನಸ್ಸು ಒಂದು ಹಂತದಲ್ಲಿ ಹಣದ ಹಿಂದೆ ಓಡುವುದು ಸಾಕು ಎನ್ನಿಸಬೇಕು.  ಹಣದ ಹಿಂದೆ ಇರುವ ದುಃಖವನ್ನು ಅರಿಯಬೇಕು.  ಇಲ್ಲವಾದರೆ ಹಣ ನಮ್ಮೊಡನೆ ಇದ್ದರೂ ಸುಖ ಮರೀಚಿಕೆಯಾಗುತ್ತದೆ.  ಸುಖ ಎನ್ನುವುದು ನಮ್ಮ ಕೈಯಲ್ಲೇ ಇದೆ. ನಮ್ಮ ಮನಸ್ಸಿನಲ್ಲಿ ಇದೆ.  ಯಾವ ವಸ್ತುವಿನಲ್ಲಿ ಆಗಲಿ, ಹಣದಲ್ಲಿ ಆಗಲಿ ಇಲ್ಲ.  ಹಾಗೆಂದು, ಇದ್ಯಾವುದು ಬೇಡವೆನ್ನುವುದು ಇಲ್ಲಿ ನನ್ನ  ಮಾತಿನ ಅರ್ಥವಲ್ಲ.  ಎಲ್ಲವು ಬೇಕು, ಆದರೆ  ಎಷ್ಟು ಬೇಕೋ ಅಷ್ಟೇ! ಆಮೇಲೆ ಸಾಕು ಎನಿಸಲೇ ಬೇಕು.  ಆಗ ಸಿಗುವ ತೃಪ್ತಿಯಲ್ಲಿ ಜೀವನಕ್ಕೆ ಅರ್ಥ ಸಿಗುತ್ತದೆ, ಆರೋಗ್ಯ ಸಿಗುತ್ತದೆ, ನೆಮ್ಮದಿ, ಸಂತೋಷ, ಸುಖ ಎಲ್ಲಕ್ಕಿಂತ ಹೆಚ್ಚಾಗಿ ಶಾಂತಿ ಸಿಗುತ್ತದೆ. ಜೀವನದಲ್ಲಿ ಇದಕ್ಕಿಂತ ಇನ್ನೇನು ಬೇಕು?

ಹೆಚ್ ಏನ್ ಪ್ರಕಾಶ್ 

8 comments:

 1. ಚೆನ್ನಾಗಿದೆ ಪ್ರಕಾಶ್ ಅವರೇ. ನಮ್ಮ ಜೀವನವು ಸರಿಯಾಗಿ ನಡೆಯಬೇಕಾದರೆ ಹಲವಾರು ವಿಷಯಗಳು ನಮಗೆ ಬೇಕಾಗುತ್ತವೆ. ಅದರಲ್ಲಿ ಮುಖ್ಯವಾದದ್ದು ಹಣ. ಬರೀ ಹಣವೊಂದಿದ್ದರೆ ಎಲ್ಲವೂ ಸಿಗುತ್ತದೆ ಅನ್ನುವುದು ತಪ್ಪು ಅನ್ನುವುದನ್ನ ಚೆನ್ನಾಗಿ ತಿಳಿಸಿದ್ದೀರ. ಎಲ್ಲವೂ ಬೇಕು, ಆದರೆ ಇತಿ ಮಿತಿಯಲ್ಲಿದ್ದರೆ ಮಾತ್ರ ಜೀವನ ಸರಿಯಾಗಿ ನಡೆಯುತ್ತದೆ. ಅಲ್ಲವೇ?

  ReplyDelete
 2. ಪ್ರಕಾಶರ ಲೇಖನಕ್ಕೆ ಪೂರಕವಾದ ಒಂದು ನಿಮಿಷದ ಆಡಿಯೋ ಕ್ಲಿಪ್ ನ್ನು ಲೇಖನದ ಜೊತೆ ಅಳವಡಿಸಿರುವೆ. ಕೇಳಿ.

  ReplyDelete
  Replies
  1. ವಿಡಿಯೋ ಕ್ಲಿಪಿಂಗ್ ನಿಜಕ್ಕೂ ಪೂರಕವಾಗಿದೆ.

   Delete
  2. ಧನ್ಯವಾದಗಳು, ನಾಗರಾಜ್

   Delete
 3. ಆತ್ಮೀಯ ಪ್ರಕಾಶರೇ, ಉತ್ತಮ ವಿಚಾರ ಪ್ರಕಾಶಿಸಿದ್ದೀರಿ. ಬಯಕೆಗಳಿರೆ ಬಡವ, ಸಾಕೆಂದರದುವೆ ಸಿರಿ!!

  ReplyDelete
 4. ಪ್ರಿಯ ಶ್ರೀಧರ್, ಪ್ರತಿಕ್ರಿಯೆಗೆ ಉತ್ತರ ಸಹ ಬಿಳಿಯ ಬಣ್ಣದಲ್ಲಿರುವುದರಿಂದ ಗೋಚರವಾಗುತ್ತಿಲ್ಲ. ಸೂಕ್ತ ಬದಲಾವಣೆ ಮಾಡಿದರೆ ಒಳ್ಳೆಯದು.

  ReplyDelete
 5. ಈಗ ಸರಿಪಡಿಸಿರುವೆ, ಎಂದುಕೊಳ್ಳುವೆ.

  ReplyDelete
 6. ಆತ್ಮೀಯರೆ
  ರಜನೀಷರು ಇನ್ನೊಂದು ಮಾತು ಹೇಳುತ್ತಾರೆ : "ಹಣ ಅನ್ನುವುದು ಕಜ್ಜಿ ಇದ್ದ ಹಾಗೆ. ಅದು ಇರುವಷ್ಟು ಸಮಯ ಕಡಿತ ಆಗುತ್ತೆ, ಕೆರೆದುಕೊಂಡಾಗ ಬಲುಹಿತವಾಗಿಯು ಇರುತ್ತೆ. ಆಮೇಲೆ ನೋವಾಗುವುದರ ಜೊತೆಗೆ ಇನ್ನಷ್ಟು ಜಾಸ್ತಿಯಾಗುತ್ತೆ. ಕಜ್ಜಿ ಜಾಸ್ತಿ ಆಗಬಾರದು ಎಂದು ಆಸೆ ಇದ್ದರೆ ಕೆರೆದುಕೊಳ್ಳ ಬಾರದು." ಹೀಗೆ ಹಣ ಬೇಕೋ ಶಾಂತಿ ಬೇಕೋ ಎನ್ನುವ ಮಾತು ಬಂದಾಗ ಕಜ್ಜಿಯನ್ನು ಹಿತವಾಗಿ ಸವರುತ್ತ, ಮುಲಾಮು ಲೆಪಿಸುತ್ತ, ಕೆರೆದು ಕೊಳ್ಳಲೆ ಬೇಕೆಂದಾಗ ಸ್ವಲ್ಪ ತಡೆದುಕೊಂಡು ಸ್ವಲ್ಪ ಕೆರ್ದುಕೊಂಡು ಮ್ಯಾನೇಜ್ ಮಾಡುವುದು ಬುದ್ದಿವಂತರ ಲಕ್ಷಣ.
  ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.
  ಪ್ರಕಾಶ್

  ReplyDelete