ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Wednesday, July 25, 2012

"ಷಡ್ದರ್ಶನ"ಗಳು -ಮುನ್ನುಡಿ


ಶ್ರೀಯುತ ಶ್ರೀಧರ್ ಭಂಡ್ರಿ ಯವರು ಅಂತರ್ಜಾಲ ತಾಣದಲ್ಲಿ ಸಂಪದ, ಫೇಸ್ ಬುಕ್  ಮುಂತಾದೆಡೆ ಸದ್ವಿಚಾರಗಳನ್ನು ಸಮಾನ ಮಾನಸಿಕರಲ್ಲಿ ಹಂಚಿಕೊಳ್ಳುವ ಉತ್ತಮ ಚಿಂತಕರು. ವೇದಸುಧೆಗಾಗಿ ಶ್ರೀಯುತರು ಸ್ವಾಮಿ ಹರ್ಷಾ ನಂದರ  ಷಡ್ ದರ್ಶನ ಗ್ರಂಥವನ್ನು ಪರಿಚಿಸಲು ಆರಂಭಿಸಿದ್ದಾರೆ. ವೇದಸುಧೆಯ ಓದುಗರು ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕೆಂದು ಕೋರುವೆ. ವೇದಸುಧೆಯ ಪ್ರೇರಕರಾದ  ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ತಮ್ಮ ಅಭಿಪ್ರಾಯವನ್ನು ತಿಳಿಸಿದರೆ ಉತ್ತಮ.  ಓದುಗರು ಮತ್ತು ಲೇಖಕರೊಡನೆ     ಒಂದು ವಿಚಾರವನ್ನು ಇಲ್ಲಿ  ಹಂಚಿಕೊಳ್ಳಲು ಇಚ್ಚಿಸುವೆ.  ಈ ತಾಣದಲ್ಲಿ  ಲೇಖಕರು ತಮ್ಮ ತಮ್ಮ  ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊ ಬಹುದು. ಹಲವು ಭಾರಿ ಸುಧಾಕರ ಶರ್ಮರ ಚಿಂತನೆಗೂ ಉಳಿದವರ ಚಿಂತನೆಗೂ ಬೇಧ ಇರಲು ಸಾಧ್ಯತೆ ಗಳಿವೆ. ಚಿಂತೆ ಇಲ್ಲ. ಒಟ್ಟಿನಲ್ಲಿ ನಮ್ಮ ಚಿಂತನೆಗಳು ಸಮಾಜಮುಖಿಯಾಗಿದ್ದರೆ ಸಾಕು. 
-ಹರಿಹರಪುರ ಶ್ರೀಧರ್
ಸಂಪಾದಕ, ವೇದಸುಧೆ
---------------------------------------------------------------------------------
            "ಒಬ್ಬ ಹಿಂದೂ ಎಲ್ಲಾ ಕಾರ್ಯಗಳನ್ನೂ ಒಳ್ಳೆಯದಿರಲಿ ಅಥವಾ ಕೆಟ್ಟದ್ದಿರಲಿ ಅವನು ಅದನ್ನು ಧಾರ್ಮಿಕವಾಗಿಯೇ ಮಾಡುತ್ತಾನೆ!" ಎನ್ನುತ್ತಾರೆ ಸ್ವಾಮಿ ವಿವೇಕಾನಂದರು. ಅಂದರೆ ಧರ್ಮವೆನ್ನುವುದು ಅವನ ರಕ್ತದಲ್ಲಿಯೇ ಇದೆ ಎನ್ನುವುದು ಇದರರ್ಥ.

            ಆದರೆ ಹಿಂದೂ ಧರ್ಮ ಎನ್ನುವುದು ಕೇವಲ ಕೆಲವೊಂದು ಪದ್ಧತಿ ಮತ್ತು ನಂಬಿಕೆಗಳ - ಬಾಹ್ಯಾಚರಣೆಯ ಗೊಡ್ಡು ಕಂತೆಯಲ್ಲ. ಪ್ರತಿಯೊಂದು ಆಚರಣೆಯ ಹಿನ್ನಲೆಯಲ್ಲಿಯೂ ಸಾವಿರಾರು ವರ್ಷಗಳಿಂದ ಪ್ರಚಲಿತದಲ್ಲಿರುವ ಶ್ರುತಿ ಅಥವಾ ವೇದಗಳಲ್ಲಿ ಪ್ರತಿಪಾದಿಸಲ್ಪಟ್ಟಿರುವ ಗಹನವಾದ ತತ್ವಗಳ ಭದ್ರ ಬುನಾದಿಯಿದೆ.

            ಪ್ರತಿಯೊಬ್ಬ ಪೌರಾಣಿಕ ಋಷಿ ಹಾಗೂ ತತ್ವಶಾಸ್ತ್ರಜ್ಞನಾದವನು ಅದು ಗೌತಮ ಅಥವಾ ಕಪಿಲನಾಗಲಿ; ಅಥವಾ ಜೈಮಿನಿ ಇಲ್ಲಾ ಬಾದರಾಯಣ ವ್ಯಾಸನಿರಲಿ - ಇವರೆಲ್ಲರೂ ಕಠಿಣತಮ ತಪಗಳನ್ನಾಚರಿಸಿ ವೇದಗಳ ಆಧಾರದ ಮೇಲೆ ತನಗೆ "ದರ್ಶನ"ವಾದ ಅಥವಾ ಗೋಚರವಾದ ಸತ್ಯಗಳ ಕುರಿತು ತಮ್ಮ ತಮ್ಮ ತತ್ವಗಳನ್ನು ಭೋದಿಸಿದ್ದು. ಇವೇ ಹಿಂದೂಗಳೆಲ್ಲರಿಗೂ ಇಂದು ಪರಿಚಯವಿರುವ "ಷಡ್ದರ್ಶನ"ಗಳು ಅಥವಾ ಆರು ದರ್ಶನಗಳು.

            ಈ ಆರು ದರ್ಶನಗಳು ಸತ್ಯಾನ್ವೇಷಣೆಯ ವಿವಿಧ ಮಾರ್ಗಗಳನ್ನು ಅನುಸರಿಸಿದರೂ ಕೂಡ ಅವೆಲ್ಲವುಗಳಲ್ಲಿ ಒಂದು ಏಕತೆಯಿದೆ ಅದೇನೆಂದರೆ - ಮಾನವನ ಅಂತಿಮ ಗುರಿ ಏನು ಎಂಬುದರ ಕುರಿತಾಗಿ. ಅದು ಮಾನವನನ್ನು ದುಃಖ ಅಥವಾ ಯಾತನೆಯಿಂದ ಮುಕ್ತಗೊಳಿಸಬೇಕೆನ್ನುವುದು ಮತ್ತು ಅತ್ಯುನ್ನತ ಆನಂದವನ್ನು ಹೊಂದಬೇಕೆಂಬುದು ಹಾಗೂ ಅದನ್ನು ಹೇಗೆ ಪಡೆಯಬೇಕೆನ್ನುವ ವಿಧಾನವನ್ನು ಕುರಿತಾಗಿದೆ.  ಇದನ್ನೇ ಒಟ್ಟಾರೆಯಾಗಿ ಹೇಳಬೇಕೆಂದರೆ "ಅಂತಿಮ ಸತ್ಯದ ಜ್ಞಾನ" ಅಥವಾ "ತತ್ವಜ್ಞಾನ"ವನ್ನು ಪಡೆಯಬೇಕೆನ್ನುವುದೇ ಎಲ್ಲ ದರ್ಶನಗಳ ಅಂತಿಮ ಗುರಿಯಾಗಿತ್ತು. ಆದ್ದರಿಂದ ಈ ಅಂತಿಮ ಸತ್ಯದ ದರ್ಶನವೇ ಹಿಂದೂಗಳ ತತ್ವವೆಂದು ನಾವು ಹೇಳಬಹುದು ಮತ್ತು ಈ ಆರು ವಿಧಾನಗಳು ಅದನ್ನು ಹೊಂದುವ ವಿವಿಧ ಮಾರ್ಗಗಳು ಎನ್ನಬಹುದು. ಈ ವಿವಿಧ ಮಾರ್ಗಗಳನ್ನು ಮತ್ತು ಅವುಗಳು ಪ್ರತಿಪಾದಿಸಿದ ವಿಧಾನದ ಆಧಾರದಿಂದ ಅವನ್ನು "ನ್ಯಾಯ ದರ್ಶನ", "ಸಾಂಖ್ಯ ದರ್ಶನ" ಮುಂತಾದವುಗಳಾಗಿ ಕರೆಯಬಹುದು. 

            ಡಾ! ಸರ್ವೇಪಲ್ಲಿ ರಾಧಾಕೃಷ್ಣನ್, ಸುರೇಂದ್ರನಾಥ್ ದಾಸ್‍ಗುಪ್ತ ಮತ್ತು ಎಂ. ಹಿರಿಯಣ್ಣನಂತಹ ಹಲವಾರು ಮೇಧಾವಿಗಳು ಮತ್ತು ಹೆಚ್ಚು ಪರಿಚಿತರಲ್ಲದ ಆದರೆ ಪ್ರಬುದ್ಧರಾಗಿರುವ ಹಲವಾರು ಪಂಡಿತರು "ಷಡ್ದರ್ಶನ"ಗಳು ಅಥವಾ ಆರು ದರ್ಶನಗಳ ಕುರಿತಾಗಿ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಆದರೆ ಅವೆಲ್ಲವುಗಳೂ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಥವಾ ತತ್ವಶಾಸ್ತ್ರವನ್ನು ಆಳವಾಗಿ ತಿಳಿದುಕೊಳ್ಳಬೇಕೆನ್ನುವವರಾಗಿ ಮೀಸಲಾಗಿವೆ.

            ಈ ಕಿರುಹೊತ್ತಿಗೆಯು ಮೂಲಭೂತವಾಗಿ ಹೆಚ್ಚು ಓದಿಲ್ಲದ ಆದರೆ "ಷಡ್ದರ್ಶನ"ಗಳ ಕುರಿತಾಗಿ ಸಾಮಾನ್ಯ ತಿಳುವಳಿಕೆಯನ್ನು ಹೊಂದಲು ಬಯಸುವ ಜನಸಾಮನ್ಯನಿಗಾಗಿ ಬರೆಯಲ್ಪಟ್ಟಿದೆ. ಅವನಿಗೆ ಈ ಪುಸ್ತಕ ಹಿಡಿಸಿದರೆ ನಾವು ಕೃತಾರ್ಥರಾದಂತೆ.

-ಸ್ವಾಮಿ ಹರ್ಷಾನಂದ
-ಶ್ರೀಧರ್ ಭಂಡ್ರಿ

1 comment:

  1. ದಿನಾಂಕ 2.08.2012 ರಂದು ವಿಶ್ವೇಶ್ವರಪುರಂ ಆರ್ಯ ಸಮಾಜದಲ್ಲಿ ಶ್ರಾವಣೀ ಉಪಾಕರ್ಮ ನಡೆಯಲಿದೆ. ಇದು ಸ್ತ್ರೀ ಪುರುಷ ಭೇದವಿಲ್ಲದೆ ಎಲ್ಲರೂ ಆಚರಿಸಬಹುದಾದ ಹಬ್ಬವಿದು. ಯಜ್ಞೋಪವೀತ ಕೇವಲ ಜಾತಿ ಸೂಚಕವಲ್ಲ. ಅದು ಪ್ರತಿಜ್ಞಾ ಸೂತ್ರ ಎಲ್ಲರೂ ಧರಿಸುವ ಆವಕಾಶವಿದೆ. ಯಾವುದೇ ಜಾತಿ, ಪಂಗಡ, ಪಕ್ಷ ಲಿಂಗ ಭೇದ ವಿರುವುದಿಲ್ಲ. ಸಾಮೂಹಿಕ ಯಜ್ಞದೊಂದಿಗೆ ಆರಂಭವಾಗುತ್ತದೆ. ಸಮಯ ಬೆಳಿಗ್ಗೆ 8.00 ಗಂಟೆಯಿಂದ 10.00 ಗಂಟೆಯವರಿಗೆ. ಉಪಾಹಾರದ ವ್ಯವಸ್ಥೆ ಇರುತ್ತದೆ. ಎಲ್ಲ ಬಾಂಧವರಿಗೂ ಸ್ವಾಗತ.

    ReplyDelete