ವೇದಸುಧೆಗೆ ನಿಮಗೆ ಸ್ವಾಗತ.ಈ ಮೇಲ್ ಮೂಲಕ ಲೇಖನಗಳನ್ನು ಪಡೆಯಲು ಬ್ಲಾಗ್ ಬಲ ಪಕ್ಕದಲ್ಲಿರುವ ಕಾಲಮ್ ನಲ್ಲಿ ನಿಮ್ಮ ಮೇಲ್ ವಿಳಾಸ ಬರೆಯಿರಿ

Tuesday, August 7, 2012

ಸಿಗರೇಟು ಹೇಳಿದ ಬುದ್ಧಿ


ಒಂದು ಭಾನುವಾರ ಎಂದಿನಂತೆ ಗುರುನಾಥರನ್ನು ನೋಡಲು ಹೋಗಿದ್ದಾಗ ಅಲ್ಲಿ ನಡೆದ ಒಂದು ಘಟನೆಯನ್ನು ತಮ್ಮೊಂದಿಗೆ  ಹಂಚಿಕೊಳ್ಳುತ್ತಿದ್ದೇನೆ. 

ಹಜಾರ ಹೆಚ್ಚುಕಡಿಮೆ ತುಂಬಿಹೋಗಿತ್ತು ಎನ್ನಬಹುದು.  ಗುರುನಾಥರು ಯಾವುದೊ ಹಾಸ್ಯ ಪ್ರಸಂಗದಲ್ಲಿ ಎಲ್ಲರನ್ನು ನಗೆಕಡಲಿನಲ್ಲಿ ಮುಳುಗಿಸಿದ್ದರು.  ನಂತರದ ಕೆಲವು ನಿಮಿಷದಲ್ಲಿ ಒಬ್ಬ ದಂಪತಿಗಳ ಕಡೆ ತಿರುಗಿ " ಏನು ಬಂದಿದ್ದು? " ಎಂದು ಪ್ರಶ್ನಿಸಿದರು.  ಅಲ್ಲಿದ್ದ ಎಲ್ಲ ಗುರುಬಂಧುಗಳ ಗಮನ ಅವರ ಕಡೆಗೆ ಹೊರಳಿತು. ಆ ದಂಪತಿಯಲ್ಲಿ ಒಬ್ಬರು ಮಧ್ಯ ವಯಸ್ಸಿನ ಹೆಂಗಸರು ಎದ್ದು ನಿಂತು " ನಮ್ಮ ಯಜಮಾನರು ತುಂಬಾ ಸಿಗರೇಟು ಸೇದುತ್ತಾರೆ. ಯಾರು ಎಷ್ಟು ಹೇಳಿದರೂ ಕೇಳುವುದೇ ಇಲ್ಲ. ತಾವು ಅವರಿಗೆ ಸರಿಯಾಗಿ ಬುದ್ಧಿ   ಹೇಳಬೇಕು" ಎಂದು ಸ್ವಲ್ಪ ಅಹಂಕಾರ  ಮಿಶ್ರಿತ ದ್ವನಿಯಲ್ಲಿ ಹೇಳಿದರು. " ನಿಮ್ಮ ಯಜಮಾನರು ಸಿಗರೇಟು ಸೇದುತ್ತಾರೆ, ಯಾರು ಹೇಳಿದರು ಕೇಳಿಲ್ಲ. ಇನ್ನು ನಾನು ಹೇಳಿದರೆ ಕೇಳುತ್ತಾರೋ?   ಇರಲಿ.  ಈವರೆಗೆ ನೀವು ಹೇಳಿದ ಎಲ್ಲಾ ಮಾತನ್ನು ಕೇಳಿರುವ ನಿಮ್ಮ ಯೆಜಮಾನರು ಈ ಮಾತನ್ನು ಯಾಕೆ ಕೇಳಿಲ್ಲಾ?" ಎಂದು ಮರು ಪ್ರಶ್ನೆ ಹಾಕಿದರು. " ಯಾವಮಾತು ಕೇಳ್ತಾರೆ? " ಎಂದು ತನ್ನ ಯಜಮಾನರ ಕಡೆಗೆ ಒಮ್ಮೆ ನೋಡಿದರು.  ಆ ಯಜಮಾನರು ಅವಮಾನವಾದವರಂತೆ ತಲೆ ತಗ್ಗಿಸಿ ಬಿಟ್ಟರು.

" ಅಲ್ಲಮ್ಮಾ.....ನೀವು ಹೇಳಿದಿಕ್ಕೆ ತಾನೇ ಅವರ ಅಪ್ಪ ಅಮ್ಮನ್ನ ಊರಲ್ಲೇ ಬಿಟ್ಟು ಬಂದಿರುವುದು. ನೀವು ಹೇಳಿದ್ದಿಕ್ಕೆ ತಾನೇ ಇದ್ದೊಬ್ಬ ತಂಗಿ ಮದುವೆಗೂ ಏನೂ ಸಹಾಯ ಮಾಡದಲೆ ಎಲ್ಲರ ಹತ್ರ ಬೈಸಿಕೊಂಡರು. ನೀವು ಹೇಳಿದ್ದಕ್ಕೆ ತಾನೇ ಊರಿನ ಜಮೀನು  ಮಾರಿ, ನೀವು ಮನೆ ಕಟ್ಟಿಕೊಂಡು ನಿಮ್ಮ ಅತ್ತೆ ಮಾವನ್ನ ಅದೇ ಹಳೆ ಹಂಚಿನ ಮನೆಯಲ್ಲೇ ಉಳಿಸಿದ್ದು. ಇನ್ಯಾವ ಮಾತು ಕೇಳಬೇಕಮ್ಮ?  ಜೀವನ ಪೂರ್ತಿ ನೀವು ಹೇಳಿದ್ದನ್ನ ಚಾಚು ತಪ್ಪದ ಹಾಗೆ ಕೇಳಿಕೊಂಡೆ ಬಂದಿದ್ದಾರೆ........... ಈಗ ಸಿಗರೇಟು ಸೇದೊದುಕ್ಕೆ ನಿಮ್ಮ ಮಾತು ಕೇಳಲಿಲ್ಲ ಅಂತ ಬೇಜಾರೆ?  ಇದೊಂದಾದರೂ ಅವರ ಸ್ವಾತಂತ್ರದಲ್ಲಿ ಮಾಡಲಿ ಬಿಡಿ." ಎಂದು ಹಾಸ್ಯ ಮಿಶ್ರಿತ ದನಿಯಲ್ಲಿ ಹೇಳಿಬಿಟ್ಟರು.   ಆಕೆಗಂತೂ ದಿಕ್ಕೇ ತೋಚಲಿಲ್ಲ.  ಸೆರಗಿನಿಂದ ಬಾಯಿ ಮುಚ್ಚಿಕೊಂಡು ಎದ್ದು ಹೊರಗೆ ನಡೆದೇ ಬಿಟ್ಟರು.   ಆಕೆಯ ಯಜಮಾನರು ಹೊರಡಲು ಎದ್ದಾಗ " ಏನಪ್ಪಾ.......ಸಿಗರೇಟು ಸೇದೋದು ಒಳ್ಳೆದೆನಪ್ಪಾ?  ನಿನಗೆ ಗೊತ್ತಿಲ್ಲವೇ?  ಇರೋ ಅರೋಗ್ಯ ಕೆಡಸಿ ಕೊಂಡರೆ ನಿನ್ನ ಯಾರಯ್ಯ ನೋಡುತ್ತಾರೆ?  ಅವರೂ ಇಲ್ಲ , ಇವರೂ ಇಲ್ಲ ಅನ್ನೋಹಾಗೆ ಅಗ್ತಿಯಲ್ಲಪ್ಪ........ ಸಿಗರೇಟು ಬೇಡ....... ಬಿಟ್ಟುಬಿಡು."  ಎಂದು ತಂದೆ ಮಗನಿಗೆ ಹೇಳುವ ರೀತಿ ಬುದ್ಧಿವಾದ ಹೇಳಿದರು   ಆ ಯಜಮಾನರ ಕಣ್ಣು ತುಂಬಿ ಬಂತು.  ನೇರ ಬಂದು ಗುರುನಾಥರ ಪಾದಕ್ಕೆರಗಿ ಏನೋ ಹೇಳಬೇಕೆಂದು ಇರುವಾಗಲೇ ಗುರುನಾಥರು " ಏನೂ ಹೇಳಬೇಡ, ನಡಿ......." ಎಂದು ಬೆನ್ನು ತಟ್ಟಿದರು.

 ಅಲ್ಲಿ ನೆರೆದ ನಮಗೆಲ್ಲ ಒಂದು ರೀತಿಯ ಹೇಳಲಾಗದ ಸ್ಥಿತಿ.  ಒಂದೆರಡು ನಿಮಿಷದಲ್ಲಿ ಆದ ಈ ಘಟನೆ ಅದೆಷ್ಟು ಪರಿಣಾಮ ಬೀರಿತೆಂದರೆ ಅಲ್ಲಿದ್ದ ಕೆಲವರಿಗೆ ಚಳಿಯಲ್ಲೂ ಬೆವರಿನ ಅನುಭವ.  ಗುರುನಾಥರು ಇನ್ನು ಯಾರನ್ನು ಉದ್ದೇಶಿಸಿ ಏನು ಹೇಳುತ್ತಾರೋ ಎಂಬ ಆತಂಕ ಕೆಲವರಿಗಾದರೆ, ಮತ್ತೆ ಕೆಲವರು ನಮಗೇನೂ ಹೇಳದಿದ್ದರೆ ಸಾಕು  ಎನ್ನುವಂತೆ ಅಲ್ಲಿನ ಸನ್ನಿವೇಶ ಇತ್ತು.  ಗುರುನಾಥರು ಈ ಘಟನೆಯಲ್ಲಿ ಇಬ್ಬರಿಗೂ ಬುದ್ಧಿವಾದವನ್ನು ಅವರವರ ಮಾತಿನಲ್ಲೇ ಹೇಳಿದ್ದರು.  ಅವರ ಗುಣದೋಷಗಳನ್ನು  ಸರಿಯಾದ ಸಮಯದಲ್ಲಿ  ಎತ್ತಿ ಹಿಡಿದಿದ್ದರು.  ಇದು ಕೇವಲ ಅವರಿಗೆ ಮಾತ್ರ ಹೇಳಿದ ಬುದ್ಧಿವಾದವಾಗಿರದೆ ಎಲ್ಲರಿಗು ನೀಡಿದ ಎಚ್ಚರಿಕೆ ಘಂಟೆಯಾಗಿತ್ತು.  ಇಲ್ಲಿ ಸಿಗರೇಟು ನೆಪಮಾತ್ರವಾಗಿತ್ತು.

5 comments:

 1. ಗುರುನಾಥರ ಚರಣಕಮಲಗಳಿಗೆ ನಮೋ ನಮ:

  ReplyDelete
  Replies
  1. ನಿಮಗೆ ಧನ್ಯವಾದಗಳು.

   Delete
 2. ಪ್ರಕಾಶರೇ, ಅವಧೂತರ ಬಗ್ಗೆ ಕೇಳಿದಷ್ಟೂ ರೋಚಕ ಕಥೆಗಳು ಅನಾವರಣಗೊಳ್ಳುತ್ತವೆ. ದಶದಿಕ್ಕುಗಳಲ್ಲೂ ಅವರ ಬಗ್ಗೆ ಆಗಾಗ್ಗೆ ಕೇಳುತ್ತಿದ್ದೆ, ಇನ್ನೇನು ಕಾಣಬೇಕು ಎಂಬ ಹಂಬಲದಲ್ಲಿದ್ದಾಗಲೇ ಅವರ ಕರ್ತವ್ಯ ಮುಗಿಸಿ ನಡೆದುಬಿಟ್ಟರು, ಹೆಣ್ಣುಮಕ್ಕಳು ಇಂದು ಹೇಗಿರುತ್ತಾರೆ ಎಂಬುದನ್ನು ಪರೋಕ್ಷವಾಗಿ ಮತ್ತು ಪಕ್ಷಾತೀತವಾಗಿ ಗುರುವಾಗಿ ಅವರು ಹೇಳಿದ ಘಟನೆ ಹಲವು ಕಡೆ ನಡೆಯುವಂಥದ್ದು, ನಿಮಗೆ ಧನ್ಯವಾದ.

  ReplyDelete
 3. This comment has been removed by the author.

  ReplyDelete
  Replies
  1. ಆತ್ಮೀಯ ಭಟ್ಟರೇ,
   ನನ್ನ ಪೂರ್ವ ಜನ್ಮದ ಸುಕೃತದಿಂದ ಗುರುನಾಥರ ಬಳಿಗೆ ಹೋಗುವ ಅವಕಾಶ ಮತ್ತು ಅವರೊಡನೆ ಮಾತನಾಡುವ ಅವಕಾಶ ಲಭ್ಯವಾಯಿತು. ಆ ಸಂಧರ್ಭದಲ್ಲಿ ನಡೆದ ಮಾತುಕತೆಗಳನ್ನು ಧಾಖಲಿಸುವ ಸದುದ್ದೇಶದಿಂದ ಕೆಲವು ಘಟನೆಗಳನ್ನು ಆರಿಸಿಕೊಂಡಿರುವೆ. ಗುರುನಾಥರೆ ಬರೆಸಬೇಕು.
   ಧನ್ಯವಾದಗಳು.

   Delete