Pages

Tuesday, November 9, 2010

ಸಸ್ಯಾಹಾರಿಯಾಗಬೇಕೆಂದು ಹಿಂದುತ್ವವು ಬಯಸುತ್ತದೆಯೇ?


       ಇತ್ತೀಚೆಗೆ ಎರಡು ಪ್ರಶ್ನೆಗಳನ್ನು ಕೇಳಲಾಯಿತು:  ದೇವರನ್ನು ನಂಬಬೇಕೆಂದು ಹಿಂದುತ್ವವು ಬಯಸುತ್ತದೆಯೇ?  ಸಸ್ಯಾಹಾರಿಯಾಗಬೇಕೆಂದು ಹಿಂದುತ್ವವು ಬಯಸುತ್ತದೆಯೇ? ನನ್ನ ಇತ್ತೀಚಿನ ಲೇಖನದಲ್ಲಿ ಮೊದಲನೆಯ ಪ್ರಶ್ನೆಗೆ ಉತ್ತರಿಸಿದ್ದೇನೆ. ಎರಡನೆಯ ಪ್ರಶ್ನೆಗೆ ಕೆಲವು ಚಿಂತನಗಳನ್ನು ನಿಮ್ಮ ಮುಂದಿಡುತ್ತೇನೆ.
     ಮೊದಲನೆಯ ಪ್ರಶ್ನೆಗೆ ಸಂಬಂಧಿಸಿದಂತೆ, ನಾನು ಹಿಂದುತ್ವ ಎಂದರೇನು ಮತ್ತು ಯಾರು ನಿಜವಾಗಿಯೂ ಹಿಂದು ಎಂಬ ಕುರಿತು ಚರ್ಚಿಸಿದ್ದೇನೆ. ಸಾರಾಂಶ ರೂಪದಲ್ಲಿ ಹೇಳಬೇಕೆಂದರೆ, ಹಿಂದುತ್ವ ಎನ್ನುವುದು ಸನಾತನ ಧರ್ಮ ಮತ್ತು ಆ ಧರ್ಮ ಅನಾದಿ ಕಾಲದ್ದು - ಅದು ಮೋಕ್ಷ ಸಂಪಾದನೆಯ ಮಾರ್ಗ ಹುಡುಕುವುದನ್ನು ಒಳಗೊಂಡಿದೆ. ಆದ್ದರಿಂದ ಯಾರು ಮೋಕ್ಷ ಬಯಸುತ್ತಾರೋ ಅವರು- ಅವರು ಯಾವ ರಾಷ್ಟ್ರೀಯರು, ಜಾತಿಯವರು, ಜನಾಂಗದವರು ಅಥವ ಲಿಂಗದವರು ಎಂಬ ಭೇಧವಿಲ್ಲದೆ- ನಿಜವಾದ ಹಿಂದು. ಆ ರೀತಿಯ ವಿಶಾಲ ಮನೋಭಾವದ ತಿಳುವಳಿಕೆಯಲ್ಲಿ ಹಿಂದುತ್ವ ಅನ್ನುವುದು ಜೀವನದ ರೀತಿ ಆಗುತ್ತದೆ, ಏಕೆಂದರೆ ಜೀವನದ ಮುಖ್ಯ ಉದ್ದೇಶದ ಹುಡುಕಾಟವೇ ಹಿಂದೂ ಜೀವನದ ಗುರಿ.
     ಮೇಲಿನ ಹಿನ್ನೆಲೆಯಲ್ಲಿ, ಎಲ್ಲಾ ಇತರ ಪ್ರಶ್ನೆಗಳನ್ನು, ಸಸ್ಯಾಹಾರಿಯಾಗಿರಬೇಕೆಂದು ಹಿಂದುತ್ವವು  ಬಯಸುತ್ತದೆಯೇ ಎಂಬ ಪ್ರಶ್ನೆ ಸೇರಿದಂತೆ, ಬಿಡಿಸಲು ಸುಲಭವೆನಿಸುತ್ತದೆ. ಜೀವನದ ಉದ್ದೇಶ ಮುಕ್ತಿ ಅಥವ ಮೋಕ್ಷವನ್ನು ಪಡೆಯುವುದಾದ್ದರಿಂದ ಅದನ್ನು ಪಡೆಯುವವರೆಗೆ ನಾವು ಬದುಕಿರಬೇಕು. ಸಾವು ಮಾತ್ರ ಮಾನಸಿಕ ಜಾಗೃತಿಯಾದಾಗ ಬರುವ ನಾನತ್ವದ ಸಾವು ತರಬಲ್ಲದು. ಆದ್ದರಿಂದ ದೇಹವನ್ನು ಸಧೃಢವಾಗಿ ಇಟ್ಟುಕೊಳ್ಳುವುದು ನಮ್ಮ ಧರ್ಮ. ಅದರ ಅರ್ಥ ಬದುಕಲು  ತಿನ್ನಬೇಕು (ಇನ್ನೊಂದು ರೀತಿಯಲ್ಲಿ ಅಲ್ಲ - ತಿನ್ನುವ ಸಲುವಾಗಿ ಬದುಕುವುದು!)


     ಜೀವನವು  ಜೀವದ ಮೇಲೆ ಜೀವಿಸಿದೆ. ಅದು ಪ್ರಕೃತಿಯ ನಿಯಮ. ನಾನು ಒಂದು ಪ್ರಾಣಿಯನ್ನು ತಿನ್ನುತ್ತೇನೋ ಅಥವ ಒಂದು ಸಸ್ಯವನ್ನು ತಿನ್ನುತ್ತೇನೋ, ಒಟ್ಟಿನಲ್ಲಿ ಒಂದು ಜೀವವನ್ನು ನಾಶಪಡಿಸಿದಂತೆಯೇ. ಎಲ್ಲಾ ಬಗೆಯ ಜೀವಮಾತ್ರರಲ್ಲಿ ಮಾನವ ಇತರ ಜೀವಿಗಳಿಗಿಂತ ಭಿನ್ನ. ಅವನಿಗೆ ಒಳ್ಳೆಯದು ಯಾವುದು, ಕೆಟ್ಟದು ಯಾವುದು ಎಂದು ತುಲನೆ ಮಾಡುವ ಶಕ್ತಿಯಿದೆ. ಅದು ಅವನಿಗೆ ಆಯ್ಕೆಯ ಸ್ವಾತಂತ್ರ್ಯವನ್ನೂ ಕೊಟ್ಟಿದೆ. ಸಸ್ಯಗಳು ಕೇವಲ ದೇಹ ಮತ್ತು ಬಹುಷಃ ಪ್ರಾರಂಭಿಕ ಹಂತದ ಮನಸ್ಸು ಹೊಂದಿರಬಹುದು. ಪ್ರಾಣಿಗಳು ದೇಹ ಮತ್ತು ಭಾವನೆಗಳು ಹಾಗೂ ನೋವನ್ನು ವ್ಯಕ್ತಪಡಿಸುವ ಮನಸ್ಸು ಹೊಂದಿರುವುದರ ಜೊತೆಗೆ ಪ್ರಾರಂಭಿಕ ಹಂತದ ಬುದ್ಧಿಶಕ್ತಿ ಹೊಂದಿರಬಹುದು. ಮಾನವ ದೇಹ ಮಾತ್ರವಲ್ಲ, ಮನಸ್ಸು ಮತ್ತು ಪರಿಶೀಲಿಸುವ, ನಿರ್ಧರಿಸುವ ಮತ್ತು ಆಯ್ಕೆ ಮಾಡುವ ಉತ್ತಮ ಬೆಳವಣಿಗೆ ಹೊಂದಿದ ಬುದ್ಧಿಶಕ್ತಿಯನ್ನೂ ಹೊಂದಿದ್ದಾನೆ. ಅವನಿಗೆ ಯಾವಾಗಲೂ ಮೂರು ಅವಕಾಶಗಳಿವೆ - ಕರ್ತುಂ ಶಖ್ಯಂ, ಅಕರ್ತುಂ ಶಖ್ಯಂ ತಥಾ ಅನ್ಯಥಾ ಕರ್ತುಂ ಶಖ್ಯಂ - ಅವನು ಬೇಕೆಂದರೆ ಮಾಡಬಹುದು, ಮಾಡದಿರಬಹುದು ಮತ್ತು ಬೇರೆ ರೀತಿಯಲ್ಲಿ ಮಾಡಬಹುದು. ಪ್ರಾಣಿಗಳಿಗೆ ಮತ್ತು ಸಸ್ಯಗಳಿಗೆ ಆಯ್ಕೆಯ ಸ್ವಾತಂತ್ರ್ಯವಿರುವುದಿಲ್ಲ. ಅವು ಸಹಜ ರೀತಿಯಲ್ಲಿ ವರ್ತಿಸುತ್ತವೆ. ಹಸು ಊಟದ ಮುಂದೆ ಕುಳಿತು ತಾನು ಸಸ್ಯಹಾರಿಯಾಗಿರಬೇಕೋ ಅಥವ ಮಾಂಸಾಹಾರಿಯಾಗಿರಬೇಕೋ ಎಂದು ವಿಚಾರಿಸುತ್ತಾ ಕುಳಿತುಕೊಳ್ಳುವುದಿಲ್ಲ. ಅದೇ ರೀತಿ ಹುಲಿ ಸಹಾ. ಮನುಷ್ಯನಿಗೆ ಅಂತಹ ವಿವೇಚಿಸುವ ಬುದ್ಧಿ, ಶಕ್ತಿ ಇದೆ. ಸಸ್ಯಗಳು ಮತ್ತು ಪ್ರಾಣಿಗಳು ತಮ್ಮ ಕ್ರಿಯೆಗಳಲ್ಲಿ ಪಾಪ ಮಾಡುವುದಿಲ್ಲ, ಏಕೆಂದರೆ ಅವುಗಳ ಕ್ರಿಯೆಗಳಲ್ಲಿ ಇಚ್ಛಾಶಕ್ತಿ ಇರುವುದಿಲ್ಲ. ಆದರೆ ಮನುಷ್ಯನ ವಿಷಯದಲ್ಲಿ ಕಥೆಯೇ ಬೇರೆ. ನಿಮಗೆ ಈ ಚರ್ಚೆಯಲ್ಲಿ ಪಾಪವನ್ನು ಏಕೆ ತಂದೆ ಎಂದು ನಿಮಗೆ ಆಶ್ಚರ್ಯವಾಗಬಹುದು. ಇರಲಿ, ವಿವರಿಸುತ್ತೇನೆ.
     ಪಾಪ ಎಂಬುದು ಮನಸ್ಸಿನ ತುಮುಲಗಳೇ ಹೊರತು ಮತ್ತೇನೂ ಅಲ್ಲ. ಈ ತುಮುಲಗಳೇ ಮೋಕ್ಷದೆಡೆಗಿನ ನನ್ನ ಪ್ರಯಾಣವನ್ನು ಅಡ್ಡಿಪಡಿಸುವುದು. ನಾನು ಸತ್ಯವನ್ನು ಸತ್ಯವಾಗೇ ಕಾಣಲು ಮನಸ್ಸು ಶುದ್ಧವಾಗಿರಬೇಕು (ಅಂದರೆ ತುಮುಲಗಳಿರಬಾರದು). (ಬೈಬಲ್ ಸಹ ಯಾರ ಮನಸ್ಸುಗಳು ಶುದ್ಧವಾಗಿದೆಯೋ ಅವರು ಅನುಗ್ರಹಿತರು ಎಂದು ಹೇಳುತ್ತದೆ.) ಪಾಪವನ್ನು ಹೆಚ್ಚು ವೈಜ್ಞಾನಿಕವಾಗಿ ವಿವರಿಸಬೇಕೆಂದರೆ - ಅದು ಮನಸ್ಸು ಮತ್ತು ಬುದ್ಧಿಶಕ್ತಿಗಳಲ್ಲಿನ ಅಂತರ. ಬುದ್ಧಿಶಕ್ತಿಗೆ ಯಾವುದು ಸರಿ, ಯಾವುದು ತಪ್ಪು ಎಂದು ಗೊತ್ತಿರುತ್ತದೆ - ಆದರೂ ನಮಗೆ ತಪ್ಪೆಂದು ಗೊತ್ತಿದ್ದರೂ ಅದನ್ನೇ ಮಾಡುವಂತೆ ಆಗುತ್ತದೆ - ಅಂದರೆ ಬುದ್ಧಿಶಕ್ತಿ ಒಂದು ಹೇಳುತ್ತದೆ, ಆದರೆ ಬುದ್ಧಿಶಕ್ತಿ ಹೇಳಿದಂತೆ ಕೇಳಬೇಕಾದ ಮನಸ್ಸು ಬಂಡೆದ್ದು ತನಗೆ ಬೇಕಾದಂತೆ ಮಾಡುತ್ತದೆ. ಈ ಅಂತರವೇ ಪಾಪ. ಆ ರೀತಿ ಮಾಡಿದ ನಂತರ ಏನೋ ತಪ್ಪು ಮಾಡಿದ ಭಾವ ಮೂಡುತ್ತದೆ, ಏಕೆಂದರೆ ಬುದ್ಧಿಶಕ್ತಿ ತಾನು ಸೋತಿದ್ದರೂ ಸುಮ್ಮನಿರುವುದಿಲ್ಲ, ಅದು ನಾನು ಅದು ತಪ್ಪು ಎಂದು ಹೇಳಿದೆ. ಆದರೂ ಅದನ್ನು ಏಕೆ ಮಾಡಿದೆ? ಎಂದು ಚುಚ್ಚುತ್ತಲೇ ಇರುತ್ತದೆ. ಮನಸ್ಸಿನ ಶಾಂತಿ ಹೋದ ಮೇಲೆ ಮನುಷ್ಯನಿಗೆ ನರಕದ ಅನುಭವವಾಗುತ್ತದೆ. ಮನುಷ್ಯ ಪಾಪಕ್ಕಾಗಿ ಶಿಕ್ಷಿಸಲ್ಪಡುವುದಿಲ್ಲ, ಪಾಪದಿಂದ ಶಿಕ್ಷಿಸಲ್ಪಡುತ್ತಾನೆ. ಅದರ ಕುರಿತು ಚಿಂತಿಸಿ.
     ಎಲ್ಲಾ ಯೋಗಗಳೂ, ನೀವು ಸ್ಪಷ್ಟವಾಗಿ ವಿಮರ್ಶಿಸಿದರೆ, ದೇಹ, ಮನಸ್ಸು ಮತ್ತು ಬುದ್ಧಿಶಕ್ತಿಯನ್ನು ಒಗ್ಗೂಡಿಸುವ ಕ್ರಿಯೆಗಳೇ ಆಗಿವೆ. ಒಬ್ಬ ಯೋಗಿಗೆ - ಆತ ಏನು ಯೋಚಿಸುತ್ತಾನೆ, ಏನು ಮಾತನಾಡುತ್ತಾನೆ ಮತ್ತು ಏನು ಮಾಡುತ್ತಾನೆ ಎಲ್ಲವೂ ಒಂದೇ ರೀತಿಯದಾಗಿರುತ್ತದೆ, ಹೊಂದಾಣಿಕೆಯಿರುತ್ತದೆ (ಮನಸಾ -ವಾಚಾ - ಕರ್ಮಣಾ). ನಮ್ಮ ವಿಷಯದಲ್ಲಿ, ನಾವು ಯೋಚಿಸುವುದೇ ಒಂದು, ಆದರೆ ನಾವು ಏನು ಯೋಚಿಸುತ್ತೇವೆಯೋ ಅದನ್ನು ಹೇಳುವ ಧೈರ್ಯವಿರುವುದಿಲ್ಲ, ನಮ್ಮ ತುಟಿಗಳು ನಾವು ಯೋಚಿಸಿದ್ದಕ್ಕಿಂತ ಭಿನ್ನವಾಗಿ ಬೇರೇನನ್ನೋ ಹೇಳುತ್ತವೆ; ನಾವು ಆಡಿದ ಮಾತು ಮತ್ತು ನಂತರ ನಾವು ಮಾಡುವ ಕೆಲಸ, ಮತ್ತೆ ಅಲ್ಲಿ ವ್ಯತ್ಯಾಸ! - ಎಲ್ಲೂ ಸಮನ್ವಯತೆ ಇಲ್ಲವೇ ಇಲ್ಲ. ನಾವು ಗೊಂದಲದ ಜೀವನ ನಡೆಸುತ್ತಿದ್ದೇವೆ. ನಾವು ಇನ್ನೊಬ್ಬರನ್ನು ಮೋಸ ಮಾಡುವುದರ ಜೊತೆಗೆ ಇನ್ನೂ ಶೋಚನೀಯವೆಂದರೆ ನಮ್ಮನ್ನು ನಾವೇ ಮೋಸಪಡಿಸಿಕೊಳ್ಳುತ್ತಿದ್ದೇವೆ, ಮತ್ತೂ ಶೋಚನೀಯವೆಂದರೆ ನಮಗೆ ಅದರ ಅರಿವೇ ಬರುವುದಿಲ್ಲ!
     ಈಗ ಒಂದು ಹುಲಿ ಬೇಟೆಯಾಡಿ ತಿಂದರೆ ಅದು ಪಾಪ ಮಾಡಿದಂತೆ ಆಗುವುದಿಲ್ಲ. ಏಕೆಂದರೆ ಅದರ ಬುದ್ಧಿಶಕ್ತಿ ಪ್ರಾರಂಭಿಕ ಹಂತದಲ್ಲಿದ್ದು, ಅದು ಕೊಲ್ಲುವ ಮುನ್ನ - ಕೊಲ್ಲಬೇಕೋ ಅಥವಾ ಬೇಡವೋ, ನಾನು ಮಾಂಸಾಹಾರಿಯಾಗಿರಬೇಕೋ ಅಥವ ಸಸ್ಯಾಹಾರಿಯಾಗಿರಬೇಕೋ - ಎಂದು ವಿಮರ್ಶಿಸುತ್ತಾ ಕೂರುವುದಿಲ್ಲ. ಅದಕ್ಕೆ ಹಸಿವಾದಾಗ, ಪ್ರಾಕೃತಿಕ ಬೇಡಿಕೆ ಈಡೇರಿಸಿಕೊಳ್ಳಲು ತನ್ನ ಬೇಟೆಯನ್ನು ಕೊಲ್ಲುತ್ತದೆ ಮತ್ತು ತಿನ್ನುತ್ತದೆ ಮತ್ತು ಅಗತ್ಯವಿರುವಷ್ಟು ತಿಂದ ನಂತರ ಉಳಿದುದನ್ನು ಬಿಡುತ್ತದೆ. ಅದಕ್ಕೆ ಹೊಟ್ಟೆಬಾಕತನ ಇಲ್ಲ. ಅದು ಅದರ ಸ್ವಧರ್ಮ. ಅದು ಸುಂದರ ಪರಿಸರ ವ್ಯವಸ್ಥೆಯನ್ನು ಪಾಲಿಸುತ್ತದೆ. ಮನುಷ್ಯನೊಬ್ಬ ಮಾತ್ರ ತನ್ನ ಹೊಟ್ಟೆಬಾಕತನದಿಂದ ಪರಿಸರ ವ್ಯವಸ್ಥೆಯನ್ನು ನಾಶ ಮಾಡುತ್ತಿದ್ದಾನೆ. ನಾನು ಸಸ್ಯಾಹಾರಿಯಾಗಿರಬೇಕೆ ಅಥವ ಮಾಂಸಾಹಾರಿಯಾಗಬೇಕೆ? ಎಂಬ ಪ್ರಶ್ನೆ ಅವನೊಬ್ಬನಿಂದ ಮಾತ್ರ ಬರಲು ಸಾಧ್ಯ. ಆ ಪ್ರಶ್ನೆ ಏಕೆ ಬರುತ್ತದೆ? ಏಕೆಂದರೆ ಅವನಿಗೆ ವಿವೇಚನೆ ಮಾಡುವ ಬುದ್ಧಿಶಕ್ತಿ ಇದೆ ಮತ್ತು ಅವನು ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಇತರರನ್ನು ನೋಯಿಸಲು ಬಯಸದಿರುವುದರಿಂದ. ಆತನಿಗೆ ನೋವು ಎಂದರೆ ಏನೆಂದು ಗೊತ್ತಿದೆ, ಏಕೆಂದರೆ ಆತ ಇತರರು ಅವನಿಗೆ ನೋವುಂಟುಮಾಡಬಾರದೆಂದು ಬಯಸುತ್ತಾನೆ. ಸಸ್ಯಗಳೂ ಸಹ ಜೀವಿಗಳೇ, ಅವುಗಳಿಗೆ ನೋವುಂಟು ಮಾಡಬಹುದೇ? ಎಂದು ನೀವು ಕೇಳಬಹುದು. ಯಾವುದೇ ಜೀವ ವೈವಿಧ್ಯಕ್ಕೆ ಹಾನಿಯುಂಟು ಮಾಡದೆ ಬದುಕಲು ಸಾಧ್ಯವಿದ್ದರೆ ಅದು ಅತ್ಯುತ್ತಮ, ಆದರೆ ಅದು ಸಾಧ್ಯವಿಲ್ಲ. ಜೀವನ ಜೀವದ ಮೇಲೆ ಜೀವಿಸಿದೆ - ಅದು ಪ್ರಕೃತಿಯ ನಿಯಮ. ವಿವೇಚನಾಶಕ್ತಿಯುಳ್ಳ ಮನುಷ್ಯನಾಗಿ ನನ್ನ ಪಾತ್ರವೆಂದರೆ ನಾನು ಬದುಕಿರುವ ಸಲುವಾಗಿ ಪ್ರಕೃತಿಗೆ ಕನಿಷ್ಠ ಹಾನಿಯಾಗುವಂತೆ ನೋಡಿಕೊಳ್ಳುವುದು. ಸಸ್ಯಗಳ ನೋವಿನ ಬಗ್ಗೆ ನನಗೆ ಸ್ಪಷ್ಟ ತಿಳುವಳಿಕೆಯಿಲ್ಲ. ಆದ್ದರಿಂದ ಬದುಕಲು ತಿನ್ನುವುದು ಮತ್ತು ತಿನ್ನುವ ಸಲುವಾಗಿ ಬದುಕದಿರುವುದು ನಿರ್ಣಾಯಕ ಅಂಶವಾಗುತ್ತದೆ.


     ಭಗವದ್ಗೀತೆಯಲ್ಲಿ ಕೃಷ್ಣ ಒತ್ತಿ ಹೇಳುವುದೇನೆಂದರೆ ಒಬ್ಬ ಸಾಧಕ (ಮೋಕ್ಷಕ್ಕಾಗಿ ಹಂಬಲಿಸುವವನು) ಎಲ್ಲಾ ಜೀವಿಗಳ ವಿಷಯದಲ್ಲಿ ಅನುಕಂಪ ಹೊಂದಿರಬೇಕೆಂದು (ಸರ್ವ ಭೂತ ಹಿತೇರಥಾಃ). ಆಧ್ಯಾತ್ಮಿಕ ಬೆಳವಣಿಗೆಯಲ್ಲಿ ಬುದ್ಧಿಶಕ್ತಿ ಹರಿತವಾಗುತ್ತಾ ಹೋಗುತ್ತದೆ - ತೀಕ್ಷ್ಣ ಬುದ್ಧಿ ಸೂಕ್ಷ್ಮ ಬುದ್ಧಿಯಾಗುತ್ತಾ ಹೋಗುತ್ತದೆ. ಅಂದರೆ, ಮನಸ್ಸು ತಳಮಳರಹಿತ, ಶಾಂತ ಮತ್ತು ಸ್ವ-ನಿಯಂತ್ರಿತವಾಗುತ್ತದೆ. ಇತರರ ನೋವುಗಳಿಗೆ ಸ್ಪಂದಿಸುವ ಗುಣ ಸಹ ಬೆಳೆಯುತ್ತಾ ಹೋಗುತ್ತದೆ. ಆದ್ದರಿಂದ ಸಸ್ಯಾಹಾರಿಯಾಗುವುದು ಸೂಕ್ತ.


     ಸಾಂಪ್ರದಾಯಿಕ ಮಾಂಸಾಹಾರಿಗಳೂ ಸಹ ನಾಯಿಗಳು ಮತ್ತು ಬೆಕ್ಕುಗಳು ಅಥವ ಇತರ ಮಾನವ ಪ್ರಾಣಿಗಳನ್ನು ತಿನ್ನಲು ಇಷ್ಟಪಡುವುದಿಲ್ಲ! ಏಕೆ? ಎಷ್ಟೇ ಆದರೂ ಮಾಂಸ ಅಂದರೆ ಮಾಂಸವೇ! ಆದರೆ ಬಳಕೆಯಿಂದ ಅನುಕಂಪ ಬೆಳೆದಿರುತ್ತದೆ. ಮಾನವನನ್ನೇ ಹೋಲುವ ಆದರೆ ಪ್ರಾರಂಭಿಕ ಬುದ್ಧಿಶಕ್ತಿ ಹೊಂದಿರುವ ಹಲವು ಎರಡು ಕಾಲಿನ ಪ್ರಾಣಿಗಳಿವೆ. ಅವು ಪ್ರಾಣಿಗಳಂತೆ ವರ್ತಿಸುತ್ತವೆ. ಆದರೆ ವಿಕಸನವಾಗುತ್ತಾ ಹೋದಂತೆ ಅವುಗಳ ಬುದ್ಧಿಶಕ್ತಿ ಬೆಳೆಯುತ್ತಾ ಹೋಗುತ್ತದೆ ಎಂಬುದನ್ನು ಗಮನಿಸಿದರೆ ಪ್ರಕೃತಿಯಿಂದ ಎಷ್ಟು ಬೇಕೋ ಅಷ್ಟನ್ನು ಪಡೆದು ಸಸ್ಯಾಹಾರಿಯಾಗಿರುವುದು ಸೂಕ್ತವೆನಿಸುತ್ತದೆ. ಕೇವಲ ನಾಲಗೆಯ ಚಪಲವನ್ನು ತೃಪ್ತಿ ಪಡಿಸುವ ಸಲುವಾಗಿ ಯಾವುದೇ ಜೀವವಿಧಗಳನ್ನು ಘಾಸಿಗೊಳಿಸಬಾರದು.
     ಹಿಂದೂ ಒಬ್ಬ ಸಸ್ಯಾಹಾರಿಯಾಗಿರಬೇಕೇ? ಈ ಪ್ರಶ್ನೆ ನಿಮ್ಮ ಮನಸ್ಸಿನಲ್ಲಾಗಲೇ ಉದ್ಭವಿಸಿರಬಹುದು, ನಿಮ್ಮ ಹೊಟ್ಟೆಯನ್ನು ತೃಪ್ತಿಪಡಿಸಲು ಇತರ ಜೀವಗಳನ್ನು ನೋಯಿಸಬಾರದೆಂಬ ಸೂಕ್ಷ್ಮತೆ ನಿಮಗೆ ಇದೆಯೆಂದು ಭಾವಿಸುವೆ. ಹಾಗಿದ್ದಲ್ಲಿ ನೀವು ಮಾಂಸಾಹಾರದಿಂದ ದೂರವಿರುವುದು ಉತ್ತಮ ಮತ್ತು ಆಗ ನೀವು ನಿಮ್ಮ ಬುದ್ಧಿಶಕ್ತಿಯೊಂದಿಗೆ ಶಾಂತವಾಗಿರಬಹುದು. ನೀವು ಸೂಕ್ಷ್ಮ ಭಾವನೆಯುಳ್ಳವರಾಗಿದ್ದರೆ, ನಿಮ್ಮ ಬುದ್ಧಿಶಕ್ತಿ ಹೇಳುವುದೇ ಒಂದಾದರೆ ಮತ್ತು ನಿಮ್ಮ ಮನಸ್ಸು ಕೆಳ ಸಂತೋಷಗಳನ್ನು ಬಯಸಿ ಬೇರೆ ದಾರಿಯಲ್ಲಿ ನಿರ್ದೇಶಿಸಿದರೆ ಮತ್ತು ನೀವು ನಿಮ್ಮ ಬುದ್ಧಿ ಹೇಳಿದ ದಾರಿ ಬಿಟ್ಟು ನಡೆದರೆ ನೀವು ಪಾಪ ಮಾಡಿದಂತೆ ಆಗುತ್ತದೆ. ಕೃಷ್ಣ ಹೇಳಿದಂತೆ ಅದು ನಿಮ್ಮ ಸ್ವಧರ್ಮದ ವಿರುದ್ಧವಾಗುತ್ತದೆ. ಜೊತೆಗೆ, ಈಗ ಸಾಂಪ್ರದಾಯಿಕ ಮಾಂಸಾಹಾರಿಗಳೂ ಸಸ್ಯಾಹಾರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ, ಇತರ ಪ್ರಾಣಿಗಳ ಬಗ್ಗೆ ಅನುಕಂಪದಿಂದಲ್ಲ, ಆದರೆ ಅದು ತಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲವೆಂಬ ಕಾರಣಕ್ಕಾಗಿ.
     ನಾನಾಗಲೇ ತಿಳಿಸಿದ್ದೇನೆ, ಹಿಂದುತ್ವದಲ್ಲಿ ಹೀಗೆ ಮಾಡಿ ಮತ್ತು ಹೀಗೆ ಮಾಡಬೇಡಿ ಎಂಬುದಿಲ್ಲ, ಆದರೆ ನೀವು ನಿಮ್ಮ ಸ್ವಂತದ ಮಾಡಬಹುದಾದ ಮತ್ತು ಮಾಡಬಾರದ ಸಂಗತಿಗಳನ್ನು ನಿಮ್ಮ ಬುದ್ಧಿಶಕ್ತಿಯ ಮೌಲ್ಯ, ಸಂಸ್ಕೃತಿ, ಶಿಕ್ಷಣ ಮತ್ತು ಬದುಕಿನ ಪ್ರಾಥಮಿಕ ಗುರಿ ಆಧರಿಸಿ ನಿರ್ಧರಿಸಿಕೊಳ್ಳಿ. ನಿಮ್ಮ ಸ್ವಧರ್ಮವನ್ನು ನೀವು ಪಾಲಿಸುವುದರಿಂದ ನೀವು ನಿಮ್ಮೊಂದಿಗೆ ಸಮಾಧಾನದಿಂದಿರುವುದನ್ನು ಕಂಡುಕೊಳ್ಳುವಿರಿ. ಅದನ್ನು ಬೇರೆಯವರು ನಿರ್ಣಯಿಸುವುದಲ್ಲ, ನೀವೇ ನಿರ್ಣಯಿಸಿಕೊಳ್ಳುವುದು. ನೀವು ತಳಮಳಕ್ಕೆ ಒಳಗಾದಿರೆಂದರೆ ಅದರ ಅರ್ಥ ನೀವು ಅದರಿಂದ ಮನಸ್ಸಿನ ಶಾಂತಿ ಕಳೆದುಕೊಳ್ಳುತ್ತಿರುವಿರೆಂದು ಮತ್ತು ಅದೇ ಪಾಪ. ನಿಮ್ಮನ್ನು ನೀವೇ ನೀವು ತಿನ್ನುವ ಕೋಳಿ ಅಥವ ಹಸು ಎಂದಿಟ್ಟುಕೊಳ್ಳಿ. ನೀವು ನಿಮ್ಮನ್ನು ತಿನ್ನುವವರನ್ನು ಸಸ್ಯಾಹಾರಿಗಳಾಗಲು ಮತ್ತು ನಿಮ್ಮ ಜೀವ ಉಳಿಸಲು ಹೇಳುವುದಿಲ್ಲವೇ? ನೀವು ಪ್ರಾಣಿಯನ್ನು ನೀವೇ ಕೊಲ್ಲುತ್ತಿಲ್ಲವೆಂದೂ ಮತ್ತು ನೀವು ತಿಂದರೂ, ತಿನ್ನದಿದ್ದರೂ ಪ್ರಾಣಿಗಳು ಕೊಲೆಯಾಗುವುವು ಎಂದು ಹೇಳದಿರಿ. ನೀವು ತಿನ್ನದಿದ್ದರೆ ಒಂದು ಪ್ರಾಣಿ ಉಳಿಯುತ್ತದೆ. ಅದೇ ಬೇಡಿಕೆ ಮತ್ತು ಪೂರೈಕೆ. ನಾನು ಸ್ವತಃ ಕದಿಯದಿರಬಹುದು, ಆದರೆ ಕದ್ದ ಮಾಲನ್ನು ಅದು ಕದ್ದಮಾಲು ಎಂದು ಗೊತ್ತಿದ್ದೂ ಕೊಂಡರೆ, ಅದು ಅಪರಾಧ! ಅಲ್ಲವೇ? ಈಗ ಕೃತಕ ಮಾಂಸಗಳೂ ದೊರೆಯುತ್ತವೆ - ಆದ್ದರಿಂದ ಸತ್ತ ಮಾಂಸಕ್ಕೇಕೆ ಹಂಬಲಿಸಬೇಕು? ನಿಮ್ಮ ಹೊಟ್ಟೆಯನ್ನು ಸತ್ತ ಪ್ರಾಣಿಯ ಸ್ಮಶಾನವಾಗಬೇಕೆಂದು ಏಕೆ ಬಯಸುವಿರಿ?
     ಹಿಂದುತ್ವದ ದೃಷ್ಟಿಯಿಂದ ನೋಡಿದರೆ ಅದು ಇದನ್ನೆಲ್ಲಾ ಗಮನಿಸುವುದೇ ಇಲ್ಲ. ಅದು ಬಯಸುವುದೇನೆಂದರೆ ಸನಾತನ ಧರ್ಮದ ದಾರಿಯಲ್ಲಿ ನಡೆಯಬೇಕೆಂದಷ್ಟೆ. ಆದ್ದರಿಂದ ನಿಮ್ಮ ಮನಸ್ಸನ್ನು ಶಾಂತವಾಗಿ ಮತ್ತು ತಳಮಳರಹಿತವಾಗಿರುವಂತೆ ನೋಡಿಕೊಳ್ಳಲು ಏನು ಮಾಡಬೇಕೋ ಅದನ್ನು ಮಾಡಿ. ಮನಸ್ಸಿನ ಶುದ್ಧತೆಯೇ ಮೋಕ್ಷ ಪಡೆಯುವ ದಾರಿ ಮತ್ತು ಅದು ಮಾನವ ಜೀವನದ ಗುರಿ. ನಾವು ಇಷ್ಟಪಟ್ಟು ಮಾಡಿದ ಕ್ರಿಯೆಗಳಿಂದ ಈ ಸಂಸಾರದ ಜಂಜಾಟಕ್ಕೆ ಸಿಲುಕಿದ್ದು, ನಾವು ಇಷ್ಟಪಟ್ಟು ಮಾಡುವ ಸಾಧನೆಯೊಂದೇ ಅದರಿಂದ ಹೊರಬರಲು ಸಾಧ್ಯ. ಭಗವಂತ ನಮಗೆ ಇದನ್ನು ಸಾಧಿಸಲು ಬುದ್ಧಿಶಕ್ತಿ ಕೊಟ್ಟಿದ್ದಾನೆ. ಕೃಷ್ಣ ಘೋಷಿಸಿದ್ದಾನೆ -ಪರಧರ್ಮಕ್ಕಿಂತ ಸ್ವಧರ್ಮದಲ್ಲಿ ಸಾಯುವುದು ಮೇಲು. ಸ್ವಧರ್ಮ (ಅದು ನೀವು ಯಾವ ಜಾತಿ ಅಥವ ಧರ್ಮಕ್ಕೆ ಸೇರಿರುವಿರಿ ಎಂಬುದಲ್ಲ) ಎಂದರೆ ಅಂತಿಮವಾಗಿ ನಿಮ್ಮ ಬುದ್ಧಿಶಕ್ತಿ ಅಥವ ಅಂತಃಸಾಕ್ಷಿ ಏನು ಹೇಳುತ್ತದೆಯೋ ಅದು. ಏಕೆಂದರೆ, ಕ್ರಿಯೆ ಮಾಡಿದ ನಂತರ ನಿಮ್ಮ ಮನಸ್ಸೇ ನಿಮ್ಮ ಬುದ್ಧಿಶಕ್ತಿಯೊಂದಿಗೆ ಲೆಕ್ಕ ಇತ್ಯರ್ಥ ಮಾಡಿಕೊಳ್ಳಬೇಕಿರುವುದು.
      ನಿಮಗೆ ನೀವೇ ಒಂದು ಉಪಕಾರ ಮಾಡಿಕೊಳ್ಳಿರಿ - ನಿಮಗೆ ಯಾವುದು ಅಗತ್ಯವಿದೆಯೋ ಅದನ್ನು ತಿನ್ನಿ ಮತ್ತು ಯಾವುದು ನಿಜವಾಗಿಯೂ ಅಗತ್ಯವಿಲ್ಲವೋ ಅದನ್ನು ಬಿಟ್ಟುಬಿಡಿ. ಆ ರೀತಿಯಲ್ಲಿ ನಿಮ್ಮ ಜೀವನವನ್ನು ಸರಳ, ಶಾಂತ ಮತ್ತು ಕಡಿಮೆ ಕೊಲೆಸ್ಟರಾಲ್ ನೊಂದಿಗೆ ಆರೋಗ್ಯವಂತವಾಗಿ ಮಾಡಿಕೊಳ್ಳಿ.
*********
 ಮೂಲ ಇಂಗ್ಲಿಷ್ ಲೇಖನ:  ಡಾ. ಕೆ. ಸದಾನಂದ, ವಾಷಿಂಗ್ಟನ್, ಡಿ.ಸಿ. ೨೦೩೭೫.
ಕನ್ನಡ ಅನುವಾದ;          ಕವಿ ನಾಗರಾಜ್.
ಆತ್ಮೀಯ ವೇದಾಭಿಮಾನಿಗಳೇ,
ವೇದಸುಧೆಯು ಮನರಂಜನೆಯ ತಾಣವಲ್ಲವೆಂದಾಗ ಸಹಜವಾಗಿ ಯುವಕರು ಆಕರ್ಶಿತರಾಗುವುದು ವಿರಳ.ಇಂತಹ ಸಂದರ್ಭದಲ್ಲಿ ಶ್ರೀ ಪ್ರಸನ್ನ ರಂತಹ ಯುವಕರು ವೇದಸುಧೆಗೆ ತಾಂತ್ರಿಕ ಸಲಹೆ-ಸಹಕಾರವನ್ನು ನೀಡಲು ಮುಂದೆ ಬಂದಿರುವುದು ಸಂತಸದ ಸಂಗತಿಯಾಗಿದೆ. ಮುಂದಿನ ಫೆಬ್ರವರಿ ಮಾಸದಲ್ಲಿ ವೇದಸುಧೆಯು ತನ್ನ ಪ್ರಥಮ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುವ ಯೋಜನೆಯನ್ನು ರೂಪಿಸುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮೊಡನೆ ಸಹಕಾರಿಯಾಗಲು ಮುಂದೆ ಬಂದಿರುವ ಶ್ರೀ ಪ್ರಸನ್ನರಿಗೆ ತಮ್ಮೆಲ್ಲರ ಪರವಾಗಿ ವೇದಸುಧೆಗೆ ಸ್ವಾಗತಿಸುತ್ತೇನೆ. ತಮ್ಮೆಲ್ಲರ ಶುಭ ಹಾರೈಕೆ ಇರಲಿ.
-ಹರಿಹರಪುರ ಶ್ರೀಧರ
ನಿರ್ವಾಹಕ
---------------------------------------------------------

ಆತ್ಮೀಯ ಪ್ರಸನ್ನ,
ವೇದಸುಧೆಗೆ ಆಮಂತ್ರಣವನ್ನು ಸ್ವೀಕರಿಸಿದ್ದಕ್ಕೆ ಧನ್ಯವಾದಗಳು. ನೀವು  ವಯಸ್ಸಿನಲ್ಲಿ ಕಿರಿಯರಾದುದರಿಂದ ಆರಂಭದಲ್ಲಿ ಸ್ವಲ್ಪ ಆತ್ಮೀಯವಾಗಿ ನಿಮಗೆ ವೇದಸುಧೆಯ ಬಗ್ಗೆ ಕೆಲವು ಮಾತು ಹೇಳುವೆ. " ಆಗಲೇ ಉಪದೇಶ ಶುರುವಾಯ್ತಾ!" ಎಂದು ಕೊಳ್ಳ ಬೇಡಿ. ಈಗಾಗಲೇ ನೀವು ವೇದಸುಧೆಯನ್ನು ನೋಡಿರಬಹುದು.ಅದರಲ್ಲಿರುವ ಬರಹಗಳು/ಆಡಿಯೋ/ವೀಡಿಯೋ ಗಳನ್ನೊಮ್ಮೆ  ಕಣ್ಣಾಡಿಸಿ/ ಕೇಳಿ. ಆಗ ನಿಮಗೆ ವೇದಸುಧೆಯ ಉದ್ಧೇಶ ಖಂಡಿತವಾಗಿ ಅರ್ಥವಾಗುತ್ತದೆ. ಇದು ಮನರಂಜನೆಯ ತಾಣವಲ್ಲ. ಹಾಗಾಗಿ ಇದೇನಪ್ಪಾ! ಕೇವಲ ವೇದ-ಉಪನಿಷತ್ತು-ಧರ್ಮ-ಸಂಸ್ಕೃತಿ-ಪರಂಪರೆ, ಅಂತಾ ಇವನ್ನೇ ಬರೀತಾರಲ್ಲಾ! ಎಂಬ ಆಲೋಚನೆ ಬಾರದಿರದು. ವೇದದಲ್ಲಿ ನಮ್ಮ ಜೀವನಕ್ಕೆ ಅಗತ್ಯವಾದ ಸರ್ವಸ್ವವೂ ಇದೆ. ಆದರೆ ಅದರ ಸರಿಯಾದ ಉಪಯೋಗ ಆಗ್ತಿಲ್ವಲ್ಲಾ! ಎಂಬುದು ನಮ್ಮ ಕಳಕಳಿ. ಇಷ್ಟು ಚಿಕ್ಕ ವಯಸ್ಸಿನಲ್ಲಿ ನೀವು ನಮ್ಮೊಂದಿಗಿರುವುದು   ನಮಗೆ ತುಂಬಾ ಸಂತೋಷದ ಸಂಗತಿ.ಕಾರಣ ನೀವುಗಳೇ ನಮ್ಮ  ಪರಂಪರೆಯ ಮುಂದಿನ[ಇಂದಿನ] ವಾರಸುದಾರರು.
ಆದ್ದರಿಂದ ನಾವುಗಳೂ ಕೂಡ ವೇದವನ್ನು ಚೆನ್ನಾಗಿ ಬಲ್ಲವರನ್ನು ಆಶ್ರಯಿಸಿ ಅವರ ಮಾತುಗಳನ್ನು ನಾವು ಕೇಳಿ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ ನೂರಾರು ಜನರಿಗೆ ತಿಳಿಸಲು ಈ ತಾಣವನ್ನು ಆರಂಭಿಸಿದ್ದೇವೆ. ತಾಂತ್ರಿಕವಾಗಿ ನಮ್ಮೆಲ್ಲಾ ಕೆಲಸಗಳಿಗೆ ನಿಮ್ಮ ಸಲಹೆ ಸಹಕಾರ ಬೇಕು. ಇಲ್ಲಿ ಪ್ರಕಟವಾಗಿರುವ ಶ್ರೀ ಸುಧಾಕರ ಶರ್ಮರ ಉಪನ್ಯಾಸಗಳಿಗೆ ಅಕ್ಷರ ಕೊಡುವ ಪ್ರಯತ್ನ ಮಾಡುವಿರಾದರೆ[ಅದಕ್ಕೆ ಸಮಯಾವಕಾಶ ಇದ್ದರೆ]  ಅತ್ಯಂತ ಪ್ರೀತಿಯಿಂದ ಸ್ವೀಕರಿಸುತ್ತೇವೆ. ಶುಭವಾಗಲಿ.
-ಶ್ರೀಧರ್

----------------------------------------------------------------------
 ಶ್ರೀ ಪ್ರಸನ್ನ -ಇವರ ನುಡಿ:
                 ಮೊದಲನೆಯದಾಗಿ ಹೇಳಬೇಕೆಂದರೆ ನನಗೆ ಮನರಂಜನೆ ಮುಂತಾದವುಗಳಲ್ಲಿ ಆಸಕ್ತಿ ಇಲ್ಲ. ನನ್ನ ಪ್ರಕಾರ ಯಾರು ವ್ಯರ್ಥ ಕಾಲಹರಣ ಮಾಡುತ್ತಾರೋ ಅವರಿಗೆ ಮನರಂಜನೆ ಬೇಕಾಗುತ್ತದೆ. ಆದರೆ ಯಾರು ತಮ್ಮ ಎಲ್ಲಾ ಸಮಯವನ್ನು ಉಪಯುಕ್ತ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೋ ಅವರಿಗೆ ಮನರಂಜನೆ ಬೇಕಿರುವುದೇ ಇಲ್ಲ. ಅವರು ತಾವು ಮಾಡುವ ಕೆಲಸದಲ್ಲಿಯೇ ಸಂತೋಷ, ಮನರಂಜನೆ ಮುಂತಾದವನ್ನು ಹೊಂದುತ್ತಾರೆ. ಆದ್ದರಿಂದ ವೇದಸುಧೆಯಲ್ಲಿ ಮನರಂಜನೆ ಇಲ್ಲ ಎಂದು ಖಂಡಿತಾ ದೂರುವುದಿಲ್ಲ.

ಇನ್ನು ನನಗೂ ವೇದ, ಉಪನಿಷತ್ತು, ಸಂಸ್ಕೃತಿಗಳಲ್ಲಿ ತುಂಬಾ ಆಸಕ್ತಿ ಇದೆ. ನಾನೂ ಒಂದಿಷ್ಟು ವರ್ಷ ವೇದಗಳ ಬಗ್ಗೆ ಓದಿದೆ, ಮಂತ್ರಗಳನ್ನು ಕಲಿತೆ, ಸನಾತನ ಸಂಸ್ಕೃತಿಯನ್ನು ಅರಿತೆ. ಆದರೆ ಮೆಕಾಲೆ ಶಿಕ್ಷಣ ಪದ್ಧತಿಯಿಂದಾಗಿ ಈಗ ಅವುಗಳಿಗೆಲ್ಲಾ ಹೆಚ್ಚು ಸಮಯ ಕೊಡಲಾಗುತ್ತಿಲ್ಲ. ಆದರೂ ವೇದಸುಧೆಯ ಕಾರಣದಿಂದ ಅದನ್ನೆಲ್ಲಾ ಮುಂದುವರೆಸುತ್ತೇನೆಂಬ ನಂಬಿಕೆ ನನಗಿದೆ. ಹಾಗೂ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ತಲುಪಿಸುತ್ತೇನೆಂಬ ಭರವಸೆ ಇದೆ.                           ಶ್ರೀ ಸುಧಾಕರ ಶರ್ಮರ ಉಪನ್ಯಾಸಗಳಿಗೆ ಅಕ್ಷರ ಕೊಡುವ ಕಾರ್ಯ ಎಂದರೆ ಸರಿಯಾಗಿ ಗೊತ್ತಾಗಲಿಲ್ಲ. ಅವರ ಉಪನ್ಯಾಸಗಳನ್ನು ಕೇಳಿ, ಅದನ್ನು ಬರೆದು ಪ್ರಕಟಿಸುವ ಕೆಲಸವೇ? ಬಿಡುವಿನ ವೇಳೆಯಲ್ಲಿ ಬೇಕಾದರೆ ಅದನ್ನೂ ಪ್ರಯತ್ನಿಸುತ್ತೇನೆ.
----------------------------------------------
ಹೌದು, ಪ್ರಸನ್ನ ,
ಶ್ರೀಶರ್ಮರ ಉಪನ್ಯಾಸಗಳನ್ನು ಕೇಳಿ  ಅದನ್ನು ಬರಹ ರೂಪಕ್ಕೆ ತಂದು ವೇದಸುಧೆಯಲ್ಲಿ ಪ್ರಕಟಿಸುವುದು.
-ಶ್ರೀಧರ್

Sunday, November 7, 2010

ವೇದಗಳು ಅಪೌರುಷೇಯವೇ?: ಒಂದು ಜಿಜ್ಞಾಸೆ

                    


ನನ್ನ ಪತ್ನಿಯು ಅವರಮ್ಮನ ಮನೆಗೆ ಹೋಗಿ ದೀಪಾವಳಿ ಹಬ್ಬ ಆಚರಿಸುತ್ತಿದ್ದರೆ ನಮ್ಮ ಮನೆಯಲ್ಲಿ ಮಿತ್ರರುಗಳಾದ ಕವಿ ನಾಗರಾಜ್,ಪತ್ರಕರ್ತರಾದ ಶ್ರೀ ಪ್ರಭಾಕರ್, ಸಂಘದ ಕಾರ್ಯಕರ್ತರಾದ ಶ್ರೀ ಹೊ.ಸು.ರಮೇಶ್-ಇವರುಗಳೊಡನೆ ಒಂದು ಚಿಂತನ-ಮಂಥನ ನಡೆದಿತ್ತು.ಅದೊಂದು ಅನೌಪಚಾರಿಕ ಮಾತುಕತೆ.  ವೇದದ ಬಗ್ಗೆ ಅತ್ಯಂತ ಶ್ರದ್ಧೆಯನ್ನು ಹೊಂದಿರುವ ಎಲ್ಲರಲ್ಲೂ ಒಂದು ಪ್ರಶ್ನೆ ಕಾಡಿತ್ತು. ವೇದವು  ಅಪೌರುಷೇಯ ಹೇಗೆ? ಒಂದೆರಡು ಗಂಟೆಗಳ ಕಾಲ ನಮ್ಮ ನಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ನಂತರ ಇಲ್ಲಿ ನಡೆದ ಅನೌಪಚಾರಿಕ ಚರ್ಚೆಯನ್ನು ವೇದಸುಧೆಯಲ್ಲಿ ಪ್ರಕಟಿಸಿ ಶ್ರೀ ಸುಧಾಕರ ಶರ್ಮರ ಉತ್ತರ ಪಡೆಯಲು ನಿರ್ಧರಿಸಿದೆವು. ವೇದಸುಧೆಯ ಅಭಿಮಾನಿಗಳೇ, ನೀವೂ ಚರ್ಚೆಯಲ್ಲಿ ಪಾಲ್ಗೊಳ್ಳಿ, ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.
ಶ್ರೀ ಸುಧಾಕರ ಶರ್ಮರಲ್ಲಿ ಮನವಿ:
ಇಲ್ಲಿ ನಾವು ಹಂಚಿಕೊಂಡಿರುವ ಅಂಶಗಳು ವೇದವನ್ನು ತಿಳಿಯದ ಅತಿಸಾಮಾನ್ಯ ವ್ಯಕ್ತಿಗಳಿಂದ, ಆದರೆ ವೇದಗಳ ಬಗ್ಗೆ ಅತ್ಯಂತ ಗೌರವ ಹೊಂದಿರುವ ಮತ್ತು ಜಗತ್ತಿನ ಅಮೂಲ್ಯ ರತ್ನವೆಂಬ ಭಾವನೆ ಇರುವಂತವರಿಂದ ಎಂಬುದನ್ನು ಗಮನಿಸಿ ನಮಗೆ ಅರ್ಥವಾಗುವಂತೆ ಸರಳವಾಗಿ ಸಮಾಧಾನದ ವಿವರಣೆ ಕೊಡಲು ಅತ್ಯಂತ ವಿನಯಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತೇವೆ.
-ಹರಿಹರಪುರಶ್ರೀಧರ್
-------------------------------------

ಮೊದಲಿಗೆ ಶ್ರೀ ಪ್ರಭಾಕರ್ ಅವರ ವಿಚಾರಗಳನ್ನು ನೋಡೋಣ.

------------------------------------
ಚತುರ್ವೇದಗಳ ಕುರಿತು ನನಗಿದ್ದ ಅತ್ಯಲ್ಪ ಅರಿವು ವಿಸ್ತೃತವಾಗಲು ಮಾನ್ಯ ಸುಧಾಕರ ಶರ್ಮರ ಉಪನ್ಯಾಸಗಳು ಹಾಗೂ ಮೊದಲ ಬಾರಿಗೆ ಅವರನ್ನು ಪರಿಚಯಿಸಿಕೊಟ್ಟ ಮಿತ್ರರೂ ಹಾಗೂ ಹಿತೈಷಿಗಳೂ ಆದ ಹರಿಹರ ಪುರ ಶ್ರೀಧರ್ ಅವರುಗಳೇ ಕಾರಣ. ಮೊದಲು ಇವರಿಬ್ಬರಿಗೆ ನನ್ನ ಧನ್ಯವಾದಗಳು.

ವೇದಗಳು ಅಪೌರುಷೇಯ ಎಂಬ ಮಾತನ್ನು ಆಗಾಗ ಕೇಳುತ್ತಿರುತ್ತೇವೆ. ವೇದಗಳ ಬಗ್ಗೆ ನನಗೆ ಅಪಾರ ಗೌರವ ಹಾಗೂ ಶ್ರದ್ಧೆ ಇದೆ. ಏಕೆಂದರೆ ಅವು ನಿತ್ಯ ಸತ್ಯಗಳು ಹಾಗೂ ಅಹಿಂಸೆಯನ್ನು ಬೋಧಿಸುತ್ತವೆ. ಅವುಗಳ ಬೋಧನೆ ಅನುಸರಿಸುವ ಜೀವಾತ್ಮಗಳು ಮುಕ್ತಿ ಪಡೆಯುವುದು ಖಚಿತ. ಹೀಗಾಗಿ ಅವುಗಳನ್ನು ಮನುಕುಲಕ್ಕೆ ನೀಡಿದ ಆ``ಮಹಾಪುರುಷ''ರಿಗೆ ನನ್ನ ಅನಂತಾನಂತ ಪ್ರಣಾಮಗಳು.
ನನ್ನ ಪ್ರಶ್ನೆ ಇಷ್ಟೆ: ಎಲ್ಲವೂ ಸರಿಯೇ; ಆದರೆ ವೇದಗಳು ಎಷ್ಟೇ ಪ್ರಾಚೀನವಾಗಿದ್ದರೂ ಅವು ಅಪೌರುಷೇಯ ಹೇಗೆ? ಸುಧಾಕರ ಶರ್ಮರೂ ಸೇರಿದಂತೆ ವೇದಾಧ್ಯಯಿಗಳೆಲ್ಲರೂ ಹೇಳುವ ಪ್ರಕಾರ, ಮನುಕುಲದ ಸಂವಿಧಾನವೆನಿಸಿದ ವೇದಗಳನ್ನು `ಯೂಸರ್ ಮ್ಯಾನ್ಯುಯೆಲ್ ' ರೀತಿಯಲ್ಲಿ ಆ ಪರಮಾತ್ಮನೇ ಈ ಸೃಷ್ಟಿಯ ಜತೆಗೇ ನೀಡಿದ್ದಾನೆ!

ವೇದಗಳು ಹಾಗೂ ಪರಮಾತ್ಮ- ಇವೆರಡನ್ನೂ ನಂಬುವ ನಮ್ಮಂಥವರಿಗೇ ಜಿಜ್ಞಾಸೆ ಕಾಡುತ್ತದೆ ಎಂದ ಮೇಲೆ, ಇವೆರಡನ್ನೂ ತಿರಸ್ಕರಿಸುವ ಮಟ್ಟದಲ್ಲಿರುವ ಇಂದಿನ ಆಧುನಿಕ ಪೀಳಿಗೆ ಅಷ್ಟು ಸುಲಭವಾಗಿ ಹಾಗೂ ಸಹಜವಾಗಿ ಈ ಸಮಾಧಾನವನ್ನು ನಂಬುವುದಿಲ್ಲ. ಅಂದ ಮೇಲೆ ಈ ಪ್ರಶ್ನೆ ಹಾಗೂ ಸಮಾಧಾನಕ್ಕೆ ಇನ್ನಷ್ಟು ಸಮರ್ಥನೆ ಅಗತ್ಯ ಎನಿಸಿದೆ.
ನನಗೂ ಈ ಅನುಮಾನ ಪರಿಹಾರವಾಗಿರಲಿಲ್ಲ. ಹೀಗಾಗಿ ಇತ್ತೀಚೆಗೆ ಹಾಸನಕ್ಕೆ ಭೇಟಿ ನೀಡಿ ಉಪನ್ಯಾಸ ನೀಡುತ್ತಿದ್ದ ಸಂದರ್ಭದಲ್ಲಿ ಸನ್ಮಾನ್ಯ ಸುಧಾಕರ ಶರ್ಮರನ್ನು ಈ ಕುರಿತು ಪ್ರಶ್ನಿಸಿದಾಗ ಅವರು ಹೇಳಿದ ಒಟ್ಟಾರೆ ಸಾರಾಂಶವೆಂದರೆ, `...ಮನುಷ್ಯನ ಅಂತರಾತ್ಮದಲ್ಲಿ ಈ ಸತ್ಯಗಳು ಅಂತರ್ಗತವಾದರೆ ಸಾಕು; ಅದು ತಾನಾಗೆ ಹೊರಬರುತ್ತದೆ...'.
ಒಂದು ಅರ್ಥದಲ್ಲಿ ಇದು ಸತ್ಯ. ಏಕೆಂದರೆ ಯಾರು ಏನೇ ಮಾತನಾಡಲು ಅಥವಾ ಬರೆಯಲು ಅದರಲ್ಲಿನ `ಸರಕು', ಸ್ವತಃ ಅವನದಾಗಿರುವುದಿಲ್ಲ; ಬದಲಿಗೆ ಅವನಿಗೆ ಉಂಟಾದ ಭಗವತ್ಪ್ರೇರಣೆಯಿಂದಾಗಿ ಆತ ಮಾತನಾಡಿರುತ್ತಾನೆ; ಅಥವಾ ಬರೆದಿರುತ್ತಾನೆ ಎಂದೇ ಭಾವಿಸೋಣ...

ನನ್ನ ಜಿಜ್ಞಾಸೆ ಏನೆಂದರೆ, ಈ ಸೃಷ್ಟಿಯಾದಾಗ ಆ ಭಗವಂತನು ಅದರ ಜತೆಗೇ `ವೇದ ಭಾಷೆಯಲ್ಲಿ ರಚಿತವಾದ ಈ ವೇದಗಳನ್ನೂ' ಪವಾಡವೆಂಬಂತೆ ಯಾರಿಗೆ ತಾನೇ ನೀಡಿರಲು ಸಾಧ್ಯ? `ಹೌದು; ಈ ಸೃಷ್ಟಿಯಲ್ಲಿದ್ದ ಮನುಷ್ಯರ ಕೈಗೇ ಭಗವಂತೆ ಇದನ್ನು ಹಸ್ತಾಂತರಿಸಿದ' ಎಂಬುದನ್ನು ಒಪ್ಪಿಕೊಂಡಾಗ ಮಾತ್ರ ಅವು ಅಪೌರುಷೇಯವಾಗಲು ಸಾಧ್ಯ! ನಿರ್ವಿಕಾರ, ನಿರ್ಗುಣ, ನಿರಾಮಯವಾದ ಆ ವಿಶ್ವಚೇತನ ಶಕ್ತಿ (ಭಗವಂತ) ವೇದಗಳನ್ನು ರಚಿಸಿ ನೀಡಿರುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.
ಕಾಲ, ದೇಶ, ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಯೋಚಿಸಿದಾಗ, ಎಷ್ಟೇ ಲಕ್ಷಾಂತರ ವರ್ಷಗಳ ಹಿಂದಾಗಲಿ; ಸಾರ್ವಕಾಲಿಕವಾಗಿ ಯಾರಿಗೇ ಆಗಲಿ ಅಂತರ್ಗತವಾಗಿರುವ ಒಂದು ಸಂವೇದನೆ ಅಥವಾ ಒಂದು ಮಾತನ್ನು ಮತ್ತೊಬ್ಬರಿಗೆ ತಲುಪಿಸಲು ಒಂದು ಮಾಧ್ಯಮ; ಅಂದರೆ ಭಾಷೆಯ ಅಥವಾ ಇಂದ್ರಿಯಗಳ ನೆರವು ಅತ್ಯಗತ್ಯ. ಉದಾ: `ಕುಳಿತುಕೊಳ್ಳಿ' ಎಂಬ ಸಂದೇಶವನ್ನು ಎದುರಿಗಿದ್ದವರಿಗೆ ತಲುಪಿಸಬೇಕೆಂದುಕೊಳ್ಳಿ. ಆಗ ಒಂದು ವೇಳೆ ಭಾಷೆ ಬಾರದಿದ್ದರೂ ಮೌನವಾಗಿಯೇ ತಲೆಯಾಡಿಸಿಯೋ ಅಥವಾ ಕೈ ತೋರಿಸಿಯೋ ಆ ಸಂದೇಶವನ್ನು ತಲುಪಿಸುತ್ತೇವೆ. ವೇದಗಳಿಗೂ ಇದು ಅನ್ವಯಿಸುತ್ತದೆ ಎಂಬುದು ನನ್ನ ಅಭಿಪ್ರಾಯ. ಆದರೆ ಶತ ಶತಮಾನಗಳಷ್ಟು ಹಿಂದಿನ ಕಾಲಮಾನದ ತೊಡಕು ಇರುವುದರಿಂದ ಈ ಪ್ರಕ್ರಿಯೆ ಹೇಗೆ ಸಾಗಿ ಬಂದಿರಬಹುದು; ಇದಕ್ಕಾಗಿ ಯಾವ ಮಾಧ್ಯಮ ಬಳಸಿರಬಹುದು ಎಂದು ಊಹಿಸಲು ಸಾಧ್ಯವಾಗುತ್ತಿಲ್ಲ.
ಹೀಗೆಯೇ ಮುಂದುವರೆದು ಯೋಚಿಸಿದಾಗ, ಮೊದಲು ವೇದ ಭಾಷೆ ಹುಟ್ಟಿಕೊಂಡ ನಂತರವೇ ವೇದಗಳು ಹಾಗೂ ವೇದಾಂಗಗಳ ರಚನೆಯನ್ನು ಯಾರೋ ಮಹಾತ್ಮರೊಬ್ಬರು ಅಥವಾ ಇಂತಹ ಮಹಾತ್ಮರ ಗುಂಪು ಮಾಡಿರಲೇಬೇಕು. ಹಾಗಿದ್ದ ಮೇಲೆ ಅವು ಅಪೌರುಷೇಯ ಆಗಲು ಹೇಗೆ ಸಾಧ್ಯ? ಇಂತಹ ಮಹಾತ್ಮರು ಅಥವಾ ಋಷಿ ಮುನಿಗಳಿಗೆ ಇಂತಹ ಮಹಾನ್ ಕೃತಿಯನ್ನು ರಚಿಸಲು ಆ ವಿಶ್ವ ಚೇತನ ಶಕ್ತಿಯ ಪ್ರೇರಣೆಯಿತ್ತು ಎನ್ನುವುದಾದರೆ ಅದನ್ನು ನಿರ್ವಿವಾದವಾಗಿ ಒಪ್ಪಿಕೊಳ್ಳಬಹುದು. ಈ ರೀತಿ ಯೋಚಿಸಿದಾಗ ಈ ಜಗತ್ತಿನಲ್ಲಿ ವೇದಗಳು ಎಲ್ಲೆಡೆ ಪ್ರಸಾರಗೊಳ್ಳಲೆಂದು ರೂಪುಗೊಂಡ ಪ್ರಥಮ ಭಾಷೆಯೇ `ವೇದ ಭಾಷೆ' ಎಂದಾಯಿತು. ಈ ಭಾಷೆ ಆರಂಭದಲ್ಲಿ ಮೌಖಿಕವಾಗಿಯೇ ಇದ್ದು, ಕಾಲಾನಂತರ ಲಿಪಿ ರೂಪುಗೊಂಡಿರಲೂಬಹುದು. ಋಷಿ ಮುನಿಗಳ ಬಾಯಿಂದ ಹೊರಟ ವೇದಗಳು ಕಿವಿಯಿಂದ ಕಿವಿಗೆ ಹರಡಿ, ಲಿಪಿ ರೂಪುಗೊಂಡ ಬಳಿಕ ಕಾಲಾನಂತರ ಕೃತಿಗೆ ಇಳಿದಿರಲಿಕ್ಕೂ ಸಾಕು. ನಂತರ ಸನ್ಮಾನ್ಯ ಯಾಸ್ಕರು ರಚಿಸಿದ ನಿರುಕ್ತವೂ ಸೇರಿದಂತೆ ವೇದಾಂಗಗಳು ಹುಟ್ಟಿರಬಹುದು.
ಒಟ್ಟಾರೆ, ಈ ವಿಶ್ವದಲ್ಲಿ ಆ `ವಿಶ್ವ ಚೇತನ ಶಕ್ತಿ' ಕುರಿತಾದ ತಮ್ಮ ತಪಸ್ಸು, ಯೋಗ ಶಕ್ತಿ, ನಡೆ, ನುಡಿ, ಜೀವನ ವಿಧಾನ ಮುಂತಾದ ಮಹಾನ್ ಸಾಧನೆಗಳ ಫಲದಿಂದಾಗಿ ನಮ್ಮ ಋಷಿ ಮುನಿಗಳಿಗೇ ಭಗತ್ಪ್ರೇರಣೆಯಾಗಿ, ಅವರುಗಳೇ ವೇದಗಳನ್ನು ರಚಿಸಿ ಪ್ರಚುರಪಡಿಸಿರಬೇಕೆಂಬುದು ನನ್ನ ಅಭಿಪ್ರಾಯ. ಅಂದ ಮೇಲೆ ವೇದಗಳು `ಪೌರುಷೇಯ'ವೇ ಹೊರತು ಅಪೌರುಷೇಯವಲ್ಲ. ಅನೇಕ ಋಷಿ ಮುನಿಗಳಿಂದ ರಚಿತವಾಗಿ, ಶತ ಶತಮಾನಗಳ ಕಾಲ ನಮ್ಮ ಪರಂಪರೆಯಲ್ಲಿ ಸಾಗಿ ಬಂದ ಈ ಅಪಾರ ಜ್ಞಾನ ರಾಶಿಯನ್ನು ವೇದ ವ್ಯಾಸರು ಪೂರ್ಣ ಅಧ್ಯಯನ ಮಾಡಿ, ಕ್ರೋಢೀಕರಿಸಿ ಕೊಟ್ಟಿರಲೂಬಹುದು. !?- ನೀವೇನಂತೀರಿ?

ಎಚ್.ಎಸ್. ಪ್ರಭಾಕರ,
ಪತ್ರಕರ್ತ, ಹಾಸನ/ದಾವಣಗೆರೆ.
------------------------------------------------------------

ಹರಿಹರಪುರ ಶ್ರೀಧರರ ಅನಿಸಿಕೆ:
ವೇದದ ಮೂಲ ಹುಡುಕಲು ಅಧ್ಯಯನವಂತೂ ಬೇಕಾಗುತ್ತದೆ. ನಾನು  ಅಧ್ಯಯನ ಮಾಡಿಲ್ಲ. ಆದರೆ ವೇದವು ಅಪೌರುಷೇಯವೆನ್ನುವ ಮಾತನ್ನು  ಪೂರ್ಣವಾಗಿ ಒಪ್ಪಲು  ನನ್ನ ಮನ ಹಿಂದೆ ಬೀಳುತ್ತದೆ.  ಒಂದೆರಡು ಪದ್ಯವನ್ನು ಬರೆದು ಅದರಲ್ಲಿ  ಆನಂದವನ್ನು  ಅನುಭವಿಸಿರುವ ನಾನು [ "ಆನಂದ" -ಈ ಪದದ ಮಹತ್ವದ ಅರಿವಿದೆಯಾದರೂ ಸಾಮಾನ್ಯವಾಗಿ ನಾವು   ಆನಂದವಾಯ್ತೆನ್ನುವ ಮಾತನಾಡುತ್ತೇವೆ]  ಸಾಹಿತ್ಯ ವಿದ್ಯಾರ್ಥಿಯಲ್ಲದ, ಯಾವ ಅಧ್ಯಯನವನ್ನೂ  ಮಾಡಿರದ ನನ್ನ ಕೈನಲ್ಲಿ ಈ ಪದ್ಯವನ್ನು ಬರೆಯಲು ಸಾಧ್ಯವಾದ್ದಾದರೂ ಹೇಗೆ!? ಎಂದು ಹಲವು  ಭಾರಿ ಅಂದುಕೊಳ್ಳುತ್ತೇನ.ಆಗ ಸಹಜವಾಗಿ ಅದು ಭಗವದ್ ಪ್ರೇರಣೆಯೇ ಅಲ್ಲದೆ ಮತ್ತೇನೂ ಅಲ್ಲ,  ಎಂಬ ಸಮಾಧಾನ ಉತ್ತರವಾಗುತ್ತದೆ. ಈ ನನ್ನ ಅನುಭವವನ್ನೇ ಆಧಾರವಾಗಿಟ್ಟುಕೊಂಡು ವೇದಗಳಿಗೂ  ಇದನ್ನೇಆನ್ವಯಿಸುತ್ತೇನೆ. ಚಿಕ್ಕ-ಪುಟ್ಟ ಪದ್ಯ ರಚನೆಯೇ ನನ್ನದಲ್ಲವೆಂದಮೇಲೆ ಇಂತಹ  ಅನರ್ಘ್ಯ ರತ್ನವಾದ ವೇದಗಳನ್ನು ಯಾವ ಮನುಷ್ಯನೂ ತನ್ನ ಸ್ವಸಾಮರ್ಥ್ಯದಿಂದ ರಚಿಸಲು  ಸಾಧ್ಯವಿಲ್ಲದ ಮಾತೆಂಬುದನ್ನು ಸಹಜವಾಗಿ ಒಪ್ಪಬಹುದು. ಸೃಷ್ಟಿಯ ಜೊತೆ ಜೊತೆಗೇ ವೇದವನ್ನೂ  ಭಗವಂತನು ಕೊಟ್ಟಿದ್ದಾನೆಂಬುದು ಶೀ ಸುಧಾಕರಶರ್ಮರ ವ್ಯಾಖ್ಯೆ.[ಆದರೆ ಸಧಾಕರಶರ್ಮರು ಇದು   ನನ್ನ ಮಾತಲ್ಲ, ವೇದದಲ್ಲಿಯೇ ಇದನ್ನು ತಿಳಿಸಿದೆ ಎಂದು ಆಧಾರವನ್ನು  ನೀಡುತ್ತಾರೆ] ಈ ಮಾತನ್ನು ಒಪ್ಪಲು ಈ ಕೆಳಕಂಡ ಅಂಶಗಳು ನನಗೆ ಅಡ್ಡಿಯಾಗುತ್ತವೆ.
1.ಸೃಷ್ಟಿಯ ಜೊತೆಗೇ ವೇದವನ್ನು ಭಗವಂತನು ಕರುಣಿಸಿದ್ದರೆ ಅದರ ಭಾಷಾಮಾಧ್ಯಮ ಏನಾಗಿತ್ತು?
2. ಒಬ್ಬ ಋಷಿ ವೇದವನ್ನು ಉಚ್ಛರಿಸಿದರೆ ಜೊತೆಯಲ್ಲಿದ್ದ ಇನ್ನುಳಿದ ಶಿಷ್ಯರು ಅದನ್ನು  ಅನುಸರಿಸಿದರು, ಎಂಬುದು ವೇದಪಾಠ ಕಲಿಕೆಯ ರೀತಿ, ಎಂದು ಕೇಳಿದ್ದೇನೆ. ಅಂದರೆ ಬಾಯಿಂದ  ಕಿವಿಗೆ ವೇದವನ್ನು ಹೇಳುತ್ತಾ ವೇದವನ್ನು ಕಲಿತರೆಂಬ ಮಾತಿದೆ. ಸರಿ, ಆದರೆ ಮೂಲದಲ್ಲಿ  ಒಂದು ಮಂತ್ರದ ರಚನೆ ಹೇಗಾಯ್ತು? ಎಂಬುದು ಗೊತ್ತಾಗುವುದೇ ಇಲ್ಲ.
3.  ಹಲವಾರು ಋಷಿಗಳು ತಮ್ಮ ತಪಸ್ಸಿನ ಬಲದಿಂದ ಲಭ್ಯವಾದ ಭಗವಂತನ ಕೃಪೆಯಿಂದ  ವೇದಮಂತ್ರಗಳನ್ನು ಕಂಡುಕೊಂಡು ಅದಕ್ಕೆ ರೂಪಕೊಟ್ಟರೆಂಬುದು  ನನ್ನ ಅನಿಸಿಕೆ
4. ಅಂದರೆ ವೇದದ ರಚನೆಗೆ ಮುಂಚೆಯೇ ಭಾಷೆಯೊಂದು ಇದ್ದಿರಬೇಕು.

5. ಸುಮ್ಮನೆ ವೇದವು ಅಪೌರುಷೇಯವೆಂದರೆ ಅದು ಮೂಲದಲ್ಲಿ ಮನುಷ್ಯರನ್ನು ತಲುಪಿದ್ದಾದರೂ ಹೇಗೆ? ಎಂಬುದಕ್ಕೆ ಉತ್ತರ ಸಿಗುವುದಿಲ್ಲ.

6. ವೇದವನ್ನು ಜಗತ್ತಿನ ಮೊದಲ ಸಾಹಿತ್ಯವೆಂದು ಹೇಳಬಹುದೇನೋ, ಕಾರಣ, ವೇದವನ್ನು ಯಾರೇ ಒಬ್ಬ ವ್ಯಕ್ತಿ ಯಾವುದೋ ಒಂದು ಕಾಲದಲ್ಲಿ ರಚಿಸಿಲ್ಲ.

7.ವೇದವು  ಇಡೀ ಮಾನವ ಕುಲಕ್ಕೆಕೊಟ್ಟ ಯೂಸರ್ ಮ್ಯಾನ್ಯುಯಲ್ ಎಂಬುದು ಶರ್ಮರಮಾತನ್ನು  ಒಪ್ಪುತ್ತೇನಾದರೂ ಅಂದಿನ ಜಗತ್ತಿನ ವ್ಯಾಪ್ತಿ ಎಷ್ಟಿತ್ತೆಂಬುದು ಗೊತ್ತಾಗುವುದಿಲ್ಲ.  ಪ್ರಾಯಶ: ಜಗತ್ತಿನ ಮೂಲವೂ ಭಾರತವೇ ಆಗಿರಬೇಕು.ಭಾರತಕ್ಕೆ ಹೊಂದಿಕೊಂಡಂತೆ ಇದ್ದಿರಬಹುದಾದ  ಚಿಕ್ಕಪುಟ್ಟ ಪ್ರದೇಶಗಳೇ ಜಗತ್ತೆನಿಸಿರಬೇಕು.ನಮ್ಮ ದೇಶವನ್ನು ಭಾರತವೆನ್ನಿ,  ಆರ್ಯಾವರ್ತವೆನ್ನಿ, ಹಿಂದು ದೇಶವೆನ್ನಿ-ಅದು ಬೇರೆಯಮಾತು.
8.ಇಂತಹ ಒಂದು ಅನರ್ಘ್ಯರತ್ನದ ಸರಿಯಾದ ಉಪಯೋಗ ಆಗಲಿಲ್ಲವೇಕೆ? ಇದ್ದ ಅಡ್ಡಿ ಆತಂಕಗಳೇನು? ಎಂಬುದರಬಗ್ಗೆ ಶ್ರೀ ಶರ್ಮರು ವಿವರಿಸಬೇಕು.
9. ವೇದವನ್ನು ಯಾಸ್ಕರು ರಚಿಸಿದ ನಿರುಕ್ತದ ಸಹಾಯದಿಂದ ಅರ್ಥ ಮಾಡಿಕೊಂಡರೆ ಮಾತ್ರ  ಮಾನವನ ಉನ್ನತಿಗೆ ಅಗತ್ಯವಾದ ಹಲವು ಸೂತ್ರಗಳು ಅಲ್ಲಿ ಸಿಗುತ್ತವೆ. ಹಾಗಾದರೆ ಯಾಸ್ಕರು ನಿರುಕ್ತವನ್ನು ರಚಿಸುವ ಮುಂಚೆ ವೇದವನ್ನು ಹೇಗೆ ಅರ್ಥ ಮಾಡಿಕೊಂಡರು? ನಿರುಕ್ತದ ರಚನೆಯಾದದ್ದು ಅಂದರೆ ಯಾಸ್ಕರ ಕಾಲ ಯಾವಾಗ? ವ್ಯಾಸರು ವೇದಗಳನ್ನು ವಿಂಗಡಿಸಿ ಅದಕ್ಕೊಂದು ರೂಪ ಕೊಟ್ಟರೇ? ವ್ಯಾಸರು ವೇದವನ್ನು ಅರ್ಥ ಮಾಡಿಕೊಂಡಿದ್ದಾದರೂ ಹೇಗೆ? ಅಂದರೆ   ಮೊದಲ ಮನುಷ್ಯನ ಸೃಷ್ಟಿಯಾದಾಗ ಅವನು ವೇದವನ್ನು ಹೇಗೆ ಅರ್ಥ ಮಾಡಿಕೊಂಡ?
ಹೀಗೆ ಹಲವು ಪ್ರಶ್ನೆಗಳಾಗಿಯೇ ಉಳಿಯುತ್ತವೆ. ಶ್ರೀ ಶರ್ಮರು ಎಲ್ಲವನ್ನೂ ವೇದಮಂತ್ರಗಳ ಮೂಲಕವೇ ನಮ್ಮಂತ ಸಾಮಾನ್ಯರಿಗೆ ಸಮಾಧಾನಪಡಿಸುವುದೂ ಕಷ್ಟವೇ. ಆದರೂ ಶರ್ಮರೇ ನಮಗೆ ಸಮಾಧಾನ ಹೇಳಬೇಕು.
----------------------------------------------------------------
 ಕವಿನಾಗರಾಜರ  ಅನಿಸಿಕೆ:


  ನಾನೊಬ್ಬ ಸಾಮಾನ್ಯ. ಹೇಳಬೇಕೆಂದರೆ 'ಪಂಡಿತನು ನಾನಲ್ಲ, ಪಾಂಡಿತ್ಯವೆನಗಿಲ್ಲ; ಒಳಮನದ ನುಡಿಯೊಂದೆ ಆಸರೆಯು ನನಗೆಲ್ಲ.' ಮನಸ್ಸಿಗೆ ಒಪ್ಪುವ ವಿಚಾರಗಳನ್ನು ಯಾರು ಹೇಳಿದರೂ ಸ್ವೀಕರಿಸುವ ಮನೋಭಾವ ನೀಡಿದ ಭಗವಂತನಿಗೆ ನಾನು ಋಣಿ. ಶ್ರೀಧರ ತಿಳಿಸಿದಂತೆ ಒಂದೆರಡು ಗಂಟೆಗಳು ಉಪಯುಕ್ತ ಚರ್ಚೆ ನಡೆಸಿದ ಸಮಾಧಾನವಿದೆ. ಶ್ರೀಯುತ ಪ್ರಭಾಕರ ಮತ್ತು ಶ್ರೀಧರ್ ಈಗಾಗಲೇ ಎತ್ತಿದ ಅಂಶಗಳಿಗೆ ಪೂರಕವಾಗಿ ನನ್ನ ಸಂದೇಹಗಳನ್ನೂ ಮುಂದಿಡಲು ಪ್ರಯತ್ನಿಸಿರುವೆ. 

1. ವೇದಗಳು ಅಪೌರುಷೇಯ ಎಂಬ ಬಗ್ಗೆ ನನಗೆ ಸಮಾಧಾನಕರ ಮಾಹಿತಿ  ಸಿಗಬೇಕಿದೆ. ಮೂರು ಬಗೆಯ ಅಸ್ತಿತ್ವಗಳ -ಜಡ, ಜೀವಾತ್ಮ(ಅಣುಚೇತನ)
 ಮತ್ತು ಪರಮಾತ್ಮ(ವಿಶ್ವಚೇತನ)- ಬಗ್ಗೆ ಶ್ರೀ ಶರ್ಮರ ಉಪನ್ಯಾಸ ಪ್ರೇರಣಾದಾಯಕವಾಗಿದ್ದು, ಕೆಲವು ಮೂಲಭೂತ ಸಂದೇಹಗಳನ್ನು ದೂರ ಮಾಡಿವೆ. ಈ ಕುರಿತು ಕೆಲ ಸಣ್ಣಪುಟ್ಟ ಸಂದೇಹಗಳಿದ್ದರೂ ಅವು ಈಗಿನ ಚರ್ಚೆಗೆ ಸಂಬಂಧಪಡದುದಾಗಿರುವುದರಿಂದ ಇಲ್ಲಿ ಪ್ರಸ್ತಾಪಿಸುವುದಿಲ್ಲ.
2. ವೇದಗಳು ಅಪೌರುಷೇಯವಾಗಿದ್ದರೆ ಮಾನವನಿಗೆ ತಲುಪಿದ್ದು ಹೇಗೆ ಮತ್ತು ಯಾರಿಂದ?
3. ವೇದಗಳು ಸಾರ್ವಕಾಲಿಕ, ಉತ್ತಮ ಮತ್ತು ಸತ್ಯದ ವಿಚಾರಗಳನ್ನು ಹೊಂದಿರುವುದಾದರೂ ಅವು ಭಗವಂತನ ಸೃಷ್ಟಿಯಾಗಿದ್ದರೆ ಜಗತ್ತಿನ ಹೆಚ್ಚಿನ ಜನರು ಈಗ ಬಳಸುವ ಭಾಷೆಯಲ್ಲಿ ಏಕೆ ಇಲ್ಲ?
4.ಭಗವಂತ ಸರ್ವವ್ಯಾಪಿಯಾಗಿರಬೇಕೆಂದರೆ ನಿರಾಕಾರಿಯಾಗಿರಬೇಕು ಎಂಬುದನ್ನು ಒಪ್ಪಬಹುದು. ಚಲಿಸದೆ ಲಿಸುವ, ನೋಡದೆ ನೋಡುವ, ಮಾಡದೆ ಮಾಡುವ, ಎಲ್ಲಾ ಆಗು ಹೋಗುಗಳಿಗೆ ಸರ್ವಶಕ್ತ ಭಗವಂತನೇ  ಕಾರಣ ಎಂಬ ಅರ್ಥದಲ್ಲಿ ವೇದಗಳು ಆತನ ಸೃಷ್ಟಿ  ಎಂದು ಒಪ್ಪಬಹುದಾದರೂ, ನಿಜ ಅರ್ಥದಲ್ಲಿ ಅವನ ಪ್ರೇರಣೆಯಿಂದ ಋಷಿ-ಮುನಿಗಳು, ವಿದ್ವಾಂಸರುಗಳಿಂದ ರಚಿತವಾಗಿರಬಹುದೆನ್ನಬಹುದೆ? ಅಗಾಧ ವಿಚಾರಗಳು, ವಿಸ್ತಾರತೆ, ವೈವಿಧ್ಯತೆಗಳನ್ನು ಗಮನಿಸಿದರೆ ಭಗವತ್ಪ್ರೇರಣೆಯಿಂದ ರಚಿತವಾದ ವೇದಗಳು ಒಬ್ಬರ ಕೃತಿಯೆಂದು ಹೇಳುವುದು ಕಷ್ಟ.
5. ವೇದಗಳು ಒಬ್ಬರಿಂದ ಮತ್ತೊಬ್ಬರಿಗೆ ತಲುಪುವಾಗ ಅನೇಕ ಕಲ್ಪನೆಗಳು, ತಪ್ಪು ಅಭಿಪ್ರಾಯಗಳು ಮೂಡಿರುವ ಸಾಧ್ಯತೆ ಇದೆ. ಭಗವಂತ ಸಾಕಾರ ಅಥವ ನಿರಾಕಾರನೇ ಎಂಬ ಬಗ್ಗೆ ಸಹ ಇರುವ ವಿವಾದ ಒಂದು ನಿದರ್ಶನ
--------------------------------------------
ಒಳ್ಳೆಯ ಪ್ರಶ್ನೆಗಳು ಶ್ರೀಧರ್ ಅವರೆ. ಇದರ ಬಗ್ಗೆ ನನ್ನದೂ ಕೆಲವು ಅಭಿಪ್ರಾಯಗಳನ್ನು (ತಿಳಿವಿನಿಂದ ಅಲ್ಲ, ಹೀಗಿರಬಹುದೇನೋ ಅನ್ನುವ ಅನುಮಾನದಿಂದ) ಯಾವಾಗಲೊಮ್ಮೆ ಬರೆಯುವೆ)- ಸುಧಾಕರ ಶರ್ಮರ ಉತ್ತರವನ್ನು ನೋಡಲು ನಾನೂ ಕಾತುರನಾಗಿದ್ದೇನೆ.
-ರಾಮಪ್ರಸಾದ್,ಕ್ಯಾಲಿಫೋರ್ನಿಯಾ

Friday, November 5, 2010

ಮೂಢ ಉವಾಚ

ಮೂಢ ಉವಾಚ -10

ಮನೆಯ ಮೇಲೆ ಮನೆ ಕಟ್ಟಿ ಉಬ್ಬಿದೊಡಿಲ್ಲ|
ನಗ ನಾಣ್ಯ ಸಿರಿ ಸಂಪದವ ತುಂಬಿಟ್ಟರಿಲ್ಲ||
ನಿಂತ ನೀರು ಕೊಳೆತು ನಾರುವುದು ನೋಡ|
ಕೂಡಿಟ್ಟವರ ಪಾಡು ಬೇರಲ್ಲ ಮೂಢ||


ಆಳಿದವರಳಿದುಳಿಸಿಹುದೇನು ಕೇಳು|
ಮನೆ ಮಹಲು ಸಿರಿ ನಗವ ಕೊಂಡೊಯ್ವರೇನು?
ಅವಗುಣವ ಶಪಿಸಿ ಜನರು ಗುಣವ ನೆನೆವರು|
ಎರಡು ದಿನದಲಿ ಎಲ್ಲ ಮರೆಯುವರು ಮೂಢ||
*****************
-ಕವಿನಾಗರಾಜ್.

ಅಕೌಂಟ್ ಹ್ಯಾಕ್ ಮಾಡಿರುವ ಕಿಡಿಗೇಡಿಗಳು

ಪ್ರಿಯ ಬಂಧುಗಳೇ,
ನನ್ನ ಮಿತ್ರರಾದ ಶ್ರೀ ರಾಮ್ ಪ್ರಸಾದ್, ಶ್ರೀ ರಾಕೇಶ್ ಹಾಗೂ ನನ್ನ ಮಗ ಶ್ರೀಕಂಠ-ಇವರುಗಳು ನನಗೊಂದು ಮೇಲ್ ಕಳುಹಿಸಿ ನನ್ನ ಆರ್ಕುಟ್ ಅಕೌಂಟ್ ಹ್ಯಾಕ್ ಮಾಡಿರುವ ಕಿಡಿಗೇಡಿಗಳು ಅಶ್ಲೀಲ ಕೊಂಡಿಯೊಂದನ್ನು ಹಲವರಿಗೆ ಮೇಲ್ ಮಾಡಿರುವ ಬಗ್ಗೆ ಎಚ್ಛರಿಸಿದ್ದಾರೆ. ಅಂತರ್ಜಾಲದ ಸದುಪಯೋಗ ಪಡಿಸಿಕೊಳ್ಳಲು ಕೆಲವರಿಂದ ಪ್ರಯತ್ನ ಸಾಗುತ್ತಿದ್ದರೆ, ಇನ್ನು ಕೆಲವರು ಅದರ ದುರುಪಯೋಗ ಮಾಡುತ್ತಿದ್ದು ಕಿರಿಕಿರಿಗೆ ಕಾರಣರಾಗುತ್ತಾರೆ. ಅಂತೂ ಎಲ್ಲರಿಗೂ ಆ ಭಗವಂತನು ಸನ್ಮತಿ ಕೊಡಲೆಂದು ಪ್ರಾರ್ಥಿಸುತ್ತಾ, ವೇದಸುಧೆಯ ಅಭಿಮಾನಿಗಳಿಗೆ ಯಾರಿಗಾದರೂ ಈ ರೀತಿಯ ಕೊ೦ಡಿ  ಬಂದಿದ್ದರೆ  ಅದನ್ನು ಶಾಶ್ವತವಾಗಿ ಅಳಿಸಿ ವೇದಸುಧೆಯ ಸದ್ವಿಚಾರಗಳನ್ನು ಸ್ವೀಕರಿಸಬೇಕಾಗಿ ಕೋರುವೆ.ಅಂತೂ ಆರ್ಕುಟ್ ಅಕೌಂಟ್ ನ್ನು ಶಾಶ್ವತವಾಗಿ ಡಿಲೀಟ್ ಮಾಡಿ ನಿಟ್ಟುಸಿರು ಬಿಟ್ಟಿರುವೆ. ಅನಿವಾರ್ಯವಾಗಿ ಎಲ್ಲಾ ಪಾಸ್ ವರ್ಡ್ ಬದಲಿಸಬೇಕಾಯ್ತು.ಒಂದು ಅಂಶವನ್ನಂತೂ ಈ ಘಟನೆ ಸಾಬೀತು ಪಡಿಸಿತು-" ಸಂವೇದನಾಶೀಲ ಸ್ನೇಹಿತರು ಕಾಲಕಾಲದಲ್ಲಿ ಎಚ್ಛರಿಸುತ್ತಾ ಮಾರ್ಗದರ್ಶನ ಮಾಡುತ್ತಾರೆ". 
-ಶ್ರೀಧರ್

ಯೋಚಿಸಲೊ೦ದಿಷ್ಟು... ೧೬

೧.ಕತ್ತಲೆ ಎ೦ಬುದು ಬೆಳಕಿನ ವಿರುಧ್ಧವಲ್ಲ!ಅದು ಬೆಳಕಿನ ಗೈರನ್ನು ಸೂಚಿಸುತ್ತದೆ!ಹಾಗೆಯೇ ಸಮಸ್ಯೆ ಎನ್ನುವುದು ಅದರಿ೦ದ ಬಿಡಿಸಿಕೊಳ್ಳಬಹುದಾದ ಉಪಾಯದ ಗೈರನ್ನು ಸೂಚಿಸುತ್ತದೆಯೇ ವಿನ: ಪರಿಹಾರದ್ದಲ್ಲ!
೨. ಸತ್ಸ೦ಗವೆನ್ನುವುದು ಸುಗ೦ಧ ಗ್ರ೦ಥಿಗೆಗಳನ್ನು ಮಾರುವ ಅ೦ಗಡಿಯಲ್ಲಿ ಹೊಕ್ಕ೦ತೆ! ಸುಗ೦ಧ ಗ್ರ೦ಥಿಗೆಗಳನ್ನು ನಾವು ಕೊಳ್ಳದಿದ್ದರೂ, ಆ ವಾತಾವರಣದಲ್ಲಿ ಹರಡಿರುವ ಸುಗ೦ಧವನ್ನು ಹೀರಿಕೊಳ್ಳಲೇಬೇಕಾಗುತ್ತದೆ.

೩.ಜೀವನದಲ್ಲಿ ಕೊರತೆಯೇ ಅವಕಾಶಗಳನ್ನು ಸೃಷ್ಟಿಸುತ್ತದೆ!ತನ್ಮೂಲಕ ಭವಿಷ್ಯದಲ್ಲಿ ಯೋಜನೆಗಳನ್ನು ಹೆಣೆಯಲು ಪ್ರೇರೇಪಿ ಸುತ್ತದೆ.

೪. “ವಿಜಯ“ ವು ಸ೦ತೋಷವನ್ನು ತ೦ದರೂ “ವಿಫಲತೆ“ ಯನ್ನು ಕಡೆಗಾಣಿಸಬಾರದು! ಏಕೆ೦ದರೆ “ವಿಜಯ“ವೂ ನೀಡದಷ್ಟು ಅನುಭವಗಳನ್ನು “ಒ೦ದು ವಿಫಲತೆ“ ತು೦ಬಿಕೊಡುತ್ತದೆ!

೫.ಸ೦ಬ೦ಧಗಳಲ್ಲಿ ಹಾಗೂ ಮಿತೃತ್ವಗಳಲ್ಲಿ ಒಬ್ಬನು ತನ್ನ ನ೦ಬಿಕೆಯನ್ನು ದೃಢಪಡಿಸಲೋಸುಗವಾಗಿ ಸಾಕ್ಷ್ಯಗಳನ್ನು ಹಾಜರು ಪಡಿಸುವಾಗಲೇ ಪರಸ್ಪರ ಸ೦ಬ೦ಧಗಳು ಕಡಿದು ಹೋಗುವ ಮಟ್ಟವನ್ನು ತಲುಪಿವೆ ಎ೦ದು ಖಚಿತ ಪಡಿಸಿಕೊಳ್ಳಬಹುದು.

೬. ಪ್ರತಿಯೊ೦ದನ್ನೂ ಸರಿಯಾಗಿ ಅರ್ಥೈಸಿಕೊ೦ಡು,ಅವುಗಳನ್ನು ವಿಮರ್ಶಿಸಿಕೊಳ್ಳುವ ಮಟ್ಟವನ್ನು ತಲುಪಿದೆವೆ೦ದರೆ, ನಮ್ಮ ಜೀವನವನ್ನು ಆನ೦ದವಾಗಿ ಕಳೆಯಲು ನಾವು ಸಮರ್ಥರು ಎ೦ದರ್ಥ.

೭. ಮಗು ಹುಟ್ಟಿದ ಕೂಡಲೇ ಮೊದಲು ಅಳುತ್ತದೆ, ನ೦ತರ ನಗುತ್ತದೆ! ಅ೦ತೆಯೇ ಯಾರೂ ಹುಟ್ಟಿನಿ೦ದಲೇ ಆನ೦ದವನ್ನು ಪಡೆದು ಬ೦ದಿರುವುದಿಲ್ಲ. ಆದರೆ ಆನ೦ದವನ್ನು ಪಡೆಯಲು ಯಾ ಅನುಭವಿಸಲು ಜೀವನದಲ್ಲಿ ಸದಾ ಅವಕಾಶಗಳು ನಮಗೆ ದೊರೆಯುತ್ತಲೇ ಇರುತ್ತವೆ!

೮.ಸಾಧನೆಯ ಹಾದಿಯಲ್ಲಿನ ಪ್ರತಿಯೊ೦ದೂ ಕಷ್ಟಗಳನ್ನು ಅಪ್ಪಿಕೊಳ್ಳಲೇಬೇಕು.ಏಕೆ೦ದರೆ ನಿರಾಶೆ ಹಾಗೂ ನೋವುಗಳಿ ಗಿ೦ತ ಉತ್ತಮವಾದ “ಗುರು“ವಿಲ್ಲ ಹಾಗೆಯೇ ಭವಿಷ್ಯದ ವಿಜಯದ ಗಳಿಕೆಗೆ “ವಿಫಲತೆ“ಗಿ೦ತ ಉತ್ತಮವಾದ “ಹೆದ್ದಾರಿ“ ಮತ್ತೊ೦ದಿಲ್ಲ!

೯. “ಆಕರ್ಷಣೆ“ ಎ೦ಬುದು ತಾತ್ಕಾಲಿಕವಾದ ಮೋಹವಷ್ಟೇ! ನಿಜವಾದ “ಪ್ರೇಮ“ವೇ ಶಾಶ್ವತವಾದ ಆಕರ್ಷಣೆ!

೧೦. ನಮ್ಮ ಸಿಟ್ಟಿನ ಪರಿಣಾಮವು ಯಾವಾಗಲೂ ನಮ್ಮ ಸಿಟ್ಟಿಗೇಳುವ ಕಾರಣಕ್ಕಿ೦ತ ಹೆಚ್ಚು ನೋವನ್ನು ತರುತ್ತದೆ!

೧೧. “ಅಹ೦ಕಾರ“ವು ಕಣ್ಣಿಗೆ ತು೦ಬಿಕೊ೦ಡ ಧೂಳಿನ೦ತೆ! ಧೂಳನ್ನು ತೊಳೆದುಕೊಳ್ಳದೇ, ಕಣ್ಣು ಸರಿಯಾಗಿ ಕಾಣಿಸುವುದಿಲ್ಲ. ಅ೦ತೆಯೇ ಅಹ೦ಕಾರವನ್ನು ತೊಡೆದುಕೊಳ್ಳದೇ, ನಮಗೆ ಯಾವೊ೦ದನ್ನೂ ಸರಿಯಾಗಿ ಗಮನಿಸಲು ಸಾಧ್ಯವಾಗದು!

೧೨. ಜೀವನದಲ್ಲಿ ಸ್ಪರ್ಧಾತ್ಮಕ ಗುರಿಯನ್ನು ಇಟ್ಟುಕೊ೦ಡು, ಅದನ್ನು ಸಾಧಿಸುವಲ್ಲಿ ನಿಖರತೆಯನ್ನು ತೋರಬೇಕು, ಚಿ೦ತನೆ ಗಳು ಶುಧ್ಧವೂ ಸಕಾರಾತ್ಮಕವೂ ಆಗಿದ್ದಲ್ಲಿ ಜೀವನವೊ೦ದು ಅರ್ಥಪೂರ್ಣ ಕಾವ್ಯವಾಗುತ್ತದೆ.

೧೩. ಜನರು ನಮ್ಮನ್ನು ಬೇಸರಪಡಿಸಿದಾಗ ಅವರ ವ್ಯಕ್ತಿತ್ವವನ್ನು ಅಳೆಯುವದಕ್ಕಿ೦ತ ನಾವು ಅವರನ್ನು ಬೇಸರ ಪಡಿಸಿದಾಗ ಅವರಲ್ಲುದಯಿಸುವ ಭಾವನೆಗಳ ಮೂಲಕ ಅವರ ವ್ಯಕ್ತಿತ್ವವನ್ನು ತೀರ್ಮಾನಿಸಬೇಕು.

೧೪. ಯಾರನ್ನೂ ಅತಿಯಾಗಿ ನೆಚ್ಚಿಕೊಳ್ಳುವುದು ಹಿತವಲ್ಲ! ಏಕೆ೦ದರೆ ಅದು ನಮ್ಮನ್ನು ನಾವೇ ಅತಿಯಾಗಿ ನೋಯಿಸಿಕೊಳ್ಳು ವುದರೊ೦ದಿಗೆ ಕೊನೆಯಾಗುತ್ತದೆ!

೧೫. ಪ್ರಪ೦ಚದಲ್ಲಿ ಎಲ್ಲರೂ ಏಕರೂಪದ ನಿಪುಣರಲ್ಲ !ಆದರೆ ಎಲ್ಲರಿಗೂ ಅವರವರ ನಿಪುಣತೆಯನ್ನು ಒರೆಗೆ ಹಚ್ಚುವ೦ತ ಏಕರೂಪ ಅವಕಾಶಗಳು ಮಾತ್ರ ಬ೦ದೊದಗುತ್ತಲೇ ಇರುತ್ತವೆ!