Pages

Thursday, December 30, 2010

ವೇದಸುಧೆ ಬಳಗದ ಸಮಾಲೋಚನಾ ಸಭೆ


ಆತ್ಮೀಯರೇ,
ಬರುವ 30.01.2011 ರಂದು ಹಾಸನದಲ್ಲಿ  ನಡೆಯಲಿರುವ ವೇದಸುಧೆಯ ಪ್ರಥಮ ವಾರ್ಷಿಕೋತ್ಸವದ ವ್ಯವಸ್ಥೆಯ ಬಗ್ಗೆ ಸಮಾಲೋಚಿಸಲು ಸಭೆಯೊಂದನ್ನು ಬೆಂಗಳೂರಿನಲ್ಲಿ ದಿನಾಂಕ 2.1.2011 ರಂದು ಭಾನುವಾರ ಮಧ್ಯಾಹ್ನ 4.00 ಗಂಟೆಗೆ ಆಯೋಜಿಸಲಾಗಿದೆ.   ವೇದಸುಧೆಯ ಬಳಗದ ಸದಸ್ಯರು ಮತ್ತು ಅಭಿಮಾನಿಗಳು ಸಭೆಯಲ್ಲಿ ದಯಮಾಡಿ ಭಾಗವಹಿಸಿ ವಾರ್ಷಿಕೋತ್ಸವವನ್ನು ಯಶಸ್ಸುಗೊಳಿಸಲು ತಮ್ಮ  ಅಮೂಲ್ಯ ಸಲಹೆ-ಸಹಕಾರವನ್ನು ನೀಡಬೇಕೆಂದು ಕೋರುವೆ.
ಸ್ಥಳ: ವೇದಾಧ್ಯಾಯೀ ಸುಧಾಕರಶರ್ಮರ ನಿವಾಸ,  ನಂಬರ್-15 ಮೌಂಟ್ ಜಾಯ್ ರಸ್ತೆ, ಹನುಮಂತನಗರ, ಬೆಂಗಳೂರು-19
[ಗಣೇಶಭವನ್ ಬಸ್ ಸ್ಟಾಪ್ ಸಮೀಪ ಇರುವ ಸೌದೆ ಅಂಗಡಿಯ ಹಿಂಬಾಗ]
ಸಂಪರ್ಕ ದೂರವಾಣಿ: 08022421950,    9448842474,   9663572406

ವಂದನೆಗಳೊಡನೆ
-ಹರಿಹರಪುರ ಶ್ರೀಧರ್
ಸಂಪಾದಕ

ವೇದಸುಧೆಯ ವಾರ್ಷಿಕೋತ್ಸವ

ವೇದಸುಧೆಯ ಅಭಿಮಾನಿಗಳಲ್ಲಿ ವಿನಂತಿ,
ಇದೇ ಫೆಬ್ರವರಿ ಆರರಂದು ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವು ನಡೆಯಲಿರುವುದರಿಂದ  ಅಂದು ನಡೆಯಬೇಕಿದ್ದ ವೇದಸುಧೆಯ ವಾರ್ಷಿಕೋತ್ಸವವನ್ನು  ಜನವರಿ ೩೦ ರಂದು ಭಾನುವಾರ  ಹಾಸನದಲ್ಲಿ ನಡೆಸಲುದ್ಧೇಶಿಸಿದೆ. ಆದ್ದರಿಂದ ಬಳಗದ ಸದಸ್ಯರು ಮತ್ತು ಅಭಿಮಾನಿ ಬಂಧುಗಳು ವಾರ್ಷಿಕೋತ್ಸವದ ಯಶಸ್ಸಿಗಾಗಿ ತಮ್ಮ ಸಲಹೆಗಳನ್ನು ಜನವರಿ  ೧ನೇ ದಿನಾಂಕದೊಳಗೆ ವೇದಸುಧೆಗೆ ಮೇಲ್ ಮಾಡಬೇಕೆಂದು ಕೋರುವೆ. ಜನವರಿ ೨ ರಂದು ನಡೆಯಲಿರುವ ವೇದಸುಧೆಯ ಬಳಗದ ಸಭೆಯಲ್ಲಿ  ವಾರ್ಷಿ ಕೋತ್ಸವದ ಕಾರ್ಯಕ್ರಮಗಳಬಗ್ಗೆ ಅಂತಿಮವಾಗಿ ಚರ್ಚಿಸಿ ತೀರ್ಮಾನಿಸಲಾಗುವುದು.

ವಂದನೆಗಳೊಡನೆ
-ಶ್ರೀಧರ್

Wednesday, December 29, 2010

ಊಟವನ್ನು ಏಕೆ ಮಾಡಬೇಕು?ಯಾವಾಗ ಮಾಡಬೇಕು?ಏನು ಸೇವಿಸಬೇಕು? Part-1

ಶ್ರೀ ಶ್ರೀನಾಥರ ಪ್ರಶ್ನೆಗೆ ಶ್ರೀ ಸುಧಾಕರಶರ್ಮರು ನೀಡಿರುವ ವಿವರಣೆ ಇಲ್ಲಿದೆ.

 ಆಹಾರಸೇವನೆಯ ಬಗ್ಗೆ ವೇದ ಮತ್ತು ಆಯುರ್ವೇದ ಹಿನ್ನೆಲೆಯಲ್ಲಿ ಒಂದಷ್ಟು ವಿಚಾರಗಳು.
1. ಊಟ ಏಕೆ ಮಾಡಬೇಕು?
ನಿರಂತರ ಕಾರ್ಯಚಟುವಟಿಕೆಗಳಿಂದ ಕಳೆದುಹೋದ ಶಕ್ತಿಯನ್ನು ಮರುಪೂರೈಕೆ ಮಾಡಲು. (ಹಾಗಾಗಿ ನಾವು ತಿನ್ನುವ ಆಹಾರದಲ್ಲಿ ಶಕ್ತಿಯಿರಬೇಕು ಎಂಬುದನ್ನು ಮತ್ತ ಹೇಳಬೇಕಿಲ್ಲ).
2. ಯಾವಾಗ ತಿನ್ನಬೇಕು?
ಹಸಿವಾದಾಗ. ಹಸಿವೆಯಲ್ಲಿ ಎರಡು ವಿಧ - ನಿಜ ಹಸಿವು, ಕಳ್ಳ ಹಸಿವು!
ಗಡಿಯಾರ ನೋಡಿ ಊಟ ಮಾಡುವವರಿಗೆ ಆ ಸಮಯಕ್ಕೆ ಸರಿಯಾಗಿ ಹೊಟ್ಟೆಯಲ್ಲಿ ಏನೋ ಒಂದು ತರಹ ಆಗುತ್ತದೆ. ಅದನ್ನು ಹಸಿವೆಂದು ತಿನ್ನುತ್ತಾರೆ. ಇದು ಕಳ್ಳ ಹಸಿವು. ನಮಗೆ ಇಷ್ಟವಾದ ತಿನಿಸನ್ನು ನೋಡಿದಾಗಲೂ ಹಸಿವಿನಂತೆ ಏನೂ
ಆಗುತ್ತದೆ. ಇದೂ ಕಳ್ಳ ಹಸಿವು.
ಮೊದಲು ತಿಂದ ಆಹಾರ ಜೀರ್ಣವಾದಮೇಲೆ ಆಹಾರ ತಿನ್ನುವ ಬಯಕೆ ಆದಲ್ಲಿ ಅದು ನಿಜ ಹಸಿವು. ಮೊದಲು ತಿಂದ ಆಹಾರ ಜೀರ್ಣವಾಗಿದೆ ಎಂದು ತಿಳಿಯುವುದು ಹೇಗೆ?
ಉದ್ಗಾರ ಶುದ್ಧಿರುತ್ಸಾಹೋ ವೇಗೋತ್ಕರ್ಷೋ ಯಥೋಚಿತಃ|
ಲಘುತಾ ಕ್ಷುತ್ ಪಿಪಾಸಾ ಚ ಜೀರ್ಣಾಹಾರಸ್ಯ ಲಕ್ಷಣಮ್||
ಉಸಿರು ಶುದ್ಧವಾಗಿರಬೇಕು, ಬಾಯಿ ವಾಸನೆಯಿರಬಾರದು, ಕಮರು ತೇಗು ಮೊದಲಾದವು ಇರಬಾರದು; ಉತ್ಸಾಹ, ಲವಲವಿಕೆ ಇರಬೇಕು; ಮಲಮೂತ್ರಾದಿಗಳು ಕಾಲಕಾಲಕ್ಕೆ ಸರಿಯಾಗಿ ಆಗಿ, ಅವುಗಳ ಶೇಷ ಶರೀರದಲ್ಲಿ ಇರಬಾರದು; ಹಗುರವಾಗಿದೆ ಎನಿಸಬೇಕು, ಮೈ-ಮನಗಳು ಭಾರವಾಗಿವೆ ಎಂದೆನಿಸಬಾರದು; ನೀರನ್ನು ಕುಡಿದರೂ ಅದರ ಸವಿ ನಾಲಿಗೆಗೆ ಅರಿವಾಗಬೇಕು. ಇಂತಹ ಹಿನ್ನೆಲೆಯಲ್ಲಿ ಹೊಟ್ಟೆಯಲ್ಲಿ ಚುಮು ಚುಮು ಎಂದು, ಆಹಾರ ಸೇವಿಸಬೇಕು ಎಂದೆನಿಸಿದರೆ ಅದು ನಿಜವಾದ ಹಸಿವು.!! (ಎಷ್ಟು ಸಲ ನಾವು ಊಟಕ್ಕೆ ಮುಂಚೆ ಎಷ್ಟೆಲ್ಲಾ ಪರಿಶೀಲನೆ ಮಾಡಿದ್ದೇವೆ?! - ನನ್ನನ್ನೂ ಸೇರಿಸಿಕೊಂಡು!)
3. ಏನು ಸೇವಿಸಬೇಕು?
ಆಗಲೇ ಹೇಳಿದ ಹಾಗೆ ಸತ್ವಭರಿತವಾದ ಆಹಾರವನ್ನು ಸೇವಿಸಬೇಕು.
(ಮುಂದುವರೆಸುವೆ)
-ಸುಧಾಕರ ಶರ್ಮ

Saturday, December 25, 2010

ಯೋಚಿಸಲೊ೦ದಿಷ್ಟು...೨೨

೧.ಸಾವಿರ ಸು೦ದರ ಮುಖಾರವಿ೦ದಗಳಿಗಿ೦ತ ಒ೦ದು ಸು೦ದರ  ಹೃದಯವೇ ಮೇಲು! ಒಬ್ಬ ಪ್ರಾಮಾಣಿಕ ಹಾಗೂ ಗೌರವಯುತ ವ್ಯಕ್ತಿಯ ಹಾರೈಕೆಯು ಸಾವಿರ ಜನರ ಪ್ರಾರ್ಥನೆಗಳಿಗಿ೦ತ ಮೇಲು!
೨. ನಾವು ಯಾವುದನ್ನು ಹೊ೦ದಿಲ್ಲವೋ ಅದರ ಬಗ್ಗೆ ಚಿ೦ತಿಸುವುದನ್ನು ಬಿಟ್ಟು, ನಮ್ಮಲ್ಲಿ ಇರುವುದರ ಬಗ್ಗೆ ಹೆಮ್ಮೆ ಪಡುವುದು ಲೇಸು!
೩. ಜೀವನವೊ೦ದು ಪುಸ್ತಕವಿದ್ದ ಹಾಗೆ. ಪುಟಗಳನ್ನು ತೆರೆದಷ್ಟು ಪುಸ್ತಕದ  ಆ೦ತರ್ಯದ ಅರಿವಾಗುವ ಹಾಗೆ, ಪ್ರತಿ ದಿನವೂ ಜೀವನದ ಒಳಗುಟ್ಟು ನಮ್ಮ ಮು೦ದೆ ತೆರೆಯಲ್ಪಡುತ್ತಲೇ ಹೋಗುತ್ತದೆ!!
೪. ಕನಸುಗಳು ಆಸೆಯನ್ನು ಹುಟ್ಟಿಸಿದರೆ, ಆಸೆಯೆ೦ಬುದು ಪ್ರಯತ್ನಕ್ಕೆ ದಾರಿ... ಆ ಪ್ರಯತ್ನವು ಸಾಧನೆಯ ಯಶಸ್ಸಿಗೆ ಹಾದಿ ಮಾಡಿಕೊಡುತ್ತದೆ.
೫. ಯಾರೂ ಪರಿಪೂರ್ಣರಲ್ಲ! ನಮ್ಮ ಹತ್ತಿರ ಬ೦ದವರನ್ನು ಅವರಲ್ಲಿರುವ ಹುಳುಕುಗಳ ಆಧಾರದ ಮೇಲೆ ದೂರ ಮಾಡುತ್ತಲೇ ಹೋದರೆ, ನಾವೂ ಜೀವನ ಪೂರ್ತಿ ಏಕಾ೦ಗಿಯಾಗಿಯೇ ಕಾಲ ಕಳೆಯಬೇಕಾದೀತು!
೬.ಜೀವನವೊ೦ದು ಪ್ರಶ್ನೆಯಾಗಿದ್ದು ಅದಕ್ಕೆ ಉತ್ತರವನ್ನು ಕ೦ಡುಕೊಳ್ಳಲು ಸಾಧ್ಯವಾಗದಿದ್ದ೦ತೆಯೇ, ಸಾವು ಒ೦ದು ಉತ್ತರವಾದರೂ ಅದನ್ನು ಯಾರೂ ಪ್ರಶ್ನಿಸಲಾಗದು!
೭. ಜೀವನದಲ್ಲಿ ಅತ್ಯ೦ತ ಪ್ರಾಶಸ್ತ್ಯವಾದ ಸ್ಥಾನವನ್ನು ಯಾರಿಗೂ ನೀಡಬಾರದು. ಆ ಸ್ಥಾನವನ್ನು ಅವರಿಗಾಗಿ  ಕಲ್ಪಿಸುವುದು ನಮಗೆ ಸುಲಭವಾದರೂ, ಅವರು ನಾವು ನೀಡಿದ ಸ್ಥಾನದ ಬೆಲೆಯನ್ನರಿಯದೇ ವರ್ತಿಸಿದಲ್ಲಿ, ಅತ್ಯ೦ತ ಹೆಚ್ಚು ದು:ಖ ಪಡುವವರು ನಾವೇ ಆಗಿದ್ದು, ಆ ಮನೋವ್ಯಾಕುಲತೆಯಿ೦ದ ಹೊರಬರುವುದು ಅತ್ಯ೦ತ ಕಷ್ಟವಾದೀತು!
೮. ನಮ್ಮ ಮಾತು ಹಾಗೂ ಭಾವನೆಗಳನ್ನು ಅತ್ಯ೦ತ ಹೆಚ್ಚು ಜಾಗರೂಕತೆಯಿ೦ದ ನಿಭಾಯಿಸಬೇಕಾಗುತ್ತದೆ.ಆಡಿದ ಮಾತು ಹಾಗೂ ಮುರಿದು ಹೋದ ಹೃದಯಗಳೆರಡನ್ನೂ ದುರಸ್ತಿಗೊಳಿಸುವುದು ಕಷ್ಟ!
೯. ಒ೦ದು ಶಾಲೆಯಲ್ಲಿ ಮಕ್ಕಳಿಗೆ ಕೇಳಲಾದ ಪ್ರಶ್ನೆ : ನಿಮ್ಮ ತ೦ದೆ ನಿಮಗೋಸ್ಕರ ಮಾಡಿದ ಉತ್ತಮ ಕಾರ್ಯ ಯಾವುದು?
   ಆ ಪ್ರಶ್ನೆಗೆ ಒ೦ದು ಅತ್ಯುತ್ತಮ ಉತ್ತರ ಹೀಗಿತ್ತು: ನನ್ನ ತ೦ದೆ ನನ್ನ ತಾಯಿಯನ್ನು ಮದುವೆಯಾದುದೇ ನನಗೋಸ್ಕರ ಮಾಡಿದ ಅತ್ಯುತ್ತಮ ಕಾರ್ಯ!
೧೦. ನಮ್ಮ ಜೀವನದಲ್ಲಿನ ಪ್ರತಿಯೊ೦ದು ಸಮಸ್ಯೆಯೂ , ನಮ್ಮ ಭವಿಷ್ಯತ್ ಜೀವನದಲ್ಲಿ ನಾವು ಪಡೆಯಬಹುದಾದ ಉತ್ತಮ ಅವಕಾಶಗಳ ಆರ೦ಭವಾಗಿರುತ್ತದೆ!
೧೧. ಕೆಲವೊ೦ದು ಕಾರಣಗಳು ಆತ್ಮೀಯತೆಯ ಮೌಲ್ಯವನ್ನು ಹೆಚ್ಚಿಸಿದರೂ, ಒ೦ದು ಉತ್ತಮ ಸ೦ಬ೦ಧವು ಯಾವುದೇ ಕಾರಣವಿಲ್ಲದೇ ಇಬ್ಬರು ವ್ಯಕ್ತಿಗಳ ನಡುವೆ ಏರ್ಪಡುತ್ತದೆ!
೧೨. ನೆನಪುಗಳು ಜಗತ್ತಿನ ಎಲ್ಲಾ ಸ೦ಬ೦ಧಗಳ ನಡುವಿನ ಒ೦ದು ಸರಪಳಿ!
೧೩. ನಾವು ಎಲ್ಲರೊ೦ದಿಗೂ ನಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು! ಆದರೆ ನಮ್ಮ ಆತ್ಮೀಯರೊ೦ದಿಗೆ ಮಾತ್ರವೇ ನಮ್ಮ ಕೋಪವನ್ನು ವ್ಯಕ್ತಪಡಿಸಬಹುದಷ್ಟೇ!
೧೪. ಜೀವನದಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕ೦ಡುಕೊಳ್ಳಲಾಗದಿದ್ದ೦ತೆಯೇ, ಎಲ್ಲವನ್ನೂ ಕೇವಲ ಪ್ರಶ್ನೆಗಳೆ೦ದು ಕೈಬಿಡಲೂ ಆಗುವುದಿಲ್ಲ!
೧೫. ಪೌರುಷವು ಬಾಯಿಬಡುಕತನದಲ್ಲಿಲ್ಲ. ಅದು ಸರಿಯಾದ ಕಾರ್ಯಗಳನ್ನು ಮಾಡುವುದರಲ್ಲಿ ಹಾಗೂ ಅದರಿ೦ದ ಉ೦ಟಾಗುವ ಸಮಸ್ಯೆಗಳನ್ನು ಎದುರಿಸುವುದರಲ್ಲಿ ಇದೆ!

Friday, December 24, 2010

ವೇದೋಕ್ತ ಜೀವನ ಪಥ: ಜೀವಾತ್ಮ ಸ್ವರೂಪ -3

     ಆ ಜೀವಾತ್ಮನ ಸ್ವರೂಪವೇನು? ವೇದ ಹೇಳುತ್ತಲಿದೆ:-


ದಂಡಾ ಇವೇದ್ ಗೋ ಅಜನಾಸ ಆಸನ್ ಪರಿಚ್ಛಿನ್ನಾ ಭರತಾ ಅರ್ಭಕಾಸಃ|
ಅಭವಚ್ಛ ಪುರ ಏತಾ ವಸಿಷ್ಠ ಆದಿತ್ ತೃತ್ಸೂನಾಂ ವಿಶೋ ಅಪ್ರಥಂತ|| (ಋಕ್. ೭.೩೩.೬)


     [ಪರಿಚ್ಛಿನ್ನಃ] ಏಕದೇಶಿಗಳೂ [ಭರತಾ] ಶರೀರಧಾರಿಗಳೂ [ಅರ್ಭಕಾಸಃ] ಅಣುಪ್ರಮಾಣರೂ ಆದ ಜೀವಾತ್ಮರು [ಗೋ ಅಜನಾಸಃ ದಂಡಾಃ ಇವ] ಗೋವುಗಳನ್ನು ಮುನ್ನಡೆಸುವ ದಂಡಗಳಂತೆ [ಗೋ ಅಜನಾಸಃ] ಇಂದ್ರಿಯಗಳು ಮತ್ತು ವಾಣಿಯನ್ನು ಸಂಚಾಲನಗೊಳಿಸುವವರು [ಆಸನ್] ಆಗಿದ್ದಾರೆ. [ವಸಿಷ್ಠಃ] ಸರ್ವಶ್ರೇಷ್ಠ ಆಧಾರ ಮತ್ತು ಆಶ್ರಯದಾತೃವಾದ ಭಗವಂತನು [ಪುರ ಏತಾ ಅಭವತ್] ಇವರ ನಾಯಕನಾಗಿದ್ದಾನೆ. [ಆತ್ ಇತ್] ಅನಂತರವೇ [ತೃತ್ಸೂನಾಮ್] ತೃಪ್ತಿಯನ್ನರಸುವ, ತೃಷಿತರಾದ ಜೀವಾತ್ಮರ [ವಿಶಃ] ಮಕ್ಕಳು [ಅಪ್ರಥಂತ] ವಿಕಸಿತರಾಗುತ್ತಾರೆ.
     ಮೊದಲಿನ ಎರಡು ಚರಣಗಳಲ್ಲಿ ಜೀವಾತ್ಮರ ಲಕ್ಷಣಗಳನ್ನು ಹೇಳಿ ಆಮೇಲೆ ವೇದವು ಜೀವಸಂತತಿ ಉತ್ಕರ್ಷ ಹೊಂದಬೇಕಾದರೆ ಭಗವಂತನ ಆದೇಶದಂತೆ ವರ್ತಿಸಬೇಕು ಎಂದು ಬೋಧಿಸುತ್ತದೆ.


     ಪರಿಚ್ಛಿನ್ನ ಚೇತನನಾದ ಜೀವಾತ್ಮನು ಬೇರೆ ಬೇರೆ ಯೋನಿಗಳಲ್ಲಿ ಜನಿಸಿ ಕ್ರಮವಾಗಿ ವಿಕಾಸ ಹೊಂದುತ್ತಾ ಹೋಗುತ್ತಾನೆ. ಪುನರ್ಜನ್ಮ ಸಿದ್ಧಾಂತ ಕೇವಲ ಒಂದು ಕುರುಡು ನಂಬಿಕೆಯಲ್ಲ. ಆತ್ಮನು ಪರಮಾತ್ಮನಿಂದ ಸೃಜಿಸಲ್ಪಟ್ಟವನು, "ಇದೇ ಮೊದಲನೆಯ  ಜನ್ಮ, ಇದೇ ಅವನ ಕೊನೆಯ ಜನ್ಮ "- ಎಂದು ಹೇಳುವ ಸಾಂಪ್ರದಾಯಿಕರಿಗೆ ಆಧ್ಯಾತ್ಮಿಕ ಜಗತ್ತಿನ ವೈಶಾಲ್ಯದ ಅರಿವೇ ಇಲ್ಲ. ಆತ್ಮನು ಅನಾದಿ-ಅನಂತ, ಅವನು ತನ್ನ ಕರ್ಮಾನುಸಾರ ಒಳ್ಳೆಯ ಅಥವಾ ಕೆಟ್ಟ ಜನ್ಮಗಳನ್ನೆತ್ತುತ್ತಾನೆ. ಪುನರ್ಜನ್ಮಕ್ಕೆ ಪ್ರತ್ಯಕ್ಷ ಪ್ರಮಾಣ ಇಲ್ಲವೆನ್ನುವವರು ಮಾನವ ಜೀವನವನ್ನೂ ಕೂಡ ತೆರೆದ ಕಣ್ಣುಗಳಿಂದ ಅವಲೋಕಿಸುವುದಿಲ್ಲ. ಒಂದೇ ಮಾತಾ-ಪಿತೃಗಳಿಂದ ಜನ್ಮ ತಾಳಿದ ಅಣ್ಣ-ತಮ್ಮಂದಿರಲ್ಲಿಯೂ, ಅಕ್ಕ-ತಂಗಿಯರಲ್ಲಿಯೂ ಕೂಡ ಸಾಮರ್ಥ್ಯ-ಅಭಿರುಚಿ ಮೊದಲಾದುವುಗಳಲ್ಲಿ ವ್ಯತ್ಯಾಸವೇಕೆ? ಕೆಲವರು ೧೦-೧೦ ಗಂಟೆ ದುಡಿದರೂ ಸಾಫಲ್ಯ ಗಳಿಸರು. ಕೆಲವರಿಗೆ ಶ್ರಮವಿಲ್ಲದಿದ್ದರೂ ಸಾಫಲ್ಯ ತಾನಾಗಿ ಒಲಿಯುವುದು. ಈ ಜೀವನದಲ್ಲಿ ಸತ್ಪ್ರವೃತ್ತಿಗಳಲ್ಲೇ ತೊಡಗಿದ್ದರೂ ನಾನಾ ರೋಗರುಜಿನಗಳಿಂದ, ಕಷ್ಟ-ಕಾರ್ಪಣ್ಯಗಳಿಂದ ನರಳುವುದು, ಇದೆಲ್ಲಾ ಏತಕ್ಕಾಗಬೇಕು? ಗಂಭೀರವಾಗಿ ಆಲೋಚಿಸಿದಾಗ ಇದೊಂದೇ ಸಾರಿಯಲ್ಲ ನಾವು ಹುಟ್ಟಿರುವುದು, ಅದೆಷ್ಟೋ ಸಾರಿ ಜನ್ಮವೆತ್ತಿ ನಾನಾ ಬಗೆಯ ಸುಸಂಸ್ಕಾರ-ಕುಸಂಸ್ಕಾರಗಳ ಬುತ್ತಿ ಕಟ್ಟಿಕೊಂಡು ಬಂದಿದ್ದೇವೆ ಎಂಬುದು ತಾನಾಗಿಯೇ ಗೊತ್ತಾಗುತ್ತದೆ. ಭಗವಂತನಂತೂ ನಿರ್ದಯ ಹಾಗೂ ಅನ್ಯಾಯಕಾರಿಯಲ್ಲ. ನಮಗೆ ಹಿಂದಿನ ಜನ್ಮಗಳ ನೆನಪಿಲ್ಲ ಎಂದ ಮಾತ್ರಕ್ಕೆ ಪುನರ್ಜನ್ಮವೇ ಇಲ್ಲವೇ? ಈ ಜನ್ಮದಲ್ಲಿಯೇ ನಾವು ಮಾಡಿದ ಅನೇಕ ಕಾರ್ಯಗಳ, ಓದಿದ ಅನೇಕ ಪಾಠಗಳ ನೆನಪಿರುವುದಿಲ್ಲ, ಅಂದ ಮಾತ್ರಕ್ಕೆ ನಾವು ಆ ಕಾರ್ಯಗಳನ್ನು ಮಾಡಿಯೇ ಇಲ್ಲವೇ? ಆ ಪಾಠಗಳನ್ನು ಓದಲೇ ಇಲ್ಲವೇ? ಪುನರ್ಜನ್ಮದ ಸಂಸ್ಕಾರ ಪ್ರಬಲವಾಗಿರುವ ಕೆಲವರಿಗೆ ಹಿಂದಿನ ಜನ್ಮದ ನೆನಪೂ ಇರುತ್ತದೆ. ಸಾಧಾರಣತಃ ಜನರಿಗೆ ಅದರ ನೆನಪಿಲ್ಲದಿರುವುದೂ ಭಗವತ್ಕೃಪೆಯೇ ಎಂದರಿಯಬೇಕು. ಏಕೆಂದರೆ, ಹಿಂದಿನ ಜನ್ಮಗಳ ನಮ್ಮ ಕಾರ್ಯಗಳೆಲ್ಲಾ ನಮಗೆ ನೆನಪಿದ್ದರೆ ಘಳಿಗೆ ಘಳಿಗೆಗೂ ಏನಾಗುವುದೋ ಎಂಬ ಭೀತಿಯೇ ಬಾಳನ್ನು ಹಾಳುಮಾಡಿಬಿಡುತ್ತಿತ್ತು.

ಕಾಮೆಂಟ್ ಬರೆಯುವಾಗ ಸಮಸ್ಯೆ

ವೇದಸುಧೆಯ ಅಭಿಮಾನಿಗಳಲ್ಲಿ ವಿನಂತಿ...

ಕಾಮೆಂಟ್ ಬರೆಯುವಾಗ  ಸರಿಯಾಗಿ ಪೋಸ್ಟ್  ಮಾಡಲು ಸಾಧ್ಯವಾಗುತ್ತಿಲ್ಲವೆಂಬ ಅಭಿಪ್ರಾಯಗಳು ನನ್ನ ಅರಿವಿಗೆ ಬಂದಿದೆ. ನಾನೂ ಕೂಡ ಸಮಸ್ಯೆಯನ್ನು ಎದುರಿಸಿದ್ದೇನೆ. ಸಮಸ್ಯೆ ಕಂಡವರು ದಯಮಾಡಿ ತಮ್ಮ ಯಾವುದೇ ಅಭಿಪ್ರಾಯವನ್ನು ವೇದಸುಧೆಗೆ ಮೇಲ್ ಮಾಡಿದರೆ ಅದನ್ನು ಸೂಕ್ತ ಪುಟದಲ್ಲಿ ಪ್ರಕಟಿಸಲಾಗುವುದು.
ವಂದನೆಗಳು
-ಶ್ರೀಧರ್