Pages

Wednesday, March 30, 2011

ಯೋಚಿಸಲೊ೦ದಿಷ್ಟು...೨೮

೧. ಪ್ರತಿಯೊ೦ದೂ ಹೃದಯವೂ ನೋವಿನ ಗೂಡೇ! ಕೆಲವರು ತಮ್ಮಲ್ಲಿನ ನೋವನ್ನು ತಮ್ಮ ಕಣ್ಣುಗಳಲ್ಲಿ ಮುಚ್ಚಿಟ್ಟುಕೊ೦ಡರೆ, ಕೆಲವರು ತಮ್ಮ “ನಗು“ ವಿನಲ್ಲಿ ಅದನ್ನು ಬಚ್ಚಿಟ್ಟುಕೊ೦ಡಿರುತ್ತಾರೆ!

೨.ಜಗತ್ತಿನ ಜನರ ದರ್ಜೆಗನುಗುಣವಾಗಿ ನಾವು ಬಾಳಲಾಗದು. ಹಾಗೆಯೇ ಅವರ ನಿರೀಕ್ಷೆಗಳಿಗೆ ತಕ್ಕ೦ತೆ ಕೂಡಾ! ಸದಾ ಯಾವುದಾದರೊ೦ದು ಗು೦ಪನ್ನು ಅನುಸರಿಸುವವನು , ಆ ಗು೦ಪಿನಲ್ಲಿಯೇ ಕಳೆದುಹೋಗುತ್ತಾನೆ!

೩.ಹೇಳಿದ ಮಾತನ್ನು ತಪ್ಪುವುದು ಬೇಡ! ಒಮ್ಮೆ ನುಡಿದ ಮಾತನ್ನು ಹೇಗಾದರೂ ಪಾಲಿಸಲೇ ಬೇಕು!

೪.ಸಮಯವು ನಮ್ಮನ್ನು ಕಾಯುವುದಿಲ್ಲವೆ೦ಬ ಅರಿವಿದ್ದರೂ “ ಸರಿಯಾದ ಸಮಯ“ ಕ್ಕೆ ಕಾಯುವುದು ಏಕೆ? ಎಲ್ಲಾ ಸಮಯವೂ ಸರಿಯಾದದ್ದೇ! ನಮ್ಮ ಗುರಿ ಸಾಧಿಸುವೆಡೆಗಿನ ಮತ್ತು ಕಾಲದೊ೦ದಿಗಿನ ಪಯಣದ “ತಯಾರಿ“ ಸರಿಯಾಗಿರಬೇಕಷ್ಟೇ!

೫.ಪ್ರತಿದಿನವೂ ಹೊಸ- ಹೊಸ “ನಿರೀಕ್ಷೆ“ ಗಳು ಹಾಗೂ “ನಿರಾಶೆ“ ಗಳೊ೦ದಿಗೆ ಆರ೦ಭವಾದರೂ, ಹೊಸ “ಅನುಭವ“ ಮತ್ತು ನಾಳೆಯ ಬಗ್ಗೆಗಿನ‘ ಮತ್ತಷ್ಟು ಹೊಸ “ಕನಸು“ಗಳೊ೦ದಿಗೆ ಅ೦ತ್ಯಗೊಳ್ಳುತ್ತದೆ!

೬.ಸದಾ “ಹುಡುಗಾಟ“ ವಾಡುತ್ತಲೇ ಕಾಲದೊ೦ದಿಗೆ ನಾವು ಆಟವಾಡುತ್ತಿದ್ದರೆ, ನಾವು ಗ೦ಭೀರವಾಗಿ ಜೀವನವೆನ್ನುವುದರ ಬಗ್ಗೆ ಚಿ೦ತಿಸತೊಡಗಿದಾಗ ಕಾಲವೆ೦ಬುದು ನಮ್ಮೊ೦ದಿಗೆ “ಹುಡುಗಾಟ“ ವಾಡಲು ಆರ೦ಭಿಸಿರುತ್ತದೆ!

೭. ಏನನ್ನೂ ಯೋಚಿಸದೆ ಸಮಸ್ಯೆಗಳೊ೦ದಿಗೆ ಎಡತಾಕುವುದರಿ೦ದಲೂ, ಯೋಚಿಸಿಯೂ ಅದಕ್ಕೆ ತಕ್ಕ೦ತೆ ಹೋರಾಡದಿದ್ದುದ ರಿ೦ದ ಲೂ ನಮ್ಮ ಸಮಸ್ಯೆಗಳು ನಮಗೆ ಸದಾ ಬಿಡಿಸಲಾರದ ಕಗ್ಗ೦ಟಾಗಿಯೇ ಗೋಚರಿಸುತ್ತವೆ!

೮. ನಮ್ಮ ಉತ್ತಮ ಜೀವನಕ್ಕಾಗಿ ಯಾವುದನ್ನು ಬೇಕಾದರೂ ಕಳೆದುಕೊಳ್ಳಲು ಸಿಧ್ಧರಾಗಬೇಕೆ ವಿನ, ಯಾವುದೋ ಒ೦ದಕ್ಕಾಗಿ ನಮ್ಮ ಉತ್ತಮ ಜೀವನವನ್ನಲ್ಲ!

೯. ಯಾರನ್ನಾದರೂ ತಪ್ಪು ತಿಳಿದುಕೊಳ್ಳುವುದು ಬಲು ಸುಲಭ! ಆದರೆ ನಾವು ಅವರನ್ನು “ತಪ್ಪು ತಿಳಿದುಕೊ೦ಡಿದ್ದೇವೆ‘ ಎ೦ದು ತಿಳಿದುಕೊಳ್ಳುವುದು ಬಲು ಕಷ್ಟದ ಕೆಲಸ!

೧೦. ನಮ್ಮ ಸಮಸ್ಯೆಗಳ ಬಗ್ಗೆ ಸುಮ್ಮನೆ ಕೇಳಿ ತಿಳಿದುಕೊಳ್ಳುವ ಹಾಗೂ ಅವುಗಳ ಬಗ್ಗೆ ಸುಮ್ಮನೇ ವಿಮರ್ಶಿಸುವ ಜನರೇ ಹೆಚ್ಚಾಗಿದ್ದು, ನಿಜವಾಗಿಯೂ ನಮ್ಮ ಸಮಸ್ಯೆಗಳ ಬಗ್ಗೆ ಸ್ಪ೦ದಿಸುವ ಮನೋಭಾವವನ್ನು ಹೊ೦ದಬಲ್ಲವರು ಕೆಲವರು ಮಾತ್ರ!

೧೧. ಮಾಡಿದ ತಪ್ಪುಗಳ ಬಗ್ಗೆ ಚಿ೦ತಿಸುತ್ತಾ ಕಾಲ ಕಳೆಯುವ ಬದಲು ತಪ್ಪುಗಳನ್ನು ಮೆಟ್ಟಿಲುಗಳನ್ನಾಗಿಸಿಕೊ೦ಡು ವಿಜಯದ ಶಿಖರ ತಲುಪುವುದೇ ಸಾಧಕನ ಲಕ್ಷಣ!

೧೨. ನೋವು ಎ೦ಬುದು ಚ೦ದಿರನ೦ತೆ! ಒಮ್ಮೆ ಅದೃಶ್ಯವಾದರೆ ಮತ್ತೊಮ್ಮೆ ಗೋಚರಿಸುತ್ತದೆ, ಒಮ್ಮೆ ಸ೦ಪೂರ್ಣವಾಗಿ ಕ೦ಡರೂ ಮತ್ತೊಮ್ಮೆ ಕಾಣಿಸಿಕೊಳ್ಳುವುದೇ ಇಲ್ಲ!

೧೩. ಸೋಮಾರಿತನವೇ ನಮ್ಮ ಅತಿ ದೊಡ್ಡ ಶತ್ರು!- ಸ್ವಾಮಿ ವಿವೇಕಾನ೦ದ

೧೪. “ಸ್ನೇಹ“ ವನ್ನು ಅನುಭವಿಸುವುದೆ೦ದರೆ, ಜೀವನಾನ೦ದಕ್ಕೆ ನಮಗೆ ದೇವರು ನೀಡಿದ ಬಲು ದೊಡ್ದ “ಆಶೀರ್ವಾದ“!

೧೫. ಪ್ರತಿಯೊ೦ದು ಸ೦ಬ೦ಧವೂ ಒ೦ದು “ಕನ್ನಡಿ“ ಇದ್ದ೦ತೆ ! ಯಾವ ಭಾಗದಲ್ಲಿ ಗುರುತಾದರೂ ಅದು ಮತ್ತೊ೦ದು ಭಾಗವನ್ನೂ ಹಾನಿಗೊಳಿಸುತ್ತದೆ!

ಗಮನಿಸಿ-ಸಹಕರಿಸಿ

ನಿತ್ಯ ಜೀವನಕ್ಕೆ ಉಪಯುಕ್ತವಾದ ಯಾವುದೇ ವೇದಮಂತ್ರಗಳು ಮತ್ತು ಅದರ  ಅರ್ಥ ಮತ್ತು ವಿವರಣೆಯನ್ನು ಯಾರೇ ಅಭಿಮಾನಿಗಳು ಲೇಖನ ರೂಪವಾಗಿ ಬರೆದು ವೇದಸುಧೆಗೆ ಕಳುಹಿಸಿಕೊಟ್ಟರೆ ಕೃತಜ್ಞತಾಪೂರ್ಕವಾಗಿ ಪ್ರಕಟಿಸಲಾಗಿವುದು.

Tuesday, March 29, 2011

ಗೃಹಪ್ರವೇಶ ಮಾಡಿಕೊಳ್ಳಲು ವೇದೋಕ್ತ ವಿಧಾನ ಹೇಗೆ?

ಗೃಹಪ್ರವೇಶ ಮಾಡಿಕೊಳ್ಳಲು ವಾಸ್ತು ಹೋಮ/ಗಣಪತಿ ಹೋಮಗಳು ಅನಿವಾರ್ಯವೇ? ಅಥವಾ ವೇದೋಕ್ತವಾಗಿ ಗೃಹಪ್ರವೇಶ ಮಾಡಿಕೊಳ್ಳಲು ವೇದೋಕ್ತ ವಿಧಾನ ಹೇಗೆ? ದಯಮಾಡಿ ತಿಳಿಸುವಿರಾ? 
-ಶ್ರೀಧರ್
----------------------------------------------------------
 ಶ್ರೀ ಶ್ರೀಧರ್ ಜೀ!
ವೇದೋಕ್ತ ರೀತ್ಯಾ ಗೃಹಪ್ರವೇಶ ಮಾಡಿಸುವ ಕ್ರಮವಿದೆ. ಅದನ್ನು "ಶಾಲಾಕರ್ಮ ವಿಧಿ' ಎಂದು ಕರೆಯಲಾಗುತ್ತದೆ. ಅಗ್ನಿಹೋತ್ರವು ಅದರ ಪ್ರಧಾನ ಅಂಗ. ಅದರಲ್ಲಿ ವಾಸ್ತುಹೋಮ ಖಂಡಿತವಾಗಿ ಇರುತ್ತದೆ.
ಅದರ ನಿಜವಾದ ಅರ್ಥ ಆ ಸಂದರ್ಭದಲ್ಲಿ ವಿವರಿಸಲಾಗುವುದು.  ಅದರ ಸ್ವಲ್ಪ ಭಾಗ "ವಾಸ್ತು ಬೀಳದಿರಿ ಬೇಸ್ತು" ಪುಸ್ತಕದಲ್ಲಿದೆ.
              ಇಲ್ಲಿ ಇದುವರೆಗೂ ಬಂದ ಆಚರಣೆಗಳನ್ನು ಬಿಡುವ ಪ್ರಶ್ನೆಯಲ್ಲ ಇರುವುದು.  ಆ ಆಚರಣೆಗಳಲ್ಲಿ ಅರ್ಥವಿರುವುದನ್ನು ತಿಳಿದು ಮಾಡುವುದು ಮತ್ತು ಅರ್ಥವಿಲ್ಲದ್ದನ್ನು ಬಿಡುವುದು ಅಷ್ಟೇ.  ಅರ್ಥವಿಲ್ಲದ ಆಚರಣೆಗಳಿಂದ   ನಾವು ನಮ್ಮ ಸಾಮಾನ್ಯ ತಿಳಿವಳಿಕೆಗೂ ಅವಮಾನ ಮಾಡುತ್ತಿರುತ್ತೇವೆ.
ಈ ಬದಲಾವಣೆಯನ್ನು ಈ ವಿಷಯಗಳಿಗೆ ಇಷ್ಟಾದರೂ ತೆರೆದುಕೊಂಡಿರುವ ನಾವು, ನಮ್ಮ ಕುಟುಂಬವರ್ಗದವರೂ ಸಹಕರಿಸದಿದ್ದರೆ, ಸಾಮಾಜಿ ಸುಧಾರಣೆ ಆಗುವುದಾದರೂ ಎಂತು?
ನಿಮ್ಮ ಕುಟುಂಬವರ್ಗದವರ ಸಮಾಧಾನಕ್ಕಾಗಿ ಬೇಕಾದರೆ 'ಗಣಪತಿ' ಪೂಜೆಯನ್ನೂ ಮಾಡಬಹುದು.  (ವೇದೋಕ್ತ ಗಣಪತಿ ಬೇರೆ, ರೂಢಿಯ ಗಣಪತಿ ಬೇರೆ.  ಆ ಬಗ್ಗೆ ಅಲ್ಲಿ ಆಗ ವಿವರಣೆ ನೀಡಿದರೆ ಆಯಿತು.)
ಅವರ ಸಮಾಧಾನಕ್ಕಾಗಿ ಸತ್ಯನಾರಾಯಣ ಪೂಜೆ = ಸತ್ಯನಾರಾಯಣ ಯಜ್ಞವನ್ನೂ ಮಾಡೋಣ. ಅದಕ್ಕೇನಂತೆ.
ಹಿಂದೊಮ್ಮೆ ವೈದಿಕ ಸತ್ಯನಾರಾಯಣ ಪೂಜೆಯನ್ನು ಪುತ್ತಿಗೆ ಸ್ವಾಮೀಜಿಯವರ ಸಾನ್ನಿದ್ಧ್ಯದಲ್ಲಿ ಮಾಡಿರುತ್ತೇನೆ.  ಸಣ್ಣ ವ್ಯತ್ಯಾಸ.  ಫೋಟೋ ಬದಲಿಗೆ ಯಜ್ಞ.  ನಿಜವಾಗಿ ಸತ್ಯಕ್ಕೆ ಸಂಬಂಧಪಟ್ಟ ವೈದಿಕ ಮಂತ್ರಗಳ ವಿನಿಯೋಗ ಅಷ್ಟೇ.  ಎಲ್ಲವೂ ಅರ್ಥಸಹಿತವಾದ್ದರಿಂದ ಇವುಗಳ ಶ್ರೇಷ್ಠತೆ ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರ ಮನಸ್ಸನ್ನೂ ಸೂರೆಗೊಳ್ಳುವುದು ಖಚಿತವೆಂದು ಹಿಂದಿನ ಅನುಭವಗಳ ಆಧಾರದ ಮೇಲೆ ಹೇಳಬಹುದು.  (ನಿಜ.  ಹಿಂದೆ ಆಗಿದೆ ಎಂದ ಮೇಲೆ ಈ ಸಲವೂ ಆಗುತ್ತದೆಂಬ ಖಾತರಿ ಇಲ್ಲ. ಆದರೆ ಖಂಡಿತವಾಗಿಯೂ ಸಾಧ್ಯತೆ ಹೆಚ್ಚಿದೆ.  ಶುದ್ಧ ಮನಸ್ಸಿನಿಂದ ಪ್ರಯತ್ನಿಸೊಣ.) 
-ಸುಧಾಕರ ಶರ್ಮಾ.

Monday, March 28, 2011

ಸಾರ್ಥಕಪಡಿಸಿಕೊಳ್ಳೋಣ

ವೇದಸುಧೆಯ  ಅಭಿಮಾನಿಗಳೇ,
ಈಗಾಗಲೇ ಹಲವು ಭಾರಿ ವೇದಸುಧೆಯ ಉದ್ಧೇಶವನ್ನು ತಿಳಿಸಿದ್ದಾಗಿದೆ. ಬಹುಶ: ಇಂದಿನ ದಿನಗಳಲ್ಲಿ ಇದು ಒಂದು ವಿಶಿಷ್ಟ ಪ್ರಯೋಗ.  ಹಲವು ನೂರು ವರ್ಷಗಳಿಂದ ನಾವು ಅನುಸರಿಸಿಕೊಂಡುಬಂದಿರುವ ಪೂಜಾಪದ್ದತಿಗಳಬಗೆಗಾಗಲೀ ವ್ರತಕಥೆಗಳಬಗೆಗಾಗಲೀ, ಆಚಾರಪದ್ದತಿಗಳ ಬಗೆಗಾಗಲೀ ನಮಗೆ ಪ್ರಶ್ನೆಮಾಡಿಯೇ ಗೊತ್ತಿಲ್ಲ.ಅರ್ಥವನ್ನು ಹೇಳಿಕೊಟ್ಟವರಿಲ್ಲ.  ಗುರುವಿನ ಮೂಲ, ಋಷಿಯ ಮೂಲ, ನದಿಯಮೂಲವನ್ನು ಹುಡುಕಬಾರದೆಂಬ[ಕೆದಕಬಾರದೆಂಬ] ದೊಡ್ದವರೆನಿಸಿಕೊಂಡವರ ಮಾತನ್ನು ಇದುವರೆವಿಗೂ ಚಾಚೂತಪ್ಪದೆ ಪಾಲಿಸಿಕೊಂಡುಬಂದ ಪರಿಣಾಮವಾಗಿ ಎಲ್ಲಾ ಕ್ಷೇತ್ರದಲ್ಲೂ ಅನೀತಿ ತಾಂಡವವಾಡುತ್ತಿರುವುದನ್ನು ಯಾರೂ ಗಮನಿಸಬಹುದಾಗಿದೆಯಲ್ಲವೇ? ನಮ್ಮ ಸುದೈವಕ್ಕೆ ಸುಧಾಕರಶರ್ಮರಂತಹವರು ವೇದದ ಅರ್ಥವನ್ನು ತಿಳಿಸುತ್ತಾ ನಿಜವಾದ ಭಗವಂತನ ಅಸ್ತಿತ್ವವನ್ನು ವೇದದ ಆಧಾರದಲ್ಲಿ ಪ್ರತಿಪಾದಿಸುತ್ತಾ ನಮಗೆ ಒಂದು ಉತ್ತಮ ಮಾರ್ಗವನ್ನು ತೋರಿಸುತ್ತಿದ್ದಾರೆ. ನಮಗೆ ನಿಜವಾಗಿ ಅಡ್ಡಿಯಾಗುತ್ತಿರುವ ಆಚರಣೆಗಳಬಗೆಗೆ ಅಂತಹವರಿಂದ ತಿಳಿದುಕೊಳ್ಳಲು ಅವಕಾಶವಿದೆ. ಸಾರ್ಥಕಪಡಿಸಿಕೊಳ್ಳೋಣ.

ಶ್ರೀ ಸುಧಾಕರಶರ್ಮರ ಪ್ರತಿಕ್ರಿಯೆ

ಶ್ರೀ ಮಂಜುನಾಥಶರ್ಮರ ಪ್ರಶ್ನೆಗಳಿಗೆ ಶ್ರೀ ಸುಧಾಕರಶರ್ಮರು ಅಭಿಮತ ಪುಟದಲ್ಲಿ ನೀಡಿರುವ ಪ್ರತಿಕ್ರಿಯೆಯನ್ನು ಇಲ್ಲಿ ಪ್ರಕಟಿಸಲಾಗಿದೆ. ಪ್ರಶ್ನೆಯನ್ನು ಯಾರೇ ಆಗಲೀ ದಯಮಾಡಿ ತಮ್ಮ ಈ ಮೇಲ್ ವಿಳಾಸವನ್ನು ಕೊಟ್ಟು ವೇದಸುಧೆಯೊಡನೆ ಸಂಪರ್ಕದಲ್ಲಿದ್ದರೆ ಒಳ್ಳೆಯದು, ಇನ್ನು ಮುಂದೆ ಈ ಮೇಲ್ ವಿಳಾಸವಿಲ್ಲದೆ ಅನಾನಿಮಸ್ ಹೆಸರಿನಲ್ಲಿ ಕೇಳಿದ ಪ್ರಶ್ನೆಗಳನ್ನು ಗಮನಿಸಲಾಗುವುದಿಲ್ಲವೆಂದು ಅನಿವಾರ್ಯವಾಗಿ ಹೇಳಬೇಕಾಗಿದೆ. ಕಾರಣ ಶ್ರೀ ಮಂಜುನಾಥಶರ್ಮರಿಗೆ ತಮ್ಮ ಈ ಮೇಲ್ ವಿಳಾಸವನ್ನು ನೀಡಲು ವಿನಂತಿಸಿದ್ದರೂ ಈವರಗೆ ವೇದಸುಧೆಗೆ ತಮ್ಮ ಈ ಮೇಲ್ ವಿಳಾಸವನ್ನು ನೀಡಿರುವುದಿಲ್ಲ. ಅಥವಾ ಅವರು ವೇದಸುಧೆಯಲ್ಲಿ ಪ್ರಶ್ನೆಯನ್ನು ಕೇಳಿದನಂತರ ವೇದಸುಧೆಗೆ  ಪುನ: ಭೇಟಿನೀಡಿದ್ದರೋ ಇಲ್ಲವೋ ತಿಳಿಯದು. ಈಗಲಾದರೂ ದಯಮಾಡಿ ಶ್ರೀ ಮಂಜುನಾಥಶರ್ಮರು ತಮ್ಮ ಈಮೇಲ್ ವಿಳಾಸವನ್ನು ನೀಡಲು ಕೋರಿಕೆ.
---------------------------------------------------------               
 ಶ್ರೀ ಸುಧಾಕರಶರ್ಮರಿಗೆ ನಮಸ್ಕಾರಗಳು
ಕಳೆದ ಐದಾರು ತಿಂಗಳುಗಳಿಂದ ನಿಮ್ಮ ಧ್ವನಿಯಲ್ಲಿ ಹಲವು ಪ್ರವಚನಗಳನ್ನು ಕೇಳಿದ್ದೇನೆ. ಈ ಅವಕಾಶವನ್ನು ಕಲ್ಪಿಸಿಕೊಟ್ಟ ವೇದಸುಧೆಗೂ ಮತ್ತು ನಿಮಗೂ ಕೃತಜ್ಞತೆಗಳು.
ವೇದ ಮಂತ್ರಗಳ ಬಗ್ಗೆ ನಿಮ್ಮ ಸರಳವಾದ ವಿವರಣೆಯಿಂದ ಜೀವನ ಕ್ರಮವೇ ಒಂದು ಯಜ್ಞವಾಗಿರಬೇಕೆಂಬುದನ್ನು ನಾನು ಒಪ್ಪುತ್ತೇನೆ. ಹಲವು ಪ್ರವಚನಗಳಲ್ಲಿ ವೇದಮಂತ್ರಗಳನ್ನು ಕಲಿಯಲು ಜಾತಿಯಾಗಲೀ ಲಿಂಗವಾಗಲೀ ಆಡ್ದಬರುವುದಿಲ್ಲ ಎಂಬುದನ್ನು ಒತ್ತುಕೊಟ್ಟು ಆಧಾರಸಹಿತವಾಗಿ ಹೇಳಿದ್ದೀರಿ. ಧನ್ಯವಾದಗಳು.
ಒಂದು ಸಂದೇಹ ನನಗೆ ಕಾಡುತ್ತಿದೆ. ನನಗೆ ವೇದಮಂತ್ರಗಳನ್ನು ಸ್ವರಸಹಿತವಾಗಿ ಕಲಿಯಬೇಕೆಂಬ ಆಸೆ ಇದೆ. ಆದರೆ ನನಗೀಗಾಗಲೇ ಅರವತ್ತು ವರ್ಷ ವಯಸ್ಸು. ನಾಲ್ಕು ವೇದವನ್ನು ಸಂಪೂರ್ಣವಾಗಿ ಈ ಜನ್ಮದಲ್ಲಿ ನನಗೆ ಕಲಿಯಲು ಸಾಧ್ಯವಿಲ್ಲವೆಂಬ ಅರಿವಿದೆ. ಆದರೆ ನಾಲ್ಕೂ ವೇದಗಳನ್ನು ಅಧ್ಯಯನಮಾಡಿರುವ ಹಲವರು ನಿಮ್ಮೊಡನಿರಬಹುದು. ನೀವೂ ಕೂಡ ಅಧ್ಯಯನ ಮಾಡಿರಬಹುದು.ನಿಮ್ಮಂತವರು ಆಯ್ದ ವೇದಮಂತ್ರಗಳ ಒಂದು ಚಿಕ್ಕ ಪುಸ್ತಕವನ್ನು ನಮ್ಮಂತವರಿಗೆ ಏಕೆ ಕೊಡಬಾರದು? ಅದರಲ್ಲಿ ನಾಲ್ಕೂ ವೇದಗಳಿಂದ ಆಯ್ದ ಕೆಲವು ವೇದಮಂತ್ರಗಳನ್ನು ಮುದ್ರಿಸಿ ಅದಕ್ಕೆ ಅರ್ಥ ಮತ್ತು ವಿವರಣೆಯನ್ನು ಕೊಡಬಾರದೇಕೆ? ವೇದದ ಹೆಸರಲ್ಲಿ ಸಾವಿರ ಪುಟಗಳ ಗ್ರಂಥಗಳನ್ನು ಪ್ರಕಟಿಸಿದರೆ ಅದನ್ನು ಮನೆಯಲ್ಲಿಟ್ಟು ಪೂಜಿಸಬಹುದು ಅಷ್ಟೆ. ನೀವೇ ಹೇಳುವಂತೆ ಗ್ರಂಥಗಳಿರುವುದು ಅಧ್ಯಯನಕ್ಕೆ ಪೂಜೆ ಮಾಡಲು ಅಲ್ಲ. ಹಾಗಾದರೆ ನಿಮ್ಮಂತವರು ನಮಗೆ ದಾರಿ ತೋರಿಸಬೇಡವೇ? ಮತ್ತೊಂದು ವಿಚಾರ. ಹಲವು ಕಡೆ ನೀವು ನಮ್ಮ ಪೂರ್ವದಿಂದ ಬಂದಿರುವ ಪೂಜಾಪದ್ದತಿಯಬಗ್ಗೆ ಹಗುರವಾಗಿ ಮಾತನಾಡಿದ್ದೀರಿ. ಉಧಾಹರಣೆಗೆ ಹೇಳಬೇಕೆಂದರೆ "ಆಗಮಾರ್ಥಂತು ದೇವಾನಾಂ" ಮಂತ್ರದ ಬಗ್ಗೆ . ಎಲ್ಲ ಕಡೆ ದೇವರು ಇರುವುದು ಸತ್ಯವಾದರೂ ನಮ್ಮ ಕಾನ್ಸೆಂಟ್ರೇಶನ್ ಗೋಸ್ಕರ ಅವನನ್ನು ಒಂದು ಕಡೆ ಊಹಿಸಿಕೊಂಡರೆ ಆಗುವ ನಷ್ಟವಾದರೂ ಏನು? ನೀವು ಇನ್ನು ನೂರು ವರ್ಷ ವಾದಮಾಡಿದರೂ ನಮ್ಮಲ್ಲಿ ಚಾಲ್ತಿಯಲ್ಲಿರುವ ಪೂಜಾ ಪದ್ದತಿಯನ್ನು ನಮ್ಮಂತವರು ಬಿಡಲು ಸಾಧ್ಯವಿಲ್ಲ. ನಮಗೆ ನಿಮ್ಮ ವಿಚಾರದಲ್ಲಿ ಪ್ರೀತಿ ಇದ್ದರೂ ದೇವಾಲಯ,ದೇವರ ವಿಗ್ರಹ -ಈ ವಿಚಾರದಲ್ಲಿ ನಿಮ್ಮ ಖಂಡನೆಯನ್ನು ನಾನಲ್ಲಾ ನನ್ನಂತಹ ಯಾರೂ ಒಪ್ಪುವುದಿಲ್ಲ. ಒಂದು ವೇಳೆ ಎಲ್ಲಾ ತೊರೆದು ನಿಮ್ಮೊಡನೆ ಇರುತ್ತೇವೆಂದು ಯಾರಾದರೂ ಹೊರಟರೆ ಆ ಸಂಖ್ಯೆ ಪ್ರತಿಶತ ೧ ಕೂಡ ಆಗುವುದಿಲ್ಲ. ಆದ್ದರಿಂದ ವ್ಯರ್ಥವಾಗಿ ನೀವು ನಮ್ಮಂತವರ ಮನಸ್ಸಿಗೆ ಅಹಿತಮಾಡುವುದನ್ನು ಬಿಟ್ಟರೆ ನಿಮ್ಮ ಉಳಿದೆಲ್ಲಾ ವಿಚಾರವನ್ನೂ ಒಪ್ಪುವವರ ಸಂಖ್ಯೆ ಹೆಚ್ಚುವುದರಲ್ಲಿ ಸಂಶಯವಿಲ್ಲ. ಜಾತಿಯ ಬಗೆಗೆ ನಿಮ್ಮ ವಿವವರಣೆಯಿಂದ ಬಲು ಸಂತೋಷವಾಗಿದೆ. ಹೋಮದಲ್ಲಿ ಅನಗತ್ಯವಾಗಿ ಸುಡುವ ರೇಶ್ಮೆ ಹಾಗೂ ಇನ್ನಿತರ ಬೆಲೆ ಬಾಳುವ ವಸ್ತುಗಳ ಬಗ್ಗೆ ನಿಮ್ಮ ವಿಚಾರದಲ್ಲಿ ನನ್ನ ಒಪ್ಪಿಗೆ ಇದೆ. ಹಿಂಸೆಯ ವಿರೋಧಕ್ಕೆ ಸಮ್ಮತಿ ಇದೆ.ಆದರೆ ಸಸ್ಯಾಹಾರಿಗಳಾಗಿದ್ದರೆ ಮಾತ್ರ ಉಪನಯನ ಸಾಧ್ಯವೆಂದು ತಿಳಿಸಿದ್ದೀರಿ. ಇದೂ ಕೂಡ ಪ್ರಾಕ್ಟಿಕಲ್ ಅಲ್ಲ. ಇದರಿಂದ ಪುನ: ನೀವು ಒಂದು ವರ್ಗವನ್ನು ದೂರ ಇಡುವ ಹುನ್ನಾರ ಮಾಡಿದ್ದೀರಿ. ನನ್ನ ಮಾತಿನಲ್ಲಿ ನಿಮ್ಮ ಬಗ್ಗೆ ಮೆಚ್ಚುಗೆಯೂ ಇದೆ. ಅದೇ ವೇಳೆ ನಿಮ್ಮ ಬಗ್ಗೆ ಕನಿಕರವೂ ಇದೆ. ಕನಿಕರ ಏಕೆಂದರೆ ನಾನು ಒಪ್ಪದ ಹಲವು ವಿಚಾರ ತಿಳಿಸಿದ್ದೀನಲ್ಲಾ, ಅವುಗಳಿಂದಲೇ ನಿಮ್ಮ ಏಳ್ಗೆಗೆ ಅಡ್ಡಿಯಾಗುತ್ತವಲ್ಲಾ! ಸ್ವಲ್ಪ ಲಿಬರಲ್ ಆಗಿ ನೀವು ಯೋಚಿಸಬೇಡವೇ? ಎಲ್ಲದಕ್ಕೂ ವೇದವೇ ಅಂತಿಮ ವೆನ್ನುತ್ತೀರಿ. ಇರಲಿ. ಆದರೆ ವಿಶ್ವದ ಶಾಂತಿಗಾಗಿ ನೂರಾರು ಜನ ಮಹನೀಯರು ಅವರದೇ ಆದ ರೀತಿಯಲ್ಲಿ ಕಾಣಿಕೆ ನೀಡುತ್ತಿದ್ದಾರೆ. ಸಂಗೀತದ ಕ್ಷೇತ್ರವನ್ನೇ ತೆಗೆದುಕೊಳ್ಳಿ, ಶಾಸ್ತ್ರೀಯ ಸಂಗೀತದಿಂದ ಸಿಗುವ ನೆಮ್ಮದಿ ನನಗೆ ಸಾಕು. ನೀವು ಅದನ್ನು ಸಾಮವೇದ ಎನ್ನುತ್ತೀರೇನೋ. ಇರಲಿ. ಆದರೆ ವೇದಕ್ಕೆ ಹೊರತಾದ ಹಲವು ಸಂಗತಿಗಳು ಇಂದಿನ ಜಗತ್ತಿಗೆ ನೆಮ್ಮದಿನೀಡಬಲ್ಲವು. ಮತ್ತೊಮ್ಮೆ ಅಗತ್ಯವೆನಿಸಿದರೆ ವಿವರವಾಗಿ ಬರೆಯುವೆ. ಈಗ ಇಷ್ಟು ಸಾಕು. ನಿಮ್ಮ ಸಮಝಾಯಿಶಿ ಬೇಕು.
- ಮಂಜುನಾಥಶರ್ಮ 
------------------------------------------------------
 ಶ್ರೀ ಸುಧಾಕರಶರ್ಮರ ಪ್ರತಿಕ್ರಿಯೆ
.
ನಾಲ್ಕೂ ವೇದಗಳಿಂದ ಆಯ್ದ ನೂರು ನೂರು ಮಂತ್ರಗಳ (ಒಟ್ಟು 400 ಮಂತ್ರಗಳು) ಪುಸ್ತಕ `ವೇದಜ್ಯೋತಿ' ಎಂಬ ಹೆಸರಿನಲ್ಲಿ ಕನ್ನಡದಲ್ಲಿ ಪ್ರಕಟವಾಗಿದೆ. ಪ್ರತಿಗಳು ಮುಗಿದಿರುವುದರಿಂದ ಪುನಃ ಮುದ್ರಣ ಮಾಡುವ ಸಿದ್ಧತೆ ನಡೆಯುತ್ತಿದೆ. ಆದಾಗ ತಿಳಿಸಲಾಗುವುದು. ವಯಸ್ಸಿನ ಚಿಂತೆ ಮಾಡದೇ ಇಂದಿನಿಂದಲೇ ವೇದಾಧ್ಯಯನ ಪ್ರಾರಂಭಿಸಿ. ನಮ್ಮ ಸಾಧನೆಯು ಸಂಸ್ಕಾರರೂಪದಲ್ಲಿ ನಮ್ಮೊಂದಿಗೆ ಮುಂದಿನ ಜನ್ಮಗಳಿಗೂ ಬರುವದರಿಂದ ನಷ್ಟವೇನಿಲ್ಲ! ಹಿಂದಿನಿಂದ ಬಂದಿರುವ ಪೂಜಾಪದ್ಧತಿಯ ಬಗ್ಗೆ ಹಗುರವಾಗಿ ಮಾತನಾಡಿದ್ದೇನೆಂದು ಪ್ರತಿಕ್ರಿಯೆ ನೀಡಿದ್ದೀರಿ. ನಿಮ್ಮ ಮುಕ್ತ ಪ್ರತಿಕ್ರಿಯೆಗೆ ಮೊದಲು ಧನ್ಯವಾದಗಳು. ಯಾವುದೇ ಆದಾರವಿಲ್ಲದೇ, ನಮ್ಮ ವೈಯಕ್ತಿಕ ಅಭಿಪ್ರಾಯದಿಂದ ಪ್ರೇರಿತರಾಗಿ, ಅದರ pros and cons ಏನು ಎಂಬುದರ ಬಗ್ಗೆ ನಿರ್ಲಕ್ಷ್ಯದಿಂದ ಮಾತನಾಡುವುದನ್ನು `ಹಗುರ' ಎಂದು ತಿಳಿಯಬಹುದೇ? ನಾನಾಡಿದ ಮಾತುಗಳು ಅತ್ಯಂತ ಗಂಭೀರ, ಖಂಡಿತರಾಗಿಯೂ ಹಗುರವಲ್ಲ. ದೇವಾನುದೇವತೆಗಳು, ಅವುಗಳಿಗೆ ಚಿತ್ರ-ವಿಚಿತ್ರ ಆಕಾರಗಳ ಕಲ್ಪನೆ, ವಿಧ-ವಿಧವಾದ ಪೂಜಾವಿಧಾನಗಳು (ಕುರಿ-ಕೋಳಿ ಕತ್ತರಿಸುವವರೆಗೂ) ಹುಟ್ಟಿಕೊಂಡು ಒಂದಾಗಿರಬೇಕಾಗಿದ್ದ ಮಾನವ ಸಮಾಜ ಒಡೆದು ಚೂರಾಗಿರುವುದು ಕಾಣುತ್ತಿಲ್ಲವೇ ಸ್ವಾಮಿ! ಇವುಗಳ ಹೆಸರಿನಲ್ಲಿ ಇಂದಿನವರೆಗೂ ನಿರಂತರವಾಗಿ ನಡೆಯುತ್ತಿರುವ ಸಂಘರ್ಷ, ಶೋಷಣೆ, ರಕ್ತಪಾತಗಳು ಸಾಲದೇ?! ನೀವೇನೋ ಸಾತ್ವಿಕ ಪೂಜಕರಿರಬಹುದು, ಆದರೆ ವೇದವಿರುದ್ಧವಾದ, ಮಾನವೀಯತೆಯನ್ನು ಒಳಗೊಳ್ಳದ, ಜ್ಞಾನಕ್ಕೆ ಜಾಗವಿಲ್ಲದ ಮೌಢ್ಯ ಆಚರಣೆಗಳನ್ನು ತಿರಸ್ಕರಿಸದೇ ವಿಧಿಯಿಲ್ಲ. ಹಾಗೆ ಮಾಡದೇ ಹೋದರೆ, ಮತ್ತೊಬ್ಬರ ಹಾನಿಕಾರಕ, ಅಮಾನವೀಯ ಪೂಜಾವಿಧಾನಗಳಿಂದ ಸಮಾಜವನ್ನು ರಕ್ಷಿಸುವುದಾದರೂ ಹೇಗೆ? ಇಲ್ಲಿ ನಮ್ಮ ಕರ್ತವ್ಯವೇನೂ ಇಲ್ಲವೇ? `ಆಗಮಾರ್ಥಂತು ದೇವಾನಾಂ ..' ವೇದಮಂತ್ರವಲ್ಲ! ನಾಲ್ಕೂ ವೇದಗಳಲ್ಲಿ ಎಲ್ಲಿಯೂ ಇಲ್ಲ!! ಸಂಸ್ಕೃತದಲ್ಲಿ ಯಾರೋ ಮಾಡಿರುವ ಅವೈಜ್ಞಾನಿಕ ಶ್ಲೋಕ. ದೇವ ಎಂದಾಗ ಭಗವಂತನೆಂದು ಗ್ರಹಿಸುವುದಾದರೆ ಆ ಭಗವಂತನು ಸರ್ವವ್ಯಾಪಿ ಹೊಸದಾಗಿ ಬರುವ ಪ್ರಸಂಗವಿಲ್ಲ! ದೇವ ಎಂದರೆ ದಿವ್ಯಜನ, ದಿವ್ಯಗುಣ ಎಂದು ಅರ್ಥ ಮಾಡಿಕೊಳ್ಳುವುದಾದರೆ, ಅದಕ್ಕೆ ಬಾಹ್ಯ ಕೊಂಬು, ಕಹಳೆ, ಘಂಟೆ, ಜಾಗಟೆಗಳು ಬೇಕಿಲ್ಲ. ನಿಜವಾದ ಸಜ್ಜನರು (ದೇವಜನರು) ಅದನ್ನೆಂದಿಗೂ ನಿರೀಕ್ಷೆ ಮಾಡುವುದಿಲ್ಲ. ಅಂತರಂಗಶುದ್ಧಿಯಿಂದ ನಮ್ಮೊಳಗೆ ಮೂಡಿಸಿಕೊಳ್ಳಬೇಕಾದ್ದು ದಿವ್ಯಗುಣಗಳು. ಘಂಟೆ-ಜಾಗಟೆಗಳಿಂದ ಮನುಷ್ಯರು ಸಜ್ಜನರಾಗುತ್ತಾರೆ ಎಂಬ ಬುಡರಹಿತ ತರ್ಕವನ್ನು ತಾವು ಮಾಡುವುದಿಲ್ಲ ಎಂದು ಭಾವಿಸಿದ್ದೇನೆ. Concentrationಗೆ ಬೇಕಾದ್ದು "ಏಕಾಗ್ರ", A very fine point. ಯೋಗಶಾಸ್ತ್ರದಲ್ಲಿ ಇದಕ್ಕಾಗಿ "ಭ್ರೂಮಧ್ಯ ಭಾಗ" "ನಾಸಿಕಾಗ್ರ" ಹೇಳಿರುವಾಗ ವಿವಿಧ ಗಾತ್ರದ ಬೊಂಬೆಗಳೇ ಬೇಕೆಂಬುದು ಎಷ್ಟು ಸಮಂಜಸ? ಭಗವಂತನ ಸ್ವರೂಪದ ಬಗ್ಗೆ ವೇದಗಳು ಹೇಳಿರುವುದನ್ನು ಸಾಧಾರವಾಗಿ ನಿಮ್ಮ, ನಿಮ್ಮಂತಹವರ ಮುಂದೆ ಯಥಾಶಕ್ತಿ, ಯಥಾಮತಿ ಮುಂದೆ ಇಡಬಲ್ಲೆ. ಒಪ್ಪುವ, ಒಪ್ಪದಿರುವ, ಭಾಗಶಃ ಒಪ್ಪುವ ನಿಮ್ಮ ವೈಚಾರಿಕ ಸ್ವಾತಂತ್ರ್ಯವನ್ನು ಸದಾಕಾಲ ಗೌರವಿಸುತ್ತೇನೆ. ಸತ್ಯದೊಂದಿಗೆ, ಒಂಟಿಯಾಗಾದರೂ ಸರಿ, ಇರಬೇಕೆಂಬುದು ನಿಮ್ಮ ಆಯ್ಕೆಯೋ, ಅಥವಾ ಸತ್ಯವೋ, ಮಿಧ್ಯೆಯೋ ಆ ಚಿಂತೆಯಿಲ್ಲದೆ, ಗುಂಪಿನೊಂದಿಗೆ ಇರಬೇಕೆಂಬುದು ನಿಮ್ಮ ಆಯ್ಕೆಯೋ, ಅದು ನಿಮ್ಮ ನಿರ್ಣಯಕ್ಕೆ ಬಿಟ್ಟ ವಿಷಯ. ನನ್ನ ವೈಯಕ್ತಿಕ ಆಯ್ಕೆ ಮೊದಲನೆಯದು ಎಂದು ಹೇಳಬೇಕಾದ್ದಿಲ್ಲ! ಅದರ ಫಲಾಫಲಗಳಿಗೆ ಅವರವರೇ ಹೊಣೆ. 
ಉಪನಯನವಿರುವುದೇ ವ್ಯಕ್ತಿಯನ್ನು ಅಹಿಂಸೆ, ಸತ್ಯ, ಅಸ್ತೇಯ ಮೊದಲಾದ ಮಾನವೀಯ ಮೌಲ್ಯಗಳ ಆಧಾರದ ಮೇಲೆ ರೂಪಿಸುವುದೇ ಆಗಿರುವಾಗ,ಅದಕ್ಕೆ ಹೊಂದುವ ನಿಯಮಗಳನ್ನು ಕಡ್ಡಾಯ ಮಾಡುವುದು ಅನಿವಾರ್ಯವಾಗುತ್ತದೆ. ನಿಮ್ಮ ಮಾತು ಹೇಗಿದೆಯೆಂದರೆ, ನ್ಯಾಯಾಧೀಶರಾಗುವವರಿಗೆ, ಪಕ್ಷಪಾತ ಮಾಡಬಾರದು ಎಂಬ ನಿಯಮವನ್ನು ಹೇರಬಾರದು ಎಂಬಂತಿದೆ!! ಅವರನ್ನು ದೂರವಿಡುವ ಪ್ರಶ್ನೆಯಿಲ್ಲ. ಆಹಿಂಸೆಯನ್ನು ಇನ್ನು ಮುಂದಾದರೂ ಪಾಲಿಸುವ ಸಂಕಲ್ಪ ಮಾಡಿದಲ್ಲಿ One and only condition, ಅವರನ್ನು ಎಲ್ಲ ರೀತಿಯಿಂದಲೂ ನಮ್ಮೊಡನೆ ಸೇರಿಸಿಕೊಂಡು ಕೆಲಸ ಮಾಡುತ್ತೇವೆ. ಇಷ್ಟು ವಿಶಾಲವಾದ ಮನೋಭಾವವನ್ನು, ನೀವು ಇಂದು ಸಮರ್ಥಿಸುತ್ತಿರುವ ಯಾವುದೇ ಸಂಪ್ರದಾಯದಲ್ಲಿ ತೋರಿಸಬಲ್ಲಿರಾ? ಅಥವಾ ನೀವಾದರೂ ಪಾಲಿಸಬಲ್ಲಿರಾ? ಇದು 100% ಪ್ರಾಕ್ಡಿಕಲ್. ಅಂತಹ ಪರಿವರ್ತನೆಗೆ ಸಂಕಲ್ಪ ಮಾಡಿದ ಅನೇಕರಿಗೆ ಉಪನಯನ, ವೇದಾರಂಭ ಸಂಸ್ಕಾರಗಳನ್ನು ನೀಡಿ ಅವರು ಯೋಗ್ರ ಪ್ರಜೆಗಳಾಗಿ ಬಾಳುತ್ತಿರುವ ಸಾಕ್ಷಿಗಳು ನಮ್ಮ ಮುಂದಿವೆ. ಕನಿಕರ ಉಪಯೋಗವಿಲ್ಲ ಮಂಜುನಾಥರೇ! ಅಸತ್ಯವನ್ನೇನಾದರೂ ಆಡಿದ್ದರೆ ತಿದ್ದಿ. ತಿದ್ದಿಕೊಳ್ಳುವೆ. ಯಾರಿಗೋ ಅಪ್ರಿಯವಾಗುತ್ತದೆಂದು (Actually ತಿದ್ದಿಕೊಳ್ಳಬೇಕಾದವರು ಅವರಿರಬಹುದು!)ಸತ್ಯವನ್ನು ಆಡುವುದರಿಂದ ಹಿಂದೆ ಸರಿಯುವ ಸಲಹೆ ನೀಡುತ್ತೀರಾ? ಆದಷ್ಟು ಪ್ರಿಯವಾಗಿ ಹೇಳಬೇಕೆಂಬುದನ್ನು ಒಪ್ಪಿಯಾಗಿದೆ, ನಿರಂತರ ಆ ಪ್ರಯತ್ನದಲ್ಲಿದ್ದೇನೆ, ಇತರರಿಗೂ ಅದನ್ನೇ ವಿನಂತಿಸಿಕೊಳ್ಳುತ್ತಿರುತ್ತೇನೆ. ಸಂಗೀತಕ್ಕೆ ಎರಡು ಮುಖ. ರಾಗ-ಭಾವ ಒಂದು ಮತ್ತೊಂದು ಇವುಗಳ ಹಿಂದಿರುವ ಸ+ಹಿತವಾದ ಸಾಹಿತ್ಯ, ಜ್ಞಾನ. ಎರಡೂ ಕೂಡಿದಲ್ಲಿ ಲಾಭ ಹೆಚ್ಚು - ಹಾಡುವವರಿಗೂ, ಕೇಳುವವರಿಗೂ. ಉತ್ತಮ ಸಂಗೀತ ಕೇಳಿದ ಅಣ್ಣ-ತಮ್ಮಂದಿರು ತಮ್ಮ Court case ಹಿಂದಕ್ಕೆ ಪಡೆಯಬೇಕು! ಅತ್ತೆ-ಸೊಸೆ ಜಗಳ ನಿಲ್ಲಬೇಕು!! ಅಪ್ಪ-ಅಮ್ಮ ಮಕ್ಕಳ ನಡುವೆ ಪ್ರೀತಿಯ ವಾತಾವರಣ ನಿರ್ಮಾಣವಾಗಬೇಕು!!! ಕಲ್ಪನೆಯಲ್ಲ, ಸಾಮಗಾನದಿಂದ ಇದನ್ನು ಸಾಧಿಸಬಹುದು. (ಒಂದಷ್ಟು ಪ್ರಯೋಗ, ಪರೀಕ್ಷೆಗಳ ಅಗತ್ಯವಿದೆ. ಆಸಕ್ರ ಸಂಶೋಧಕರಿದ್ದೆರೆ ನನ್ನ ಬಳಿ ಇರುವ ಮಾಹಿತಿಯನ್ನು ನೀಡುತ್ತೇನೆ. ವೇದವೇ ಎಲ್ಲದಕ್ಕೂ ಅಂತಿಮ ಎಂಬುದು ನನ್ನ ನಂಬಿಕೆಯಲ್ಲ. ಸತ್ಯಾಸತ್ಯತೆಯ ಪರೀಕ್ಷೆಗಾಗಿ ಮುಕ್ತಮನಸ್ಸಿನಿಂದ ಯಾರೂ ಬೇಕಾದರೂ ವೇದಗಳ ಅಧ್ಯಯನವನ್ನು ವೈಜ್ಞಾನಿಕವಾಗಿ, ತರ್ಕಬದ್ಧವಾಗಿ ಮಾಡಿನೋಡಲಿ. ನಿಮ್ಮ ಮಾತುಗಳ ಮೊದಲಲ್ಲಿ ನೀವು ಹೇಳಿದ 'ಪೂರ್ವದಿಂದ ಬಂದುದಕ್ಕೆ' ಸಿಲುಕಿಕೊಂಡೇ, ಅದರ ನೇರಕ್ಕೇ ನಮಗೆ ಉತ್ತರ ಬೇಕು ಎನ್ನುವುದಾದರೆ, 'ಪೂರ್ವದಿಂದ ಬಂದುದು' ಅಂತಿಮವಾಗುವುದಕ್ಕೆ ಏನು ಯೋಗ್ಯತೆ ಪಡೆದಿದೆ ಎಂದು ಪ್ರಶ್ನಿಸದೇ ವಿಧಿಯಿಲ್ಲ! ಇಷ್ಟಂತೂ ನಿಜ ಎಲ್ಲ ಪೂರ್ವಗಳಿಗೂ ಪೂರ್ವವಾದದ್ದೇ ವೇದ = ಜ್ಞಾನ!!!

Friday, March 25, 2011

ಪಂ. ಸುಧಾಕರ ಚತುರ್ವೇದಿಯವರ ಸತ್ಸಂಗದಲ್ಲಿ ಕಳೆದ ಒಂದು ಸಾರ್ಥಕ ಸಂಜೆ

ಬರಲಿರುವ ರಾಮನವಮಿಗೆ 115ನೆಯ ವರ್ಷಕ್ಕೆ ಕಾಲಿಡಲಿರುವ ಪಂ. ಸುಧಾಕರ ಚತುರ್ವೇದಿಯವರು

ಪಂಡಿತರ ಸಾನ್ನಿಧ್ಯದಲ್ಲಿನ ಸಂತಸ - ಕವಿ ನಾಗರಾಜ್ ಪತ್ನಿ ಭಾರತಿಯೊಂದಿಗೆ


      ಪಂ. ಸುಧಾಕರ ಚತುರ್ವೇದಿಯವರು ೧೮೯೭ರ ರಾಮನವಮಿಯಂದು ಬೆಂಗಳೂರಿನ ಬಳೇಪೇಟೆಯಲ್ಲಿ ಜನಿಸಿ, ೧೩ನೆಯ ವಯಸ್ಸಿನಲ್ಲಿ ಉತ್ತರ ಭಾರತದ ಪ್ರಸಿದ್ಧ ಕಾಂಗಡಿ ಗುರುಕುಲಕ್ಕೆ ಸೇರಿ ನಾಲ್ಕು ವೇದಗಳನ್ನು ಅಧ್ಯಯನ ಮಾಡಿ ನಿಜ ಅರ್ಥದಲ್ಲಿ ’ಚತುರ್ವೇದಿ’ಯಾದವರು. ಗಾಂಧೀಜಿಯವರ ಒಡನಾಡಿಯಾಗಿದ್ದವರು. ಸ್ವಾತಂತ್ರ್ಯಚಳುವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿ ೧೩ ವರ್ಷಗಳಿಗೂ ಹೆಚ್ಚುಕಾಲ ಸೆರೆವಾಸ ಅನುಭವಿಸಿದವರು. ಜಲಿಯನ್‌ವಾಲಾಬಾಗ್ ಹತ್ಯಾಕಾಂಡದ ಸಾಕ್ಷಿಯಾಗಿದ್ದವರು, ಗಾಂಧೀಜಿಯವರ ಸೂಚನೆಯಂತೆ ಅಲ್ಲಿ ಹತ್ಯೆಯಾದವರ ಸಾಮೂಹಿಕ ಶವಸಂಸ್ಕಾರ ಮಾಡಿದವರು. ಕ್ರಾಂತಿಕಾರಿ ಭಗತ್‌ಸಿಂಗರ ಗುರುವಾಗಿದ್ದವರು. ಅವರು ಹಿಂದೊಮ್ಮೆ ’ವಿಜಯ ಕರ್ನಾಟಕ’ ಪತ್ರಿಕೆಗೆ ಸಂದರ್ಶನದಲ್ಲಿ ಹೇಳಿದ್ದು: "ನಾನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲು ಪ್ರೋತ್ಸಾಹ ಸ್ವಾಮಿ ಶ್ರದ್ಧಾನಂದರದಾದರೂ ಆಂತರಿಕವಾಗಿ ವೇದಗಳೇ ಪ್ರೇರಣೆ. ’ಅಧೀನಾಃ ಸ್ಯಾಮ ಶರದಃ ಶತಂ, ಭೂಯಶ್ಚ ಶರದಃ ಶತಾತ್’ - ನೂರು ವರ್ಷಕ್ಕೂ ಹೆಚ್ಚುಕಾಲ ಸ್ವಾತಂತ್ರ್ಯದಿಂದ ಬಾಳೋಣ ಎಂಬ ಅರ್ಥದ ಸಾಲು ಸಂಗ್ರಾಮಕ್ಕೆ ಕರೆತಂದಿತು. ಭಾರತೀಯರಿಗೆ ಗೌರವ ಕೊಡದೆ ಅವರು ಕೀಳಾಗಿ ಕಾಣುತ್ತಿದ್ದುದು ನಾವೆಲ್ಲಾ ಚಳುವಳಿಗೆ ಧುಮುಕಲು ಪ್ರೇರಣೆಯಾಯಿತು". ಬರಲಿರುವ ರಾಮನವಮಿಗೆ ೧೧೫ ವರ್ಷಗಳಿಗೆ ಕಾಲಿರಿಸಲಿರುವ ಇವರು ಬೆಂಗಳೂರಿನ ಜಯನಗರದ ೫ನೆಯ ಬ್ಲಾಕಿನಲ್ಲಿ ಶ್ರೀ ಕೃಷ್ಣಸೇವಾಶ್ರಮದ ಆಸ್ಪತ್ರೆಯ ಎದುರು ಸಾಲಿನಲ್ಲಿರುವ ಮನೆಯೊಂದರಲ್ಲಿ ವಾಸವಿದ್ದಾರೆ. ಪ್ರತಿ ಶನಿವಾರ ಸಾಯಂಕಾಲ ಇವರ ಮನೆಯಲ್ಲಿ ಸತ್ಸಂಗ ಇದ್ದು ಆಸಕ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಕಳೆದ ೧೯-೦೩-೨೦೧೧ರಂದು ನನ್ನ ಪತ್ನಿ ಮತ್ತು ಮಗನೊಂದಿಗೆ ಅಂತಹ ಒಂದು ಸತ್ಸಂಗದಲ್ಲಿ ಪಾಲುಗೊಂಡದ್ದು ನನ್ನ ಪುಣ್ಯವಿಶೇಷ.





     ಸರಿಯಾಗಿ ಸಾಯಂಕಾಲ ೫-೩೦ಕ್ಕೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ (೫-೨೫ರಲ್ಲಿ ಸಮಯ ವಿಚಾರಿಸಿದ ಅವರು, ಇನ್ನೂ ೫ ನಿಮಿಷವಿದೆ ಎಂದು ಹೇಳಿದ್ದರು) ಮೊದಲಿಗೆ ಸುಮಾರು ೧೫-೨೦ ನಿಮಿಷಗಳ ಕಾಲ ಬಂದಿದ್ದ ಮಹಿಳೆಯರ ಪೈಕಿ ನಾಲ್ವರು ಭಾಗವಹಿಸಿದ ಅಗ್ನಿಹೋತ್ರಕ್ಕೆ ನಾವು ಸಾಕ್ಷಿಯಾದೆವು. ನಂತರದಲ್ಲಿ ಸುಮಾರು ೪೫-೫೦ ನಿಮಿಷಗಳ ಕಾಲ ಪಂ. ಸುಧಾಕರ ಚತುರ್ವೇದಿಯವರು ಬಂದಿದ್ದವರಿಗೆ ತಮ್ಮ ವಿಚಾರಗಳನ್ನು ಮುಂದಿಟ್ಟರು. ವಯೋಮಾನದ ಕಾರಣ ಕೆಲವು ಪದಗಳು ಅಸ್ಪಷ್ಟವೆಂದೆನಿಸಿದರೂ ಗಮನವಿರಿಸಿದರೆ ಅರ್ಥವಾಗುತ್ತಿತ್ತು. ಅವರು ತಿಳಿಸಿದ ಸಂಗತಿಗಳನ್ನು ನಿಮ್ಮೊಡನೆ ಹಂಚಿಕೊಳ್ಳಬಯಸಿ ಈ ಲೇಖನ. ಅವರ ಅಂದಿನ ವಿಚಾರದ ತುಣುಕುಗಳು, ಇದೋ ನಿಮ್ಮ ಮುಂದೆ:

ವಿಚಾರ ಮಾಡೋಣ

     ನಾಲಿಗೆ ಎರಡು ಅಲಗಿನ ಕತ್ತಿಯಿದ್ದಂತೆ. ಆಡುವ ಮಾತಿನಲ್ಲಿ ನಿಯಂತ್ರಣವಿರಬೇಕು. ಇಲ್ಲದಿದ್ದರೆ ಅದು ಇತರರನ್ನು ಮಾತ್ರವಲ್ಲದೆ ಆಡಿದವರನ್ನೂ ಘಾತಿಸುತ್ತದೆ. ಪಿಪ್ಪಲಾದ ಎಂಬ ಋಷಿಗೆ ಆ ಹೆಸರು ಬಂದದ್ದು ಆತ ಕೆಳಗೆ ಬಿದ್ದಿದ್ದ ಫಲವನ್ನು ಮಾತ್ರ ತಿನ್ನುತ್ತಿದ್ದರಿಂದ. ಗೌತಮನಿಗೆ ಅಕ್ಷಪಾದ -ಅಂದರೆ ಕಾಲಿನಲ್ಲಿ ಕಣ್ಣಿದ್ದವನು- ಎಂಬ ಹೆಸರೂ ಇತ್ತು. ಆತ ನಡೆದಾಡುವಾಗ ಯಾವುದೇ ಕ್ರಿಮಿ, ಕೀಟಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುತ್ತಿದ್ದ. ಅವರುಗಳು ಅಷ್ಟರಮಟ್ಟಿಗೆ ಇತರರನ್ನು ನೋಯಿಸಬಾರದೆಂಬ ಮನೋಭಾವ ಹೊಂದಿದ್ದರು. ಮಾತು ಅನ್ನುವುದು ಬಾಣವಿದ್ದಂತೆ. ಆಡಿದ ಮೇಲೆ ಮುಗಿಯಿತು. ಬಾಣ ತನ್ನ ಗುರಿಯನ್ನು ಛೇದಿಸುವಂತೆ ಪಾಪವನ್ನು ದೂರ ಮಾಡುವಂತಿರಬೇಕು, ಇತರರನ್ನು ಚುಚ್ಚುವಂತಿರಬಾರದು. ಮನಸ್ಸಿಗೆ ಹಿತ, ಸಂತೋಷ ತರಬೇಕು. ನಮಗೆ ಕೆಟ್ಟದಾದಾಗ, ತೊಂದರೆಯಾದಾಗ ಪರಮಾತ್ಮನನ್ನು ದೂಷಿಸುವುದು ಸರಿಯಲ್ಲ. ನಮಗೆ ಕೆಟ್ಟದಾಗಲು ಕಾರಣ ನಮ್ಮ ತಪ್ಪೇ ಹೊರತು ಪರಮಾತ್ಮನದಲ್ಲ ಎಂಬುದನ್ನು ಅರಿಯಬೇಕು. ನಮಗೆ ಕಷ್ಟವನ್ನು ಎದುರಿಸಲು ಶಕ್ತಿ ಕೊಡು ಎಂದು ಪ್ರಾರ್ಥಿಸಬೇಕೇ ಹೊರತು ಅವನನ್ನು ಬಯ್ಯಬಾರದು. ನಾವು ಹೊಗಳಿದರೂ ಅಷ್ಟೆ, ತೆಗಳಿದರೂ ಅಷ್ಟೆ, ಪರಮಾತ್ಮ ಪರಮಾತ್ಮನೇ. ಅವನು ನಿರ್ಲಿಪ್ತ. ಹೊಗಳುತ್ತಾರೆಂದು ಒಳ್ಳೆಯದು ಮಾಡುತ್ತಾನೆ, ತೆಗಳುತ್ತಾರೆಂದು ಕೆಟ್ಟದು ಮಾಡುತ್ತಾನೆ ಎಂದು ಭಾವಿಸುವುದು ಮೂರ್ಖತನ. ಎಲ್ಲಿ ನ್ಯಾಯ, ಸತ್ಯ, ಧರ್ಮ ಇರುತ್ತದೋ ಅಲ್ಲಿ ಭಗವಂತನಿರುತ್ತಾನೆ. ಇದರ ಅರಿವಾದರೆ ಪಾಪ ಮಾಡಲು ಧೈರ್ಯ ಬರುವುದಿಲ್ಲ.
     ಭಗವಂತ ಸರ್ವಶಕ್ತ, ಸರ್ವವ್ಯಾಪಕ, ನಿರಾಕಾರ. ಯಜುರ್ವೇದದ ಈ ಮಂತ್ರ ಕೇಳಿ:

ತದೇಜತಿ ತನ್ಮೈಜತಿ ತದ್ದೂರೇ ತದ್ವಂತಿಕೇ|
ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತಃ||

     [ತತ್ ಏಜತಿ] ಅದು ವಿಶ್ವಕ್ಕೆ ಗತಿ ನೀಡುತ್ತದೆ. [ತತ್ ನ ಏಜತಿ] ಅದು ಸ್ವತಃ ಚಲಿಸುವುದಿಲ್ಲ. [ತತ್ ದೂರೇ] ಅದು ದೂರದಲ್ಲಿದೆ. [ತತ್ ಉ ಅಂತಿಕೇ] ಅದೇ ಹತ್ತಿರದಲ್ಲಿಯೂ ಇದೆ. [ತತ್ ಅಸ್ಮ ಸರ್ವಸ್ಯ ಅಂತಃ] ಅದು ಇದೆಲ್ಲದರ ಒಳಗೂ ಇದೆ. [ತತ್ ಉ ಅಸ್ಯ ಸರ್ವಸ್ಯ ಬಾಹ್ಯತಃ] ಅದೇ ಇದೆಲ್ಲದರ ಹೊರಗೂ ಇದೆ. ಈ ಮಂತ್ರ ವಿಶ್ವಕ್ಕೆಲ್ಲಾ ಚಲನೆ ನೀಡುವ, ತಾನು ಮಾತ್ರ ಚಲಿಸದೆ ಧ್ರುವವಾಗಿ ನಿಂತಿರುವ, ಎಲ್ಲಾಕಡೆ ವ್ಯಾಪಿಸಿರುವ ಚೇತನಶಕ್ತಿಯನ್ನು ವರ್ಣಿಸುತ್ತದೆ. ಎಲ್ಲರ ಅಂತರ್ಯದಲ್ಲಿಯೂ ಇದೆ; ಎಲ್ಲರಿಗಿಂತ ಬಹು ದೂರದಲ್ಲಿಯೂ ಇದೆ; ವಿಶ್ವದೊಳಗೂ ಇದೆ; ವಿಶ್ವದಿಂದ ಹೊರಕ್ಕೂ ಹರಡಿದೆ. ಆ ಅನಂತ ಚೇತನ, ಸರ್ವಥಾ ನಿರಾಕಾರವೇ ಆಗಿರಬೇಕು. ನಿಜವಾಗಿ ಅದಿರುವುದು ಹಾಗೆಯೇ.
     ದಿಕ್ಕುಗಳು ಎನ್ನುವುದು ಸ್ಥಳ ಗುರುತಿಸುವುದು, ದಿಸೆ ತೋರಿಸುವ ಸಲುವಾಗಿ ನಮ್ಮ ಅನುಕೂಲಕ್ಕಾಗಿ ಮಾಡಿಕೊಂಡದ್ದೇ ಹೊರತು ಮತ್ತೇನಲ್ಲ. ಸೂರ್ಯ ಪೂರ್ವದಲ್ಲಿ ಉದಯಿಸುತ್ತಾನೆ, ಪಶ್ಚಿಮದಲ್ಲಿ ಮುಳುಗುತ್ತಾನೆ ಎಂಬುದು ಒಂದು ಅರ್ಥದಲ್ಲಿ ಸರಿಯಿರಬಹುದು. ಆ ಸೂರ್ಯನೂ ಸಹ ತನ್ನ ಚಲನೆಯ ಪಥವನ್ನು ಬದಲಿಸುತ್ತಾನೆ. ಬಳಕೆಯಲ್ಲಿ ನಾವು ಪೂರ್ವ, ಪಶ್ಚಿಮ, ಇತ್ಯಾದಿ ಎಂಟು ದಿಕ್ಕುಗಳನ್ನು ಬಳಸುತ್ತೇವೆ. ನಮಗೆ ಪೂರ್ವವೆನಿಸುವ ಒಂದು ಸ್ಥಳ ಇನ್ನೊಬ್ಬರಿಗೆ ಪಶ್ಚಿಮವಾಗಬಹುದು. ವಾಸ್ತವವಾಗಿ ನಮ್ಮ ಸುತ್ತಲೂ ಇರುವ ೩೬೦ ಡಿಗ್ರಿ ಪ್ರದೇಶದ ಒಂದೊಂದು ಡಿಗ್ರಿಯೂ ಒಂದೊಂದು ದಿಕ್ಕು. ಈಗ ಹೇಳಲಾಗುತ್ತಿರುವ ಜ್ಯೋತಿಷ್ಯ ಎಂಬುದಕ್ಕೆ ಅರ್ಥವಿಲ್ಲ. ಬ್ರಹ್ಮಾಂಡದ ಸೃಷ್ಟಿ ಕೇವಲ ಮಾನಸಿಕ ಕಲ್ಪನೆಯಲ್ಲ, ಒಂದು ನಿರಾಕರಿಸಲಾರದ ಸತ್ಯ. ವಿಜ್ಞಾನವಾದ, ಮಾಯಾವಾದ ಯಾವ ವಾದವನ್ನೇ ಮುಂದೊಡ್ಡಿದರೂ ಕೂಡ, ಜನರನ್ನು ಭ್ರಾಂತಿಗೆ ಸಿಕ್ಕಿಸಬಹುದೇ ಹೊರತು, ಜಗತ್ತಿಲ್ಲ ಎಂದು ಹೇಳಲಾಗುವುದಿಲ್ಲ. ಜಗತ್ತಿಲ್ಲ ಎನ್ನುವುದಾದರೆ ಹಾಗೆ ಹೇಳುವವನು ಎಲ್ಲಿ ಉಳಿದಾನು? ಕೇಳುವವನು ಯಾವನಿದ್ದಾನು? ಜಗತ್ತಿದೆ, ನಿಜವಾಗಿಯೂ ಇದೆ. ಭೌತವಿಜ್ಞಾನದ ಸಹಾಯದಿಂದ ಈ ಜಗತ್ತಿನ ಪ್ರತಿಯೊಂದು ಪರಮಾಣುವನ್ನೂ ಪ್ರತ್ಯೇಕಿಸಿ ನೋಡಬಹುದು. ಈ ವಿಶ್ವ ಜಡಪರಮಾಣುಗಳ ಸಂಘಾತದಿಂದ ರೂಪುಗೊಂಡುದು. ಸ್ವತಃ ಅವುಗಳೇ ನಿಯಮಪೂರ್ವಕವಾಗಿ ಒಟ್ಟುಗೂಡಿ ಈ ವಿಶ್ವವಾಗುವ ಶಕ್ತಿಯಿಲ್ಲ. ಅವುಗಳಲ್ಲಿ ನಿಯಮಪಾಲನೆ ಮಾಡಲು ಬೇಕಾದ ಜ್ಞಾನವಿಲ್ಲ. ಆದುದರಿಂದ ಈ ವಿಶ್ವದ ರಚಯಿತೃವಾದ ಯಾವುದೋ ಒಂದು ಶಕ್ತಿಯಿದೆ. ಕೇವಲ ಒಂದು ಭೂಮಿಯಲ್ಲ, ಒಂದು ಚಂದ್ರನಲ್ಲ, ಒಂದು ಸೂರ್ಯನೂ ಅಲ್ಲ, ಆ ಸೂರ್ಯನಿಗಿಂತಲೂ ಲಕ್ಷಾಂತರ ಪಾಲು ದೊಡ್ಡದಾಗಿದ್ದು, ಅನಂತ ಆಕಾಶದಲ್ಲಿ ಊಹಿಸಲಾಗದಷ್ಟು ದೂರದವರೆಗೆ ಹರಡಿಕೊಂಡು ಮೆರೆಯುತ್ತಿರುವ, ಎಣಿಕೆಗೆ ಸಿಕ್ಕದಂತಿರುವ ನಕ್ಷತ್ರಗಳ ಬೃಹತ್ಸಮೂಹವಿದೆ. ಇವನ್ನೆಲ್ಲಾ ರಚಿಸುವ ಸಾಮರ್ಥ್ಯ ಏಕದೇಶೀಯವಾದ, ಅಂದರೆ ಎಲ್ಲೋ ಒಂದು ಕಡೆ ಮಾತ್ರವಿರುವ ವ್ಯಕ್ತಿಗೆ ಅಥವಾ ಶಕ್ತಿಗೆ ಸಾಧ್ಯವಿಲ್ಲ. ಈ ವಿಶ್ವಬ್ರಹ್ಮಾಂಡ, ಕೇವಲ ಆಕಸ್ಮಿಕವಾಗಿ ಇರುವಿಕೆಗೆ ಬಂದಿದೆ ಎಂದು ಯಾವ ಬುದ್ಧಿಶಾಲಿಯೂ ತರ್ಕಿಸಲಾರನು. ಹೀಗೆ ಆಲೋಚನೆ ಮಾಡಿದಾಗ ಪ್ರತಿಯೊಬ್ಬ ವಿಚಾರಶೀಲನೂ ಈ ಅನಂತದಂತೆ ಗೋಚರಿಸುವ ವಿಶ್ವದ ಕರ್ತೃವಾದ ಯಾವುದೋ ಒಂದು ಸರ್ವವ್ಯಾಪಕ, ಜ್ಞಾನಮಯೀ ಶಕ್ತಿ ಇದ್ದೇ ಇದೆ ಎಂದು ಒಪ್ಪಲೇಬೇಕಾಗುತ್ತದೆ. ಅವನೇ ಭಗವಂತ. ಈ ವಿಶಾಲ ಬ್ರಹ್ಮಾಂಡವನ್ನು ಆ ಪರಮಾತ್ಮ ಇದ್ದಲ್ಲೇ ಇದ್ದು ನಿಯಂತ್ರಿಸುತ್ತಿದ್ದಾನೆ. ಇದನ್ನು ಅರಿಯದಿದ್ದರೆ ಅವನಿಗೆ ನಷ್ಟವೇನೂ ಇಲ್ಲ. ನಾನು ಎಷ್ಟೋ ವಿದ್ವಾಂಸರನ್ನು ನಕ್ಷತ್ರಗಳು ಎಷ್ಟಿವೆ ಎಂಬುದು ಗೊತ್ತೇ? ಎಂದು ಪ್ರಶ್ನಿಸಿದ್ದೇನೆ. ಯಾರಿಗೂ ಉತ್ತರಿಸಲು ಆಗಿಲ್ಲ. ಸರ್ ಸಿ.ವಿ. ರಾಮನ್‌ರವರನ್ನೂ ಕೇಳಿದ್ದೆ. ಅವರು 'ಪೋಯಾ, ಪೋಯಾ! ನಾನು ಸಣ್ಣವನು, ಇಷ್ಟು ದೊಡ್ಡ ಬ್ರಹ್ಮಾಂಡವನ್ನು ಅರಿಯುವ, ಅಳೆಯುವ ಶಕ್ತಿ ನನ್ನಂತಹವರಿಗೆ ಎಲ್ಲಿ ಬರಬೇಕು' ಎಂದು ಹೇಳಿದ್ದರು.

     ಭಗವಂತನ ಪ್ರಾರ್ಥನೆ, ಪೂಜೆಯನ್ನು ಯಾಂತ್ರಿಕವಾಗಿ ಮಾಡಿದರೆ ಫಲವಿಲ್ಲ. ನಮ್ಮ ಪ್ರಾರ್ಥನೆ ಮಾಡುವ ಮಂತ್ರದ ಅರ್ಥದ ಮನನ ಮಾಡಿಕೊಂಡು ಅಳವಡಿಸಿಕೊಂಡರೆ ಮಾತ್ರ ಅದರಲ್ಲಿ ಅರ್ಥವಿರುತ್ತದೆ. ಇಲ್ಲದಿದ್ದರೆ ಅದು ಕೇವಲ ನಾಲಿಗೆಗೆ ವ್ಯಾಯಾಮ ಅಷ್ಟೆ. ನಾವು ಈಗ ಅಗ್ನಿಹೋತ್ರ ಮಾಡುವಾಗ ಮೂರು ಸಲ ಗಾಯತ್ರಿ ಮಂತ್ರದ ಉಚ್ಛಾರ ಮಾಡಿದೆವು ಅದರ ಅರ್ಥ ನಮ್ಮ ಅರಿವಿಗೆ ಬಂತೇ, ನಮ್ಮ ಮನಸ್ಸನ್ನು ತಟ್ಟಿತೇ ಎಂಬುದನ್ನು ಅರಿಯೋಣ. ಇಲ್ಲದಿದ್ದರೆ ಸಾವಿರ ಸಲ ಗಾಯತ್ರಿ ಮಂತ್ರ ಹೇಳಿದರೂ ಫಲ ಮಾತ್ರ ಶೂನ್ಯ. ಸ್ನಾನ ಮಾಡಿದರೆ ದೇಹದ ಕೊಳಕು ಹೋಗುತ್ತದೆ. ಆತ್ಮಕ್ಕೆ ಅಂಟಿದ ಕೊಳಕು ಹೋಗಬೇಕೆಂದರೆ ಸತ್ಕರ್ಮದಿಂದ ಮಾತ್ರ ಸಾಧ್ಯ.

     ಬ್ರಹ್ಮಚರ್ಯ ಎಂದರೆ ಮದುವೆಯಾಗದಿರುವವರು ಎಂದು ಅರ್ಥವಲ್ಲ. ಬ್ರಹ್ಮನಲ್ಲಿ ಸಂಚಾರ ಮಾಡುವ ಶಕ್ತಿಯಿರುವವನು ಎಂದು ಅರ್ಥ. ಈ ಮನುಷ್ಯ ಜನ್ಮ ದೊಡ್ಡದು. ಅದನ್ನು ಭೌತಿಕ ಸುಖಭೋಗಕ್ಕಾಗಿ ಮಾತ್ರ ಎಳಸದೆ ಈ ಜನ್ಮದ ಅರ್ಥ ತಿಳಿದು ಸತ್ಕರ್ಮಕ್ಕಾಗಿ ಬಳಸಬೇಕು. ಹಾಗೆ ಮಾಡದಿದ್ದರೆ ನಂತರದಲ್ಲಿ ಮತ್ತೆ ಇನ್ನು ಯಾವಾಗಲೋ ಮನುಷ್ಯ ಸಿಕ್ಕುವುದು! ಮನುಷ್ಯಜನ್ಮ ಎಷ್ಟೋ ಜನ್ಮಗಳನ್ನು ದಾಟಿಬಂದ ನಂತರ ಸಿಕ್ಕಿದೆ. ಇದನ್ನು ಸಾರ್ಥಕಪಡಿಸಿಕೊಳ್ಳಬೇಕು. ನಿಜವಾದ ಅರ್ಥದಲ್ಲಿ ಬ್ರಹ್ಮಚಾರಿಗಳಾಗಬೇಕಾದುದು ಮನುಷ್ಯಜನ್ಮದ ಉದ್ದೇಶ. ಯಾರೋ ಹೇಳುತ್ತಿದ್ದರು,'ಲಕ್ಷಾಂತರ ಜನ್ಮಗಳ ನಂತರ ಮನುಷ್ಯನಾಗಿ ಹುಟ್ಟಿದ್ದೇವೆ, ಪುನಃ ಕೆಳಗೆ ಹೋಗುತ್ತೇವೆಯೇ? ಮೇಲೆ ಹತ್ತಿ ಬಂದಿದ್ದೇವೆ, ಕೆಳಗೆ ಇಳಿಯುತ್ತೇವೆಯೇ?' ಸರಿಯಾಗಿ ಮನುಷ್ಯನಂತೆ ನಡೆಯದಿದ್ದರೆ ಮನುಷ್ಯರಾಗೇ ಹುಟ್ಟುತ್ತೇವೆಂದು ಹೇಳಲಾಗುವುದಿಲ್ಲ. ನಾವು ಮಾಡಿದ ಕರ್ಮವನ್ನು ನಾವು ಭೋಗಿಸಲೇಬೇಕು. ಇದು ಭಗವಂತನ ನಿಯಮ. ನಾನು ಬಹಳಷ್ಟು ಸನ್ಯಾಸಿಗಳನ್ನು ನೋಡಿದ್ದೇನೆ - ಕಾವಿ ಬಟ್ಟೆ ಸನ್ಯಾಸಿಗಳು, ಬಿಳಿ ಬಟ್ಟೆ ಸನ್ಯಾಸಿಗಳು, ಹಳದಿ ಬಟ್ಟೆ ಸನ್ಯಾಸಿಗಳು, ಕಪ್ಪು ಬಟ್ಟೆ ಸನ್ಯಾಸಿಗಳು, ಹೀಗೆ. ಸನ್ಯಾಸಿಗಳು ಎಂದರೆ ಎಲ್ಲವನ್ನೂ ಬಿಟ್ಟವರು, ಅವರೇನು ಬಿಟ್ಟಿದ್ದಾರೆ? ಹಸಿವಾದಾಗ 'ಭವತಿ ಭಿಕ್ಷಾಂದೇಹಿ'ಅನ್ನುತ್ತಾರೆ, ಛಳಿಯಾದಾಗ ಬೆಚ್ಚಗೆ ಹೊದ್ದುಕೊಳ್ಳುತ್ತಾರೆ! ಸನ್ಯಾಸಿಗಳೆಂದರೆ ಭೌತಿಕ ಸುಖ ಭೋಗಗಳನ್ನು ತ್ಯಾಗ ಮಾಡಿದವರು, ಪರಮಾತ್ಮನ ಕುರಿತು ಧ್ಯಾನದಲ್ಲಿ ತೊಡಗಿಕೊಂಡವರು ಎನ್ನುತ್ತಾರೆ. ಅಂತಹ ನಿಜವಾದ ಸನ್ಯಾಸಿಗಳು ಎಷ್ಟು ಜನ ಇದ್ದಾರೆ? ಸ್ವಾಮಿ ಶ್ರದ್ಧಾನಂದರು ಹಾಸ್ಯವಾಗಿ ಹೇಳುತ್ತಿದ್ದರು - 'ದೇಶಕ್ಕೆ ಸ್ವಾತಂತ್ರ್ಯ ಬಂದು ನಾನು ಪ್ರಧಾನ ಮಂತ್ರಿಯಾದರೆ ಮಾಡುವ ಮೊದಲ ಕೆಲಸವೆಂದರೆ ಸಾಧು-ಸಂತರೆನಿಸಿಕೊಂಡವರನ್ನೆಲ್ಲಾ ಹಿಡಿದು ಮಿಲಿಟರಿಗೆ ಸೇರಿಸಿಬಿಡುತ್ತಿದ್ದೆ! ಮೊದಲೇ ಬಡ ದೇಶ, ಒಂದಿಷ್ಟು ಭಿಕ್ಷುಕರು ಕಡಿಮೆಯಾಗಲಿ!'

     ಪರಮಾತ್ಮನ ಸಾಕ್ಷಾತ್ಕಾರವಾಯಿತು ಎಂದು ಹೇಳುವವರನ್ನು ನೋಡಿದ್ದೇನೆ - ಅವರು ಕಂಡೆವೆಂದು ಹೇಳುವ ಪರಮಾತ್ಮ ಅಂದರೆ ಮೂರು ಕಣ್ಣಿನ ಶಿವ, ನಾಲ್ಕು ತಲೆಯ ಬ್ರಹ್ಮ, ಹೀಗೆ. ಇದೆಲ್ಲಾ ಬುರುಡೆ. ನಿರಾಕಾರ ಪರಮಾತ್ಮ ಎಂದೂ ಸಾಕಾರನಾಗಿರಲಿಲ್ಲ, ಆಗುವುದೂ ಇಲ್ಲ. ಕೃಷ್ಣನನ್ನು ವಿಷ್ಣುವಿನ ಅವತಾರ ಅನ್ನುತ್ತಾರೆ. ಅವತಾರ ಎಂದರೆ ಮೇಲಿನಿಂದ ಕೆಳಗೆ ಅವತರಿಸಿದವನು ಎಂದು. ಆ ಪರಮಾತ್ಮ ಮೇಲಿನಿಂದ ಕೆಳಗೆ ಇಳಿದು ಬಂದನೆಂದರೆ ಆತ ಮೊದಲು ಕೆಳಗೆ ಇರಲಿಲ್ಲವೇ? ಕೌಸಲ್ಯೆಯ ಮಗನಾಗಿ ಪರಮಾತ್ಮ ರಾಮನ ಅವತಾರದಲ್ಲಿ ಬಂದನೆಂದರೆ ಅದಕ್ಕೂ ಮೊದಲು ಭೂಮಿಯಲ್ಲಿ ದೇವರಿರಲಿಲ್ಲವೆ? ಸಾಕ್ಷಾತ್ಕಾರ ಎನ್ನುವ ಪದವನ್ನೇ ನಾನು ಬಳಸಲು ಇಚ್ಛಿಸುವುದಿಲ್ಲ. ಪರಮಾತ್ಮ ಎಂದೂ ಸಾಕಾರ ರೂಪಿ ಅಲ್ಲವೇ ಅಲ್ಲ, ಸಾಕಾರನೆಂದಾಕ್ಷಣ ಸರ್ವಶಕ್ತ, ಸರ್ವವ್ಯಾಪಕ ಭಗವಂತನನ್ನು ಮಿತಿಗೊಳಿಸಿದಂತೆ! ಆತ ಅನುಭವಗಮ್ಯನೇ ಹೊರತು ಕಣ್ಣಿನಿಂದ ಕಾಣಲಾಗುವುದಿಲ್ಲ. ಹೃದಯದಲ್ಲಿ ಕಾಣಬೇಕು, ಅನುಭವಿಸಬೇಕು! ಪರಮಾತ್ಮ ರಾಮನೆಂದರೆ ಹೃದಯದಲ್ಲಿ ನೆಲೆಸಿರುವ, ರಮಿಸುವ ಭಗವಂತನೇ ಹೊರತು ಕೌಸಲ್ಯಾಸುತನೆಂದಲ್ಲ. ರುದ್ರನೆಂದರೆ ಲಯಕಾರಕನೆಂದು ಬಿಂಬಿಸಲ್ಪಟ್ಟವನಲ್ಲ, ಪರರ ಸಂಕಷ್ಟಗಳನ್ನು ಕಂಡು ಕಣ್ಣೀರು ಸುರಿಸುವವನು, ಪರಿಹರಿಸಲು ಸಹಕರಿಸುವವನು! ಸ್ವರ್ಗ, ನರಕ ಅನ್ನುವುದು ಬೇರೆ ಇಲ್ಲ. ಇಲ್ಲೇ ಇದೆ. ಸ್ವರ್ಗ ಅಂದರೆ ಮೇಲೇರುವುದು, ನರಕ ಅಂದರೆ ಕೆಳಕ್ಕೆ ಇಳಿಯುವುದು. ನಮ್ಮ ನಡವಳಿಕೆಗಳು ಸರಿಯಿದ್ದರೆ, ಸತ್ಕರ್ಮ ಮಾಡಿದರೆ ನಾವು ಸ್ವರ್ಗ ಕಾಣುತ್ತೇವೆ, ಇಲ್ಲದಿದ್ದರೆ ಕೆಳಗೆ ಬೀಳುತ್ತೇವೆ. ನನ್ನನ್ನು ನಾಸ್ತಿಕನೆಂದು ದೂರುವವರೂ ಇದ್ದಾರೆ. ಆಸ್ತಿಕರೆಂದರೆ ಯಾರು, ನಾಸ್ತಿಕರು ಯಾರು? ಅರ್ಥರಹಿತ ಸಂಪ್ರದಾಯಗಳು, ಆಚರಣೆಗಳನ್ನು ಪೋಷಿಸುವ ಆಸ್ತಿಕರೆನಿಸಿಕೊಳ್ಳುವವರಿಗಿಂತ ನಾಸ್ತಿಕರೇ ಮೇಲು! ಜ್ಞಾನಿಗಳಾದವರು ವಿಚಾರ ತಿಳಿದವರಾಗಿದ್ದು ಯಾರು ಏನೇ ಹೇಳಿದರೂ ತಪ್ಪುದಾರಿಗೆ ಎಳೆಯಲ್ಪಡುವುದಿಲ್ಲ. ಆದರೆ ತಿಳುವಳಿಕೆ ಕಡಿಮೆಯಿದ್ದವರನ್ನು ದಾರಿ ತಪ್ಪಿಸುವವರ ಬಗ್ಗೆ ನಾನು ಹೇಳುತ್ತಿದ್ದೇನೆ. ಕ್ಷಮಿಸಬೇಕು, ನಾನು ಆಡಿದ ಮಾತುಗಳು ಕಟುವಾಗಿ ಕಾಣಬಹುದು, ಆದರೆ ಸತ್ಯ ಸತ್ಯವೇ. ನಾನು ಯಾರನ್ನೂ ನೋಯಿಸಲು ಉದ್ದೇಶಿಸಿಲ್ಲ, ಕೆಟ್ಟ ಭಾವನೆಯಿಂದ ಮಾತನಾಡಿಲ್ಲ, ಪಂಡಿತನೆಂದು ಭಾವಿಸಿ ಆಡಿಲ್ಲ. ಒಳ್ಳೆಯ ವಿಚಾರ ಮಾಡೋಣ, ವಿಮರ್ಶೆ ಮಾಡೋಣ, ಒಳ್ಳೆಯ ದಾರಿಯಲ್ಲಿ ನಡೆಯೋಣ!
-0-0-0-0-0-