Pages

Friday, July 1, 2011

ಸಾಧನಾ ಪಂಚಕಮ್-ಭಾಗ -1




ತಿಪಟೂರಿನ ಚಿನ್ಮಯ ಕೃಷ್ಣ ಮಂದಿರದ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರಿಂದ ಶ್ರೀ ಶಂಕರಾಚಾರ್ಯರ ಶ್ರೇಷ್ಠ ಕೃತಿಗಳಲ್ಲಿ ಒಂದಾದ " ಸಾಧನಾ ಪಂಚಕಮ್ " ಬಗ್ಗೆ ಹಾಸನದ ಶ್ರೀ ಶಂಕರಮಠದಲ್ಲಿ ಒಂದು ಉಪನ್ಯಾಸಮಾಲೆಯು ನಿನ್ನೆಯಿಂದ ಆರಂಭವಾಗಿದೆ. ಸಾಧನಾಮಾರ್ಗದಲ್ಲಿರುವವರಿಗೆ ರಸದೂಟದಂತಿರುವ ಈ ಉಪನ್ಯಾಸವನ್ನು ಕೇಳಲೇ ಬೇಕು.ಸಾಧನಾಪಂಚಕಮ್ ನಲ್ಲಿ ಒಟ್ಟು ಐದು ಶ್ಲೋಕಗಳು. ಒಂದೊಂದರಲ್ಲೂ ಎಂಟೆಂಟು ಸಾಧನಾ ಪಥದ ಮೆಟ್ಟಿಲುಗಳು. ಚೈತನ್ಯ ತುಂಬಿದ ಉಪನ್ಯಾಸವನ್ನು ಇಂದಿನಿಂದ ನೀವು ಕೂಡ ಇಲ್ಲಿ ಕೇಳಬಹುದು.

ಶ್ಲೋಕ ಮತ್ತು ಭಜನ್

ಸಾಧನ ಪಂಚಕಮ್ ಪರಿಚಯ

ಮೆಟ್ಟಿಲು-1
ವೇದೋ ನಿತ್ಯಮಧೀಯತಾಮ್

ಮೆಟ್ಟಿಲು-2+3
ತದುದಿತಂ ಕರ್ಮ ಸ್ವನುಷ್ಠೀಯತಾಮ್
ತೇನೇಶಸ್ಯ ಅಪಚಿತಿ: ವಿಧೀಯತಾಮ್

ಮೆಟ್ಟಿಲು-4+5+6
ಕಾಮ್ಯೇ ಮತಿಸ್ತ್ಯಜ್ಯತಾಮ್
ಪಾಪೌಘ: ಪರಿಧೂಯತಾಮ್
ಭವಸುಖೇ ದೋಷೋsನುಸಂಧೀಯತಾಮ್

Wednesday, June 29, 2011

ನೆಚ್ಚುವುದು-ಮೆಚ್ಚುವುದು


ನೆಚ್ಚುವುದು-ಮೆಚ್ಚುವುದು

[ ಸ್ನೇಹಿತರೇ, ’ಜಗದಮಿತ್ರನ ಕಗ್ಗ’ದ ೨೩ನೇ ಕಂತು ನಿಮ್ಮೆಲ್ಲರ ಓದಿಗಾಗಿ: ]

ಯಾರದೋ
ಮೆಚ್ಚುಗೆಯ ದಾರಿಕಾಯಲು ಬೇಡ
ಯಾರನೋ ನಂಬಿ ನೀ ಜೀವಿಸಲು ಬೇಡ
ಭೂರಿ ಭೋಜನ ನಿನಗೆ ದೈವವಂ ನೆಚ್ಚಿದಡೆ
ಸಾರಿ ನೀ ಅದ ನಂಬು | ಜಗದಮಿತ್ರ

ಕೂರಿಸುತ ತೇರನೆಳೆವರು ನೀನು ಗೆದ್ದಾಗ
ಹಾರಿಸುವರಷ್ಟು ಪಟಾಕಿ ತೋಪುಗಳ
ಜಾರಿಕೊಳ್ಳುವರೆಲ್ಲ ನೀ ಬಿದ್ದು ಅಳುವಾಗ
ದೂರವಿಡು ಮೊಳದಷ್ಟು | ಜಗದಮಿತ್ರ

ಹಾರಿ ಬಂದಿಹ ಹದ್ದು ಹರೆದು ಹೋಗುವ ರೀತಿ
ಊರು ಉದರವು ಬೆನ್ನು ಸೊಂಟ ಕೈಕಾಲು
ಭಾರ ಹೇರಿದ ಹಾಗೆ ಬಳಲುವುದು ಕಾಯಿಲೆಯೊಳ್
ದೂರುವುದು ಯಾರಲ್ಲಿ ? ಜಗದಮಿತ್ರ

ನೂರೆಂಟು ತಿನಿಸುಗಳು ನಾನಾ ಭಕ್ಷ್ಯಗಳು
ಸೂರೆಹೊಡೆವವು ಕಣ್ಣು ಹಾಯಿಸಲು ಮನವ
ಮಾರಕವು ಜಿಹ್ವಾ ಚಾಪಲ್ಯ ಜೀವಕ್ಕೆ
ಮೀರದಂತಿರಲಿ ಮಿತಿ | ಜಗದಮಿತ್ರ

ಆರು ಗಾವುದ ನಡೆದು ನೂರು ಮೆಟ್ಟಿಲು ತುಳಿದು
ಊರುದ್ದ ಅಲೆಸಿ ದಂಡಿಸು ಶರೀರವನು
ಬೇರಾವ ಮಾರ್ಗಕಿಂ ಯೋಗವತಿಸೂಕ್ತ
ಆರೋಗ್ಯ ಸೂತ್ರವಿದು | ಜಗದಮಿತ್ರ

--ವಿ.ಆರ್.ಭಟ್

Wednesday, June 22, 2011

ವೇದೋಕ್ತ ಜೀವನ ಪಥ: ಮಾನವಧರ್ಮದ ಮೂರು ಅಭಿನ್ನ ಅಂಗಗಳು - ೧:

ಋತದ, ಅಂದರೆ, ಈಶ್ವರೀಯ ವಿಧಾನವಾದ ಧರ್ಮದ ರಕ್ಷಕನು ತನ್ನ ಹೃದಯದಲ್ಲಿ ಮೂರು ಪವಿತ್ರ ತತ್ತ್ವಗಳನ್ನು ರೂಢಿಸಿಕೊಳ್ಳುತ್ತಾನೆ, ಜ್ಞಾನ, ಕರ್ಮ, ಉಪಾಸನೆಗಳೇ ಆ ಮೂರು ತತ್ತ್ವಗಳು ಎಂದು ಹೇಳಿದ್ದೇವಷ್ಟೇ? ಅವು ಮೂರೂ ಧರ್ಮದ ಕೇವಲ ಅಂಗಗಳಲ್ಲ, ಧರ್ಮದ ಅಭಿನ್ನವಾದ, ಅವಿಚ್ಛಿನ್ನವಾದ ಅಂಗಗಳು. ಆ ಮೂರರಲ್ಲಿ ಯಾವುದೊಂದು ನಷ್ಟವಾದರೂ, ಧರ್ಮ ಪರಿಪೂರ್ಣವಾಗಿ ಉಳಿಯುವುದಿಲ್ಲ. ವೇದ ಎಂಬ ಶಬ್ದದ ಅರ್ಥ, ಜ್ಞಾನ ಎಂದು. ಋಗ್ವೇದ - ಅಥರ್ವವೇದಗಳಲ್ಲಿ ಮುಖ್ಯತಃ ಆಧ್ಯಾತ್ಮಿಕ, ಭೌತಿಕ ಜ್ಞಾನ-ವಿಜ್ಞಾನಗಳೂ, ಯಜುರ್ವೇದದಲ್ಲಿ ಮುಖ್ಯತಃ ಕರ್ಮವಿಧಾನವೂ, ಸಾಮವೇದದಲ್ಲಿ ಮುಖ್ಯತಃ ಉಪಾಸನಾ ಸಂವಿಧಾನವೂ ಉಪದೇಶಿಸಲ್ಪಟ್ಟಿವೆ. ಇದೇ ಕಾರಣದಿಂದ, ಈಶ್ವರೋಕ್ತ ವೇದಗಳು ಸಂಖ್ಯೆಯಲ್ಲಿ ನಾಲ್ಕು ಇದ್ದರೂ, ಚತುರ್ವೇದವೇತ್ತರನ್ನು ತ್ರೈವಿದ್ಯರು ಎಂದು ವೈದಿಕ ಸಾಹಿತ್ಯದಲ್ಲಿ ಹೇಳಲಾಗಿದೆ.
ಧರ್ಮದ ಪ್ರಥಮ ಅಂಗವಾದ ಜ್ಞಾನವನ್ನು ತೆಗೆದುಕೊಳ್ಳೋಣ. ಜ್ಞಾನವು ಧರ್ಮದ ಶಿರಸ್ಸಿದ್ದಂತೆ. ವೇದವು ಹೇಳುತ್ತಲಿದೆ:-


ಜ್ಯೋತಿರ್ವೃಣೀತ ತಮಸೋ ವಿಜಾನನ್ನಾರೇ ಸ್ಯಾಮ ದುರಿತಾದಭೀಕೇ |
ಇಮಾ ಗಿರಃ ಸೋಮಪಾಃ ಸೋಮವೃದ್ಧ ಜುಷಸ್ವೇಂದ್ರ ಪುರುತಮಸ್ಯ ಕಾರೋಃ ||
(ಋಕ್. ೩.೩೯.೭.)


ಮಾನವನು, [ತಮಸಃ] ಅಂಧಕಾರದಿಂದ ಸರಿದು, [ವಿಜಾನನ್] ಜ್ಞಾನವನ್ನು ಗಳಿಸಿ, [ಜ್ಯೋತಿರ್ವೃಣೀತ] ಜ್ಯೋತಿಯನ್ನು ಪಡೆದುಕೊಳ್ಳಬೇಕು. ಹೀಗೆ ಮಾಡಿದಾಗಲೇ, ದುರಿತಾತ್ ಅರೇ] ದುರ್ಗತಿಯಿಂದ ದೂರಸರಿದು, [ಅಭೀಕೇ ಸ್ಯಾಮ] ನಿರ್ಭಯನಾದ ಸ್ಥಿತಿಯಲ್ಲಿ ಇರಬಲ್ಲೆವು. ಆದಕಾರಣ, [ಸೋಮಪಾಃ] ವಿವೇಚನೆಯನ್ನು ಕಾಪಾಡಿಕೊಳ್ಳುವ, [ಸೋಮವೃದ್ಧ] ವಿವೇಕದಿಂದಲೇ ವರ್ಧಿತನಾಗುವ [ಇಂದ್ರ] ದೇಹಾಧೀಶನಾದ ಇಂದ್ರಿಯವಂತನಾದ ಜೀವನೇ! [ಪುರುತಮಸ್ಯ] ಪೂರ್ಣತಮನಾದ [ಕಾರೋಃ] ಜಗತ್ಕರ್ತೃವಿನ, [ಇಮಾ ಗಿರಃ] ಈ ಮಾತುಗಳನ್ನು [ಜುಷಸ್ವ] ಪ್ರೀತಿಯಿಂದ ಆಲಿಸು.
ಈ ಮಂತ್ರದಲ್ಲಿ ಉಕ್ತವಾಗಿರುವ ಅಂಧಕಾರ, ಭೌತಿಕ ಪ್ರಕಾಶದ ಅಭಾವವಲ್ಲ, ಆಧ್ಯಾತ್ಮಿಕವಾದ ಅಂಧಕಾರ, ಎಂದರೆ ಅಜ್ಞಾನ. ಇಲ್ಲಿ ಹೇಳಿರುವ ಜ್ಯೀತಿಯೂ ಭೌತಿಕ ಪ್ರಕಾಶವಲ್ಲ, ಆಧ್ಯಾತ್ಮಿಕ ಪ್ರಕಾಶ, ಎಂದರೆ ಜ್ಞಾನ. ದುರಿತದಿಂದ, ದುರ್ವೃತ್ತಿಯಿಂದ, ದುರಾಚಾರದಿಂದ ಸರಿದು ಅಭಯದ ಸ್ಥಿತಿಯನ್ನು ಮುಟ್ಟುವ ಉಪದೇಶವಿರುವುದರಿಂದ, ಈ ನಮ್ಮ ಕಥನದ ಔಚಿತ್ಯ ಸ್ಪಷ್ಟವಾಗುವುದು. ಈ ಬಗೆಯ ನಿರ್ಮಲಜ್ಞಾನ ಪಡೆಯಲಾರದ ಮಾನವ, ಆಕಾರದಿಂದ ಮಾತ್ರ ಮಾನವನಾಗಿ ಕಂಡರೂ, ವಸ್ತುತಃ ಪಶುವಿಗಿಂತ ನೀಚ ಮಟ್ಟದಲ್ಲಿರುತ್ತಾನೆ. ಕಾರಣವೇನೆಂದರೆ, ಕೇವಲ ಸ್ವಾಭಾವಿಕ ಪ್ರವೃತ್ತಿಯಿಂದ ಜೀವನ ನಡೆಯಿಸುವ ಪಶುಗಳು ಮತ್ತು ಪಕ್ಷಿಗಳೂ ಕೂಡ, ಮಾರ್ಗ ತಪ್ಪಿ ನಡೆಯುವ ಸಂಭವವಿಲ್ಲ. ಆದರೆ ಜ್ಞಾನವಿಹೀನನಾದ ಮಾನವ, ಕರ್ತವ್ಯಾಕರ್ತವ್ಯಗಳ ನಿರ್ಣಯ ಮಾಡಲಾರದೆ, ಪಾಪಮಾರ್ಗದಲ್ಲಿ ಕಾಲಿಡುತ್ತಾನೆ. ನಿಜವಾಗಿ ಅಜ್ಞಾನದೆಶೆಯಲ್ಲಿ ನಡೆಯುವುದೆಂದರೆ, ಕತ್ತಲಿನಲ್ಲಿ ಎಡವಿದಂತೆಯೇ ಸರಿ. ಅಜ್ಞಾನವೆಂದರೆ ಆಧ್ಯಾತ್ಮಿಕ ಕತ್ತಲೆಯೆಂದು ಹೇಳಿಯೇ ಇದ್ದೇವೆ.
************

Monday, June 20, 2011

ನೀ ದುರ್ಗಿ ಯಾಗುವೆ ಎಂದು?

ಓ ತಾಯಿ ಭಾರತಿಯೆ
ನೀ ದುರ್ಗಿ ಯಾಗುವೆ ಎಂದು?||

ಕಳ್ಳ ಕಾಕರು ಸೇರಿ
ನಮ್ಮನಾಳಲುನೀನು
ಕಣ್ಮುಚ್ಚಿ ಕುಳಿತಿರುವೆ
ಇದು ನಿನಗೆ ಭೂಷಣವೇ?||

ಮಳ್ಳಿತನದಿ ಮಾತಾಡಿ
ಮರುಳು ಮಾಡಿ
ನಿನ್ನ ಪೂಜಿಪ ನೆಪದಿ
ಕೊಳ್ಳೆ ಹೊಡೆಯುವರು
ನಿನ್ನ ಸಂಪತ್ತನ್ನೇ
ಲೂಟಿ ಮಾಡುವರು
ಮೌನವೇತಕೆ ತಾಯೆ
ನೀ ದುರ್ಗಿ ಯಾಗುವೆ ಎಂದು?||

ಮಾನ ಮರ್ಯಾದೆಗಳ
ಒತ್ತೆ ಇಟ್ಟವರೆಲ್ಲಾ
ನಮ್ಮನಾಳಲು ನಾವು
ನಾಚುವುದೆ ಇಲ್ಲ
ಸತ್ತು ಹೋಗಿದೆಯಲ್ಲಾ
ಅಂತ:ಸತ್ವವು ತಾಯೆ
ಸಿಡಿದೇಳು ಮಲಗಿರುವ
ನಮ್ಮ ಕಣ್ಣ ತೆರಸು||

Thursday, June 16, 2011

ಆತ್ಮೀಯ ಅಭಿಮಾನೀ ಓದುಗರೇ,
ವೇದಸುಧೆಗೆ ಪ್ರೇರಕರಾಗಿರುವ ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಆರೋಗ್ಯವು ಉತ್ತಮವಾಗಿಲ್ಲ.ಅವರಿಗೆ ಒಂದಿಷ್ಟು ದಿನಗಳ ವಿಶ್ರಾಂತಿ ಅನಿವಾರ್ಯವಾಗಿ ಬೇಕಾಗಿದೆ. ಆದ್ದರಿಂದ ಇನ್ನು ೫-೬ ತಿಂಗಳ ಕಾಲ ಮಾನ್ಯ ಓದುಗರು ಅವರೊಡನೆ ಸಮಾಲೋಚಿಸಲು ಸಾಧ್ಯವಾಗುವುದಿಲ್ಲ.ಆದರೆ ಅವರ ವಿಚಾರಗಳ ಧ್ವನಿಯನ್ನು ಈಗಾಗಲೇ ವೇದಸುಧೆಯಲ್ಲಿ ಸಾಕಷ್ಟು ಪ್ರಕಟಿಸಲಾಗಿದೆ.ಅದರ ಉಪಯೋಗವನ್ನು ಯಾವಾಗಲೂ ಪಡೆಯಬಹುದು.ವೇದಸುಧೆಯ ಹಲವು ಪುಟಗಳಲ್ಲಿ ಹರಡಿಹೋಗಿರುವ ಅವರ ವಿಚಾರಗಳನ್ನು "ಶರ್ಮರ ಪುಟ" ಕ್ಕೆ ವರ್ಗಾಯಿಸುವ ಪ್ರಯತ್ನ ಸಾಗಿದೆ. ಬ್ಲಾಗಿನ ತಲೆಬರಹದಡಿ ಕಾಣುವ "ಶರ್ಮರ ಪುಟ" ವನ್ನು ಕ್ಲಿಕ್ ಮಾಡಿದರೆ ಶರ್ಮರ ಹಲವು ಆಡಿಯೋ ಗಳನ್ನು ಕೇಳಬಹುದಾಗಿದೆ. ಎಲ್ಲರ ಸಹಕಾರ ಎಂದಿನಂತಿರಲಿ.
ನಮಸ್ಕಾರಗಳು.
-ಹರಿಹರಪುರಶ್ರೀಧರ್

ಯೋಚಿಸಲೊ೦ದಿಷ್ಟು...೩೭

೧.ಮದುವೆಯ ಬ೦ಧನ ಯಶಸ್ವಿಯಾದರೂ “ ಪರಸ್ಪರ ಕ್ಷಮಾಗುಣ“ ಇಲ್ಲದಿದ್ದರೆ ಬಹುಕಾಲ ಉಳಿಯುವುದಿಲ್ಲ- ಎಡ್ವೀಟ್
೨. ನಮಗೆ ನಾವೇ ಕೊಡಬಹುದಾದ ಮೆಚ್ಚಿನ ಕಾಣಿಕೆ “ಸ್ನೇಹಿತ“- ಅರಿಸ್ಟಾಟಲ್
೩. ನಮಗೆ ಸ್ನೇಹಿತರು ಬೇಕಾದರೆ ನಾವು ಸ್ನೇಹಿತರಾಗಿರಬೇಕು!- ಎಮರ್ ಸನ್
೪.ಸ್ನೇಹ ಸೌಧದ ಗಟ್ಟಿ ನೆಲೆಗೆ ಅದನ್ನು ಸದಾ ದುರಸ್ತಿಗೊಳಿಸುತ್ತಿರಬೇಕಾಗುತ್ತದೆ!
೫. ನಗು ಸ್ನೇಹಕ್ಕೆ ಅತ್ಯುತ್ತಮ “ಆರ೦ಭ“. ಅಲ್ಲದೇ ಸ್ನೇಹದ ಅತ್ಯುತ್ತಮ ಮುಕ್ತಾಯ ಸಹಾ ಅದೇ!- ಆಸ್ಕರ್ ವೈಲ್ಡ್
೬. ಸುಖ ಸ್ನೇಹಿತರನ್ನು ಕರೆತ೦ದರೆ, ಕಷ್ಟ ಅವರ ಅರ್ಹತೆಯನ್ನು ಪರಿಶೀಲಿಸುತ್ತದೆ!
೭.ಸ್ನೇಹವು ದು:ಖವನ್ನು ಕಡಿಮೆಗೊಳಿಸಿ, ಸುಖವನ್ನು ದ್ವಿಗುಣ ಗೊಳಿಸುತ್ತದೆ.
೮. ಅದೃಷ್ಟ ನಮ್ಮ ಬ೦ಧುಗಳನ್ನು ಕರೆತ೦ದರೆ, ಆಯ್ಕೆ ನಮ್ಮ ಸ್ನೇಹಿತರನ್ನು ತರುತ್ತದೆ-ಫ್ರಾನ್ಸಿಸ್ ಬೇಕನ್
೯. ಸ್ನೇಹಿತ ಅನುಕೂಲವಿದ್ದಾಗ ಆಹ್ವಾನ ಬ೦ದರೆ ಹೋಗಬೇಕು. ಆತನಿಗೆ ಅನಾನುಕೂಲವಾದರೆ ಆಹ್ವಾನ ಇಲ್ಲದೆಯೂ ಹೋಗಬೇಕು!
೧೦. ನಮ್ಮ ಯೋಗ್ಯತೆಯನ್ನು ನಾವು ಮತ್ತೊಬ್ಬರೊ೦ದಿಗೆ ಜಗಳವಾಡುವಾಗಿನ ನಮ್ಮ ನಡೆಯನ್ನು ನೋಡಿ ತೀರ್ಮಾನಿಸಬಹುದು- ಜಾರ್ಜ್ ಬರ್ನಾಡ್ ಷಾ
೧೧.ಮದುವೆಯಾಗದವನು “ಇದೆ೦ಥಾ ಬಾಳು“ ಎ೦ದು ಗೋಳಿಟ್ಟುಕೊ೦ಡರೆ ಮದುವೆಯಾದವನು “ಇದೆ೦ಥಾ ಗೋಳು“ ಎ೦ದು ಅಳುತ್ತಾನೆ- ಅಕಬರ ಅಲಿ
೧೨.ಪರಸ್ಪರ ಅರ್ಥೈಸಿಕೊಳ್ಳಲು ನಮ್ಮಲ್ಲಿ ಸ್ವಲ್ಪವಾದರೂ ಸಾಮರಸ್ಯವು ಹಾಗೆಯೇ ಪರಸ್ಪರ ಪ್ರೇಮಿಸಲು ನಮ್ಮಲ್ಲಿ ಸ್ವಲ್ಪವಾದರೂ ವ್ಯತ್ಯಾಸವಿರಲೇಬೇಕು.
೧೩. ಹೋರಾಟ ಅನಿವಾರ್ಯವಿದ್ದಲ್ಲಿ ನಮ್ಮೆಲ್ಲಾ ಬಲವನ್ನುಪಯೋಗಿಸಿಯೇ ಹೋರಾಡಬೇಕೇ ವಿನ: ಪ್ರತಿಸ್ಪರ್ಧಿಯ ದೌರ್ಬಲ್ಯವನ್ನು ಉಪಯೋಗಿಸಿಯಲ್ಲ!!
೧೪.ರಾಜಕಾರಣಿ ನೀತಿಕೋವಿದನಾಗಿರುವುದು ಸಾಧ್ಯವಿಲ್ಲ!
೧೫.ಮಾನವನ ಬಾಳು ಗೋಪುರದ ಗಡಿಯಾರವಿದ್ದ೦ತೆ! ತಲೆ ಎತ್ತಿದರೆ ಮಾತ್ರ ಕಾಣುತ್ತದೆ- ಎತ್ತಲು ತಲೆ ಎ೦ಬುದೊ೦ದು ಬೇಕು!- ಎತ್ತಬೇಕು ಎ೦ಬುದು ಆ ತಲೆಗೆ ತೋಚಬೇಕು!!- ಬೀಚಿ