Pages

Friday, July 1, 2011

ಸಾಧನಾ ಪಂಚಕಂ ಭಾಗ-2

ಸಾಧನಾ ಪಂಚಕಂ -ಮೆಟ್ಟಲು-1 ರಿಂದ 6 ವರಗೆ ಪುನಃ ಸ್ಮರಣೆ

ಸಾಧನಾ ಪಂಚಕಂ -ಮೆಟ್ಟಲು- 7
ಆತ್ಮೇಚ್ಛಾ ವ್ಯವಸೀಯತಾಮ್
ಭಾವಾರ್ಥ: ಸ್ವಸ್ವರೂಪವನ್ನು ಅರಿತುಕೊಳ್ಳಲು ಪರಿಶ್ರಮ ಪಡು

ಮೌನ ಮಂಥನ...

ಕೇವಲ ಮಾತನಾಡದಿರುವುದು ಮೌನವಲ್ಲ. ಮನಸ್ಸಿನ ಆಲೋಚನೆಗಳನ್ನು ತೊಡೆಯುವುದು ಮೌನ.
ಮೌನದಿಂದ ಮನನ. ಮನನದಿಂದ ಮಂಥನ. ಮಂಥನದಿಂದ ಜೀವನ ದರ್ಶನವಾಗುತ್ತದೆ. ಹೊಸಬೆಳಕು; ಹೊಸತಿರುವೂ ಕೂಡ ಗೋಚರಿಸುತ್ತದೆ. ನಾವು ನಿದ್ರೆಯಿಂದ ಎಚ್ಚೆತ್ತ ಕೂಡಲೇ ಮನಸ್ಸು ಕೆಲಸ ಮಾಡಲಿಕ್ಕಾರಂಭಿಸುತ್ತದೆ. ಆದ್ದರಿಂದ ಮೌನದಲ್ಲಿದ್ದೂ ಚಿಂತೆಗಿಂತಲೂ ಚಿಂತನಶೀಲತೆ ಬೆಳೆಸಿಕೊಳ್ಳಬೇಕು. ಚಿಂತೆಗಳು ಇದ್ದೇ ಇರುತ್ತವೆ; ಇರಲಿ. ಅವು ಚಿಂತನಗಳಾಗಿ ಸಚ್ಛದಾನಂದವನೆ ತರಲಿ.
ರಾತ್ರಿ ಮನಸ್ಸು ಕೆಲಸ ಮಾಡುತ್ತಲೇ ಇದ್ದರೆ ನಿದ್ರೆ ಹತ್ತದು. ಮನಸ್ಸು ಸ್ವಸ್ಥವಾಗಿ ನಿರ್ಲಿಪ್ತಗೊಳ್ಳುವುದರಿಂದಲೆ ನಿದ್ರೆ ಬರುತ್ತದೆ. ನಿದ್ರೆಯಲ್ಲಿನ ಸುಪ್ತ ಮನಸ್ಥಿತಿಯೇ ಬೇರೆ. ಆಗ ಕನಸುಗಳೂ ಬೀಳಬಹುದು. ಗಾಢ ನಿದ್ರೆಯಲ್ಲಿ ಕನಸುಗಳ ಕಾಟವೂ ಇಲ್ಲ; ಇಹ ಪರದ ಗೊಡವೆಯೂ ಇರುವುದಿಲ್ಲ!
ಮೌನದಲ್ಲಿ ಧ್ಯಾನವಿದೆ. ಧ್ಯಾನವೆಂದರೆ, ಕೇವಲ ಜಪ, ಮಂತ್ರ ಪಠಣೆಯಲ್ಲ. ಅದು ಪ್ರಾಥಮಿಕ ಪ್ರಾರ್ಥನೆಯಾಗುತ್ತದೆ. ಆನಂತರದ ಕ್ಷಣಗಳಲ್ಲಿ ಮಾನದಿಂದ ಉಸಿರಾಟವನ್ನು ಗಮನಿಸುವುದಷ್ಟೇ.
ಆ ಉಸಿರಾಟದಲ್ಲಿ ಮನಸ್ಸಿನ ತಾಕಲಾಟವಿದೆ. ಅದು ತಂತಾನೆ ತಹಬಂಧಿಗೆ ಬರುತ್ತದೆ. ಆ ಮೌನದಲ್ಲೇ ತಾಳ್ಮೆಯಿಂದ ನಿರೀಕ್ಷಣೆ ಮಾಡುವುದಾಗಬೇಕು. ಹಾಗೇ ಸ್ತಬ್ದವಾಗಿ ನಿಶ್ಚಿಂತೆಯಿಂದ ನಿರ್ಲಿಪ್ತತೆಯತ್ತ ಸಾಗುತ್ತಲಿದ್ದಾಗಲೇ ಆತ್ಮದ ಅರಿವಾಗುತ್ತದೆ.
ಆ ಅರಿವಿನಲ್ಲಿಯೆ ಧಾರಣಾವಸ್ಥೆಯಿದೆ. ಆ ಧಾರಾಣಾವಸ್ಥೆಯಿಂದಾಚೆಗೆ ಸಾಗಿ ಸಮಾಧಿ ಸ್ಥಿತಿ ತಲುವುದು ಕಡಿಮೆ ಸಾಧನೆಯೇನಲ್ಲ.... ಆ ಶೂನ್ಯಸಾನ್ನಿಧ್ಯದಲ್ಲೇ ಬ್ರಹ್ಮಾನಂದ ಹೊಂದುವುದು ಹಾಗೂ ಪರಮಾಪ್ತನಾದ
ಪರಮಾತ್ಮನನ್ನೂ ಕಾಣವುದೆಂದರೆ ಅಂತರಂಗಲ್ಲಿ ಅತೀವ ವ್ಯಾಕುಲಭಾವ ಸ್ಫುರಿಸಬೇಕು. ಅನಿತ್ಯ ಚೇತನವು ಸೂಕ್ಷ್ಮ ಶರೀರದಲ್ಲಿ ಅಂತರ್ಲೀನವಾಗಬೇಕು ಆಗಲೇ ಆತ್ಮ ಸಾಕ್ಷಾತ್ಕಾರವಾಗುವುದು.
ಶೂನ್ಯ ಸಾನ್ನಿಧ್ಯ

ಸಾಧನಾ ಪಂಚಕಮ್-ಭಾಗ -3

ಸಾಧನಾ ಪಂಚಕಂ -ಮೆಟ್ಟಲು- 8+ 9 + 10
8. ನಿಜಗೃಹಾತ್ ತೂರ್ಣಂ ವಿನಿರ್ಗಮ್ಯತಾಮ್
ಭಾವಾರ್ಥ:ಶರೀರವೆಂಬ 'ಗೃಹ' ದ ಸಂಕೋಲೆಯಿಂದ ಬೇಗನೆ ಬಿಡಿಸಿಕೊಂಡು ಸಾಧನೆಯ ಪಥದಲ್ಲಿ ಮುಂದೆ ಸಾಗು
9.ಸಂಗ: ಸತ್ಸು ವಿಧೀಯತಾಮ್
ಭಾವಾರ್ಥ:ಜ್ಞಾನಿಗಳ ಸಹವಾಸವನ್ನು ಮಾಡು
10.ಭಗವತೋ ಭಕ್ತಿರ್ದೃಢಾಧೀಯತಾಮ್
ಭಾವಾರ್ಥ: ಭಗವಂತನಲ್ಲಿ ದೃಢಭಕ್ತಿಯನ್ನು ನೆಲೆಗೊಳಿಸು


ಸಾಧನಾ
ಪಂಚಕಂ -ಮೆಟ್ಟಲು- 11+ 12 + 13
11.ಶಾಂತ್ಯಾದಿ: ಪರಿಚೀಯತಾಮ್
ಭಾವಾರ್ಥ: ಶಮದಮಾದಿ ಸದ್ಗುಣಗಳನ್ನು ಬೆಳಸಿಕೊ
12.ದೃಢತರಂ ಕರ್ಮಾಶುಸನ್ತ್ಯಜ್ಯತಾಮ್
ನಿಶ್ಚಯಪೂರ್ವಕವಾಗಿ ಕಾಮ್ಯಕರ್ಮಗಳಲ್ಲಿ ಆಸಕ್ತಿಯನ್ನು ಆದಷ್ಟು ಬೇಗ ತೊರೆದುಬಿಡು
13.ಸದ್ವಿದ್ಯಾನುಪಸೃಪ್ಯತಾಮ್
ಭಾವಾರ್ಥ: ಸದ್ಗುರುಗಳ ಆಶ್ರಯವನ್ನು ಪಡೆ ಮತ್ತು ಅವರಿಗೆ ಸಂಪೂರ್ಣವಾಗಿ ಶರಣಾಗು

ಸಾಧನಾ ಪಂಚಕಮ್-ಭಾಗ -1




ತಿಪಟೂರಿನ ಚಿನ್ಮಯ ಕೃಷ್ಣ ಮಂದಿರದ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರಿಂದ ಶ್ರೀ ಶಂಕರಾಚಾರ್ಯರ ಶ್ರೇಷ್ಠ ಕೃತಿಗಳಲ್ಲಿ ಒಂದಾದ " ಸಾಧನಾ ಪಂಚಕಮ್ " ಬಗ್ಗೆ ಹಾಸನದ ಶ್ರೀ ಶಂಕರಮಠದಲ್ಲಿ ಒಂದು ಉಪನ್ಯಾಸಮಾಲೆಯು ನಿನ್ನೆಯಿಂದ ಆರಂಭವಾಗಿದೆ. ಸಾಧನಾಮಾರ್ಗದಲ್ಲಿರುವವರಿಗೆ ರಸದೂಟದಂತಿರುವ ಈ ಉಪನ್ಯಾಸವನ್ನು ಕೇಳಲೇ ಬೇಕು.ಸಾಧನಾಪಂಚಕಮ್ ನಲ್ಲಿ ಒಟ್ಟು ಐದು ಶ್ಲೋಕಗಳು. ಒಂದೊಂದರಲ್ಲೂ ಎಂಟೆಂಟು ಸಾಧನಾ ಪಥದ ಮೆಟ್ಟಿಲುಗಳು. ಚೈತನ್ಯ ತುಂಬಿದ ಉಪನ್ಯಾಸವನ್ನು ಇಂದಿನಿಂದ ನೀವು ಕೂಡ ಇಲ್ಲಿ ಕೇಳಬಹುದು.

ಶ್ಲೋಕ ಮತ್ತು ಭಜನ್

ಸಾಧನ ಪಂಚಕಮ್ ಪರಿಚಯ

ಮೆಟ್ಟಿಲು-1
ವೇದೋ ನಿತ್ಯಮಧೀಯತಾಮ್

ಮೆಟ್ಟಿಲು-2+3
ತದುದಿತಂ ಕರ್ಮ ಸ್ವನುಷ್ಠೀಯತಾಮ್
ತೇನೇಶಸ್ಯ ಅಪಚಿತಿ: ವಿಧೀಯತಾಮ್

ಮೆಟ್ಟಿಲು-4+5+6
ಕಾಮ್ಯೇ ಮತಿಸ್ತ್ಯಜ್ಯತಾಮ್
ಪಾಪೌಘ: ಪರಿಧೂಯತಾಮ್
ಭವಸುಖೇ ದೋಷೋsನುಸಂಧೀಯತಾಮ್

Wednesday, June 29, 2011

ನೆಚ್ಚುವುದು-ಮೆಚ್ಚುವುದು


ನೆಚ್ಚುವುದು-ಮೆಚ್ಚುವುದು

[ ಸ್ನೇಹಿತರೇ, ’ಜಗದಮಿತ್ರನ ಕಗ್ಗ’ದ ೨೩ನೇ ಕಂತು ನಿಮ್ಮೆಲ್ಲರ ಓದಿಗಾಗಿ: ]

ಯಾರದೋ
ಮೆಚ್ಚುಗೆಯ ದಾರಿಕಾಯಲು ಬೇಡ
ಯಾರನೋ ನಂಬಿ ನೀ ಜೀವಿಸಲು ಬೇಡ
ಭೂರಿ ಭೋಜನ ನಿನಗೆ ದೈವವಂ ನೆಚ್ಚಿದಡೆ
ಸಾರಿ ನೀ ಅದ ನಂಬು | ಜಗದಮಿತ್ರ

ಕೂರಿಸುತ ತೇರನೆಳೆವರು ನೀನು ಗೆದ್ದಾಗ
ಹಾರಿಸುವರಷ್ಟು ಪಟಾಕಿ ತೋಪುಗಳ
ಜಾರಿಕೊಳ್ಳುವರೆಲ್ಲ ನೀ ಬಿದ್ದು ಅಳುವಾಗ
ದೂರವಿಡು ಮೊಳದಷ್ಟು | ಜಗದಮಿತ್ರ

ಹಾರಿ ಬಂದಿಹ ಹದ್ದು ಹರೆದು ಹೋಗುವ ರೀತಿ
ಊರು ಉದರವು ಬೆನ್ನು ಸೊಂಟ ಕೈಕಾಲು
ಭಾರ ಹೇರಿದ ಹಾಗೆ ಬಳಲುವುದು ಕಾಯಿಲೆಯೊಳ್
ದೂರುವುದು ಯಾರಲ್ಲಿ ? ಜಗದಮಿತ್ರ

ನೂರೆಂಟು ತಿನಿಸುಗಳು ನಾನಾ ಭಕ್ಷ್ಯಗಳು
ಸೂರೆಹೊಡೆವವು ಕಣ್ಣು ಹಾಯಿಸಲು ಮನವ
ಮಾರಕವು ಜಿಹ್ವಾ ಚಾಪಲ್ಯ ಜೀವಕ್ಕೆ
ಮೀರದಂತಿರಲಿ ಮಿತಿ | ಜಗದಮಿತ್ರ

ಆರು ಗಾವುದ ನಡೆದು ನೂರು ಮೆಟ್ಟಿಲು ತುಳಿದು
ಊರುದ್ದ ಅಲೆಸಿ ದಂಡಿಸು ಶರೀರವನು
ಬೇರಾವ ಮಾರ್ಗಕಿಂ ಯೋಗವತಿಸೂಕ್ತ
ಆರೋಗ್ಯ ಸೂತ್ರವಿದು | ಜಗದಮಿತ್ರ

--ವಿ.ಆರ್.ಭಟ್

Wednesday, June 22, 2011

ವೇದೋಕ್ತ ಜೀವನ ಪಥ: ಮಾನವಧರ್ಮದ ಮೂರು ಅಭಿನ್ನ ಅಂಗಗಳು - ೧:

ಋತದ, ಅಂದರೆ, ಈಶ್ವರೀಯ ವಿಧಾನವಾದ ಧರ್ಮದ ರಕ್ಷಕನು ತನ್ನ ಹೃದಯದಲ್ಲಿ ಮೂರು ಪವಿತ್ರ ತತ್ತ್ವಗಳನ್ನು ರೂಢಿಸಿಕೊಳ್ಳುತ್ತಾನೆ, ಜ್ಞಾನ, ಕರ್ಮ, ಉಪಾಸನೆಗಳೇ ಆ ಮೂರು ತತ್ತ್ವಗಳು ಎಂದು ಹೇಳಿದ್ದೇವಷ್ಟೇ? ಅವು ಮೂರೂ ಧರ್ಮದ ಕೇವಲ ಅಂಗಗಳಲ್ಲ, ಧರ್ಮದ ಅಭಿನ್ನವಾದ, ಅವಿಚ್ಛಿನ್ನವಾದ ಅಂಗಗಳು. ಆ ಮೂರರಲ್ಲಿ ಯಾವುದೊಂದು ನಷ್ಟವಾದರೂ, ಧರ್ಮ ಪರಿಪೂರ್ಣವಾಗಿ ಉಳಿಯುವುದಿಲ್ಲ. ವೇದ ಎಂಬ ಶಬ್ದದ ಅರ್ಥ, ಜ್ಞಾನ ಎಂದು. ಋಗ್ವೇದ - ಅಥರ್ವವೇದಗಳಲ್ಲಿ ಮುಖ್ಯತಃ ಆಧ್ಯಾತ್ಮಿಕ, ಭೌತಿಕ ಜ್ಞಾನ-ವಿಜ್ಞಾನಗಳೂ, ಯಜುರ್ವೇದದಲ್ಲಿ ಮುಖ್ಯತಃ ಕರ್ಮವಿಧಾನವೂ, ಸಾಮವೇದದಲ್ಲಿ ಮುಖ್ಯತಃ ಉಪಾಸನಾ ಸಂವಿಧಾನವೂ ಉಪದೇಶಿಸಲ್ಪಟ್ಟಿವೆ. ಇದೇ ಕಾರಣದಿಂದ, ಈಶ್ವರೋಕ್ತ ವೇದಗಳು ಸಂಖ್ಯೆಯಲ್ಲಿ ನಾಲ್ಕು ಇದ್ದರೂ, ಚತುರ್ವೇದವೇತ್ತರನ್ನು ತ್ರೈವಿದ್ಯರು ಎಂದು ವೈದಿಕ ಸಾಹಿತ್ಯದಲ್ಲಿ ಹೇಳಲಾಗಿದೆ.
ಧರ್ಮದ ಪ್ರಥಮ ಅಂಗವಾದ ಜ್ಞಾನವನ್ನು ತೆಗೆದುಕೊಳ್ಳೋಣ. ಜ್ಞಾನವು ಧರ್ಮದ ಶಿರಸ್ಸಿದ್ದಂತೆ. ವೇದವು ಹೇಳುತ್ತಲಿದೆ:-


ಜ್ಯೋತಿರ್ವೃಣೀತ ತಮಸೋ ವಿಜಾನನ್ನಾರೇ ಸ್ಯಾಮ ದುರಿತಾದಭೀಕೇ |
ಇಮಾ ಗಿರಃ ಸೋಮಪಾಃ ಸೋಮವೃದ್ಧ ಜುಷಸ್ವೇಂದ್ರ ಪುರುತಮಸ್ಯ ಕಾರೋಃ ||
(ಋಕ್. ೩.೩೯.೭.)


ಮಾನವನು, [ತಮಸಃ] ಅಂಧಕಾರದಿಂದ ಸರಿದು, [ವಿಜಾನನ್] ಜ್ಞಾನವನ್ನು ಗಳಿಸಿ, [ಜ್ಯೋತಿರ್ವೃಣೀತ] ಜ್ಯೋತಿಯನ್ನು ಪಡೆದುಕೊಳ್ಳಬೇಕು. ಹೀಗೆ ಮಾಡಿದಾಗಲೇ, ದುರಿತಾತ್ ಅರೇ] ದುರ್ಗತಿಯಿಂದ ದೂರಸರಿದು, [ಅಭೀಕೇ ಸ್ಯಾಮ] ನಿರ್ಭಯನಾದ ಸ್ಥಿತಿಯಲ್ಲಿ ಇರಬಲ್ಲೆವು. ಆದಕಾರಣ, [ಸೋಮಪಾಃ] ವಿವೇಚನೆಯನ್ನು ಕಾಪಾಡಿಕೊಳ್ಳುವ, [ಸೋಮವೃದ್ಧ] ವಿವೇಕದಿಂದಲೇ ವರ್ಧಿತನಾಗುವ [ಇಂದ್ರ] ದೇಹಾಧೀಶನಾದ ಇಂದ್ರಿಯವಂತನಾದ ಜೀವನೇ! [ಪುರುತಮಸ್ಯ] ಪೂರ್ಣತಮನಾದ [ಕಾರೋಃ] ಜಗತ್ಕರ್ತೃವಿನ, [ಇಮಾ ಗಿರಃ] ಈ ಮಾತುಗಳನ್ನು [ಜುಷಸ್ವ] ಪ್ರೀತಿಯಿಂದ ಆಲಿಸು.
ಈ ಮಂತ್ರದಲ್ಲಿ ಉಕ್ತವಾಗಿರುವ ಅಂಧಕಾರ, ಭೌತಿಕ ಪ್ರಕಾಶದ ಅಭಾವವಲ್ಲ, ಆಧ್ಯಾತ್ಮಿಕವಾದ ಅಂಧಕಾರ, ಎಂದರೆ ಅಜ್ಞಾನ. ಇಲ್ಲಿ ಹೇಳಿರುವ ಜ್ಯೀತಿಯೂ ಭೌತಿಕ ಪ್ರಕಾಶವಲ್ಲ, ಆಧ್ಯಾತ್ಮಿಕ ಪ್ರಕಾಶ, ಎಂದರೆ ಜ್ಞಾನ. ದುರಿತದಿಂದ, ದುರ್ವೃತ್ತಿಯಿಂದ, ದುರಾಚಾರದಿಂದ ಸರಿದು ಅಭಯದ ಸ್ಥಿತಿಯನ್ನು ಮುಟ್ಟುವ ಉಪದೇಶವಿರುವುದರಿಂದ, ಈ ನಮ್ಮ ಕಥನದ ಔಚಿತ್ಯ ಸ್ಪಷ್ಟವಾಗುವುದು. ಈ ಬಗೆಯ ನಿರ್ಮಲಜ್ಞಾನ ಪಡೆಯಲಾರದ ಮಾನವ, ಆಕಾರದಿಂದ ಮಾತ್ರ ಮಾನವನಾಗಿ ಕಂಡರೂ, ವಸ್ತುತಃ ಪಶುವಿಗಿಂತ ನೀಚ ಮಟ್ಟದಲ್ಲಿರುತ್ತಾನೆ. ಕಾರಣವೇನೆಂದರೆ, ಕೇವಲ ಸ್ವಾಭಾವಿಕ ಪ್ರವೃತ್ತಿಯಿಂದ ಜೀವನ ನಡೆಯಿಸುವ ಪಶುಗಳು ಮತ್ತು ಪಕ್ಷಿಗಳೂ ಕೂಡ, ಮಾರ್ಗ ತಪ್ಪಿ ನಡೆಯುವ ಸಂಭವವಿಲ್ಲ. ಆದರೆ ಜ್ಞಾನವಿಹೀನನಾದ ಮಾನವ, ಕರ್ತವ್ಯಾಕರ್ತವ್ಯಗಳ ನಿರ್ಣಯ ಮಾಡಲಾರದೆ, ಪಾಪಮಾರ್ಗದಲ್ಲಿ ಕಾಲಿಡುತ್ತಾನೆ. ನಿಜವಾಗಿ ಅಜ್ಞಾನದೆಶೆಯಲ್ಲಿ ನಡೆಯುವುದೆಂದರೆ, ಕತ್ತಲಿನಲ್ಲಿ ಎಡವಿದಂತೆಯೇ ಸರಿ. ಅಜ್ಞಾನವೆಂದರೆ ಆಧ್ಯಾತ್ಮಿಕ ಕತ್ತಲೆಯೆಂದು ಹೇಳಿಯೇ ಇದ್ದೇವೆ.
************