Pages

Friday, August 10, 2012

ಪಯಃ ಪಾನಂ ಭುಜಂಗಾನಾಂ ಕೇವಲಂ ವಿಷವರ್ಧನಂ


ಪಯಃ ಪಾನಂ ಭುಜಂಗಾನಾಂ ಕೇವಲಂ ವಿಷವರ್ಧನಂ ।
ಉಪದೇಶೋ ಹಿ ಮೂರ್ಖಾಣಾಂ ಪ್ರಕೋಪಾಯ ನ ಶಾಂತಯೇ ॥


ಹಾವುಗಳಿಗೆ ಹಾಲು ಕುಡಿಸುವುದರಿಂದ ಕೇವಲ ವಿಷವನ್ನು ಹೆಚ್ಚಿಸಬಹುದೇ ವಿನಃ ಬೇರೇನೂ ಉಪಯೋಗವಿಲ್ಲ ಅದೇ ರೀತಿ ಮೂರ್ಖರಿಗೆ ಉಪದೇಶ ಮಾಡುವುದರಿಂದ ಕೋಪವು ಕೆರಳುತ್ತದೆಯೇ ವಿನಃ ಶಾಂತವಾಗುವುದಿಲ್ಲ.

ನನ್ನ ಮಾತು:
ಸೂಕ್ತವೇನೋ ಹೀಗೆ ಹೇಳುತ್ತದೆ. ಮೂರ್ಖರಿಗೆ ಉಪದೇಶ ಬೇಡ, ಸರಿ. ಹಾವಿಗೆ ಹಾಲುಣಿಸುವುದು ಕಷ್ಟ, ಆದರೆ ಹಾಲುಣಿಸುವುದು ತಪ್ಪೇ? ನಿಮ್ಮ ಅನಿಸಿಕೆ ಏನು?

ಅನಿತ್ಯಾನಿ ಶರೀರಾಣಿ

ಅನಿತ್ಯಾನಿ ಶರೀರಾಣಿ ವಿಭವೋ ನೈವ ಶಾಶ್ವತಃ ।
ನಿತ್ಯಂ ಸನ್ನಿಹಿತೋ ಮೃತ್ಯುಃ ಕರ್ತವ್ಯೋ ಧರ್ಮ ಸಂಗ್ರಹಃ ॥

ದೇಹ  ನಶ್ವರ. ಸಂಪತ್ತು ಅಶಾಶ್ವತ. ಮೃತ್ಯುವು ಸದಾ ಸಮೀಪದಲ್ಲೆ ಇರುತ್ತಾನೆ, ಆದ್ದರಿಂದ ಒಳ್ಳೆಯ ಕೆಲಸವನ್ನೆ ಸದಾಕಾಲ ಮಾಡಬೇಕು. ಇದ್ದಷ್ಟು ದಿನ ಧರ್ಮಕಾರ್ಯಗಳಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳಬೇಕು. 

Thursday, August 9, 2012

ಹೊಸಬೆಳಕು

ಯೋಚಿಸಲೊ೦ದಿಷ್ಟು... ೫೫



೧. ಯಾವುದೇ ಹೊಸ ಯೋಚನೆಗಳಿಲ್ಲದೇ ದಿನವನ್ನಾರ೦ಬಿಸುವುದು ಒಮ್ಮೊಮ್ಮೆ ಮನಸ್ಸನ್ನು ಶಾ೦ತಗೊಳಿಸುತ್ತದೆ!
೨.  ಬದಲಾವಣೆ ಜಗದ ನಿಯಮ ಮತ್ತು ಅದು ವಾಸ್ತವ !  ನಮ್ಮ ಬೆಳವಣಿಗೆಗೆ ಸಹಕಾರಿಯಾದುದು.
೩.  ತಮ್ಮ ಸು೦ದರ ಕನಸುಗಳಲ್ಲಿ ನ೦ಬಿಕೆ ಇಟ್ಟವರಿಗೆ ಅದನ್ನು ಸಾಧಿಸಲು ಹೊರಟವರಿಗೆ ಭವಿಷ್ಯ ಅವರದ್ದಾಗುತ್ತದೆ!
೪.  ಕತ್ತಲನ್ನು ಇಷ್ಟಪಡುವವರು ಬೆಳಕಿನ ವಿರೋಧಿಗಳಲ್ಲ!
೫.  ಸ೦ತಸದ ಕ್ಷಣಗಳು ಪ್ರೇಮ, ನಿಶ್ಯಬ್ಧ ಹಾಗೂ ಹೆಚ್ಚು ಕಾರ್ಯತತ್ಪರತೆಯಿ೦ದ ಕೂಡಿರುತ್ತವೆ.
೬.  ಸ೦ಪೂರ್ಣ ಏಕಾ೦ತದಲ್ಲಿಯೇ ನೀವು ತೃಪ್ತಿ ಹೊ೦ದಿದ್ದೀರೆ೦ದರೆ, ಜಗತ್ತು ಒಟ್ಟಾಗಿ ನಿಮ್ಮ ಯಶಸ್ಸಿನ ಗುಟ್ಟನ್ನರಿಯಲು ದೌಡಾಯಿಸುತ್ತದೆ!
೭.  ಗಳಿಸುವುದು ಎಷ್ಟು ಮುಖ್ಯವೋ ಉಳಿಸುವುದೂ ಅಷ್ಟೇ ಮುಖ್ಯ!
೮.  ನಿಮ್ಮ ಉದ್ದೇಶಿತ ಸ೦ಪರ್ಕ ಹಾಗೂ ವಾಸ್ತವ ನೆಲೆಯನ್ನು ಕ೦ಡುಕೊ೦ಡ ಕೂಡಲೇ ಭಿನಾಭಿಪ್ರಾಯಗಳು ಹುಟ್ಟಿಕೊಳ್ಳುವುದು ಸಹಜವೇ!
೯.  ಲಾಭ ಗಳಿಕೆ ಐಚ್ಛಿಕವಾದರೆ ಹಣ ಗಳಿಕೆ ವಾಸ್ತವ!
೧೦. ಒ೦ದಕ್ಕಿ೦ತ ಮತ್ತೊ೦ದು ಎತ್ತರದ ಶಿಖರಗಳು ಇದ್ದೇ ಇವೆ. ಒ೦ದರ ತುದಿಯೇ “ ಅತ್ಯ೦ತ ಎತ್ತರ“ ಎ೦ಬ ನಿರ್ಧಾರಕ್ಕೆ ಬರಲಾಗದು!
೧೧. ತ೦ದೆಯವರ ತಲೆಯಲ್ಲಿ ಹೆಚ್ಚುತ್ತಿರುವ ಒ೦ದೊ೦ದೂ ಬಿಳಿಕೂದಲು ಮಕ್ಕಳ ಜವಾಬ್ದಾರಿಯು ಹೆಚ್ಚುತ್ತಿರುವುದರ ಸ೦ಕೇತ!
೧೨. “ ಪ್ರಾರ್ಥನೆ “ ಕಷ್ಟಗಳು ಬ೦ದಾಗ ಮಾತ್ರ ಉಪಯೋಗಿಸುವ ಸಾಧನವಲ್ಲ! ಜೀವನದುದ್ದಕ್ಕೂ ಸರಿ ದಾರಿಯಲ್ಲಿ ನಡೆಯಬೇಕಾದರೆ ಅದೊ೦ದು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುವ ಸಾಧನ!
೧೩.  ತಪ್ಪು ವ್ಯಕ್ತಿಗಳಿ೦ದ ನೋವನ್ನು ಅನುಭವಿಸಿದರೆ ಮಾತ್ರವೇ ಸರಿ ವ್ಯಕ್ತಿಗಳ ಆಯ್ಕೆಯನ್ನು ನಾವು ಪ್ರಾರ೦ಭಿಸುವುದು!
೧೪. ಭೂತ ಭವಿಷ್ಯತ್ತುಗಳಿಗಿ೦ತಲೂ ವರ್ತಮಾನದ ನಮ್ಮ ಸ್ಥಿತಿ-ಗತಿಗಳು ಮುಖ್ಯ!  ಹಿ೦ದೆ ನಾವು ಏನಾಗಿದ್ದೆವು ಎನ್ನುವುದಕ್ಕಿ೦ತಲೂ ಇ೦ದು ನಾವು ಏನಾಗಿದ್ದೇವೆ ಎ೦ಬುದೇ ಮುಖ್ಯವಾದುದು. ಭೂತಕಾಲವು ಕಣ್ಮು೦ದೆ ಬರದು. ಭವಿಷ್ಯತ್ತು ಕಣ್ಮು೦ದೆ ಕನಸಿನ ರೂಪದಲ್ಲಿ ಕಾಣಿಸಿಕೊ೦ಡರೂ ಅದು ಸ೦ಭಾವ್ಯವೇ ಯಾ ಅಸ೦ಭವವೇ ಎ೦ಬುದರಲ್ಲಿ ಖಚಿತತೆಯಿಲ್ಲ!
೧೫. ವರ್ತಮಾನವೆ೦ಬುದು ವಾಸ್ತವ! ಅದನ್ನು ಒಪ್ಪಿಕೊಳ್ಳಲೇಬೇಕು!

Wednesday, August 8, 2012

ಕಾಕ ಆಹ್ವಯತೇ ಕಾಕಾನ್


Sadyojata Bhatta

ಕಾಕ ಆಹ್ವಯತೇ ಕಾಕಾನ್ ಯಾಚಕೋ ನತು ಯಾಚಕಾನ್ ।

ಕಾಕ ಯಾಚಕಯೋರ್ಮಧ್ಯೇ ವರಮ್ ಕಾಕೋ ನ ಯಾಚಕಃ ॥


ತಿನ್ನಲು ಆಹಾರ ಸಿಕ್ಕಿದಾಗ ಕಾಗೆಗೆಳು ಉಳಿದ ಕಾಗೆಗಳನ್ನು ಕರೆಯುತ್ತದೆ. ಭಿಕ್ಶುಕನು ತನಗೆ ಭಿಕ್ಶೆ ಸಿಕ್ಕಿದಾಗ ಉಳಿದ ಭಿಕ್ಷುಕರನ್ನು ಹತ್ತಿರ ಸೇರಿಸಲಾರ . ಆದುದರಿಂದ ಕಾಗೆ ಮತ್ತು ಭಿಕ್ಷುಕರಲ್ಲಿ ಕಾಗೆಯೇ ಶ್ರೇಷ್ಟ. ತನಗೆ ಸಿಕ್ಕಿರುವುದನ್ನು ಹಂಚಿಕೊಳ್ಳುವ    ಮನೊಭಾವ ಅತಿ ಮುಖ್ಯವಾದದ್ದು.



ಮಂತ್ರಕ್ಕೆ ಮಾವಿನಕಾಯಿ ಉದುರೀತೇ

ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದೇ ಒಂದಿಷ್ಟು ಅಧ್ಯಯನ ಮಾಡಲು,ಸಿಕ್ಕಬೇಕಾಗಿದ್ದ ವಯಸ್ಸಿನಲ್ಲಿ ಸಿಗದಿದ್ದ ಅವಕಾಶಗಳು ಈಗಲಾದರೂ ಸಿಕ್ಕುತ್ತಿದೆ. ಅದಕ್ಕಾಗಿ ಗುರುಗಳಾದ ಶ್ರೀ ಸುಧಾಕರಶರ್ಮರು, ಶ್ರೀ ವಿಶ್ವನಾಥಶರ್ಮರನ್ನು ಸ್ಮರಿಸುತ್ತೇನೆ.ಈಗ ವಿಚಾರಕ್ಕೆ ಬರುವೆ. ಯಾವಾಗಲೂ ಶ್ರೀ ಸುಧಾಕರಶರ್ಮರು ಒಂದು ಮಾತನ್ನು ಸ್ಪಷ್ಟ ವಾಗಿ ಹೇಳುತ್ತಲೇ ಇರುತ್ತಾರೆ," ಏನೇ ಮಾಡ ಬೇಕಾದರೂ ಅದರ ಅರ್ಥ ತಿಳಿದುಕೊಂಡು ಮಾಡಿ, ಆಗ ತಾನೇ ತಾನಾಗಿ ಯಾವುದು ಮಾಡಬೇಕು, ಯಾವುದು ಮಾಡುವುದರಿಂದ ಪ್ರಯೋಜನವಿಲ್ಲ ಎಂಬುದು ನಿಮಗೇ ಅರ್ಥವಾಗುತ್ತೆ" .ಆರಂಭದಲ್ಲಿ ಅವರ ಮಾತನ್ನು ಅಷ್ಟು ಸೀರಿಯಸ್ಸಾಗಿ ತೆಗೆದುಕೊಂಡಿರಲಿಲ್ಲ. "ಎಲ್ಲ ವಿಚಾರಗಳಿಗೂ ವೇದವೇ ಮೂಲ. ಅದರ ಹೊರತಾಗಿ ನೀವು ಎಲ್ಲೆಲ್ಲಿ ಸುತ್ತಿ ಬಂದರೂ ಮತ್ತೆ ನೀವು ವೇದವನ್ನು ಆಶ್ರಯಿಸಿದಾಗಲೇ  ನಿಮಗೆ ಪರಿಹಾರ ದೊರಕುವುದು, ಎಂದು ಕಟು      ವಾಗಿಯೇ ಹೇಳುತ್ತಾರೆ-ಸುಧಾಕರ ಶರ್ಮರು.  ನಾನೂ ಒಂದಿಷ್ಟು ಅವರ ಆಡಿಯೋ ಕೇಳಿ, ಚತುರ್ವೇದಿಗಳು ವೇದದ ಬಗ್ಗೆ ಸರಳ ವಾಗಿ ಬರೆದಿರುವ ಸಾಹಿತ್ಯವನ್ನು ಓದಿ, ಕೆಲವು ವೇದಮಂತ್ರಗಳ ಅರ್ಥವನ್ನು ತಿಳಿದೊಕೊಳ್ಳುವ ಪ್ರಯತ್ನ ಮಾಡುತ್ತಿರುವಾಗ ನನಗೆ ಮೊದಮೊದಲು ನನ್ನ ಮನದಲ್ಲಿ ಈ ರೀತಿ ಭಾವನೆಗಳು ಮೂಡಿದವು...

1.ಅಗ್ನಿಮೀಳೇ ಪುರೋಹಿತಂ ಜ್ಞಸ್ಯದೇವ ಮೃತ್ವಿಜಮ್|
ಹೋತಾರಂ ರತ್ನ ಧಾತಮಂ||

ಈ ಮಂತ್ರಕ್ಕೆ ಅರ್ಥವನ್ನು  ನೋಡಿದಾಗ...

ಅನಾದಿಹಿತಕಾರಿಯೂ,ಎಲ್ಲಕ್ಕಿಂತಲೂ ಎಲ್ಲರಿಗಿಂತಲೂ ಶ್ರೇಷ್ಠನೂ,ಋತುಪರಿವರ್ತನಕಾರಿಯೂ,ಸತ್ಕರ್ಮ ಪ್ರಕಾಶಕನೂ,ಸರ್ವದಾತೃವೂ, ಸರ್ವ ಗೃಹೀತೃವೂ,ಪ್ರಕಾಶಮಯ ಗ್ರಹೋಪಗ್ರಹಗಳ ಸರ್ವೋಚ್ಛಧಾರಕನೂ, ಆದ ಸರ್ವಾಗ್ರಣೀ ತೇಜೋಮಯ ಪ್ರಭುವನ್ನು ಸ್ತುತಿಸುತ್ತೇನೆ.

......ಪದಗಳ ಅರ್ಥ ನೋಡಿದ್ದಾಯ್ತು. ಏನು ಇದರಿಂದ ಪ್ರಯೋಜನ? ಹೀಗೆ ಯಾವ ಮಂತ್ರವನ್ನು ನೋಡಿದಾಗಲೂ, ಇಲ್ಲಾ ಭಗವಂತನ ಸ್ತುತಿ, ಇಲ್ಲವೇ ಶಾಂತಿಕೊಡು, ಪುಷ್ಟಿಕೊಡು,...ಇತ್ಯಾದಿ...ಇತ್ಯಾದಿ.... ಈ ಮಂತ್ರಗಳನ್ನು   ಒಳಗೊಂಡಿರುವ  ವೇದವನ್ನು ಸುಧಾಕರ ಶರ್ಮರು" ಜೀವನ ವಿಜ್ಞಾನ  ಅಂತಾರಲ್ಲಾ!! ಏನಿದೆ, ಇದರಲ್ಲಿ?!!

ಅನೇಕ ದಿನಗಳು  ಯಾವ ಮಂತ್ರವನ್ನು ನೋಡಿದರೂ ಹೀಗೆಯೇ ಅನ್ನಿಸುತ್ತಿತ್ತು. ನನಗೆ ಖುಷಿಯನ್ನೇ ಕೊಡುವುದಿಲ್ಲ ವಲ್ಲಾ! ಅನ್ನಿಸುತ್ತಿತ್ತು.

ಗಾಯತ್ರಿ ಮಂತ್ರದ ಅರ್ಥವನ್ನು ಒಮ್ಮೆ  ಮನಸ್ಸಿನಲ್ಲೇ ಚಿಂತನೆ ನಡೆಸಿದೆ   | ಧಿಯೋ ಯೋ ನ: ಪ್ರಚೋದಯಾತ್|  ...ಅಂದರೆ...."ನನ್ನಲ್ಲಿ ಧೀ ಶಕ್ತಿಯನ್ನು ಪ್ರಚೋದಿಸು"
ಗಾಯತ್ರಿ ಮಂತ್ರದಿಂದ  ಅದೆಷ್ಟು ಜನರು ಸ್ಪೂರ್ಥಿ ಪಡೆದಿದ್ದಾರೆ! ಅದರಲ್ಲಿ ಅದೆಂತಹ ಅದ್ಭುತ ಶಕ್ತಿ!!...ಹೀಗೆಯೇ ಯೋಚಿಸುವಾಗ ಶರ್ಮರ     ಮಾತು ನೆನಪಾಯ್ತು. ಅರ್ಥವನ್ನು ತಿಳಿದು ಆಚರಿಸಿ. ಅಂದರೆ ನನ್ನಲ್ಲಿ ಧೀಶಕ್ತಿಯನ್ನು ಪ್ರಚೋದಿಸು, ಎಂದು ಭಗವಂತನಲ್ಲಿ ಪ್ರಾರ್ಥಿಸಿ ನಾನು ರಗ್ ಹೊದ್ದು  ಬೆಚ್ಚಗೆ ಮಲಗಿದರೆ  ಫಲಸಿಗುತ್ತದೆಯೇ? ಸಾಧ್ಯವೇ ಇಲ್ಲ. ಸಾವಿರ ಸಾವಿರ ಗಾಯತ್ರಿ ಮಂತ್ರ ಜಪ ಮಾಡಿ ಅಂತಾ ಹೇಳ್ತಾರೆ, ಅದರರ್ಥವೇನು?   ಪ್ರತಿ ಭಾರಿ ಮಂತ್ರವನ್ನು ಹೇಳಿದಾಗಲೂ ಅದರ ಅರ್ಥವನ್ನು ಅನುಸಂಧಾನ ಮಾಡಿಕೊಂಡಾಗ ನಮ್ಮಲ್ಲಿ " ಧೀಶಕ್ತಿ " ಹೆಚ್ಚಾಗದೇ ಇದ್ದೀತೇ?

ಹಾಗೆಯೇ ನಮಗೆ ಶಕ್ತಿ ಕೊಡು, ಶಾಂತಿ ಕೊಡು, ನೆಮ್ಮದಿ ಕೊಡು, ಎಂದೆಲ್ಲಾ ಮಂತ್ರಗಳ ಅರ್ಥ ಇದೆ. ಮಂತ್ರ ಹೇಳಿದ ಮಾತ್ರಕ್ಕೆ  ನಮಗೆ ಶಕ್ತಿಯಾಗಲೀ, ನೆಮ್ಮದಿಯಾಗಲೀ, ಶಾಂತಿಯಾಗಲೀ ದೊರಕಲು ಸಾಧ್ಯವೇ? ಮಂತ್ರಕ್ಕೆ ಮಾವಿನಕಾಯಿ ಉದುರೀತೇ? ಖಂಡಿತಾ ಸಾಧವಿಲ್ಲ. ಹಾಗಾದರೆ... ಮಂತ್ರ ದಿಂದ ಪ್ರಯೋಜನ ಇಲ್ಲವೇ?
ಖಂಡಿತಾ ಇದೆ.ಆದರೆ ಅದರ ಅರ್ಥದ ಅನುಸಂಧಾನ ಮಾಡಿಕೊಂಡು ಅದರಂತೆ ನಮ್ಮನ್ನು ನಾವು ಸಿದ್ಧಗೊಳಿಸಿಕೊಳ್ಳಬೇಕು, ಅದಕ್ಕೆ ತಕ್ಕಂತೆ ನಮ್ಮ ಜೀವನ ಕ್ರಮವನ್ನು ರೂಢಿಸಿಕೊಳ್ಳಬೇಕು,  ಶಕ್ತಿ ನಮಗೆ ಬೇಕೆಂದರೆ ಒಳ್ಳೆಯ ಆಹಾರವನ್ನು ಒಳ್ಳೆಯ ಆಲೋಚನೆಯೊಂದಿಗೆ ಸ್ವೀಕರಿಸಬೇಕು, ಶಾಂತಿ, ನೆಮ್ಮದಿ ಬೇಕೆಂದರೆ ನಾವು ಅದಕ್ಕೆ ನ್ಯಾಯ ಒದಗಿಸುವಂತೆ ಜೀವನ ಮಾಡಬೇಕು. ಸತ್ಯ ಪಥದಲ್ಲಿ ನಡೆಯಬೇಕು, ವಂಚನೆ ಮಾಡಕೂಡದು, ನಿಸ್ವಾರ್ಥ ಬದುಕು ನಡೆಸಬೇಕು.

ಅಂತೂ ನಿತ್ಯವೂ ವೇದ ಮಂತ್ರಗಳನ್ನು ಅರ್ಥ ಅನುಸಂಧಾನ ಮಾಡಿಕೊಂದು ಪಠಿಸಿದರೆ ನಮ್ಮ  ಜೀವನ ಕ್ರಮ ಶಿಸ್ತು ಬದ್ಧ ವಾದೀತು. ಆಗ ತಾನೇ ತಾನಾಗಿ ಮಂತ್ರದಲ್ಲಿ ನಾವು ಪ್ರಾರ್ಥಿಸಿದಂತೆ ಸುಖ,ನೆಮ್ಮದಿ, ಶಾಂತಿ ಎಲ್ಲವೂ ಸಿಗುವುದರಲ್ಲಿ ಸಂಶಯವಿಲ್ಲ. ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಹೇಳಿದ ಒಂದು ಮಾತು ನೆನಪಾಗುತ್ತೆ  "  ಅರ್ಧ ಗಂಟೆ ಧ್ಯಾನ
 ಮಾಡಬೇಕೆಂದರೆ ದಿನದಲ್ಲಿ ಉಳಿದ 23 ಗಂಟೆ 30ನಿಮಿಷಗಳು ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಅಂದರೆ ನಮ್ಮ ಬದುಕು  ಹೇಗಿದ್ದರೆ ಧ್ಯಾನದ ಒಂದು ಉತ್ತಮ ಸ್ಥಿತಿ ಲಭಿಸೀತು, ಎಂಬುದನ್ನು ಅರ್ಥ ಮಾಡಿಕೊಂಡರೆ ಸಾಕಲ್ಲವೇ?