Pages

Tuesday, December 14, 2010

ದೇವರು: ಹೀಗೊಂದು `ಶೂನ್ಯ ನೋಟ'!

 ಶ್ರೀಯುತ ಹೆಚ್.ಎಸ್.ಪ್ರಭಾಕರರು ದಾವಣಗೆರೆಯಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿದ್ದಾರೆ.ಹಾಸನದಲ್ಲಿ ಅವರ ಕುಟುಂಬವಿದೆ.ವೇದಸುಧೆ ಬಳಗದ ಒಬ್ಬ ಸನ್ಮಿತ್ರರು.ಸದಾಕಾಲವೂ ವೃತ್ತಿಯ ಕಾರ್ಯ ಒತ್ತಡದ ಮಧ್ಯೆಯೂ ವೇದಸುಧೆಯನ್ನು ಓದುವ ಶ್ರೀಯುತರು ವೇದಸುಧೆಯಲ್ಲಿ ತಮ್ಮ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ.
---------------------------------------------------------------------

ಸನ್ಮಾನ್ಯ ಸುಧಾಕರ ಶರ್ಮರು ಎತ್ತಿರುವ ಚರ್ಚೆ- `ಭಗವಂತನ ಆಕಾರ- ನಿರಾಕಾರ: ಒಂದು ಜಿಜ್ಞಾಸೆ' ಕುರಿತು ನನಗಿರುವ ಸೀಮಿತ ಜ್ಞಾನದ ಪರಿಧಿಯಲ್ಲಿ ನನ್ನ ಅನಿಸಿಕೆ ವ್ಯಕ್ತಪಡಿಸಿದ್ದೇನೆ. ಈ ನನ್ನ ಬರಹವನ್ನು ಪ್ರತಿಕ್ರಿಯೆ ಎಂದಾದರೂ ಸ್ವೀಕರಿಸಿ; ಅಥವಾ ಪ್ರತ್ಯೇಕ ಲೇಖನ ಎಂದಾದರೂ ಪರಾಂಬರಿಸಿ; ಚಿಂತೆಯಿಲ್ಲ! ಅದಕ್ಕೂ ಮುನ್ನ ನಿಮ್ಮೆಲ್ಲರಲ್ಲೂ ಇರುವ ಆ `ಪರಮಾತ್ಮ'ನ ಸಹಿತವಾಗಿ ನಿಮಗೆಲ್ಲರಿಗೂ ನನ್ನ ನಮಸ್ಕಾರಗಳು.
`ದೇವರು ಸರ್ವ ವ್ಯಾಪಿ ಎನ್ನುವವರು ಚಿತ್ರ, ಆಕಾರ ಸ್ವೀಕರಿಸುವಂತಿಲ್ಲ; ರೂಪ, ಆಕಾರ ಸ್ವೀಕರಿಸುವವರು ದೇವರು ಎಲ್ಲ ಕಡೆಯೂ ಇದ್ದಾನೆ ಎನ್ನುವಂತಿಲ್ಲ' ಎಂಬ ಶರ್ಮಾಜಿಯವರ ವಿಶ್ಲೇಷಣೆಯನ್ನು ನಾನು ಮನೋವೈಜ್ಞಾನಿಕ ವಿಧಾನದಲ್ಲಿ ವ್ಯಾಖ್ಯಾನಿಸಲು ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ.
ಸದ್ಯಕ್ಕೆ ದೇವರ ವಿಚಾರ ಬದಿಗಿಟ್ಟು ಕೇವಲ `ಆಕಾರ-ನಿರಾಕಾರ' ವಿಷಯಗಳತ್ತ ಗಮನ ಹರಿಸೋಣ. ಮಾನವನ ಇಂದ್ರಿಯಗಳು ಹಾಗೂ ಮನಸ್ಸಿನ ಕಾರ್ಯ ವಿಧಾನ ಹೇಗಿದೆ? ಕಣ್ಣು, ಕಿವಿಗಳು ರವಾನಿಸುವ `ಸಿದ್ಧ ಮಾದರಿ' ಸಂವೇದನೆಗಳ ಫಲಿತಾಂಶವನ್ನು ನಮ್ಮ ಸ್ಮೃತಿ ಪಟಲ ಸೆರೆ ಹಿಡಿದ ನಂತರ, ಮೆದುಳಿನ ಆಯಾ ಭಾಗಗಳು ಆ ಮಾದರಿಗಳನ್ನು `ತಿಳಿಸಿಕೊಡುವುದು' ಚಿತ್ರ ಅಥವಾ ಆಕಾರದ ಮೂಲಕ ಮಾತ್ರ. ಉದಾಹರಣೆಗೆ, `ಪುಸ್ತಕ' ಎಂದಾಕ್ಷಣ ನಮ್ಮಸ್ಮೃತಿ ಪಟಲದ ಮೇಲೆ ಪುಸ್ತಕದ ಚಿತ್ರವೊಂದು ಮೂಡುವುದೇ ಹೊರತು; ಪುಸ್ತಕ ಓದಿದ `ಅನುಭವ' ಮೂಡುವುದಿಲ್ಲ. ಹಿಂದೆ ಒಮ್ಮೆ ನೀವು ಕಂಡುದ್ದನ್ನು, ಕೇಳಿದ್ದನ್ನು, ಓದಿದ್ದನ್ನು ನೆನಪಿಸಿಕೊಂಡರೆ ಅದು `ಸ್ಮರಣೆ' (ಅದೂ ಕೂಡಾ ದೃಶ್ಯದ ಮೂಲಕವೇ) ಆಗುತ್ತದೆ ಅಷ್ಟೆ. ನಾವು ಕೃತಿಯೊಂದನ್ನು ಓದುವಾಗಲೂ ಸಹ ನಮ್ಮ ಮೆದುಳು ``ಓದುವುದು'' ಚಿತ್ರ-ಆಕಾರಗಳ ಮೂಲಕವೇ! ನಾವು ಕಣ್ಣು ಮುಚ್ಚಿ ಮಲಗಿರುವಾಗಲೂ ಸಹ ಕನಸು ``ಕಾಣುವುದು'' ಚಿತ್ರ ಅಥವಾ ದೃಶ್ಯದ ಮೂಲಕವೇ. ಪರಿಚಿತ ಶಬ್ದವೊಂದನ್ನು ಕಿವಿಯಿಂದ ಕೇಳಿದಾಗಲೂ ಸಹ ಆ ಧ್ವನಿಗೆ ಸಂಬಂಧಿಸಿದ ವಸ್ತು ಅಥವಾ ವ್ಯಕ್ತಿಯ ಚಿತ್ರ ಮನಸ್ಸಿನಲ್ಲಿ ಮೂಡುತ್ತದೆ ಅಲ್ಲವೆ? ಒಟ್ಟಾರೆ ಹೊರ ಜಗತ್ತಿನ ಯಾವುದೇ ಆಗುಹೋಗುಗಳನ್ನು ನಮ್ಮ ಕಣ್ಣು-ಕಿವಿಗಳ ಮಾರ್ಗವಾಗಿ ಮೆದುಳು `ಓದುವುದು' ಆಕಾರ ಆಥವಾ ಚಿತ್ರಗಳ ಮೂಲಕವೇ ಹೊರತು ತಕ್ಷಣದ ಅನುಭವದಿಂದಲ್ಲ. ಹಿಂದಿನ ಆಥವಾ ಈಗಿನ ಅನುಭವದ ಆಧಾರದ ಮೇಲೆ ಬರೀ ಪರಿಣಾಮವಷ್ಟೇ ನಮ್ಮ ಮೇಲಾಗುವುದು ಅದರ `ಸ್ಮರಣೆ'ಯಿಂದ ಮಾತ್ರ (ಸ್ಮರಿಸಿಕೊಂಡಾಕ್ಷಣ ಮೈ ನವಿರೇಳುವುದು; ಭಯದಿಂದ ಕಂಪಿಸುವುದು ಇತ್ಯಾದಿ).
ಇಂದ್ರಿಯಗಳ ಈ ವೈಜ್ಞಾನಿಕ ಕಾರ್ಯ ವಿಧಾನದ ಹಿನ್ನೆಲೆಯಲ್ಲಿ ಈಗ `ದೇವರ ಆಕಾರ'ದ ವಿಚಾರಕ್ಕೆ ಬರೋಣ. ಪ್ರಸ್ತುತ ವಿಗ್ರಹಾರಾಧನೆ ಅಥವಾ ಫೋಟೋಗಳ ಮೂಲಕ ಇದೀಗ ಭಗವಂತನನ್ನು ಸಾಮಾನ್ಯ ಜನ `ಅರ್ಥೈಸಿಕೊಳ್ಳುತ್ತಿರುವುದೂ' ಸಹ ಇದೇ ವಿಧಾನದಿಂದಲೇ ಅಲ್ಲವೆ? ದೇವರು ಎಂದಾಕ್ಷಣ ಯಾವುದೋ ದೇವರ ವಿಗ್ರಹ ಅಥವಾ ವಿವಿಧ ಆಕರ್ಷಕ ವೇಷ ಭೂಷಣ ತೊಟ್ಟ `ವ್ಯಕ್ತಿ'ಯೊಬ್ಬನ ಚಿತ್ರ ನಮ್ಮ ಮನಸ್ಸಲ್ಲಿ ಮೂಡುತ್ತದೆ; ಅಂತಹ ``ಪೂರ್ವ ನಿರ್ಧಾರಿತವಾದ ನಿರ್ಧಿಷ್ಟ ಆಕಾರ'' ಕಂಡಾಕ್ಷಣ ಮನಸ್ಸಿನಲ್ಲಿ `ಭಕ್ತಿ' ಮೂಡುವುದಾದರೆ ಅದು ನಂತರದ ಮಾನಸಿಕ ಪ್ರಕ್ರಿಯೆಯಾಗುತ್ತದೆ!

`ಒಳಗಿನಿಂದ ಹೊರನೋಟ':
ಇಂತಹ ಇಂದ್ರಿಯಾಧಾರಿತ `ಆಕಾರ'ದ ಸೀಮಿತ ಚೌಕಟ್ಟಿನಲ್ಲೇ ನಾವು ದೇವರನ್ನು `ಅರಿಯಲು' ಸಾಧ್ಯವಿಲ್ಲವೆ? ನಮ್ಮ ಚಿಂತನೆಯ ವೈಶಾಲ್ಯತೆಯನ್ನು ಬ್ರಹ್ಮಾಂಡದಷ್ಟು ವಿಸ್ತರಿಸಿಕೊಂಡಾಗ ಮಾತ್ರ ಅದು ಸಾಧ್ಯವಾದೀತೇನೋ! `ಸೀಮಿತ'ವನ್ನು `ಸೀಮಾತೀತ' ಮಾಡಿ ನೋಡೋಣ. ಉದಾ: `ದೇವರ ಫೋಟೋ ತೂಗು ಹಾಕಿದ ಮೊಳೆಯಲ್ಲಿ ಮತ್ತು ಆ ಮೊಳೆಯನ್ನು ಹಿಡಿದಿಟ್ಟಿರುವ ಗೋಡೆಯಲ್ಲಿ ಎಷ್ಟು ಮಂದಿ ದೇವರನ್ನು ಕಂಡಿದ್ದಾರೆ?'. ಶರ್ಮಾಜಿಯವರ ಈ ಪ್ರಾಮಾಣಿಕ ಪ್ರಶ್ನೆಯನ್ನೇ ಇನ್ನಷ್ಟು ವಿಸ್ತರಿಸೋಣ. ದೇವರ ಫೋಟೋ ತೂಗುಹಾಕಲು ಮೊಳೆ ಹೊಡೆಸಿಕೊಂಡ ಅಂತಹ ಕೋಟ್ಯಾಂತರ ಗೋಡೆಗಳನ್ನು ಭದ್ರವಾಗಿ ಎತ್ತಿ ಹಿಡಿದಿರುವ ವಿಶಾಲವಾದ ಗುಂಡನೆಯ ಒಂದೇ ಭೂಮಿ; ಕಲ್ಪನೆಗೂ ನಿಲುಕದಷ್ಟು ವಿಶಾಲವಾದ ಬಾಹ್ಯಾಕಾಶದ ಅಂಧಕಾರದ ಯಾವುದೋ ಮೂಲೆಯಲ್ಲಿ `ಒಂದು ಹಿಡಿತಕ್ಕೆ' ಸಿಕ್ಕಿ ತೇಲುತ್ತಾ ತಿರುಗುತ್ತಿರುವ ಆ ಭೂಮಿ; ಅದನ್ನು `ಹಿಡಿದಿಟ್ಟುಕೊಂಡಿರುವ' ಗುರುತ್ವಾಕರ್ಷಣ ಶಕ್ತಿ (ಇದು ಮಾತ್ರ ನಿರಾಕಾರ-ಚಿಂತೆಯಿಲ್ಲ); ಅಂತಹ ಶಕ್ತಿಯ ಪ್ರಭಾವ-ಪರಿಣಾಮದಿಂದ ಭೂಮಿಯೂ ಸೇರಿದಂತೆ ಇರುವ ಅನೇಕ ಗ್ರಹ, ನಕ್ಷತ್ರ, ಕ್ಷುದ್ರ ಕಾಯಗಳನ್ನು ಒಳಗೊಂಡ ಅಪರಿಮಿತವಾದ ಬ್ರಹ್ಮಾಂಡ-ಈ ಎಲ್ಲ `ಆಕಾರ'ಗಳಲ್ಲೂ ನಾವು ದೇವರನ್ನು ಕಾಣಬೇಕು. ಈ ಇಡೀ `ಬ್ರಹ್ಮಾಂಡ ಆಕಾರ' ವ್ಯವಸ್ಥೆಯ ಸೂತ್ರಧಾರ ಯಾರು? ಈ ಬ್ರಹ್ಮಾಂಡ ವ್ಯವಸ್ಥೆಯ `ಗುರುತ್ವ ಶಕ್ತಿ'ಯಲ್ಲಿ ಏನೇ ಕೊಂಚ ಎಡವಟ್ಟಾದರೂ (ಗೋಡೆಗಳು, ಮೊಳೆಗಳು, ಅದಕ್ಕೆ ತೂಗುಬಿದ್ದ ಫೋಟೋಗಳ ಕಥೆ ಹಾಗಿರಲಿ...) ನಮ್ಮ ಭೂಮಿ ಹಾಗೂ ಅದರಲ್ಲಿನ ನಾವಾದರೂ ಬದುಕುಳಿಯಲು ಸಾಧ್ಯವೆ? ಈ ವೈಶಾಲ್ಯತೆಯ ಅರಿವಾದಾಗಲಷ್ಟೇ ನಮಗೆ `....ಸಹಸ್ರ ಶೀರ್ಷ; ಸಹಸ್ರ ಪಾಥ್...' ಎಂಬ ಪುರುಷ ಸೂಕ್ತದ ಮಂತ್ರದ ಅರ್ಥ ಅನುಭವಕ್ಕೆ ಬಂದೀತು!
ನಾನು ಹೇಳುವುದಿಷ್ಟೆ: ದೇವರನ್ನು ಆಕಾರದ ಮೂಲಕ ನೋಡಬಯಸುವವರು ಯಕಶ್ಚಿತ್ ಫೋಟೋ ಅಥವಾ ವ್ಯಕ್ತಿಯ ಆಕಾರ ಕಲ್ಪಿಸಿಕೊಳ್ಳುವುದನ್ನು ಬಿಟ್ಟು, `ದೇವರು' ಎಂದಾಕ್ಷಣ ಅಪರಿಮಿತ ಬ್ರಹ್ಮಾಂಡದ ಚಿತ್ರವನ್ನು ತಕ್ಷಣ ತಮ್ಮ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುವುದು ಪ್ರಜ್ಞಾವಂತಿಕೆಯ ಲಕ್ಷಣವಾಗುತ್ತದೆ. ಇದು ಬಾಹ್ಯಾಕಾಶದ ವಿಚಾರವಾಯಿತು.
ಅದೆಲ್ಲ ಬೇಡ ಎನ್ನುವುದಾದರೆ ನಮ್ಮ ಮಟ್ಟಿಗೆ ವಿಶಾಲವಾಗಿರುವ ಈ ಭೂಮಿಯಲ್ಲೇ `ಕಾಣುವ', `ಕೇಳುವ', `ಅನುಭವಿಸುವ' ಯಾವುದೇ ವಸ್ತು, ಪ್ರಾಣಿ, ಪಕ್ಷಿ, ಲಕ್ಷಾಂತರ ಜೀವ ವೈವಿಧ್ಯತೆ ಇತ್ಯಾದಿ ಅಥವಾ ಎದುರಾದ ವ್ಯಕ್ತಿಗಳಲ್ಲಿ ಮತ್ತು `ಆಕಾರ'ಗಳಲ್ಲಿನ ಸತ್-ಚಿತ್ ಸ್ವರೂಪಗಳನ್ನೇ `ದೇವರು' ಎಂದು ಭಾವಿಸಬಹುದಲ್ಲವೆ? (ಇಲ್ಲಿ ನನಗೆ ಶ್ರೀಶಂಕರರು ಹಾಗೂ ಚಾಂಡಾಲನ ಪ್ರಸಂಗ ನೆನಪಾಗುತ್ತಿದೆ) ಅಂತಹ ಹೃದಯ ವೈಶಾಲ್ಯತೆಯನ್ನು ಬೆಳೆಸಿಕೊಂಡು ಹಾಗೆಯೇ ನಾವು ನಡೆದುಕೊಂಡಾಗ ಜೀವನ ವಿಧಾನ ಹಾಗೂ ದೇವರ ಬಗೆಗಿನ ನಮ್ಮ ಇಡೀ ನಡವಳಿಕೆಯೇ ಬದಲಾಗುತ್ತದೆ! ನಮ್ಮ ಆತ್ಮದ ಮೇಲೆ ಅದರಿಂದ ಆಗುವ ಅಗಾಧ ಹಾಗೂ ಅದ್ಭುತ ಪರಿಣಾಮದಿಂದ ನಮ್ಮ ಆತ್ಮೋದ್ಧಾರವೂ ಆದೀತು!

`ಹೊರಗಿನಿಂದ ಒಳ ನೋಟ':
ಈವರೆಗೆ ಹೇಳಿದ್ದೆಲ್ಲ `ಒಳಗಿನಿಂದ ಹೊರನೋಟ' ಎನಿಸಿತು. `ಈ ಹೊರ ನೋಟವೆಲ್ಲ ಬೇಡ; ನಾವು ಇದ್ದಲ್ಲೇ ಇರುತ್ತೇವೆ' ಎನ್ನುವುದಾದರೆ, ಈಗ `ಹೊರಗಿನಿಂದ ಒಳ ನೋಟ' ಎಂಬ ಕಾಲ್ಪನಿಕವಾದ ಉಲ್ಟಾ ದೃಶ್ಯವೊಂದನ್ನು ನೋಡೋಣ! ಇದನ್ನು `ಇನ್ನರ್ ಸ್ಪೇಸ್' ಎಂದೇ ನಾನು ಕರೆಯುತ್ತೇನೆ; ಆ ಹೆಸರಿನ ಆಂಗ್ಲ ಚಲನ ಚಿತ್ರವೂ ಇದೆ. ನೀವೂ ಸಹ ಆ `ಆಕಾರ' ನೋಡಲು ಸಿದ್ಧರಾಗಿ!!
ನಮ್ಮ ಕಣ್ಣು, ಕಿವಿ ಸೇರಿದಂತೆ ಇಂದ್ರಿಯಗಳೆಲ್ಲ ಕೇವಲ ಬಾಹ್ಯ ಪ್ರಪಂಚ ನೋಡುವ ಕಿಟಕಿಗಳೆಂದು ನಿಮಗೂ ಗೊತ್ತು. ಸ್ವಲ್ಪ ಕಾಲ ಈ `ಕಿಟಕಿ'ಗಳನ್ನೆಲ್ಲ ಮುಚ್ಚಿ. ಕಣ್ಣು ಗುಡ್ಡೆ (ಗೋಲಿ)ಗಳನ್ನು ಅವು ಇದ್ದಲ್ಲಿಯೇ ಸರಕ್ಕನೆ ಸಂಪೂರ್ಣ ಹಿಂದಕ್ಕೆ ತಿರುಗಿಸಿ; ಹೊರಗಿವಿಯ ಆಲಿಕೆಗಳೂ ಸಹ ಒಳಭಾಗಕ್ಕೆ ಸರಿಯಲಿ; ಮೂಗು ನಾಲಿಗೆಗಳೂ ಒಳಮುಖವಾಗಿ ಚಾಚಲಿ. ಈಗ ಎಲ್ಲ ಇಂದ್ರಿಯಗಳನ್ನೂ ಒಮ್ಮೆಗೇ ತೆರೆಯಿರಿ. ಅಬ್ಬಾ! ಅದೆಷ್ಟು ಭಯಾನಕ ಕೆಂಪು ಬಣ್ಣದ ವಿಶಾಲ ರಕ್ತ ಪ್ರಪಂಚ!! ಅದೇನು ಭಯಂಕರ ಸದ್ದು... (ಕಿವಿ ಹೊರಗಿದ್ದಾಗಲೇ ಒಂದು ತೊಟ್ಟು ನೀರು ಕಿವಿಯೊಳಗೆ ಕುಳಿತರೂ `ಭರ್ ಭರ್' ಎಂದು ದೊಡ್ಡ ಸದ್ದು ಕೇಳುತ್ತಿದ್ದುದನ್ನು ಒಮ್ಮೆ ನೆನಪು ಮಾಡಿಕೊಳ್ಳಿ) ಈಗ ರಕ್ತ ನದಿಯು ಭೋರ್ಗರೆಯುತ್ತಾ ಸಂಚರಿಸುತ್ತಿರುವ ಶಬ್ದ ಕೇಳುತ್ತಿದೆ. ನೀವು ಮಾಂಸಾಹಾರಿಗಳಾಗಿದ್ದಲ್ಲಿ ಈಗ ಸಿಕ್ಕಿರುವ ಅವಕಾಶದಲ್ಲೇ ನಿಮ್ಮ ಮೂಗು-ನಾಲಿಗೆಗಳಿಗೂ `ಕೆಲಸ ಕೊಡಿ'; ಬೇಡವೆಂದವರಾರು!
ಮಿಸುಕಾಡುತ್ತಿರುವ ನರ ನಾಡಿ. ಅವಯವಗಳ ನಡುವೆಯೇ ನಿಮ್ಮ ಕಣ್ಣು ನೇರವಾಗಿ ನಿಮ್ಮ ಮೆದುಳಿನ ಹಿಂಭಾಗವನ್ನು ವೀಕ್ಷಿಸುತ್ತಿದೆಯಲ್ಲವೆ? ದೃಷ್ಟಿಯನ್ನು ಮೇಲ್ಭಾಗಕ್ಕೆ ಸರಿಸಲಂತೂ ಸಾಧ್ಯವಿಲ್ಲ. ಏಕೆಂದರೆ ನಿಮ್ಮ ಕಣ್ಣ ಗುಡ್ಡೆಗಳ ಮೇಲ್ಭಾಗದಲ್ಲೇ ರಕ್ತದಲ್ಲಿ ಒದ್ದೆಯಾದ ಮೆದುಳಿನ ಮುಂಭಾಗ ದೊಡ್ಡ ಬಂಡೆಯಂತೆ ಚಾಚಿಕೊಂಡು ಅಡ್ಡ ನಿಂತಿದೆ. ಹೀಗಾಗಿ ಬೇಡ ಬಿಡಿ; ಹಾಗೆಯೇ ದೃಷ್ಟಿಯನ್ನು ಕೆಳಕ್ಕೆ ಸರಿಸಿ ನೋಡಿ. ಎಲುಬಿನ ಗೂಡಿನೊಳಗೆ ನಿಮ್ಮ ಪುಪ್ಪಸ (ಶ್ವಾಸ ಕೋಶ)ದಲ್ಲಿನ ಎಲ್ಲ ಕೋಶಗಳೂ ಕಮ್ಮಾರನ ತಿದಿಯೊತ್ತುವ ಕೆಲಸ ಮಾಡುತ್ತಿವೆಯಲ್ಲವೆ? ಅದರ ಹಿಂಭಾಗ ನೋಡಿ; ಲಬ್ ಡಬ್ ಎಂದು ಒಂದೇ ಸಮನೆ ಬಡಿಯುತ್ತಾ `ರಕ್ತದೋಕುಳಿ' ಆಡುತ್ತಿರುವ ಹೃದಯ ಕಾಣುತ್ತದೆ. ಜೋಕೆ ನಿಮ್ಮ ಕಿವಿಯ ತಮಟೆ ಒಡೆದುಹೋದೀತು! ಅದರ ಕೆಳಗೆ ಸಣ್ಣ ಕರುಳು, ದೊಡ್ಡ ಕರುಳುಗಳು, ಯಕೃತ್, ಪಿತ್ಥ ಜನಕಾಂಗ, ಮಾಂಸ ಖಂಡಗಳೆಲ್ಲ ಸಮರ್ಪಕವಾಗಿವೆಯೆ? ಅಗೋ! ಅಲ್ಲಿ ಜನನೇಂದ್ರಿಯದ ಕೆಳಗೆ `ಒಳ ಕೋಣೆ'ಯೊಂದಿದೆ; ಅಲ್ಲಿ ಗಾಢಾಂಧಕಾರವಿದೆ; ಹುಷಾರಾಗಿ ಕಣ್ಣು ಕೀಲಿಸಿ ನೋಡಿದರೂ ಅಲ್ಲಿರಬಹುದಾದ ವೀರ್ಯದಲ್ಲಿನ `ವಂಶವಾಹಿನಿ'ಗಳು...ಅರೆರೆ! ಏನು ಮಾಡಿದರೂ ಕಾಣುತ್ತಿಲ್ಲವಲ್ಲಾ? ಹೋಗಲಿ ಬಿಡಿ! ಈ `ಮೂಳೆ ಮಾಂಸದ ತಡಿಕೆ'ಯ ಆಂತರಿಕ ಆಕಾಶದಲ್ಲಿನ ನೀರು, ಗಾಳಿ, ಮಣ್ಣು, ಆಕಾಶ, ಬೆಂಕಿಯ ಕಾವಿನ ಒತ್ತಡ ನಿಮ್ಮ ಇಂದ್ರಿಯಗಳಿಗೆ ಅಸಹನೀಯ ಎನಿಸುತ್ತಿರಬೇಕು.
ಎಲ್ಲವನ್ನೂ ಒಂದಕ್ಕೊಂದು ಗಂಟು ಹಾಕಿ ಸಾಲಾಗಿ ಹಗ್ಗದಂತೆ ಎಳೆದುಕೊಂಡು ಸಾಗಿದರೆ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಇಡೀ ದೇಶವನ್ನು 4 ಬಾರಿ ಸುತ್ತಿ ಬರುವಷ್ಟು ನರ ನಾಡಿಗಳ ಜಾಲವನ್ನೆಲ್ಲ `ನೋಡುವಷ್ಟು' ಈ ಕಣ್ಣುಗಳು ಶಕ್ತವಾಗಿಲ್ಲ; ಬಿಟ್ಟು ಬಿಡಿ!! ಈ ನಿಗೂಢ ಆಂತರಿಕ ಆಕಾಶದಲ್ಲಿ ಹೆಚ್ಚು ಹೊತ್ತು ಇರಲು ಸಾಧ್ಯವಿಲ್ಲ. ಈಗ ನಿಮ್ಮ ಇಂದ್ರಿಯಗಳನ್ನೆಲ್ಲ ಹೊರಗೆ ಎಳೆದುಕೊಂಡು ಯಥಾಪ್ರಕಾರ ಬಾಹ್ಯ ಪ್ರಪಂಚದ ಕಿಟಕಿಗಳನ್ನಾಗಿ ನಿಲ್ಲಿಸಿಕೊಳ್ಳಿ. ಈಗ ಕೆಳಗೆ ಕುಳಿತು ದಣಿವಾರಿಸುತ್ತಾ ಚಿಂತಿಸಿ. ಹೇಗಿತ್ತು `ಹೊರಗಿನಿಂದ ಒಳನೋಟ'!? ಯಾವ ಉಸಾಬರಿ ಇಲ್ಲದೆ ತಮ್ಮ ಪಾಡಿಗೆ ತಾವು ಕೆಲಸ ಮಾಡುವ ಈ ಆಂತರಿಕ ಆಕಾಶದಲ್ಲಿನ ಅನೈಚ್ಛಿಕ ಅಂಗಾಂಗಳೆಲ್ಲವೂ `ಆಕಾರ'ಗಳೇ! ಇವುಗಳ ಕಾರ್ಯ ವಿಧಾನದಲ್ಲಿ ಕೊಂಚ ಎಡವಟ್ಟಾದರೂ ನಮಗೆ ಈ ಪ್ರಪಂಚವೇ `ಶೂನ್ಯ'ವಾಗುವುದಲ್ಲವೆ? `ಕಾಣುವ ಕಣ್ಣು'ಗಳಿದ್ದಲ್ಲಿ ಈ ಆಕಾರಗಳಲ್ಲೇ ದೇವರನ್ನು ಕಾಣಲು ಸಾಧ್ಯ.

ನಿರಾಕಾರ ಶೂನ್ಯ:
ಇನ್ನು `ನಿರಾಕಾರ'ದ ವಿಷಯಕ್ಕೆ ಬರೋಣ. ಮೇಲೆ ಕೈಬಿಟ್ಟಿದ್ದ ಉಳಿದ ಇಂದ್ರಿಯಗಳಾದ ವಾಸನೆ (ಮೂಗು), ರುಚಿ (ನಾಲಿಗೆ) ಮತ್ತು ಸ್ಪರ್ಶ (ಚರ್ಮ)ಗಳು ಇಲ್ಲಿ ಕೆಲಸಕ್ಕೆ ಬರುತ್ತವೆ. ಇವೆಲ್ಲ `ಅನುಭವ'ಕ್ಕೆ ಸೀಮಿತವಾದುವು. ದೇವರನ್ನು ನಾವು ನಿರಾಕಾರವಾಗಿ ಇಲ್ಲಿ ಅನುಭವಿಸಲು ಅವಕಾಶವಿದೆ. ಉದಾ: ಮೆಣಸಿನಕಾಯಿ ಎಂದಾಕ್ಷಣ ಮನಸ್ಸಿನಲ್ಲಿ ಅದರ ಚಿತ್ರ ಮೂಡಬಹುದೇ ಹೊರತು ಮತ್ತಾವ ಪರಿಣಾಮವೂ ಸಾಧ್ಯವಿಲ್ಲ. ಅದರ ವಾಸನೆ ಅಥವಾ ಘಾಟಿನ ಪ್ರಮಾಣ ತಿಳಿಯಬೇಕೆಂದರೆ ಅದನ್ನು ಮೂಗಿನ ಬಳಿ ಹಿಡಿಯಬೇಕು; ರುಚಿ ಅನುಭವಿಸಬೇಕೆಂದರೆ ಅದನ್ನು ನಾಲಿಗೆಯ ಮೇಲೆ ಘರ್ಷಿಸುತ್ತಾ ತಿನ್ನಬೇಕು. ಅದೇ ರೀತಿ ವಿದ್ಯುತ್ ಎಂದಾಕ್ಷಣ ನಮಗೇನೂ ಕರೆಂಟ್ ಹೊಡೆಯುವುದಿಲ್ಲ. ಅಬ್ಬಬ್ಬಾ ಎಂದರೆ ಫ್ಯೂಜು, ವೈರುಗಳ ಚಿತ್ರಣ ನಮ್ಮ ಮನಸ್ಸಿನಲ್ಲಿ ಮೂಡಬಹುದಷ್ಟೆ. ನಿಜವಾಗಿಯೂ ವಿದ್ಯುತ್ ಸ್ಪರ್ಶವಾದಾಗಲಷ್ಟೇ ನಮಗೆ ಅದರ ತೀವ್ರತೆಯ ಅನುಭವವಾದೀತು.
ಈಗ ಹೇಳಿ: ಈ ಗುರುತ್ವಾಕರ್ಷಣ ಶಕ್ತಿ, ವಾಸನೆ, ರುಚಿ, ವಿದ್ಯುತ್ ಅಥವಾ ಶಬ್ದ ತರಂಗಗಳು, ಗಾಳಿ, ನಮಗಾಗುವ ವಿಧ ವಿಧವಾದ ನೋವುಗಳು; ಜೀವ ವೈವಿಧ್ಯತೆಯಲ್ಲಿನ ಇನ್ನೂ ಅದೆಷ್ಟೋ ಆಂತರಿಕ `ನಿರಾಕಾರ' ವ್ಯವಸ್ಥೆ-ವ್ಯವಹಾರಗಳು ಇತ್ಯಾದಿಗಳೆಲ್ಲ ನಮ್ಮ ಕಣ್ಣಿಗೆ ಕಾಣುವ ಯಾವ `ಆಕಾರ'ವನ್ನು ಹೊಂದಿಲ್ಲ. ಈ ವ್ಯವಸ್ಥಿತ ನಿರಾಕಾರ ಸ್ವರೂಪಗಳಲ್ಲೇ ನಾವು ದೇವರನ್ನು ಕಾಣಬಹುದು.
ಒಮ್ಮೆ ಶಿಷ್ಯ ವಿವೇಕಾನಂದರು ಆರಂಭದಲ್ಲಿ ಅವರ ಗುರು ರಾಮಕೃಷ್ಣ ಪರಮಹಂಸರಲ್ಲಿ ಹೋಗಿ, `ನೀವು ದೇವರನ್ನು ಕಂಡಿದ್ದೀರಂತಲ್ಲ; ನನಗೂ ಒಮ್ಮೆ ತೋರಿಸಲು ಸಾಧ್ಯವೇ?' ಎಂದು ಪ್ರಶ್ನಿಸಿದರಂತೆ. ಆಗ ಪರಮಹಂಸರು ವಿವೇಕಾನಂದರ ಕೆನ್ನೆಗೆ ಛಟೀರನೆ ಬಾರಿಸಿದಂತೆ. ಕಪಾಳ ಸವರಿಕೊಳ್ಳುತ್ತಾ ತಲೆ ತಗ್ಗಿಸಿ ನಿಂತ ವಿವೇಕಾನಂದರನ್ನು ಉದ್ದೇಶಿಸಿ ನೋವಾಯಿತೇ ಎಂದು ಕೇಳಿದರಂತೆ; ವಿವೇಕಾನಂದರು ಹೌದು ಎಂದು ತಲೆಯಾಡಿಸಿದಾಗ ಪರಮಹಂಸರು `ಎಲ್ಲಿ; ನಿನಗಾದ ನೋವನ್ನು ತೋರಿಸು ನೋಡೋಣ' ಎಂದಾಗ `ನೋವನ್ನು ತೋರಿಸಲು ಹೇಗೆ ಸಾಧ್ಯ; ಅದನ್ನು ಅನುಭವಿಸಬೇಕಷ್ಟೇ' ಎಂದರಂತೆ; ಆಗ ಪರಮಹಂಸರು `ದೇವರನ್ನು ಸಹ ತೋರಿಸಲು ಸಾಧ್ಯವಿಲ್ಲ; ಅದನ್ನು ಅನುಭವಿಸಿ ಅರಿಯಬೇಕಷ್ಟೆ' ಎಂದರಂತೆ! ಈ ಒಂದು ದೃಷ್ಟಾಂತದಿಂದಲೇ ನಾವು ನಿರಾಕಾರನಾದ ಆ ದೇವರನ್ನು ಅನುಭವಿಸಿ ಅರಿಯಬೇಕಷ್ಟೆ ಎಂದು ತಿಳಿಯಬಹುದು.
ಆದರೆ ದೇವರ `ಆಕಾರ-ನಿರಾಕಾರ-ಅರಿವಿನ' ಕುರಿತ ಜಿಜ್ಞಾಸೆಗಳೆಲ್ಲ ನಾವು ನೀವು ಅಂದುಕೊಂಡಷ್ಟು ಸುಲಭ ಸಾಧ್ಯ ಸಂಗತಿಗಳಲ್ಲ ಎಂಬುದು ನನ್ನ ಅಭಿಮತ. ನನ್ನ ದೃಷ್ಟಿಯಲ್ಲಿ ದೇವರು ಎಂದರೆ ಅದೊಂದು `ಪರಮಾತ್ಮ ತತ್ವ'. ಒಟ್ಟಾರೆ ಇಡೀ ಬ್ರಹ್ಮಾಂಡದಲ್ಲಿ `ಸರ್ವಾಂತರ್ಯಾಮಿ' ಆಗಿರುವ ಪರಮ ಶೂನ್ಯವೂ ದೇವರಿರಬಹುದು. ಒಮ್ಮೆ ಯೋಚಿಸಿ ನೋಡಿ; ಅಣು ಚೇತನ ಶಕ್ತಿಗಳಾದ ನಾವುಗಳು ಆ ವಿಶ್ವ ಚೇತನ ಶಕ್ತಿಯಾದ `ಶೂನ್ಯ'ದಲ್ಲೇ ಸದಾ ವಿಹರಿಸುತ್ತಿರುತ್ತೇವೆ; ಆದರೆ ಅದು ನಮ್ಮ ಅರಿವಿಗೇ ಬರುವುದಿಲ್ಲ. ಅದು ಹೇಗೆ? ಹೌದು! ನೀವು ಕುಳಿತ, ನಿಂತ, ಮಲಗಿದ, ಸಂಚರಿಸಿದ, ವ್ಯವಹರಿಸಿದ ಜಾಗವೆಲ್ಲವೂ ಶೂನ್ಯವೇ! ಭೌತಿಕ ಕಟ್ಟಡ- ವಸ್ತು ವಿಶೇಷಗಳ ಮಧ್ಯೆಯೂ, ಎಷ್ಟೇ ಕೋಟ್ಯಾನುಕೋಟಿ ಕಿಕ್ಕಿರಿದ ಜನಗಳ ನಡುವೆಯೂ ನೀವು (ಅಥವಾ ನಿಮ್ಮ ವಾಹನ) ಅತ್ತಿತ್ತ ಹೇಗೋ ಹೊಂದಿಸಿಕೊಂಡು ಶೂನ್ಯದಲ್ಲೇ ಸಂಚರಿಸಬೇಕೇ ಹೊರತು ನಿಮಗೆ ಎದುರಾದ ಅಡೆತಡೆ ಅಥವಾ ಜನಗಳ ಮೇಲೆಯೇ ನೇರವಾಗಿ ನೀವು ಸಾಗಿ ಹೋಗಲು ಸಾಧ್ಯವಿಲ್ಲ; ತೆರದ ಬಾಗಿಲು ಎಂಬ ಶೂನ್ಯ ಪ್ರದೇಶ ಬಿಟ್ಟು ಗೋಡೆ ಎಂಬ ತಡೆಯನ್ನು ಹಾಯ್ದುಕೊಂಡೇ ನೀವು ಕೋಣೆಯ ಒಳ ಹೊಕ್ಕಲು ಸಾಧ್ಯವಿಲ್ಲ. ಶೂನ್ಯದಲ್ಲೇ ಹೋಗಬೇಕು! ಒಬ್ಬರನ್ನೊಬ್ಬರು ಪರಸ್ಪರ ಎಷ್ಟೇ ಬಿಗಿಯಾಗಿ ತಬ್ಬಿಕೊಂಡರೂ ನೀವು ತಬ್ಬಿದ ವ್ಯಕ್ತಿಯ ದೇಹವನ್ನೇ ಹಾಯ್ದು ಆಚೆ ಬರಲು ಸಾಧ್ಯವಿಲ್ಲ! ಅಪ್ಪುಗೆ ತೊರೆದು ಮತ್ತೆ ನೀವು ಶೂನ್ಯಕ್ಕೇ ಮರಳಬೇಕು. ನಿಮ್ಮ ಸಂತಾನೋತ್ಪತ್ತಿಗೆ ಕಾರಣವಾಗುವ ಎಲ್ಲ ಪ್ರಕ್ರಿಯೆಗಳು ನಡೆಯುವುದು ಸಹ ಶೂನ್ಯದಲ್ಲೇ! ಇದೆಲ್ಲವೂ ಹೌದೋ ಅಲ್ಲವೋ ಮತ್ತೊಮ್ಮೆ ಯೋಚಿಸಿ ನೋಡಿ; ಆಗ ಸರ್ವಾಂತರ್ಯಾಮಿಯಾದ `ಶೂನ್ಯ' ಅಥವಾ ಅದರೊಳಗಿರಬಹುದಾದ `ನಿರಾಕಾರ ಪರಮಾತ್ಮ ತತ್ವ'ದ ಮಹತ್ವ ನಿಮ್ಮ ಅರಿವಿಗೆ ಬಂದೇ ತೀರುತ್ತದೆ.
ಸಾಕಷ್ಟಾಯಿತು ಎಂದುಕೊಳ್ಳುತ್ತೇನೆ. ಈ ನನ್ನ ತೊದಲ್ನುಡಿಗಳಿಂದ ನಿಮಗೆ ಬೋರಾಗಿದ್ದರೆ ಕ್ಷಮಿಸಿ. ಇನ್ನು ವಿರಮಿಸುತ್ತೇನೆ. ಎಲ್ಲರಿಗೂ ಮತ್ತೊಮ್ಮೆ ನಮಸ್ಕಾರಗಳು
 
-ಹೆಚ್.ಎಸ್.ಪ್ರಭಾಕರ, ದಾವಣಗೆರೆ

5 comments:

  1. ನನ್ನ ಪ್ರಕಾರ ಪರಮ ಸತ್ಯವೇ ದೇವರು. ಈ ಜಗತ್ತಿನ ಘಟನಾವಳಿಗಳಿಗೆ ಮೂಲ ಕಾರಣವಾದ ಪರಮ ಸತ್ಯವೇ ದೇವರು. ಕಾರ್ಯ ಕಾರಣ ಸಂಬಂಧವನ್ನು ವಿವರಿಸುವ ಸತ್ಯವೇ ದೇವರು. ಈ ಜಗತ್ತಿನಲ್ಲಿ ಸತ್ಯವನ್ನು ಹುಡುಕುತ್ತ ಸಾಗುವದೆ ದೇವರನ್ನು ಕಾಣುವ ಬಗೆ. ಸತ್ಯವನ್ನು ಹುಡುಕಲು ವಿಜ್ಞಾನದಷ್ಟು ಸೂಕ್ತವಾದ ಮಾರ್ಗ ಇನ್ನೊಂದಿಲ್ಲ. ದೇವರನ್ನು ತಲುಪಲು ಅತಿ ಸಮೀಪವಾದ ಮಾರ್ಗವೇ ವಿಜ್ಞಾನ

    ReplyDelete
  2. ಮಹೇಶರೇ, ವಿಜ್ಞಾನ ಮನಸ್ಸಿನ ಅಂತರಂಗದೊಳಗೆ ಹೊಕ್ಕಿ ನೋಡಿ ಬಿಡಿಸಿ ಹೇಳುವಷ್ಟು ಮುಂದುವರೆದಿಲ್ಲ. ವೈಜ್ಞಾನಿಕ ಮನೋಭಾವವಿರಬೇಕು, ಆದರೆ ವಿಜ್ಞಾನ ಬಿಡಿಸಿ ಹೇಳಲಸಾಧ್ಯವಾದುದನ್ನು ಅಸತ್ಯವೆಂದು ಪರಿಗಣಿಸಬೇಕಾಗಿಯೂ ಇಲ್ಲ. ಆದರೆ ನೀವಂದಂತೆ 'ಈ ಜಗತ್ತಿನಲ್ಲಿ ಸತ್ಯವನ್ನು ಹುಡುಕುತ್ತ ಸಾಗುವದೆ ದೇವರನ್ನು ಕಾಣುವ ಬಗೆ' - ಈ ಮಾತು ಒಪ್ಪಬಹುದು.

    ReplyDelete
  3. ನಾಗರಜರವರೇ, ಪರಮ ಸತ್ಯವನ್ನು ಸಾಕ್ಷಾತ್ಕಾರಕರಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಉದಾಹರೆಣೆಗೆ ಯಾವುದನ್ನು ನಿಖರವಾಗಿ ಅಳೆಯಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಅನುಕೂಲಕ್ಕೋಸ್ಕರ ಅಳೆಯಬೇಕಾದ್ದನ್ನು ಇನ್ನೊಂದಕ್ಕೆ ಹೋಲಿಸಿ ನೋಡುತ್ತೇವೆ.

    ನಾನು ಹೇಳ ಹೊರಟಿದ್ದೆನೆಂದರೆ ಸತ್ಯವನ್ನು ಪರಮ ಸತ್ಯ, ಪೂರ್ಣ ಸತ್ಯ ಮತ್ತು ನಿಜವಾದ ಸತ್ಯ ಎಂದು ವಿಂಗಡಿಸಬಹುದು. ನಾವು ತಲುಪಬಹುದದ್ದು ಪೂರ್ಣ ಸತ್ಯ ಮಾತ್ರ

    ReplyDelete
  4. ಪ್ರೀತಿಯ ಪ್ರಭು,

    ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ. ಅಭಿನಂದನೆಗಳು. ಇಂದ್ರಿಯಾನುಭವಕ್ಕೆ ಬರುವ ಎಲ್ಲದರಲ್ಲಿ ದೇವರನ್ನು ಪರಿಭಾವಿಸಿಕೊಳ್ಳಬೇಕೆಂಬ ಪ್ರಾಜ್ಞರ ಅನಿಸಿಕೆ (ಮತ್ತು ನಿಮ್ಮ ಅಭಿಪ್ರಾಯ) ಯನ್ನು ನಾನು ಒಪ್ಪುತ್ತೇನೆ. ಆ ಒಂದು ಚಿಂತನೆಯ ಹಿನ್ನೆಲೆಯಲ್ಲಿ ಸದಾ ಸತ್ಯಮಾರ್ಗದಲ್ಲಿ ಸಜ್ಜನರೊಡನೆ ಸಾಗುವ ಪ್ರಯತ್ನ ಖಂಡಿತಾ ನಮ್ಮ ಜಿಜ್ಙಾಸೆಗಳಿಗೆ ನಿಧಾನವಾಗಿಯಾದರೂ ಖಚಿತ ಉತ್ತರ ನೀಡಬಲ್ಲುದು. ಆದರೆ ಯಾವ ಮಾರ್ಗದಿಂದ ಸಾಗಿದರೆ ದೇವರನ್ನು ಕಾಣಬಹುದು ಎಂಬುದು, ನನ್ನ ಅಭಿಪ್ರಾಯದಲ್ಲಿ, ವ್ಯಕ್ತಿಗತವಾದ ವಿಚಾರ. ನಾನಾ ಮಾರ್ಗಗಳಿಂದ ಸಾಕ್ಷಾತ್ಕಾರ ಹೊಂದಿದ ಲಕ್ಷಾಂತರ ಸಾಧು-ಸಂತರ-ದಾಸಭಕ್ತರ ಪರಂಪರೆಯೇ ನಮ್ಮಲ್ಲಿದೆ. ಅದು ಅವರವರು ಕಂಡುಕೊಂಡ ದಾರಿ. ಉದ್ದೇಶ ಒಂದೇ - ದಾರಿ ಹಲವು. ನೇರ ದಾರಿಯೋ ಅಥವಾ ಸುತ್ತು ಬಳಸುವ ದಾರಿಯೋ - ಅದನ್ನು ಆಯ್ದುಕೊಳ್ಳುವವರು ನಾವೇ ತಾನೇ. ಗುರಿ ಮುಟ್ಟುವತನ ಸಾಗುವ ಛಲ ಮತ್ತು ಆರಿಸಿಕೊಂಡ ದಾರಿಯಲ್ಲಿ ದೃಢವಾದ ನಂಬಿಕೆ ಮಾತ್ರಾ ನಮದಾಗಿರಬೇಕು. ಫಲಾಫಲ ನಮ್ಮ ಶಕ್ತ್ಯಾನುಸಾರ!

    ReplyDelete
  5. .....ದೇವರು , ಅದರ ಬಗ್ಗೆ ಜಿಜ್ಞಾಸೆ ಬಹಳ ಚೆನ್ನಾಗಿ ಮೂಡಿಬಂದಿದೆ...ಮಾನ್ಯಪ್ರಭಾಕರ ಅವರಿಗೆ ಅಭಿನಂದನೆಗಳು !.. ದೇವರನ್ನು ಪ್ರತ್ಯಕ್ಷ ಕಂಡರೆ ಮಾತ್ರ ನಂಬುತ್ತೇವೆ ಅನ್ನುವ ಗುಂಪು ಒಂದು ಇದೆ . ಅಂತಹವರು ಇದನ್ನು ಅವಶ್ಯವಾಗಿ ಓದಬೇಕು.....ನಾನು " ಶ್ರುತ್ಯೇಕ ಗಮ್ಯ: " ಎನ್ನುವುದನ್ನು ನಂಬುತ್ತೇನೆ . ಈ ನಿಟ್ಟಿನಲ್ಲಿಯೂ ವಿಶ್ಲೇಷಿಸಬಹುದು ಎಂದು ಹೇಳುತ್ತಾ ಮತ್ತೊಮ್ಮೆ ಪ್ರಭಾಕರ ಅವರಿಗೆ ಅಭಿನಂದಿಸುತ್ತೇನೆ !!....

    ReplyDelete