Pages

Tuesday, August 14, 2012

ಎರಡುಮೂರು ವರ್ಷಗಳ ಕನಸು

 ಲೇಖನ ಒಂದನ್ನು ಬರೆದರೆ  ವೇದಸುಧೆಯಲ್ಲಿ   ಪ್ರಕಟಿಸಲು ನೂರು ಭಾರಿ ಯೋಚಿಸ ಬೇಕಾಗುತ್ತದೆ. ಕಾರಣ ಇದು ಮನರಂಜನೆಗಾಗಿ ಇರುವ ತಾಣವಲ್ಲ.ಕಣ್ ಮುಂದೆ ಒಂದು ಉದ್ಧೇಶವಿದೆ. ನಮ್ಮ ಋಷಿ ಮುನಿಗಳು ಕಂಡುಕೊಂಡ ಸತ್ಯವನ್ನು  ಬಲ್ಲವರಿಂದ ತಿಳಿದು  ಮುಕ್ಕಾಗದಂತೆ ಪ್ರಕಟಿಸಬೇಕಾಗಿದೆ. ಸಹಸ್ರಾರು ಅಭಿಮಾನಿಗಳು ವೇದಸುಧೆಯನ್ನು ನೋಡುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮ ಮನೆಗಳಲ್ಲಿ      ನಡೆಸುತ್ತಿರುವ ಆಚರಣೆಗಳಲ್ಲಿ ಸಂದೇಹಗಳು ಕಂಡಾಗ ವೇದಸುಧೆಯನ್ನು  ಸಂಪರ್ಕಿಸುವ ಅಭಿಮಾನಿಗಳ ಸಂಖ್ಯೆ ಬೆಳೆಯುತ್ತಿದೆ. ತಲೆ ತಲಾಂತರಗಳಿಂದ ಪ್ರಶ್ನೆ ಮಾಡದೆ ಅನುಸರಿಸಿ ಕೊಂಡು ಬರುತ್ತಿದ್ದ  ಹಲವು ಆಚರಣೆಗಳು ಹಲವರಿಗೆ  ಅರ್ಥ ಹೀನವಾಗಿ ಕಾಣುತ್ತಿದೆ.ಅರ್ಥವನ್ನು ತಿಳಿಯಲು ಚಡಪಡಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದು ಆರೋಗ್ಯಕರ ಬೆಳವಣಿಗೆಯಲ್ಲವೇ ?


                                   ಅಭಿಮಾನಿಗಳ   ಚಡಪಡಿಕೆಯು ವೇದಸುಧೆಯ ಜವಾಬ್ದಾರಿಯನ್ನು ಹೆಚ್ಚಿಸುತ್ತಿದೆ. ವೇದದ ಮಾರ್ಗವನ್ನು ತೋರಿಸಬಲ್ಲ ವಿದ್ವಾಂಸರ ಮಾರ್ಗದರ್ಶನ ಪಡೆಯಬೇಕಾಗಿದೆ. ವೇದಸುಧೆಗೆ ಅದರದ್ದೇ ಮಾರ್ಗವಿದೆ. ಅದು ಬೇರೆ ಯಾವುದೂ ಅಲ್ಲ-ವೇದದ ದಾರಿ. ಹಿಂದು ಸಮಾಜದಲ್ಲಿ ನೂರಾರು ವರ್ಷಗಳಿಂದ ಪುರಾಣೋಕ್ತವಾಗಿ ನಡೆದು ಬಂದ ಆಚರಣೆಗಳಿವೆ. ಅವುಗಳು ನಮಗೆ ಹೊಂದಿಕೊಂಡು ಹೋಗಿವೆ. ಹಬ್ಬ ಹರಿದಿನಗಳನ್ನು ನಮ್ಮ ಸಂತೋಷಕ್ಕಾಗಿ /ಪಾರಮಾರ್ಥಕ್ಕಾಗಿ ಆಚರಿಸುತ್ತಾ ಬಂದಿದ್ದೇವೆ. ಹಿಂದುಗಳಿಗೆ  ವರ್ಷದಲ್ಲಿ 365 ದಿನಗಳೂ ಪವಿತ್ರವೇ ಆಗಿವೆ. ಒಂದಿಲ್ಲೊಂದು ಹಬ್ಬ-ಹರಿದಿನ, ವ್ರತ-ಕತೆ, ಹವನ ಹೋಮಗಳು  ಇತ್ಯಾದಿ..ಇತ್ಯಾದಿ. ವರ್ಷದಲ್ಲಿ   ಹಲವು ರಥೋತ್ಸವಗಳು, ಜಾತ್ರೆಗಳು, ...ಇವೆಲ್ಲವೂ ಹಿಂದುಗಳಿಗೆ ಮನಸ್ಸಿಗೆ ಉಲ್ಲಾಸವನ್ನು ಕೊಡುವಂತಹವೇ ಆಗಿವೆ. ಅವುಗಳಲ್ಲಿ ಹಲವು ಆಚರಣೆಗಳಿಗೆ ವೇದದ ಆಧಾರವಿಲ್ಲ. ಆದರೂ ಜನರು ಒಪ್ಪಿ ನಡೆಸುತ್ತಾ ಬಂದಿದ್ದಾರೆ.ಎಲ್ಲಿಯವರಗೆ ಜನರಿಗೆ ಹಿತವಾಗಿ ತೋರುತ್ತದೋ ಅಲ್ಲಿಯ ವರಗೆ ನಡೆಸುತ್ತಾರೆ, ಒಂದೊಮ್ಮೆ  ನಮ್ಮ ಹಲವು ಆಚರಣೆಗಳಿಗೆ ಅರ್ಥವೇ ಇಲ್ಲವೆನ್ನುವ ಸಂಗತಿ ಮನದಟ್ಟಾದಾಗ ಸಹಜವಾಗಿ ಅದನ್ನು ಬಿಟ್ಟು ಯಾವ ಆಚರಣೆಗೆ ನಿಜವಾಗಿ ಅರ್ಥವಿದೆಯೋ ,ಬದುಕಿಗೆ ನೆಮ್ಮದಿಯನ್ನು ಕೊಡಬಲ್ಲದೋ ಅಂತಹ ಆಚರಣೆಗಳನ್ನು ತಿಳಿದು ಆಚರಿಸುತ್ತಾರೆ.ಅಂತಹ ಸಂದರ್ಭದಲ್ಲಿ ಮಾರ್ಗದರ್ಶನ ಮಾಡಲು ವೇದಸುಧೆಯು ಸಿದ್ಧವಿರಬೇಕಿದೆ. ವೇದಸುಧೆಗೆ ಪಂಡಿತ್ ಸುಧಾಕರ ಚತುರ್ವೇದಿಗಳು, ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ಬೆನ್ನೆಲುಬಾಗಿ ನಿಂತಿರುವುದೇ ಸಮಾಧಾನದ ಸಂಗತಿ. ಅವರ 116  ವರ್ಷಗಳ ವೃದ್ಧಾಪ್ಯದಲ್ಲೂ ಪಂಡಿತ್ ಸುಧಾಕರ ಚತುರ್ವೇದಿಗಳು ನಮ್ಮ  ಸಂದೇಹಗಳಿಗೆ ಸಮಾಧಾನ ಹೇಳುತ್ತಾರೆ.ಈಗ ಚೇತರಿಸಿಕೊಳ್ಳುತ್ತಿರುವ ಶ್ರೀ ಶರ್ಮರವರು  ಅನಾರೋಗ್ಯವನ್ನೂ ಲೆಕ್ಕಿಸದೆ ಸತ್ಯಪ್ರತಿಪಾದನೆಯ ಕೆಲಸವನ್ನು ವೇದದ ಬೆಳಕಿನಲ್ಲಿ ಮಾಡಲು ಸಜ್ಜಾಗಿದ್ದಾರೆ. ವಾಸ್ತವಿಕ ಸ್ಥಿತಿಯಲ್ಲಿ ಶರ್ಮರಂತಹ ಅನಾರೋಗ್ಯಸ್ಥಿತಿಯಲ್ಲಿ ಬೇರೆ ಯಾರೇ ಇದ್ದರೂ ಅವರ ಮಾನಸಿಕ /ಶಾರೀರಿಕ ಸ್ಥಿತಿಯು      ಶರ್ಮರಂತೆ ಇರಲು ಸಾಧ್ಯವೇ ಇಲ್ಲ. ಅಂತಹ ಗಂಭೀರ ಸ್ಥಿತಿಯಿಂದ ಹೊರ ಬಂದಿರುವ ಶರ್ಮರಿಗೆ ಇನ್ನೂ ವರ್ಷವಾದರೂ ವಿಶ್ರಾಂತಿಯ ಅಗತ್ಯವಿದೆ. ಆದರೆ ಶರ್ಮರು ಸುಮ್ಮನಿರಲಾರರು. ವೇದದ ನಿಜದ ಹಾದಿಯಲ್ಲಿ ಅವರು ಸಾಗುವುದರಜೊತೆಗೆ ನಮ್ಮಂತಹ ಸಹಸ್ರಾರು ಜನರನ್ನು ಕರೆದುಕೊಂದು ಹೋಗಲು ಸದಾ ಕ್ರಿಯಾಶೀಲರಾಗಿದ್ದಾರೆ.ಇಂತಹ ಮಹನೀಯರು ನಮಗೆ ಬೆನ್ನೆಲುಬಾಗಿ ನಿಂತಿರುವಾಗ ವೇದಸುಧೆಯು  ನಿರ್ಭಯವಾಗಿ ತನ್ನ ದಾಪುಗಾಲನ್ನು ಹಾಕುವುದಕ್ಕೆ ಹಿಂದೆಗೆಯುವುದಿಲ್ಲ.

    ವೇದಸುಧೆಯು ಈಗಾಗಲೇ "ಎಲ್ಲರಿಗಾಗಿ ವೇದ" ಎಂಬ ಉದ್ಧೇಶವನ್ನಿಟ್ಟುಕೊಂಡು     ಹಲವು ಉಪನ್ಯಾಸಗಳನ್ನೂ,     ಒಂದೆರಡು ವಿಚಾರಸಂಕಿರಣಗಳನ್ನು ನಡೆಸಿ ಯಶಸ್ಸು ಕಂಡಿದೆ. ವೇದಸುಧೆಯ ಜೊತೆಗೆ  "ವೇದಭಾರತೀ ಸಂಪ್ರತಿಷ್ಠಾನ" ಕೂಡ ಕೈ ಜೋಡಿಸಿ ಅದರ  ಸೂತ್ರದಾರರಾದ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ಹಾಸನಜಿಲ್ಲೆಯ ಚನ್ನರಾಯಪಟ್ಟಣದಲ್ಲಿ  ಕಳೆದ ಎರಡು ವರ್ಷಗಳಿಂದ ವೇದಪಾಠವನ್ನು ವಿಶೇಷರೀತಿಯಲ್ಲಿ ಮಾಡುತ್ತಾ ಹಾಸನ ನಗರದಲ್ಲೂ ಸಹ  ಪ್ರತಿಷ್ಠಾನದ ಚಟುವಟಿಕೆಯನ್ನು ಆರಂಭಿಸಿದ್ದಾರೆ. ಈಗಾಗಲೇ ಆರಂಭವಾಗಿ   ಆಗಿಂದ್ದಾಗ್ಗೆ ನಡೆಯುತ್ತಿದ್ದ ವೇದಪಾಠವನ್ನು "ಸಾಪ್ತಾಹಿಕ ವೇದ ತರಗತಿ"ಯಾಗಿ ಮಾರ್ಪಡಿಸಿ ಅದರ ಪ್ರಯೋಜನವು ಹಾಸನ ನಗರದ ಎಲ್ಲರಿಗೆ ಸಿಗುವಂತಾಗಲು ಯೋಜನೆಯೊಂದನ್ನು ರೂಪಿಸಲಾಗಿದೆ.ಇದೇ 19 ರಂದು ಭಾನುವಾರ ವಿಶೇಷ ಕಾರ್ಯಕ್ರಮದೊಂದಿಗೆ ವೇದತರಗತಿಗೆ ಇನ್ನೂ ಅನೇಕ ಹೊಸಬರು ಸೇರಲು ಅವಕಾಶ ಮಾಡಲಾಗಿದೆ. ಮುಂದುವರೆದಂತೆ ಇದೇ ಸಪ್ಟೆಂಬರ್ 30 ರಂದು ಹಾಸನದಲ್ಲಿ  ಶ್ರೀ ಸುಧಾಕರ ಶರ್ಮರೊಡನೆ ಮುಕ್ತ ಚಿಂತನ ಒಂದನ್ನು ಆಯೋಜಿಸಲಾಗಿದೆ. ಎಲ್ಲಾ ಕಾರ್ಯಕ್ರಮಗಳ ಮಾಹಿತಿಯೂ ವೇದಸುಧೆಯಲ್ಲಿ ಪ್ರಕಟವಾಗಲಿದೆ.
                            "ವೇದಪಾಠ" ಎನ್ನುವಾಗ  ಒಂದು ವಿಷಯವನ್ನು ಅರ್ಥಮಾಡಿಕೊಳ್ಳಬೇಕಿದೆ. ಕೇವಲ ಕಂಠಪಾಠಕ್ಕೆ  ಇಲ್ಲಿ ಯೋಜಿಸುವ ತರಗತಿಗಳು ವಿರಾಮ ಹೇಳುವುದಿಲ್ಲ. ವೇದ ಮಂತ್ರಗಳ ಅರ್ಥವನ್ನೂ ಕೂಡ  ಈ ತರಗತಿಗಳಲ್ಲಿ ತಿಳಿಸಿ , ಮಂತ್ರದ ಅರ್ಥ ತಿಳಿಯುತ್ತಾ  ವೇದ ಮಂತ್ರವನ್ನು ಅಭ್ಯಾಸ ಮಾಡುವಾಗ ನಿಜವಾದ ವೇದಜ್ಞಾನ  ಲಭಿಸಲು ಸಾಧ್ಯವಾಗುತ್ತದೆ. ಅಂತೂ ವೇದಸುಧೆಯ ಎರಡುಮೂರು ವರ್ಷಗಳ ಕನಸು ನನಸಾಗುತ್ತಾ ಬಂದಿರುವುದು ಸಂತಸದ ಸಂಗತಿಯಾಗಿದೆ.


No comments:

Post a Comment