Pages

Sunday, August 29, 2010

ಮೂಢ ಉವಾಚ -5

ಬಾಳು
ಬಾರದದು ಜನವು ಧನವು ಕಾಯದು
ಕರೆ ಬಂದಾಗ ಅಡೆತಡೆಯು ನಡೆಯದು
ಇರುವ ಮೂರು ದಿನ ಜನಕೆ ಬೇಕಾಗಿ
ಜಗಕೆ ಬೆಳಕಾಗಿ ಬಾಳೆಲೋ ಮೂಢ


ತನ್ನತನ
ಸ್ವಾಭಿಮಾನಿಯ ಜಗವು ಗುರುತಿಪುದು
ಹಸಿವಾದರೂ ಹುಲಿಯು ಹುಲ್ಲು ತಿನ್ನದು
ಕೊಂಡಾಡಿದರೂ ಶಿರ ಚೆಂಡಾಡಿದರೂ
ತನ್ನತನವ ಉಳಿಸಿಕೊಳ್ಳೆಲೋ ಮೂಢ


ನಡೆ ನುಡಿ
ಸಲ್ಲದ ನಡೆಯು ತೋರಿಕೆಯ ಜಪತಪವು
ಪರರ ಮೆಚ್ಚಿಸಲು ಡಂಭದಾಚರಣೆಯು
ಹಿತಕಾಯದು ಮರುಳೆ ಮತಿ ನೀಡದು
ಕಪಟ ಫಲಕಾಗಿ ಬಳಲದಿರು ಮೂಢ


ಹಸಿವು
ಹಸಿದವಗೆ ಹುಸಿ ವೇದಾಂತ ಬೇಡ
ಕಥೆ ಕವನ ಸಾಹಿತ್ಯ ಬೇಡ ಬೇಡ
ಬಳಲಿದ ಉದರವನು ಕಾಡಬೇಡ
ಮುದದಿ ಆದರಿಸಿ ಮೋದಪಡು ಮೂಢ
********
-ಕವಿನಾಗರಾಜ್.

ಯೋಚಿಸಲೊ೦ದಿಷ್ಟು-೮

೧.ಜೀವನದಲ್ಲಿ ಒಮ್ಮೆ ಸಾಧನೆಯ ಒ೦ದು ಹ೦ತವನ್ನು ತಲುಪಿದೆವೆ೦ದರೆ ಸತತ ಏರುಮುಖ ಪ್ರಯಾಣವನ್ನೇ ದಾಖಲಿಸ ಲಾಗದಿದ್ದರೂ, ಅಲ್ಲಿ೦ದ ಕೆಳಮುಖ ಪ್ರಯಾಣ ಕಷ್ಟಸಾಧ್ಯ! ಏಕೆ೦ದರೆ ಮು೦ದಿನ ಎಡರು ತೊಡರುಗಳಿಗೆ ಹಿ೦ದಿನ ಅನುಭವವೇ ಮಾರ್ಗದರ್ಶನವಾಗುತ್ತದೆ. ( ಸ೦ತೋಷ ಆಚಾರ್ಯರ ಸಾಲು, ಅಪ್ಪಣೆಯ ಮೇರೆಗೆ ಎತ್ತಿಕೊ೦ಡಿದ್ದೇನೆ)


೨.ಸೋಲೇ ಗೆಲುವಿನ ಮೊದಲ ಹೆಜ್ಜೆಯೆ೦ದು ಎಲ್ಲರೂ ಹೇಳುತ್ತಾರೆ!ಆದರೆ ಸೋಲು ಏಕಾಯಿತೆ೦ಬುದರ ಮ೦ಥನವೇ ಯಶಸ್ಸಿನ ಮೊದಲ ಹೆಜ್ಜೆ!

೩.ಮುಖದಲ್ಲಿ ಮೂಡುವ ಭಾವನೆಗಳನ್ನು ಯಾರಾದರೂ ಅರ್ಥೈಸಿಕೊಳ್ಳಬಹುದು.ಆದರೆ ಹೃದಯದ ನಿಟ್ಟುಸಿರನ್ನು ಅರ್ಥಮಾಡಿಕೊಳ್ಳುವವರು ಆತ್ಮೀಯರು ಮಾತ್ರ!

೪.ಆತ್ಮೀಯರನ್ನು ಮರೆಯುವುದಾಗಲೀ ಅಥವಾ ಅವರಿ೦ದ ಅಗಲುವುದಾಗಲೀ ಸುಲಭ ಸಾಧ್ಯವಲ್ಲ!

೫.ಚರ್ಚೆಯು ಯಾವಾಗಲೂ ವಾದಕ್ಕಿ೦ತ ಉತ್ತಮವಾದದ್ದು.ವಾದವು ವ್ಯಕ್ತಿಗಳಲ್ಲಿ ಯಾರು ಸರಿ? ( ವ್ಯಕ್ತಿಗತ) ಎ೦ಬುದನ್ನು ಗುರುತಿಸಿದರೆ, ಚರ್ಚೆಯು ಯಾವುದು ಸರಿ?(ವಿಷಯ) ಎ೦ಬುದನ್ನು ಗುರ್ತಿಸುತ್ತದೆ! ವ್ಯಕ್ತಿಗಿ೦ತ ವಿಚಾರ ಹೆಚ್ಚು ಮುಖ್ಯವೆ೦ದು ಪರಿಗಣಿಸಬೇಕು.

೬. ಯಾವುದೇ ನಿರ್ಧಾರವನ್ನು ನಮ್ಮ ಆ ಕ್ಷಣದ ಮನೋಸ್ಥಿತಿಯ ಮೇಲೆ ಅವಲ೦ಬಿತವಾಗಿ ತೆಗೆದುಕೊಳ್ಳಲೇ ಕೂಡದು. ಒಮ್ಮೊಮ್ಮೆ ನಮ್ಮ ಮನೋಸ್ಥಿತಿಯು ಭಾವನೆಗಳ ಭಾರದಿ೦ದ,ನಾವು ತೆಗೆದುಕೊಳ್ಳಬಹುದಾದ ನಿರ್ಧಾರಗಳಿಗೆ ಪೂರಕ ವಾಗುವ ನೈಜ ಕಾರಣಗಳನ್ನೇ ಹತ್ತಿಕ್ಕುತ್ತದೆ!

೭.ಸಮಸ್ಯೆಗಳೆ೦ಬ ಹಕ್ಕಿಗಳನ್ನು ನಮ್ಮತ್ತ ಹಾರಿ ಬರಲು ಹಾಗೂ ನಮ್ಮ ನೆತ್ತಿಯ ಮೇಲಿ೦ದ ಬಹು ದೂರಕ್ಕೆ ಹಾರಿ ಹೋಗಲು ಬಿಡಿ! ಆದರೆ ನಮ್ಮ ನೆತ್ತಿಯ ಸುತ್ತಲೇ ಗಿರಕಿ ಹೊಡೆಯಲು ಅಥವಾ ಅಲ್ಲಿಯೇ ಗೂಡನ್ನು ಕಟ್ಟಲು ಬಿಡಬಾರದು! ಆಗ ನಮ್ಮ ಮನಸೊ೦ದು ಗೀಜಗದ ಗೂಡಾಗುತ್ತದೆ!

೮.ನಮ್ಮ ಮನಸ್ಸಿನ ದೌರ್ಬಲ್ಯವೇನೆ೦ದರೆ,ನಾವು ಇನ್ನೊಬ್ಬರು ತಪ್ಪನ್ನು ಮಾಡಿದಾಗ, ಅದರ ತೀರ್ಮಾನ ಹಾಗೂ ಶಿಕ್ಷೆಯನ್ನು ಪ್ರಕಟಿಸಿಬಿಡುವ ಧೈರ್ಯವನ್ನು ತೋರಿದರೂ,ನಾವೇ ಆ ತಪ್ಪನ್ನು ಮಾಡಿದಾಗ ಸ೦ಧಾನ ಮತ್ತು ಸಮಜಾಯಿಷಿ ಯಾ ಸಮರ್ಥನೆ ಮು೦ತಾದ ಹಾದಿಗಳತ್ತ ಮುಖ ಮಾಡುತ್ತೇವೆ!

೯.ಪ್ರತಿಯೊಬ್ಬರ ಮಾತನ್ನೂ ಆಲಿಸೋಣ, ಪ್ರತಿಯೊಬ್ಬರಿ೦ದಲೂ ಕಲಿಯೋಣ. ಏಕೆ೦ದರೆ ಎಲ್ಲವನ್ನೂ ತಿಳಿದವರು ಯಾರೂ ಇಲ್ಲ. ಆದರೆ ಪ್ರತಿಯೊಬ್ಬರೂ ಕೆಲವೊ೦ದಷ್ಟನ್ನಾದರೂ ತಿಳಿದುಕೊ೦ಡಿರುತ್ತಾರೆ.

೧೦.ನಮ್ಮನ್ನು ಸರಿಯಾಗಿ ಅರಿಯದೇ ಇರುವವರ,ನಮ್ಮ ಮನದ ಮಾತುಗಳನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ಇರುವವರೊ೦ದಿಗಿನ ಸತತ ಸಖ್ಯಕ್ಕಿ೦ತ ಒ೦ಟಿತನವೇ ಮೇಲು!( ಆಸುಮನದ ಸ೦ದೇಶ)

೧೧. ಮೌನದ ಹಿ೦ದೆಯೂ ಹೇಳಲಾಗದ ಒ೦ದು ಭಾವನೆ ಇದ್ದೇ ಇರುತ್ತದೆ!

೧೨.ಪ್ರತಿಯೊಬ್ಬರೊ೦ದಿಗೂ ನಮ್ಮ ಮನಸ್ಸಿನ ಭಾವನೆಗಳನ್ನು ಹ೦ಚಿಕೊಳ್ಳುವುದು ಉಚಿತವಲ್ಲ!ಒಮ್ಮೊಮ್ಮೆ ನಮ್ಮ ಭಾವನೆಗಳ ವ್ಯಕ್ತಪಡಿಸುವಿಕೆಯೇ ನಮಗೆ ಬಹು ದೊಡ್ಡ ಹಿನ್ನಡೆಯಾಗಬಹುದು!

೧೩.ಪ್ರತಿಯೊಬ್ಬ ಅ೦ಗವಿಕಲನಲ್ಲಿಯೂ ಯಾವುದಾದರೂ ವಿಶೇಷವಾದ ಬಲ/ಚೈತನ್ಯ/ ಇದ್ದೇ ಇರುತ್ತದೆ!

೧೪.ಸತತ ಓದು ಹಾಗೂ ಓದಿರುವುದರ ಸರಿಯಾದ ಗ್ರಹಿಕೆ ಮೌಲ್ಯಯುತ ಚಿ೦ತನೆಗೆ ದಾರಿ ಮಾಡಿಕೊಡುತ್ತದೆ.

೧೫.ನಮ್ಮ ಅತ್ಯ೦ತ ವಿನಯಶೀಲತೆ ಕೆಲವೊಮ್ಮೆ. ಕೆಲವರ ಕಣ್ಣಿಗೆ ಧೂರ್ತತನವಾಗಿ ಕ೦ಡೀತು! ( ಅತಿ ವಿನಯ೦ ಧೂರ್ತ ಲಕ್ಷಣ೦)

Friday, August 27, 2010

ಮನವಿ

ಪ್ರಿಯ ವೇದಸುಧೆಯ ಅಭಿಮಾನಿಗಳೇ,
ವೇದಸುಧೆಯು ಹಲವು ಕಾರಣಗಳಿಂದ ಸಹಸ್ರಾರು ಜನರ ಮೆಚ್ಚಿಗೆ ಪಡೆದಿದೆ. ಓದುಗರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಥವಾ ಈಗಾಗಲೇ ವೇದಸುಧೆಯ ಹತ್ತಿರ ಬಂದಿರುವವರು ನಿತ್ಯವೂ ನೋಡುತ್ತಿದ್ದಾರೆ. ವೇದಸುಧೆಯ ಪ್ರಮುಖ ಉದ್ಧೇಶ ಈಗಾಗಲೇ ಹಲವಾರು ಭಾರಿ ತಿಳಿಸಿದೆ. "ಸಮಾಜಕ್ಕೆ ಹಿತವೆನಿಸಿದ್ದನ್ನು ಹಂಚುವುದು" ಈ ದಾಟಿಯಲ್ಲಿ ವಿಚಾರಮಾಡುವಾಗ ’ಪ್ರಪಂಚದ ಎಲ್ಲೆಡೆಯಿಂದ ಬರುವ ಸದ್ವಿಚಾರಗಳಿಗೆ ಇಲ್ಲಿ ಸ್ವಾಗತ ಇದ್ದೇ ಇದೆ. ಇಂತಹ ಹಾದಿಯಲ್ಲಿರುವಾಗ ಕೆಲವರಿಗೆ ಕೆಲವು ಆಪ್ಯಾಯಮಾನವಾಗಬಹುದು. ಕೆಲವು ಕಹಿಯಾಗಬಹುದು. ಕೆಲವು ಹಿಡಿಸದಿರಬಹುದು. ಅಂತೂ ಇಲ್ಲಿ ವೇದದ ಚಿಂತನೆ ನಡೆದಿದೆ, ವೇದಮಂತ್ರಗಳ ಆಡಿಯೋಗಳಿವೆ, ಡಾ|| ಗೋಪಾಲಕೃಷ್ಣರಂತಹ ವಿಜ್ಞಾನಿಗಳಿಂದ ನಮ್ಮ ಭಾರತೀಯ ಪರಂಪರೆಯ ಚಿಂತನೆಗಳಿವೆ. ಶ್ರೀ ರಾಮಕೃಷ್ಣಾಶ್ರಮದ ಯತಿಗಳ ಮಾತುಗಳಿವೆ. ವೇದಾಧ್ಯಾಯೀ ಸುಧಾಕರ ಶರ್ಮರ ಹಲವಾರು ಉಪನ್ಯಾಸಗಳ ಆಡಿಯೋ ಗಳಿವೆ. ಪಂಡಿತ ಸುಧಾಕರ ಚತುರ್ವೇದಿಗಳ ಚಿಂತನೆಗಳನ್ನು ಕವಿ ನಾಗರಾಜ್ ಹಂಚಿಕೊಳ್ಳುತ್ತಿದ್ದಾರೆ. ಶ್ರೀ ವಿ.ಆರ್.ಭಟ್, ಶ್ರೀ ರಾಘವೇಂದ್ರ ನಾವಡರು, ಕವಿ ಸುರೇಶ್ ಮುಂತಾದವರು ಚಿಂತನೆಗೆ ಯೋಗ್ಯವಾದ ಬರಹಗಳನ್ನು ನೀಡುತ್ತಿದ್ದಾರೆ. ವೇದಮಂತ್ರಗಳಿಗೆ, ಸುಧಾಕರ ಶರ್ಮರ ಉಪನ್ಯಾಸಗಳಿಗೆ, ವಿವೇಕಾನಂದರ ವಿಚಾರಗಳಿಗಾಗಿ, ಭಾವಗೀತೆಗಳಿಗೆ ಮತ್ತು ವಿಶೇಷ ಬರಹಗಳಿಗೆ ಪ್ರತ್ಯೇಕ ಪುಟಗಳಿವೆ. ಈ ಪುಟಗಳೆಲ್ಲಾ ಮತ್ತೆ ಮತ್ತೆ ಓದಬೇಕಾದ, ಆಡಿಯೋ ಕೇಳಬೇಕಾದ ಪುಟಗಳು. ವೇದಮಂತ್ರಗಳನ್ನು ಆಗಿಂದಾಗ್ಗೆ ಕೇಳಲು ಹಿತವಾಗಿರುತ್ತವೆ, ಅಲ್ಲವೇ? ಎಲ್ಲದರ ಉಪಯೋಗವಾಗಲೆಂಬ ಆಶಯದೊಡನೆ, ನಿಮ್ಮ ಅಮೂಲ್ಯ ಸಲಹೆಗಳನ್ನು ವೇದಸುಧೆಯು ಅಪೇಕ್ಷಿಸುತ್ತದೆ, ಎಂಬ ಮಾತನ್ನು ನೆನಪು ಮಾಡಬಯಸುವೆ. ಸರ್ಕಾರ ಉದ್ಧೇಶಿಸಿರುವ ಅತ್ಯಂತ ಹೇಯವಾದ ಪ್ರಾಣಿಹತ್ಯಾಗೃಹದ ಕೆಟ್ಟ ಯೋಜನೆಗೆ ನಿಮ್ಮ ವಿರೋಧ ವ್ಯಕ್ತಪಡಿಸಲು ಇಂದು ಪ್ರಕಟವಾಗಿರುವ ಲೇಖನದಲ್ಲಿರುವ ಅಂತರ್ಜಾಲ ಕೊಂಡಿಯ ಮೂಲಕ ಪಿಟಿಶನ್ ಗೆ ಸಹಿಮಾಡಲು ವಿನಂತಿಸುವೆ.
ನಿಮ್ಮವನೇ,
ಹರಿಹರಪುರಶ್ರೀಧರ್

ವೇದೋಕ್ತ ಜೀವನ ಪಥ - ಭಗವತ್ ಸ್ವರೂಪ -1

ಸನ್ಮಿತ್ರರೇ,
ಪಂಡಿತ ಸುಧಾಕರ ಚತುರ್ವೇದಿಯವರ ವಿಚಾರಗಳನ್ನು 'ವೇದೋಕ್ತ ಜೀವನ ಪಥ'ದಲ್ಲಿ ನಿಮ್ಮ ಮುಂದಿಡಲಾಗುತ್ತಿರುವುದು ನಿಮ್ಮ ಮೆಚ್ಚುಗೆ ಗಳಿಸಿದೆ.ಅವರು 1897ರ ರಾಮನವಮಿಯಂದು ಬೆಂಗಳೂರಿನ ಬಳೇಪೇಟೆಯಲ್ಲಿ ಜನಿಸಿ, 13ನೆಯ ವಯಸ್ಸಿನಲ್ಲಿ ಉತ್ತರ ಭಾರತದ ಪ್ರಸಿದ್ಧ ಕಾಂಗಡಿ ಗುರುಕುಲಕ್ಕೆ ಸೇರಿ ನಾಲ್ಕು ವೇದಗಳನ್ನು ಅಧ್ಯಯನ ಮಾಡಿ ನಿಜ ಅರ್ಥದಲ್ಲಿ 'ಚತುರ್ವೇದಿ'ಯಾದವರು. ಗಾಂಧೀಜಿಯವರ ಒಡನಾಡಿಯಾಗಿದ್ದವರು. ಸ್ವಾತಂತ್ರ್ಯಚಳುವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿ 13 ವರ್ಷಗಳಿಗೂ ಹೆಚ್ಚುಕಾಲ ಸೆರೆವಾಸ ಅನುಭವಿಸಿದವರು. ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಸಾಕ್ಷಿಯಾಗಿದ್ದವರು. ಅವರು 'ವಿಜಯ ಕರ್ನಾಟಕ' ಪತ್ರಿಕೆಗೆ ಸಂದರ್ಶನದಲ್ಲಿ ಹೇಳಿದ್ದು: "ನಾನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲು ಪ್ರೋತ್ಸಾಹ ಸ್ವಾಮಿ ಶ್ರದ್ಧಾನಂದರದಾದರೂ ಆಂತರಿಕವಾಗಿ ವೇದಗಳೇ ಪ್ರೇರಣೆ. 'ಅಧೀನಾಃ ಸ್ಯಾಮ ಶರದಃ ಶತಂ, ಭೂಯಶ್ಚ ಶರದಃ ಶತಾತ್' - ನೂರು ವರ್ಷಕ್ಕೂ ಹೆಚ್ಚುಕಾಲ ಸ್ವಾತಂತ್ರ್ಯದಿಂದ ಬಾಳೋಣ ಎಂಬ ಅರ್ಥದ ಸಾಲು ಸಂಗ್ರಾಮಕ್ಕೆ ಕರೆತಂದಿತು. ಭಾರತೀಯರಿಗೆ ಗೌರವ ಕೊಡದೆ ಅವರು ಕೀಳಾಗಿ ಕಾಣುತ್ತಿದ್ದುದು ನಾವೆಲ್ಲಾ ಚಳುವಳಿಗೆ ಧುಮುಕಲು ಪ್ರೇರಣೆಯಾಯಿತು". ಇನ್ನುಮುಂದೆ ಭಗವತ್ ಸ್ವರೂಪ ಕುರಿತು ಈಗ 114 ವರ್ಷಗಳ ಈ ಶತಾಯುಷಿ ಏನು ಹೇಳಿದ್ದಾರೆ ಎಂಬುದನ್ನು ನಿಮ್ಮ ಮುಂದಿಡಲಾಗುವುದು. ಎಂದಿನಂತೆ ನಿಮ್ಮ ಅನಿಸಿಕೆ, ಟೀಕೆ, ಟಿಪ್ಪಣಿಗಳನ್ನು ವ್ಯಕ್ತಪಡಿಸಲು ಕೋರುವೆ.


ಭಗವತ್ ಸ್ವರೂಪ -1
ನಾಸ್ತಿಕರಲ್ಲದ ಸರ್ವ ಮತೀಯರೂ ಒಂದಿಲ್ಲೊಂದು ರೂಪದಲ್ಲಿ ತಮಗಿಂತ ದೊಡ್ಡದಾದ ಯಾವುದೋ ಒಂದು ತತ್ವವಿದೆ, ಅದೇ ವಿಶ್ವದ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣವಾಗಿದೆ - ಎಂದು ಒಪ್ಪಿಕೊಳ್ಳುತ್ತಾರೆ. ಆದರೆ ಅಂತಹ ಸಾಂಪ್ರದಾಯಿಕರಲ್ಲಿ ಬಹುಮಂದಿ, ಆ ಶಕ್ತಿಯನ್ನು ವ್ಯಕ್ತಿಯ ರೂಪದಲ್ಲೇ ಭಾವಿಸಿ, ಅದಕ್ಕೆ ಯಾವುದೋ ಕಾಲ್ಪನಿಕ ರೂಪವಿತ್ತು, ಅದಾವುದೋ ಬೇರೆ ಲೋಕದಲ್ಲಿ ವಾಸ ಮಾಡಿಕೊಂಡಿದೆ ಎಂದು ನಂಬುತ್ತಾರೆ. ಒಂದು ಮತದವರು ಆರಾಧಿಸುವ ಆ ಶಕ್ತಿಯನ್ನು ಬೇರೆ ಮತದವರು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಎಷ್ಟು ಸಂಪ್ರದಾಯಗಳಿವೆಯೋ ಅಷ್ಟು ದೇವರುಗಳ ಸೃಷ್ಟಿಯಾಗಿ ಹೋಗಿದೆ. ಅದೇಕೆ, ಒಂದೊಂದು ಸಂಪ್ರದಾಯಕ್ಕೂ ಎಷ್ಟೋ ದೇವರುಗಳಿವೆ!

ಆದರೆ ಈ ದೇವರುಗಳೆಲ್ಲಾ ಕೇವಲ ಕಾಲ್ಪನಿಕ ವ್ಯಕ್ತಿಗಳೇ. ಇಂತಹ ದೇವರುಗಳು ಹಿಂದೆ ಎಂದೂ ಇರಲಿಲ್ಲ; ಈಗ ಇಲ್ಲ; ಮುಂದಕ್ಕೂ ಇರುವುದಿಲ್ಲ. ಒಂದು ವೇಳೆ ಇದ್ದರೆ, ಭೌತಿಕ ವಿಜ್ಞಾನ ಆ ದೇವರುಗಳನ್ನೆಲ್ಲಾ ಶೂನ್ಯ ವಿಲೀನವಾಗಿ ಮಾಡಿಬಿಟ್ಟಿದೆ. ಈ ವಿಷಯದಲ್ಲಿ ವೇದಗಳು ಏನೆನ್ನುತ್ತವೆ? ನಾವು ಹಿಂದೆ ಹೇಳಿರುವಂತೆ ವೇದಗಳು ಮಾನವ ಕಲ್ಪಿತ ಶಾಸ್ತ್ರಗಳಲ್ಲ; ಭಗವಂತನಿಂದಲೇ ಸೃಷ್ಟಿಯ ಆದಿಯಲ್ಲಿ ಸರ್ವರ ಕಲ್ಯಾಣಕ್ಕಾಗಿ ಉಪದೇಶಿಸಲ್ಪಟ್ಟ ಬುದ್ಧಿಸಂಗತವಾದ ಹಾಗೂ ವೈಜ್ಙಾನಿಕವಾದ ಸತ್ಯಶಾಸ್ತ್ರಗಳು. ಅವುಗಳ ಉಪದೇಶ ಪೂರ್ಣತಃ ನಿರ್ದೋಷ ಹಾಗೂ ಬುದ್ಧಿಯುಕ್ತ. ಮಾನವ, ಭಗವಂತನನ್ನು ತನ್ನ ರೂಪದಲ್ಲೇ, ಕೆಲವು ವೇಳೆ ತನಗಿಂತ ಶ್ರೇಷ್ಠ ಎಂದು ತೋರಿಸುವುದಕ್ಕಾಗಿ, ತನಗಿಂತ ಅದ್ಭುತ ರೂಪದಲ್ಲಿ ಊಹಿಸಿಕೊಳ್ಳುತ್ತಾನೆ. ಪ್ರಾಯಶಃ ಆಸ್ತಿಕರೆನ್ನಿಸಿಕೊಳ್ಳುವವರಲ್ಲಿ ಅಧಿಕಾಂಶ ಜನರು ಭಗವಂತನನ್ನು ಸಾಕಾರರೂಪದಲ್ಲಿಯೇ ಅಂಗೀಕರಿಸುತ್ತಾರೆ. ಆದರೆ, ಸರ್ವಪ್ರಥಮ ನೆನಪಿನಲ್ಲಿಡಬೇಕಾದ ಅಂಶವೆಂದರೆ, ಆಕಾರ, ಅದು ಯಾವುದೇ ಆಗಿರಲಿ, ಸಂಯೋಗಜನ್ಯವಾದ ಪ್ರಾಕೃತಿಕ ಅಥವಾ ಭೌತಿಕ ವಸ್ತುಗಳಿಗೆ ಅನ್ವಯಿಸುವುದೇ ಹೊರತು, ಆಧ್ಯಾತ್ಮಿಕ ತತ್ವಗಳಿಗಲ್ಲ ಮತ್ತು ಭೌತಿಕವಾದ ಆಕಾರವನ್ನು ತಾಳುವ ವಸ್ತು ಅದೆಷ್ಟೇ ದೊಡ್ಡದಾಗಿರಲಿ, ಸರ್ವವ್ಯಾಪಕವಾಗಿರದೇ ಪರಿಚ್ಛಿನ್ನವಾಗಿರಬೇಕು. ಭಗವಂತನನ್ನು ಪರಿಚ್ಛಿನ್ನ ಎಂದು ಭಾವಿಸುವುದಾದರೆ, ಅವನನ್ನು ಸರ್ವಜ್ಞ, ಸರ್ವವ್ಯಾಪಕ, ಹಾಗೂ ಸರ್ವಶಕ್ತ ಎಂದು ಭಾವಿಸಲು ಸಾಧ್ಯವಿಲ್ಲ. ಅಂತಹ ಅಲ್ಪಜ್ಞ, ಏಕದೇಶೀಯ ಹಾಗೂ ಹಾಗೂ ಅಲ್ಪಶಕ್ತನಾದವನನ್ನು ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣನಾದ ವಿಶ್ವಚೇತನ ಎಂದು ತಿಳಿಯುವುದೇ ತಪ್ಪಾದೀತು. ಎರಡನೆಯದಾಗಿ ಆಕಾರ, ರಿಕ್ತಪ್ರದೇಶದಲ್ಲಿ, ಪರಮಾಣುಗಳ ಸಂಯೋಗದಿಂದಲೇ ಸಂಭವ. ಇಂತಹ ಆಕಾರ ಸಾದಿ ಸಾಂತವಾಗಿರಬಲ್ಲುದೇ ಹೊರತು, ಅನಾದಿ ಅನಂತವಾಗಿರಲಾರದು. ಸಾಲದೆಂದು ಭಗವಂತನಿಗೆ ಆ ಆಕಾರವನ್ನು ರಚಿಸಿಕೊಟ್ಟವರಾರು ಎಂಬ ಬೃಹತ್ಪ್ರಶ್ನೆ ಬೇರೆ ತಲೆಯೆತ್ತುತ್ತದೆ. ಭಗವಂತನೇ ರಚಿಸಿಕೊಂಡನೇ ಎನ್ನುವುದಾದರೆ, ಅದನ್ನು ರಚಿಸಿಕೊಳ್ಳುವ ಮುನ್ನ ಅವನು ನಿರಾಕಾರನೇ ಆಗಿದ್ದನು, ಅದು ಕೆಟ್ಟುಹೋದ ಮೇಲೆ, ಮತ್ತೆ ನಿರಾಕಾರನೇ ಆಗುವನು ಎಂಬ ಪಕ್ಷವನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಈ ಆಗುವಿಕೆ-ಕೆಡುವಿಕೆ ಜನನ-ಮರಣಗಳನ್ನು ಸಂಕೇತಿಸುತ್ತದೆ. ಬೇರೆ ಯಾರಾದರೂ ರಚಿಸಿಕೊಟ್ಟರು ಎನ್ನುವುದಾದರೆ, ಭಗವಂತನಿಗೆ ಆಕಾರವಿತ್ತವರು, ಅವನಿಗಿಂತಲೂ ಶ್ರೇಷ್ಠರೇ ಆಗಿರಬೇಕು. ಇನ್ನು ಭಗವತ್ತತ್ವವೆಲ್ಲಿ ಉಳಿಯಿತು?

ಪಾಶವೀ ಯೋಜನೆ ಧಿಕ್ಕರಿಸಿ








ನನ್ನ ಮಿತ್ರರಾದ ಪ್ರಕಾಶ್ ಯಾಜಿಯವರಿಂದ ನನಗೆ ಒಂದು ಮೇಲ್ ಬಂದಿದೆ. ಅದನ್ನು ಓದಿ.
please visit www.jivdaya.net and sign your petition and oppose ,because the Govt is planning to modernize DEONAR Slaughter house which will be Asia,s largest Slaughter house killing 15000 animals daily.

ಕರುಳು ಹಿಂಡುವ ಕಥೆಯ ಕೇಳಿ. ಅಹಿಂಸಾ ವಾದಿ ಮಹಾವೀರ, ಮಹಾತ್ಮಾಗಾಂಧಿ, ಬಸವಣ್ಣನವರು ಜನಿಸಿದ ಈ ನಾಡಿನಲ್ಲಿ ಸಹಸ್ರಾರು ಪ್ರಾಣಿಗಳನ್ನು ಏಕಕಾಲದಲ್ಲಿ ಹತ್ಯೆ ಮಾಡುವ ಪಾಶವೀ ಯೋಜನೆಗೆ ಸರ್ಕಾರವೇ ಮುಂದಾದರೆ ಅದನ್ನು ಸಹಿಸಬೇಕೆ? ಧಿಕ್ಕರಿಸಿ. ನೀವು ಹೇಗೆ ಧಿಕ್ಕರಿಸಬಹುದು. ಕೆಳಗಿನ ಕೊಂಡಿಗೆ ಭೇಟಿ ನೀಡಿ.
www.jivdaya.net

Thursday, August 26, 2010

ಬಂದೆಯಾ ಗುರುರಾಯಾ .....ದಯಮಾಡಿಸು ಮಹನೀಯ


ಬಂದೆಯಾ ಗುರುರಾಯಾ .....ದಯಮಾಡಿಸು ಮಹನೀಯ

ಶ್ರಾವಣ ಮಾಸವೇ ಹೀಗೆ! ಒಂದಿಲ್ಲೊಂದು ಹಬ್ಬ, ಸಡಗರ, ಪೂಜೆ ನಡೆದೇ ಇರುತ್ತದೆ. ಅದರಲ್ಲೂ ಹಳ್ಳಿಗಳಲ್ಲಿ ನಿಸರ್ಗದ ಮಡಿಲಲ್ಲಿ ಬೆಳ್ಳಂಬೆಳಿಗ್ಗೆ ಚುಮುಚುಮು ಚಳಿಯಲ್ಲಿ ಬಹುಬೇಗ ಎದ್ದು, ಸುರಿವ ಸೋನೆಮಳೆಯಲ್ಲಿ ಕೊಡೆಹಿಡಿದು ಸಲ್ಸಲ್ಪ ಮೈಗೆ ಹಾರುವ ಮಳೆಯ ಹನಿಗಳನ್ನು ಸಹಿಸಿಕೊಂಡು ದೇವಸ್ಥಾನ, ಮಠ ಇಂತಹ ಜಾಗಗಳಲ್ಲಿ ನಡೆಯುವ ಪೂಜೆ-ಪುನಸ್ಕಾರಗಳಿಗೆ ಹೋಗುವುದು ಬಲು ಹಿತಕರ ಸಂಗತಿ. ಅಲ್ಲಿನ ಹೋಮದ ಧೂಮ, ಕರ್ಪೂರದ ಆರತಿಯ ಪರಿಮಳ, ಬಳಸಿದ ಮಂಗಳ ದ್ರವ್ಯಗಳ ಸುಗಂಧ, ತುಪ್ಪದ ಜ್ಯೋತಿಯಿಂದ ಹೊರಸೂಸುವ ಅಪ್ಪಟ ದೀಪದ ಅಗರು, ಹಲವು ವಿಧದ ಬಣ್ಣ ಬಣ್ಣದ ಹೂಗಳ ಅಲಂಕಾರ, ಥರಥರದ ರಂಗೋಲಿ ಇವನ್ನೆಲ್ಲಾ ನೆನೆಸಿಕೊಂಡರೆ ಒಂದೊಮ್ಮೆ ನಾವೌ ಇಂತಹ ದೃಶ್ಯಗಳನ್ನು ಪ್ರತ್ಯಕ್ಷ ನೋಡಲು ಸಾಧ್ಯವಾಗದಿದ್ದ ಪಕ್ಷದಲ್ಲಿ ಮನಸ್ಸು ಬೇಸರಗೊಳ್ಳುತ್ತದೆ ಎಂದರೆ ತಪ್ಪಲ್ಲ.

ಪ್ರಾಯಶಃ ಇದು ಆಸ್ತಿಕರಿಗೆ ಮಾತ್ರ. ನಾಸ್ತಿಕರಿಗೆ ದೇವರು-ದಿಂಡರ ರಗಳೆಯೇ ಇಲ್ಲ ಅಥವಾ ಅವರ ಲೆಕ್ಕದಲ್ಲಿ ಇದೆಲ್ಲಾ ಒಂದು ರಗಳೆ. ಜೀವನದಲ್ಲಿ ಪೂರ್ವಜ್ನ್ಮದ ಸುಕೃತದಿಂದ ಅಂತಹ ದೊಡ್ಡ ತೊಂದರೆ ಅನುಭವಿಸಿರುವುದಿಲ್ಲ, ಯಾವುದೇ ಕಾಯಿಲೆ-ಕಸಾಲೆಗಳಿಗೆ ಈಡಾಗಿರುವುದಿಲ್ಲ ಮತ್ತು ಅವರು ಮುಟ್ಟಿದ್ದೆಲ್ಲಾ ಹೊನ್ನಾಗುವಂತ ಯೋಗವನ್ನು ಪಡೆದಿರುತ್ತಾರೆ--ಹೀಗಾಗಿ ಅವರಿಗೆ ಈ ಜನ್ಮದಲ್ಲಿ ದೇವರ ಅಸ್ಥಿತ್ವವಾಗಲೀ ಅವಶ್ಯಕತೆಯಾಗಲೀ ಬಂದಿರುವುದಿಲ್ಲ-ಬೇಕಾಗಿರುವುದಿಲ್ಲ. ಯಾವಾಗ ತಿರುಗುವ ಯಂತ್ರ ನಿಂತುಕೊಂಡಿತೋ, ಚಲಿಸುವ ಗಾಲಿ ಹೂತು ಹೋಯಿತೋ, ಮನೆಯಲ್ಲಿ ಅನಾರೋಗ್ಯ, ವಿರಸ, ಆರ್ಥಿಕ ನಷ್ಟ ಉಂಟಾಯಿತೋ ಆ ಘಳಿಗೆಯಿಂದ ನಮ್ಮ ಸರಕಾರೀ ಬಸ್ಸುಗಳ ಬೋರ್ಡು ಬದಲಾದ ಹಾಗೇ ತಾವೂ ಆಸ್ತಿಕರೇ ಎಂಬ ಪೋಸುಕೊಡುತ್ತ ಬರುತ್ತಾರೆ. ದೇವರೆಂಬ ದೇವರಿಗೆ ಇವರ ಬೇರು-ಬಿತ್ತು ಎಲ್ಲಾ ಗೊತ್ತಿರುವುದಿಲ್ಲವೇ ! ಯಾವಾಗ ಆ ಘಳಿಗೆಯಲ್ಲಿ ಮಾತ್ರ ನೆನೆಯ ಬರುತ್ತಾರೋ ಅಂಥವರನ್ನು ಇನ್ನೂ ಪರೀಕ್ಷೆಗೊಳಪಡಿಸುವ ಅದ್ಬುತ ಚೈತನ್ಯವೇ ದೇವರು. ಇಂತಹ ಅರ್ಜೆಂಟಿಗೆ ದೇವರ ದಾಸರಾಗುವವರನ್ನು ನೆನೆದು ನಮ್ಮ ಪೂರ್ವಜರು ’ ಸಂಕಟ ಬಂದಾಗ ವೆಂಕಟರಮಣ’ ಎಂಬ ಗಾದೆ ಮಾಡಿದರು! ನಾಸ್ತಿಕರಲ್ಲಿ ನಾನು ಯಾವಾಗಲೂ ಕೇಳುತ್ತಿದ್ದುದು ಎರಡೇ ಪ್ರಶ್ನೆ- ಮೊದಲನೆಯದು: ಆಕಾಶ ಕಾಯಗಳನ್ನು ಗುರುತ್ವಾಕರ್ಷಣ ಶಕ್ತಿಯಿಂದ ಸರಿಯಾದ ಹಿಡಿತದಲ್ಲಿ ನಿಯಂತ್ರಿಸಿಡುವ ಶಕ್ತಿ ಯಾವುದು ? [ ಹಾಗೆ ಕರೆಯುವ ಆ ಗುರುತ್ವಾಕರ್ಷಣ ಶಕ್ತಿ ಹೇಗೆ ಹುಟ್ಟಿಕೊಳ್ಳುತ್ತದೆ ? ] ಎರಡನೇದು: ಆತ್ಮವೆಂಬ ಚೈತನ್ಯ ದೇಹಕ್ಕೆ ಬರುವ ಮೊದಲು ಎಲ್ಲಿರುತ್ತದೆ? ಯಾವ ರೂಪದಲ್ಲಿರುತ್ತದೆ ? ಸತ್ತಮೇಲೆ ಎಲ್ಲಿಗೆ ಹೋಗುತ್ತದೆ ?

ಜನಸಾಮಾನ್ಯರಲ್ಲಿ ನಾವು ಹುಟ್ಟಿದ ದಿನವನ್ನು ಸಂಭ್ರಮದಿಂದ ಆಚರಿಸಿಕೊಂಡರೆ ಸತ್ತದಿನವನ್ನು ದುಃಖದಿಂದ ಶ್ರಾದ್ಧವಾಗಿ ಆಚರಿಸುತ್ತೇವೆ. ಸಾಧು-ಸಂತ, ಸನ್ಯಾಸಿಗಳೂ ಯತಿಗಳೂ ಹುಟ್ಟಿದ ಮತ್ತು ಕಾಲವಾದ ಎರಡೂ ದಿನಗಳು ನಮಗೆ ಸಂಭ್ರಮಾಚರಣೆಯ ದಿನಗಳೇ ಆಗಿರುತ್ತವೆ. ಯಾಕೆಂದರೆ ಮಹಾತ್ಮರ ಹುಟ್ಟು ಮತ್ತು ಸಾವುಗಳೇ ಹಾಗೆ. ಅವರೆಲ್ಲ ಕಾರಣವಿಲ್ಲದೇ ಹುಟ್ಟುವುದೂ ಇಲ್ಲ, ಕಾಲವಾಗುವುದೂ ಇಲ್ಲ! ಹಾಗಾದರೆ ಅವರ ಹುಟ್ಟು-ಸಾವಿಗೆ ಏನುಕಾರಣ ಎಂದು ಅಂದಾಜಿಸಹೊರಟರೆ ನಮಗೆ ಸಿಗುವ ಸಾಮಾನ್ಯ ಉತ್ತರ ’ಜಗದೋದ್ಧಾರ’ ಅರ್ಥಾತ್ ಜಗತ್ತಿನ ಕೆಲವು ಭೂ ಪ್ರದೇಶಗಳಲ್ಲಿ ತಮ್ಮ ಕಾರ್ಯವನ್ನು ಹಮ್ಮಿಕೊಂಡು ಜನರಿಗೆ ಒಳಿತನ್ನು ಮಾಡಲೋಸುಗ ಅವರು ಅಂಶಾಂಶಾವತಾರಿಗಳಾಗಿ ಭೂಮಿಯ ಮೇಲೆ ಅವತರಿಸುತ್ತಾರೆ. ಹೀಗೆ ಅವತರಿಸಿದ ಆ ಮಹನೀಯರು ಒಂದಷ್ಟು ಕಾಲ ಭುವಿಯಲ್ಲಿದ್ದು ಅಲ್ಲಿ ತಮ್ಮ ಸೇವೆಗೈದು ಪೂರ್ವನಿಗದಿತ ಸಮಯಕ್ಕೆ ಸರಿಯಾಗಿ ದೇಹಾಂತ್ಯವನ್ನು ಕಾಣುತ್ತಾರೆ. ಅವರ ಆ ಭೌತಿಕ ಕಾಯದಿಂದ ಅವರ ಆತ್ಮ ಹೊರಟು ನಡೆದರೂ ಅವರ ಪಾರ್ಥಿವ ಶರೀರವನ್ನು ಸಮಾಧಿಮಾಡಿದ ಸ್ಥಳದಲ್ಲಿ ಅವರ ತಪದ ಪ್ರಭೆ ಅಡಗಿರುತ್ತದೆ. ಸಮಾಧಿಯಲ್ಲಿರುವ ಅವರ ಭೌತಿಕ ಶರೀರದ ಅವಶೇಷಗಳು ನಾವಿವತ್ತು ಹೇಳುವ ಕಾಸ್ಮಿಕ್ ರೇಡಿಯೇಶನ್ ಉಂಟುಮಾಡುತ್ತಿರುತ್ತವೆ. ಹೀಗೇ ಕಾಲವಾದ ಸನ್ಯಾಸಿ ಜನರ ನೆನಪಿನಲ್ಲಿ ಅವರು ಸಮಾಧಿಸ್ಥರಾದ ಆ ಮಿತಿಯಂದು ಪ್ರತೀ ವರ್ಷ ಅವರ ಯತಿಶ್ರಾದ್ಧವನ್ನು ವಿದ್ವಜ್ಜನರು ಸೇರಿ ವಿಧಿವತ್ತಾಗಿ ವೇದಮಂತ್ರಗಳೊಂದಿಗೆ ಆಚರಿಸುತ್ತಾರೆ-ಇದೇ ’ಆರಾಧನೆ’ ಎಂದು ಕರೆಸಿಕೊಳ್ಳುತ್ತದೆ.



ನಮ್ಮ ಇಂದಿನ ಈ ಯುಗದಲ್ಲಿ ಒಂದೆರಡು ಸನ್ಯಾಸಿಗಳ ಸಜೀವ ಸಮಾಧಿಗಳು ನಮಗೆ ನೋಡ ಸಿಗುತ್ತವೆ. ಒಂದು ಶೃಂಗೇರಿಯ ಶ್ರೀ ವಿದ್ಯಾಶಂಕರ ದೇಗುಲ.ಸರಿಸುಮಾರು ಹನ್ನೆರಡನೇ ಶತಮಾನದ ಅಂತ್ಯಭಾಗದಲ್ಲಿ ನೂರಾ ಐದು ವರ್ಷಗಳ ವರೆಗೆ ದೇಹದಿಂದಿದ್ದ ಶ್ರೀ ವಿದ್ಯಾಶಂಕರ ಮಹಾಸ್ವಾಮಿಗಳು ತಪಸ್ಸಿನಲ್ಲಿ ಬಹಳ ಉತ್ತುಂಗಕ್ಕೆ ಏರಿದವರು. ಅವರ ನಂತರದಲ್ಲಿ ಬಂದ ಶ್ರೀ ವಿದ್ಯಾರಣ್ಯ ಮಹಾಮುನಿಗಳು [ಹಂಪೆ ಮತ್ತು ವಿಜಯನಗರಕ್ಕೆ ಕಾರಣೀಭೂತರಾದವರು] ವಿದ್ಯಾಶಂಕರ ದೇಗುಲವನ್ನು ಕಟ್ಟಿಸಿದರು ಎನ್ನುತ್ತವೆ ಶೃಂಗೇರಿ ಮಠದ ದಾಖಲೆಗಳು. ಇಲ್ಲಿನ ವಿಶೇಷವೆಂದರೆ ಸೂರ್ಯರಶ್ಮಿ ಒಂದೊಂದು ಋತುವಿನಲ್ಲೂ ಅಲ್ಲಿರುವ ವಿವಿಧ ಮಧ್ಯಭಾಗದ ಬಾಗಿಲು ಮತ್ತು ಕಿಟಕಿಗಳ ಮೂಲಕ ಹಾದು ದೇವಸ್ಥಾನದ ಒಳಗೆ ಹೋಗಿ ಲಿಂಗವನ್ನು ದರ್ಶಿಸುತ್ತವೆ, ಇಲ್ಲಿನ ಹನ್ನೆರಡು ಕಂಬಗಳು ಹನ್ನೆರಡು ರಾಶಿಗಳನ್ನು ಬಿಂಬಿಸುತ್ತವೆ. ವಿದ್ಯಾ ಶಂಕರರಿಗೆ ನಮಸ್ಕರಿಸಿ ಇನ್ನೊಬ್ಬ ಮುನಿಯ ಬಗ್ಗೆ ತಿಳಿಯೋಣ.

ಮತ್ತೊಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಂದಿರ. ತಮ್ಮ ಸಾಧನೆ ಮುಗಿದ ಮೇಲೆ ಅರೆಘಳಿಗೆಯೂ ನಿಲ್ಲದ ಈ ಮುನಿಜನ ತಮ್ಮ ಸ್ವ ಇಚ್ಛೆಯಿಂದ ಸಮಾಧಿಯ ಆಳದಲ್ಲಿ ಪದ್ಮಾಸೀನರಾಗಿ ಕುಳಿತು ಮೇಲೆ ತಮ್ಮನ್ನು ಮುಚ್ಚಿಬಿಡುವಂತೆ ತಮ್ಮ ಶಿಷ್ಯಂದಿರಿಗೆ ಆಜ್ಞಾಪಿಸುತ್ತಾರೆ. ಇದು ಶಿಷ್ಯಂದರನ್ನು ಚಣಕಾಲ ದುಃಖಕ್ಕೆ ಈಡುಮಾಡಿದರೂ ಗುರುವಾಜ್ಞೆಯನ್ನು ಮೀರಲಾಗದ ಶಿಷ್ಯರು ಹಾಗೆ ಮಾಡುತ್ತಾರೆ. ಅಂತಹ ಕೊನೇಘಳಿಗೆಯಲ್ಲಿ ಗುರು-ಶಿಷ್ಯರ ಮಾತುಕತೆ ನಡೆದು ಶಿಷ್ಯರ ಅನುವು-ಆಪತ್ತಿನಲ್ಲಿ ಗುರುವು ಸಹಕರಿಸುವುದಾಗಿ ಭರವಸೆ ನೀಡುತ್ತಾರೆ. ಇಂತಹ ಹೃದಯವಿದ್ರಾವಕ ಸನ್ನಿವೇಶದಲ್ಲಿ ಸಮಾಧಿಸ್ಥರಾಗುವ ಮುನಿಜನರು ತಮ್ಮ ದಿವ್ಯಚೈತನ್ಯದಿಂದ ಬಹುಕಾಲ ಅಲ್ಲಿ ಸುಪ್ತಸ್ಥಿತಿಯಲ್ಲಿ ನೆಲೆಸಿ ಭಕ್ತರನ್ನು ಹರಸುತ್ತಿರುತ್ತಾರೆ. ಈ ದಿವ್ಯ ಚೈತನ್ಯ ಸ್ವರೂಪೀ ಮುನಿಜನರು ಕಾಲವಾದ ದಿನವನ್ನು ಹಬ್ಬದ ರೀತಿ ಆಚರಿಸುವುದೇ ಪುಣ್ಯ.


ಬಹುತೇಕರಿಗೆ ಗುರುವಾಗಿ, ಬಹಳ ಜನಪ್ರಿಯರಾಗಿ, ಜನರ ಭಾವನೆಗಳಿಗೆ ತ್ವರಿತ ಸ್ಪಂದಿಸಿದ್ದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ೩೩೯ನೇ ಆರಾಧನೆ ಇಂದು ನಡೆಯುತ್ತಿದೆ. ಅಂದರೆ ಇಂದಿಗೆ ೩೩೯ ವರ್ಷಗಳ ಹಿಂದೆ ಗುರುರಾಯರು ಬದುಕಿದ್ದರು, ನಮ್ಮಂತಹ ಜನರೊಟ್ಟಿಗೆ ಮನುಷ್ಯದೇಹದಿಂದ ತಿರುಗಾಡುತ್ತ ಜಪತಪಾದಿ ಹಲವು ಅನುಷ್ಠಾನದಲ್ಲಿದ್ದರು. ಆದರೆ ನಾವೇ ಹತಭಾಗ್ಯರು-ಅವರನ್ನು ನೇರವಾಗಿ ನೋಡಲಿಲ್ಲ, ಒಂದೊಮ್ಮೆ ನೋಡಿದ್ದರೂ ನಮಗದರ ಅರಿವಿಲ್ಲ! ಬದುಕಿದ್ದಾಗಲೇ ಸಮಾಧಿಮಾಡಿಸಿಕೊಂಡರೂ ತದನಂತರವೂ ಜನರಿಗೆ ಅಲ್ಲಿಂದಲೇ ಸಹಾಯ ಹಸ್ತನೀಡಿದ ಗುರುವು ತನ್ನ ವೈಯಕ್ತಿಕ ಬದುಕನ್ನ ಕಡೆಗಣಿಸಿ ಸಮಾಜಕ್ಕಾಗಿ ತನ್ನ ಬದುಕನ್ನು ಧಾರೆ ಎರೆದಿದ್ದಾರೆ. ತನ್ನ ಅನುಪಸ್ಥಿತಿಯಲ್ಲಿ ಬೇಸರಗೊಂಡು ಬಾವಿಗೆ ಹಾರಿ ಪ್ರಾಣತೆತ್ತ ಪೂರ್ವಾಶ್ರಮದ ಸಹಧರ್ಮಿಣಿಗೆ ಮೋಕ್ಷವನ್ನು ಕರುಣಿಸಿದ್ದಾರೆ. ಲೌಕಿಕದ ಹಲವು ಜನರಿಗೆ ಇದೆಲ್ಲಾ ಅರ್ಥವಿಹೀನವೆನಿಸಿದಂತೆ ಕಂಡರೂ ಸನ್ಯಾಸಿಗಳಿಗೆ ಅವರ ಆತ್ಮಜ್ಞಾನ ಎಲ್ಲವನ್ನೂ ಹೇಳುತ್ತದೆ. ಯಾವುದನ್ನು ತೊರೆಯಲಾಗದೋ ಅಂತಹ ವ್ಯಾಮೋಹವನ್ನೇ ಹಿಂದಕ್ಕೆ ಹಾಕಿ ತಾನು ಮುನ್ನಡೆದರು ಶ್ರೀ ರಾಘವೇಂದ್ರರು.

ಹಲವಾರು ಜನರು ವಿವಿಧ ರೀತಿಯಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತ ಅವರನ್ನು ನೆನೆದು ಫಲವನ್ನು ಪಡೆದಿದ್ದಾರೆ. ಇಂತಹ ಸದ್ಗುರುವಿನ ಸ್ಮರಣೆ ಇವತ್ತಿನ ಭಕ್ತಿಸಿಂಚನದಲ್ಲಿ-

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ಋತಾಯಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||


ತುಂಗೆಯ ದಡದಲಿ ಮನೆಮಾಡಿಹ
ಮಹನೀಯ ಮುನಿಯೆ ನಿನ್ನನು ನೆನೆವೆ
ಅಂಗಳದಲಿ ಚಿತ್ರವು ಎದುರಾಗಲು
ಒಮ್ಮೆ ನಿನಗೆ ನಾ ಕೈಮುಗಿವೆ

ಮಂಚಾಲೆಯ ಆ ಊರಲಿ ನೆಲೆಸುತ
ಸಂಚಿತ ವ್ಯಾಧಿಗಳನು ಕಳೆದೆ
ಅಂಚೆಯ ತೆರದಲಿ ಭಕುತರ ದೂರನು
ಕೊಂಚವೂ ಬಿಡದೆ ಆಲಿಸುವೆ

ವೀಣಾಗಾನ ವಿನೋದನೆ ನುತಿಸಲು
ತ್ರಾಣವು ಯುಕ್ತಿಯು ನಮಗಿಲ್ಲ
ಪ್ರಾಣದೇವನೆಂದೆನಿಸಿದ ಗುರುವರ
ಗಾಣದ ಎತ್ತುಗಳ್ ನಾವೆಲ್ಲ !

ಜನನೊಂದರು ಸ್ವೀಕರಿಸೆ ಸಮಾಧಿಯ
ಮನಬೇಗುದಿ ತಾಳದೆ ಅಂದು
ಅನುದಿನ ಜನಸಮುದಾಯವ ಹರಸುವ
ಘನಮಹಿಮನೆ ಜಯನಮೋ ಎಂದು

ಆರಾಧಿಸುವೆವು ಭಾವ ತರಂಗದಿ
ನಾರಯಣ ರೂಪನೆ ನಮನ
ಕಾರಣಗಳ ನೀ ಹೇಳದೆ ಮನ್ನಿಸು
ಘೋರದುರಿತಗಳ ಕಳೆದು ದಿನಾ

ಬ್ರಹ್ಮಾನಂದಂ ಪರಮ ಸುಖದಂ ಕೇವಲಂ ಜ್ಞಾನಮೂರ್ತಿಂ
ದ್ವಂದ್ವಾತೀತಂ ಗಗನಸದೃಶಂ ತತ್ವಮಸ್ಯಾದಿ ಲಕ್ಷ್ಯಮ್ |
ಏಕಂ
ನಿತ್ಯಂ ವಿಮಲಮಚಲಂ ಸರ್ವಧೀಸಾಕ್ಷಿಭೂತಂ
ಭಾವಾತೀತಂ
ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ ||


--ನಿಮ್ಮೊಡನೆ ವಿ.ಆರ್.ಭಟ್ ವಿಭಾಗದ 'ಭಕ್ತಿ ಸಿಂಚನ ' ಮಾಲಿಕೆಯಿಂದ