Pages

Thursday, February 3, 2011

ಕಿವಿಯಲ್ಲಿ ಧ್ವನಿಸುತ್ತಿರುವ ಸುಧಾಕರ ಶರ್ಮರ ಮಾತು

[ಸಂಪದವನ್ನು ಕಣ್ಣಾಡಿಸಿದಾಗ ಅಲ್ಲಿ ಕಂಡ ಶ್ರೀ ಮಹೇಶರ ಲೇಖನವನ್ನು ಯಥಾವತ್ತಾಗಿ ಇಲ್ಲಿ ಹಾಕಿರುವೆ.]
-ಶ್ರೀಧರ್
ಹರಿ ಓಂ

ಮೊನ್ನೆ ತಾನೆ ನಡೆದ ವೇದಸುಧೆ ಬಳಗದ ವಾರ್ಷಿಕೋತ್ಸವದಲ್ಲಿ ಭಾಗವಹಿಸುವ ಸದವಕಾಶ ನನಗೆ ಸಿಕ್ಕಿದ್ದು ಸರಿಯಷ್ಟೆ. ಈ ಸಂದರ್ಭದಲ್ಲಿ ಅದೆಷ್ಟೋ ವಿಷಯಗಳನ್ನು ಚರ್ಚಿಸಲಾಯಿತು. ಕಾರ್ಯಕ್ರಮದ ದಿನ ಬೆಳಗ್ಗೆ ಐದು ಘಂಟೆಗೇನೇ ಆತ್ರೇಯರು, ನಾನು ಮತ್ತು ಶ್ರೀನಾಥ್ (ಇನ್ನೊಬ್ಬ ವೇದಸುಧೆ ಅಭಿಮಾನಿ) ರವರು ಸುಧಾಕರ ಶರ್ಮರ ಕೋಣೆಯ ಬಾಗಿಲನ್ನು ತಟ್ಟಿದ್ದೆವು! ನಮ್ಮೆಲ್ಲರ ಪ್ರಶ್ನೆಗಳಿಗೆ ಸಾವಧಾನವಾಗಿಯೇ ಉತ್ತರಿಸಿದರು ಶರ್ಮರು. ಆ ಸಂದರ್ಭದಲ್ಲಿ ಚರ್ಚಿಸಲಾದ ವಿಷಯಗಳ ಬಗ್ಗೆ ಬರೆಯಲು ಸಾಕಷ್ಟು ಸಮಯ ಬೇಕು, ಮೇಲಾಗಿ ಅವುಗಳಲ್ಲಿ ಬಹಳಷ್ಟು ವಿಷಯಗಳು ಶರ್ಮರ ಪ್ರವಚನಗಳಲ್ಲಿ ಲಭ್ಯವಿವೆ. ಇವೆಲ್ಲಕಿಂತ ಹೆಚ್ಚಾಗಿ ನನ್ನ ಮನಸ್ಸಿಗೆ ನಾಟಿದ್ದು ಎಂದರೆ ಆನಂತರದ ಅಗ್ನಿಹೋತ್ರದ ಸಮಯದಲ್ಲಿ ಶರ್ಮರು ಹೇಳಿದ ಒಂದು ಮಾತು. ಆಗಿನ ಸಂದರ್ಭವೆಂದರೆ ಅಗ್ನಿಹೋತ್ರದ ಅಂತಿಮ ಹಂತದಲ್ಲಿ ಪಠಿಸುವ ಮಂತ್ರವೊಂದಿದೆ. ಆ ಮಂತ್ರದ ಅರ್ಥ "ಇತರರು ನಮ್ಮನ್ನು ಪ್ರೀತಿಸುವಂತಾಗಲಿ, ನಾವು ಕೂಡ ಇನ್ನೊಬ್ಬನನ್ನು ಪ್ರೀತಿಸುವೆವು" ಎಂಬಂತೆ ಇದೆ. ಇಲ್ಲಿ ಶರ್ಮರ ಮಾತುಗಳಲ್ಲೇ ಹೇಳಲು ಸಾಧ್ಯವಾಗಿತ್ತಿಲ್ಲ ನನಗೆ. ಯಾಕೆಂದರೆ ಅಗ್ನಿಹೋತ್ರದ ಆಡಿಯೋ ರೆಕಾರ್ಡಿಂಗ್ ನನ್ನ ಬಳಿ ಇಲ್ಲ. ಅದು ಲಭ್ಯವಾದರೆ ಶರ್ಮರು ಹೇಳಿದ್ದನ್ನು ಯಥಾರ್ಥವಾಗಿ ಕೇಳಬಹುದು. ಇರಲಿ. ಇದೇ ಮಾತು ನನ್ನ ಕಿವಿಯಲ್ಲಿ ಇನ್ನೂ ಗುಯ್ ಗುಡುತ್ತಿದೆ. ಮತ್ತೆ ಮತ್ತೆ ನೆನಪಾಗುತ್ತಿದೆ, ತಲೆಯೊಳಗೆ ಏನೇನೋ ಯೋಚನೆಗಳನ್ನು ಹುಟ್ಟುಹಾಕುತ್ತಿದೆ. ಅಬ್ಬ! ವ್ಯಕ್ತಿಯೊಬ್ಬರ ಮಾತೊಂದು ಎಷ್ಟು ಪ್ರಭಾವ ಬೀರಬಹುದೆಂದು ನನಗೀಗ ತಿಳಿಯುತ್ತಿದೆ! (ಹೀಗೆ ಒಂದುಕ್ಷಣಕ್ಕೆ ನಾನು ಉಸಿರಾಡುವುದನ್ನೇ ಮರೆಸಿದ ಮಾತುಗಳು ಶರ್ಮರ ಉಪನ್ಯಾಸಗಳಲ್ಲಿ ಸಾಕಷ್ಟು ಇವೆ, ಅವುಗಳ ಬಗ್ಗೆ ಈಗ ಬೇಡ). ಈ ಒಂದು ಮಾತು ಯಾಕೆ ನನಗೆ ಮತ್ತೆ ಮತ್ತೆ ನೆನಪಾಗುತ್ತಿದೆ?
ಶರ್ಮರು ಮುಂದುವರೆದು ಅದೇ ಮಂತ್ರದ ಅರ್ಥವನ್ನು ವಿವರಿಸುತ್ತಾ, ಎಲ್ಲರೂ ಇದರ ಪ್ರಕಾರ ನಡೆದುಕೊಂಡರೆ ಪ್ರಪಂಚದಲ್ಲಿ ಈಗ ಕಂಡುಬರುತ್ತಿರುವ ಅಧ್ವಾನಗಳೆಲ್ಲ ಇಲ್ಲವಾಗುತ್ತವೆ ಎಂದು ಹೇಳುತ್ತಾರೆ. ಹಾಗಿದ್ದರೆ ನಾವು ಮಾತ್ರ ಅಹಿಂಸೆ ಆಚರಿಸಿ ಇನ್ನೊಬ್ಬರನ್ನು ಆದರಿಸಿದರೆ, ಪ್ರೀತಿಸಿದರೆ ಸಾಕೇ, ಆ ’ಇನ್ನೊಬ್ಬನೂ’ ಹಾಗೆಯೇ ನಡೆದುಕೊಳ್ಳಬೇಕಲ್ಲವೇ! ಎಂಬ ಸಂಶಯ ಸಹಜ. ನನ್ನ ಮನಸಿನಲ್ಲೂ ಈ ಸಂಶಯ ಆ ಗಳಿಗೆಯಲ್ಲಿ ಬಂತು. ಅದಕ್ಕೆ ಶರ್ಮರು ಹೇಳುವ ಮಾತು ಇದು (ನನಗೆ ನೆನಪಿಗೆ ಬರುವಂತೆ) - "ನಾವು ಅಹಿಂಸೆ, ಸತ್ಯಕ್ಕೆ ಮತ್ತು ದೇವರ ನಿಯಮಗಳಿಗೆ ಬಧ್ಧರಾಗಿದ್ದಲ್ಲಿ ಎಷ್ಟೇ ದುಷ್ಟನಾದವನೂ ನಮ್ಮ ಮುಂದೆ ವಿನಮ್ರನಾಗಲೇ ಬೇಕು. ಇದು ಪ್ರಪಂಚದ ನಿಯಮ, ಆ ಭಗವಂತನ ನಿಯಮ. ಇದರಲ್ಲಿ ಸಂಶಯ ಬೇಡ. ಒಂದು ವೇಳೆ ಹಾಗಾಗದಿದ್ದಲ್ಲಿ ನಮ್ಮ ನಿಯಮ ನಿಷ್ಠೆಯನ್ನು ಪ್ರಶ್ನಿಸಿಕೊಳ್ಳಬೇಕೇ ಹೊರತು ಸತ್ಯದ, ಅಹಿಂಸೆಯ ನಿಯಮಗಳನ್ನಲ್ಲ". ಎಂಥಾ ಮಾತು! ನನ್ನ ಮನಸ್ಸಿನಲ್ಲಿದ್ದ ಪ್ರಶ್ನೆಯನ್ನು ಓದಿ ಅವರಾಗೇ ಉತ್ತರಿಸಿದಂತೆ ನನಗೆ ಭಾಸವಾಯಿತು. ಇಲ್ಲಿ ಶರ್ಮರ ಮಾತು ಸರಿಯೋ ತಪ್ಪೋ ಎಂಬ ವಿಮರ್ಶೆಗೆ ನಾನು ಹೊರಟಿಲ್ಲ. ಅಷ್ಟು ತಿಳುವಳಿಕೆಯೂ ನನಗಿಲ್ಲ. ಈ ಮಾತುಗಳಿಂದ ನನ್ನ ಮನಸ್ಸಿನಲ್ಲಿ ಕೆಲವಾರು ಯೋಚನೆಗಳು ಬಂದು ಹೋಗುತ್ತಾ ಇವೆಯೇ ಹೊರತಾಗಿ ಯಾವುದೇ ಅಂತಿಮ ರೂಪ ಸಿಕ್ಕಿಲ್ಲ. 
ಈ ಮಂತ್ರದ ಅರ್ಥ ಯೇಸುಕ್ರಿಸ್ತನ "ನಿನ್ನ ಶತ್ರುವನ್ನು ಪ್ರೀತಿಸು" ಎಂಬ ಮಾತಿನಂತೆಯೇ ಇದೆ ಅಲ್ಲವೇ? ವೇದ ಎನ್ನುವುದು ಪುಸ್ತಕವಲ್ಲ, ಅದು ಕಾಲಕಾಲಕ್ಕೆ, ಪ್ರಪಂಚದ ಬೇರೆ ಬೇರೆ ಕಡೆಗಳಲ್ಲಿ ಯೋಗಿಗಳಿಗೆ ಶ್ರುತವಾದ ಸತ್ಯ ಎಂಬ ಶರ್ಮರ ಮಾತುಗಳು ಇಲ್ಲಿ ನೆನಪಾಗುತ್ತದೆ (ವೇದಗಳು ಪ್ರಪಂಚದ ನಿಯಮಗಳನ್ನು ಸೂಚಿಸುವಂಥವುಗಳಾಗಿದ್ದಲ್ಲಿ ಅವು ಭಾರತದಲ್ಲಿ ಮಾತ್ರ ಏಕಿವೆ ಎಂಬ ನನ್ನ ಪ್ರಶ್ನೆಗೆ ಶ್ರೀಯುತ ಶರ್ಮರು ಈ ರೀತಿ ಉತ್ತರಿಸಿದ್ದರು). ಗಾಂಧೀಜಿ ಹೇಳಿದ "ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸು" ಎಂಬ ಮಾತು ಕೂಡ ಈ ಅರ್ಥದಲ್ಲೇ ಇದೆ (ಆದರೆ ಇದು ಪ್ರಸ್ತುತ ಕಾಲದಲ್ಲಿ ನಿರ್ವೀರ್ಯತೆಯ ಲಕ್ಷಣವಾಗಿ ಗುರುತಿಸಲ್ಪಡುತ್ತಿದೆ). ಪ್ರಪಂಚದ ಮಹಾತ್ಮರೆಲ್ಲ ಇದನ್ನು ಹೇಳಿದ್ದಾರೆ. ಇಂಥ ಮಹಾತ್ಮರುಗಳೆಲ್ಲ ಆಯಾಯಾ ಕಾಲದ ಜನರ ಜೀವನ ಸ್ವರೂಪವನ್ನು ಬದಲಿಸಿ ಹೊಸ ಯೋಚನಾ ಲಹರಿಯೊಂದನ್ನು ಜನಮಾನಸದಲ್ಲಿ ತಂದವರು ಎಂಬುದೂ ಸತ್ಯ. ಮಹರ್ಷಿ ದಯಾನಂದರ ತತ್ವಗಳೇ ಅನೇಕ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿಯಾಗಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. 
ನನ್ನ ಮನಸ್ಸಿನಲ್ಲಿ ಏಳುತ್ತಿರುವ ಇನ್ನೊಂದು  ಪ್ರಶ್ನೆ - ಭಾರತೀಯರ ಜೀವನದಲ್ಲಿ ವೈದಿಕ ಸತ್ಯಗಳು ಅಳಿದು ವೇದಗಳು ಕೇವಲ ಧಾರ್ಮಿಕ ಆಚರಣೆಗಳಾಗಿ ಪರಿವರ್ತಿತವಾದ ಕಾಲ ಯಾವುದು? ಇದನ್ನು ಹೇಳುವುದು ಬಹುಷ: ಕಷ್ಟ. ಯಾಕೆಂದರೆ ವೈದಿಕ ಪರಂಪರೆ ಎನ್ನುವುದು ಭಾರತದಲ್ಲಿ ಎಂದೂ ಪೂರ್ತಿಯಾಗಿ ನಾಶವಾಗಿಲ್ಲ. ಒಂದೋ ಅವು ಜನರ ಬದುಕಿನಲ್ಲಿದ್ದವು, ಅಥವಾ ಆಚರಣೆಗಳಲ್ಲಿದ್ದವು. ಮೊದಲನೆಯದು ಕಣ್ಣಿಗೆ ಕಾಣದು, ಎರಡನೆಯದು (ಕೇವಲ) ಕಾಣಿಸುತ್ತದೆ. ಹಾಗಾಗಿ ಇತಿಹಾಸ ಪಠ್ಯವೊಂದರಲ್ಲಿ "ಇಂತಿಂಥಾ ರಾಜನ ಆಸ್ಥಾನದಲ್ಲಿ ಇಷ್ಟಿಷ್ಟು ಮಂದಿ ವೈದಿಕ ಪಂಡಿತರಿದ್ದರು" ಎಂದು ಹೇಳುವಾಗ ಆ ಪಂಡಿತರು ಕೇವಲ ವೇದಗಳನ್ನು ಕಂಠಸ್ಥ ಮಾಡಿಕೊಂಡು ಆಸ್ಥಾನದ ಪಗಾರ ತಿಂದುಂಡು ಸಂತೋಷವಾಗಿದ್ದವರೋ ಅಥವಾ ವೇದಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಿಜ ಯೋಗಿಗಳಾಗಿದ್ದವರೋ ಎಂಬುದು ಸ್ಪಷ್ಟವಾಗುವುದಿಲ್ಲ. ಕ್ಷತ್ರಿಯರು ವೇದರೀತ್ಯಾ ಕ್ಷಾತ್ರ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದರೋ ಅಥವಾ ಜನ್ಮತ: ಬಂದ ಅರಸೊತ್ತಿಗೆಗಳನ್ನು ಅಲಂಕರಿಸಿಕೊಂಡು ಸುಖಿಸುತ್ತಿದ್ದವರೇ? ಇದನ್ನೂ ತಿಳಿಯುವುದು ಕಷ್ಟ. ಬ್ರಾಹ್ಮಣ/ಕ್ಷತ್ರಿಯರೆರಡರಲ್ಲೂ ಕೆಲವರು ಅಪವಾದಗಳಂತಿದ್ದಿರಬಹುದು, ಆ ವಿಷಯ ಬೇರೆ. ಇರಲಿ. ಇನ್ನು ಈ ದೇಶದ ಮೇಲೆ ಧಾಳಿ ನಡೆಸಿದರಲ್ಲ, ಆ ದಾಳಿಗಳ ಬಗ್ಗೆ ಏನೆನ್ನಬೇಕು! ವೇದದ ಅರಿವು ಸಮಾಜದಿಂದ ಮಾಯವಾಗಿದ್ದಕ್ಕೂ ಹೊರಗಿನಿಂದ ಬಂದ ಅನ್ಯರ ಧಾಳಿಗಳಿಗೆ ಸಂಬಂಧವಿದೆಯೇ ಅಥವಾ ಇಲ್ಲವೆ? ಅಸತ್ಯಗಳನ್ನೇ ಸತ್ಯವೆಂದು ತಿಳಿದು, ವೇದಕ್ಕೆ ಬೆನ್ನು ತೋರಿಸಿ ಬದುಕಿದ ಮೂಢರಿಗೆ ಸಿಕ್ಕಿದ ಶಿಕ್ಷೆಯೇ ಅದು? ಅಥವಾ ಸಾತ್ವಿಕರಾಗಿದ್ದ, ಸತ್ಯಸಂಧರಾಗಿದ್ದ, ಯುಧ್ಧಗಳಲ್ಲಿ ಯುಧ್ಧನಿಯಮಗಳನ್ನು ಪಾಲಿಸಿ ಸೋತ ಭಾರತೀಯರ ಮೇಲೆ ರಾಕ್ಷಸೀ ಸ್ವಭಾವದ ದಾಳಿಕೋರರು ನಡೆಸಿದ ಹತ್ಯಾಕಾಂಡವೇ? ತಿಳಿಯುತ್ತಿಲ್ಲ. ಸಿಖ್ಖರು ವೇದಗಳನ್ನು ತಿರಸ್ಕರಿಸಿದರೆಂದು ನಾವು ಇತಿಹಾಸದಲ್ಲಿ ಓದುತ್ತೇವೆ. ಅವರು ವೇದಗಳನ್ನೇ ತಿರಸ್ಕರಿಸಿದರೋ ಅಥವಾ ವೇದದ ಹೆಸರಿನಲ್ಲಿ ಆ ಕಾಲದಲ್ಲಿದ್ದ ಮೂಢ ಆಚರಣೆಗಳನ್ನು ತಿರಸ್ಕರಿಸಿದರೋ? ಇದನ್ನು ತಿಳಿಯುವುದೂ ಕಷ್ಟ. ಗಾಂಧೀಜಿಯವರ ಅಹಿಂಸಾ ಸತ್ಯಾಗ್ರಹಗಳಿಂದಲೇ ನಮಗೆ ಸ್ವಾತಂತ್ರ್ಯ ಸಿಕ್ಕಿತೇ ಅಥವಾ ಬೋಸ್ ಮತ್ತು ಇನ್ನಿತರ ಕ್ರಾಂತಿವೀರರಿಗೆ ಹೆದರಿ ಮತ್ತು ಇತರ ಅಂತರರಾಷ್ಟ್ರೀಯ ಒತ್ತಡಗಳಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿತೇ? ಭಯೋತ್ಪಾದಕ ಧಾಳಿ ಎದುರು ಅಹಿಂಸೆಯ ಪಾಠ ನಡೆಯುತ್ತದೆಯೇ, ಅಂಥಾ ಅಹಿಂಸೆ ಸತ್ಯಗಳನ್ನು ತನ್ನ ಜೀವನದಲ್ಲಿ ಅಳವಡಿಸಿದ ನಾಯಕ ಅಥವಾ ಯೋಗಿ ನಮ್ಮಲ್ಲಿದ್ದಾನೆಯೇ? ಇದ್ದರೂ ಆತನ ಅಹಿಂಸೆ ಭಯೋತ್ಪಾದಕನ ಮನ ಗೆಲ್ಲುತ್ತದೋ ಅಥವಾ ಆತನಿಗೆ ವೀರಪ್ಪನ್ ಮನವೊಲಿಸಲು ಹೋದ ಡಿಸಿಎಫ್ ಶ್ರೀನಿವಾಸ್ ಗೆ ಬಂದ ದುರ್ಗತಿ ಬಂದೀತೇ? ಇವೆಲ್ಲಾ ಪ್ರಶ್ನೆಯಾಗಿ ಉಳಿದಿದೆ, ಉತ್ತರ ಸಿಗುತ್ತಿಲ್ಲ.
ಯುಧ್ಧ, ಧಾಳಿಗಳ ವಿಚಾರ ಬಿಟ್ಟು ಜನಸಾಮಾನ್ಯನ ವಿಚಾರಕ್ಕೆ ಬಂದರೆ ಇತಿಹಾಸದ ಬೇರೆ ಬೇರೆ ಕಾಲಘಟ್ಟಗಳಲ್ಲಿ ಬುಧ್ಧ, ಬಸವಣ್ಣ ಮುಂತಾದವರು ವೇದಗಳನ್ನು ತಿರಸ್ಕರಿಸಿದವರೇ. ಶಂಕರಾದಿಗಳು ವೇದಸಂಹಿತೆಗಳನ್ನು ಆಧರಿಸಿ ಬರೆದ ಭಾಷ್ಯಗಳಲ್ಲಿ ಇಂದು ಏನೇನೋ ಬೆರೆತು ಹೋಗಿವೆ. ಮಹರ್ಷಿ ದಯಾನಂದರು ವೇದಗಳನ್ನು ಪುನರ್ ವಿಮರ್ಷಿಸುವ ಸಾಹಸಕ್ಕೆ ಕೈ ಹಾಕಿದರು. ಅಂತಹ ಮಹರ್ಷಿ ದಯಾನಂದರ ಸತ್ಯಾರ್ಥ ಪ್ರಕಾಶ ಹೇಳುವ ವಿಚಾರಗಳಿಗೂ ಬುಧ್ಧ ಬಸವಣ್ಣರ ತತ್ವಗಳಿಗೂ ಸಾಮ್ಯತೆ ಇದೆ! (ಉದಾ : ದೇಹವೆ ದೇಗುಲ ಎಂದು ಹೇಳಿದ ಬಸವಣ್ಣನೂ, ದಯಾನಂದರೂ, ಬುಧ್ಧನೂ ಮೂರ್ತಿ ಪೂಜೆಯನ್ನು ತಿರಸ್ಕರಿಸಿದ್ದಾರೆ. ಅಹಿಂಸೆ, ಸರಳ ಜೀವನ, ದಾನ/ತ್ಯಾಗ, ಮೂಢ ಆಚರಣೆಗಳು ಇತ್ಯಾದಿ ವಿಚಾರಗಳಲ್ಲಿ ಇವರೆಲ್ಲರ ವಿಚಾರಗಳು ಒಂದೇ ಆಗಿವೆ). ಈ ಎಲ್ಲವಕ್ಕೂ ಏನಾದರೂ ಸಂಬಂಧ ಇದೆಯೇ, ಇವುಗಳೆಲ್ಲದರಿಂದ ಯಾವುದೋ ಒಂದು ವಿಚಾರ ಸ್ಪಷ್ಟವಾಗುತ್ತದೆಯೋ ಅಥವಾ ಇವೆಲ್ಲವೂ ಒಂದಕ್ಕೊಂದು ಸಂಬಂಧವಿಲ್ಲದೆ, ಆಕಸ್ಮಿಕವಾಗಿ ಘಟಿಸಿದ ಘಟನೆಗಳೋ ಗೊತ್ತಿಲ್ಲ.
ಸಧೃಢವಾದ ರಾಜ್ಯವೊಂದು ಯಾವಾಗಲೂ ತನ್ನ ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಿರಬೇಕು, ಅಂತಹ ರಾಜ್ಯದ ರಾಜನು ತನ್ನ ರಾಜ್ಯ ವಿಸ್ತರಿಸುವುದರಲ್ಲಿ ಉದಾಸೀನ ತೋರಬಾರದು, ದುರ್ಬಲ ರಾಜನು ಪ್ರಬಲರೊಂದಿಗೆ ಹೋರಾಡುವುದರಲ್ಲಿ ಅರ್ಥವಿಲ್ಲ, ಬದಲಾಗಿ ಆತನ ಜೊತೆ ಒಪ್ಪಂದ ಮಾಡಿಕೊಳ್ಳಬೇಕು, ಅರ್ಥವೇ ಧರ್ಮದ ಮೂಲ, ಪ್ರತಿಯೊಬ್ಬನೂ ಜೀವನದಲ್ಲಿ ಅರ್ಥ ಸಂಪಾದನೆಯನ್ನೇ ತನ್ನ ಜೀವನದ ಗುರಿಯಾಗಿಸಿಕೊಳ್ಳಬೇಕು, ಹಾಗೂ ಹಾಗೆ ಗಳಿಸಿದ ಸಂಪತ್ತನ್ನು ಕೂಡಿಡಬೇಕು ಇತ್ಯಾದಿ ವಿಚಾರಗಳನ್ನು ಹೇಳಿದ ಚಾಣಕ್ಯ ವೇದಕ್ಕೆ ವಿರುಧ್ಧವಾಗಿ ನಡೆದುಕೊಂಡನೇ ಅಥವಾ ಅಲ್ಪಜ್ನಾನಿಯಾದ ನನ್ನ ತಲೆಗೆ ಈ ವಿಚಾರಗಳಲ್ಲಿನ ಸೂಕ್ಷ್ಮತೆಗಳು ಅರ್ಥವಾಗುತ್ತಿಲ್ಲವೇ? ಗೊತ್ತಿಲ್ಲ. ಇಂದಿನ ಕಾಲಕ್ಕೆ ಚಾಣಕ್ಯ ಬೇಕೋ ವೇದ ಬೇಕೋ ಅಥವಾ ಅವೆರಡೋ ಒಂದೆಯೋ, ಅಥವಾ ಅವೆರಡೂ ಬೇಡವೋ, ಗೊತ್ತಿಲ್ಲ.
ಹೀಗೆಯೇ - ಅರ್ಥವಿಲ್ಲದ, ಇರುವ ವಿಚಾರಗಳು ತಲೆಯಲ್ಲಿ ಬಂದು ಹೋಗುತ್ತಿವೆ. ಉತ್ತರ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಸತ್ಯ ಎನ್ನುವುದು ಯಾರಿಗೂ ಸಿಗುವುದಿಲ್ಲವಂತೆ. ಅದನ್ನು ಹುಡುಕಿಕೊಂಡು ಹೋಗುವ ದಾರಿ ಮಾತ್ರವೇ ಸತ್ಯವಂತೆ. ನಾನು ಆ ದಾರಿಯಲ್ಲಿದ್ದೇನೊ ಇಲ್ಲವೋ ಎನ್ನುವ ಸತ್ಯವೂ ಕೂಡ ನನಗೆ ತಿಳಿಯುತ್ತಿಲ್ಲ. :)
ನನ್ನೀ ಬರಹದ ಧಾಟಿ ಮೇಲೆ ತಿಳಿಸಿದ ಸುಧಾಕರ ಶರ್ಮರ ಮಾತಿಗೆ ಭಿನ್ನಾಭಿಪ್ರಾಯದಂತೆ ಮೇಲ್ನೋಟಕ್ಕೆ ಕಾಣಿಸಬಹುದು. ಆದರೆ ಅವರ ಮಾತನ್ನು ನಾನು ಒಪ್ಪಿದ್ದರಿಂದಲೇ ಈ ರೀತಿ ಮನಸ್ಸು ಹೊಯ್ದಾಡುತ್ತಿದೆ ಅನಿಸುತ್ತದೆ. ಹೇಗೆ ನಾವು ಅಳೆದು, ತೂಗಿ ತೆಗೆದುಕೊಂಡ ನಿರ್ಧಾರ ಜೀವನದಲ್ಲಿ ಹೆಚ್ಚು ಗಟ್ಟಿಯಾಗಿ ಉಳಿದುಕೊಳ್ಳುತ್ತದೋ ಹಾಗೆಯೇ ವಿಚಾರ ಮಾಡಿ, ಪರಾಮರ್ಶಿಸಿ ಒಪ್ಪಿಕೊಂಡ ತತ್ವ ಸತ್ಯಕ್ಕೆ ಹೆಚ್ಚು ಹತ್ತಿರ ಎಂದು ಅನಿಸುತ್ತದೆ. ಅದಕ್ಕೇ ಇಷ್ಟೆಲ್ಲ ಹೊಯ್ದಾಟಗಳು ಇರಲಿ ಅನಿಸುತ್ತಿದೆ. 
ಅಂದಹಾಗೆ  ಇಷ್ಟೆಲ್ಲಾ ಯೋಚನೆಗಳಿಗೆ ಕಾರಣರಾದ ಸುಧಾಕರ ಶರ್ಮರಿಗೆ ಧನ್ಯವಾದಗಳು. ಇಲ್ಲಿ ಉಧ್ಧರಿಸಿದ ಅವರ ಮಾತುಗಳು ಅವರಾಡಿದ್ದಕ್ಕಿಂತ ಭಿನ್ನವಾಗಿದ್ದರೆ ಕ್ಷಮೆಯಿರಲಿ. ಪೂರ್ತಿ ಅಲ್ಲದಿದ್ದರೂ ಬಹುತೇಕ ಅವರು ಹೇಳಿದ ಅರ್ಥದಲ್ಲಿಯೇ ನಾನು ಬರೆದಿದ್ದೇನೆ ಎನ್ನುವ ಭಂಡ ಧೈರ್ಯ ನನ್ನದು.
raghumuliya's picture

ಒಳ್ಳೆಯ ಬರಹ ಮಹೇಶರೆ. " ಇತರರು ನಮ್ಮನ್ನು ಪ್ರೀತಿಸುವಂತಾಗಲಿ, ನಾವು ಕೂಡ ಇನ್ನೊಬ್ಬನನ್ನು ಪ್ರೀತಿಸುವೆವು" ಎಂಬ ಮಾತು ಸಾರ್ವಕಾಲಿಕ ಸತ್ಯ .ನಮ್ಮ ನಡೆ ನುಡಿಗಳು ಹೇಗಿರಬೇಕೆಂದು ಕೆಲವೇ ಶಬ್ದಗಳಲ್ಲಿ ಹೇಳುತ್ತಿವೆ,ಮಂತ್ರದ ಸಾಲುಗಳು.ನಾವು ಇದನ್ನು ಮರೆತು ನಮ್ಮ ಮೂಗಿನ ನೇರಕ್ಕೆ ನಡೆಯುತ್ತಿದ್ದೇವೆ ಎಂಬುದು ವಿಪರ್ಯಾಸ.
<ಭಾರತೀಯರ ಜೀವನದಲ್ಲಿ ವೈದಿಕ ಸತ್ಯಗಳು ಅಳಿದು ವೇದಗಳು ಕೇವಲ ಧಾರ್ಮಿಕ ಆಚರಣೆಗಳಾಗಿ ಪರಿವರ್ತಿತವಾದ ಕಾಲ ಯಾವುದು? >
ಒಳ್ಳೆ ಪ್ರಶ್ನೆ ಮೂಡಿದೆ.ಚರಿತ್ರೆಯ ಸರಿಯಾದ ಪರಿಚಯ ಇಲ್ಲದ ನಾನು ಇಂದು ಪುರಂದರದಾಸರ "ನಗೆಯು ಬರುತಿದೆ " ಗೀತೆಯನ್ನು ಗಮನಗೊಟ್ಟು ಕೇಳುತ್ತಾ ಆಶ್ಚರ್ಯಗೊ೦ಡಿದ್ದೆ.ಸುಮಾರು ೬೦೦ ವರುಷಗಳ ಹಿಂದೆಯೇ ನಮ್ಮಲ್ಲಿ ಲ೦ಪಟತನ ದಾಖಲೆಯಾಗುವ ಮಟ್ಟಕ್ಕೆ ಬೆಳೆದಿತ್ತು ಎಂದು ಲೆಕ್ಕ ಹಾಕುತ್ತಾ ಬಂದಿದ್ದೆ. ನಿಮ್ಮ ಲೇಖನ ಕಾಕತಾಳೀಯವೋ ಎಂಬಂತೆ ಇಂದೇ ಓದಬೇಕೆ?
kavinagaraj's picture
ಪ್ರಿಯ ಮಹೇಶ್, ವೇದಸುಧೆ ವಾರ್ಷಿಕೋತ್ಸವ ನಿಮ್ಮಂತಹ ಅನೇಕರಲ್ಲಿ ಅಂತರಂಗವನ್ನು ಕೆದಕುವಲ್ಲಿ ಸಫಲವಾಗಿದೆ. ಇದು ಸತ್ಯದ ಹುಡುಕಾಟದ ಆರಂಭ. ಮುಂದುವರೆಸಿ, ಶುಭವಾಗಲಿ.

Wednesday, February 2, 2011

ವೇದಸುಧೆಯ ವಾರ್ಷಿಕೋತ್ಸವದ ಬಾನುಲಿ ವರದಿ

ವೇದಸುಧೆಯ ವಾರ್ಷಿಕೋತ್ಸವದ ಬಾನುಲಿ ವರದಿಯು ಹಾಸನ ಆಕಾಶವಾಣಿಯಲ್ಲಿ ಇದೇ 3,4, ಮತ್ತು 5ನೆಯ ತಾರೀಖುಗಳಂದು ಬೆಳಗಿನ 8.40 ರಿಂದ ಅರ್ಧ ಗಂಟೆಗಳು ಪ್ರಸಾರವಾಗಲಿದೆ.

ದಾಸವಾಣಿ 2011

ಪುರಂದರದಾಸ ಸೇವಾ ಮಂಡಳಿ ಹೊಸಪೇಟೆ ಅರ್ಪಿಸುತ್ತಿರುವ ದಾಸವಾಣಿ ಕಳೆದ 56 ವರ್ಷಗಳಿಂದ ಹಂಪೆ ಮತ್ತು ಹೊಸಪೇಟೆಯಲ್ಲಿ ನಿರಂತರವಾಗಿ ಸಂಗೀತ ಮಹೋತ್ಸವವು ನಡೆದು ಬರುತ್ತಿದೆ. ಮೊದಲ ಬಾರಿಗೆ ದಾಸವಾಣಿ 2010 ಬೆಂಗಳೂರಿನಲ್ಲಿ ನಡೆಯಿತು. ವಿನೂತನ ಮಾದರಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರತಿ ದಾಸರ ನುಡಿಯ ನಂತರ ಅದರ ಅರ್ಥವನ್ನು ವೇದದ ಹಿನ್ನಲೆಯಲ್ಲಿ ವೇದಾಧ್ಯಾಯಿ ಶ್ರೀ ಸುಧಾಕರ್ ಶರ್ಮರು ತಿಳಿಸಿಕೊಟ್ಟರು.ಈ ವರ್ಷದ ಕಾರ್ಯಕ್ರಮದ ವಿವರ ಈ ಕೆಳಗಿನ ಆಹ್ವಾನ ಪತ್ರಿಕೆಯಲ್ಲಿದೆ. ದಾಸರ ಹಾಡುಗಳಲೆಲ್ಲ ಸಾಮಾಜಿಕ ಕಳಕಳಿಯು ಇರುವುದರಿಂದ ಬರಿ ಸಂಗೀತವಲ್ಲದೆ ಅದರ ಅರ್ಥವನ್ನು ಈಗಿನ ಸಮಾಜಕ್ಕೆ ತಲುಪಿಸುವುದೇ ದಾಸವಣಿಯ ಉದ್ದೇಶವಾಗಿರುತ್ತದೆ.


 

Tuesday, February 1, 2011

ನಮ್ಮೂರಿನ ಸಹೃದಯಿಗಳು

ವೇದಸುಧೆಯ ವಾರ್ಷಿಕೋತ್ಸವವನ್ನು ಮಾಡಬೇಕೆಂದು ಕೊಂಡಿದ್ದು ವೇದಸುಧೆಯ ಗೌರವ ಸಂಪಾದಕರಾದ ಕವಿ ನಾಗರಾಜರು,ಶ್ರೀ ಪ್ರಭಾಕರ್ ಮತ್ತು ನಾನು ಮಾತ್ರ . ಬೆಂಗಳೂರಿನ ಶ್ರೀ ಸುಧಾಕರಶರ್ಮರ ಮನೆಯಲ್ಲಿ ನಂತರದ ಬೈಠಕ್ ಮಾಡಿದರೂ ಉಳಿದದ್ದೆಲ್ಲಾ ನಾಗರಾಜರೊಡನೆ ಕುಳಿತು ಹಾಸನದಲ್ಲಿ ಮಾತುಕತೆ ಮಾಡಿ ವಾರ್ಷಿಕೋತ್ಸವದ  ಖರ್ಚನ್ನು ನಾವಿಬ್ಬರೂ ಭರಿಸುವುದೆಂದು ನಿರ್ಧರಿಸಿದೆವು. ಶ್ರೀ ಶಂಕರ ಮಠದಲ್ಲಿ  ಸ್ಥಳಾವಕಾಶದ  ಅನುಮತಿ ಪಡೆದನಂತರ ನಮ್ಮೊಡನೆ ಮಿತ್ರ ಕೆ.ವಿ.ರಾಮಸ್ವಾಮಿ ಸೇರಿಕೊಂಡರು.ಸಾರ್ ನನ್ನದೊಂದು ಚಿಕ್ಕ ಕಾಣಿಕೆ ನೀವು ಪಡೆಯಲೇ ಬೇಕೆಂದರು.ಅವರು ನೀಡಿದ 505.00 ರೂ ಪಾಯಿಗಳು ಐವತ್ತು ಸಾವಿರ ರೂಪಾಯಿಗಳಿಗಿಂತಲೂ ಹೆಚ್ಚಿನದು. ಕಾರಣ ಅವರ ಮನೆಯ ಸಧ್ಯದ ಪರಿಸ್ಥಿತಿ ಹಾಗಿದೆ. ನಂತರ  ಭೇಟಿಯಾಗಿದ್ದು ಹಾಸನದ ಶಿಕ್ಷಣ ತಜ್ಞರಾದ ಶ್ರೀ ಸಿ.ಎಸ್.ಕೃಷ್ಣಸ್ವಾಮಿಯವರನ್ನು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲು ಅವರನ್ನು ಕೇಳಿಕೊಂಡಾಗ ಕಾರ್ಯಕ್ರಮದ ಸಂಪೂರ್ಣ ವಿವರ ಪಡೆದು 150 ಜನರಿಗೆ ಊಟದ ವ್ಯವಸ್ಥೆಯಾಗಬೇಕಲ್ಲಾ![ಆಗಿನ ನಮ್ಮ ಅಂದಾಜು ಅಷ್ಟೇ ಇತ್ತು ]ನನ್ನ ಪಾಲು 10 ಸಾವಿರ ರೂಪಾಯಿ ಇರಲಿ, ಎಂದು ಹಣವನ್ನು ಕೈಲಿಟ್ಟು , ಕ್ಯಾರಿ ಆನ್, ದೇವರು ಒಳ್ಳೆಯದು ಮಾಡ್ತಾನೆ, ಅಂದರು. ಸರಿ, ನಮಗೆ ಆಗ ಅನ್ನಿಸ್ತು, ಈ ಕಾರ್ಯಕ್ರಮ ನಮ್ಮಿಬ್ಬರದ್ದಲ್ಲ. ಇದು ವೇದಾಭಿಮಾನಿಗಳದ್ದು. ಆ ಹೊತ್ತಿಗಾಗಲೇ ಶ್ರೀ ವಿಶಾಲ್ ರನ್ನು ಸಂಪರ್ಕಿಸಿ  ಈ ಹಿಂದೆ ಹಾಸನದಲ್ಲಿ ಶ್ರೀ ಶರ್ಮರು ನೀಡಿದ್ದ ಅದ್ಭುತವಾದ ಉಪನ್ಯಾಸಗಳ ಸಿ.ಡಿ ಮಾಡಲು ತಯಾರಿ ನಡೆದಿತ್ತು.  ಒಂದು ಸಾವಿರ ಸಿ.ಡಿ ಮಾಡಲು ಸುಮಾರು ಹದಿನೈದು ಸಹಸ್ರರೂಪಾಯಿ ಅಂದಾಜು ಮಾಡಲಾಗಿತ್ತು.ದನ್ನು ವೈಯಕ್ತಿಕವಾಗಿ ನಾನು ಭರಿಸುವುದಾಗಿ ತಿಳಿಸಿದ್ದೆ. ಆತ್ಮೀಯರಾದ ಶ್ರೀ ಪ್ರಕಾಶ್ ಎಸ್.ಯಾಜಿಯವರಿಗೆ ಈ ವಿಷಯ ತಿಳಿದಾಗ ಹಾಸನದ ಪ್ರಖ್ಯಾತ ದಾನಿಗಳೂ ಧಾರ್ಮಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀ ಗೋವಿಂದರಾಜ ಶ್ರೇಷ್ಠಿಯವರು ಹಾಗೂ ಶ್ರೀ ಗೋಪಾಲಕೃಷ್ಣ ಪ್ರಭುಗಳೊಡನೆ ಸೇರಿ ನಾವು ಮೂವರು ಭರಿಸುವುದಾಗಿ ತಿಳಿಸಿದರು.  ವಿಷಯ ತಿಳಿದ ಶ್ರೀ ಗೋವಿಂದರಾಜಶ್ರೇಷ್ಠಿಯವರು ಅವರನ್ನು ಭೇಟಿಯಾಗುತ್ತಿದ್ದಂತೆ ನಾವು ಬರುವ ಮುಂಚೆಯೇ, ಅವರೊಡನೆ ಪ್ರಸ್ತಾಪಮಾಡುವ ಮುಂಚೆಯೇ ಹನ್ನೊಂದುಸಾವಿರದ ಒಂದುನೂರ ಹನ್ನೊಂದು ರೂಪಾಯಿಗಳನ್ನು ನಮ್ಮ ಕೈಲಿಟ್ಟು ಶುಭ ಕೋರಿದರು. ಶ್ರೀ ನಿಟ್ಟೂರು ಜಯರಾಮ್ ವೀಡಿಯೋ ನನ್ನ ಪಾಲಿಗಿರಲಿ, ಎಂದರು. ಮಿತ್ರ ಶ್ರೀ ರಂಗೇಗೌಡರು ಆಕಾಶವಾಣಿಯ ರೆಕಾರ್ಡಿಂಗ್ ಮಾಡಿಸಿ ಬಿಡಿ, ಅದರ ಖರ್ಚು ನನಗಿರಲಿ, ಎಂದರು. ಸೆಸ್ಕ್ ಅಧಿಕಾರಿ ಶ್ರೀಮತಿ ಲತಾ, ಮಿತ್ರ ಶ್ರೀ ಪಾರಸ್ ಮಲ್, ಶ್ರೀ ಕೇಶವ ಪ್ರಕಾಶ್ ,ಇವರುಗಳು ಬ್ಯಾನರ್ ಮಾಡಿಸಲು, ಆಹ್ವಾನಪತ್ರಿಕೆ ಮಾಡಿಸಲು ಮುಂದೆ ಬಂದರು. ನಾವಿಬ್ಬರು ಎಲ್ಲಾ ಖರ್ಚನ್ನೂ ಭರಿಸಬೇಕೆಂದು ನಿಶ್ಚಯಿಸಿದ್ದಾಗ ಮಿತ್ರರಾದ ಕವಿ ಸುರೇಶ್, ನನ್ನ ಪಾಲೂ ಇರಲಿ, ಎಂದರು. ಮಗಳನ್ನು ಕರೆದುಕೊಂಡು ಬಂದು ಸುಶ್ರಾವ್ಯವಾದ ವಯೋಲಿನ ಕಛೇರಿ ವ್ಯವಸ್ಥೆ ಮಾಡಿಯೇ ಬಿಟ್ಟರು.
ಸಹೃದಯಿಗಳು ಹೀಗೆ ಮುಂದೆ ಬಂದಾಗ ಎಂತಹಾ ಸ್ಪೂರ್ಥಿ ಸಿಕ್ಕೀತು! ಲೋಕಲ್ ಚಾನೆಲ್ ಅಮೋಘ ದವರು ಕಾರ್ಯಕ್ರಮದ ಮುಂಚೆಯೇ ಸಂದರ್ಶನ ನಡೆಸಿ ಪ್ರಚಾರಕ್ಕೆ ಚಾಲನೆ ಕೊಟ್ಟರೆ, ಸ್ಥಳೀಯ ಪತ್ರಿಕೆ"ಹಾಸನವಾಣಿ"
ಸಂಪಾದಕರಾದ ಶ್ರೀಮತೀ ಲೀಲಾವತಿಯವರು ಪತ್ರಿಕೆಯಲ್ಲಿ ಸುದ್ಧಿ ಪ್ರಕಟಿಸುವುದೇ ಅಲ್ಲದೆ ನಮ್ಮೊಡನೆ ಉಳಿದ ಕೆಲಸಗಳಲ್ಲೂ ಕೈ ಜೋಡಿಸಿದರು. ಇಷ್ಟೆಲ್ಲಾ ಸಹಕಾರ ಸಿಕ್ಕಿದಮೇಲೆ ನಮ್ಮನಿರೀಕ್ಷೆಗೂ ಮೀರಿ  ಸುಮಾರು ೩೫೦-೪೦೦ ಜನ ವೇದಾಭಿಮಾನಿಗಳು ವೇದಸುಧೆಯ ವಾರ್ಷಿಕೋತ್ಸವ ಕಾರ್ಯಕ್ರಮ ಮುಗಿಯುವ ವರೆಗೂ ಶಾಂತ ಭಾವದಿಂದ ಕುಳಿತು ಕಾರ್ಯಕ್ರಮದಲ್ಲಿ ತಮ್ಮನು ತಾವು  ಮರೆತಿದ್ದರು. ಎಲ್ಲರ ಮನಸೆಳೆದ "ಅಗ್ನಿಹೋತ್ರ ಕಾರ್ಯಕ್ರಮ " ಹಾಗೂ ವೇದಾಧ್ಯಾಯೀ ಸುಧಾಕರ ಶರ್ಮರ ಅದ್ಭುತವಾದ ಉಪನ್ಯಾಸ , ವಿಚಾರ ಸಂಕಿರಣ, ಪುಟಾಣಿ ಸಹನಳ ದೀಪ ನೃತ್ಯ, ಮಧ್ಯೆ ಮಧ್ಯೆ ಸ್ವಾತಿ , ಸಹನ ಹಾಗೂ ಶ್ರೀಮತಿ ಲಲಿತಾ ರಮೇಶ ರ ಗೀತ ಗಾಯನ, ಎಲ್ಲವೂ ವೇದಾಭಿಮಾನಿಗಳ ಮನ ಗೆದ್ದವು.
ವಾರ್ಷಿಕೋತ್ಸವ ಮುಗಿದ ಮಾರನೆಯ ದಿನವೇ ಅದರ ಲೆಕ್ಖಾಚಾರ ಮುಗಿದಿತ್ತು. ಶ್ರೀ ಕವಿ ನಾಗರಾಜ್ ಮತ್ತು ನನ್ನ ಪಾಲಿಗೆ ಬಂದಿದ್ದು ಅತ್ಯಲ್ಪ ಮಾತ್ರ. ಹಾಸನದ  ಸಹೃದಯಿಗಳ ಮನ: ಪೂರ್ವಕ ಸಹಕಾರವನ್ನು ನಾವು ಮರೆಯುವುದಾದರೂ ಹೇಗೆ?
ಕಾರ್ಯಕ್ರಮದ ಜಮಾ -ಖರ್ಚು ಎಲ್ಲರಿಗೂ ತಿಳಿದಿರಲಿ, ಎಂದು ಪ್ರಕಟಿಸಿರುವೆ. ಸಿಡಿ ಮಾರಾಟದಿಂದ ಬರುವ ಉತ್ಪತ್ತಿಯನ್ನು ಶ್ರೀ ಶರ್ಮರು ವೇದಸಾಹಿತ್ಯ ಪ್ರಕಟಣೆಗೆ ಸದ್ವಿನಿಯೋಗ ಮಾಡಿಕೊಳ್ಳುವರು. 
ವೇದಸುಧೆ ಅಂತರ್ಜಾಲದ ಪ್ರಥಮ ವಾರ್ಷಿಕೋತ್ಸವದ ಜಮಾ ಖರ್ಚು ವಿವರ

                ಜಮಾ                                                  ಖರ್ಚು
1
ಶ್ರೀ ಕೆ.ವಿ.ರಾಮಸ್ವಾಮಿ
505.00
ಬ್ಯಾನರ್
750.00
2
ಶ್ರೀ ಸಿ.ಎಸ್.ಕೃಷ್ಣಸ್ವಾಮಿ
10000.00
ಊಟೋಪಚಾರ
18000.00
3
ಶ್ರೀ ಗೋವಿಂದರಾಜ ಶ್ರೇಷ್ಠಿ
11111.00
ಸಿ.ಡಿ. ತಯಾರಿ
6700.00
4
ಶ್ರೀ ಗೋಪಾಲಕೃಷ್ಣ ಪ್ರಭು 
ಶ್ರೀ ಪ್ರಕಾಶ್ ಎಸ್.ಯಾಜಿ
5000.00
ಆಕಾಶವಾಣಿ
6254.00
5 ಶ್ರೀ ದಿನಮಣಿ 200.00

6
ಶ್ರೀ ಜಯರಾಮ್ ನಿಟ್ಟೂರು
5000.00
ವೀಡಿಯೋ
5000.00
7
ಶ್ರೀ ಪಾರಸ್ ಮಲ್
1000.00
ಧ್ವನಿ ವರ್ಧಕ
1000.00
8
ಶ್ರೀಮತಿ ಬಿ.ಟಿ.ಲತಾ
1000.00
ಆಹ್ವಾನ ಪತ್ರಿಕೆ ಮುದ್ರಣ
1200.00
9
ಶ್ರೀ ಕೇಶವ ಪ್ರಕಾಶ್
1000.00
ಅತಿಥಿಗಳಿಗೆ ವಸತಿ
500.00
10
ಶ್ರೀ ಎಂ.ಬಿ. ರಂಗೇಗೌಡ
5000.00
ಇತರೆ [ಹೋಮದ ತಯಾರಿ,ಕೆಲಸದವರಿಗೆ, ಇತ್ಯಾದಿ]
1000.00
11
ಶ್ರೀ ನಾಗರಾಜ್ ನಿಟ್ಟೂರು
110.00
ಛತ್ರಕ್ಕೆ[ಸ್ವಚ್ಚತೆ,ವಿದ್ಯುತ್, ಚಪ್ಪರ,ಇತ್ಯಾದಿ]
2450.00
12 ಕವಿ ನಾಗರಾಜ್ 1464.00

13
ಹರಿಹರಪುರಶ್ರೀಧರ್
1464.00


14
ಒಟ್ಟು
42854.00

42854.00





’ವೇದಸುಧೆ’ ಅಂಬೆಗಾಲಿಕ್ಕಿದ ಚಂದ


’ವೇದಸುಧೆ’ ಅಂಬೆಗಾಲಿಕ್ಕಿದ ಚಂದ

ನಿನ್ನೆ ೩೦.೦೧.೨೦೧೧ ರಂದು ಹಾಸನದ ಶ್ರೀ ಶಂಕರಮಠದ ಶ್ರೀಭಾರತೀತೀರ್ಥ ಸಂಭಾಂಗಣದಲ್ಲಿ ಸುಮಾರು ೭೦೦ ಜನರಷ್ಟು ಸೇರಿದ್ದರು. ಬಂದವರಲ್ಲಿ ಅನೇಕರು ಬ್ಲಾಗಿಗರೂ ಇದ್ದರೆಂಬುದು ಸಂತಸದ ವಿಷಯ. ತಮಗೆಲ್ಲಾ ಮೊದಲೇ ಹೇಳಿದ ಹಾಗೇ ’ವೇದಸುಧೆ’ಯ ವಾರ್ಷಿಕೋತ್ಸವದ ಸಂಭ್ರಮ. ವೇದಸುಧೆ ಬಳಗ ಅದರಲ್ಲೂ ಪ್ರಮುಖವಾಗಿ ಮಿತ್ರರಾದ ಶ್ರೀ ಹರಿಹರಪುರ ಶ್ರೀಧರ್, ಕವಿ ಸುರೇಶ್, ಕವಿ ನಾಗರಾಜ್, ರಾಮಸ್ವಾಮಿ ಮೊದಲಾದವರು ತಮ್ಮ ಅನೇಕ ದಿನಗಳ ಶ್ರಮಕ್ಕೆ ಫಲವನ್ನು ಕಾಣುತ್ತಿದ್ದರು. ಬೆಳಿಗ್ಗೆ ಬಿಸಿಬಿಸಿ ಶ್ಯಾವಿಗೆ ಬಾತು, ಕಾಫಿ/ಟೀ ೯ ಗಂಟೆಗೆ ಎಲ್ಲರಿಗೂ ನೀಡಲ್ಪಟ್ಟು ಉಪಾಹಾರ ಅಚ್ಚುಕಟ್ಟಾಗಿ ಮುಗಿದರೆ ಸಭಾಕಾರ್ಯಕ್ರಮ ಸರಿಯಾಗಿ ಹತ್ತು ಗಂಟೆಗೆ ಆರಂಭವಾಯಿತು. ಕವಿ ಸುರೇಶ್ ಅವರು ತಮ್ಮ ಸರಳ ನಿರೂಪಣಾ ಶೈಲಿಯಲ್ಲಿ ಅತಿಥಿಗಳೆಲ್ಲರನ್ನೂ ವೇದಿಕೆಗೆ ಆಹ್ವಾನಿಸಿದರೆ, ಪ್ರಾಸ್ತವಿಕ ಮಾತುಗಳನ್ನಾಡುತ್ತಾ ಶ್ರೀಧರ್ ಅವರು ’ವೇದಸುಧೆ’ ರೂಪುತಳೆದ ಬಗೆಯನ್ನು ವಿವರಿಸಿದರು. ಶಂಕರಮಠದ ಧರ್ಮಾಧಿಕಾರಿಗಳಾದ ಶ್ರೀ ಎಮ್.ಎಸ್, ಶ್ರೀಕಂಠಯ್ಯ ಅವರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕುಮಾರಿ ಸಹನಾಳಿಂದ ಮನಮೋಹಕ ದೀಪನೃತ್ಯ ನಡೆಯಿತು. ಶರ್ಮರಿಂದ ಪ್ರವಚಿಸಲ್ಪಟ್ಟ ’ವೇದೋಕ್ತ ಜೀವನಪಥ’ ಎಂಬ ಶ್ರಾವ್ಯಮಾಧ್ಯಮ ತಟ್ಟೆಯ ಬಗ್ಗೆ ವೇದಸುಧೆಯ ಶ್ರೀ ವಿಶಾಲ್ ಅವರು ಮಾತನಾಡಿದರು. ನಂತರ ಆ ಶ್ರಾಯ್ವ ಮಾಧ್ಯಮ ತಟ್ಟೆ[ಆಡಿಯೋ ಸೀಡಿ] ಬಿಡುಗಡೆಗೊಂಡಿತು. ಶಿವಮೊಗ್ಗೆಯ ಕುಮಾರಿ ಅಂಬಿಕಾ ಸುಶ್ರಾವ್ಯವಾಗಿ ವಯೋಲಿನ್ ನುಡಿಸಿದರು. ನಂತರ ಆರಂಭವಾದ ’ಆರೋಗ್ಯಕರ ಬದುಕು ಮತ್ತು ವೇದ’ ವಿಚಾರಸಂಕಿರಣದಲ್ಲಿ ಡಾ|ಶ್ರೀವತ್ಸ ಎಸ್.ವಟಿ, ಡಾ| ವಿವೇಕ್, ಕುಮಾರಿ ಶೃತಿ, ಶ್ರೀ ದಕ್ಷಿಣಾಮೂರ್ತಿ, ಶ್ರೀ ನಾಗರಾಜ್ ದೀಕ್ಷಿತ್ ಮತ್ತು ನಾನು ಭಾಗವಹಿಸಿದ್ದೆವು. ವಿವಿಧ ದೃಷ್ಟಿಕೋನಗಳ ವಿಚಾರಧಾರೆಗಳು ಹರಿದವು. ಮಧ್ಯೆ ಮಧ್ಯೆ ಶ್ರೀಮತೀ ಲಲಿತಾ ರಮೇಶ್ ಮತ್ತು ಕುಮಾರಿ ಸ್ವಾತಿ ಮತ್ತು ಕುಮಾರಿ ಸಹನಾ ಈ ಮೂವರಿಂದ ಸುಮಧುರ ಗೀತ ಗಾಯನಗಳು ನಡೆದವು. ಶ್ರೀ ಸುಧಾಕರ ಶರ್ಮರು ತಮ್ಮ ಆಳವಾದ ವಿಶ್ಲೇಷಣೆಯೊಂದಿಗೆ ವಿಚಾರ ಸಮನ್ವಯಗೊಳಿಸಿದರು. ವೇದಸುಧೆಯ ಎಲ್ಲಾ ಕಾರ್ಯಗಳಿಗೆ ಆಧಾರವಾಗಿ ನಿಂತಿರುವ ಹಾಗೂ ಇಂದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಶ್ರೀ ಸಿ.ಎಚ್.ಕೃಷ್ಣಸ್ವಾಮಿಯವರು [ಹಲವು ವೇದಿಕೆಗಳಲ್ಲಿ ನಡೆಯುವಂತೇ:ಯಾವ ಸಬೂಬನ್ನೂ ಹೇಳಿ ತೆರಳದೇ]ಕಾರ್ಯಕ್ರಮದ ಅಂತ್ಯದವರೆಗೂ ವೇದಿಕೆಯಲ್ಲೇ ಹಾಜರಿದ್ದು ಸಮಯಾಭಾವದಿಂದ ಕೇವಲ ಎರಡೇ ಹಿತನುಡಿಗಳಲ್ಲಿ ತಮ್ಮ ಮಾತು ಮುಗಿಸಿದರು. ವೇದಸುಧೆಯ ವತಿಯಿಂದ ವೇದಿಕೆಯಲ್ಲಿರುವ ಎಲ್ಲರಿಗೂ ಹಾರಾರ್ಪಣೆಯ ಗೌರವದೊಂದಿಗೆ ವೇದಸುಧೆ ಹೊರತಂದ ’ವೇದೋಕ್ತ ಜೀವನ ಪಥ’ ಸೀಡಿ ನೀಡಿ ಸನ್ಮಾನಿಸಲಾಯಿತು. ವೇದಸುಧೆ ಬಳಗದ ನೇತೃತ್ವ ವಹಿಸಿ ಕಾರ್ಯಕ್ರಮದ ರೂವಾರಿಯಾದ ಶ್ರೀ ಹರಿಹರಪುರ ಶ್ರೀಧರ್ ಅವರಿಗೆ ವೇದಸುಧೆ ಬಳಗದ ಮಿಕ್ಕೆಲ್ಲರೂ ಸೇರಿ ಹಾರಾರ್ಪಣೆ ಮಾಡಿ ಗೌರವಿಸಿದರು.

ಇಷ್ಟೆಲ್ಲಾ ಮುಗಿಯುವ ಹೊತ್ತಿಗೆ ಮಧ್ಯಾಹ್ನ ೩ ಗಂಟೆ ಯಾಗಿತ್ತಾದರೂ ಜ್ಞಾನದಾಹಿಗಳಾದ ಸಭಿಕರು ದೈಹಿಕ ಹಸಿವನ್ನು ತಡೆಯುತ್ತ ತಮ್ಮ ಜ್ಞಾನದ ಹಸಿವಿಗೆ ಪುಷ್ಟಿನೀಡಿದ್ದರು. ವೇದಸುಧೆಯ ಬಳಗದಲ್ಲಿ ಪ್ರೇರಕರಾದ ಶ್ರೀ ಶರ್ಮರು ಸ್ವಾಮಿ ದಯಾನಂದ ಸರಸ್ವತಿಯವರು ಬರೆದ ಕೆಲವು ಪುಸ್ತಕಗಳನ್ನು ಮುದ್ರಣ ವೆಚ್ಚಪಡೆದು ವಿತರಿಸುವ ಏರ್ಪಾಟುಮಾಡಿದ್ದರು. ಪುಷ್ಕಳ ಭೋಜನ ವ್ಯವಸ್ಥೆಯಾಗಿತ್ತು. ಎಲ್ಲರೂ ಊಟ ಮಾಡಿಬಂದ ಮೇಲೆ ಅದಾಗಲೇ ತಡವಾಗಿತ್ತಾದ್ದರಿಂದ ೪ ಗಂಟೆಯಿಂದ ಹಾಸನದ ಮನೆಮನೆ ಕವಿಗೋಷ್ಠಿ ಆರಂಭಗೊಂಡಿತು. ಬೋರೇಗೌಡರಾದಿಯಾಗಿ ಹಲವು ನಿವೃತ್ತ ಅಧಿಕಾರಿಗಳು ಜನಪದ ಗೀತೆಗಳನ್ನು ಲಯಬದ್ಧವಾಗಿ ಹಾಡಿ ರಂಜಿಸಿದರು. ಅತಿಥಿಗಳನ್ನು ಸ್ವಾಗತಿಸಿ ಗುಲಾಬಿ ಹೂ ಗಳನ್ನು ನೀಡಿ ಗೌರವಿಸಲಾಯಿತು. ಶ್ರೀ ಚಂದ್ರಕಾಂತ್ ಪಡೆಸೂರ್ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯಲ್ಲದ ಸಂಘಟನೆಯೆನಿಸಿದ ’ಮನೆ ಮನೆ ಕವಿಗೋಷ್ಠಿ’ಯ ಹದಿನಾಲ್ಕು ವರ್ಷಗಳ ನಡಿಗೆಯನ್ನು ಕಾರ್ಯದರ್ಶಿ ಶ್ರೀ ಎಸ್. ಸತ್ಯನಾರಾಯಣ ಅವರು ವಿವರಿಸಿದರು. ವೇದಿಕೆಯಲ್ಲಿ ಶ್ರೀ ಸುಧಾಕರ ಶರ್ಮ ಉದ್ಘಾಟಕರಾಗಿ ಭಾಗವಹಿಸಿ ಗಿಡವೊಂದಕ್ಕೆ ನೀರೆರೆಯುವುದರ ಮೂಲಕ ಉದ್ಘಾಟನೆ ನಡೆಯಿತು. ಪುಸ್ತಕಗಳ ಬಿಡುಗಡೆಗಾಗಿ ಆಗಮಿಸಿದ್ದ ಅತಿಥಿಗಳಾದ ಹಾಸನದ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕಿ ಶ್ರೀಮತಿ ಆಶಾಲತಾ ಮತ್ತು ಕಾರವಾರದ ಆಕಾಶವಣಿಯ ಮುಖ್ಯಸ್ಥರಾದ ಶ್ರೀ ವಸಂತ ಕುಮಾರ್ ಪೆರ್ಲ ಅವರುಗಳು ಕ್ರಮವಾಗಿ ಕವಿ ನಾಗರಾಜ್ ಕೃತ ’ಮೂಢ ಉವಾಚ’ ಮತ್ತು ಕೊಟ್ರೇಶ್ ಉಪ್ಪಾರ ಕೃತ ’ಮೃತ್ಯುವಿನಾಚೆಯ ಬದುಕು’ ಕವನ ಸಂಕಲನಗಳನ್ನು ಬಿಡುಗಡೆಮಾಡಿದರು. ಕೃತಿಗಳ ಕುರಿತು ಅತಿಥಿಗಳು ವಿಚಾರ ಮಂಡಿಸಿದರೆ, ಲೇಖಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

’ವೇದಸುಧೆ; ಮತ್ತು ’ಮನೆಮನೆಕವಿಗೋಷ್ಠಿ’ ಜಂಟಿಯಾಗಿ ಏರ್ಪಡಿಸಿದ್ದ ಇಡೀ ದಿನದ ಕಾರ್ಯಕ್ರಮಗಳು ತುಂಬಾ ಚೆನ್ನಾಗಿ ಸಂಪನ್ನಗೊಂಡವು ಎಂಬಲ್ಲಿಗೆ ’ವೇದಸುಧೆ’ ಚಂದವಾಗಿ ಅಂಬೆಗಾಲಿಕ್ಕುತ್ತಿದೆ ಎನ್ನುವುದು ಸಾಬೀತಾಯಿತು. ವೇದಕ್ಕೆ ಜಾತಿ ಮತ, ಧರ್ಮಗಳ ಗಡಿಯಿಲ್ಲ! ವೇದವೆಂದರೆ ಅತ್ಯಪೂರ್ವ ಮಾನವೀಯ ಸುಖ ಜೀವನವನ್ನು ಸಾಧಿಸುವ ಕಲೆ. ವೇದ ಎಲ್ಲರದಾಗಲಿ, ವೇದ ಎಲ್ಲರಿಗಾಗಿರಲಿ. ಮುಂಬರುವ ವರ್ಷಗಳಲ್ಲಿ ಇಂತಹ ಕಾರ್ಯಕ್ರಮಗಳು ಜಿಲ್ಲಾವಾರು ನಡೆಯುವಂತೇ ’ವೇದಸುಧೆ’ ಬೆಳೆಯಲಿ ಮತ್ತು ಎಲ್ಲರೂ ವೇದಾಮೃತಪಾನ ಮಾಡುವಂತಾಗಲಿ ಎಂಬುದು ’ವೇದಸುಧೆ’ ಯ ಸದಾಶಯ. ಈ ಸಂದರ್ಭದಲ್ಲಿ ವೇದಸುಧೆ ತಮ್ಮೆಲ್ಲರಿಗೆ ಶುಭಹಾರೈಸುತ್ತಿದೆ.
 

ವೇದಸುಧೆ ವಾರ್ಷಿಕೋತ್ಸವ - ಕವಿ ಸುರೇಶರ ಅನಿಸಿಕೆ

ಪ್ರಿಯ ಶ್ರೀದರ್ ರವರೇ,

    ವೇದಸುಧೆ ಅಂತರ್ಜಾಲ ತಾಣದ ವಾರ್ಷಿಕೋತ್ಸವ ಒಂದು ವಿನೂತನ ಕಾರ್ಯಕ್ರಮ, ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂದಿತು. ಅದಕ್ಕಾಗಿ ನೀವು ಮತ್ತು ನನ್ನಣ್ಣ ನಾಗರಾಜ್ ಸಾಕಷ್ಟು ಶ್ರಮ ವಹಿಸಿದ್ದೀರಿ. ನಿಮ್ಮ ಶ್ರಮ ನಿಜಕ್ಕೂ ಸಾರ್ಥಕವಾಗಿದೆ. ನಿಮ್ಮಿಬ್ಬರಿಗೂ ನನ್ನ ಹಾರ್ದಿಕ ಧನ್ಯವಾದಗಳು. ವೇದಗಳನ್ನು ಹೊಸ ರೀತಿಯಲ್ಲಿ ನೋಡುವಂತಹ ಮತ್ತು ಹೊಸ ರೀತಿಯಲ್ಲಿ ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಬಹಳಷ್ಟು ಜನರಿಗೆ ಪ್ರೇರಕವಾಯಿತೆಂಬುದು ನನ್ನನಿಸಿಕೆ. ಸದುದ್ದೇಶದಿಂದ ಮಾಡಿದ ಯಾವುದೇ ಕಾರ್ಯ ಸಫಲವಾಗಲೇ ಬೇಕು. ಹಾಗೆಯೇ ಈ ಕಾರ್ಯಕ್ರಮ ಕೂಡ ಜರುಗಿದೆ.
ಮತ್ತೊಮ್ಮೆ ನಿಮ್ಮಿಬ್ಬರಿಗೂ ನನ್ನ ಅಭಿನಂದನೆಗಳು. ಸಂಪರ್ಕದಲ್ಲಿರುವೆ...

ನಿಮ್ಮವ,
ಕವಿ ಸುರೇಶ್.