Pages

Thursday, February 11, 2010

ಹಾಸನದಲ್ಲಿ "ಎಲ್ಲರಿಗಾಗಿ ವೇದ" ಉಪನ್ಯಾಸ



೨೩.೯.೨೦೦೯ ರಂದು ಹಾಸನದ ಶ್ರೀಶಂಕರಮಠದಲ್ಲಿ ವೇದಾಧ್ಯಾಯೀ ಸುಧಾಕರಶರ್ಮರು ನಡೆಸಿಕೊಟ್ಟ "ಎಲ್ಲರಿಗಾಗಿ ವೇದ" ಉಪನ್ಯಾಸದಲ್ಲಿ ಪಾಲ್ಗೊಂಡ ಶ್ರೋತೃವರ್ಗ

ಸುಭಾಷಿತಗಳು- ಹಂಸಾನಂದಿಯವರಿಂದ

೧.
ಕೇಡಿಗನ ನಂಜು

ಚೇಳಿನ ನಂಜೋ ಬಾಲದ ತುದಿಯಲಿ
ನೊಣಕ್ಕದುವೆ ಬಾಯಲ್ಲೆಲ್ಲಾ!
ಹಾವಿನ ಹಲ್ಲಲಿ ತುಂಬಿರುವುದು ವಿಷ
ಕೇಡಿಗನಿಗೋ ಮೈಯಲ್ಲೆಲ್ಲಾ!

ಸಂಸ್ಕೃತ ಮೂಲ:

ವೃಶ್ಚಿಕಸ್ಯ ವಿಷಂ ಪುಚ್ಛೇ ಮಕ್ಷಿಕಾಯಾಶ್ಚ ಮಸ್ತಕೇ |
ತಕ್ಷಕಸ್ಯ ವಿಷಂ ದಂತೇ ಸರ್ವಾಂಗೇ ದುರ್ಜನಸ್ಯ ಚ ||

೨.
ಮೂರ್ಖನ ಕುರುಹುಗಳು


ತಿಳಿಗೇಡಿಗಳ ಗುರುತಿಸುವುದು ಹೇಗೆನುವಿರಾ?
ಕೇಳಿ - ಇವೆಯಲ್ಲ ಕುರುಹುಗಳು ಐದು!
ಸಿಡುಕು; ಸೊಕ್ಕು; ಪರರ ಮಾತಲುದಾಸೀನ;
ಮೊಂಡುವಾದ ಜೊತೆಗೆ ಕೆಡುಕು ತುಂಬಿದ ಮಾತು!

ಸಂಸ್ಕೃತ ಮೂಲ:

ಮೂರ್ಖಸ್ಯ ಪಂಚ ಚಿಹ್ನಾನಿ ಗರ್ವೋ ದುರ್ವಚನಂ ತಥಾ |
ಕ್ರೋಧಶ್ಚ ದೃಢವಾದಶ್ಚ ಪರವಾಕ್ಯೇಶ್ವನಾದರಃ ||

೩.
ಪರರ ನೋಯಿಸುವ ಮಾತುಗಳು


ಬಾಯಿಂದ ಹೊರಬಿದ್ದ ಮಾತೆನುವ ಅಂಬುಗಳು
ಆಯಕಟ್ಟಿಗಿರಿದು ಕೊಟ್ಟಾವು ನೋವು ಹಗಲಿರುಳು;
ಅರಿವು ನಿನ್ನಲಿ ಇರಲು ಪರರ ನೋಯಿಸುವಂಥ
ನುಡಿಯಂಬುಗಳನೆಂದೂ ಬಿಡದಿರುವುದೇ ಲೇಸು.

ಸಂಸ್ಕೃತ ಮೂಲ:

ವಾಕ್ಸಾಯಕಾ ವದನಾನ್ನಿಷ್ಪತಂತಿ
ಯೈರಾಹತಃ ಶೋಚತಿ ರಾತ್ರ್ಯಹಾನಿ |
ಪರಸ್ಪರಂ ಮರ್ಮಸು ತೇ ಪತಂತಿ
ತಾನ್ ಪಂಡಿತೋ ನಾಪಸೃಜೇತ್ಪರೇಷು ||

೪.
ಕೈಗೆಟುಕುವ ದೇವರು


ಕೈಯಳತೆಯಲೇ ಇರುವ ತಾಯಿ-ತಂದೆ-ಗುರುಗಳನುಳಿದು
ಕೈಯಲೆಂದೂ ನಿಲುಕದ ದೈವವೆಂಬುದನೆಂತು ನೆಚ್ಚುವುದು?

ಸಂಸ್ಕೃತ ಮೂಲ (ರಾಮಾಯಣ, ಅಯೋಧ್ಯಾಕಾಂಡ ೩೦-೩೩)

ಸ್ವಾಧೀನಂ ಸಮತಿಕ್ರಮ್ಯ ಮಾತರಂ ಪಿತರಂ ಗುರುಂ |
ಅಸ್ವಾಧೀನಂ ಕಥಂ ದೈವಂ ಪ್ರಕಾರೈರಭಿರಾಧ್ಯತೇ? ||

ಮುಚ್ಚಿಡಬೇಕಾದ್ದೇನನ್ನು?


ಹಣದ ಹಾನಿ ಮನದ ದುಗುಡ
ಮನೆಯಲಾದ ಕೆಡುಕು ನಡತೆ
ಆದ ಮೋಸ ಹೋದ ಮಾನ
ತೋರ್ಗೊಡಬಾರದು ಜಾಣರು!

ಸಂಸ್ಕೃತ ಮೂಲ:

अर्थनाशं मनस्तापं गृहे दुश्चरितानि च |
वञ्चनं चापमानं च मतिमान्न प्रकाशयेत् ||

ಅರ್ಥನಾಶಂ ಮನಸ್ತಾಪಂ ಗೃಹೇ ದುಶ್ಚರಿತಾನಿ ಚ ||
ವಂಚನಂ ಚಾಪಮಾನಂ ಚ ಮತಿಮಾನ್ನ ಪ್ರಕಾಶಯೇತ್ ||

೫.
ಕೂಡಿಟ್ಟಿದ್ದು ಪರರಿಗೆ

ಹಣವ ಬರಿದೆ ಕೂಡಿಡದಲೇ
ನೀಡು,ಬಳಸು,ಮತ್ತೇನಾದರೂ ಮಾಡು;
ಬಂಡನ್ನು ಸೇರಿಸುತ ಜೇನ್ದುಂಬಿಗಳು
ಮಾಡಿಟ್ಟ ಜೇನು ಕದ್ದು ತಿಂದವರ ಪಾಲು!

ಸಂಸ್ಕೃತ ಮೂಲ:

ದಾತವ್ಯಂ ಭೋಕ್ತವ್ಯಂ ಧನವಿಷಯೇ ಸಂಚಯೋ ನ ಕರ್ತವ್ಯಃ |
ಪಶ್ಯೇಹ ಮಧುಕರೀಣಾಂ ಸಂಚಿತಾರ್ಥಂ ಹರಂತ್ಯನ್ಯೇ ||