Pages

Wednesday, February 13, 2013

ಸಮಾನತೆ, ವಿಶ್ವಭ್ರಾತೃತ್ವ ಮತ್ತು ನಾವು     "ನನಗೆ ಒಂದು ಕನಸು ಇದೆ. ಅದೆಂದರೆ ನನ್ನ ನಾಲ್ಕು ಮಕ್ಕಳು ಒಂದು ದಿನ ಅವರ ಬಣ್ಣಗಳಿಂದಲ್ಲದೆ ಅವರ ಗುಣಗಳಿಂದ ಗುರುತಿಸಲ್ಪಡುವ ದೇಶದಲ್ಲಿ ಬಾಳುತ್ತಾರೆ ಅನ್ನುವುದು" - ಇದು ಅಮೆರಿಕಾದ ದಿ. ಮಾರ್ಟಿನ್ ಲೂಥರ್ ಕಿಂಗ್ ರವರ ಉದ್ಗಾರ. ಇದು ಸಮಾನತೆಯನ್ನು ಬಯಸಿದ, ಅಲ್ಲಿ ಪ್ರಚಲಿತವಿದ್ದ ಕಪ್ಪು-ಬಿಳಿ ಜನಾಂಗ ದ್ವೇಷದ ವಿರುದ್ಧ ಹೋರಾಡಿದ್ದ ವ್ಯಕ್ತಿಯ ಕನಸು. ಸಮಾನತೆ ಅನ್ನುವ ಕಲ್ಪನೆ ಯಾವುದೇ ಆದರ್ಶಮಾನವನ ಗುರಿ. ಸಮಾನತೆ ಅಂದರೇನು ಅನ್ನುವುದಕ್ಕೆ ವಿವರಣೆ ನೀಡುವುದು ಕಷ್ಟವೇ ಸರಿ. ಸರಿಸಮ ಎಂಬುದು ನಿಘಂಟಿನ ಅರ್ಥ. ವ್ಯಾವಹಾರಿಕ ಜಗತ್ತಿನಲ್ಲಿ ಸಮಾನತೆಯ ಕಲ್ಪನೆಯ ಸಾಕಾರ ಹೇಗೆ ಎಂಬುದರ ಕುರಿತು ಚಿಂತಿಸಬೇಕಿದೆ. ಭಾರತದ ಸಂವಿಧಾನದಲ್ಲಿ ದೇಶದ ನಾಗರಿಕರಲ್ಲಿ ಜಾತಿ, ಮತ, ಲಿಂಗ, ಭಾಷೆ - ಇಂತಹ ಯಾವುದೇ ಕಾರಣದಿಂದ ಭೇದ ಕೂಡದು, ಎಲ್ಲರಿಗೂ ಸಮಾನವಾದ ಹಕ್ಕು ಇದೆ ಎಂದಿದೆ. ಆದರೆ ಇಲ್ಲಿ ಜಾತಿಯ ಹೆಸರಿನಲ್ಲಿ, ಮತದ ಹೆಸರಿನಲ್ಲಿ, ಲಿಂಗದ ಹೆಸರಿನಲ್ಲಿ, ಭಾಷೆಯ ಹೆಸರಿನಲ್ಲಿ ಭೇದ ಭಾವ ತಾಂಡವವಾಡುತ್ತಿರುವುದು ದುರ್ದೈವ. ಯಾರು ಈ ಸಮಾನತೆಯನ್ನು ಸಾಧಿಸಬೇಕಿದೆಯೋ ಆ ಆಳುವ ಸ್ಥಾನದಲ್ಲಿರುವ ಜನಪ್ರತಿನಿಧಿಗಳೇ ಇಂತಹ ಭೇದ ಭಾವಗಳನ್ನು ಉಳಿಸಿ, ಪೋಷಿಸಿಕೊಂಡು ಬರುತ್ತಿರುವುದು ಘೋರ ಸತ್ಯ. 
     ವ್ಯಾವಹಾರಿಕವಾಗಿ ಸಮಾನತೆ ಅನ್ನುವುದು ಹೇಳುವಷ್ಟು ಸುಲಭವಲ್ಲ. ಸಮಾನತೆಯೆಂದರೆ ಒಬ್ಬ ಹೆಸರಾಂತ ಜಟ್ಟಿ/ಕುಸ್ತಿಪಟುವನ್ನು, ಒಬ್ಬ ಬಡಕಲು ದೇಹದವನನ್ನು ಮತ್ತು ಅನಾರೋಗ್ಯಪೀಡಿತನನ್ನು ಸಮಾನ ಬಲಶಾಲಿ ಎಂದು ಒಪ್ಪಿಕೊಳ್ಳಬೇಕೆಂದು ವಾದಿಸುವುದಲ್ಲ. ಒಬ್ಬ ವಿದ್ವಾಂಸನನ್ನೂ, ಓದು ತಲೆಗೆ ಹತ್ತದವನನ್ನೂ ಮತ್ತು ಮಾನಸಿಕ ವಿಕಲ್ಪನನ್ನು ಸಮಾನ ಜ್ಞಾನಿಗಳೆಂದು ಪರಿಗಣಿಸುವುದಲ್ಲ. ಜಾತಿಯ ಆಧಾರದಲ್ಲಿ ಒಬ್ಬರು ಶೇ. 50ರಷ್ಟು ಅಂಕ ಪಡೆದವರೂ, ಶೇ. 60 ಅಂಕ ಪಡೆದ ಇತರರಿಗೆ ಸಮ ಎಂದು ಪರಿಗಣಿಸುವುದರಲ್ಲಿ ಸಮಾನತೆ ಬರುವುದಿಲ್ಲ. 100  ಮೀಟರ್ ದೂರದ ಓಟದ ಸ್ಪರ್ಧೆಯಲ್ಲಿ 100 ಮೀ. ಓಡಿದವನನ್ನೂ, 80-90 ಮೀ. ಓಡಿದವರನ್ನೂ ಸಮರೆಂದು ಪರಿಗಣಿಸುವುದಲ್ಲ. ಬದಲಾಗಿ ಅಶಕ್ತರು, ಹಿಂದುಳಿದವರು ಎಂದು ಪರಿಗಣಿಸಲ್ಪಟ್ಟವರಿಗೆ ಅಗತ್ಯದ ಎಲ್ಲಾ ಅನುಕೂಲ, ಸೌಲಭ್ಯಗಳನ್ನು ಕಲ್ಪಿಸಿ ಅವರು ಮುಂದೆ ಬರಲು ಅವಕಾಶ ಕಲ್ಪಿಸುವುದರಲ್ಲಿ ಸಮಾನತೆ ಕಾಣಬೇಕು. ಎಲ್ಲರೂ ಒಂದೇ ಎತ್ತರದವರಾಗಬೇಕೆಂದು ಕೆಲವರ ತಲೆ, ಕಾಲುಗಳನ್ನು ಕತ್ತರಿಸುವುದು ಸಮಾನತೆಯಾಗಲಾರದು. ಅದು ಪ್ರಗತಿಯ ಲಕ್ಷಣವಲ್ಲ. ಸಮಾನತೆಯೆಂದರೆ ವಿವಿಧ ವಿಷಯಗಳನ್ನೆಲ್ಲಾ ಸಮಾನ ರೀತಿಯಲ್ಲಿ ನೋಡುವುದಲ್ಲ, ವಿವಿಧ ವಿಷಯಗಳನ್ನು ವಿವಿಧ ದೃಷ್ಟಿಯಿಂದ ನೋಡುವುದು. ಸಮಾನ ಅವಕಾಶಗಳಿಂದ ಯಾರೂ ವಂಚಿತರಾಗದೆ ಇರುವಂತೆ ನೋಡಿಕೊಳ್ಳುವುದರಲ್ಲಿ ಸಮಾನತೆಯಿದೆ. ಈ ಜಗತ್ತಿನಲ್ಲಿ ಎಲ್ಲಾ ರೀತಿಯ ಜನರಿರುತ್ತಾರೆ. ಎಲ್ಲರೂ ಒಂದೇ ರೀತಿಯಲ್ಲಿ ಇರಲು, ಅಂದರೆ ಆರೋಗ್ಯವಂತರಾಗಿರಲು, ಬಲಶಾಲಿಗಳಾಗಿರಲು, ಜ್ಞಾನಿಗಳಾಗಿರಲು, ಅಂಗವೈಕಲ್ಯತೆಯಿಲ್ಲದಿರಲು, ಒಂದೇ ಜಾತಿ/ಧರ್ಮದವರಾಗಿರಲು, ಒಂದೇ ವಿಚಾರ ಹೊಂದಿದವರೂ ಆಗಲು -ನಾವು, ನೀವು ಇಷ್ಟಪಟ್ಟರೂ- ಸಾಧ್ಯವಿದೆಯೇ? ಹೀಗಿರುವಾಗ ನಿಜವಾದ ಸಮಾನತೆಯೆಂದರೆ, ವ್ಯವಹರಿಸುವಾಗ ಪಕ್ಷಪಾತ, ದುರಾಗ್ರಹ, ಅಭಿಮಾನಗಳಿಗೆ ಅವಕಾಶ ಕೊಡದೆ ಪ್ರತಿಯೊಬ್ಬರೂ ತಾವು ಇಷ್ಟಪಡುವ, ಇರಬಯಸುವ ರೀತಿಯಲ್ಲಿ ಬಾಳಲು, ಬದುಕಲು ಸಹಕರಿಸುವುದು ಅನ್ನಬಹುದಷ್ಟೆ. ದೇವರ ಮುಂದೆ ಎಲ್ಲರೂ ಸಮಾನರು ಎಂಬುದನ್ನು ಅರಿಯಬೇಕಿದೆ. ಇಲ್ಲಿ ದೇವರು ಎಂಬ ಪದವನ್ನು ಯಾವುದೇ ಜಾತಿ/ಮತಗಳವರ ದೇವರು ಎಂಬರ್ಥದಲ್ಲಿ ಬಳಸಿಲ್ಲ. ಜಾತಿಗೊಬ್ಬ ದೇವರು, ಮತಕ್ಕೊಬ್ಬ ದೇವರು ಎನ್ನುವುದು, ಅವರ ದೇವರನ್ನು ಇವರು, ಇವರ ದೇವರನ್ನು ಅವರು ನಿಂದಿಸುವ ಮನೋಭಾವಗಳು ಮಾನವನ ಸಂಕುಚಿತ ಭಾವನೆಯನ್ನು ತೋರಿಸುತ್ತದೆ. ಈ ರೀತಿಯ ತಾರತಮ್ಯವೆಸಗದ ಮನೋಭಾವನೆ ಬೆಳೆಸಿಕೊಂಡವರು ಮಾತ್ರ ಕೇವಲ ಮಾನವರಲ್ಲಿ ಮಾತ್ರವಲ್ಲ ಜಗತ್ತಿನ ಎಲ್ಲಾ ಜೀವಿಗಳ ಕುರಿತು ಅಕ್ಕರೆ, ಅಕರಾಸ್ತೆ ಹೊಂದುತ್ತಾರೆ. ಪ್ರಪಂಚದಲ್ಲಿ ಒಂದೇ ಒಂದು ವಿಚಾರದಲ್ಲಿ ಮಾತ್ರ ಸಮಾನತೆಯಿದೆ. ಎಲ್ಲರೂ ಕೊನೆಗೆ ಸಾಯುತ್ತಾರೆ ಅನ್ನುವುದೇ ಆ ಸಮಾನತೆ. ಸಾವಿನಲ್ಲಿ ಮಾತ್ರ ಎಲ್ಲರೂ ಸಮಾನರು.
     ಆರ್ಥಿಕ ಸಮಾನತೆಯನ್ನೂ ಸಹ ವ್ಯಾವಹಾರಿಕವಾಗಿ ಉಳಿಸಿಕೊಂಡು ಬರುವುದು ದುಸ್ಸಾಧ್ಯ. ಒಂದು ಸಣ್ಣ ಕಾಲ್ಪನಿಕ ಉದಾಹರಣೆ ನೋಡೋಣ. ಒಂದು ಹಳ್ಳಿಯಲ್ಲಿ ಒಂದು ನೂರು ಕುಟುಂಬಗಳಿದ್ದು, ಅದರಲ್ಲಿ 30 ಕುಟುಂಬಗಳು ಶ್ರೀಮಂತ, 40 ಕುಟುಂಬಗಳು ಮಧ್ಯಮ ಮತ್ತು 40 ಕುಟುಂಬಗಳು ಬಡ ಕುಟುಂಬಗಳೆಂದು ಭಾವಿಸೋಣ. ಅವರಲ್ಲಿನ ಎಲ್ಲಾ ಆಸ್ತಿ-ಪಾಸ್ತಿಗಳನ್ನು ವಶಪಡಿಸಿಕೊಂಡು ಬಂದ ಹಣವನ್ನು -ಕುಟುಂಬಕ್ಕೆ ತಲಾ 15 ಲಕ್ಷ ರೂ. ಎಂದುಕೊಳ್ಳೋಣ- ಎಲ್ಲಾ ಕುಟುಂಬಗಳವರಿಗೆ ಹಂಚಲಾಯಿತು ಎಂದುಕೊಳ್ಳೋಣ. ಐದು ವರ್ಷಗಳು ಕಳೆದ ನಂತರ ಸಮೀಕ್ಷೆ ನಡೆಸಿದರೆ ಆ ಹಳ್ಳಿಯಲ್ಲಿ ಶ್ರೀಮಂತ, ಮಧ್ಯಮ ಮತ್ತು ಬಡ ಕುಟುಂಬಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚು-ಕಡಿಮೆ ಕಂಡುಬರಲಾರದು. ಇದಕ್ಕೆ ಮೂಲಕಾರಣ ಜನರ ಮನೋಭಾವ ಎನ್ನುವುದನ್ನು ತಿಳಿಯಲು ಕಷ್ಟವೇನಲ್ಲ. ಬುದ್ಧಿ ಮತ್ತು ಶ್ರಮ ಉಪಯೋಗಿಸಿಕೊಂಡವರು ಮತ್ತು ಹಣವನ್ನು ಸೂಕ್ತ ರೀತಿ ಉಪಯೋಗಿಸಿಕೊಂಡವರು ಶ್ರೀಮಂತರಾಗುತ್ತಾರೆ, ಅಲ್ಪ ಬುದ್ಧಿ, ಅಲ್ಪ ಶ್ರಮಪಡುವವರು ಮಧ್ಯಮವರ್ಗದವರಾಗುತ್ತಾರೆ. ದುಶ್ಚಟಗಳಿಗೆ ದಾಸರಾದವರು, ಸೋಮಾರಿಗಳು, ಹಣವನ್ನು ಸೂಕ್ತ ರೀತಿಯಲ್ಲಿ ಬಳಸಲು ಬರದವರು ತಮ್ಮ ಹಣವನ್ನು ಪೋಲು ಮಾಡಿ ಬಡವರಾಗುತ್ತಾರೆ. ಮತ್ತೆ ಸಮಾನತೆಯ ಕೂಗು ಬಂದರೆ ಪುನಃ ಎಲ್ಲರ ಹಣವನ್ನು ಕಸಿದು ಸಮಾನವಾಗಿ ಹಂಚಬೇಕೆ? ಇಲ್ಲಿ ಅಗತ್ಯವಿರುವುದು ಜನರನ್ನು ಶ್ರಮಜೀವಿಗಳಾಗಿಸುವುದಕ್ಕೆ, ದುಶ್ಚಟಗಳಿಂದ ದೂರವಿರಿಸುವುದಕ್ಕೆ ಬೇಕಾದ ಜ್ಞಾನದ ತಿಳಿವನ್ನು ಮೂಡಿಸುವುದಕ್ಕೆ, ಬದುಕನ್ನು ಒಳ್ಳೆಯ ರೀತಿಯಲ್ಲಿ ನಡೆಸಿ ಮುಂದೆ ಬರಲು ಸಹಕರಿಸುವುದಕ್ಕೆ ಅಷ್ಟೆ. ಕೊಟ್ಟ ಸೌಲಭ್ಯಗಳನ್ನು ಸರಿಯಾಗಿ ಉಪಯೋಗಪಡಿಸಿಕೊಳ್ಳುವವರಿಗೆ ಮಾತ್ರ ಸೌಲಭ್ಯ ನೀಡಿದರೆ ಮಾತ್ರ ಪ್ರಯೋಜನವಾದೀತು. ಇಲ್ಲದಿದ್ದರೆ ಅದು ಅಪಾತ್ರದಾನವಾಗುವುದು.
     ಎಲ್ಲರೂ ಎಲ್ಲಾ ವಿಷಯಗಳಲ್ಲಿ ಪ್ರವೀಣರಾಗಿರುವುದಿಲ್ಲ. ಆದ್ದರಿಂದ ಎಲ್ಲರೂ ಎಲ್ಲಾ ಕೆಲಸಗಳನ್ನು ಮಾಡಲಾರರು. ಯಾರು ಯಾವ ವಿಷಯದಲ್ಲಿ ಪ್ರವೀಣರಾಗಿರುತ್ತಾರೋ ಆ ಕ್ಷೇತ್ರದಲ್ಲಿ ಬದುಕು ಕಾಣಬಲ್ಲರು. ಹೀಗಾಗಿ ಕೆಲವರು ಬೌದ್ಧಿಕ ಕ್ಷೇತ್ರ, ಕೆಲವರು ವಾಣಿಜ್ಯ ಕ್ಷೇತ್ರ, ಆಡಳಿತಾತ್ಮಕ ಕ್ಷೇತ್ರ, ಶಾರೀರಿಕ ಶ್ರಮದ ಕ್ಷೇತ್ರಗಳಲ್ಲಿ ತೊಡಗಿಕೊಂಡು ಜೀವನದ ದಾರಿ ಕಾಣುತ್ತಾರೆ. ನಿಜ ಸಮಾನತೆಯೆಂದರೆ ಈ ಎಲ್ಲಾ ಕೆಲಸಗಳಲ್ಲಿ ಉಚ್ಛ-ನೀಚ ಭಾವನೆಗಳಿಗೆ ಅವಕಾಶ ಕೊಡದಿರುವುದು. ವಾಸ್ತವವಾಗಿ ನೋಡಿದರೆ ಯಾವ ಒಂದು ವಿಭಾಗವೂ ಚಿಕ್ಕದಲ್ಲ ಅಥವ ದೊಡ್ಡದಲ್ಲ. ಸಮಾಜದ ಅಸ್ತಿತ್ವಕ್ಕೆ ಈ ಎಲ್ಲವೂ ಇರಲೇಬೇಕು. ಯಾವುದೊಂದು ಇಲ್ಲದಿದ್ದರೂ ಆ ಸಮಾಜ ಅಂಗವಿಕಲವಾಗುತ್ತದೆ. ಈ ಕೆಲಸಗಳು ಸಂಬಂಧಿಸಿದ ವ್ಯಕ್ತಿಗಳ ಶಕ್ತಿ, ಸಾಮರ್ಥ್ಯವನ್ನು, ಒಲವನ್ನೂ ಅವಲಂಬಿಸಿದವಾದ್ದರಿಂದ ಅವರುಗಳ ಆ ಕೆಲಸಗಳಿಗೆ ಮನ್ನಣೆ ನೀಡುವ ಮನೋಭಾವ ಬಂದಲ್ಲಿ ಅದು ಸಮಾನತೆಯೆನಿಸೀತು.
     ವಿಶ್ವಮಾನವ ಕಲ್ಪನೆ, ವಿಶ್ವಭ್ರಾತೃತ್ವ ಅನ್ನುವುದನ್ನೂ ಪರಸ್ಪರರಲ್ಲಿ ಸೋದರತೆ, ಸಮಾನತೆಗೆ ಪರ್ಯಾಯವಾಗಿ ಬಳಸುವುದನ್ನು ಕಂಡಿದ್ದೇವೆ. ಪ್ರಪಂಚದಲ್ಲಿ 196 ದೇಶಗಳಿವೆಯೆಂದು ಗುರುತಿಸುತ್ತಾರೆ. ಎಷ್ಟೋ ದೇಶಗಳ ಹೆಸರುಗಳೇ ನಮಗೆ ಗೊತ್ತಿಲ್ಲ. ವಿಶ್ವಭ್ರಾತೃತ್ವ ಸಾಧ್ಯವಿದ್ದರೆ ಈ ದೇಶಗಳ ಸಂಖ್ಯೆ ಕಡಿಮೆಯಿರುತ್ತಿತ್ತು ಅಥವ ವಿವಿಧ ದೇಶಗಳ ನಡುವೆ ಸ್ನೇಹಭಾವವಿರುತ್ತಿತ್ತು. ಈಗಲಾದರೋ ದೇಶಗಳು ಒಡೆಯುತ್ತಿವೆ, ಆಕ್ರಮಣಕ್ಕೆ ಒಳಗಾಗುತ್ತವೆ, ಗಡಿರೇಖೆಗಳು ಬದಲಾಗುತ್ತವೆ. ಪ್ರಪಂಚವೇ ಒಂದು ಕುಟುಂಬ ಎಂಬ ವೇದವಾಣಿಯ ಸಾಕಾರಕ್ಕೆ ಪೂರಕ ವಾತಾವರಣವಿದೆಯೇ? ಈ 196 ದೇಶಗಳ ಪೈಕಿ 49 ದೇಶಗಳು ಮುಸ್ಲಿಮರು ಬಹುಸಂಖ್ಯಾತರಾಗಿರುವ ದೇಶಗಳಾಗಿವೆ, ಕೆಲವು ಇಸ್ಲಾಮಿಕ್ ದೇಶಗಳೆಂದೇ-ಪಾಕಿಸ್ತಾನವೂ ಸೇರಿ- ಘೋಷಿಸಲ್ಪಟ್ಟ ದೇಶಗಳಾಗಿವೆ. 120 ದೇಶಗಳು ಕ್ರಿಶ್ಚಿಯನ್ ದೇಶಗಳೆಂದು ಗುರುತಿಸಲ್ಪಡುತ್ತವೆ. ಒಂದು ಅಂದಾಜಿನ ಪ್ರಕಾರ ಮತ/ಧರ್ಮದ ಅನುಸಾರ ಪ್ರಪಂಚದ ಜನಸಂಖ್ಯೆ ಸುಮಾರು ಹೀಗಿದೆ:
1. ಕ್ರಿಶ್ಚಿಯನ್ - 2 ಬಿಲಿಯನ್.
2. ಇಸ್ಲಾಮ್ -  1.3 ಬಿಲಿಯನ್,
3. ಹಿಂದೂ -  900 ಮಿಲಿಯನ್,
4. ಇತರರು -  850 ಮಿಲಿಯನ್,
5. ಬೌದ್ಧ -   360 ಮಿಲಿಯನ್,
6. ಚೀನಾ ಮೂಲವಾಸಿ - 225 ಮಿಲಿಯನ್,
7. ಆದಿವಾಸಿ ಪದ್ಧತಿ -   95 ಮಿಲಿಯನ್. 
8. ಯಹೂದ್ಯರು -     19 ಮಿಲಿಯನ್.

     ವಸ್ತುಸ್ಥಿತಿಯಂತೆ ವಿಶ್ಲೇಷಣೆ ಮಾಡಿದರೆ ಮತ/ಧರ್ಮಗಳೂ ಸಮಾನತೆಯ ಶತ್ರುಗಳಾಗಿ ಪರಿಣಮಿಸಿರುವುದು ಗೋಚರವಾಗದಿರದು. ಎಲ್ಲಿ ಪರಧರ್ಮ ಸಹಿಷ್ಣುತೆ ಇರುತ್ತದೋ ಅಲ್ಲಿ ಸಮಾನತೆಯ ಕನಸು ಕಾಣಬಹುದು. ಕೋಟ್ಯಂತರ ವರ್ಷಗಳಿಂದ ಅಸ್ತಿತ್ವದಲ್ಲಿರುವ ಈ ಪ್ರಪಂಚದಲ್ಲಿ ಕೇವಲ ಸುಮಾರು 2013ವರ್ಷಗಳ ಹಿಂದೆ ಪ್ರಾರಂಭವಾದ ಕ್ರಿಶ್ಚಿಯನ್ ಮತವನ್ನು ಇಂದು ಪ್ರಪಂಚದ ಅತಿ ಹೆಚ್ಚು ಸಂಖ್ಯೆಯ ಜನರು ಅನುಸರಿಸುತ್ತಿದ್ದಾರೆ. ಸುಮಾರು 1400 ವರ್ಷಗಳ ಹಿಂದೆ ಜನಿಸಿದ ಇಸ್ಲಾಮ್ ಮತಾನುಯಾಯಿಗಳು ಎರಡನೆಯ ಸ್ಥಾನದಲ್ಲಿದ್ದಾರೆ. ಇಷ್ಟೊಂದು ಕ್ಷಿಪ್ರ ಪ್ರಗತಿಯ ಹಿಂದೆ ತಮ್ಮ ತಮ್ಮ ಧರ್ಮಗಳನ್ನು ಅಗ್ರಣಿಗಳಾಗಿಸಲು ನಡೆದ ಪ್ರಯತ್ನಗಳದು ಸಿಂಹಪಾಲೆಂದರೆ ತಪ್ಪಾಗಲಾರದು. ಆಸೆ, ಆಮಿಷ, ಅನಿವಾರ್ಯತೆ, ಬಡತನ ಮತ್ತು ಅಜ್ಞಾನಗಳ ದುರುಪಯೋಗ, ಕುಟಿಲೋಪಾಯಗಳು, ದುರ್ಮಾರ್ಗಗಳು, ಬಲಪ್ರಯೋಗಗಳಿಂದ ಮಾಡಲಾದ ಮತಾಂತರಗಳ ಕೊಡುಗೆಯೂ ಇದರಲ್ಲಿದೆ. ಪ್ರಪಂಚವನ್ನೇ ಕ್ರಿಶ್ಚಿಯನ್/ಮುಸ್ಲಿಮ್ ಬಹುಸಂಖ್ಯಾತರನ್ನಾಗಿಸಲು ಪ್ರಯತ್ನಗಳು ಎಡೆಬಿಡದೆ ನಡೆಯುತ್ತಿದ್ದು, ಇದಕ್ಕಾಗಿ ಯುದ್ಧಗಳು ಸಂಭವಿಸಿವೆ, ಸಂಭವಿಸಲಿವೆ. ಆರೋಗ್ಯಕರ ಪೈಪೋಟಿ ಮಾನವನ ಅಭಿವೃದ್ಧಿಗೆ ಪೂರಕ. ಅನಾರೋಗ್ಯಕರ ಪೈಪೋಟಿ ಮಾನವನಿಗೆ ಮಾರಕ. ಪೈಪೋಟಿ ಹೀಗೆಯೇ ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ಕ್ರಿಶ್ಚಿಯನ್ ಮತ್ತು ಮುಸ್ಲಿಮ್ ರಾಷ್ಟ್ರಗಳ ನಡುವೆ ಯುದ್ಧಗಳು -ನೇರ ಮತ್ತು ಪರೋಕ್ಷ-  ನಡೆಯುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು. ಧರ್ಮ/ಮತದ ಹೆಸರಿನಲ್ಲಿ ವೈಚಾರಿಕ ಮನೋಭಾವ. ಚಿಂತನೆಗಳಿಗೆ ಇರುವ ಅವಕಾಶಗಳಿಗೆ ಬೇಡಿ ತೊಡಿಸಲಾಗಿದೆ. ಹಾಗೆಯೇ, ಅಭಿವ್ಯಕ್ತಿ ಸ್ವಾತಂತ್ರ್ಯದ ಮುಸುಕಿನಲ್ಲಿ ವಿರೋಧಿ ಮತ/ಧರ್ಮಗಳವರನ್ನು ನಿಂದಿಸುವವರೂ ಇದ್ದಾರೆ. ಯಾರಿಗೆ ಯಾವ ಧರ್ಮ ಇಷ್ಟವೋ ಅದನ್ನು ಅನುಸರಿಸಲು ಅವಕಾಶ ಕೊಟ್ಟರೆ, ಮತಾಂತರಕ್ಕೆ ಪ್ರೋತ್ಸಾಹ ಸಿಗದಿದ್ದರೆ, ಪ್ರಲೋಭನೆ ಒಡ್ಡದಿದ್ದರೆ ಸಮಾನತೆಯ, ವಿಶ್ವಭ್ರಾತೃತ್ವದ ಕನಸು ಕಾಣಲು ಅವಕಾಶವಿದೆ. ಈ ವಾತಾವರಣ ಬರಬಹುದೆಂದು ನಿರೀಕ್ಷಿಸಲಾದೀತೆ?
     ಪ್ರಪಂಚದಲ್ಲಿ 6000-7000 ಭಾಷೆಗಳು ಇವೆಯೆನ್ನಲಾಗಿದೆ. ಜನಸಂಖ್ಯಾವಾರು ಲೆಕ್ಕ ಹಾಕಿದರೆ, 2009ರ ಅಂಕಿ ಅಂಶಗಳಂತೆ ಚೈನೀಸ್ ಭಾಷೆಯನ್ನು 1213 ಮಿಲಿಯನ್ ಜನರು ಮಾತನಾಡುತ್ತಿದ್ದು ಪ್ರಥಮ ಸ್ಥಾನದಲ್ಲಿ ಬರುತ್ತದೆ. ಅನುಕ್ರಮವಾಗಿ2,3 ಮತ್ತು 4ನೆಯ ಸ್ಥಾನಗಳಲ್ಲಿ 329 ಮಿಲಿಯನ್ ಜನ ಮಾತನಾಡುವ ಸ್ಪಾನಿಷ್, 328 ಮಿಲಿಯನ್ ಜನರು ಮಾತನಾಡುವ ಇಂಗ್ಲಿಷ್ ಮತ್ತು 229 ಮಿಲಿಯನ್ ಜನರು ಮಾತನಾಡುವ ಅರೇಬಿಕ್ ಭಾಷೆಗಳು ಬರುತ್ತವೆ. 182 ಮಿಲಿಯನ್ ಜನರು ಮಾತನಾಡುವ ಹಿಂದಿ 5ನೆಯ ಸ್ಥಾನದಲ್ಲಿದೆ. ಭಾರತ ದೇಶವೊಂದರಲ್ಲೇ 1652 ವಿವಿಧ ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಬ್ರಿಟಿಷರ ಬಳುವಳಿಯಾಗಿ ಭಾರತಕ್ಕೆ ಬಂದ ಇಂಗ್ಲಿಷನ್ನು 1965ರವರೆಗೆ ಮಾತ್ರ ಉಳಿಸಿಕೊಳ್ಳಲು ಸಂವಿಧಾನದಲ್ಲಿ ನಿರ್ಧರಿಸಲಾಗಿತ್ತು. ಆದರೆ ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಮಾಡುವ ವಿಚಾರದಲ್ಲಿ ದಕ್ಷಿಣ ಭಾರತದಲ್ಲಿ ಉಗ್ರ ಚಳುವಳಿಗಳು ನಡೆದು ವಿಷಯ ತಣ್ಣಗಾಯಿತು. ಪ್ರಾದೇಶಿಕ ಭಾಷೆಗಳ ಜೊತೆಗೆ ಇಂಗ್ಲಿಷಿನ ಬದಲಿಗೆ ಹಿಂದಿಯನ್ನು ಒಪ್ಪಿಕೊಂಡಿದ್ದರೆ, ಇಂದು ಹಿಂದಿ ಮಾತನಾಡುವವರ ಸಂಖ್ಯೆ ಪ್ರಪಂಚದಲ್ಲಿ ಎರಡನೆಯ ಸ್ಥಾನದಲ್ಲಿರುತ್ತಿತ್ತು. ಈ ಅಂಕಿ ಅಂಶಗಳನ್ನು ಸಾಂದರ್ಭಿಕವಾಗಿ ಹೇಳಿದ್ದಷ್ಟೆ ಹೊರತು ಮುಖ್ಯ ವಿಷಯಕ್ಕೆ ಬರುತ್ತೇನೆ. ಸ್ವಭಾಷಾ ಪ್ರೇಮಕ್ಕಿಂತ ಇತರ ಭಾಷಾದ್ವೇಶ ಸಹ ಸೋದರತೆಯ ಭಾವನೆಗೆ ಕೊಡಲಿ ಪೆಟ್ಟು ಹಾಕಿದೆ. ಹಿಂದಿ ಭಾಷೆಯ ಮೇಲಿನ ದ್ವೇಶ ಗುಲಾಮಗಿರಿಯ ಬಳುವಳಿಯಾದ ಇಂಗ್ಲಿಷನ್ನು ಅನಿವಾರ್ಯವನ್ನಾಗಿ ಉಳಿಸಿತು. ಇಂಗ್ಲಿಷ್ ಇಲ್ಲದೆ ಬೆಳವಣಿಗೆ, ಪ್ರಗತಿ ಅಸಾಧ್ಯ ಅನ್ನುವುದು ಸರಿಯಲ್ಲ ಅನ್ನುವುದನ್ನು ಪ್ರಪಂಚದ ಭಾಷಾ ಅಂಕಿ ಸಂಖ್ಯೆಗಳು ಸಾರಿವೆ. ಭಾಷಾವಾರು ರಾಜ್ಯಗಳ ರಚನೆ ಸಹ ದೇಶದ ಸಮಗ್ರತೆಗೆ ಧಕ್ಕೆ ತರುತ್ತಿದೆಯೇನೋ ಎಂದು ಅನ್ನಿಸುತ್ತಿದೆ. ಭಾಷೆಯ ಹೆಸರಿನಲ್ಲಿ ಅಕ್ಕ ಪಕ್ಕದ ರಾಜ್ಯಗಳ ನಡುವೆ ಹಿಂಸಾತ್ಮಕ ಗಲಭೆಗಳಾಗಿವೆ, ಆಗುತ್ತಿವೆ. ನಮ್ಮ ಭಾಷೆಯೇ ಹೆಚ್ಚು ಎಂಬ ವಾದ ವಿವಾದಗಳು ಮಾನವರ ನಡುವೆ ಕಂದಕ ಉಂಟು ಮಾಡುತ್ತಿವೆ. ನಮ್ಮ ನಮ್ಮ ಭಾಷೆಗಳನ್ನು ಪ್ರೀತಿಸೋಣ, ಉಳಿಸೋಣ, ಬೆಳೆಸೋಣ; ಇತರ ಭಾಷೆಗಳನ್ನು ದ್ವೇಷಿಸದಿರೋಣ ಎಂಬ ಭಾವನೆ ಬರುವುದು ಸಾಧ್ಯವಾದಾಗ ಮಾತ್ರ ಸೋದರತೆ, ಸಮಾನತೆಗಳ ಮಾತನ್ನಾಡಲು ನಮಗೆ ಹಕ್ಕಿರುತ್ತದೆ. 
     ಸಮಾನತೆಯ ಇನ್ನೊಂದು ಘೋರ ಶತ್ರು ಲಿಂಗ ತಾರತಮ್ಯ. ಕೇವಲ ನಮ್ಮ ಸುತ್ತಲಿನ ಸಂಗತಿಗಳ ಬಗ್ಗೆ ಮಾತ್ರ ನೋಡದೆ ಪ್ರಪಂಚದ ಎಲ್ಲೆಡೆ ಗಮನ ಹರಿಸಿದರೆ ಈ ತಾರತಮ್ಯದ ಪರಿಣಾಮ ಎಷ್ಟು ಅಸಹನೀಯ ಎಂಬುದು ಬಹುಷಃ ಅನುಭವಿಸಿದವರಿಗಷ್ಟೇ ತಿಳಿದೀತು. ಹುಟ್ಟಿದ ಮಗು ಹೆಣ್ಣು ಎಂದು ತಿಳಿದ ಸಮಯದಿಂದ ತಾರತಮ್ಯ ಪ್ರಾರಂಭವಾಗುತ್ತದೆ. ಹೆಣ್ಣಿನ ಶೋಷಣೆ ಮಾಡುವುದರಲ್ಲಿ ಹೆಣ್ಣೂ ಸಹ ಪ್ರಧಾನ ಪಾತ್ರ ವಹಿಸುತ್ತದೆ ಎಂಬುದನ್ನೂ ತಳ್ಳಿಹಾಕಲಾಗದು. ಜಾತಿ, ಧರ್ಮದ ಕಟ್ಟುಪಾಡುಗಳಲ್ಲಿ ಆಕೆಯನ್ನು ಕಟ್ಟಿಹಾಕಿ ಶಿಕ್ಷಣ ಪಡೆಯುವ ಹಕ್ಕಿನಿಂದಲೂ ಅವರು ವಂಚಿತರಾಗಿರುವುದು ಸುಳ್ಳಲ್ಲ. ಅವರು ಧರಿಸುವ ವಸ್ತ್ರಗಳ ಬಗ್ಗೆ ಸಹ ಮತಾಂಧರು ಕಟ್ಟುನಿಟ್ಟು ಮಾಡಿರುವುದು ತಿಳಿದ ವಿಷಯ. ತಾನು ಬುದ್ಧಿವಂತಳೆಂದು ತಿಳಿದ ಮಹಿಳೆ ಪುರುಷನಿಗೆ ಸಮನಾದ ಹಕ್ಕುಗಳಿಗೆ ಒತ್ತಾಯಿಸುತ್ತಾಳೆ, ಆದರೆ ಬುದ್ಧಿವಂತ ಮಹಿಳೆ ಸುಮ್ಮನಿರುತ್ತಾಳೆ ಎಂಬುದು ಜನಜನಿತ. ಹೆಣ್ಣು ಎಷ್ಟು ಸುರಕ್ಷಿತ ಎಂಬುದು ಈಗ ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳೇ ಸಾಕ್ಷಿ ಹೇಳುತ್ತಿವೆ. ಅನೇಕ ಕಾರಣಗಳಿಂದಾಗಿ ಲಿಂಗಸಮಾನತೆ ಸಾಧ್ಯವಿರದಿರಬಹುದು, ಆದರೆ ಸಮಾನ ಅವಕಾಶಗಳಿಂದ ಹೆಣ್ಣು ವಂಚಿತಳಾಗಬಾರದು. ಇಲ್ಲಿ ಹಿಂದಿನ ಸಂಗತಿಗಳಲ್ಲಿ ವಿಶ್ಲೇಷಿಸಿದಂತೆ ಸಮಾನತೆ ಎಂದರೆ ಸಮಾನ ಅವಕಾಶಗಳು ಎಂದು. ಸಮಾನ ಅವಕಾಶಗಳಿದ್ದು ಹೆಣ್ಣು ಎಷ್ಟು ಸಾಧನೆ ಮಾಡಲು ಸಾಧ್ಯವೋ ಮಾಡಲು ಸಾಧ್ಯವಾಗುವಂತಾಗಬೇಕು. ಈಗ ಹೇಳಿ, ಸಮಾನತೆ, ಸೋದರತೆ, ವಿಶ್ವಭ್ರಾತೃತ್ವ ಎಂದೆಲ್ಲಾ ಮಾತನಾಡಲು ಯಾರಿಗೆ ಬಾಯಿ ಬಂದೀತು?
     ಸಮಾನತೆಯ ಬಗ್ಗೆ ಮಾತನಾಡುವವರು ಒಂದು ಸಂಗತಿಯನ್ನು ನೆನಪಿನಲ್ಲಿಡಬೇಕಿದೆ. ಅದೆಂದರೆ ಯಾವುದೇ ವ್ಯಕ್ತಿ ಈಗ ತಾನು ಇರುವುದಕ್ಕಿಂತ ಮೇಲಿನ ಸ್ಥಿತಿಗೆ ತಲುಪಲು ಪ್ರಯತ್ನಿಸುತ್ತಲೇ ಇರುತ್ತಾನೆ. ಕಟು ವಾಸ್ತವವೆಂದರೆ ಮೊದಲು ನಾವು ನಮ್ಮನ್ನು ಇಷ್ಟಪಡುತ್ತೇವೆ, ನಂತರ ಬೇರೆಯವರನ್ನು! ಸಮಾನತೆಯನ್ನು ಯಾರೂ ಕೊಡುವುದಿಲ್ಲ, ನಾವು ಗಳಿಸಬೇಕು. ಬಡವ ಶ್ರೀಮಂತನಾಗಲು, ಆಟಗಾರ ಶ್ರೇಷ್ಠ ಆಟಗಾರನಾಗಲು, ಇರುವುದಕ್ಕಿಂತ ಉನ್ನತ ಅಧಿಕಾರ ಹೊಂದಲು ಬಯಸುತ್ತಲೇ ಇರುತ್ತಾರೆ. ಸಮಾನತೆಯೆಂದರೆ ಎಲ್ಲರೂ ಒಂದು ಹಂತದಲ್ಲೇ ಉಳಿದು ಸಮನಾಗಿ ಬಾಳುವುದಲ್ಲ. ಪದೇ ಪದೇ ಒತ್ತಿ ಹೇಳುತ್ತಿರುವಂತೆ ಇಲ್ಲೂ ಸಹ ಉನ್ನತ ಸ್ಥಿತಿ ತಲುಪಲು ಎಲ್ಲರಿಗೂ ಸಮಾನ ಅವಕಾಶವಿರುವಂತೆ ನೋಡಿಕೊಳ್ಳುವುದರಲ್ಲಿ ಸಮಾನತೆಯಿದೆ. ಆದರೆ ಈಗೇನಾಗುತ್ತಿದೆ? ಭ್ರಷ್ಟಾಚಾರ ಈ ಎಲ್ಲಾ ಸಮಾನ ಅವಕಾಶಗಳಿಗೆ ಕೊಕ್ಕೆ ಹಾಕಿದೆ. ಅಪಮಾರ್ಗಗಳನ್ನು ಬಳಸಿ ಮೇಲೇರುವ ಪ್ರಯತ್ನ, ಇತರರನ್ನು ಮುಂದೆ ಬರದಂತೆ ತಡೆಯುವ ಪ್ರಯತ್ನಗಳು ಮೇಲುಗೈ ಸಾಧಿಸಿವೆ. ಜನಸೇವೆಗಾಗಿ ಎಂದು ಕೈಮುಗಿದು ಅಧಿಕಾರಕ್ಕೇರುವ ನಾಯಕರು ಕೋಟಿ ಕೋಟಿ ಜನರ ಹಣ ಲೂಟಿ ಮಾಡುತ್ತಾರೆ. ಅಧಿಕಾರಕ್ಕಾಗಿ ದೇಶವನ್ನೇ ಮಾರಲು ಹಿಂದೆ ಮುಂದೆ ನೋಡದ, ಏನು ಮಾಡಲೂ ಹೇಸದವರ ಕೈಯಲ್ಲಿ ಅಧಿಕಾರ ಸಿಗುತ್ತದೆ. ಹಾಗಾದರೆ ಇದಕ್ಕೆ ಮುಕ್ತಿಯಿದೆಯೇ? ಮುಕ್ತಿಯಿದೆ, ಮಾರ್ಗವಿದೆ; ಸಮಾನತೆ, ವಿಶ್ವಭ್ರಾತೃತ್ವದ ಕನಸು ಕಾಣುವವರು ಮೊದಲು ಅದನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕಿದೆ. ಆಗ ಇತರರಿಗೆ ಅವರು ಮಾರ್ಗದರ್ಶಿಯಾಗಬಲ್ಲರು.
     ದೇಶಪ್ರೇಮ, ಧರ್ಮಪ್ರೇಮ, ಜಾತಿಪ್ರೇಮ, ಭಾಷಾಪ್ರೇಮ ಎಲ್ಲವೂ ಒಳ್ಳೆಯದೇ. ಅಸಮಾನತೆಗೆ ದೇಶ, ಧರ್ಮ, ಜಾತಿ, ಭಾಷೆಗಳು ಕಾರಣವಲ್ಲ. ಆದರೆ ದೇಶ, ಧರ್ಮ, ಜಾತಿ, ಭಾಷೆಯ ಹೆಸರಿನಲ್ಲಿ ಅದೆಷ್ಟು ಮಾರಣಹೋಮಗಳಾಗಿವೆ! ನಿಜವಾದ ಕಾರಣ ನಿಮಗೆ ಈಗ ಗೊತ್ತಾಗಿರಬಹುದು. ಇತರ ದೇಶ/ಧರ್ಮ/ಜಾತಿ/ಭಾಷೆಗಳ ಮೇಲಿನ ದ್ವೇಷವೇ ಅದು! ಅದನ್ನು ತ್ಯಜಿಸಿದರೆ ನಾವು ವಿಶ್ವಮಾನವರೇ. ಅಸಮಾನತೆಯನ್ನು ಹೋಗಲಾಡಿಸಲು ಧರ್ಮ/ಜಾತಿಗಳು ಹುಟ್ಟಿದವು. ಆದರೆ ಮುಂದೆ ಅವೇ ಅಸಮಾನತೆಗೆ ಮೆಟ್ಟಲುಗಳಾದವು. ಸಮಾನತೆಯ ಸಾಧನೆಗೆ ಕೇವಲ ಸರ್ಕಾರವನ್ನು ನೆಚ್ಚಿ ಕುಳಿತುಕೊಳ್ಳುವಲ್ಲಿ, ಸರ್ಕಾರವನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಸರ್ಕಾರ ಕೇವಲ ಸಾಧನ ಮಾತ್ರ. ಆ ಸಾಧನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕೆಲಸ ಮಾಡಬೇಕಾದವರು ನಾವುಗಳೇ. ಪ್ರಗತಿ ಜೀವಂತಿಕೆಯ ಸಂಕೇತ. ಈಗ ಇರುವುದಕ್ಕಿಂತ ಮುಂದಿನ ಉತ್ತಮ ಸ್ಥಿತಿಗೆ ಮುಂದೆ ಹೋಗೋಣ. ಮುಂದೆ ಹೋದಾಗ ಹಿಂತಿರುಗಿ ನೋಡಿ, ಹಿಂದೆ ಬಿದ್ದವರನ್ನು ಮುಂದೆ ಬರಲು ಸಹಕರಿಸಿ ಕೈಹಿಡಿದು ಮುಂದೆ ತರೋಣ. ಮತ್ತೆ ಮುಂದೆ ಹೋಗೋಣ, ಮತ್ತೆ ಹಿಂದಿರುವವರನ್ನೂ ಮುಂದಕ್ಕೆ ತರೋಣ, ಮತ್ತೆ ಮುಂದೆ ಹೋಗೋಣ. ಈ ಪ್ರಕ್ರಿಯೆ ನಿರಂತರವಾಗಿರಲಿ. ಇದು ನಿಜವಾದ ಸಮಾನತೆಯ, ನಿಜವಾದ ಮಾನವತೆಯ, ನಿಜವಾದ ವಿಶ್ವಭ್ರಾತೃತ್ವದ ಕಲ್ಪನೆ. ಈ ಕಲ್ಪನೆ ಸಾಕಾರವಾಗಬೇಕಾದರೆ ಇದಕ್ಕೆ ಪೂರಕವಾದ ಜ್ಞಾನದ ಅರಿವನ್ನು ಮೂಡಿಸುವ ಕಾರ್ಯ ಮುಂದೆ ಇರುವವರದಾಗಿದೆ. ಟೀಕೆ ಮಾಡುತ್ತಾ, ಒಬ್ಬರನ್ನೊಬ್ಬರು ದೂಷಿಸುತ್ತಾ ಕಾಲಹರಣ ಮಾಡುವುದರಿಂದ ಮುಂದೆ ಬರಲಾಗುವುದಿಲ್ಲ. ಮುಂದೆ ಬರಬೇಕೆಂದರೆ ಮುಂದೆ ಹೋಗಬೇಕಷ್ಟೆ. ಸಮಾನತೆ ಬೇಕೆಂದರೆ ಹಿಂದಿರುವವರನ್ನು ಮುಂದೆ ತರಬೇಕಷ್ಟೆ, ಮುಂದಿರುವವರನ್ನು ಹಿಂದೆ ತರುವುದಲ್ಲ. ಇದಕ್ಕೆ ಬೇರೆ ಅಡ್ಡದಾರಿಗಳಿಲ್ಲ. ಯೋಚಿಸಿ; ನಾವು, ನೀವು ಕೆಲವು ವಿಷಯಗಳಲ್ಲಿ ಮುಂದಿದ್ದೇವೆ. ಏಕೆಂದರೆ ನಮಗಿಂತ ಹಿಂದೆ ಇರುವವರು ಬಹಳ ಜನರಿದ್ದಾರೆ. ಅವರನ್ನೂ ನಮ್ಮ ಜೊತೆಗೆ ಮುಂದೆ ತಂದು, ನಮಗಿಂತ ಮುಂದೆ ಇರುವವರ ಜೊತೆಗೆ ಸಮನಾಗಿ ಹೋಗುವ ಪ್ರಯತ್ನ ಎಡೆಬಿಡದೆ ಮಾಡೋಣ, ಮುನ್ನಡೆಯೋಣ.  
-ಕ.ವೆಂ.ನಾಗರಾಜ್.
*****************
ಚಿತ್ರಕೃಪೆ: ಅಂತರ್ಜಾಲದಿಂದ ಹೆಕ್ಕಿದ ಕ್ಲಿಪ್ ಕಲೆ. 

ರಘುವಂಶ -ಕಾವ್ಯ ಶಾಸ್ತ್ರ ಸಂಬಂಧ ಉಪನ್ಯಾಸ

Thursday, February 7, 2013

“ಹಿಂದು” ಈ ದೇಶದ ಹೆಸರು


    ಮತ ಎಂದರೇನು? ಚುನಾವಣೆ ಬಂದಾಗ ಸಹಜವಾಗಿ ಕೇಳುವ ಮಾತು " ನಿಮ್ಮ ಮತ ಯಾರಿಗೆ? " ಅಂದರೆ ನೀವು ಯಾರನ್ನು ಒಪ್ಪುತ್ತೀರಿ? ನಿಮ್ಮ ಅಭಿಪ್ರಾಯವೇನು? ಮತ-ಧರ್ಮದ ಹೆಸರು ಬಂದಾಗಲೂ ಇದೇ ಆಧಾರದಲ್ಲಿ ಅರ್ಥಮಾಡಿಕೊಳ್ಳಬೇಕು. ಮತ ಎಂದೊಡನೆ ಅದಕ್ಕೊಬ್ಬ ಸ್ಥಾಪಕ/ಪ್ರವಾದಿ.          [ ಪ್ರವಾದಿ ಎಂದರೆ   ವಿಶೇಷ ವಾಗಿ ವಿಚಾರ ಮಂಡಿಸುವವನು] ಅದಕ್ಕೊಂದು ಆಧಾರ ಗ್ರಂಥ.
ಹೀಗೆ  ವಿಚಾರ ಮಾಡುವಾಗ ನಮ್ಮ ಮುಂದೆ ಕ್ರೈಸ್ತ, ಇಸ್ಲಾಮ್, ಜೈನ, ಬೌದ್ಧ.......ಹೀಗೆ ಹಲವು ಮತಗಳು ಕಣ್ಣೆದುರು ಬರುತ್ತ್ತವೆ. ಕ್ರೈಸ್ತ ಮತದ ಪ್ರವಾದಿ ಏಸೂಕ್ರಿಸ್ತ, ಆಧಾರ ಗ್ರಂಥ ಬೈಬಲ್,ಅನುಯಾಯಿಗಳು ಕ್ರೈಸ್ತರು,  ಇಸ್ಲಾಮ್ ಸ್ಥಾಪಕ/ಪ್ರವಾದಿ ಮೊಹಮದ್ ಪೈಗಂಬರ್.ಆಧಾರಗ್ರಂಥ ಖುರಾನ್. ಅನುಯಾಯಿಗಳು ಮುಸಲ್ಮಾನರು. ಹೀಗೆಯೇ ಜೈನರು, ಬೌದ್ಧರು, ಸಿಕ್ಖರು.....ಮುಂತಾದ ಉಧಾಹರಣೆಗಳು ಬರುತ್ತವೆ. 
 ಆದರೆ ಹಿಂದು ಹೆಸರು ಬಂದಾಗ ಇದು ಮತವೇ? ಇದರ ಸ್ಥಾಪಕರಾರು? ಇದರ ಧರ್ಮಗ್ರಂಥ ಯಾವುದು? ಎಂದು ವಿಚಾರ ಮಾಡಿದಾಗ  ಒಬ್ಬ ಪ್ರವಾದಿಗೆ ,ಒಂದು  ಮತಗ್ರಂಥಕ್ಕೆ ಇದು ಸೀಮಿತವಾಗುವುದಿಲ್ಲ. ಹಾಗಾಗಿ ಇದು ಒಂದು ಮತವೇ ಅಲ್ಲ   , ನಿಜವಾದ ಮತವೆಂದರೆ ಕ್ರೈಸ್ತ, ಇಸ್ಲಾಮ್ ಉಳಿದವರೇನಿದ್ದರೂ ನೂರಾರು ಜಾತಿಗಳಲ್ಲಿ ಹಂಚಿಹೋಗಿರುವವರು ಎಂದು ವಾದ ಮಾಡುವ ಜನರಿದ್ದಾರೆ. 
ಹಾಗಾದರೆ   " ಹಿಂದು "  ಎಂದರೇನು? 
ಹಿಂದು ಎಂಬುದು ಈ ದೇಶದ ಹೆಸರು, ಇಲ್ಲಿನ ಸಂಸ್ಕೃತಿಯ ಹೆಸರು, ಇಲ್ಲಿನ ಪರಂಪರೆಯ ಹೆಸರು. ಇಲ್ಲಿನ ಧರ್ಮದ ಹೆಸರು. ಧರ್ಮ ಎಂದೊಡನೆ ವಿಚಲಿತರಾಗುವ ಅಗತ್ಯವಿಲ್ಲ. ಧರ್ಮ ಎಂದರೆ ಜೀವನ ಪದ್ದತಿ. ಮಾನವೀಯ ಮೌಲ್ಯಗಳನ್ನು ಧರಿಸಿಕೊಂಡು ನಡೆಸುವ ಜೀವನ ಪದ್ದತಿ ಯೇ ಧರ್ಮ. ಆದರೆ ದುರ್ದೈವ ವೆಂದರೆ ಧರ್ಮದ ಹೆಸರಲ್ಲಿ ಈ ದೇಶದಲ್ಲಿ ಸಂಘರ್ಷ ನಡೆಯುತ್ತದೆ. 
ಸಾವಿರಾರು ಋಷಿಮುನಿಗಳು ತಪಸ್ಸನ್ನು ಮಾಡಿ ಕಂಡುಕೊಂಡ ಜೀವನ ಮಾರ್ಗವೇ ಧರ್ಮ. ಯಾಕೆ ಇದನ್ನು ಹಿಂದು ಧರ್ಮವೆಂದು ಕರೆದರು? ಯಾಕಾಗಿ ಇದನ್ನು ಹಿಂದು ದೇಶವೆಂದು ಕರೆದರು?
ಆಧಾರ ವಿದೆ.......
ಬೃಹಸ್ಪತಿ ಆಗಮದಂತೆ  ಹಿಮಾಲಯ ಪದದ “ಹಿ” ಮತ್ತು ಇಂದು ಸರೋವರದ  “ಇಂದು” ಪದಗಳೆ ಸೇರಿ “ಹಿಂದು” ಆಗಿದೆ. ಇವೆರಡೂ ಕೂಡಿ ನಮ್ಮ ಮಾತೃಭೂಮಿಯ ವಿಸ್ತಾರವನ್ನು ಹೇಳುತ್ತದೆ.
ಹಿಮಾಲಯಮ್ ಸಮಾರ್ಭ್ಯ ಯಾವದಿಂ ದು   ಸರೋವರಮ್
ತಮ್ ದೇವ ನಿರ್ಮಿತಮ್ ದೇಶಂ ಹಿಂದುಸ್ಥಾನಮ್ ಪ್ರಚಕ್ಷತೇ||

ಅಂದರೆ ದೇವತೆಗಳಿಂದ ನಿರ್ಮಿತಿಗೊಂಡು ಉತ್ತರದ ಹಿಮಾಲಯದಿಂದ ದಕ್ಷಿಣದ  ಹಿಂದು ಮಹಾಸಾಗರದ ವರಗೆ ಪಸರಿಸಿರುವ ಈ ನಾಡನ್ನು ಹಿಂದುಸ್ಥಾನ ಎಂದು ಕರೆಯುತ್ತಾರೆ.
ಅಂದರೆ ಈ ದೇಶದ ಹೆಸರು “ಹಿಂದುಸ್ಥಾನ”. ಇಲ್ಲಿರುವವರು “ಹಿಂದುಗಳು” .ಅಷ್ಟೆ. very simple. ಆದರೆ  “ಹಿಂದು” ಎಂಬ ಶಬ್ಧಕ್ಕೆ  ಯಾಕೆ ಇಷ್ಟು ಸಂಘರ್ಷ? ನಮ್ಮ ಒಬ್ಬ ನಾಯಕರಂತೂ ಹೇಳಿಯೇ ಬಿಟ್ಟರು “ ನನ್ನನ್ನು    ಕತ್ತೆ ಎಂದು ಬೇಕಾದರೂ ಕರೆಯಿರಿ, ನನ್ನನ್ನು “ಹಿಂದು” ಎಂದು ಮಾತ್ರ ಕರೆಯಬೇಡಿ. ಅವರನ್ನು ಕತ್ತೆ ಎಂದೇ ಜನರುಬೇಕಾದರೆ ಕರೆದುಕೊಳ್ಳಲಿ. ನಮ್ಮ ಮತ್ತೊಬ್ಬ ನಾಯಕರು ಹೇಳಿದ್ದರು “ Un fortunately I took birt as Hindu” ನಮ್ಮ ಧರ್ಮ ಶಾಸ್ತ್ರಗಳು ಹೇಳುತ್ತವೆ “ “ಇದು ದೇವ ನಿರ್ಮಿತ ದೇಶ-ಹಿಂದುಸ್ಥಾನ”  ಆದರೆ ನಮ್ಮ ನಾಯಕ ಶಿರೋಮಣಿ ಇಲ್ಲಿ ದುರ್ದೈವದಿಂದ ಹುಟ್ಟಿದರಂತೆ.
ಅಂದರೆ ರಾಜಕಾರಣಿಗಳು “ಎಲ್ಲಿ ಮುಸ್ಲಿಮ್ ಮತಗಳು ತಮಗೆ ಬರುವುದಿಲ್ಲವೋ ಎಂದು ಹೆದರಿ ಮುಸಲ್ಮಾನರನ್ನು ಓಲೈಸಲು “ ನಾನು ಹಿಂದುವೇ ಅಲ್ಲ, ನಾನು ಹಿಂದುವಾಗಿರುವುದು ನನ್ನ ದುರ್ದೈವ” ಎನ್ನುವ  ಇವರನ್ನು  ಮುಸಲ್ಮಾನರೂ ನಂಬುವುದಿಲ್ಲವೆಂಬ ಸತ್ಯ ಇವರಿಗೆ ಗೊತ್ತಿಲ್ಲ. “ ನಮ್ಮ ಓಟಿಗಾಗಿ ತಮ್ಮವರನ್ನೇ ಹೀಯಾಳಿಸುವ ಇವನನ್ನು ಗೆಲ್ಲಿಸಿದರೆ  ನಮಗೆ ಒಳ್ಳೆಯದು ಮಾಡುತ್ತಾನೆಂಬ ನಂಬಿಕೆ ಏನು? ಎಂದು ಮುಸಲ್ಮಾನರೂ ಇವನನ್ನು ದೂರವಿಡುವ ಕಾಲ ದೂರವಿಲ್ಲ.
ಓಟಿನ ರಾಜಕಾರಣ ಬದಿಗಿರಲಿ. ಆದರೆ “ನಾನು ಹಿಂದು” ಎನ್ನಲು ನಾಚಿಕೆ ಪಡಬೇಕೇ?
ಈ ವಿಷಯವನ್ನು  ಭಾರತೀಯರೆಲ್ಲರೂ ಗಟ್ಟಿಮಾಡಿಕೊಳ್ಳ  ಬೇಕು.  ಈ ದೇಶದಲ್ಲಿ ಹುಟ್ಟಿರುವ ನಾನು ಮೊದಲು “ಹಿಂದು” ಅಂದರೆ ಹಿಂದುಸ್ಥಾನದ ಪ್ರಜೆ. ಭಾರತೀಯನೆಂದರೂ ತಪ್ಪಿಲ್ಲ. ನಾವೇಕೆ ಭಾರತೀಯರೆಂದು ಕರೆಯಲ್ಪಡುತ್ತೇವೆಂಬುದಕ್ಕೆ  ಇಲ್ಲಿ ನೋಡಿ

ಉತ್ತರಮ್ ಯತ್ಸಮುದ್ರಸ್ಯ  ಹಿಮಾದ್ರೇಶ್ಚೈವ ದಕ್ಷಿಣಮ್
ವರ್ಷಮ್ ತದ್ ಭಾರತಮ್ ನಾಮ ಭಾರತೀ ಯತ್ರ ಸಂತತಿ:

ಸಾಗರದಿಂದ ಉತ್ತರಕ್ಕೆ ಹಿಮಾಲಯದಿಂದ ದಕ್ಷಿಣಕ್ಕೆ ಇರುವ ಭೂಮಿಗೆ ಭಾರತ ಎಂದು ಕರೆಯುತ್ತೇವೆ. ಭಾರತದಲ್ಲಿ ವಾಸಿಸುವವರು ಭಾರತೀಯರು. ಅಷ್ಟೆ.  ಹಿಂದುಸ್ಥಾನವೆಂದರೆ ಭಾರತ ,ಹಿಂದು ಎಂದರೆ ಭಾರತೀಯ. ಅಷ್ಟೆ. very simple.

ಹೀಗೆ ಋಷಿ ಮುನಿಗಳ   ತಪಸ್ಸಿನಿಂದ ದತ್ತವಾದ ಹಿಂದು ಧರ್ಮ ಏನು ಹೇಳುತ್ತದೆ....

"ಏಕಂ ಸತ್ ವಿಪ್ರಾ: ಬಹುದಾ ವದಂತಿ"

ಸತ್ಯ ಎಂಬುದು ಒಂದೇ, ಅದನ್ನು ಪಂಡಿತರು ಬೇರೆ ಬೇರೆ ರೀತಿಯಲ್ಲಿ ಹೇಳುತ್ತಾರೆ. ಬಹಳ ಸರಳವಾದ ಮಾತಿದು. ಅದರರ್ಥ ಭಗವಂತನೆಂಬುವನು ಒಬ್ಬನೇ. ಅವನನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುವರು."ದೇವನೊಬ್ಬ ನಾಮ ಹಲವು" ಎಂದರೂ ಇದೇ ಅರ್ಥ ತಾನೇ.
 ನಮ್ಮ ಋಷಿ ಮುನಿಗಳು ಕಂಡುಕೊಂಡ   ಸತ್ಯವಿದು.  ದೇವರನ್ನು ಯಾವ ಹೆಸರಿಂದಲಾದರೂ ಕರೆಯಿರಿ. ಅವನನ್ನು ಬ್ರಹ್ಮ, ವಿಷ್ಣು, ಮಹೇಶ್ವರ ನೆನ್ನಿ. ಕ್ರಿಸ್ತನೆನ್ನಿ. ಕೃಷ್ಣನೆನ್ನಿ. ಅಲ್ಲಾ ಎನ್ನಿ,...ಮಾರಮ್ಮನೆನ್ನಿ ಯಾವ ಹೆಸರಿನಲ್ಲಾದರೂ ಕರೆಯಿರಿ  "ಏಕಂ ಸತ್" .ಸತ್ಯ ಮಾತ್ರ ಒಂದೇ. ಆ ಭಗವಂತ ಮಾತ್ರ ಒಬ್ಬನೇ. ಇದು ಹಿಂದುಧರ್ಮದ  ವೈಶಿಷ್ಠ್ಯ. 
ನನ್ನನ್ನು ನಂಬು, ನನ್ನಿಂದ ಮಾತ್ರವೇ ಮೋಕ್ಷ, ಎಂಬ ವಿಚಾರಕ್ಕೆ ಹಿಂದು ಧರ್ಮದಲ್ಲಿ ಆಸ್ಪದವೇ ಇಲ್ಲ.  ವೇದವು ಕರೆ ಕೊಡುತ್ತದೆ......

ಯತ್ ಪೂರ್ವ್ಯಂ  ಮರುತೋ ಯಚ್ಚ ನೂತನಂ ಯದುದ್ಯತೇ  ವಸವೋ ಯಚ್ಚ ಶಸ್ಯತೇ|
ವಿಶ್ವಸ್ಯ ತಸ್ಯ ಭವಥಾ ನವೇದಸ: ಶುಭಂ ಯಾತಾಮನು ರಥಾ ಅವೃತ್ಸತಾ|| 
ಮನುಷ್ಯನು ಸುಖವಾಗಿ ನೆಮ್ಮದಿಯಿಂದ ಸುಂದರ ಬದುಕನ್ನು ಹೊಂದಬೇಕಾದರೆ ಯಾವ ಮಾರ್ಗದಲ್ಲಿ ಹೋಗಬೇಕೆಂಬುದನ್ನು ಈ ವೇದಮಂತ್ರವು ಅತ್ಯಂತ ಮನೋಜ್ಞವಾಗಿ ತಿಳಿಸಿಕೊಡುತ್ತದೆ. ಮಂತ್ರದ ಭಾವಾರ್ಥ ನೋಡಿ… 
ಹೇ ಮನುಜರೇ, ನಿಮ್ಮ ಬದುಕು ಹೇಗೆ ಸಾಗಿದರೆ ಸುಂದರವಾಗಬಲ್ಲದೆಂಬುದಕ್ಕೆ ಈ ಕೆಲವು ವಿಚಾರಗಳನ್ನು ಗಮನವಿಟ್ಟು ಕೇಳಿ….
ಯಾವುದು ಪ್ರಾಚೀನವೋ ಮತ್ತು ಯಾವುದು ನೂತನವೋ?, ಯಾವುದು  ನಿಮ್ಮ ಅಂತ:ಕರಣದಿಂದ ಉದ್ಭವಿಸುವುದೋ, ಹಾಗೂ   ಯಾವುದು ಶಾಸ್ತ್ರರೂಪದಲ್ಲಿ ಉಪದೇಶಿಸಲ್ಪಡುತ್ತದೋ ಎಲ್ಲಕ್ಕೂ ಕಿವಿಗೊಡು….ಆದರೆ ಯಾವುದು ನಿಮ್ಮನ್ನು ಕಲ್ಯಾಣಮಾರ್ಗದಲ್ಲಿ ನಡೆಸುತ್ತದೋ ಅದರ ಹಿಂದೆ ನಿಮ್ಮ ಜೀವನ ರಥಗಳು ಸಾಗಲಿ…..
ವೇದದ ಈ ಕರೆ ಯಾರಿಗೆ ಬೇಡ ?  ಯಾವ ಕಾಲಕ್ಕೆ ಬೇಡ ?  ಯಾವ ದೇಶಕ್ಕೆ ಬೇಡ? .. ಯಾವುದೇ ಮತ ಗ್ರಂಥಗಳು ಕೊಡುವ ಕರೆಗೂ ವೇದದ ಕರೆಗೂ ತುಲನೆ ಮಾಡುವುದು ಕಷ್ಟವೇನಲ್ಲಾ! ಅಲ್ಲವೇ?  ಈ ಮಾರ್ಗದಲ್ಲಿ ಹೋದರೆ ಮಾತ್ರ ನಿನಗೆ ಮುಕ್ತಿ!! ಎಂದು ವೇದವು ಕರೆ ಕೊಡಲಿಲ್ಲವೆಂಬುದನ್ನು ವಿಚಾರವಂತರು ಗಮನಿಸಬೇಕು. ಅಲ್ಲವೇ?
 ವೇದವನ್ನಾಗಲೀ ಇತರ ಯಾವುದೇ ಪ್ರಾಚೀನ ಗ್ರಂಥವನ್ನಾಗಲೀ ನೋಡಿದಾಗ  ಇಡೀ ವಿಶ್ವದ ಜನರು ಒಂದೇ ಕುಟುಂಬದವರು ಎಂದು ಸಾರುತ್ತದೆ. " ಸರ್ವೇ ಭದ್ರಾಣಿ ಪಶ್ಯಂತು ,ಮಾ ಕಷ್ಚಿತ್ ದು:ಖ ಭಾಗ್ಭವೇತ್" ಎಂದು ಕರೆಕೊಡುವ ಮಂತ್ರಗಳಲ್ಲಿನ ಅರ್ಥ ಬಲು ವಿಶಾಲ ಮನೋಭಾವನೆ ಹೊಂದಿದೆ.

“ಹಿಂದು” ಮತವಾಗಿದ್ದು ಯಾವಾಗ?

ನಾನು ಮುಂಚೆಯೇ ತಿಳಿಸಿದಂತೆ  ಹಿಂದು ಎನ್ನುವುದು  ನಮ್ಮ ರಾಷ್ಟ್ರೀಯತೆಯ ಹೆಸರು. ಈ ರಾಷ್ಟ್ರದ ಹೆಸರು. ಹಿಂದುಸ್ಥಾನದಲ್ಲಿ ಹುಟ್ಟಿದವ ಹಿಂದು ಅಷ್ಟೆ.  ಹಾಗಾದರೆ ಇಲ್ಲಿ ಮುಸಲ್ಮಾನರು, ಕ್ರೈಸ್ತರು, ಸಿಕ್ಖರು, ಭೌದ್ಧರು ಮುಂತಾದವರು ಈ ದೇಶದಲ್ಲಿ ಹುಟ್ಟಿಲ್ಲವೇ? ಅವರೆಲ್ಲಾ ಹಿಂದುಗಳೇ?
ಹೌದು , ಮೊದಲು ಎಲ್ಲರೂ ಹಿಂದುವೇ, ಆನಂತರ  ಅವರವರ ಮತವನ್ನು ಹೇಳಿಕೊಳ್ಳುವುದರಲ್ಲಿ ತಪ್ಪಿಲ್ಲ. “ನಾನು ಹಿಂದು” ನನ್ನ ಪೂಜಾಪದ್ದತಿಯಂತೆ ನಾನು ಕ್ರೈಸ್ತ, ನಾನು ಮುಸ್ಲಿಮ್……ಯಾರು ಬೇಡವೆಂದವರು. “ಏಕಂ ಸತ್, ವಿಪ್ರಾ ಬಹುದಾ ವದಂತಿ” ಎಂದು ತಾನೇ ನಮ್ಮ ಋಷಿಮುನಿಗಳು ಹೇಳಿರುವುದು. ಯಾರೇ ಆಗಲೀ ನಾನು  ಕ್ರೈಸ್ತ ಮತೀಯ, ನಾನು ಮುಸ್ಲಿಮ್ ,ಎಂದು ಹೇಳಿಕೊಳ್ಳುವುದರಲ್ಲಿ ತಪ್ಪಿಲ್ಲ. ಅದು ಅವರ ಪೂಜಾ ಪದ್ದತಿ. “ದೇವನೊಬ್ಬ ನಾಮ ಹಲವು, ಅಷ್ಟೆ. ಕೃಷ್ಣನೆನ್ನುವರು ಕೃಷ್ಣ ನೆನ್ನಲಿ, ಕ್ರಿಸ್ತ ನೆನ್ನುವರು ಕ್ರಿಸ್ತ ಎನ್ನಲಿ. ಆದರೆ ಎಲ್ಲರೂ ಭಾರತೀಯ ಎನ್ನಬಹುದು ಅಥವಾ ಹಿಂದು ಎನ್ನಬಹುದು. ಎರಡೂ ಅಷ್ಟೇ ಸಮಾನ ಪದಗಳು.
ಸಾಮಾನ್ಯವಾಗಿ  ಪೂರ್ವದಿಂದಲೂ ನಮ್ಮನ್ನು ಆರ್ಯರು, ಸನಾತನಿಗಳು, ವೈದಿಕರು ಎನ್ನುವ ರೂಢಿ   ಯಿತ್ತು. ಆರ್ಯ ಎಂದರೆ ಶ್ರೇಷ್ಠ ಎಂದು ಅರ್ಥ ಅಷ್ಟೆ. ದೇವನಿರ್ಮಿತ ದೇಶದಲ್ಲಿರುವವರೆಲ್ಲರೂ ಆರ್ಯರೇ ಹೌದು. ನಮ್ಮದು ಅತ್ಯಂತ ಪುರಾತನವಾದ  ಸಂಸ್ಕತಿಯಾದ್ದರಿಂದ “ಸನಾತನಿ” ಎನ್ನುವ ಹೆಸರು ಬಂತು.ವೇದವನ್ನು ನಂಬುವವರಾದ್ದರಿಂದ ವೈದಿಕರೆಂದೂ ಕರೆಯುತ್ತಾರೆ.
ಸರಿ, ಹಾಗಾದರೆ ಹಿಂದು ಮತವಾಗಿದ್ದು, ಯಾವಾಗ?
ಯಾವಾಗ  ಕ್ರೈಸ್ತರು,  ಮುಸ್ಲ್ಮಾನರು, ತಮ್ಮ ತಮ್ಮ ಮತಗಳಿಗೆ ಇಲ್ಲಿನ ಸನಾತನಿಗಳನ್ನು ಮತಾಂತರ ಮಾಡುತ್ತಾ ಹೋದರು, ಆಗ ಅನಿವಾರ್ಯವಾಗಿ ತಮ್ಮನ್ನು ತಾವು “ಹಿಂದು ಮತೀಯ ” ಎಂಬ ಮತದ ಹೆಸರಲ್ಲಿ ಸಂಘಟಿತರಾಗುತ್ತಾ ಹೋದರು. ಆದರೆ ಇಂದು “ಹಿಂದು” ಎಂಬುದು ರಾಷ್ಟ್ರವಾಚಕವಾಗುವುದರ ಬದಲು  ಮತದ ಹೆಸರಲ್ಲಿ ಹೆಚ್ಚು ಉಪಯೋಗವಾಗುತ್ತಿದೆ.
ಆದರೆ ಈ ದೇಶದಲ್ಲಿಹುಟ್ಟಿರುವ ಎಲ್ಲರೂ ಕೂಡ ಅವರ ಪೂಜಾ ಪದ್ದತಿ ಯಾವುದೇ ಇರಲಿ, ತಮ್ಮನ್ನು ತಾವು  ರಾಷ್ಟ್ರವಾಚಕವಾದ “ಹಿಂದು” ಎಂದು ಕರೆದುಕೊಳ್ಳುವುದರಲ್ಲಿ ಹೆಮ್ಮೆ ಪಡಬೇಕು. ಕಾರಣ ಅಂಥಹ ದೇವನಿರ್ಮಿತ ದೇಶದಲ್ಲಿ ನಮ್ಮ ಜನ್ಮ ವಾಗಿದೆ.  ಇಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. 

Wednesday, February 6, 2013

ದೂರವಾಣಿ ಮೂಲಕ ವೇದಮಂತ್ರ ಕಲಿಯುತ್ತಿರುವ ಅಕ್ಷಯ


ದೂರವಾಣಿ ಮೂಲಕ ಹಾಸನದ ತಾತನಿಂದ ಕಲಿತ ಮಂತ್ರಗಳನ್ನು ಹೇಳುತ್ತಿರುವ ಬೆಂಗಳೂರಿನಲ್ಲಿರುವ ಮೊಮ್ಮಗಳು ಅಕ್ಷಯ:-ಬಿಂದು ರಾಘವೇಂದ್ರ, ಬೆಂಗಳೂರು.