Pages

Saturday, March 27, 2010

ಪಾಣಿನಿ

ಒಂದು ಗುರುಕುಲ. ಗುರುಗಳಲ್ಲಿಗೆ ತಾಯಿಯೊಬ್ಬಳು ಬರುತ್ತಾಳೆ.ಜೊತೆಯಲ್ಲಿ ಅವಳ ಮಗು. ಗುರುಗಳಿಗೆ ಕೈ ಮುಗಿದು ಮಗನಿಗೆ ವಿದ್ಯಾದಾನ ಮಾಡಬೇಕೆಂದು ಪ್ರಾರ್ಥಿಸುತ್ತಾಳೆ. ಮಗುವಿನ ಕೈ ನೋಡಿದ ಗುರುಗಳು ಮಗುವಿನ ಹಸ್ತದಲ್ಲಿ ವಿದ್ಯಾರೇಖೆ ಯಿಲ್ಲವಾದ್ದರಿಂದ ಮಗುವಿಗೆ ವಿದ್ಯೆ ಹತ್ತುವುದಿಲ್ಲವೆಂದು ತಿಳಿಸಿ ಮಗುವನ್ನು ಹಿಂದಿರುಗಿ ಮನೆಗೆ ಕರೆದುಕೊಂಡು ಹೋಗಲು ಹೇಳುತ್ತಾರೆ.ತಾಯಿಯಾದರೋ ಪರಿಪರಿಯಾಗಿ ಬೇಡಿಕೊಂಡರೂ ಗುರುಗಳು ನಿರಾಕರಿಸಿಬಿಡುತ್ತಾರೆ.ದು:ಖದಿಂದ ಹಿಂದಿರುಗಿದ ಬಾಲಕ ಸ್ವಲ್ಪ ಸಮಯದ ಬಳಿಕ ಒಬ್ಬನೇ ಗುರುಗಳ ಹತ್ತಿರ ಪುನ: ಬರುತ್ತಾನೆ. " ಏಕೆ ಬಂದೆ?" ಗುರುಗಳಧ್ವನಿ ಗಡುಸಾಗಿರುತ್ತೆ. " ಗುರುಗಳೇ ವಿದ್ಯಾರೇಖೆ ಹೇಗಿರುತ್ತೆ?"-ಶಾಂತವಾಗಿ ಬಾಲಕ ಕೇಳುತ್ತಾನೆ.
ಬಾಲಕನೊಬ್ಬನನ್ನು ಕರೆದು ಅವನ ಹಸ್ತವನ್ನು ತೋರಿಸಿ "ವಿದ್ಯಾರೇಖೆ ಎಂದರೆ ಇದು, ನಿನಗೆ ಅದರ ಲೇಶ ಮಾತ್ರವೂ ಇಲ್ಲ. ನಿನಗೆಲ್ಲಿ ವಿದ್ಯೆ ಹತ್ತಲು ಸಾಧ್ಯ? ಹೊರಟು ಬಿಡು" ಗುರುಗಳು ಸಿಟ್ಟಿನಿಂದಲೇ ಹೇಳುತ್ತಾರೆ.
ಬಾಲಕ ಆಶ್ರಮದಿಂದ ಹೊರಗೆ ಹೋಗುತ್ತಾನೆ.ಸ್ವಲ್ಪ ಸಮಯದ ಬಳಿಕ ಗುರುಗಳಲ್ಲಿಗೆ ಮತ್ತೆ ಬರುತ್ತಾನೆ.ಗುರುಗಳಿಗೆ ಈಗಂತೂ ಅಸಾಧ್ಯವಾದ ಸಿಟ್ಟು ಬರುತ್ತೆ. ಸುಮ್ಮನೆ ನನ್ನ ಕಾಲ ಹರಣ ಮಾಡುತ್ತಿದ್ದಾನಲ್ಲಾ! ಬಾಲಕ ಶಾಂತವಾಗಿಯೇ ಗುರುಗಳಲ್ಲಿ ನಿವೇದಿಸಿಕೊಳ್ಳುತ್ತಾನೆ-" ಗುರುಗಳೇ, ಈಗ ವಿದ್ಯಾರೇಖೆ ಮೂಡಿದೆ ನೋಡಿ" -ಸುರಿಯುತ್ತಿದ್ದ ರಕ್ತವನ್ನು ಲೆಕ್ಕಿಸದೆ ಗುರುಗಳ ಮುಂದೆ ಕೈ ಚಾಚುತ್ತಾನೆ. ಬೆಣಚುಕಲ್ಲಿನಿಂದ ಬಾಲಕ ಕೈ ಮೇಲೆ ಗೆರೆ ಎಳೆದಿರುತ್ತಾನೆ.ಈ ದೃಶ್ಯವನ್ನು ನೋಡಿದ ಗುರುಗಳು ಬಾಲಕನನ್ನು ತಬ್ಬಿಕೊಂಡು " ಕಣ್ಣೀರಿಡುತ್ತಾ ನಿನ್ನಂತಹ ಛಲ ಇರುವ ವಿದ್ಯಾರ್ಥಿಗಲ್ಲದೆ ಇನ್ಯಾರಿಗೆ ನಾನು ವಿದ್ಯಾದಾನ ಮಾಡಲಿ? ನಿನಗೆ ಖಂಡಿತವಾಗಿಯೂ ಹೇಳಿಕೊಡುತ್ತೇನೆಂದು ಶಿಷ್ಯನನ್ನಾಗಿ ಸ್ವೀಕರಿಸುತ್ತಾರೆ. ಈ ಬಾಲಕನೇ ವ್ಯಾಕರಣವನ್ನು ರಚಿಸಿದ ಮಹಾ ಪಂಡಿತ " ಪಾಣಿನಿ"