Pages

Saturday, February 5, 2011

ವೇದಸುಧೆ ವಾರ್ಷಿಕೋತ್ಸವದ ಬಗ್ಗೆ ಸಂಪದ ಬ್ಲಾಗ್ ನಲ್ಲಿ ಅನಿಸಿಕೆಗಳು

ವೇದಸುಧೆ ವಾರ್ಷಿಕೋತ್ಸವದ ಬಗ್ಗೆ ಸಂಪದ ಬ್ಲಾಗ್ ನಲ್ಲಿ ಹಲವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.  ವೇದಸುಧೆಯ ಅಭಿಮಾನಿಗಳಿಗಾಗಿ ಕೆಲವನ್ನು ಇಲ್ಲಿ  ಪ್ರಕಟಿಸಲಾಗಿದೆ
------------------------------------------------
ವೇದಸುಧೆಯ ವಾರ್ಷಿಕೋತ್ಸವ ನಿಜಕ್ಕೂ ತುಂಬಾ ಚೆನ್ನಾಗಿ ನಡೆಯಿತು.
ಇದಕ್ಕೆ ಕಾರಣರಾದ ಶ್ರೀಧರ್ ಸರ್, ಕವಿ ನಾಗರಾಜ್ ಅವರಿಗೆ ಧನ್ಯವಾದ ತಿಳಿಸದಿದ್ದ್ರೆ ತಪ್ಪಾದೀತು.
ಡಾ.ಶ್ರೀವತ್ಸ ವಟಿ, ಡಾ.ವಿವೇಕ್, ಶ್ರೀ ದಕ್ಷಿಣಾಮೂರ್ತಿ, ನಾಗರಾಜ್ ದೀಕ್ಷಿತ್ ಮತ್ತು ವಿ.ಆರ್.ಭಟ್ ಇವರುಗಳ ವಿಚಾರ ಸಂಕಿರಣ ತುಂಬಾ ಸ್ವಾರಸ್ಯಕರವಾಗಿತ್ತು.
ಶ್ರೀ ಸುಧಾಕರ ಶರ್ಮ ರವರ ಹಿಂದಿನ ದಿನದ ಅಗ್ನಿಹೋತ್ರ (ದೈವಿಕ ಹೋಮ) ದ ಕಾರ್ಯಕ್ರಮದಿಂದ ಹಿಡಿದು, ಅವರು ನಡೆಸಿಕೊಟ್ಟ ಸಮನ್ವಯ ಭಾಷಣ, ಅವರು ಸರಳ ರೀತಿಯಲ್ಲಿ ವೇದಗಳ ಬಗ್ಗೆ ಅರ್ಥೈಸುವಿಕೆ, ಅದರಲ್ಲೂ ಉದಾಹರಣೆಯೊಂದಿಗೆ - ಎಲ್ಲವೂ ಅದ್ಭುತವಾಗಿತ್ತು.
ಹರೀಶ್ ಹೇಳಿದಂತೆ, ಪುಟಾಣಿ ಸಹನಾಳ ದೀಪನೃತ್ಯ, ಶ್ರೀಮತಿ ಲಲಿತಾ ರಮೇಶ್ ರ ಗಾಯನ (ಕವಿ ನಾಗರಾಜ್ ಅವರು ರಚಿಸಿ, ಲಲಿತಾ ಅವರೇ ರಾಗ ಸಂಯೋಜಿಸಿ ಹಾಡಿದ್ದು), ಕುಮಾರಿ ಶೃತಿ ಹಾಡಿದ ಓಂ ಸಚ್ಚಿದಾನಂದ ತ್ರಿದ್ವಮುಖವಾದ" - ಎಲ್ಲವೂ ಚೆನ್ನಾಗಿತ್ತು.
ಕಾರಣಾಂತರಗಳಿಂದ ಕವಿ ನಾಗರಾಜ್ ಅವರ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಇರಲಾಗಲಿಲ್ಲ. ಕ್ಷಮಿಸಿ ಸರ್.
-ಕಮಲ (ಚಿತ್ರ)
---------------------------
ಆತ್ಮೀಯ ಹರಿ, ಕಾರ್ಯಕ್ರಮದ ಬಗ್ಗೆ ಸು೦ದರ ವಿವರಣೆ ಕೊಟ್ಟಿದ್ದೀರಿ, ಬರಲು ಸಾಧ್ಯವಾಗದ ನನ್ನ೦ಥವರಿಗೆ ಕಣ್ಮು೦ದೆ ಕಾರ್ಯಕ್ರಮ ನಡೆದ೦ತಿತ್ತು. ಇನ್ನಷ್ಟು ವಿಚಾರಗಳನ್ನು ತಿಳಿಸುವ೦ಥವರಾಗಿ. ಆಯೋಜಿಸಿದ ಶ್ರೀಧರಣ್ಣ ಮತ್ತು ಕವಿ ನಾಗರಾಜರಿಗೆ ಅಭಿನ೦ದನೆಗಳನ್ನು ಸಲ್ಲಿಸಬೇಕು.
-ಹೊಳೇನರಸೀಪುರ ಮಂಜುನಾಥ
-------------------------------
Submitted by narabhangi on February 1, 2011 - 6:51pm.
ವೇದಗಳ ಬಗ್ಗೆ ಬಹಳಷ್ಟು ಜನರಿಗೆ ಅನೇಕ ತಪ್ಪು ಕಲ್ಪನೆಗಳು ಪೂರ್ವಾಗ್ರಹಗಳು ಅಲರ್ಜಿ ಇದೆ. ನಿಜಕ್ಕೂ ವೇದಗಳಲ್ಲಿನ ಸಾರ ಮರ್ಮ ಸ೦ದೇಶವನ್ನು ಮತ್ತೊಮ್ಮೆ ಕೆದಕಿ ನಮ್ಮಬದುಕಿಗೆ ಅಳವಡಿಸಿಕೊಳ್ಳಬೇಕಾದ ಅಗತ್ಯ ನಮ್ಮ ಮು೦ದಿದೆ. ಶ್ರೀಧರ್ ರವರ ಪ್ರಯತ್ನ ನಿಜಕ್ಕೂ ಸ್ತುತ್ಯಾರ್ಹ! ಅಲ್ಲಿನ ಚರ್ಚೆ ಸ೦ವಾದ ಪ್ರವಚನಗಳ ಬಗ್ಗೆಯೂ ಒ೦ದಿಶ್ತು ಬೆಳಕು ಚೆಲ್ಲುವ ಲೇಖನಗಳು ಮೂಡಿಬರಲಿ. ಹರೀಶ್ ಆತ್ರೆಯರ ನಿರೂಪಣೆ ಪ್ರಬುದ್ಧವಾಗಿದೆ.

ಭಾಷಣಗಳ ಧ್ವನಿ ಮುದ್ರಣ

ವೇದಸುಧೆಯ ಅಭಿಮಾನಿಗಳೇ,
ವೇದಸುಧೆಯ ವಾರ್ಷಿಕೋತ್ಸವವು ಮುಗಿದು ಒಂದು ವಾರ ಆಗುತ್ತಾ ಬಂತು. ಕಾರ್ಯಕ್ರಮವು ಯಶಸ್ವಿಯಾಗಿ ಮುಗಿದರೂ ಅಂದು ಹಾಸನದಲ್ಲಿ ವಿದ್ಯುತ್ ವ್ಯತ್ಯಯ ಇದ್ದುದರಿಂದ ಭಾಷಣಗಳ ಧ್ವನಿ ಮುದ್ರಣದಲ್ಲಿ ಜನರೇಟರ್ ಶಬ್ಧವು ಒಂದಿಷ್ಟು ಇಣುಕಿದ್ದು ಆಡಿಯೋ ಕೇಳಲು ಅಷ್ಟು ಹಿತವಾಗಿಲ್ಲ. ಅದನೆಲ್ಲಾ ಅಲ್ಪಸ್ವಲ್ಪ ಸರಿಪಡಿಸಿ ಪ್ರಕಟಿಸಬೇಕಾಗಿದೆ. ಆದರೆ ಸ್ಟುಡಿಯೋದವರು ಇನ್ನು ಒಂದುವಾರ ಊರಲ್ಲಿರುವುದಿಲ್ಲ. ಹಾಗಾಗಿ ವೇದಸುಧೆಯಲ್ಲಿ ಕಾರ್ಯಕ್ರಮದ ಧ್ವನಿಮುದ್ರಿಕೆಯನ್ನು ಪ್ರಕಟಿಸಲು ಇನ್ನೂ ಒಂದು ವಾರವಾದರೂ ಕಾಲಾವಕಾಶಬೇಕು.ಅಂತೂ ಅಲ್ಲಿ ನಡೆದ ಶ್ರೀ ಶರ್ಮರ ಉಪನ್ಯಾಸವನ್ನು ಕೇಳಲು ಹಲವರು ಆಸಕ್ತರಿದ್ದು ವೇದಸುಧೆಗೆ ಕರೆ ಮಾಡುತ್ತಿದ್ದಾರೆ.ಪ್ರಕಟಿಸುವುದು ನಿಶ್ಚಯವಾದರೂ ಸ್ವಲ್ಪ ವಿಳಂಬವಾಗುವುದು ನಿಜ. ದಿನಗಳುರುಳಿದಂತೆ  ಕೇಳುವ ಆಸಕ್ತಿ ಕಡಿಮೆ ಆಗುತ್ತದೆಂಬುದು ನಿಜವಾದರೂ ವಿಷಯವು ಗಂಭೀರವಾಗಿದ್ದು ಯಾವತ್ತಿಗೂ ಅದನ್ನು ಕೇಳಿದರೂ ಉಪಯುಕ್ತವೇ ಆಗಿದೆ.ಆದ್ದರಿಂದ ಸಾಧ್ಯವಾದಷ್ಟೂ ಎಲ್ಲವನ್ನೂ ನಿಧಾನವಾಗಿಯಾದರೂ ಪ್ರಕಟಿಸುತ್ತೇವೆಂಬುದನ್ನು ಎಲ್ಲರ ಗಮನಕ್ಕೆ ತರಬಯಸುತ್ತೇನೆ. ಈಗಾಗಲೇ ನಾಲ್ಕೈದು ಜನ ಅಭಿಮಾನಿಗಳು ಕಾರ್ಯಕ್ರಮದ ಡಿ.ವಿ.ಡಿ ತಮಗೆ ಬೇಕೆಂದು ತಿಳಿಸಿದ್ದಾರೆ. ಇನ್ಯಾರಿಗೆ ಬೇಕೆಂಬುದನ್ನು ಇನ್ನು ಒಂದುವಾರದಲ್ಲಿ ತಿಳಿಸಿದರೆ ಸೂಕ್ತ ವ್ಯವಸ್ಥೆಮಾಡಲಾಗುವುದು.4.7 GB ಸಾಮರ್ಥ್ಯದ  ಒಟ್ಟು ಆರು ಡಿ.ವಿ.ಡಿ ಗಳ ಸೆಟ್  ಸ್ಟುಡಿಯೊದವರು ಕೇಳುವ ಕನಿಷ್ಟ ಬೆಲೆಗೆ ನಿಮಗೆ ತಲುಪಿಸಲಾಗುವುದು.

ಮನದಾಳದಿಂದ

ವೇದಸುಧೆಯ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡ ಅಭಿಮಾನಿಗಳು ಒಬ್ಬೊಬ್ಬರಾಗಿ ತಮ್ಮ ಮನದಾಳದ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.ಇಂದು ಮೈಸೂರಿನ ಶ್ರೀ ಲಕ್ಷ್ಮೀನಾರಾಯಣರಾವ್ ತಮ್ಮ ಅನಿಸಿಕೆಗಳನ್ನು ವೇದಸುಧೆಯೊಡನೆ ಹಂಚಿಕೊಂಡಿದ್ದಾರೆ. ನಿಮಗೆಲ್ಲಾ ತಿಳಿದಿರುವಂತೆ ವೇದಸುಧೆಯು ಇನ್ನೂ ಒಂದು ವರ್ಷದ ಕೂಸು.ಅದು ಮಾಡಿದ್ದೆಲ್ಲಾ ಸರಿ ಎಂದು ಹೇಳಲು ಸಾಧ್ಯವಾದರೂ ಎಲ್ಲಿ? ಅಲ್ಲದೆ ಪ್ರಮುಖವಾಗಿ ಶ್ರೀ ಸುಧಾಕರಶರ್ಮರು ವೇದವನ್ನು ತಮ್ಮ ಮಾತುಗಳಲ್ಲಿ ಹೇಳುತ್ತಿರುವ ಸಂದರ್ಭಗಳಲ್ಲಿ ಅದು ಸತ್ಯವೆಂದು ತೋರದಿದ್ದಲ್ಲಿ ದಯಮಾಡಿ ನೀವು ವೇದಸುಧೆಗೆ ಬರೆಯ ಬೇಕು. ಯಾರೂ ಪರಿಪೂರ್ಣರಲ್ಲ. ಒಂದೊಮ್ಮೆ ಶರ್ಮರ ಅರ್ಥೈಸುವಿಕೆಯಲ್ಲಿ ತಪ್ಪಾಗಿದ್ದರೆ ಸರಿ ಎನಿಸಿದ್ದನ್ನು ಆಧಾರಪೂರ್ಣವಾಗಿ ಬರೆದರೆ ಒಳ್ಳೆಯದು.ಅಂತೂ ನಮ್ಮ-ನಿಮ್ಮ ಉತ್ತಮ ಬದುಕಿಗಾಗಿ ಒಂದಿಷ್ಟು ಸೂತ್ರಗಳು ವಿಚಾರಮಂಥನದಿಂದ ಲಭ್ಯವಾಗಬೇಕು. ಇದು ವೇದಸುಧೆಯ ಉದ್ಧೇಶ. ಅಂದು ವೇದಿಕೆಯಲ್ಲಿ ತಮ್ಮ ವಿಚಾರವನ್ನು ಹಂಚಿಕೊಂಡವರು ಕು|| ಶೃತಿ , ಸ್ವಾತಿಯಲ್ಲ. ಕು|| ಶೃತಿಯವರ ಮಾತು ಕೇಳುವಾಗ ಸಹಜವಾಗಿ ನನ್ನ ಮನದಲ್ಲಿ ಮೂಡಿದ್ದು" ಇವರಿಗಿನ್ನೂ ಚಿಕ್ಕ ವಯಸ್ಸು, ಈ ವಯಸ್ಸಿಗಾಗಲೇ ಹಲವಾರು ಗ್ರಂಥಗಳನ್ನು, ರಾಮಾಯಣ-ಮಹಾಭಾರತಗಳನ್ನು ಅಧ್ಯಯನ ಮಾಡಿ, ಎಲ್ಲೂ ಜೀವನಕ್ಕೆ ಬೇಕಾದ್ದು ಏನೂ ಸಿಗದಿದ್ದಾಗ ನಾನು ವೇದವನ್ನು ಅಧ್ಯಯನ ಆರಂಭಿಸಿದೆ" ಎನ್ನುವ ಮಾತು ಸೂಕ್ತವೆನಿಸಲಿಲ್ಲ. ಈ ಚಿಕ್ಕ ವಯಸ್ಸಿಗೆ ವೇದಾಧ್ಯಯನ ಮಾಡುತ್ತಿರುವ ಬಗ್ಗೆ ನನಗೆ ಅವರ ಬಗ್ಗೆ ಅಭಿಮಾನವಿದೆಯಾದರೂ ವಿಚಾರ ಮಂಡಿಸುವಾಗ ನನಗೆ ಏನೂ ಗೊತ್ತಿಲ್ಲ, ನನ್ನ ಅಲ್ಪ ತಿಳುವಳಿಕೆಯಲ್ಲಿ ನನಗೆ ಹೀಗೆ ಅನ್ನಿಸುತ್ತಿದೆ ಎಂದು ವಿಚಾರ ಮಂಡಿಸಿದ್ದರೆ ಚೆನ್ನಾಗಿತ್ತು, ಕೇಳುಗರ ಮೆಚ್ಚುಗೆಯೂ ಸಿಗುತ್ತಿತ್ತು. ಮೆಚ್ಚುಗೆಗೆ ಮಾತನಾಡಬೇಕೆಂದೇನೂ ಅಲ್ಲ. ಆದರೆ ಮಾತು ಹೇಗಿರಬೇಕೆಂದು ಶರ್ಮರು ಈಗಾಗಲೇ ಎಚ್ಛರಿಸಿದ್ದಾರಲ್ಲವೇ " ಮಾತಿನಲ್ಲಿ ಸತ್ಯ ವಿದೆಯೇ, ಪ್ರಿಯವಾಗಿದೆಯೇ?, ಹಿತವಾಗಿದೆಯೇ? ಎಂಬ ಎಚ್ಛರಿಕೆಯನ್ನು ಗಮನಿಸಬೇಕಲ್ಲವೇ? ತಂಗಿ ಶೃತಿಯವರಿಗೆ ಅಣ್ಣನಾಗಿ ಇದು ನನ್ನ ಕಿವಿಮಾತು. . ಈಗ ಶ್ರೀ ಲಕ್ಷ್ಮೀನಾರಾಯಣರ ಮಾತುಗಳನ್ನು ಕೇಳಿ. ನಂತರ ನಿಮ್ಮ ಅನಿಸಿಕೆಗಳನ್ನೂ ಹೇಳಿ. 
------------------------------------------

ಪ್ರೀತಿಯ ಶ್ರೀಧರ್,
ನಮನಗಳು. ಕಛೇರಿಯ ಕಾರ್ಯ ವತ್ತಡಗಳಿಂದ ನಿಮಗೆ ಪುನಃ ಬರೆಯಲಾಗಲ್ಲಿಲ್ಲ.
ಶ್ರೀ ಸುಧಾಕರ ಶರ್ಮರನ್ನು ಈ ಹಿಂದೆ ಬರೀ ಆಲಿಸಿ- ಕಂಡದ್ದು. ನಿಮ್ಮಿಂದಾಗಿ ಅವರನ್ನು ಪ್ರತ್ಯಕ್ಷ ಕಾಣುವ ಸೌಭಾಗ್ಯ ಬಂದಿತ್ತು. ಕಾರ್ಯಕ್ರಮದ ಹಿಂದಿನ ದಿನದ ಉಪನ್ಯಾಸ ಕೈ ತಪ್ಪಿದ ಕೊರಗು ಇನ್ನೂ ಇದೆ.
ಹೀಗಿದ್ದರೂ ನೀವು ಕೇಳಿಸುವಿರಲ್ಲ. ಅವರ ಎಲ್ಲಾ ಭೌದ್ಧಿಕ್ ಗಳನ್ನೂ ನಿಧಾನವಾಗಿ ಅಧ್ಯಯನ ಮಾಡಬೇಕಿದೆ.

ಕಾರ್ಯಕ್ರಮದ ವ್ಯವಸ್ಥೆ ಅಚ್ಚುಕಟ್ಟು ಇವುಗಳ ಬಗ್ಗೆ ಎರಡು ಮಾತಿಲ್ಲ. ತಪ್ಪು ತಿಳಯದಿದ್ದಲ್ಲಿ ವಿಚಾರ ಸಂಕಿರಣದ ಮೌಲ್ಯ ಮಾಪನ ವಸ್ತುನಿಷ್ಟವಾಗಿ ಮಾಡುವ ಪ್ರಯತ್ನ ಮಾಡಿ. ಹೊರಗಿನ ಯಾವುದೇ ವಿದ್ವಾಂಸ/ಬುದ್ಧಿಜೀವಿ/ಉಪದೇಶಿಗರನ್ನು ಕರೆಯದೆ, ಸುಧೆಯ ಬಳಗದವರನ್ನೆ ಆರಿಸಿಕೊಂಡದ್ದು ಉಚಿತವೇ ಆಗಿದ್ದಾಗ್ಯೂ ನಿಜಕ್ಕೂ ಒಬ್ಬಿಬ್ಬರನ್ನು ಬಿಟ್ಟಲ್ಲಿ ಉಳಿದವರದ್ದು ಹೆಚ್ಚಿನ ಮೌಲಿಖವೆನಿಸಲಿಲ್ಲ. ವಸ್ತುವಿನ ಅಗಾಧ ಹರವು ಮತ್ತು ಅಷ್ಟೇ ಸಮಯದ ಅಭಾವದ ತೊಂದರೆ ಕಾರಣವಿರಬಹುದು.
ಮೊದಲಿಗೆ ಡಾ. ಶ್ರೀವತ್ಸ ಎಸ್ ವಟಿ ಯವರ ಮಾತು ಉಪಯುಕ್ತವೆನಿಸಿದ್ದಾಗ್ಯು ಸುಭಾಷಿತ ಸಂಗ್ರಹಗಳ ಮಂಡನೆ ಎನಿಸಿತ್ತು. ಸಾಕಷ್ಟು ಓದು ಅಧ್ಯಯನ ಗಳಿದ್ದರೂ ಒಂದೊಂದರ ಸುಸಂಭದ್ದತೆಯ ಕೊರತೆ ಎದ್ದು ತೋರಿತು. ಅವರು ನೀಡಿದ ಮಾಹಿತಿಗೆ ನಾವು ಉಪಕೃತರು. ಡಾ||ವಿವೇಕ್ ನಿಜಕ್ಕೂ ಅಚ್ಚುಕಟ್ಟಾಗಿ ವಿಷಯ ಮಂಡಿಸಿ, ಆಯುರ್ವೇದದ ಮಹತ್ವದ ಸಂಕ್ಷಿಪ್ತ ದರ್ಶನ - ಮಾಡುವಲ್ಲಿ ಯಶಸ್ವಿಯಾದರು. ಅವರ ಅರಿವು, ಮಾತುಗಳ ಖಚಿತತೆ, ನಿರೂಪಣೆ ನೈಜಾರ್ಥವನ್ನು ತಲಪಿಸುವಲ್ಲಿ ತೋರಿದ ಜಾಣ್ಮೆ ಕೇಳುಗರ ಬುದ್ಧಿ ಮನಸ್ಸುಗಳಿಗೆ ಪ್ರಚೋದನೆ ನೀಡಿದೆಎನ್ನಬಹುದು.ಶ್ರೀ ನಾಗರಾಜ ದೀಕ್ಷಿತ್ ರವರು ಪ್ರಸ್ತಾಪಿಸಿದ ವ್ಯಾಸ, ಶುಕ, ಕೃಷ್ಣ ರಂದ್ರ, BIG BANG THEORY ,ಸಾವಿರದ ಮುವತ್ತೊಂದರ ಶಾಖೆಯಲ್ಲಿ ಉಳಿದಿರುವುದು ಕೇವಲ ಹನ್ನೊಂದೇ ಎಂಬ ಸಂಕಟದ ಮಾತು ಕೊನೆಗೆ , ಈಗಿನ ವಿಜ್ಞಾನದಲ್ಲಿ " ಅವಿಷ್ಕಾರಗಳಿಲ್ಲ ಕೇವಲ ಸಂಶೋಧನೆ ಮಾತ್ರ" ಎಂಬೆಲ್ಲಾ ಕೇಳಲು ಹಿತವಾದ ಮಾತೆಲ್ಲಾ ಉತ್ಪ್ರೇಕ್ಷೆ ಅಲ್ಲವಾಗಿದ್ದೂ- ಕೊನೆಯಲ್ಲಿ ಶ್ರೀ ಶರ್ಮರ ಯಾವುದೇ ENDORSEMENT ಇಲ್ಲದೆ ರಂಜನೆ ಎನಿಸಿತು. ಶ್ರೀ ಶರ್ಮರು ತಮ್ಮ ಸಮನ್ವಯ ಮಾತಲ್ಲಿ ಇವರ ಕಳಾಜಿಯ ವಿನಃ ಉಳಿದ ಯಾವುದೇ ಮಾತನ್ನು ಅಷ್ಟು ಸೀರಿಯಸ್ಆಗಿ ಪರಿಗಣಿಸಲಿಲ್ಲವೆಂದೆ ತೋರಿತು.ಗತ ವೈಭವ ಉಪಯೋಗವಿಲ್ಲ, ಜೀವಂತವಿರುವುದನ್ನು ಉಳಿಸಿ ಬೆಳಸಿರೆಂಬ ಅವರ ಖಚಿತ ಮಾತು ,ದೀಕ್ಷಿತರ ಜಾಡಿಗಿಂತ ಪೂರ್ಣ ಭಿನ್ನ. ಇನ್ನು ವಿಚಾರ ಸಂಕಿರಣವನ್ನು ಶಾಲಾ ಮಕ್ಕಳ ಚರ್ಚಾಸ್ಪರ್ದೆಯನ್ನಾಗಿ ಭಾವಿಸುವಂತೆ ಮಾಡಿದ್ದು ಕು||ಸ್ವಾತಿಯವರ ಮಾತು. ಘಂಠಾಘೋಷವಾಗಿ ಎಂಬ ಪದವನ್ನು ಹೇಳದೆ,ಯಾವ ಮೇಜನ್ನು ಗುದ್ದದೆ ತಮ್ಮ ಮಾತನ್ನು ಮುಗಿಸಿದ್ದುದು ತಮಾಷೆ ಎನಿಸಿತು. ಅವರ ಹತ್ತಾರು ವರುಷಗಳ ಅಧ್ಯಯನದ ಅರಿವನ್ನು ಅವರು ನಮ್ಮೊಡನೆ ಹಂಚಿಕೊಳ್ಳಲೇ ಇಲ್ಲ. ಏಕೆ ಇಲ್ಲಿ , ಈ ಸಭೆಯಲ್ಲಿ 'ಮಹಿಳೆಯರಿಗೆ ವೇದಾಧ್ಯಯನದ ಅಧಿಕಾರವಿಲ್ಲ'ವೆಂಬ ವಿಚಾರವನ್ನು ಪ್ರಸ್ತಾಪಿಸಿ ಅದನ್ನು ತಾವಿಲ್ಲಿ ಗಟ್ಟಿಯಾಗಿ ವಿರೋಧಿಸಿ ಪಂಥಾಹ್ವಾನ ನೀಡಲು ಬಯಸಿದರೆಂಬುದು ತಿಳಿಯಲಿಲ್ಲ. ಉಳಿದಂತೆ ಶ್ರೀ ದಕ್ಷಿಣಾಮೂರ್ತಿ ಹಾಗು ಶ್ರೀ ವಿ .ಆರ್ .ಭಟ್ ರವರ ಮಾತಲ್ಲಿ ಹೆಚ್ಚಿನ ಯಾವ ಹೊಸ ಹೊಳಹು ಕಾಣಬರಲಿಲ್ಲ. ಹೀಗೆಲ್ಲಾ ಬರೆದನೆಂದ ಮಾತ್ರಕ್ಕೆ ಅವರ ಅಧ್ಯಯನ,ಕಾಳಜಿ ಗಳಬಗ್ಗೆ ನನ್ನ ನಮ್ರ ಗೌರವಪೂರ್ಣ ಅಭಿನಂದನಾ ವಂದನೆಗಳನ್ನು ತಿಳಸದೆ ಮುಗಿಸಿದಲ್ಲಿ ನನ್ನದು ಅಕ್ಷಮ್ಯವಾಗುತ್ತದೆ.

ಇನ್ನು ಶ್ರೀ ಶರ್ಮರ ಸಮನ್ವಯದ ಮಾತನ್ನು ನೋಟ್ ಮಾಡಿಕೊಂಡಿರುವೆ. ಸಾಕಷ್ಟು ನೆನಪಿಸಿಕೊಂಡು ಮತ್ತೆ, ಮತ್ತೆ ಯೋಚಿಸಿ ನನ್ನ ಅರಿವಿಗೆ ಸಿಲುಕಿದ್ದಸ್ಟು, ನನ್ನ ಬೊಗಸೆಗೆ ದಕ್ಕಿದ್ದಷ್ಟು ತಿಳಿಸುವ ಪ್ರಯತ್ನ ಮಾಡುವೆ.
ಪ್ರಿತಿಪೂರ್ವಕವಾಗಿ
ನಮನಗಳೊಂದಿಗೆ,
ಬಿ. ಯಸ್ .ಲಕ್ಷ್ಮೀನಾರಾಯಣರಾವ್
February 5, 2011 2:09 AM