Pages

Wednesday, March 14, 2012

ಶುಭೋದಯ ಶುಭವಾಗಲೆಂದು ಹರಸು ಓ ಶುಭವೇ  

ಶುಭವಾಗಲೆಂದು ಹರಸು ಓ ಶುಭವೇ ನಿನ್ನ 

ಹಾರೈಕೆಯೇ ನೀಡಿ ಎನಗೆ ಶುಭವ ಅಶುಭವಳಿಯೆ 

ಶುಭವಿಂದು ಹೊಳೆಯೆ ದಿನವೆಲ್ಲ ಮಂಗಳದಿ ಕಳೆಯೆ 

ಶುಭವಾಗಲೆಂದು ಹರಸು

ಓ ಶುಭವೇ ಮನದ ಕಶ್ಮಲವನು ತೊಳೆದು

ಸತ್ವದ ಜ್ಞಾನವದು ಬೆಳೆದುತತ್ವವದು ಬೆಳಕಾಗಿ

 ಹೊಳೆದುನಾನೆತ್ತರಕೆ ಬೆಳೆದು, 

ಬಾಳುವಂತೆ ಶುಭವಾಗಲೆಂದು ಹರಸು

 ಓ ಶುಭವೇ ಕೊರಗುವ ಮನವಿಂದು ತಿಳಿಯಾಗಲೆಂದು

 ದ್ವೇಷಾಸೂಯಗಳು ಅಳಿಯಲೆಂದು

 ಪ್ರೇಮಾಭಿಮಾನಗಳು ಬೆಳೆಯಲೆಂದು ನಾ, 

ಎಲ್ಲರೊಳು ಒಂದಾಗಿ ಬಾಳಲೆಂದು

ಶುಭವಾಗಲೆಂದು ಹರಸು

 ಓ ಶುಭವೇ ಶುಭವಾಗಲೆಂದು ಹರಸು ಓ ಪ್ರಭುವೇ


ಶ್ರದ್ಧಾಂಜಲಿ



"ಅನಾಯಾಸೇನ ಮರಣಂ ವಿನಾಧೈನ್ಯೇನ ಜೀವನಂ " -ಅನ್ನೋ ಮಾತು ಕೇಳಿದ್ದೆ. ನಿನ್ನೆ ನಮ್ಮನ್ನಗಲಿದ ನನ್ನ ಮಿತ್ರ ಶ್ರೀ ದಾಸೇಗೌಡರ ವಿಷಯದಲ್ಲಿ    ಆ  ಮಾತು  ನಿಜವಾಯ್ತು. ಜೀವವಿರುವಾಗ ದೇಹೀ ಅನ್ನುವ ಪರಿಸ್ಥಿತಿ ಬರಲಿಲ್ಲ. ಅನಾಯಾಸವಾಗಿ ಐದು ನಿಮಿಷದಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಯ್ತು.

ಶ್ರೀ ದಾಸೇಗೌಡರು ಬಲು ಅಪರೂಪದ ವ್ಯಕ್ತಿ. ಅವರ ಬಗ್ಗೆ ನಾನು ಮಾತನಾಡುವ ಮುಂಚೆ ಅವರ ಬಗ್ಗೆ ಈಗ ತಾನೇ ಬಂದ ಒಂದು ಎಸ್.ಎಂ.ಎಸ್  ಸಂದೇಶವನ್ನು  ಯಥಾವತ್ತಾಗಿ ನಿಮ್ಮ ಗಮನಕ್ಕೆ ತಂದು ಬಿಡುವೆ. ಸಂದೇಶವನ್ನು ಕಳಿಸಿದವರು ರಾಷ್ಟ್ರೀಯ ಸ್ವಯಂಸೇವಕ ಸಂಘದ [R.S.S]  ಅಖಿಲ ಭಾರತ ಸಹ ಸರಕಾರ್ಯವಾಹ [All India  Joint General Secretary] ಮಾನನೀಯ ಶ್ರೀ ದತ್ತಾತ್ರೇಯ ಹೊಸಬಾಳೆ ಅವರು-" It is a personal loss to me" 

 ಶ್ರೀ ದತ್ತಾತ್ರೇಯ ಹೊಸಬಾಳೆಯವರು ಸಂಘದ ಪೂರ್ಣಾವಧಿ ಪ್ರಚಾರಕರು. ಅಷ್ಟೇ ಅಲ್ಲ.ಸಂಘದಲ್ಲಿ  ಅತ್ಯಂತ  ಉನ್ನತ ಜವಾಬ್ದಾರಿಯನ್ನು ಹೊತ್ತಿರುವವರು. ಅವರಿಗೆ "ಸ್ವಂತಕ್ಕೆ ನಷ್ಟ" ಎಂದರೆ ನಾವಾದರೂ ಊಹಿಸಬೇಕು. ಅವರಿಗೆ ಸ್ವಂತದ್ದು ಅಂತಾ ಏನೂ ಬಯಕೆಗಳಿಲ್ಲ. ಎಲ್ಲವೂ ಸಂಘಕ್ಕಾಗಿ, ಸಮಾಜಕ್ಕಾಗಿ. ಅಂತವರು ಈ ಮಾತು ಹೇಳಬೇಕೆಂದರೆ ಅದು ರಾಷ್ಟ್ರೀಯ ನಷ್ಟವೆಂದೆ ಭಾವಿಸ ಬೇಡವೇ.

ಕಳೆದ ಆರೇಳು ತಿಂಗಳಲ್ಲಿ  ಹಾಸನಕ್ಕೆ ಆಗಮಿಸಿದ್ದ ಕರ್ನಾಟಕ ಸರ್ಕಾರದ ಮಂತ್ರಿಗಳಾದ ಶ್ರೀ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರು ಶ್ರೀ ದಾಸೆಗೌದರ ಬಗ್ಗೆ ಹೇಳಿದ ಮಾತು"  ಶ್ರೀ ದಾಸೆಗೌಡರು ಸಮಾಜದ ಕೆಲಸದಲ್ಲಿ ನನಗಿಂತ ಹಿರಿಯರು. ನನಗಿಂತ ಮುಂಚಿನಿಂದಲೂ ಸಂಘಕಾರ್ಯ, ABVP ಕೆಲಸ  ನಂತರ BJP ಯ ಹೊಣೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಬಂದ ಶ್ರೀ ದಾಸೆಗೌಡರಿಗೆ ರಾಜಕೀಯ ಸ್ಥಾನಮಾನವೇನೂ ಇಲ್ಲ ಎಂದರೆ ಆಶ್ಚರ್ಯವಾಗುತ್ತೆ.

 1975 ರ ಸುಮಾರಿನಲ್ಲಿ ದೇಶಕ್ಕೆ ತುರ್ತುಪರಿಸ್ಥಿತಿ ಬಂದಾಗ ದಾಸೇಗೌಡರು  ABVP [ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ] ನ  ಪೂರ್ಣಾವಧಿ ಕಾರ್ಯ ಕರ್ತರು.ನಾನು ಸಂಘದ ಕಾರ್ಯಕರ್ತ. ಅಬ್ಭಾ! ಅದೆಷ್ಟು ಕ್ರಿಯಾಶೀಲ ವ್ಯಕ್ತಿ! ಅದ್ಭುತ! ಅದ್ಭುತ!!  ಕಾರ್ಯಕರ್ತರ  ನಡುವೆ ಅವರು ಬೆರೆಯುತ್ತಿದ್ದ ಅವರ ಸ್ವಭಾವವಂತೂ ಎಲ್ಲರನ್ನೂ ಆಕರ್ಶಿಸಿತ್ತು .  ಕರ್ನಾಟಕದ ಮೂಲೆ ಮೂಲೆಗಳಲ್ಲಿ ದಾಸೆಗೌಡರ ಪರಿಚಿತರು ಈಗಲೂ ಇದ್ದಾರೆ. 

ಅವರು ನಡೆಸುತ್ತಿದ್ದ  ಹೊಯ್ಸಳ ಟೂರಿಸಂ  ಪತ್ರಿಕೆಗಾಗಿ ಬೇಲೂರಿನ ಡಾ.ಶ್ರೀವತ್ಸವಟಿಯವರೊಡನೆ ನಾವುಗಳು ಹಾಸನ ಜಿಲ್ಲೆಯ ಹಲವು ಊರುಗಳನ್ನು ಭೇಟಿ ಮಾಡಿ ಅಲ್ಲಿನ ದೇವಾಲಯಗಳ ಬಗ್ಗೆ ಮಾಹಿತಿ ತಂದು ಅವರ ಪತ್ರಿಕೆಯಲ್ಲಿ ಬರೆಯುತ್ತಿದ್ದೆವು.  ಅವರ ಕಲ್ಪನೆಯಾದರೋ ಬಲು ದೊಡ್ಡದು. ಹೊಯ್ಸಳ ಅಧ್ಯಯನ  ಕೆಂದ್ರವನ್ನು ತಮ್ಮ ಮನೆಯಲ್ಲೇ ತೆರೆಯ ಬೇಕೆಂದು ಅದಕ್ಕೆ ಪೂರಕವಾಗಿ ಅವರ ಮನೆಯನ್ನೂ ಸಹ ಇತ್ತೀಚಿಗೆ ಕಟ್ಟಿದ್ದರು. ಮನೆಯ ಮೇಲೊಂದು ಪಿರಿಮಿಡ್ ಧ್ಯಾನ ಮಂದಿರ. ಅಧ್ಯಯನ ಕೇಂದ್ರಕ್ಕೆ ಅಗತ್ಯವಾದ ಕೊಠಡಿಗಳು, ಸಭಾಂಗಣ. ಅವರ ಕಲ್ಪನೆಯ ಎಲ್ಲವೂ ಸಾಕಾರಗೊಳ್ಳುವ ಹಂತಕ್ಕೆ  ಬಂದಿತ್ತು. ಅಷ್ಟರಲ್ಲಿ  ಗೆಳೆಯ ಕಣ್ಮರೆಯಾದರು. ವೇದಸುಧೆಯನ್ನು ಬಹುವಾಗಿ ಪ್ರೀತಿಸುತ್ತಿದ್ದ  ಶ್ರೀ ದಾಸೆಗೌಡರಿಗೆ ವೇದಸುಧೆಯ ಪರವಾಗಿ ಸದ್ಗತಿಯನ್ನು ಕೋರುತ್ತೇನೆ. ಪತ್ನಿ ಒಬ್ಬ ಪುತ್ರ ನನ್ನು ಅಷ್ಟೇ ಅಲ್ಲ, ನನ್ನಂತಹ  ಸಹಸ್ರಾರು ಅಭಿಮಾನಿಗಳನ್ನು ಬಿಟ್ಟು ಹೋಗಿರುವ ದಾಸೇಗೌಡ ರ ಕುಟುಂಬಕ್ಕೆ ಅವರು ಇಲ್ಲದಿರುವಿಕೆಯನ್ನು ಸಹಿಸುವ ಶಕ್ತಿಯನ್ನು ದೇವರು ಕೊಡಲೆಂದು ಭಗವಂತನಲ್ಲಿ ಪ್ರಾರ್ಥಿಸುವೆ. 
ದಾಸೆಗೌಡರೊಡನೆ ಕಳೆದ ಕ್ಷಣಗಳ ಸ್ಮರಣೆ 


 
ನಮ್ಮ ಮನೆಯಲ್ಲಿ   ಡಾ.ಶ್ರೀವತ್ಸ ಎಸ್.ವಟಿಯರ ಸಂದರ್ಶನ ಮಾಡಿದಾಗ. 


 



 

ಕೊನೆಯ ನಗುವೆಂದು ನಾನಂದು ಭಾವಿಸಿರಲಿಲ್ಲ.