ಋಗ್ವೇದದ ಒಂದು ಮಂತ್ರ ಏನು ಹೇಳುತ್ತದೆ, ನೋಡೋಣ.
ದೇವಾ ಏತಸ್ಯಾಮವದಂತ ಪೂರ್ವೇ
ಸಪ್ತಋಷಯಸ್ತಪಸೇ ಯೇ ನಿಷೇದುಃ |
ಭೀಮಾ ಜಾಯಾ ಬ್ರಾಹ್ಮಣಸ್ಯೋಪನೀತಾ
ದುರ್ಧಾಂ ದಧಾತಿ ಪರಮೇ ವ್ಯೋಮನ್ ||
[ಋಕ್. ೧೦.೧೦೯.೪]
ಅರ್ಥ:
ಯೇ = ಯಾವ
ಸಪ್ತ ಋಷಯಃ = ಪಂಚ ಜ್ಞಾನೇಂದ್ರಿಯಗಳು ಮತ್ತು ಮನಸ್ಸು ಬುದ್ಧಿಗಳು
ತಪಸೇ ನಿಷೇಸುದುಃ = ಜ್ಞಾನಸಾಧನೆಗಾಗಿ ಅವಸ್ಥಿತವಾದವೋ
ಪೂರ್ವೇ ದೇವಾ: = ಆ ಶ್ರೇಷ್ಠದಿವ್ಯ ಶಕ್ತಿಗಳು
ಏತಸ್ಯಾಮ್ = ಇವಳಲ್ಲಿ
ಅವದಂತ = ಉಪದೇಶಮಾಡುತ್ತವೆ
ಬ್ರಾಹ್ಮಣಸ್ಯ = ಬ್ರಾಹ್ಮಣನ-ಬ್ರಹ್ಮವೇತ್ತನ
ಭೀಮಾ ಜಾಯಾ = ಮಹಾತೇಜಸ್ವಿಯಾದ ಪತ್ನಿಯು
ಉಪನೀತಾ = ಉಪನೀತಳಾಗಿ
ಪರಮೇ ವ್ಯೋಮನ್ = ಪರಮರಕ್ಷಕನಾದ ಪರಮಾತ್ಮನಲ್ಲಿ ಸ್ಥಿತಳಾಗಿ
ದುರ್ಧಾಮ್ = ಧರಿಸಲು ಕಷ್ಟಕರವಾದ ಯೋಗ್ಯತೆಯನ್ನು
ದಧಾತಿ =ಧರಿಸುತ್ತಾಳೆ
ಭಾವಾರ್ಥ :
ಈ ವೇದಮಂತ್ರವು ಸ್ತ್ರೀಯರು ವೇದವನ್ನು ಕಲಿಯಬಹುದೇ? ಬಾರದೇ ? ಅವರಿಗೆ ಉಪನಯನ ಸಂಸ್ಕಾರ ಮಾಡಬಹುದೇ ? ಬಾರದೇ? ಎಂಬುದಕ್ಕೆ ಎಂತಹ ಅದ್ಭುತ ಉತ್ತರವನ್ನು ಕೊಟ್ಟಿದೆ! ನಾವು ಮಂತ್ರದ ಆಳಕ್ಕೆ ಹೋಗಿ ಅರ್ಥಮಾಡಿಕೊಂಡಾಗ ನಮಗೆ ಇಂತಹ ಅನುಮಾನಗಳು ಮಾಯವಾಗಲೇ ಬೇಕು. ಈ ಮಂತ್ರ ಏನು ಕರೆ ಕೊಡುತ್ತದೆ?
ಪುರುಷನಂತೆಯೇ ಸ್ತ್ರೀಯರಿಗೂ ಕೂಡ ಜ್ಞಾನಸಾಧನೆಗಾಗಿ ಭಗವಂತನು ಪಂಚ ಜ್ಞಾನೇಂದ್ರಿಯಗಳು ಮತ್ತು ಮನಸ್ಸು ಬುದ್ಧಿಗಳನ್ನು ದಯಪಾಲಿಸಿದ್ದಾನೆ.ಪುರುಷನಂತೆಯೇ ಸ್ತ್ರೀ ಕೂಡ ಜ್ಞಾನಸಾಧನೆ ಮಾಡಬಲ್ಲಳು. ಬ್ರಾಹ್ಮಣನ-ಬ್ರಹ್ಮವೇತ್ತನ ಮಹಾತೇಜಸ್ವಿಯಾದ ಪತ್ನಿಯು ಉಪನೀತಳಾಗಿ ಪರಮರಕ್ಷಕನಾದ ಪರಮಾತ್ಮನಲ್ಲಿ ಸ್ಥಿತಳಾಗಿ ಧರಿಸಲು ಕಷ್ಟಕರವಾದ ಯೋಗ್ಯತೆಯನ್ನು ಧರಿಸುತ್ತಾಳೆ. ಈ ವೇದಮಂತ್ರದ ಮೊದಲ ಭಾಗವನ್ನು ಒಪ್ಪಿದರೂ ಎರಡನೆಯ ಭಾಗದಲ್ಲಿ ಬ್ರಾಹ್ಮಣನ ಮಹಾತೇಜಸ್ವಿಯಾದ ಪತ್ನಿಯು ಎಂಬುದನ್ನು ಅರ್ಥಮಾಡಿಕೊಳ್ಳುವಾಗ ಜಾತಿಬ್ರಾಹ್ಮಣರ ಪತ್ನಿ ಎಂದೂ ಕೂಡ ಅರ್ಥೈಸಿ ವೇದದ ಮೂಲಾರ್ಥಕ್ಕೆ ಅಪಚಾರವಾಗುವ ಸಂದರ್ಭಗಳಿವೆ.
ಆದ್ದರಿಂದ ಬ್ರಾಹ್ಮಣ ಎಂಬುದು ಜಾತಿ ಸೂಚಕವಲ್ಲ, ಅದು ವರ್ಣ ಸೂಚಕ, ಎಂಬುದನ್ನು ಗಟ್ಟಿಮಾಡಿಕೊಂಡರೆ ವೇದದ ಕರೆಯನ್ನು ಅರ್ಥಮಾಡಿಕೊಳ್ಳಲು ಅನುಕೂಲವಾಗುತ್ತದೆ. ಬ್ರಹ್ಮಜ್ಞಾನದ ಹಂಬಲವಿರುವ, ವೇದಾಧ್ಯಯನ ಮಾಡುತ್ತಾ, ಇಡೀ ಸಮಾಜದ ಹಿತಕ್ಕಾಗಿ ದುಡಿಯುವವನು ಬ್ರಾಹ್ಮಣ.ಅವನ ಕರ್ತವ್ಯವನ್ನು ತಿಳಿದುಕೊಂಡಾಗ ಯಾರನ್ನು ಬ್ರಾಹ್ಮಣನೆನ್ನಬಹುದು ,ಎಂಬುದು ನಮಗೆ ಅರ್ಥವಾಗುತ್ತದೆ. ಯಾವ ತಂದೆ-ತಾಯಿಯರ ಗರ್ಭದಲ್ಲಿ ಜನಿಸಿದ್ದರೂ ಸಹ ಅವನ ಗುಣ ಸ್ವಭಾವಗಳಿಗನುಗುಣವಾಗಿ ಬ್ರಾಹ್ಮಣ, ಕ್ಷತ್ರಿಯ, ವೈಷ್ಯ,ಶೂದ್ರ ಎಂಬ ನಾಲ್ಕು ವರ್ಣಗಳಲ್ಲಿ ಸೂಕ್ತವಾದ ವರ್ಣವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಅವನಿಗಿರುತ್ತಿತ್ತು. ಇದು ಗುರುಕುಲದಲ್ಲಿ ಗುರುಗಳು ಅವನ ಗುಣ-ಸ್ವಭಾವಗಳನ್ನು ನೋಡಿ ಸಲಹೆ ಕೊಡುತ್ತಿದ್ದರು. ಅದರಂತೆ ಆ ವರ್ಣವನ್ನು ಅವನು ಸ್ವೀಕರಿಸುತ್ತಿದ್ದ. ಕ್ಷಾತ್ರಭಾವ ಉಳ್ಳವನು ಕ್ಷತ್ರಿಯ ವರ್ಣ ಸ್ವೀಕರಿಸಿದರೆ, ಸೇವೆ ಮಾಡುವ ಸ್ವಭಾವ ಮತ್ತು ಸಾಮರ್ಥ್ಯ ಇರುವವನು ಶೂದ್ರವರ್ಣವನ್ನು ಆಯ್ಕೆ ಮಾಡಿಕೊಳ್ಲುತ್ತಿದ್ದನು. ಆದರೆ ಕಾಲ ಗತಿಸಿದಂತೆ ಗುರುಕುಲಗಳೆಲ್ಲಾ ಮಾಯವಾಗಿ ಯಾರೋ ಪೂರ್ವಜರು ಆರಿಸಿ ಕೊಂಡಿದ್ದ ವರ್ಣವೇ ಮುಂದುವರೆದು ಅದು ಈಗ ಜಾತಿಯ ಹೆಸರು ಪಡೆದುಕೊಂಡಿರಬಹುದಾಗಿರುವುದರಿಂದ ಇಷ್ಟೊಂದು ಅವಾಂತರಕ್ಕೆ ಕಾರಣವಾಗಿರಬಹುದು. ಆದರೆ ಮತ್ತೀಗ ವೇದಯುಗವೇ ಆರಂಭವಾಗಿದೆ ಎಂದರೆ ಅಚ್ಚರಿಯಾಗಬಹುದು. ದೇಶದಲ್ಲಿರುವ ಪ್ರಖ್ಯಾತ ವೈದ್ಯರುಗಳು, ಇಂಜಿನಿಯರುಗಳು, ಪ್ರೊಫೆಸರುಗಳು ಯಾವ ಜಾತಿಗೂ ಸೀಮಿತವಾಗಿಲ್ಲ. ಅಲ್ಲದೆ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ಎಷ್ಟು ಜನ ವಾಹನಚಾಲಕರೋ, ವ್ಯಾಪಾರಿಗಳೋ, ಶ್ರಮಜೀವಿಗಳೋ ಆಗಿ ಕೆಲಸ ಮಾಡುತ್ತಿಲ್ಲ! ಅದು ಅವರವರ ಸ್ವಭಾವ ಮತ್ತು ಸಾಮರ್ಥ್ಯಕ್ಕನುಗುಣವಾಗಿ ಈಗಾಗಲೇ ಸ್ಥಾನಪಡೆದಿರುವುದನ್ನು ಗಮನಿಸಬಹುದಾಗಿದೆ. ಈಗ ಬ್ರಾಹ್ಮಣನ ಕರ್ತವ್ಯದ ಬಗ್ಗೆ ವೇದವು ಏನು ಹೇಳುತ್ತದೆ? ನೋಡೋಣ. ಆಗ ಬ್ರಾಹ್ಮಣನ ಪತ್ನಿ ಎಂದರೆ ಯಾರು ಎಂಬುದು ನಮಗೆ ಅರ್ಥವಾಗದೆ ಇರದು.
ಬ್ರಾಹ್ಮಣಾಸಃ ಸೋಮಿನೋ ವಾಚಮಕ್ರತ ಬ್ರಹ್ಮ ಕೃಣ್ವಂತಃ ಪರಿವತ್ಸರೀಣಮ್ |
ಅಧ್ವರ್ಯವೋ ಘರ್ಮಿಣಃ ಸಿಸ್ವಿದಾನಾ ಆವಿರ್ಭವಂತಿ ಗುಹ್ಯಾ ನ ಕೇ ಚಿತ್ ||
[ಋಕ್- ೭.೧೦೩.೮]
ಸೋಮಿನಃ = ಬ್ರಹ್ಮಾನಂದದ ಸವಿಯನ್ನು ಕಾಣುವವರೂ
ಅಧ್ವರ್ಯವಃ = ಅಹಿಂಸಕರೂ
ಘರ್ಮಿಣಃ = ತಪಸ್ವಿಗಳೂ
ಸಿಸ್ವಿದಾನಾಃ = ಪರಿಶ್ರಮದಿಂದ ಬೆವರುವವರೂ
ಬ್ರಾಹ್ಮಣಾಸಃ = ಬ್ರಾಹ್ಮಣರು, ಅವರು
ಪರಿವತ್ಸರೀಣಂ ಬ್ರಹ್ಮಂ ಕೃಣ್ವಂತಃ = ಸಮಸ್ತ ವಿಶ್ವದಲ್ಲಿಯೂ ವೇದ ಜ್ಞಾನವನ್ನು ಪಸರಿಸುತ್ತಾ
ಕೇಚಿತ್ ಗುಹ್ಯಾ ನ = ಕೆಲವರು ಗುಪ್ತವಾಗಿದ್ದವರಂತೆ
ಆವಿರ್ಭವಂತಿ = ಬೆಳಕಿಗೆ ಬರುತ್ತಾರೆ
ಭಾವಾರ್ಥ :-
ಭಗವದುಪಾಸನೆಯಿಂದ ಆನಂದಪ್ರಾಪ್ತಿ, ಅಹಿಂಸಾತತ್ವ, ತಪಸ್ಸು ಮತ್ತು ಆಧ್ಯಾತ್ಮಿಕ ಸಾಧನೆ, ಕಷ್ಟಸಹಿಷ್ಣುತೆ-ಇವು ಬ್ರಾಹ್ಮಣನ ಲಕ್ಷಣಗಳು. ಅವರು ಸದಾ ಹರಟುತ್ತಾ ತಿರುಗುವುದಿಲ್ಲ. ಗುಪ್ತಸಾಧನೆಗೆ ಗಮನವಿತ್ತು ಆತ್ಮಶಕ್ತಿಯನ್ನು ಬೆಳೆಸಿಕೊಂಡು ಸಂಪೂರ್ಣ ವಿಶ್ವದಲ್ಲೇ ಬ್ರಹ್ಮ ಜ್ಞಾನವನ್ನು ಹರಡುತ್ತಾರೆ. ಇಂತವರು ಬ್ರಾಹ್ಮಣರು . ಇವರ ಪತ್ನಿಯನ್ನು ವೇದವು ಭೀಮಾ ಜಾಯಾ ಅಂದರೆ ಮಹಾತೇಜಸ್ವಿಯಾದ ಪತ್ನಿ ಎಂದು ಕರೆದಿದೆ.
ಈಗ ಲೇಖನದ ಆರಂಭಕ್ಕೆ ಹೋಗೋಣ. ಅಂದರೆ ಬ್ರಾಹ್ಮಣನ ಪತ್ನಿಯು ಉಪನೀತಳಾಗಲು ಅರ್ಹಳು ಎಂದರೆ ಜಾತಿಯ ಬ್ರಾಹ್ಮಣ ಎಂದು ತಿಳಿಯಬಾರದಲ್ಲವೇ? ಬ್ರಹ್ಮಜ್ಞಾನವನ್ನು ಆಸಕ್ತಿಯಿಂದ ಕಲಿತು, ಪ್ರಸಾರ ಮಾಡುವವರೆಲ್ಲರೂ ಬ್ರಾಹ್ಮಣರೇ ಆಗಿದ್ದಾರೆ. ಅಂತೆಯೇ ಎಲ್ಲಾ ಸ್ತ್ರೀಯರೂ ಕೂಡ ಯಾರಿಗೆ ವೇದಾಧ್ಯಯನದಲ್ಲಿ ಆಸಕ್ತಿಯಿದೆ, ಅವರೆಲ್ಲರೂ ಉಪನೀತರಾಗಲು ಅರ್ಹರು. ಈ ಸಂದರ್ಭದಲ್ಲಿ ಉಪನಯನವೇಕೇ? ಎಂಬುದನ್ನು ಸರಳವಾಗಿ ತಿಳಿದುಕೊಂಡರೆ ಉಚಿತವಲ್ಲವೇ?
ಉಪನಯನ ಸಂಸ್ಕಾರಕ್ಕಿಂತ ಮುಂಚಿನ ಒಂಬತ್ತು ಸಂಸ್ಕಾರಗಳ ಸರಳ ಸೂಕ್ಷ್ಮ ಪರಿಚಯ ಮಾಡಿಕೊಂಡು ನಂತರ ಉಪನಯನ ಸಂಸ್ಕಾರದ ಬಗ್ಗೆ ತಿಳಿದುಕೊಳ್ಳೋಣ. ಮನುಷ್ಯನಿಗೆ ಎಲ್ಲಿಂದ ಸಂಸ್ಕಾರ ಆರಂಭವಾಗುತ್ತದೆ? ಮಗುವು ಹುಟ್ಟುವುದಕ್ಕಿಂತ ಮುಂಚಿನಿಂದಲೇ ಅದಕ್ಕೆ ಸಂಸ್ಕಾರ ಆರಂಭವಾಗುತ್ತದೆಂದರೆ- ರೂಢಿಯಲ್ಲಿ ಹಲವರು ಆಚರಿಸಿದರೂ ಹೌದಾ!! ಎಂದು ಹುಬ್ಬು ಹಾರಿಸದೇ ಇರಲಾರರು!!
ಸಂಪ್ರದಾಯದಂತೆ ಗಂಡು-ಹೆಣ್ಣಿನ ಮದುವೆ ಆಗುತ್ತದೆ. ವೇದೋಕ್ತ ವಿವಾಹ ಸಂಸ್ಕಾರದಲ್ಲಿ ಅಲ್ಲೊಂದು ಇಲ್ಲೊಂದು ವೇದಮಂತ್ರವನ್ನು ಬಳಸಿ ಉಳಿದೆಲ್ಲವನ್ನೂ ಪದ್ದತಿಯಲ್ಲಿ ನಡೆದುಬಂದಿರುವ ಆಚರಣೆಯಂತೆ ಮದುವೆ ನಡೆಯುತ್ತದೆನ್ನುವುದು ಸತ್ಯ. ಆದರೆ ಮಾಡುವ ಹಲವು ಸಂಸ್ಕಾರಗಳ ಅರ್ಥ ಮಾಡಿಸಿದವರಿಗೇ ಗೊತ್ತಿರುವುದು ಕಡಿಮೆ, ಅಥವಾ ವಧು-ವರರಿಗೆ ಅರ್ಥವನ್ನು ತಿಳಿದುಕೊಂಡು ಆಚರಿಸುವ ವ್ಯವದಾನ ಇರುವುದಿಲ್ಲ. ಗರ್ಭದಾನ ಸಂಸ್ಕಾರದಿಂದ ಆರಂಭವಾಗಿ ಉಪನಯನದ ವರಗೆ ಹತ್ತು ಸಂಸ್ಕಾರಗಳಿವೆ. ಆನಂತರ ಆರು ಸಂಸ್ಕಾರಗಳು. ಒಟ್ಟು ಹದಿನಾರು.
೧]ಗರ್ಭದಾನ :-ವಧು-ವರರು ವಿವಾಹವಾಗಿ ದಂಪತಿಗಳು ಮೊದಲಭಾರಿ ದೇಹಸಂಗವನ್ನು ಮಾಡುವ ಮುನ್ನ ಆಚರಿಸುವ ಸಂಸ್ಕಾರವೇ ಗರ್ಭದಾನ ಸಂಸ್ಕಾರ.
೨]ಪುಂಸವನ:- ಗರ್ಭಿಣಿಯ ಶಕ್ತಿ ಹೆಚ್ಚಿಸಲು ಮಾಡುವ ಸಂಸ್ಕಾರ
೩]ಸೀಮಂತೋನ್ನಯನ:- ಗರ್ಭಿಣಿಯ ಮನಸ್ಸು ಉಲ್ಲಾಸವಾಗಿರಲು ಮಾಡುವ ಸಂಸ್ಕಾರ. ಇವೆರಡ ರಿಂದಲೂ ಗರ್ಭಸ್ಥಶಿಶುವಿನ ಮೇಲೆ ಉತ್ತಮ ಸಂಸ್ಕಾರವಾಗುತ್ತದೆ
೪]ಜಾತಕರ್ಮ:- ಶಿಶು ಜನನವಾದ ಕೂಡಲೇ ಮಾಡುವ ಸಂಸ್ಕಾರ. ವಿಶೇಷ ಹೋಮವನ್ನು ಮಾಡಿ ತಂದೆಯು ಬೆಳ್ಳಿ ಅಥವಾ ಚಿನ್ನದ ಕಡ್ಡಿಯಿಂದ ಮಗುವಿನ ನಾಲಿಗೆಯ ಮೇಲೆ ಓಂಎಂದು ಬರೆಯುತ್ತಾ ಕಿವಿಯಲ್ಲಿ ವೇದೋಸಿ ಅಂದರೆ ನೀನು ಜ್ಞಾನಮಯ , ಎಂದು ಉಚ್ಛರಿಸುವನು.
೫]ನಾಮಕರಣ:- ಮಗುವಿಗೆ ೧೧ ದಿನ ಅಥವಾ ೧೦೧ ದಿನ ಅಥವಾ ಒಂದು ವರ್ಷವಾದಾಗ ಮಾಡುವ ಸಂಸ್ಕಾರ
೬]ನಿಷ್ಕ್ರಮಣ:- ಮಗುವಿಗೆ ನಾಲ್ಕು ತಿಂಗಳಾದಾಗ ಮನೆಯಿಂದ ಹೊರಗೆ ಕರೆದುಕೊಂಡು ಹೋಗಿ ನೀನು ಸೂರ್ಯನಂತೆ ಪ್ರಕಾಶಮಾನನಾಗು ಎಂಬ ಸಂಸ್ಕಾರ
೭]ಅನ್ನಪ್ರಾಶನ:- ಮಗುವಿಗೆ ಅನ್ನವನ್ನು ಅರಗಿಸಿಕೊಳ್ಳುವ ಸಾಮರ್ಥ್ಯ ಬಂದಾಗ ವಿಶೇಷ ಹೋಮವನ್ನು ಮಾಡಿ ಮೃದುವಾದ ಅನ್ನವನ್ನು ತಿನ್ನಿಸಲಾಗುತ್ತದೆ
೮] ಚೂಡಾಕರ್ಮ:- ಹುಟ್ಟಿನಿಂದ ಬಂದ ತಲೆಗೂದಲು ಆರೋಗ್ಯಕರವಲ್ಲ. ಆದ್ದರಿಂದ ಅದನ್ನು ತೆಗೆದು ಹೊಸದಾಗಿ ಪುಷ್ಕಳವಾಗಿ ಕೂದಲು ಬರಲು ಮಾಡುವ ಸಂಸ್ಕಾರ.
೯]ಕರ್ಣವೇಧ:- ಕಿವಿಯನ್ನು ಚುಚ್ಚುವ ಸಂಸ್ಕಾರ. ಇದರಿಂದ ಹಲವು ರೋಗಗಳು ಬರುವುದು ತಪ್ಪುತ್ತದೆ. ಈ ಸಂಸ್ಕಾರ ಮಾಡುವಾಗ ಶಿಶುವಿನ ಕಿವಿಯಮೇಲೆ ಒಳ್ಳೆಯ ಮಾತುಗಳೇ ನಿನ್ನ ಕಿವಿಯಮೇಲೆ ಬೀಳಲಿ ಎಂದು ಪ್ರಾರ್ಥಿಸಲಾಗುತ್ತದೆ.
೧೦]ಉಪನಯನ : ಮಾನವ ಜೀವನದಲ್ಲಿ ಇದು ಹತ್ತನೆಯ ಮತ್ತು ಅತ್ಯಂತ ಮಹತ್ವಪೂರ್ಣ ಸಂಸ್ಕಾರ.ಎಂಟು ವರ್ಷದ ಬಾಲಕ/ಬಾಲಿಕೆಗೆ ಮಂತ್ರಪೂರ್ವಕವಾಗಿ ಮೂರೆಳೆಯ ಯಜ್ಞೋಪವೀತವನ್ನು ಧಾರಣೆಮಾಡಿಸಲಾಗುತ್ತದೆ. ಮನಃಶುದ್ಧಿ, ವಚಃಶುದ್ಧಿ,ಕಾಯಶುದ್ಧಿ- ಈ ಮೂರು ಶುದ್ಧಿಗಳನ್ನು ಸೂಚಿಸುವ ಯಜ್ಞೋಪವೀತದ ಮಹತ್ವವನ್ನು ಬಾಲಕ/ಬಾಲಕಿಗೆ ಮಂತ್ರಮೂಲಕ ಬೋಧಿಸಲಾಗುತ್ತದೆ.
ಅಂದು ಉಪನೀತನಾದ ವಟುವು ಅನೃತಾತ್ ಸತ್ಯಮುಪೈಮಿ [ಯಜು-೧.೫] ಅಂದರೆ ಅಸತ್ಯದಿಂದ ಸರಿದು ಸತ್ಯದ ಕಡೆಗೆ ಅಡಿ ಇಡುತ್ತೇನೆ ಎಂಬ ಮಹಾವ್ರತವನ್ನು ಸ್ವೀಕರಿಸುತ್ತಾನೆ. ವ್ರತ ಎಂದರೆ ಜೀವನ ಪರ್ಯಂತ ಪಾಲಿಸುವುದು ಎಂದು ಅರ್ಥ. ಉಪನಯನ ಎಂದರೆ ಹತ್ತಿರ ಕರೆದುಕೊಳ್ಳುವುದು ಎಂದರ್ಥ.ಆಚಾರ್ಯರು ಈ ಸಂಸ್ಕಾರವನ್ನು ನೀಡಿ ಬಾಲಕ/ಬಾಲಿಕೆಯನ್ನು ಶಿಕ್ಷಣಕ್ಕಾಗಿ ತನ್ನ ಬಳಿ ಕರೆದುಕೊಳ್ಳುತ್ತಾನೆ ಇದಾದ ನಂತರ ಹನ್ನೊಂದನೆಯ ಸಂಸ್ಕಾರವೇ ವೇದಾರಂಭ.ಈಗ ಹೇಳಿ ಈ ಸಂಸ್ಕಾರ ಯಾರಿಗೆ ಬೇಡ?
-ಹರಿಹರಪುರಶ್ರೀಧರ್